Showing posts with label ನಾಗರೀಕ ಸೇವೆ. Show all posts
Showing posts with label ನಾಗರೀಕ ಸೇವೆ. Show all posts

"ಸಕಾಲ" - ಸರ್ಕಾರಿ ಕೆಲಸ, ಆಗಲಿ ಇನ್ನು ಸುಲಭ!


ರಾಜ್ಯದ ಆಡಳಿತದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯ ನಿರೀಕ್ಷೆಯನ್ನು ಹುಟ್ಟು ಹಾಕಿದಂತಹ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ - ೨೦೧೧ ಇದೀಗ "ಸಕಾಲ" ಯೋಜನೆಯಾಗಿ ಏಪ್ರಿಲ್ ೨ರಿಂದ ರಾಜ್ಯಾದ್ಯಂತ ಜಾರಿಯಾಗಿದೆ. ಒಟ್ಟು ಹನ್ನೊಂದು ಇಲಾಖೆಗಳ ಒಂದುನೂರಾ ಐವತ್ತೊಂದು ಸೇವೆಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಡುವ ಬದ್ಧತೆಯ ಘೋಷಣೆಯು ಜನರಲ್ಲಿ ಹೊಸ ಭರವಸೆ ಹುಟ್ಟಲು ಕಾರಣವಾಗಿದೆ. ಈಗಾಗಲೇ ಇಂತಹ ಕಾಯ್ದೆಯನ್ನು ಜಾರಿಮಾಡಿರುವ  ಮಧ್ಯಪ್ರದೇಶ, ಬಿಹಾರಗಳ ಸಾಲಿಗೆ ರಾಜ್ಯವೂ ಸೇರಿದ್ದು, ಕರ್ನಾಟಕದ ಭಾರತೀಯ ಜನತಾಪಕ್ಷದ ಸರ್ಕಾರ ನಿಜಕ್ಕೂ ಒಂದು ಸಾರ್ಥಕವಾದ ಕೆಲಸಾ ಮಾಡಿ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸರ್ಕಾರಿ ಕೆಲಸ ದೇವರ ಕೆಲಸ!

ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ಬೇಕಾದಷ್ಟು ಕೆಲಸಗಳಾಗಬೇಕಿರುತ್ತವೆ. ಸಾಮಾನ್ಯವಾಗಿ ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ದೇವರೇ ಬಂದು ಮಾಡಿಕೊಡಬೇಕಾದ ಕೆಲಸ ಎಂದು ವ್ಯಂಗ್ಯವಾಡುವಷ್ಟು ನಿಧಾ...ನವಾಗಿ ನಡೆಯುತ್ತದೆ ಎನ್ನುವುದು ಜನರ ದೂರಾಗಿತ್ತು. ಒಂದು ಕಡತ ಒಬ್ಬ ಅಧಿಕಾರಿಯಿಂದ ಮುಂದಿನ ಅಧಿಕಾರಿಯ ಟೇಬಲ್ ತಲುಪಬೇಕೆಂದರೆ ಅದೆಷ್ಟು ಸಮಯ ಬೇಕಾಗುತ್ತೋ ಎಂದು ಜನ ನಿರಾಸೆಯಿಂದ ನಿಟ್ಟುಸಿರು ಬಿಡಬೇಕಾದ ಕೆಟ್ಟಕಾಲ ಮುಗಿಯೋ ಒಳ್ಳೆಕಾಲ ಇನ್ಮುಂದೆ ಬರಲಿದೆ ಎನ್ನುವ ಭರವಸೆಯು, ಈ ಕಾಯ್ದೆಯ ಕಾರಣದಿಂದಾಗಿ ಜನರಲ್ಲಿ ಮೂಡಿದೆ.

ಈ ಕಾಯ್ದೆಯಡಿ ಬರುವ ಹನ್ನೊಂದು ಇಲಾಖೆಗಳು ತಾವು ನೀಡುವ ಪ್ರತಿಯೊಂದು ಸೇವೆಗೂ ಇಂತಿಷ್ಟೇ ಸಮಯ ಸಾಕು ಎಂದು ಕಾಲಮಿತಿಯನ್ನು ಹಾಕಿಕೊಂಡಿದ್ದಾವೆ. ಇಡೀ ಕಾಯ್ದೆಯು "ಮಾಹಿತಿ ಹಕ್ಕು ಕಾಯ್ದೆ - ೨೦೦೫"ರ ಮುಂದುವರಿಕೆಯಂತೆ ಕಾಣುತ್ತಿದೆ. ಜನರಿಗೆ ಯಾವುದೇ ಇಲಾಖೆ ತಮ್ಮ ಕೆಲಸಗಳನ್ನು ಮಾಡಿಕೊಡುವುದು  "ಆ ಇಲಾಖೆಯ ನೌಕರರು ನಮಗೆ ಮಾಡುವ ಉಪಕಾರವಲ್ಲಾ" ಎನ್ನುವ ಸಂದೇಶವನ್ನು ನೀಡುತ್ತಿರುವ ಸಕಾಲದಲ್ಲಿ, ಜನರು ತಾವು ಬಯಸಿದ ಸೇವೆ ಇಂತಿಷ್ಟೇ ಸಮಯದಲ್ಲಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದನ್ನು ಎತ್ತಿ ಹಿಡಿಯಲಾಗಿದೆ. ಯಾವುದೇ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಸಹಕಾರಿಯಾಗಿರುವ ಸಕಾಲ ವ್ಯವಸ್ಥೆಯಲ್ಲಿ ಜನರು ಬಯಸಿದ ಸೇವೆಯನ್ನು ಪಡೆಯುವಲ್ಲಿ ತಡವಾದಲ್ಲಿ ದೂರು ನೀಡುವ ವ್ಯವಸ್ಥೆಯೂ ಇದೆ. ನಿಗದಿತ ಸಮಯಕ್ಕಿಂತಾ ಹೆಚ್ಚು ಸಮಯ ತೆಗೆದುಕೊಂಡಲ್ಲಿ ದಿನವೊಂದಕ್ಕೆ ೨೦ ರೂಪಾಯಿ ಪರಿಹಾರವಾಗಿ ನೀಡಬೇಕಾದ ಹೊಣೆಗಾರಿಕೆಯನ್ನೂ ಸಂಬಂಧಿಸಿದ ನೌಕರರಿಗೆ ಹೊರಿಸಲಾಗಿದೆ. ಮೇಲ್ಮನವಿ, ದೂರು ಇತ್ಯಾದಿಗಳನ್ನು ಸಲ್ಲಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಶಿಸ್ತನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಇದನ್ನು ಜಾರಿ ಮಾಡಲು ಕಾರಣವಾದ ಸರ್ಕಾರಕ್ಕೆ ಅಭಿನಂದನೆಗಳು! ಜನರು ಕಟ್ಟುವ ತೆರಿಗೆ ಹಣದಿಂದಲೇ ರೂಪುಗೊಳ್ಳುವ ಇಂತಹ ಯೋಜನೆಗಳು ಯಶಸ್ವಿಯಾದರೆ ಸರ್ಕಾರವು ಜನರಿಂದ ತೆರಿಗೆ ಕಟ್ಟಿಸಿಕೊಂಡ ಋಣವನ್ನು ಸ್ವಲ್ಪಮಟ್ಟಿಗೆ  ತೀರಿಸಿಕೊಂಡಂತಾಗುತ್ತದೆ. ಅದಕ್ಕೇ ಸರ್ಕಾರಿ ಕೆಲಸ ದೇವರ ಕೆಲಸವಾಗದೆ ಜನರ ಕೆಲಸ ಎನ್ನುವಂತಾಗಬೇಕು ಎನ್ನುವುದು ಸರಿಯಾಗಿದೆ!

ಸಕಾಲದ ಸರಿ ಜಾರಿಯಾಗಲಿ!

ಸಕಾಲ ಕುರಿತಾಗಿ ಮಾಹಿತಿ ಪಡೆಯಲು ಮಿಂಬಲೆತಾಣವನ್ನು ರೂಪಿಸಲಾಗಿದೆ. ಈ ತಾಣ ತೆರೆದುಕೊಳ್ಳುವುದೇ ಇಂಗ್ಲೀಶಿನಲ್ಲಿ! ಪಕ್ಕದಲ್ಲಿ ಕೆಟ್ಟ ಕನ್ನಡದಲ್ಲಿ ಒಂದು "ಕನ್ನಡ ಅವತರಣ"ವಿದೆ. ಅಲ್ಲಿ "ಸೆವೆಗಳ ಸ್ಥಾನ-ಮಾನ ಪರಿಶಿಲಿಸಿ" ಎಂದು ಕೂಡಾ ಬರೆಯಲಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಹೊಂದಿರುವ ಸರ್ಕಾರ, ತನ್ನ ತಾಣದಲ್ಲಿ ಇಂತಹ ನಿರ್ಲಕ್ಷ್ಯ ತೋರಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಿಜಕ್ಕೂ ತಾನು ರೂಪಿಸಿರುವ ಜನಪರವಾದ ಕಾಯ್ದೆ/ ಯೋಜನೆ ಜನರನ್ನು ಮುಟ್ಟಬೇಕಾದರೆ ಜನರ ಭಾಷೆಯಲ್ಲಿ "ಸರಿಯಾಗಿ" ಇರಬೇಕಾದ್ದು ಬಹುಮುಖ್ಯ ಎನ್ನುವುದನ್ನು ಸಂಬಂಧಿಸಿದ ಅಧಿಕಾರಿಗಳು ಮನಗಂಡರೆ ಒಳ್ಳೆಯದು. ಅನ್ನ ಅರೆ ಬೆಂದಿರುವುದಕ್ಕೆ ಸಾಕ್ಷಿಯಾದ ಅಗುಳಿನಂತೆ ಈ ತಾಣದ ಮುಂಪಟ ಇರದಿರಲಿ ಎನ್ನುವುದು ನಮ್ಮ ಆಶಯ. ಅತ್ಯುತ್ತಮ ಯೋಜನೆಗಳೂ ಕೂಡಾ ಯಶಸ್ವಿಯಾಗಲು ಅತ್ಯುತ್ತಮ ರೀತಿಯಲ್ಲಿ ಜಾರಿಗೊಳ್ಳಬೇಕಾಗುತ್ತದೆಯಾದ್ದರಿಂದ ಸರ್ಕಾರ ಈಗಿರುವ ಕುಂದುಕೊರತೆಗಳನ್ನು ನಿವಾರಿಸಿ ಸಕಾಲವನ್ನು ಪರಿಣಾಮಕಾರಿಯಾಗಿ ಮಾಡಲಿ. ಹೌದಲ್ವಾ ಗುರೂ?

ತಂತ್ರಜ್ಞಾನ ಕನ್ನಡಕ್ಕೆ ಬದಲಿಯಲ್ಲ!

ನೀವು ಸುಮ್ಮನೆ ಗಮನಿಸಿ ನೋಡಿ... ಬೆಂಗಳೂರು ಟ್ರಾಫಿಕ್ ಪೊಲೀಸಿನವರದ್ದೊಂದು ಮಿಂಬಲೆ ತಾಣವಿದೆ. ಅಲ್ಲೂ ಜನರಿಗೆ ಅನುಕೂಲವಾಗುವಂತಹ ನಾನಾ ಸೇವೆಗಳು ತಂತ್ರಜ್ಞಾನದ ಕಾರಣದಿಂದಾಗಿ ದೊರಕಿಸಿಕೊಡಲಾಗಿದೆ. ದುರಂತವೆಂದರೆ ಅಲ್ಲಿ ಕನ್ನಡಕ್ಕೆ ಮಾತ್ರಾ ಮನ್ನಣೆಯಿಲ್ಲ! ಕನ್ನಡದಲ್ಲಿ ಸೇವೆ ಕೊಡ್ರೀ ಅಂದ್ರೆ ಆ ತಂತ್ರಜ್ಞಾನ ಇಲ್ಲಾ, ಈ ಮೊಬೈಲ್ ಕಂಪನಿಯವರು ಕನ್ನಡ ಕೊಡ್ತಿಲ್ಲಾ.. ಇಂಥಾ ಅದ್ಭುತ ಸೌಕರ್ಯ ಕೊಡ್ತಿದೀವಿ, ಇಲ್ಲೂ ಕನ್ನಡ ಕನ್ನಡಾ ಅಂತೀರಾ... ಹಾಳೂ ಮೂಳೂ ಅನ್ನೋ ನೆಪಗಳನ್ನು ಹೇಳ್ತಾರೆ. ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಿಂಬಲೆಯಲ್ಲೂ ಇದೇ ಗೋಳು! ಯಾಕ್ರೀ ಟಿಕೆಟ್ ಕನ್ನಡದಲ್ಲಿಲ್ಲಾ ಅಂದ್ರೆ ತಂತ್ರಜ್ಞಾನ ಇಲ್ಲಾ ಅಂತಾರೆ! ಕನ್ನಡದೋರು ಆರೂವರೆ ಕೋಟಿ ಇದ್ದೀವಿ ಇದ್ದೀವಿ ಅಂತಾ ಹೇಳ್ಕೊಳ್ಳೋದು ಯಾಕೆ? ಇಷ್ಟು ಜನಸಂಖ್ಯೆ ಒಂದು ತಂತ್ರಜ್ಞಾನ ರೂಪಿಸಿ ಜಾರಿಗೆ ತರೋರಿಗೆ ಸಾಲದಾ? ನಮ್ಮ ಉದ್ದೇಶ ಇಂಥದ್ದು ನಮಗೆ ಕನ್ನಡದಲ್ಲಿ ಸೇವೆ ಬೇಕು ಅಂತಾ ನಮ್ಮ ರಾಜ್ಯದ ಸಂಸ್ಥೆಗಳು, ಇಲಾಖೆಗಳು ತಂತ್ರಜ್ಞಾನಾನಾ ತರಕ್ ಆಗಲ್ವಾ? ಒಂದಂತೂ ನಿಜಾ! ಕನ್ನಡ ಕಡೆಗಣಿಸಿ ಕನ್ನಡವಿಲ್ಲದೆ ಕೊಡುವ ಯಾವ ತಂತ್ರಜ್ಞಾನವೂ ಕನ್ನಡದೋರಿಗೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ! ತಂತ್ರಜ್ಞಾನಾ ಅನ್ನೋದು ಕನ್ನಡಾನ ಬಳಸದೆ ಇರೋಕೆ ಒಂದು ನೆಪವಾಗೋದನ್ನು ಎಂದಿಗೂ ಒಪ್ಪಕ್ಕಾಗಲ್ಲಾ ಗುರೂ! ಸಕಾಲವೂ ಕೂಡಾ ತನ್ನ ಮೊದಲ ಆದ್ಯತೆಯನ್ನು ಕನ್ನಡಕ್ಕೆ ನೀಡಿದಾಗ ಮಾತ್ರಾ ಅದು ಯಶಸ್ವಿಯಾಗುತ್ತದೆ ಮತ್ತು ಸಾರ್ಥಕವಾಗುತ್ತದೆ!

ಹಣಕಾಸು ಒಳಗೊಳ್ಳುವಿಕೆ: ಇನ್ಮುಂದೆ ಕಂಪನಿ ಮಾಹಿತಿ ಕನ್ನಡದಲ್ಲೂ!

ಭಾರತ ಸರ್ಕಾರದ ಭಾಷಾನೀತಿಯ ಹುಳುಕು ಏನೇ ಇರಲಿ. ಕೇಂದ್ರಸರ್ಕಾರದ ಸಚಿವಾಲಯಗಳು ಮಾತ್ರಾ ತಮ್ಮ ಇಲಾಖೆಗಳು ರೂಪಿಸಿರುವ ಯೋಜನೆಗಳು ಜನರನ್ನು ತಲುಪಬೇಕಿದ್ದರೆ ಸರಿಯಾಗಿರೋ ನೀತಿಯನ್ನು ಅನುಸರಿಸಲೇ ಬೇಕು ಅನ್ನೋದನ್ನು ಮನವರಿಕೆ ಮಾಡಿಕೊಂಡಿರುವ ಹಾಗಿದೆ ಗುರೂ! ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯವನ್ನು ಕುರಿತು ಇತ್ತೀಚಿಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿಯನ್ನು ನೋಡಿ.

ಹಣಕಾಸು ಒಳಗೊಳ್ಳುವಿಕೆಯ ಪರಿಣಾಮಕಾರಿ ದಾರಿ!

"ಹಣಕಾಸು ಒಳಗೊಳ್ಳುವಿಕೆ" ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಲು ಪಣ ತೊಟ್ಟಿರುವ ಕಂಪನಿ ವ್ಯವಹಾರಗಳ ಸಚಿವಾಲಯವು ಇನ್ನು ಮುಂದೆ ಕಂಪನಿಗಳ ಆಯವ್ಯಯ ಮಾಹಿತಿಯನ್ನು ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ನಮ್ಮ ನಮ್ಮ ಭಾಷೆಗಳಲ್ಲೇ ಸಿಗುವಂತೆ ಕ್ರಮತೆಗೆದುಕೊಳ್ಳುತ್ತದೆಯಂತೆ. ಇದಕ್ಕೆ ಸಚಿವಾಲಯದ ಒಪ್ಪಿಗೆಯೂ ಇದೆಯಂತೆ. ಆಹಾ! ಎಂಥಾ ಸೊಗಸಾದ ಸುದ್ದಿ ಇದು. ಕನ್ನಡ ಭಾಷೆಯ ಹೂಡಿಕೆದಾರರು ಕನ್ನಡದಲ್ಲೇ ತಮಗೆ ಬೇಕಾದ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುವಂತಾಗುತ್ತದೆ ಎನ್ನುವ ಸುದ್ದಿಯೇ ಸೂಪರ್ರು ಗುರೂ! ಇಂಥಾ ಕ್ರಮಗಳಿಂದ ಮಾತ್ರವೇ "ಹಣಕಾಸು ಒಳಗೊಳ್ಳುವಿಕೆ"ಯಂತಹ ಜನರಿಗೆ ಉಪಯೋಗವಾಗೋ ಯೋಜನೆಗಳು ಎಲ್ಲರನ್ನೂ ಮುಟ್ಟಲು ಸಾಧ್ಯ! ಅಂದ ಹಾಗೆ ಈ ಸಚಿವಾಲಯದ ಮಂತ್ರಿಗಳು ನಮ್ಮ ಕರ್ನಾಟಕದ ಶ್ರೀ ವೀರಪ್ಪ ಮೊಯ್ಲಿಯವರು ಅನ್ನೋದು ಕೂಡಾ ಸಂತಸದ ವಿಷಯವೇ ಆಗಿದೆ. ಇರಲಿ, ಇದು ಯಾವುದೋ ಒಂದು ಯೋಜನೆಗೆ, ಒಂದು ಇಲಾಖೆಗೆ ಸೀಮಿತವಾಗಿಬಿಡಬಾರದು. ಕೇಂದ್ರಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಭಾರತದ ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿರುವ ಎಲ್ಲಾ ೨೨ ಭಾಷೆಗಳಲ್ಲಿ ಸೇವೆ ಕೊಡುವಂತಾಗಲಿ...! ಹೌದಲ್ವಾ ಗುರೂ?

ಇಬ್ಬರು ಹೆಂಡಿರ ಮುದ್ದಿನ ಲಾಯರ್!

ಇತ್ತೀಚೆಗೆ ಕರ್ನಾಟಕದಲ್ಲಿನ ("ಕೆಳ") ನ್ಯಾಯಲಯಗಳಲ್ಲಿ "ಆದಷ್ಟೂ" ಕನ್ನಡದಲ್ಲೇ ಕೆಲಸ ನಡೀಬೇಕು ಅಂತ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ರು. ನ್ಯಾಯಾಲಯ ಇದನ್ನ ಯಶಸ್ವಿಗೊಳಿಸೋಕ್ಕೆ ಅಲ್ಲಿನ ವಕೀಲರಿಂದಲೇ ಸಾಧ್ಯ ಅಂತ ಹೇಳಿ, ವಕೀಲರ ಮೇಲೆ ತಮ್ಮ ವಾದಗಳಲ್ಲಿ ಕನ್ನಡದ ಬಳಕೆಯ ಮೇಲೆ ಹೆಚ್ಚಿನ ಒತ್ತಡ ತಂದಿದೆ. ವಕೀಲರು ಇದರಲ್ಲಿ ಮುಖ್ಯವಾದ ಪಾತ್ರ ವಹಿಸಿದಾರೆ ಅನ್ನೋದು ನಿಜವಾದರೂ ನ್ಯಾಯಲಯಗಳಲ್ಲಿ ಕನ್ನಡದ ಅನುಷ್ಠಾನ ಅಂದ್ರೆ ಅದು ಬರೀ ವಕೀಲರು ಉಪಯೋಗಿಸೋ ಭಾಷೆಯಲ್ಲಿ ಬದಲಾವಣೆ ಮಾತ್ರ ಅಲ್ಲ; ನ್ಯಾಯಾಲಯಗಳಲ್ಲಿ ಕಾನೂನಿಗೆ ಸಂಬಂಧ ಪಟ್ಟ ಪ್ರತಿಯೊಂದು ಕಡತಾನೂ, ನ್ಯಾಯಾಂಶಗಳೂ, ಒಳಾಡಳಿತವೂ, ಭಾರತೀಯ ಸಂವಿಧಾನವೂ, ಕಾನೂನು ಪುಸ್ತಕಗಳೂ - ಎಲ್ಲವೂ ಕನ್ನಡದಲ್ಲಿರಬೇಕು.

ಒಂದು ವ್ಯವಸ್ಥೆ ಸುಗಮವಾಗಿ ನಡೀಬೇಕು ಅಂದ್ರೆ ಅದರಲ್ಲಿರೋ ಜನರು ಒಂದೇ ಭಾಷೆ ಮಾತಾಡ್ತಾ ಇರಬೇಕು ಅನ್ನೋದು ಸ್ಪಷ್ಟ. ಕಾನೂನಿಗೆ ಸಂಬಂಧ ಪಟ್ಟ ಎಲ್ಲಾ ಕಡತಗಳು, ನ್ಯಾಯಾಂಶಗಳು, ನಮ್ಮ ಸಂವಿಧಾನ, ಇವೆಲ್ಲಾ ಇಂಗ್ಲಿಷಿನಲ್ಲೇ ಇದ್ರೆ ಕರ್ನಾಟಕದ ಜನರಿಗೆ ಏನ್ ಅರ್ಥ ಆಗತ್ತೆ ಗುರು? ಅರ್ಥವಾಗದ ಭಾಷೇಲಿರೋ ನ್ಯಾಯವನ್ನ ವಕೀಲಿ ಕಲೀತಿರೋರು ಅದೆಷ್ಟು ಚೆನ್ನಾಗಿ ಕಲಿತಾರು? ಆ ವ್ಯವಸ್ಥೆಯಲ್ಲಿರೋ ಲೋಪದೋಷಗಳ್ನ ಅದೆಷ್ಟು ತಿದ್ದಾರು? ವಕೀಲರಾದಮೇಲೆ ಇಂಗ್ಲೀಷ್ ಬಾರದ ಗಿರಾಕಿಗಳಿಗೆ ಅದೆಷ್ಟು ನ್ಯಾಯ ಕೊಡಿಸಾರು? "ಇಬ್ಬರು ಹೆಂಡಿರ ಮುದ್ದಿನ ಪೋಲೀಸ್" ಇದ್ದಂಗೆ ಈಕಡೆ ಕನ್ನಡದ ಜನ, ಆಕಡೆ ಇಂಗ್ಲೀಷಿನ ಪುಸ್ತಕಗಳು - ಇವುಗಳ ನಡುವೆ ವಕೀಲನ ಕತೆ ಏನಾಗಬೇಕು? ಈ ಇಂಗ್ಲೀಷ್ಮಯ ವ್ಯವಸ್ಥೆಯಿಂದ ನ್ಯಾಯ ಬೇಕಾದೋರಿಗೂ ಕಷ್ಟ, ಕೊಡೋರಿಗೂ ಕಷ್ಟ, ಕೊಡಿಸೋರಿಗೂ ಕಷ್ಟ!

ಕೊನೆ ಗುಟುಕು

ಕಾನೂನು ಅರ್ಥವಾಗೋದು ಇಂಗ್ಲೀಷ್ ಬರೋರಿಗೆ ಮಾತ್ರ ಅನ್ನೋ ಹುಚ್ಚುತನ ನಮ್ಮಲ್ಲಿ ಇರೋದ್ರಿಂದ್ಲೇ ಇತ್ತೀಚೆಗೆ ಬಿಟ್ಟಿ ಕಾನೂನು ಸಲಹೆ ಕೊಡೋ ಕೇಂದ್ರಗಳು ಹುಟ್ಟಿಕೊಂಡಿವೆ ಅನ್ನಿಸುತ್ತೆ! ಈ ನಾಟಕಗಳ್ನೆಲ್ಲಾ ಬಿಟ್ಟು ನ್ಯಾಯಾಲಯಗಳು ಸಂಪೂರ್ಣವಾಗಿ ಕನ್ನಡೀಕರಣಗೊಳ್ಳಬೇಕು ಗುರು!

ಬೆಳಗಾವಿ ವಿಷಯ ಬಿಡಿ, ಮೊದ್ಲು ಮುಂಬೈ ಉಳಿಸಿಕೊಳ್ಳಿ

ಮುಂಬೈನಾಗೆ ಮರಾಠಿ ಸಂಸ್ಕ್ರತಿ 'ವಿಠ್ಠಲ ವಿಠ್ಠಲ ಪಾಂಡುರಂಗ' ಅಂತ ಮಕಾಡೆ ಮಲ್ಗಿರೋದು ಎಲ್ರಿಗೂ ತಿಳ್ದ ವಿಷ್ಯ. ೯ನೇ ಆಗಸ್ಟ್ ೨೦೦೭ ರಂದು ಮಹಾರಾಷ್ಟ್ರದ ಮುಂಚೂಣಿ ನಾಯಕ್ರಲ್ಲಿ ಒಬ್ಬರಾದ 'ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ' ರಾಜ್ ಠಾಕ್ರೆ ದಿಡೀರ್ನೆ ಮುಂಬೈ ಮಹಾನಗರ ಪಾಲಿಕೆ ಕಛೇರಿಗೆ ದೌಡಾಯ್ಸಿ ಒಂದು ನಿವೇದ್ನೆ ಸಲ್ಸಿದ್ದ್ರ ಬಗ್ಗೆ ನಿಮ್ಗೆನಾದ್ರು ಗೊತ್ತಾ?

ಯಾವುದೇ ರೀತಿಯ ಹೆಸರಿನ ಹಲಗೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಕೊಡ್ಬೇಕು ಅನ್ನೊ ಇತ್ತೀಚ್ಗೆ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಹೊರಡ್ಸಿರೋ ಆದೇಶದ ಬೈಲಾನ ರಾಜ್ ಠಾಕ್ರೆ ಮುಂಬೈ ಪಾಲಿಕೆಗ್ ತೋರ್ಸಿ, 'ಮುಂಬೈಲಿ ಮರಾಠಿ ಉಳ್ಸ್ಕೊಳಕ್ ಈ ರೀತಿ ಒಂದ್ ದಾರಿ ಇದೆ, ಕರ್ನಾಟಕದ ತರ ನೀವೂ ಈ ನಿಯಮ ಜಾರಿಗ್ ತನ್ನಿ' ಎಂದಿದ್ದಾರೆ. ನಮ್ಮ ಸರ್ಕಾರದ ಈ ಆದೇಶ ಪರರಾಜ್ಯದ ಸಂಸ್ಕೃತಿ ಉಳ್ವಿಗೆ ನೆರುವಾಗೋಕೆ ಕೆಲವರ ಕಣ್ ತೆರ್ಸಿರೋದು ಸಂತೋಷದ್ ಸಂಗತಿನೇ! ಈ ಆದೇಶ ಇದ್ರೂನೂ ಅನುಷ್ಠಾನದ ನ್ಯೂನತೆ ಇನ್ನೂ ಕಂಡ್ಬರ್ತಿದೆ.

ಎಲ್ಲಾ ಹಲಗೆಗಳಲ್ಲೂ ಕನ್ನಡ ಎದ್ದು ಕಾಣ್ಬೇಕು, ಈ ಊರಿಗೆ ಯಾರೇ ಬಂದಿಳಿದ್ರೂ ಅವರ್ಗೆ ಕನ್ನಡ ಕಾಣ್ಸಿ, ನಮ್ಮ ಭಾಷೆ ಬಗ್ಗೆ ಗೌರವ ಮೂಡ್ಸ್ಬೇಕು. ಆಗ್ಲೇ ಅಲ್ವೇ ಆದೇಶಕ್ ದೊರಕುವ ಸಾರ್ಥಕತೆ? ಎಲ್ಲಾ ಇಲಾಖೆಯಾಲ್ಲೂ ಅದು ಕಡ್ಡಾಯವಾಗಿ ಅನುಷ್ಠಾನ ಆಗ್ಬೇಕು. ಅವುಗಳು ಬೇರೆ ರಾಜ್ಯದ್ ಸಂಸ್ಕೃತಿನೂ ಉಳ್ಸಕ್ಕೆ ಆಯಾ ರಾಜ್ಯದ್ ನಾಯಕರಿಗೆ ಮಾದರಿ ಆಗ್ಬೇಕು. ಕರ್ನಾಟಕದಲ್ಲಿ ಕನ್ನಡ ಅಂತ ನಾವು ಹೇಗೆ ಹೇಳ್ತಿದಿವೋ ಹಾಗೆ ತಮಿಳ್ನಾಡಲ್ ತಮಿಳ್, ಆಂಧ್ರದಲ್ಲಿ ತೆಲ್ಗು, ಗುಜ್ರಾತ್‍ನಲ್ಲಿ ಗುಜ್ರಾತಿ ಇರ್ಬೇಕು. ಅದೇ ಈ ಭಾರತ್ ಮಾತೆ ಈ ದೇಶಾನ್ ಹೆತ್ತಾಗ್ ಕಂಡಿರೋ ಕನಸು.

ಕೊನೆ ಸಿಡಿ: ಮುಂಬೈನಾಗ್ ಹೋಟೆಲ್ - ಡ್ಯಾನ್ಸ್ ಬಾರ್ - ಇತ್ರೆ ವ್ಯಾಪಾರ ನಡೆಸ್ತಿರೋ ನಮ್ಮ ದಕ್ಸಿಣ ಕನ್ನಡದ್ ಜನ ಹೇಗೆ ಹೋಂದುಕೊಂಡು ಹೋಗ್ತಾ ಇದ್ದಾರೋ, ಹಾಗೆ ಇರೋದು ಬಿಟ್ಟು ಬೆಳ್ಗಾವಿ ಮಹಾರಾಷ್ಟ್ರಕ್ ಸೇರ್ಬೇಕು ಅಂತ ಅಲ್ಲಿನ್ ಕೆಲ್ವು ಮರಾಠಿ ಪುಂಡ್ರು ಚೀರಾಡ್ಕೋತಾ ತೂರಾಡ್ತಿರೋ ಸುದ್ದಿ ಕೇಳಿದ್ರೆ ಒಸಿ ನಗು ಬರ್ತಿದೆ ಗುರು. ಮರಾಠಿ ಏಕೀಕರಣ ಬೆಳಗಾವಿನಾಗಲ್ಲ, ಮೊದ್ಲಿಗೆ ಮುಂಬೈ ಉಳ್ಸಿಕೊಳ್ಳಿ ಅಂತ ಅವರಿಗೆ ಕಿವಿಮಾತು ಹೇಳಬೇಕು.
Related Posts with Thumbnails