ನಮ್ಮ ಮೆಟ್ರೋ ಎಂಬ ಹಿಂದೀ ಪ್ರಚಾರಕ!


ಕಳೆದ ಬರಹದಲ್ಲಿ ಭಾರತದ ಹುಳುಕಿನ ಭಾಷಾನೀತಿಯು ಬದಲಾಗಬೇಕೆಂಬ ನಮ್ಮ ಹಕ್ಕೊತ್ತಾಯವು ಸಾಗಿ ಬಂದ ಬಗ್ಗೆ ಬರೆದಿದ್ದೆವು. ಇಷ್ಟಕ್ಕೂ ಭಾರತದ ಭಾಷಾನೀತಿಯನ್ನು ಹುಳುಕಿನದ್ದು ಎಂದು ಕರೆಯಬಹುದೇ? ಎಂಬ ಪ್ರಶ್ನೆಗೆ "ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು" ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ... ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ "ಆಡಳಿತ ಭಾಷಾ ನೀತಿ"ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ.  ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ... ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು "ನಮ್ಮ ಮೆಟ್ರೋ" ರೈಲು ಸಂಪರ್ಕ ವ್ಯವಸ್ಥೆ!

ಮೆಟ್ರೋದಲ್ಲಿ ಹಿಂದೀ ನರ್ತನ!

ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರದ ಹಣ ಸ್ವಲ್ಪಮಟ್ಟಿಗೆ ತೊಡಗಿಸಲಾಗಿದೆ ಎನ್ನುವ ಕಾರಣ ನೀಡಿಯೋ, ಕರ್ನಾಟಕವು ತ್ರಿಭಾಷಾಸೂತ್ರವನ್ನು ಒಪ್ಪಿದೆಯೆನ್ನುವ ಕಾರಣ ನೀಡಿಯೋ ಮೂರುಭಾಷೆಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಇದುವರೆವಿಗೆ ಬೆಂಗಳೂರಿನ ಸಾರ್ವಜನಿಕ ಬಳಕೆಯ ಸ್ಥಳೀಯ ಸಾರಿಗೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಿಟ್ಟು ಹಿಂದೀಯನ್ನು ಬಳಸಿರಲಿಲ್ಲಾ! ಇದೀಗ ನಮ್ಮ ಮೆಟ್ರೋದಲ್ಲಿ ಬರಿಯ ಫಲಕಗಳಷ್ಟೇ ಅಲ್ಲದೆ ಹಿಂದೀಯಲ್ಲಿ ಸೂಚನೆಗಳನ್ನು ಕೂಡಾ ನೀಡಲು ಶುರುಮಾಡಿದ್ದಾರೆ. ಅಲ್ಲಾರೀ! ಕನ್ನಡದಲ್ಲಿದೆಯಲ್ಲಾ... ಹಿಂದೀಲಿ ಇದ್ದರೇನು? ಎಂದು ಭಾವಿಸುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಆದರೆ ಯೋಚಿಸಿ ನೋಡಿದರೆ.. ಇದರ ಹಿಂದೆ ಹಿಂದೀ ಭಾಷಿಕರ ವಲಸೆಯನ್ನು ಉತ್ತೇಜಿಸುವ, ಆ ಮೂಲಕ ಕರ್ನಾಟಕದಂತಹ ರಾಜ್ಯಗಳ ಜನಲಕ್ಷಣವನ್ನೇ ಬುಡಮೇಲುಗೊಳಿಸುವ ಹುನ್ನಾರ ಕಾಣುತ್ತದೆ. ಈ ನೀತಿಯ ಹಿಂದೆ ಭಾರತದ ಭಾಷಾನೀತಿಯು ಕೆಲಸ ಮಾಡಿರುವುದು ಕಾಣುತ್ತದೆ ಮತ್ತು ಅದರ ಹುಳುಕು ಕಣ್ಣಿಗೆ ರಾಚುತ್ತದೆ!

ಹುಳುಕು ಯಾಕೆಂದರೆ...!

ಇಲ್ಲಿ ಹಿಂದೀಯ ಅಗತ್ಯವೇ ಇಲ್ಲದಿರುವಾಗಲೂ ಹಾಗೆ ಹಿಂದೀಯನ್ನು ಬಳಸಿರುವುದರ ಏಕೈಕ ಉದ್ದೇಶ "ಹಿಂದೀ ಭಾಷಿಕ ಜನರಿಗೆ ಅನುಕೂಲವಾಗಲೀ" ಎನ್ನುವುದೇ ಆಗಿದೆ. ‘ಬೆಂಗಳೂರಿಗೆ ಭಾರತದ ಎಲ್ಲೆಡೆಯಿಂದ ಜನರು ಬರುತ್ತಾರೆ ಹಾಗಾಗಿ ಇಲ್ಲಿ ಹಿಂದೀ ಬೇಕು’ ಎನ್ನುವವರು ಅರಿಯಬೇಕಾದದ್ದು, ಬೆಂಗಳೂರಿನ ಎರಡನೇ ದೊಡ್ಡ ಭಾಷಿಕ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿರುವ ತೆಲುಗರದ್ದು! ಹಾಗೇ ಉರ್ದು ಭಾಷಿಕರು, ತಮಿಳರು ಎಲ್ಲಾ ಆದಮೇಲೆ ಹಿಂದಿಯವರ ಸರತಿ ಬರುತ್ತದೆ. ಭಾರತೀಯರೆಲ್ಲಾ ಸಮಾನರೆನ್ನುವುದೇ ದಿಟವಾದರೆ ನಮ್ಮ ಮೆಟ್ರೋದಲ್ಲಿ ಕನ್ನಡದ ಜೊತೆಗೆ ತೆಲುಗು, ಉರ್ದು, ತಮಿಳು ಭಾಷೆಗಳೂ ಇರಬೇಕಿತ್ತು! ಬೇಡಪ್ಪಾ... ದೆಹಲಿಯ ಮೆಟ್ರೋದಲ್ಲಿ ಭಾರತದ ಇನ್ಯಾವ ಭಾಷೆಗೆ ಸ್ಥಾನ ನೀಡಿದ್ದಾರೆ? ಅಂದರೆ ಭಾರತದ ಮೂಲೆಮೂಲೆಯಲ್ಲೂ ಆಯಾಜನರ ಭಾಷೆಯ ಜೊತೆಗೆ ಹಿಂದೀಯನ್ನು ಸೇರಿಸುವುದು! ಅದಕ್ಕೆ ಹೆಚ್ಚು ಜನರಿಗೆ ಅದು ಬರುವ ಭಾಷೆ ಎಂದುಬಿಡುವುದು. ಆ ಮೂಲಕ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ರಾಜ್ಯಗಳ ಜನರಿಗೆ ಕರ್ನಾಟಕದಂತಹ ಸಮೃದ್ಧ ಜನವಿರಳ ಪ್ರದೇಶಗಳಿಗೆ ವಲಸೆ ಹೋಗಲು ಅನುಕೂಲ ಮಾಡಿಕೊಡುವುದು! ಇದು ಯಾವರೀತಿಯಲ್ಲಿ ಸಮಾನತೆಯೇ ಜೀವಾಳ ಎನ್ನುವ ಮಾತಿಗೆ ಹತ್ತಿರವಾಗಿದೆ? ಇನ್ನು ಹೀಗೆ ಮೆಟ್ರೋದಂತಹ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಹಿಂದೀ ತೂರಿಸಿರುವುದನ್ನು ಸಮಾನತೆಯ ಸಂಕೇತವಾಗಿ ಕಾಣಬೇಕೋ... ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕವಾಗಿ ಕಾಣಬೇಕೋ? ಬೆಂಗಳೂರಿಗೆ ವಲಸೆ ಬರುವ ಹಿಂದೀ ಭಾಷಿಕರಿಗೆ ತೊಂದರೆಯಾಗಬಾರದೆನ್ನುವ ಘನ ಉದ್ದೇಶ ಭಾರತ ಸರ್ಕಾರಕ್ಕಿರುವಂತೆಯೇ... ದೆಹಲಿಗೆ ಹೋಗುವ, ದೆಹಲಿಯಲ್ಲಿರುವ ಕನ್ನಡದವರ ಬಗ್ಗೆಯೂ ಇದೆಯೇ? ಅಸಲಿಗೆ ಹೀಗೆ ಎಲ್ಲರಿಗೂ ಅನುಕೂಲ ಮಾಡಿಕೊಡುವಂತಹ ಭಾಷಾನೀತಿ ಭಾರತದಲ್ಲಿದೆಯೇ ಎಂದರೆ ಕಾಣುವುದು ದೊಡ್ಡ ನಿರಾಸೆ! 

ಸಮಾನತೆಯ ಕೂಗು!

"ಈ ಹುಳುಕು ಸರಿ ಹೋಗಲಿ... ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ" ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ - ಇದು ಹಿಗ್ಗಿನ,  ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ "ಇಂತಹ ನಿಲುವಿಗೆ ಕಾರಣ ವಿವರಿಸಿ" ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿ, ಕಾಯುವಿಕೆ, ಮೇಲ್ಮನವಿ, ದೂರು,  ವಿಚಾರಣೆ... ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರು ಆರ್.ಟಿ.ಐಗೆ ಸೂಕ್ತ ಉತ್ತರ ಬರುವವರೆಗೂ ಬಿಡೆನೆಂದು ನ್ಯಾಯದ ಎಲ್ಲಾ ಬಾಗಿಲುಗಳಿಗೆ ಎಡೆತಾಕುತ್ತಿದ್ದಾರೆ. ಇಂದಲ್ಲಾ ನಾಳೆ ಗೆಲುವು ದಕ್ಕೇ ದಕ್ಕುತ್ತದೆ ಎಂಬ ನಂಬಿಕೆಯಲ್ಲಿ... ಸಮಾನತೆಯ ಈ ಕೂಗಿಗೆ ಕನ್ನಡಿಗರ ಬೆಂಬಲ ಬೇಕು! ನಾವೆಲ್ಲರೂ ಇದರ ಬಗ್ಗೆ ದನಿಯೆತ್ತಬೇಕು ಎನ್ನುವ ನಿಲುವು ನಮ್ಮದು! ನಿಮ್ಮದೂ ಅದೇ ಆಗಿದ್ದಲ್ಲಿ... ಈ ಹಕ್ಕೊತ್ತಾಯಕ್ಕೆ ಸಹಿ ಹಾಕಿರಿ. ಅಸಮಾನತೆಯ ವಿರುದ್ದ ನಿಮ್ಮದೊಂದು ಕೂಗು ದಾಖಲಾಗಲಿ!

ಸಮಾನ ಗೌರವದ ಭಾಷಾನೀತಿಗಾಗಿ ಒತ್ತಾಯಿಸಿ...

 - ವಸಂತ್ ಶೆಟ್ಟಿ

ಮೊನ್ನೆ ಆಗಸ್ಟ್
15ಕ್ಕೆ ಬ್ರಿಟಿಷರಿಂದ ಬಿಡುಗಡೆಯಾಗಿ 66 ವರ್ಷ ಕಳೆದ ಸಂಭ್ರಮ. ಕೆಂಪುಕೋಟೆಯ ಮೇಲಿನಿಂದ ಭಾರತ ಅನ್ನುವುದು ಭಾಷೆ, ಜನಾಂಗ, ಧರ್ಮಗಳ ವೈವಿಧ್ಯತೆಯ ತವರೂರು, ಇಲ್ಲಿ ಎಲ್ಲ ಜನರು, ಎಲ್ಲ ಭಾಷೆಗಳು ಸಮಾನ, ಈ ವಿವಿಧತೆಯಲ್ಲೇ ಏಕತೆ ಅಡಗಿದೆ ಅನ್ನುವ ನುಡಿಮುತ್ತುಗಳು ಎಂದಿನಂತೆ ಕೇಳಿ ಬಂದವು. ದೀಪದ ಕೆಳಗೆಯೇ ಕತ್ತಲು ಎಂಬಂತೆ ಯಾವ ದೆಹಲಿಯಿಂದ ಈ ನುಡಿಮುತ್ತುಗಳನ್ನು ಉದುರಿಸಿದರೋ ಅಲ್ಲಿಂದಲೇ "ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು" ವ್ಯವಸ್ಥಿತವಾಗಿ ಹರಡುತ್ತಾ ವೈವಿಧ್ಯತೆಯ ಬುಡಕ್ಕೆ ಕೊಡಲಿ ಪೆಟ್ಟು ಹಾಕುವ ಕೆಲಸ ನಿರಂತರವಾಗಿ ನಡೆದುಕೊಂಡು ಬಂದಿದೆ. ಸಮಾನತೆಯ ನೆಲೆಗಟ್ಟಿನ ಮೇಲೆ ಕಟ್ಟಲ್ಪಟ್ಟ ಭಾರತ ಒಕ್ಕೂಟದಲ್ಲಿ ಒಂದು ಪ್ರದೇಶದ ಜನರ ನುಡಿಯಾದ ಹಿಂದಿಯನ್ನು ಭಾರತೀಯತೆಯ ಸಂಕೇತ, ದೇಶಪ್ರೇಮದ ಪ್ರತೀಕ ಅನ್ನುವ ಹೆಸರಿನಲ್ಲಿ ಎಲ್ಲ ಹಿಂದಿಯೇತರ ಜನರ ಮೇಲೆ ಹೇರಲಾಗುತ್ತಿದೆ. ಇದು ಹಿಂದಿಯೇತರ ನುಡಿಗಳೆಲ್ಲವನ್ನು ನಿಧಾನಕ್ಕೆ ಸಾವಿನ ಮನೆಗೆ ತಳ್ಳುತ್ತಿದೆ. ಇದು ಸರಿ ಹೋಗಬೇಕು. ಎಲ್ಲ ನುಡಿಗಳಿಗೂ ಸಮಾನ ಸ್ಥಾನಮಾನ ಸಿಗಬೇಕು. ಆಗಲೇ ವಿವಿಧತೆಯಲ್ಲಿ ಏಕತೆ ಅನ್ನುವ ಘೋಷಣೆಗೆ ನಿಜ ಅರ್ಥ ಬರಲು ಸಾಧ್ಯ. ಆ ನಿಟ್ಟಿನಲ್ಲಿ ಬನವಾಸಿ ಬಳಗ ಕಳೆದ ಹಲವಾರು ವರ್ಷಗಳಿಂದ ನಾನಾರೀತಿಯಲ್ಲಿ ಕನ್ನಡ ಸಮಾಜದಲ್ಲಿ ಜನಜಾಗೃತಿ ಮಾಡುತ್ತಿದೆ. ನಾವು ಸಾಗಬೇಕಿರುವ ಹಾದಿ ದೊಡ್ಡದು ಮತ್ತು ಅದರತ್ತ ಪ್ರಾಮಾಣಿಕವಾದ ಎಲ್ಲ ಪ್ರಯತ್ನಗಳನ್ನು ನಾವು ಮುಂದುವರಸುತ್ತೇವೆ. ಇವತ್ತಿನ ಅಂಕಣ ಇಲ್ಲಿಯವರೆಗೆ ಈ ನಿಟ್ಟಿನಲ್ಲಿ ಆಗಿರುವ ಕೆಲಸಗಳು ಮತ್ತು ಮುಂದಿನ ಹಾದಿಯ ಬಗ್ಗೆ ಓದುಗ ಗೆಳೆಯರೊಡನೆ ಹಂಚಿಕೊಳ್ಳಲು ಮುಡಿಪಾಗಿದೆ.
ಕುವೆಂಪು ಅವರಿಂದ ಹಿಡಿದು ಇಲ್ಲಿಯವರೆಗೆ...

ಭಾರತದ ಹಿಂದಿ ಪರ ಭಾಷಾನೀತಿಯ ಬಗ್ಗೆ ಕುವೆಂಪು ಅವರು ಈ ಹಿಂದೆಯೇ ದನಿ ಎತ್ತಿದ್ದರು. ತ್ರಿಭಾಷಾ ಸೂತ್ರ ಕನ್ನಡದ ಮಕ್ಕಳ ಎದೆಗೆ ತಿವಿದ ತ್ರಿಶೂಲವೇ ಆಗಿದೆ ಅನ್ನುವ ಅರ್ಥದಲ್ಲಿ  ಈ ಕೆಳಗಿನ ಮಾತುಗಳನ್ನು ಹೇಳಿದ್ದರು.

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!
ಅಲ್ಲಿಂದಾಚೆ ಹಿಂದಿ ಹೇರಿಕೆಯ ವಿರೋಧಿಸಿ, ಭಾಷಾನೀತಿಯ ಬದಲಾವಣೆಯ ದನಿ ಕರ್ನಾಟಕದಲ್ಲಿ ಅಷ್ಟಾಗಿ ಕೇಳಿ ಬರಲಿಲ್ಲ. 1991ರ ಆರ್ಥಿಕ ಸುಧಾರಣೆಗಳ ನಂತರ ಕರ್ನಾಟಕಕ್ಕೆ ಹಿಂದಿಭಾಷಿಕರ ಮಿತಿ ಮೀರಿದ ವಲಸೆಯೂ ನಡೆಯುವುದರೊಂದಿಗೆ ತ್ರಿಭಾಷಾ ಸೂತ್ರ ನಿಜವಾದ ಅರ್ಥದಲ್ಲಿ ಕನ್ನಡ ಸಮಾಜದಿಂದ ಕನ್ನಡವನ್ನೇ ಮೂಲೆಗುಂಪಾಗಿಸುವ ಅಸ್ತ್ರವಾಯಿತು. ಒಂದೆಡೆ ವಲಸೆ, ಇನ್ನೊಂದೆಡೆ ಹಾಗೆ ವಲಸೆ ಬಂದವರೊಡನೆ ಮಾತನಾಡಲು ಕನ್ನಡಿಗರಿಗೇ ಹಿಂದಿ ಕಲಿಸಿದ ವ್ಯವಸ್ಥೆ. ಈ ಎರಡೂ ಕಾರಣಗಳು ಸೇರಿ ಕರ್ನಾಟಕಕ್ಕೆ ವಲಸೆ ಬಂದ ಹಿಂದಿ ಭಾಷಿಕರು ಕನ್ನಡ ಕಲಿಯುವ ಅಗತ್ಯವೇ ಇಲ್ಲವೆನೋ ಅನ್ನುವಂತಹ ಬದಲಾವಣೆಗಳಾದವು. ಅದರೊಂದಿಗೆ ನಮ್ಮ ಊರುಗಳ ಮಾರುಕಟ್ಟೆಯಲ್ಲಿ ನೆಲೆನಿಂತಿದ್ದ ಕನ್ನಡ ಕಣ್ಮರೆಯಾಗಿ ಅಲ್ಲೆಲ್ಲ ಹಿಂದಿ,ಇಂಗ್ಲಿಶ್ ಬಂದು ನಿಲ್ಲುವ ಬದಲಾವಣೆಗಳಿಗೆ ವೇಗ ಸಿಕ್ಕಿತು. 
2006ರಿಂದಿಚೆಗೆ ನಮ್ಮ ಕೆಲಸ

ಈ ಹಂತದಲ್ಲಿ 2006ರಿಂದ ಬನವಾಸಿ ಬಳಗ ಈ ತೊಡಕಿನ ಭಾಷಾ ನೀತಿ ಹೇಗೆ ಕರ್ನಾಟಕದಲ್ಲಿ ಕನ್ನಡದ ಹರಿವು, ಉಸಿರು ಎರಡನ್ನು ಬತ್ತಿಸುತ್ತಿದೆ ಅನ್ನುವ ಬಗ್ಗೆ ಜನಜಾಗೃತಿಗೆ ಮುಂದಾಯಿತು. ಇದಕ್ಕೆ ನಾವು ಆಯ್ದುಕೊಂಡ ಸಾಧನ ಅಂತರ್ಜಾಲದ ಬ್ಲಾಗ್. ಏನ್ ಗುರು ಕಾಫಿ ಆಯ್ತಾ ಮೂಲಕ ಈ ಹುಳುಕಿನ ಭಾಷಾನೀತಿಯ ಎಲ್ಲ ಮಜಲನ್ನು ಸವಿಸ್ತಾರವಾಗಿ ಕನ್ನಡಿಗರ ಮುಂದೆ ತೆರೆದಿಡುತ್ತ ಬಂದೆವು. ಈ ಸಮಸ್ಯೆಯ ಮೂಲ ಭಾರತದ ಸಂವಿಧಾನದ ಪುಟಗಳಲ್ಲೇ ಅಡಗಿದ್ದು ೩೪೩ನೇ ವಿಧಿಯಿಂದ ೩೫೧ರ ವಿಧಿಯವರೆಗೆ ಬರೆಯಲಾಗಿರುವ ಮಾತುಗಳು ತಿದ್ದುಪಡಿಗೊಳಗಾಗಬೇಕಾಗಿದೆ.

ಪ್ರತಿವರ್ಷ ಹಿಂದಿ ಸಾಮ್ರಾಜ್ಯಶಾಹಿ ಸಂಕೇತದಂತೆ ಆಚರಿಸಲಾಗುತ್ತಿದ್ದ "ಹಿಂದಿ ಸಪ್ತಾಹ" ಅನ್ನುವ ಒಕ್ಕೂಟ ವಿರೋಧಿ, ಜನವಿರೋಧಿ ಆಚರಣೆಯ ಸಮಯವನ್ನು ಹಿಂದಿಹೇರಿಕೆ ವಿರೋಧಿ ಸಪ್ತಾಹವೆಂದು ಆಚರಿಸುತ್ತ ಜಾಗೃತಿ ಅಭಿಯಾನವನ್ನು ನಡೆಸುತ್ತ ಬಂದಿದ್ದೇವೆ. 2011ರಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಸಮಗ್ರವಾದ ಸಂಶೋಧನೆ ಮಾಡುವ ಮೂಲಕ "ಹಿಂದಿ ಹೇರಿಕೆ - ಮೂರುಮಂತ್ರ, ನೂರು ತಂತ್ರ" ಅನ್ನುವ ಪುಸ್ತಕವನ್ನು ಹೊರತಂದು ಹಿಂದಿಹೇರಿಕೆಯ ತೊಡಕುಗಳನ್ನು ಜನರ ಮುಂದಿಟ್ಟೆವು. ಆ ಪುಸ್ತಕಕ್ಕೆ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಇದೇ ಹೊತ್ತಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಮೆಟ್ರೋ ನಗರ ಸಾರಿಗೆ ರೈಲು ವ್ಯವಸ್ಥೆ ಅನಗತ್ಯವಾಗಿ ಹಿಂದಿ ಬಳಸಿ ರಾಜ್ಯಸರ್ಕಾರದ ದ್ವಿಭಾಷಾ ನೀತಿಯನ್ನು ಉಲ್ಲಂಘಿಸಿದಾಗ ಅದರ ವಿರುದ್ದ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಕಳೆದ ಒಂದುವರೆ ವರ್ಷದಿಂದಲೂ ಯಾವ ಮಾನದಂಡದ ಮೇಲೆ ಹಿಂದಿ ಹೇರಿಕೆ ಮಾಡಲಾಗಿದೆ ಅನ್ನುವುದನ್ನು ಪ್ರಶ್ನಿಸಿದ್ದೇವೆ. ಈ ಪ್ರಕರಣ ಇನ್ನು ವಿಚಾರಣೆಯಲ್ಲಿದೆ. ಮುಂದೆ 2012ರಲ್ಲಿ ಸಹಿ ಸಂಗ್ರಹ ಅಭಿಯಾನವೊಂದನ್ನು ಮಾಡಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರತದ ಭಾಷಾ ನೀತಿ ಬದಲಾಯಿಸುವಂತೆ ಮನವಿ ಸಲ್ಲಿಸಿದೆವು.
ಕಳೆದವರ್ಷ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ಪ್ರಮುಖವಾದ ನಿರ್ಣಯದಲ್ಲಿ ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯಲ್ಲಿ ಹೇಳಲಾಗಿರುವ ಹುಳುಕಿನ ಭಾಷಾನೀತಿಯನ್ನು ಕೈಬಿಟ್ಟು,  ಸರ್ಕಾರಿ ಪ್ರಾಯೋಜಿತವಾಗಿರುವ "ಹಿಂದೀಹೇರಿಕೆ"ಯನ್ನು ನಿಲ್ಲಿಸಿ, ಕನ್ನಡವೂ ಸೇರಿದಂತೆ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡುವ, ಭಾರತದ ಆಡಳಿತ ಭಾಷೆಯನ್ನಾಗಿಸುವ ಭಾಷಾನೀತಿಯೊಂದನ್ನು ಕೇಂದ್ರಸರ್ಕಾರ ರೂಪಿಸಬೇಕು ಎಂಬುದಾಗಿದೆ.

ಈ ವರ್ಷ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಒಂದು ಸಹಿ ಸಂಗ್ರಹ ಅಭಿಯಾನವೊಂದನ್ನು ಮಾಡಿ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರುವ ಹೊಸ ಭಾಷಾನೀತಿ ರೂಪಿಸಿ ಎಂದು ಕರ್ನಾಟಕ ಸರ್ಕಾರದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನವರ್ಷ ಹೊಸ ಸಂಸತ್ತು ಅಸ್ತಿತ್ವಕ್ಕೆ ಬಂದ ನಂತರ ಈ ಮನವಿಯನ್ನು ಎಲ್ಲ ಸಂಸದರಿಗೂ ಮಾಡುವ ಯೋಚನೆ ಹೊಂದಿದ್ದೇವೆ. ಹಾಗೆಯೇ ಕರ್ನಾಟಕದ ಸಂಸದರ ಮೂಲಕ ಭಾಷಾನೀತಿ ಬದಲಾವಣೆಗೆ ಖಾಸಗಿ ಸದಸ್ಯರ ಮಸೂದೆಯೊಂದನ್ನು (private member bill) ಮಂಡಿಸುವತ್ತಲೂ ಕೆಲಸ ಮಾಡಲಿದ್ದೇವೆ. ಪ್ರಜಾಪ್ರಭುತ್ವ, ಸಂವಿಧಾನ ಕೊಟ್ಟಿರುವ ಎಲ್ಲ ಅಸ್ತ್ರಗಳನ್ನು ಬಳಸಿ ಬದಲಾವಣೆ ತಂದುಕೊಳ್ಳುವತ್ತ ನಿರಂತರವಾಗಿ ಕೆಲಸ ಮಾಡುವ ಬದ್ಧತೆ ಬನವಾಸಿ ಬಳಗಕ್ಕಿದೆ. ಯಾಕೆಂದರೆ ಈ ಬದಲಾವಣೆ ಸಮಯ ತೆಗೆದುಕೊಳ್ಳುವಂತದ್ದು ಮತ್ತು ಅದಕ್ಕೆ ನಿರಂತರವಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುವುದೊಂದೇ ಹಾದಿಯಾಗಿದೆ. ನಿಮ್ಮ ಬೆಂಬಲ ಎಂದಿನಂತಿರಲಿ.

ಈ ಪಿಟಿಷನ್ನಿಗೆ ಸಹಿ ಹಾಕಲು ಈ ಕೊಂಡಿಯನ್ನೊತ್ತಿರಿ: http://chn.ge/17S72rs

ಈ ಪಿಟಿಶನ್ನಿಗೆ ಯಾಕೆ ಸಹಿ ಹಾಕಬೇಕೆಂದರೆ...


ಭಾರತದ ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಬಣ್ಣಿಸಲಾಗಿರುವ ಭಾರತದ ಭಾಶಾನೀತಿಯನ್ನು ಓದಿದಾಗ ನಮ್ಮ ಬಹುತೇಕ ಸಮಸ್ಯೆಯ ಮೂಲ ಅಲ್ಲೇ ಇರುವುದು ಎದ್ದು ಕಾಣುತ್ತದೆ. ನಮ್ಮೂರಿನ ಬ್ಯಾಂಕುಗಳ ಚೆಕ್ಕುಗಳಲ್ಲಿ ಕನ್ನಡವಿಲ್ಲದಿರುವುದು, ನಮ್ಮೂರಿನ ಕೇಂದ್ರಸರ್ಕಾರಿ ಕಚೇರಿಗಳಲ್ಲಿ ಕನ್ನಡವಿಲ್ಲದಿರುವುದು, ನಮ್ಮೂರ ವಿಮಾನ ನಿಲ್ದಾಣದಲ್ಲಿ, ರೈಲುಗಳಲ್ಲಿ ಹಿಂದೀ ತುಂಬಿ ತುಳುಕುತ್ತಿರುವುದು, ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಹಿಂದೀ ನುಂಗುತ್ತಿದೆ ಎಂಬ ಅಳಲು ಎದ್ದಿರುವುದು, ಶಾಲಾಕಲಿಕೆಯಲ್ಲಿ ಹಿಂದೀ ನುಸುಳಿಕೊಂಡಿರುವುದು... ಒಟ್ಟಾರೆ ನಮ್ಮ ಕನ್ನಡಿಗರ ಬದುಕಿನ ಒಂದೊಂದು ಹೆಜ್ಜೆಯಲ್ಲೂ ಹಿಂದೀ ತನ್ನ ಕರಿನೆರಳನ್ನು ಚಾಚಿರುವುದು ಮತ್ತು ಕನ್ನಡ ಇಲ್ಲದಿದ್ದರೂ ನಡೆಯುತ್ತದೆ ಎಂಬಂತಾಗಿರಲು ಕಾರಣವೇ ಭಾರತದ ಹುಳುಕಿನ ಭಾಶಾನೀತಿಯಾಗಿದೆ.

ಕೊಡಲಿ ರೆಂಬೆಗಲ್ಲಾ.. ಬೇರಿಗೆ!

ಅಲ್ಲಿ ಕನ್ನಡವಿಲ್ಲ, ಇಲ್ಲಿ ಕನ್ನಡವಿಲ್ಲ, ಅಲ್ಲಿ ಹೋರಾಡಿ ಕನ್ನಡ ಬರಿಸಿದೆವು, ಇಲ್ಲಿ ಪ್ರತಿಭಟಿಸಿ ಕನ್ನಡ ಬರಿಸಿದೆವು, ರೈಲ್ವೇ ಹುದ್ದೆಗಳಲ್ಲಿ ಕನ್ನಡಿಗರಿಗೆ ಅವಕಾಶವಿಲ್ಲಾ ಎಂದು ಪ್ರತಿಭಟಿಸಿದೆವು, ಬ್ಯಾಂಕು ನೇಮಕಾತಿಯಲ್ಲಿ ಕನ್ನಡವಿಲ್ಲಾ ಎಂದು ಹೋರಾಡಿದೆವು, ಮೆಟ್ರೋ ರೈಲಿನಲ್ಲಿ ಬೇಡದಿದ್ದರೂ ಹಿಂದೀ ಎಂದು ದನಿಯೆತ್ತಿದೆವು, ಸೇನಾ ನೇಮಕಾತಿಯಲ್ಲಿ ಕನ್ನಡದಲ್ಲಿ ಜಾತಿ ಪ್ರಮಾಣಪತ್ರವಿಲ್ಲವೆಂದು ನಮ್ಮನ್ನು ವಾಪಸ್ಸು ಕಳಿಸಿದರು ಎಂದು ಪ್ರತಿಭಟಿಸಿದೆವು.. ಹೀಗೆ ಕನ್ನಡಿಗರ ಹೋರಾಟಗಳೆಲ್ಲವೂ ಹಿಂದೀ ಹೇರಿಕೆಯ ಮರದ ರೆಂಬೆ ಕೊಂಬೆಗಳನ್ನು ತರಿದಂತೆ ಮಾತ್ರವೇ ಆಗಿದ್ದು ನಿಜವಾದ ಬೇರು ಭಾರತದ ಸಂವಿಧಾನದಲ್ಲಿ ಬರೆಯಲಾದ ಹುಳುಕಿನ ಭಾಶಾನೀತಿಯೇ ಆಗಿದೆ. ಈ ನೀತಿ ಬದಲಾಗದೆ ನಮಗೆ ಉಳಿಗಾಲವಿಲ್ಲ. ಈ ನೀತಿ ಹೀಗೇ ಮುಂದುವರೆದರೆ ಕನ್ನಡವೂ ಸೇರಿದಂತೆ ಹಿಂದೀಯೇತರ ನುಡಿಗಳ ಜನರೆಲ್ಲಾ ತಮ್ಮದೇ ನೆಲದಲ್ಲಿ ತಾವೇ ಎರಡನೇ ದರ್ಜೆಯ ಪ್ರಜೆಗಳಾಗಬೇಕಾಗುತ್ತದೆ. ಹಾಗಾಗಬಾರದೆಂದರೆ ಭಾರತದ ಸಂಸತ್ತಿನಲ್ಲಿ ಇಂದಿನ ಭಾಶಾನೀತಿಯನ್ನು ಕೈಬಿಟ್ಟು ಹೊಸದಾದ ಸಮಾನ ಗೌರವದ, ಸಮಾನ ಅವಕಾಶದ ಭಾಷಾನೀತಿಯೊಂದು ರೂಪುಗೊಳ್ಳಬೇಕಾಗಿದೆ.

ಹೀಗೊಂದು ಹಕ್ಕೊತ್ತಾಯ

ಈ ದಿಕ್ಕಿನಲ್ಲಿ ನಾವು ಜನಸಾಮಾನ್ಯರೂ, ರಾಜಕೀಯ ಪಕ್ಷಗಳೂ, ರಾಜಕಾರಣಿಗಳೂ, ಜನಪ್ರತಿನಿಧಿಗಳೂ ಮೊದಲಾದ ಎಲ್ಲರಲ್ಲೂ ಈ ಬಗ್ಗೆ ಎಚ್ಚರ ಮೂಡಿಸಬೇಕಾಗಿದೆ. ಈ ಎಚ್ಚರದ ದನಿಯಾಗಿ ಈ ಬಾರಿ ನಾವೊಂದು ಮಿಂಬಲೆ ಹಕ್ಕೊತ್ತಾಯವೊಂದನ್ನು ಆರಂಭಿಸಿದ್ದೇವೆ. ನೀವುಗಳು ಇದಕ್ಕೆ ಸಹಿ ಮಾಡಿದ ನಂತರ ಇದನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ತಲುಪಿಸಲಿದ್ದೇವೆ.

ಕಳೆದ ಬಾರಿಯೂ ಇಂಥದ್ದೇ ಒಂದು ಪಿಟಿಶನ್ನಿಗೆ ನೀವು ಸಹಿ ಹಾಕಿದ್ದಿರಿ. ಅದೇನಾಯಿತು? ಈಗ ಮತ್ಯಾಕೆ ಇದು? ಎಂಬ ಅನಿಸಿಕೆ ನಿಮ್ಮಲ್ಲಿ ಕೆಲವರಿಗಿರಬಹುದು. ಕಳೆದಬಾರಿ ಮಾಡಿದ ಪಿಟಿಶನ್ನು ಸುಂಕದವನ ಮುಂದೆ ಸುಖದುಃಖ ಹೇಳಿಕೊಳ್ಳಲು ಹೋದ ಹಾಗಾಯ್ತು! ನಮ್ಮ ರಾಜ್ಯದ ಘನ ರಾಜ್ಯಪಾಲರು ತಮ್ಮ ಅಮೂಲ್ಯ ಸಮಯವನ್ನು "ಭಾಶಾನೀತಿ ಬದಲಾವಣೆಯ ಹಕ್ಕೊತ್ತಾಯ" ಸ್ವೀಕರಿಸುವಂತಹ ಚಿಲ್ಲರೆ ವಿಷಯಗಳಿಗೆ ಮೀಸಲಿಡಲು ಸಾಧ್ಯವಾಗಲಿಲ್ಲ! ತಿಂಗಳುಗಟ್ಟಲೆ ರಾಜಭವನಕ್ಕೆ ಅಲೆದಾಡಿದ ನಮ್ಮ ಭೇಟಿಗೆ ಸಮಯವೇ ಕೊಡದಿದ್ದುದರಿಂದ ಕೊನೆಗೆ ಮನವಿಯನ್ನು ಅವರ ಕಚೇರಿಗೆ ಸಲ್ಲಿಸಿದೆವು. ಈ ಬಾರಿ ಮುಖ್ಯಮಂತ್ರಿಗೆ ಸಲ್ಲಿಸೋಣ. ಅವರು "ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರು, ನಮ್ಮದೇ ನಾಡಿನವರು, ನಮ್ಮಂತೆಯೇ ಕನ್ನಡಿಗರು, ನಮ್ಮಿಂದಲೇ ಆರಿಸಿ ಅಧಿಕಾರದ ಚುಕ್ಕಾಣಿ ಹಿಡಿದವರು" ಎಂಬೆಲ್ಲಾ ವಿಶೇಶಣಗಳ ಕಾರಣದಿಂದಾಗಿ ಈ ಬಾರಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಈ ಹಕ್ಕೊತ್ತಾಯವನ್ನು ಸಲ್ಲಿಸುತ್ತಿದ್ದೇವೆ. 

ಮುಂದಿನದಿನಗಳಲ್ಲಿ ನಮ್ಮ ಈ ದನಿ ಬೇರೆ ಬೇರೆ ರಾಜ್ಯಗಳಿಂದಲೂ ಗಟ್ಟಿಯಾಗಿ ಕೇಳಿ ಬರಬೇಕಿದೆ. ಇದು ನಾಳಿನ ಚುನಾವಣೆಗಳಲ್ಲಿ ಪ್ರಮುಖ ವಿಷಯವಾಗಬೇಕಿದೆ. ಭಾರತದ ಸಂಸತ್ತಿನಲ್ಲಿ ಈ ವಿಷಯ ಚರ್ಚೆಗೆ ಬರಬೇಕಿದೆ. ಕೋಟೆ ಎಷ್ಟೇ ಗಟ್ಟಿಯಾಗಿದ್ದರೇನು? ಒಂದೊಂದೇ ಇಟ್ಟಿಗೆ ಕೆಡುವುತ್ತಿದ್ದರೆ ಕೋಟೆ ಉರುಳಲೇ ಬೇಕು! ಸರಿ ಸರಿ... ಈಗ ಮೊದಲು ಈ ಪಿಟಿಶನ್ನಿಗೆ ಸಹಿ ಹಾಕೋಣ. ನಮ್ಮವರಿಂದಲೂ ಸಹಿ ಹಾಕಿಸೋಣ: http://chn.ge/17S72rs

ಸ್ವಾತಂತ್ರ ದಿನದ ಭಾಷಣ ಮತ್ತು ಭಾಷಣದ ಸ್ವಾತಂತ್ರ!ಭಾರತದಲ್ಲಿ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ. ಆಂಗ್ಲರಿಂದ ಮುಕ್ತಿ ಸಿಕ್ಕಿದ ದಿನದ ನೆನಪಿನ ಮೆರವಣಿಗೆ ಭಾರತೀಯರ ಮನಃಪಟಲದಲ್ಲಿ. ಬೆಳಗ್ಗೆ ನವದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮ! ದೇಶವಿದೇಶಗಳ ಗಣ್ಯರ ಸಮ್ಮುಖದಲ್ಲಿ ಭಾರತದ ಬಾವುಟ ಹಾರಿಸುವಿಕೆ, ಸೇನಾ ತುಕಡಿಗಳ ಮೆರವಣಿಗೆ, ಕೊನೆಯಲ್ಲಿ ಪ್ರಧಾನಿಮಂತ್ರಿಗಳಿಂದ ದೇಶದ ಜನತೆಯನ್ನು ಕುರಿತು ಭಾಷಣ.

ದೆಹಲಿ ಕೆಂಪುಕೋಟೆಯನ್ನೇರಿ...

ಭಾರತದ ಸ್ವತಂತ್ರ ದಿನದಂದು ಕೆಂಪುಕೋಟೆಯನ್ನೇರಿ ದೇಶವನ್ನುದ್ದೇಶಿಸಿ ಇದುವರೆಗೂ ಭಾಷಣ ಮಾಡಿದವರು ಇಂಗ್ಲೀಶ್/ ಹಿಂದೀಯಲ್ಲೇ ಮಾಡಿದ್ದಾರೆ. ಅವರೆಲ್ಲಾ ಯಾರ್ ಯಾರು? ಅವರ ತಾಯ್ನುಡಿಗಳು ಯಾವುವು? ಎಂದು ನೋಡಿದರೆ.... ಕಾಣುವುದು ಈ ಪಟ್ಟಿ:

೧) ಪಂಡಿತ್ ಜವಾಹರ್ ಲಾಲ್ ನೆಹರೂ - ಹಿಂದೀ (ಕಾಶ್ಮೀರಿ ಮೂಲ - ಉತ್ತರಪ್ರದೇಶ)
೨) ಗುಲ್ಜಾರಿ ಲಾಲ್ ನಂದಾ - ಗುಜರಾತಿ (ಗುಜರಾತ್) (ಎರಡು ಬಾರಿ ಪ್ರಧಾನಿಯಾದರೂ ಇವರಿಗೆ ಆ ಅವಕಾಶ ಸಿಗಲೇ ಇಲ್ಲ)
೩) ಲಾಲ್ ಬಹಾದ್ದೂರ್ ಶಾಸ್ತ್ರಿ - ಹಿಂದೀ (ಉತ್ತರಪ್ರದೇಶ)
೪) ಇಂದಿರಾಗಾಂಧಿ - ಹಿಂದೀ (ಕಾಶ್ಮೀರಿ ಮೂಲ - ಉತ್ತರಪ್ರದೇಶ)
೫) ಮುರಾರ್ಜಿ ದೇಸಾಯಿ - ಗುಜರಾತಿ (ಗುಜರಾತ್)
೬) ಚೌಧರಿ ಚರಣ್ ಸಿಂಗ್ - ಪಂಜಾಬಿ/ ಹರ್ಯಾಣ್ವಿ (ಹರ್ಯಾಣ)
೭) ರಾಜೀವ್ ಗಾಂಧಿ - ಹಿಂದೀ (ಉತ್ತರ ಪ್ರದೇಶ)
೮) ವಿ ಪಿ ಸಿಂಗ್ - ಹಿಂದೀ (ಉತ್ತರಪ್ರದೇಶ)
೯) ಚಂದ್ರಶೇಖರ್ - ಹಿಂದೀ (ಉತ್ತರಪ್ರದೇಶ)
೧೦) ಪಿ ವಿ ನರಸಿಂಗರಾವ್ - ತೆಲುಗು (ಆಂಧ್ರಪ್ರದೇಶ)
೧೧) ಅಟಲ್ ಬಿಹಾರಿ ವಾಜಪೇಯಿ - ಹಿಂದೀ (ಮಧ್ಯಪ್ರದೇಶ)
೧೨) ಎಚ್ ಡಿ ದೇವೇಗೌಡ - ಕನ್ನಡ (ಕರ್ನಾಟಕ)
೧೩) ಇಂದ್ರಕುಮಾರ್ ಗುಜ್ರಾಲ್ - ಪಂಜಾಬಿ (ಪಾಕೀಸ್ಥಾನದ ಪಂಜಾಬ್)
೧೩) ಮನಮೋಹನ್ ಸಿಂಗ್ - ಪಂಜಾಬಿ (ಪಂಜಾಬ್)

ಈ ನಮ್ಮ ಪ್ರಧಾನಿಮಂತ್ರಿಗಳಲ್ಲಿ ಹಿಂದೀಭಾಷಿಕರಲ್ಲದವರೂ ಕೆಂಪುಕೋಟೆಯ ಮೇಲಿಂದ ಭಾಷಣ ಮಾಡಿದ್ದು ತಮ್ಮ ತಾಯ್ನುಡಿಗಳಲ್ಲಲ್ಲಾ... ಇಂಗ್ಲೀಶ್/ ಹಿಂದೀಯಲ್ಲಿ. ಯಾಕೇ ಅಂತೀರಾ? ಭಾರತದ ಆಡಳಿತ ಭಾಷೆ ಅಂತಾ! ದೇಶದ ೪೯ನೇ ಸ್ವಾತಂತ್ರ್ಯ ದಿನಾಚರಣೇ ದಿವಸ ಕನ್ನಡಿಗ ದೇವೇಗೌಡರು ಕನ್ನಡದಲ್ಲೇ ಬರೆದುಕೊಂಡು ಹಿಂದೀ ಭಾಷಣ ಓದಿದಾಗ ಎಷ್ಟೋ ಮಾಧ್ಯಮಗಳು ಅವರ ಭಾಷಣದ ಕೆಲವು ತಪ್ಪುಗಳನ್ನೆತ್ತಿ ಆಡಿ, ಆದರೂ ಇದು ಭಾವೈಕ್ಯತೆಯ ಸಂಕೇತ... ಗೌಡರು ಹಿಂದೀ ಬರದಿದ್ರೂ ಹಿಂದೀ ಭಾಷಣ ಮಾಡಿದರು ಎಂದು ಕೊಂಡಾಡಿದ್ದರು!

ಸರಿ, ಹಿಂದೀ ಬರೋರು ಸ್ವಾತಂತ್ರ್ಯೋತ್ಸವದ ಸಂದೇಶವನ್ನು ಅರ್ಥ ಮಾಡ್ಕೊಂಡು ಬುಡ್ತಾರೆ. ಬರದೇ ಇರೋರು ಏನು ಮಾಡಬೇಕು? ಏನು ಮಾಡಬೇಕೆಂದರೆ ಅವರವರ ಭಾಷೆಗೆ ಅನುವಾದ ಮಾಡಿಕೊಳ್ಳಬೇಕು, ಮಾರನೇ ದಿನದ ಪೇಪರ್ ಓದಿಕೊಳ್ಳಬೇಕು ಎನ್ನುವ ಸಿದ್ಧ ಉತ್ತರ ಸಹಜ.

ಆ ಕೆಲಸಾನಾ ಅವರೇ ಯಾಕೆ ಮಾಡಬಾರದು?

ಹೌದೂ! ದೇವೇಗೌಡರು ಹಿಂದೀ ಬರದೇ ಇದ್ದರೂ ತಮಗೇ ಅರ್ಥವಾಗದೇ ಇದ್ದರೂ ಯಾರೋ ಹಿಂದೀಲಿ ಹೇಳಿ ಕನ್ನಡದಲ್ಲಿ ಬರೆದುಕೊಟ್ಟ ಭಾಷಣಾನ ಯಾಕೆ ಓದಬೇಕು? ಅವರ ಭಾಷಣ ಕೇಳಿ "ಈ ಮನುಷ್ಯನಿಗೆ ಹಿಂದೀನೇ ಬರಲ್ಲಾ, ನಾಲಾಯಕ್ಕು" ಅನ್ನುವಂತೆ ಹಂಗಿಸಿಕೊಳ್ಳೋದು ಯಾಕೆ? ಅದಕ್ಕೆ ಬದಲಾಗಿ ದೇವೇಗೌಡರು ಕನ್ನಡದಲ್ಲೇ ಭಾಷಣ ಮಾಡಿದ್ದರೆ ಏನಾಗುತ್ತಿತ್ತು? ಈಗ ಕನ್ನಡಿಗರು ಹಿಂದೀ ಭಾಷಣವನ್ನು ಅನುವಾದಿಸಿಕೊಂಡು ಅರ್ಥ ಮಾಡಿಕೊಳ್ಳುವಂತೆ ಹಿಂದೀಯವರು ಕನ್ನಡದ ಭಾಷಣವನ್ನು, ತೆಲುಗು ಭಾಷಣವನ್ನು ಅನುವಾದಿಸಿಕೊಳ್ಳಬಾರದೇ? ಊಹೂಂ, ನೀವೇ ಅಲ್ಲಿಗೆ ಹೋದರೂ ಅವರೇ ಇಲ್ಲಿಗೆ ಬಂದರೂ ಹಿಂದೀಯಲ್ಲೇ ಮಾತಾಡಬೇಕು... ಅನ್ನುವುದು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಅನ್ನುವ ಪದಗಳಿಗೆ ಅಪಮಾನಕರವಲ್ಲವೇ?

ಕೆಂಪುಕೋಟೆಯಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ತಾಯ್ನುಡಿಯಲ್ಲೇ ಭಾಷಣ ಮಾಡುವುದು ಸಾಧ್ಯವಿದ್ದಿದ್ದರೆ ಭಾರತದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ, ಒಪ್ಪುಕೂಟ ವ್ಯವಸ್ಥೆಗಳು ಸರಿಯಾದ ರೂಪದಲ್ಲಿವೆ ಎನ್ನಬಹುದಿತ್ತು! ಇಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ "Might is right" ಅನ್ನೋದು ಎಷ್ಟು ಸರೀ? ಭಾರತದ ಕೆಂಪುಕೋಟೆಯ ಮೇಲಿಂದ ಪ್ರಧಾನಿಗಳು ತಮ್ಮ ತಾಯ್ನುಡಿಯಲ್ಲೇ ದೇಶವನ್ನು ಕುರಿತು ಭಾಷಣ ಮಾಡಿದ ದಿನ, ಅದನ್ನು ಉಳಿದವರು ಒಪ್ಪಿದ ದಿನ, ಭಾರತದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳು ಅರ್ಥ ಪಡೆದುಕೊಳ್ಳಲು ಶುರುವಾಗುತ್ತೆ ಅಲ್ವಾ ಗುರೂ!?

ನಾಳಿನ ಮಿಂಬಲೆಯಲ್ಲಿ ಕನ್ನಡವೇ ಮುಂದು!

(ಚಿತ್ರಕೃಪೆ: ಲಿವ್ ಮಿಂಟ್ & ದಿ ವಾಲ್‌ಸ್ಟ್ರೀಟ್ ಜರ್ನಲ್)
ಜಗತ್ತಿನ ಅತಿದೊಡ್ಡ ಮಿಂದಾಣದ ಸಂಸ್ಥೆಯಾದ ಗೂಗಲ್ ಸಂಸ್ಥೆಯ ಭಾರತದ ಶಾಖೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ರಾಜನ್ ಆನಂದನ್ ಎಂಬುವವರ ಸಂದರ್ಶನವೊಂದು ಮಿಂಟ್ ಪತ್ರಿಕೆಯಲ್ಲಿ ಮೂಡಿಬಂದಿದೆ. ಮಹತ್ವಾಕಾಂಕ್ಷಿ ಸಂಸ್ಥೆಯಾದ ಗೂಗಲ್, ತನ್ನ ಉದ್ದಿಮೆಗೆ ೧೦% ಬೆಳವಣಿಗೆಯ ಗುರಿಯನ್ನು ಮುಂದಿಟ್ಟುಕೊಳ್ಳದೆ ಹತ್ತುಪಟ್ಟು ಬೆಳೆಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ ಎನ್ನುವ ಮೂಲಕ ಇವರು ಸಂಸ್ಥೆಯ ಮುಂದಿನ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ೧೯೯೮ರಲ್ಲಿ ಆರಂಭವಾದ ಈ ಸಂಸ್ಥೆಯು ೨೦೧೩ರ ಈ ಹೊತ್ತಿನಲ್ಲಿ ಬೆಳೆದಿರುವ ಎತ್ತರ ಗಮನಿಸಿದವರಿಗೆ ಈ ಸಂಸ್ಥೆಯ ಉದ್ಯಮಿಗಾರಿಕೆ ತಂತ್ರವು ಪೊಳ್ಳಿನದ್ದಲ್ಲಾ ಎಂಬುದು ಚೆನ್ನಾಗೇ ತಿಳಿದಿರುತ್ತದೆ. ಇಂತಿಪ್ಪ ಗೂಗಲ್ ಸಂಸ್ಥೆಯು ಭಾರತದ ೧೨೦ ಕೊಟಿ ಜನಸಂಖ್ಯೆಯನ್ನು ತನ್ನ ಭವಿಷ್ಯದ ಮಾರುಕಟ್ಟೆಯನ್ನಾಗಿ ಗುರುತಿಸಿಕೊಂಡಿದ್ದು ಸದರಿ ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳುವ ತಂತ್ರದ ಬಗ್ಗೆ ಈ ಸಂದರ್ಶನದಲ್ಲಿ ಶ್ರೀ ರಾಜನ್ ಆನಂದನ್ ಅವರು ಮಾತಾಡಿರುವ ಅಂಶಗಳು ಆಸಕ್ತಿಕರವಾಗಿವೆ.

ನಾಳಿನ ಮಿಂದಾಣದ ಸೇವೆಗಳು ಕನ್ನಡದಲ್ಲೇ!

ಈ ಸಂದರ್ಶನದ ಒಂದು ಭಾಗದಲ್ಲಿ ಇವರು "ಮೊಬೈಲುಗಳ ಮೂಲಕ ಮಿಂಬಲೆ ಸೇವೆಗಳನ್ನು ಪದೆದುಕೊಳ್ಳುವುದು ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ. ಖಚಿತವಾಗಿಯೂ ಈ ಬೆಳವಣಿಗೆಗೆ ಇರುವ ಪ್ರಮುಖವಾದ ತೊಡಕುಗಳಲ್ಲಿ ಒಂದು ಭಾಷೆ. ಸ್ಥಳೀಯ ಭಾಷೆಯಲ್ಲಿ ಹೆಚ್ಚೆಚ್ಚು ಆಯ್ಕೆಯ ಅವಕಾಶವನ್ನು ನೀಡುವ ಮೂಲಕ ಈ ತೊಡಕನ್ನು ನಿವಾರಿಸಿಕೊಂಡು ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯ. ಈಗ ೧೫ ಕೋಟಿಯಷ್ಟು ಜನರು ಮಿಂಬಲೆಯನ್ನು ಬಳಸುತ್ತಿದ್ದು ಮುಂದಿನ ೩೦ ಕೋಟಿ ಜನರು ಇಂಗ್ಲೀಶ್ ಬಳಸದ ಮಿಂಬಲೆ ಬಳಕೆದಾರರಾಗಿರಲಿದ್ದಾರೆ. ಹಾಗಾಗಿ ಸ್ಥಳೀಯ ಭಾಷೆಗಳನ್ನು ಬಳಸುವುದು ಉದ್ದಿಮೆಯನ್ನು ಬೆಳೆಸಲು ಇರುವ ದೊಡ್ಡ ದಾರಿ" ಎಂದಿದ್ದಾರೆ.

ಈ ಮಾತುಗಳನ್ನು ಕೇಳಿದಾಗ ಇಂಗ್ಲೀಶ್ ಬರುವವರಿಗೆ ಮಾತ್ರಾ ಅಂತರ್ಜಾಲ, ತಂತ್ರಜ್ಞಾನ ಎನ್ನುವ ಭ್ರಮೆಗಳು ಕಳಚಿ ಬೀಳುವ ದಿನಗಳು ಹತ್ತಿರದಲ್ಲೇ ಇದೆ ಎನ್ನಿಸುತ್ತದೆ. ‘ನಿಮಗೆ ಇಂಥಾ ಭಾಷೆ ಬರುವುದಿಲ್ಲಾ ಹಾಗಾಗಿ ಈ ಸೇವೆಯನ್ನು ನಿಮಗೆ ನೀಡುವುದಿಲ್ಲಾ’ ಎನ್ನುವಂಥಾ ಮಾತುಗಳು ಕೊನೆಯಾಗುವ ದಿನಗಳು ಬರಲಿವೆ. ಕನ್ನಡದಲ್ಲೇ ಎಲ್ಲಾ ಬಗೆಯ ಮಿಂಬಲೆ ಸೇವೆಗಳನ್ನು ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ ಕೆಲಸಕ್ಕೆ ಅಮೇರಿಕಾದ ಗೂಗಲ್ ಸಂಸ್ಥೆ ಮುಂದಾಗಿರುವುದು ಒಂದು ಮಹತ್ವದ ಸಂಗತಿಯಾಗಿದೆ.

ಲೂಸಿಯಾ: ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ.

(ಕೃಪೆ: ಲೂಸಿಯಾ ಮಿಂದಾಣ)
"ಈ ಹೊಸತನದ ಪ್ರಯೋಗವನ್ನು ಮೆಚ್ಚದವರು ಯಾರಾದರೂ ಇದ್ದೀರಾ?" ಎಂದು ಟಾರ್ಚ್ ಬಿಟ್ಕೊಂಡು ನೋಡ್ತಿರೋ ಹಾಗಿರೋ ಈ ಜಾಹಿರಾತು "ಲೂಸಿಯಾ" ಚಿತ್ರತಂಡದ ಕ್ರಿಯಾಶೀಲತೆಗೆ, ಕನ್ನಡ ಚಿತ್ರರಂಗದಲ್ಲಿನ್ನೂ ಹೊಸ ಹೊಸ ಸೃಜನಶೀಲ ಪ್ರಯತ್ನಗಳು ಆಗುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಇದಷ್ಟೇ ಆಗಿಲ್ಲದೆ ಕನ್ನಡದ ನುಡಿ ಸಾಧ್ಯತೆಯ ಪಟ್ಟಿಗೆ "ನೋಡುಗರ ಹೂಡಿಕೆಯ ಸಿನಿಮಾ" ಎನ್ನುವ ಹೊಸದೊಂದು ಸಾಲನ್ನು ಸೇರಿಸುತ್ತಿದೆ.

"ಲೂಸಿಯಾ" ಹೆಸರಿನ ಹೊಸ ಸಿನಿಮಾವೊಂದು ಒಂದೆರಡು ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು ನಿಧಾನವಾಗಿ ಪ್ರಚಾರ ಕಳೆಗಟ್ಟತೊಡಗಿದೆ. ಲೂಸಿಯ ಸಿನಿಮಾಗಿಂತಲೂ ನಮಗೆ ಮಹತ್ವದ್ದಾಗಿ ಕಾಣುತ್ತಿರುವುದು ಆ ಸಿನಿಮಾ ತಯಾರಾದ ಬಗೆ. ನೋಡುಗರೇ ಹೂಡಿಕೆದಾರರಾಗುವ ವಿಭಿನ್ನವಾದ ಅವಕಾಶದಿಂದಾಗಿ "ಆಡಿಯನ್ಸ್ ಫಿಲ್ಮ್" ಎಂಬ ಹೊಸ ವಿಧಾನವೊಂದು ನಮ್ಮ ನಾಡಲ್ಲಿ ಚಿಗುರುತ್ತಿರುವುದು ಎಲ್ಲರ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಈ ಹೊಸ ಬೆಳವಣಿಗೆ ಹೊಸತನದಿಂದ ಕೂಡಿದ್ದು ಹೊಸದೊಂದು ಮಾದರಿಯಾಗುವ ಲಕ್ಷಣ ಹೊಂದಿದೆ.

ಹೊಸತನದ ಪ್ರಯೋಗ

ಸಿನಿಮಾವೊಂದಕ್ಕೆ ದೊಡ್ಡಮೊತ್ತದ ಬಂಡವಾಳ ಬೇಕೆನ್ನುವುದು ಗೊತ್ತಿರುವ ಸಂಗತಿಯೇ! ಈ ಬಂಡವಾಳವನ್ನು ತನ್ನ ಹಿಂದಿನ ಸಿನಿಮಾ ಹುಟ್ಟುಹಾಕಿದ ಭರವಸೆಯನ್ನು ಮುಂದೊಡ್ಡಿ ನೋಡುಗರೇ ತೊಡಗಿಸುವಂತೆ ಮಾಡಿದ ಈ ಬಗೆ ನಾಡಿಗೆ ಹೊಸದು. ಇದೇ ಕಾರಣಕ್ಕಾಗಿ ಲೂಸಿಯಾ ತಂಡಕ್ಕೆ ಪ್ರಶಸ್ತಿಯೂ ಬಂದದ್ದು, ಈ ಪ್ರಯತ್ನಕ್ಕೊಂದು ದೊಡ್ಡಬಲ ಬಂದಂತಾಗಿದೆ. ಇಂಥದ್ದೊಂದು ಪ್ರಯತ್ನದ ಹಿಂದೆ ದೊಡ್ಡದಾದ ಪ್ರಯೋಗಶೀಲತೆಯಿದೆ. ಮೇಲ್ನೋಟಕ್ಕೆ ಬಹಳ ಸುಲಭವಾದ ಪಟ್ಟಿನಂತೆ ಕಾಣುವ ಈ ಪ್ರಯೋಗವು ಬಹಳ ಎದೆಗಾರಿಕೆಯಿಂದ ಕೂಡಿರುವುದಾಗಿದೆ. ಈ ರೀತಿಯ ಹೊಸಪ್ರಯತ್ನಗಳು ಗೆಲ್ಲುವುದಾದಲ್ಲಿ ಇಂತಹ ಇನ್ನಷ್ಟು ಪ್ರಯೋಗಗಳು ನಮ್ಮಲ್ಲಾಗುತ್ತದೆ.

ವಾಸ್ತವವಾಗಿ ಸಿನಿಮಾವೊಂದನ್ನು ಹೀಗೆ ನೋಡುಗರೇ ಒಂದಷ್ಟು ಮಂದಿ ಹಣ ತೊಡಗಿಸಿ ನಿರ್ಮಾಣ ಮಾಡಬೇಕೆಂದರೆ ಅದರ ನಿರ್ಮಾಣದ ಬಗ್ಗೆ ಗಟ್ಟಿಯಾದ ನಂಬಿಕೆ ಇರಬೇಕಾಗುತ್ತದೆ. ಇಂತಹ ನಂಬಿಕೆ ಒಂದೇ ಬಾರಿಗೇ/ ಮೊದಲಬಾರಿಗೇ ಒಬ್ಬ ನಿರ್ದೇಶಕರ ಮೇಲೆ ಹುಟ್ಟುವುದು ಕಷ್ಟ! ಹಾಗಾಗಿ ಯಾವುದೇ ನಿರ್ದೇಶಕರಾದರೂ ಕೂಡಾ ಜನರಿಗೆ ತಮ್ಮ ಹಿಂದಿನ ಯಶಸ್ಸನ್ನು ತೋರಿಸಿ, ತಮ್ಮಲ್ಲಿರುವ ಪ್ರತಿಭೆಯ ಬಗ್ಗೆ ನಂಬಿಕೆ ಮೂಡಿಸಿಯೇ ಇಂಥಾ ಹೂಡಿಕೆ ಗಳಿಸಿಕೊಳ್ಳಲು ಸಾಧ್ಯ. ಈ ಕಾರಣದಿಂದಲೇ ಕನ್ನಡಚಿತ್ರರಂಗದಲ್ಲಿ ಇನ್ನಷ್ಟು ಮತ್ತಷ್ಟು ಹೊಸ ಪ್ರತಿಭೆಗಳು, ಒಳ್ಳೆಯ ಚಿತ್ರಗಳು ಮೂಡಿಬರಲಿವೆ. ಈ ಕಾರಣಕ್ಕಾಗಿ ಲೂಸಿಯಾ ಚಿತ್ರ ಗೆಲ್ಲಬೇಕು. ಹಾಗೆ ಗೆಲ್ಲಬೇಕೆಂದರೆ, ಅದಾಗುವುದು ನಾವೂ ನೀವು ಮನಸ್ಸು ಮಾಡಿದರೆ ಮಾತ್ರವೇ!

ಕೊನೆಹನಿ: ಈ ಚಿತ್ರದ ಹಂಚಿಕೆಯನ್ನೂ ನೋಡುಗರೇ ಮಾಡಬಹುದೆನ್ನುವ ಮತ್ತೊಂದು ಪ್ರಯೋಗವನ್ನೂ ಲೂಸಿಯಾ ತಂಡ ಮಾಡುತ್ತಿದೆ. ನಿಮಗೆ ಮನಸ್ಸಿದ್ದಲ್ಲಿ ಇದೇ ಆಗಸ್ಟ್ ೧೫ಕ್ಕೆ ಮೊದಲು ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ... ಪವನ್ ಕುಮಾರ್ ತಂಡದೊಡನೆ ಕೈಜೋಡಿಸಿ.  http://www.hometalkies.com/lucia/pre-order/ 

ಇಂದು ಇವುಗಳು ಅಳಿದರೆ...ನಾಳೆ ನಮ್ಮದೂ!

(ಚಿತ್ರ ಕೃಪೆ: ಉದಯವಾಣಿ)
ದಿನಾಂಕ ೦೨.೦೮.೨೦೧೩ರ ಉದಯವಾಣಿಯಲ್ಲಿ ಹೀಗೊಂದು ಸುದ್ದಿ ಪ್ರಕಟವಾಗಿದೆ. ಕರ್ನಾಟಕದ ಕೆಲ ನುಡಿಗಳು ಕಣ್ಮರೆಯಾಗುವ ಅಪಾಯದ ಅಂಚಿಗೆ ತಲುಪಿವೆ ಎನ್ನುವುದೇ ಈ ಸುದ್ದಿಯ ಸಾರ. ಹೀಗೆ ಅವಸಾನಗೊಳ್ಳಲು ಕಾರಣ ‘ಆಯಾ ಭಾಷೆಯನ್ನಾಡುವ ಜನರ ಜನಸಂಖ್ಯೆ ಕುಸಿಯುತ್ತಿರುವುದು ಮತ್ತು ಆ ಜನರು ತಮ್ಮ ನುಡಿಯನ್ನು ಬಿಟ್ಟು ಸಮೀಪದ ಬಲಿಷ್ಟವಾದ ನುಡಿಯನ್ನು ಅಪ್ಪಿಕೊಳ್ಳುತ್ತಿರುವುದು’ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ವೈವಿಧ್ಯತೆಯ ಅಳಿವು ಒಳಿತಲ್ಲಾ!

ಕರ್ನಾಟಕದಲ್ಲಿ ಕನ್ನಡವಲ್ಲದೆ, ಇದೇ ನೆಲದ ಇನ್ನೂ ಹಲವು ಭಾಷೆಗಳಿವೆ. ಇವುಗಳಲ್ಲಿ ತುಳು, ಕೊಡವ ನುಡಿಗಳಂಥಾ ಲಕ್ಷಗಟ್ಟಲೆ ಜನರಾಡುವ ನುಡಿಗಳು ಇರುವಂತೆಯೇ ಕುಂದಾಪುರದ ಸುತ್ತಮುತ್ತಲಿನ ಸುಮಾರು ಐವತ್ತು ಕುಟುಂಬಗಳು ಮಾತ್ರಾ ಮಾತಾಡುವ ಬೆಳಾರಿ ಎಂಬ ನುಡಿಯಂತಹವುಗಳೂ ಇವೆ. ಈ ನುಡಿಗಳಲ್ಲಿ ಅಳಿವಿನಂಚಿಗೆ ಬಂದು ತಲುಪಿರುವುವು ಹತ್ತು ಎಂದು ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ಼್ ಇಂಡಿಯಾ ಎಂಬ ಸಂಸ್ಥೆಯ ವರದಿ ತಿಳಿಸುತ್ತಿದೆ. ನುಡಿಯೆಂಬುದು ಹೀಗೆ ನಶಿಸಿಹೋಗುವುದು ಎಂದಿಗೂ ಒಪ್ಪುವಂತಹುದಲ್ಲಾ! ವೈವಿಧ್ಯತೆಯೇ ಜೀವಾಳ ಎನ್ನುವ ಮನಸಿಗರಿಗೆ ಈ ಸುದ್ದಿ ಕಹಿಯಾದುದೇ ಆಗಿದೆ. ನುಡಿಯೊಂದನ್ನು ಒಂದು ಪರಂಪರೆಯೆಂದು ಗುರುತಿಸುತ್ತಿರುವ ಈ ಸಂದರ್ಭದಲ್ಲಿ ಪರಂಪರೆಗಳು ನಮ್ಮ ಕಣ್ಣೆದುರೇ ಅಳಿದುಹೋಗುವುದನ್ನು ಸಹಿಸುವುದಾದರೋ ಹೇಗೆ?

ಅಳಿವಿಗೆ ಕಾರಣ

ಈ ನುಡಿಗಳು ಕರ್ನಾಟಕದ ಹಲವು ಮೂಲನಿವಾಸಿಗಳ ನುಡಿಯಾದುದರಿಂದಾಗಿ ಇವುಗಳನ್ನು ಉಳಿಸಿಕೊಳ್ಳುವ ಹೊಣೆಯೂ ನಮ್ಮದೇ ಆಗಿದೆ. ಈ ಹೊಣೆಯು ಬಹಳ ಸೂಕ್ಷ್ಮತರವಾದದ್ದಾಗಿದೆ ಎಂಬುದನ್ನು ಅರಿಯಬೇಕಾದರೆ ಈ ನುಡಿಗಳ ಅವಸಾನದೆಡೆಗಿನ ಪಯಣಕ್ಕೆ ನಿಜವಾದ ಕಾರಣಗಳನ್ನು ಹುಡುಕಬೇಕಾಗಿದೆ. ಸದ್ಯ ಈ ಪಟ್ಟಿಯಲ್ಲಿರುವ ನುಡಿಗಳು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಮೂಲನಿವಾಸಿಗಳದ್ದು. ನುಡಿಯೊಂದು ಮಾರ್ಪಡುವುದೇ ಆ ನುಡಿಯಾಡುವ ಜನರು ಬೇರೆ ನುಡಿಯಾಡುವ ಜನರೊಡನೆ ಸಂಪರ್ಕಕ್ಕೆ ಬಂದಾಗ. ಜನ ಸಮುದಾಯವೊಂದು ಹೊರಜಗತ್ತಿಗೆ ತೆರೆದುಕೊಳ್ಳುವುದರಿಂದಲೇ ತನ್ನ ಆರ್ಥಿಕ ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯ ಎನ್ನುವಂತಹ ಈ ಕಾಲದಲ್ಲಿ ಇಂತಹ ಸಂಪರ್ಕಗಳು ಸಹಜ ಮತ್ತು ಬೇಕಿರುವುದೇ ಆಗಿದೆ. ಹಾಗಿದ್ದಾಗ ತಮ್ಮತನವನ್ನು ಈ ಜನರು ಬಿಟ್ಟುಕೊಡಲು ಕಾರಣವೇನು? ಈ ಜನರ ನುಡಿಗಳನ್ನು ನುಂಗುತ್ತಿರುವುದು ಯಾವುದು? ಎಂಬುದನ್ನು ಅರಿಯಬೇಕಾಗಿದೆ. ಜನರು ತಮ್ಮನುಡಿಯನ್ನು ಬಿಟ್ಟುಕೊಡುವುದು ಅದಕ್ಕೆ ಇಂತಿಂತಹ ಯೋಗ್ಯತೆಯಿಲ್ಲಾ, ಇಂತಿಂತಹ ಕೆಲಸಗಳಲ್ಲಿ ಅದನ್ನು ಬಳಸಲು ಆಗುವುದಿಲ್ಲ ಎನ್ನಿಸಿದಾಗ ಮತ್ತು ತನ್ನ ನುಡಿಯ ಬಗ್ಗೆ ಕೀಳರಿಮೆ ಬೆಳೆದಾಗಲೇ ಎನ್ನಿಸುತ್ತದೆ.

೨೦ನೇ ಶತಮಾನದಲ್ಲಿ ಸಾಕ್ಷರತೆಯ, ಆಧುನಿಕ ಶಿಕ್ಷಣದ ಬಲುದೊಡ್ಡ ಅಲೆಯೆದ್ದಿತ್ತು. ಆಗ ತನ್ನೆಲ್ಲಾ ಪ್ರಜೆಗಳನ್ನೂ ಅಕ್ಷರಸ್ಥರನ್ನಾಗಿಸುವ ಪಣತೊಟ್ಟಿದ್ದ ನಮ್ಮ ಹಿರಿಯರು ಕಲಿಕಾ ಕೇಂದ್ರಗಳ ಮೂಲಕ ಶಿಕ್ಷಣವನ್ನು ಈ ಸಮುದಾಯಗಳಿಗೂ ದೊರಕಿಸಿಕೊಡಲು ಮುಂದಾದರು. ಅವರಾದರೋ ಕನ್ನಡ ಮಾಧ್ಯಮದಲ್ಲಿ ಕಲಿಸುವ ಮೂಲಕ, ಬಹುಶಃ ತಾವು ಅನಾಗರೀಕರನ್ನು ಅಕ್ಷರ ಕಲಿಸಿ ನಾಗರೀಕರನ್ನಾಗಿಸುತ್ತಿದ್ದೇವೆ ಎಂದೇ ಭಾವಿಸಿಕೊಂಡಿದ್ದರು. ಈ ಕಲಿಕೆಯನ್ನು ಈ ಸಮುದಾಯಗಳ ತಾಯ್ನುಡಿಯಲ್ಲಿ ತರುವ ಪ್ರಯತ್ನಗಳು ಗಂಭೀರವಾಗಿ ಆಗಲೇ ಇಲ್ಲಾ. ಕರ್ನಾಟಕದಲ್ಲಿ ಒಂದು ಹಂತದವರೆಗೆ ಕನ್ನಡ ನಂತರ ಇಂಗ್ಲೀಶ್ ಎನ್ನುವುದು ಕಲಿಕೆಯ ಮಾಧ್ಯಮವಾದವು. ಇಂತಹ ವಾತಾವರಣದಲ್ಲಿರುವ ಸಣ್ಣಸಂಖ್ಯೆಯ ಭಾಷಿಕ ಸಮುದಾಯಗಳು, ಲಿಪಿಯ ಹಂಗಿಲ್ಲದೆಯೇ ತಮ್ಮತನವನ್ನು ಎಷ್ಟುಕಾಲ ಉಳಿಸಿಕೊಂಡು ಬರಲು ಸಾಧ್ಯ? ಹೀಗಾಗಿ ಈ ನುಡಿಗಳ ಬಳಕೆ ಕುಗ್ಗುತ್ತಾ ಬಂದಿತು. ಇದೇ ಇಂದಿನ ಅವಸಾನದ ಅಂಚಿಗೆ ಈ ನುಡಿಗಳನ್ನು ತಂದು ನಿಲ್ಲಿಸಿರುವುದು. ಈ ನುಡಿಗಳ ಈ ದುಸ್ಥಿತಿಗೆ ಕಾರಣವೂ ಕೂಡಾ ಈ ನುಡಿಗಳ ಬಳಕೆಯ ಹರವನ್ನು ಹಿಗ್ಗಿಸಲು ಆಯಾ ನುಡಿಜನಾಂಗಗಳಿಗೆ ಅವಕಾಶವಿಲ್ಲದೆ ಇದ್ದುದರಿಂದಲೇ. ಕಾಡಿನಲ್ಲಿ ವಾಸಿಸುವ ಜನಾಂಗವೊಂದು ತನ್ನ ಬದುಕಲ್ಲಿ ಕಾಣುವ, ಕೇಳುವ, ಬಳಸುವ ಎಲ್ಲದಕ್ಕೂ ಒಂದು ಜಾಗವನ್ನು ತನ್ನ ನುಡಿಯಲ್ಲಿಮಾಡಿಕೊಂಡಿರುತ್ತದೆ. ಇಂತಹ ಪರಿಸರಕ್ಕೆ ಹೊಸದೊಂದು ಬದುಕುವ ಬಗೆ, ಸಂಸ್ಕೃತಿ ಪರಿಚಯವಾದಾಗ ಅವುಗಳನ್ನೂ ತನ್ನ ನುಡಿಯಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಹೀಗೆ ಅಳವಡಿಸಿಕೊಳ್ಳಲು ಶಕ್ತವಾಗದೇ ಇದ್ದಲ್ಲಿ ನುಡಿಯೊಂದು ಅವಸಾನದತ್ತ ಸಾಗುತ್ತದೆ ಎನ್ನುವುದು ಸಾರಾಂಶ.

(ಚಿತ್ರಕೃಪೆ: http://www.worldgeodatasets.com/language/huffman/)

ಕರ್ನಾಟಕ ಸರ್ಕಾರದ ಹೊಣೆ

ಕರ್ನಾಟಕದಲ್ಲಿರುವ ಎಲ್ಲಾ ವೈವಿಧ್ಯತೆಗಳನ್ನು ಪೊರೆಯುವ ಹೊಣೆ ಆಯಾ ಜನಾಂಗಗಳದ್ದೇ ಆದರೂ ನಮ್ಮ ಸರ್ಕಾರವೂ ಕೂಡಾ ಇವುಗಳನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಭಾಷಾ ಅಕಾಡಮಿಗಳು ನಿಜಕ್ಕೂ ಬೇಕಿರುವುದೇ ಈ ನುಡಿಗಳ ಬೆಳವಣಿಗೆಗೆ. ಈ ನುಡಿಗಳ ಇಂದಿನ ಸ್ಥಿತಿಗೆ ಆಯಾ ನುಡಿಜನಾಂಗಗಳಷ್ಟೇ ಅಲ್ಲದೇ ಅವುಗಳನ್ನೊಳಗೊಂಡಿರುವ ರಾಜ್ಯ/ ದೇಶಗಳೂ ಕಾರಣವಾಗಿವೆ. ಹಾಗಾಗಿ ಇವುಗಳನ್ನು ಪೊರೆಯಲು ತುರ್ತಾಗಿ ಕರ್ನಾಟಕ ಸರ್ಕಾರ ಮುಂದಾಗಬೇಕಾಗಿದೆ. ಮೊದಲಿಗೆ ಈಗಿರುವ ನುಡಿಗಳನ್ನು ದಾಖಲಿಸಿಕೊಳ್ಳುವ, ಅವುಗಳ ಬಳಕೆಯ ಹರವನ್ನು ಹಿಗ್ಗಿಸುವ, ಬಳಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಈ ನುಡಿಗಳನ್ನು ಪೊರೆಯಲಿಕ್ಕಾಗಿ ತುರ್ತಾಗಿ ಒಂದಷ್ಟು ಸಂಸ್ಥೆಗಳನ್ನೂ ಕಟ್ಟಿ  ಅನುದಾನಗಳನ್ನೂ ನೀಡಬೇಕಾಗಿದೆ. ಇಂತಹ ಪ್ರಯತ್ನಗಳು ಈ ಹಿಂದೆ ರಷ್ಯಾದಲ್ಲಿಯೂ ಯಶಸ್ವಿಯಾಗಿ ನಡೆದಿವೆಯಂತೆ. ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆಯ ಜನರ ನುಡಿಯೊಂದನ್ನು ಹೀಗೆ ಅಕಾಡಮಿ ರಚಿಸುವ ಮೂಲಕ ಉಳಿಸಿಕೊಂಡದ್ದಷ್ಟೇ ಅಲ್ಲದೆ ಆ ನುಡಿಯಲ್ಲಿ ಸಾಹಿತ್ಯದ ರಚನೆಯೂ ಆಗುವುದನ್ನು ಸಾಧ್ಯಮಾಡಲಾಯಿತಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಯಾವ ಸರ್ಕಾರವೂ ಇಂಥಾ ಯಾವ ಸಾಧ್ಯತೆಯನ್ನೂ ಪರಿಗಣಿಸದೆ, ತನ್ನ ನಾಡಿನ ನುಡಿಯೊಂದು ಸಾಯುತ್ತಿರುವುದನ್ನು ನೋಡುತ್ತಾ ಇರಲು ಸಾಧ್ಯವಿಲ್ಲಾ! ಇರಬಾರದು!! ಕರ್ನಾಟಕ ಸರ್ಕಾರ ತನ್ನ ಭಾಷಾನೀತಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳುವುದು ಒಳ್ಳೆಯದು.

ಕೊನೆಹನಿ: ಭಾಷೆಯೊಂದು ಬಳಕೆಯ ಹರವನ್ನು ಹಿಗ್ಗಿಸಿಕೊಳ್ಳದೆ, ಕಾಲಕಾಲಕ್ಕೆ ಬದಲಾಗದೇ ಹೋದರೆ ಅಂಥಾ ನುಡಿಯ ಅಳಿವನ್ನು ತಪ್ಪಿಸಲಾಗದು. ಹಾಗಾಗೇ ನುಡಿಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್)ಯಂತಹ ಸಲಕರಣೆಗಳನ್ನು ಬಳಸಿಕೊಳ್ಳುವುದು ಮುಖ್ಯ. ಇದು ಕನ್ನಡಕ್ಕೂ ಅನ್ವಯವಾಗುತ್ತದೆ. ಇಂದು ಸಾಹಿತ್ಯಕ್ಕೋ ಮತ್ತೊಂದಕ್ಕೋ ಕನ್ನಡವೇನಾದರೋ ಸೀಮಿತವಾಗುಳಿದು ಬದುಕಿನ ವಿದ್ಯೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದೆ ಇದ್ದರೆ ನಾಳೆ ಕನ್ನಡವೂ ಅವಸಾನದ ಅಂಚಿನಲ್ಲಿ ಬಂದು ನಿಲ್ಲುವುದು ಖಚಿತ!
Related Posts with Thumbnails