ರೆಡ್ ಎಫ್.ಎಂ : ಕೆಂಪಾದವೋ ಎಲ್ಲಾ ಕೆಂಪಾದವೋ!!
ಎಡವಟ್ಟು ದಾರಿ ಹಿಡಿದ ರೇಡಿಯೋ ಒನ್!
ಎಫ್.ಎಂಗಳು ಅರಿತ ದಿಟ! ಕಲಿತ ಪಾಟ!!
ಒಂದರ ಹಿಂದೊಂದು ಸಾಲಾಗಿ...
ಇದಾದ ನಂತರ ಇತರೆ ವಾಹಿನಿಗಳಲ್ಲೂ ಕನ್ನಡದ ಅನಿವಾರ್ಯತೆ ಪ್ರಭಾವ ಬೀರಿತು. ಮುಂದೆ ಬೆಂಗಳೂರಿನ ಅತ್ಯಂತ ಜನಪ್ರಿಯ ರೇಡಿಯೋ ಸ್ಟೇಷನ್ ಅಂದ್ರೆ ಅಲ್ಲಿ ಕನ್ನಡವೇ ಪ್ರಧಾನ ಅನ್ನೋ ಪರಿಸ್ಥಿತಿ ಹುಟ್ತು. ಕೆಲವು ಚಾನೆಲ್ಲುಗಳು ಬೇರೆ ಬೇರೆ ಪ್ರಮಾಣದಲ್ಲಿ ಹಿಂದಿ ಕನ್ನಡ ಬೆರೆಸೋ ಪ್ರಯೋಗ ಮಾಡಿದರೂ ಅಂತಹ ಕ್ರಮ ಅವುಗಳಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆಯುಂಟು ಮಾಡಿತೆಂದೇ ಹೇಳಬೇಕು. ಇದಕ್ಕೆ ಸಾಕ್ಷಿ ಅಂದ್ರೆ ಹಿಂದೆಲ್ಲಾ ಬೊಂಬಾಟ್ ಕನ್ನಡ : ಬೊಂಬಾಟ್ ಹಿಂದಿ ಅನ್ನುತ್ತಿದ್ದ ಫೀವರ್ 104 ಕಳೆದೊಂದು ವಾರದಿಂದ ಬೊಂಬಾಟ್ ಕನ್ನಡ ಅಷ್ಟೆ ಅನ್ನಕ್ಕೆ ಶುರು ಮಾಡಿರೋದು.ಫಿವರ್ ಎಫ್ಎಂನಲ್ಲೀಗ ಬೊಂಬಾಟ್ ಕನ್ನಡ ಹಾಡುಗಳು!
ಬೆಂಗಳೂರಿನ ಫಿವರ್ ಅನ್ನೋ ಹೆಸರಿನ ಎಫ್.ಎಂ ಚಾನಲ್ಲಿನಲ್ಲೀಗ ಬದಲಾವಣೆಯ ಹೊಸ ತಂಗಾಳಿ ಬೀಸಿ ಬರ್ತಿದೆ ಗುರು. ಇತ್ತೀಚಿಗೆ ಕೆಲವು ದಿನಗಳಿಂದ ಇವ್ರು ಬೊಂಬಾಟ್ ಕನ್ನಡ ಹಾಡುಗಳು ಅನ್ನಕ್ ಶುರು ಹಚ್ಕೊಂಡಿದಾರೆ. 104 ಮೆಗಾಹರ್ಟ್ಸ್ ತರಂಗಾಂತರದಲ್ಲಿ ಪ್ರಸಾರ ಆಗ್ತಿರೋ ಈ ವಾಹಿನಿಯೋರು ಮೊದಲಿಗೆ ಹೆಚ್ಚೆಚ್ಚು ಇಂಗ್ಲಿಷ್ ಹಾಡುಗಳ್ನ ಹಾಕ್ತಿದ್ರು. ಆಮೇಲೆ ಹಿಂದಿ ಇಂಗ್ಲಿಷ್ ಅಂತ ಬದಲಾದ್ರು. ಇದೀಗ ಬೊಂಬಾಟ್ ಕನ್ನಡ ಹಾಡುಗಳು ಅಂತ ಸಾಕಷ್ಟು ಕನ್ನಡ ಹಾಡುಗಳ್ನ ಹಾಕಕ್ಕೆ ಶುರುಮಾಡಿದಾರೆ ಗುರು.ಬೆಂಗಳೂರಿನಲ್ಲಿ ಮಾರುಕಟ್ಟೆ ಗೆಲ್ಲೋ ದಾರಿ!
ಇವತ್ತಿನ ದಿನ ಬೆಂಗಳೂರಿನಲ್ಲಿ ಮಾರುಕಟ್ಟೆ ಮೇಲೆ ಹಿಡಿತಕ್ಕೆ ಅಂತ ಬೇರೆ ಬೇರೆ ಎಫ್.ಎಂ ವಾಹಿನಿಯೋರು ಭರ್ಜರಿ ಪೈಪೋಟಿ ನಡುಸ್ತಾ ಇದಾರೆ ಗುರು. ಸಹಜವಾಗಿ ಇರೋ ಕನ್ನಡ ಮಾರುಕಟ್ಟೆಯನ್ನು ಹೆಚ್ಚಿನವ್ರು ಮೊದಲು ಮೊದಲು ಉಡಾಫೆ ಮಾಡಿ ವಲಸಿಗ್ರನ್ನು ಮೆಚ್ಸೋ ಯತ್ನಕ್ಕೆ ಕೈ ಹಾಕಿದ್ದೂ, ಆಮೇಲೆ ಈ ಸಹಜ ಮಾರುಕಟ್ಟೇನ ಗುರುತ್ಸಿ ಬದಲಾದದ್ದು ನಾವು ನೋಡ್ತಾನೆ ಇದೀವಿ. ರೇಡಿಯೋ ಮಿರ್ಚಿ ಆ ಸಾಲಲ್ಲಿ ಮೊದಲ್ನೇದು. ಇದ್ರಲ್ಲಿ ಕನ್ನಡ ಹಾಡುಗಳು ಶುರುವಾಗಿದ್ದೆ ಆಗಿದ್ದು ಮಾರುಕಟ್ಟೇಲಿ ಮೊದಲ ಸ್ಥಾನಕ್ಕೆ ಜಿಗೀತು. ಇದರ ಯಶಸ್ಸಿನ ಬೆನ್ನ ಹಿಂದೇನೆ ಇತ್ತೀಚಿಗೆ ರೇಡಿಯೋ ಸಿಟಿ ಸಿಕ್ಕಾಪಟ್ಟೆ ಕನ್ನಡ ಹಾಡುಗಳು ಅನ್ನಕ್ ಶುರು ಹಂಚ್ಕೊಂತು. ಇದೀಗ ಬದಲಾವಣೆಯ ಸರದಿ ರೇಡಿಯೋ ’ಎಫ್.ಎಂ 104 - ಫಿವರ್’ದು. ಈ ಬದಲಾವಣೆಗಳು "ಬೆಂಗಳೂರಿನಲ್ಲಿ ಕನ್ನಡ ಇಲ್ಲ, ಇದು ಬಹುಭಾಷಾ ನಗರ, ಇದು ಕನ್ನಡಿಗರದ್ದಲ್ಲ, ಬೆಂಗಳೂರೇ ಬೇರೆ, ಕರ್ನಾಟಕವೇ ಬೇರೆ" ಅಂತೆಲ್ಲಾ ವಟಗುಟ್ಟುತಿರೋರ ಬಾಯಿಗೆ ಬೀಗ ಹಾಕೋದ್ರಲ್ಲಿ ಅನುಮಾನವೇ ಇಲ್ಲ! ಏನಂತೀ ಗುರು?
ಬೆಂಗಳೂರಾಗ ಕನ್ನಡಾ ಮಂದಿ ಕಮ್ಮಿ ಅದಾರಂತಾ ಯಾ ಮಗಾ ಅಂತಾನಾ?
ಮೊನ್ನಿ ಟೈಮ್ಸ್ ಆಫ್ ಇಂಡಿಯಾದಾಗ್ ಬಂದಿರು ಸುದ್ದಿ ಪ್ರಕಾರ ಬೆಂಗಳೂರಾಗ ರೇಡಿಯೋ ಮಿರ್ಚಿ ಈಗಾ ನಂಬರ್ ಒನ್ ಆಗೈತಂತ್ರಿಪಾ. ಅಷ್ಟ ಅಲ್ರಿ, ಕನ್ನಡ ಹಾಡ ಹಾಕು ನಾಕು ಕೇಂದ್ರಗಳಾದ ರೇಡಿಯೋ ಮಿರ್ಚಿ, ಬಿಗ್ ಎಫ್.ಎಂ, ಎಸ್.ಎಫ್.ಎಂ ಮತ್ತು ವಿವಿಧ ಭಾರತಿಗಳನ್ನು ಬೆಂಗಳೂರಾಗಿನ್ 75% ಮಂದಿ ಕೇಳಲಿಕ್ ಹತ್ಯಾರಂತ. ನಿನ್ನಿ ಮೊನ್ನಿ ಮಟ " ಏ ಬಿಡೋಪಾ, ಬೆಂಗಳೂರನಾಗ್ ಕನ್ನಡ ಹಾಡಾ ಯಾವ್ ಮಂಗ್ಯಾ ನನ ಮಗಾ ಕೇಳತಾನ", "ಬೆಂಗಳೂರನಾಗ ಕನ್ನಡದಾಗ್ ಜಾಹಿರಾತು ಕೊಟ್ರ ವ್ಯಾಪಾರ ಆಗಂಗಿಲ್ಲ" ಅಂತಿದ್ರಲ್ಲ, ಅವರೆಲ್ಲಾರದು ಬಾಯಿ ಚಲೋತ್ನಾಗ ಬಂದ್ ಆಗೆತ್ರಿ ಮತ್ತಾ.ಯವಾಗ ನೋಡಿದ್ರು ಬೆಂಗಳೂರಾಗ ಕನ್ನಡದೋರು ಭಾಳ ಕಮ್ಮಿ ಅದಾರ, ಇಲ್ಲೇನಿದ್ರು ಹೊರಗಿನ ಮಂದಿನಾ ಜಾಸ್ತಿ ಅದಾರ ಅನ್ನು ಪೊಳ್ಳು ವಾದ ಹೇಳ ಹೆಸರಿಲ್ಲದಂಗ್ ಹಳ್ಳ ಹಿಡದೇತ್ರಿ. ನೀವಾ ಹೇಳ್ರಲಾ, ಕನ್ನಡ ಮಂದಿ ರಗಡ್ ಇಲ್ಲ ಅಂದ್ರ ಬರೀ ಕನ್ನಡ ಹಾಡ ಹಾಕೂ ಸ್ಟೇಷನ್ನು ಹ್ಯಾಂಗ ನಂಬರ್ ಒನ್ ಆಗತೈತಿ?
ಐಟಿ ಬಿಟಿ ಅಂತ ಒಂದೀಟು ಹೊರಗಿನ ಮಂದಿ ಬಂದಾರ ಅಂದ ಕೂಡ್ಲೆ, ಬೆಂಗಳೂರಾಗ ಕನ್ನಡದೋರು ಇಲ್ಲೇ ಇಲ್ಲ, ಇನ್ನ ಮ್ಯಾಲೆ ಇಲ್ಲಿ ಬರೀ ಹಿಂದಿನಾ ನಡಿಯೋದ ಅಂತ ಅನ್ಕೊಂಡು ಅಡ್ಡಾಡಿದ ಮಂದಿ ಬಾಯಿಗ ಬೂಚ್ ಬಿದ್ದಂಗ್ ಖರೇನಾ ಆಗೈತಿ.
ರೊಕ್ಕ ಮಾಡ್ಬೇಕು ಅಂದ್ರ ಕನ್ನಡದಾಗ್ ಜಾಹೀರಾತು ಕೊಡ್ರಿ
ಅಷ್ಟ ಅಲ್ರೀ, ರೇಡಿಯೋ ಮಿರ್ಚಿ ಮಾರಾಟ ವಿಭಾಗದ ಮುಖ್ಯಸ್ಥ ನವೀನ ಚಂದ್ರ ಅವರ ಹೇಳಿರು ಮಾತ್ ನೋಡ್ರಿ. ಅವರಂತಾರಾ:
Advertisers need to break out of the common perception that Kannada is not hip. Kannada is very hot right now.Kannadigas have the highest purchasing power in Bangalore. If any advertiser wants to reach the best audience in Bangalore, they have to bet on Kannada. The fact that The Times of India has started its Kannada edition in addition to Vijay Karnataka demonstrates that kannada is the most important vehicle to reach Bangaloreans," adds Naveen Chandra, Radio Mirchi's national sales head.
ಇದರ ಅರ್ಥ ಬಾಳ ಸರಳ ಐತ್ರಿ. ಬೆಂಗಳೂರಿನ ಮಂದಿನ ಮುಟ್ಟಾಕ್ ಇರು ಒಂದಾ ಹಾದಿ ಅಂದ್ರ ಕನ್ನಡ. ಬೆಂಗಳೂರನಾಗ ಚಲೋತ್ನಾಗ್ ಯಾಪಾರ ವಹಿವಾಟು ಮಾಡ್ಬೇಕು ಅಂದ್ರ, ನಿಮ್ಮ ನಿಮ್ಮ ಉತ್ಪನ್ನಗೋಳ ಮಾರಾಟ ಹೆಚ್ಚಿಸಬೇಕ್ ಅಂದ್ರ ಒಂದಾ ಹಾದಿ. ಅದಾ ಕನ್ನಡದಾಗ್ ಜಾಹಿರಾತು ಕೊಡುದ್ರಿ.
ಆಮ್ಯಾಲ್ ಅದು ಬೇಕಾರ್ ವಿಮಾನ್ ನಿಲ್ದಾಣ ಇರಲಿ, ಬಸ್ ಸ್ಟಾಪ್ ಇರಲಿ, ಮಾಲ್ ಇರಲಿ, ಇಲ್ಲ ರೇಡಿಯೋ ಸ್ಟೇಷನ್ ಇರಲಿ ಕನ್ನಡದಾಗ ಜಾಹೀರಾತು ಕೊಡ್ರಿ, ನಿಮ್ಮ ವ್ಯಾಪಾರ ಏರಲಿಲ್ಲ ಅಂದ್ರ ನೋಡ್ರಿ, ನಮ್ ಉಳವಿ ಬಸವಣ್ಣನ ಮ್ಯಾಲ್ ಆಣಿ.
ಎಲ್ಲದರ ಅರ್ಥ ಒಂದಾ ರೀ, ಬೆಂಗಳೂರಿನಾಗಾರ ಆತು, ಕರ್ನಾಟಕದಾಗಿನ ಬ್ಯಾರೀ ಊರಾಗಾರಾ ಆತು, ಕನ್ನಡಿಗನೇ ಸಾರ್ವಭೌಮ ಅದಾನ ಅಂತ. ಹೌದಲ್ರಿ ಗುರುಗಳಾ?
ಹೆಚ್ಚಿನ ಓದಿಗೆ: KARNATIQUE: Kannadigas in Bengaluru - truths and hard truths
ಬೆಂಗ್ಳೂರಿನ ಗುಟ್ಟು ಬಾನುಲಿಯಲಿ ರಟ್ಟು
ಇತ್ತೀಚಿನ ಬಾನುಲಿ ಕೇಳುಗರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಮೂಂಚೂಣಿಯಲ್ಲಿರೋ ಎಫ್ ಎಂ ವಾಹಿನಿಗಳ ಪಟ್ಟಿ ಬಿಡುಗಡೆ ಆಗಿದೆ. ಹೆಚ್ಚಾಗಿ ಕನ್ನಡದಲ್ಲೇ ಪ್ರಸಾರ ಮಾಡೋ ಬಿಗ್ ಎಫ್.ಎಂ., ರೇಡಿಯೋ ಮಿರ್ಚಿ, ಎಸ್ ಎಫ್.ಎಂ. ಮತ್ತು ರೇಡಿಯೋ ಒನ್ - ಇವುಗಳು ಈ ಪಟ್ಟೀಲಿ ಪ್ರಮುಖ ಸ್ಥಾನದಲ್ಲಿದ್ದು ಬೆಂಗಳೂರಲ್ಲಿ ಕನ್ನಡಿಗ ಕೇಳುಗರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಅನ್ನೋದು ಇದರಿಂದ ಸ್ಪಷ್ಟವಾಗಿ ಹೊರಗೆ ಬಂದಿದೆ. ಬೆಂಗ್ಳೂರಲ್ಲಿ ಕನ್ನಡಿಗರು ಇಲ್ಲವೇ ಇಲ್ಲ, ಇರೋರೂ ಕನ್ನಡದ ಹಾಡು ಕೇಳಲ್ಲ ಅಂತ ಅನ್ಕೊಂಡಿರೋರ ಮುಖಕ್ಕೆ ಈ ಪಟ್ಟಿ ಮಂಗಳಾರತಿ ಎತ್ತಿದೆ ಗುರು!ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಮನೆ ಮಾತಾಗಿರುವ ಆಕಾಶವಾಣಿ ಕೇಳುಗರ್ನ ಗಣನೆಗೆ ತೊಗೊಂಡಿಲ್ಲ ಅನ್ನೋದನ್ನ ಮರೀಬೇಡಿ! ಇವರನ್ನೂ ಸೇರಿಸಿಕೊಂಡರೆ ಶೇಕಡ 90ಕ್ಕೂ ಹೆಚ್ಚು ಬಾನುಲಿ ಕಾರ್ಯಕ್ರಮ ಕೇಳುಗರು ಕನ್ನಡ ಪ್ರಸಾರ ಮಾಡುವ ಬಾನುಲಿ ವಾಹಿನಿಗಳ ಜೊತೆಗೇ ಇರೋದು ಅನ್ನೋ ಅಂಕಿ-ಅಂಶ ಹೊರಗೆ ಬರತ್ತೆ.
ಈ ವಿವರಗಳು ಸಾರಿ ಸಾರಿ ಹೇಳ್ತಿರೋದು ಬೆಂಗಳೂರಲ್ಲಿ ಇರೋ ಮಾರುಕಟ್ಟೆ ಕನ್ನಡದ್ದು ಅನ್ನೋದನ್ನೇ. ಹಿಂದಿ ಹಾಡುಗಳ್ನ ಪ್ರಾಸಾರ ಮಾಡ್ಕೊಂಡು ಶುರುವಾಗಿದ್ದ ರೇಡಿಯೋ ಮಿರ್ಚಿಗೆ ರಂಗು ಬಂದಿದ್ದು ಔರು ಕನ್ನಡದ ಮಾರುಕಟ್ಟೇನ ಅರ್ಥ ಮಾಡ್ಕೊಂಡ ಮೇಲೆ ಮಾತ್ರ ಅಂತ ಈಗಾಗ್ಲೇ ತೋರಿಸಿಕೊಟ್ಟಾಗಿದೆ.
ಇನ್ನು ಕನ್ನಡ ಕಡೆಗಣಿಸಿರೋ ’ರೇಡಿಯೋ ಸಿಟಿ’ ನ ಇಡೀ ಸಿಟೀನೇ ಕಡೆಗಣಿಸಿದೆ ಅನ್ನೋದೂ ಇದೇ ಸಮೀಕ್ಷೆಯಿಂದ ಹೊರಕ್ಕೆ ಬಂದಿದೆ. ಹಿಂದಿಜ್ವರ ಹತ್ತಿರೋ ಫೀವರ್ ಎಫ್. ಎಂ. ಗಂತೂ ಆ ಜ್ವರದಿಂದ ಲಕ್ವಾ ಹೊಡೆಯೋ ಮುಂಚೆ ಕನ್ನಡದ ಮಾತ್ರೆ ತೊಗೊಂಡು ಚೇತರಿಸಿಕೊಳ್ಳಬೇಕು ಅನ್ನೋ ಉಪದೇಶಾನ ಈ ಸಮೀಕ್ಷೆ ಬಿಟ್ಟಿಯಾಗಿ ಕೊಟ್ಟಿದೆ! ಬುದ್ಧಿವಂತ್ರು ಅರ್ಥ ಮಾಡ್ಕೋಬೇಕು, ಅಷ್ಟೆ.
ವಾಹಿನಿಗಳಲ್ಲಿ ಹಿಂದೀಲಿ, ಇಂಗ್ಲೀಷಲ್ಲಿ ಜಾಹೀರಾತು ಕೊಟ್ಟಿರೋನಿಗೆ ಯಾಕೆ ನಾನಿನ್ನೂ ಬೆಂಗಳೂರಲ್ಲಿ ಹೆಚ್ಚು ವ್ಯಾಪಾರ ಮಾಡಕ್ಕಾಗಿಲ್ಲ ಅಂತ ನಿದ್ದೆ ಬರದೇ ಇರಬಹುದು. ಅವನಿಗೂ ಈ ಸಮೀಕ್ಷೆಯಲ್ಲೇ ಪಾಠ ಇದೆ. ಬುದ್ದಿವಂತನಾದೋನು ಆ ಪಾಠ ಕಲ್ತು, ಕನ್ನಡದಲ್ಲೇ ಜಾಹೀರಾತುಗಳ್ನ ಮಾಡಿ ತನ್ನ ವ್ಯಾಪಾರ ಹೆಚ್ಚುಸ್ಕೋತಾನೆ. ಈ ಬುದ್ಧಿವಂತಿಕೆ ತೋರಿಸೋರೂ ಸಕ್ಕತ್ ಜನ ಇದಾರೆ, ಇಲ್ಲದೆಯೇನಿಲ್ಲ. ಔರು ಮಾರುಕಟ್ಟೇಲಿ ಹೆಚ್ಚುಹೆಚ್ಚು ಜನರನ್ನ ಮುಟ್ತಾರೆ, ಪೆದ್ದರು ಸೋಲ್ತಾರೆ, ಅಷ್ಟೆ.
ಇದೆಲ್ಲಾ ಓದುದ್ರೆ ಬೆಂಗ್ಳೂರಲ್ಲಿ ಮತ್ತೊಮ್ಮೆ ಕನ್ನಡಿಗರ ಸಂಖ್ಯೆ ಹೆಚ್ತಾ ಇದೆ ಅಂತ ಯಾರಿಗಾದರೂ ಅನ್ನಿಸಬಹುದು. ಆದ್ರೆ ನಿಜಾಂಶ ಏನಪ್ಪಾ ಅಂದ್ರೆ - ಆ ಪ್ರಾಬಲ್ಯ ಹೋಗೇ ಇರಲಿಲ್ಲ. ಹೋದಂಗೆ ಮಾಧ್ಯಮಗಳು ಮಾಡಿದ್ವು, ಅಷ್ಟೆ.
ಕನ್ನಡಿಗರಿಗೆ ಹಿಂದಿ ಜಾಹೀರಾತು ಯಾಕೆ ಮಣ್ಣು ಹುಯ್ಕೊಳಕ್ಕೆ?
ಆದ್ರೆ ಅದೇ ರೇಡಿಯೋ ಮಿರ್ಚಿ ಕೇಸರಿಬಾತಲ್ಲಿ ಸಿಗೋ ಕೂದ್ಲು ಥರಾ ಬೇಡಾಂದ್ರೂ ಕನ್ನಡ ಹಾಡುಗಳ ನಡುವೆ ಹಿಂದಿಯಲ್ಲಿ ಜಾಹೀರಾತುಗಳ್ನ ಕನ್ನಡದ ಕೇಳುಗಂಗೆ ಕೇಳಿಸುತ್ತಿದೆಯಲ್ಲ ಗುರು? ಇದರಿಂದ ಕೇಳುಗ-ಕೇಳಿಸುಗಗಳಿಬ್ಬರಿಗೂ ಕಷ್ಟ, ನಷ್ಟ! ಜಾಹೀರಾತು ಕೊಡೋರಿಗೂ ಕೇಳೋರಿಗೂ ಕನ್ನಡದಲ್ಲೇ ಜಾಹೀರಾತು ಯಾಕಿರಬೇಕು ಅನ್ನೋದನ್ನ ಸ್ಪಷ್ಟ ಮಾಡಕ್ಕೆ ಈ ಬರಹ.
ಒಂದು ಜಾಹೀರಾತಿನ ಉದ್ದೇಶವಾದರೂ ಏನು?
ಇವತ್ತಿನ ದಿನ ಕನ್ನಡದ ಎಫ್.ಎಂ. ಚಾನೆಲುಗಳಲ್ಲಿ - ಅದೂ ರೇಡಿಯೋ ಮಿರ್ಚಿಯಲ್ಲಿ - ಹಿಂದಿ ಜಾಹೀರಾತುಗಳು ಬರುತ್ತಿರೋದು ನೋಡಿದರೆ ಆಯಾ ಕಂಪನಿಯ ಜನರಿಗೆ ಜಾಹೀರಾತು ಅಂದ್ರೆ ಏನೂಂತಾನೇ ಮರೆತುಹೋಗಿದೆಯೇನೋ ಅನ್ನಿಸುತ್ತೆ ಗುರು! ಆದ್ದರಿಂದ ನೆನಪಿಸಿ ಕೊಡೋಣ:
- ಜಾಹೀರಾತು ಬಿತ್ತರವಾಗುವ ಕ್ಷೇತ್ರದಲ್ಲಿ ಆದಷ್ಟೂ ಮಾರುಕಟ್ಟೆಯನ್ನು ಮುಟ್ಟಬೇಕು
- ಜಾಹೀರಾತು ಯಾರಿಗೋಸ್ಕರ ಮಾಡಿದೆಯೋ ಅವರ ಮನಕ್ಕೆ ನೇರವಾಗಿ ನಾಟಬೇಕು
ಜಾಹೀರಾತು ಕನ್ನಡದಲ್ಲಿ ಇದ್ರೇನೇ ಹೆಚ್ಚು ಪರಿಣಾಮಕಾರಿ
ಜಾಹೀರಾತುಗಳ್ನ ಕನ್ನಡದಲ್ಲೇ ಮಾಡೋದ್ರಿಂದ ಬರೀ ಲಾಭಾನೇ ಇರೋದು. ನಷ್ಟ ಅನ್ನೋದಿಲ್ಲ. ಏನು ಲಾಭ? ಮೊದಲ್ನೇದಾಗಿ ಮೇಲೆ ಹೇಳಿರೋ ಯಾವುದೇ ಜಾಹೀರಾತಿನ ಮೂಲ ಉದ್ದೇಶಗಳೆರಡೂ ಜಾಹೀರಾತುದಾರ ಈಡೇರಿಸಿದಂಗಾಗತ್ತೆ. ಅಂದರೆ - ಆದಷ್ಟೂ ಹೆಚ್ಚು ಗ್ರಾಹಕರನ್ನು ಮುಟ್ಟಬಹುದು, ಜೊತೆಗೆ ಗ್ರಾಹಕರಿಗೆ ಆದಷ್ಟೂ ಪರಿಣಾಮಕಾರಿಯಾಗಿ ತಂತಮ್ಮ ವಸ್ತು/ಸೇವೆಯನ್ನು ಮಾರಾಟ ಮಾಡಬಹುದು. ಇದೇ ತಾನೆ ಬೇಕಾಗಿರೋದು? ಕನ್ನಡದಲ್ಲೇ ಜಾಹೀರಾತುಗಳಿದ್ದರೆ ಕೇಳುಗರು ತಂತಮ್ಮಲ್ಲೇ ಅದೇ ಜಾಹೀರಾತಿನ ಬಗ್ಗೆ ಮಾತಾಡಿಕೊಳ್ತಾರೆ, ಅದರಿಂದ ಜಾಹೀರಾತು ಕೊಡುತ್ತಿರುವ ಕಂಪನಿಗೆ ಮತ್ತಷ್ಟು ಲಾಭ.
ಅಲ್ಲದೆ ಕನ್ನಡಿಗರ ಮನಕ್ಕೆ ನಾಟುವಂಥಾ ಜಾಹೀರಾತುಗಳನ್ನು ತಯಾರಿಸೋದಕ್ಕೆ ದಿಲ್ಲಿಯಿಂದ ಹಿಂದಿ ಜನರನ್ನ ಕರ್ಕೊಂಡು ಬಂದ್ರೆ ಅವರೇನು ಕಿಸ್ದಾರು ಬೆಂಗಳೂರಲ್ಲಿ? ಅವರಿಗೇನು ಗೊತ್ತು ಇಲ್ಲೀ ಮನೆಮಾತು? ಅವರಿಗೇನು ಗೊತ್ತು ಇಲ್ಲೀ ಮಾತಿನ ಸೊಗಡು? ಅವರೇನು ಮುಟ್ಟಾರು ಕನ್ನಡಿಗನ ಮನಸನ್ನು, ಅವರ ತಲೆ?
ಹೇಗೇ ತಿರುಗಿಸಿ ಮುರುಗಿಸಿ ನೋಡಿದರೂ ನಮ್ಮ ಜಾಹೀರಾತುಗಳು ಕನ್ನಡದಲ್ಲೇ ಇರಬೇಕು ಅನ್ನೋದು ಸ್ಪಷ್ಟ. ಇದೇನು ಚಿಪಣಿ-ತಂತ್ರಜ್ಞಾನವಲ್ಲ. ಇದನ್ನ ಜಾಹೀರಾತು ಕೊಡ್ತಿರೋ ಕಂಪನಿಗಳು ಮತ್ತು ಮಿರ್ಚಿ ಥರಾ ಎಫ್.ಎಂ. ವಾಹಿನಿಗಳು ಅರ್ಥ ಮಾಡ್ಕೊಂಡ್ರೆ ಅವರಿಗೇ ಲಾಭ ಗುರು!
ಹಿಂದಿ ಜಾಹೀರಾತುಗಳು ಹಿಂದಿ ಹೇರಿಕೆಯ ಪ್ರಭಾವವೇ
ಈ ಚಾನೆಲ್ಗಳಲ್ಲಿ ಜಾಹೀರಾತು ಹಾಕೋ ಕಂಪನಿಗಳಲ್ಲಿ ಹಲವು ಕಂಪನಿಗಳು ಕನ್ನಡೇತರರದಾಗಿವೆ ಇಲ್ಲಾ ಹೊರರಾಜ್ಯದ ಕಂಪನಿಗಳಾಗಿವೆ ಅನ್ನೋದು ಕಟುಸತ್ಯ. ಅವರಿಗೆಲ್ಲ ಹಿಂದೀನೇ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನು ತಾನೆ ನಮ್ಮ ಕೇಂದ್ರದೋರು ಹೇಳಿಕೊಟ್ಟಿರೋದು (ಈ "ವಿದ್ಯೆ"ಯನ್ನ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ವರೆಗೂ ತಲುಪಿಸಿದ್ದಾರೆ)? ಆದ್ದರಿಂದ ಕರ್ನಾಟಕಕ್ಕೆ ವ್ಯಾಪಾರಕ್ಕೆ ಬಂದಿರೋ ಹೊರಗಿನೋರು ಅನ್ಕೊಂಡಿರ್ತಾರೆ ಇಡೀ ಭಾರತದಲ್ಲಿ ಹಿಂದಿ ಇಲ್ಲಾ "ಓಡತ್ತೆ", ಇಲ್ಲಾ "ಕಾನೂನಿನ ಪ್ರಕಾರ ಓಡಲೇಬೇಕು" ಅಂತ! ಅಂಥಾ ಯಾವ ಕಾನೂನೂ ಇಲ್ಲ, ಇಲ್ಲಿ ಹಿಂದಿ ಓಡೋದೂ ಇಲ್ಲ. ಓಡತ್ತೆ ಇಲ್ಲಾ ಓಡಬೇಕು ಅಂತ ನಂಬ್ಕೊಂಡಿರೋ ಕನ್ನಡಿಗರೂ ಕೆಲವರು ಇದ್ದಾರೆ ಗುರು! ಅವರಿಗೆ ಸ್ವಲ್ಪ ಬುದ್ಧಿ ಹೇಳಿ!
ಕನ್ನಡಿಗರ ತಟ್ಟೇಲಿ ಹಿಂದಿ ಬಡಿಸೋದು ಪೆದ್ದತನ ಅಂತ ಹಾಡು ಹಾಕುವಾಗ ಮಿರ್ಚಿಗೆ ಅರ್ಥವಾಗಿದೆ. ನಿಧಾನವಾಗಿ ಜಾಹೀರಾತು ಹಾಕುವಾಗಲೂ ಅರ್ಥವಾಗತ್ತೆ, ಜಾಹೀರಾತು ಹಾಕಿಸೋ ಕಂಪನಿಗಳಿಗೂ ಅರ್ಥವಾಗತ್ತೆ. ಅರ್ಥವಾಗದೇ ಹೋದರೆ ಸ್ವಲ್ಪ ಬುದ್ಧಿ ಹೇಳಿ ಮಾಡಿಸಬೇಕು, ಅಷ್ಟೆ. ಯಾವನಿಗಾಗತ್ತೆ ಬರೀ ಹಿಂದಿ-ಕೂದಲು ತುಂಬಿರೋ ಕೇಸರಿಭಾತು ತಿನ್ನಕ್ಕೆ? ಥೂ! ಛೀ!
ಕೇಳಣ್ಣ..ಮಿರ್ಚಿಗೆ ಬಂತು ಬ್ಯಾಡಗಿ ಬಣ್ಣ!
ಕರ್ನಾಟಕದಲ್ಲಿ ಕನ್ನಡಕ್ಕೆ "ಮಾರುಕಟ್ಟೆ ಇಲ್ಲ", "ಕನ್ನಡದ ಹಾಡುಗಳಿಗೆ ಹಕ್ಕುಗಳನ್ನು ಪಡೆಯುವುದು ಬಹಳ ಕಷ್ಟ"...ಅಂತೆಲ್ಲ ಅಂದುಕೊಂಡು ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದ ಬೆಂಗಳೂರಿನ ಎಫ್.ಎಂ. ವಾಹಿನಿಗಳಲ್ಲಿ ಮಿರ್ಚಿಯೂ ಒಂದು.
powered by ODEO
ನಿಮಗೆ ನೆನಪಿರಬಹುದು, ೨೦೦೬ ರ ಏಪ್ರಿಲ್ ನಲ್ಲಿ ೯೩.೩ ಕಂಪನಾಂಕದಲ್ಲಿ ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ವಾಹಿನಿಯನ್ನು ಆರಂಭಿಸಿದಾಗ ಕೇಳುಗರನ್ನು ತನ್ನತ್ತ ಸೆಳೆಯಲು ಬಳಸಿಕೊಂಡದ್ದು ನಾಗಾಭರಣ, ಕವಿತ ಲಂಕೇಶ್, ಗಿರೀಶ್ ಕಾಸರವವಳ್ಳಿ, ಜಗ್ಗೇಶ್ ಮುಂತಾದ ಕನ್ನಡ ಮನರಂಜನೆ-ಲೋಕದ ದೊಡ್ಡದೊಡ್ಡ ಹೆಸರುಗಳನ್ನೇ. ಆದರೆ ಬರಬರುತ್ತ ಅದೇನು ತಲೆ ತಿರುಗಿತೋ ಕಾಣೆ...ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಾಲ್ಕು ಜನ ವಲಸಿಗರನ್ನು ಕಂಡು ಅಂಥವರೇ ಇಡೀ ಬೆಂಗಳೂರಿನಲ್ಲೆಲ್ಲ ಇರುವ ಜನ ಅಂತ ತಮಗೆ ತಾವೇ ಅಂದುಕೊಂಡು ಹಿಂದಿಯ ಹುಚ್ಚು ಹಿಡಿಸಿಕೋತು. ಹಿಂದಿ ಹಾಡು, ಹಿಂದಿ ಜಾಹೀರಾತು...ಹೀಗೆ. ಜನ ಕೇಳಲಿ ಬಿಡಲಿ ತಮ್ಮ ಬೆನ್ನು ತಾವೇ ತಟ್ಟಿಕೊಂಡು ಬೆಂಗಳೂರಿನ ನಂಬರ್ ೧ ವಾಹಿನಿ ಎಂದು ಕೊಚ್ಚಿಕೊಂಡಿದ್ದೇನು! ಅಬ್ಬಬ್ಬಬ್ಬಬ್ಬ! ಎಷ್ಟು ಸರಿ ಸುಳ್ಳು ಹೇಳಿದರೂ ಕೇಳುಗರನ್ನು ಸಕ್ಕತ್ತಾಗಿ ಕಳೆದುಕೊಂಡಿದ್ದು ಸುಳ್ಳಾಗಲ್ಲವಲ್ಲ? ಕನ್ನಡ ಹಾಡು ಕಡಿಮೆ ಮಾಡಿದ್ದರಿಂದ ಬೆಂಗಳೂರಿನಲ್ಲಿ ನೆಲೆ ಕಳೇದುಕೊಳ್ಳುವ ಸ್ಥಿತಿ ಬಂದಿತ್ತು ಮಿರ್ಚಿಗೆ.
೨೪ ಘಂಟೆಗಳ ಏಕೈಕ ಕನ್ನಡ ವಾಹಿನಿ ಎಂದು ಒಳ್ಳೇ ಹೆಸರು ಮಾಡಿದ್ದ ಎಸ್ ಎಫ್. ಎಂ. ೯೩.೫ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಸಮಯದಲ್ಲಿ ತನ್ನ ಒಲವು ಎಲ್ಲಿಗೆ ಎನ್ನುವುದನ್ನು ತೋರಿಸುತ್ತ ಕನ್ನಡವನ್ನು ಕಡಿಮೆ ಮಾಡಿದೆ ಬೇರೆ! ಹೀಗಾಗಿ ಒಂದು ಕಡೆ ಕನ್ನಡ ಹಾಡುಗಳಿಗಾಗಿ ಹಾತೊರೆಯುತ್ತಿರುವ ಬೆಂಗಳೂರಿನ ಜನತೆ, ಮತ್ತೊಂದು ಕಡೆ ಕನ್ನಡ ಪ್ರಸಾರವನ್ನು ಕಡಿಮೆ ಮಾಡಿದ್ದ ಎಸ್ ಎಫ್. ಎಂ., ಮಗದೊಂದು ಕಡೆ ಬೆಂಗಳೂರಿನ ಕೇಳುಗರನ್ನು ಕಳೆದುಕೊಂಡು ಸಾಯುತ್ತಿರುವ ಮಿರ್ಚಿ. ವ್ಯಾಪಾರಿಗೆ ಇಲ್ಲಿ ಒಳ್ಳೇ ಅವಕಾಶ ಕಾಣದೆಯೇನಿಲ್ಲ, ಮಿರ್ಚಿ ಗಬಕ್ಕನೆ ಅವಕಾಶ ಹಿಡೀತು! ಸ್ವಲ್ಪ ತಲೆ ಉಪಯೋಗಿಸಿ, ಮೀನ-ಮೇಷ ಏಣಿಸದೆ ಕಳೆದ ವಾರದಿಂದ ಮಿರ್ಚಿ ಇನ್ಮೇಲೆ "ಓನ್ಲಿ ಕನ್ನಡ", "ಶೇಕಡ ೧೦ ಅಲ್ಲ, ೫೦ ಅಲ್ಲ, ೭೫ ಅಲ್ಲ ೧೦೦ ಕ್ಕೆ ೧೦೦ ಕನ್ನಡ" ಎಂದು ಡೋಲು ಹೊಡಿತಿದೆ!
ಇದು ಮಿರ್ಚಿಯ ಭವಿಷ್ಯಕ್ಕೆ ಒಳ್ಳೇ ಹೆಜ್ಜೇನೇ. ಬೆಂಗಳೂರಿನ ಇತರ ವಾಹಿನಿಗಳಿಗೂ ಇಷ್ಟು ತಲೆ ಬರಲಿ ಅಂತ ಹರಸಬೇಕು!
ಮೊದಮೊದಲು ಅಂಕಿ-ಅಂಶ ಹುಟ್ಟಿಸು, ಬರ್ತಾ ಬರ್ತಾ ಅದೂ ಇಲ್ಲದೆ ಬೇಕಾದ್ದು ಒದರು!
ನೆನ್ನೆ ನಡೆದ "ನಿನ್ನದೇ ನೆನಪು" ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಬಂದು ಕೂತಿದ್ದ ನೋಡಿ ಬಿಗ್ ಎಫ್ ಎಂ ೯೨.೭ ನ ಭೂಪ ಕಿರಣ್ ಶ್ರೀಧರ್ರು. ಪಾಪ ಅವನ ಕಂಪನಿಯೋರು ಬಾಯಿಪಾಠ ಮಾಡ್ಸಿದಾರೆ ಅಂತ ಕಾಣತ್ತೆ - "ಬೆಂಗಳೂರಿನಲ್ಲಿ ಕನ್ನಡ ಲೆಕ್ಕಕ್ಕಿಲ್ಲ, ಇಲ್ಲಿರೋದು ಇಂಗ್ಲೀಷೇ" ಅಂತ, ಮಹಾನುಭಾವ ಈ "ಕಲಿಕೆ"ಯನ್ನೇ ಅಲ್ಲಿ ನೆರೆದಿದ್ದವರ ಮುಂದೆ ಪ್ರದರ್ಶಿಸುತ್ತ "ಬೆಂಗಳೂರಿನ ಭಾಷೆ ಇಂಗ್ಲೀಷ್" ಅಂತ ಒದರಿದ್ದಾನೆ. ಅಲ್ಲಿದ್ದ ಪತ್ರಕರ್ತರು ಚೆನ್ನಾಗಿ ತರಾಟೆಗೆ ತೊಗೊಂಡು "ಮೊದಲು ಅಂಕಿ-ಅಂಶ ತೋರಿಸು ಮಗ್ನೆ" ಅಂದಿದಾರೆ. ಎಲ್ಲಿಂದ ತೋರಿಸುತ್ತಾನೆ? ಬೆಪ್ಪಾಗಿ ಹ್ಯಾಪೆಮೋರೆ ಹಾಕಿಕೊಂಡು ಚಡಪಡಾಯಿಸಿಬಿಟ್ಟನಂತೆ.
ಈ ಎಫ್.ಎಂ. ವಾಹಿನಿಯವರ ಯೋಗ್ಯತೆಯೇ ಇಷ್ಟು. ಅಲ್ಲೆಲ್ಲೋ ದಿಲ್ಲಿ-ಗಿಲ್ಲಿಯಲ್ಲೋ ಮುಂಬಾಯಲ್ಲೋ ಹಿಂದಿ ಹಾಡಿಗೆ ಕಾಸು ಕೊಟ್ಟಿರ್ತಾರೆ, ಅದನ್ನೇ ಭಾರತದಲ್ಲೆಲ್ಲ ಹಾಕಿ ಕಾಸು ಉಳಿಸಬೇಕು ಅನ್ನೋ ನೆಪಕ್ಕೆ ನಮ್ಮೂರಲ್ಲಿ ಇಲ್ಲದಿರೋ ಮಾರುಕಟ್ಟೆ ಇದೆ ಅಂತ ಸುಳ್ಳು ಹುಟ್ಟುಹಾಕುತ್ತಾರೆ. ಅಂಕಿ ಅಂಶಗಳನ್ನೂ ತೋರಿಸುತ್ತಾರೆ - ತಮಗೆ ಬೇಕಾದ ಹೊತ್ತಲ್ಲಿ ತಮಗೆ ಬೇಕಾದ ರಸ್ತೆಯಲ್ಲಿ ಹೋಗಿ ತಮಗೆ ಬೇಕಾದ ೪ ಜನರನ್ನು ಕೇಳಿದಂತೆ ಮಾಡಿ ಇಲ್ಲಸಲ್ಲದ ಅಂಕಿ-ಅಂಶಗಳನ್ನ ಹುಟ್ಟಿಸುತ್ತಾರೆ, ಅದನ್ನ ಇಡೀ ಬೆಂಗಳೂರಿಗೆ, ಇಡೀ ಕರ್ನಾಟಕಕ್ಕೆ ತಳಕು ಹಾಕುತ್ತಾರೆ. ಎಲ್ಲೋ ಎಂ.ಜಿ. ರಸ್ತೆಯಲ್ಲಿ ಸಿಕ್ಕ ನಾಲ್ಕು ಜನರು ಒದರಿದ್ದನ್ನ ಆಧಾರವಾಗಿಟ್ಟುಕೊಂಡು ಇಡೀ ಬೆಂಗಳೂರೇ ಹಂಗೆ ಹಿಂಗೆ ಅಂತ ಬರೀತಾರೆ. ಕೋರ್ಟು ಕಚೇರೀಗೆ ಎಳೀದೇ ಇರಲಿ ಅಂತ ಒಂದು ಸಣ್ಣ "*" ಹಾಕಿ ಕಾಣದೇ ಇರೋ ಹಂಗೆ "ನಾವು ಕೇಳಿದ್ದು ಎಂ. ಜಿ. ರಸ್ತೆಯಲ್ಲಿ ೪ ಜನರನ್ನ" ಅಂತ ನಾಚಿಕೆ ಇಲ್ಲದೆ ಬರೆದುಕೊಳ್ಳುತ್ತಾರೆ.
ಒಟ್ಟಿನಲ್ಲಿ ಅಂಕಿ-ಅಂಶ ಹುಟ್ಟಿಸೋ ಕೆಲ್ಸ ಈ ವಾಹಿನಿಗಳಿಗೆ ಹೊಸದೇನಲ್ಲ ಬಿಡಿ. ಆದರೆ ಆ ಸುಳ್ಳು ಅಂಕಿ-ಅಂಶವೂ ಇಲ್ಲದೆ ಬಾಯಿಗೆ ಬಂದಿದ್ದನ್ನ ಒದರಿದ್ದಾನಲ್ಲ ಕಿರಣ್ ಶ್ರೀಧರ್ರು...ಇವನಿಗೇನಂತೀರಿ?
ಇವತ್ತಿನ ಸಂಜೆವಾಣಿಯಲ್ಲಿ ಈ ಬಗ್ಗೆ ಬಂದ ಸುದ್ದಿ ಇಲ್ಲಿದೆ ನೋಡಿ.
ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ
