Showing posts with label ಜಾಗತೀಕರಣ. Show all posts
Showing posts with label ಜಾಗತೀಕರಣ. Show all posts

ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!

ಅಂತರ್ಜಾಲದಲ್ಲಿ ಸಕ್ಕತ್ ಪ್ರಸಿದ್ಧಿ ಹೊಂದಿರುವ ಗೂಗಲ್ ಸಂಸ್ಥೆಯ ಬ್ಲಾಗರ್ ಮತ್ತು ಆರ್ಕುಟ್ ತಾಣಗಳು ಇತ್ತೀಚೆಗೆ ರೋಮನ್ ನಿಂದ ಕನ್ನಡಕ್ಕೆ ಲಿಪಿ-ಬದಲಾವಣೆ ಮಾಡೋ ತಂತ್ರಾಂಶವನ್ನ ಜೋಡಿಸಿಕೊಂಡಿವೆ. ಈಗ ಇವೆರಡು ಜನಪ್ರಿಯ ತಾಣಗಳಲ್ಲಿ "ಬರಹ" ಮುಂತಾದ ಯಾವುದೇ ವಿಶೇಷ ತಂತ್ರಾಂಶವಿಲ್ಲದೆ ಲಿಪಿ-ಬದಲಾವಣೆ ಸಾಧ್ಯವಾಗಿದೆ. ಪ್ರಪಂಚದಲ್ಲಿ ಬೆರಳೆಣಿಕೆಯಷ್ಟೇ ಭಾಷೆಗಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಕನ್ನಡವೂ ಈ ಪಟ್ಟಿಯಲ್ಲಿರೋದು ಖುಶಿ ತರುವ ಸುದ್ದಿ ಗುರು!

ಗೂಗಲ್ ಒಂದು ಬಹು-ಬಿಲಿಯನ್ ಡಾಲರ್ ವಹಿವಾಟಿರೋ ಬಹುರಾಷ್ಟ್ರೀಯ ಸಂಸ್ಥೆ. ಇದರ ಕಚೇರಿಗಳು ಬರೀ ಬೆಂಗ್ಳೂರಲ್ ಮಾತ್ರ ಅಲ್ಲ, ಅಮೇರಿಕ-ಗಿಮೇರಿಕ ಯೂರೋಪ್-ಗೀರೋಪಲ್ಲೆಲ್ಲಾ ಎರ್ರಾಬಿರ್ರಿ ಚೆಲ್ಲಾಡಿದಹಾಗಿವೆ. ಇವ್ರಿಗೇನು ತೀಟೆ ಕನ್ನಡದ ತಂತ್ರಾಂಶ ಮಾಡಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ಇಷ್ಟೇ: ಕನ್ನಡ ಅಂತರ್ಜಾಲದಲ್ಲಿ ಸಕ್ಕತ್ ಬಳಕೆ ಆಗ್ತಿದೆ. ಕನ್ನಡದ ಅಂತರ್ಜಾಲ ತಾಣಗಳ್ನ ಮಾಡೋರು, ಬ್ಲಾಗುಜೀವಿಗಳು, ಆರ್ಕುಟ್ಟೋರು - ಇವ್ರೆಲ್ಲ ಎಷ್ಟ್ ಜನ ಇದಾರೆ ಅಂದ್ರೆ ಗೂಗಲ್ಗೆ ಇಲ್ಲಿ ಒಂದು ಒಳ್ಳೇ ಲಾಭದಾಯಕ ಮಾರುಕಟ್ಟೆ ಕಾಣಿಸಿದೆ, ಅಷ್ಟೆ. ಯಾವ ಮಣ್ಣು ಕನ್ನಡದ "ಸೇವೆ" ಗೋಸ್ಕರಾನೂ ಇವ್ರು ಈ ಕೆಲ್ಸ ಮಾಡಿಲ್ಲ, ಮಾಡಬೇಕಾಗೂ ಇಲ್ಲ. ಬರೀ ಸೇವೆ ಮಾಡುಸ್ಕೊಂಡು ಒಂದು ಮೂಲೇಲಿ ಬಿದ್ದಿರಕ್ಕೆ ಕನ್ನಡ ಏನು ಒಂದು ಮುದಿ ಹೆಂಗ್ಸಲ್ಲ ಗುರು, ಹದಿಹರೆಯದ ಚೆಲುವೆ! ಇವಳನ್ನ ಮೆಚ್ಚಿಸಕ್ಕೆ ಬ್ಲಾಗರ್ ಮತ್ತು ಆರ್ಕುಟ್ ಲೈನ್ ಹೊಡೀತಿವೆ. ಏನ್ ಗುರು?

ಅಂದಹಾಗೆ...ಅದೇನೋ ಹೇಳ್ತಾರಲ್ಲ, ಅಮೇರಿಕದೋರಿಗೂ ಅರ್ಥವಾಗಿದೆ ಈಗ ಕನ್ನಡದ ಮಾರುಕಟ್ಟೆ ಎಷ್ಟಿದೆ ಅಂತ. ಶಂಕದಿಂದ ಬಂದೈತಲ್ಲ ತೀರ್ಥ, ಇನ್ನು ನಾವೂ ನಮ್ಮ ಮಾರುಕಟ್ಟೆ ಲಾಭ ಪಡ್ಕೋಬೋದು, ರೈಟ್!

ಹೊಸ ವಿಮಾನ ನಿಲ್ದಾಣದಲ್ಲಿ ಕನ್ನಡದ ಗತಿ?

ಬೆಂಗಳೂರಿಗೆ ಒಂದು ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರ್ತಿದೆ ಅಂತ ನಿಮಗೆ ಗೊತ್ತಿಲ್ಲದೇ ಇರ್ಲಿಕ್ಕಿಲ್ಲ. ಇದಕ್ಕೆ "ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ" (ಇಂಗ್ಲೀಷಿನಲ್ಲಿ Bangalore ಬದ್ಲು "Bengaluru International Airport") ಅಂತ ಕೊನೆಗೂ ಹೆಸ್ರಿಡ್ತಿದಾರೆ ಅನ್ನೋದು ಒಳ್ಳೇ ಬೆಳ್ವಣಿಗೆ ಆದ್ರೂ ಈ ನಿಲ್ದಾಣದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟತ್ವೆ.

ಈ ನಿಲ್ದಾಣದಲ್ಲಿ ಕನ್ನಡಕ್ಕೆ ಯಾವ ಸ್ಥಾನ ಇರುತ್ತೆ? ಕನ್ನಡ ಇದರಲ್ಲಿ ಕಾಣುತ್ತೋ ಇಲ್ಲವೋ? ಸೂಚನೆಗಳು, ಅರ್ಜಿಗಳು - ಮುಂತಾದವುಗಳಲ್ಲಿ ಕನ್ನಡ ಇರುತ್ತೋ ಇರೋದಿಲ್ವೋ? ಇದ್ದರೆ ಕಣ್ಣಿಗೆ ಕಾಣೋಹಂಗ್ ಇರತ್ವೋ ಕಾಟಾಚಾರಕ್ಕೆ ಯಾರಿಗೂ ಕಾಣಿಸದೇ ಇರೋಷ್ಟು ಚಿಕ್ಕದಾಗಿ ಕನ್ನಡದಲ್ಲೂ ಇರತ್ತೋ? ನಿಲ್ದಾಣದಲ್ಲಿ ಕೇಳಿಬರೋ ಸಂಗೀತ-ಗಿಂಗೀತ ಕನ್ನಡದ್ದಾಗಿರತ್ತೋ ಇಲ್ಲವೋ? ಒಳಗಡೆ ಪ್ರಯಾಣಿಕನಿಗೆ ಕನ್ನಡದಲ್ಲಿ ಸೇವೆ ಸಿಗತ್ತೋ ಇಲ್ಲಾ ಬರೀ ಇಂಗ್ಲೀಷು ಮತ್ತೆ ನಾವು-ನೀವೆಲ್ಲ ಭಾರತೀಯರು ಅನ್ನಿಸಿಕೊಳಕ್ಕೆ ಕಲೀಬೇಕಾಗಿರೋ ಹಿಂದೀನೋ?

ಈ ನಿಲ್ದಾಣದಲ್ಲಿ ಕನ್ನಡಿಗನಿಗೆ ಯಾವ ಸ್ಥಾನ ಇರುತ್ತೆ? ಈ ವಿಮಾನ ನಿಲ್ದಾಣದಲ್ಲಿ ಸಧ್ಯಕ್ಕೆ ವರ್ಷಕ್ಕೆ ಅಂದಾಜು 1 ರಿಂದ 1.2 ಕೋಟಿ ವಿಮಾನ ಪ್ರಯಾಣಿಕರು ಬರ್ತಾರಂತೆ. ಪ್ರತಿ 10 ಲಕ್ಷ ಪ್ರಯಾಣಿಕರ್ಗೆ ಒಂದು ಸಾವಿರ ಹುದ್ದೆಗಳ ಲೆಕ್ಕದಂತೆ ಸುಮಾರು 12 ಸಾವಿರ ಹುದ್ದೆಗಳು ಈ ಹೊಸ ನಿಲ್ದಾಣದಲ್ಲಿ ಹುಟ್ಟೋದ್ರಲ್ಲಿವೆ. ಇವುಗಳಲ್ಲಿ ಎಷ್ಟು ಕನ್ನಡಿಗರಿಗೆ ಸಿಗುತ್ವೆ? ಕಸ ಗುಡ್ಸೋರಿಂದ ಹಿಡಿದು ಪಾಸ್ಪೋರ್ಟ್ ತಪಾಸಣೆ ಮಾಡೋರು, ಮೇಲ್ವಿಚಾರಕರು ಮುಂತಾದೋರ್ನೆಲ್ಲ ಎಲ್ಲಿಂದ ಕರ್ಕೊಂಬರ್ತಾರೆ? ತಮಿಳ್ನಾಡಿಂದ್ಲೋ ಕೇರಳದಿಂದ್ಲೋ ಬಿಹಾರಿಂದ್ಲೋ ಉತ್ತರಪ್ರದೇಶದಿಂದ್ಲೋ ಇನ್ನೆಲ್ಲಿಂದ?

ಇನ್ನು ಈ ನಿಲ್ದಾಣದಲ್ಲಿ ಕರ್ನಾಟಕಕ್ಕೆ ಯಾವ ಸ್ಥಾನ ಇರುತ್ತೆ? ಕರ್ನಾಟಕ ಅನ್ನೋ ನಾಡಿಗೆ ಬಂದು ಇಳ್ದಿದೀರಿ, ಇಲ್ಲಿ ಇರೋದು ಮೈಸೂರು ಅರಮನೆ, ಹಂಪೆ ವಿರೂಪಾಕ್ಷಸ್ವಾಮಿ ದೇವಾಲಯ ಹೊರತು ಹತ್ರದಲ್ಲಿ ಎಲ್ಲೂ ತಾಜ್ ಮಹಲ್ ಇಲ್ಲ ಅಂತ ಬುದ್ಧಿ ಹೇಳೋರು ಯಾರಾದ್ರೂ ಇರ್ತಾರಾ ಇಲ್ಲಿ? ಇಲ್ಲೀ ಸಂಸ್ಕೃತಿಯ ತುಣುಕುಗಳು ಕಾಣ್ಸತ್ವೋ ಇಲ್ಲಾ ರಾಜಾಸ್ಥಾನ್ ಗೀಜಾಸ್ಥಾನ್ ಸಂಸ್ಕೃತಿ ತಂದು ಇಲ್ಲಿ ತುಂಬ್ತಾರೋ?

ಸಾಕಾ ಪ್ರಶ್ನೆಗಳು? ಇಲ್ಲಿ ನಾವು ಕೊಟ್ಟಿರೋದು ಶಾಸ್ತ್ರಕ್ಕೆ ಕೆಲವು ಪ್ರಶ್ನೆಗಳ್ನ ಮಾತ್ರ. ಕೇಳ್ಬೇಕಾಗಿರೋವು ಇನ್ನೂ ಅವೆ. ಈ ಪ್ರಶ್ನೆಗಳ್ನ ಕನ್ನಡಿಗರೆಲ್ಲ ಬೀದೀಗ್ ಇಳ್ದು ಕೇಳ್ಬೇಕು. ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಮೋಸ ಆದ್ರೆ ಸುಮ್ನಿರಕ್ಕಿಲ್ಲ ಅಂತ ಪಣ ತೊಡ್ಬೇಕು. ಆಗ್ಲೇ ಏನಾದ್ರೂ ನಾವು, ನಮ್ಮ ನುಡಿ, ನಮ್ಮ ನಾಡು ಅನ್ನೋದು ಈ ವಿಮಾನ ನಿಲ್ದಾಣದಲ್ಲಿ ಜೀವಂತವಾಗಿ ಉಳಿಯೋದು. ಇಲ್ದೇ ಹೋದ್ರೆ ಮಟಾಷ್ ಗುರು!

ಬೆಂಗಳೂರಿಗೆ ಉದ್ದಿಮೆ ಕಾರಿಡಾರ್: ಲಾಭ ಮಾತ್ರಾ ಚೆನ್ನೈಗೆ

ದಿಲ್ಲಿ-ಮುಂಬೈ ನಡುವೆ ಉದ್ದಿಮೆ ಕಾರಿಡಾರ್ ಯೋಜಿಸಿರೋ ಹಾಗೆ ದಕ್ಷಿಣ ಭಾರತದಲ್ಲೂ ಒಂದು ಉದ್ದಿಮೆ ಕಾರಿಡಾರ್ ಮಾಡೋ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿರೋ ಸುದ್ದಿ ನಮ್ಮ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತೆ ಗುರು. ಆದ್ರೆ ಈ ಕಾರಿಡಾರು ನಾಡಿಗೆ ಲಾಭ ತರ್ಬೇಕು ಅಂದ್ರೆ ಅದು ಚೆನ್ನೈ -ಬೆಂಗಳೂರು ಮಧ್ಯೆ ಅಲ್ಲಾ ಪುಣೆ - ಬೆಂಗಳೂರು ನಡುವೆ ಆಗಬೇಕು. ಅದೆಂಗಪ್ಪಾ ಅಂತ ವಸಿ ನೋಡ್ಮಾ ಬನ್ನಿ.

ಚೆನ್ನೈ-ಬೆಂಗಳೂರು ಕಾರಿಡಾರಿಗೆ ಹೂಂ ಅಂದ್ರೆ ಕನ್ನಡಿಗರ ಕೈಗೆ ಚಿಪ್ಪೇ ಗತಿ.
ಕೈಗಾರಿಕಾ ಕೇಂದ್ರವನ್ನಾಗಿ ಹೊಸೂರನ್ನು ಬೆಳೆಸಿದ ತಮಿಳುನಾಡು ಹತ್ತಿರದ ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ಮುಂತಾದ ಸೌಕರ್ಯಗಳನ್ನು ಬಳಸಿಕೊಂಡೇ ಉದ್ಧಾರವಾಗಿ ಹೋಯಿತು. ಟೈಟಾನ್, ಅಶೋಕ್ ಲೈಲ್ಯಾಂಡ್, ಟಿವಿಎಸ್ ಮುಂತಾದ ಸಂಸ್ಥೆಗಳು ಅಲ್ಲಿ ಪ್ರಾರಂಭವಾದರೂ ಕನ್ನಡಿಗರಿಗೆ ಉದ್ಯೋಗಾವಕಾಶಗಳೂ ಗಿಟ್ಟಲಿಲ್ಲ, ಕರ್ನಾಟಕಕ್ಕೆ ಕಿಲುಬುಕಾಸಿನ ಆದಾಯವೂ ಹುಟ್ಟಲಿಲ್ಲ. ಅದಕ್ಕಿಂತ ಶೋಚನೀಯವಾದ ಸಂಗತಿಯೆಂದರೆ ಬೆಂಗಳೂರಿಗೆ ತಮಿಳರ ವಲಸೆ ಮತ್ತಷ್ಟು ಹೆಚ್ಚಾಯ್ತು ಅಷ್ಟೆ. ಈಗ ಯೋಜಿಸುತ್ತಿರುವ ಕಾರಿಡಾರ್ ಯೋಜನೆ ಕೂಡಾ ಹೆಸರಿಗೆ ಬೆಂಗಳೂರಿನಿಂದ ಚೆನ್ನೈ ತನಕ ಎಂದಿದ್ದರೂ ಈ ವಲಯ ಶೇಕಡಾ ನೂರರಷ್ಟು ಇರುವುದು ತಮಿಳುನಾಡಲ್ಲೇ. ಅತಿ ನಿರೀಕ್ಷಿತ ವಿದೇಶಿ ಬಂಡವಾಳ, ತೆರಿಗೆ, ಉದ್ಯೋಗಾವಕಾಶ, ಪೂರಕ ಉದ್ದಿಮೆಗಳು ಯಾವುದೂ ಕರ್ನಾಟಕಕ್ಕೆ ಗಿಟ್ಟದು. ಹಾಗಾಗಿ ಮೊಸರು ಮೂತಿಗೆ ಮೆತ್ತಿಸಿಕೊಂಡ ಮೇಕೆ ಆಗ್ತೀವಿ ಅಷ್ಟೆ.

ನಿಜವಾಗಿ ಆಗಬೇಕಾಗಿರೋದು ಬೆಂಗಳೂರು - ಪುಣೆ ಕಾರಿಡಾರು
ಕರ್ನಾಟಕದ ಅಧಿಕಾರಿಗಳು ಚರ್ಚೆ ಮಾಡ್ತಾ ಈ ಕಾರಿಡಾರನ್ನು ಬೆಳಗಾವಿವರೆಗೆ ವಿಸ್ತರಿಸಲು ಮನವಿ ಮಾಡ್ತಾರಂತೆ. ನಿಜ್ವಾಗ್ಲೂ ಕರ್ನಾಟಕ ಸರ್ಕಾರ ಚೆನ್ನೈ ಕಾರಿಡಾರಿನ ಬಗ್ಗೆ ಯಾವುದೇ ಆಸಕ್ತೀನೂ ತೋರುಸ್ದೆ, ದಕ್ಷಿಣ ಭಾರತಕ್ಕೆ ಕೊಡಮಾಡಲಿರುವ ಈ ಯೋಜನೆಯನ್ನು ತನ್ನದು ಮಾಡಿಕೊಳ್ಳಬೇಕು. ಕರ್ನಾಟಕದ ಹಿತ ಕಾಪಾಡಕ್ ಆಗೋದು ಇದ್ರಿಂದ ಮಾತ್ರ ಗುರು.

ಭಾರತಕ್ಕೂ ಲಾಭ ಇದ್ರಿಂದಲೇ...
ಈಗಾಗಲೇ ಯೋಜಿತವಾಗಿರೋ ದಿಲ್ಲಿ ಮುಂಬೈ ಕಾರಿಡಾರನ್ನು ಮುಂದೆ ವಿಸ್ತರಿಸುವ ಮೂಲಕ ಅದನ್ನು ದಿಲ್ಲಿ, ಮುಂಬೈ, ಬೆಂಗಳೂರು ಕಾರಿಡಾರ್ ಮಾಡಬೇಕು. ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ, ಬಜಾಜ್, ಫೆರೋಡಿಯಾ ಬಜಾಜ್, ಕೈನೆಟಿಕ್ ತರಹದ ದೈತ್ಯ ಸಂಸ್ಥೆಗಳಿಗೆ ತವರಾಗಿರೋ ಪೂನಾ, ಅಲ್ಯುಮಿನಿಯಂ ತಯಾರಿಕೆ ಮತ್ತು ಅಚ್ಚು ಉದ್ದಿಮೆಗೆ ಹೆಸರಾದ ಬೆಳಗಾವಿ ಇದೇ ವಲಯದಲ್ಲಿ ಬರುತ್ತವೆ. ಉಕ್ಕು ತಯಾರಿಕೆಯ ತೋರಣಗಲ್ಲು, ಕರ್ನಾಟಕದ ಸುಮಾರು ಆರುನೂರು ಕಿಲೋಮೀಟರ್ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಕಾರಿಡಾರ್ ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ನೀಡಲಿದೆ. ನಾವು ಮೈಮರೆಯದೆ ಸದುಪಯೋಗ ಮಾಡಿಕೋಬೇಕು ಅಷ್ಟೆ. ಈ ವಲಯದ ಉದ್ದಕ್ಕೂ ನೀರಿನ ಸೌಕರ್ಯ ಕಲ್ಪಿಸಲು ಕಾವೇರಿ, ಕೃಷ್ಣಾ, ತುಂಗಭದ್ರಾ ನದಿಗಳಿವೆ. ಉತ್ತಮ ರೈಲು ಸಂಪರ್ಕವಿದೆ. ನಾಲ್ಕು ದಾರಿಗಳ ಹೆದ್ದಾರಿ ಇದೆ. ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ವಿಮಾನ ನಿಲ್ದಾಣಗಳಿವೆ. ಉದ್ದಿಮೆ ಆರಂಭಿಸಲು ಬೇಕಾದ ಹಿತಕರವಾದ ವಾಯುಗುಣ ನಮ್ಮಲ್ಲಿ ಇದೆ. ಮೇಲಾಗಿ ನೈಸರ್ಗಿಕ ವಿಕೋಪಗಳ ಭೀತಿ ಕಡಿಮೆ ಇದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟು ನಮ್ಮ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಿ ಪುಣೆ-ಬೆಂಗಳೂರು ಉದ್ದಿಮೆ ಮೊಗಸಾಲೆಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಬೇಕು. ಕೇಂದ್ರದ ಹಣಕಾಸು ಸಚಿವರಾದ ಪಿ.ಚಿದಂಬರಂ ಇಡಿಯ ಭಾರತಕ್ಕೆ ಹಣಕಾಸು ಸಚಿವರೆಂಬುದನ್ನು ನೆನಪು ಮಾಡಿಕೊಟ್ಟು ಬರುವ ಮುಂಗಡ ಪತ್ರದಲ್ಲಿ ಈ ಯೋಜನೆ ಘೋಷಿತವಾಗುವಂತೆ ಮಾಡಬೇಕು ಗುರು.

ಅಥಣಿ ರೈತರ ಸಂಶೋಧನೆಗೆ ದಕ್ಕಲಿರೋ ಪೇಟೆಂಟು

ಇತ್ತೀಚೆಗೆ ಬೆಳಗಾವಿಯ ಅಥಣಿ ತಾಲೂಕಿನ ರೈತರು ಬಯೋ-ಡೈಜೆಸ್ಟರ್ ಅನ್ನೋ ಪ್ರಾಕೃತಿಕ ಗುಣಗಳುಳ್ಳ ಗೊಬ್ಬರವನ್ನ ಕಂಡುಹಿಡಿದು ಇನ್ನೇನು ಪೇಟೆಂಟ್ ಕೂಡ ಗಿಟ್ಟಿಸಿಕೋತಿದಾರೆ ಅಂತ ಇದೇ ತಿಂಗಳ 28ರಂದು ಡೆಕನ್-ಹೆರಾಲ್ಡ್ ಸುದ್ದಿ. ಇದು ಸಕ್ಕತ್ ಖುಷಿ ತರೋ ವಿಷಯಾಮ್ಮಾ!

ಈ ಪೇಟೆಂಟಿಗೆ ಇಂಗ್ಲೀಷೇನು ಬೇಕಾಗಲಿಲ್ಲ

ಕರ್ನಾಟಕದ ರೈತರು ಮಾಡಿರೋ ಈ ಸಾಧನೆ ಅಂತಿಂತದ್ದಲ್ಲ ಗುರು! ನಮ್ಮ ರೈತರು ಹೊಸ-ಹೊಸ ತಂತ್ರಜ್ಞಾನಗಳ್ನ ಕಂಡು‌ಹಿಡಿದು ಮಾರುಕಟ್ಟೆಯಲ್ಲಿ ಹೆಚ್ತಿರೋ ಬೇಡಿಕೆಗಳಿಗೆ ಸ್ಪಂದಿಸಿ ಲಾಭ ಪಡ್ದುಕೊಳ್ತಿದಾರೆ ಅನ್ನೋದು ಒಳ್ಳೇ ಬೆಳವಣಿಗೇನೇ. ರಾಜ್ಯದ ಹಲವು ಕಡೆ ರೈತರು ಸಾಲ ತೀರಿಸಕ್ಕಾಗದೆ ನರಳುತ್ತಾ ಆತ್ಮಹತ್ಯೆ ಮಾಡ್ಕೊಂಡಿರೋದೂ ಉಂಟು. ಈ ಹಿನ್ನೆಲೆಯಲ್ಲಿ ಅಥಣಿ ರೈತರು ಮಾಡಿರೋ ಕೆಲ್ಸ ಎಲ್ಲರಿಗೂ ದಾರಿ ತೋರ್ಸೋಹಂಗಿದೆ ಗುರು! ಯಾವ ಕೆಲ್ಸದಲ್ಲಿ ನಷ್ಟದ ಸಾಧ್ಯತೆ ಇಲ್ಲ ಹೇಳಿ? ನಷ್ಟಗಳಿಂದ ತಪ್ಪಿಸ್ಕೊಳಕ್ಕೆ ಹೊಸ ಚಿಂತನೆ ಮತ್ತು ಕ್ರಿಯಾಶೀಲತೆ ಬಹಳ ಉಪಯುಕ್ತ ಸಾಧನ ಅಂತ ತೋರ್ಸ್ಕೊಟ್ಟಿದಾರೆ ಇವ್ರು.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಹೊಂದಿರೋ ನಮ್ಮ ರೈತರು ಆಂಗ್ಲ ಮಾಧ್ಯಮದಲ್ಲಿ ಓದಿ ಕೊಳೆ ಹಾಕ್ಕೊಂಡಿರೋರಿಗೂ ಕಷ್ಟ ಅನ್ನಿಸೋ ಪೇಟೆಂಟಿಗೇ ಕೈ ಹಾಕಿದಾರೆ. ಮೂಲಭೂತ ಕಲಿಕೆ ಮಾತ್ರ ಪಡೆಯೋ ನಮ್ಮ ರೈತರು ಇಂಥಾ ಸಂಶೋಧನೆಗಳ್ನ ಮಾಡ್ತಿರುವಾಗ ಒಳ್ಳೇ ಉನ್ನತಶಿಕ್ಷಣವನ್ನ ಕನ್ನಡದಲ್ಲೇ ಪಡ್ಕೊಂಡ್ರೆ ಇನ್ನೇನೇನು ಸಾಧಿಸಬಹುದು ಅಂತ ಯೋಚ್ನೆ ಮಾಡಿದರೇ ಕೈಯಲ್ಲಿ ಕೂದಲು ಎದ್ದು ನಿಲ್ಲತ್ತೆ ಗುರು!

ಪೇಟೆಂಟುಗಳಿಂದ ಇಡೀ ಪ್ರಪಂಚದಿಂದ ಗೌರವಧನ ಗಿಟ್ಟಿಸಿಕೊಳ್ಳಬೇಕು

ಈ ಪೇಟೆಂಟಿಂದ ನಮ್ಮ ರೈತರ ಸಂಶೋಧನೆಗೆ ರಕ್ಷಣೆ ಏನೋ ಸಿಗೋಹಾಗಿದೆ. ಆದ್ರೆ ಇಂತಹ ಉತ್ತಮ ಸಂಶೋಧನೆಗಳ್ನ ಪೇಟೆಂಟು ಮಾಡಿಸಿಕೊಂಡು ಗೌರವಧನ ಗಿಟ್ಟಿಸಿಕೊಳಕ್ಕೆ ಯಾಕೆ ಪ್ರಯತ್ನ ಮಾಡಬಾರದು? ಹುಳಿಮಾವಿನ ಜೈವಿಕ-ಕೇಂದ್ರದ ಮುಖ್ಯಸ್ತರು ಹೇಳಿರೋ ಪ್ರಕಾರ ಈ ಪೇಟೆಂಟಿಂದ ನಮಗೆ ದುಡ್ಡು ಹುಟ್ಟೋ ಮಟ್ಟಿಗೆ ಕಾಣೆ! ಈ ವಿಷಯದಲ್ಲಿ ನಾವು ಸಕ್ಕತ್ ಹುಷಾರಾಗಿರಬೇಕು ಗುರು! ಪೇಟೆಂಟ್ ಮಾಡಿಕೊಂಡು ಇಡೀ ಪ್ರಪಂಚದಿಂದ ಗೌರವಧನ ಗುಟ್ಟಿಸಿಕೊಳೋದು ಹೇಗೆ ಅಂತ ನೋಡ್ಕೋಬೇಕು. ಯಾವುದೋ ಕೀಳರಿಮೆಗೆ ತಲೆಬಗ್ಗಿಸಿಕೊಂಡು ಇಂಥಾ ಒಳ್ಳೇ ಅವಕಾಶಾನ ಕೈಬಿಡಬಾರದು. ಏನ್ ಗುರು?

ವಿಮಾನ ನಿಲ್ದಾಣದ ಜಾಹೀರಾತುಗಳಲ್ಲಿ ಕನ್ನಡ ಮೆರೀಬೇಕು

ಫ್ರಾನ್ಸ್ ಮೂಲದ ಜೆ.ಸಿ.ಡುಕೋ (JCDecaux; ಇದು ಫ್ರೆಂಚ್ ಹೆಸರು, ಇದನ್ನು "ಜೆ.ಸಿ.ಡೆಕಾಕ್ಸ್" ಅನ್ನಬಾರದು.) ಅನ್ನೋ ಬಹುರಾಷ್ಟೀಯ ಕಂಪೆನಿಗೆ ನಮ್ಮ ಬೆಂಗಳೂರಿನ ಹೊಸ ವಿಮಾನ ನಿಲ್ದಾಣದ ಒಳಗೆ, ಹೊರಗೆ, ಹೋಗೋ-ಬರೋ ರಸ್ತೆ - ಎಲ್ಲಾ ಕಡೆ ಜಾಹೀರಾತಿನ ಗುತ್ತಿಗೆ ಸಿಕ್ಕಿದೆ. ಜೆ.ಸಿ.ಡುಕೋ ಪ್ರಪಂಚದಲ್ಲಿ 50ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಜಾಹೀರಾತು ನಿರ್ವಹಣೆ ಮಾಡ್ತಾ ಇರೋ ವಿಶ್ವದ ಎರಡನೇ ಅತಿ ದೊಡ್ಡ ಜಾಹೀರಾತು ಸಂಸ್ಥೆ.

ಇಂಥಾ ಸಂಸ್ಥೆ ಇದಕ್ಕೆ ಕೈಹಾಕಿದೆ ಅನ್ನೋದೇನೋ ಸರೀನೇ. ಆದರೆ ಇವರು ಜಾಹೀರಾತುಗಳಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ಕೊಡ್ತಾರೋ ಅಥವಾ ಕನ್ನಡಾನ ಕಸದ್ ಬುಟ್ಟೀಗ್ ಎಸ್ದು ಬೆಂಗ್ಳೂರಲ್ಲಿ ಇನ್ನಷ್ಟು ಇಂಗ್ಲೀಷು-ಹಿಂದಿ ತುಂಬೋ ಹಲ್ಕಾ ಕೆಲಸಕ್ಕೆ ಕೈಹಾಕ್ತಾರೋ? ಜಾಹೀರಾತನ್ನ ನಿರ್ಮಿಸೊ ಕೆಲ್ಸದಲ್ಲಿ ಕನ್ನಡಿಗರಿಗೆ ಸರಿಯಾಗಿ ಉದ್ಯೋಗವಕಾಶ ಕೊಡ್ತಾರೋ ಇಲ್ಲಾ ಇನ್ನಷ್ಟು ಕನ್ನಡೇತರರನ್ನ ತಂದು ಇಲ್ಲೀಗೆ ತುಂಬೋ ಪಕ್ಷಪಾತದ ಕೆಲಸ ಮಾಡ್ತಾರೋ? ನಮ್ಗೆ ಇಷ್ಟ ಇಲ್ಲದೇ ಇರೋದನ್ನ ಇವರು ಮಾಡೋ ಕಡೆಗೆ ವಾಲೋ ಮುಂಚೇನೇ ನಾವು ಎಚ್ಚೆತ್ತುಕೊಂಡು ಬೇಕಾದ ಕ್ರಮ ಕೈಗೊಳ್ಳೋದೇ ಲೇಸು ಗುರು!

ಪ್ಯಾರಿಸ್ಸಲ್ಲಿ ಫ್ರೆಂಚ್ ಹೇಗೋ ಹಾಗೇ ಬೆಂಗ್ಳೂರಲ್ಲಿ ಕನ್ನಡ

ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಇಲ್ಲಿನ ಪ್ರತಿ ರಾಜ್ಯಕ್ಕೂ ಅದರದೇ ಭಾಷೆ-ಸಂಸ್ಕೃತಿಗಳೂ ಇತಿಹಾಸ-ವರ್ತಮಾನ-ಭವಿಷ್ಯಗಳೂ ಇವೆ. ಬೆಂಗಳೂರು ಅನ್ನೋದು ಕನ್ನಡಿಗರು ಕಟ್ಟಿ ಬೆಳೆಸಿರೋ ಊರು. ಫ್ರಾನ್ಸಿಗೆ ಪ್ಯಾರಿಸ್ ಹೇಗೆ ರಾಜಧಾನಿಯೋ ಕರ್ನಾಟಕಕ್ಕೆ ಬೆಂಗಳೂರು ರಾಜಧಾನಿ. ಪ್ಯಾರಿಸ್ಸಲ್ಲಿ ಫ್ರೆಂಚಿಗೆ ಹೇಗೋ ಹಾಗೇ ಇಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ನೀಡಬೇಕು ಅನ್ನೊದನ್ನ ಜೆ.ಸಿ.ಡುಕೋ ಅರ್ಥ ಮಾಡ್ಕೊಬೇಕು. ಹಾಗಂತ ಇಲ್ಲಿ ಇಂಗ್ಲೀಷಲ್ಲಿ ಜಾಹೀರಾತುಗಳು ಇರಬಾರದು ಅಂತೇನಿಲ್ಲ. ಇರಲಿ, ಆದ್ರೆ ಜಾಹೀರಾತಿನ ತುಂಬ ಇಂಗ್ಲೀಷ್ನೇ ಮೆರಸಿ ಕನ್ನಡದಲ್ಲಿ ಆಟಕ್ಕುಂಟು-ಲೆಕ್ಕಕ್ಕಿಲ್ಲ ಅನ್ನೊ ರೀತಿಲಿ ಇವತ್ತಿನ ದಿನ ವೋಡಾಫೋನ್ ಮಾಡ್ತಿರೋ ನಾಡದ್ರೋಹದ ಕೆಲಸ ಇವರು ಮಾಡಬಾರದು.
ಪ್ಯಾರಿಸ್, ಲಂಡನ್, ಟೆಲವೀವ್, ಫ್ರಾಂಕ್ಫರ್ಟ್, ಆಮ್ಸ್‍ಟರ್‍ಡಾಮ್, ಬ್ಯಾಂಕಾಕ್, ಬೀಜಿಂಗ್, ಟೋಕಿಯೊ, ಹೀಗೆ ವಿಶ್ವದ ಯಾವುದೇ ಪ್ರಸಿದ್ಧ ವಿಮಾನ ನಿಲ್ದಾಣ ನೋಡಿ, ಇಳಿದ ಕೂಡಲೆ ಕಣ್ಣಿಗೆ ಬೀಳೋದು ಅಲ್ಲೀ ಭಾಷೆಯ ಜಾಹೀರಾತುಗಳೇ. ಎಲ್ಲಾ ಜಾಹೀರಾತಲ್ಲೂ ತಮ್ಮ ಭಾಷೆಗೆ ಅಗ್ರಸ್ಥಾನ, ನಂತರದ ಸ್ಥಾನ ಬೇರೆ ಭಾಷೆಗೆ. ನಮ್ಮ ಬೆಂಗಳೂರಲ್ಲೂ ಹಾಗೇ ಆಗಬೇಕು.

ಇವ್ರು ಕನ್ನಡಿಗರಿಗೆ ಕೆಲಸ ಕೊಡದೇ ಹೋದ್ರೆ ಇಲ್ಲಿಗೆ ಬರೋದೇ ಬೇಡ

ಜಾಹೀರಾತು ಅಳವಡಿಸೋದ್ರಿಂದ ಹಿಡಿದು ನಿರ್ವಹಣೆ ವರೆಗೆ ಇರೋ ಎಲ್ಲಾ ಕೆಲಸದಲ್ಲೂ ಕನ್ನಡಿಗರಿಗೆ ಆದ್ಯತೆ ಕೊಡಬೇಕು ಗುರು. ಬೆಂಗ್ಳೂರಿನ ವಿಮಾನ ನಿಲ್ದಾಣದಲ್ಲೂ ಇಲ್ಲೀ ಐ.ಟಿ. ಕಂಪನಿಗಳ ಥರಾ ಮಲೆಯಾಳಿಗಳು, ತಮಿಳ್ರು, ತೆಲುಗ್ರು, ಹಿಂದಿಯೋರು, ಬಂಗಾಳಿಗಳು ಬಂದು ತುಂಬ್ಕೋಬೇಕಾ? ಔರು ತಾವಷ್ಟೇ ಬರದೆ ತಮ್ಮ ಮನೆಯೋರ್ನೆಲ್ಲಾ, ತಮ್ಮ ಕಾಗೆ-ಬಳಗವನ್ನೆಲ್ಲಾ ಕರ್ದು ಇಲ್ಲೇ ವಲಸೆ ಮಾಡಿಸೋದ್ನ ಕೆಲಸ ಇಲ್ಲದ ಕನ್ನಡಿಗ ಹೊಟ್ಟೆಮೇಲೆ ತಣ್ಣೀರುಬಟ್ಟೆ ಇಟ್ಟುಕೊಂಡು ನೋಡಬೇಕಾ? ಖಂಡಿತ ಇಲ್ಲ ಗುರು! ಕನ್ನಡಿಗರಿಗೆ ಕಲ್ಸದಲ್ಲಿ ಆದ್ಯತೆ ಕೊಡದೆ ಹೋದ್ರೆ ಇವ್ರು ಎಂಥಾ ದೊಡ್ಡ ಕಂಪನೀನೇ ಆಗಿರಲಿ, ಒಂದು ದೊಡ್ಡ ನಮಸ್ಕಾರ!

ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಆದ್ಯತೆ ಕೊಟ್ರೆ ಸರಿ, ಇಲ್ಲದೇ ಹೋದರೆ...
ತನ್ನ ಜಾಹೀರಾತಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಿ, ಕನ್ನಡದೋರಿಗೆ ಕೆಲ್ಸ ಕೊಡೋಹಾಗಿದ್ರೆ ಬಹುರಾಷ್ಟ್ರೀಯ ಕಂಪನಿಯಾದರೂ ಸ್ವಾಗತ, ಹೊರರಾಜ್ಯದ ಕಂಪನಿಯಾದರೂ ಸ್ವಾಗತ. ಕನ್ನಡ-ಕನ್ನಡಿಗ-ಕರ್ನಾಟಕಗಳ್ನ ಮರ್ತು ಬರೀ ಇಂಗ್ಲೀಷೋ ಹಿಂದೀನೋ ಮೆರೆಸೋಹಾಗಿದ್ರೆ ಕನ್ನಡಿಗ ಕಟ್ಟಿದ ಜಾಹೀರಾತು ಕಂಪನೀಗೂ ಕ್ಯಾಕರ್ಸಿ ಉಗೀಬೇಕು. ಏನ್ ಗುರು?

ಸರ್ಕಾರ (ಅನ್ನೋದು ಮತ್ತೆ ಹುಟ್ಕೊಂಡಾಗ) ಕಣ್ಮುಚ್ಚಿಕೊಂಡು ಕೂತ್ಕೋಬಾರ್ದು

ಈ ಕಂಪನಿ ಬಂದು ಬೆಂಗ್ಳೂರ್ನ ಇನ್ನಷ್ಟು ಹಾಳುಗೆಡವೋ ಮುಂಚೇನೇ ಕರ್ನಾಟಕ ಸರ್ಕಾರ ಸರಿಯಾಗಿ ಕ್ರಮ ತೊಗೊಂಡು ಈ ಕಂಪನಿಗೆ ಇಲ್ಲಿ ಆಟ ಆಡಬೇಕಾದ್ರೆ ನಿಯಮಗಳೇನು ಅಂತ ತಿಳಿಸಿಕೊಡಬೇಕು. ಹಾಡು-ಹಗಲಲ್ಲೇ ಕನ್ನಡಾನ ಜಾಹೀರಾತಿನ ಒಂದು ಮೂಲೇಲಿ ಕಾಟಾಚಾರಕ್ಕೆ ಹಾಕೋದು, ಇಲ್ಲಾ ಮರೆತೇ ಬಿಡೋದು, ಇಲ್ಲಾ ಇಂಗ್ಲೀಷಲ್ಲಿ ದೊಡ್ಡ ಅಕ್ಷರದಲ್ಲಿ ಬರೆದು ಕನ್ನಡದಲ್ಲಿ ಬೂದುಗಾಜು ಇಟ್ಟುಕೊಂಡು ನೋಡೋಹಾಗೆ ಹಾಕೋದು - ಇವೆಲ್ಲ ಮಾಡುದ್ರೆ ನೇರವಾಗಿ ಪ್ಯಾರಿಸ್ಸಿಗೆ ಒದ್ದು ಕಳುಸ್ತೀವಿ ಅಂತ ವಿವರ್ಸಿ ಹೇಳ್ಬೇಕು ಗುರು!

ಬೆಳಗಾವಿ ಕುಂದಾ ಒಳಗಿರೋ ಪಾಠ

"ಬೆಳಾಗಾವಿ ಕುಂದಾ" ಬೆಳಗಾವಿ ಹೊರಗೆ ಬಂದು ಕರ್ನಾಟಕದ ಬೇರೆಬೇರೆ ಕಡೆಗಳಲ್ಲಷ್ಟೇ ಅಲ್ಲ, ಹೊರದೇಶಗಳಿಗೂ ಮಾರಾಟ ಆಗೋ ದಿನ ಕೊನೆಗೂ ಬಂದಿದೆ ಅಂತ ಪ್ರಜಾವಾಣಿ ವರದಿ ನೋಡಿ ಬಾಯಲ್ಲಿ ನೀರು ಗುರು! ಇದನ್ನ ನಮ್ಮ ಬೆಳಾಗಾವಿ ಮಂದಿ ಒಂದು ದೊಡ್ಡ ಉದ್ದಿಮೆಯಾಗಿ ಶುರು ಮಾಡ್ಕೊಂಡಿರೋದು ಸಕ್ಕತ್ ಗುರು! ನಮ್ಮ ನಮ್ಮ ಜಾಗಗಳ ವಿಶೇಷತೆಗಳ್ನ ಹಿತ್ತಲ ಗಿಡಗಳು ಅಂತ ಬಿಟ್ಟಾಕೋ ಬದ್ಲು ಅದ್ರಿಂದ ಹೇಗೆ ದುಡ್ಡು ಮಾಡ್ಕೋಬೋದು, ಹೇಗೆ ಇಡೀ ಪ್ರಪಂಚಕ್ಕೆ ಅದರ ಚಟ ಹಿಡಿಸೋದು ಅಂತ ಯೋಚ್ನೆ ಮಾಡೋದು ಸಕ್ಕತ್ ಮುಖ್ಯಾಮ್ಮಾ!

ಹಿತ್ತಲ ಗಿಡವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸಬೇಕು

ಇವತ್ತಿನ ದಿನ ಯಾವುದೇ ಒಳ್ಳೇ ಬಹುರಾಷ್ಟ್ರೀಯ ಕಂಪನಿ ತೊಗೊಂಡ್ರೂ ಅದು ತನ್ನ ಸುತ್ತಮುತ್ತಲ ಸಂಪನ್ಮೂಲ-ಸಾಮರ್ಥ್ಯ-ಬೇಡಿಕೆಗಳ್ನ ಬಳಸಿಕೊಂಡೇ ಮುಂದೆ ಬಂದಿರೋದು. ಉದ್ದಿಮೆಯಲ್ಲಿ ಗೆಲುವು ಸಾಧಿಸಿರೋರು ಯಾರೂ ಸುತ್ತಮುತ್ತಲಲ್ಲಿರೋ ಸಂಪನ್ಮೂಲಗಳ್ನ, ಸುತ್ತಮುತ್ತಲ ಜನರ ಸಾಮರ್ಥ್ಯಗಳ್ನ, ಸುತ್ತಮುತ್ತಲ ಜನರ ಬೇಡಿಕೆಗಳ್ನ ಕಡೆಗಣಿಸಿಲ್ಲ ಗುರು! ಅವರೆಲ್ಲಾ ಸುತ್ತಮುತ್ತಲಲ್ಲಿರೋದನ್ನ ಸರಿಯಾಗಿ ನಿಭಾಯಿಸೋ ಕಲೆ ಕಲ್ತು ಇಡೀ ಪ್ರಪಂಚವನ್ನೇ ಮಾರುಕಟ್ಟೆಯಾಗಿ ಬದಲಾಯಿಸಿಕೊಂಡೌರೆ ಗುರು.

ಇದಕ್ಕೆ ಇತ್ತೀಚೆಗೆ ಕರ್ನಾಟಕಕ್ಕೂ ಲಗ್ಗೆ ಇಟ್ಟಿರೋ ಪೀಜಾ ಕಂಪನಿಗಳೇ ಉದಾಹರಣೆ. ಇವತ್ತಿನ ದಿನ ಮೂರು ಹೊತ್ತೂ ಊಟ ಮಾಡೋ ಮಾಲೀಕರಿರೋ ಪೀಜಾ ಕಂಪನಿಗಳ್ಯಾವೂ ಈ ನೆಲದಲ್ಲಿ ಹುಟ್ಟಿರೋವಲ್ಲ. ಇಡೀ ಪ್ರಪಂಚಕ್ಕೇ Pizza Hut, Dominos ಮುಂತಾದೋರು ಪೀಜಾ ಮಾರ್ತಾರೆ? ಯಾಕೆ? ಯಾಕೇಂದ್ರೆ ಮೊದ್ಲು ಔರು ತಮ್ಮ ತಮ್ಮ ನಾಡಿನಲ್ಲಿ ಹೇಗೆ (ಅತೀ ಕಡಿಮೆ ದುಡ್ಡಲ್ಲಿ, ಅತೀ ಹೆಚ್ಚು ರುಚಿಯಿರೋಹಾಗೆ) ಪೀಜಾ ತಯಾರಿಸೋದು, ಹೇಗೆ ಜನ ನಾಮುಂದು-ತಾಮುಂದು ಅಂತ ಕೊಂಡ್ಕೊಳೋಹಂಗೆ ಮಾರೋದು ಅನ್ನೋ ವಿದ್ಯೇನ ಸಕ್ಕತ್ತಾಗಿ ಕಲ್ತುಕೊಂಡ್ರು, ಅದಕ್ಕೆ. ಅದು ಬಿಟ್ಟು ಇಟಲಿ ಜನ "ಛೆ! ಛೆ! ಪೀಜಾ ಎಷ್ಟೇ ಆದರೂ ಹಿತ್ತಲ ಗಿಡ!" ಅಂದ್ಕೊಂಡಿದ್ದರೆ ಇವತ್ತು ಇಡೀ ಪ್ರಪಂಚಕ್ಕೆ ಹರಡುಕೊಳ್ಳಕ್ಕೆ ಆಗ್ತಿತ್ತಾ? ಖಂಡಿತ ಇಲ್ಲಾಮ್ಮಾ!

ಸುತ್ತಮುತ್ತಲಲ್ಲಿರೋದ್ನ ಮರೆತರೆ ಕೈಗೆ ಚಿಪ್ಪೇ

ಆದ್ದರಿಂದ ಇವತ್ತೂ ಕನ್ನಡಿಗರು ವ್ಯಾಪಾರದಲ್ಲಿ ಗೆಲುವು ಸಾಧಿಸಕ್ಕೆ ಮೊದಲನೇ ಹೆಜ್ಜೇನೇ ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು:
  • ನನ್ನ ಸುತ್ತಮುತ್ತ ಸಿಗೋ ಸಂಪನ್ಮೂಲಗಳು ಯಾವುವು?
  • ನನ್ನ ಸುತ್ತಮುತ್ತ ಇರೋರ ಸಾಮರ್ಥ್ಯಗಳು ಯಾವುವು?
  • ನನ್ನ ಸುತ್ತಮುತ್ತ ಇರೋರ ಬೇಡಿಕೆಗಳು ಯಾವುವು?
  • ಇವುಗಳ್ನ ಬಳಸಿಕೊಂಡು ನಾನು ಹೇಗೆ ಇಡೀ ಪ್ರಪಂಚದಿಂದ ದುಡ್ಡು ಮಾಡಬಹುದು?
  • ನಾನೂ ದುಡ್ಡು ಮಾಡ್ಕೊಂಡು ನನ್ನ ಸುತ್ತಮುತ್ತ ಇರೋರ ಜೀವನಾನೂ ಹೇಗೆ ಹಸನಾಗಿಸೋದು?
ಮನುಷ್ಯನ ಬುದ್ಧಿಗೆ ಸುಲಭವಾಗಿ ಅರ್ಥವಾಗೋದು ಸುತ್ತಮುತ್ತಲ ವಿಷಯಗಳೇ. ಕಣ್ಣಿಗೆ ಕಾಣದಿರೋ ಸಂಪನ್ಮೂಲಗಳು, ಕಣ್ಣಿಗೆ ಕಾಣದ ಜನರ ಸಾಮರ್ಥ್ಯಗಳ್ನ, ಕಣ್ಣಿಗೆ ಕಾಣದ ಜನರ ಬೇಡಿಕೆಗಳ್ನೇ ಆಧಾರವಾಗಿಟ್ಟುಕೊಂಡು ಉದ್ಧಾರ ಆಗಕ್ಕೆ ಸಾಧ್ಯವಿಲ್ಲ ಗುರು! ನಮ್ಮ ನಾಡ್ನ, ನಮ್ಮ ನುಡೀನ, ನಮ್ಮ ಜನರನ್ನ, ಔರ ಸಾಮರ್ಥ್ಯಗಳ್ನ, ಔರ ಬೇಡಿಕೆಗಳ್ನ ಅರ್ಥ ಮಾಡ್ಕೊಳ್ದೇ, ಅದರಿಂದ ಪಡೀಬೇಕಾದ ಲಾಭವನ್ನ ಪಡ್ಕೊಳ್ದೆ ನಾವು ಈ ಜಾಗತೀಕರಣದ ಯುಗದಲ್ಲಿ ಏನೂ ಕಿಸ್ಯಕ್ಕಾಗಲ್ಲ ಗುರು!

"ಕನ್ನಡ = ಜುಟ್ಟಿಗೆ ಮಲ್ಲಿಗೆ ಹೂ" ಚಿಂತನೆಯಿಂದ ನಮಗೆ ಉದ್ಧಾರವಿಲ್ಲ

ಇವತ್ತಿನ ವಿ.ಕದಲ್ಲಿ "ಜಾಗತೀಕರಣದಿಂದ ಕನ್ನಡಕ್ಕೆ ಕುತ್ತು" ಅನ್ನೋ ಒಂದು ಸುದ್ದಿ ಇದೆ (ಕೊಂಡಿ ಕೆಲಸ ಮಾಡ್ತಿಲ್ದೇ ಹೋದ್ರೆ ಇವತ್ತಿನ ಬೆಂಗಳೂರಿನಲ್ಲಿ ಮುದ್ರಣವಾಗಿರೋ ವಿ.ಕ. 2ನೇ ಪುಟ ನೋಡಿ.)

ನಿಜವಾದ ಆತಂಕದ ವಿಷಯ ಏನು?

ಮೊದಲನೇದಾಗಿ ಕನ್ನಡ ಜನಾಂಗ ಕನ್ನಡದಿಂದ ದೂರ ಸರೀತಿದೆ ಅನ್ನೋದಲ್ಲ ಆತಂಕದ ಸಂಗತಿ! ನಿಜವಾದ ಆತಂಕದ ಸಂಗತಿ ಏನಪ್ಪಾ ಅಂದ್ರೆ - ನಾವು ಕನ್ನಡಿಗರು ಬೆಳವಣಿಗೆ ಹೊಂದದೆ ಹಿಂದೆ ಬೀಳ್ತಿದೀವಿ ಅನ್ನೋದು. ಇದಕ್ಕೆ ಕಾರಣ ನಾವು ಕನ್ನಡದಿಂದ ದೂರ ಹೋಗ್ತಿರೋದು, ಅಷ್ಟೆ. ಆ ಸಭೇಲಿದ್ದವರಿಗೆ ನಿಜವಾದ ಆತಂಕದ ಅರಿವೂ ಇದ್ದಂತಿಲ್ಲ, ನಿಜವಾದ ಆತಂಕಕ್ಕೆ ಕಾರಣ ಏನು ಅನ್ನೋದರ ಅರಿವೂ ಇದ್ದಂತಿಲ್ಲ. ಇವರು ನಮ್ಮ "ಚಿಂತಕರು" ಇವತ್ತು!

ತಪ್ಪು ಆತಂಕಕ್ಕೆ ತಪ್ಪು ಪರಿಹಾರ!

ಹೋಗಲಿ, ಅವರಿಗೆ ನಿಜವಾಗಿ ಇರಬೇಕಾಗಿದ್ದ ಆತಂಕ ಬಿಟ್ಟಾಕಿ. ಆ ಸಭೇಲಿ ಅವರು ವ್ಯಕ್ತ ಪಡಿಸಿರೋ "ತನ್ನ ಭಾಷೆಯಿಂದ ಕನ್ನಡ ಜನಾಂಗ ದೂರ ಸರೀತಿದೆ" ಅನ್ನೋ ಆತಂಕಕ್ಕೂ ಔರು ಸೂಚಿಸಿರೋ ಪರಿಹಾರ ಅರೆಬೆಂದಿದ್ದು ಅಂತ ಹೇಳಲೇಬೇಕಿದೆ ಗುರು!

ವಚನ ಸಾಹಿತ್ಯ, ದಾಸ ಸಾಹಿತ್ಯ, ಭಾವಗೀತೆ, ಜಾನಪದಗಳ ಬಗ್ಗೆ ದೇಶ ವಿದೇಶದಲ್ಲಿ ಪ್ರಚಾರ ಮಾಡ್ಬೇಕು ಅಂತ ಆ ಸಭೆಯಲ್ಲಿ ಮಾತಾಡಿರೋರು ಅಂದಿರೋದೇನೋ ಸರೀನೇ ಇದೆ, ಆದ್ರೆ ಇಷ್ಟರಿಂದ ಭಾಷೆಗೆ ಬಂದಿರೋ "ಕುತ್ತು" ಹೋಗುತ್ತಾ ಅನ್ನೋದೇ ಪ್ರಶ್ನೆ. ಖಂಡಿತ ಹೋಗಲ್ಲ! ಬರೀ ಅಧ್ಯಾತ್ಮ ಮತ್ತು ಮನರಂಜನೆಯಂತಹ "ಜುಟ್ಟಿಗೆ ಮಲ್ಗೆ ಹೂವಿನ ವರ್ಗ"ಕ್ಕೆ ಸೇರೋ ಸಾಹಿತ್ಯಾನ ಹರಡಬೇಕು ಅಂತ ಪರಿಹಾರ ಸೂಚಿಸೋದು ಮೂರ್ಖತನ ಗುರು!

ಇದರಿಂದ ಜಾಗತೀಕರಣ ಎದುರಿಸಿದಹಾಗೆ ಎಲ್ಲಿ ಆಗತ್ತೆ? ಇದರಿಂದ ಫಿನ್‍ಲ್ಯಾಂಡಿನ ನೋಕಿಯಾ ಕಂಪನೀನ ಮಾರುಕಟ್ಟೇಲಿ ಸೋಲಿಸಕ್ಕಾಗತ್ತಾ? ಜಪಾನಿನ ಸೋನಿ ಕಂಪನೀನ ಮಾರುಕಟ್ಟೇಲಿ ಸೋಲಿಸಕ್ಕಾಗತ್ತಾ? ಆಗತ್ತೆ ಮಣ್ಣು! ಒಟ್ಟಿನಲ್ಲಿ ಇವರಿಗೆ ಕನ್ನಡ ಉಳಿಸಿಕೊಳ್ಳೋದಕ್ಕೆ ಬೇಕಾದ ಮುಲಭೂತ ಅರಿವೇ ಇಲ್ಲ ಗುರು!

ನಿಜವಾದ ಆತಂಕಕ್ಕೆ ನಿಜವಾದ ಪರಿಹಾರ

ಬರೀ ನಮ್ಮಲ್ಲಿರೋ ಸಾಹಿತ್ಯದ ಹಿರಿಮೆ ಹಾಡಿ ಹೊಗಳಿ ಅಧ್ಯಾತ್ಮ-ಧರ್ಮಗಳಿಗೆ ಮಾತ್ರ ಕನ್ನಡವನ್ನ ಮೀಸಲಾಗಿಟ್ರೆ ಇವತ್ತು ಏನೂ ಸಾಧ್ಸಕ್ ಆಗಲ್ಲ ಗುರು! ಕನ್ನಡ ಭಾಷೆ ಅಂದ್ರೆ ಬರೀ ಇಂಥ ಸಾಹಿತ್ಯ ಅಂತ ಮಾಡ್ಕೊಂಡಿದ್ರಿಂದ್ಲೇ ಇವತ್ತು ಕನ್ನಡದ ಮುಂದೆ "ಕುತ್ತು"ಗಳು ಬಂದಿರೋದು ಗುರು! ಅಂಥ ಹಿರಿಮೆ, ಇತಿಹಾಸದ ಸ್ಪೂರ್ತಿ ತೊಗೊಂಡು ಈಗ ಹ್ಯಾಗೆ ಬದುಕು ಹಸನು ಮಾಡ್ಕೋಬೇಕು ಅಂತ ನೋಡ್ಬೇಕು.

ಒಟ್ನಲ್ಲಿ ಜಾಗತೀಕರಣದ ಸವಾಲ್ ಎದುರ್ಸಕ್ಕೆ ನಮಗೆ ಬೇಕಿರೋದು
  1. ಈ ಸವಾಲ್ನ ಎದುರಿಸಬೇಕು, ಹೇಡಿಗಳ ಹಾಗೆ ಓಡಿಹೋಗಬಾರದು ಅನ್ನೋ ಧೈರ್ಯ
  2. ನಿಜವಾಗಲೂ ಎದುರಿಸಿ ಜಾಗತಿಕ ಮಾರುಕಟ್ಟೇಲಿ ಮಿಂಚಬೇಕು ಅಂದ್ರೆ ಅದು ಕನ್ನಡದ ನಿಜವಾದ ಶಿಕ್ಷಣ ವ್ಯವಸ್ಥೆಯಿಂದ್ಲೇ ಸಾಧ್ಯ ಅನ್ನೋ ಅರಿವು.
ಜಾಗತೀಕರಣದ ಬಾಗಿಲು ತೆರೆದಿದೆ ಅಂದ್ರೆ ಹೊರಗಿಂದ ನಮ್ ಮೇಲ್ ದಾಳಿ ನಡ್ಯುತ್ತೆ ಅಂತ ಹೇಡಿಗಳಂಗೆ ಒಳಗೆ ಬಚ್ಚಿಟ್ಕೊಳೋ ಬದಲು ಧೈರ್ಯವಾಗಿ ರಣರಂಗಕ್ಕೆ ಇಳೀಬೇಕು ಗುರು! ನಮಗೆ ಬೇಕಾಗಿರೋದು ಯಾವುದೇ ಉತ್ಪನ್ನವನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡದಷ್ಟು ಉತ್ತಮ ಗುಣಮಟ್ಟದಲ್ಲಿ ತಯಾರಿಸೋ ಕುಶಲತೆ. ಅದನ್ನ ಕನ್ನಡ ಜನಾಂಗದ ನಾವು ಸಾಧಿಸಕ್ಕಾಗೋದು ಕನ್ನಡದಲ್ಲೇ ಹೊರತು ಬೇರೆ ಯಾವ ಭಾಷೆಯ ಶಿಕ್ಷಣ ವ್ಯವಸ್ಥೆಯಿಂದ್ಲೂ ಅಲ್ಲ. ಇವತ್ತು ಈ ಕನ್ನಡದ ಶಿಕ್ಷಣ ವ್ಯವಸ್ಥೆ ಬೇಕಾದಷ್ಟು ಬೆಳೆದಿಲ್ಲ, ನಿಜ. ಆದರೆ ಬೆಳೀದೆ ಬೇರೆ ದಾರಿಯಿಲ್ಲ ಗುರು! ಇದು ಬಿಟ್ಟು ಬರೀ "ಜುಟ್ಟಿಗೆ ಮಲ್ಲಿಗೆ ಹೂ" ಚಿಂತನೆಯಿಂದ ನಮಗೆ ಉದ್ಧಾರವಿಲ್ಲ ಗುರು!
Related Posts with Thumbnails