ಸಂಸ್ಕೃತ ವಿವಿ : ಬೇಕೆಂದವರಿಗೊಂದು ಪ್ರತ್ಯುತ್ತರ

ಕರ್ನಾಟಕ ರಾಜ್ಯ ಸರ್ಕಾರವು ಸಂಸ್ಕೃತ ವೇದ ವಿಶ್ವವಿದ್ಯಾಲಯವೊಂದನ್ನು ಶುರುಮಾಡಲು ಮುಂದಾಗಿದೆ. ಇದು ಬೇಕೇ ಬೇಡವೇ ಎಂಬ ಬಗ್ಗೆ ವಿಜಯಕರ್ನಾಟಕ ದಿನಪತ್ರಿಕೆಯು ಒಂದು ಸಂವಾದವನ್ನು ನಡೆಸಿತು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ಪ್ರೊ. ಎನ್.ಎಸ್ ರಘುನಾಥ್ ಅವರು ಈ ಬಗ್ಗೆ ಮಂಡಿಸಿದ್ದ ಅಪ್ರಕಟಿತ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಶ್ರೀಯುತರು NCERTನಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಕಲಿಕೆಯರಿಗರು. ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸಿದ್ದರೂ ಪ್ರಕಟ ಮಾಡುವ ದೊಡ್ಡಮನಸ್ಸನ್ನು ಆ ಪತ್ರಿಕೆಯು ಮಾಡಿಲ್ಲವೆಂಬುದನ್ನು ತಿಳಿಸಲು ಕೂಡ ಶ್ರೀಯುತರು ಇಷ್ಟಪಡುತ್ತಾರೆ. ಈ ಬರಹದಲ್ಲಿರುವ ಅಭಿಪ್ರಾಯಗಳು ಪ್ರೊ. ರಘುನಾಥ್ ಅವರದು. ಅವರನ್ನು ಸಂಪರ್ಕ ಮಾಡಬೇಕಾದರೆ ಅವರಿಗೆ ಮಿಂಚೆ ಬರೆಯಿರಿ. -- ಸಂಪಾದಕ, ಏನ್ ಗುರು

"ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಸ್ಕೃತ ವಿವಿ ಪೂರಕವಾಗಲಿ" (ಡಾ ಎಸ್ ಎಲ್ ಭೈರಪ್ಪ, ವಿಕ 10.08.2009) ಭೈರಪ್ಪನವರ ಲೇಖನವು ತನ್ನ ತಲೆಬರಹ ಹೇಳುವಂತೆ ಕನ್ನಡ ಭಾಷೆಯ ಬೆಳವಣಿಗೆಗೆ ಏನಾದರೂ ಆಗುವುದಾದರೆ ಅದು ಆಗಬಾರದು ಎಂದು ಯಾರೂ ಹೇಳುವುದಿಲ್ಲ, ಹೇಳಲು ಸಾಧ್ಯವಿಲ್ಲ. ಆದರೆ ಅದು ಸಂಸ್ಕೃತದ ಮೂಲಕ ಹೇಗೆ ಆಗುತ್ತದೆ ಎಂದು ಭೈರಪ್ಪನವರು ತಮ್ಮ ಲೇಖನದಲ್ಲಿ ಎಲ್ಲೂ ಹೇಳುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಅವರ ಬರವಣಿಗೆಗೆ ಸಾಧ್ಯವಾಗಿಲ್ಲ. ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಏಕೆ ಆರಂಭಿಸಬೇಕು ಎನ್ನುವುದಕ್ಕೆ ಅವರ ಲೇಖನದಲ್ಲಿ ಎಲ್ಲೂ ತಾರ್ಕಿಕ ಅಥವಾ ವೈಜ್ಞಾನಿಕ ಸಮರ್ಥನೆ ಇಲ್ಲ. ಹಾಗೆ ನೋಡಿದರೆ ವಿವಿಯನ್ನು ಸ್ಥಾಪಿಸಲು ಅವರ ಲೇಖನದಲ್ಲಿ ಒಂದು ವಾದವೇ ಇಲ್ಲ. ಆದರೂ ಅವರು ಹೇಳುತ್ತಿರುವ ಕೆಲವು ಅಂಶಗಳನ್ನು ಇಲ್ಲಿ ಚರ್ಚೆ ಮಾಡುತ್ತೇನೆ. ಸಂಸ್ಕೃತ ವಿವಿ ಸ್ಥಾಪನೆಯ ಬಗ್ಗೆ
“ಎಷ್ಟೋ ಕನ್ನಡದ ತೂಕವುಳ್ಳ ವಿದ್ವಾಂಸರು ಮತ್ತು ಸಾಹಿತಿಗಳು ಮೌನವಾಗಿದ್ದಾರೆ.”
ಆದುದರಿಂದ “ಮೌನಂ ಸಮ್ಮತಿ ಲಕ್ಷಣಂ” ಎಂದಿದ್ದಾರೆ. ಇದು ಗಂಭೀರವಾದ ಹೇಳಿಕೆ. ಯಾರೀ ತೂಕದವರು? ಹಾಗಾದರೆ ತೂಕವಿಲ್ಲದವರು ಯಾರು? ಹೆಸರು ಹೇಳಲು ಭೈರಪ್ಪನವರು ಏಕೆ ಹಿಂಜರಿದಿದ್ದಾರೆ? ಭೈರಪ್ಪನವರೂ ಸಹ ಭ್ರಷ್ಟತೆಯ ಬಗ್ಗೆ ಮೌನವಾಗಿದ್ದಾರೆ. ಗಣಿಗಳು ಲೂಟಿಯಾಗುತ್ತಿರುವ ಬಗ್ಗೆ ಮೌನವಾಗಿಯೆ ಇದ್ದಾರೆ. ಇದರ ಅರ್ಥ “ಮೌನಂ ಸಮ್ಮತಿ ಲಕ್ಷಣಂ” ಎಂದು ಗ್ರಹಿಸಬಹುದೆ? ಇಂಥ ತುಕ್ಕು ಹಿಡಿದ ಕ್ಲೀಶೆ ತುಂಬಿದ ಭಾಷೆಯಲ್ಲಿ ಬರೆದಿರುವ ಬಾಲಿಶ ಹೇಳಿಕೆಗಳು ಲೇಖನದಲ್ಲಿ ಬೇಕಾದಷ್ಟು ಇವೆ. ಇವರ ಮತ್ತೊಂದು ಹೇಳಿಕೆ: “ಸಂಸ್ಕೃತ ವ್ಯಾಕರಣದ ಹಿನ್ನೆಲೆ ಇಲ್ಲದೆ ಭಾರತದ ಭಾಷಾ ಶಾಸ್ತ್ರದ ಅಧ್ಯಯನ ಸಾಧ್ಯವೆ?” ಇದಕ್ಕೆ ಇವರು ಕೊಡುವ ಉದಾಹರಣೆ “ಕನ್ನಡದಲ್ಲಿ ಎಂಎ ಮಾಡಿದವರನ್ನು ಕನ್ನಡದ ಹೊಸ ಪತ್ರಕರ್ತರನ್ನು ನಾನು ಪರೀಕ್ಷಿಸಿದ್ದೇನೆ.” ಇವರಿಗೆ ಕನಿಷ್ಟ ಸರಿಯೋ, ಕನಿಷ್ಠ, ಪುಷ್ಟಿಯೋ, ಪುಷ್ಠಿಯೋ, ಸೀತೆ ರೋಧಿಸಿದಳು, ರೋದಿಸಿದಳು” ಇತ್ಯಾದಿಗಳು ಗೊತ್ತಿಲ್ಲ ಎನ್ನುವುದನ್ನು ಹೇಳುತ್ತಾರೆ. ಇದನ್ನು ನಿಜವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಂಸ್ಕೃತಕ್ಕೂ ಈ ಸಮಸ್ಯೆಗೂ ಸಂಬಂಧ ಕಲ್ಪಿಸುವುದು ತರ್ಕಬದ್ದವಲ್ಲ. ಸಂಸ್ಕೃತ ಎಂಎ ಮಾಡಿರುವ ಪದವೀಧರರು ಆ ಭಾಷೆಯಲ್ಲಿ ಮಾತನಾಡುವಾಗ ಅಥವಾ ಬರೆಯುವಾಗ ಮಾಡಬಹುದಾದ ತಪ್ಪುಗಳನ್ನು ಇವರು ಇದೇ ರೀತಿ ಗಮನಿಸಲಿಲ್ಲವೇಕೆ? ಹಾಗೆ ಅವರು ಮಾಡುವ ತಪ್ಪುಗಳನ್ನು ಸರಿಪಡಿಸಲು ಯಾವ ಭಾಷೆ ಕಲಿಯಬೇಕು? ಇಂತಹ ಸಮಸ್ಯೆಗಳನ್ನು ಸುಧಾರಿಸಲು ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪ್ರಾಧ್ಯಾಪಕರುಗಳು ಅನುಸರಿಸುತ್ತಿರುವ ಮೆತೆಡಾಲಜಿ, ಅವರೇ ಬೋಧನೆಯಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ, ಅಂತಹವರನ್ನು ಪರಿಕ್ಷೆಯಲ್ಲಿ ಉತ್ತೀರ್ಣಗೊಳಿಸುತ್ತಿರುವ ಕಾರಣಗಳ ಬಗ್ಗೆ ವಿವಿಗಳು ಗಮನಿಸಬೇಕು. ಭೈರಪ್ಪನವರು ಹೇಳಿರುವ ವಿಷಯವನ್ನು ತಿದ್ದಬೇಕಾದರೆ ಎಂಎ ಪಠ್ಯಕ್ರಮವನ್ನು ಗಂಭೀರ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಅವಶ್ಯವೆನಿಸಿದರೆ ಪರೀಕ್ಷಾ ಕ್ರಮವನ್ನೂ ಸೇರಿಸಿ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಆದರೆ ಇದೆಲ್ಲ ಸಂಸ್ಕೃತ ಭಾಷೆ ಕಲಿತರೆ ಸರಿಹೋಗಿಬಿಡುತ್ತದೆ ಎನ್ನುವಷ್ಟು ಸರಳ ಮಾಡುವುದು ಅಂಧ ತತ್ವವಾದವಾಗುತ್ತದೆ. ಮತ್ತು ಒಂದು ಭಾಷೆಯ ಕಲಿಕೆಯನ್ನು ಅದರ ವ್ಯಾಕರಣವನ್ನು ಮತ್ತೊಂದು ಭಾಷೆಯ ಕಲಿಕೆಯಿಂದ ಸರಿಪಡಿಸಬೇಕು/ ಸರಿಪಡಿಸಬಹುದು ಎನ್ನುವ ವಾದ ಭಾಷಾವಿಜ್ಞಾನದ ಸಿದ್ಧಾಂತಗಳಲ್ಲಿ ಓದಿದ ನೆನೆಪು ನನಗಿಲ್ಲ.

ಭೈರಪ್ಪನವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಉದಾಹರಣೆ ತೆಗೆದುಕೊಂಡಿದ್ದಾರೆ. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದಿದ್ದಾರೆ. ಕಲಿಯಲಿ. ಭಾರತೀಯರು, ಯೂರೋಪಿಯನ್ನರು ಎಲ್ಲರು ಸಂಸ್ಕೃತವನ್ನೂ ಕಲಿಯಲಿ. ಯಾರೂ ಬೇಡವೆಂದಿಲ್ಲ. ಇಲ್ಲಿ ಸಂಸ್ಕೃತ ಕಲಿಯುವಿಕೆ ಮತ್ತು ವಿವಿಸ್ಥಾಪನೆಗಳ ಸ್ಥಾಪನೆಯ ನಡುವೆ ಗೊಂದಲ ಸೃಷ್ಟಿಸುವುದು ಬೇಡ. ಸಂಸ್ಕೃತ ಎಲ್ಲರೂ ಕಲಿಯಲಿ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ವಿವಿಯ ಸ್ಥಾಪನೆ ಬೇರೆ ಮಾತು. ಯೂರೋಪಿನಲ್ಲಿ ಎಲ್ಲೂ ಲ್ಯಾಟಿನ್ ವಿಶ್ವವಿದ್ಯಾಲಯ ಇದ್ದಂತೆ ಕಾಣುವುದಿಲ್ಲ. ಗ್ರೀಕ್ ಒಂದು ದೇಶದ ಜೀವಂತ ಭಾಷೆ. ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಯೂರೋಪಿನಲ್ಲಿ ರೋಮನ್ ಸಾಮ್ರಾಜ್ಯ ಕುಸಿದು ಬಿದ್ದಾಗ, ಲ್ಯಾಟಿನ್ ಭಾಷೆ ಸ್ಯ್ಪಾನಿಷ್, ಇಟ್ಯಾಲಿಯನ್, ಫ್ರೆಂಚ್, ರುಮೇನಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಾಗಿ ವಿಭಜನೆಯಾಯಿತು. ಅಂದರೆ ಅಸ್ತಿತ್ವದಲ್ಲಿದ್ದ ಈ ಭಾಷೆಗಳು ಪ್ರಮುಖ ಭಾಷೆಗಳಾಗಿ ಬೆಳೆದವು. ಈ ಭಾಷೆಗಳ ಜೊತೆ ಇಂಗ್ಲಿಷ್, ಜರ್ಮನ್ ಇತ್ಯಾದಿ ಭಾಷೆಗಳು ಸೇರಿದಂತೆ ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಿಕೊಂಡವು. ಕಾಲಕ್ರಮೇಣ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ವ್ಯಾಕರಣವನ್ನೂ ಈ ಭಾಷೆಗಳು ತಮ್ಮ ಭಾಷೆಗಳ ವ್ಯಾಕರಣ ಬರೆಯಲು ಅಳವಡಿಸಿಕೊಂಡುಬಿಟ್ಟವು. ಆಗ ಭಾಷಾವಿಜ್ಞಾನ ಎನ್ನುವುದು ಮೊಳಕೆಯ ರೂಪದಲ್ಲೂ ಇರಲಿಲ್ಲ. ಆದರೆ 20ನೇ ಶತಮಾನದ ಮಧ್ಯ ಭಾಗದಲ್ಲಿ ಭಾಷಾವಿಜ್ಞಾನ ಚೆನ್ನಾಗಿಯೆ ಬೆಳೆಯಿತು. ಅಲ್ಲಿಂದ ನೋಮ್ ಚಾಮ್ಸ್‌ಕಿಯವರ ಬರಹಗಳಿಂದಾಗಿ ಭಾಷಾವಿಜ್ಞಾನದಲ್ಲಿ ಆಮೂಲಾಗ್ರ ಬದಲಾವಣೆ ಆಯಿತು. ಆಯಾ ಭಾಷೆಗಳಿಗೆ ಆಯಾ ಭಾಷೆಗಳನ್ನೇ ಆಧರಿಸಿ ವ್ಯಾಕರಣ ಬರೆಯುವ ಆವಶ್ಯಕತೆಯನ್ನು ವಿದ್ವಾಂಸರು ಕಂಡುಕೊಂಡರು. ಹದಿನೆಂಟನೇ ಶತಮಾನದಲ್ಲಿಯೆ ಪತ್ತೆಯಾಗಿದ್ದರೂ ಮತ್ತೊಂದು ಶತಮಾನದ ನಂತರ ಪಾಣಿನಿಯ ವ್ಯಾಕರಣ ಇವರಿಗೆ ಪ್ರಮುಖ ಮಾದರಿಯಾಯಿತು. ಈತನಷ್ಟು ಪರಿಪೂರ್ಣ ವೈಯ್ಯಾಕರಣಿ ವಿಶ್ವದಲ್ಲಿ ಮತ್ತೊಬ್ಬನಿಲ್ಲ ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ. ಪಾಣಿನಿಯ ವ್ಯಾಕರಣ ಯಾವುದೇ ಸಿದ್ದಾಂತದ ಮೇಲೆ ರಚಿತವಾಗಿಲ್ಲ. ಅದು ಭಾಷೆ ಹೇಗೆ ವರ್ತಿಸುತ್ತದೆ ಎನ್ನುವುದರ ಸೂಕ್ಷ್ಮಾವಲೋಕನದ ಮೇಲೆ ರಚಿತವಾಗಿದೆ ಎನ್ನುವ ಅಂಶ ವಿಶ್ವ ಭಾಷಾವಿಜ್ಞಾನಿಗಳಿಗೆ ಕಣ್ಣು ತೆರೆಸುವ ಹೊಸ ಸಂಶೋಧನೆಗೆಯ ಸಾಧನವಾಯಿತು. ಇದನ್ನೇ ಅವರು ಅನುಸರಿಸಿದರು. ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್, ಡೇವಿಡ್ ಕ್ರಿಸ್ಟಲ್ ಇತ್ಯಾದಿಯವರು ಇದನ್ನು ಇಂಗ್ಲಿಷ್ ಭಾಷೆಯ ರಚನೆ ಮತ್ತು ಅದು ಬಳಕೆಯಾಗುತ್ತಿರುವ ಮತ್ತು ವರ್ತಿಸುವ ರೀತಿಗಳನ್ನು ವಿವರವಾಗಿ ಪರೀಕ್ಷಿಸುವುದರ ಮೂಲಕ ಹೊಸ ವ್ಯಾಕರಣವನ್ನು ರಚಿಸಿ ತೋರಿಸಿದರು. ವಿವರಣಾತ್ಮಕ (Descriptive) ವ್ಯಾಕರಣ ಅಸ್ತಿತ್ವಕ್ಕೆ ಬಂದಿತು. ವ್ಯಾಕರಣ ರಚಿಸಲು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೇಗೆ ವರ್ತಿಸುತ್ತವೆ ಎನ್ನುವುದು ಇವರಿಗೆ ಅಪ್ರಸ್ತುತವಾಯಿತು. ಇದರಿಂದಾಗಿ ಇಂಗ್ಲಿಷ್ ಭಾಷೆಯ ‘ಬೈಬಲ್’ ಎಂದೇ ಹೆಸರುವಾಸಿಯಾಗಿದ್ದ ಸಲಹಾತ್ಮಕ (ಪ್ರಿಸ್ಕ್ರಿಪ್ಟಿವ್) (prescriptive) ವೈಯ್ಯಾಕರಣಿಗಳಾದ ರೆನ್ ಅಂಡ್ ಮಾರ್ಟಿನ್ ನಿವೃತ್ತರಾಗಿ ಕಸದ ಬುಟ್ಟಿ ಸೇರಿದರು. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಒಂದು ವಿಧದಲ್ಲಿ ಪಾಣಿನಿಯೂ ಇದಕ್ಕೆ ಪರೋಕ್ಷವಾಗಿ ಕಾರಣಕರ್ತ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಸಂಸ್ಕೃತ ಆಧಾರಿತ ಕನ್ನಡ ವ್ಯಾಕರಣಗಳನ್ನು ಈಗ ಯಾರು ಅನುಸರಿಸುತ್ತಿದ್ದಾರೆ? ತೀನಂಶ್ರೀ ಅವರ ‘ಕನ್ನಡ ವ್ಯಾಕರಣ’ ಈಗ ಯಾರು ಬಳಸುತ್ತಿದ್ದಾರೆ? ಡಿ ಎನ್ ಶಂಕರ ಭಟ್ ಅವರ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಬಂದಾಗ ಭೈರಪ್ಪನವರು ಏಕೆ ಇದನ್ನು ತಿರಸ್ಕರಿಸಬೇಕು ಎಂದು ಹೇಳಲಿಲ್ಲ? ನಮಗೆ ಗೊತ್ತಿರುವಂತೆ ಭಟ್ ಅವರು ಗಮನಿಸಬಹುದಾದಂಥ ಉತ್ತಮ ಭಾಷಾವಿಜ್ಞಾನಿಗಳು. ಆದುದರಿಂದ ಅವರು ಈ ರೀತಿ ವ್ಯಾಕರಣ ಬರೆಯಲು ಕಾರಣವೇನು ಎನ್ನುವುದನ್ನು ನೋಡಬೇಕು. ಸರಿ ಎನಿಸದಿದ್ದರೆ ಅವರು ಚರ್ಚಿಸುತ್ತಿರುವ ಭಾಷಾವಿಜ್ಞಾನದ ನೆಲೆಯಿಂದಲೇ ಅದನ್ನು ಏಕೆ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅದರ ಬದಲು ಭೈರಪ್ಪನವರು:
“ನಿಮ್ಮ ಸಂಸ್ಕೃತ ವ್ಯಾಕರಣ ನಿಯಮಗಳನ್ನು ನಾವು ಯಾಕೆ ಅನುಸರಿಸಬೇಕು? ನಮಗೆ ಇಷ್ಟ ಬಂದಂತೆ ನಾವು ಬಳಸುತ್ತೇವೆ; ಎಂಬ ಉಡಾಫೆಯನ್ನು ಎಷ್ಟೋ ಜನ ವೀರ ಕನ್ನಡ ಭಕ್ತರು ಹೊಡೆಯುತ್ತಾರೆ.”
ಎನ್ನುತ್ತಾರೆ. ಯಾಕೆ ಅನುಸರಿಸಬೇಕು ಎನ್ನುವುದನ್ನು ಮಾತ್ರ ಅವರ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ. ಈ ವಾಕ್ಯದ ಭಾಷೆ ಮತ್ತು ಧ್ವನಿಗಳು, ಭೈರಪ್ಪನವರಂಥ ವಿದ್ವಾಂಸರ ಘನತೆಗೆ ತಕ್ಕುದಾದುದು ಎನಿಸುವುದಿಲ್ಲ. ಇದು ಪೂರ್ವಾಗ್ರಹ ಪೀಡಿತ ಸಿನಿಕತನದ ತೀರ್ಮಾನ ಎನಿಸುತ್ತದೆ. ಕಾದಂಬರಿಕಾರರು ಭಾಷಾವಿಜ್ಞಾನದ ಬಗ್ಗೆ ಬರೆಯುವಾಗ ಅದೊಂದು ವಿಶಾಲವಾಗಿ ಬೆಳೆದಿರುವ ವಿಷಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಶಂಕರ ಭಟ್ ಅವರು ತಮ್ಮ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಕೃತಿಗೆ ಪೀಠಿಕೆ ಬರೆಯುತ್ತ:
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದು ದರಿಂದಾಗಿ ಕನ್ನಡ ವಯ್ಯಾಕರಣಿಗಳು ಕನ್ನಡದ ವ್ಯಾಕರಣ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳುವಲ್ಲಿ ಅಸಮರ್ಥರಾಗಿದ್ದಾರೆ ಎಂಬುದನ್ನು ನಿದರ್ಶನಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶ.” (ಪು 23)
ಎಂದು ಬರೆಯುತ್ತಾರೆ. (ಇದಕ್ಕೆ ಕರ್ನಾಟಕ ಸಾಹಿತ್ಯ ಅಕೆಡೆಮಿ ಬಹುಮಾನ ಬಂದಾಗ ನಾನೂ ಆ ಸಮಿತಿಯ ಸದಸ್ಯನಾಗಿ ಅದನ್ನು ಅನುಮೋದಿಸಿ ನಾನೆ ವಾದ ಮಂಡಿಸಿದ್ದೆ.) ಇವರು ಕೊಟ್ಟಿರುವ ನಿದರ್ಶನಗಳನ್ನು ಭೈರಪ್ಪನವರು ಈಗ, ಅಲ್ಲಗಳೆದು ತೋರಿಸಬೇಕಾಗುತ್ತದೆ. ಆದರೆ ಅವರ ಸುದೀರ್ಘ ಲೇಖನದಲ್ಲಿ ಸಿದ್ಧಾಂತ ಅಥವಾ/ ಮತ್ತು ತರ್ಕಗಳಿಗೆ ಸ್ಥಾನವಿಲ್ಲ. ಬರೆದಿರುವ ಕೇವಲ ಹೇಳಿಕೆಗಳು ಇವೆ. ಆದುದರಿಂದ ಕನ್ನಡದಲ್ಲಿ ಸಂಸ್ಕೃತ ಭಾಷೆಯನ್ನಾಧರಿಸಿ ಬರೆದ ವ್ಯಾಕರಣ ಹಳಸಿಹೋಗಿರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಭೈರಪ್ಪನವರು ತಮ್ಮ ಲೇಖನವನ್ನು ಅಚ್ಚಿಗೆ ಕಳುಹಿಸುವುದಕ್ಕೆ ಮುಂಚೆ ಗಮನಿಸಬೇಕಿತ್ತು. ಯಾವುದೋ ಎರಡು ಭಾಷೆಗಳನ್ನು ಏಕರೀತಿಯಲ್ಲಿ ನೋಡುವುದು ಮತ್ತು ಶಾಸ್ತ್ರೀಯ ಭಾಷೆ ಎಂದು ಸಂಸ್ಕೃತವನ್ನು ಆರಾಧಿಸುವುದು ಸನಾತನ ಪದ್ಧತಿ. ಆದರೆ ಭೈರಪ್ಪನವರ ಲೇಖನದಲ್ಲಿ ಅದೇ ಪ್ರಮುಖ ಅಂಶ. ವಿವಿಯ ಪರ ಬರೆಯುತ್ತಿರುವವರಲ್ಲಿ ಅನೇಕರು ಸಂಸ್ಕೃತದ ಸನಾತನ ಚರಿತ್ರೆಯನ್ನು ವೈಭವೀಕರಿಸುವದೇ ವಿವಿಯನ್ನು ಸ್ಥಾಪಿಸಲು ಪ್ರಮುಖ ಕಾರಣವಾಗಿಟ್ಟುಕೊಂಡು ಬರೆದಿದ್ದಾರೆ. ಒಂದು ಭಾಷೆಯ ಪ್ರಭಾವವನ್ನು ಮತ್ತೊಂದು ಭಾಷೆಯ ಮೇಲೆ ಗುರುತಿಸಬಹುದು. ಸಂಸ್ಕೃತ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಶತಮಾನಗಳ ಬಳಕೆಯಿಂದ ಈ ಭಾಷೆಗಳು ತಮ್ಮದೇ ಆದ ಅಸ್ತಿತ್ವವನ್ನು ಪಡೆದುಕೊಂಡಿವೆ. ಅಂದರೆ ಎಲ್ಲ ಭಾಷೆಗಳನ್ನೂ ಅಯಾ ಭಾಷೆಗಳ ರಚನೆ, ಶಬ್ದವಿನ್ಯಾಸ, ಪದವಿನ್ಯಾಸ, ಪದಗಳ ಜೋಡಣೆ, ಅರ್ಥ ಮತ್ತು ಅವುಗಳು ಬಳಕೆಯಾಗುವ ರೀತಿ, ಇತ್ಯಾದಿಗಳನ್ನು ಗಮನಿಸಿಯೆ ವ್ಯಾಕರಣ ರಚಿಸಬೇಕಾಗುತ್ತದೆ; ರಚಿಸಲಾಗಿದೆ. ಉದಾಹರಣೆಗೆ ಈಗ ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್ ವ್ಯಾಕರಣಗಳನ್ನು ನೋಡಬಹುದು. ಈ ವಿಚಾರದಲ್ಲಿ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ದೂರ ಸರಿದಿದ್ದಾರೆ. ಇದರ ಜೊತೆಗೆ ಸಂಸ್ಕೃತದಿಂದ ದಿನದಿಂದ ದಿನಕೆ ದೂರ ಹೋಗುತ್ತಿರುವ ತಮಿಳು ಭಾಷೆಯ ಬಗ್ಗೆ ಭೈರಪ್ಪನವರು ಚಕಾರವೆತ್ತದಿರುವುದು ಗಮನಾರ್ಹ.
“ಸಂಸ್ಕ್ರೃತವೆಂದರೆ ವೇದ, ವೇದವೆಂದರೆ ನಾವು ವಿರೋಧಿಸಲು ಮಾತ್ರ ಅರ್ಹವಾದದ್ದು, ಎಂಬ ಮನಃಸ್ಥಿತಿಯನ್ನು ಒಂದು ಗುಂಪು ಬಂಡಾಯದ ಕಾಲದಿಂದ ಕನ್ನಡದಲ್ಲಿ ಗದ್ದಲ ಮಾಡುತ್ತಾ ಸೆಮಿನಾರುಗಳಲ್ಲಿ ಭಾಷಣಗಳಲ್ಲಿ ಅನಂತರ ಕ್ರಮೇಣವಾಗಿ ಶಾಲಾ ಕಾಲೇಜುಗಳ ಪ್ರವಚನಗಳಲ್ಲೂ ಸೇರಿಕೊಂಡು ವಿಷಬೀಜವನ್ನು ಬಿತ್ತುತ್ತಾ ಬೆಳೆದಿದೆ.”
ನಮ್ಮ ನಾಗರಿಕತೆಯಲ್ಲಿ “ವಿಷಬೀಜವನ್ನು ಬಿತ್ತುತ್ತಾ” ಸಮುದಾಯಗಳ ಬದುಕನ್ನೆ ಕತ್ತು ಹಿಸುಕಿ ಕೊಂದವರಾರು ಎನ್ನುವುದನ್ನು ಚರಿತ್ರೆಯ ಕಡೆ ಮುಖ ಮಾಡಿ ನೋಡಿದರೆ ಕೆಲವು ಕ್ರೂರವಾದ ಮತ್ತು ಅಮಾನುಷ ಎನಿಸುವ ಸತ್ಯಗಳನ್ನು ಎದುರಿಸಬೇಕಾಗಬಹುದು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಚರಿತ್ರೆಯಲ್ಲಿ ಎಂದೂ ದೇವ ಭಾಷೆಗಳೆಂದು ಹಣೆಪಟ್ಟಿ ಕಟ್ಟಿಸಿಕೊಂಡವಲ್ಲ; ಅವುಗಳ ಕಲಿಕೆ ಗುರುಕುಲಾಶ್ರಮಗಳ ಪ್ರವೇಶಕ್ಕೆ ಅರ್ಹರಾದ ಸಮುದಾಯಕ್ಕೆ ಸೇರಿದ ಜನಗಳಿಗೆ ಮಾತ್ರ ಮೀಸಲಾಗಿರಲಿಲ್ಲ. ಬೇರೆಯವರು ಅವನ್ನು ಕಲಿತರೆ ಭಾಷೆಯೇ ಅಪವಿತ್ರವಾಗಿಬಿಡುತ್ತದೆ ಎನ್ನುವ ಅವಿದ್ಯಾವಂತ ಮೂಢನಂಬಿಕೆಯನ್ನು ರೋಮ್ ಮತ್ತು ಗ್ರೀಸ್ ದೇಶದವರು ಎಂದೂ ಎಲ್ಲಿಯೂ ಬಿತ್ತಲಿಲ್ಲ. ಹಿಂದುಳಿದ, ಆಗ ‘ಅಸ್ಪೃಶ್ಯ’ರೆಂದು ಕರೆಯಲ್ಪಟ್ಟ ದಲಿತರು ಆ ಭಾಷೆಗಳಲ್ಲಿರುವ ಸಾಹಿತ್ಯವನ್ನು ಓದುವುದನ್ನು ಕೇಳಿದರೂ ಶಿಕ್ಷಿಸಬೇಕು, ಅವರ ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯಬೇಕು ಎಂದು ಬರೆದು ಯಾರೂ ಸ್ಮೃತಿಗಳನ್ನು ಸೃಷ್ಟಿಸಲಿಲ್ಲ. ಸಂಸ್ಕೃತವನ್ನು ಈ ರೀತಿಯ ಹಿಂಸೆಗೆ ಒಳಪಡಿಸಿ, ಅದನ್ನು ಒಂದು ಸಮುದಾಯದ ಗೃಹ ಬಂಧನದಲ್ಲಿಟ್ಟು, ಉಸಿರು ಕಟ್ಟಿಸಿ ಸಾಂಸ್ಕೃತಿಕವಾಗಿ ಜೀವ ಹಿಂಡಿ ವಿಷಹಾಕಿದವರು ಇವರಲ್ಲವೆ? ಅತ್ಯಂತ ಸಮೃದ್ಧವಾಗಿ ಬೆಳೆದಿದ್ದ ಆ ಭಾಷೆಗೆ “ಮೃತ ಭಾಷೆ” ಎನ್ನುವ ಹಣೆಪಟ್ಟಿ ಬರಲು ಕಾರಣರು ಇವರೆ ಅಲ್ಲವೆ!? ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಂತೆ ದೇಶದ ಎಲ್ಲ ಪ್ರಜೆಗಳಿಗೂ ಇದನ್ನು ಕಲಿಸಿದ್ದರೆ ಬಹುಶಃ ಸಂಸ್ಕೃತ ಈ ದಿನ ಭಾರತದ ದೇಶ ಭಾಷೆಯಾಗಿರಬಹುದಿತ್ತು ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಅದಕ್ಕೆ ಪಾವಿತ್ರತೆಯ ವಿಷ ಹಾಕಿ ಕೊಂದವರಾರು? ಈಗ ಅದಕ್ಕೆ ಒಂದು ವಿವಿಯನ್ನು ಸ್ಥಾಪಿಸಲು ಹೊರಟರೆ ಅದಕ್ಕೆ ಜನಬೆಂಬಲ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತರಾಗಿ ಅವಮರ್ಯಾದೆಯಲ್ಲಿ ಬೆಂದು ಈಗ ಕೇವಲ ಕೆಲವು ದಶಕಗಳಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ಸಮುದಾಯಗಳಿಗೆ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಎಂದಾಗ ಅನುಮಾನ ಹುಟ್ಟುವುದು ಸಹಜವೆ.

ಈಗ ನಮ್ಮ ವಿವಿಗಳಲ್ಲಿ ಸಂಸ್ಕೃತದ ವಿಭಾಗಗಳಿವೆ. ಅದಕ್ಕೆ ಎಷ್ಟುಜನ ನೊಂದಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿ. ಇದಕ್ಕೆ ಭೈರಪ್ಪನವರು ಹೇಳುವುದು:
“ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ, ಕಾಲೇಜಿನಲ್ಲಿ ಬೆಳೆಯಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ ಇರುವುದಕ್ಕೇ ವಿದ್ಯಾರ್ಥಿಗಳಿಲ್ಲವೆಂಬ ಕೂಗುಹಾಕುವ ಹುನ್ನಾರಕ್ಕೆ ಏನನ್ನಬೇಕು?”
ಕೊಲೆ, ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡ ರಾಜಕಾರಣಿಗಳು “ಇದು ವಿರೋಧ ಪಕ್ಷದವರ ರಾಜಕೀಯ ಹುನ್ನಾರ” ಎಂದು ಬೊಬ್ಬೆ ಹಾಕುತ್ತಾರೆ. ಈ ರೀತಿ ವಾಕ್ಯಗಳಿಗೆ ಏನನ್ನಬೇಕು? ರಾಜಕಾರಣಿಗಳಿಗಿಂತ ಭೈರಪ್ಪನವರ ಭಾಷೆ ಭಿನ್ನವೇನಲ್ಲ. ಮೈಸೂರು ವಿವಿಯ ಸಂಸ್ಕೃತ ವಿಭಾಗದಲ್ಲಿ ಹಿಂದಿನ 5 ವರ್ಷಗಳ ನೊಂದಣಿಯನ್ನು ನೋಡಿದರೆ ಯಾವ ವರ್ಷವೂ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿಲ್ಲ. ಕೆಲವರ್ಷ 2-3 ವಿದ್ಯಾರ್ಥಿಗಳು ಸೇರಿರುವುದುಂಟು. ಬೇರೆ ವಿವಿಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಸಂಸ್ಕೃತವನ್ನು ಓದಬೇಡಿ ಎಂದು ವಿದ್ಯಾರ್ಥಿಗಳನ್ನು ತಡೆದಿರುವವರಾರು ಎಂಬುದನ್ನು ಭೈರಪ್ಪನವರು ತಿಳಿಸಬೇಕು. ಆಧಾರವಿಲ್ಲದೆ ಆಪಾದನೆ ಹೊರಿಸುವುದು ವಿದ್ವಾಂಸರಿಗೆ ತಕ್ಕುದಲ್ಲ. ಇರುವ ಒಂದು ವಿಭಾಗಕ್ಕೆ 5 ಜನಕ್ಕಿಂತ ಹೆಚ್ಚು ಬರದಿದ್ದಾಗ ಒಂದು ವಿಶ್ವವಿದ್ಯಾಲಯವನ್ನೆ ಆರಂಭಿಸುವುದು ಎಷ್ಟು ಸೂಕ್ತ? ಇಂಗ್ಲಿಷ್ ದಬ್ಬಾಳಿಕೆಯಿಂದ ಕನ್ನಡ ಈಗ ಮೂಲೆಗುಂಪಾಗುತ್ತಿದೆ. ಆದರೆ ಅದನ್ನು ಇಂಗ್ಲಿಷ್ ಬಲ್ಲವರು ಕನ್ನಡ ಕಲಿಯಬೇಡಿ ಎಂದು ತಡೆಯುವ ಹುನ್ನಾರ ಮಾಡುತ್ತಿದ್ದಾರೆ ಎನ್ನಲಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಆರ್ಥಿಕ ಬದಲಾವಣೆಗಳು, ಸಂವಹನ, ತಂತ್ರಜ್ಞಾನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು ವಿವಿಧ ದೇಶಗಳಲ್ಲಿ ಎಲ್ಲ ಸ್ಥಳೀಯ ಭಾಷೆಗಳನ್ನೂ ತಿನ್ನುತ್ತಿವೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಇತ್ಯಾದಿ ಭಾಷೆಗಳಿಗೆ ಇದನ್ನು ಎದುರಿಸುವ ಆಂತರಿಕ ಶಕ್ತಿ ಇದೆಯೆ? ಈ ಜೀವಂತ ಭಾಷೆಗಳನ್ನು ಆಡುತ್ತಿರುವ ಕೋಟಿಗಟ್ಟಲೆ ಜನರಿಗೆ ಆ ಶಕ್ತಿ ಇದೆಯೆ? ಎನ್ನುವುದನ್ನು ನಾವು ಪರಿಗಣಿಸಬೇಕು. ಜನರೇ ಅದನ್ನು ತೀರ್ಮಾನ ಮಾಡಬೇಕು. ಸಂಸ್ಕೃತ ಇವನ್ನು ರಕ್ಷಿಸುವುದಿಲ್ಲ.

ಕರ್ನಾಟಕದಲ್ಲಿ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ತೆರೆಯಬೇಕೆ ಬೇಡವೆ ಎನ್ನುವುದರ ಬಗ್ಗೆ ಕರ್ನಾಟಕದಾದ್ಯಂತ ಈಗ ವಾದವಿವಾದಗಳು ಎದ್ದಿವೆ. ಸರ್ಕಾರವಂತೂ ಈಗಾಗಲೇ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿ ವಿವಿಯನ್ನು ಆರಂಭಿಸಲು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಹಿಂದಿನ ಕಾರಣವಾದಿ ಚಿಂತನೆ ಏನು ಎನ್ನುವುದು ಕರ್ನಾಟಕದ ಜನತೆಗೆ, ಚಿಂತಕರಿಗೆ ಸ್ಪಷ್ಟವಾಗಿಲ್ಲ. ಇದರ ಪರವಾಗಿ ವಾದಮಾಡುವ ಚಿಂತಕರು ಸಂಸ್ಕೃತ ಭಾಷೆಯ ಪುರಾತನತೆಯನ್ನು ಮುಂದಿಟ್ಟುಕೊಂಡು ಅದನ್ನು ವೈಭವೀಕರಿಸಿ ಭಾವುಕತನದಿಂದ ವಾದವನ್ನು ಮುಂದಿಟ್ಟಿದ್ದಾರೆ. ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ:
" ‘ಇನ್ನು ಮುಂದೆ ಸಂಸ್ಕೃತದ ಎಲ್ಲ ಸತ್ವವನ್ನೂ ಕನ್ನಡಕ್ಕೆ ಕಂಡುಕೊಳ್ಳಬೇಕು. ಆದ್ದರಿಂದ ಸಂಸ್ಕೃತದ ಸಾರವನ್ನೆಲ್ಲ ಕನ್ನಡದ ಮೂಲಕ ಪ್ರಚಾರ ಮಾಡಬೇಕು. ಸಾಹಿತ್ಯ ಭಾಗ, ಶಾಸ್ತ್ರಭಾಗ - ಈ ಎರಡೂ ಕ್ಷೇತ್ರಗಳ ಉನ್ನತ ಗ್ರಂಥಗಳೆಲ್ಲವನ್ನೂ ಕನ್ನಡಕ್ಕೆ ತಂದು ಅವುಗಳ ಉಪಯೋಗವನ್ನು ಪಡೆಯಬೇಕು. ಕನ್ನಡ ಮಾತಿನಲ್ಲಿ ಸಂಸ್ಕೃತ ಹಿರಿಮೆಯನ್ನು ಸಾಧಿಸಬೇಕು.’ ಈ ಅಭಿಪ್ರಾಯವು ನಿಜವಾಗಿ ಅನುವಾದ ಕಾರ್ಯ ಸಾಹಿತ್ಯ ಭಾಗದಲ್ಲಿ ಸ್ವಲ್ಪ ನಡೆಯಬೇಕು. ಆದರೆ ಶಾಸ್ತ್ರ ಭಾಗದಲ್ಲಿ ಏನೇನೂ ಆಗಲಿಲ್ಲ."
ಎನ್ನುವುದು ಪ್ರೊ ಜಿ ವೆಂಕಟಸುಬ್ಬಯ್ಯನವರ ಅಭಿಪ್ರಾಯ. (ವಿಕ, 17.08.2009) ಆದರೆ ಈ ಶಾಸ್ತ್ರಭಾಗದಲ್ಲಿ ಸಮಕಾಲೀನ ಕನ್ನಡ ಜನತೆಗೆ ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳು, ಭಾರತದ ಸಂವಿಧಾನದ ಮೌಲ್ಯಗಳು ಹೇಗೆ ಗಟ್ಟಿಯಾಗಲು ಸಾಧ್ಯ ಎನ್ನುವುದನ್ನು ಹೇಳುವುದಿಲ್ಲ. ನಾವಿರುವುದು ವೇದಗಳು ಮತ್ತು ಸ್ಮೃತಿಗಳು ಬರೆದ ಊಳಿಗಮಾನ್ಯ ಪದ್ಧತಿಯ ಕಾಲವಲ್ಲ. ಆಗ ಶೋಷಣೆಯೆ ನಮ್ಮ ಸಂಸ್ಕೃತಿಯಾಗಿತ್ತು.
“ಜ್ಞಾನಾರ್ಜನೆ ಪ್ರಸ್ತುತ ಕಾಲದ ಲಾಭ ದೃಷ್ಟಿಯಿಂದ ಮಾತ್ರವೇ ಮಾಡುವಂಥದಲ್ಲ. ಸಂಸ್ಕೃತದಂಥ ವಿಶ್ವಮರ್ಯಾದಿತ ಪ್ರಾಚೀನ ಭಾಷೆ ಮತ್ತು ಅದರ ಮೂಲಕ ಸೃಷ್ಟಿಯಾದ ಜ್ಞಾನ ಈ ದೇಶದ ಅಮೂಲ್ಯ ಆಸ್ತಿ.”
ಎನ್ನುವ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು (ವಿಕ, 25.08.2009) ಈ ಸ್ಮೃತಿಗಳು ಸೃಷ್ಟಿಸಿದ ಕ್ರೂರ ಅಮಾನವೀಯ ಭಯಾನಕ “ಶಾಸ್ತ್ರಭಾಗ”ದ ವ್ಯವಸ್ಥೆಯನ್ನು ನಮ್ಮ “ಆಸ್ತಿ” ಎಂದು 21ನೇ ಶತಮಾನದಲ್ಲಿ ಹೇಳುವುದಾದರೆ, ವಿಶ್ವವಿದ್ಯಾಲಯವನ್ನು ಇವರು ಏತಕ್ಕಾಗಿ ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ಮುಂದೆ ಮತ್ತೆ ಚರ್ಚಿಸುತ್ತೇನೆ.

ಈ “ಅಮೂಲ್ಯ ಆಸ್ತಿ”ಯನ್ನು ಓದಿದವರಿಗೆ ಭಾರತದ 90% ಜನಜೀವನದ ಚಿತ್ರ ಸಿಗುವುದೇ ಇಲ್ಲ. ಬೆಸ್ತರು, ಗಾಣಿಗರು, ಕುಂಚಿಟಿಗರು, ಕುರುಬರು, ಬುಡುಬುಡುಕೆಯವರು, ಹೊಲೆಯ, ಮಾದಿಗ, ಚಂಡಾಲ ಎನಿಸಿಕೊಂಡ ದಲಿತರು ಇತ್ಯಾದಿ ಜನರ ಬದುಕಿನ ದುರಂತದ ಚಿತ್ರ ಯಾವ ಸಂಸ್ಕೃತ ಕೃತಿಯಲ್ಲಿ ರೂಪಿತವಾಗಿದೆ ಎನ್ನುವುದನ್ನು ಭಟ್ಟರು ತೋರಿಸ ಬಲ್ಲರೆ? ಆದರೂ ಅದು ಅವರಿಗೆ “ಅಮೂಲ್ಯ ಆಸ್ತಿ”! ಇದು ಪ್ರತಿಗಾಮಿ ಧೋರಣೆ. ಕೇಂದ್ರದಲ್ಲಿ ಬಿಜೆಪಿ ನಾಯಕತ್ವದಲ್ಲಿ ಆಡಳಿತದಲ್ಲಿದ್ದ ಎನ್‌ಡಿಎ ಸರ್ಕಾರ ಸಹ ಎನ್‌ಸಿಇಆರ್‌ಟಿಯ ಮೂಲಕ ಸಂಸ್ಕೃತ ಕಲಿಕೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕೆಂದು ಯೋಚನೆ ಮಾಡಿತ್ತು. ಈ ವೇದ ಉಪನಿಷತ್ತುಗಳಲ್ಲಿರುವ ಅಥವಾ ಮಹಾಕಾವ್ಯಗಳಲ್ಲಿರುವ ಹಲವಾರು ಸತ್ಯಗಳನ್ನು ಇವರ ಚರಿತ್ರೆ ಪುಸ್ತಕಗಳಲ್ಲಿ ತಿರುಚಿ ಬರೆಯಲಾಯಿತು ಎನ್ನುವುದನ್ನು ಮರೆಯಲು ಸಾಧ್ಯವೇ? ಸಂಸ್ಕೃತ ವೇದ ವಿಶ್ವ ವಿದ್ಯಾಲಯದಲ್ಲಿ ಹೀಗಾಗುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ?

ಹೀಗಿದ್ದರೂ ಡಾ ಬಿ ವಿ ಕುಮಾರ ಸ್ವಾಮಿಯವರ (ವಿಕ, 22.08.2009) ಅನಿಸಿಕೆ :
“ಈ ಭಾಷೆಯಲಿ ರಚಿತವಾಗಿರುವ ಸಾಹಿತ್ಯಗಳು ಭಾರತದ ಇತಿಹಾಸದಲ್ಲಿ ಮಾನವ ಬೌದ್ದಿಕ ಸುವರ್ಣಯುಗವನ್ನು ಸೃಷ್ಟಿಸಿದವು ಎನ್ನುವುದು ಜಗತ್ತೇ ತಿಳಿದಿರುವ ವಿಷಯ. ಈ ಸಂಸ್ಕೃತ ‘ರಸಸಾರ’ದಿಂದ ವಂಚಿತರಾಗಿರುವ ಜನರ ಇಂದಿನ ಸಮಾಜ ಸೃಷ್ಟಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಚಿಂತಕರ-ಶಿಕ್ಷಣ ತಜ್ಞರ ಗುರಿಯಾಗಿತ್ತು.”
ನಿಜವಿರಬಹುದು. ಆದರೆ ಈ ‘ರಸಸಾರ’ವನ್ನು ಭಾರತದ ಶೇಕಡ ಎಷ್ಟು ಜನ ವಿದ್ಯಾರ್ಥಿಗಳಿಗೆ ಇವರು ಉಣಬಡಿಸಿದರು ಎನ್ನುವುದು ಮುಖ್ಯವಲ್ಲವೆ? ತಮ್ಮ ಜನಗಳನ್ನು ತಾವೇ ಪ್ರಾಣಿಗಳಂತೆ ನಡೆಸಿಕೊಂಡ ಇವರು ಬ್ರಿಟಿಷರನ್ನು ದೋಷಿಗಳನ್ನಾಗಿ ಮಾಡುವ ಅವಶ್ಯಕತೆ ಏನು? ಇವರ ಇನ್ನೊಂದು ವಾಕ್ಯ...
“ಮೌರ್ಯ ಸಾಮ್ರಾಜ್ಯದಲ್ಲಿ ನಳಂದ, ವಿಶ್ವವಿದ್ಯಾಲಯ ಸ್ಥಾಪಿಸಿ ಜಗತ್ತನ್ನೇ ಆಕರ್ಶೀಸಿತಂತೆ..”
ಅದೂ ನಿಜವೆ. ಆದರೆ ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಕೋರಿ ಬರುತ್ತಿದ್ದ 10 ಜನರಲ್ಲಿ 8 ಜನ ವಿದ್ಯಾರ್ಥಿಗಳನ್ನು ದ್ವಾರ ಪಂಡಿತರುಗಳು ಪ್ರವೇಶವೇ ಕೊಡದಂತೆ ಅಲ್ಲಿಂದಲೇ ಹಿಂದಕ್ಕೆ ಕಳುಹಿಸುತ್ತಿದ್ದರಂತೆ! ಹೀಗೆ ಹಿಂದಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಯಾರು? ಈ ಬಗ್ಗೆ ಸಂಶೋಧನೆ ನಡೆದಿದೆಯೆ? 3೦೦೦-4೦೦೦ ವರ್ಷಗಳಿಂದ ಭಾರತದ ಎಲ್ಲ ಮಕ್ಕಳಿಗೂ ಈ ‘ರಸಸಾರ’ ಸಿಕ್ಕಿದ್ದರೆ, ಈ ದಿನ 2೦ ಮಿಲಿಯನ್ ಮಕ್ಕಳು ಬೀದಿಯಲ್ಲಿರುತ್ತಿರಲಿಲ್ಲ; ಅಂಬೇಡ್ಕರ್ ಅವರು ಮೀಸಲು ಕೇಳುತ್ತಿರಲಿಲ್ಲ; ಮಂಡಲ್ ಉದಯವಾಗುತ್ತಿರಲಿಲ್ಲ. ಈ ಜನ ಸಂಸ್ಕೃತ ವಿವಿಗೆ ಹೇಗೆ ಬೆಂಬಲಕೊಡುತ್ತಾರೆ? ಯಾವ ಕಾರಣಕ್ಕಾಗಿ ಕೊಡಬೇಕು? ಇದುವರೆಗೂ ಇಲ್ಲದ ಸಂಸ್ಕೃತ ವೇದ ವಿಶ್ವ ವಿದ್ಯಾಲಯದ ಪ್ರಸ್ತಾವನೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ಏಕೆ ಆಗುತ್ತದೆ? ಲಕ್ಷ್ಮೀನಾರಾಯಣ ಭಟ್ಟರು, ಸತ್ಯನಾರಾಯಣ ಭಟ್ಟರು, ಕೊಕ್ಕಡ ವೆಂಕಟರಮಣ ಭಟ್, ಎಲ್ ಶೇಷಗಿರಿ ರಾವ್ ಅವರು, ಎಂ ಚಿದಾನಂದ ಮೂರ್ತಿಯವರು, ಭೈರಪ್ಪನವರು ಏಕೆ ಈ ಸಮಯದಲ್ಲೇ ಸಂಸ್ಕೃತ ವಿವಿಗೆ ಬೆಂಬಲ ಕೊಟ್ಟು ದ್ವನಿ ಎತ್ತಿದ್ದಾರೆ ಎನ್ನುವುದು ಅತ್ಯಂತ ಗಮನಾರ್ಹ.

ಭಾರತದಲ್ಲಿ ಈಗ 12 ಸಂಸ್ಕೃತ ವಿವಿಗಳಿವೆ. ಅವುಗಳಲ್ಲಿ ನಡೆಯುತ್ತಿರುವ ಸಂಶೋಧನೆ ಕಾರ್ಯಕ್ರಮಗಳನ್ನು ಬಲಪಡಿಸಲಿ. ನಮ್ಮ ವಿವಿಗಳಲ್ಲಿರುವ ಸಂಸ್ಕೃತದ ವಿಭಾಗಗಳಿಗೆ ಮತ್ತು ಮೈಸೂರಿನ ‘ಸಂಸ್ಕೃತ ಪಾಠಶಾಲೆ’, ಶೃಂಗೇರಿ ‘ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ’, ಉಡುಪಿ ‘ಪೂರ್ಣಪ್ರಜ್ಞ ವಿದ್ಯಾಪೀಠ’, ಬೆಂಗಳೂರಿನ ‘ಸಂಸ್ಕೃತ ಕಾಲೇಜು’, ಮೇಲುಕೋಟೆ ಇತ್ಯಾದಿ ಸಂಸ್ಥೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಆಧುನೀಕರಣಗೊಳಿಸಿ. ಅದರ ಪ್ರಾಚಾರ್ಯರು, ಪ್ರಾಧ್ಯಾಪಕರುಗಳಿಗೆ ಯುಜಿಸಿ ವೇತನಗಳನ್ನು ಕೊಡಿ. ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರೋತ್ಸಾಹವಾಗುವಂತೆ ಆರ್ಥಿಕ ನೆರವನ್ನು ಘೋಷಿಸಿ. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ಆವಶ್ಯಕತೆ ಈಗ ಇಲ್ಲ.

ಭೈರಪ್ಪನವರು ವಾದವಿವಾದಗಳನ್ನು ಕೊನೆಗಳಿಸುತ್ತ ‘ವಿವೇಕಯುಕ್ತ ಕೆಲಸವನ್ನು ಆರಂಭಿಸುವುದೇ ಒಳ್ಳೆಯದು’ (ವಿಕ, 06.09.2009) ಎನ್ನುವ ಲೇಖನದಲ್ಲಿ ಹಲವಾರು ವಿದ್ಯಾಂಸರು ಎತ್ತಿರುವ ಯಾವುದೇ ವಿರೋಧವನ್ನು ಎದುರಿಸದೆ ಸಿನಿಕತನದಲ್ಲಿ ಮತ್ತೆ ತಮ್ಮ ತೀರ್ಮಾನಗಳನ್ನು ಕೊಟ್ಟಿದ್ದಾರೆ. ಅಷ್ಟೇಅಲ್ಲ ಲೇಖನದಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. “ಬೇಡವೇ ಬೇಡವೆಂದೂ ಮೂವರು ವಾದಿಸಿದ್ದಾರೆ.” ಇವರ ಪ್ರಕಾರ ಇದು “ಅವರಲ್ಲಿ ನೂರಕ್ಕೆ ತೊಂಬತ್ತೈದು ಭಾಗ ಸಂಸ್ಕೃತ ವಿಶ್ವವಿದ್ಯಾಲಯವು ಬೇಕೆಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದಾರೆ.” ವಿಜಯ ಕರ್ನಾಟಕದಲ್ಲಿ ಬಂದ ಲೇಖನಗಳಲ್ಲಿ 7 ಜನ ಬೇಡವೆಂದಿದ್ದಾರೆ, 15 ಜನ ಬೇಕೆಂದಿದ್ದಾರೆ (73%.) ಇದು “ಮೂವರು” ಹೇಗಾಯಿತು? ಮತ್ತು ಇದು “ನೂರಕ್ಕೆ ತೊಂಬತ್ತೈದು ಭಾಗ” ಹೇಗಾಯಿತು? ಮಾರ್ಕ್ಸ್‌ವಾದಿಗಳನ್ನು ಮತ್ತು ಪ್ರಗತಿಪರರನ್ನು ಮನಸೋಇಚ್ಚೆ ಪೂರ್ವಾಗ್ರಹ ಪೀಡನೆಯಿಂದ ತೆಗಳುವುದು ಬಿಟ್ಟರೆ ಈ ಲೇಖನದಲ್ಲೂ ಯಾವುದೇ ಹುರುಳಿಲ್ಲ. ತರ್ಕಕ್ಕೂ ತಮಗೂ ಇರುವ ದೂರವನ್ನು ಹಾಗೆ ಉಳಿಸಿಕೊಂಡಿದ್ದಾರೆ. ವೈದಿಕ ಧರ್ಮವನ್ನು ಒರಟು ಒರಟಾಗಿ ವೈಭವೀಕರಿಸುತ್ತಿರುವ ಇವರಿಗೆ ಸಂಸ್ಕೃತ ವಿಶ್ವವಿದ್ಯಾಲಯವು ಬೇಕು ಎನ್ನುವುದಕ್ಕೆ ಸಮರ್ಪಕವಾದ ವಾದವೊಂದನ್ನು ಮಂಡಿಸಲು ಸಾಧ್ಯವಾಗಿಲ್ಲ ಎನ್ನುವುದು ಆಶ್ಚರ್ಯವೇನಲ್ಲ. ಬೈರಪ್ಪನವರನ್ನು ಈ ಚರ್ಚೆಯಲ್ಲಿ ಪ್ರೈಮ್ ಮೂವರ್ ಆಗಿ ಬಳಸಿಕೊಳ್ಳಲಾಗಿದೆ ಆದರೆ ಇದಕ್ಕೆ ಇಲ್ಲಿ ಪ್ರೈಮ್ ಅಪೋಸರ್ ಇಲ್ಲ. ಇದರ ಪರಿಣಾಮ ಚರ್ಚೆಯ ಕೊನೆಯಲ್ಲಿ ತೀರ್ಮಾನ ಕೊಡುವ ಅಧಿಕಾರ ಭೈರಪ್ಪನವರದಾಗುತ್ತದೆ.

ಮೈಸೂರು ದಸರಾ! ಈಗ ವೆಬ್‍ಸೈಟೂ ಸುಂದರಾ!!


2009ರ ಸಾಲಿನ ಮೈಸೂರು ದಸರ ಹಬ್ಬ ಭರ್ಜರಿಯಾಗಿ ನಡೀತಿದೆ. ಪ್ರವಾಸಿಗರಿಗೆ ಮಾಹಿತಿ ನೀಡಲು, ಅವರನ್ನು ಸೆಳೆಯಲು ಆಧುನಿಕ ತಂತ್ರಜ್ಞಾನವಾದ ಅಂತರ್ಜಾಲವನ್ನು ಈ ಬಾರಿಯೂ ಬಳಸಿದ್ದಾರೆ. ಇಂದು ನಾವೆಲ್ಲಾ ಖುಷಿ ಪಡೋಕೆ ಇರೋ ಕಾರಣ ಏನಪ್ಪಾ ಅಂದ್ರೆ ಈ ಅಂತರ್ಜಾಲ ತಾಣಾನ ರೂಪಿಸಿರೋ ಬಗೆ. ಹೌದೂ ಗುರು! ಈ ಸಲದ ವೆಬ್‍ಸೈಟ್ ಸೂಪರ್ ಆಗಿ ಮೂಡಿಬಂದಿದೆ. ಕಳೆದ ವರ್ಷದ ತಾಣ ನೋಡಿ ಇದು ನಮ್ಮ ದಸರಾ ಅನ್ಸೋ ಹಾಗಿಲ್ಲಾ, ಇಲ್ಯಾಕೆ ಕನ್ನಡಕ್ಕೆ ತಕ್ಕ ಸ್ಥಾನಮಾನ ಇಲ್ಲ. ಇರೋ ಕನ್ನಡದ ಕೊಂಡಿಗಳು ಯಾಕೆ ಕೆಲ್ಸ ಮಾಡ್ತಿಲ್ಲಾ ಅಂತ ಏನ್‍ಗುರೂನಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದುಕ್ಕೆ ಅದ್ಭುತವಾಗಿ ಸ್ಪಂದಿಸಿದ್ದ ಕನ್ನಡದ ಜನರನೇಕರು ಸದರಿ ಅಂತರ್ಜಾಲ ತಾಣ ರೂಪಿಸಿದವರಿಗೆ ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಸರಿಯಾಗಿ ಕನ್ನಡದಲ್ಲಿ ರೂಪಿಸಲು ಸಹಾಯಾನೂ ನೀಡಿದ್ರು. ನಿಮ್ಮೆಲ್ಲರ ಶ್ರಮದ ಫಲವಾಗಿ ಇಂದು ಈ ಬದಲಾವಣೆಯನ್ನು ಕಾಣ್ತಿದೀವಿ ಗುರು!

ಈ ತಾಣದಲ್ಲೇನಿದೆ?

ಈ ತಾಣದ ಡಿ-ಫಾಲ್ಟ್ ಭಾಷೆ ಕನ್ನಡ. ಮುಖಪುಟದಲ್ಲೇ ಬೇಕೆಂದವರಿಗೆ ಇಂಗ್ಲೀಷಿನ ಆಯ್ಕೆಯ ಅವಕಾಶವಿದೆ. ಈ ತಾಣದಲ್ಲಿ ಕನ್ನಡದಲ್ಲಿ ಬರೆದಿರೋ ಮಾಹಿತಿಗಳು ಕೂಡಾ ಉತ್ತಮವಾಗಿದೆ. ಎಲ್ಲಾ ಲಿಂಕುಗಳು ಕೆಲಸ ಮಾಡ್ತಿವೆ. ಈ ಬಾರಿ ಕಳೆದ ವರ್ಷ ಕಂಡಿದ್ದ ಬಹುಪಾಲು ತೊಂದರೆ-ಕೊರತೆಗಳನ್ನೂ ಸರಿಪಡಿಸಿದೆ ಗುರು. ನಿಜವಾಗ್ಲೂ ಮೈಸೂರು ದಸರಾ ಅಂತರ್ಜಾಲ ತಾಣ ಹುಡ್ಕೋರಿಗೆ ಇದು ಕನ್ನಡಿಗರ ನಾಡಹಬ್ಬ, ಇದರಲ್ಲಿ ವಿಶೇಷವಿದೆ, ವೈಭವವಿದೆ, ಸೊಗಡಿದೆ ಅನ್ನಿಸೋ ಹಾಗೆ ಇಡೀ ತಾಣವನ್ನು ರೂಪಿಸಲಾಗಿದೆ. ಅಷ್ಟೇ ಅಲ್ಲದೆ ಈ ಬಾರಿ ದಸರೆಯ ಮಹಿಮೆ ಮತ್ತು ಸೊಬಗುಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ನಿಲ್ಲಿಸಿ ಅಂತರ್ಜಾಲದಲ್ಲಿ ಹೊಸ ಬಗೆಯ ದಸರಾ ಮೆರವಣಿಗೆಯನ್ನೇ ನಡೆಸಿದೆ! ನಿಜಕ್ಕೂ ಇಂದು ಈ ತಾಣದ ವಿನ್ಯಾಸ ಮತ್ತು ಅದರ ಹಿಂದೆ ಆಗಿರುವ ಕೆಲಸ ಕನ್ನಡಿಗರನ್ನು ಜಗತ್ತಿನ ಎದುರು ಹೆಮ್ಮೆ ಪಡುವಂತೆ ಮಾಡಿದೆ. ಈ ವಿಷಯದಲ್ಲಿ ಮೈಸೂರು ದಸರಾ ಅಂತರ್ಜಾಲ ತಾಣ ರೂಪಿಸಿದೋರು ನಾಡಿನೆಲ್ಲರ ಅಭಿನಂದನೆಗಳಿಗೆ ಅರ್ಹರು. ಇವರಿಗೆ ಶಭಾಷ್... ಅಂತಾ ಹಂಗೇ ನೀವೊಂದು ಮಿಂಚೆ ಕಳುಸ್ಬುಡಿ ಗುರುಗಳೇ!

ಕೆ.ಪಿ.ಎಲ್ ಅನ್ನೋ ಕ್ರಿಕೆಟ್ ಹಬ್ಬ!!!ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೋರು ಈ ವರ್ಷದಿಂದ ಶುರು ಮಾಡಿರೋ ಕೆ.ಪಿ.ಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಸರಣಿ ಪಂದ್ಯಗಳು ನಿನ್ನೆ ಮುಗಿದವು. ಮೊದಲ ಬಾರಿಗೆ 20-20 ಮಾದರಿಯ ಈ ಸರಣಿಯಲ್ಲಿ ಬೆಂಗಳೂರು ಗ್ರಾಮಾಂತರ ತಂಡವಾದ ಬೆಂಗಳೂರು ಪ್ರಾವಿಡೆಂಟ್ ತಂಡದೋರು ಪ್ರಶಸ್ತಿ ಗೆದ್ದುಕೊಂಡರು. ಈ ಕೆ.ಪಿ.ಎಲ್‍ನ ಶುರುಮಾಡಿದ ಉದ್ದೇಶವೇ ಜಿಲ್ಲಾ ಪ್ರತಿಭೆಗಳ ಶೋಧ ಮತ್ತು ರಾಷ್ಟ್ರೀಯ ತಂಡಕ್ಕೆ ಪೂರೈಕೆ ಅನ್ನೋದು ಒಳ್ಳೇ ನಿಲುವಾಗಿದೆ ಮತ್ತು ಒಳ್ಳೆಯ ನಡೆಯಾಗಿದೆ. ಒಟ್ಟು 31 ಪಂದ್ಯಗಳು ಮತ್ತು ಅದರಲ್ಲೂ ತುಂಬಾ ರೋಮಾಂಚಕಾರಿಯಾಗಿ ಕೊನೆ ಎಸೆತದವರೆಗೂ ಕುತೂಹಲ ಕಾಯ್ದುಕೊಂಡ ಕೆಲಪಂದ್ಯಗಳೂ ನಡೆದವು. ನಮ್ಮವರೂ ಐ.ಪಿ.ಎಲ್‍ಗೆ ನಾವೇನು ಕಮ್ಮಿ ಇಲ್ಲ ಎಂದು ಸಡ್ಡು ಹೊಡೆದವರಂತೆ ಚಿಯರ್‍ಗರ್ಲ್‌ಗಳನ್ನು ಕರೆಸಿದ್ರು ಗುರು! ಹ ಹ್ಹಾ ಹ್ಹಾ... ಅಷ್ಟು ಬಣ್ಣತುಂಬುವ ಪ್ರಯತ್ನಗಳು ಇಲ್ಲಿ ನಡೆದವು!

ಮೆಚ್ಚಿಗೆಯಾದ ಅನೇಕ ಅಂಶಗಳು!

ಇಡೀ ಪಂದ್ಯಾವಳಿಯಲ್ಲಿ ಕನ್ನಡಕ್ಕೆ ಸುಮಾರಾಗಿ ಪ್ರಾಮುಖ್ಯತೆ ಸಿಕ್ಕಿದ್ದಂಗಿತ್ತು. ಕೆಪಿಎಲ್ ಹಾಡುಗಳು, ಎಲ್ಲ ತಂಡಗಳೋರು ಮಾಡಿಸಿಕೊಂಡಿದ್ದ ಹಾಡುಗಳು ಕನ್ನಡದಲ್ಲಿದ್ವು. ಆಟದ ಮೈದಾನದಲ್ಲೂ ವಿಜಯ ಕರ್ನಾಟಕ, ಅದೂ ಇದೂ ಅಂತ ಕನ್ನಡದ ಜಾಹೀರಾತುಗಳಿದ್ದವು. ಕನ್ನಡದ ಬಾವುಟಗಳು ಹಾರಾಡ್ತಿದ್ವು ಆಟದ ವೀಕ್ಷಕ ವಿವರಣೆಯಲ್ಲಿ ಕನ್ನಡವಿತ್ತು. ಈ ಪಂದ್ಯಾವಳಿಯಿಂದ ಹಳ್ಳಿಗಾಡಿನ ಅನೇಕ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಸಿಕ್ಕಲಿದೆ ಅನ್ನೋದೆಲ್ಲಾ ಖುಷಿ ವಿಷಯಾನೆ ಗುರು! ಇದು ಹೀಗೇ ಮುಂದುವರೀಲಿ... ಇದರ ಮೂಲಕ ನಮ್ಮ ನಾಡಿಂದ ಭಾರತೀಯ ಕ್ರಿಕೆಟ್ಟಿಗೆ ಒಳ್ಳೊಳ್ಳೆ ಆಟಗಾರರು ಸಿಗಲಿ!! ಯಾಕಂದ್ರೆ ಎರಡು ಕೋಟಿ ಜನರಿರೋ ಶ್ರೀಲಂಕಾ, ಆಸ್ಟ್ರೇಲಿಯಾ, 30 ಲಕ್ಷ ಜನರಿರೋ ವೆಸ್ಟ್‍ಇಂಡೀಸ್, 40 ಲಕ್ಷ ಜನರಿರೋ ನ್ಯೂಜಿಲ್ಯಾಂಡ್ ಮೊದಲಾದವು ಪ್ರಪಂಚದ ಬಲಿಷ್ಟ ತಂಡಗಳಾಗಿರೋವಾಗ 5 ಕೋಟಿ ಕನ್ನಡಿಗರ ಕರ್ನಾಟಕಕ್ಕೆ, ಭಾರತ ತಂಡದಲ್ಲಾಡೋ ಯೋಗ್ಯತೆಯಿರೋ ನಾಲ್ಕಾರು ಜನ ಆಟಗಾರರನ್ನು ಕೊಡಕ್ಕಾಗಲ್ವಾ ಗುರು?

ಸರಿಯಾಗಬೇಕಾದ ಕೆಲ ಅಂಶಗಳು

ಈ ಪಂದ್ಯಾವಳಿಗಳ ಪ್ರಾಯೋಜಕರಾದ ಮಂತ್ರಿ ಡೆವೆಲಪರ್ಸ್ ಅವರ ಜಾಹೀರಾತುಗಳು ಪಂದ್ಯದ ನಡುವೆ ಆಟದ ಮೈದಾನದಲ್ಲಿ ಹಾಕ್ತಾ ಇದ್ರು, ಅದಂತೂ ಪೂರ್ತಿ ಹಿಂದೀಲಿತ್ತು ಗುರು! ಅದ್ಯಾರಿಗೆ ಅರ್ಥ ಆಗ್ಲೀ ಅಂದ್ಕೊಂಡ್ರೋ ಏನೋ!! ಪುಣ್ಯಾತ್ಮರು. ಇನ್ನು ಆಟದ ನಡುನಡುವೆ ಹಾಡುಗಳನ್ನು ಹಾಕೋರು... ಕನ್ನಡದ ಹಾಡು ಹಾಕಿದಾಗೆಲ್ಲಾ ಜನಾ ಹೋ ಅಂತಾ ಖುಷಿ ಪಡ್ತಿದ್ರು. ಜಿಂಕೆ ಮರೀನಾ ಜಿಂಕೆ ಮರೀನಾ ಹಾಕಿದಾಗಂತೂ ಇಡೀ ಸ್ಟೇಡಿಯಂ ಎದ್ ಕುಣೀತಿತ್ತು. ಆದ್ರೆ ಅದ್ಯಾಕೋ ಅಲ್ಲಿನ ಕೆಲ ಪ್ರಭೃತಿಗಳು ಆಗಾಗ ಹಿಂದಿ ಹಾಡು ಹಾಕಿ ಜನರ ಉತ್ಸಾಹ ಬತ್ತುಸ್ತಿದ್ರು! ಈ ಜನ ಹಿಂದೀಜ್ವರ ಹಿಡ್ಸೋ ಪ್ರಯತ್ನಾ ಮಾತ್ರಾ ಇಲ್ಲೂ ಬಿಡಲಿಲ್ಲಾ ಅನ್ನೋದು ಬೇಸರದ ಸಂಗತಿ! ಒಂದೊಂದ್ ಮ್ಯಾಚ್ ಆದಮೇಲೂ ಆಟಗಾರರನ್ನು ಮಾತಾಡ್ಸೋರೂ, ಬಹುಮಾನ ಕೊಡೋರೂ ಕೊನೆಗೆ ಆಟಗಾರರೂ ಕೂಡಾ ಇಂಗ್ಲೀಷಲ್ಲಿ ಮಾತಾಡಿದ್ ಯಾಕೋ ಅನಗತ್ಯವಾಗಿತ್ತು ಅನ್ನುಸ್ತಿತ್ತು ಗುರು! ನಮ್ಮೋರು ಅರ್ಥ ಮಾಡ್ಕೋಬೇಕಾಗಿರೋದು ಇನ್ನೂ ಒಂದಿದೆ. ಈ ಪಂದ್ಯಗಳನ್ನು ಬೆಂಗಳೂರಿನಿಂದ ಆಚೆ ನಡ್ಸುದ್ರೆ ಹೆಚ್ಚು ಜನರನ್ನು ಸೆಳೆಯೋಕ್ ಆಗೋದು. ಬೆಂಗಳೂರಲ್ಲಿರೋ ಜನ ಇಂಟರ‍್ನ್ಯಾಷನಲ್ ಪಂದ್ಯ ನೋಡಿರೋರು, ಅವರನ್ನು ಇದಕ್ ಸೆಳೆಯೋದುಕ್ಕೆ ಹಿಂದೀ ಪಂದೀ, ಟುಸ್ಸು ಪುಸ್ಸು ಅಂತನ್ನೋ ಬದಲು ಸುಮ್ನೆ ಜಿಲ್ಲಾ ಕೇಂದ್ರಗಳಿಗೆ ಕೆ.ಪಿ.ಎಲ್‍ನ ಒಯ್ಯೋದ್ರಿಂದ ಹೆಚ್ಚು ಜನರನ್ನು ಮುಟ್ಟಬಹುದು. ಅಲ್ಲೆಲ್ಲಾ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ ಹಾಕ್ಬೋದಲ್ವಾ! ಒಟ್ನಲ್ಲಿ ಅಂದ್ಕೊಂಡ ಗುರೀನ ಮತ್ತಷ್ಟು ಪರಿಣಾಮಕಾರಿಯಾಗಿ ಮುಟ್ಟಕ್ಕೆ ನಮ್ಮತನದ ಸೊಗಡನ್ನು ಕೆ.ಪಿ.ಎಲ್‍ಗೆ ಒಸಿ ಜಾಸ್ತೀನೆ ಅಂಟುಸ್ಬೇಕಾಗಿದೆ ಗುರು!

ಮಗಧೀರ 50: ಹಬ್ಬ ಇಲ್ಯಾಕೆ ಬೇಕಿತ್ತು?

ಮಗಧೀರ ಅನ್ನೋ ತೆಲುಗು ಚಿತ್ರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಕನ್ನಡದ ಅನೇಕ ಉತ್ತಮ ಚಿತ್ರಗಳನ್ನು ಚಿತ್ರ ಮಂದಿರದಿಂದ ಒಕ್ಕಲೆಬ್ಬಿಸಿ, ಕನ್ನಡ ಚಿತ್ರ ಮಾರುಕಟ್ಟೆಗೆ ಕೊಡಲಿ ಏಟು ಹಾಕಲು ಯತ್ನಿಸಿತ್ತು. ಈಗ ಈ ಚಿತ್ರ ಕರ್ನಾಟಕದಲ್ಲಿ 50 ದಿನ ಓಡಿದೆ ಅನ್ನೋ ಕಾರಣದಿಂದ ತೆಲುಗು ಸಿನೆಮಾದವರು ಬೆಂಗಳೂರಿಗೆ ಬಂದು ಒಂದು ಸಮಾರಂಭ ಮಾಡಿದ ಸುದ್ದಿ ದಟ್ಸ್ ಕನ್ನಡದಲ್ಲಿ ಸೆಪ್ಟೆಂಬರ್ 19ರಂದು ಬಂದಿದೆ. ಇದು ಕನ್ನಡದ ಕಲಾವಿದರನ್ನು ಮತ್ತು ರಾಜಕಾರಣಿಗಳನ್ನ ಸೇರಿಸಿಕೊಂಡು ಸಮಾರಂಭ ಮಾಡಿ, ಭಾವೈಕ್ಯತೆ ಅದು ಇದು ಅನ್ಕೊಂಡು ತೆಲುಗು ಸಿನೆಮಾಗಳಿಗೆ ಕರ್ನಾಟಕದಲ್ಲಿ ಇನ್ನಷ್ಟು ಮಾರುಕಟ್ಟೆ ಕಟ್ಟಿಕೊಳ್ಳುವ ಹುನ್ನಾರ ಇದ್ದಂಗಿದೆ. ಈ ಚಿತ್ರದ ಈ ಸಮಾರಂಭಕ್ಕೆ ಬಂದು ಅವರನ್ನು ಹಾಡಿ ಹೊಗಳಿದ್ದನ್ನು ನೋಡಿದ್ರೆ ಇವರಿಗೆ ಸ್ವಾಭಿಮಾನ ಕಿಂಚಿತ್ ಆದ್ರೂ ಇದೆಯಾ ಅನ್ನೋ ಪ್ರಶ್ನೆ ಕನ್ನಡಿಗರ ಮನಸ್ಸಲ್ಲಿ ಏಳ್ತಿದೆ ಗುರು !

ಇವರು ಹೇಳೊದೇ ಕೇಳಿ !

ಸಭೆಯಲ್ಲಿದ್ದ ಮಾನ್ಯ ಮಂತ್ರಿಗಳಾದ ಡಿ.ಎಚ್.ಶಂಕರ ಮೂರ್ತಿಗಳು " 500 ವರ್ಷಗಳ ಹಿಂದೆ ಕೃಷ್ಣದೇವರಾಯ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಎರಡೂ ಒಂದೇ ಆಗಿದ್ದವು. ಈಗಲೂ ಎರಡೂ ರಾಜ್ಯಗಳು ಆ ಸಂಬಂಧವನ್ನು ಮುಂದುವರಿಸುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ" ಎಂದರು. ಅಲ್ಲಾ ಗುರು, ಒಂದು ಚಿತ್ರ, ಇನ್ನೊಂದು ಚಿತ್ರ ರಂಗದ ಮಾರುಕಟ್ಟೆಯನ್ನೇ ನುಂಗಿ ಹಾಕೋ ಪ್ರಯತ್ನ ಮಾಡಿದಾಗಲೂ, ಆ ಚಿತ್ರ ಭಾವೈಕ್ಯತೆ(?) ಬೆಸೆಯೋ ಕೊಂಡಿಯಾಗಿ ಇವರಿಗೆ ಕಾಣಿಸ್ತಾ ಇರೋದು, ಕನ್ನಡ-ಕರ್ನಾಟಕ-ಕನ್ನಡಿಗರ ಬಗ್ಗೆ ಇವರಿಗಿರೋ ನಿಷ್ಟೆ ಎಂತದ್ದು ಅನ್ನುವುದನ್ನ ತಿಳಿಸಲ್ವಾ? ಇವರ ಲೆಕ್ಕದಲ್ಲಿ, ಪರಭಾಷಾ ಚಿತ್ರಗಳ ಹಾವಳಿಯಲ್ಲಿ, ಕನ್ನಡ ಚಿತ್ರರಂಗ ಉಡೀಸ್ ಆದ್ರೂ, ಕನ್ನಡ ಚಿತ್ರ ನಿರ್ಮಾಪಕ ಬೀದಿಗೆ ಬಂದ್ರೂ ಪರ್ವಾಗಿಲ್ಲ, "ಭಾವೈಕ್ಯತೆ(?)" ಬೆಸುದ್ರೆ ಸಾಕು. ಒಂದು ನಾಡಿನ ಚಿತ್ರರಂಗದ ಅಸ್ತಿತ್ವವನ್ನೇ ಕಿತ್ತು ಹಾಕ್ತೀನಿ ಅನ್ನೋಹಾಂಗೆ ಬರೋರು ಇವರ ಕಣ್ಣಲ್ಲಿ ಸಂಬಂಧ ಬೆಸೆಯೋ ಗುಣ ಸಂಪನ್ನರ ತರಾ ಕಾಣಸೋದು ಎಂಥಾ ವಿಚಿತ್ರಾ ಅಲ್ವಾ, ಇದರ ಹಿಂದಿರೋ ಚಿಂತನೆಯಲ್ಲೇ, ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಎಷ್ಟು ಬೆಲೆ ಇದೆ ಅನ್ನೋದನ್ನ ತೋರಿಸ್ತಾ ಇಲ್ವಾ ಗುರು ? ಶಂಕರಮೂರ್ತಿಗಳ ಪ್ರಕಾರ "ಕರ್ನಾಟಕದಲ್ಲಿ" ತೆಲುಗು-ಕನ್ನಡ ಬೇರೆ ಬೇರೆ ಅಲ್ವಂತೆ, ಅದು ಸರಿನೇ ಬಿಡಿ, ಕರ್ನಾಟಕದಲ್ಲಿ ಮಾತ್ರ ತೆಲುಗು-ಕನ್ನಡ ಎಲ್ಲ ಒಂದೇ. ಯಾಕಂದ್ರೆ, ಆಂಧ್ರದಲ್ಲಿ ಲಕ್ಷಗಟ್ಲೆ ಕನ್ನಡಿಗರು ಇದ್ರೂ, ಅವರಿಗೆ ಕರ್ನಾಟಕದಲ್ಲಿ ತೆಲುಗರಿಗೆ ಸಿಗ್ತಾ ಇರೋ ಯಾವ ಅನುಕೂಲವೂ, ಸೌಲಭ್ಯವೂ ಸಿಕ್ತಿಲ್ಲ, ಅಲ್ಲಿನ ಮಂತ್ರಿಗಳ್ಯಾರು ಕನ್ನಡ-ತೆಲುಗು ಒಂದೇ ಅಂತ ಹೇಳೊ ಪೆದ್ದರು ಅಲ್ಲ. ಅದೇನಿದ್ರೂ ಕರ್ನಾಟಕದಲ್ಲಷ್ಟೇ. ಬಿಡು ಗುರು, ಕರ್ನಾಟಕದ ಸರ್ಕಾರವೇ ಕೆಲವು ತೆಲುಗು ಸಚಿವರ ಅಣತಿಯಂತೆ ನಡೆಯುತ್ತಿರೋ ಅನುಮಾನ ಇರುವಾಗ, ಇಲ್ಲಿ ತೆಲುಗು-ಕನ್ನಡ ಎಲ್ಲ ಒಂದೇ ಆಗಿ ಇವರಿಗೆ ಕಾಣೋದ್ರಲ್ಲಿ ವಿಶೇಷ ಏನಿಲ್ಲಾ.

ಶಿವಣ್ಣನವರು ಹೇಳೊದು

ಇದೇ ಸಭೆಲಿ, ಕನ್ನಡಿಗರ ಕಣ್ಮಣಿ ಅಣ್ಣಾವ್ರ ಮಗನಾದ ಶಿವರಾಜ್‍ಕುಮಾರ್ ಅವರು "ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ" ಅನ್ನೋ ಹೇಳಿಕೆ ಕೊಟ್ರು ಗುರು. ರಾಜ್ಯದಲ್ಲಿ ಚಿತ್ರಮಂದಿರದ ಕೊರತೆ. ಕನ್ನಡ ಚಿತ್ರಗಳು ಬಿಡುಗಡೆಗಾಗಿ ಕಾಯಬೇಕಾದ ಪರಿಸ್ಥಿತಿ. ಇಂತಹ ಸನ್ನಿವೇಶದಲ್ಲಿ ಕೆ.ಎಫ್.ಸಿ.ಸಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡು ಒಳ್ಳೆ ಅಭಿರುಚಿಯ ಮಳೆ ಬರಲಿ ಮಂಜು ಇರಲಿಯಂತಹ ಚಿತ್ರವನ್ನು ಚಿತ್ರ ಮಂದಿರದಿಂದ ಒದ್ದೋಡಿಸಿದಾಗ, ಕನ್ನಡ ಚಿತ್ರದ ಪರವಾಗಿ, ಕನ್ನಡದ ನಿರ್ಮಾಪಕರ ಪರವಾಗಿ ಒಮ್ಮೆಯೂ ದನಿ ಎತ್ತಿದ್ದು ಕಾಣಲಿಲ್ಲ. ಆದರೆ ಈಗ ಇವ್ರು ಮಗಧೀರ ಕರ್ನಾಟಕದಲ್ಲಿ 50 ದಿನ ಓಡ್ತು ಅಂತ ಅಂತ ಮಾಡೋ ಸಭೆಗೆ ಹೋಗಿ, ಅವರನ್ನ ಹಾಡಿ ಹೊಗಳೋ ಧಾರಾಳತೆ ತೋರಿಸುತ್ತಾ, ತಮ್ಮ ಕುಟುಂಬ ಮತ್ತು ಚಿರಂಜೀವಿ ಕುಟುಂಬಗಳಿಗಿರೋ ಬಾಂಧವ್ಯದ ಕಥೆ ಹೇಳುವುದನ್ನು ನೋಡಿದಾಗ, ಇವರ ನಿಷ್ಟೆ ತಮಗೆ ಅನ್ನ ಹಾಕಿರೋ ಕನ್ನಡ ಚಿತ್ರರಂಗಕ್ಕಾ ಇಲ್ಲ ಕೇವಲ ತಮ್ಮ ವೈಯಕ್ತಿಕ ಸಂಬಂಧಗಳಿಗಾ? ಅನ್ನೋ ಸಂದೇಹ ಮನಸ್ಸಲ್ಲಿ ಸುಳಿಯಲ್ವಾ ಗುರು?

ಕೊನೆಹನಿ:
ತೆಲುಗು ಚಿತ್ರವೊಂದರ 50ರ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ರಾಜಕಾರಣಿಯೊಬ್ರು ಭಾಗವಹಿಸಿದ್ದು ಮತ್ತವರ ಮನೆಮಾತು ತೆಲುಗಾಗಿದ್ದೂ ಕಾಕತಾಳೀಯಾನಾ ಗುರು?

ಸಂಸ್ಕೃತ ವಿ.ವಿ : ಈಗ ಸರ್ಕಾರ ಏನ್ಮಾಡಬೇಕು?

ಘನ ಕರ್ನಾಟಕ ರಾಜ್ಯಸರ್ಕಾರವು ಸ್ಥಾಪಿಸಲು ಮುಂದಾಗಿರೋ ಸಂಸ್ಕೃತ ವಿಶ್ವವಿದ್ಯಾಲಯವು ನಮ್ಮ ನಾಡಿಗೆ ಬೇಕೇ? ಬೇಡವೇ? ಎನ್ನುವುದರ ಬಗ್ಗೆ ಸಮಸ್ತ ಕನ್ನಡಿಗರ ಹೆಮ್ಮೆಯ ಪತ್ರಿಕೆಯಾದ ವಿಜಯಕರ್ನಾಟಕದಲ್ಲಿ ಇತ್ತೀಚಿಗೆ ಒಂದು ಸಂವಾದ ನಡೀತು. ಇದರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನೋ ವಾದವನ್ನು ಮಂಡಿಸಿದ ಮೊದಲಿಗರು ಡಾ. ಎಸ್.ಎಲ್.ಭೈರಪ್ಪನವರು. ಆಮೇಲೆ ಶತಾವಧಾನಿ ರಾ.ಗಣೇಶ್, ಡಾ. ಚಿದಾನಂದಮೂರ್ತಿ, ಡಾ. ಜಿ.ವೆಂಕಟಸುಬ್ಬಯ್ಯ, ಪ್ರೊ.ಎಲ್.ಎಸ್.ಶೇಷಗಿರಿರಾವ್ ಇವರುಗಳು ಇದೇ ವಾದಕ್ಕೆ ಬೇರೆ ಬೇರೆ ಮಗ್ಗುಲುಗಳಿಂದ ಶಕ್ತಿ ತುಂಬಲು ಪ್ರಯತ್ನ ನಡೆಸಿದರು. ಸಂಸ್ಕೃತ ವಿಶ್ವವಿದ್ಯಾಲಯ ಬೇಡವೇ ಬೇಡ ಎಂದವರಲ್ಲಿ ಶ್ರೀಯುತರಾದ ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್ ಮೊದಲಾದವರಿದ್ದರು. ಇಡೀ ವಾದ ಸಂವಾದದಲ್ಲಿ ಅಸಂಬದ್ಧವಿಲ್ಲದೆ ತೂಕವಾಗಿ ಬರೆದ ಡಾ.ಕೆ.ವಿ.ನಾರಾಯಣರಂತಹ ಭಾಷಾತಜ್ಞರೂ ಇದ್ದರು. ಇಡೀ ಸಂವಾದವನ್ನು ಸಂಸ್ಕೃತ ವೇದವಿಶ್ವವಿದ್ಯಾಲಯವು ಕರ್ನಾಟಕಕ್ಕೆ ಬೇಕು ಅನ್ನುವುದರಿಂದ ಆರಂಭವಾಗಿಸಿ ಸಂಸ್ಕೃತ ವಿಶ್ವವಿದ್ಯಾಲಯ ಬೇಗ ಶುರುವಾಗಲೀ ಅನ್ನೋದ್ರು ಮೂಲಕ ಕೊನೆಗೊಳಿಸಲಾಯ್ತು. ಎರಡನ್ನೂ ಮಾಡಿದವರು ಡಾ. ಭೈರಪ್ಪನವರು.

ವಿ.ವಿ ಬೇಕೆನ್ನುವ ವಾದದ ತಿರುಳು

ಈ ಸಂವಾದದಲ್ಲಿ ವಿಷಯವನ್ನು ಜಾಣತನದಿಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತದ ಹಿರಿಮೆಯೆಡೆಗೆ ತಿರುಗಿಸಿದ್ದೇ ಹೆಚ್ಚು. ಸಂಸ್ಕೃತದ ವ್ಯಾಕರಣ ಕನ್ನಡದ ವ್ಯಾಕರಣಕ್ಕೆ ಮೂಲ ಎಂಬ ಪೆದ್ದುಮಾತಿನಿಂದ ಹಿಡಿದು ಸಂಸ್ಕೃತವನ್ನು ಒಪ್ಪಿದ, ಬಳಸಿದ ಕನ್ನಡದ ಹಿರಿಯರ ಬಗ್ಗೆಯೂ, ಹೊರದೇಶದವರ ಬಗ್ಗೆಯೂ ಮಾತನಾಡಲಾಯ್ತು. ಇಡೀ ಭಾರತದ ಜನರೆಲ್ಲಾ ಬಳಸುವ ಸಾಮಾನ್ಯ ಪದಗಳನ್ನು ಹುಟ್ಟು ಹಾಕಬೇಕೆಂಬ ಮಹಾಮೂರ್ಖತನವನ್ನು ಒಂದು ಶಿಕ್ಷಣ ತಜ್ಞರ ಸಮಿತಿ ಯೋಚಿಸಿತ್ತು ಮತ್ತು ಹಾಗೆ ತರಲು ಮುಂದಾಗಿತ್ತು ಎಂಬ ಬೆರಗುಗೊಳಿಸುವ ಸತ್ಯವೂ ಈ ಸಂದರ್ಭದಲ್ಲಿ ಪ್ರಪಂಚದ್ ಮುಂದೆ ಮತ್ತೊಮ್ಮೆ ಹೊರಬಂತು. (ಈ ಕಾರಣದಿಂದಲೇ ಕೂಡುವುದು ಸಂಕಲನದಾಗಿ, ಕಳೆಯುವುದು ವ್ಯವಕಲನವಾಗಿ, ತಗ್ಗುಗನ್ನಡಿ ಉಬ್ಬುಗನ್ನಡಿಗಳು ನಿಮ್ನದರ್ಪಣ ಪೀನದರ್ಪಣಗಳಾಗಿ, ಎಲೆಹಸಿರು ಪತ್ರಹರಿತ್ತಾಗಿ... ಕನ್ನಡದಲ್ಲಿನ ಕಲಿಕೆ ಕನ್ನಡಿಗರಿಗೆ ಕಬ್ಬಿಣದ ಕಡಲೆಯಾದಂತಾಗಿರೋದು) ಸಂಸ್ಕೃತದಲ್ಲಿ ಭಾರೀ ಜ್ಞಾನ ಸಂಪತ್ತಿದೆ, ಅದರಿಂದ ಕನ್ನಡಿಗರಿಗೆ – ಭಾರತಕ್ಕೆ, ಜ್ಞಾನ ವಿಜ್ಞಾನ ತಂತ್ರಜ್ಞಾನ ತರಲು ಈ ವಿಶ್ವವಿದ್ಯಾಲಯ ಸಾಧನ ಎನ್ನಲಾಯಿತು. ಈ ಜನರೇ ಸಂಸ್ಕೃತವು ಹಿಂದೆ ಬ್ರಾಹ್ಮಣರ ಸ್ವತ್ತಾಗಿತ್ತು, ಈಗ ಎಲ್ಲರಿಗೂ ಈ ವಿವಿಯ ಮೂಲಕ ಸಿಗಲು ಸಾಧ್ಯ ಎಂದಂದ ಮಾತನ್ನ ಕಾಣಬೇಕಾಯ್ತು. ಜೊತೆಯಲ್ಲಿಯೇ ಕನ್ನಡ ಇನ್ನು ಕೆಲ ದಶಕಗಳಲ್ಲಿ ಸತ್ತು ಹೋಗುವ ಭಾಷೆ. ಅದಕ್ಕೆ ಜೀವ ನೀಡಲು ಸಂಸ್ಕೃತ ವಿವಿಯ ಅಗತ್ಯವಿದೆ ಎನ್ನುವರ್ಥದ ಮಾತೂ ತೇಲಿಬಂತು. ಇದೆಲ್ಲಾ ಸಮರ್ಥನೆಗಳು ಒಂದೆಡೆಯಾದರೆ, ಮತ್ತೊಂದೆಡೆ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವಾಗಲಿ ಎನ್ನುವ, ಕನ್ನಡದ ನುಡಿಯರಿಮೆಯ ನಿಜ ವಿದ್ವಾಂಸರನ್ನು ಗೇಲಿ ಮಾಡಿದ್ದೂ ನಡೆಯಿತು. ಸಂಸ್ಕೃತ ವಿವಿಗೆ ವಿರುದ್ಧವಾಗಿದ್ದ ಸಂಸ್ಕೃತ ವಿದ್ವಾಂಸರನ್ನು ತಮ್ಮ ನಿಲುವಿಗೆ ವಿರುದ್ಧರೆಂಬ ಕಾರಣಕ್ಕೆ ಮಾಜಿಗಳೆಂದು ಹಂಗಿಸಿದ್ದೂ ಆಯಿತು. ಭೈರಪ್ಪನವರಂತೂ ತಮ್ಮ ಕಡೆಯ ಬರಹದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆಂದು ಬರೆದವರ ಕುಲಮೂಲಗಳನ್ನೆಲ್ಲಾ ಹಿಡಿದು ಮಾನಸಿಕ ವಿಷ್ಲೇಷಣೆಗೊಳಪಡಿಸಿದವರಂತೆ ಅವರನ್ನು ಮೂರು ವರ್ಗವಾಗಿಸಿ, ಅವರ ವಿರೋಧಕ್ಕೆ ಕಾರಣಗಳೇನು ಎಂಬ ವಿಶ್ಲೇಷಣೆಯಲ್ಲಿ ತೊಡಗುವ ಮೂಲಕ ಸಂವಾದದ ಮೂಲವಿಷಯವನ್ನೇ ಗೌಣವಾಗಿಸಿಬಿಟ್ಟರು. ಸಂಸ್ಕೃತ ವಿಶ್ವವಿದ್ಯಾಲಯದಿಂದ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಬಹಳ ಶ್ರೇಯಸ್ಸಿದೆ, ಏಕೆಂದರೆ ಕನ್ನಡ ಸಂಸ್ಕೃತದ ಮೇಲೆ ಬಹುವಾಗಿ ಅವಲಂಬಿತವಾಗಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು. ಭಾರತೀಯ ಸಂಸ್ಕೃತಿ ಹಿರಿಮೆಯನ್ನರಿಯಲು ಈ ವಿಶ್ವವಿದ್ಯಾಲಯ ಬೇಕು ಅನ್ನಲಾಯಿತು. ಸ್ವಲ್ಪ ಚೌಕಾಸಿ ಮಾಡ್ಕೊಳ್ಳೋ ಹಾಗೆ ಇದರಲ್ಲಿ ಸಂಸ್ಕೃತದ ಜೊತೆ ಪಾಲಿ, ಪ್ರಾಕೃತ ಇತ್ಯಾದಿಗಳೂ ಇರಲಿ ಅನ್ನಲಾಯಿತು, ಇದನ್ನು ಕನ್ನಡ-ಸಂಸ್ಕೃತ ವಿಶ್ವವಿದ್ಯಾಲಯ ಅನ್ನಬೇಕು ಅನ್ನಲಾಯಿತು ಮತ್ತು ಇದರ ಹೆಸರಿಂದ ವೇದ ಅನ್ನುವುದನ್ನು ಕೈಬಿಡಬೇಕು ಅನ್ನಲಾಯಿತು. ಇದ್ಯಾವುವೂ ನಿಜವಾದ ಸಂವಾದ ಅನ್ನಿಸಲೇ ಇಲ್ಲಾ ಗುರು!

ಸರ್ಕಾರ ಕೊಡಬೇಕಾಗಿರೋ ಸ್ಪಷ್ಟನೆ!

ಕರ್ನಾಟಕ ಸರ್ಕಾರ ಮೊದಲಿಗೆ ನಾಡಿಗೆ ಸ್ಪಷ್ಟಪಡಿಸಬೇಕಿರೋ ಕೆಲವಿಷಯಗಳಿವೆ. ಈ ವಿಶ್ವವಿದ್ಯಾಲಯದ ಹೆಸರಲ್ಲಿ ವೇದ ಎಂಬುದಿದೆಯೋ? ಇದ್ದಲ್ಲಿ ಈ ವಿವಿಯಲ್ಲಿನ ಕಲಿಕೆ ವೇದಕ್ಕೆ ಮಾತ್ರಾ ಸೀಮಿತವೋ? ಅಥವಾ ಇದು ಸಂಸ್ಕೃತ ವಿಶ್ವವಿದ್ಯಾಲಯವೋ? ಈ ಉದ್ದೇಶಿತ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ ಏನು? ಇಲ್ಲಿ ಏನು ಕೆಲಸಗಳು ನಡೆಯುತ್ತವೆ? ಇದರಿಂದ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಗಳಿಗೆ ಆಗುವ ಯೋಜಿತ ಉಪಯೋಗಗಳೇನು? ಇವನ್ನೆಲ್ಲಾ ಸ್ಪಷ್ಟಪಡಿಸದೆ ಕಾಲ್ಪನಿಕ ಕಾರ್ಯಕ್ಷೇತ್ರ ಮತ್ತು ಕಾಲ್ಪನಿಕ ಬೆದರಿಕೆಗಳನ್ನು ಮುಂದಿಟ್ಟುಕೊಂಡು ಬೇಕು ಅಥವಾ ಬೇಡ ಅನ್ನೋ ವಾದಗಳನ್ನು ಅರ್ಥಪೂರ್ಣವಾಗಿ ಮಾಡೋದಾದ್ರೂ ಹೇಗೆ?

ಏನೆಂದರೂ ಸಂಸ್ಕೃತ ವಿಶ್ವವಿದ್ಯಾಲಯ ಕನ್ನಡಿಗರಿಗೆ ಆದ್ಯತೆಯಲ್ಲ!

ನಿಜಕ್ಕೂ ಇಂದಿನ ಕರ್ನಾಟಕದಲ್ಲಿ ಕನ್ನಡಿಗರ ಬದುಕಿನ ಅಗತ್ಯಗಳೇನು? ಕನ್ನಡ ನುಡಿಯರಿಮೆಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳೇನು? ಇದರಿಂದಾಗಿ ನಾಡಿನಲ್ಲಿ ಕನ್ನಡದ ಬಳಕೆ ಉಳಿಕೆ ಮತ್ತು ಕನ್ನಡಿಗರ ಏಳಿಗೆ ಹೇಗೆ ಸಾಧಿಸಬೇಕು ಎಂಬುದೆಲ್ಲಾ ನುಡಿಯರಿಗರ, ಆ ಮೂಲಕ ಕರ್ನಾಟಕ ರಾಜ್ಯಸರ್ಕಾರದ ಆದ್ಯತೆಯಾಗಬೇಕಿತ್ತು. ಇಂದು ಕರ್ನಾಟಕ ಸರ್ಕಾರ ಒಂದು ಅನ್ನ ಕೊಡುವ ಕಲಿಕೆಯ ವಿ.ವಿ ತೆರೆಯಲು ಸಹಾಯಮಾಡಿದ್ದರೆ ಈ ತೆರೆನಾದ ವಿರೋಧ ಇರುತ್ತಿರಲಿಲ್ಲವೇನೊ! ಆದರೆ ಸಂಸ್ಕೃತ ವೇದ ವಿಶ್ವವಿದ್ಯಾಲಯವು ನಿಶ್ಚಿತವಾಗಿ ಕನ್ನಡಿಗರಿಗೆ ಅನ್ನ ಗಳಿಸಿಕೊಡುವ ಸಂಸ್ಥೆಯಾಗಲಾರದು, ಅಥವಾ ಆ ಕಡೆಗಿನ ಅಗತ್ಯವಿರುವ ದಿಟ್ಟ ದಾಪುಗಾಲಾಗಲಾರದು. ಹಾಗಾದರೆ ಎಲ್ಲಾ ವಿವಿಗಳ ಗುರಿಯೂ ಅನ್ನ ಗಳಿಸಿಕೊಡುವುದೇ ಆಗಿಹುದೇನು? ಎಂಬಂತಿಲ್ಲ. ಅನ್ನ ಗಳಿಸಿಕೊಡದ ವಿದ್ಯೆ ನಮ್ಮ ರಾಜ್ಯಸರ್ಕಾರದ ಇಂದಿನ ಆದ್ಯತೆಯಾಗಿದೆ ಅನ್ನುವುದು ಈ ಮಾತಿನ ಅರ್ಥ. ಅದಾಗಬಾರದೆಂಬುದು ಆಶಯ. ಇದಕ್ಕಿಂತ ಮುಖ್ಯವಾಗಿ, ಇದು ಕನ್ನಡ ನುಡಿಯ ಸ್ವರೂಪ ಅರಿಯುವ, ಬೆಳೆಯುವ ಹೆಜ್ಜೆಗಳಿಗೆ ವಿರುದ್ಧ ದಿಕ್ಕಿನ ನಡೆಯಾಗುವುದು ಖಚಿತ. ಕನ್ನಡಿಗರಲ್ಲಿ ಮತ್ತಷ್ಟು ಮೇಲುಕೀಳು, ಮತ್ತಷ್ಟು ಮೇಲು ಕನ್ನಡ- ಕೆಳ ಕನ್ನಡವೆಂಬ ಭೇದಭಾವಗಳಿಗೆ ಕಾರಣವಾಗುವ ಸಂಭವವೇ ಹೆಚ್ಚು. ಇದು ತನ್ನ ಮನೆಮಕ್ಕಳನ್ನು ಉಪವಾಸ ಕೆಡವಿ ನೆರೆಮನೆ ಮಕ್ಕಳಿಗೆ ಅನ್ನವಿಟ್ಟಂತೆ ಅಷ್ಟೆ. ಹಾಗಾಗಿ ಸಂಸ್ಕೃತ ವಿಶ್ವವಿದ್ಯಾಲಯ ಆದ್ಯತೆಯ ವಿಷಯವಲ್ಲದ ಕಾರಣ ಸರ್ಕಾರ ಇದರ ಸ್ಥಾಪನೆಗೆ ಮುಂದಾಗುವ ತುರ್ತಿಲ್ಲವೆನ್ನುವುದೇ ವಾಸ್ತವವಾಗಿದೆ.

ಸಂಸ್ಕೃತ ತಾಯಿಯಾದರೂ ಅಷ್ಟೆ! ದಾಯಿಯಾದರೂ ಅಷ್ಟೆ!

ಸಂಸ್ಕೃತದಿಂದ ಕನ್ನಡ ಬಹಳ ಪಡೆದಿದೆ, ಪಡೆಯಬೇಕಾದ್ದು ಕೂಡಾ ಬಹಳ ಇರಬಹುದು. ಸಂಸ್ಕೃತವು ಸಮ್ಯಕ್ ಕೃತವಾದ ಪರಿಪೂರ್ಣ(?)ವಾದ ಸಮೃದ್ಧವಾದ ಭಾಷೆಯಿರಬಹುದು. ಇಡೀ ಜಗತ್ತೇ ಅದನ್ನು ಕೊಂಡಾಡುತ್ತಿರಬಹುದು. ಕನ್ನಡನಾಡಿನ ಆಗಿಹೋದ, ಮಾಗಿದ ವಿದ್ವಜ್ಜನರೇ ಸಂಸ್ಕೃತವನ್ನು ಪೂಜಿಸುತ್ತಿರಬಹುದು. ಇದ್ಯಾವುದೂ ಕರ್ನಾಟಕ ರಾಜ್ಯಸರ್ಕಾರಕ್ಕೆ ಸಂಸ್ಕೃತ/ ಸಂಸ್ಕೃತದಲ್ಲಿರುವ ವೇದದ ವಿಶ್ವವಿದ್ಯಾಲಯವೆನ್ನುವುದು ಆದ್ಯತೆಯ ವಿಷಯವಾಗಲು ಕಾರಣವಾಗಲಾರದು, ಆಗಬಾರದು.

ಕನ್ನಡ ಸಂಸ್ಕೃತದಿಂದ ಬೇರೆಯೇ ಆದ ಭಾಷೆ. ಇದು ಈ ಮಣ್ಣಿನ ಜನರ ಜೀವಂತ ಭಾಷೆ. ಈ ಭಾಷೆಗೆ ತನ್ನದೇ ಆದ ವ್ಯಾಕರಣವಿದೆ. ತನ್ನಕಾಲಮೇಲೆ ತಾನು ನಿಲ್ಲಬಲ್ಲ ತಾಕತ್ತು, ನಿಲ್ಲಬೇಕೆಂಬ ಹಂಬಲವಿದೆ ಮತ್ತು ಇದು ಕನ್ನಡಿಗರ ಏಳಿಗೆಗೆ ಇರುವ ದಾರಿಯಾಗಿದೆ. ಹಾಗಾಗಿ “ಕನ್ನಡಕ್ಕೆ ಈಗಿರುವ ನಾನಾ ಕ್ಷೇತ್ರಗಳಲ್ಲಿನ ಬಳಕೆಯ ವ್ಯಾಪ್ತಿಯನ್ನು ಮತ್ತಷ್ಟು ಹೇಗೆ ಹೆಚ್ಚಿಸುವುದು? ಹೇಗೆ ಈ ನುಡಿಯಿಂದಲೇ ಇಲ್ಲಿನ ಜನರು ಏಳಿಗೆ ಸಾಧಿಸುವಂತೆ ಮಾಡುವುದು? ಹೇಗೆ ಕನ್ನಡವನ್ನು ನಾಡಿನ ಸಾರ್ವಭೌಮ ನುಡಿಯಾಗಿಸುವುದು? ಹೊಸ ಸಂಸ್ಕೃತ ವೇದ ವಿಶ್ವವಿದ್ಯಾಲಯವು ಯಾವರೀತಿಯಲ್ಲಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳ ಮೇಲೆ ಪರಿಣಾಮ ಬೀರಲಿದೆ?”. ಈಗ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಸಜ್ಜಾಗಿದ್ದು ಜನರ ತೆರಿಗೆಯ ಹಣವನ್ನು ಬಳಸಿ ಸಂಸ್ಕೃತ ವೇದವಿಶ್ವವಿದ್ಯಾಲಯವನ್ನು ಕಟ್ಟಲು ಮುಂದಾಗಿರುವುದು ಈ ಎಲ್ಲಾ ಪ್ರಶ್ನೆಗಳಿಗೆ ತೃಪ್ತಿಯಾಗುವ ಉತ್ತರವನ್ನು ಕಂಡುಕೊಂಡ ಮೇಲೇನು? ಹಾಗಲ್ಲದಿದ್ರೆ ಸಂಸ್ಕೃತ ವೇದ ವಿಶ್ವವಿದ್ಯಾಲಯವೆನ್ನುವುದು ಸಾರ್ವಜನಿಕರ ಹಣ ಬಳಕೆ ಮಾಡಿ ಕಟ್ಟುವ ಒಣಪ್ರತಿಷ್ಠೆಯ ಸ್ಥಾವರವಾಗುತ್ತದೆ ಅಷ್ಟೆ.

ಒಟ್ಟಾರೆ ಸಾರಾಂಶವೇನೆಂದರೆ:
  1. ಸಂಸ್ಕೃತ ವಿವಿಯೆಂಬುದು ಜುಟ್ಟಿಗೆ ಮಲ್ಲಿಗೆ ಹೂವಿನ ವಿವಿಯೆಂಬುದರಲ್ಲಿ ಸಂದೇಹವಿಲ್ಲ. ಅದನ್ನು ಹೊಟ್ಟೆಗೆ ಹಿಟ್ಟು ತರುವ ವಿವಿ ಎಂದು ಅನೇಕರು ತಪ್ಪಾಗಿ ತಿಳಿದಿದ್ದಾರೆ.
  2. ಹಾಗೆ ತಿಳಿಯುವುದರ ಹಿಂದೆ ಅನೇಕ ತಪ್ಪು ತಿಳುವಳಿಕೆಗಳಿವೆ: (ಅ) ಸಂಸ್ಕೃತದಲ್ಲಿ ಹಿಂದೆ ಹೊಟ್ಟೆಗೆ ಹಿಟ್ಟಿನ ವಿದ್ಯೆಗಳೆಲ್ಲ ಇದ್ದವು. (ಆ) ಅವುಗಳನ್ನು ಇಂದೂ ಬಳಸಿಕೊಳ್ಳಬಹುದು (ಇ) ಕೆಲವರಂತೂ ಹುಟ್ಟಬಹುದಾದ ಅರಿಮೆಯ ದಿಟಗಳೆಲ್ಲ ಸಂಸ್ಕೃತ ಶ್ಲೋಕಗಳಲ್ಲಿ ಈಗಾಗಲೇ ಇದೆಯೆಂಬ ಮೂರ್ಖತನದ ವಾದವನ್ನೂ ಮಾಡುತ್ತಾರೆ. (ಈ) ಸಂಸ್ಕೃತದ ಅಧ್ಯಯನವು ಕನ್ನಡದ ಅಧ್ಯಯನಕ್ಕೆ ಬೇಕೇ ಬೇಕು, ಅದರ ವ್ಯಾಕರಣವು ಇದರ ವ್ಯಾಕರಣಕ್ಕೆ ಬೇಕೇ ಬೇಕು. (ಉ) ಒಳ್ಳೆಯ ಕನ್ನಡವೆಂದರೆ ಸಂಸ್ಕೃತ. (ಊ) ಇಂಗ್ಲೀಷಿನಂತಹ ಇನ್ನಿತರ ನುಡಿಗಳಿಗಿಂತ ಸಂಸ್ಕೃತದಿಂದ ಪಡೆಯಬೇಕಾದದ್ದು ಹೆಚ್ಚಿದೆ...ಇತ್ಯಾದಿ.
  3. ನಿಜಕ್ಕೂ ನೋಡಿದರೆ ಸಂಸ್ಕೃತದ ಈ ಪೂಜೆಗೆ ಅದರ ಮೇಲಿರುವ ಕುರುಡುಭಕ್ತಿ ಮತ್ತು ಅರಿಮೆಗೆ ಬೆಲೆ ಕೊಡದಿರುವಿಕೆಯೇ (ಅವೈಜ್ಞಾನಿಕತೆಯೇ) ಕಾರಣ.
  4. ಕರ್ನಾಟಕ ರಾಜ್ಯ ಸರಕಾರವು ಇಂದು ಸಂಸ್ಕೃತ ವಿವಿ ಕಟ್ಟಲು ಮುಂದುವರೆದರೆ ಅದರಿಂದ ಕನ್ನಡಿಗರ ಏಳಿಗೆಗೆ ಆಗುವ ಉಪಯೋಗ ಬಹಳ ಕಡಿಮೆ. ಏಳಿಗೆಗೆ ದಾರಿದೀಪವಾಗುವ ಶಿಕ್ಷಣಕ್ಕೆಂದೇ ಆ ಹಣವನ್ನು ಬಳಸುವುದಾದರೆ ಬೇರೆ ಯಾವ ಯೋಜನೆಗಳಿಗೆ ಹಾಕಿದರೆ ಒಳ್ಳೆಯದೋ ಆ ಯೋಜನೆಗಳ ಬಗ್ಗೆ ಚಿಂತನೆ ನಡೆಸುವುದು ವಾಸಿ. ಅದು ಬಿಟ್ಟು ಕಟ್ಟೇ ಕಟ್ಟುತ್ತೇನೆ ಎಂದು ಮುಂದುವರೆದರೆ ಅದನ್ನು ತಡೆಗಟ್ಟುವ ಶಕ್ತಿ ನಮಗಿಲ್ಲ.
  5. ಹಾಗೆಯೇ, ಕನ್ನಡದ ಬಗ್ಗೆ ಅರಿಮೆಯಿಂದ ಕೂಡಿದ ಹೊಸಶಾಲೆಗೆ ಸೇರಿರುವ ತಜ್ಞರು ಯಾರಿರುವರೋ ಅಂಥವರು “ಹೊಸಶಾಲೆಯ ವಿವಿ” ಒಂದನ್ನು ತೆರೆಯಲು ಮುಂದಾಗಿ ಸರ್ಕಾರಕ್ಕೆ ಆ ಬಗ್ಗೆ ತಿಳಿಸಿ ಹಣಸಹಾಯವನ್ನು ಕೇಳುವುದು ಒಳಿತು. ಕರ್ನಾಟಕ ಸರ್ಕಾರವು ಯಾವ ಭೇದಭಾವವನ್ನೂ ಮಾಡದೆ ಈ “ಹೊಸಶಾಲೆ”ಯ ಕನ್ನಡ ವಿ.ವಿಯನ್ನೂ ತೆರೆಯಲಿ, ಮುಚ್ಚಟೆಯಿಂದ ಪೊರೆಯಲಿ. ಯಾವ ಶಾಲೆಯಿಂದ ನಾಡಿನ ಏಳಿಗೆ ಹೆಚ್ಚುತ್ತದೆ ಎನ್ನುವುದನ್ನು ಕಾಲವೂ, ಅರಿಮೆಯೂ ತೀರ್ಮಾನಿಸಲಿ.
  6. ನಮಗಂತೂ “ಹೊಸಶಾಲೆ”ಯಿಂದಲೇ ಅದು ಆಗುವುದು ಎಂಬುದರಲ್ಲಿ ಸಂದೇಹವಿಲ್ಲ. “ಹಳೇಶಾಲೆ”ಯವರಿಗೂ ಹಾಗೇ ಅನ್ನಿಸಿದ್ರೆ ಅದು ಅವರಿಗೆ ಬಿಟ್ಟಿದ್ದು. ಆದರೆ ಇವೆರಡು ಶಾಲೆಗಳನ್ನು ಸರ್ಕಾರವು ಸಮನೋಟದಲ್ಲಿ ನೋಡಬೇಕು. ಅದೇ ಅದಕ್ಕೆ ಶ್ರೇಯಸ್ಸು, ಏಕೆಂದರೆ ಅದರಿಂದ ಅಲ್ಲದಿದ್ದರೆ ಇದರಿಂದಂತೂ ನಾಡಿನ ಏಳಿಗೆಯಾಗುವುದು ಖಂಡಿತ... ಹೀಗೆ ಒಂದಲ್ಲ ಒಂದು ಸಾಧನದಿಂದ ನಾಡಿನ ಏಳಿಗೆಗೆ ನಾಂದಿ ಹಾಡಿದ ಸರ್ಕಾರವೆಂಬ ಹೆಗ್ಗಳಿಕೆಗೆ ಈ ಸರ್ಕಾರವು ಪಾತ್ರವಾಗಲಿ!

ಹೇಳುವುದು ಒಂದೂ... ಮಾಡುವುದು ಇನ್ನೊಂದು!!


ಈ ಚಿತ್ರ ನಲವತ್ತು ವರ್ಷಕ್ಕಿಂತ ಹಿಂದಿನ ಸಂಯುಕ್ತ ಕರ್ನಾಟಕ ಪತ್ರಿಕೆಯದು. ಆವತ್ತಿಗೂ ಇವತ್ತಿಗೂ ಪರಿಸ್ಥಿತೀಲಿ ಏನಾದ್ರೂ ವ್ಯತ್ಯಾಸಾ ಇದ್ಯಾ ಗುರು? ಬಾಯಲ್ಲಿ ಹಿಂದೀ ಹೇರಿಕೆ ಮಾಡಲ್ಲಾ ಅನ್ನೋದೂ ಆದ್ರೆ ವಾಸ್ತವದಲ್ಲಿ ಅದುನ್ನೇ ಮಾಡೋದನ್ನು ಅಂದಿಗೂ ಇಂದಿಗೂ ನಮ್ಮ ಭಾರತ ಸರ್ಕಾರ ಮುಂದುವರುಸ್ತಿರೋದ್ನ ನೋಡುತ್ತಾ ಇದ್ರೆ ಇವರಿಗೆ ಭಾರತದ ನಿಜವಾದ ಏಳಿಗೆ ಒಗ್ಗಟ್ಟು ಬೇಕಾಗಿಲ್ವಾ ಅನ್ನೋ ಅನುಮಾನ ಬರುತ್ತಲ್ವಾ ಗುರು?

ಭಾರತಕ್ಕೊಪ್ಪೋ ಭಾಷಾನೀತಿ ರೂಪುಗೊಳ್ಳಲಿ!

ನಾಳೆ ಅಂದರೆ ಸೆಪ್ಟೆಂಬರ್ 14, ಹಿಂದಿ ದಿವಸ್ ಎಂದು ಇಡೀ ಭಾರತದ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಆಚರಣೆ ಇರುತ್ತೆ. ಇದರ ವೈಭವಾನ ನೋಡಕ್ಕೆ ಬೆಂಗಳೂರಿನ ವಿಧಾನಸೌಧದ ಎದುರಿಗಿರೋ ಅಂಚೆಕಛೇರಿ ಹಿಂಬದಿಯ ಬಿ.ಎಸ್.ಎನ್.ಎಲ್ ಹತ್ರ ಹೋದ್ರೆ ಸಾಕು, ಕೋರಮಂಗಲದ ಕೇಂದ್ರೀಯ ಸದನಕ್ ಹೋದ್ರೂ ಸಾಕು. ಬೇರೆ ಊರಲ್ಲಿರೋರು ಬ್ಯಾಸರಾ ಮಾಡ್ಕೊಂಬೇಡಿ. ಸುಮ್ಕೆ ನಿಮ್ಮೂರ ಟೆಲಿಫೋನ್ ಆಫೀಸ್‍ಗೆ ಹೋಗಿನೋಡಿ ಸಾಕು. ಹಿಂದೀಲಿ ಬರೆಸಿರೋ ದೊಡ್ಡ ದೊಡ್ಡ ಬ್ಯಾನರ್‍ಗಳು ನಿಮ್ಮ ಕಣ್ಣಿಗೆ ರಾಚುತ್ತವೆ. ಒಳಿಕ್ ಹೋದ್ರೆ ನಮ್ ಕನ್ನಡದ ಪ್ರಜೆಗಳೇ ಚೆನ್ನಾಗಿ ಹಿಂದೀಲಿ ಹಾಡಿದ್ಕೆ, ಕುಣಿದಿದ್ಕೆ, ತಮ್ಮ ತಮ್ಮ ಮಕ್ಳುಗೆ ವೇಷ ಹಾಕಿದ್ಕೆ, ಮಕ್ಳುಗೂ ಹಿಂದೀ ಹಾಡು ಕಲ್ಸಿದ್ಕೆ, ಹಿಂದೀ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡ್ಸಿದ್ಕೆ, ನಾಟಕ ಹೇಳ್ಕೊಟ್ಟಿದ್ಕೆ ಅಂತ ಬಹುಮಾನ ತೊಗೋತಾ ಇರೋದ್ನ ಕಾಣಬೋದು. ಈ ದೇಶದಲ್ಲಿ ಪ್ರತಿವರ್ಷ ಹಿಂದೀನಾ ಚೆನ್ನಾಗಿ ಜಾರಿಮಾಡಿದ ಬ್ಯಾಂಕಿಗೊಂದು ಪ್ರಶಸ್ತೀನೂ ಉಂಟು. ಹಿಂದೀ ಪರೀಕ್ಷೆ ಪಾಸ್ ಆಗಿದ್ಕೆ ಭಡ್ತೀನೂ ಕೊಟ್ಟಾರು ಗುರು! ಹಿಂದೀ ಹೇರಿಕೆಯ ಈ ಘನಕಾರ್ಯಕ್ಕೆ ಅಂತಲೇ ಭಾರತ ಸರ್ಕಾರ ಜನ ಕಟ್ಟೋ ತೆರಿಗೆ ಹಣದಲ್ಲಿ ನೂರಾರು ಕೋಟಿಗಳನ್ನು ಮೀಸಲಿಡುತ್ತೆ.

ಹಿಂದಿ ಹೇರಿಕೆಯೆಂಬ ಅಸಮಾನತೆಯ ಮೂಲವ್ಯಾಧಿ !

ಸುಮ್ನೆ ಬಾಯಲ್ಲಿ ‘ಭಾರತದ ಜೀವಾಳವೇ ಸಮಾನತೆ’ ಅಂತಾ ಹೇಳ್ತಾ, ಒಂದು ಭಾಷೇನಾ ಏಕತೆಯ, ರಾಷ್ಟ್ರಪ್ರೇಮದ, ರಾಷ್ಟ್ರೀಯತೆಯ, ಒಗ್ಗಟ್ಟಿನ ಸಾಧನ ಅನ್ನುತ್ತಾ ಉಳಿದ ಭಾಷಾ ಜನಾಂಗಗಳ ತಲೆ ಸವರೋ ವ್ಯವಸ್ಥೆಯಿಂದ ನಾಡಿನಲ್ಲಿ ಒಗ್ಗಟ್ಟು ಮೂಡಿ, ಏಳಿಗೆ ಆಗುತ್ತೆ ಅಂದ್ಕೊಳ್ಳೋದು ಮೂರ್ಖತನದ ಪರಮಾವಧಿ ಆಗುತ್ತೆ ಗುರೂ, ಯಾಕಂದ್ರೆ ಇಂಥಾ ಕ್ರಮ ಉಳಿದ ಭಾಷೆಗಳ ಬಳಕೆಯ ಸಾಧ್ಯತೇನಾ, ವ್ಯಾಪ್ತೀನಾ ಕುಗ್ಗಿಸುತ್ತಾ ಬರುತ್ತೆ. ಇದರಿಂದ ಅಂಥಾ ಭಾಷಿಕರಲ್ಲಿ ತಮ್ಮ ನುಡಿಯ ಬಗ್ಗೆ ಕೀಳರಿಮೆ ಹುಟ್ಕೊಳುತ್ತೆ. ಇಂಥಾ ಜನಾಂಗಗಳಲ್ಲಿ ಒಂದು ಹಂತದ ನಂತರ ತಮ್ಮತನಾ ಉಳುಸ್ಕೊಳ್ಳೋಕೆ ಏನನ್ನಾದ್ರೂ ವಿರೋಧಿಸೋ ಮನಸ್ಸು ಹುಟ್ಟುತ್ತೆ. ಈ ಅಭದ್ರತೆಯ ಭಾವನೆಯಿಂದಾಗಿ ಭಾರತದ ಒಗ್ಗಟ್ಟು, ಹೆಚ್ಚಾಗುವ ಬದಲು ಮುರಿದು ಹೋಗುತ್ತೆ. ಯಾರಿಗಾಗಿ ಈ ನಮ್ಮ ನಾಡು? ಯಾರಿಗಾಗಿ ಈ ನಮ್ಮೂರಿನ ವ್ಯವಸ್ಥೆ? ಈ ವ್ಯವಸ್ಥೆಯಲ್ಲಿ ನನ್ನ ಹಿತಕ್ಕೆ ಅವಕಾಶವೇ ಇಲ್ಲದ ಮೇಲೆ ಯಾಕೆ ಇದು ಬೇಕು? ಅನ್ನೋ ಒಡಕಿನ ದನಿಗೆ ಇದು ಕಾರಣವಾಗುತ್ತೆ. ‘ನಾಡು ಒಂದು ಮಾಡಲು ಹಿಂದೀ (ಅಥವಾ ಒಂದು ಭಾಷೆ) ಬೇಕು, ಹಿಂದೀ ಪೂರಕ’ ಅನ್ನೋ ಭ್ರಮೆ ಭಾರತ ಸರ್ಕಾರಕ್ಕೆ ಕಳಚೋ ಮೊದಲು ಒಕ್ಕೂಟವೇ ಕಳಚಿ ಬೀಳೋದ್ನ ಕಾಣೋ ದೌರ್ಭಾಗ್ಯ ಭಾರತೀಯರಿಗೆ ಒದಗಿಬರುತ್ತೆ! ಇದ್ನ ತಡೆಯೋಕೆ ಇರೋ ಒಂದೇ ಮಂತ್ರ : ಸಮಾನ ಗೌರವದ ಒಕ್ಕೂಟ ವ್ಯವಸ್ಥೆ.

ಸಮಾನತೆಯೇ ಏಕತೆಗೆ ಸಾಧನ

ಹೌದೂ ಗುರು! ಸಮಾನತೆಯೆಂಬ ಸರಳ ತಂತ್ರವೇ ಭಾರತದ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ. ಮಹಾಮಂತ್ರ. ಪ್ರತಿಯೊಂದು ಪ್ರದೇಶದ ಜನರ ನುಡಿಯಲ್ಲೇ ಆಯಾ ಪ್ರದೇಶದ ಆಡಳಿತ ಇರಬೇಕು. ರಾಜ್ಯರಾಜ್ಯಗಳ ಸಂಬಂಧಗಳು ಆಯಾ ನುಡಿಗಳಲ್ಲಿ ಆಗಬೇಕು. ಹಾಗಾಗುತ್ತಾ? ಅಂತಾ ಅನುಮಾನಾ ಇರೋರು ಪ್ರಪಂಚದ ಭಿನ್ನ ಭಾಷಿಕ ದೇಶಗಳು ಹೇಗೆ ವ್ಯವಹರಿಸುತ್ತವೆ ಎಂಬುದನ್ನು ನೋಡಿ ತಿಳಿಯಬಹುದು. ರಾಜ್ಯರಾಜ್ಯಗಳ ನಡುವಿನ ಸಮಾನ ವಿಷಯಗಳು, ಸಮಾನ ಆಸಕ್ತಿಗಳು, ಸಮಾನ ಹಿತಗಳು (common interests) ಮಾತ್ರವೇ ಭಾರತವನ್ನು ಒಂದಾಗಿಡಬಲ್ಲುದಲ್ಲದೆ ಇರುವ ವೈವಿಧ್ಯತೆಯನ್ನು ಅಳಿಸೋದಲ್ಲಾ ಅಲ್ವಾ ಗುರು? ಭಾರತ ತನ್ನ ಭಾಷಾನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ರಾಷ್ಟ್ರಭಾಷೆಯೆಂಬ ನೇರದಾರಿಯಿಂದಲೋ, ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ/ ಆಡಳಿತ ಭಾಷೆ ಎಂಬ ಅಡ್ಡದಾರಿಯಿಂದಲೋ ಹಿಂದಿಯನ್ನು ಸ್ಥಾಪಿಸುವ ಆತ್ಮಹತ್ಯೆಯಂಥಾ ಕ್ರಮವನ್ನು ಭಾರತ ಸರ್ಕಾರ ಕೈಬಿಡಲಿ! ಗುರು!!

ಹಿಂದಿ ಒಪ್ಪೋದು ರಾಷ್ಟ್ರೀಯ ಏಕತೆಗೆ ಪೂರಕಾನಾ?

“ಅಣ್ಣದೀರಾ! ನಿಮ್ಮ ಭಾಷೇನಾ ನೀವು ಮನೇಲಿ ಬಳುಸ್ಕೊಳ್ಳಿ, ಬೆಳುಸ್ಕೊಳ್ಳಿ… ಆದ್ರೆ ಸರ್ಕಾರದ, ಸಮಾಜದ ಜೊತೆಗಿನ ವ್ಯವಹಾರಾನ್ನೆಲ್ಲಾ ನಮ್ ಭಾಷೇಲಿ ಮಾಡಿ. ಯಾಕಂದ್ರೆ ಭಾರತದಲ್ಲಿ ಒಗ್ಗಟ್ಟು ಹೆಚ್ಚಬೇಕು, ಭಾರತ ದೇಶದ ಎಲ್ಲಾ ಪ್ರಜೆಗಳ್ಗೂ ಅರ್ತ ಆಗೋಕೆ ನಮ್ ಭಾಷೇನೆ ಬಳುಸ್ಬೇಕು. ಇದೇ ಕಾರಣಕ್ಕೆ ನೀವು ನಮ್ ಭಾಷೇನ ಕಲೀಬೇಕು, ಇಲ್ದಿದ್ರೆ ಭಾರತದಲ್ ಇರಕ್ ನಾಲಾಯಕ್ಕು. ಇದುನ್ ಬ್ಯಾಡಾ ಅಂದ್ರೆ, ವಿರೋಧಾ ಮಾಡುದ್ರೆ, ಇದುನ್ ಕಲೀದೆ ಹೋದ್ರೆ ನೀವು ದೇಶದ್ರೋಹಿಗಳಾಗ್ತೀರಾ, ಇದುನ್ ಒಪ್ಪಿ ಕಲಿತರೆ ನಿಮಗೆ ದೇಶಪ್ರೇಮ ಇದೆ ಅಂತಾ ಅರ್ತ” ಅನ್ನೋ ಮಾತುನ್ನ ಏನಂತಾ ಕರೀತೀರಾ? ಈ ಮಾತಿಗೆ ಮರುಳಾದ್ರೆ ನಮ್ಮ ಗುಂಡೀನಾ ನಾವೇ ತೋಡ್ಕೊಂಡಂಗ್ ಆಗಲ್ವಾ ಗುರು?

ದೇಶಪ್ರೇಮ ಮತ್ತು ಹಿಂದಿ!

ನೀವು ಹಿಂದೀ ಕಲೀದಿದ್ರೆ ನಿಮಗೆ ದೇಶಪ್ರೇಮ ಇಲ್ಲಾ ಅನ್ನೋ ಮಾತಾಡೋರು ತಿಳ್ಕೊಬೇಕಾದ್ದು ಒಂದಿದೆ. ಯಾವುದೇ ವ್ಯಕ್ತಿ ತನ್ನಂತಾನೆ ಹಿಂದಿ ಕಲೀಬಾರ್ದು, ಅಸ್ಸಾಮೀಸ್ ಕಲೀಬಾರ್ದು ಅಂತನ್ನೋ ಮಾತೇ ಆಡ್ತಿಲ್ಲ. ನಮ್ಮ ಜನರನ್ನು ಕಾಪಾಡಬೇಕಾದ ಭಾರತ ಸರ್ಕಾರಾನೇ ಹಿಂದೀನ ಕಲೀದಿದ್ರೆ ನಿಮಗೆ ನೀರಿಲ್ಲ, ನೆರಳಿಲ್ಲ ಅನ್ನೋ ಧೋರಣೆ ಹೊಂದಿರೋದು ಸರಿಯಲ್ಲ ಅಂತಿದೀವಿ. ಹಿಂದೀ ಹೇರಿಕೆಯ ಇಂಥಾ ಪರಿಸ್ಥಿತಿ ಹುಟ್ಟುಹಾಕಕ್ಕೆ ನಾವೇ ಆರಿಸೋ ಸರ್ಕಾರ ಮುಂದಾಗೋದ್ರ ಅರ್ಥ ಇದು ನಮ್ಮ ಸರ್ಕಾರ ಅಲ್ಲಾ, ನಮ್ಮತನಾನ ಅಳಿಸಲು ಮುಂದಾಗಿರೋ ಸರ್ಕಾರ ಅಂತಾ ಅಲ್ವಾ? ಹಾಗೂ ನಾವೆಲ್ಲಾ ಹಿಂದೀನ ಕಲುತ್ರೆ ಮಾತ್ರಾ ದೇಶಪ್ರೇಮಿಗಳಾ? ಹಿಂದಿ ಭಾಷೆಯ ಗಂಧ ಗಾಳಿ ಇಲ್ಲದಿದ್ದ ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಶಿವಪುರದ ಸತ್ಯಾಗ್ರಹಿಗಳು, ವಿದುರಾಶ್ವತ್ಥದ ಗೋಲೀಬಾರಿನಲ್ಲಿ ಜೀವ ತೆತ್ತವರು… ಇವರೆಲ್ಲಾ ಹಾಗಾದ್ರೆ ದೇಶದ್ರೋಹಿಗಳಾ? ಅಥವಾ ಇವರೆಲ್ಲಾ ಹಿಂದೀ ಕಲಿತು ದೇಶಪ್ರೇಮ ಬರುಸ್ಕೊಂಡ್ರಾ? ಹಿಂದಿ ಕಲಿಕೆಗೂ ದೇಶಭಕ್ತಿಗೂ ತಳುಕು ಹಾಕೋದು ಅಂದ್ರೆ ಇದು ನಮ್ಮೊಳಗಿರೋ ಭಾರತದ ಬಗೆಗಿನ ಶ್ರದ್ಧೆ ನಿಷ್ಠೇನಾ ಸಾಣೆ ಹಿಡೀತೀವಿ ಅನ್ನುತ್ತ ತಮ್ಮ ಬೇಳೆ ಬೇಯುಸ್ಕೊಳಕ್ಕೆ ಹಿಂದಿ ಪ್ರದೇಶದ ಜನರು ಹೂಡಿರೋ ತಂತ್ರಾ ಅನ್ಸಲ್ವಾ ಗುರು? ಇಷ್ಟಕ್ಕೂ ಈ ಥರಾ ನಾವೆಲ್ಲಾ ಹಿಂದಿ ಕಲುತ್ರೆ ಭಾರತಕ್ಕೆ ಏನು ಲಾಭ ಅಂತಾ ನೋಡೋಣ ಬಾ ಗುರು!!

ಸಂಪರ್ಕ ಭಾಷೆ ಹಿಂದಿ ಆದ್ರೇನಾಗುತ್ತೆ ಗೊತ್ತಾ?

“ನೀವು ಕರ್ನಾಟಕದಿಂದ ಹೊರಗ್ ಬಂದು ನೋಡಿ, ಅಲ್ಲಿನ ಊರುಗಳಿಗೆ ಹೋದಾಗ ಯಾವ ಭಾಷೆ ಮಾತಾಡ್ತೀರಿ? ಎಷ್ಟೂ ಅಂತಾ ಭಾಷೆಗಳನ್ನು ಕಲೀತೀರಿ? ಅಧಿಕೃತವಾಗೇ 22 ಭಾಷೆಗಳಿವೆ, ಅವೆಲ್ಲಾ ಕಲಿಯಕ್ ಆಗುತ್ತಾ? ಅದರ ಬದಲಾಗಿ ಒಂದು ಭಾಷೆಯಾಗಿ ಹೆಚ್ಚು ಜನಕ್ ತಿಳಿದಿರೋ ಹಿಂದೀ ಬಳಸೋದು ಒಳ್ಳೇದಲ್ವಾ?” ಅಂತ ಹಿಂದಿ ಬೇಕೆನ್ನೋ ಗೆಳೆಯರು ವಾದಿಸೋದನ್ನು ನಾವೂ ನೀವೂ ಕೇಳೇ ಇರ್ತೀವಿ. ಈಗ ಒಂದು ಕಡೆಯಿಂದ ನಾವು ಹೀಗ್ ಮಾಡೋದ್ರು ಪರಿಣಾಮ ಏನಾದೀತು ಅಂತ ನೋಡೋಣ. ನಮ್ಮ ಕನ್ನಡನಾಡಿನ ಒಂದು ಊರಿಗೆ (ಉದಾಹರಣೆಗೆ ಶಿವಮೊಗ್ಗಾ ಅಂದ್ಕೊಳ್ಳಿ) ಭಾರತದ ಬೇರೆ ಬೇರೆ ಮೂಲೆಗಳಿಂದ ತಮಿಳ್ರು, ತೆಲುಗ್ರು, ಗುಜರಾತಿಗಳೂ, ಪಂಜಾಬಿಗಳೂ, ಅಸ್ಸಾಮಿಗಳೂ, ಬೆಂಗಾಲಿಗಳೂ, ಒರಿಯಾದವರೂ… ಅವ್ರೂ ಇವ್ರೂ ಎಲ್ಲಾ ಬರ್ತಾರೆ. ಇವರೆಲ್ಲಾ ಯಾಕೆ ಬರ್ತಾರೆ ಅಂದ್ರೆ ಅಲ್ಲಿಗೆ ಹೊಸ ಹೊಸ ಉದ್ದಿಮೆಗಳನ್ನು ತರೋ ಮೂಲಕ ನಮ್ಮ ಯಡ್ಯೂರಪ್ಪನೋರು ಉದ್ಯೋಗಾವಕಾಶಗಳನ್ನು ಹೆಚ್ಚಿಸಿದ್ರು ಅಂತಾನೆ ಇಟ್ಕೊಳ್ಳಿ. ಇವರೆಲ್ಲಾ ನಮ್ಮ ಘನಸರ್ಕಾರದ ಮತ್ತು ಹಿಂದೀವಾದಿಗಳ ಆಶಯದಂತೆ ಹಿಂದಿಯನ್ನು ಕಲಿತೇ ಬರ್ತಾರೆ ಅಂದುಕೊಳ್ಳೋಣ. ಈಗ ಇವರ ಜೊತೆ ವ್ಯವಹರಿಸಬೇಕಾಗಿರೋ ನಮ್ಮೂರಿನ ಆಟೊದವ್ರು, ಬಸ್ಸಿನವ್ರು, ತರಕಾರಿಯೋರು, ಮನೆಕೆಲ್ಸದೋರು, ದಿನಸಿ ಅಂಗಡಿಯೋರು, ಮಾಲ್‍ಗಳೋರು, ನಗರಪಾಲಿಕೆಯೋರು, ತೆರಿಗೆ ಇಲಾಖೆಯೋರು, ರಾಜ್ಯಸರ್ಕಾರದೋರು ಎಲ್ಲಾ ಹಿಂದೀಲಿ ತಾನೇ ವ್ಯವಹರಿಸಬೇಕು? ಅಷ್ಟೇ ಅಲ್ಲಾ, ನೀರಿನ ಬಿಲ್ಲಿಂದ ಹಿಡ್ದು ಜಾಹೀರಾತು ಫಲಕಗಳ ತನಕ ಎಲ್ಲಾದ್ರಲ್ಲೂ, ಇವರೆಲ್ಲಾ ಕಲಿತು ಬಂದಿರೋ ಹಿಂದೀ ತಾನೇ ಇರಬೇಕಾದ್ದು? ಪಕ್ಕದ ಗಾಜನೂರಿನ ಗಂಡು, ಓದು ತಲೆಗೆ ಹತ್ತಿಲ್ಲಾ ಅಂತಾ ಶಿವಮೊಗ್ಗಾಕ್ಕೆ ಬಂದು ಏನಾದ್ರೂ ಕೆಲಸ ಹುಡುಕ್ಕೊತೀನ್ ಅಂದ್ರೆ ಆಗುತ್ತಾ? ಆಟೋ ಓಡ್ಸೋದ್ರಿಂದ ಹಿಡ್ದು ಅಂಗಡಿ ಸೇಲ್ಸ್‍ಬಾಯ್ ಆಗೋಕೂ ಬರೀ ಹಿಂದೀ ಬರಲ್ಲಾ ಅನ್ನೋ ಒಂದು ಕಾರಣಕ್ಕೆ ಅವ ನಾಲಾಯಕ್ಕಾಗಲ್ವಾ? ಇಂಥಾ ಶಿವಮೊಗ್ಗದಲ್ಲಿ ಕನ್ನಡದ ಗತಿ ಏನಾಗಿರುತ್ತೆ? ಕನ್ನಡಿಗರ ಗತಿ ಏನಾಗಿರುತ್ತೆ? ಅಂತಾ ಒಸಿ ಯೋಚ್ಸು ಗುರು… ಕನ್ನಡ ಅನ್ನೋದು ಅಡುಗೆ ಮನೆ ಸೇರ್ಕೊಂಬುಡುತ್ತೆ ಅಂತೀರಾ? ಊಹೂ, ಅದೂ ಆಗಲ್ಲ. ಯಾಕಂದ್ರೆ ಅಷ್ಟು ಹೊತ್ತಿಗೆ ಮಾರ್ಕೆಟ್‍ನಲ್ಲಿ ಕೊಂಡು ಅಡುಗೆ ಮನೆಗೆ ನಾವು ತಂದಿಡೋದು ಸಬ್ಜಿ., ದಾಲ್, ಚಾವಲ್ ಆಗೋಗಿರುತ್ತಲ್ಲಾ? ಸೌಹಾರ್ದತೆ ಅಂತಾ ನಾವೇನಾದ್ರೂ ಹಿಂದೀನಾ ಒಪ್ಪೋದಾದ್ರೆ ನಮಗಾಗಿ ನಾವೇ ಸರಿಯಾದ ಅಳತೆಯ, ಒಳ್ಳೇ ಶ್ರೀಗಂಧದ ಸೊಗಸಾದ ಶವಪೆಟ್ಟಿಗೆ ಮಾಡ್ಕೊಂಡಂಗೆ ಅಂತಾ ಅನ್ಸಲ್ವಾ ಗುರು?

ಹಿಂದಿ ಬೇಕು ಅನ್ನೋದ್ರು ಹಿಂದಿರೋ ನಿಜಕಾರಣ

“ಕನ್ನಡದ ಮಂಕುಮುಂಡೇವಾ, ಭಾರತದ ಒಗ್ಗಟ್ಟು ಅಂದ್ರೇನು ಗೊತ್ತಾ? ಇಡೀ ಭಾರತದ ಯಾವ ಮೂಲೆಗೆ ಹೋದ್ರೂ ಹಿಂದಿಯೆನ್ನುವ ನಮ್ಮ ಭಾಷೆ ನಡೀಬೇಕು. ಹಿಂದಿ ಮಾತಾಡೋಕೆ ಬರದಿದ್ರೆ ಭಾರತೀಯ ಅಲ್ಲಾ ಅಲ್ವಾ, ಹಾಗಾಗಿ ಹಿಂದಿ ಮಾತಾಡೋರಿಗೆ ಅಂದ್ರೆ ಭಾರತೀಯರಿಗೆ ಭಾರತದ ಯಾವ ಮೂಲೇಲೂ ಕಳ್ಳೇಕಾಯಿ ತೊಗೊಳ್ಳೋಕೂ ಭಾಷಾ ಸಮಸ್ಯೆ ಆಗಬಾರದು. ನೀವು ಚೆನ್ನಾಗಿ ಹಿಂದೀನ ಕಲಿತುಕೊಳ್ಳಿ ಅಂತಾನೆ ರೈಲ್ವೇ ಡಿ ದರ್ಜೆ ಕೆಲಸಗಳ ಥರದ ಕೇಂದ್ರಸರ್ಕಾರದ ಕೆಲಸಗಳು ಬೇಕು ಅನ್ನೋದಾದ್ರೆ ಅರ್ಜೀನಾ ಹಿಂದೀಲಿ ಬರೀರಿ ಅನ್ನೋದು. ಇಲ್ಲಾಂದ್ರೆ ನೀವು ಕೆಲಸ ಮಾಡೋ ರೈಲು ನಿಲ್ದಾಣಕ್ಕೆ ಬರೋ ಭಾರತೀಯರಿಗೆ ತೊಂದರೆ ಆಗಲ್ವಾ? ಇವತ್ತು ನಿಮಗೆ ಅನ್ನ ಕೊಡಕ್ಕೆ ಇಂಗ್ಲೀಷ್ ಇದೆ ಅಂತೀರಾ? ಥೂ… ಅದು ನಮ್ಮನ್ನು ಮುನ್ನೂರು ವರ್ಷ ಗುಲಾಮರನ್ನಾಗಿಸಿದ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಕುರುಹು. ಹೋಗಿ ಹೋಗಿ ಅಷ್ಟು ದೂರದಲ್ಲಿರೋ ಇಂಗ್ಲೀಷ್ ಸೂಜಿಯಿಂದ ಯಾಕೆ ಕಣ್ಣು ಚುಚ್ಕೋತೀರಾ? ಇಗೋ ನೋಡಿ, ನಿಮ್ಮದೇ ದೇಶದ ಹೊಚ್ಚ ಹೊಸ ಚಿನ್ನದ ಸೂಜಿಯಿದೆ, ತಗೊಂಡು ಹೆಟ್ಕೊಳ್ಳಿ” ಅಂತೆಲ್ಲಾ ಹೇಳುದ್ರೆ ಜನಾ ಕೇಳ್ತಾರಾ ಗುರು? ಅದುಕ್ಕೆ ನಿಮ್ಮ ರಾಷ್ಟ್ರಪ್ರೇಮದ ಕುರುಹಾಗಿ, ಭಾರತದ ಒಗ್ಗಟ್ಟಿಗಾಗಿ, ಭಾರತೀಯರೆಲ್ಲರೂ ಒಂದೆಂದು ಸಾರಲಿಕ್ಕಾಗಿ, ಹಿಂದೀ ಎಂಬ ರಾಷ್ಟ್ರೀಯ ಮಟ್ಟದ ಉರುಫ್ ರಾಷ್ಟ್ರೀಯ ಉರುಫ್ ರಾಷ್ಟ್ರಭಾಷೇನಾ (ನೀವು ಸುಮ್ನೆ ಗೊಂದಲ ಮಾಡ್ಕೊಳ್ಳಿ ಅಂತಾ ಅಷ್ಟು ಹೆಸರು) ಒಪ್ಪಿಕೊಳ್ರೋ ಹುಚ್ಚಪ್ಪಗಳಿರಾ ಅಂತಿದಾರೆ ಅನ್ನೋದೇ ದಿಟ ಅಲ್ವಾ ಗುರು?

ಮಾತಾಡೋರು ಹೆಚ್ಚು ಅಂತಾ ಹಿಂದೀನಾ ಒಪ್ಪಕ್ಕಾಗುತ್ತಾ?

ಭಾರತ ದೇಶದಲ್ಲಿ ಹಿಂದೀನ ತಾಯ್ನುಡಿಯಾಗಿ ಹೊಂದಿರೋರು ಎಷ್ಟು ಜನಾ? ಅಂತ ಕೇಳುದ್ರೆ ನಾವು ನೋಡೋದು 2001ರ ಜನಗಣತಿಯ ಮಾಹಿತಿ ಕಡೇನೇ ಗುರು! ಇದು ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಸಿಗ್ತಾಯಿದೆ, ನೋಡಿ. ಇದರ ಪ್ರಕಾರ ಭಾರತದಲ್ಲಿ ಹಿಂದೀನ ತಾಯ್ನುಡಿಯಾಗಿ ಹೊಂದಿರೋರ ಸಂಖ್ಯೆ ಸುಮಾರು 42 ಕೋಟಿ. ಇದು ಭಾರತದ ಒಟ್ಟು ಜನಸಂಖ್ಯೆಯಾದ 102.87 ಕೋಟೀಲಿ ಶೇಕಡಾ 41ರಷ್ಟು ಅಂತ ನಾವು ನಂಬಬೇಕಾಗುತ್ತೆ.

ಹಿಂದಿ ತಾಯ್ನುಡಿಯಾಗಿರೋರ ನಿಜಸಂಖ್ಯೆ!

ಒಸಿ ಇದರ ಆಳಕ್ಕಿಳಿದು ನೋಡುದ್ರೆ ಕಾಣೋದು ಬೇರೇನೆ ಗುರು! ಇಲ್ಲಿ ಹಿಂದಿ ಅಂದ್ರೆ ಬರೀ ಹಿಂದಿ ಅಲ್ಲಾ... ಹಿಂದಿ ಅಂದ್ರೆ ಒಟ್ಟು 50 ಭಾಷೆಗಳ ಸಮೂಹ. ಈ ಪಟ್ಟೀಲಿ ಇಡೀ ಒಂದು ರಾಜ್ಯದ ಭಾಷೆಗಳಾದ ಭೋಜ್‍ಪುರಿ, ಚತ್ತೀಸ್‍ಘರೀ, ಹರ್ಯಾನ್ವಿ, ರಾಜಾಸ್ಥಾನಿಗಳೂ ಸೇರ್ಕೊಂಡಿವೆ. ಇದರಲ್ಲಿರೋ ಭಾಷೆಗಳನ್ನು ನೋಡ್ತಿದ್ರೆ ಅನ್ಸೋದು ಈ ಹಿಂದೀ ಅನ್ನೋ ಹೆಸರಲ್ಲಿ ಎಷ್ಟೊಂದು ಭಾಷೆಗಳನ್ನು ನಾಶ ಮಾಡಕ್ ಮುಂದಾಗಿದೆ ಭಾರತ ಸರ್ಕಾರ ಅಂತಾ ಗುರು! ಅದೆಂಗೇ ಅಂತಾ ಕೇಳ್ತೀರಾ? ಇವೆಲ್ಲದರ ತಲೆ ಮೇಲೆ ಭಾರತ ಸರ್ಕಾರವೇ ಹೇರಲು ಮುಂದಾಗಿರೋ ಒಂದು ಭಾಷೆ ಇದೆ. ಅದರ ಹೆಸರು "Standard hindi" ಅಂದ್ರೆ "ಪ್ರಮಾಣಿಕೃತ ಹಿಂದಿ" ಅಂತ. ಅಂದರೆ ಇವತ್ತಿನ ದಿನ ಭಾರತ ಸರ್ಕಾರ ತನ್ನ ನಾಡಿನ 24%ರ‍ಷ್ಟು ಜನರು ಬಳುಸ್ತಿರೋ(?) ನುಡೀನಾ ಅಧಿಕೃತ ಭಾಷೆ ಅಂತಾನೂ, ರಾಷ್ಟ್ರೀಯ ಭಾಷೇ ಅಂತಾನೂ ಸುಳ್ಳು ಹರುಡ್ತಾ, ಇಡೀ ಭಾರತದ ಹೆಚ್ಚು ಜನರ ತಾಯ್ನುಡಿಯೆನ್ನುತ್ತಾ ಉಳಿದ 76% ಜನತೆಯ ಮೇಲೆ ಹೇರಕ್ಕೆ ಹೊರಟಿರೋದು ಯಾವ ಸೀಮೆ ಪ್ರಜಾಪ್ರಭುತ್ವಾ? ಗುರು!
ಇದರ ಜೊತೇಲೆ ಹಿಂದೀ ಮಾತಾಡೋರೂ, ಬಲ್ಲೋರೂ ಹೆಚ್ಚಾಗಿದಾರೆ ಅನ್ನೋ ಮಾತು ಕೂಡಾ ಅಸಂಬದ್ಧವಾದ್ದೇ ಆಗಿದೆ. ಅರವತ್ತು ವರ್ಷದಿಂದ ನಾನಾ ತಂತ್ರಗಳ ಮೂಲಕ ಹಿಂದೀನಾ ಹೇರ್ತಾ ಇದ್ರೂ ಈ ಮಾತು ಕರ್ನಾಟಕಕ್ಕೆ ಅನ್ವಯ ಆಗಲ್ಲ. ಯಾಕಂದ್ರೆ ಇವತ್ತು ಹಿಂದೀ ಗೊತ್ತಿರೋ ಕನ್ನಡದೋರು ಎಷ್ಟು ಜನ ಇದಾರೆ ಅಂತಾ ನೋಡಕ್ಕೆ ರೈಲ್ವೇ ನೇಮಕಾತಿಯ ಪ್ರಹಸನಾನೆ ನೋಡೋಣ. ನೈಋತ್ಯ ರೈಲ್ವೇಲಿ ಖಾಲಿಯಿದ್ದ 4701 ಡಿ ದರ್ಜೆ ಹುದ್ದೆಗಳಿಗೆ ಹಿಂದೀಲಿ ಅರ್ಜಿ ಬರೀಬೇಕಾದ್ದು ಕಡ್ಡಾಯ ಅಂದಾಗ, ಆ ಪರೀಕ್ಷೆಗೆ ಹಾಜರಾದ ಕನ್ನಡಿಗರ ಸಂಖ್ಯೆ ಉಳಿದೋರ ಸಂಖ್ಯೆಯ ಮುಂದೆ ಎಷ್ಟು ಕಮ್ಮಿಯಿತ್ತು ಅನ್ನೋದನ್ನು ನೋಡುದ್ರೆ ಇದು ತಿಳಿಯುತ್ತೆ ಗುರು! ಒಟ್ನಲ್ಲಿ ಅರವತ್ತು ವರ್ಷದಿಂದ ನಿರಂತರವಾಗಿ ಹಿಂದೀ ಹೇರಿದ್ರಿಂದ ನಾವು ಕೆಲಸ ಕಳ್ಕೊಂಡ್ವೇ ಹೊರತು ಹಿಂದೀ ಕಲೀಲಿಲ್ಲಾ!

ಹಿಂದಿಯೋರ ಸಂಖ್ಯೆ 90% ಆಗಿರಲಿ..So what?

ನಮ್ಮ ಹಿಂದೀ ಭಕ್ತರು "ನೋಡುದ್ರಾ, ನೀವ್ ಏನೇ ಲೆಕ್ಕ ಕೊಟ್ರೂ ಹಿಂದೀ ಮಾತಾಡೋರು ತಾನೆ ಹೆಚ್ಚು ಸಂಖ್ಯೇಲಿರೋದು? ಅದಕ್ಕೆ ಹಿಂದೀ ರಾಷ್ಟ್ರಭಾಷೆ ಆಗಬೇಕು" ಅಂದಾರು, ಜ್ವಾಪಾನ! ಹಿಂದೀ ತಾಯ್ನುಡಿಯೋರು 24% ಅಲ್ಲಾ 90% ಆದ್ರೂ ಏನೀಗ? ನಮ್ಮ ನಾಡಲ್ಲಿ ಹಿಂದೀ ನಮ್ಮದಲ್ಲದ ನುಡಿ. ಇದನ್ನು ನಮ್ಮ ಮಕ್ಕಳ ಮೇಲೆ ಕಲಿಕೆಯಲ್ಲಿ ಕಡ್ಡಾಯ ಮಾಡೋದಾಗಲೀ, ನಮ್ಮ ಜನರ ಮೇಲೆ ಆಡಳಿತದ ಹೆಸರಲ್ಲಾಗಲೀ, ಕೆಲಸ ಸಿಗಲು ಬೇಕಾದ ಅರ್ಹತೆಯೆಂದಾಗಲೀ ಆಮಿಷ, ಒತ್ತಾಯ, ಬಲವಂತ ಮಾಡಿ ಹೇರೋದನ್ನು ಅದೆಂಗೆ ಒಪ್ಪಕ್ ಆಗುತ್ತೆ? ಸರಿಯಾದ ವ್ಯವಸ್ಥೇಲಿ ನಮ್ಮ ಕನ್ನಡವನ್ನೇ ಇವತ್ತು ಅನ್ನ ಕೊಡೋ ಭಾಷೆಯನ್ನಾಗಿಸಲು ಕರ್ನಾಟಕ ಸರ್ಕಾರ ಮುಂದಾಗಬೇಕು, ಕೇಂದ್ರಸರ್ಕಾರ ಹಿಂದಿನ ಬೆನ್ನೆಲುಬಾಗಬೇಕು. ಅದುಬಿಟ್ಟು ಇರೋ ವೈವಿಧ್ಯತೇನಾ ಅಳಿಸುತ್ತೇ ಅನ್ನೋ ಪರಿವೆಯೂ ಇಲ್ಲದೆ ಹಿಂದೀನಾ ಕೇಂದ್ರದೋರು ಭಾರತದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿರೋದು, ಕರ್ನಾಟಕ ಸರ್ಕಾರ ತ್ರಿಭಾಷಾ ಸೂತ್ರ ಅಂತ ಕನ್ನಡಿಗರನ್ನು ಕುಣುಸ್ತಿರೋದೂ ಸರೀನಾ? ನೀನೇ ಹೇಳು ಗುರು!!

ಹಿಂದೀ ಜ್ವರಕ್ಕೆ ತುರ್ತಾಗಿ ಬೇಕಿದೆ ಮದ್ದು!

ಭಾರತ ದೇಶ ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದೆ. ಯಾವುದೇ ನಾಡಿನಲ್ಲಿ ಆ ನಾಡಿನ ಜನರ ಒಗ್ಗಟ್ಟು ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇಂತಹ ಒಗ್ಗಟ್ಟನ್ನು ಹೆಚ್ಚಿಸುವ ರೀತಿನೀತಿಗಳನ್ನು ಪ್ರತಿಯೊಂದು ದೇಶವು ಹೊಂದಲು ಬಯಸುವುದು ಸಹಜವಾಗಿದೆ. ಭಾರತ ದೇಶವೂ ಇದಕ್ಕೆ ಹೊರತಲ್ಲ. ಭಾರತದ ಕೇಂದ್ರಸರ್ಕಾರವು, ಭಾರತ ದೇಶದ ವಿವಿಧ ಭಾಷಾ ಜನಾಂಗಗಳ ನಡುವೆ ಏಕತೆಯನ್ನು ಸಾಧಿಸಲು, ನಾಡಿನ ಒಗ್ಗಟ್ಟಿಗೆ ಪೂರಕವಾಗಿದೆ ಅಂತಂದುಕೊಂಡು ಭಾರತಕ್ಕೊಂದು ಭಾಷಾ ನಿಯಮ ರೂಪಿಸಿದೆ. ಇದಕ್ಕೆ ಸಂವಿಧಾನದ ಆಶಯದ ಬೆಂಬಲವೂ ಇದೆ ಎನ್ನುವ ಮಾತೂ ಕೇಳಿಬರುತ್ತಿದೆ. ಈ ದಿಕ್ಕಿನಲ್ಲಿಯೇ ಭಾರತವನ್ನು ಒಂದುಗೂಡಿಸಲು ಒಂದು ಸಂಪರ್ಕ ಭಾಷೆ ಬೇಕೆಂದುಕೊಂಡು ಹಿಂದಿಯನ್ನು ಸ್ಥಾಪಿಸುವ ಪ್ರಯತ್ನಗಳು ನಡೆದಿವೆ. ಹೀಗೆ ಹಿಂದಿಯನ್ನು ಎಲ್ಲಾ ಭಾರತೀಯರ ಮನೆದೇವರನ್ನಾಗ್ಸೋದ್ನ ನಮ್ಮ ಜನರಿಗೇ ಸರಿಯಾದದ್ದು ಅನ್ನಿಸೋ ಕೆಲಸಾನೂ ಮಾಡ್ತಿದಾರೆ. ಹಿಂದಿ ಬೇಕು ಅನ್ನೋರು ಮಂಡುಸ್ತಿರೋ ವಾದಾನಾ ಈ ಒಂದು ವಾರಾ ಇಡೀ ಒಸಿ ಅಳ್ದು ನೋಡೇ ಬುಡ್ಮಾ ಗುರು!

ಹಿಂದೀ ಒಪ್ಪಕ್ಕೇಕೆ ವಿರೋಧ?

ಇಂತಿಪ್ಪ ಹಿಂದೀ ಭಾಷೇನಾ ಭಾರತದ ರಾಷ್ಟ್ರಭಾಷೆ ಅಂತ ಒಪ್ಪೋದಕ್ಕೆ ಯಾಕೆ ವಿರೋಧ ಮಾಡಬೇಕೂಂದ್ರೆ....

ಇದರಿಂದ ಕರ್ನಾಟಕದಲ್ಲೇ ಕನ್ನಡಿಗರಿಗೆ ಕೆಲಸಗಳು ಸಿಗೋಕೆ ಸಮಸ್ಯೆ ಆಗುತ್ತೆ. ಎಂಟನೇ ತರಗತಿ ವಿದ್ಯಾರ್ಹತೆ ಬಯಸೋ ರೈಲ್ವೇ ಇಲಾಖೆಯ ‘ಡಿ’ ಗುಂಪಿನ ಕೆಲಸಕ್ಕೆ ಹಿಂದೀಲಿ ಅರ್ಜಿ ಬರೀಬೇಕು ಅನ್ನೋ ನಿಯಮ ಕಾಣುತ್ತೆ. ರೈಲುಗಳ ಮೇಲೆ ಕನ್ನಡದಲ್ಲಿ ಊರಿನ ಹೆಸರು ಬರೆಯೋ ಹಾಗಿಲ್ಲಾ ಅನ್ನೋ ನಿಯಮ ಬರುತ್ತೆ. ಬ್ಯಾಂಕ್ ಕೆಲಸಕ್ಕೆ ಹತ್ತನೇ ತರಗತಿ ಅಂಕಪಟ್ಟೀಲಿ ಹಿಂದೀ ಅಂತ ಒಂದು ವಿಷಯ ಕಲಿತಿರಲೇಬೇಕು. ನಮ್ಮೂರ ರೈಲುಗಳಲ್ಲಿ, ನಮ್ಮನೆ ಅಡುಗೆ ಅನಿಲ ಸಿಲಿಂಡರ್ ಮೇಲೆ ಕನ್ನಡದಲ್ಲಿ ಸುರಕ್ಷತಾ ಸೂಚನೆ ಇರಲ್ಲ. ನಾವು ಕಲಿಯೋ ಪಠ್ಯಪುಸ್ತಕದಲ್ಲಿ ಕೂಡು, ಕಳಿ ಬದ್ಲು ಸಂಕಲನ, ವ್ಯವಕಲನ ಬರುತ್ತೆ, ಕನ್ನಡದ ಪತ್ರಿಕೆಗಳ ಜಾಹೀರಾತುಗಳಲ್ಲಿ ಚಶ್ಮಿಶ್ ಥರದ ಪದಗಳು ಬರ್ತವೆ. ಬೆಂಗಳೂರಿನ ಎಫ್.ಎಂ ತುಂಬಾ ಹಿಂದೀ ಜಾಹೀರಾತುಗಳೇ ತುಂಬಿರುತ್ತವೆ. ಭಾರತೀಯ ಸಿನಿಮಾ ಅಂದ್ರೆ, ವಾಯ್ಸ್ ಆಫ್ ಇಂಡಿಯಾ ಅಂದ್ರೆ ಬರೀ ಹಿಂದೀ ಅಂತಾಗುತ್ತೆ.... ಸದ್ಯಕ್ ಇಷ್ಟು ಸಾಕು, ಮುಂದೆ ಮತ್ತಷ್ಟು ಘೋರಗಳ ಬಗ್ಗೆ ಮಾತಾಡೋಣ ಗುರು!

ಹಿಂದೀ ಬೇಕೆನ್ನೋರು ಕೊಡೋ ಕಾರಣಗಳು

ಇಷ್ಟಕ್ಕೂ ಹಿಂದೀ ಬೇಕೂ ಅನ್ನೋ ಜನ ಯಾಕೆ ಹಾಗ್ ಅಂತಿದಾರೆ ಅಂತಾ ನೋಡುದ್ರೆ ಕಾಣೋ ಮುಖ್ಯ ಕಾರಣಗಳು ಇಂತಿವೆ. ಇವುನ್ನ ಕಾರಣ ಅಂತೀರೋ ನೆಪ ಅಂತೀರೋ ನಿಮಗೆ ಬಿಟ್ಟಿದ್ದು ಗುರು!

- ಭಾರತ ದೇಶದಲ್ಲಿ ಹಿಂದಿಯನ್ನು ತಾಯ್ನುಡಿಯಾಗಿ ಹೊಂದಿರೋರ ಜನಸಂಖ್ಯೆ ಶೇಕಡಾ 40ಕ್ಕಿಂತಾ ಹೆಚ್ಚು.
- ಭಾರತ ದೇಶದ ಹೆಚ್ಚು ಜನರಿಗೆ ಹಿಂದಿ ಬರುತ್ತದೆ.
- ಒಂದು ದೇಶಕ್ಕೆ ಒಂದೇ ಭಾಷೆ ಮಾಡುದ್ರೆ ಒಗ್ಗಟ್ಟು ಹೆಚ್ಚುತ್ತೆ.
- ಒಂದು ರಾಜ್ಯದೋರು ಮತ್ತೊಂದು ರಾಜ್ಯಕ್ಕೆ ಹೋದ್ರೆ ಒಂದು ಸಾಮಾನ್ಯ ಭಾಷೆ ಬೇಕು.

- ಹೊರನಾಡಿಗೆ ಹೋದಾಗ ಭಾರತದ ರಾಷ್ಟ್ರಭಾಷೆ ಯಾವುದು ಅಂದ್ರೆ ಏನು ಹೇಳೋದು?

- ಹಿಂದೂಸ್ತಾನ್ ಮೇ ರೆಹತೇ ಹೋ ಔರ್ ಹಿಂದೀ ನಹೀ ಮಾಲೂಮ್? ಭಾರತದಲ್ಲಿ ಇದ್‍ಮೇಲೆ ಹಿಂದೀ ಕಲೀದಿದ್ರೆ ಎಂಗೇ ಸಿವಾ?

ಮುಂದಿನ ಬರಹಗಳಲ್ಲಿ ಇವುಗಳ ಬಗ್ಗೆ ಮಾತಾಡಮಾ ಗುರು!

ಸಾವು, ವೈರಾಗ್ಯ ಮತ್ತು ರಾಜ್ ನೆನಪು!

ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಶ್ರೀ ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ತೀರ್ಕೊಂಡಿದ್ ಸುದ್ದಿ ಮನಸ್ಸಿಗೆ ಮಂಕು ಹಿಡಿಸಿದಂತಾಗಿದೆ ಗುರು! ಮನುಷ್ಯ ಎಂಥಾ ಅಧಿಕಾರ, ಅಂತಸ್ತು, ಜನಪ್ರಿಯತೆ ಎಲ್ಲಾ ಇದ್ದೂ ವಿಧಿಯಾಟದ ಮುಂದೆ ಲೆಕ್ಕಕ್ಕಿಲ್ಲ ಅನ್ನಿಸಿಬಿಡುತ್ತೆ. ಇದನ್ನು ನೋಡ್ದಾಗ ಮನಸ್ಸಿಗೆ ಕವಿಯೋ ವಿಷಾದ ಮತ್ತು ಅದು ತರೋ ನಶ್ವರ ಭಾವನೇನಾ ಅತ್ಯಂತ ಸೊಗಸಾಗಿ ತಿಳಿಸಿಕೊಡೋ ಈ ಹಾಡು ನೋಡು ಗುರು!ಡಾ. ವೈ.ಎಸ್. ಆರ್ ಆತ್ಮಕ್ಕೆ ಶಾಂತಿ ಸಿಗಲಿ!!

ಸಲ್ಲದ ಸಂಸ್ಕೃತ ದ್ವೇಷ ಮತ್ತು ವ್ಯಾಮೋಹ!


ಕರ್ನಾಟಕ ಸರ್ಕಾರ ಹೊಸದಾಗಿ ಸಂಸ್ಕೃತ ವಿಶ್ವವಿದ್ಯಾಲಯಾನ ಶುರು ಮಾಡ್ತೀವಿ ಅಂದಾಗಿಂದ ಅದುನ್ನ ಬ್ಯಾಡಾ ಅನ್ನೋರೂ, ಬೇಕೂ ಅನ್ನೋರೂ ವಾದವಿವಾದ ಮಾಡ್ತಾನೇ ಇದಾರೆ. ಇಂಥಾ ಎರಡು ದೃಷ್ಟಿಕೋನಗಳ ಎರಡು ಬೇರೆಬೇರೆ ಪಂಗಡಗಳಿಂದ ಎರಡು ಸುದ್ದಿಗಳು ಬಂದಿವೆ, ಒಂದು ಪ್ರಜಾವಾಣಿಯಲ್ಲಿ, ಮತ್ತೊಂದು ವಿಜಯಕರ್ನಾಟಕದಲ್ಲಿ!

ಸಂಸ್ಕೃತ ವಿಶ್ವವಿದ್ಯಾಲಯ ಬೇಡೆನ್ನುವವರ ವಾದ!"ಸಂಸ್ಕೃತ ಸತ್ತಭಾಷೆ, ಜನ ಬಳಸದ ಭಾಷೆ, ಇದರಲ್ಲಿ ಕನ್ನಡಿಗರಿಗೆ ಬೇಕಾದುದು ಏನೂ ಇಲ್ಲ, ಇದು ಸೃಜನಶೀಲ ಭಾಷೆಯಲ್ಲ, ಇದರಲ್ಲಿನ ಆಯುರ್ವೇದ, ದೇಗುಲ ನಿರ್ಮಾಣ ಶಾಸ್ತ್ರಗಳಂಥಾ ಅರಿಮೆಗಳೂ ಗೊಡ್ಡು ಪುರಾಣಗಳಾಗಿವೆ, ಶೂದ್ರರು ಮತ್ತು ಸ್ತ್ರೀಯರು ಕಿವಿಯಿಂದ ಕೇಳಬಾರದೆಂಬ ಮಡಿವಂತಿಕೆಯಿದ್ದ, ಕೇವಲ ಭೂಸುರರು ಮಾತ್ರಾ ಆಡಬೇಕೆಂಬ ಮಡಿವಂತಿಕೆಯಿದ್ದ ಭಾಷೆ ಅದು, ತರತಮಗಳ ಪೂರ್ವಾಗ್ರಹಗಳುಳ್ಳ ಭಾಷೆ ಅದು, ಅದು ಹೇಗೆ ತಾನೆ ಜನ ಸಾಮಾನ್ಯರ ಸಂಸ್ಕೃತಿಯನ್ನು ಕಾಪಾಡೀತು?"
ಹೀಗೆ ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆನ್ನುವವರ ವಾದದ ಸಾರದಂತೆ 31.05.2009ರ ಪ್ರಜಾವಾಣಿಯ ಏಳನೇ ಪುಟದಲ್ಲಿ ಬಂದಿರೋ ಚಂದ್ರಶೇಖರ ಕಂಬಾರರ ಸಂದರ್ಶನದೊಳಗಿನ ಮಾತುಗಳು ತೋರುತ್ತಿವೆ. ಒಟ್ಟಾರೆ ಸಂಸ್ಕೃತ ಭಾಷೆಗೆ ತಾರತಮ್ಯದ ಬೇರಿನ, ಕನ್ನಡಿಗರಿಗೆ ಬೇಕಾದ ಜ್ಞಾನವಿರದ, ಸತ್ತುಹೋದ ಭಾಷೆಯೆಂಬ ಕಾರಣಗಳನ್ನು ಈ ವಾದ ಸರಣಿಯಲ್ಲಿ ಕಾಣಬಹುದು.

ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನುವವರ ವಾದ!"ಭಾರತೀಯ ಸಂಸ್ಕೃತಿಯನ್ನು ಮತ್ತು ಧರ್ಮವನ್ನು ಮೈಗೂಡಿಸಿಕೊಳ್ಳಲು ಸಂಸ್ಕೃತ ಕಲಿಯುವಿಕೆ ಅನಿವಾರ್ಯ, ಸಂಸ್ಕೃತ ಕಲಿಯುವುದರಿಂದ ಸಮಾಜನಿಷ್ಠೆ ಮತ್ತು ರಾಷ್ಟ್ರಪ್ರಜ್ಞೆ ಹೆಚ್ಚುತ್ತದೆ, ಕಂಪ್ಯೂಟರಿಗೆ ಬೇರೆಲ್ಲಾ ನುಡಿಗಿಂತ ಚೆನ್ನಾಗಿ ಹೊಂದಿಕೊಳ್ಳುವ ಭಾಷೆ, ಇದು ಅನೇಕ ವಿದೇಶಿಯರಿಂದ, ಭಾರತ ದೇಶ ಆರಾಧಿಸುವ ಗಾಂಧಿ, ವಿವೇಕಾನಂದರಂತ ಮಹಾತ್ಮರಿಂದ, ಕುವೆಂಪುರವರಂಥ ಕನ್ನಡ ಕವಿಗಳಿಂದ, ರಾಜಾರಾಮಣ್ಣನವರಂತಹ ವಿಜ್ಞಾನಿಗಳಿಂದ, ಅಂಬೇಡ್ಕರ್ ಅವರಂತಹ ಹಿಂದುಳಿದವರ ಮುಖಂಡರಿಂದಲೂ ಒಪ್ಪಲ್ಪಟ್ಟಿದೆ, ಪ್ರತಿಪಾದಿಸಲ್ಪಟ್ಟಿದೆ, ಮೇಲ್ಜಾತಿಯವರ ಸ್ವತ್ತಲ್ಲಾ, ವಾಲ್ಮೀಕಿಯಂತಹ ಕೆಳಜಾತಿಯವರೂ ಬಳಸಿದ್ದಾರೆ, ಸಂಸ್ಕೃತ ಕಲಿತು ಹಿಂದೂವಾಗಬಹುದೆಂಬ ನಂಬಿಕೆ ಕೆಲ ವಿದೇಶಿಯರಲ್ಲಿದೆ, ಸಂಸ್ಕೃತವೆಂಬ ನೀರು ಬೇಡವೆಂದವರು ಕೊಳೆತು ನಾರಬೇಕಾಗುತ್ತದೆ."
ಹೀಗೆ ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನುವವರ ವಾದದ ಸಾರವನ್ನು 03.06.2009ರ ವಿಜಯಕರ್ನಾಟಕದ ಎಂಟನೇ ಪುಟದಲ್ಲಿ ಪ್ರಕಟವಾಗಿರೋ ಸ್ವಾಮಿ ವೀರೇಶಾನಂದ ಸ್ವಾಮಿಗಳ ಮಾತುಗಳು ತೋರಿಸಿಕೊಡುತ್ತಿವೆ. ಒಟ್ಟಾರೆ ಸಂಸ್ಕೃತ ಭಾಷೆಯನ್ನು ಪ್ರತಿ ಹಿಂದುಗಳೂ ಕಲಿಯಬೇಕು, ಇದನ್ನು ಕಲಿಯದ ಹಿಂದುವಿನ ಬಾಳು ಅಪೂರ್ಣ, ಹಾಗಾಗಿ ಸಂಸ್ಕೃತ ವಿಶ್ವವಿದ್ಯಾಲಯ ಬೇಡೆನ್ನುವುದು ದುರದೃಷ್ಟಕರ, ಎಲ್ಲರೂ ಸಂಸ್ಕೃತ ಕಲಿಯಬೇಕು ಎಂಬ ಅಭಿಪ್ರಾಯವನ್ನು ಇವರು ವ್ಯಕ್ತಪಡಿಸಿದ್ದಾರೆ.

ವಾಸ್ತವ ಇವೆರಡರಿಂದಲೂ ದೂರ!

ಎರಡೂ ವಾದಗಳಲ್ಲಿ ಸತ್ಯವೆನಿಸೋ ಕೆಲವು ಅಂಶಗಳೂ, ಸುಳ್ಳೆನ್ನಿಸುವ ಅಂಶಗಳೂ ಇವೆ. ಸಂಸ್ಕೃತದಲ್ಲಿ ಏನೇನೂ ಇಲ್ಲ ಎಂಬುದನ್ನು ಒಪ್ಪುವುದು ಎಷ್ಟು ಕಷ್ಟವೋ ಸಂಸ್ಕೃತ ಕಲಿಯುವುದರಿಂದ ರಾಷ್ಟ್ರಪ್ರಜ್ಞೆ ಹೆಚ್ಚುತ್ತದೆ ಎನ್ನುವುದನ್ನೂ ಒಪ್ಪುವುದೂ ಅಷ್ಟೇ ಕಷ್ಟ. ಅಧ್ಯಾತ್ಮದ ಸಾಕಷ್ಟು ಸಾರ ಸಂಸ್ಕೃತದಲ್ಲಿದೆ ಎಂಬುದನ್ನೂ ಒಪ್ಪುವಂತೆಯೇ ಸಂಸ್ಕೃತದಿಂದ ಕನ್ನಾಡಕ್ಕೆ ಬರಬೇಕಾದದ್ದೂ ಇದೆ ಎನ್ನುವುದನ್ನೂ ಒಪ್ಪಬೇಕಾಗಿದೆ.
ಆದರೆ ಸಂಸ್ಕೃತ ದೇವಭಾಷೆ ಅನ್ನುತ್ತಾ ಅದಕ್ಕೊಂದು ಶಿಖರ ಸ್ಥಾನ ಕೊಡುತ್ತಾ ಇದರಿಂದಲೇ ಮನುಷ್ಯನಿಗೆ ಸಂಸ್ಕಾರ ಬರುವುದು, ಇದರಿಂದಲೇ ಸುಸಂಕೃತನಾಗೋದು, ರಾಷ್ಟ್ರಪ್ರೇಮ ಉಕ್ಕೋದು ಎಂದೆಲ್ಲಾ ಕಥೆ ಹೊಡೆಯೋದು ತಪ್ಪು ಗುರು! ನಿಜವಾಗಿಯೂ ’ಸಂಸ್ಕೃತದಲ್ಲಿ ಅದ್ಭುತ ಜ್ಞಾನ ಇದೆ, ಅದನ್ನು ಅರಿಯಲು ಇಡೀ ನಾಡಿನ ಎಲ್ಲಾ ಪ್ರಜೆಗಳೂ ಸಂಸ್ಕೃತ ಕಲೀಬೇಕು’ ಅನ್ನುವಂಥಾ ಮನಸ್ಥಿತಿಯೇ ಪೆದ್ದುತನದ್ದಲ್ವಾ ಗುರು? ನಿಜವಾಗ್ಲೂ ಜನರಿಗೆಲ್ಲಾ ಆ ಜ್ಞಾನ ಸಿಗಬೇಕು ಅನ್ನೋದಾದ್ರೆ, ಹಾಗೆ ಇರೋ ಜ್ಞಾನಾನೆಲ್ಲಾ ಕನ್ನಡಕ್ಕೆ ತರೋದ್ರಿಂದಲೇ ಕನ್ನಡದ ಜನಕ್ಕೆ ಅದು ಸಿಗಲು ಸಾಧ್ಯವಾಗೋದು. ಇವತ್ತಿನ ದಿನ ಸಂಸ್ಕೃತ ವಿಶ್ವವಿದ್ಯಾಲಯ ಬೇಕು ಬೇಕು ಎಂದು ಪತ್ರಿಕೆಗಳಲ್ಲಿ ಬರೆಯುತ್ತಿರೋ ಜನಾ ಅರಿಯದೇ ಇರೋ ಸತ್ಯವೂ ಇದೇ... ಸಂಸ್ಕೃತ ಸಂಸ್ಕೃತದಲ್ಲೇ ಇದ್ದರೆ ಕನ್ನಡಿಗರನ್ನು ಪರಿಣಾಮಕಾರಿಯಾಗಿ ಮುಟ್ಟಲಾರದು. ಸಂಸ್ಕೃತ ಸುಭಾಷಿತಗಳು ಕನ್ನಡದ ವ್ಯಾಖ್ಯಾನವಿಲ್ಲದೆ ಕನ್ನಡಿಗರನ್ನು ತಲುಪಲಾರವು. ಇಂಥಾ ಕೆಲ್ಸಾನ ಮಾಡಬಲ್ಲ, ಸಂಸ್ಕೃತದಲ್ಲಿನ ಅರಿವನ್ನು ಕನ್ನಡಿಗರಿಗೆ ಕನ್ನಡದಲ್ಲಿ ತಲುಪಿಸಲು ಮುಂದಾಗೋ ಅಧ್ಯಯನ ಕೇಂದ್ರ ನಮ್ಮಲ್ಲಿದ್ದರೆ ಸಾಲದಾ ಗುರು! ಅದು ಬಿಟ್ಟು ಕನ್ನಡದೋರಿಗೆಲ್ಲಾ ಪಾಣಿನಿಯನ್ನು ಕಲಿಸೋದಷ್ಟೇ ಗುರಿಯಾಗಿಟ್ಟುಕೊಳ್ಳೋ ವಿಶ್ವವಿದ್ಯಾಲಯಗಳು ಬೇಕಾಗಿಲ್ಲ! ನಾವು ಹೇಳೋದು ಇಷ್ಟೇ: ಈ ವಿವಿಯಿಂದ ಬರೀ ಸಂಸ್ಕೃತದ ಪಂಡಿತರು ಹೊರಬರೋದಾದ್ರೆ ಇದು ಬೇಡ್ವೇ ಬೇಡ. ಇವತ್ತಿನ ದಿನ ಇನ್ನಷ್ಟು ಸಂಸ್ಕೃತದ ಪಂಡಿತರನ್ನ ಹೆತ್ತು ಕನ್ನಡದ ತಾಯಿ ಏನನ್ನೂ ಸಾಧಿಸಬೇಕಾಗಿಲ್ಲ.

ಪ್ರಮುಖವಾದ ವಿಷಯ!

ಆದ್ರೆ ಅದಕ್ಕಿಂತ ಮುಖ್ಯವಾದ ವಿಷ್ಯ ಇನ್ನೊಂದಿದೆ. ಇವತ್ತಿನ ದಿನ ಪ್ರೆಂಚ್ ಅಥವಾ ಲ್ಯಾಟೀನ್ ಭಾಷೆಗಳಲ್ಲಿ ಬಹಳ ಪುರಾತನವಾದ ಜ್ಞಾನಭಂಡಾರವಿದೆ, ಆದ್ದರಿಂದ ಕನ್ನಡಿಗರಿಗೆಲ್ಲಾ ಫ್ರೆಂಚು ಮತ್ತು ಲ್ಯಾಟಿನ್ನುಗಳನ್ನು ಕಲಿಸಲು ವಿಶ್ವವಿದ್ಯಾಲಯವೊಂದನ್ನು ಕರ್ನಾಟಕದಲ್ಲಿ ತೆರೆಯುವುದು ಸರಿಯೋ? ಅಥವಾ ಫ್ರೆಂಚು, ಲ್ಯಾಟಿನ್ನುಗಳಲ್ಲಿರೋ ಜ್ಞಾನ ಕನ್ನಡದೋರಿಗೆ ಸಿಗುವಂತಾಗಲು ಅದನ್ನು ಕನ್ನಡಕ್ಕೆ ತರುವುದು ಸರಿಯೋ? ಹಾಗೆ ತೆರೆಯೋದು ತಪ್ಪೇನು ಅಲ್ಲವಲ್ಲಾ? ಆದರೆ ಈಗ ಫ್ರೆಂಚು, ಲ್ಯಾಟಿನ್ನು, ಸಂಸ್ಕೃತಗಳ ಜ್ಞಾನಭಂಡಾರಾನಾ ಕನ್ನಡಕ್ಕೆ ತರುವುದು ಆದ್ಯತೆಯೇನು? ಕನ್ನಡ ನುಡಿಯರಿಮೆಯ ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಾದ ಸಾವಿರಾರು ಕೆಲಸಗಳು ಇವೆ. ಅದನ್ನೆಲ್ಲಾ ಆದ್ಯತೆ ಪಟ್ಟಿಯ ಬುಡಕ್ಕೆ ತಳ್ಳಿ ಅದರ ಪಾಯದ ಮೇಲೆ ಈ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟಲು ನಮ್ಮ ಸರ್ಕಾರ ಮುಂದಾಗಿರುವುದು ಎಷ್ಟು ಸರಿ? ಕನ್ನಡದ ಸ್ವರೂಪದ ಅಧ್ಯಯನ, ವ್ಯಾಕರಣದ ಅಧ್ಯಯನ, ಕನ್ನಡ ನುಡಿಯನ್ನು ಅನ್ನದ ನುಡಿಯಾಗಿಸೋದಕ್ಕೆ ಬೇಕಾದ ಹೆಜ್ಜೆಗಳು, ಕನ್ನಡದಲ್ಲಿ ಶಿಕ್ಷಣ ವ್ಯವಸ್ಥೆ ಕಟ್ಟೋಕೆ ಏನು ಮಾಡಬೇಕು? ಕನ್ನಡಿಗರ ಏಳಿಗೆಗೆ ಕನ್ನಡವನ್ನೇ ಪರಿಣಾಮಕಾರಿಯಾದ ಸಾಧನವಾಗ್ಸೋದು ಹ್ಯಾಗೆ?... ಅನ್ನೋದೆಲ್ಲಾ ಕರ್ನಾಟಕ ಸರ್ಕಾರದ ಆದ್ಯತೆ ಪಟ್ಟೀಲಿ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟೋಕ್ಕಿಂತ ಮೇಲಿರಬೇಕಾಗಿದೆ ಗುರು.
Related Posts with Thumbnails