ABVP ನಿರ್ಣಯದಲ್ಲಿ ಮರೆತ ತಾಯ್ನುಡಿಯಲ್ಲಿ ಕಲಿಕೆ!


ನಿನ್ನೆ ಬೆಂಗಳೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂರು ದಿನಗಳ ಸಮಾವೇಶ ಮುಕ್ತಾಯವಾಯಿತು. ನಮ್ಮ ನಾಳಿನ ಭವಿಷ್ಯದ ರೂವಾರಿಗಳು ಕೈಗೊಳ್ಳಲಿರುವ ನಿರ್ಣಯಗಳ ಬಗ್ಗೆ ಕುತೂಹಲವನ್ನು ಈ ಸಮ್ಮೇಳನ ಹುಟ್ಟು ಹಾಕಿತ್ತು.

ನಿರ್ಣಯಗಳು

ಈ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇವತ್ತಿನ (29.12.2010ರ) ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಮೂಡಿಬಂದಿದೆ. ಆ ವರದಿಯಂತೆ ನಿರ್ಣಯಗಳಲ್ಲಿ ಕಂಡಿರೋದು 2ಜಿ ಸ್ಪೆಕ್ಟ್ರಂ ಹಗರಣ, ಶಿಕ್ಷಣದ ವ್ಯಾಪಾರಿಕರಣಕ್ಕೆ ವಿರೋಧ, ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಜಗತ್ತಿನ ತಾಪಮಾನ ಏರಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯಂತಹ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಭಾಳ ಸಂತೋಷ. ದೇಶದ, ಪ್ರಪಂಚದ ಎಲ್ಲಾ ಆಗುಹೋಗುಗಳ ಬಗ್ಗೆ ಕಾಳಜಿ ಹೊಂದಿರೋದು ಸರಿ. ಆದರೆ ದೇಶದ ನಾನಾ ಭಾಗಗಳಿಂದ ಬಂದಿರೋ ಹತ್ತು ಸಾವಿರ ಪ್ರತಿನಿಧಿಗಳ ಈ ಸಭೆಯಲ್ಲಿ ಭಾರತೀಯರ ಕಲಿಕೆ ತಾಯ್ನುಡಿಯಲ್ಲಿ ಆಗಬೇಕು ಅನ್ನೋ ದಿಕ್ಕಲ್ಲಿ ಚರ್ಚೆ ನಡೆದಿದ್ರೆ ಚೆನ್ನಾಗಿರೋದಲ್ವಾ ಗುರೂ? ನಾಳಿನ ಭವಿಷ್ಯ ರೂಪುಗೊಳ್ಳೋಕೆ ನಮ್ಮ ವಿದ್ಯಾರ್ಥಿಗಳ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗಬೇಕು. ಹೀಗಾಗಲು ತಾಯ್ನುಡಿಯಲ್ಲಿನ ಕಲಿಕೆಯೊಂದೇ ಸರಿಯಾದ ದಾರಿ, ಈ ದಿಕ್ಕಲ್ಲಿ ನಾಡಿನ ಕಲಿಕಾ ವ್ಯವಸ್ಥೆಗಳು ಸಾಗಬೇಕು ಅನ್ನೋ ಬಗ್ಗೆ ನಿರ್ಣಯಗಳಲ್ಲಿ ಒಂದಂಶವನ್ನು ಎಬಿವಿಪಿಯ ಹಿರಿತಲೆಗಳು ಸೇರಿಸುವುದು ಇಂದಿನ ಅಗತ್ಯವಾಗಿತ್ತು ಅಲ್ವಾ ಗುರೂ?

ಕಾಗೇರಿಯವರೇ, ಒಸಿ ಏಳ್ತೀರಾ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ, ಸ್ಥಾಯಿ ಸಮಿತಿ ಹೆಸರಲ್ಲಿ ಬೆಂಗಳೂರಿನ ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಇ ಶಾಲೆಗಳಾಗಿ ಬದ್ಲಾಯ್ಸೋ ಕೆಲಸ ಹೆಜ್ಜೆ ಹೆಜ್ಜೆಯಾಗಿ ನಡೀತಾ ಇದ್ರೂ, ಕರ್ನಾಟಕ ರಾಜ್ಯದ ಸನ್ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಶ್ರೀ ಶ್ರೀ 1008 ವಿಶ್ವೇಶ್ವರಹೆಗ್ಡೆ ಕಾಗೇರಿಯೋರು ಸೊಂಪು ನಿದ್ದೇಲಿ ಇದ್ದಂಗವ್ರೆ. ಇವತ್ತಿನ ದಿವಸದ (23.12.2010ರ) ಡೆಕ್ಕನ್ ಹೆರಾಲ್ಡ್ ಪತ್ರಿಕೇಲಿ ಬಂದಿರೋ ಸುದ್ದಿ ನೋಡುದ್ರೆ ಮಾನ್ಯ ಸಚಿವರ/ ಅವರ ಸರ್ಕಾರದ/ ಅವರು ಪ್ರತಿನಿಧಿಸೋ ಪಕ್ಷದ ನಿಲುವುಗಳೇ ಪಾಲಿಕೆ ಸ್ಥಾಯಿ ಸಮಿತಿಯ ನಿಲುವಾಗಿದೆಯೇನೋ ಅನ್ನಿಸುವಂತಿದೆ.

ವಿಷಯಾಂತರ ಅನ್ನೋ ಸಮರ್ಥನೆ!

ಪತ್ರಿಕೆಗಳಲ್ಲಿ ಬಂದಿರೋ ವರದೀನ ಎಷ್ಟು ಜಾಣತನದಿಂದ ವಿಷಯಾಂತರ ಮಾಡ್ತಿದಾರೆ ಅಂತಾ ನೋಡಿ. ಕನ್ನಡವನ್ನು ಒಂದು ಭಾಷೆಯಾಗಿ ಈ ಶಾಲೇಲಿ ಕಲುಸ್ತಾರಂತೆ... ಅದೂ ಕಡ್ಡಾಯವಾಗಿ. ಹಾಗಾಗಿ ಕನ್ನಡವನ್ನು ನಾವಿಲ್ಲಿ ಕಡೆಗಣಿಸೋಲ್ಲಾ ಅಂತಾ ಸಮಿತಿಯ ಸದಸ್ಯರಿಗೆ ಭರವಸೆ ಕೊಟ್ರಂತೆ. ಪಾಪಾ! ಎಂಥಾ ಉಪಕಾರ ಮಾಡ್ತಿದಾರೆ ಅಲ್ವಾ? ಇದುಕ್ಕೆ ಸಮಿತಿಯೋರು "ಹೌದೂ, ಹೌದೂ, ಹಾಗಾದ್ರೆ ನೀವು ತುಂಬಾ ಒಳ್ಳೇವ್ರು" ಅಂತಂದು ಬಂದ್ರಂತೆ. ನಿಜವಾಗ್ಲೂ ಇಲ್ಲಿರೊ ಪ್ರಶ್ನೆ ಸಿ.ಬಿ.ಎಸ್.ಇ ಶಾಲೇಲಿ ಕನ್ನಡ ಕಲಿಸೋದು ಅಥವಾ ಕಲಿಸದೇ ಇರೋದು ಮಾತ್ರಾನಾ? ಅಥವಾ ರಾಜ್ಯಸರ್ಕಾರ ನಾಡಿನ ಶಿಕ್ಷಣ ವ್ಯವಸ್ಥೆ ಕಟ್ಟೊ ತನ್ನ ಹೊಣೆಗಾರಿಕೆಯಿಂದ ನುಣುಚ್ಕೊಂಡು, ತಾನೇ ಒಪ್ಪಿರೋ ಭಾಷಾನೀತಿಗೆ ಎಳ್ಳುನೀರು ಬಿಡ್ತಿರೋ ಅಂಥಾ ಅನೇಕ ವಿಷಯಗಳಾ?

ಕಾಗೇರಿಯವ್ರೇ ಒಸಿ ಎದ್ದೇಳಿ!

ಸನ್ಮಾನ್ಯರೂ ಸಭ್ಯರೂ ಪ್ರಾಮಾಣಿಕರೂ ಆಗಿರೋ ಸಚಿವರೆಂದು ಹೆಸರಾಗಿರೋ ಕಾಗಿಯವರೇ... ಕರ್ನಾಟಕ ರಾಜ್ಯದಲ್ಲಿ ಇರೋ ರಾಜ್ಯ ಪಠ್ಯಕ್ರಮದ ಶಿಕ್ಷಣ ವ್ಯವಸ್ಥೆಗೆ ನಮ್ಮ ಮಕ್ಕಳಿಗೆ ಕಲಿಕೆ ಒದಗಿಸೋ ಸಾಮರ್ಥ್ಯ ಹೊಂದಿಲ್ವಾ? ರಾಜ್ಯ ಪಠ್ಯಕ್ರಮಕ್ಕಿಂತಾ ಕೇಂದ್ರೀಯ ಪಠ್ಯಕ್ರಮಾನೇ ಉತ್ತಮ ಅಂತಾ ನೀವೂ ಒಪ್ತೀರಾ? ಹಾಗೆ ಒಪ್ಪೋದಾದ್ರೆ ನಾಡಿನ ಕಲಿಕೆಯನ್ನು ಉತ್ತಮಪಡಿಸಬೇಕು ಅನ್ನೋ ಕಾಳಜಿ, ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ವಾ? ಇದುವರೆಗೂ ಕರ್ನಾಟಕ ರಾಜ್ಯಸರ್ಕಾರ ಒಪ್ಪಿ ನಡುಸ್ತಿರೋ ಭಾಷಾನೀತಿಗೆ ಮಾರಕವಾಗಿ, ನಿಮ್ಮ ಕಣ್ರೆಪ್ಪೆ ಕೆಳಗಿರೋ ಈ ಪಾಲಿಕೆಯ ಸ್ಥಾಯಿ ಸಮಿತಿಯ ಶಿಫಾರಸ್ಸು, ಪಾಲಿಕೆಯ ನಿಲುವು ಇರೋದು ನಿಮಗೆ ಗೊತ್ತಾಗ್ತಿಲ್ವಾ? ರಾಜ್ಯಸರ್ಕಾರದ ನೀತಿಗೆ ವಿರುದ್ಧವಾಗಿರೋ ಇಂಥಾ ನಿಲುವನ್ನು ಯಾವುದೇ ನಗರ ಪಾಲಿಕೆ ತೊಗೊಂಡ್ರೆ ಅದು ಕಾನೂನು ಬಾಹಿರ ಅಲ್ವಾ? ನಿಮ್ಮ ಕಡೆಯಿಂದಾ ಈ ಬಗ್ಗೆ ಒಂದಾದ್ರೂ ಹೇಳಿಕೆ ಯಾಕೆ ಬರ್ತಿಲ್ಲಾ? ನಿದ್ದೆ ಸಾಕು.... ಒಸಿ ಎದ್ದೇಳ್ತೀರಾ?

ಗೋವಾ ಎಂಬ ಗುಬ್ಬಿಯ ಬ್ರಹ್ಮಾಸ್ತ್ರ!


ಗೋವಾ ರಾಜ್ಯದ ಮಾಜಿ ಮುಖಮಂತ್ರಿಗಳೂ, ಹಾಲಿ ಪಿಡಬ್ಲ್ಯುಡಿ ಸಚಿವರೂ ಆಗಿರುವ ಅಲೆಮಾವೊ ಚರ್ಚಿಲ್ ಅನ್ನೋ ರಾಜಕಾರಣಿಯೊಬ್ಬರು ಗೋವಾ ರಾಜ್ಯವನ್ನು ದೊಡ್ಡದಾಗಿಸಿಕೊಳ್ಳೋ ಅಗತ್ಯದ ಬಗ್ಗೆ ಕಾಳಜಿ ತೋರಿಸಿ ಕರ್ನಾಟಕದ ಕಾರವಾರ ಗೋವಾಕ್ಕೇ ಸೇರಬೇಕು ಅಂತಾ ಹೇಳಿದ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ. ಹಳೇ ಕಾಲದಲ್ಲಿ ರಾಜರುಗಳು ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋಗೋಕೂ ಈ ಮನಸ್ಥಿತೀಗೂ ಅಂಥಾ ವ್ಯತ್ಯಾಸವೇನೂ ಕಾಣ್ತಾಯಿಲ್ಲಾ ಗುರೂ!

ಗುಬ್ಬಿಯ ಬ್ರಹ್ಮಾಸ್ತ್ರ!

ಇಂಥಾ ಕಿತಾಪತಿಯನ್ನು ಗೋವಾದಂಥಾ ಪುಟಾಣಿ ರಾಜ್ಯ ಮಾಡ್ತಾಯಿದ್ರೆ ನಮ್ಮ ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಕುಂಭಕರ್ಣ ನಿದ್ದೆಯಲ್ಲಿರೋದು ಶೋಚನೀಯವಾಗಿದೆ. ಮೊದಲಿಗೆ ಹೀಗೆ ಸಣ್ಣದಾಗಿ ಶುರುವಾಗೋ ಹುಣ್ಣಿಗೆ ಕೂಡಲೇ ಖಾರವಾದ ಪ್ರತಿಕ್ರಿಯೆಯ ಔಷಧಿ ಕೊಡದಿದ್ರೆ ನಾಳೆ ಇದೇ ದೊಡ್ಡ ರಣವಾದೀತು ಗುರೂ! ನೀವೇ ನೋಡಿ, ಬರೀ ಹದಿನಾಲ್ಕು ಲಕ್ಷ ಜನಸಂಖ್ಯೆಯನ್ನೂ, ಕೇವಲ ಇಬ್ಬರು ಸಂಸದರನ್ನೂ ಹೊಂದಿರುವ ಗೋವಾ ರಾಜ್ಯ, ರಾಜಕೀಯವಾಗಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಕರ್ನಾಟಕದಷ್ಟು ಸೀಟುಗಳನ್ನು ತಂದುಕೊಡಬಲ್ಲಷ್ಟು ಶಕ್ತಿಶಾಲಿಯಾಗಿಲ್ಲ. ಆದರೆ ಮಹದಾಯಿ ನದಿ ನೀರು ಹಂಚಿಕೆಯ ಅಂಗವಾಗಿ ಕರ್ನಾಟಕವು ಕಳಸಾ ಭಂಡೂರ ಯೋಜನೆ ಕೈಗೆತ್ತಿಕೊಂಡಾಗ, ಗೋವಾ ನ್ಯಾಯಾಧಿಕರಣವನ್ನು ಹಟಮಾಡಿ ಪಡೆದುಕೊಂಡಿತು. ಅಂತಿಮ ತೀರ್ಪು ಏನೇ ಆಗಿರಲಿ, ಇಡೀ ಯೋಜನೆ ಸದ್ಯಕ್ಕಂತೂ ಜಾರಿಯಾಗುವಂತಿಲ್ವೇ... ಇದೀಗ ಮತ್ತೆ ಕಾರವಾರ, ಜೋಯಿಡಾ ಸೇರ್ಪಡೆ ವಿವಾದವನ್ನು ಎತ್ತಿರೋದನ್ನು ನೋಡುದ್ರೆ, ಇದಕ್ಕೆಲ್ಲಾ ಬಲ ಅವರಿಗೆ ಎಲ್ಲಿಂದ ಬಂತೆಂದು ಅಚ್ಚರಿಯಾಗುತ್ತದೆ ಗುರೂ!

ಕರ್ನಾಟಕ ಕೇಂದ್ರಿತ ರಾಜಕಾರಣವೇ ಮದ್ದು!

ಹೌದೂ, ಗೋವಾಕ್ಕೆ ಮಹಾರಾಷ್ಟ್ರದ ಕುಮ್ಮಕ್ಕಿದೆ ಅನ್ನೋ ಮಾತು ದಿಟವಿರಬಹುದು. ಆದರೂ ಗೋವಾದ ರಾಜಕಾರಣಿಗಳಲ್ಲಿರೋ ನಾಡಪರ ಕಾಳಜಿ, ನಾಡಹಿತವನ್ನು ರಾಜಕಾರಣದ ಕೇಂದ್ರವನ್ನಾಗಿಸೋ ಮನಸ್ಥಿತಿ, ರಾಜ್ಯದ ಹಿತವೇ ತಮ್ಮ ಪರಮಹಿತವೆನ್ನುವ ಬದ್ಧತೆಯೇ ಇಂಥಾ ಸಾಹಸಗಳಿಗೆಲ್ಲಾ ಕಾರಣ ಅನ್ನೋದನ್ನು ನಾವು ಗಮನಿಸಬೇಕಾಗುತ್ತೆ. ಅಲ್ಲಾ, ಗೋವಾದ ಇಂಥಾ ಕಿತಾಪತಿಯನ್ನು ಮಣಿಸಬಲ್ಲ ರಾಜಕೀಯ ಬದ್ಧತೆ ನಮ್ಮ ನಾಡಿನ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ, ರಾಜ್ಯ ಸರ್ಕಾರಕ್ಕೆ ಇರುವಂತೆ ಕಾಣುತ್ತಲೇ ಇಲ್ಲವಲ್ಲಾ ಗುರೂ! ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಂಥಾ ಕಿತಾಪತಿಯ ಗುಬ್ಬಿಗಳು ಆಗಾಗ ಬಿಡೋ ಬ್ರಹ್ಮಾಸ್ತ್ರಗಳಿಗೆ ಸರಿಯಾದ ಮದ್ದು! ಏನಂತೀ ಗುರೂ?

ಅಧ್ಯಾತ್ಮವೂ ಕನ್ನಡದಲ್ಲಿದ್ದರೇ ಸಾರ್ಥಕವಾಗೋದು!


ಭಾರತ ಅಧ್ಯಾತ್ಮದ ತವರು ಎಂದು ಹೆಸರು ಪಡೆದಿದೆ. ಸಾವಿರಾರು ವರ್ಷಗಳಿಂದ ಈ ಅಧ್ಯಾತ್ಮದ ಅರಿವು ನಮ್ಮ ನಾಡಲ್ಲಿದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು, ಭಗವದ್ಗೀತೆ, ವೇದ, ಉಪನಿಷತ್ತುಗಳು ಅವುಗಳಲ್ಲಿ ಪ್ರಮುಖವಾದವು. ಅಂದಿನ ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ಈ ಎಲ್ಲಾ ಅರಿಮೆಗಳು ಸಂಸ್ಕೃತದಲ್ಲಿವೆ. ಹಿಂದೆ ಈ ಅರಿವು ಬೇಕಾದವರು ಸಂಸ್ಕೃತ ಕಲಿತಿರಬೇಕಿತ್ತು, ಅಥವಾ ಕಲಿತವರು ತಿಳಿಸಿ ಹೇಳಬೇಕಿತ್ತು. ಈಗ ಜನಸಾಮಾನ್ಯರಿಗೆ ಇವುಗಳು ಬೇಕೆಂದರೆ ಹಿಂದಿದ್ದಂತೆ, ಸಂಸ್ಕೃತವನ್ನು ಕಲಿತಿರಲೇಬೇಕಾಗಿಲ್ಲ. ನಮ್ಮ ಹಿರಿಯರು ಇವುಗಳನ್ನು, ಇವುಗಳ ತಿರುಳುಗಳನ್ನು, ಇವುಗಳಿಗೆ ಅರ್ಥ-ಭಾಷ್ಯಗಳನ್ನು ಕನ್ನಡದಲ್ಲೇ ಬರೆದು ಕನ್ನಡಿಗರಿಗೆ ಉಪಕರಿಸಿದ್ದಾರೆ. ಇಂತಹ ಭಾಷಾಂತರಗೊಂಡ ಒಂದು ಹೊತ್ತಗೆ “ಭಗವಂತನ ನಲ್ನುಡಿ”. ಬರಹಗಾರರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು. ಅದ್ಸರಿ, ಈ ಹೊತ್ತಗೆಯ ಬಗ್ಗೆ ನಮಗೆ ಯಾಕಪ್ಪಾ ಆಸಕ್ತಿ, ಮೆಚ್ಚುಗೆ ಅಂದರೆ ಇದರಲ್ಲಿ ಬಳಸಲಾಗಿರುವ ಭಾಷೆ.

ಮುರಿಯಲ್ಪಟ್ಟ ಸಾಮಾನ್ಯ ಹವ್ಯಾಸಗಳು!

ಸಾಮಾನ್ಯವಾಗಿ ಇಂತಹ ಕಾವ್ಯಗಳನ್ನು ಕನ್ನಡಕ್ಕೆ ತರುವಾಗ ಅವುಗಳಲ್ಲಿನ ಹೆಚ್ಚಿನ ಪದಗಳನ್ನು ಅವಿರುವಂತೆಯೇ ಬಳಸಿ ಎಸಗುಪದ (ಕ್ರಿಯಾಪದ)ವನ್ನು ಕನ್ನಡದಲ್ಲಿ ಬರೆಯುವುದು ವಾಡಿಕೆ. ಆದರೆ ಈ ಹೊತ್ತಗೆಯಲ್ಲಿ ಬಳಸಲಾಗಿರುವ ಪದಗಳ ಸೊಗಡನ್ನು ಓದಿಯೇ ಅನುಭವಿಸಬೇಕು. ಮಹಾರಥಿ = ತೇರಾಳು. ಹೃಷಿಕೇಷ = ಪೊದೆಗೂದಲಿನವ, ದ್ವಿಜೋತ್ತಮ = ಹೆಬ್ಬಾರ್ವ ಹೀಗೆ ಸಾಗುತ್ತದೆ. ಈ ಅನುವಾದವನ್ನು ನೋಡಿ:

ಭಗವಾನುವಾಚ

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ I
ಯತ್ ಯೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ II
ಭಗವಂತ ಹೇಳಿದನು: ಓ ಮಹಾವೀರ, ಇನ್ನೂ ಕೇಳು ನನ್ನ ಹಿರಿನುಡಿಯನ್ನು. ಏಕೆಂದರೆ ಕೇಳಿ ಖುಷಿಪಡುತ್ತಿರುವ ನಿನಗೆ ಒಳಿತನ್ನು ಬಯಸಿಯೇ ನಾನು ಹೇಳುತ್ತಿದ್ದೇನೆ.
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ I
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ II
ನನ್ನ ಆಳವನ್ನು [ನಾನು ಜಗವನ್ನು ನಿರ್ಮಿಸುವ ಬಗೆಯನ್ನು], ದೇವತೆಗಳ ಗಡಣಗಳೂ ಅರಿತಿಲ್ಲ; ಹಿರಿಯ ಋಷಿಗಳೂ ಕೂಡ. [ ನನಗೂ ಒಂದು ಹುಟ್ಟು ಇದೆಯೆಂದು ದೇವತೆಗಳ ಗಡಣಗಳಾಗಲಿ, ಮಹರ್ಷಿಗಳಾಗಲಿ ತಿಳಿದವರಿಲ್ಲ] ದೇವತೆಗಳಿಗೆ ಹಿರಿಯ ಋಷಿಗಳಿಗೆ, ಎಲ್ಲರಿಗೂ ಮೂಲ ನಾನೇ ಅಲ್ಲವೇ?
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ I
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ II
ನಾನು ಹುಟ್ಟಿರದವನು, ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು.ಅವನು ಪಾಪಗಳಿಂದ ಪಾರಾಗುತ್ತಾನೆ.

ಇಡೀ ಹೊತ್ತಗೆಯಲ್ಲಿ ಸೊಗಸಾದ ನೂರಾರು ಕನ್ನಡ ಪದಗಳನ್ನು ಬನ್ನಂಜೆಯವರು ಬಳಸಿದಿದ್ದಾರೆ. ಭಗವದ್ ಗೀತೆಯ ಅನುವಾದ ಈ ಹೊತ್ತಗೆಯಲ್ಲಿ ಸರಳವಾಗಿದ್ದು, ಓದುಗರಿಗೆ ಅರ್ಥವಾಗುವಂತಿದ್ದು ಹತ್ತಿರವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಮೆಚ್ಚುಗೆಯಾಗುತ್ತದೆ. ಹೌದೂ ಗುರೂ, ಪ್ರಪಂಚದ ಯಾವ ಅರಿಮೆಯೇ ಆಗಿದ್ದರೂ ಅದು ಕನ್ನಡಿಗರಿಗೆ ಹೆಚ್ಚು ಅರ್ಥವಾಗೋದು ಅವು ಕನ್ನಡದಲ್ಲಿದ್ದಾಗ ಮಾತ್ರವೇ.

ರಾಜ್ಯಸರ್ಕಾರದ ದೇಣಿಗೆ ದಾಸೋಹ!

ಮತ್ತೊಮ್ಮೆ ಈ ಸುದ್ದಿ ಬಂದಿದೆ. ದಿನಾಂಕ 05.12.2010ರ ವಿಜಯಕರ್ನಾಟಕದ ಎರಡನೇ ಪುಟದಲ್ಲಿ ತಮಿಳುನಾಡಿನ ಗುಡಿಯೊಂದಕ್ಕೆ ರಾಜ್ಯಸರ್ಕಾರದ ಬೊಕ್ಕಸದಿಂದ ಒಂದು ಕೋಟಿ ರೂಪಾಯನ್ನು ಕನ್ನಡಿಗರ ಹೆಮ್ಮೆಯ ಮುಖ್ಯಮಂತ್ರಿ ಯಡ್ಯೂರಪ್ಪನವರು ಕೊಟ್ಟಿದ್ದಾರಂತೆ.

ದೇಣಿಗೆಯ ದಾನಶೂರ!

ಯಾರದ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ ಅನ್ನೋ ಹಾಗೆ ಕರ್ನಾಟಕದ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸೇರಿದ ಬೊಕ್ಕಸದಿಂದ ಮೊಗೆಮೊಗೆದು ಕೋಟಿ ಕೋಟಿ ರೂಪಾಯಿಗಳನ್ನು ಕಂಡ ಕಂಡ ಗುಡಿಗಳಿಗೆ ದಾನಾ ಮಾಡ್ತಾರಲ್ಲಾ ಇದೆಂಥಾ ಮರುಳು ಇವರಿಗೆ ಅಂತಾ... ನಿಜವಾಗ್ಲೂ ಸರ್ಕಾರಗಳು ಮಾಡೋಕೆ ನೂರಾರು ಆದ್ಯತೆಯ ಕೆಲಸಗಳಿರೋವಾಗ ಇಂಥಾ ದೇಣಿಗೆ ದಾಸೋಹಕ್ಕೆ ಇವರು ಯಾಕೆ ಟೊಂಕ ಕಟ್ಟಿ ನಿಂತಿದಾರೆ ಅಂತಾ... ಯಾವುದೇ ಸರ್ಕಾರ ತನ್ನ ಜನಕ್ಕೆ ಬೇಕಾಗಿರೋ ಶಾಲೆ ಕಾಲೇಜು ಆಸ್ಪತ್ರೆ ರಸ್ತೆ ಕುಡಿಯೋ ನೀರು, ನೀರಾವರಿ ಅಂತಾ ಯೋಜನೆ ಮಾಡ್ಕೊಂಡು ಜಾರಿ ಮಾಡೋದು ಸರಿಯಾದ್ದು, ಉತ್ತರ ಕರ್ನಾಟಕದ ನೆರೆ ಪೀಡಿತರ ಗೋಳು ಇವತ್ತಿಗೂ ಕೇಳೋರಿಲ್ಲದೇ ಇರೋವಾಗ ಈ ಯಪ್ಪಂದು ಇದೆಂಥಾ ಕೆಲ್ಸಾ ಅಂತಾ ಜನ ಮಾತಾಡ್ತಿದಾರೆ. ಹೋಗ್ಲೀ, ಅಷ್ಟರ ಮೇಲೂ ಗುಡಿಗಳಿಗೆ ದೇಣಿಗೆ ಕೊಡೋದೇ ಆದ್ರೂ ಕರ್ನಾಟಕದಲ್ಲಿರೋ ಗುಡಿಗಳು ಇವರ ಕಣ್ಣಿಗೆ ಕಾಣ್ತಿಲ್ವಾ ಅಂತಾ... ಅಂತಿದಾರೆ ಗುರೂ!

ನಮ್ ದೇವ್ರುಗಳೂ ನಮ್ ಪಕ್ಷಗಳಂಗೇ...

ನೀವೇನೇ ಹೇಳ್ರೀ... ಕನ್ನಡನಾಡಿನ ದೇವಾನುದೇವತೆಗಳು ನಮ್ ರಾಜ್ಯದ ರಾಜಕೀಯ ಪಕ್ಷಗಳ ಥರಾನೇ ಭಾಳಾ ವೀಕು. ನಮ್ ರಾಜ್ಯದ ಇವತ್ತಿನ ರಾಜಕೀಯ ಪಕ್ಷಗಳಿಗೆ ನಾಡಿನ ಹಿತ ಕಾಪಾಡೊಕ್ ಹೇಗೆ ಆಗ್ತಿಲ್ವೋ/ ಮನಸಿಲ್ವೋ ಹಾಗೇ ನಮ್ಮ್ ಕರ್ನಾಟಕದ ದೇವರುಗಳಿಗೆ ನಮ್ ಜನಗಳನ್ನು ಕಾಪಾಡೋ ತಾಕತ್ತಿಲ್ಲ. ಅದ್ರಲ್ಲೂ ನಮ್ಮ ನಾಯಕರಾದ ಯಡ್ಯೂರಪ್ಪನವರ ಹಿತ ಕಾಪಾಡಕ್ ಆಗ್ತಿಲ್ಲಾ ಅನ್ಸುತ್ತೆ. ಇದು ನಿಜಾನೋ ಸುಳ್ಳೋ ಬೇರೆ ಮಾತು. ಆದ್ರೆ ಯಡ್ಯೂರಪ್ಪನೋರು ಮಾತ್ರಾ ಹಿಂಗೇ ನಂಬಿರೋ ಹಾಂಗ್ ಕಾಣ್ತಿದೆ. ಇಲ್ದಿದ್ರೆ ಗಳಿಗ್ಗೊಮ್ಮೆ ಪಕ್ಕದ ರಾಜ್ಯಗಳ ಗುಡಿಗಳಿಗೆ ಹೋಗೋದುನ್ನಾ, ಹೋದ ಕಡೇಗೆಲ್ಲಾ ದೇಣಿಗೆ ಕೊಡೋದನ್ನಾ ನೋಡೋ ಭಾಗ್ಯ ಕನ್ನಡಿಗರಿಗೆ ಸಿಗ್ತಿರಲಿಲ್ಲಾ... ಅಲ್ವಾ ಗುರೂ?

ಹಣಕಾಸು ಒಳಗೊಳ್ಳುವಿಕೆ - ಪರಿಣಾಮಕಾರಿಯಾಗಲಿ!

ವಿಶ್ವಸಂಸ್ಥೆಯು 2003ರಲ್ಲಿ ಈ ಬಗ್ಗೆ ಮಾತಾಡಿತ್ತು. ಅಂದಿನ ಮುಖಂಡರಾಗಿದ್ದ ಕೋಫಿ ಅನ್ನನ್ ಅವರು ಇಡೀ ವಿಶ್ವದಲ್ಲಿ ಹಣಕಾಸು ವ್ಯವಸ್ಥೆಗಳ ಬಳಕೆಯನ್ನು ಎಲ್ಲಾ ಜನರಿಗೂ ತಲುಪಿಸುವಂತಾಗಬೇಕೆಂಬ ಕರೆಯನ್ನು ಕೊಟ್ಟಿದ್ದರು. ಇದನ್ನು Financial Inclusion ಎಂಬ ಹೆಸರಿಂದಲೇ ಇಂದು ಕರೀತಾ ಇದೀವಿ. ಭಾರತ ಕೂಡಾ ಈ ಯೋಜನೆಯನ್ನು ರೂಪಿಸಿದೆ. ಇದರ ಮೂಲ ಉದ್ದೇಶವೇ ನಾಡಿನ ಆರುಲಕ್ಷ ಹಳ್ಳಿಗಳ ಜನರಿಗೆ ಹಣಕಾಸು ವ್ಯವಸ್ಥೆಯನ್ನು ಪರಿಚಯಿಸಿ ಅದನ್ನು ಬಳಸಲು ಶುರು ಮಾಡಿಸುವುದು. ಈ ಬಗ್ಗೆ ಒಂದು ಬರಹ ಇತ್ತೀಚಿಗೆ ಫೋರ್ಬ್ಸ್ ಅವರ ಬುಸಿನೆಸ್ಸ್ ಪತ್ರಿಕೇಲಿ ಪ್ರಕಟವಾಗಿದೆ. Financial Inclusion, ಅಂದರೆ ಹಣಕಾಸು ವ್ಯವಹಾರಗಳ ಸೇವೆಗಳನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುವಲ್ಲಿ ಬ್ಯಾಂಕಿನ ಅಧಿಕಾರಿಗಳು, ಇಂಜಿನಿಯರುಗಳು, ಸರ್ಕಾರೀ ಅಧಿಕಾರಿಗಳು ಒಟ್ಟಾಗಿ ದುಡೀತಿದಾರೆ ಅಂತ ಫೋರ್ಬ್ಸ್ ಪತ್ರಿಕೆಯಲ್ಲಿ ಮೂಡಿ ಬಂದಿರೋ ಈ ಬರಹ ಹೇಳ್ತಿದೆ.

ಏನಿದು (Financial Inclusion) ಹಣಕಾಸು ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆ?

ಭಾರತದಂತಹ ದೇಶದಲ್ಲಿ ಇಂದಿಗೂ ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ಸಂಬಂಧಿತ ವ್ಯವಸ್ಥೆಯ ಪರಿಚಯವೇ ಇಲ್ಲದ ಜನರಿದ್ದಾರೆ ಅನ್ನುವುದು ವಾಸ್ತವ ಸಂಗತಿ. ಈ ಬಗ್ಗೆ ದೇಶಾದ್ಯಂತ ನಡೆದ ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಮುಖವಾದ ವಿಷಯಗಳೇನೆಂದರೆ...ದೇಶದ 40 ಪ್ರತಿಶತ ಜನರು ಮಾತ್ರಾ ಬ್ಯಾಂಕು ಖಾತೆ ಹೊಂದಿದಾರಂತೆ, ಹತ್ತರಲ್ಲಿ ಒಬ್ಬರಿಗೆ ಮಾತ್ರ ಇನ್ಶೂರನ್ಸ್ ಇದೆಯಂತೆ, 13 ಪ್ರತಿಶತ ಜನರ ಬಳಿ ಮಾತ್ರ ಡೆಬಿಟ್ ಕಾರ್ಡುಗಳಿವೆಯಂತೆ... ಬ್ಯಾಂಕಿನ ಖಾತೆ, ಇನ್ಶೂರನ್ಸು, ಡೆಬಿಟ್ ಕಾರ್ಡು ಇಂತಹ ಸೌಲಭ್ಯಗಳನ್ನು ನಾಡಿನಲ್ಲಿ ಹೆಚ್ಚು ಹೆಚ್ಚು ಜನರು ಬಳಸುವಂತಾದರೆ ಒಟ್ಟೂ ದೇಶದ ಅಭಿವೃದ್ಧಿಗೆ ಇದು ವೇಗವನ್ನು ತಂದುಕೊಡಲಿದೆಯಂತೆ. ಬಹಳ ಸಂತೋಷ. ನಿಜಕ್ಕೂ ನಾವು ಹೇಳಕ್ಕೆ ಹೊರಟಿರೋ ವಿಷಯ ಏನಪ್ಪಾ ಅಂದ್ರೆ ಇಂತಹ ಒಂದು ಒಳಗೊಳ್ಳುವಿಕೆಯ ಯಾವುದೇ ಯೋಜನೆ ಪರಿಣಾಮಕಾರಿಯಾಗುವಂತೆ ಮಾಡಲು ಬೇಕಾದ ಸರಳವಾದ ತತ್ವವನ್ನೇ ಭಾರತ ಸರ್ಕಾರ ಗಮನಿಸುತ್ತಿಲ್ಲವಲ್ಲಾ ಅಂತಾ... ಹೌದೂ, ಇದು ಯಾವುದೇ ಗ್ರಾಹಕ ಸೇವೆಯು ಕಡೆಗಣಿಸಲಾಗದ ಭಾಷಾ ಆಯಾಮ.

ಏನಾಗಿದೆ? ಏನಾಗಬೇಕು?

ಭಾರತ ದೇಶದಲ್ಲಿ ಬ್ಯಾಂಕುಗಳು, ವಿಮಾ ವಿಭಾಗಗಳು ಹೆಚ್ಚಾಗಿ ಕೇಂದ್ರಸರ್ಕಾರ ಹಾಕಿರೋ ನೀತಿ ನಿಯಮಗಳನ್ನು ಅನುಸರಿಸುತ್ತವೆ. ಬ್ಯಾಂಕುಗಳೂ ಕೂಡಾ ಭಾರತದ ಭಾಷಾನೀತಿಯ ಒಳಗೇ ಕೆಲಸ ಮಾಡುತ್ತವೆ. ಹೀಗಾಗಿ ಎಂದಿನಂತೆ ಭಾರತದ ಯಾವ ಮೂಲೆಯ ಬ್ಯಾಂಕಿಗೆ ಹೋದರೂ ಹಿಂದಿ/ ಇಂಗ್ಲೀಷಿಗೆ ಮಣೆ. ದಯವಿಟ್ಟು ನೀವು ನಮ್ಮೂರಲ್ಲಿರೋ ಈ ಬ್ಯಾಂಕಿನ ಈ ಶಾಖೇಲಿ ಕನ್ನಡಾನೆ ಇರೋದು ಅನ್ನಬೇಡಿ. ನಾವು ಮಾತಾಡ್ತಾ ಇರೋದು ಭಾರತ ಅನುಸರಿಸುತ್ತಿರೋ ನೀತಿ ಬಗ್ಗೆ.

ಬ್ಯಾಂಕುಗಳಲ್ಲಿ ಹಿಂದೀ ಬಳಕೆಯನ್ನು ಹೀಗೆ ಹೀಗೆ ಹೆಚ್ಚಿಸಬೇಕು ಅನ್ನೋ ನೀತಿಯನ್ನು ಭಾರತ ಹೊಂದಿದೆ ಅನ್ನೋದೇ ನಮ್ಮ ಕಾಳಜಿಗೆ ಕಾರಣ. ಯಾಕೆ ಕನ್ನಡ ನಾಡಲ್ಲಿ ಕನ್ನಡದಲ್ಲಿ ವ್ಯವಹರಿಸದೇ ಇರೋದು ಅಪರಾಧ ಅಂತಾ ನಿಯಮ ಮಾಡಿಲ್ಲಾ ಅನ್ನೋದೇ ನಮ್ಮ ಕಳಕಳಿ. ಕನ್ನಡ ಮಾತ್ರಾ ಬಲ್ಲವನಿಗೆ ಬ್ಯಾಂಕಿನ ಒಂದು ಚೆಕ್ ಬರೆಯಕ್ಕೆ ಆಗಲ್ಲ. ವಿಮೆ ಮಾಡಿಸೋ ಅರ್ಜಿ ತುಂಬ್ಸಕ್ಕೆ ಆಗಲ್ಲಾ ಅನ್ನೋ ಪರಿಸ್ಥಿತಿಯನ್ನು ಕೇಂದ್ರಸರ್ಕಾರವೇ ಹುಟ್ಟುಹಾಕಿರುವಾಗ ಹೇಗೆ ಈ ಯೋಜನೆ ಯಶಸ್ವಿಯಾದೀತು ಅನ್ನೋದು ಯಕ್ಷಪ್ರಶ್ನೆ. ನಿಜಕ್ಕೂ ನೋಡಿದರೆ ಹಣಕಾಸು ವ್ಯವಹಾರದಲ್ಲಿ ನಂಬಿಕೆಯೇ ಅತಿಮುಖ್ಯ. ಹಾಗಾಗಿ ವ್ಯವಹಾರದ ಪ್ರತಿಯೊಂದು ಹೆಜ್ಜೆಯಲ್ಲೂ ಜನರ ಭಾಷೆ ಅಳವಡಿಕೆಯಾಗಬೇಕು ಗುರು. ಆಗ ಮಾತ್ರ Financial Inclusion ಎಂಬ ಕನಸು ನನಸಾಗಲು ಸಾಧ್ಯ. ಇಲ್ಲವಾದರೆ, ಹಣಕಾಸು ಸೇವೆಗಳು ಈಗಿನಂತೆ ಕೆಲವೇ ಜನರಿಗೆ ಮಾತ್ರ ಎಟುಕೋ ಹಣ್ಣಾಗಿ ಉಳಿಯುತ್ತೆ ಅಷ್ಟೇ!

ಭಾರತದ ಭಾಷಾನೀತಿ ತಂದಿರೋ ಕೇಡುಗಾಲ: ನಿನ್ನೆ ರೈಲ್ವೇ, ಇವತ್ತು ಯುಜಿಸಿ, ನಾಳೆ ಆಧಾರ್!

ಭಾರತ ಸರ್ಕಾರ ನಡೆಸ್ತಾಯಿರೋ, `ಇಡೀ ಭಾರತದ ವಿಶ್ವವಿದ್ಯಾಲಯಗಳ ಗುಣಮಟ್ಟ ಕಾಪಾಡಿಕೊಳ್ಳುವ/ಹೆಚ್ಚಿಸುವ' ಘೋಷಿತ ಉದ್ದೇಶವಿರೋ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ಅನ್ನೋ ಸಂಸ್ಥೆಯು, ನಾಡಿನ ಕಾಲೇಜುಗಳ ಶಿಕ್ಷಕರ ನೇಮಕಾತಿ ನಡುಸ್ತಾಯಿದೆ.
ಈ ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸಿ ಅಂತಾ ಒಂದು ಮನವೀನಾ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಮದನಗೋಪಾಲ್ ಅವರು ಒಂದು ಮನವಿ ಸಲ್ಲಿಸಿದ್ದಾರೆ ಅನ್ನೋ ಸುದ್ದಿ ನಿನ್ನೆಯ(23.11.2010ರ) ಡಿಎನ್ಎ ಪತ್ರಿಕೇಲಿ ಪ್ರಕಟವಾಗಿದೆ. ಇದರ ಬಗ್ಗೆ ಕೇಂದ್ರಸರ್ಕಾರವೆನ್ನೋ ದೇವರು ಯಾವ ನಿಲುವು ತೊಗೊಂಡು ಎಂಥಾ ಪ್ರಸಾದ ಕೊಡುತ್ತೋ ಅಂತಾ ಕಾಯ್ಕೊಂಡು ಕೂಡೋ ಪರಿಸ್ಥಿತಿ ಇವತ್ತು ಕರ್ನಾಟಕ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆಗಿದೆ.

ಆಧಾರ್ ಗುರುತು ಚೀಟಿಯ ಅರ್ಜಿ
ಇತ್ತ ಇವತ್ತಿನ (24.11.2010ರ) ವಿಜಯಕರ್ನಾಟಕದ ಒಂಬತ್ತನೇ ಪುಟದಲ್ಲಿ "ಆಧಾರ್ - ರಾಷ್ಟ್ರೀಯ ಗುರುತು ಯೋಜನೆ"ಯ ಕುರಿತಾದ ಬರಹ ಇಂತಹುದೇ ಇನ್ನೊಂದು ಮಾಹಿತಿಯನ್ನು ಹೊರಗೆಡುವುತ್ತಿದೆ. ಈ ಯೋಜನೆಯಲ್ಲಿ ಇಡೀ ಭಾರತದ ಎಲ್ಲಾ ಪ್ರಜೆಗಳಿಗೆ ಗುರುತು ಚೀಟಿ ಕೊಡ್ತಾರಂತೆ, ಅದುಕ್ಕೆ ಬೇಕಾದ ಮಾಹಿತಿಯನ್ನು ಕಲೆಹಾಕೋ ಅರ್ಜಿ ಹಿಂದಿ/ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರಾ ಇರುತ್ತಂತೆ. "ಇದಕ್ಕೆ ಏನು ಕಾರಣ? ನಮ್ಮ ಕನ್ನಡನಾಡಿನ ಹಳ್ಳಿಗಾಡಿನ ಜನಕ್ಕೆ ಕನ್ನಡದಲ್ಲಿ ಮಾಹಿತಿ ತುಂಬಿಸಲು ಸುಲಭ ಅಲ್ವಾ? ಕನ್ನಡದಲ್ಲಿ ಇಡಕ್ಕೆ ಸರ್ಕಾರ ಮರೆತಿರಬೋದು" ಅಂತ ನೀವು ಅಂದ್ಕೊತೀರೇನೋ? ಊಹೂಂ... ಆದ್ರೆ ಇದುಕ್ಕೆಲ್ಲಾ ಕಾರಣ ಭಾರತ ದೇಶ ಅನುಸರಿಸುತ್ತಿರೋ ಭಾಷಾನೀತಿ. ಆ ಭಾಷಾನೀತಿಯಲ್ಲಿ ಕೇಂದ್ರಸರ್ಕಾರದ ಅಧಿಕೃತ ಭಾಷೆಯಾಗಿ ಹಿಂದಿ/ ಇಂಗ್ಲೀಷುಗಳನ್ನು ಮಾತ್ರಾ ಹೊಂದಿರೋದು. ಯಾಕಂದ್ರೆ ಈ ದೇಶದಲ್ಲಿ ಕೇಂದ್ರಸರ್ಕಾರ ಏನಾದ್ರೂ ಕೆಲಸ ಅಂತಾ ಮಾಡೋದಿದ್ರೆ ಅದು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾನೆ.

ಭಾರತದ ಮಾನಗೇಡಿ ಭಾಷಾನೀತಿ!

ಹೌದು. ಜನರಿಂದ, ಜನಗಳಿಗಾಗಿ ಅಂತಾ ಕಟ್ಟಿರೋ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ(?) ಅಂತ ಕೊಚ್ಕೊಳ್ಳೋ ಭಾರತ ತನ್ನ ನಾಡೊಳಗೆ ಕಟ್ಕೊಂಡಿರೋ ಈ ಹುಳುಕಿನ ಭಾಷಾ ವ್ಯವಸ್ಥೆಯ ಕಾರಣದಿಂದಲೇ ಇವೆಲ್ಲಾ ಆಗ್ತಿರೋದು. ಹಿಂದೆ ರೈಲ್ವೇ ಪರೀಕ್ಷೆಗಳು ಹಿಂದಿ/ ಇಂಗ್ಲೀಷಲ್ಲಿ ನಡೀತಾ ಇದ್ದಿದ್ದು, ಇವತ್ತು ಯು.ಜಿ.ಸಿ ಪರೀಕ್ಷೆಗಳು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾ ಇರಬೇಕು ಅನ್ನೋದೂ, ಆಧಾರ್ ಗುರುತು ಚೀಟಿ ಮಾಹಿತಿ ಕಲೆ ಹಾಕೋ ಕೆಲಸ ಹಿಂದೀ/ ಇಂಗ್ಲೀಷಲ್ಲಿ ಮಾತ್ರಾ ಇರಬೇಕೂ ಅನ್ನೋದೂ, ರಾಜ್ಯ ಕಾರ್ಮಿಕರ ವಿಮಾ ಸಂಸ್ಥೆಯ ಪೆಹೆಚಾನ್ ಕಾರ್ಡ್ (ಗುರುತು ಚೀಟಿ) ಹಿಂದೀ ಹೆಸರು ಹೊಂದಿರೋದೂ... ಇವೆಲ್ಲಾ ಕರ್ಮಕಾಂಡಕ್ಕೂ ಕಾರಣ ಇದೇ ಭಾಷಾನೀತಿ. ಈಗಿನ ಯು.ಜಿ.ಸಿ ಉದಾಹರಣೆಯನ್ನೇ ನೋಡಿ. ಹಿಂದಿ/ ಇಂಗ್ಲೀಷುಗಳಲ್ಲಿ ಮಾತ್ರಾ ಬರೆಯಬೇಕೆನ್ನೋ ನಿಯಮಾ ಇರೋ ಪರೀಕ್ಷೆಯಲ್ಲಿ ಪಾಸಾಗೋ ಕನ್ನಡದವರ ಸಂಖ್ಯೆ 9216ಕ್ಕೆ ಬರೀ 55 ಜನ ಮಾತ್ರವಂತೆ.
ರೈಲು ಪರೀಕ್ಷೆಯಲ್ಲಿ ಅರ್ಜಿಯನ್ನು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾ ಬರೀಬೇಕು ಅನ್ನೋವಾಗ, ಬ್ಯಾಂಕು ಕೆಲಸಗಳಲ್ಲಿ ಅರ್ಜಿ ಹಾಕಕ್ಕೆ ಹತ್ತನೇ ತರಗತಿ ಅಂಕಪಟ್ಟೀಲಿ ಹಿಂದೀ ಇರಲೇ ಬೇಕು ಅನ್ನೋ ನಿಯಮ ಇರೋವಾಗ, ಯು.ಜಿ.ಸಿ ಪರೀಕ್ಷೆಗಳಲ್ಲಿ ಹಿಂದಿ ಗೊತ್ತಿರಲೇ ಬೇಕು ಅನ್ನೋ ನಿಯಮ ಇರುವಾಗ ಹಿಂದೀ/ ಇಂಗ್ಲೀಷಿನಲ್ಲಿ ಪ್ರಾವೀಣ್ಯತೆ ಇಲ್ಲದ ಕನ್ನಡಿಗ ಅಂತಹ ಕೆಲಸಗಳಿಂದ ವಂಚಿತನಾಗ್ತಾನೆ. ಆದರೆ ತಮ್ಮ ತಾಯ್ನುಡಿಯಾದ ಹಿಂದಿ ರಾಷ್ಟ್ರದ ಅಧಿಕೃತ ಭಾಷೆಯಾಗಿರೋ ಕಾರಣದಿಂದ ಎಲ್ಲಾ ಪರೀಕ್ಷೆ/ ಸಂದರ್ಶನಗಳನ್ನು ಹಿಂದಿಯಲ್ಲೇ ಎದುರಿಸಲು ಅವಕಾಶ ಇರುವ ನಿಯಮ ಕೆಲಸದ ಎಲ್ಲಾ ಅವಕಾಶಗಳನ್ನು ಹಿಂದಿ ತಾಯ್ನುಡಿಯವರಿಗೆ ಒದಗಿಸಿ ಕೊಡುತ್ತೆ. ಈ ಕಾರಣದಿಂದಲೇ ನಮ್ಮ ಜನ ಎಷ್ಟೊ ಅವಕಾಶಗಳನ್ನು ಕಳ್ಕೊತಾ ಇದಾರೆ. ಅಂದ್ರೆ ಭಾರತ ಸರ್ಕಾರಕ್ಕೆ ಇವೆಲ್ಲಾ ಗೊತ್ತಾಗಲ್ಲಾ ಅಂತೀರೇನು? "ಅಯ್ಯೋ ನನ್ ಮಕ್ಳಾ, ಭಾರತ ದೇಶದಲ್ಲಿದ್ದ ಮೇಲೆ ಹಿಂದೀ ಕಲೀದಿದ್ರೆ ಸರೀನಾ? ಭಾರತೀಯ ಅನ್ನುಸ್ಕೊಳಕ್ಕೆ ಇರಬೇಕಾದ ಅತಿ ಮುಖ್ಯವಾದ ಅರ್ಹತೆ ಅದೇ ಕಣ್ರುಲಾ..." ಅಂತಿದೆಯೇನೋ ಭಾರತ ಸರ್ಕಾರ ಅಲ್ವಾ? ಮೇರಾ ಭಾರತ್ ಮಹಾನ್...

ತ್ರಿಭಾಷಾ ಸೂತ್ರಕ್ಕೆ ಕೊನೆ ಹಾಡಲಿ.

ಅಲ್ಲಾ ಗುರೂ, ಯಾಕೆ ರಕ್ಷಣಾ ವೇದಿಕೆಯೋರು ಹೊಡದಾಡಿ, ಜೈಲು ಸೇರಿ, ಪೋಲೀಸರಿಮ್ದ ಒದೆ ತಿಂದು ರೈಲ್ವೇ ನೇಮಕಾತಿ ಚಳವಳಿ ಮಾಡಬೇಕು? ಯಾಕೆ ವಿಜಯಕರ್ನಾಟಕದಲ್ಲಿ ತುರುವೇಕೆರೆ ಪ್ರಸಾದ್ ಆಧಾರ್ ಬಗ್ಗೆ ಬರೀಬೇಕು? ಯಾಕೆ ಮದನ್ ಗೋಪಾಲ್ ಅವರಂಥಾ ಸರ್ಕಾರಿ ಅಧಿಕಾರಿ ಯುಜಿಸೀನಾ ಗೋಗರೀಬೇಕು? ಇವೆಲ್ಲಕ್ಕೂ ಕೊನೆ ಹಾಡೋಕೆ ಆಗಲ್ವಾ? ಭಾರತ ಸರ್ಕಾರ ಪಾಪ, ಹಿಂದಿಯವರು ಜಾಸ್ತಿ ಜನಾ ಇದಾರೆ ಅಂತ ಅವರ ಹಿತ ಕಾಪಾಡ್ಲಿ. ಆದರೆ ಕನ್ನಡಿಗರ ಏಳಿಗೆಗಾಗೇ ಇರೋ ಕರ್ನಾಟಕ ಸರ್ಕಾರ ಏನಾದ್ರೂ ಮಾಡಬೇಕಲ್ವಾ? ನೀವು "ಕರ್ನಾಟಕ ರಾಜ್ಯ ಸರ್ಕಾರವು ಭಾರತದ ಭಾಷಾನೀತಿಯನ್ನು ಬದಲಾಯಿಸಲು, ದೇಶದ ಎಲ್ಲಾ ಪ್ರದೇಶದ ಭಾಷೆಗಳಿಗೂ ಭಾರತದ ಆಡಳಿತ ಭಾಷೆಯ ಸ್ಥಾನಮಾನ ಕೊಡಿಸುವ ಪಣತೊಟ್ಟು ತಾನೇ ಮುಂದಾಳ್ತನ ವಹಿಸಿಕೊಳ್ಳಲಿ" ಅಂತಾ ಆಸೆಪಟ್ರೆ ಅದು ಅತಿಯಾಸೆ ಆದೀತು. ಆದರೆ ಕೊನೇಪಕ್ಷ, ಕೇಂದ್ರದ ತ್ರಿಭಾಷಾ ನೀತಿ ಅನ್ನೋ ಹೆಸರಿನ, ಆದರೆ ನಿಜಕ್ಕೂ ನಮ್ಮ ರಾಜ್ಯಭಾಷೆಯ ಸೀಟಲ್ಲಿ ತಾವು ಜಾಗ ಮಾಡ್ಕೊಂಡು ಹಿಂದೀ/ ಇಂಗ್ಲೀಷನ್ನು ಕೂಡಿಸೋ ಅಂಥಾ, ಸೂತ್ರಕ್ಕೆ ಕೊನೆ ಹೇಳಲಿ. ಆಡಳಿತ ಭಾಷಾ ಕಾಯ್ದೆಯಿಂದ ತಮಿಳುನಾಡು ವಿನಾಯ್ತಿ ಪಡೆದುಕೊಂಡಂತೆ ತಾನೂ ವಿನಾಯ್ತಿ ಪಡೆದುಕೊಳ್ಳಲಿ. ಏನಂತೀರಾ ಗುರೂ?

ಬನವಾಸಿ ಬಳಗದಿಂದ ಕ್ಯಾಂಪಸ್ ಆಯ್ಕೆ ಸಮೀಕ್ಷೆ.


ಕನ್ನಡನಾಡಿನ ಏಳಿಗೆ ಆಗಬೇಕೂಂದ್ರೆ ನಮ್ಮ ನಾಡಲ್ಲಿ ಹೆಚ್ಚುಹೆಚ್ಚು ಉದ್ದಿಮೆಗಳು ಆರಂಭವಾಗಬೇಕು ಮತ್ತು ನಮ್ಮ ಜನಕ್ಕೆ ಹೆಚ್ಚುಹೆಚ್ಚು ಕೆಲಸಗಳು ಸಿಗಬೇಕು. ಇಂಥಾ ಕೆಲಸಗಳು ನಮ್ಮ ಜನಕ್ಕೇ ಸಿಗದೇ ಹೋದರೆ ನಮ್ಮ ನಾಡಿನ ನಿರುದ್ಯೋಗ ಸಮಸ್ಯೆಯಂತೂ ಬಗೆಹರಿಯಲ್ಲ. ನಿರುದ್ಯೋಗ ನಿವಾರಣೆಗಾಗೇ ನಮ್ಮ ಸರ್ಕಾರಗಳು ಉದ್ದಿಮೆಗಳನ್ನು ಆರಂಭಿಸೋದು. ಪುಗಸಟ್ಟೆ ನೆಲ, ತೆರಿಗೆ ರಜಾ, ವಿದ್ಯುತ್ ಇತ್ಯಾದಿ ಕೊಡೋದಕ್ಕೂ ಇದೇ ದೊಡ್ಡ ಕಾರಣ ಅಂದ್ರೆ ತಪ್ಪಿಲ್ಲ. ಹೀಗೆ ಆರಂಭವಾದ ಉದ್ದಿಮೆಗಳಲ್ಲಿ ಐಟಿ ಕ್ಷೇತ್ರದ ಉದ್ಯಮಗಳು ಪ್ರಮುಖವಾಗಿವೆ.

ಕ್ಯಾಂಪಸ್ ಆಯ್ಕೆ ಮತ್ತು ಸಮೀಕ್ಷೆ.

ಇಂಥಾ ಐ.ಟಿ ಉದ್ದಿಮೆಗಳು ತಮ್ಮ ಸಂಸ್ಥೆಗೆ ನೇಮಕ ಮಾಡಿಕೊಳ್ಳಲು ನಾಡಿನ ಬೇರೆ ಬೇರೆ ಕಾಲೇಜುಗಳಿಗೆ ಹೋಗುತ್ತವೆ. ಇವು ಹೆಚ್ಚು ಹೆಚ್ಚು ಕರ್ನಾಟಕದ ಕಾಲೇಜುಗಳಿಗೇ ಹೋಗಬೇಕು ಮತ್ತು ನಮ್ಮ ವಿದ್ಯಾರ್ಥಿಗಳು ನೇಮಕಾತಿಯಲ್ಲಿ ಆಯ್ಕೆಯಾಗಬೇಕು ಮತ್ತು ವಿದ್ಯಾಸಂಸ್ಥೆಗಳು ಕ್ಯಾಂಪಸ್ ಆಯ್ಕೆಯ ಪ್ರಕ್ರಿಯೆಯನ್ನು ಸಮರ್ಥವಾಗಿ ಆಯೋಜಿಸಬೇಕು. ಅಂದರೆ ಇಂಥಾ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳ ಸಂಪೂರ್ಣ ಲಾಭ ನಮ್ಮ ನಾಡಿನ ವಿದ್ಯಾರ್ಥಿಗಳಿಗೂ, ನಾಡಿನ ಉದ್ದಿಮೆಗಳಿಗೂ ಸಿಗುವಂತಾಗುವುದು ಅತ್ಯಂತ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ರಾಜ್ಯದಲ್ಲಿರುವ ನಾನಾ ಉದ್ದಿಮೆದಾರರು, ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಬನವಾಸಿ ಬಳಗವು ಒಂದು ಸಮೀಕ್ಷೆಯನ್ನು ಆರಂಭಿಸಲು ಮುಂದಾಗಿದೆ. ಈ ಉದ್ದೇಶಿತ ಸಮೀಕ್ಷೆಯು ಪ್ರಾತಿನಿಧಿಕವಾಗಿದ್ದು ಆಯ್ದ ಕೆಲವು ಸಂಸ್ಥೆಗಳಿಂದಲೂ, ಕಾಲೇಜುಗಳಿಂದಲೂ, ಅಭ್ಯರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕರ್ನಾಟಕದ ವೃತ್ತಿಪರ ಕಾಲೇಜುಗಳಲ್ಲಿ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯನ್ನು ಹೆಚ್ಚಿಸಿ, ಆ ಮೂಲಕ ಹೆಚ್ಚು-ಹೆಚ್ಚು ಕನ್ನಡಿಗರಿಗೆ ಉದ್ಯೋಗ ಸಿಗಲು ನೆರವಾಗುವುದು.

ಸಮೀಕ್ಷೆಯ ತಿರುಳಲ್ಲಿದೆ...

ಈ ಸಮೀಕ್ಷೆಯ ಮೂಲಕ ಕ್ಯಾಂಪಸ್ ಆಯ್ಕೆ ನಡೆಸುತ್ತಿರುವ/ ನಡೆಸಬೇಕೆಂದಿರುವ ಕಾಲೇಜುಗಳು ಮಾಡಿಕೊಂಡಿರುವ ವ್ಯವಸ್ಥೆಗಳು, ಅವು ಎದುರುಸುತ್ತಿರುವ ಸವಾಲುಗಳು, ಅನುಸರಿಸುತ್ತಿರುವ ಯಶಸ್ವಿ ಕ್ರಮಗಳು - ಇವುಗಳ ಬಗ್ಗೆ ಮಾಹಿತಿ ಕೂಡಿಹಾಕಲಾಗುವುದು. ಹಾಗೆಯೇ, ಕ್ಯಾಂಪಸ್ ಆಯ್ಕೆ ಮಾಡುವ ಕಂಪನಿಗಳ ನೇಮಕಾತಿ ವರ್ಗದವರು ಕಾಲೇಜುಗಳಿಂದ ಏನೇನು ತಯಾರಿ ಬಯಸುವರು, ಕ್ಯಾಂಪಸ್ ಆಯ್ಕೆಗೆ ಕಾಲೇಜುಗಳನ್ನ ಯಾವ ಆಧಾರದ ಮೇಲೆ ಆರಿಸುತ್ತಾರೆ? ಆಯ್ಕೆ ಪ್ರಕ್ರಿಯೆಯಲ್ಲಿ ಏನಿರುತ್ತದೆ? ಮತ್ತು ಕ್ಯಾಂಪಸ್ ಆಯ್ಕೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಕಂಪನಿಗಳು ಎದುರಿಸುತ್ತಿರುವ ಸವಾಲುಗಳೇನು? - ಇವುಗಳ ಬಗ್ಗೆಯೆಲ್ಲಾ ಮಾಹಿತಿ ಕೂಡಿಸಿ ಹಂಚಿಕೊಳ್ಳುವ ಉದ್ದೇಶ ನಮಗಿದೆ.

ಸಮೀಕ್ಷೆಯಲ್ಲಿ ಕೈಜೋಡಿಸಲು ಕರೆ..

ಸಮೀಕ್ಷೆ ಯಶಸ್ವಿಯಾಗಲು, ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ನೀವು ಓದಿದ ಅಥವಾ ನಿಮ್ಮ ಮಿತ್ರರು ಓದುತ್ತಿರುವ ಕರ್ನಾಟಕದ ವಿವಿಧ ಇಂಜಿನಿಯರಿಂಗ್/ ಎಂ.ಸಿ.ಎ. ಕಾಲೇಜುಗಳಲ್ಲಿ ನಡೆಸುವ ಕ್ಯಾಂಪಸ್ ಆಯ್ಕೆ ಬಗ್ಗೆ ನಿಮಗೆ ಮಾಹಿತಿ ಗೊತ್ತಿದ್ದಲ್ಲಿ ಅದನ್ನು ನಮಗೆ ತಿಳಿಸಿ. ಹಾಗೆಯೇ, ನಿಮ್ಮ ಕಂಪನಿಗಳಿಂದ ಕ್ಯಾಂಪಸ್ ಆಯ್ಕೆ ನಡೆಸುತ್ತಿದ್ದರೆ, ಆ ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಬಹುದು. ಈ ವಿಷಯವಾಗಿ ನೀವು ನಮ್ಮ ಬಳಗದ ಶ್ರೀ ಜಯಪ್ರಕಾಶ್ ಅವರನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.

ಅವರ ಮಿಂಚೆ ವಿಳಾಸ: jayaprakash@banavasibalaga.org

ಬಿಬಿಎಂಪಿ ಶಾಲೆಗಳು ಇನ್ಮುಂದೆ ಇಂಗ್ಲೀಷ್ ಮಾಧ್ಯಮದಲ್ಲಿ !!!

ದಿನಾಂಕ 12.11.2010ರ ವಿಜಯಕರ್ನಾಟಕ ದಿನಪತ್ರಿಕೆಯ ಆರನೇ ಪುಟದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಅನ್ನೋ ಒಂದು ಸುದ್ದಿ ಬಂದಿದೆ. ಮಹಾನಗರ ಪಾಲಿಕೆಯ ಒಂದು ‘ಸ್ಥಾಯಿಸಮಿತಿ’ಯು ಈ ಶಿಫಾರಸ್ಸನ್ನು ಮಾಡಿದೆಯಂತೆ. ಈ ಸುದ್ದಿ ಕನ್ನಡನಾಡಿನ ಕಲಿಕೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಮತ್ತು ಈಗಿನ ಸರ್ಕಾರವು ಮಾತೃಭಾಷಾ ಕಲಿಕೆಯ ಪರವಾದ ತನ್ನ ನಿಲುವಿನಿಂದ ಹಿಂದೆ ಸರಿದಿರುವ ಅನುಮಾನಕ್ಕೆ ಕಾರಣವಾಗಿದೆ. ಇದು ಯಾವುದೋ ಒಂದು ನಗರ ಪಾಲಿಕೆಯ, ಒಂದು ಸ್ಥಾಯಿ ಸಮಿತಿಯ ಶಿಫಾರಸ್ಸು ಮಾತ್ರವಾಗಿರದೆ ಇಡೀ ಸರ್ಕಾರವನ್ನು ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ನಿಲುವಾ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.

ಉದ್ಯಮಿಯ ಅನಿಸಿಕೆ!

ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಕನ್ನಡ ಮಾಧ್ಯಮದಲ್ಲೇ ಕಲಿತು ಅಷ್ಟೆತ್ತರಕ್ಕೇರಿದ ಇನ್ಫೋಸಿಸ್ಸಿನ ಶ್ರೀಯುತ ನಾರಾಯಣಮೂರ್ತಿಗಳು ಇಂತಹದ್ದೇ ನಿಲುವಿನ ಒಂದು ಹೇಳಿಕೆ ನೀಡಿದ್ದಾರೆ. ಇವರಂತೂ ಆಗ್ಗಿಂದಾಗ್ಗೆ ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಇಂಗ್ಲೀಷ್ ಶಾಲೆಗಳನ್ನು ಆರಂಭಿಸಬೇಕೆಂದೂ, ಕನ್ನಡದ ಮಕ್ಕಳ ಕಲಿಕೆ ಇಂಗ್ಲೀಷಿನಲ್ಲಿರಬೇಕೆಂದೂ ಆಗ್ಗಾಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಬಹುಷಃ ಜಾಗತೀಕರಣದ ಇಂದಿನ ಯುಗದಲ್ಲಿ ಬೃಹತ್ತಾಗಿ ಬೆಳೆದಿರುವ ಕಾಲ್ ಸೆಂಟರ್, ಸಾಫ್ಟ್‍ವೇರ್ ಉದ್ಯಮಗಳಲ್ಲಿನ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀಯುತರು ಹೀಗೆ ಹೇಳಿಕೆ ನೀಡಿರಬಹುದು. ಇರಲಿ... ಆದರೆ ಇಡೀ ಕನ್ನಡನಾಡು ಒಂದು ಕಾಲ್ ಸೆಂಟರ್ ಆಗಿರಬೇಕು ಎನ್ನುವ ನಿಲುವಂತೂ ಇವರದ್ದಲ್ಲಾ ಎಂದೇ ಭಾವಿಸೋಣ. ಮೇಲ್ನೋಟಕ್ಕೆ ಅತ್ಯಂತ ಜನಪರವೆಂಬಂತೆ ಕಾಣುವ ಈ ನಿಲುವಿನ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು. ಶ್ರೀಯುತರು ಯಶಸ್ವಿ ಉದ್ಯಮಿ ಮಾತ್ರವೇ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಇವರ ಹೇಳಿಕೆಗೆ ಕೊಡಬೇಕಾದ ಮಹತ್ವ ಎಷ್ಟು ಎಂಬುದು ಅರಿವಾಗುತ್ತದೆ.

ಕನ್ನಡದ ನಾಲಗೆ ಕಿತ್ತು ಇಂಗ್ಲೀಷ್ ನಾಲಗೆ ಸಿಕ್ಕಿಸಲಾದೀತೆ?
ಹೌದು. ಇಂಗ್ಲೀಷ್ ಶಾಲೆಗಳನ್ನು ಸರ್ಕಾರವೇ ಎಲ್ಲಾಕಡೆ ಶುರುಮಾಡಬಹುದು, ಆದರೆ ಕಲಿಕೆಯೆನ್ನುವುದು, ಜ್ಞಾನಾರ್ಜನೆ ಎನ್ನುವುದು ಕನ್ನಡದ ಮಕ್ಕಳಿಕೆ ತಾಯ್ನುಡಿಯಾದ ಕನ್ನಡಕ್ಕಿಂತಾ ಪರನುಡಿಯಾದ ಇಂಗ್ಲೀಷಿನಲ್ಲಿ ಸುಲಭವಾಗುತ್ತದೆಯೇ? ನಮ್ಮ ನಾಡಿನ ಎಲ್ಲಾ ಮಕ್ಕಳಿಗೂ ಇಂಗ್ಲೀಷಿನಲ್ಲಿನ ಕಲಿಕೆ ಸುಲಭವಾಗುತ್ತದೆಯೇ? ಇಂಗ್ಲೀಷಿನ ಮೂಲಕ ಕಲಿಯಬೇಕೆಂಬುದೇ ಒಂದು ಓಟದ ಸ್ಪರ್ಧೆಯಲ್ಲಿ ಕಾಲಿಗೆ ಕಲ್ಲುಕಟ್ಟಿ ಓಡಲು ಬಿಟ್ಟಂತಾಗುವುದಿಲ್ಲವೇ? ಮಕ್ಕಳ ಕಲಿಕೆ ತಾಯ್ನುಡಿಯಲ್ಲಿ ಉತ್ತಮವೆಂದ ವಿಜ್ಞಾನಿಗಳ ಸಂಶೋಧನೆಗಳು ಪೊಳ್ಳೇ? ಜಗತ್ತಿನ ಅತ್ಯಂತ ಮುಂದುವರೆದ ರಾಷ್ಟ್ರಗಳಲ್ಲಿ ಬಹುತೇಕವುಗಳೆಲ್ಲಾ (ಜಪಾನು, ಜರ್ಮನಿ, ಇಸ್ರೇಲು, ಫ್ರಾನ್ಸು, ಇಟಲಿ, ಕೊರಿಯಾ... ಸೇರಿ) ತಾಯ್ನುಡಿಯಲ್ಲೇ ತಮ್ಮ ಮಕ್ಕಳ ಕಲಿಕೆಯನ್ನು ನಡೆಸೇ ಯಶ ಗಳಿಸಿರುವುದು ಸುಳ್ಳೇ? ಜ್ಞಾನ ವಿಜ್ಞಾನ ತಂತ್ರಜ್ಞಾನಗಳೆಲ್ಲವನ್ನೂ ಇಂಗ್ಲೀಷ್ ಮಾಧ್ಯಮದ ಮೂಲಕ ಕಲಿಸುತ್ತೇನೆನ್ನುವ ಸರ್ಕಾರದ ನಿಲುವು ಎಷ್ಟು ಆತ್ಮಹತ್ಯಾತ್ಮಕವೆಂದರೆ ನಾಳಿನ ನಮ್ಮ ಮುಂದಿನ ಪೀಳಿಗೆಯವರು ಕನ್ನಡದಲ್ಲೂ ಇಂಗ್ಲೀಷಲ್ಲೂ ಪರಿಣಿತಿಯಿಲ್ಲದ ಅರೆಬೆಂದಮಡಿಕೆಗಳಾಗುವುದಿಲ್ಲವೇ? ಕರ್ನಾಟಕ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕರ್ನಾಟಕ ರಾಜ್ಯದ ಮಕ್ಕಳ ಕಲಿಕೆ ಇಂಗ್ಲೀಷಿನಲ್ಲಾಗಬೇಕೆಂಬ ನಿಲುವು ಹೊಂದಿದೆಯೇ? ಈ ನೆಲದ ಸಂಸ್ಕೃತಿ ಇತಿಹಾಸ ಹೇಳುವ ಸಮಾಜಶಾಸ್ತ್ರದ ಕಲಿಕೆ ನಮ್ಮ ಮಕ್ಕಳಿಗೆ ಇಲ್ಲದೆ ನೆಲದ ಸಂಸ್ಕೃತಿಯ ಬೇರಿನಿಂದ ದೂರಾಗುವುದು ಬಿಜೆಪಿಗೆ ಪರವಾಗಿಲ್ಲವೇ? ಹಾಗಿದ್ದಲ್ಲಿ ಅದು ತನ್ನ ನಿಲುವನ್ನು ಹಾಗೆಂದು ಘೋಷಿಸಿಕೊಳ್ಳಲಿ... ಆದರೆ ಇದು ನಾಡನ್ನು ಹಿಂದಕ್ಕೊಯ್ಯುವ ಕಾರ್ಯವಾಗುತ್ತದೆ ಎಂಬುದನ್ನು ಮರೆಯದಿರಲಿ.

ಮಾಡಬೇಕಾದ್ದು...!

ರಾಜ್ಯಸರ್ಕಾರವು ಈ ನಾಡಿನ ಮಕ್ಕಳ ಏಳಿಗೆಯನ್ನು ರೂಪಿಸಬಲ್ಲ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಜವಾಬ್ದಾರಿ ಹೊಂದಿದೆ. ಈಗಿರುವ ವ್ಯವಸ್ಥೆಯು ಸರಿಯಿಲ್ಲವೆನ್ನುವುದು ಮತ್ತು ಅದರಲ್ಲಿ ಸುಧಾರಣೆಯಾಗಬೇಕಿದೆ ಎನ್ನುವುದು ಮನವರಿಕೆಯಾಗಿದ್ದರೆ ಅದು ಒಳ್ಳೆಯದೇ. ಆದರೆ ಅದನ್ನು ಸರಿ ಮಾಡಬೇಕಾದ ಬಗೆ ಏನು? ತಾನೇ ಸರಿಮಾಡಬೇಕಾದ ವ್ಯವಸ್ಥೆಯನ್ನು ತಿಪ್ಪೆಗೆಸೆದು ಬೇರೊಂದು ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಮುಂದಾಗುವ ಮೂಲಕವೇ? ಇದಕ್ಕೆ ಬದಲಾಗಿ "ಕನ್ನಡನಾಡಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ? ಮೂಲಭೂತವ್ಯವಸ್ಥೆಯನ್ನು ಸುಧಾರಿಸುವ ಬಗೆ ಹೇಗೆ?" ಎಂದು ಚಿಂತಿಸಿ ಎಂದು ಸರಿಯಾದ ಯೋಜನೆಗಳನ್ನು ರೂಪಿಸುವುದಕ್ಕೆ ಬೇಕಾದ ಕ್ರಮ ಕೈಗೊಳ್ಳುವುದಲ್ಲವೇ? ಕನ್ನಡಿಗರು ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಕನ್ನಡದಲ್ಲಿ ಕಲಿಯುವುದೇ ದಾರಿಯೆನ್ನುವುದನ್ನು ಅರಿಯಬೇಕಾಗಿದೆ. ಇಂದು ಕನ್ನಡದ ಶಿಕ್ಷಣ ಅಷ್ಟು ಪ್ರಬುದ್ಧವಾಗಿಲ್ಲದಿದ್ದರೆ ಅದನ್ನು ಆ ಹಂತಕ್ಕೆ ಹಂತಹಂತವಾಗಿ ಒಯ್ಯುವ ಬಗ್ಗೆ ಯೋಚಿಸಬೇಕಾಗಿದೆ. ಆಗ ಮಾತ್ರಾ ಜ್ಞಾನದ ಭಂಡಾರ ಕನ್ನಡದ ಎಲ್ಲಾ ಮಕ್ಕಳಿಗೆ ಎಟುಕಲು ಸಾಧ್ಯ, ಆಗ ಮಾತ್ರವೇ ನಮ್ಮ ಮಕ್ಕಳಿಂದ ಜಗತ್ತಿನ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸಲು ಸಾಧ್ಯ. ನಾಡಿನ ಆರ್ಥಿಕ ಏಳಿಗೆ, ಜನಶಕ್ತಿಯ ಸದುಪಯೋಗ ಸಾಧ್ಯ. ನಾಳೆಗಳನ್ನು ಹಸನು ಮಾಡಲು ಸಜ್ಜಾಗಬೇಕಾದರೆ ಅದಕ್ಕೆ ಪೂರಕವಾಗುವಂತಹ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ದೀರ್ಘಾವಧಿಯಲ್ಲಿ ಇದೊಂದೇ ಏಳಿಗೆಗೆ ದಾರಿ... ಹೆದ್ದಾರಿಯಾಗಿದೆ. ನಮ್ಮನ್ನಾಳುವವರಿಗೆ, ನಮ್ಮ ಮಕ್ಕಳ ಭವಿಷ್ಯದ ಹೊಣೆ ಹೊತ್ತವರಿಗೆ ಇದರ ಅರಿವಿಲ್ಲದಿರುವುದು ನಾಡಿನ ದುರಂತವಲ್ಲವಾ ಗುರೂ!

ಯುವಜನೋತ್ಸವ ಮರೆತ ಏಕತೆಯ ಮೂಲಮಂತ್ರ!

ನಮ್ಮದು ಕನ್ನಡಪರ ಸರ್ಕಾರ ಅಂತಾ ಗಂಟೆಗೊಮ್ಮೆ, ಗಳಿಗೆಗೊಮ್ಮೆ ಬಡ್ಕೊಳ್ಳೋ ಘನ ಕರ್ನಾಟಕ ರಾಜ್ಯಸರ್ಕಾರವೇ ಮಾಡಿರೋ ಈ ಕೆಲಸವನ್ನು ನೋಡಿ. ನಿನ್ನೆಯ (10.11.2010ರ) ವಿಜಯಕರ್ನಾಟಕದಲ್ಲಿ ಇಂಥದ್ದೊಂದು ಜಾಹೀರಾತನ್ನು ಹಾಕಲಾಗಿದೆ. ಇದರಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಯುವಕರಿಗೆ ಕರೆಕೊಡಲಾಗಿದೆ. ಆದರೆ ಈ ಯುವಜನೋತ್ಸವದಲ್ಲಿ ಭಾಷಣ ಸ್ಪರ್ಧೆ ಮತ್ತು ಏಕಾಂಕ ನಾಟಕ ಸ್ಪರ್ಧೆಗಳು ಹಿಂದಿ/ ಇಂಗ್ಲೀಷಿನಲ್ಲಿರಬೇಕಂತೆ! ಇಲ್ಲಿ ಬೇರೆಬೇರೆ ಹಂತಗಳಲ್ಲಿ ಗೆದ್ದು ಮುಂದೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿ, ಅಲ್ಲೂ ಬಹುಮಾನ ಗೆಲ್ಲಿ, ಹೊರದೇಶದಲ್ಲಿ ನಿಮ್ಮ ಪ್ರತಿಭೆ ತೋರಿಸೋ ಅವಕಾಶ ಗಿಟ್ಟುಸಿಕೊಳ್ಳಿ ಅಂತಾ ನಮ್ಮ ಹಳ್ಳಿಹಳ್ಳಿಯಲ್ಲಿ ಕರೆಕೊಟ್ಟಿದ್ದುನ್ನ ನೋಡಿ ನಮ್ ಜನರೇನಾದ್ರೂ ಹಿಗ್ಗುದ್ರೆ ಬಾಯಿಗೆ ಮಣ್ಣಾಕ್ಕೊಂಡಂಗೇನೆ! ಏಕಂದ್ರೆ ನೀವು ನಾಟಕ ಮಾಡಬೇಕಾದ್ದು ಹಿಂದೀ/ ಇಂಗ್ಲಿಷಲ್ಲಿ ಅಂತಿದೆ ಈ ಜಾಹೀರಾತು. ಇದುನ್ ಹೊರಡ್ಸಿರೋದು ನಮ್ಮ ಕನ್ನಡನಾಡಿನ, ಕನ್ನಡಿಗರನ್ನು ಮುನ್ನಡೆಸುವ, ಜಗತ್ತಿನ ಕೆಡುಕುಗಳಿಂದ ಕನ್ನಡಿಗರನ್ನು ಕಾಯಬೇಕಾದ ಘನ ಕರ್ನಾಟಕ ರಾಜ್ಯಸರ್ಕಾರ!

ರಾಷ್ಟ್ರೀಯ ಅಂತಂದ್ರೆ ಹಿಂದೀ/ ಇಂಗ್ಲೀಷಾ?

ಹೌದೂ, ಭಾರತದ ಮೂಲೆಮೂಲೆಗಳ ಪ್ರತಿಭೆಗಳನ್ನು ಬೆಳಕಿಗೆ ತರಲು ಹೊರಟವರಿಗೆ ಭಾಷೆಯ ಮಿತಿ ಹಾಕುವಂತಹ ಈ ಕಟ್ಟಳೆಯಾದ್ರೂ ಯಾಕೆ ಬೇಕಿತ್ತು? ಇಲ್ಲಿ ಭಾರತದ ಎಲ್ಲಾ ನುಡಿಗಳಿಗೂ ಸ್ಥಾನ ಕೊಡಬೇಕಲ್ವಾ? ಇಲ್ಯಾಕೆ ಕನ್ನಡದಲ್ಲಿ ನಾಟಕ ಮಾಡುವುದು, ಭಾಷಣ ಮಾಡುವುದು ತಪ್ಪಾಗುತ್ತೆ? ವೈವಿಧ್ಯತೆ, ನಾನಾ ಭಾಗಗಳ ನಾನಾ ಸಂಸ್ಕೃತಿಯ ಜನರನ್ನು ಪರಸ್ಪರ ಪರಿಚಯಿಸಿ ರಾಷ್ಟ್ರೀಯ ಏಕತೆಯನ್ನು ಹೆಚ್ಚಿಸಲು ಈ ಯುವಜನೋತ್ಸವ ನಡೆಸಲಾಗುತ್ತದೆ ಅನ್ನುವ ಕೇಂದ್ರಸರ್ಕಾರದ ಮೂಲೋದ್ದೇಶವೇ ಇಂಗ್ಲೀಷ್/ ಹಿಂದೀ ಮಾತ್ರಾ ಬಳಸಿ ಅನ್ನುವ ಈ ನಿಲುವಿಂದ ಅರ್ಥಹೀನವಾಗುವುದಿಲ್ಲವೇ? ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಕೊಡುತ್ತೇವೆ, ವೈವಿಧ್ಯತೆಯಲ್ಲಿ ಏಕತೆ ಸಾಧಿಸುತ್ತೇವೆ ಎನ್ನುವ ನಾಡಿನಲ್ಲಿ ಹೀಗಿರುವುದು ಸರಿಯೇ? ಇದು ಏಕತೆಗೆ ಪೂರಕವೇ? ಹಿಂದಿ/ ಇಂಗ್ಲೀಷ್ ಅರಿಯದ ಭಾರತೀಯರಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಕ್ಕೇ ಇಲ್ಲವೇ? ಏನಂತೀರಾ ಗುರೂ?

ಅನ್ನದಾತರನ್ನೇ ಕಡೆಗಣಿಸಿತೇ ಕನ್ನಡ ಚಿತ್ರರಂಗ?


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ, ಕಳೆದ ಕೆಲವು ದಿನಗಳಿಂದ ಎದ್ದಿರೋ ಕೋಲಾಹಲ ನೋಡ್ತಾಯಿದ್ರೆ ಈ ಚಿತ್ರರಂಗದ ಒಳಗಿನ ಮಂದೀನೇ ಕನ್ನಡ ಚಿತ್ರರಂಗವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಿರೋ ಹಾಗೆ ಕಾಣ್ತಾಯಿಲ್ಲಾ ಗುರೂ! ಇಲ್ಲಿರೋ ಜನಾ ಇಡೀ ನಾಡುನ್ನ, ಉದ್ಯಮಾನಾ ಮತ್ತು ಸರ್ಕಾರಾನಾ ಬ್ಲಾಕ್‍ಮೇಲ್ ತಂತ್ರ ಉಪಯೋಗಿಸಿ ಆಡುಸ್ತಾ ಇದಾರಾ ಅನ್ನೋ ಅನುಮಾನ ಜನರಲ್ಲಿ ಇಷ್ಟೊತ್ತಿಗೆ ಮೂಡಿರಲೂಬಹುದು. ಒಟ್ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತಪ್ಪು ನಡೆ ಇಡ್ತಿದ್ಯಾ? ಇಂಥಾ ನಡೆಗಳಿಂದಾಗಿ ಇಡೀ ಚಿತ್ರೋದ್ಯಮ ಮತ್ತು ಕನ್ನಡನಾಡಿಗೇ ಹಾನಿ ಮಾಡ್ತಿದ್ಯಾ? ಅನ್ನೋ ಪ್ರಶ್ನೆಗಳು ಜನರಲ್ಲಿ ಹುಟ್ಕೊಂಡಂಗಿದೆ ಗುರೂ!

ಚಿತ್ರರಂಗ ಕಡೆಗಣಿಸಿರೋ ಅನ್ನದಾತರು!

ಹೌದೂ, ಮಾತೆತ್ತುದ್ರೆ ಅನ್ನದಾತರು, ಅಭಿಮಾನಿ ದೇವರೂ ಅಂತಾ ಜನರನ್ನು ಅಟ್ಟಕ್ಕೇರಿಸೋ ಈ ಜನ, ನಿಜಕ್ಕೂ ಈ ಇಡೀ ಪ್ರಕರಣದಲ್ಲಿ ಜನರ `ಆಯ್ಕೆಯ ಸ್ವಾತಂತ್ರ್ಯಾ'ನ ಮತ್ತು ಜನರು ತಮ್ಮ `ತಾಯ್ನುಡಿಯಲ್ಲಿ ಮನರಂಜನೆ' ಪಡೆಯೋ ಹಕ್ಕುನ್ನ ನಿರಾಕರುಸ್ತಾನೆ ಬಂದಿದಾರೆ. ಪರಭಾಷಾ ಚಿತ್ರಗಳ ಬಗ್ಗೆ, ಡಬ್ಬಿಂಗ್ ಬಗ್ಗೆ ಕಿಡಿ ಕಾರುವ ಸದರಿ ವಾಣಿಜ್ಯ ಮಂಡಲಿಯವನ್ನೂ, ಇವರನ್ನು ಬೆಂಬಲಿಸೋ ಚಿತ್ರರಂಗದವರನ್ನೂ "ಅನ್ನದಾತರೂ, ಅಭಿಮಾನಿ ದೇವರೂ - ಅಂತಾ ನೀವು ಪದೇ ಪದೇ ಹೊಗಳಿ ಅಟ್ಟಕ್ಕೇರಿಸುವ ಕನ್ನಡ ಪ್ರೇಕ್ಷಕನಿಗೆ ಏನು ಬೇಕು? ಏನು ಬೇಡಾ? ಅಂತಾ ಯಾವತ್ತಾದ್ರೂ ಯೋಚಿಸಿದ್ದೀರಾ" ಅಂತಾ ಕೇಳಬೇಕಾಗಿದೆ. "ಹೊಲಸು ರಿಮೇಕುಗಳು, ಕೆಟ್ಟದಾಗಿ ಕನ್ನಡ ಉಲಿಯುವ ಹಾಡುಗಾರರು, ಇಲ್ಲಿ ಅವಕಾಶಕ್ಕಾಗಿ ಕಾದಿರುವ ಪ್ರತಿಭಾವಂತರನ್ನು ಕಡೆಗಣಿಸಿ ಕರೆತರೋ ನಾಯಕಿಯರು, ನಟರುಗಳು ಇವನ್ನೆಲ್ಲಾ ಯಾಕೆ ತಂದಿರಿ ಅಂತಾ ನಾವೇನೂ ಕೇಳಿಲ್ಲಾ… ನಮಗೆ ಇಷ್ಟವಾದಾಗ ಗೆಲ್ಸಿದೀವಿ, ಚೆನ್ನಾಗಿಲ್ಲದಿದ್ದಾಗ ಸೋಲಿಸಿದ್ದೀವಿ... ಜನಕ್ ಬೇಡದಿದ್ರೆ ಮಾರುಕಟ್ಟೆ ಗೆಲ್ಲಕ್ ಆಗಲ್ಲಾ" ಅನ್ನೋದೇ ದಿಟವಾದ ಮಾತು. ಆದರೆ ಜನರಿಗೆ ಆಯ್ಕೆಯ ಸ್ವಾತಂತ್ರ ಇರಬೇಕು, ಅವರಿಗೆ ಬೇಕಾದ್ದನ್ನು ಪಡೆದುಕೊಳ್ಳುವ, ಬೇಡದ್ದನ್ನು ನಿರಾಕರಿಸುವ ಹಕ್ಕು ಇರಬೇಕು ತಾನೆ? 500 ಸಿನಿಮಾ ಸರದಿಯಲ್ಲಿ ಡಬ್ ಆಗಿ ಕಾಯ್ತಿದೆ ಅಂದ್ರೆ… ಬರಲಿ ಬಿಡಿ. ಜನ ಬೇಕಾದ್ದನ್ನು ಹಿಟ್ ಮಾಡ್ತಾರೆ, ಬೇಡದಿದ್ರೆ ಡಬ್ಬಾ ಸೇರುಸ್ತಾರೆ. ವರ್ಷಕ್ಕೆ ನಾಲ್ಕೇ ಸಿನಿಮಾ ಹಿಟ್ ಮಾಡ್ಬೇಕು ಅಂತಾ ಜನರೇನೂ ಆಣೆ ಮಾಡಿಲ್ವಲ್ವಾ? ಚೆನ್ನಾಗಿರೋ ಸಿನಿಮಾ ಕನ್ನಡದೋರು ತೆಗೆದರೂ ಓಡುತ್ತವೆ. ಹಾಗಾಗಿ ಇದ್ದಕ್ಕಿದ್ದಂತೆ ಹತ್ತು ಪರಭಾಷೆಯ ಚಿತ್ರಗಳು ಡಬ್ ಆಗಿ ಬಂದು ಚೆನ್ನಾಗಿ ಓಡುದ್ರೆ ಕನ್ನಡ ಚಿತ್ರಾನ ಜನ ನೋಡಲ್ಲಾ ಅನ್ನೋ ಭಯಾ ಏಕೆ? ಹೊಸಬರ ಅನೇಕ ಸಿನಿಮಾಗಳು ಕೂಡಾ ಯಶಸ್ವಿಯಾಗುತ್ತಿರೋದು ಆ ಚಿತ್ರಗಳು ಚೆನ್ನಾಗಿವೆ ಅನ್ನೋ ಒಂದೇ ಕಾರಣಕ್ಕ ತಾನೇ? ಇಷ್ಟಕ್ಕೂ ಗ್ರಾಹಕನಿಗೆ ಇರಬೇಕಾದ ಆಯ್ಕೆಯ ಸ್ವಾತಂತ್ರವನ್ನು ನಿರಾಕರಿಸೋ ಹಕ್ಕನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗಾಗಲೀ ಚಿತ್ರರಂಗಕ್ಕಾಗಲೀ ಕೊಟ್ಟೋರು ಯಾರು? ಇವರು ‘ಚಿತ್ರರಂಗದ ಕಾರ್ಮಿಕರ ಹಿತ’ ಅನ್ನೋ ವಾದ ಮುಂದಿಟ್ಟುಕೊಂಡು ಕನ್ನಡದ ಗ್ರಾಹಕರ ಹಿತವನ್ನು ಕಡೆಗಣಿಸೋದು ಸರೀನಾ… ಗುರೂ?

ನೆನಪಿರಲಿ...

ಇಷ್ಟೆಲ್ಲಾ ಆಗ್ತಿದ್ರೂ ಕನ್ನಡ ಚಲನಚಿತ್ರರಂಗದವರು ತಾವು ಸ್ವತಂತ್ರವಾಗಿ ಬದುಕಬೇಕು ಅನ್ನೋ ಮನಸ್ಥಿತೀಲೇ ಇದ್ದಂಗಿಲ್ಲಾ. ಸಿನಿಮಾ ತೆಗೆದರೆ ಸಬ್ಸಿಡಿ, ತೆರಿಗೆ ವಿನಾಯ್ತಿ ಅಂತಾ ಸರ್ಕಾರದ ಕಡೆ ಊರುಗೋಲಿಗಾಗಿ ನೋಡೋದನ್ನು ಇನ್ನಾದ್ರೂ ಬಿಡಬೇಕಾಗಿದೆ. ಇದನ್ನು ಒಂದು ಇಂಡಸ್ಟ್ರಿ ಅಂತಾ ಪರಿಗಣಿಸಿ, ತಮ್ಮ ಸಿನಿಮಾನ ಒಂದು ಮಾರುಕಟ್ಟೆಯನ್ನು ಗೆಲ್ಲಲಿ ಅಂತಾ ಬಿಡಬೇಕಾದ ಉತ್ಪನ್ನ ಎಂದು ಪರಿಗಣಿಸಬೇಕಾಗಿದೆ. ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು - ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಇದು ಬಡಕಲು, ಇದು ಅಳಿವಿನಂಚಿನಲ್ಲಿದೆ - ಅಂತ ಅಂದಂದೇ ಸಬ್ಸಿಡಿ ರೂಪದಲ್ಲೂ, ವಿನಾಯ್ತಿ ರೂಪದಲ್ಲೂ ಪಡೆದುಕೊಳ್ತಾನೆ ಇದ್ರೆ ಯಾವಾಗ ನಮ್ಮ ಚತ್ರರಂಗ ತನ್ನ ಕಾಲಮೇಲೆ ತಾನು ನಿಲ್ಲುವುದು? ಹೀಗೆ ಊರುಗೋಲನ್ನೇ ನಂಬಿರೋ ಚಿತ್ರರಂಗ ಹೇಗೆ ತಾನೇ ಉಳಿದೀತು? ಪರಭಾಷೆ ಚಿತ್ರ ಬ್ಯಾನ್, ಡಬ್ಬಿಂಗ್ ಬ್ಯಾನ್ ಅನ್ನುವಂತಹ ನಕಾರಾತ್ಮಕ ಕ್ರಮಮಗಳಿಂದ ಚಿತ್ರರಂಗಕ್ಕೆ ಏನುಪಯೋಗ? ಎನ್ನುವುದನ್ನೆಲ್ಲಾ ಚಿಂತಿಸಬೇಕಾಗಿದೆ.
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ? ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ? ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ಹೊಸಹೊಸ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದ್ರು ಬಗ್ಗೆ ಚಿತ್ರರಂಗ ಯೋಚಿಸಬೇಕಾಗಿದೆಯೇ ಹೊರತು ಬರೀ... ಸರ್ಕಾರ ನಮಗೆ ಸಬ್ಸಿಡಿ ಅದೂ ಇದೂ ಅಂತಾ ಜನರ ತರಿಗೆ ದುಡ್ಡುನ್ನ ಕೊಡ್ತಾನೆ ಇರಬೇಕು, ನಮ್ಮ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಬಾರದು, ಬೇರೆ ಭಾಷೆಯ ಚಿತ್ರಗಳು ಬರಬಾರದು, ನಮಗೆ ಇಂತಿಷ್ಟು ಸವಲತ್ತುಗಳು ಬೇಕು ಅನ್ನೋ ‘ದೇಹಿ’ ಅನ್ನೋ ಮನಸ್ಥಿತಿಯಿಂದ ಹೊರಬರಬೇಕಾಗಿದೆ ಗುರೂ! ಊರುಗೋಲಿನ ಆಸರೆ ಬಯಸುತ್ತಲಿದ್ದಷ್ಟು ದಿನವೂ ಕನ್ನಡ ಚಿತ್ರರಂಗ ಏಳಿಗೆ ಕಾಣೋದು ಕಷ್ಟ ಅನ್ನೋದು ಕನ್ನಡ ಚಿತ್ರರಂಗಕ್ಕೆ ನೆನಪಿರಲಿ...

ನಾಡಹಬ್ಬದ ನಲ್ಮೆಯ ಹಾರೈಕೆಗಳುಎಲ್ಲ ಕನ್ನಡ ಬಾಂಧವರಿಗೂ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು. ಈ ಸುದಿನ ನಮ್ಮ ನಿನ್ನೆಗಳನ್ನು ನೆನಪು ಮಾಡುತ್ತಾ ಇಂದು ಪ್ರೇರಣೆ ನೀಡಿ ನಾಳೆಗಳನ್ನು ಕಟ್ಟಲು ನೆರವಾಗಲಿದೆಯೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಬನವಾಸಿ ಬಳಗವು ನಿಮ್ಮ ಮುಂದೆ ಒಂದು ಧ್ವನಿಮುದ್ರಿಕೆಯನ್ನು ಪ್ರಸ್ತುತಪಡಿಸುತ್ತಿದೆ. ಇದನ್ನು ಕೇಳಿ, ನೋಡಿ. ಇದರಲ್ಲಿ ನಮ್ಮ ನಾಡಿನ ಹೆಮ್ಮೆಯ ಇತಿಹಾಸದ ಪ್ರಮುಖ ಘಟ್ಟಗಳಲ್ಲಿ ಕೆಲವುಗಳ ಬಗ್ಗೆ ಮಾತಾಡಲಾಗಿದೆ. ನೀವೂ ಕೇಳಿ. ನಿಮ್ಮ ಪರಿಚಿತರಿಗೂ ಕೇಳಿಸಿ.

ಇತಿಹಾಸದ ಪ್ರಾಮುಖ್ಯತೆ

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ, ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿ, ಕರ್ನಾಟಕ ಪ್ರಾಂತ್ಯದಲ್ಲಿ ದುಡಿಯಲು ಮುಂದಾಗಿದ್ದ ಶ್ರೀ ಆಲೂರು ವೆಂಕಟರಾಯರನ್ನು ಒಂದು ಪ್ರಶ್ನೆ ಕಾಡುತ್ತಿತ್ತಂತೆ. ನೆರೆಯ ಆಂಧ್ರ, ಮಹಾರಾಷ್ಟ್ರ ಮೊದಲಾದ ಪ್ರದೇಶಗಳ ಹೋರಾಟಗಾರರಿಗೆ ಇರುವ ಪ್ರೇರಣೆ ಕನ್ನಡಿಗರಿಗೆ ಇಲ್ಲವಲ್ಲಾ, ಕನ್ನಡಿಗರಲ್ಲಿ ಕೆಚ್ಚೇ ಇಲ್ಲವಲ್ಲಾ ಅನ್ನಿಸುತ್ತಿತ್ತಂತೆ. ಇದರ ಬೇರು ಹುಡುಕಿದಾಗ ಅವರು ಕಂಡುಕೊಂಡ ಸತ್ಯ... ತೆಲುಗರಿಗೆ ಪ್ರತಾಪರುದ್ರದೇವ, ನನ್ನಯ್ಯಭಟ್ಟರ ಇತಿಹಾಸವೂ, ಮಹಾರಾಷ್ಟ್ರೀಯರಿಗೆ ರಾಮದಾಸ, ಶಿವಾಜಿಯ ಇತಿಹಾಸವೂ ಕೊಡುವ ಸ್ಪೂರ್ತಿ, ಉಕ್ಕೇರಿಸುವ ರಾಷ್ಟ್ರೀಯತೆಯ ಭಾವನೆಗಳು ಕನ್ನಡಗರಲ್ಲೇ ಅದೇ ಪರಿಣಾಮ ಮಾಡಲಾರದು. ಕನ್ನಡದ ಜನರಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಲು ಪರಿಣಾಮಕಾರಿಯಾದ ಸಾಧನ... ನಮ್ಮ ಹಿರಿಯರ ಕಥನ ಮತ್ತವರ ಸಾಧನೆಗಳು ಮಾತ್ರಾ. ಅಂತಹ ಹಿರಿಮೆ ಮತ್ತು ಹಿನ್ನೆಲೆಗಳು ಕನ್ನಡಿಗರಿಗೆ ಇಲ್ಲವೇ? ಎಂಬ ಪ್ರಶ್ನೆ ಕಾಡತೊಡಗಿತಂತೆ. ಒಂದೊಮ್ಮೆ ಆನೆಗೊಂದಿಯಿಂದ ಕಂಡ ಪಾಳುಹಂಪೆಯತ್ತ ಆಸಕ್ತರಾಗಿ, ಅಲ್ಲಿಗೆ ಭೇಟಿ ನೀಡಿದಾಗ ನಮ್ಮ ಕನ್ನಡಿಗರ ನಿನ್ನೆಗಳು ಇಂತಹ ಸೊಬಗಿನದ್ದೇ ಎನ್ನಿಸಿತಂತೆ. ನಂತರ ಇತಿಹಾಸ, ಶಾಸನಗಳ ಆಳವಾದ ಅಧ್ಯಯನ ಕೈಗೊಂಡು ಆಲೂರರು ಕರ್ನಾಟಕ ಗತವೈಭವ ಎಂಬ ಹೊತ್ತಗೆಯನ್ನು ಬರೆದರಂತೆ. ಮುಂದೆ ಈ ಹೊತ್ತಗೆ ಕನ್ನಡನಾಡಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಕೈದೀವಿಗೆಯಾದದ್ದು ನಿಜ.
ಒಟ್ಟಿನಲ್ಲಿ ನಿನ್ನೆಯ ನಮ್ಮವರ ಸಾಧನೆಗಳು, ನಮ್ಮ ನಾಡಿನ ಇತಿಹಾಸ ನಮ್ಮಲ್ಲಿ ಸ್ಪೂರ್ತಿ ತುಂಬಿ ಇಂದು ನಾವೂ ಏನಾದರೂ ಸಾಧಿಸಬೇಕೆಂಬ ಉತ್ಸಾಹ ಮತ್ತು ಛಲಕ್ಕೆ ಕಾರಣವಾಗಲಿ. ಸಾಧನೆಯ ಶಿಖರವೇರಲು ನಮಗೂ ಯೋಗ್ಯತೆಯಿದೆ ಎನ್ನುವ ಮನವರಿಕೆಯು ಆತ್ಮವಿಶ್ವಾಸಕ್ಕೆ ಕಾರಣವಾಗಲಿ ಎಂಬುದೇ ಹೀಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕುವುದರ ಉದ್ದೇಶವಾಗಿದೆ.

ಮಾಹಿತಿಗಳ ಮೂಲ

ಈ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಯತ್ನ ಮಾಡಿ ನಿಮ್ಮ ಮುಂದಿಡಲಾಗಿದೆ. ಈ ಮಾತುಗಳಿಗೆ ಅನೇಕ ಗ್ರಂಥಗಳ ಅಧ್ಯಯನವೇ ಆಧಾರವಾಗಿದೆ. ಮುಖ್ಯವಾಗಿ ಆಲೂರು ವೆಂಕಟರಾಯರು ಬರೆದಿರುವ ಕರ್ನಾಟಕ ಗತವೈಭವ, ಅಂದಿನ ಮೈಸೂರು ರಾಜ್ಯಸರ್ಕಾರ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ವತಿಯಿಂದ ಹೊರತಂದಿದ್ದ ಕರ್ನಾಟಕದ ಪರಂಪರೆ - I & II, ಹಂಪಿ ವಿಶ್ವವಿದ್ಯಾಲಯದ ಪ್ರವಾಸಿ ಕಂಡ ವಿಜಯನಗರ, ಡಾ. ಚಿದಾನಂದ ಮೂರ್ತಿಗಳ ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ ಎನ್ನುವ ಹೊತ್ತಗೆಗಳು ಪ್ರಮುಖವಾದವು.

ಕೊನೆಹನಿ: ಈ ಬಾರಿ ಕೇವಲ ಇತಿಹಾಸದ ವೀರಪರಂಪರೆಯ ಒಂದು ಮಗ್ಗುಲಿನ ಬಗ್ಗೆ ಮಾತ್ರಾ ಮಾತನ್ನಾಡಲಾಗಿದೆ. ಕಲೆ, ಸಾಹಿತ್ಯ, ಸಂಗೀತ, ದಾರ್ಶನಿಕತೆ, ಆಧುನಿಕ ಕರ್ನಾಟಕದ ಹಿರಿಮೆ, ಧಾರ್ಮಿಕತೆ, ಸಾಧಕರು, ತಂತ್ರಜ್ಞಾನ, ನಮ್ಮ ನಾಡಿನ ಸಂಪನ್ಮೂಲಗಳು... ಹೀಗೆ ಅನೇಕ ಮಗ್ಗಲುಗಳಲ್ಲಿಯೂ ಕರ್ನಾಟಕ ಅತ್ಯಂತ ಶ್ರೀಮಂತ. ಈ ಪುಣ್ಯಭೂಮಿ ನಮ್ಮದೆಂಬ ಹಿರಿಮೆ ನಮ್ಮೆಲ್ಲರಲ್ಲಿರಲಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

ಕನ್ನಡ ಶಾಲೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ.

ಕಲಿಕೆಯ ಬಗ್ಗೆ ಹೊಸದಾಗಿ ಬಳಗದ ವತಿಯಿಂದ ಒಂದು ಬ್ಲಾಗನ್ನು "ಕಲಿಕೆಯು" ಹೆಸರಿನಲ್ಲಿ ಶುರುಮಾಡಿರೋ ವಿಷಯ ಕಳೆದ ಸಲ ಬರೆದಿದ್ದೆವು. ಈ ಬ್ಲಾಗಿನಲ್ಲಿ ಕನ್ನಡಿಗರ ಕಲಿಕೆ ಏರ್ಪಾಡಿನ ಬಗ್ಗೆ ಮಾಹಿತಿ, ಚರ್ಚೆ, ಸರಿ ನಿಲುವುಗಳನ್ನು ಹಂಚಿಕೊಳ್ಳೋದ್ರು ಜೊತೆಯಲ್ಲಿಯೇ ಖಾಸಗಿ (ಅನುದಾನಿತ/ ಅನುದಾನರಹಿತ) ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಆದಷ್ಟೂ ಮಾಹಿತಿ ಕಲೆ ಹಾಕಿ ಹಂಚಿಕೊಳ್ಳೋ ಯೋಜನೆಯೊಂದನ್ನು ಹಮ್ಮಿಕೊಂಡಿದ್ದೀವಿ.

ಒಳ್ಳೆಯ ಕನ್ನಡ ಶಾಲೆಯ ಮಾಹಿತಿ


ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕೆಂದು ಅಂದುಕೊಳ್ಳೋ ಎಷ್ಟೊಂದು ತಾಯಿತಂದೆಯರಿಗೆ ಯಾವ ಶಾಲೆ ಚೆನ್ನಾಗಿದೆ? ಎಲ್ಲಿಗೆ ಸೇರಿಸಬೇಕು? ಅನ್ನೋ ಗೊಂದಲ ಇರೋ ಸಾಧ್ಯತೆ ಇದೆ. ಅಂತಹವರಿಗೆ ಅನುಕೂಲ ಆಗಲಿ ಅನ್ನೋ ಕಾರಣದಿಂದಲೂ ಈ ಮಾಹಿತಿ ಕೂಡಿಹಾಕೋ ಕೆಲಸ ಪ್ರಮುಖವಾಗುತ್ತದೆ. ನೀವೂ ನಮ್ಮೊಡನೆ ಕೈಜೋಡಿಸಿ ಎಂದು ಕೇಳಿಕೊಳ್ಳುತ್ತೇವೆ. ಮೊದಲಿಗೆ ಬೆಂಗಳೂರಿನ ಶಾಲೆಗಳ ಬಗ್ಗೆ ಮಾಹಿತಿ ಕೂಡಿಹಾಕೋ ಯೋಚನೆಯಿದೆ. ನೀವು ಬೆಂಗಳೂರಿನಲ್ಲಿ ಕನ್ನದ ಮಾಧ್ಯಮದಲ್ಲಿ ಓದಿದವರಾಗಿದ್ದರೆ... ನೀವು ಓದಿದ ಶಾಲೆಯಿರಬಹುದು, ನಿಮ್ಮ ಮನೆಯ, ಬಡಾವಣೆಯ ಹತ್ತಿರದ ಶಾಲೆಯಿರಬಹುದು... ಅವುಗಳ ಬಗ್ಗೆ ’ಹೆಸರು ಮತ್ತು ವಿಳಾಸ’ಗಳ ಸಣ್ಣ ಮಾಹಿತಿ ಒದಗಿಸಿದರೆ ಸಾಕು. ಆ ಶಾಲೆಗೆ ನಮ್ಮ ಬಳಗದ ತಂಡದ ಸದಸ್ಯರು ಭೇಟಿಕೊಟ್ಟು, ಮಾಹಿತಿ ಕಲೆಹಾಕಿ ಕಲಿಕೆಯು ಬ್ಲಾಗಿನಲ್ಲಿ ಪ್ರಕಟಮಾಡುತ್ತೇವೆ.

ಈ ವಿಷಯವಾಗಿ ನೀವು ಸಂಪರ್ಕಿಸಬಹುದಾದ ಮಿಂಚೆ ವಿಳಾಸ: sanjeeva@banavasibalaga.org

ಕಲಿಕೆಯು: ಕಲಿಕೆಯ ಏರ್ಪಾಡಿನ ಚರ್ಚೆಗೊಂದು ಬ್ಲಾಗ್


ಒಂದು ನಾಡಿನ ಏಳಿಗೆ ಎನ್ನುವುದನ್ನು ನಾವಿಲ್ಲಿ ಆರ್ಥಿಕವಾದ ಏಳಿಗೆ ಎಂದು ಪರಿಗಣಿಸಿ ನೋಡಿದಾಗ, ನಾಡಿನ ಏಳಿಗೆಗೆ ಅದು ಅಳವಡಿಸಿಕೊಂಡಿರುವ ಕಲಿಕೆಯ ಪದ್ದತಿಯು ಚೆನ್ನಾಗಿ ಇರಬೇಕಾದ ಅಗತ್ಯವೂ ಕಾಣುತ್ತದೆ. ನಮ್ಮ ನಾಡಿನ ಮಕ್ಕಳ ಕಲಿಕೆಯು ಅತ್ಯುತ್ತಮವಾದಲ್ಲಿ ಅವರ ಪರಿಣಿತಿ, ಅರಿವಿನ ಆಳ-ಅಗಲಗಳು ಹೆಚ್ಚುವ ಮೂಲಕ ದುಡಿಮೆಯ ಹೆಬ್ಬಾಗಿಲು ನಾಡಿಗರ ಪಾಲಿಗೆ ತೆರೆದುಕೊಳ್ಳುತ್ತದೆ. ಆ ಮೂಲಕವೇ ನಾವು ಏಳಿಗೆ ಸಾಧಿಸಲು ಆಗುತ್ತದೆ. ಹಾಗಾಗಿ ಕಲಿಕೆ ಎನ್ನುವುದು ನಾವು ಗಮನ ನೀಡಬೇಕಾದ ಒಂದು ಮಹತ್ವದ ಕ್ಷೇತ್ರಗಳಲ್ಲಿ ಒಂದಾಗಿದೆ.

ಕಲಿಕೆಯು ಎಂಬ ಹೊಸ ಬ್ಲಾಗ್


ಬನವಾಸಿ ಬಳಗವು ಆಗ್ಗಿಂದಾಗ್ಗೇ ಕಲಿಕೆಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದರೂ, ಕಲಿಕೆಯ ವಿಷಯಗಳಿಗೆಂದೇ ಮೀಸಲಾದ ಅಂತರ್ಜಾಲ ತಾಣವೊಂದರ ಅಗತ್ಯವಿದೆ ಎಂದು ನಮಗನ್ನಿಸುತ್ತಲೇ ಇತ್ತು. ಈ ತಾಣದಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯಿರುವ ನಾಡಿಗರೆಲ್ಲಾ ಬಂದು ಚರ್ಚಿಸಬೇಕು ಅನ್ನುವ ಆಶಯ ನಮ್ಮದು. ಇಂತಹ ಆಶಯದ ಪೂರೈಕೆಗಾಗಿ "ಕಲಿಕೆಯು" ಎನ್ನುವ ಬ್ಲಾಗ್ ಒಂದನ್ನು ಆರಂಭಿಸಿದ್ದೇವೆ. ಸದರಿ ಬ್ಲಾಗ್‍ನಲ್ಲಿ ಈಗಾಗಲೇ ಅನೇಕ ಬರಹಗಳನ್ನು ಪ್ರಕಟಿಸಿದ್ದೇವೆ ಕೂಡಾ. ಈ ತಾಣದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಮತ್ತು ಕಲಿಕೆಯ ಏರ್ಪಾಡಿನ ಬಗ್ಗೆ ಅಸಕ್ತಿ ಹೊಂದಿರುವ ನಿಮ್ಮ ಪರಿಚಿತರನ್ನೂ ಇಲ್ಲಿಗೆ ಕರೆತನ್ನಿ ಎಂಬ ಕರೆಯನ್ನು ಈ ಮೂಲಕ ನೀಡುತ್ತಿದ್ದೇವೆ.

ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?

ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ. ಏನಿದು ಮಹದಾಯಿ ಯೋಜನೆ? ಏನು ಈ ವಿವಾದ? ಎಂಬುದನ್ನು ಸ್ವಲ್ಪ ನೋಡೋಣ ಬಾ ಗುರು!

ಮಹದಾಯಿ ಹುಟ್ಟು ಮತ್ತು ಹರಿವು
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.

ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ

1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು. ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.

ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾ
ಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.

ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ? ಒಟ್ಟಿನಲ್ಲಿ ಇದು ಹುಬ್ಬಳ್ಳಿ ಗದಗುಗಳ ಕುಡಿಯುವ ನೀರಿನ ಬವಣೆಯನ್ನು ಇನ್ನೂ ಹೆಚ್ಚು ಮಾಡುತ್ತದೆ ಅಲ್ವಾ ಗುರೂ?

ಇಗೋ ನೋಡಿ... ಕರ್ನಾಟಕ ರತ್ನ ಸಿಂಹಾಸನ!


ಕನ್ನಡಿಗರ ಹೆಮ್ಮೆಯ ಸಾಮ್ರಾಜ್ಯ ಕರ್ನಾಟಕ ಸಾಮ್ರಾಜ್ಯ. ಇದರ ರಾಜಧಾನಿ ವಿಜಯನಗರ. ಅಂದಿನ ವಿಜಯನಗರವೇ ಇಂದಿನ ಹಂಪಿ. ಈ ಸಾಮ್ರಾಜ್ಯದ ಸ್ಥಾಪಕರು ರಾಜಋಷಿ ಶ್ರೀ ವಿದ್ಯಾರಣ್ಯರು. ಈ ಸಾಮ್ರಾಜ್ಯಾಧೀಶರುಗಳು ಕುಳಿತು ಆಳಿದ ಸಿಂಹಾಸನವೇ ಕರ್ನಾಟಕ ರತ್ನ ಸಿಂಹಾಸನ. ಪುರಾಣದಲ್ಲಿ ಪಾಂಡವರು ಅಲಂಕರಿಸಿದ್ದರೆಂದು ನಂಬಿದ್ದ ಈ ಸಿಂಹಾಸನವನ್ನು ನೆಲದಡಿಯಲ್ಲಿ ಹೂತಿಟ್ಟಿದ್ದರಂತೆ. ನೆಲದಿಂದ ಹೊರ ತೆಗೆಸಿ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯಾಧೀಶರಾದ ವಿಜಯನಗರದ ದೊರೆಗಳಿಗೆ ಇದನ್ನು ಒಪ್ಪಿಸಿದ್ದರೆಂಬ ಪ್ರತೀತಿಯಿದೆ. ಇಂತಹ ಐತಿಹಾಸಿಕ ಮಹತ್ವವಿರೋ ಸಿಂಹಾಸನ ಏನಾಯಿತು? ಈಗೆಲ್ಲಿದೆ? ಎಂಬ ಕುತೂಹಲವೇ? ಇಗೋ, ಇಲ್ಲಿದೆ ಕರ್ನಾಟಕ ರತ್ನ ಸಿಂಹಾಸನ. ವಿಜಯನಗರದ ವಿನಾಶದ ನಂತರ ಸುಮಾರು 1609ರಲ್ಲಿ ಮೈಸೂರಿನ ಯದುವಂಶದ ವಡೆಯರ್ ರಾಜವಂಶದ ಪಾಲಾದ ಈ ಸಿಂಹಾಸನ ಇಂದು ಮೈಸೂರು ಅರಮನೆಯಲ್ಲಿದೆ. ಇದೇ ಸಿಂಹಾಸನವನ್ನೇ ನಾವು ದಸರಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ.

ಅಂತಿಂಥದ್ದಲ್ಲ ಈ ಸಿಂಹಾಸನ!

ಹಕ್ಕಬುಕ್ಕರಾದಿಯಾಗಿ ಮಹಾ ಮಹಾ ರಾಜಾಧಿರಾಜರು ಇದರಲ್ಲಿ ಕುಳಿತೇ ರಾಜ್ಯ ನಡೆಸಿದ್ದರು. ಕರ್ನಾಟಕ ರತ್ನ ಸಿಂಹಾಸನಾಧೀಶನೆಂದೇ ಖ್ಯಾತಿ ಪಡೆದ ಶ್ರೀ ಕೃಷ್ಣದೇವರಾಯರು ಇದರ ಮೇಲೆ ಕುಳಿತೇ ಆಳ್ವಿಕೆ ನಡೆಸಿದ್ದು. ಈ ಸಿಂಹಾಸನವನ್ನು ಬರಿಯ ರಾಜರುಗಳು ಮಾತ್ರಾ ಅಲಂಕರಿಸಿಲ್ಲ. ಮಾಧ್ವಸಂಸ್ಥಾನಾಧೀಶರೂ, ಯತಿರಾಜರೂ ಆಗಿದ್ದ ಶ್ರೀ ವ್ಯಾಸರಾಯರು ಕೂಡಾ ಅಲಂಕರಿಸಿದ್ದರಂತೆ. ಹೌದೂ! ಶ್ರೀಕೃಷ್ಣದೇವರಾಯನಿಗೆ ಒದಗಿದ್ದ ಕುಹ ಯೋಗವನ್ನು ಪರಿಹರಿಸಲು ಇಡೀ ವಿಜಯನಗರ ಸಾಮ್ರಾಜ್ಯವನ್ನು ದಾನವಾಗಿ ಪಡೆದು, ಇದೇ ಸಿಂಹಾಸನದ ಮೇಲೆ ವಿರಾಜಮಾನರಾಗಿ ಇವರು ಕುಳಿತಿದ್ದರಂತೆ. ಹಾಗಾಗೇ ಇವರಿಗೆ ವ್ಯಾಸರಾಜರೆಂಬ ಹೆಸರು ಬಂತೆಂದು ಇತಿಹಾಸ ಹೇಳುತ್ತದೆ.

ಪ್ರೇರಣೆ ನೀಡಲಿ ಇತಿಹಾಸ

ಇತಿಹಾಸದ ಸಕಾರಾತ್ಮಕ ಅಂಶಗಳು ಶೌರ್ಯ, ಸಾಹಸ, ತ್ಯಾಗ, ಬಲಿದಾನ, ಉದಾತ್ತತೆ, ಸಾಧನೆಗಳ ಯಶೋಗಾಥೆಯ ಖಜಾನೆಯಾಗಿವೆ. ಇತಿಹಾಸ ಕಟ್ಟಿದ ನಮ್ಮ ಹಿರಿಯರ ಸಾಧನೆಗಳು ನಮ್ಮ ಇವತ್ತುಗಳನ್ನು ಕ್ರಿಯಾಶೀಲವಾಗಿಸಿ ಒಳ್ಳೆಯ ನಾಳೆಗಳನ್ನು ಕಟ್ಟಲು ಪ್ರೇರಣೆ ನೀಡಲಿ. ನಮ್ಮೊಳಗಿನ ಸ್ಪೂರ್ತಿ ಚಿಲುಮೆ ಸದಾ ಉಕ್ಕುತ್ತಿರಲು ಇತಿಹಾಸದ ಇಂತಹ ಸ್ಮರಣೆಯುಳಿಕೆಗಳು ಕಾರಣವಾಗಲಿ.

ನವೋದಯ ವಿದ್ಯಾಲಯ ಮತ್ತು ಕೇಂದ್ರದ ಆಶಯ

ಘನ ಭಾರತ ಸರ್ಕಾರದ ಭಾಷಾನೀತಿಯನ್ನು ಜಾರಿ ಮಾಡಲು ನಾನಾಸಂಸ್ಥೆಗಳ ಮೂಲಕ ಪ್ರಯತ್ನಗಳು ನಡೆಯುತ್ತಿದ್ದರೂ, ಅದರಲ್ಲಿ ಪ್ರಮುಖವಾದದ್ದು ಮಾನವ ಸಂಪನ್ಮೂಲ ಇಲಾಖೆಯ ಯೋಜನೆಗಳು. ಈ ಇಲಾಖೆಯ ಅಡಿಯಲ್ಲೇ ಬರುವ ನವೋದಯ ವಿದ್ಯಾಲಯದ (ಇದು ಸಚಿವರೇ ಅಧ್ಯಕ್ಷರಾಗಿರುವ ಸ್ವಾಯತ್ತ ಸಂಸ್ಥೆ!) ಬಗ್ಗೆ ಮೊನ್ನೆ ಒಂದು ಬರವಣಿಗೆ ಬರೆಯಲಾಗಿತ್ತು.

ಕೇಂದ್ರಸರ್ಕಾರದ ಭಾಷಾನೀತಿಯ ಜಾರಿಯ ವಿಧಾನ

ಅದರಲ್ಲಿ ಆಮಿಷ, ಒತ್ತಾಯ ಮತ್ತು ಉತ್ತೇಜನಗಳ ಮೂಲಕ ಹಿಂದಿಯನ್ನು ದೇಶದೆಲ್ಲೆಡೆ ಹರಡಬೇಕೆಂಬ ಭಾರತ ಸರ್ಕಾರದ ಆಶಯದಂತೆ ಕೇಂದ್ರಸರ್ಕಾರ ಹೇಗೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದೀ ಹೇರಲು ಆಮಿಷವೆನ್ನುವ ಅಸ್ತ್ರವನ್ನು ಬಳಸುತ್ತಿದೆ ಎಂಬುದನ್ನು ತೆರೆದಿಡಲಾಗಿತ್ತು. ಯಥೇಚ್ಛವಾಗಿ ಹಣ ಖರ್ಚುಮಾಡಿ ಅತ್ಯದ್ಭುತ ಸವಲತ್ತುಗಳನ್ನು ಏರ್ಪಡಿಸಿ, ಉಚಿತವಾಗಿ ಕಲಿಸುವ ವಿದ್ಯಾಲಯ ವ್ಯವಸ್ಥೆಯನ್ನು ರೂಪಿಸಿ ಅದರ ಮೂಲಕ ಹೇಗೆ ಹಿಂದೀಪ್ರಚಾರಕ್ಕೆ ಕೇಂದ್ರಸರ್ಕಾರ ಉದ್ದೇಶಿಸಿದೆ/ ತೊಡಗಿದೆ, ನಾಳಿನ ವಿದ್ಯಾರ್ಥಿಗಳಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಾಡಿನ ವಿದ್ಯಾರ್ಥಿಗಳಲ್ಲಿ ಈ ಹಿಂದಿದೇವತೆಯನ್ನು ಒಪ್ಪುವ, ಆರಾಧಿಸುವ ಮನಸ್ಥಿತಿಯನ್ನು ಹುಟ್ಟುಹಾಕಲಾಗುತ್ತಿದೆ ಎಂಬುದನ್ನು ಬರೆಯಲಾಗಿತ್ತು.

ನವೋದಯರ ಪ್ರತಿಕ್ರಿಯೆ!

ಈ ಬರಹಕ್ಕೆ ನವೋದಯ ವಿದ್ಯಾಸಂಸ್ಥೆಯ ಹಲವಾರು ಮಾಜಿ ಮತ್ತು ಹಾಲಿ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನವೋದಯದಲ್ಲಿ ಹಿಂದಿಹೇರಿಕೆ ಇಲ್ಲವೆಂದೂ, ಹಿಂದೀ ಕಡ್ಡಾಯ ಇಲ್ಲವೆಂದೂ, ಇಂಗ್ಲೀಷಿನಲ್ಲಿರುವುದನ್ನೂ ಕನ್ನಡದಲ್ಲೇ ಹೇಳಿಕೊಡುತ್ತಿದ್ದರೆಂದೂ ಕೆಲವರು ತಿಳಿಸಿದರೆ ಮತ್ತೆ ಕೆಲವರು ತಮಗೆ ಆ ಸಂಸ್ಥೆಯಿಂದಾಗಿರುವ/ ಆಗುತ್ತಿರುವ ಉಪಕಾರ ಸ್ಮರಣೆಯನ್ನು ಮಾಡಿ, ಹಿಂದಿ ಹೇರಿಕೆ ಇತ್ಯಾದಿಗಳೆಲ್ಲಾ ಗೌಣವೆಂದೂ, ಅಂತಹ ಶಾಲೆಗಲಲ್ಲಿ ಸಿಗುತ್ತಿರುವ ಗುಣಮಟ್ಟದ ಕಲಿಕೆ ಮುಖ್ಯವೆಂದೂ ಪ್ರತಿಪಾದಿಸಿದ್ದಾರೆ. ಕೆಲವರಂತೂ ಹಿಂದಿ ಭಾರತದ ರಾಷ್ಟ್ರಭಾಷೆಯೆಂದೂ, ಭಾರತೀಯತೆ ಮೊದಲು, ಪ್ರಾದೇಶಿಕತೆ ನಂತರ ಎಂದೂ, ಕೇಂದ್ರದ ಉದ್ದೇಶ ಏನೇ ಇರಲಿ ಒಳ್ಳೆಯ ಶಾಲೆ ಕೊಟ್ಟು ಹಳ್ಳಿಗಾಡಿನ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ, ಅಷ್ಟು ಸಾಕು ಎಂದಿದ್ದಾರೆ. ಸದರಿ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಇರುವ ಮಾಹಿತಿಯನ್ನೂ ಕೆಲವರು ನಂಬಲು, ಒಪ್ಪಲು ತಯಾರಿಲ್ಲ. ಕೆಲವರು ಬರಹ ಬರೆಯುವ ಮುನ್ನ ನವೋದಯ ಶಾಲೆಗೆ ಭೇಟಿ ನೀಡಬೇಕಿತ್ತೆಂದೂ ಬರೆದಿದ್ದಾರೆ. ವಿಷಯ ಮಂಡನೆ ಮಾಡಿರುವ ಕಾಮೆಂಟುಗಳನ್ನು ಪ್ರಕಟಣೆಗೆ ಬಿಡಲಾಗಿದೆ, ಬೈಗುಳ, ಆಧಾರ ರಹಿತವಾದ ತೆಗಳಿಕೆಯ ಭಾಷೆಯವುಗಳನ್ನು ಅಳಿಸಲಾಗಿದೆ. ಈ ಎಲ್ಲಾ ಪ್ರತಿಕ್ರಿಯೆಗಳ ಒಟ್ಟು ಸಾರವೇನೆಂದರೆ ಸರ್ಕಾರ (ಕೇಂದ್ರವೋ ರಾಜ್ಯವೋ ಯಾವುದೋ ಒಂದು) ಒಟ್ಟಿನಲ್ಲಿ ಒಂದು ಶಿಸ್ತುಬದ್ಧವಾದ ಉತ್ತಮವಾದ ಶಾಲಾವ್ಯವಸ್ಥೆಯನ್ನು ಒದಗಿಸಿಕೊಟ್ಟು, ಆ ಮೂಲಕ ಸಾವಿರಾರು ಬಡ ಹಳ್ಳಿಗರಿಗೆ ಅನುಕೂಲ ಮಾಡಿಕೊಡುತ್ತಿರುವಾಗ ಅದಕ್ಕೆ ಪ್ರಾಮುಖ್ಯತೆ ಕೊಡದೆ ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ ಎಂಬುದು. ಇರಲಿ, ನವೋದಯರ ಅನಿಸಿಕೆಗಳಿಗೆ ಸಮಾಧಾನ ಹೇಳುವ ಹೊಣೆಗಾರಿಕೆ ಹೊತ್ತು ಈ ಪ್ರತಿಕ್ರಿಯೆಯನ್ನು ಬರೆಯಲಾಗುತ್ತಿದೆ.

ಸಫಲವಾಗುತ್ತಿರುವ ಕೇಂದ್ರದ ಉದ್ದೇಶ

ನವೋದಯ ವಿದ್ಯಾಲಯಗಳ ಘೋಷಿತ ಉದ್ದೇಶವೇ ಭಾರತದ ಹಳ್ಳಿಗಾಡಿನ ಪ್ರತಿಭಾವಂತ ಮಕ್ಕಳಿಗೆ ಮೂರು ಭಾಷೆಯಲ್ಲಿ ಪ್ರಾವೀಣ್ಯತೆ ಒದಗಿಸಿ ಕೊಡುವುದು. ಅಂದರೆ ತಾಯ್ನುಡಿ, ಹಿಂದೀ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿಕೊಡುವುದು. ಇದರರ್ಥ, ಈಗಾಗಲೇ ತಾಯ್ನುಡಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹಿಂದೀ ಮತ್ತು ಇಂಗ್ಲೀಷುಗಳಲ್ಲಿ ಪ್ರಾವೀಣ್ಯತೆ ತುಂಬುತ್ತೇವೆ ಎನ್ನುವುದೇ ಅಲ್ಲವೇ? ನಾವೇನೂ ಕನ್ನಡಿಗರು ಬೇರೇ ಭಾಷೆ ಕಲಿಯಬಾರದು ಎನ್ನುತ್ತಿಲ್ಲ. ಭಾರತ ಸರ್ಕಾರ ಯಾಕೆ ಹೀಗೆ ಹಿಂದೀಕಲಿಕೆಗೆ ಒತ್ತು ನೀಡುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಹಿಂದೀ ಭಾಷೆಯನ್ನು ಕಲಿಯುವ, ರಾಷ್ಟ್ರೀಯ ಏಕತೆಗಾಗಿ ಹಿಂದೀ ಬೇಕೆಂದು ನಂಬಿಸಲ್ಪಡುವ ನಮ್ಮ ಪ್ರತಿಭಾವಂತ ಮಕ್ಕಳು ಮುಂದೆ ಪ್ರತಿಷ್ಠಿತ ಸ್ಥಾನಗಳಲ್ಲಿ ದುಡಿಯುವಾಗ ಇದರಿಂದ ಅನುಕೂಲ ಆಗುವುದು ಹಿಂದೀ ತಾಯ್ನುಡಿಯ ಜನರ ವಲಸೆಗೆ ಎಂಬುದನ್ನು ಗಮನಿಸಬೇಕಾಗಿದೆ. ಭಾರತದ ಯಾವ ಮೂಲೆಗೇ ಹೋದರೂ ಹಿಂದಿಯೊಂದನ್ನೇ ಬಲ್ಲವನಿಗೆ ಯಾವ ತೊಡಕೂ ಆಗಬಾರದೆಂದು ಕೇಂದ್ರಸರ್ಕಾರ ಯೋಚಿಸಿ ಯೋಜಿಸುತ್ತಿರುವುದು ಎದ್ದು ಕಾಣುತ್ತದೆ. ಅವರಿಗೆ ತೊಂದರೆ ಕೊಡಬೇಕು ಅನ್ನುವುದು ಇಲ್ಲಿನ ವಾದವಲ್ಲ, ನಮ್ಮೂರಿಗೆ ವಲಸೆ ಬರುವವರು ನಮ್ಮ ನುಡಿಯಲ್ಲಿ ವ್ಯವಹರಿಸದಿದ್ದರೆ ನಾಳೆ ನಮ್ಮ ಇಡೀ ಕನ್ನಡ ಜನಾಂಗವೇ, ಕರ್ನಾಟಕದಲ್ಲೇ ಹಿಂದೀ ಕಲಿಯದೆ ಬದುಕಲಾಗದ ಸ್ಥಿತಿಗೆ ಈಡಾಗಬೇಕಾಗುತ್ತದೆ. ಯಾಕೆಂದರೆ...

ಕೇಂದ್ರಸರ್ಕಾರದ ಉದ್ದೇಶ ಮತ್ತು ಗುರಿಗಳು

ಇಡೀ ಭಾರತದ ಎಲ್ಲಾ ರಾಜ್ಯಗಳಲ್ಲಿ ಮೊದಲ ಕಲಿಕಾ ಮಾಧ್ಯಮ ಹಿಂದಿಯಾಗಬೇಕು. ಇದೀಗ ಹಿಂದಿ ಮತ್ತು ಇಂಗ್ಲೀಷಿನಲ್ಲಿರುವ ಆಡಳಿತ ವ್ಯವಸ್ಥೆಗಳು ಹಿಂದಿ ಮಾತ್ರಾ ಆಗಬೇಕು. ಭಾರತದ ಎಲ್ಲಾ ಕಛೇರಿಗಳೂ ಹಿಂದಿಯಲ್ಲಿ ಕಾರ್ಯನಿರ್ವಹಿಸಬೇಕು, ಆ ಕಾರಣದಿಂದ ಹೆಚ್ಚು ಹೆಚ್ಚು ಮಕ್ಕಳು ಹಿಂದೀ ಕಲಿಯಬೇಕು. (ಹೀಗಾದರೆ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಉತ್ತರ ಭಾರತೀಯರಿಗೆ ದಕ್ಷಿಣಕ್ಕೆ ವಲಸೆ ಹೋಗಲು ಅನುಕೂಲವಾಗುತ್ತದೆ.) ಇಂಗ್ಲೇಂಡಿನಲ್ಲಿ ಇಂಗ್ಲೀಷ್ ಹೇಗೋ, ಜಪಾನಿನಲ್ಲಿ ಜಪಾನೀಸ್ ಹೇಗೋ ಹಾಗೆ ಭಾರತದಲ್ಲಿ ಹಿಂದಿ ಆಗಬೇಕು. ಎಲ್ಲಾ ಭಾರತೀಯರ ಕಲಿಕೆ, ದುಡಿಮೆ, ಸಂಶೋಧನೆ, ಬದುಕು, ಆಡಳಿತ... ಪ್ರತಿಯೊಂದೂ ಹಿಂದಿಯಲ್ಲಾಗಬೇಕು. ಇಂತಹ ಗುರಿಯ ಬಗ್ಗೆ ಕೇಂದ್ರಸರ್ಕಾರಿ ಒಡೆತನದ www.rajbhasha.nic.in ಅಂತರ್ಜಾಲ ತಾಣದಲ್ಲಿ ವಿವರವಾಗಿ ನೋಡಬಹುದು.

ಇಂತಹ ಗುರಿ ಈಡೇರಿಕೆಗಾಗೇ ನವೋದಯ ಸಂಸ್ಥೆಯಂತಹುದನ್ನು ಕಟ್ಟಿರುವುದು. ಇದನ್ನು ಸಾಧಿಸಲು ರಾಷ್ಟ್ರೀಯ ಏಕತೆ, ದೇಶಭಕ್ತಿ ಎಂಬವುಗಳನ್ನು ಉದ್ದೀಪಿಸುವುದು. ಆದರೆ ನಿಜ ಉದ್ದೇಶ ಹಿಂದೀ ವಸಾಹತು ಸ್ಥಾಪನೆ. ಇದುವರೆವಿಗೂ ಪ್ರತಿಜಿಲ್ಲೆಯಿಂದ ಸುಮಾರು ಎಂಬತ್ತು ಮಕ್ಕಳು, ಪ್ರತಿವರ್ಷ ಈ ಹಿಂದಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ತಲೆಯಲ್ಲಿ ತುಂಬಿಕೊಂಡು ಹೊರಬರುತ್ತಿದ್ದಾರೆ. ಅಂದರೆ ಪ್ರತಿವರ್ಷ ಎರಡು ಸಾವಿರಕ್ಕೂ ಹೆಚ್ಚು ಅಚ್ಚ ಕನ್ನಡಿಗರು, ಬುದ್ಧಿವಂತರು, ಒಳ್ಳೆಯ ಉದ್ಯೋಗಗಳಲ್ಲಿ ಕೆಲಸ ಮಾಡುವ ಅವಕಾಶವಿರುವವರು, ಸಮಾಜದಲ್ಲಿ ಪ್ರಭಾವ ಹೊಂದಲಿರುವ ಪ್ರತಿಭಾಶಾಲಿಗಳನ್ನು ಈ ಸಂಸ್ಥೆ ಹೊರತರುತ್ತಿದೆ. ಇವರಲ್ಲಿ ಯಾರಿಗೂ ಕನ್ನಡದ ಬಗ್ಗೆ ಈ ಸಂಸ್ಥೆ ಕೆಟ್ಟದ್ದೇನನ್ನೂ ಹೇಳಿಕೊಟ್ಟಿಲ್ಲ ಅನ್ನುವುದು ನಿಜವಿರಬಹುದು, ಆದರೆ ಆಳದಲ್ಲಿ ಹಿಂದೀ ಭಾಷೆಯ ಬಗ್ಗೆ ಸ್ವೀಕಾರಾರ್ಹತೆಯನ್ನು ತುಂಬಲಾಗಿದೆ. ಇಷ್ಟು ಸಾಕಲ್ಲವೇ? ಭಾರತದ ವೈವಿಧ್ಯತೆಯ ಬಗ್ಗೆ ಪಾಠ ಮಾಡುವ ಇವರು ಎಲ್ಲಾ ಭಾಷೆಗಳೂ ಸಮಾನವೆಂದು ಬಾಯಲ್ಲಿ ಹೇಳಿಕೊಡಬಹುದೇನೋ, ಆದರೆ ಜತೆಯಲ್ಲಿ ಭಾರತದಲ್ಲಿ ಹಿಂದಿಗೆ ರಾಜ್‌ಭಾಷಾ ಸ್ಥಾನ ಇರುವುದೇ ಸರಿಯೆಂದು ನಂಬಿಸಿರುತ್ತಾರೆ.

ಕೇಂದ್ರದ ನಿಜ ಉದ್ದೇಶ

ಕರ್ನಾಟಕದ ನವೋದಯ ಶಾಲೆಗಳಲ್ಲಿ ಕನ್ನಡದಲ್ಲೇ ಹೇಳಿಕೊಡುತ್ತಾರೆ, ಹಿಂದಿ ಹೇರಿಕೆಯಿಲ್ಲಾ ಅನ್ನುವ ಗೆಳೆಯರು ತಿಳಿಯಬೇಕಾದ್ದು ಏನೆಂದರೆ ಈ ಬದಲಾವಣೆಗಳನ್ನು ಒಂದೇ ಬಾರಿಗೆ ಮಾಡಿ ವಿಫಲರಾಗುವ ದಡ್ಡತನ ಕೇಂದ್ರ ಮಾಡುವುದಿಲ್ಲ. ಅವರದ್ದೇನಿದ್ದರೂ ನಿಧಾನವಾಗಿ ಹೆಜ್ಜೆಹೆಜ್ಜೆಯಾಗಿ ನಮ್ಮ ತಾಯ್ನುಡಿಯನ್ನು ನಮ್ಮ ಕೈಗಳಿಂದಲೇ ಅಲ್ಲಿಂದ ಬಡಿದೋಡಿಸುವ ತಂತ್ರಗಾರಿಕೆ. ಇಲ್ಲದಿದ್ದರೆ ನವೋದಯ ಶಾಲೆಗಳ ಆಡಳಿತದಲ್ಲಿ ಎಷ್ಟರಮಟ್ಟಿಗೆ ಹಿಂದಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅಧ್ಯಯನ ಮಾಡಲು ಸಂಸತ್ತಿನ ಸಮಿತಿಯನ್ನು ನೇಮಿಸುವ ಅಗತ್ಯವಿರಲಿಲ್ಲ ಅಲ್ಲವೇ? ಈ ಸಮಿತಿಯು ಹಿಂದೀ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಹಂತಗಳ ಕಲಿಕಾ ಮಾಧ್ಯಮವಾಗಲಿ ಎಂದು ಶಿಫಾರಸ್ಸು ಮಾಡುತ್ತಿರಲಿಲ್ಲ ಅಲ್ಲವೇ? ಕೇಂದ್ರಕ್ಕೆ ಹಿಂದೀ ಹೇರಿಕೆಯ ಗುರಿ ಇಲ್ಲದಿದ್ದರೆ ನವೋದಯ ಶಾಲೆಗಳಲ್ಲಿ ವಿಜ್ಞಾನ ಗಣಿತಗಳನ್ನು ಬಿಟ್ಟು ಉಳಿದದ್ದನ್ನೆಲ್ಲಾ ಹಿಂದಿಯಲ್ಲಿ ಕಲಿಸುತ್ತೇವೆ ಎಂದು ಘೋಷಿಸಿಕೊಳ್ಳುವ ಬದಲು ಆಯಾ ರಾಜ್ಯದ ಭಾಷೆಯಲ್ಲಿ ಕಲಿಸುತ್ತೇವೆ ಎಂದು ಬರೆದುಕೊಳ್ಳುತ್ತಿದ್ದರಲ್ಲವೇ?

ಒಟ್ಟಾರೆ ನವೋದಯದಂತಹ ಉತ್ತಮ ಗುಣಮಟ್ಟದ ಶಾಲೆಗಳನ್ನು ಕಟ್ಟಿ, ಅದರ ಮೂಲಕ ಹಳ್ಳಿಗಾಡಿನ ಮಕ್ಕಳಿಗೆ ಕಲಿಕೆ, ಬದುಕುಗಳ ಆಮಿಷ ಒಡ್ಡಿ, ಇಡೀ ಕನ್ನಡನಾಡನ್ನು ನಾಳಿನ ಹಿಂದೀ ವಸಾಹತಾಗಿಸುವ ಹುನ್ನಾರ ಕೇಂದ್ರಕ್ಕಿರುವುದನ್ನು ಅರಿಯುವುದು ಮುಖ್ಯವಾಗಿದೆ. ಕೇಂದ್ರಸರ್ಕಾರ ಈ ಶಾಲೆಗಳಿಗೆ ಖರ್ಚು ಮಾಡುತ್ತಿರುವ ಹಣ ನಮ್ಮ ರಾಜ್ಯ ಕೇಂದ್ರಕ್ಕೆ ಕಟ್ಟುವ ತೆರಿಗೆಯಲ್ಲಿನ ಒಂದು ಸಣ್ಣಭಾಗವೇ ಹೊರತು ಕೇಂದ್ರ ನಮಗಾಗಿ ನೀಡುತ್ತಿರುವ ದಯಾಭಿಕ್ಷೆ ಏನಲ್ಲ.

ಕಲಿಕೆಯೆನ್ನುವುದನ್ನು ರಾಜ್ಯಪಟ್ಟಿಯಿಂದ ಸಂಯುಕ್ತ ಪಟ್ಟಿಗೆ ಹಾಕಿಕೊಂಡು, ಕೇಂದ್ರಸರ್ಕಾರವು ತಾನೇ ಶಾಲೆಗಳನ್ನು ಕಟ್ಟುವ ನಡೆಸುವ ಚಾಳಿಯನ್ನು ಕೈಬಿಡಬೇಕಾಗಿದೆ. ತನ್ನ ನಾಡಿನ ಮಕ್ಕಳ ಕಲಿಕೆಯು ರಾಜ್ಯಗಳ ಹೊಣೆಯಾಗಿರುತ್ತದೆ ಮತ್ತು ಕಲಿಕೆ ಅತ್ಯುತ್ತಮವಾಗಲು ವಿಕೇಂದ್ರೀಕರಣವೇ ಸರಿಯಾದುದಾಗಿದೆ. ಈಗ ನಮ್ಮ ರಾಜ್ಯಸರ್ಕಾರ ಸರಿಯಾದ ವ್ಯವಸ್ಥೆ ಕಟ್ಟಿಕೊಡಲಿ ಎನ್ನುವುದು ನಮ್ಮ ದನಿಯಾಗಬೇಕೇ ಹೊರತು, ಇವರು ಸರಿಯಿಲ್ಲ... ಅದಕ್ಕೆ ಕೇಂದ್ರಸರ್ಕಾರವೇ ಶಾಲೆ ನಡೆಸಲಿ ಅನ್ನುವುದಲ್ಲ. ಕರ್ನಾಟಕ ರಾಜ್ಯಸರ್ಕಾರವು ತ್ರಿಭಾಷಾ ಸೂತ್ರಕ್ಕೆ ಕೊನೆ ಹೇಳಿ, ಸದರಿ ಶಾಲೆಗಳನ್ನು ತಾನೇ ವಹಿಸಿಕೊಂಡು ನಡೆಸುವ ಮೂಲಕವೂ, ಇಂತಹುದೇ ಸೌಕರ್ಯ ಮತ್ತು ಗುಣಮಟ್ಟಗಳಿರುವ ಕಲಿಕೆಯನ್ನು ತಾನೇ ನೀಡುವ ಮೂಲಕವೂ ಭಾರತ ಸರ್ಕಾರದ ಹುನ್ನಾರವನ್ನು ವಿಫಲಗೊಳಿಸಬೇಕಾಗಿದೆ.

ಕೊನೆಹನಿ: ನವೋದಯದ ಕೆಲ ಗೆಳೆಯರು, ಇಡೀ ಬರಹವನ್ನು ತಮಗೆ ಸಂಸ್ಥೆಯಿಂದಾಗಿರುವ ಲಾಭದ ಹಿನ್ನೆಲೆಯಲ್ಲಿ, ತಮಗಾಗಿರುವ ಅನುಭವದ ನೆಲೆಯಲ್ಲಿ, ಪ್ರತಿಕ್ರಿಯೆ ನೀಡಿರುವಂತಿದೆ. ಇಡೀ ಬರಹವನ್ನು ಭಾರತ ದೇಶದ ಭಾಷಾನೀತಿ, ಆಡಳಿತ ನೀತಿ, ಕೇಂದ್ರಸರ್ಕಾರಕ್ಕಿರುವ ‘ಇಡೀ ಭಾರತಕ್ಕೆ ಹಿಂದಿ ಕಲಿಸುವ ಉತ್ಸಾಹ’, ಅದಕ್ಕಾಗಿ ಮಾಡಿಕೊಂಡಿರುವ ಹತ್ತಾರು ರಾಜಮಾರ್ಗಗಳು, ಒಳಸುಳಿಗಳು, ಇವುಗಳ ಹಿನ್ನೆಲೆಯಲ್ಲಿ ನೋಡಿ, ಓದಿ ಅರ್ಥ ಮಾಡಿಕೊಳ್ಳುವರೆಂಬ ಆಶಯ ನಮ್ಮದು.

ನವೋದಯ ಶಾಲೆ: ಸಿಹಿ ಮೆತ್ತಿದ ಹಿಂದೀ ವಿಷ!


ಭಾರತ ಸರ್ಕಾರವು 1985ರಲ್ಲಿ ಶುರುಮಾಡಿದ ಒಂದು ಹೊಸಬಗೆಯ ವಿಶಿಷ್ಟವಾದ ಕಲಿಕಾ ಪದ್ದತಿಯ ಹೆಸರೇ “ನವೋದಯ ವಿದ್ಯಾಲಯ ವ್ಯವಸ್ಥೆ”. ಇದರ ಅತ್ಯಾಕರ್ಷಕ ಅಂಶವೆಂದರೆ ಇದರ ಘೋಷಿತ ಉದ್ದೇಶ. “ಭಾರತದಲ್ಲಿರುವ ಪ್ರತಿಭಾವಂತರೂ, ಬಡವರೂ, ಹಳ್ಳಿಯವರೂ ಆಗಿರುವ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವುದು.” ಈ ನವೋದಯ ವಿದ್ಯಾಲಯ ಪದ್ದತಿಗಾಗೇ ಕೇಂದ್ರಸರ್ಕಾರ ಕೋಟಿಗಟ್ಟಲೆ ಹಣ ಮೀಸಲಿಟ್ಟಿದೆ. ಈ ಕಲಿಕಾ ಏರ್ಪಾಟಿನಲ್ಲಿ ನಮ್ಮ ತೆರಿಗೆ ಹಣ ಖರ್ಚಾಗುವುದು ಹಿಂದೀಹೇರಿಕೆಗಾಗಿ ಎಂಬುದೇ ದಿಟವಾಗಿದೆ.

ಮೇಲೆ ಮೆತ್ತಿರುವ ಸಿಹಿ!

ಇಡೀ ಭಾರತದಲ್ಲಿ ಇದನ್ನು ಸ್ಥಾಪಿಸುವಾಗ ಹೇಳಿದ ಉದ್ದೇಶಗಳು ಬಡಮಕ್ಕಳಿಗೆ ಅದರಲ್ಲೂ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಡುವುದು. ನಿಜಕ್ಕೂ ಎಂತಹ ಅದ್ಭುತವಾದ ಕಾರ್ಯಕ್ರಮ ಇದು. ನಮ್ಮ ಹಳ್ಳಿಗಾಡುಗಳಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಪಟ್ಟಣಿಗರಿಗೆ ಸಿಗುತ್ತಿರುವ ಕಲಿಕೆ ಸಿಗದಿರುವಂತಾಗಿರುವುದನ್ನು ಸರಿಪಡಿಸಲು ಈ ಕ್ರಮ ತೆಗೆದುಕೊಳ್ಲಲಾಗಿದೆ ಎನ್ನಿಸುವುದು ಸಹಜ. ಇಲ್ಲಿ ಉಚಿತವಾದ ವಸತಿ ನಿಲಯ, ಊಟ, ಬಟ್ಟೆಯ ವ್ಯವಸ್ಥೆಗಳಿವೆ. ಶುಲ್ಕ ತಿಂಗಳಿಗೆ 200 ರೂಪಾಯಿ ಮಾತ್ರಾ. ಪರಿಶಿಷ್ಟ ಜಾತಿ, ವರ್ಗ, ಬಡವರು, ಹೆಣ್ಣುಮಕ್ಕಳಿಗಂತೂ ಸಂಪೂರ್ಣ ಉಚಿತ. ಇಲ್ಲಿನ ಶಾಲೆಗಳಲ್ಲಿ ಅದ್ಭುತವಾದ ಮೂಲಸೌಕರ್ಯಗಳಿವೆ. ಪ್ರತಿ ಶಾಲೆಯೂ ಹಳ್ಳಿಯ ಪರಿಸರದಲ್ಲಿದ್ದು ಸುಮಾರು ಐದು ಎಕರೆ ಪ್ರದೇಶವನ್ನು ಹೊಂದಿರುತ್ತದೆ. ಇಲ್ಲಿನ ಶಿಕ್ಷಕರೂ ಕೂಡಾ ಪ್ರತಿಭಾನ್ವಿತರಿಂದಲೇ ಕೂಡಿರುತ್ತಾರೆ. ಈ ಸಂಸ್ಥೆಯಲ್ಲಿ ಮಕ್ಕಳಿಗೆ ಎನ್.ಸಿ.ಸಿ, ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್, ಕಲೆ, ಸಾಹಿತ್ಯ, ಆಟೋಟಗಳಲ್ಲಿ ವಿಫುಲವಾದ ಅವಕಾಶಗಳಿವೆ. ಹೇಳಿ ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೆ ಯಾರಿಗೆ ತಾನೆ ಈ ವ್ಯವಸ್ಥೆ ಇಷ್ಟವಾಗೋಲ್ಲ. ಇವೆಲ್ಲಾ ಮೇಲೆ ಮೆತ್ತಲಾಗಿರುವ ಸಿಹಿ ಮಾತ್ರಾ.

ಒಳಗಿನ ಕಹಿ ವಿಷ!

ಪ್ರತಿಜಿಲ್ಲೆಯ ಒಂದೊಂದು ಹಳ್ಳಿಯಲ್ಲಿ ತೆಲೆಯೆತ್ತಿರುವ ಈ ವಿದ್ಯಾಲಯಗಳಲ್ಲಿ ವಿಜ್ಞಾನ, ಗಣಿತಗಳನ್ನು ಮಾತ್ರಾ ಇಂಗ್ಲೀಷಿನಲ್ಲಿ ಕಲಿಸಲಾಗುತ್ತದೆ. ಉಳಿದದ್ದನ್ನೆಲ್ಲಾ ತಾಯ್ನುಡಿಯಲ್ಲಿ ಎಂದುಕೊಂಡರೆ.... ಊಹೂಂ... ಹಿಂದೀಭಾಷೆಯಲ್ಲಿ ಕಲಿಸಲಾಗುತ್ತದೆ. ಇದರ ಉದ್ದೇಶದಲ್ಲಿನ ಈ ಸಾಲುಗಳು ಅದಕ್ಕೆ ತ್ರಿಭಾಷಾ ಸೂತ್ರದ ಅನ್ವಯವೆನ್ನುವ ನಿಯಮದತ್ತ ಕೈತೋರುತ್ತಾ ಹೀಗೆನ್ನುತ್ತಿವೆ...

Adherence to Three Language Formula
The Regional Language is generally the medium of instruction from Class-VI to VIII and from Class- IX onwards, it is English for Science and Mathematics and Hindi for Humanities subjects.
ಕರ್ನಾಟಕದ ನವೋದಯ ಶಾಲೆಗಳಲ್ಲಿ ಆರು, ಏಳು ಮತ್ತು ಎಂಟನೇ ತರಗತಿಗಳಲ್ಲಿ ಕಲಿಕಾ ಮಾಧ್ಯಮವು ಕನ್ನಡವಾಗಿರುತ್ತದೆ. ಒಂಬತ್ತನೇ ತರಗತಿಯಿಂದ ಗಣಿತ ಮತ್ತು ವಿಜ್ಞಾನಗಳನ್ನು ಇಂಗ್ಲೀಷಿನಲ್ಲೂ ಸಮಾಜಶಾಸ್ತ್ರದಂತಹ ಉಳಿದವುಗಳನ್ನು ಹಿಂದೀಯಲ್ಲಿ ಕಲಿಸಲಾಗುತ್ತದೆ.

ಒಂಬತ್ತನೇ ತರಗತಿಯ ಮಕ್ಕಳಲ್ಲಿ ಶೇಕಡಾ 30ರಷ್ಟು ಮಂದಿಯನ್ನು ಆರಿಸಿ ಹಿಂದೀ ಪ್ರದೇಶದಲ್ಲಿರುವ ಶಾಲೆಗೆ ವರ್ಗ ಮಾಡಲಾಗುತ್ತದೆ. ಭವ್ಯ ಭಾರತದ ರಾಷ್ಟ್ರೀಯ ಏಕತೆಯನ್ನು ಆ ಮೂಲಕ ಗಟ್ಟಿಗೊಳಿಸಲಾಗುತ್ತದೆಯಂತೆ. ಹಿಂದೀ ಭಾಷಿಕ ಪ್ರದೇಶದ ಮಕ್ಕಳನ್ನು ಹಿಂದಿಯೇತರ ಪ್ರದೇಶದ ಶಾಲೆಗೆ ವರ್ಗಾಯಿಸುತ್ತಾರಂತೆ.


Promotion of National Integration
Navodaya Vidyalayas aim at inculcating values of national integration through migration scheme though which the inter regional exchange of students between Hindi and Non-Hindi speaking States and vice-versa takes place for one academic year. Efforts are made to promote better understanding of the unity in diversity and cultural heritage through various activities.

ಮೇಲುನೋಟಕ್ಕೆ ಎಂತಹಾ ರಾಷ್ಟ್ರೀಯ ಭಾವೈಕ್ಯತೆಯ ಉದ್ದೇಶ ಇದರಲ್ಲಿ ಕಂಡರೂ ಒಳಗಿನ ಮರ್ಮವೇ ಬೇರೆ. ಮೊದಲಿಗೆ ಇಲ್ಲಿ ಹಿಂದೀ ಮತ್ತು ಹಿಂದಿಯೇತರ ಎಂಬ ವಿಭಾಗಗಳೇ ಏಕೆ? ಇದು ಹಿಂದಿಯನ್ನೊಂದು ಕಡೆ, ಉಳಿದೆಲ್ಲಾ ಭಾಷೆಗಳನ್ನು ಇನ್ನೊಂದುಕಡೆ ಮಾಡಿದಂತಲ್ಲವೇ? ಭಾವೈಕ್ಯತೆ ಬೆಸೆಯಲು ಅಂತರರಾಜ್ಯ ವರ್ಗಾವಣೆ ಅಂದಿದ್ದರೆ ಸಾಕಿರಲಿಲ್ಲವೇ?
ಇದರಂತೆ ಹಿಂದೀಭಾಷಿಕ ವಿದ್ಯಾರ್ಥಿ ಕನ್ನಡನಾಡಿಗೆ ವರ್ಗವಾಗಿ ಬಂದರೂ ಇಡೀ ಶಾಲೆಯಲ್ಲಿನ ಕಲಿಕಾ ಮಾಧ್ಯಮವೇ ಹಿಂದಿಯಾಗಿರುವಾಗ, ಶಾಲಾ ಆಡಳಿತವೆಲ್ಲಾ ಹಿಂದಿಯಲ್ಲಿ ನಡೆಯುವಾಗ ಹಿಂದಿಯೇತರ ನಾಡಿನ ಸೊಗಡನ್ನು ಅರಿಯಲು ಹೇಗೆ ಮತ್ತು ಎಷ್ಟರಮಟ್ಟಿಗೆ ಸಾಧ್ಯ? ಇನ್ನು ಇಂತಹ ವಿದ್ಯಾರ್ಥಿಗಳ ಜೊತೆ ಸಹಪಾಟಿಗಳೆಲ್ಲಾ ಹಿಂದಿಯಲ್ಲಿ ವ್ಯವಹರಿಸದೆ ಇರಲು ಸಾಧ್ಯವೇ? ಇಂತಹುದೇ ಪರಿಸ್ಥಿತಿ ಕನ್ನಡದ ವಿದ್ಯಾರ್ಥಿ ಹಿಂದೀ ಪ್ರದೇಶಕ್ಕೆ ಹೋದರೆ ಇರುತ್ತದೆಯೇ? ಊಹೂಂ... ಆತ/ ಆಕೆ ಅರೆಹಿಂದಿ ವಾತಾವರಣದಿಂದ ಸಂಪೂರ್ಣ ಹಿಂದೀ ವಾತಾವರಣಕ್ಕೆ ತೆರೆದುಕೊಳ್ಳಬೇಕಾಗುತ್ತದೆ. ನವೋದಯ ಶಾಲೆಯ ಆಡಳಿತವೆಲ್ಲಾ ಹಿಂದಿಯಲ್ಲಿರುತ್ತದೆ ಎನ್ನಲು ಹಿಂದಿ ಜಾರಿಗೊಳಿಸುವಲ್ಲಿ ನವೋದಯ ಶಾಲೆಗಳದ್ದು ಮೊದಲ ಸಾಲಿನ ಸ್ಥಾನವಾಗಿದೆ ಅನ್ನುವುದೇ ಸಾಕು. ಒಟ್ಟಾರೆ ಈ ವರ್ಗಾವಣೆಗಳು ರಾಷ್ಟ್ರೀಯ ಏಕತೆಯನ್ನು ಪೊರೆಯುವುದಕ್ಕಿಂತಾ ಕನ್ನಡದ ಮಕ್ಕಳಿಗೆ ಹಿಂದೀನಾಡಿನ ಪ್ರಾಕ್ಟಿಕಲ್ ಅನುಭವ ನೀಡುವ ತರಗತಿಗಳಾಗುತ್ತವೆ ಅನ್ನುವುದೇ ಹೆಚ್ಚು ಸತ್ಯ.

ನಿಜವಾದ ಉದ್ದೇಶ!

ವಾಸ್ತವವಾಗಿ ಈ ಶಾಲೆಗಳ ನಿಜವಾದ ಉದ್ದೇಶವೇ ಹಿಂದೀ ಹೇರಿಕೆಯಾಗಿದೆ. ಎಳವೆಯಲ್ಲೇ ತಲೆಯಲ್ಲಿ ಹಿಂದೀ ಭಾಷೆ ಭಾರತದ ಒಗ್ಗಟ್ಟಿಗೆ ರಾಷ್ಟ್ರೀಯತೆಗೆ ಅಗತ್ಯ ಎನ್ನುವ ಪೊಳ್ಳನ್ನು ತುಂಬಲ್ಪಟ್ಟ ಮಕ್ಕಳಲ್ಲಿ ಇನ್ಯಾವ ಭಾವನೆ ತಾನೇ ಹುಟ್ಟೀತು? ಇಷ್ಟಕ್ಕೂ ಈ ಇಡೀ ಯೋಜನೆಯ ಉದ್ದೇಶ ಹಿಂದಿಹೇರಿಕೆಯಲ್ಲದಿದ್ದರೆ, ಇದು ಭಾರತೀಯ ಆಡಳಿತ ಭಾಷಾ ಕಾಯ್ದೆಯ/ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸದೆ ಇದ್ದಿದ್ದರೆ ಈ ಪದ್ದತಿ ತಮಿಳುನಾಡಿಗೆ ಮಾತ್ರಾ ಅನ್ವಯಿಸುವುದಿಲ್ಲ ಏಕೆ? ಒಟ್ಟಾರೆ ಕರ್ನಾಟಕದ 27 ಶಾಲೆಗಳಲ್ಲಿ ಪ್ರತಿವರ್ಷ ಸೇರಿಸಿಕೊಳ್ಳುವ 2000 ಮಕ್ಕಳು ಈ ಪದ್ದತಿಯಲ್ಲಿ ಕಲಿತು ಹೊರಬರುವಾಗ ಹಿಂದೀ ದೇವತೆಯ ಪದತಲದಲ್ಲಿ ತಾಯ್ನುಡಿಯ ಬಲಿಕೊಟ್ಟೇ ಹೊರಬರುತ್ತಾರೆ ಎಂಬುದು ಆತಂಕಕಾರಿಯಾಗಿದೆ. ಈ ವಿಷಯ ಮನದಟ್ಟಾಗಲು ಇಲ್ಲೊಂದು ಸಣ್ಣ ಸ್ಯಾಂಪಲ್ ಮಾಹಿತಿ ಇದೆ ನೋಡಿ. ನವೋದಯ ಶಾಲೆಯ ಮಾಜಿ ವಿದ್ಯಾರ್ಥಿಗಳ ಸ್ನೇಹ ಕೂಟವೊಂದರಲ್ಲಿ ಭಾರತಕ್ಕೆ ಸೂಕ್ತವಾದ ರಾಷ್ಟ್ರಭಾಷೆ ಯಾವುದು ಎನ್ನುವ ಸಮೀಕ್ಷೆ ಮಾಡಿದ್ದಾರೆ. ನೂರಕ್ಕೆ ಎಂಬತ್ತೇಳು ಜನರು ಹಿಂದೀ ಎಂದು ಬರೆದಿದ್ದರೆ ಹನ್ನೆರಡರಷ್ಟು ಜನ ಇಂಗ್ಲೀಷ್ ಎಂದಿದ್ದಾರೆ. ಅಂದರೆ ಎಂಟರಲ್ಲಿ ಏಳುಜನ ಹಿಂದಿ ಪರವಾಗಿ ಮತ ಚಲಾಯಿಸಿದ್ದಾರೆ. ಧನ್ಯ... ಭಾರತ... ಧನ್ಯ. ನಮ್ಮೆಲ್ಲರ ಕೋಟಿಗಟ್ಟಲೆ ತೆರಿಗೆ ಹಣ ಹಿಂದೀ ಪ್ರಚಾರಕ್ಕೆ ವ್ಯಯಿಸಿದ್ದಕ್ಕೂ ಸಾರ್ಥಕವಾಯಿತು ಅಲ್ಲವೇ?

ಸದ್ಯಕ್ ಇವ್ರು ಕರ್ನಾಟಕದ ಮುಖ್ಯಮಂತ್ರಿಗಳಾಗಿರಲಿ ಸಾಕು.


ದಿನಾಂಕ 03.10.2010ರ ಪ್ರಜಾವಾಣಿಯ 5ನೇ ಪುಟದಲ್ಲಿ ಬಂದಿರೋ ಸುದ್ದಿಯಂತೆ ಕರ್ನಾಟಕ ರಾಜ್ಯಸರ್ಕಾರವು ಭಾರತದ ಕೇಂದ್ರಸರ್ಕಾರಕ್ಕೆ ಭಾರತ ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದೇ ನಾಮಕರಣ ಮಾಡಲು ಪ್ರಸ್ತಾಪ ಸಲ್ಲಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಯಡ್ಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಅರೆರೆ... ಮಾಸ್ತಿ ಪುಸ್ತಕಕ್ಕೂ ಇಂಡಿಯಾ ಹೆಸರಿಗೂ ಏನಪ್ಪಾ ಸಂಬಂಧಾ? ಅನ್ನೋ ಅಚ್ಚರಿಗೆ ಉತ್ತರ ಸಿಕ್ಕಿಲ್ಲದಿದ್ದರೂ ಸದರಿ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾಗಿದ್ದ ಹಿರಿಯರೂ ಕನ್ನಡದ ಕೆಚ್ಚಿನ ಹೋರಾಟಗಾರರೂ, ಖ್ಯಾತ ಚಿಂತಕರೂ ಆಗಿರುವ ಶ್ರೀ. ಚಿದಾನಂದಮೂರ್ತಿಯವರು ಆಡಿದ ಮಾತಿಗೆ, ನೀಡಿದ ಸಲಹೆಗೆ ಸ್ಪಂದಿಸಿ ನಮ್ಮ ಮುಖ್ಯಮಂತ್ರಿಗಳು ಹೀಗಂದಿದಾರಂತೆ!

ನಮ್ಮೂರ ಹೆಸರು ಬದಲಾವಣೆ ಏನಾಯ್ತು ಯಜಮಾನ್ರೇ?

2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಶ್ರೀ. ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು. ಅದಕ್ಕೆ ಪೂರಕವಾಗಿ 2006ರ ಸೆಪ್ಟೆಂಬರ್ 27ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂತಹ ಒಂದು ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಸದರಿ ಗೊತ್ತುವಳಿಯನ್ನು ಒಪ್ಪಿಕೊಂಡ ಘನ ಕರ್ನಾಟಕ ರಾಜ್ಯಸರ್ಕಾರ ನವೆಂಬರ್ ಒಂದರಂದು ಬ್ಯಾಂಗಲೂರ್ ಹೆಸರನ್ನು ಬೆಂಗಳೂರು ಎಂಬುದಾಗಿ ಘೋಷಿಸಿತು. ಜೊತೆಗೆ ಮಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ, ಚಿಕ್ಕಮಗಳೂರು, ಕಲ್ಬುರ್ಗಿ, ವಿಜಾಪುರ, ಬಳ್ಳಾರಿ, ತುಮಕೂರು ಮತ್ತು ಕಾಪುಗಳ ಹೆಸರನ್ನೂ ಬದಲಿಸುವ ಘೋಷಣೆ ಹೊರಬಿತ್ತು. ಆಮೇಲೆ ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಒಪ್ಪಿಗೆಗಾಗಿ ಕಳಿಸಲಾಯಿತು. ಇದೆಲ್ಲಾ ಶುರುವಾಗಿದ್ದು ಧರಂಸಿಂಗ್ ಅವರ ಕಾಲದಲ್ಲಾದರೂ ಎಚ್.ಡಿ.ಕುಮಾರಸ್ವಾಮಿಯವರ ಕಾಲದಲ್ಲಿ ಗೃಹಸಚಿವಾಲಯಕ್ಕೆ ಕಳಿಸಲಾಯಿತು. 2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಕರ್ನಾಟಕ ರಾಜ್ಯಸರ್ಕಾರದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರು ಈ ಬಗ್ಗೆ ಚಕಾರ ಎತ್ತಿರೋ ಸುದ್ದಿ ಇಲ್ಲೀ ತನಕ ಬಂದಂಗಿಲ್ಲ. ತಾವೇ ಮನೆ ಯಜಮಾನ ಆಗಿರೋ ಕರ್ನಾಟಕದಲ್ಲಿರೋ ಊರುಗಳ ಹೆಸರುಗಳನ್ನು ಬದಲಾವಣೆ ಮಾಡಿಸೋಕೆ ಯಾವುದೇ ಆಸಕ್ತಿ ತೋರಿಸದೆ ಈಗ ಭಾರತದ ನಾಮಕರಣಕ್ಕೆ ಮುಂದಾಗಿರೋದು ನೋಡುದ್ರೆ, ಇವರು ತಮ್ಮನ್ನೇನು ಕರ್ನಾಟಕದ ಮುಖ್ಯಮಂತ್ರಿಗಳು ಅಂದ್ಕೋಡಿದಾರಾ ಅಥ್ವಾ ಭಾರತದ ಮುಖ್ಯಮಂತ್ರಿಗಳು ಅಂದ್ಕೊಂಡಿದಾರಾ ಅನ್ಸುತ್ತಲ್ವಾ ಗುರೂ!

ಗಾಡ್ರೆಜ್ ಜಾಹೀರಾತು: ಆಡೂ ಆಟ ಆಡೂ...


ಇಂಥಾ ಒಂದು ಜಾಹೀರಾತು ಇವತ್ತಿನ ಪ್ರಜಾವಾಣಿಯ ಮೊದಲನೆ ಪುಟದಲ್ಲಿ ರಾರಾಜುಸ್ತಾ ಇದೆ ಗುರೂ! ಗಾಡ್ರೆಜ್ ಸಂಸ್ಥೆಯೋರು ಹೊರಡಿಸಿರೋ ಈ ಜಾಹೀರಾತು ಒಂದೊಳ್ಳೆ ಮಾರುಕಟ್ಟೆ ತಂತ್ರವಾಗಿದೆ ಅನ್ನೋದು ಕಾಣ್ತಾಯಿದೆ. ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸೋಕೆ ಅಂತಾ ಸಂಸ್ಥೆಗಳು ಟಿ.ವಿಗಳಲ್ಲಿ ಜಾಹೀರಾತು ಕೊಡೋದ್ರು ಜೊತೆ ಹೊಸ ಹೊಸ ಸ್ಪರ್ಧೆಗಳನ್ನು ಏರ್ಪಡಿಸೋದನ್ನು ನಾವೆಲ್ಲಾ ನೋಡ್ತಾನೆ ಇದೀವಿ. ಇದೂ ಅಂಥದ್ದೇ ಒಂದು ಸ್ಪರ್ಧೆ ಅನ್ನೋದು ಒಂದು ಲೆಕ್ಕದಲ್ಲಿ ನಿಜವೇ ಆದರೂ, ಗಾಡ್ರೆಜ್ ಸಂಸ್ಥೆ ಈ ಬಾರಿ ಭಾರತದ ಭಾಷಾ ವೈವಿಧ್ಯತೇನಾ ಗಮನಕ್ಕೆ ತೆಗೆದುಕೊಂಡಿರೋದು ಎದ್ದು ಕಾಣ್ತಿದೆ. ಇದು ಮೆಚ್ಚತಕ್ಕ ವಿಷಯವಾಗಿದೆ.

ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಕನ್ನಡ

ಕರ್ನಾಟಕದಲ್ಲಿ "ಗೇಮ್ ಆಡಿ, ಲೈಫ್ ಛೇಂಜ್ ಮಾಡಿ" ಹೆಸರಲ್ಲಿ ಶುರುವಾಗ್ತಿರೋ ಈ ಕಾರ್ಯಕ್ರಮಾನಾ ತಮಿಳುನಾಡಿನಲ್ಲಿ ತಮಿಳಿನಲ್ಲಿ "ಗಾಡ್ರೆಜ್ ವಾಳ್ವೈ ಮಾಟ್ರಲಾಂ ವಾಂಗೋ " ಎಂದೂ, ಆಂಧ್ರಪ್ರದೇಶದಲ್ಲಿ ತೆಲುಗಿನಲ್ಲಿ "ಆಡಂಡಿ, ಲೈಫ್ ಮಾರ್ಚುಕೊಂಡಿ" ಎಂದೂ ಆಯಾಯಾ ಭಾಷೆಗಳಲ್ಲೇ ಮಾಡಲು ಗಾಡ್ರೆಜ್ ಸಂಸ್ಥೆ ಮುಂದಾಗ್ತಿದೆ. ಇದು ಒಳ್ಳೇ ನಡೆಯಾಗಿದೆ.
ನಮ್ಮೂರ ಎಫ್.ಎಂ ವಾಹಿನಿಗಳನ್ನು ಕೇಳುದ್ರೆ ಕಿವಿ ಮೇಲೆ ರಾಚೋದು ಹಿಂದೀ ಜಾಹೀರಾತುಗಳೇ. ಇದ್ಯಾಕಪ್ಪಾ ಹೀಗ್ ಮಾಡ್ತೀರಾ ಅಂದ್ರೆ "ನಮಗೆ ಎಲ್ಲಾ ದಿಲ್ಲಿಯಿಂದ ಬರುತ್ತೆ, ಮುಂಬೈಯಿಂದ ಬರುತ್ತೆ" ಅನ್ನೋ ಸಬೂಬು ಕೇಳುತ್ತೆ. ಅವರ ಪ್ರಕಾರ ಆಯಾ ಭಾಷೆಗಳಲ್ಲಿ ಜಾಹೀರಾತು ಮಾಡ್ಸಿ ಹಾಕೋದು ಖರ್ಚಿನ ಬಾಬತ್ತು. ಇರಲಿ. ಆದರೆ ಕನ್ನಡಿಗರನ್ನು ಕನ್ನಡದಲ್ಲೇ ಪರಿಣಾಮಕಾರಿಯಾಗಿ ಮುಟ್ಟೋಕೆ ಸಾಧ್ಯ ಅಂತಾ ಮನವರಿಕೆ ಆದವರು ಕರ್ನಾಟಕದಲ್ಲಿ ಕನ್ನಡದಲ್ಲಿ ಜಾಹೀರಾತು ಹಾಕಕ್ಕೆ ಹಿಂಜರಿಯಲಾರರು ಅಲ್ವಾ ಗುರೂ!

ಡಿಶ್ ಮಾರುಕಟ್ಟೆಗೆ ಕನ್ನಡ ಆಯಾಮ


ವಿಡಿಯೋಕಾನ್ ಸಂಸ್ಥೆಯ ಈ ಜಾಹೀರಾತು ವಿಜಯ ಕರ್ನಾಟಕ ದಿನ ಪತ್ರಿಕೆಯ 08.09.2010ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ವಿಡಿಯೋಕಾನ್ ಸಂಸ್ಥೆಯೋರು ಅತಿಹೆಚ್ಚಿನ ಸಂಖ್ಯೆಯ ಕನ್ನಡ ಚ್ಯಾನೆಲ್‍ಗಳು ಅಂತಾ ಹಾಕೋ ಮೂಲಕ ಕನ್ನಡಿಗರ ಗಮನಾನ ಸೆಳೆಯೋ ಪ್ರಯತ್ನಾ ಮಾಡಿದಾರೆ.

ಡಿಶ್ ಎಂಬ ಮನೆಮನೆಯ ಕಿರೀಟ!

ಟಿ.ವಿ ಕ್ಷೇತ್ರದಲ್ಲಿ ಖಾಸಗಿ ಚಾನೆಲ್ಲುಗಳ ಪ್ರವೇಶ ಒಂದು ಕ್ರಾಂತಿಯನ್ನುಂಟು ಮಾಡಿದ ಹಾಗೇ, ಇಂಥಾ ವಾಹಿನಿಗಳನ್ನು ಮನೆಮನೆಗೆ ಮುಟ್ಟಿಸುವಲ್ಲಿ ಡಿ.ಟಿ.ಎಚ್ ಮಾಡಿರೋ ಕ್ರಾಂತಿಯೂ ಪ್ರಮುಖವಾದದ್ದು. ಯಾವುದೇ ತಂತಿಗಳ ಸಹಾಯವಿಲ್ಲದೆ ಮನೆ ಮನೆಯ ಮೇಲೆ ಕಿರೀಟದಂತೆ ಕೂಡಿಸಲಾಗೋ ಡಿಶ್‍ಗಳ ಮೂಲಕ ನೂರಾರು ಚಾನೆಲ್ಲುಗಳು ಅತ್ಯದ್ಭುತ ಎನ್ನಿಸೋ ಗುಣಮಟ್ಟದಲ್ಲಿ ಸಿಗುತ್ತವೆ ಅನ್ನೋದು ತಂತ್ರಜ್ಞಾನದ ಕೊಡುಗೆ. ಇಂಥಾ ಕ್ರಾಂತಿಯನ್ನು ಉದ್ಯಮವಾಗಿಸಿಕೊಂಡು ನಾಡಿನ ಹಳ್ಳಿಹಳ್ಳಿಗಳನ್ನೂ ಮುಟ್ಟುತ್ತಿರೋ ಸಂಸ್ಥೆಗಳು ಹತ್ತಾರು. ಇಂಥಾ ಸಂಸ್ಥೆಗಳಲ್ಲಿ ದೊಡ್ಡ ಹೆಸರಿನವುಗಳಾದ ಸನ್, ರಿಲಯನ್ಸ್, ಏರ‍್ಟೆಲ್, ಡಿಶ್, ಟಾಟಾ ಸ್ಕೈ ಮೊದಲಾದವುಗಳ ಸಾಲಿಗೆ ಈಗ ವಿಡಿಯೋಕಾನ್ ಸೇರಿಕೊಂಡಿದೆ.

ಕೊಳ್ಳುಗರಿಗೆ ಬೇಕಾದ್ದು ಕೊಡಬೇಕು.

ಈ ಚಾನೆಲ್ಲುಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಕೊಡೋ ಜಾಹೀರಾತುಗಳಲ್ಲಿ "ಸೌತ್ ಪ್ಯಾಕು" "ಸೌತ್ ಸ್ಪೆಷಲ್ ಪ್ಯಾಕು" ಅಂತೆಲ್ಲಾ ಹೇಳ್ತಾ ತಮ್ಮಲ್ಲಿ ನೂರಾರು ಚಾನೆಲ್ಲುಗಳಿವೆ ಅಂತಾ ಪೈಪೋಟಿ ಮಾಡ್ತಾರೆ, ಅದರ ಬದಲು ಕನ್ನಡಿಗರಿಗೆ ಎಷ್ಟು ಕನ್ನಡ ಚಾನಲ್ ಕೊಡ್ತೀವಿ ಅನ್ನೋದು ಮಾರುಕಟ್ಟೆ ತಂತ್ರ ಆಗಬೇಕು ಅಂತಾ ಹಿಂದೊಮ್ಮೆ ಏನ್‍ಗುರುವಿನಲ್ಲಿ ಬರೆದಿದ್ದೆವು. ಇದೀಗ ವಿಡಿಯೋಕಾನ್ ಸಂಸ್ಥೆಯ ಕಡೆಯಿಂದ ಈ ದಿಕ್ಕಲ್ಲಿ ಮೊದಲ ನಡೆ ಕಾಣ್ತಾಯಿದೆ. ಅತಿಹೆಚ್ಚು ಕನ್ನಡ ಚಾನೆಲ್ಲುಗಳನ್ನು ಕೊಡ್ತೀವಿ, ನಮ್ಮದನ್ನು ತೊಗೊಳ್ಳಿ ಅನ್ನೋ ಜಾಹೀರಾತು ಮಾರುಕಟ್ಟೆಯಲ್ಲಿ ಕನ್ನಡ ಭಾಷೆ ತೆಗೆದುಕೊಳ್ಳುತ್ತಿರುವ ಪ್ರಾಮುಖ್ಯತೆಯನ್ನೂ, ಕನ್ನಡಿಗರಲ್ಲಿ ಉಂಟಾಗುತ್ತಿರುವ ಜಾಗೃತಿಯನ್ನೂ ತೋರಿಸುತ್ತಿದೆ. ಈ ಜಾಹೀರಾತಲ್ಲಿ ಕನ್ನಡದಲ್ಲಿ ಬರೆದಿರೋ ಹಿಂದೀ ಸಾಲುಗಳನ್ನು ಬಲಾಯಿಸಿಕೊಳ್ಳಿ ಅಂತಾ ವಿಡಿಯೋಕಾನ್ ಸಂಸ್ಥೆಯೋರಿಗೆ ಹೇಳ್ತಾ, ಅತಿಹೆಚ್ಚು ಕನ್ನಡ ಚಾನೆಲ್ಲು ಕೊಡ್ತೀನಿ ಅಂದಿದ್ದಕ್ಕೆ ಪ್ರೋತ್ಸಾಹಿಸಿ ಅಭಿನಂದಿಸೋದು ಸರಿಯಾಗಿದೆ ಅಲ್ವಾ ಗುರೂ!

ಗ್ರಹಣ ಹಿಡಿದಿರೋ ದಿನಗಳು!


ಭಾರತೀಯ ರೇಲ್ವೇಯಿಂದ ಕನ್ನಡಿಗರಿಗೆ ಹಿಂದೀ ವಿಷ!


ಸಮಸ್ತ ಕನ್ನಡಿಗರ ಹೆಮ್ಮೆಯ ದಿನಪತ್ರಿಕೆಯಾದ ವಿಜಯ ಕರ್ನಾಟಕದ, ಮೊನ್ನೆಯ ಅಂದ್ರೆ ಸೆಪ್ಟೆಂಬರ್ 09ನೇ ತಾರೀಕಿನ ಸಂಚಿಕೆಯ ಆರನೇ ಪುಟದಲ್ಲಿ ಬಂದಿರೋ ಜಾಹೀರಾತು ನೋಡಿ. ರೈಲು ಇಲಾಖೆಯೋರು ಇದುನ್ನಾ ಕನ್ನಡ ದಿನಪತ್ರಿಕೆಯಲ್ಲಿ ಹಿಂದೀಲಿ ಹಾಕ್ಸಿದಾರಲ್ಲಾ? ಯಾಕೆ?

ಹಿಂದಿ ಹೇರಿಕೆಯ ಹೀನಸುಳಿ.

"ಹೌದೂ! ನೀವು ಎಷ್ಟು ಉಗುದ್ರೂ, ಬಾಯಿ ಬಡ್ಕೊಂಡ್ರೂ ನಾವಿರೋದೇ ಹೀಗೇ" ಅಂತಿದೆ ಭಾರತದ ಕೇಂದ್ರಸರ್ಕಾರ. "ಭಾರತದಲ್ಲಿರಬೇಕು ಅಂದ್ರೆ ಹಿಂದೀ ಕಲಿತಿರಬೇಕು. ಹಿಂದೀ ಒಪ್ಕೊಳ್ಳಿ ಇಲ್ಲಾ ಜೊತೆಗಾರ ಪಯಣಿಗರು ಕೊಡೋ ವಿಷಾ ಕುಡ್ದು ಸಾಯಿರಿ" ಅಂತಾ ಅಲ್ದೇ ಇನ್ನೇನು ಅರ್ಥ ಇದೆ ಗುರೂ ಇದಕ್ಕೆ? ಭಾರತದ ಸರ್ಕಾರವು ಸಂವಿಧಾನವೇ ಹಿಂದಿಯ ಪ್ರಸಾರವನ್ನು ಸರ್ಕಾರದ ಕರ್ತವ್ಯ ಮಾಡಿ, ಅದರ ಆಧಾರದ ಮೇಲೆ ಸರ್ಕಾರ "ಒತ್ತಾಯ, ಆಮಿಷ ಮತ್ತು ವಿಶ್ವಾಸಗಳೆಂಬ ಮೂರು ಅಸ್ತ್ರಗಳನ್ನು ಬಳ್ಸಿ, ಹಿಂದೀನಾ ಹರಡಿ" ಅಂತಾ ನಿಯಮಾನೇ ಬರೆದಿದೆಯೆಲ್ಲಾ? ಇನ್ನು ಯಾರದ್ದೇನು ಆಕ್ಷೇಪಾ ಅಂತಾ ಹಿಂದೀ ಮಾತೆಯನ್ನು ಕನ್ನಡಿಗರ ಮನೆಮನೆಗಳಲ್ಲಿ ಪ್ರತಿಷ್ಠಾಪಿಸಲು ಮುಂದಾಗುತ್ತಿದೆ. ದೇಶದಲ್ಲಿ ಒಗ್ಗಟ್ಟು ಮೂಡಿ, ಶಾಂತಿ ನೆಲೆಸಬೇಕೆಂದರೆ ಈ ಹಾಳು ಕನ್ನಡ, ತಮಿಳು, ತೆಲುಗು, ಮಲಯಾಳಿ, ಗುಜರಾತಿ, ಮರಾಠಿ, ಬೆಂಗಾಳಿ, ಪಂಜಾಬಿ, ಒರಿಯಾ, ತುಳು ,ಕೊಂಕಣಿ.... ಮುಂತಾದ ಭಾಷೆಗಳೆಲ್ಲಾ ಹಿಂದೀ ಭಾಷೆಯಲ್ಲಿ ಲೀನವಾಗಬೇಕು ಅಂತಾ ಅಂದ್ಕೊಂಡುಬಿಟ್ಟಂಗಿದೆ ಗುರೂ!

ಭಾರತಕ್ಕೊಪ್ಪೋ ಭಾಷಾನೀತಿ...

ಹಿಂದಿನ ಬರಹದಲ್ಲಿ ವಿಶ್ವಸಂಸ್ಥೆಯು ಜಗತ್ತಿನ ನಾನಾ ಭಾಷಾ ಸಮುದಾಯಗಳ ಭಾಷಿಕ ಹಕ್ಕನ್ನು ಉಳಿಸಿಕೊಳ್ಳೋದರ ಬಗ್ಗೆ ಹೊಂದಿರೋ ನಿಲುವು, ತೋರಿಸಿರೋ ಕಾಳಜಿಗಳ ಬಗ್ಗೆ ನೋಡುದ್ವಿ. ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರೋ ಭಾರತದಲ್ಲಿ ಪರಿಸ್ಥಿತಿ ಹೀಗೇ ಇದೆಯಾ ಅಂತಾ ಈ ಬಾರಿ ನೋಡೋಣ. ಭಾರತ ದೇಶ ಅನೇಕ ಭಾಷಾ ಜನಾಂಗಗಳಿರುವ ನಾನಾ ಸಂಸ್ಕೃತಿಗಳ, ಆಚರಣೆಗಳ, ನಂಬಿಕೆಗಳ ಒಂದು ದೊಡ್ಡ ದೇಶ. ರಾಜಕೀಯವಾಗಿ 1947ರಲ್ಲಿ ಸ್ವಾತಂತ್ರ್ಯ ದಕ್ಕಿಸಿಕೊಂಡ ಸಂದರ್ಭದಲ್ಲಿ ನಮ್ಮೆದುರು ಇದ್ದ ಮುಖ್ಯವಾದ ಸವಾಲುಗಳು "ಈ ವೈವಿಧ್ಯತೆಗಳ ನಾಡನ್ನು ಹೇಗೆ ಆಳಿಕೊಳ್ಳೋದು? ಹೇಗೆ ಒಗ್ಗಟ್ಟಿನಲ್ಲಿಟ್ಟುಕೊಳ್ಳೋದು?..." ಇತ್ಯಾದಿಗಳು.

ಮೊದಲ ಹೆಜ್ಜೆಯಲ್ಲೇ ಎಡವಿದ ಭಾರತ

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ಸ್ವಾತಂತ್ರ್ಯದ ನಂತರದ ಭಾರತದ ಸ್ವರೂಪದ ಬಗ್ಗೆ ಚರ್ಚಿಸಿದ್ದರು. ಆಗಲೇ ಹಿಂದಿಯನ್ನು ಭಾರತದ ರಾಷ್ಟ್ರಭಾಷೆಯಾಗಿ ಹೊಂದುವ ಬಗ್ಗೆ ಚರ್ಚೆಯಾಯಿತು. ಸ್ವಾತಂತ್ರ್ಯದ ನಂತರ ಅಂತಹ ಪ್ರಯತ್ನಗಳೂ ನಡೆದವು. ಹಿಂದಿಯೇತರ ಪ್ರದೇಶಗಳ ವಿರೋಧದ ಕಾರಣದಿಂದಾಗಿ ಅದು ಫಲಿಸಲಿಲ್ಲ. ಧುಲೇಕರ್ ಎಂಬ ಒಬ್ಬ ಸಂಸದರಂತೂ “ಹಿಂದಿ ಬಾರದವರು ಭಾರತದಲ್ಲಿರಲು ನಾಲಾಯಕ್ಕು” ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಉತ್ತರವಾಗಿ ಕೃಷ್ಣಮಾಚಾರಿಯವರು “ನಿಮಗೆ ಒಡೆದಿರುವ ಹಿಂದೀ ಭಾರತ ಬೇಕೆ? ಅಥವಾ ಇಡೀ ಭಾರತ ಬೇಕೇ?” ಎಂದು ಖಾರವಾಗಿ ಪ್ರತಿಕ್ರಿಯಿಸಿ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸಿದರೆ ಭಾರತ ಒಡೆದು ಹೋದೀತು ಎಂಬ ಎಚ್ಚರಿಕೆ ನೀಡಿದ್ದರು. ಮೂರು ವರ್ಷಗಳ ತೀವ್ರವಾದ ಚರ್ಚೆಯ ನಂತರ ೧೯೫೦ರಲ್ಲಿ ಭಾರತದ ಸಂವಿಧಾನವು ರೂಪುಗೊಂಡು ಜಾರಿಯಾಯಿತು.

ಸಂವಿಧಾನ ನೀಡಿರುವ ಹಿಂದಿಪ್ರಚಾರದ ಪರವಾನಗಿ

ಸದರಿ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಲಿಲ್ಲವಾದರೂ ಭಾರತಕ್ಕೆ ರಾಜ್‌ಭಾಷಾ ಎಂಬ ಹೊಸ ಪಟ್ಟವನ್ನು ಕಟ್ಟಿ ಅದನ್ನು ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿ, ಜೊತೆಗೆ ೧೫ ವರ್ಷಗಳ ಕಾಲಕ್ಕಾಗಿ ಇಂಗ್ಲೀಷನ್ನು ಸೇರಿಸಿ ಘೋಷಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡದಂತೆ ತಡೆಯಲು ಯತ್ನಿಸಿದ ಹಿಂದಿಯೇತರ ನಾಡಿನವರಿಗೆ ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂಬ ಪದದ ಬಳಕೆ ಆಗಿಲ್ಲದಿರುವುದು ಸಮಾಧಾನ ತಂದಿತು. ಆದರೆ ಸಂವಿಧಾನದ 351ನೇ ಕಲಮಿನಲ್ಲಿ ಹಿಂದಿಯ ಪ್ರಸಾರವನ್ನು ಮಾಡುವುದು ಕೇಂದ್ರದ ಕರ್ತವ್ಯವೆಂದು ಬರೆಯಲಾಗಿರುವುದು, ಒಟ್ಟಾರೆ ಭಾರತದೇಶದ ಭಾಷಾನೀತಿಗೆ ಹಿಡಿದ ಕನ್ನಡಿಯಾಗಿದ್ದು, ವಾಸ್ತವವಾಗಿ ಅಂದಿನಿಂದಲೇ ಹಿಂದೀ ಭಾಷೆಯನ್ನು ಭಾರತದ ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಕ್ರಮಕ್ಕೆ ಭಾರತದ ಕೇಂದ್ರಸರ್ಕಾರವೇ ಮುನ್ನುಡಿ ಹಾಡಿತು. ಹೀಗಾಗಿ ಆ ಸಮಾಧಾನವೆಂಬುದು ಹಿಂದೀಭಾಷೆಗೆ ರಾಷ್ಟ್ರಭಾಷೆ ಎಂಬ ಹೆಸರು ದಕ್ಕಿಲ್ಲ ಎಂಬುದಕ್ಕೇ ಮಾತ್ರಾ ಸೀಮಿತವಾಯಿತು.

ಸಂವಿಧಾನದ ಪುಟಗಳಲ್ಲಿ “ಭಾರತದಲ್ಲಿ ಹಿಂದಿಯ ಬಳಕೆಯನ್ನು ಕ್ರಮೇಣ ಹೆಚ್ಚಿಸಲು ಭಾರತವು ಬದ್ಧವಾಗಿರುತ್ತದೆ” (ಆರ್ಟಿಕಲ್ 351) ಎಂದು ಬರೆಯಲಾಯಿತು. ಭಾರತದಲ್ಲಿ ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಗುರಿಯಿಂದ, ಹಿಂದಿಯನ್ನು ಪಸರಿಸಲು ಐದು ವರ್ಷಗಳಲ್ಲಿ ಒಂದು ಇಲಾಖೆಯನ್ನು ತೆಗೆಯಬೇಕು ಮತ್ತು ಕ್ರಮೇಣ ಇಂಗ್ಲಿಷ್ ಬಳಕೆಗೆ ಕಡಿವಾಣ ಹಾಕಲು ಶ್ರಮಿಸಬೇಕು (ಆರ್ಟಿಕಲ್ 344) ಎನ್ನಲಾಯಿತು. ರಾಜ್ಯ ರಾಜ್ಯಗಳ ನಡುವೆ, ರಾಜ್ಯ ಕೇಂದ್ರಸರ್ಕಾರಗಳ ನಡುವಿನ ಎಲ್ಲಾ ವಹಿವಾಟುಗಳು ಹಿಂದಿ/ ಇಂಗ್ಲೀಷಿನಲ್ಲಿ ಮಾತ್ರವೇ ಇರತಕ್ಕದು (ಆರ್ಟಿಕಲ್ 345) ಎಂದೆಲ್ಲಾ ಬರೆಯಲಾಯಿತು.

ಹಿಂದಿ ಹರಡುವಿಕೆಯ ಯೋಜನೆಗಳು

ಸಾಧ್ಯವಾದಾಗಲೆಲ್ಲಾ ಹಿಂದಿಯ ಸಾರ್ವಭೌಮತ್ವ ಸ್ಥಾಪಿಸಲು ಪ್ರಯತ್ನಗಳು ನಡೆದವು. ಭಾಷಾ ಸಮಿತಿಯನ್ನು ನೇಮಿಸಿ 1963ರಲ್ಲಿ ಅಧಿಕೃತ ಭಾಷಾ ಸ್ಥಾನದಿಂದ ಇಂಗ್ಲಿಷನ್ನು ಕಿತ್ತೆಸೆದು, ಹಿಂದಿಯೊಂದನ್ನೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆದವು. ತಮಿಳುನಾಡಿನಲ್ಲಿ ಪ್ರತಿರೋಧ ಹುಟ್ಟಿಕೊಂಡಾಗ, 1965ರಲ್ಲಿ ಇಂಗ್ಲೀಷನ್ನೂ ಅದೇ ಸ್ಥಾನದಲ್ಲಿ ಮುಂದುವರೆಸುವ ಒಂದು ತಿದ್ದುಪಡಿಯನ್ನು ತರಲಾಯಿತು. ಆದರೇನು? ಯಾವುದೇ ಇತರ ಭಾರತೀಯ ಭಾಷೆಗಿಲ್ಲದ ಸೌಕರ್ಯ ಹಿಂದಿ ಪ್ರಚಾರಕ್ಕೆ ನೀಡಲಾಯಿತು. ಸಾರ್ವಜನಿಕರ ತೆರಿಗೆಯ ಹಣದಿಂದ ನೂರಾರು ಕೋಟಿ ರೂಪಾಯಿಗಳನ್ನು ಕೇವಲ ಹಿಂದೀ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಮತ್ತೊಂದು ಕಡೆ ಭಾರತದ ತುಂಬೆಲ್ಲಾ ಹಿಂದೀ ಪ್ರಚಾರ ಸಭೆಗಳನ್ನು ಆರಂಭಿಸಲಾಯಿತು. ವಿಶ್ವಾಸ, ಉತ್ತೇಜನ ಮತ್ತು ಒಲಿಸುವಿಕೆಯ ಮೂಲಕ ಹಿಂದಿಯನ್ನು ಹರಡಬೇಕೆಂಬುದು ಭಾರತ ದೇಶದ ನೀತಿಯಾಯಿತು.

ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್

ಇಂತಹ ಗುರಿ ಈಡೇರಿಕೆಗಾಗಿಯೇ ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್ ಅನ್ನೋ ಇಲಾಖೆಯನ್ನು ತೆರೆಯಲಾಯಿತು. ಅದರ ಮೂಲಕ ಕೇಂದ್ರಸರ್ಕಾರಿ/ ಕೇಂದ್ರದ ಅಧೀನದ ಕಛೇರಿಗಳಲ್ಲಿ ಹಿಂದಿಯನ್ನು ಅನುಷ್ಠಾನಗೊಳಿಸಲು ರೂಪುರೇಶೆಗಳನ್ನು ರೂಪಿಸಿ ಭಾರತದ ಅಧಿಕೃತ ಸಂಪರ್ಕ ಭಾಷಾ ಕಾಯ್ದೆಯನ್ನು ರೂಪಿಸಲಾಯ್ತು. ೧೯೭೬ರಲ್ಲಿ ಜಾರಿಗೆ ತರಲಾದ ಭಾರತದ ಅಫಿಷಿಯಲ್ ಲಾಂಗ್ವೇಜ್ ರೂಲ್ಸ್‌ನ ನಿಯಮಾವಳಿಗಳಂತೂ ಹಿಂದಿಯನ್ನು ಪ್ರತಿಷ್ಠಾಪಿಸುವ ಕೆಲಸಕ್ಕೆ ಮತ್ತಷ್ಟು ವೇಗ ತಂದುಕೊಡುವಂತಿದ್ದವು. ಈ ಕಾನೂನು ಜಾರಿಯಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. ಏಕೆಂದರೆ ಈ ಕಾಯ್ದೆ ತಮಿಳುನಾಡಿಗೆ ಅನ್ವಯವಾಗುವುದಿಲ್ಲ ಎಂದು ಮೊದಲ ಪ್ಯಾರಾದಲ್ಲೇ ಬರೆಯಲಾಗಿದೆ. ದೇಶದ ಯಾವುದೇ ಮೂಲೆಯ ಕೇಂದ್ರಸರ್ಕಾರಿ ಕಛೇರಿಯಲ್ಲೂ ಹಿಂದಿಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದಿಯಲ್ಲೇ ಉತ್ತರ ನೀಡಬೇಕು ಎಂದು ಇದರಲ್ಲಿರುವುದು ಹಿಂದೀ ಸಾಮ್ರಾಜ್ಯಶಾಹಿಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ

ಹಿಂದಿಯೊಂದಕ್ಕೆ ಮಾತ್ರಾ ಮಾನ್ಯತೆ

ಒಟ್ಟಾರೆ ಭಾರತದ ಭಾಷಾನೀತಿಯು ಸ್ಪಷ್ಟವಾಗಿ ಹಿಂದಿಯೆನ್ನುವ ಒಂದು ಭಾಷೆಗೆ ಮಾತ್ರಾ ಪ್ರೋತ್ಸಾಹ ಕೊಡುವಂತಿದೆ. ಈ ಪ್ರೋತ್ಸಾಹ, ಹಿಂದಿ ಭಾಷಿಕ ಪ್ರದೇಶಗಳಿಗೆ ಮಾತ್ರಾ ಸೀಮಿತವಾಗಿದ್ದಿದ್ದರೆ ನಮ್ಮ ನುಡಿಗೂ ಹೀಗೆ ಪ್ರೋತ್ಸಾಹ ಕೊಡಿ ಅನ್ನಬಹುದಿತ್ತು. ಆದರೆ ಭಾರತ ಸರ್ಕಾರದ ಈ ಕ್ರಮಗಳು ಹಿಂದಿಯನ್ನು ನಮ್ಮ ನಾಡೊಳಗೆ ಪ್ರತಿಷ್ಠಾಪಿಸಲು ನೀಡುತ್ತಿರುವ ಪ್ರೋತ್ಸಾಹವಾಗಿದೆ. ತಾರತಮ್ಯದ ಭಾಷಾನೀತಿ, ವಿಶ್ವಸಂಸ್ಥೆಯ ಭಾಷಾನೀತಿಗೆ ವಿರುದ್ಧವಾಗಿರುವಂತೆ ಎದ್ದು ಕಾಣುತ್ತಿದೆ.
ಹಾಗಾದರೆ ಭಾರತದ ಭಾಷಾನೀತಿ ಹೇಗಿರಬೇಕು ಎಂದರೆ...

ಭಾರತಕ್ಕೊಪ್ಪೋ ಭಾಷಾನೀತಿ


ಅನೇಕ ವೈವಿಧ್ಯತೆಗಳನ್ನು ಹೊಂದಿರುವ ಭಾರತವನ್ನು ಅವುಗಳ ವೈವಿಧ್ಯತೆ/ ಅನನ್ಯತೆಗಳನ್ನು ಉಳಿಸಿಕೊಳ್ಳಲು ಪೂರಕವಾಗುವಂತೆ ನಮ್ಮ ಭಾಷಾನೀತಿ ಇರಬೇಕಾಗಿದೆ. ವಿಶ್ವಸಂಸ್ಥೆಯು ಘೋಷಿಸಿರುವ ಭಾಷಾ ಹಕ್ಕುಗಳು ಭಾರತದ ಪ್ರತಿಯೊಂದು ಭಾಷಾ ಸಮುದಾಯಕ್ಕೆ ದೊರಕಿಸಿಕೊಡುವಂತಹ ಭಾಷಾನೀತಿ ರೂಪುಗೊಳ್ಳಬೇಕಾಗಿದೆ. ಭಾರತದ ಪ್ರತಿಯೊಂದು ಭಾಷೆಗೂ ರಾಜ್‌ಭಾಷೆಯ ಪಟ್ಟ ಸಿಗಲಿ. ರಾಜ್ಯರಾಜ್ಯಗಳ ನಡುವಿನ ವಹಿವಾಟು ಆಯಾ ರಾಜ್ಯಗಳ ನುಡಿಗಳಲ್ಲಾಗಲಿ. ಪ್ರತಿರಾಜ್ಯಕ್ಕೂ ತನ್ನ ನುಡಿಯಲ್ಲಿ ತನ್ನ ಆಡಳಿತ, ಶಿಕ್ಷಣ, ಬದುಕುಗಳನ್ನು ಕಟ್ಟಿಕೊಳ್ಳಲು ಪೂರಕವಾಗುವಂತಹ ಭಾಷಾನೀತಿ ಭಾರತದ್ದಾಗಲಿ. ಹೀಗೆ ಪ್ರತಿಯೊಂದು ಪ್ರದೇಶದಲ್ಲೂ ಆಯಾ ಪ್ರದೇಶದ ಭಾಷೆಗೆ ಸಾರ್ವಭೌಮತ್ವವನ್ನು ನಿಜವಾಗಿಯೂ ತಂದುಕೊಡಬಲ್ಲಂತೆ ಭಾರತದ ಭಾಷಾನೀತಿಯನ್ನು ಮರು ರೂಪಿಸಬೇಕಾಗಿದೆ. ಒಟ್ಟಾರೆ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕಾಗಿದೆ.
ಪ್ರಗತಿಯ ಪಯಣದಲ್ಲಿ ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ, ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ, ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಭಾಷನೀತಿಯನ್ನು ರೂಪಿಸಲಿ.

ಕೊನೆಹನಿ : ಇಂತಹ ಭಾಷಾನೀತಿಯನ್ನು ರೂಪಿಸಲು ಭಾರತವೆನ್ನುವ ಬಹುಭಾಷಿಕ ಪ್ರದೇಶಗಳಿಂದಾದ ದೇಶದಲ್ಲಿ ಸಂವಿಧಾನಕ್ಕೆ ಅಗತ್ಯವಿರುವ ತಿದ್ದುಪಡಿ ಮಾಡುವುದರಲ್ಲಿ ತಪ್ಪೇನೂ ಇಲ್ಲ.

ವಿಶ್ವಸಂಸ್ಥೆಯ ಭಾಷಾ ನೀತಿ

ಸೆಪ್ಟೆಂಬರ್ ಅಂದ ಕೂಡಲೇ ಹಿಂದಿ ದಿನಾಚರಣೆ ನೆನಪಾಗುತ್ತದೆ. ಈ ಹಿಂದೆಲ್ಲಾ ಸೆಪ್ಟೆಂಬರ್ 14ನ್ನು ಭಾರತದ ತುಂಬೆಲ್ಲಾ ಹಿಂದೀ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಭಾರತ ಕೇಂದ್ರಸರ್ಕಾರದ ಭಾಷಾನೀತಿಗಳಿಂದಾಗಿಯೂ, ಬೊಕ್ಕಸದ ನೆರವಿನಿಂದಾಗಿಯೂ ಇತ್ತೀಚಿಗೆ ಈ ದಿನಾಚರಣೆಯು - ಹಿಂದಿ ಸಪ್ತಾಹ, ಹಿಂದೀ ಪಕ್ಷಾಚರಣೆಯಾಗಿದ್ದು, ಮುಂಬರುವ ದಿನಗಳಲ್ಲಿ ಹಿಂದೀ ಮಾಸಾಚರಣೆ, ವರ್ಷಾಚರಣೆಗಳಾಗಿ ಬದಲಾದರೂ ಅಚ್ಚರಿಯಿಲ್ಲ. ಭಾರತದ ಕೇಂದ್ರಸರ್ಕಾರವೇನೋ ಹಿಂದಿಯನ್ನು ಇಡೀ ಭಾರತದ ಮೂಲೆಮೂಲೆಗೆ ಮುಟ್ಟಿಸುವ ರಣೋತ್ಸಾಹದಲ್ಲಿದೆ. ನಮಗೆ ಹಿಂದಿ ಬೇಕೋ? ಬೇಡವೋ? ಕನ್ನಡಿಗರ ಬದುಕಲ್ಲಿ ಹಿಂದೀ ಎನ್ನುವ ನಮ್ಮದಲ್ಲದ ನುಡಿಯನ್ನು ಭಾರತಸರ್ಕಾರ ನುಗ್ಗಿಸುವುದು ಸರಿಯೇ? ಬಹುಭಾಷೆಯ ಸಮುದಾಯಗಳು ಸೇರಿ ಆಗಿರುವ ಭಾರತಂತಹ ದೇಶದಲ್ಲಿ ಎಂಥಾ ವ್ಯವಸ್ಥೆ ಇರಬೇಕು? ಇಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಎಂತಹ ನಿಲುವನ್ನು ಹೊಂದಿದೆ ಎಂದು ನೋಡಿದಾಗ, ಭಾರತದ ಸದರಿ ಭಾಷಾನೀತಿಯ ತಪ್ಪುಒಪ್ಪುಗಳು ಮನದಟ್ಟಾಗುತ್ತವೆ. ಏನ್‌ಗುರು ಮುಂದಿನ ಕೆಲವು ದಿನಗಳ ಕಾಲ ಈ ಬಗ್ಗೆ ಸರಣಿ ಬರಹವನ್ನು ನಿಮ್ಮ ಮುಂದಿಡುತ್ತಿದೆ.

ವಿಶ್ವಸಂಸ್ಥೆಯು ಭಾಷೆಗೆ ನೀಡಿರುವ ಮಹತ್ವ

ವಿಶ್ವಸಂಸ್ಥೆಯು ವಿಶೇಷವಾಗಿ ಗಮನ ಹರಿಸಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಒಂದು ಕ್ಷೇತ್ರ ಮಾನವ ಹಕ್ಕುಗಳು. ಇದರೊಳಗೇ ಭಾಷಾ ಸಮುದಾಯದ ಹಕ್ಕುಗಳನ್ನು ಅಡಕಗೊಳಿಸಿದ್ದಾರೆ. ಇದರ ಮೂಲ ಉದ್ದೇಶ ಪ್ರಪಂಚದ ಎಲ್ಲಾ ಭಾಷಿಕ ಸಮುದಾಯಗಳೂ ಕೂಡಾ ಉಳಿಯಬೇಕು. ಪ್ರತಿಯೊಂದು ಸಮುದಾಯವೂ ಕೂಡಾ ಮನುಕುಲದ ಪ್ರಗತಿಯಲ್ಲಿ ತಾನೂ ಭಾಗವಾಗಿರುವುದರ ಜೊತೆಯಲ್ಲೇ, ಇದಕ್ಕಾಗಿ ಕೊಡುಗೆ ನೀಡುತ್ತಾ ತನ್ನನ್ನು ತೊಡಗಿಸಿಕೊಳ್ಳಬೇಕು. ಇಂತಹ ಪಾಲುದಾರಿಕೆ ಸಾಧ್ಯವಾಗುವುದು ಪ್ರತಿಯೊಂದು ಸಮುದಾಯದ ಭಾಷೆ ಉಳಿದಾಗ, ಬೆಳೆದಾಗ ಮಾತ್ರಾ. ಕೆಲವು ಸಮುದಾಯಗಳ ಭಾಷೆಗಳು ಹಲವಾರು ಕಾರಣಗಳಿಂದಾಗಿ ಇಂದು ಆತಂಕ ಎದುರಿಸುತ್ತಿದೆ. ಹಾಗಾಗಿ ಇಂತಹ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಒಟ್ಟಾರೆ ಮನುಕುಲದ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಷಾಹಕ್ಕುಗಳನ್ನು ಗುರುತಿಸಿ ಘೋಷಿಸಲಾಗಿದೆ. ಇದು ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ಭಾರತದೇಶದಲ್ಲಿ ಇದೀಗ ಅನುಸರಿಸಲಾಗುತ್ತಿರುವ ಭಾಷಾನೀತಿಯು, ಹೇಗೆ ಇಂತಹ ಒಂದು ಸದುದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಈ ಹಿಂದೀ ಉತ್ಸವಗಳ ಸಂದರ್ಭದಲ್ಲಿ ತಿಳಿದುಕೊಳ್ಳೋಣ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲೊಂದಾದ UNESCO, ಜಗತ್ತಿನ ಭಾಷಾ ಸಮುದಾಯಗಳ ಕುರಿತು ಹೊರಡಿಸಿರೋ ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯಲ್ಲಿ ಪ್ರತಿಯೊಂದು ಭಾಷಾ ಸಮುದಾಯದ ಹಕ್ಕುಗಳ ಬಗ್ಗೆ ಹೀಗೆ ಹೇಳಿದೆ :

ಭಾಷಾ ಹಕ್ಕು ಘೋಷಣೆಯ ಉದ್ದೇಶ

ಯುನೆಸ್ಕೋ ಹೊರತಂದಿರುವ ಈ ಭಾಷಾಹಕ್ಕುಗಳು: ಬಾರ್ಸಿಲೋನಾ ಘೋಷಣೆಯ ಉದ್ದೇಶ ಇಂತಿದೆ :
ಸ್ವಯಂ ಆಡಳಿತದ ಕೊರತೆ, ಜನಸಂಖ್ಯೆಯ ಕೊರತೆ, ಸಮುದಾಯದ ಕೆಲಭಾಗ ಅಥವಾ ಇಡೀ ಸಮುದಾಯವೇ ಚದರಿ ಹೋಗಿರುವುದು, ಬಲಹೀನ ಆರ್ಥಿಕಮಟ್ಟ, ಸುಧಾರಿಸಿಲ್ಲದ ಭಾಷಾಮಟ್ಟ, ಬಲಶಾಲಿ ಸಮೂಹದ ನಂಬಿಕೆ/ ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವಿಕೆಗಳು ಒಂದು ಭಾಷಾ ಸಮುದಾಯದ ಉಳಿವಿಗೆ ಎದುರಾಗಿರುವ ಆತಂಕಗಳಾಗಿದ್ದು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಗುರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸವಾಲುಗಳನ್ನೆದುರಿಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಉಂಟಾಗಿದೆ.

ರಾಜಕೀಯ ಗುರಿಗಳು : ಏಳಿಗೆಯ ದಿಕ್ಕಿನೆಡೆಗಿನ ಪ್ರಗತಿಯ ಪಯಣದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಸಾಗಲು ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ ವ್ಯವಸ್ಥೆಯನ್ನು ರೂಪಿಸುವುದು.
ಸಾಂಸ್ಕೃತಿಕ ಗುರಿಗಳು : ಪ್ರಗತಿಯ ಹಾದಿಯಲ್ಲಿ ಜಗತ್ತಿನಾದ್ಯಂತ ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ ವ್ಯವಸ್ಥೆಯನ್ನು ರೂಪಿಸುವುದು.
ಆರ್ಥಿಕ ಗುರಿಗಳು : ಪ್ರಗತಿಗೆ ಪೂರಕವಾಗುವಂತಹ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಮಾದರಿಯನ್ನು ರೂಪಿಸುವುದು.

ಈ ಮೂರು ಗುರಿಗಳ ಕಾರಣದಿಂದಾಗಿ ಇಲ್ಲಿ ಯಾವೊಂದು ರಾಷ್ಟ್ರವನ್ನಾಗಲೀ, ರಾಜಕೀಯ ಸಾರ್ವಭೌಮತ್ವವನ್ನಾಗಲೀ ಮಾನದಂಡವಾಗಿ ಪರಿಗಣಿಸದೆ ಭಾಷಿಕ ಸಮುದಾಯವನ್ನು ಪರಿಗಣಿಸಿ, ಸಮುದಾಯಗಳ ಭಾಷಿಕ ಹಕ್ಕಿನ ಬಗ್ಗೆ ಪ್ರತಿಪಾದಿಸಲಾಗಿದೆ. ಇಡೀ ಮನುಕುಲ ತನ್ನ ಭಾಷಾವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉಳಿಸಿಕೊಂಡು ಸೌಹಾರ್ದಯುತವಾದ ಸಹಬಾಳ್ವೆಯನ್ನು ನಡೆಸುತ್ತಾ, ಇಡೀ ಮನುಕುಲವು ಏಳಿಗೆಯತ್ತ ಸಾಗಲು ಇದು ಅತ್ಯಗತ್ಯವೆಂದು ಭಾವಿಸಲಾಗಿದೆ.
ಇದರಲ್ಲಿರೋ ಮಹತ್ವದ ಅಂಶಗಳು

ವೈಯುಕ್ತಿಕ ಮಟ್ಟದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನತನವನ್ನು ಉಳಿಸಿಕೊಳ್ಳಲು ಇರುವ ಹಕ್ಕಿನ ಬಗ್ಗೆ ತಿಳಿಸುತ್ತಾ, ತಾನಿರುವ ನೆಲದ ಮುಖ್ಯವಾಹಿನಿಗೆ ಪೂರಕವಾಗಿರಬೇಕೆಂಬ ಸಣ್ಣ ಎಚ್ಚರಿಕೆಯನ್ನೂ ನೀಡುತ್ತದೆ. ಇದರೊಟ್ಟಿಗೆ ಒಂದು ಭಾಷಾ ಸಮುದಾಯಕ್ಕೆ ತನ್ನದೇ ನೆಲದಲ್ಲಿ ಇರುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡವನ್ನು ಎಷ್ಟರಮಟ್ಟಿಗೆ ಬಳಸುವ ಹಕ್ಕು ಇದೆ ಎಂಬುದನ್ನು ಇದು ತಿಳಿಸಿಕೊಡುತ್ತದೆ. ಇಡೀ ವರದಿಯು ಇಂಗ್ಲೀಷಿನಲ್ಲಿ http://www.unesco.org/cpp/uk/declarations/linguistic.pdf ಕೊಂಡಿಯಲ್ಲಿ ಸಿಗುತ್ತದೆ. ಈ ವರದಿಯ ಪ್ರಮುಖವಾದ ಕೆಲವು ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದ್ದೇವೆ.

ಪರಿಚ್ಛೇದ 8.2 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಇರುತ್ತದೆ.
ಪರಿಚ್ಛೇದ 11 : ಎಲ್ಲಾ ಭಾಷಾ ಸಮುದಾಯಗಳಿಗೂ ಈ ಘೋಷಣೆಯ ಪ್ರತಿಯೊಂದು ಹಕ್ಕನ್ನೂ ಸಾಧಿಸಿಕೊಳ್ಳುವ ಅಧಿಕಾರವಿರುತ್ತದೆ.
ಪರಿಚ್ಛೇದ 14 : ಈ ಹಕ್ಕುಗಳನ್ನು ತನ್ನ ವ್ಯಾಪ್ತಿಯ ಪ್ರದೇಶದಲ್ಲಿನ ನುಡಿಯ ಸ್ವಾಭಾವಿಕವಾದ ಹಕ್ಕುಗಳಿಗೆ ಧಕ್ಕೆ ತರುವಂತೆ ಅರ್ಥೈಸಲಾಗದು.
ಪರಿಚ್ಛೇದ 16 : ಎಲ್ಲಾ ಭಾಷಿಕ ಸಮುದಾಯಕ್ಕೂ ತನ್ನ ಪರಿಧಿಯೊಳಗಿನ ಎಲ್ಲಾ ಸ್ಥಳೀಯ ಹಾಗೂ ಕೇಂದ್ರಗಳ ಸಾರ್ವಜನಿಕ ಕಛೇರಿಯಲ್ಲಿ ತನ್ನದೇ ನುಡಿಯಲ್ಲಿ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ.
ಪರಿಚ್ಛೇದ 18 : ಎಲ್ಲಾ ಭಾಷಾ ಸಮುದಾಯಗಳಿಗೂ ತಮ್ಮದೇ ನುಡಿಯಲ್ಲಿ ನೆಲದ ಕಾನೂನು, ನೀತಿ ನಿಯಮಗಳನ್ನು ಆಯಾಪ್ರದೇಶದ ಭಾಷೆಯಲ್ಲೇ ದೊರಕಿಸಿಕೊಡಬೇಕು.
ಪರಿಚ್ಛೇದ 22 : ಎಲ್ಲಾ ಭಾಷಾ ಸಮುದಾಯಗಳಿಗೆ ಪ್ರಮಾಣಪತ್ರಗಳನ್ನು ನೋಟರಿಯಿಂದಾಗಲೀ, ಇನ್ಯಾವುದೇ ಅಧಿಕೃತ ಸಂಸ್ಥೆಗಳಿಂದ ಪಡೆಯುವಾಗಲಾಗಲೀ, ಆಯಾಪ್ರದೇಶದ ಭಾಷೆಯಲ್ಲಿ ಪಡೆಯುವ ಹಕ್ಕಿರುತ್ತದೆ. ಇದನ್ನು ಮಾನ್ಯ ಮಾಡದೇ ಇರುವ ಹಾಗಿಲ್ಲ.
ಪರಿಚ್ಛೇದ 24 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನಾಡಿನ ಕಲಿಕೆಯ ವ್ಯವಸ್ಥೆಯಲ್ಲಿ ಯಾವ ಹಂತದವರೆಗೂ ತಾಯ್ನುಡಿಯಿರಬೇಕೆಂದು ನಿರ್ಣಯಿಸುವ ಹಕ್ಕಿರುತ್ತದೆ.
ಪರಿಚ್ಛೇದ 28 : ತನ್ನ ನೆಲದ ಇತಿಹಾಸ, ಸಂಸ್ಕೃತಿಗಳನ್ನು ಕಲಿಕೆಯಲ್ಲಿ ತಮಗೆ ಬೇಕಾದ ಪ್ರಮಾಣದಲ್ಲಿ ಅಳವಡಿಸುವ ಹಕ್ಕು ಪ್ರತಿಯೊಂದು ಭಾಷಾ ಸಮೂಹಕ್ಕೂ ಇರುತ್ತದೆ.
ಪರಿಚ್ಛೇದ 32 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದ, ಊರಿನ, ಜಾಗದ ಹೆಸರನ್ನು ತನಗೆ ಬೇಕಾದಂತೆ ಉಚ್ಚರಿಸುವ, ಬಳಸುವ ಹಾಗೂ ಬದಲಾಯಿಸುವ ಅಧಿಕಾರವಿರುತ್ತದೆ.
ಪರಿಚ್ಛೇದ 35 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿನ ಮಾಧ್ಯಮಗಳಲ್ಲಿ ಆ ನೆಲದ ಭಾಷೆ ಯಾವ ಪ್ರಮಾಣದಲ್ಲಿರಬೇಕು ಎಂದು ನಿರ್ಣಯಿಸಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 45 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ ಗ್ರಂಥಾಲಯ, ಚಲನಚಿತ್ರ, ರಂಗಭೂಮಿ, ಮ್ಯೂಸಿಯಂಗಳೂ ಸೇರಿದಂತೆ ಎಲ್ಲಾ ತೆರನಾದ ಸಾಂಸ್ಕೃತಿಕ ಪ್ರಾಕಾರಗಳಲ್ಲಿ ಆ ನೆಲದ ಭಾಷೆಗಿರಬೇಕಾದ ಪ್ರಮುಖವಾದ ಸ್ಥಾನವನ್ನು (ಸಾರ್ವಭೌಮತ್ವವನ್ನು) ಕಾಪಾಡಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 48.1 : ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ, ತನ್ನ ನುಡಿಯಲ್ಲೇ ಎಲ್ಲಾ ತೆರನಾದ ಗ್ರಾಹಕ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ. ಬ್ಯಾಂಕಿಂಗ್, ಇನ್ಶುರೆನ್ಸ್, ಸರಕು, ಸಾಮಾನು ಸರಂಜಾಮುಗಳು ಇತ್ಯಾದಿ ಎಲ್ಲವನ್ನೂ ಆ ಪ್ರದೇಶದ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ 48.2 : ಯಾವುದೇ ಸಂಸ್ಥೆ ಆಂತರಿಕವಾಗಿ ಹೊಂದಿರುವ ಅಥವಾ ಹೊಂದಿಲ್ಲದ, ಯಾವುದೇ ಕಾನೂನು ಈ ಚೌಕಟ್ಟನ್ನು ಮೀರಲಾಗುವುದಿಲ್ಲ.
ಪರಿಚ್ಛೇದ 51 : ಪ್ರತಿಯೊಂದು ಭಾಷಿಕ ಸಮುದಾಯಕ್ಕೂ ತನ್ನ ನೆಲದಲ್ಲಿನ ಎಲ್ಲಾ ವ್ಯಾಪಾರಿ ವಹಿವಾಟಿನ ಜಾಹೀರಾತುಗಳು, ಸೈನ್‌ಬೋರ್ಡುಗಳು ಇತ್ಯಾದಿಗಳಲ್ಲಿ ಆ ನೆಲದ ಭಾಷೆಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಕ್ಕಿರುತ್ತದೆ.
ಎಷ್ಟೊಂದು ವಿಸ್ತಾರವಾಗಿ ನಮ್ಮ ಹಕ್ಕುಗಳ ಬಗ್ಗೆ UNESCO ವಿಶ್ವಸಂಸ್ಥೆಯ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ, ಭಾಷಾ ಸಮುದಾಯಗಳ ಹಕ್ಕಿಗೆ ಸಂಬಂಧಿಸಿದಂತೆ ಘೋಷಣೆ ಹೊರಡಿಸಿದೆಯಲ್ಲವೇ? ಆದರೆ ಭಾರತದೇಶವು ತನ್ನ ನೆಲದಲ್ಲಿ ಎಂತಹ ಭಾಷಾನೀತಿಯನ್ನು ಅಳವಡಿಸಿಕೊಂಡಿದೆ? ಭಾರತದ ಸಂವಿಧಾನ, ಸಂಸತ್ತು, ಆಡಳಿತ ವ್ಯವಸ್ಥೆ ಈ ನಾಡಿನಲ್ಲಿರುವ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅಗತ್ಯವಿರುವ ನಿಯಮಾವಳಿಗಳನ್ನು ಹೊಂದಿವೆಯೇ? ಬಹುಭಾಷಿಕ ಭಾರತದ ವೈವಿಧ್ಯತೆಯನ್ನು, ಭಾರತದೇಶವು ಶಾಪವೆಂದು ಪರಿಗಣಿಸಿದೆಯೇ? ಎಂಬುದನ್ನೆಲ್ಲಾ ಅರಿಯಲು ಭಾರತ ಸರ್ಕಾರದ ಭಾಷಾನೀತಿಯ ಬಗ್ಗೆ ಕಣ್ಣು ಹಾಯಿಸೋಣ.

ಮುಂದುವರೆಯುವುದು...

ಚಾಮುಂಡಾ ಅಂದ್ರೆ ನಾಕ: ಚಾಮುಂಡಿ ಅಂದ್ರೆ ನರಕ... ಗೊತ್ತಾ?

ಇತ್ತೀಚಿಗೆ ಕನ್ನಡ ಬರವಣಿಗೆ : ದೋಷಗಳು, ದೌರ್ಬಲ್ಯಗಳು ಅಂತಾ ಮೇಲೂ, ಕನ್ನಡ ಬರೆವಣಿಗೆ ಅಂತಾ ಒಳಗೂ ಅಚ್ಚಾಗಿರೋ ಒಂದು ಪುಸ್ತಕ ಪ್ರಕಟವಾಗಿದೆ. ಈ ಪುಸ್ತಕವು ಕನ್ನಡದ ಬಗ್ಗೆ ಈ ವಿದ್ವಾಂಸ ವಲಯ ಹೊಂದಿರುವ ಅವೈಜ್ಞಾನಿಕವಾದ ನಿಲುವು ನಂಬಿಕೆಗಳನ್ನು ತೋರಿಸಿಕೊಡುತ್ತಿದೆ. ಕನ್ನಡ ಬರವಣಿಗೆ (ಬರೆವಣಿಗೆ?) ಇದೀಗ ದುಸ್ಥಿತಿಯಲ್ಲಿದೆ ಎಂದು ಭಾವಿಸಿರುವ ವಿದ್ವಾಂಸದ್ವಯರು ಬರೆದಿರೋ ಸದರಿ ಪುಸ್ತಕದ ಸಾರಾಂಶ ಇಂತಿವೆ. (ಬಣ್ಣದ ಪ್ಯಾರಾ ಪುಸ್ತಕದಲ್ಲಿದ್ದದ್ದು)

ಇವು ಇಂದಿನ ದುಸ್ಥಿತಿಗೆ ಕಾರಣಗಳಂತೆ!

ಬಳಕೆ ಹೆಚ್ಚಿದ ಹಾಗೇ ಭಾಷೆ ಸವೆಯುತ್ತದೆ. ಅಂದಗೆಡುತ್ತದೆ, ಶಕ್ತಿಗುಂದುತ್ತದೆ. ಏಕೆಂದರೆ ಬಳಕೆದಾರರೆಲ್ಲಾ ಒಂದೇಮಟ್ಟದಲ್ಲಿ ವಿದ್ಯಾವಂತರೂ ಸುಶಿಕ್ಷಿತರೂ ಆಗಿ ಇರುವುದಿಲ್ಲ. ಅವರು ತಮ್ಮ ಕೈಬಾಯಿಗಳಿಗೆ ಸಿಕ್ಕ ಈ ಭಾಷೆಯೆಂಬ ವಸ್ತುವನ್ನು ತೋರಿದಂತೆ ಎಳೆದಾಡುತ್ತಾರೆ, ಎಸೆದಾಡುತ್ತಾರೆ....ಇಂದು ಬಳಕೆಯಲ್ಲಿರುವ ಕನ್ನಡದ ಶಿಷ್ಟಭಾಷೆಯನ್ನು ಲಕ್ಷಿಸಿದರೆ, ಆ ಎಳೆದಾಟ, ಆ ಎಸೆದಾಟ ಯಾವ ರೀತಿಯದು ಎಂಬುದು ತಿಳಿಯುತ್ತದೆ.

ಈ ಸ್ಥಿತಿಗೆ ಕಾರಣವೇನು?

೧. ಕನ್ನಡ ಭಾಷೆಯ ಇಂದಿನ ಶಿಕ್ಷಣದಲ್ಲಿ ಕ್ರಮಬದ್ಧವಾದ ವ್ಯಾಕರಣ ಪಾಠ ಅಲಕ್ಷಿತವಾಗಿದೆ. ೨. ಸಂಸ್ಕೃತ ಭಾಷೆ ಸಾಹಿತ್ಯಗಳ ಅಧ್ಯಯನ ಅವಗಣನೆಗೆ ಗುರಿಯಾಗಿದೆ. ೩. ಭಾಷೆ ಸಾಹಿತ್ಯಗಳ ಶಿಕ್ಷಕರ ಭಾಷಾಜ್ಞಾನ ತೀರಾ ಕೆಳಮಟ್ಟದಲ್ಲಿದೆ. ೪. ಅಭ್ಯಾಸಿಗಳಿಗೂ ವಿದ್ಯಾರ್ಥಿಗಳಿಗೂ ಅನುಸರಣಯೋಗ್ಯವಾದ ಒಳ್ಳೆಯ ಮಾದರಿಗಳು ದೊರೆಯುತ್ತಿಲ್ಲ. ೫. ಕಲಿಯುವವರೂ ಕಲಿಸುವವರೂ ಸಮಾನವಾಗಿ ಶಿಷ್ಟ ಭಾಷೆಯ ಬಳಕೆಯಲ್ಲಿ ಅಸಡ್ಡೆ ತಿರಸ್ಕಾರಗಳನ್ನು ತೋರಿಸುತ್ತಿದ್ದಾರೆ. ೬. ತಾಂತ್ರಿಕ, ವೈದ್ಯಕೀಯ ಮತ್ತು ವೈಜ್ಞಾನಿಕ ಶಿಕ್ಷಣಕ್ಕೆ ಬಹುವಾಗಿ ಪ್ರಾಶಸ್ತ್ಯ ದೊರೆಯುತ್ತಿದ್ದು, ಭಾಷೆ ಸಾಹಿತ್ಯಗಳ ಅಧ್ಯಯನದಲ್ಲಿ ಉತ್ಸಾಹವೂ ಶ್ರದ್ಧೆಯೂ ಸಾಧನೆ ಪರಿಶ್ರಮಗಳೂ ಉದಾಸೀನಕ್ಕೆ ಗುರಿಯಾಗಿವೆ. ೭. ಸೃಜನಾತ್ಮಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರಾದೇಶಿಕವೂ ಸಾಮಾಜಿಕವೂ ಆದ ಉಪಭಾಷೆಗಳನ್ನೂ ಗ್ರಾಮ್ಯವನ್ನೂ ಹೆಚ್ಚುಹೆಚ್ಚಾಗಿ ಬಳಸುವ ರೂಢಿ ಬೆಳೆಯುತ್ತಿರುವುದರಿಂದ ಶಿಷ್ಟಭಾಷೆಯ ತಿಳಿವಳಿಕೆಗೆ ಬೇಕಾದ ಶಿಕ್ಷಣವೂ ಸಂಸ್ಕಾರವೂ ಈಗ ಅನಾವಶ್ಯಕವೆಂದೂ ತೋರುತ್ತಿದೆ. ೮. ತಪ್ಪುಗಳನ್ನು ತಪ್ಪೆಂದು ತಿಳಿಯದಿರುವುದೂ, ತಿಳಿದರೂ ತಿದ್ದಿಕೊಳ್ಳದಿರುವುದು ಪ್ರವೃತ್ತಿಯಾಗಿದೆ. ೯. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಭಾಷಾ ಶುದ್ಧತೆಯ ಬಗ್ಗೆ ನಿರ್ಲಕ್ಷ್ಯದಿಂದಿವೆ. (ಪುಟ ೭: ಕ.ಬ:ದೋ.ದೌ)

ಆಡಿದಂತೆ, ಬಳಸಿದಂತೆ ಭಾಷೆ ಸವೆಯುತ್ತದೆ ಎನ್ನುವುದಾದರೆ, ಬಳಸಿದರೆ ಸವೆಯುತ್ತದೆಯೆಂದು ಭಾಷೆಯ ಬಳಕೆ ಹೆಚ್ಚಬಾರದು ಎಂಬುದು ಲೇಖಕರ ನಿಲುವೇನು? ಭಾಷೆಯನ್ನು ಬಳಸಲು ವಿದ್ಯಾವಂತರೂ ಸುಶಿಕ್ಷಿತರೂ ಆಗಿರಬೇಕೇನು? ಉಳಿದವರು ಬಳಸುವುದು ಭಾಷೆಯಲ್ಲವೇನು? ಸಂಸ್ಕೃತದ ಅಧ್ಯಯನವು ಐದೂವರೆ ಕೋಟಿ ಕನ್ನಡಿಗರಿಗೆಲ್ಲಾ ಆಗಬೇಕು ಎಂಬುದು ಇವರ ನಿಲುವೇನು? ಸಂಸ್ಕೃತದ ಅಧ್ಯಯನವಾಗದೆ ಕನ್ನಡವನ್ನು ಬಳಸುವುದು ಸರಿಯಲ್ಲವೇನು? ಒಟ್ಟಾರೆ ಕನ್ನಡದ ನಾಲಗೆಯನ್ನು ಸಂಸ್ಕೃತವೆಂಬ ಬೆಣಚುಕಲ್ಲಿಂದ ಗಸಗಸ ತಿಕ್ಕಿ ಶುದ್ಧ ಶಿಷ್ಟ ಕನ್ನಡವೆಂಬ - ಎಂದಿಗೂ ಜನಬಳಕೆಯಲ್ಲಿಲ್ಲದ, ಇದ್ದರೂ ಬೆರಳೆಣಿಕೆಯ ಸಂಸ್ಕೃತ-ಕನ್ನಡ ಪಂಡಿತರ ಬರಹದಲ್ಲಿರುವ - ಭಾಷೆಯನ್ನು ಉಳಿಸಿ ಬಳಸಿ ಬೆಳೆಸಬೇಕೆಂಬ ನಿಲುವು ಕಾಣುತ್ತಿದೆ.

ಈ ಹಿಂದೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಮಹಾಪ್ರಾಣಘಟಿತ ಪದಗಳು ತದ್ಭವಗಳಾಗಿ ಬಂದಿರುವುದು ಸರಿಯಷ್ಟೇ. ಇವನ್ನು ಬಳಸುವುದಕ್ಕೆ ಆಕ್ಷೇಪವಿಲ್ಲ. ಆದರೆ ಹೊಸದಾಗಿ ಪದಗಳನ್ನು ಸ್ವೀಕರಿಸುವುದಾದರೆ ಹಾಗೆ ತದ್ಭವ ರೂಪಕ್ಕೆ ತರಬಾರದು. ಆಗ ಸಂಸ್ಕೃತಶಬ್ದಗಳು ಅಂದಗೆಟ್ಟು ಅಪಪ್ರಯೋಗಗಳಾಗುತ್ತವೆ. ಹೀಗೆ ಅಂದಗೆಟ್ಟ ಕೆಲವು ಪದಗಳೆಂದರೆ ಧೃಢ, ಉಚ್ಛ, ಭೀಭತ್ಸ, ಪುತ್ಥಳಿ, ಸ್ವಚ್ಚ ಇತ್ಯಾದಿಗಳು. (ಪುಟ ೯: ಕ.ಬ:ದೋ.ದೌ)

ಯಾವುದೇ ಭಾಷೆಯ ಪದಗಳನ್ನು ಕನ್ನಡಿಗರು ಬಳಸುವಾಗ ಕನ್ನಡದ ಶೈಲಿಯ ಉಚ್ಚರಣೆ ಸಹಜ. ಹಾಗಾಗಿಯೇ ಅಂದು ತತ್ಭವಗಳು ಉಂಟಾಗಿದ್ದು. ಅಂದಿಗೆ ಅದು ಸರಿ, ಇಂದಿಗೆ ಸರಿಯಿಲ್ಲ ಎಂದರೆ ಹೇಗೆ? ಬಸ್, ಕಾರ್ ಎಂಬುವು ಕನ್ನಡದಲ್ಲಿ ಬಸ್ಸು, ಕಾರು ಎಂದು ಬದಲಾಗುವುದೂ ಸಹಜವಾದ ಬದಲಾವಣೆ ತಾನೆ? ಅದು ಅಂದಗೆಡಿಸುವುದೋ? ಎಲ್ಲ ಕನ್ನಡಿಗರೂ ಕನ್ನಡ ನುಡಿಯಲ್ಲಿ ಇರುವ ಸಂಸ್ಕೃತ ಪದಗಳನ್ನು ಸಂಸ್ಕೃತದಲ್ಲಿರುವಂತೆಯೇ ಉಚ್ಚರಿಸಬೇಕೆಂಬ ನಿಲುವು/ ಬಯಕೆಯು ಎಷ್ಟರ ಮಟ್ಟಿಗೆ ಸರಿ? ಎಷ್ಟರ ಮಟ್ಟಿಗೆ ವೈಜ್ಞಾನಿಕ? ಇದು ಎಂದಿಗೂ ಆಗಲಾರದ್ದಲ್ಲವೇನು?

ಸಂಸ್ಕೃತ ವ್ಯಾಕರಣದ ಪರಿಚಯವಿಲ್ಲದೇ ಇರುವ ತಪ್ಪಿನಿಂದಾಗಿಯೂ. ಬಲ್ಲವರ ಒಡನಾಟವಿರದ ತಪ್ಪಿನಿಂದಾಗಿಯೂ ಅನೇಕ ಸಂಸ್ಕೃತ ಪದಗಳು / ಪದಕಟ್ಟುಗಳು ತಪ್ಪಾಗಿವೆ. ಕೋಟ್ಯಾಧೀಶ, ಜಾತ್ಯಾತೀತ, ತಿಂಗಳಾಂತ್ಯ, ಹಿಂದಿಯೇತರ, ಜೈ ರಾಮ, ಅರ್ಧಂಬರ್ಧ, ಕೆಂಪಾಂಬುಧಿ ಇವೆಲ್ಲಾ ತಪ್ಪು. ಕೋಟ್ಯಧೀಶ, ಜಾತ್ಯತೀತ, ತಿಂಗಳಂತ್ಯ, ಹಿಂದೀತರ, ಜಯರಾಮ, ಅರ್ಧಾರ್ಧ, ಕೆಂಪಂಬುಧಿ ಅನ್ನುವುದು ಸರಿ. ಅಂಗಾಂಗ ತಪ್ಪು, ಅಂಗೋಪಾಂಗ ಅನ್ನಬೇಕು, ನಾಯಕಿ ಅಲ್ಲ ನಾಯಿಕೆ, ಸಮಾಜಸೇವಕಿ ಅಲ್ಲಾ ಸಮಾಜಸೇವಿಕೆ, ಪಾಶ್ಚಿಮಾತ್ಯ ಅಲ್ಲ ಪಾಶ್ಚ್ಯಾತ್ಯ, ದಾಯಾದಿ, ಶೋಭಾಯಮಾನ, ಮಹದೇಷ್ವರ, ಯೌವ್ವನ, ಉಪದ್ರ, ಚಾತುರ್ಯ, ಧೂಮ್ರಪಾನ, ಐಕ್ಯತೆ, ದೈನ್ಯತೆ, ಗಾಂಭೀರ್ಯತೆ, ವೈವಿಧ್ಯತೆ, ಔದಾರ್ಯತೆ, ಮಾಲಿನ್ಯತೆ, ದೇವಾನುದೇವತೆ, ಪ್ರಸ್ತಾಪ, ಜಿಗುಪ್ಸೆ, ಮಹತ್ಕಾರ್ಯ, ಲೇಖಕಿ, ಪೌರ್ಣಿಮೆ... ಎಲ್ಲಾ ತಪ್ಪು. ಮಹತ್ವ ಅಂದರೆ ತಪ್ಪು, ಮಹತ್ತ್ವ ಅನ್ನಬೇಕು, ಬಹುತ್ತ್ವ ತಪ್ಪು ಬಹುತ್ವ ಸರಿ... (ಪುಟ ೧೪~೨೩ರ ಸಾರ: ಕ.ಬ:ದೋ.ದೌ)
ಉಲಿದಂತೆ ಬರೆಯಬೇಕು ಅನ್ನುವ ವಾದಕ್ಕೆ ಮೇಲಿನ ಉದಾಹರಣೆಗಳು ಸಮರ್ಥನೆ ಕೊಡುತ್ತವೆ. ಆಡುಭಾಷೆಯಲ್ಲಿ ಇವುಗಳ ಉಚ್ಚರಣೆಯನ್ನು ತಿದ್ದಿಕೊಳ್ಳಬೇಕು ಎಂದರೆ ಎಲ್ಲ ಜನರ ನಾಲಗೆ ಬದಲಿಸಬೇಕು. ‘ಹಾಗೇನೂ ಈ ಪುಸ್ತಕ ಹೇಳುತ್ತಿಲ್ಲ. ಬರಹದಲ್ಲಿ ಹೀಗಿರಬೇಕ’ ಅನ್ನುವುದಾದರೆ ಬರಹಕ್ಕೂ ಆಡುವುದಕ್ಕೂ ನಡುವಿನ ವ್ಯತ್ಯಾಸ ಹೀಗೇ ಉಳಿಸಿಕೊಳ್ಳಬೇಕಾಗುತ್ತದೆ. ಆಗ ಬರಹಕ್ಕೆ ಅರ್ಥವೇ ಇರುವುದಿಲ್ಲ. ನಿಮಗೊಂದು ತಮಾಷೆ ಗೊತ್ತಾ? ಈ ಪಂಡಿತರ ಪ್ರಕಾರ ನಮ್ಮ ಪುರಂದರ ದಾಸರು... ‘ಆಡಿಸಿದಳೆಶೋದೆ ಜಗದೋದ್ಧಾರನಾ...’ ಅಂದಿರೋದು ತಪ್ಪು. ‘ಆಡಿಸಿದಳು ಯಶೋದೆ, ಜಗದುದ್ಧಾರನಾ...’ ಅನ್ನಬೇಕಿತ್ತು.
ಇನ್ನು ಹೆಸರುಗಳನ್ನು ಇಡುವಾಗ (ಅಂಕಿತ ನಾಮ ಬಳಸುವಾಗ) ಸದೃಶರೂಪಗಳ ಅಂಧಾನುಕರಣೆಯಿಂದಾಗಿಯೂ, ಉಚ್ಚಾರಣೆಯ ವಿಕೃತಿಯ ಫಲವಾಗಿಯೂ, ಅಸಡ್ಡೆ, ಅಶಿಕ್ಷೆಯ ಫಲವಾಗಿಯೂ ತಪ್ಪು ಹೆಸರುಗಳನ್ನು ಇಡುತ್ತಾರೆ/ ಬಳಸುತ್ತಾರೆ. ಚಾಮುಂಡಿ, ದುರ್ಗಿ, ಗಾಯಿತ್ರಿ, ರಘೋತ್ತಮ ಪಾಲಾಕ್ಷ ಇವೆಲ್ಲಾ
ಕ್ರಮವಾಗಿ ಚಾಮುಂಡಾ, ದುರ್ಗಾ, ಗಾಯತ್ರಿ, ರಘೂತ್ತಮ ಹಾಗೂ ಫಾಲಾಕ್ಷ ಎಂದಾಗಬೇಕು. ಸಂಖ್ಯಾಪದಗಳು
ಕೂಡಾ ತಪ್ಪಾಗಿವೆ. ಇಪ್ಪತ್ರೊಂಬತ್ತು, ಮೂವತ್ರೊಂಬತ್ತು ಅಂತಾ ಬಳಸುವುದು ತಪ್ಪು. (ಪುಟ ೨೫~೨೬ರ ಸಾರ: ಕ.ಬ:ದೋ.ದೌ)

ಉಚ್ಚರಣೆ ಆಯಾ ಜನರ ಭಾಷೆಯು ನೂರಾರು ವರ್ಷಗಳಿಂದ ಹೊಂದಿರುವ ಶೈಲಿಗೆ ಮಾರ್ಪಾಡಾಗುವುದು ಸಹಜ. ಮಲಯಾಳಿಗಳ ಇಂಗ್ಲೀಷಿಗೂ ಕನ್ನಡಿಗರ ಇಂಗ್ಲೀಷಿಗೂ ಇರುವ ವ್ಯತ್ಯಾಸದಂತೆ... ಇದು ತಾಯ್ನುಡಿಗೂ ಅನ್ವಯವಾಗುತ್ತದೆ. ಬೆಂಗಳೂರಿನ ಶೈಲಿ ಬೇರೆ, ಧಾರವಾಡದ್ದು ಬೇರೆ, ಮಂಗಳೂರಿನದ್ದು ಬೇರೆ. ಧೂಮಪಾನ, ಇಪ್ಪತ್ತೊಂಬತ್ತು, ಮೂವತ್ತೊಂಬತ್ತು ಅನ್ನೋದನ್ನು ಕೆಲವು ಪ್ರದೇಶಗಳ ಕನ್ನಡಿಗರು ಧೂಮ್ರಪಾನ, ಇಪ್ಪತ್ರೊಂಬತ್ತು, ಮೂವತ್ರೊಂಬತ್ತು ಎಂದು ಬಳಸೋದು ನಾಡಿನ ನಾನಾ ಪ್ರದೇಶಗಳ ವೈವಿಧ್ಯತೆ ಎಂಬಂತೆ ನೋಡೋದು ಸರಿ. ವೈವಿಧ್ಯತೆಯನ್ನು ಶಾಪ ಎಂಬಂತಲ್ಲ.


ವಿಭಕ್ತಿಗಳಲ್ಲೂ ತಪ್ಪಾಗುತ್ತಿದೆ. ಕುವೆಂಪುರವರು ತಪ್ಪು. ಕುವೆಂಪು ಅವರು ಅನ್ನಬೇಕು. ರಾಮಸ್ವಾಮಿಯವರು ಅಂದರೆ ತಪ್ಪು, ರಾಮಸ್ವಾಮಿಗಳು ಸರಿ, ಗೀತಳಿಂದ ಎನ್ನುವುದು ತಪ್ಪು ಗೀತನಿಂದ ಎನ್ನುವುದು ಸರಿ. ಅಲ್ಲಿನ, ಇಲ್ಲಿನ, ಇತ್ತೀಚಿನ ಎಂದರೆ ತಪ್ಪು. ಅಲ್ಲಿಯ, ಇಲ್ಲಿಯ, ಇತ್ತೀಚೆಯ ಮಾತ್ರಾ ಸರಿ. ನಡೆಸು, ಬೆಳೆಸು, ತೊಳೆಸು ಎಲ್ಲಾ ತಪ್ಪು. ನಡೆಯಿಸು, ಬೆಳೆಯಿಸು, ತೊಳೆಯಿಸು ಅಂತನ್ನಬೇಕು. (ಪುಟ ೩೯~೪೪ರ ಸಾರ: ಕ.ಬ:ದೋ.ದೌ)

ಆಡುನುಡಿಗೂ ಬರಹಕ್ಕೂ ವ್ಯತ್ಯಾಸ ಇದೆ. ಅಂತಹ ವ್ಯತ್ಯಾಸ ಇದ್ದಷ್ಟೂ ತೊಡಕು ಅನ್ನುವ ನಿಲುವು ಸರಿಯಾಗಿದೆ. ಆದರೆ ಅದನ್ನು ಕಡಿಮೆ ಮಾಡಲು, ಸರಿಪಡಿಸಲು ಹಿಡಿಯಬೇಕಾದ ದಾರಿ ಸರಿಯೇ ಎಂಬುದು ಪ್ರಶ್ನೆ. ಇಲ್ಲಿ ಬರೆದಂತೆ/ ಬರಹದಲ್ಲಿರುವಂತೆ ಉಚ್ಚರಿಸಬೇಕು ಎನ್ನುವುದು ಸರಿಯಲ್ಲ. ಯಾಕೆಂದರೆ ಅದು ಸಾಧಿಸಲು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ಮಾತಾಡಿದಂತೆ ಬರೆಯುವುದು ಮಾತ್ರಾ ಈ ತೊಡಕನ್ನು ತಕ್ಕಮಟ್ಟಿಗೆ ನಿವಾರಿಸಬಹುದೇನೋ ಅಷ್ಟೆ. ಒಟ್ಟಲ್ಲಿ ಈ ಪಂಡಿತರ ಶಿಷ್ಟ ಕನ್ನಡ ಕಲ್ಪನೆ ಅಂಗಿಯ ಅಳತೆಗೆ ಮೈ ಹೊಂದಿಸಬೇಕೆನ್ನುವಂತೆ ಇದೆಯೇ ಹೊರತು ಮೈ ಅಳತೆಗೆ ಅಂಗಿ ಹೊಲಿಸಬೇಕು ಎನ್ನುವ ಹಾಗಿಲ್ಲ. ಹೌದಲ್ವಾ ಗುರೂ?

ರಾಷ್ಟ್ರೀಯ ಅಧ್ಯಕ್ಷರೂ ಅಂದ್ರೆ ಹಿಂಗಿರ್ಬೇಕಾ?


ಬೆಳಗಾವಿಗೆ ಬಂದಿದ್ದ ಭಾರತೀಯ ಜನತಾ ಪಕ್ಷವೆಂಬ ರಾಷ್ಟ್ರೀಯ ಪಕ್ಷದ ಮಹಾದಂಡನಾಯಕರು ಅರ್ಥಾತ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮರಾಠಿಗ ಶ್ರೀ ಶ್ರೀ ಶ್ರೀ ನಿತಿನ್ ಗಡ್ಕರಿಯವರು ಬೆಳಗಾವಿ ಗಡಿ ವಿಷಯವಾಗಿ, ತಾವು ಭಾರೀ ನಿಷ್ಪಕ್ಷಪಾತಿ ಅನ್ನುವಂತೆ ಮಾತಾಡೋ ನಾಟಕ ಮಾಡಿ ಎಡವಟ್ಟು ಮಾತಾಡಿರೋ ಸುದ್ದಿ 21.08.2010ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ ಗುರೂ!

ಬೆಳಗಾವಿ ಮತ್ತು ಮಹಾರಾಷ್ಟ್ರದ ರಾಜಕಾರಣ!

ಶ್ರೀ ಶ್ರೀ ಶ್ರೀ ಗಡ್ಕರಿಯವರು ತಮ್ಮ ಮಾತಲ್ಲಿ, ಬೆಳಗಾವಿ ವಿಷಯದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶಿಸಬೇಕೆಂದು ಮಹಾರಾಷ್ಟ್ರದ ನಿಲುವನ್ನು ಒಳಗೊಳಗೇ ಬೆಂಬಲಿಸಿರೋ ರೀತಿ ಹೇಳಿಕೆ ನೀಡಿ, ಆ ಮೂಲಕ ತಾವು ಮೇಲ್ನೋಟಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಒಳಗೊಳಗೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು ಅನ್ನೋದನ್ನು ಸಾರಿದ್ದಾರೆ. ಹೇಗೇ ಅಂತೀರಾ? ಬೆಳಗಾವಿ ವಿಷಯದಲ್ಲಿ 1960ರ ದಶಕದಲ್ಲೇ ಶ್ರೀ ಸೇನಾಪತಿ ಬಾಪಟ್ ಅವರ ಉಪವಾಸ ಮುಷ್ಕರಕ್ಕೆ ಮಣಿದು, ಕರ್ನಾಟಕದ ವಿರೋಧದ ನಡುವೆಯೇ, ಕೇಂದ್ರಸರ್ಕಾರವು ಮಹಾಜನ್ ಆಯೋಗ ರಚಿಸಿತ್ತು. ಆ ವರದಿಯನ್ನು ಸಲ್ಲಿಸೋ ಮೊದಲೇ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ವಿ.ಪಿ.ನಾಯಕ್ ಅವರು ‘ವರದಿ ಹೇಗಿದ್ದರೂ ಒಪ್ಕೋತೀವಿ’ ಅಂದಿದ್ರು. ವರದಿ ಬಂದಮೇಲೆ ಉಲ್ಟಾ ಹೊಡೆದ ಮಹಾರಾಷ್ಟ್ರದ ರಾಜಕಾರಣಿಗಳು ಇವತ್ತಿನ ತನಕ ಸರಿಹೋಗಿಲ್ಲ. ಗಡಿ ಕಿತಾಪತೀನಾ ಇತ್ತೀಚಿಗೆ ಅವರು ಸುಪ್ರಿಂಕೋರ್ಟಿಗೆ ಒಯ್ದು, ಸಂಸತ್ತಲ್ಲಿ ಅವಕಾಶ ಸಿಕ್ಕಾಗೆಲ್ಲಾ ‘ಪ್ರಧಾನಮಂತ್ರಿ ಮಧ್ಯಸ್ಥಿಕೆ ಮಾಡ್ಲಿ, ಕೇಂದ್ರಸರ್ಕಾರ ಮಧ್ಯಸ್ಥಿಕೆ ಮಾಡ್ಲಿ’ ಅಂತಾ ಹಟಾ ಮಾಡ್ತಾನೆ ಇದಾರೆ. ಈ ರಾಷ್ಟ್ರೀಯ ಪಕ್ಷದ ಮರಾಠಿ ಅಧ್ಯಕ್ಷರು ಕೂಡಾ ಹೇಳ್ತಿರೋದು ಇದನ್ನೇ ತಾನೇ?

ರಾಷ್ಟ್ರೀಯ ಅಧ್ಯಕ್ಷರ ನಿಲುವು!

ಹೀಗೆ ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರೋ ದೊಡ್ ಜನುಗೋಳು, ಇನ್ನೂ ವಿವಾದವನ್ನು ಜೀವಂತವಾಗಿ ಉಳಿಸಿಕೊಳ್ಳೋ ತೆರೆನಾಗಿ ಹೇಳಿಕೆ ಕೊಡೋ ಬದಲು ‘ರಾಜ್ಯಗಳ ಗಡಿ ನಿಶ್ಚಯಕ್ಕೆ, ಸ್ವಾತಂತ್ರ್ಯ ಬಂದಾಗಿನಿಂದ ಕಾಲಕಾಲಕ್ಕೆ ರಚಿಸಿರುವ ರಾಜ್ಯ ವಿಂಗಡನಾ ಸಮಿತಿಯ ತೀರ್ಮಾನಗಳಿಗೆ, ಸಂಸತ್ತು ನೇಮಿಸಿದ್ದ ಆಯೋಗದ ತೀರ್ಪಿಗೆ ಎಲ್ಲಾ ರಾಜ್ಯಗಳೂ ಒಪ್ಪಿ, ಅದರಂತೆ ನಡೆಯಬೇಕು. ಆದಕಾರಣ ಮಹಾಜನ್ ವರದಿಯೆನ್ನುವ ಸಂವಿಧಾನಬದ್ಧವಾದ ವರದಿಯೇ ಗಡಿ ತಕರಾರಿಗೆ ಅಂತಿಮ ಪರಿಹಾರ’ ಅಂತಾ ಹೇಳಬೇಕಿತ್ತಲ್ವಾ? ‘ಈಗ ಸುಪ್ರಿಂಕೋರ್ಟಿನಲ್ಲಿ ವಿಷಯ ಇದೆ, ಪ್ರಧಾನಿ ಮಧ್ಯ ಪ್ರವೇಶ ಆಗಬೇಕು...’ ಇತ್ಯಾದಿ ಮಹಾರಾಷ್ಟ್ರದ ನಿಲುವುಗಳನ್ನು ಹೇಳೋವಾಗ, ಕರ್ನಾಟಕ ಬಿಜೆಪಿಯ "ಮಹಾಜನ್ ವರದಿಯೇ ಅಂತಿಮ" ಎನ್ನುವ ನಿಲುವನ್ನು ಯಾಕೆ ಹೇಳಲಿಲ್ಲ ಅನ್ನಿಸಲ್ವಾ? ಇರಲಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಗಡ್ಕರಿಯವರು ನೀಡಿರೋ ಹೇಳಿಕೇಗೆ ಕರ್ನಾಟಕದ ಭಾರತೀಯ ಜನತಾ ಪಕ್ಷದ ಧುರೀಣರು ಹೇಗೆ ಪ್ರತಿಕ್ರಿಯಿಸ್ತಾರೆ ಅಂತಾ ನೋಡ್ಮಾ...!

ರಾಷ್ಟ್ರೀಯ ನಾಯಕರ ಪಕ್ಷಪಾತತನ!

ಕರ್ನಾಟಕದಿಂದ ರಾಜ್ಯಸಭೆ ಹೊಕ್ಕ ಮತ್ತೊಬ್ಬ ಬಿಜೆಪಿ ರಾಷ್ಟ್ರೀಯ ನಾಯಕರಾದ ಶ್ರೀ ವೆಂಕಯ್ಯನಾಯ್ಡು ಅವರು ಮೊನ್ನೆ ನಡಕೊಂಡಿದ್ದು ಕೂಡಾ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ನಮ್ಮ ಬಳ್ಳಾರಿಯಲ್ಲಿ ಬಿಜೆಪಿ ಮಾಡಿದ ಸಮಾವೇಶದಲ್ಲಿ, ಪಾಪಾ, ಅಷ್ಟು ದೂರದಿಂದ ಬಂದಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರೇ ಕನ್ನಡದಲ್ಲಿ ಮಾತಾಡೋ ಪ್ರಯತ್ನ ಮಾಡುದ್ರೆ, ಈ ಯಪ್ಪಾ ತೆಲುಗಲ್ಲಿ ಮಾತಾಡುದ್ರು. ಯಾಕ್ರಪ್ಪಾ? ಬಳ್ಳಾರಿ ಅನ್ನೋ ಅಚ್ಚಗನ್ನಡದ ಪ್ರದೇಶಾನಾ ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಅನಕೃ ಕಾಲದಿಂದಾ ನಡೆದ ಹೋರಾಟಾನಾ, ಬಳ್ಳಾರೀನಾ ಕರ್ನಾಟಕಕ್ಕೆ ಸೇರಿಸಲು ಜೀವ ಕೊಟ್ಟ ರಂಜಾನ್ ಸಾಬ್ ಅವರ ಬಲಿದಾನದ ಕಥೇನಾ ಇವರಿಗೆ ಯಾರೂ ಹೇಳಲಿಲ್ವಾ? ಅನ್ಯಾಯವಾಗಿ ಕರ್ನಾಟಕ ಕಳೆದುಕೊಂಡು ಮೂರು ತಾಲ್ಲೂಕುಗಳ ಕಥೇನಾ ಇವರಿಗೆ ಹೇಳಲಿಲ್ವಾ? ಬಳ್ಳಾರಿ ಅನ್ನೋದು ಹೇಗೂ ಭೂಪಟದಲ್ಲಿ ಕರ್ನಾಟಕದಲ್ಲಿ ಇದೆಯಲ್ಲಾ, ಅಷ್ಟು ಸಾಕು... ಅಂದ್ಕೊಂಡು ತೆಲುಗಲ್ಲಿ ಭಾಷಣ ಮಾಡ್ಬುಟ್ರಾ ಯಜಮಾನ್ರು? ಗಡಿಭಾಗದ ಊರುಗಳಲ್ಲಿ ಆಯ ರಾಜ್ಯದ ಭಾಷೇನೆ ಕಡೆಗಣಿಸಿ, ನೆರೆ ರಾಜ್ಯದ ಭಾಷೇಲಿ ಭಾಷಣ ಮಾಡೋದು ಸುಖಾಸುಮ್ಮನೇ ಭಾಷಾ ವೈಷಮ್ಯ ಹುಟ್ಟುಹಾಕುವಂಥಾ ಪ್ರಚೋದನಾತ್ಮಕ ಕ್ರಮಾ ಆಗಲ್ವಾ? ಯಾಕೆ ಈ ರಾಷ್ಟ್ರೀಯ ನಾಯಕರು ಹೀಗೆ ಮಾಡುದ್ರು ಅಂತಾ ಕರ್ನಾಟಕದ ಒಬ್ಬರಾದರೂ ಬಿಜೆಪಿ ಧುರೀಣರು ಕೇಳುತ್ತಾರಾ ಅಂತಾ ಕುತೂಹಲ ಆಗ್ತಿದೆ ಗುರೂ!

ಇದೇನು ರಾಷ್ಟ್ರೀಯ ವಿಷಯಾನಾ?

"ಅಯ್ಯೋ, ನಿಮಗೇನಾದ್ರೂ ತಲೆ ಕೆಟ್ಟಿದೆಯಾ? ರಾಷ್ಟ್ರೀಯ ಪಕ್ಷಾ ಅಂದ್ರೆ ಅದುಕ್ಕೆ ಪ್ರಾದೇಶಿಕ ಚಿಂತನೆ ಇರಬಾರದು ಅಂತಾ ಗೊತ್ತಿಲ್ವಾ? ವೆಂಕಯ್ಯನಾಯ್ಡು ಅವರೇ ನಾನು ರಾಷ್ಟ್ರೀಯ ವಿಷಯಗಳಲ್ಲಿ ಮಾತ್ರಾ ತಲೆ ಹಾಕ್ತೀನಿ ಅಂದಿಲ್ವಾ ಪಾಪಾ, ಅದುಕ್ಕೆ ರಾಷ್ಟ್ರೀಯ ಮಟ್ಟದ ಭಾಷಣಾನಾ ಕನ್ನಡನಾಡೊಳಗೆ ಬಂದು ತೆಲುಗಲ್ಲಿ ಮಾಡ್ತಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿಯವರು ಮಹಾರಾಷ್ಟ್ರದ ನಿಲುವನ್ನು ಪರೋಕ್ಷವಾಗಿ ಬೆಂಬಲುಸ್ತಾರೆ. ಇದುನ್ನ ಪ್ರಶ್ನಿಸೋದುಂಟಾ? ಅದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರೋದಿಲ್ವಾ" ಅಂತೀರಾ ಗುರೂ! ಅದೂ ದಿಟಾನೆ ಬುಡಿ!!

ಅಬ್ಬಾ! ಅಂತೂ ಬಂತು ಕನ್ನಡದ್ದೇ ವ್ಯಾಕರಣ!!


ಕನ್ನಡ ನುಡಿಯನ್ನು ವೈಜ್ಞಾನಿಕವಾಗಿ, ಅದರದೇ ನೆಲೆಯಲ್ಲಿ ಅಧ್ಯಯನ ಮಾಡುತ್ತಿರುವ ಕೆಲವೇ ನುಡಿಯರಿಗರಲ್ಲಿ ಮುಂಚೂಣಿಯಲ್ಲಿರುವವರು ಡಾ. ಡಿ ಎನ್ ಶಂಕರ್ ಭಟ್. ಈ ಹಿಂದೆ ಇವರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಹೊತ್ತಗೆಯಲ್ಲಿ ಇದುವರೆಗೂ ನಮಗೆ ಕಲಿಸಲಾಗುತ್ತಿದ್ದ ವ್ಯಾಕರಣದ ಮೂಲನೆಲೆ ಕನ್ನಡದ್ದೇ ಅಲ್ಲ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿದ್ದರು ಮತ್ತು ಕನ್ನಡಕ್ಕೆ ಅದರದೇ ನೆಲೆಯಲ್ಲಿ ವ್ಯಾಕರಣವನ್ನು ಬರೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟಿದ್ದರು. ಇದೀಗ ಕನ್ನಡದ್ದೇ ನೆಲೆಯ ಕನ್ನಡದ ವ್ಯಾಕರಣದ ಹೊತ್ತಗೆಯನ್ನು ಬರೆಯಲು ಮುಂದಾಗಿದ್ದಾರೆ. ಅದರ ಮೊದಲ ಭಾಗ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಈ ಹೊತ್ತಗೆಯಲ್ಲೇನಿದೆ?

ಈ ಹೊತ್ತಗೆಯ ಮೊದಲಲ್ಲಿ ಶಂಕರ ಭಟ್ ಅವರು ಹೀಗಂದಿದ್ದಾರೆ :
ಸೊಲ್ಲರಿಮೆಯ ಈ ಹೊತ್ತಗೆಯಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಹೇಗೆ ಉಂಟು ಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದೇನೆ.ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮೊರೆ ಹೋಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ
ಪದಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲದು.
ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.
ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.

ಇದು ಬರಿಯ ಮೊದಲ ಕಂತು!
ಕನ್ನಡ ಬರಹದ ಸೊಲ್ಲರಿಮೆಯ ಮೊದಲ ಕಂತು ಮಾತ್ರವೇ ಈ ಹೊತ್ತಗೆಯಲ್ಲಿ ಅಚ್ಚಾಗಿದೆ. ಇದರಲ್ಲಿ ಪ್ರಮುಖವಾಗಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ, ಹೆಸರುಪದಗಳ ಕುರಿತ ಭಾಗಗಳಿವೆ. ಶ್ರೀಯುತ ಶಂಕರ್ ಭಟ್ ಅವರು ಮುಂದಿನ ಕಂತುಗಳ ರಚನೆಯಲ್ಲಿ ತೊಡಗಿದ್ದಾರೆ. ಸದ್ಯದಲ್ಲೇ ಎರಡನೇ ಭಾಗವೂ ಸಿದ್ಧವಾಗಲಿದೆ. ಹೆಗ್ಗೋಡಿನ ಬಾಶಾ ಪ್ರಕಾಶನದವರು ಹೊರತಂದಿರುವ ಈ ಹೊತ್ತಗೆಯನ್ನು ಮಂಗಳೂರಿನ ಅತ್ರಿ ಬುಕ್ ಸೆಂಟರ್ ಅವರು ಹಂಚಿಕೆ/ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ನವಕರ್ನಾಟಕ, ಟೋಟಲ್ ಕನ್ನಡ.ಕಾಂ ಮಳಿಗೆಗಳೂ ಸೇರಿದಂತೆ ಹೆಸರಾಂತ ಹೊತ್ತಗೆಯಂಗಡಿಗಳಲ್ಲಿ ಸಿಗುತ್ತಿದೆ. ಕನ್ನಡದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

ಭಾರತದ ಒಪ್ಪುಕೂಟ ಮತ್ತು ಸ್ವಾತಂತ್ರ್ಯ!!

ಇವತ್ತು ಭಾರತ ದೇಶದ 64ನೇ ಸ್ವಾತಂತ್ರ್ಯ ದಿನಾಚರಣೆ. ಎಲ್ಲೆಡೆ ಮೂರ್ಬಣ್ಣದ ಬಾವುಟ ಮುಗಿಲೆತ್ತರಕ್ಕೆ ಹಾರಾಡುತ್ತಿದೆ. ಕೆಂಪುಕೋಟೆಯ ಮೇಲಿಂದ, ಮಾಣಿಕ್ ಶಾ ಬಯಲಿಂದ ದೇಶಪ್ರೇಮದ ಕರೆ, ಜೈ ಹಿಂದ್ ಎಂಬ ಕೂಗು ಮುಗಿಲು ಮುಟ್ಟುತ್ತಿವೆ. ಆದ್ರೆ ಇದೇ ಸಮಯದಲ್ಲಿ ಕೇಂದ್ರಸರ್ಕಾರವು ರಾಜ್ಯಗಳ ಆರ್ಥಿಕ ಸ್ವತಂತ್ರವನ್ನು ಮೊಟಕು ಮಾಡಕ್ಕೆ ಹುನ್ನಾರ ನಡೆಸಿ ಸ್ವಾತಂತ್ರ್ಯ ಅನ್ನೋದನ್ನೇ ವಿಡಂಬನೆ ಮಾಡಕ್ಕೆ ಮುಂದಾಗಿದೆ ಗುರೂ! ವಿಷಯ ಏನೂಂದ್ರೆ ಕಳೆದ ವಾರ "ಸರಕು ಮತ್ತು ಸೇವಾ ತೆರಿಗೆ" ಗೆ ಸಂಬಂಧಿಸಿದ್ದ ಒಂದು ತಿದ್ದುಪಡಿಯನ್ನು ಸಂವಿಧಾನಕ್ಕೆ ಮಾಡಲು ಕೇಂದ್ರಸರ್ಕಾರ ಮುಂದಾಗಿದೆ. ಈ ತಿದ್ದುಪಡಿಯಲ್ಲಿ ಕೇಂದ್ರದ ಅರ್ಥಸಚಿವರಿಗೆ ರಾಜ್ಯಗಳ ಸಮಿತಿಯ ನಿಲುವನ್ನು, ಅದಕ್ಕೆ ಬಹುಮತ ಇದ್ದಾಗಲೂ, ತಿರಸ್ಕರಿಸೋ... ವಿಟೋ ಹಕ್ಕನ್ನು ಕೊಡಮಾಡಲಾಗಿದೆ. ಸದ್ಯಕ್ಕೆ ಇದನ್ನು ರಾಜ್ಯಗಳು ತಿರಸ್ಕರಿಸಿವೆ ಅನ್ನೋ ಸುದ್ದಿಯೇನೋ ಬಂದಿದೆ.

ಒಪ್ಪುಕೂಟವೆಂದರೆ ಅಧಿಕಾರ ವಿಕೇಂದ್ರೀಕರಣ!

ಭಾರತದ ಸ್ವರೂಪ ಒಪ್ಪುಕೂಟದ್ದು. ಈ ಸ್ವರೂಪ ಯಾರೋ ಕೊಟ್ಟುಹೋದ ಕೊಡುಗೆ ಅಲ್ಲಾ. ಬೇರೆ ಬೇರೆ ನುಡಿ, ಪ್ರದೇಶ, ವಾತಾವರಣ, ಸಂಸ್ಕೃತಿ, ಆಚರಣೆ, ನಂಬಿಕೆಗಳ ಜನಾಂಗಗಳಿರೋ ಭಾರತಕ್ಕೆ ಇದು ಅನಿವಾರ್ಯವಾದ ಸ್ವರೂಪ ಇದು. ಹಾಗಾಗಿ ಇಲ್ಲಿ ಒಪ್ಪುಕೂಟದ ಅಡಿಪಾಯವೇ ಸಮಾನ ಗೌರವ ಮತ್ತು ಆರ್ಥಿಕ ಸ್ವಾಯತ್ತತೆ. ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣ. ಕೇಂದ್ರಸರ್ಕಾರ ಹೆಚ್ಚು ಹೆಚ್ಚು ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಬದಲಿಗೆ ಇರೋ ಅಧಿಕಾರವನ್ನು ಕಿತ್ತುಕೊಳ್ಳುವ ಈ ಮನಸ್ಥಿತಿ ಒಪ್ಪುಕೂಟದ ಕಲ್ಪನೆಗೆ ವಿರುದ್ಧವಾಗಿದೆ. ಈಗಾಗಲೇ ಇರುವ ಅಧಿಕಾರಗಳನ್ನು ಮತ್ತಷ್ಟು ಬಲಪಡಿಸೋ ಬದಲು ಹೀಗೆ ರಾಜ್ಯಗಳನ್ನು ಬಲಹೀನಗೊಳಿಸೋದು ಮುಂದೆ ಸಾಗೋ ಪ್ರಗತಿ ರಥಾನ ಹಿಂದೆ ಹಿಂದೆ ಓಡಿಸೋ ಹಾಗಿದೆ...

ಕನ್ನಡ ಚಿತ್ರರಂಗದ ಸಮಸ್ಯೆ!

ಇದುವರೆಗೆ...

ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ E&Y ಮತ್ತು FICCI ಒಂದು ವರದಿಯನ್ನು ಹೊರತಂದಿದ್ದು ಅದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಇರುವ ಮಾಹಿತಿ ತಪ್ಪಾಗಿದ್ದು, ಉದ್ಯಮದ ಬೆಳವಣಿಗೆಗೆ ಮಾರಕವಾಗಿತ್ತು. ಈ ವರದಿಯನ್ನು ಚಿತ್ರರಂಗದ ಗಣ್ಯರ ಜೊತೆ ಬಳಗ ಹಂಚಿಕೊಳ್ಳಲು ಮುಂದಾಯಿತು. ಕರ್ನಾಟಕ ಚಲನಚಿತ್ರ ಅಕಾಡಮಿಯು ಇದರಲ್ಲಿ ಆಸಕ್ತಿ ತೋರಿ ಚಿತ್ರರಂಗದ ಎಲ್ಲಾ ಪ್ರಮುಖ ಕ್ಷೇತ್ರಗಳ ಪ್ರತಿನಿಧಿ ಸಭೆಯನ್ನು ಕರೆದು ವರದಿ ಬಗ್ಗೆ ಮಾಹಿತಿ ಹಂಚಿಕೊಂಡಿತು. ಆಗ ಸರಿಯಾದ ಮಾಹಿತಿ ನೀಡಲು ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಲಾಯಿತು. ಬಳಗ ಮತ್ತು ಅಕಾಡಮಿಗಳು ಒಗ್ಗೂಡಿ ಏಳು ತಿಂಗಳು ಶ್ರಮಿಸಿ "ಕನ್ನಡ ಚಿತ್ರರಂಗ: ಒಂದು ಸಮೀಕ್ಷೆ" ಯನ್ನು ಹೊರತಂದವು.

ಸಮೀಕ್ಷೆಯ ಬಿಡುಗಡೆ ಮತ್ತು ಪ್ರತಿಕ್ರಿಯೆ!

ಸದರಿ ಸಮೀಕ್ಷೆಯನ್ನು ಅಕಾಡಮಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯ್ತು. ಸಮಿತಿಯ ಸಮೀಕ್ಷೆಯಲ್ಲಿ ಮೂಡಿಬಂದಿದ್ದ ಕೆಲ ಅಂಶಗಳ ಬಗ್ಗೆ ಕೆಲವರಿಂದ ವಿರೋಧ ಮೂಡಿಬಂದಿತು. ಹಾಗಾಗಿ ವರದಿಯನ್ನು ಅಕಾಡಮಿ ಹಿಂಪಡೆಯಿತು.

ಕನ್ನಡ ಚಿತ್ರರಂಗಕ್ಕೆ ಬೇಡವಾದ ಸತ್ಯ!

ಕನ್ನಡ ಚಿತ್ರರಂಗಕ್ಕೆ E&Y ಮತ್ತು FICCI ನೀಡಿದ ವರದಿಯ ಅಪಾಯದ ಬಗ್ಗೆಯಾಗಲೀ, ಆ ವರದಿಗೆ ಉತ್ತರ ನೀಡಬೇಕಾದ ಅಗತ್ಯದ ಬಗ್ಗೆಯಾಗಲೀ ಅರಿವಿದ್ದಂತಿಲ್ಲ. ಅಕಾಡಮಿ ಮತ್ತು ಬಳಗ ನಡೆಸಿದ ಸಮೀಕ್ಷೆಯಲ್ಲಿನ ಅಭಿಪ್ರಾಯಗಳನ್ನು ತೂಗಿ ನೋಡಬೇಕೆನ್ನುವ, ನಿಜಕ್ಕೂ ಚಿತ್ರರಂಗದ ಸಮಸ್ಯೆಗಳೇನು? ಎದುರಿಸಬೇಕಾದ ಸವಾಲುಗಳೇನು? ಎಂದು ಯೋಚಿಸಬೇಕೆಂಬ
ಮನಸ್ಥಿತಿ ಇರುವಂತೆಯೂ ಕಾಣಲಿಲ್ಲ. ಮುಂದೆ ಬರಲಿರುವ ದಿನಗಳು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತಂದಾವು ಅದನ್ನು ಎದುರಿಸಲು ಒಂದಾಗಿ ಯೋಚಿಸೋಣ ಎನ್ನುವ ಅರಿವೂ ಕಾಣಲಿಲ್ಲ.

ಚಿತ್ರರಂಗದ ಮುಂದಿರುವ ಸವಾಲು!

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ವಿಧಿಸಿರುವ ಪ್ರಿಂಟ್ ಸಂಖ್ಯೆಯ, ಏಳುವಾರದ ಗಡುವಿನ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಇರುವುದಿಲ್ಲ. ಇದರಿಂದಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿ ತಮಿಳು, ತೆಲುಗು, ಇಂಗ್ಲೀಷ್, ಹಿಂದೀ ಇತ್ಯಾದಿ ಚಿತ್ರಗಳು ರಾರಾಜಿಸುವುದರ ಜೊತೆಯಲ್ಲೇ ಇಡೀ ಕನ್ನಡ ಜನತೆ ನಿಧಾನವಾಗಿ ಕನ್ನಡ ಚಿತ್ರಗಳಿಂದ ದೂರವಾಗುವ ಸಾಧ್ಯತೆಗಳು ಕಾಣುತ್ತಿವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಈಗಲೇ ಇಲ್ಲದಂತಾಗಿದೆ. ಇದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಸದಸ್ಯರನ್ನು ಒಮ್ಮೆಗೇ ಅಮಾನತ್ತು ಗೊಳಿಸಿದಾಗ ಸಾಬೀತಾಗಿದೆ. ಗೋವಾ ಚಿತ್ರೋತ್ಸವದಲ್ಲಿ ಆಗುತ್ತಿರುವ ಅಪಮಾನಗಳಿಗಂತೂ ಲೆಕ್ಕವೇ ಇಲ್ಲ. ಪಾಲಿಸಿ ಮಾಡುವಾಗ ನಮ್ಮವರ ಮಾತಿಗೆ ಸರ್ಕಾರ ಯಾಕಾದರೂ ಬೆಲೆ ಕೊಟ್ಟೀತು. "ನಾವು ತೆಗೆಯೋ ಚಿತ್ರಗಳ ರಿಮೇಕೆಂಬ ಎಂಜಲು ತಿನ್ನುವವವರು ನೀವು" ಎನ್ನುವ ಅವಹೇಳನ ಅದೆಷ್ಟು ಕಡೆ ತಾನೇ ಆಗಿಲ್ಲ. ನಮ್ಮ ಚಿತ್ರರಂಗ ಉದ್ಧಾರವಾಗಲು ಇದೀಗ ಗಂಭೀರವಾಗಿ ಚಿಂತಿಸಲು ಸಕಾಲ.

ಏನೇನಾಗಬೇಕು?

ಕನ್ನಡ ಚಿತ್ರರಂಗದಲ್ಲಿ ಹೊಸಬರ, ಹೊಸತನದ ಚಿತ್ರಗಳು ತಯಾರಾಗಬೇಕಾಗಿದೆ. ವೃತ್ತಿಪರತೆ ಹೆಚ್ಚಾಗಬೇಕಿದೆ. ಪ್ರತಿಭಾ ಶೋಧ, ತರಬೇತಿಗಳಿಗೆ ಗಮನ ಕೊಡಬೇಕಾಗಿದೆ. ಹಣಕಾಸು ವ್ಯವಸ್ಥೆಯೂ ಮೀಟರ್ ಬಡ್ಡಿ ರೂಪದಲ್ಲಿ ಹರಡಿಕೊಂಡಿರುವುದು ನಿಂತು ಸಂಸ್ಥಾ ಹಣಕಾಸು ವ್ಯವಸ್ಥೆಗೆ ಸಾಗಬೇಕಿದೆ. ತಯಾರಿಕೆಯ ವೆಚ್ಚ ಕೆಟ್ಟ ಯೋಜನೆಯಿಂದಾಗಿ ಹೆಚ್ಚಾಗದಂತೆ ಸಿನಿಮಾ ನಿರ್ಮಾಣದ ತರಬೇತಿಗಳು ನಡೆಯಬೇಕಾಗಿದೆ. ಚಿತ್ರಮಂದಿರಗಳ ಅವ್ಯವಸ್ಥೆ, ಟಿಕೆಟ್ ಮಾರಾಟದಲ್ಲಿನ ಹುಳುಕುಗಳನ್ನು ಇಲ್ಲವಾಗಿಸಬೇಕಾಗಿದೆ. ವಿತರಕ, ಪ್ರದರ್ಶಕ, ನಿರ್ಮಾಪಕರ ನಡುವೆ ಯೋಗ್ಯವಾದ ರೀತಿಯಲ್ಲಿ ಲಾಭ ಹಂಚಿಕೆ, ಕಾರ್ಮಿಕರಿಗೆ ಗುಂಪುವಿಮೆ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕನ್ನಡ ಚಿತ್ರಗಳ ಮಾರುಕಟ್ಟೆಗಳನ್ನು ನಾಡಿನೊಳಗಡೆ ಗಟ್ಟಿಮಾಡಿಕೊಳ್ಳಬೇಕಾಗಿದೆ. ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಬೇಕಾಗಿದೆ. ಅಂತರ್ಜಾಲ, ಆಡಿಯೋ ವೀಡಿಯೋ ಮಾರುಕಟ್ಟೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಪುಟ್ಟ ಪುಟ್ಟ ಚಿತ್ರಮಂದಿರಗಳನ್ನು ರಾಜ್ಯದ ಎಲ್ಲೆಡೆ ಕಟ್ಟುವ ಮೂಲಕ ಚಿತ್ರಮಂದಿರಗಳ ಕೊರತೆ ನೀಗಿಸಬೇಕಾಗಿದೆ. ಹೀಗೆ... ಮಾಡಲು ಹತ್ತಾರು ಕೆಲಸಗಳಿವೆ. ಇದನ್ನು ಬಿಟ್ಟು ಗತವೈಭವದಲ್ಲೇ ತೇಲಾಡಿಕೊಂಡು ಇರ್ತೀವಿ, ಕಾನೂನು ಬಾಹಿರವೂ ನ್ಯಾಯಬಾಹಿರವೂ ಆದ ಮಾರ್ಗದಲ್ಲಿ ಸ್ಪರ್ಧೆ ತಡೀತೀನಿ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ.

ಕನ್ನಡ ಚಿತ್ರರಂಗವು ಕೆಲವು ಸ್ವಹಿತಾಸಕ್ತಿಯ ನಾಯಕರ ಮಾತುಗಳಿಗೆ ಮರುಳಾಗದೆ ಇಡೀ ಚಿತ್ರರಂಗದ ನಾಳೆಗಳ ಬಗ್ಗೆ ಒಂದು ಆರೋಗ್ಯಕರವಾದ ಚರ್ಚೆಗೆ ತನ್ನನ್ನು ತಾನು ತೆರೆದುಕೊಂಡಿದ್ದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಾದರೂ ಇದೆ ಅನ್ನಿಸುವುದಿಲ್ಲವೇನು? ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯು ಕನ್ನಡದಲ್ಲೇ ಇರಬೇಕಾದ್ದು ಕನ್ನಡಿಗರು ಹಕ್ಕು ಎಂಬುದನ್ನೂ, ಈಗಿರುವಂತೆಯೇ ಪರಭಾಷಾ ಚಿತ್ರಗಳು ಆಯಾ ಭಾಷೆಗಳಲ್ಲೇ ಕನ್ನಡ ನಾಡಿನ ಹಳ್ಳಿಹಳ್ಳಿಗಳಲ್ಲಿ ನಡೆಯುವುದು ಮುಂದಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡವೆಲ್ಲಿ ಉಳಿದೀತು? ಕನ್ನಡ ಚಿತ್ರರಂಗವೆಲ್ಲಿ ಉಳಿದೀತು? ಅನಿಸುವುದಿಲ್ಲವೇ?
Related Posts with Thumbnails