Showing posts with label ಗ್ರಾಹಕ ಸೇವೆ. Show all posts
Showing posts with label ಗ್ರಾಹಕ ಸೇವೆ. Show all posts

ಗ್ರಾಹಕ ಹಕ್ಕಿಗಾಗಿ ನೀವೂ ದನಿಗೂಡಿಸಿ!



ಪ್ರತಿವರ್ಷ ಮಾರ್ಚ್ ತಿಂಗಳ ೧೫ನೇ ದಿನವನ್ನು ವಿಶ್ವ ಗ್ರಾಹಕಹಕ್ಕು ದಿನವಾಗಿ ಆಚರಿಸಲಾಗುತ್ತದೆ. ೧೯೬೨ರ ಇದೇ ದಿನ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಜಾನ್ ಎಫ಼್ ಕೆನಡಿಯವರು ಮಾಡಿದ ಭಾಷಣದ ನೆನಪಿಗಾಗಿ ಈ ದಿನವನ್ನು ಹೀಗೆ ಆಚರಿಸಲಾಗುತ್ತದೆ. ಭಾರತದಲ್ಲೂ ಕೂಡಾ ಹೀಗೆ ಎಲ್ಲೆಡೆ ಗ್ರಾಹಕರ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಮಾಶೆಯೆಂದರೆ ಗ್ರಾಹಕಹಕ್ಕು ರಕ್ಷಣೆಯ ಬಗ್ಗೆ ಮೂಡಿಸುವ ಜಾಗೃತಿಯ ಈ ಕಾರ್ಯದಲ್ಲಿ ಗ್ರಾಹಕರ ನುಡಿಯನ್ನು ಬಳಸಬೇಕೆನ್ನುವ ಆಯಾಮವನ್ನೇ ಕೈಬಿಟ್ಟು ಬರೀ ಉತ್ಪನ್ನಗಳ ತೂಕ, ಗುಣಮಟ್ಟ, ಅಳತೆಗಳ ಬಗ್ಗೆ ಇರುವ ಹಕ್ಕುಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ನಿಜವಾಗಿ ಗ್ರಾಹಕರ ಹಕ್ಕುಗಳನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಇರುವ ಸಾಧನಗಳಲ್ಲಿ ಗ್ರಾಹಕನ ನುಡಿಯ ಬಳಕೆ ಮುಖ್ಯವಾದದ್ದು. ಈ ಬಗ್ಗೆ ಕನ್ನಡಿಗರಲ್ಲಿ ಎಚ್ಚರ ಮೂಡಿಸುವ ಕನ್ನಡ ಗ್ರಾಹಕರ ಕೂಟದ ಒಂದು ಪ್ರಯತ್ನ ಇಲ್ಲಿದೆ.


ಸಾಮಾನ್ಯವಾಗಿ ಗ್ರಾಹಕನ ಹಕ್ಕು ಎಂದಾಗ ತೂಕ, ಅಳತೆ, ಗುಣಮಟ್ಟಗಳ ಸುತ್ತ ವಿಷಯಗಳು ಚರ್ಚಿಸಲ್ಪಡುತ್ತವೆ. ಈ ವಿಷಯಗಳು ನಿಜಕ್ಕೂ ಮುಖ್ಯವಾದವಾಗಿದ್ದರೂ ಸಹ, ಈ ವಿಷಯಗಳು ಜನರಿಗೆ ಯಾವ ಭಾಷೆಯಲ್ಲಿ ತಿಳಿಸಲ್ಪಡುತ್ತವೆ ಅನ್ನುವುದು ಹೆಚ್ಚಾಗಿ ಪ್ರಸ್ತಾಪವಾಗುವುದಿಲ್ಲ. ಈ ಮಾಹಿತಿಗಳು ಇಂಗ್ಲೀಶ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವಿದ್ದು, ಜನರ ಭಾಷೆಯಲ್ಲಿ ಇರದೇ ಹೋದರೆ ಈ ಮಾಹಿತಿಯನ್ನು ಕೊಡುವುದರಿಂದ ತಾನೇ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಕೊಡಬೇಕಾದುದು ಸ್ವಾಭಾವಿಕವೂ, ಜನಪರವೂ ಹಾಗೂ ನ್ಯಾಯಸಮ್ಮತವೂ ಆಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆಯನ್ನು ಪಡೆಯುವುದು ನಮ್ಮೆಲ್ಲರ ಹಕ್ಕಾಗಿದೆ. ಈ ಹಕ್ಕು ಸಹಜವಾಗಿ ನಮಗೆ ದಕ್ಕುತ್ತಿಲ್ಲದಿದ್ದಲ್ಲಿ ಅದಕ್ಕಾಗಿ ದನಿಯೆತ್ತುವ, ಹೋರಾಟಗಳ ಮೂಲಕವಾದರೂ ಸರಿಯೇ, ಅವುಗಳನ್ನು ದಕ್ಕಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.


ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ಹಲವಾರು ಪ್ರಯತ್ನಗಳು ಈವರೆಗೂ ನಡೆದಿವೆ ಹಾಗೂ ನಡೆಯುತ್ತಿವೆ. ಗ್ರಾಹಕ ಸೇವೆಯಲ್ಲಿ ಹಾಗೂ ನಾಗರೀಕ ಸೇವೆಯಲ್ಲಿ ಕನ್ನಡದ ಬಳಕೆ ಆಗುವಂತೆ ಮಾಡಲು ನಾವು ನೀವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕನ್ನಡದಲ್ಲಿ ಸೇವೆ ಪಡೆಯಲು ಆಗುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಇಂಬು ಕೊಡುವ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ ಒಂದು ಫೋರಮ್ ಅನ್ನು ತೆರೆಯಲಾಗಿದೆ. ಈ ಫೋರಮ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದೆ ನಿಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಬಹುದು. ಹಾಗೆ ಅದನ್ನು ಸರಿ ಮಾಡಲು ಮಾಡಿದ ಪ್ರಯತ್ನಗಳನ್ನು ಕೂಡ ಹಂಚಿಕೊಳ್ಳಬಹುದು. ಇದರೊಟ್ಟಿಗೆ ಮಾರುಕಟ್ಟೆಯ ಮಾಹಿತಿ ಮತ್ತು ಗ್ರಾಹಕ ಸೇವೆ ಕಾನೂನಿನ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವೆಡೆ ನೀವು ಪ್ರಯತ್ನಿಸಿ ಯಶಸ್ವಿಯಾದ ಸುದ್ದಿಗಳನ್ನೂ ಕೂಡ ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡ ಗ್ರಾಹಕರ ಒಗ್ಗಟಿನ ಸೂರಾದ ಈ ಫೋರಮ್ ಗೆ ಸೇರಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.

"ವ್ಯಾಪಾರಿ" ನಿರ್ಮಾಪಕ ಮತ್ತು "ಗ್ರಾಹಕ" ಕಲಾರಸಿಕ!

(ಚಿತ್ರಕೃಪೆ: ಪ್ರಜಾವಾಣಿ)
ಡಬ್ಬಿಂಗ್ ತಡೆಯುತ್ತೇವೆ ಎನ್ನುವ ಕೂಗು ತಾರಕಕ್ಕೇರಿರುವ ಈ ಹೊತ್ತಿನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಚಿತ್ರನಿರ್ಮಾಪಕರಲ್ಲಿ ಹಲವರು ನಡೆಸಿದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು. ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಈ ವರದಿಯನ್ನು ನೋಡಿದರೆ ನಿರ್ಮಾಪಕರುಗಳು ಡಬ್ಬಿಂಗ್ ಪರವಾಗಿದ್ದಾರೆ ಎಂಬುದು ಅರಿವಾಗುತ್ತದೆ. ಆದರೆ ಇದಕ್ಕೂ ಮಿಗಿಲಾದದ್ದೇನೆಂದರೆ ಸಿನಿಮಾ ಕಲೆಯಷ್ಟೇ ಅಲ್ಲಾ, ಅದು ವ್ಯಾಪಾರ ಎನ್ನುವುದು ಮನದಟ್ಟಾಗುತ್ತದೆ.

ನಿರ್ಮಾಪಕ ಅನ್ನದಾತನೇ? ಪ್ರೇಕ್ಷಕ ಗ್ರಾಹಕನೇ?

ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು "ಅನ್ನದಾತ"ರೆಂದೂ ಪ್ರೇಕ್ಷಕರನ್ನು "ಅಭಿಮಾನಿ ದೇವರು"ಗಳೆಂದೂ ಕರೆಯುತ್ತಿದ್ದುದನ್ನು ಎಲ್ಲರೂ ಬಲ್ಲೆವು. ಆದರೆ ಚಿತ್ರರಂಗದ ಕೆಲಮಂದಿ "ಸಿನಿಮಾ ಒಂದು ಕಲೆ, ಇದು ಉದ್ಯಮವಲ್ಲ" "ಪ್ರೇಕ್ಷಕ ಕಲಾರಸಿಕ, ಗ್ರಾಹಕನಲ್ಲ" ಎಂದು ಆಡುವ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ವಾಸ್ತವವಾಗಿ ಮೇಲಿನ ಸುದ್ದಿ ಅದನ್ನು ಅಲ್ಲಗಳೆಯುತ್ತಿದೆ. ಸಿನಿಮಾ ಕಲೆಯೂ ಹೌದು, ಪ್ರೇಕ್ಷಕ ರಸಿಕನೂ ಹೌದು. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ಉದ್ಯಮವೂ ಆಗಿದೆ. ಪ್ರೇಕ್ಷಕ ಗ್ರಾಹಕನೂ ಆಗಿದ್ದಾನೆ ಎಂಬುದನ್ನು ಅಲ್ಲಗಳೇಯಲಾಗದು.

ಡಬ್ಬಿಂಗ್ ಬಂದೊಡನೆ ಕನ್ನಡ ಚಿತ್ರರಂಗ ಉದ್ಧಾರವಾಗಿಬಿಡುತ್ತದೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಸಿನಿಮಾ ರಂಗ ಅಳಿದು ಹೋಗುತ್ತದೆ ಎನ್ನಲೂ ಆಗದು. ಚಿತ್ರವೊಂದು ಎಷ್ಟೇ ಕಲಾತ್ಮಕವಾಗಿದೆ ಎಂದರೂ ಅಲ್ಲಿ "ಎಕನಾಮಿಕ್ಸ್" (ಲಾಭ ನಷ್ಟದ ಲೆಕ್ಕಾಚಾರ) ಇದ್ದೇ ಇರುತ್ತದೆ. ಯಾಕೆಂದರೆ ಯಾವ ಸಿನಿಮವನ್ನೂ ಪುಗಸಟ್ಟೆ ತೆಗೆಯಲು ಸಾಧ್ಯವಾಗದು. ಅದಕ್ಕೆ ಹಣ ಬೇಕೇ ಬೇಕು ಮತ್ತು ಹಾಗೆ ತೊಡಗಿಸಿದವನು ಹಾಕಿದ್ದನ್ನು ಕಳೆದುಕೊಳ್ಳಲು ಎಂದೂ ಸಿದ್ಧನಾಗನು. ಹೀಗಿದ್ದಾಗ ಸಹಜವಾಗೇ ಬಂಡವಾಳ ಹಾಕುವವನು ಸಿನಿಮಾ ತಯಾರಾದ ನಂತರದ ಲಾಭ-ನಷ್ಟವನ್ನೂ ಎಣಿಕೆ ಹಾಕಲೇಬೇಕಾಗುತ್ತದೆ. ಆದರೆ ನಿರ್ದೇಶಕ, ತಂತ್ರಜ್ಞರು, ನಟರೂ ಸೇರಿದಂತೆ ಎಲ್ಲಾ ಕಲಾವಿದರಿಗೂ ತಮ್ಮ ಸಂಭಾವನೆ ಸಿಕ್ಕರೆ ಮುಗಿಯಿತು. ಇದನ್ನೆಲ್ಲಾ ನೀಡುವ ನಿರ್ಮಾಪಕನೇ ಚಿತ್ರರಂಗದ ಎಲ್ಲಾ ಕಾರ್ಮಿಕರ ಅನ್ನದಾತ! ನಿರ್ಮಾಪಕರನ್ನು ಹೊರತುಪಡಿಸಿ ಉಳಿದವರಿಗೆ ಒಂದು ಸಿನಿಮಾ ತಯಾರಾದ ನಂತರ ಅದು ಬಿಡುಗಡೆಯಾಗುತ್ತಾ, ಬಿಡುಗಡೆಯಾದರೂ ಓಡುತ್ತಾ, ದುಡ್ಡು ಮಾಡುತ್ತಾ ಅನ್ನೋದೆಲ್ಲಾ ಮಹತ್ವದ್ದಲ್ಲವೇನೋ ಎನ್ನಿಸುತ್ತದೆ. "ವರ್ಷವೊಂದಕ್ಕೆ ನೂರಿಪ್ಪತ್ತು ಸಿನಿಮಾ ಬರುತ್ತೆ, ಅದರಲ್ಲಿ ಐದೋ ಆರೋ ಮಾತ್ರಾ ಲಾಭ ತರುತ್ತೆ ಎಂದು ಒಪ್ಪಿಕೊಳ್ಳುತ್ತಲೇ ನಮ್ಮ ಕಾರ್ಮಿಕರಿಗೆ ೧೨೦ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ, ಅದರಿಂದ ಹೊಟ್ಟೆ ಹೊರೆಯಬೇಕು, ಡಬ್ಬಿಂಗ್ ಬಂದರೆ ಅದು ನಿಲ್ಲುತ್ತದೆ" ಎಂದು ಇವರಾಡುವ ಮಾತಿನ ಹಿಂದಿರುವ ಗೂಡಾರ್ಥವೇನು? ನಷ್ಟವೆಲ್ಲಾ ನಿರ್ಮಾಪಕರದ್ದಾಗಲಿ, ನಮ್ಮ ಸಂಭಾವನೆ ನಮಗೆ ಸಿಗುತ್ತಿರಲಿ ಎಂದಲ್ಲವೇ? ಹೀಗಿದ್ದಾಗ ನಿರ್ಮಾಪಕರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸಹಜವೇ ಅಲ್ಲವೇ? ಬಂಡವಾಳವನ್ನು ಹೂಡುವುದಷ್ಟೇ ಅಲ್ಲದೆ ಅತಿ ಹೆಚ್ಚು ಮಾರುಕಟ್ಟೆ ಗಂಡಾಂತರಕ್ಕೆ(ರಿಸ್ಕಿಗೆ) ತನ್ನನ್ನು ತಾನು ಒಡ್ಡಿಕೊಳ್ಳುವ ನಿರ್ಮಾಪಕನಿಗೇ ಸಿನಿಮಾ ಮಾರುಕಟ್ಟೆಯ ಬಗ್ಗೆ ಮಾತಾಡುವ, ತೀರ್ಮಾನಿಸುವ ಹಕ್ಕಿರುವುದಲ್ಲವೇ? ವಾಸ್ತವ ಹೀಗಿರುವಾಗ ಕನ್ನಡ ಚಿತ್ರರಂಗದ ಮಂದಿ ಡಬ್ಬಿಂಗ್ ಬೇಕೆನ್ನುವ ನಿರ್ಮಾಪಕರನ್ನು "ಕನ್ನಡ ದ್ರೋಹಿ"ಗಳ ಪಟ್ಟಿಗೆ ಸೇರಿಸಲಾರರು ಎಂದುಕೊಳ್ಳೋಣ.

ಇನ್ನು ಸಿನಿಮಾ ಎಷ್ಟೇ ಕಲಾತ್ಮಕವಾದರೂ ಅದನ್ನು ತನ್ನ ದುಡ್ಡು ಮತ್ತು ಸಮಯ ಖರ್ಚು ಮಾಡೇ ನೋಡುವ ಪ್ರೇಕ್ಷಕನು ಕಲಾರಸಿಕನೇ ಆಗಿದ್ದರೂ ಜೊತೆಯಲ್ಲೇ ಗ್ರಾಹಕನೂ ಆಗಿರುತ್ತಾನೆ. ಇಲ್ಲಿ ಸಾಮಾನ್ಯ ಗ್ರಾಹಕನಿಗೆ ಇರುವ ಎಲ್ಲಾ "ಹಕ್ಕುಗಳು" ಅವನಿಗೆ ಇರಬೇಕೆನ್ನುವುದಕ್ಕಿಂತಲೂ "ಗೌರವ" ಇರಬೇಕೆನ್ನುವುದು ಮುಖ್ಯವಾದುದಾಗಿದೆ. ಇಡೀ ಡಬ್ಬಿಂಗ್ ಚರ್ಚೆಯಲ್ಲಿ ಡಬ್ಬಿಂಗ್ ತಡೆಯುವ ಮಾತಾಡುತ್ತಿರುವವರು ಒಮ್ಮೆಯಾದರೂ ಗ್ರಾಹಕನ ಈ ಬೇಕು ಬೇಡಗಳಿಗೆ ಸ್ಪಂದಿಸಿದ್ದಾರೆಯೇ? ಇವರು "ನಾವೆಷ್ಟೊಂದು ಅದ್ಭುತ ಸಿನಿಮಾಗಳನ್ನು ತೆಗೆದಿದ್ದೇವೆ, ಕನ್ನಡಿಗರು ಅವನ್ನು ನೋಡಲ್ಲಾ, ಅವರಿಗೆ ಬೇರೆ ಭಾಷೇದೇ ಬೇಕು" ಎಂದು ದೂರಲು ಮಾತ್ರಾ ಪ್ರೇಕ್ಷಕ ಬಳಕೆಯಾಗುತ್ತಾನೆ! ಸತ್ಯಮೇವ ಜಯತೇ ಬೇಕೆಂದರೆ ಬದುಕು ಜಟಕಾ ಬಂಡಿ ನೋಡಿ ಎನ್ನುವ ಉದ್ಧಟತನ ಇವರದ್ದು! ಈ ಮಂದಿ ನಮಗೇನು ಬೇಕು ಬೇಡ ಎಂಬುದನ್ನು ತೀರ್ಮಾನಿಸುವ ದೊಣೆನಾಯಕರಾಗಿಬಿಡುತ್ತಾರೆ! ಇದು ಬಿಟ್ಟು ಇನ್ನುಳಿದಂತೆ ಗ್ರಾಹಕನ ಯಾವುದೇ ಬೇಕು ಬೇಡಗಳಿಗೆ ಇವರಿಂದ ಸ್ಪಂದನೆಯೂ ಇಲ್ಲಾ, ಬೆಲೆಯೂ ಇಲ್ಲಾ. ಹಾಗೆ ಗ್ರಾಹಕ, ಇವರದೇ ಭಾಷೆಯಲ್ಲಿ ಪ್ರೇಕ್ಷಕ, ಕಲಾರಸಿಕನ ಬಗ್ಗೆ ಕಿಂಚಿತ್ತದರೂ ಗೌರವವಿದ್ದಿದ್ದರೆ ಅಷ್ಟೊಂದು ಮಂದಿ ಬೇಕು ಬೇಕು ಎನ್ನುತ್ತಿದ್ದರೂ... ಮೂರೇ ದಿನದಲ್ಲಿ ಮೂವತ್ತು ಸಾವಿರ ಮಂದಿ ಅಂತರ್ಜಾಲ ತಾಣದಲ್ಲಿಯೇ ನೋಡಿ ತಣಿಯುತ್ತಿದ್ದುದನ್ನು ಸಹಿಸದೇ "ಸತ್ಯಮೇವ ಜಯತೇ" ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ತೆಗೆಸಿ ಹಾಕುತ್ತಿರಲಿಲ್ಲಾ!! (ಅಯ್ಯೋ, ಅದು ನಾವು ತೆಗೆಸಿದ್ದಲ್ಲಾ, ಅವರೇ ತೆಗೆದದ್ದು ಎನ್ನುವ ಗೋಸುಂಬೆ ಮಾತುಗಳನ್ನು ಇನ್ನು ನಿರೀಕ್ಷಿಸಬಹುದು!) ಹೀಗಿದ್ದಾಗ ಚಲನಚಿತ್ರವನ್ನು ನೋಡುವವನೊಬ್ಬ ತನ್ನ ಬೇಕು ಬೇಡಗಳ ಹಕ್ಕನ್ನು ಗ್ರಾಹಕನಾಗಿ ಚಲಾಯಿಸದೇ ಇರುತ್ತಾನೆಯೇ? ತೀರಾ ಸಾರಾಸಗಟು ನಿಶೇಧ ಎನ್ನುತ್ತಾ ನೋಡುಗನ ಅವಕಾಶಗಳ ಬಾಗಿಲುಗಳನ್ನು ಮುಚ್ಚಿದರೆ ಅವನಾದರೋ ಏನು ತಾನೇ ಮಾಡಬಲ್ಲ? ಇರುವ ಕಾನೂನಿನ ಎಲ್ಲ ಅವಕಾಶಗಳನ್ನು ಬಳಸಿ ಕೊಳ್ಳುವುದು ಸಹಜ!

ಇರಲಿ, ನಿರ್ಮಾಪಕ ವ್ಯಾಪಾರಿಯೋ ಅಲ್ಲವೋ, ಸಿನಿಮಾ ಸರಕೋ ಅಲ್ಲವೋ ಬೇರೆಯದೇ ಮಾತು. ಆದರೆ ಸಿನಿಮಾವನ್ನು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನೊಬ್ಬನಿಗೆ ತನಗೆ ಬೇಕಾದುದನ್ನು ನೋಡುವ, ಮೆಚ್ಚುವ, ತಿರಸ್ಕರಿಸುವ ಆಯ್ಕೆ ಸ್ವಾತಂತ್ರ್ಯವಿರುವುದನ್ನಾದರೂ ಚಿತ್ರರಂಗ ಗೌರವಿಸಬೇಕಾಗುತ್ತದೆ. ಇದನ್ನು ಕಡೆಗಣಿಸಿದಾಗ ಕಾನೂನು ಈ ಹಕ್ಕನ್ನು ಎತ್ತಿಹಿಡಿಯುವುದು ಮಾತ್ರಾ ದಿಟ! ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲಾ, ದೇಶದ ಪ್ರಧಾನಿಯೇ ಮಧ್ಯಸ್ತಿಕೆಗಿಳಿದರೂ ಆಗಬೇಕಾದ್ದೂ, ಆಗುವುದೂ ಇದೇ!

ಕನ್ನಡದಲ್ಲಿ ಮಾಹಿತಿ - ಇದಕ್ಕುಂಟೇ ಸರ್ಕಾರಿ ನಿಯಮ?


ನಾವು ಪ್ರತಿದಿನ ಬಳಸುವ ವಸ್ತುಗಳ ಮೇಲೆ ಕನ್ನಡದಲ್ಲಿ ಮಾಹಿತಿ ಇರಬೇಕು ಎನ್ನುವುದು ಕನ್ನಡ ಗ್ರಾಹಕರ ಕೂಗಾಗಿದ್ದು ಇದೊಂದು ಅತ್ಯಂತ ಸಹಜವಾದ ಬೇಡಿಕೆಯಾಗಿದೆ. ವಾಸ್ತವದಲ್ಲಿ ಪರಿಸ್ಥಿತಿ ಹೀಗಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಎಷ್ಟೋ ಬಾರಿ ನಾವು ಬಳಸುವ, ನಮ್ಮೂರಿನಲ್ಲಿಯೇ ಕೊಳ್ಳಲಾದ ವಸ್ತುಗಳ ಮೇಲೂ ಅವುಗಳ ಹೆಸರು, ಬಳಕೆಯ ಮಾಹಿತಿಗಳು ಕನ್ನಡದಲ್ಲಿ ಇರುವುದಿಲ್ಲ. ಹೀಗೆ ಇರಬೇಕು ಎನ್ನಲು ಯಾವುದಾದರೋ ಕಾಯ್ದೆ ಕಾನೂನುಗಳಿವೆಯೇ? ಸರ್ಕಾರ ಈ ನಿಟ್ಟಿನಲ್ಲಿ ಯಾವುದಾದರೋ ನಿಯಮವನ್ನು ರೂಪಿಸಿದೆಯೇ? ಇಂಥಾ ನಿಯಮಗಳಿದ್ದೂ ಅದನ್ನು ಉಲ್ಲಂಘಿಸಲಾಗುತ್ತಿದೆಯೇ? ಈ ಎಲ್ಲವುಗಳ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿಯನ್ನು ಕೋರಿ ಓದುಗರೊಬ್ಬರು ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಕೇಳಿದ ಪಶ್ನೆಗಳು ಹೀಗಿವೆ: 

೧. ಕರ್ನಾಟಕ ರಾಜ್ಯಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಯಾವ ಭಾಷೆಯಲ್ಲಿ ಮುದ್ರಿಸಿರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ಕಾನೂನುಗಳೇನು?
೨. ಕರ್ನಾಟಕ ರಾಜ್ಯಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು, ಆ ಉತ್ಪನ್ನದ ಮೇಲೆ ಅಚ್ಚು ಹಾಕಿಸಬೇಕು ಎಂಬುದನ್ನೇನಾದರೂ ಕಡ್ಡಾಯ ಮಾಡಿದೆಯೇ? ಕಡ್ಡಾಯ ಮಾಡಿದ್ದ ಪಕ್ಷದಲ್ಲಿ, ಯಾವ ಭಾಷೆಯಲ್ಲಿ ಆ ಮಾಹಿತಿ ಇರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ ಕಾನೂನುಗಳೇನು?
೩. ಒಂದು ಪಕ್ಷ, ಪ್ರಶ್ನೆ ೧ ಮತ್ತು ೨ ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ, ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಯಾವ ನಿಯಮ/ಕಾನೂನಿಗೆ ಒಳಪಟ್ಟು ಮುದ್ರಿಸಬಹುದಾಗಿದೆ?
೪. ಒಂದು ಪಕ್ಷ, ಪ್ರಶ್ನೆ ೧ ಮತ್ತು ೨ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಹೆಸರನ್ನು ಮತ್ತು ಉತ್ಪನ್ನಗಳ ಮಾಹಿತಿಯನ್ನು ಮುದ್ರಿಸುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಕರ್ನಾಟಕ ರಾಜ್ಯ ಸರ್ಕಾರ ಭಾವಿಸುತ್ತದೆಯೇ?

ಈ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಏನುತ್ತರ ನೀಡುವರೋ ಎಂಬುದು ಕುತೂಹಲಕಾರಿಯಾಗಿದೆ. ನಮ್ಮ ನಾಡಿನಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೂ ಕನ್ನಡದಲ್ಲಿ ಹೆಸರು ಮಾಹಿತಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಸದರಿ ಮಾಹಿತಿ ಕೋರಿಕೆ ಅರ್ಜಿ ಒಂದು ಮೆಟ್ಟಿಲಾಗಿದ್ದು ಇದರಲ್ಲಿ ಯಶಸ್ಸು ಸಿಗಲೆಂಬುದು ಹಾರೈಕೆ.

ಹೃದಯದಲಿ ಇದೇನಿದೂ.. ಅಮೆಜಾನ್ ನದಿ ಓಡಿದೆ!

ಅಮೆಜಾನ್ ಎನ್ನುವುದು ಒಂದು ಅಮೇರಿಕ ಮೂಲದ ದೈತ್ಯ "ಮಿಂಬಲೆ ಬೆಸೆದ ವ್ಯಾಪಾರ" ಸಂಸ್ಥೆಯಾಗಿದೆ. ಇದು ಜಗತ್ತಿನ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು ಪುಸ್ತಕಗಳು, ಸಿನಿಮಾ ಸಿ.ಡಿಗಳೇ ಮೊದಲಾದ ಹತ್ತುಹಲವು ಸಾಮಾಗ್ರಿಗಳನ್ನು ಅಂತರ್ಜಾಲದಿಂದ ಮಾರುವ ಮೂಲಕ ಕೊಳ್ಳುಗರಿಗೆ ಅನುಕೂಲ ಮಾಡುತ್ತಿದೆ. ಇತ್ತೀಚಿಗಷ್ಟೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ಈ ಸಂಸ್ಥೆಯು, ಮಾರಾಟಕ್ಕೆ ಇಟ್ಟ ಸರಕಿನಲ್ಲಿ ಕನ್ನಡಕ್ಕೆ ಕಾಲ್ಧೂಳಿನಷ್ಟು ಜಾಗವೂ ಇರಲಿಲ್ಲ! ಇಂಥಾ ಸಂದರ್ಭವು ನಮ್ಮೆಲ್ಲರಿಗೂ ಸಾಮಾನ್ಯ. ಈ ರೀತಿಯ ಸಂಸ್ಥೆಗಳ ಸಾಲಿಗೆ ಇದೊಂದು ಹೊಸ ಹೆಸರು ಸೇರ್ಪಡೆ ಎಂದುಕೊಂಡು ಅವರನ್ನು ಬಯ್ಕೊಳ್ಳೋ ಕೆಲಸ ಮಾಡೋದು ಕೂಡಾ ನಮಗೆ ಮಾಮೂಲಿ. ಈ ಬಾರಿ ಮಾತ್ರಾ ಹಾಗಾಗಿಲ್ಲಾ! ಏನಾಗಿದೆ ಅನ್ನೋದನ್ನು ತಿಳಿಸೋದೇ ಈ ಕಥೆ!

ಗ್ರಾಹಕನ ತಾಕತ್ತು! 

ಇದನ್ನು ಕಂಡ ಶ್ರೀ ವಾಸುಕಿ ರಾಘವನ್ ಎಂಬ ಗ್ರಾಹಕರು, ಹಾಗೆ ಕೊರಗೋದಕ್ಕಿಂತ ಒಂದು ಹೆಜ್ಜೆ ಮುಂದೆಹೋಗಿ ಅಮೆಜಾನ್ ಸಂಸ್ಥೆಯ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಹೇಳಿ... ಇಲ್ಲಿ ಕನ್ನಡನಾಡಿದೆ, ಕನ್ನಡ ನುಡಿಯಿದೆ, ಕನ್ನಡ ಜನರಿದ್ದಾರೆ, ಇವರದ್ದೊಂದು ಶ್ರೀಮಂತ ಸಂಸ್ಕೃತಿಯಿದೆ, ಇವರದ್ದೇ ಆದ ಸಿನಿಮಾರಂಗವಿದೆ, ಸಾವಿರಕ್ಕೂ ಮಿಗಿಲಾದ ಸಿನಿಮಾಗಳಿವೆ, ಇವುಗಳಿಗೆ ಆರುಕೋಟಿ ಗ್ರಾಹಕರ ದೊಡ್ಡ ಸಮುದಾಯದ ಮಾರುಕಟ್ಟೆಯಿದೆ ಎಂದೆಲ್ಲಾ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರೊಟ್ಟಿಗೆ ಸಮಾನ ಮನಸ್ಕ ಕನ್ನಡ ಗ್ರಾಹಕರ ಆಶಾ ತಾಣವಾದ "ಅಂಗಡಿಯಲ್ಲಿ ಕನ್ನಡ ನುಡಿ" ಮಿಂದಾಣದ ಮೂಲಕ ಹಲವಾರು ಕನ್ನಡಿಗ ಗ್ರಾಹಕರನ್ನು ಒಗ್ಗೂಡಿಸಿ, ಅಮೆಜಾನ್ ಸಂಸ್ಥೆಯ ಸಂಬಂಧಿಸಿದ ಅಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯುವಂತೆ ಪ್ರೇರೇಪಿಸಿದ್ದಾರೆ. ಹೀಗಾಗಿ ಅನೇಕ ಪತ್ರಗಳು ಹೋಗಿವೆ. ಇದರ ಪರಿಣಾಮವಾಗಿ ಅಮೆಜಾನ್ ಬದಲಾಗಿದೆ.

ಹನ್ನೆರಡು ಸಾವಿರಕ್ಕೂ ಹೆಚ್ಚಿನ ಸಿನಿಮಾಗಳು ಅಮೆಜಾನ್‌ನಲ್ಲಿ ಮಾರಾಟಕ್ಕೆ ಸಿಗುತ್ತಿದ್ದು ಅದರಲ್ಲಿ ಹಿಂದೀಯ ೫೭೦೦ ಸಿನಿಮಾಗಳು, ತಲಾ ಐವತ್ತರಷ್ತು ತಮಿಳು ತೆಲುಗು ಸಿನಿಮಾಗಳು ಇದ್ದು ಕನ್ನಡದ್ದು ಒಂದೂ ಇರಲಿಲ್ಲ. ಇದೀಗ ಗ್ರಾಹಕರ ಪತ್ರಗಳ ಪರಿಣಾಮವಾಗಿ ಕನ್ನಡದ ೪೧೧ ಸಿನಿಮಾಗಳ ಸಿ.ಡಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ಯಶಸ್ಸು ಗ್ರಾಹಕರಾಗಿ ನಾವೇನು ಸಾಧಿಸಬಹುದೆಂಬುದಕ್ಕೆ, ನಮ್ಮ ತಾಕತ್ತಿಗೆ ಸಾಕ್ಷಿಯಾಗಿ ನಿಂತಿದೆ.

ಈ ಬೆಳವಣಿಗೆ ಕನ್ನಡಿಗರ ಕಣ್ಣು ತೆರೆಸಲಿ. ಕನ್ನಡಿಗ, ತನ್ನ ಬತ್ತಳಿಕೆಯಲ್ಲಿರುವ ಗ್ರಾಹಕನ ಹಕ್ಕೆನ್ನುವ ಶಸ್ತ್ರವನ್ನು ಹೊರತೆಗೆಯಲಿ. ಎಲ್ಲಾ ಕ್ಷೇತ್ರಗಳಲ್ಲಿನ ಮಾರಾಟಗಾರರನ್ನು/ ಸೇವೆನೀಡುವವರನ್ನು ಕನ್ನಡದಲ್ಲಿ ಸೇವೆ ನೀಡುವಂತೆ ಒತ್ತಾಯಿಸಲಿ. ಇದು ನಿಜವಾದ ಕನ್ನಡ ಚಳವಳಿ! ಶ್ರೀ ವಾಸುಕಿ ರಾಘವನ್ ಸಹಿತ ಅಂಗಡಿಯಲ್ಲಿ ಕನ್ನಡ ನುಡಿ ತಂಡದ ಎಲ್ಲರಿಗೂ ಅಭಿನಂದನೆಗಳು. 

ಅಂಗಡಿಯಲ್ಲಿ ಕನ್ನಡ ನುಡಿ ಸೇರಲು ಇಲ್ಲಿ ಬನ್ನಿ: https://www.facebook.com/Angadiyalikannadanudi?fref=ts


ಕನ್ನಡಿಗರಿಗೆ ಕಹಿಯಾದ ಆರ್‌ಬಿಐ ನ ಬಿಟ್ಟಿ ಸಲಹೆ ಮತ್ತು ಕಾಫಿ ಡೇ ಕಾಫಿ!


ಇತ್ತೀಚಿಗೆ ನಡೆದ ಎರಡು ಘಟನೆಗಳು ನಾಡಿನಲ್ಲಿ ಕನ್ನಡದ ಸ್ಥಾನಮಾನಕ್ಕೆ ಮತ್ತು ಈ ದೇಶದ ವ್ಯವಸ್ಥೆಗಳಿಗೆ ಕನ್ನಡಿಗರ ಬಗ್ಗೆ ಇರುವ ಉದಾಸೀನತೆಗೆ ಉದಾಹರಣೆಯಾಗಿವೆ.

ಕೆಫೆ ಕಾಫಿಡೇನಲ್ಲಿ ಕನ್ನಡ ಹಾಡು ಕೇಳುವಂತಿಲ್ಲ!

ಕೆಲವು ಕನ್ನಡಿಗರು ಇತ್ತೀಚಿಗೆ ಕೆಫ಼ೆ ಕಾಫಿಡೇ ಎನ್ನುವ ಸರಣಿಯಂಗಡಿಯ ಒಂದು ಮಳಿಗೆಗೆ ಹೋಗಿದ್ದರಂತೆ. ಅದೂ   ಅರಸೀಕೆರೆಯ ಒಂದು ಅಂಗಡಿಗೆ. ಅಲ್ಲಿಗೆ ಬಂದ ಗಿರಾಕಿಗಳನ್ನು ಮನರಂಜಿಸುವ ಉದ್ದೇಶದಿಂದ ಹಾಡುಗಳನ್ನು ಹಾಕಿದ್ದರಂತೆ. ಆ ಹಾಡುಗಳು ಹಿಂದೀ ಹಾಡುಗಳಾಗಿದ್ದವಂತೆ. ಸರಿ.. ಈ ಗ್ರಾಹಕರು ಕನ್ನಡ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡದ್ದಕ್ಕೆ ಮಳಿಗೆಯವರು ಹಾಗೆ ಹಾಕಲು ತಮಗೆ ಕೇಂದ್ರ ಕಚೇರಿಯಿಂದ ಅನುಮತಿಯಿಲ್ಲ ಎಂದು ಮಾರುತ್ತರ ನೀಡಿದರಂತೆ. ಇದರಿಂದ ಆಘಾತಗೊಂಡ ಇವರು ತಮ್ಮ ಅನುಭವವನ್ನು ಏನು ಗುರುವಿನೊಂದಿಗೆ ಹಂಚಿಕೊಂಡರು. ನಂತರ ಕಾಫಿ ಡೇ ಸಂಸ್ಥೆಗೆ ಕನ್ನಡದ ಹಾಡುಗಳನ್ನು ಹಾಕಲು ಕೇಳಿಕೊಂಡು ಪತ್ರ ಬರೆದಿದ್ದಾರೆ. ಇವರಷ್ಟೇ ಅಲ್ಲದೇ ಇವರೊಂದಿಗೆ ದನಿಗೂಡಿಸಿ ನೂರಾರು ಮಂದಿ ಕೆಫೆ ಕಾಫಿಡೇ ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕೆಫಿ ಕಾಫಿ ಡೇ ಸಂಸ್ಥೆಯ ಅಧಿಕಾರಿಗಳು ನೀಡಿರುವ ಉತ್ತರ ದಂಗು ಬಡಿಸುವಂತಿದೆ.

ನಮ್ಮ ಸಂಸ್ಥೆಯು ಭಾರತದಲ್ಲಿ ನಾನಾ ಕಡೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲೆಡೆ ಒಂದೇ ರೀತಿಯ ಒಳಾಂಗಣ ವಾತಾವರಣವನ್ನು ರೂಪಿಸಿಕೊಂಡಿದ್ದು, ಭಾರತದ ಎಲ್ಲಾ ೧೨೦ ಊರುಗಳಲ್ಲಿಯೂ ಹಿಂದೀ ಮತ್ತು ಇಂಗ್ಲೀಶ್ ಸಂಗೀತವನ್ನು ಮಾತ್ರಾ ಹಾಕುತ್ತೇವೆ ಮತ್ತು ಪ್ರಾದೇಶಿಕ ಭಾಷೆಗಳ ಸಂಗೀತವನ್ನು ಹಾಕುವುದಿಲ್ಲ..
ಎಂದು ಉತ್ತರಿಸಿದ್ದಾರೆ.

ಚೆಕ್ಕುಗಳನ್ನು ತುಂಬಲು ಹಿಂದೀ/ ಇಂಗ್ಲೀಶ್ ಪ್ರವೀಣರಾಗಬೇಕಂತೆ!

ಸಿಟಿಬ್ಯಾಂಕಿನಲ್ಲಿ ಹಿಂದೀ ಮತ್ತು ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಅಚ್ಚು ಹಾಕಿರುವುದರ ಬಗ್ಗೆ ಗ್ರಾಹಕರೊಬ್ಬರು ದೂರಿ, ಕನ್ನಡದಲ್ಲೂ ಚೆಕ್ಕುಗಳನ್ನು ಅಚ್ಚು ಹಾಕಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಬ್ಯಾಂಕಿನ ಅಧಿಕಾರಿಗಳು ಹೀಗೆ ಉತ್ತರ ನೀಡಿದ್ದಾರೆ.
ನಮಗೆ ರಿಜರ್ವ್ ಬ್ಯಾಂಕಿನಿಂದ ಬಂದಿರುವ ಜುಲೈ ೨೦೧೧ರ ಸೂಚನೆಯಂತೆ ಹಿಂದೀ/ ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಮುದ್ರಿಸಿದ್ದೇವೆ.
ಸರಿ, ಮತ್ತೊಬ್ಬ ಗ್ರಾಹಕರು ಭಾರತೀಯ ರಿಜರ್ವ್ ಬ್ಯಾಂಕಿಗೇ ಬರೆದು ಕೇಳಿದಾಗ ಅವರು ನೀಡಿದ ಉತ್ತರ ಹೀಗಿದೆ:

Key fields in a cheque are Name and Amount for which proficiency in English/ Hindi is required whereas for other fields such as date and account number which are numerical the same is not required The format of a cheque with payee’s name and amount is standard. Hence it is felt no need to print cheques in a trilingual format, unlike other printed material.
ಇದೇ ವಿಷಯವಾಗಿ ರಿಜರ್ವ್ ಬ್ಯಾಂಕಿನ ಒಂಬುಡ್ಸ್‍ಮೆನ್ ಅವರಿಗೆ ದೂರು ಸಲ್ಲಿಸಿದಾಗ ದೂರನ್ನು ತಿರಸ್ಕರಿಸಿ, ಬೇಕಾದರೆ ಯಾವುದಾದರೂ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಉತ್ತರಿಸಿದ್ದಾರೆ.

ಸಮಸ್ಯೆಯ ಮೂಲವಿರುವುದು ಸಂವಿಧಾನದಲ್ಲಿ

ಭಾರತದಲ್ಲಿ ಕನ್ನಡಿಗರು ಇರೋದು ಬರೀ ೫%. ಅಂದರೆ ಇಲ್ಲಿ ಭಾಷಿಕ ಅಲ್ಪಸಂಖ್ಯಾತರು. ಹಾಗಾಗಿ ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕಿಲ್ಲಾ ಎಂದು ಭಾರತದ ವ್ಯವಸ್ಥೆಗಳು ತೀರ್ಮಾನಿಸಿರುವಂತಿದೆ. ಇಲ್ಲಿ ಪ್ರಜಾಪ್ರಭುತ್ವ ಎಂದರೆ "ಬಹುಸಂಖ್ಯಾತರ ಹಿತ ಮಾತ್ರಾ" ಎನ್ನುವುದೇ ಆಗಿರುವುದನ್ನು ಇದು ಎತ್ತಿ ತೋರಿಸುತ್ತಿದೆ. ಇದಕ್ಕೆಲ್ಲಾ ಮೂಲಕಾರಣವೇ ಭಾರತದ ಹುಳುಕಿನ ಭಾಷಾನೀತಿ. ಈ ದೇಶದಲ್ಲಿ ಹಿಂದೀ/ ಇಂಗ್ಲೀಶ್ ಮಾತ್ರವೇ ಆಡಳಿತ ಭಾಷೆಗಳು. ರಾಜ್ಯಗಳಿಗೆ ತಮ್ಮ ಆಯ್ಕೆಯ ಭಾಷೆಯನ್ನು ರಾಜ್ಯದ ಆಡಳಿತ ಭಾಷೆ ಮಾಡಿಕೊಳ್ಳಬಹುದಾದ ಹಕ್ಕನ್ನು... ಪಾಪಾ... ಘನ ಭಾರತ ಸರ್ಕಾರ ಕರುಣೆಯಿಂದ ಬಿಟ್ಟು ಕೊಟ್ಟಿದೆ. ಇಂಥಾ ಹೊಲಸು ವ್ಯವಸ್ಥೆ ಬದಲಾಗದೇ ಹೋದರೆ ನಿಧಾನವಾಗಿ ಕನ್ನಡ ಕೆಲಸಕ್ಕೆ ಬಾರದ ಭಾಷೆಯಾಗಿಬಿಡಲಿದೆ ಅಷ್ಟೇ! ಕರ್ನಾಟಕ ಸರ್ಕಾರವೂ ಸೇರಿದಂತೆ ಎಲ್ಲಾ ರಾಜ್ಯಗಳ ಸಂಸದರೂ, ರಾಜ್ಯಸರ್ಕಾರಗಳೂ ಈ ನಿಟ್ಟಿನಲ್ಲಿ ದನಿಯೆತ್ತಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಭಾರತದ ಎಲ್ಲಾ ರಾಜ್ಯ ಭಾಷೆಗಳಿಗೂ ಆಡಳಿತ ಸ್ಥಾನ ಕೊಡಬೇಕೆಂದು ಒತ್ತಡ ತರಬೇಕಾಗಿದೆ. ಇದನ್ನೆಲ್ಲಾ ಕಂಡಾಗ ಕಡೇಪಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರವೆನ್ನುವ ಹಲ್ಲಿಲ್ಲದ ಹಾವು ಒಂಚೂರು ಭುಸುಗುಟ್ಟಾದರೂ ಭುಸುಗುಟ್ಟಬಾರದೇ ಎಂದನ್ನಿಸಿದರೆ ಅಚ್ಚರಿಯೇನಿಲ್ಲಾ ಗುರೂ!

ಕೊನೆಹನಿ: ಕೆಫೆ ಕಾಫಿ ಡೇ ಎನ್ನುವ ಕನ್ನಡಿಗರದ್ದೇ ಸಂಸ್ಥೆ ಕರ್ನಾಟಕದಲ್ಲೇ ಕನ್ನಡದಲ್ಲಿ ಹಾಡು ಹಾಕಲು ನಿರಾಕರಿಸುತ್ತಿದೆ. ಆದರೆ ಇದೇ ಸಂಸ್ಥೆ ಜ಼ೆಕೋಸ್ಲೋವಿಯಾದಲ್ಲಿ ಕೂಡಾ ಸರಣಿಮಳಿಗೆಗಳನ್ನು ಇತ್ತೀಚಿಗೆ ತೆರೆದು ನಡೆಸುತ್ತಿದೆ. ಅಲ್ಲಿ ಯಾವ ಭಾಷೆಯಲ್ಲಿ ಇದು ಸೇವೆ ನೀಡುತ್ತಿದೆ ಎನ್ನುವುದು ಕುತೂಹಲದ ವಿಷಯ. ಏಕೆಂದರೆ ಆ ದೇಶದ ಜನಸಂಖ್ಯೆ ನಮ್ಮ ಬೆಂಗಳೂರಿನಷ್ಟು ಮಾತ್ರಾ! ಅಂದರೆ ಬರೀ ಒಂದು ಕೋಟಿ ಜನರಿರುವ ದೇಶ ಅದು. ಇನ್ನು ಭಾರತದ ಅನೇಕ ಬ್ಯಾಂಕುಗಳು ಶ್ರೀಲಂಕಾದಂತಹ ದೇಶಗಳಲ್ಲಿ ಯಾವ ಭಾಷೆಯಲ್ಲಿ ಚೆಕ್ಕುಗಳನ್ನು ಅಚ್ಚು ಹಾಕಿಸುತ್ತವೆ ಎನ್ನುವುದು ಕುತೂಹಲದ ವಿಷಯವಾಗಿದೆ. ಕೆಲ ಲಕ್ಷಗಳಷ್ಟು ಜನಸಂಖ್ಯೆಯ ನಾಡುಗಳಲ್ಲಿ ಆಯಾ ಭಾಷೆಗಳಲ್ಲಿ ಸೇವೆ ನೀಡುವ ಇವುಗಳು, ಆರುಕೋಟಿ ಕನ್ನಡಿಗರಿಗಾಗಿ ಕನ್ನಡದಲ್ಲಿ ಗ್ರಾಹಕಸೇವೆಯನ್ನು ಕೊಡಲು ಯಾಕೆ ಹಿಂಜರಿಯುತ್ತವೆ ಎನ್ನುವುದು ಕಾಡುತ್ತಿಲ್ವಾ ಗುರೂ!?

ಗ್ರಾಹಕ ಹಕ್ಕು ಮತ್ತು ಡಬ್ಬಿಂಗ್

(ಫೋಟೋ ಕೃಪೆ: ಪ್ರಜಾವಾಣಿ)

ಇಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ನಾನಾರೀತಿಯ ಮನೋರಂಜನೆ, ಸಿನಿಮಾ, ಟಿವಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಇವುಗಳನ್ನು ಯಾರಾದರೂ ನೋಡಬೇಕೆಂದರೆ ಅವನ್ನು ತಮ್ಮ ಭಾಷೆಗೆ ‘ಮಾತು ಬದಲಿಸಿ’ ಅಂದರೆ ಡಬ್ ಮಾಡಿ ನೋಡುವ ಏರ್ಪಾಡಿದೆ. ಭಾರತದಲ್ಲೂ ಡಬ್ಬಿಂಗ್ ವ್ಯವಸ್ಥೆ ಹೆಚ್ಚಿನ ಎಲ್ಲಾ ಕಡೆ ಜಾರಿಯಲ್ಲಿದ್ದರೂ ನಮ್ಮ ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ನಿಷೇಧವಿದೆ. ಕನ್ನಡದ ಮಕ್ಕಳು ತಮ್ಮಿಷ್ಟದ ಪೋಗೋ, ಕಾರ್ಟೂನ್ ಮೊದಲಾದ ವಾಹಿನಿಗಳನ್ನೂ ಅವತಾರ್, ಜುರಾಸಿಕ್ ಪಾರ್ಕ್, ಜಂಗಲ್‌ಬುಕ್ ಮೊದಲಾದ ಚಿತ್ರಗಳನ್ನೂ ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲ. ಕನ್ನಡವಲ್ಲದೆ ಬೇರಾವ ಭಾಷೆಯನ್ನೂ ಅರಿಯದ ಕನ್ನಡಿಗರು ಪರಭಾಷೆಯ ಚಿತ್ರಗಳನ್ನು, ಜ್ಞಾನ ವಿಜ್ಞಾನದ ವಾಹಿನಿಗಳನ್ನು ನೋಡಬೇಕೆಂದರೆ... ಇಲ್ಲವೇ ಅರ್ಥವಾಗದೆ ನೋಡಬೇಕು ಅಥವಾ ಆಯಾಭಾಷೆಗಳನ್ನು ಕಲಿತು ನೋಡಬೇಕು. ಹೀಗೆ ಅವಕಾಶ ಇಲ್ಲದಿರಲು ಕಾರಣ ಯಾವುದೋ ಸರ್ಕಾರಿ ಕಾಯ್ದೆಯಾಗಲೀ, ಇಂತಹ ಕಾರ್ಯಕ್ರಮಗಳನ್ನು ನೀಡುವವರು ಇಲ್ಲದೇ ಆಗಲೀ ಅಲ್ಲಾ. ಬದಲಿಗೆ ಕನ್ನಡ ದೂರದರ್ಶನ ಮತ್ತು ಚಿತ್ರರಂಗದ ಕಾನೂನುಬಾಹಿರವಾದ “ಡಬ್ಬಿಂಗ್ ನಿಷೇಧ”ದ ಕಾರಣದಿಂದ. ಭಾರತದಲ್ಲಿ ಸಂವಿಧಾನದ ನೆಲೆಯಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನುಬಾಹಿರವಾದ ನಿಲುವು. ಡಬ್ಬಿಂಗ್ ನಿಷೇಧ ಎನ್ನುವ ನಿಲುವು ವಾಸ್ತವವಾಗಿ ಪ್ರಜಾಪ್ರಭುತ್ವ ವಿರೋಧಿಯಾದುದಾಗಿದೆ.


ಪ್ರೇಕ್ಷಕನೆಂಬ ಗ್ರಾಹಕ ಧ್ವನಿ


ತಾಂತ್ರಿಕವಾಗಿ ಸಾಧ್ಯವಿರುವಾಗ, ದೇಶದಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನಾಗಿಲ್ಲದಿರುವಾಗ ಪ್ರೇಕ್ಷಕನಿಗೆ ಡಬ್ ಆದ ಚಿತ್ರಗಳನ್ನು ನೋಡುವ ಅವಕಾಶ ಇರಬೇಕಾಗಿದೆ. ಡಬ್ಬಿಂಗ್ ಬೇಡ ಎನ್ನುವವರಿಗೆ ಸಂಘ ಸಂಸ್ಥೆಗಳಂತಹ ವೇದಿಕೆಗಳಿದ್ದು ಪ್ರತಿಭಟನೆಯನ್ನು ದಾಖಲಿಸುವುದು ಸುಲಭ. ಆದರೆ ಪ್ರೇಕ್ಷಕನಿಗೆ ಇಂತಹ ಯಾವುದೇ ವೇದಿಕೆ/ಅವಕಾಶ ಇಲ್ಲದಿರುವಾಗ ಆತ ತನ್ನ ನಿಲುವನ್ನು ಪತ್ರಿಕೆಗಳಿಗೆ ಬರೆಯುವ ಮೂಲಕ, ಮಿಂಬಲೆ ತಾಣಗಳ ಚರ್ಚೆಗಳಲ್ಲಿ ದನಿಯೆತ್ತುವ ಮೂಲಕ ತೋರಬಲ್ಲನಷ್ಟೆ. ಇದನ್ನುಪಯೋಗಿಸಿಕೊಂಡು ಡಬ್ಬಿಂಗಿಗೆ ಜನರ ಬೇಡಿಕೆಯಿಲ್ಲಾ, ಇದು ಕೆಲವರ ಅನಿಸಿಕೆ ಅಷ್ಟೇ ಎನ್ನುವುದು ಅಪ್ರಜಾಸತ್ತಾತ್ಮಕವಾದುದಾಗಿದೆ.


ಪ್ರಜಾಪ್ರಭುತ್ವದಲ್ಲಿ ಡಬ್ಬಿಂಗ್


ಪ್ರೇಕ್ಷಕನೆಂಬ ಗ್ರಾಹಕನ ಒಲವು ಒಂದು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವ ಮೂಲಕ ಅಥವಾ ಸೋಲಿಸುವ ಮೂಲಕ ವ್ಯಕ್ತವಾಗುತ್ತದೆ. ಹೀಗೆ ತೀರ್ಮಾನಿಸುವ ಅವಕಾಶವನ್ನು ಡಬ್ ಆದ ಚಿತ್ರಗಳಿಗೂ ನೀಡಬೇಕಾದ್ದು ಸಹಜನ್ಯಾಯವಾಗಿದೆ. ಡಬ್ಬಿಂಗ್ ಆದ ಚಿತ್ರಗಳ ಹಣೇಬರಹವನ್ನು ನಿರ್ಣಯಿಸುವ ಅವಕಾಶ ಪ್ರೇಕ್ಷಕ ಮಹಾಪ್ರಭುವಿಗೆ ಇರಬೇಕಾದ್ದೇ ಸರಿಯಾದುದಾಗಿದೆ. ನಿಜಕ್ಕೂ ಡಬ್ಬಿಂಗ್ ಎನ್ನುವುದು ಹಾನಿಕರ ಎನ್ನುವುದಾದಲ್ಲಿ ಆ ನಿಲುವನ್ನು ಕರ್ನಾಟಕದ ಜನರಲ್ಲಿ ಪ್ರಚುರಪಡಿಸಿ ಅವರೇ ಅಂತಹ ಚಿತ್ರಗಳನ್ನು ತಿರಸ್ಕರಿಸುವಂತೆ ಮಾಡುವುದರಲ್ಲಿದೆಯೇ ಹೊರತು ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸುವ ಸಂವಿಧಾನಬಾಹಿರವಾದ ನಡೆಯಲ್ಲಿಲ್ಲ!


ವಿಶ್ವಸಂಸ್ಥೆ ನಿಲುವು ಮತ್ತು ಭಾಷೆಯ ಉಳಿವು


ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯ ಮೂಲಕ ಪ್ರತಿಯೊಂದು ಭಾಷಿಕ ಜನರಿಗೂ ತನ್ನ ನುಡಿ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳಲು ಹಲವು ಹಕ್ಕುಗಳಿರುವುದನ್ನು ಗುರುತಿಸಿ ಎತ್ತಿ ಹಿಡಿದಿದೆ. ಅದರಲ್ಲಿ ಡಬ್ಬಿಂಗ್ ಎನ್ನುವುದನ್ನೂ ಕೂಡಾ ಒಂದು ಅಸ್ತ್ರವೆಂದಾಗಿಯೇ ಪರಿಗಣಿಸಲಾಗಿದೆ. ಯಾವುದೇ ಜನಾಂಗಕ್ಕೆ ತನ್ನ ಭಾಷೆಗೆ ಪರಭಾಷೆಯ ವಿಷಯ/ ಮಾಹಿತಿ ಮೊದಲಾದವುಗಳನ್ನು ತರ್ಜುಮೆ ಮಾಡುವ/ ಡಬ್ಬಿಂಗ್ ಮಾಡುವ ಹಕ್ಕಿದೆ ಎನ್ನುತ್ತದೆ ಸೆಕ್ಷನ್ ೪೪. ಅಂದರೆ ಡಬ್ಬಿಂಗ್ ಎನ್ನುವುದು ಸಂವಿಧಾನ ಬಾಹಿರವಾದುದೂ ಅಲ್ಲಾ, ಭಾಷೆಗೆ ಹಾನಿ ಮಾಡುವುದೂ ಅಲ್ಲ ಎನ್ನುವುದು ಇದರ ಸಾರ. ಕನ್ನಡತನಕ್ಕೆ ಡಬ್ಬಿಂಗ್ ಮಾರಕವಾದುದು ಎನ್ನುವ ವಾದವನ್ನು ನಾವು ಕೇಳಬಹುದಾಗಿದೆ. ವಾಸ್ತವ ಇದಕ್ಕೆ ವಿರುದ್ಧವಾಗಿದೆ.


ಕನ್ನಡತನ ಮತ್ತು ಡಬ್ಬಿಂಗ್


ಡಬ್ಬಿಂಗ್ ಇಲ್ಲದೇ ಹೋದರೆ ಪರಭಾಷೆಯ ಚಿತ್ರಗಳನ್ನು/ ಕಾರ್ಯಕ್ರಮಗಳನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ತಮಿಳಿನ, ತೆಲುಗಿನ, ಹಿಂದಿಯ, ಇಂಗ್ಲೀಷಿನ... ಇನ್ನಾವುದೇ ಭಾಷೆಯ ಕಾರ್ಯಕ್ರಮವನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ಕನ್ನಡವೊಂದಲ್ಲದೇ ಬೇರೆ ನುಡಿ ಅರಿಯದವರಿಗೆ ಇದು ತೊಡಕಿನ ವಿಷಯವಾಗಿದೆ. ಈಗ ನೀವೇ ಹೇಳಿ... ಕನ್ನಡಿಗನೊಬ್ಬ ತನ್ನೆಲ್ಲಾ ಮನರಂಜನೆಯನ್ನು ಕನ್ನಡದಲ್ಲಿಯೇ ಪಡೆದುಕೊಳ್ಳುವುದು ಕನ್ನಡಪರವೋ? ತನ್ನದಲ್ಲದ ನುಡಿಯಲ್ಲಿ ನೋಡುವುದೋ? ಇನ್ನೂ ತಮಾಶೆಯ ವಿಷಯವೆಂದರೆ ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಒಂದು ಇಂಗ್ಲೀಷ್ ಚಿತ್ರ ಡಬ್ಬಿಂಗ್ ಆಗಿ ತಮಿಳು, ತೆಲುಗು, ಹಿಂದೀ ಭಾಷೆಗಳಲ್ಲೂ ಬಿಡುಗಡೆಯಾಗುತ್ತದೆ. ಆದರೆ ಕನ್ನಡದಲ್ಲಿ ಮಾತ್ರಾ ಆಗುವುದಿಲ್ಲ. ಅಂದರೇನರ್ಥ? ನಾವು ಕನ್ನಡಿಗರಾಗಿ ಹುಟ್ಟಿರುವುದೇ ಪಾಪ ಎಂದು ಜನರಿಗೆ ಅನ್ನಿಸಿದರೆ ಅಚ್ಚರಿಯಿಲ್ಲ! ಭಾರತದಲ್ಲಿ ಎಲ್ಲಾ ಜನರಿಗೆ ಸಿಗುತ್ತಿರುವ, ಕನ್ನಡಿಗರಿಗೆ ವಂಚಿಸಲಾಗಿರುವ “ತಾಯ್ನುಡಿಯಲ್ಲಿ ,ಮನರಂಜನೆ ಪಡೆದುಕೊಳ್ಳುವ ಹಕ್ಕು” ಇಲ್ಲವಾಗಿರುವುದು ಡಬ್ಬಿಂಗ್ ಎನ್ನುವ ಕಾನೂನು ಬಾಹಿರವಾದ ನಿಲುವಿನಿಂದಾಗಿಯೇ ಆಗಿದೆ!


ವಾಸ್ತವವಾಗಿ ಡಬ್ಬಿಂಗ್ ವಿರೋಧಿಗಳು ಮುಂದಿಡುವ ಕನ್ನಡ ಸಂಸ್ಕೃತಿ ನುಡಿ ರಕ್ಷಣೆಗಾಗಿ ಡಬ್ಬಿಂಗ್ ಬೇಡ ಎನ್ನುವ ಮಾತು ಪೊಳ್ಳಿನದ್ದಾಗಿದೆ ಎಂದು ಇಂದಿನ ಮಚ್ಚು ಲಾಂಗುಗಳ, ರಿಮೇಕ್ ಸಾಗರಗಳ ಸಿನಿಮಾಗಳನ್ನು ನೋಡಿದರೆ ಅರಿವಾಗುತ್ತದೆ. ಚಿತ್ರರಂಗ ಸಮಾಜದ ಕನ್ನಡಿಯೇ ಹೊರತು ಅದರಿಂದಾಗಿಯೇ ಸಂಸ್ಕೃತಿ ರೂಪುಗೊಳ್ಳುತ್ತದೆ ಎನ್ನುವುದು ಬರೀ ಪೊಳ್ಳು ಮಾತಾಗಿದೆ. ಹಾಗಿದ್ದಿದ್ದರೆ ಇವತ್ತು ಕನ್ನಡಿಗರೆಲ್ಲಾ ಮಚ್ಚು ಲಾಂಗುಗಳ ಕ್ರಿಮಿನಲ್ಲುಗಳಾಗುತ್ತಿದ್ದರು! ಅಷ್ಟೇ.



ಇನ್ನು ಸಾವಿರಾರು ಜನರ ಹೊಟ್ಟೆಪಾಡು ಎನ್ನುವ ಆತಂಕ ಡಬ್ಬಿಂಗ್ ವಿರೋಧಿಗಳದ್ದು. ಹಿಂದೆ ಸಾರಾಯಿ, ಆನ್‌ಲೈನ್ ಲಾಟರಿಗಳು ನಿಷೇಧವಾದಾಗ ಸುಮಾರು ಮೂರುಲಕ್ಷ ಜನರು ಉದ್ಯೋಗ ಕಳೆದುಕೊಳ್ಳಬೇಕಾಯಿತು. ಅದರಿಂದ ಈಗ ಏನಾಯಿತು? ಅವರೆಲ್ಲಾ ಪರ್ಯಾಯ ಉದ್ಯೋಗ ಕಂಡುಕೊಳ್ಳಲಿಲ್ಲವೇ? ಈ ಹಿಂದೆ ಕಾಯಿನ್ ಬೂತುಗಳನ್ನು ನಡೆಸುತ್ತಿದ್ದವರೆಲ್ಲಾ ಮೊಬೈಲು ಫೋನುಗಳು ಬರಬಾರದು ಎಂದು ಗೂಂಡಾಗಿರಿ ಮಾಡಿದ್ದರೆ ಒಪ್ಪಲಾಗುತ್ತಿತ್ತೇ? ಹಾಗೇ ಡಬ್ಬಿಂಗ್ ಬೇಡ ಎನ್ನುವವರು ಸ್ಪರ್ಧೆ ಎದುರಿಸಲಾಗದೆ ಈ ನಿಲುವಿಗೆ ಬಂದಿದ್ದಾರೆನ್ನುವುದೇ ವಾಸ್ತವ ಎನ್ನಿಸುತ್ತದೆ. ಇಲ್ಲದಿದ್ದರೆ ಡಬ್ಬಿಂಗ್ ತಡೆಯಲು ಕಾನೂನುಬಾಹಿರ ದಾಳಿ, ಬೆದರಿಕೆಗಳಂತಹ ಕ್ರಮಗಳಿಗೆ ಅವರು ಮುಂದಾಗುತ್ತಿರಲಿಲ್ಲ. ಒಟ್ಟಿನಲ್ಲಿ, ಯಾವುದೇ ಉದ್ದಿಮೆಯ ಉದ್ದೇಶವಾಗಿರುವ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ತನ್ನಿಷ್ಟದ ಸರಕುಗಳನ್ನು ಕೊಳ್ಳುವ ಹಕ್ಕು ಇರಬೇಕು. ಪ್ರೇಕ್ಷಕನಿಗೆ ಡಬ್ಬಿಂಗ್ ಸಿನಿಮಾ ನೋಡುವ ಮೆಚ್ಚುವ ತಿರಸ್ಕರಿಸುವ ಹಕ್ಕು ಇರಬೇಕು. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಅದಿಲ್ಲ! ಬರಬೇಕು! ಬರಲೇಬೇಕು!!


(ಪ್ರಜಾವಾಣಿ ದಿನಪತ್ರಿಕೆಯ ೨೮.೦೪.೨೦೧೨ರ ಸಂಚಿಕೆಯ ಅಂತರಾಳ ಪುಟದಲ್ಲಿ ಪ್ರಕಟವಾದ ಬರಹ)

ಗ್ರಾಹಕಸೇವೆ ದಕ್ಕಿಸಿಕೊಳ್ಳಲು "ಮಾಹಿತಿ ಹಕ್ಕು" ಎಂಬ ಮಹತ್ವದ ಅಸ್ತ್ರ!

ಪ್ರತಿವರ್ಷ ಮಾರ್ಚ್ ೧೫ನ್ನು “ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬ ಗ್ರಾಹಕನಿಗೂ ಇರುವ ಹಕ್ಕುಗಳನ್ನು ಒದಗಿಸಿಕೊಡಬೇಕು ಎಂದು ವಿಶ್ವಸಂಸ್ಥೆ, ಸದಸ್ಯ ದೇಶಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಕೊಟ್ಟಿದೆ. ಅವುಗಳಲ್ಲಿ ಪ್ರಮುಖವಾದ ಕೆಲವು ವಿಷಯಗಳು ಗ್ರಾಹಕರ ಸುರಕ್ಷತೆ, ಆರ್ಥಿಕ ಹಕ್ಕುಗಳ ರಕ್ಷಣೆ, ಗ್ರಾಹಕರಿಗೆ ಮಾಹಿತಿ, ಪರಿಣಾಮಕಾರಿಯಾದ ದೂರು ನಿರ್ವಹಣಾ ವ್ಯವಸ್ಥೆಯೇ ಮೊದಲಾದವುಗಳನ್ನು ಒಳಗೊಂಡಿದೆ..

ನಮ್ಮ ಪರಿಸ್ಥಿತಿ ಹೀಗಿದೆ...

ಈ ಎಲ್ಲಾ ಹಕ್ಕುಗಳ ಬಗ್ಗೆ ಅವರೇನೋ ಸೂಚನೆ ಕೊಟ್ಟಿದಾರೆ, ಆದರೆ ಭಾರತದಲ್ಲಿ ಈ ಹಕ್ಕುಗಳು ಯಾವ ರೂಪದಲ್ಲಿ ನಮಗೆ ದಕ್ಕಿವೆ ಅಂತನ್ನೋಕೆ ಈ ಕೆಳಗಿನ ಚಿತ್ರಗಳನ್ನು ನೋಡಿದರೆ ಅರ್ಥವಾಗುತ್ತದೆ...

 ಗ್ರಾಹಕ ಸುರಕ್ಷತೆ ಅಂದರೆ ಬಳಸುವ ವಸ್ತುಗಳ ಸುರಕ್ಷತಾ ಮಾಹಿತಿಯನ್ನು ಗ್ರಾಹಕರಿಗೆ ಕೊಡಬೇಕೆನ್ನೋ ನಿಯಮಾನ ಕಟ್ಟುನಿಟ್ಟಾಗಿ ಪಾಲಿಸಿರೋ ಈ ಫೋಟೋ ನೋಡಿ. 
ಜನರು ಔಷಧಿಗಳನ್ನು ಕೊಳ್ಳುವಾಗ ಅದನ್ನು ಹೇಗೆ ಬಳಸಬೇಕು? ಅದರಲ್ಲಿ ಏನಿದೆ? ಏನು ಎಚ್ಚರ ವಹಿಸಬೇಕು? ಅದರ ಬದಲಿ ಪರಿಣಾಮವೇನು? ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳೋ ಹಕ್ಕನ್ನು ಹೊಂದಿದ್ದಾರೆ, ಹಾಗಾಗಿ ಈ ಮಾಹಿತಿಯನ್ನು ಕೊಡಲೇಬೇಕು ಎನ್ನೋ ಗ್ರಾಹಕ ನಿಯಮವನ್ನು ಹೀಗೆ ಪೂರೈಸಿದ್ದಾರೆ... ನೋಡಿ.


ಇನ್ನು ನಮ್ಮದೇ ಘನ ಭಾರತ ಸರ್ಕಾರವು ಪರದೇಶಿ ಭಾಷೇಲಿ ಹ್ಯಾಗೆ ತಾನೇ ಜನರಿಗೆ ಸುರಕ್ಷತೆ ಬಗ್ಗೆ ಹೇಳೀತು? ಅದಕ್ಕೆ ಭಾರತೀಯ ಭಾಷೇಲೇ ಹೇಳ್ತಿದಾರೆ ನೋಡ್ಕೊಳ್ಳಿ... ಆದ್ರೆ ಇದು ನಮ್ಮ ಕರ್ನಾಟಕದ ಕನ್ನಡದ ಜನಪ್ರಿಯ ದಿನಪತ್ರಿಕೆಯಲ್ಲಿ ಬಂದಿರೋ ಜಾಹೀರಾತು... 

‘ನಮ್ಮೂರ ಮೆಟ್ರೋ ರೈಲಲ್ಲಿ ಹಿಂದೀ ಯಾಕ್ರೀ ಬಳುಸ್ತೀರಾ’ ಅಂತಂದೋರಿಗೆಲ್ಲಾ “ನಿಮ್ಮ ಹಿಂದೀ ದ್ವೇಶ ನಿಲ್ಲಿಸಿ” ಅನ್ನೋ ಉತ್ತರ ಮುಖಕ್ಕೆಸೆದಿದ್ದ ನಮ್ಮ ಮೆಟ್ರೋ ಈಗ ಬಳಸುತ್ತಿರೋ ವಾರ್ಷಿಕ ಪಾಸ್ ಹೀಗಿದೆ ನೋಡಿ...


ಬರೀ ಕನ್ನಡವೊಂದನ್ನೇ ಕಲಿತಿರೋ ಕರ್ನಾಟಕದ ಸಾಮಾನ್ಯ ಕನ್ನಡಿಗನಿಗೆ ತನ್ನದೇ ನಾಡಿನಲ್ಲಿ ದಕ್ಕಿರೋ ಗ್ರಾಹಕ ಸೇವೆಯ ಈ ಹಕ್ಕುಗಳ ಪರಿಯನ್ನು ನೋಡಿರಿ! ಇಂಥಾ ಗ್ರಾಹಕ ಸೇವೆ ಪಡೆದುಕೊಳ್ತಿರೋ ಕನ್ನಡಿಗನ ಹಣೇಬರಹಕ್ಕೆ ಏನು ಹೇಳಬೇಕೂ ಗುರೂ?

ಹಾಗಾದ್ರೆ ಏನು ಮಾಡಬಹುದು?

ನಾವೇ ಎಚ್ಚರಾಗಬೇಕು. ಸಾಧ್ಯವಾದಲ್ಲೆಲ್ಲಾ ಸಂಬಂಧಿಸಿದವರಿಗೆ ನಮ್ಮ ಹಕ್ಕೊತ್ತಾಯದ ಕೂಗನ್ನು ಮುಟ್ಟಿಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜನದನಿಯ ಮೂಲಕ ಬದಲಾವಣೆ ತರುವುದು ಒಂದು ಬಗೆಯಾದರೆ ಮತ್ತೊಂದು ಬಗೆ ಕಾನೂನು ಹೋರಾಟ... ಹೌದೂ! ಇಂಥಾ ಹೋರಾಟಗಳು ಬೇರೆ ಬೇರೆ ಕಡೆ ನಡೆದಿವೆ. ಆಯಾ ಜನರ ನುಡಿಯಲ್ಲಿಯೇ ಸೇವೆ ಸಿಗುವಂತೆ ನ್ಯಾಯಾಲಯಗಳು ತೀರ್ಪನ್ನೂ ನೀಡಿವೆ. ಹೀಗೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿರೋ ಅಸ್ತ್ರವೆಂದರೆ “ ಮಾಹಿತಿ ಹಕ್ಕು ಕಾಯ್ದೆ – ೨೦೦೫”. 

ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿ:

ಇದರಡಿಗೆ ಕೇಂದ್ರಸರ್ಕಾರದ ಮತ್ತು ರಾಜ್ಯಸರ್ಕಾರದ ಎಲ್ಲಾ ಸಂಸ್ಥೆ-ಇಲಾಖೆಗಳು. ಸರ್ಕಾರದ ಮೂಲಕ ಸವಲತ್ತು ಪಡೆದಿರುವ ಯಾವುದೇ ಸರಕಾರೇತರ ಸಂಸ್ಥೆ ಅಥವಾ ಖಾಸಗಿ ಆಸ್ಪತ್ರೆ, ಶಾಲೆ, ಕಾಲೇಜು ದೇವಸ್ಥಾನ, ದತ್ತಿ ಸಂಘಗಳೇ ಮುಂತಾದವುಗಳಿಂದಲೂ ಮಾಹಿತಿಯನ್ನು ಪಡೆದುಕೊಳ್ಳಬಹುದು.


ಮಾಹಿತಿ ಹಕ್ಕು ಕಾಯ್ದೆ – ೨೦೦೫

ಮಾಹಿತಿ ಹಕ್ಕು ಕಾಯಿದೆಯನ್ನು ೨೦೦೫ರಿಂದ ಜಾರಿಗೆ ತರಲಾಗಿದೆ. ಈ ಕಾಯಿದೆಯಡಿಗೆ ರಾಜ್ಯಸರ್ಕಾರಿ, ಕೇಂದ್ರಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಸರ್ಕಾರಿ ಸಹಯೋಗದ ಸಂಸ್ಥೆಗಳು ಒಳಪಡುತ್ತವೆ. ಈ ಕಾಯಿದೆಯ ಅನ್ವಯ ನಾಗರಿಕರು ಕೇಳುವ ಪ್ರಶ್ನೆಗಳಿಗೆ ಸಂಸ್ಥೆಗಳು ಸರಿಯಾದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ನೀಡಲೇಬೇಕಾಗಿದೆ. ಇದಕ್ಕೆಂದೇ ಪ್ರತಿಇಲಾಖೆಗಳಲ್ಲೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ. ಮಾಹಿತಿಯನ್ನು ನೀಡಲು ವಿಫಲರಾದ ಸಂಸ್ಥೆಗಳ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಈ ಅರ್ಜಿಯನ್ನು ವ್ಯಕ್ತಿಯೊಬ್ಬ ಸಲ್ಲಿಸಬಹುದು. ಯಾವ ಅಧಿಕಾರಿಯೂ ಯಾವ ಕಾರಣಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎಂದು ಕೇಳುವ ಅಧಿಕಾರವನ್ನು ಹೊಂದಿರುವುದಿಲ್ಲ.

ಮಾಹಿತಿ ಹಕ್ಕು ಅರ್ಜಿಯನ್ನು ಹೇಗೆ ಸಲ್ಲಿಸುವುದು?

ಅರ್ಜಿಯನ್ನು ಒಂದು ಖಾಲಿ ಹಾಳೆಯ ಮೇಲೆ ಬರೆದು ಸಿದ್ಧಪಡಿಸಬಹುದು ಅಥವಾ ಕೆಲವು ಇಲಾಖೆಗಳ ಕಚೇರಿಗಳಲ್ಲಿ ಮಾದರಿ ಅರ್ಜಿಗಳೂ ಸಿಗಲಿದ್ದು ಅವನ್ನು ಬಳಸಿಯೂ ಅರ್ಜಿಯನ್ನು ಸಿದ್ಧಪಡಿಸಬಹುದು. ಅರ್ಜಿಯನ್ನು ಒಂದು ನಿರ್ದಿಷ್ಟ ಮಾದರಿಯಲ್ಲೇ  ಸಲ್ಲಿಸಬೇಕು ಎಂದು ಹೇಳುವ ಅಧಿಕಾರವನ್ನು ಸಂಸ್ಥೆಗಳು ಹೊಂದಿಲ್ಲ. ಆದರೆ ಒಂದು ಮಾದರಿಯನ್ನು ಸಲಹೆ ಮಾಡಲು ಸಂಸ್ಥೆಗಳಿಗೆ ಸ್ವತಂತ್ರವಿದೆ. ಆದರೆ ಆ ಮಾದರಿಯನ್ನು ಬಳಸುವುದು ಬಿಡುವುದು ಅರ್ಜಿದಾರರ ಇಚ್ಛೆಗೆ ಬಿಟ್ಟಿದ್ದು.  ಅರ್ಜಿಯನ್ನು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಪ್ರಶ್ನೆಗಳನ್ನು ಕೇಳಲು ಬಳಸಬಹುದು. ಬೇರೆ ಬೇರೆ ವಿಶಯಕ್ಕೆ ಸಂಬಂದಿಸಿದ ಮಾಹಿತಿ ಬೇಕಾದಲ್ಲಿ ಬೇರೆ ಬೇರೆ ಅರ್ಜಿಯನ್ನು ಸಲ್ಲಿಸಬೇಕು.  ಅರ್ಜಿಯನ್ನು ಖುದ್ದಾಗಿ ಇಲಾಖೆಯ ಕಚೇರಿಗೆ ಹೋಗಿ ಅಥವಾ ರಿಜಿಸ್ಟರ್ಡ್ ಅಂಚೆಯ ಮೂಲಕ ತಲುಪಿಸಬಹುದು. ಖುದ್ದಾಗಿ ಸಲ್ಲಿಸಿದ ಪ್ರತಿ ಅರ್ಜಿಗೆ ೧೦ ರೂಪಾಯಿ ಶುಲ್ಕವನ್ನು ಕೊಡಬೇಕು ಮತ್ತು ಮುಖ್ಯವಾಗಿ ಕೊಟ್ಟ ಹಣಕ್ಕೆ ರಶೀತಿಯನ್ನು ಪಡೆಯಬೇಕು. ಈ ರಶೀತಿಯೇ ಅರ್ಜಿ ಸಲ್ಲಿಸಿದ್ದಕ್ಕೆ ಸಾಕ್ಷಿ. ಅಥವಾ ತಾವೇನಾದರೂ ರಿಜೆಸ್ಟರ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಲ್ಲಿ ೧೦ ರೂಪಾಯಿಯ ಪೋಸ್ಟಲ್ ಆರ್ಡರ್ ಅನ್ನು ಅರ್ಜಿಯ ಜೊತೆಗೆ ಕಳುಹಿಸಬೇಕು. ಮುಖ್ಯವಾಗಿ ರಿಜಿಸ್ಟರ್ ಪೋಸ್ಟ್ ಮಾಡಿದ ರಶೀತಿಯೇ ತಾವು ಅರ್ಜಿ ಸಲ್ಲಿಸಿದ್ದಕ್ಕೆ ಸಾಕ್ಷಿ. ತಾವೇನಾದರೂ ಯಾವುದಾರರು ಮಾಹಿತಿಯ ಜೆರಾಕ್ಸ್ ಪ್ರತಿಯನ್ನು ಕೇಳಿದ್ದರೆ ಪುಟ ಒಂದಕ್ಕೆ ೨ ರೂಗಳನ್ನು ನೀಡಬೇಕು. ಅದೂ ಕೂಡಾ ಸಂಬಂಧಪಟ್ಟ ಇಲಾಖೆಗಳು ಸೂಚಿಸಿದ ನಂತರ. ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಲ್ಲಿ ಮಾಹಿತಿ ಹಕ್ಕು ಪ್ರಾಧಿಕಾರಕ್ಕೆ ದೂರು ನೀಡಬಹುದು. 

ಮಾಹಿತಿ ಹಕ್ಕು ಅರ್ಜಿಯನ್ನು ಯಾರಿಗೆ ಸಲ್ಲಿಸಬೇಕು?

ಪ್ರತಿಯೊಂದು ಸಂಸ್ಥೆಯಲ್ಲೂ ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರಿಸಲೆಂದು ಸಾರ್ವಜನಿಕ ಮಾಹಿತಿ/ ಸಂಪರ್ಕ ಅಧಿಕಾರಿಗಳನ್ನು ನೇಮಿಸಿರುತ್ತಾರೆ. ಹಾಗೇನಾದರೂ ಆ ಅಧಿಕಾರಿಯ ನೇಮಕ ಆಗಿಲ್ಲದಿದ್ದಲ್ಲಿ ಅಥವಾ ಅಧಿಕಾರಿಯ ವಿಳಾಸ ತಿಳಿಯದಿದ್ದಲ್ಲಿ ನೇರವಾಗಿ ಸಂಸ್ಥೆಯ ಅಥವಾ ಇಲಾಖೆಯ  ಮುಖ್ಯಸ್ಥರಿಗೆ ಸಲ್ಲಿಸಬಹುದು. ಇಲಾಖೆಯ ಮಿಂಬಲೆಗಳಲ್ಲಿ ಸಾರ್ವಜನಿಕ ಮಾಹಿತಿ/ ಸಂಪರ್ಕ ಅಧಿಕಾರಿ ಅಥವಾ ಮುಖ್ಯಸ್ಥರ ವಿಳಾಸವನ್ನು ಪಡೆದುಕೊಳ್ಳಬಹುದು. ಸಾರ್ವಜನಿಕ ಮಾಹಿತಿ/ ಸಂಪರ್ಕ ಅಧಿಕಾರಿಗಳು, ಅರ್ಜಿ ಸಲ್ಲಿಸಿದ ದಿನದಿಂದ ೩೦ ದಿನದ ಒಳಗೆ ಉತ್ತರಿಸಬೇಕು. 

ಮಾಹಿತಿ ತಲುಪದಿದ್ದಲ್ಲಿ ಏನು ಮಾಡಬಹುದು?

ಮಾಹಿತಿ ತಲುಪದಿದ್ದಲ್ಲಿ ಅಥವಾ ತಲುಪಿದ ಮಾಹಿತಿ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಮೊದಲ ಮೇಲ್ಮನವಿಯನ್ನು  ಅವಧಿ ಮುಗಿದ ೩೦ ದಿನದ ಒಳಗೆ ಅಥವಾ ಮಾಹಿತಿ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಮಾಹಿತಿ ಸಿಕ್ಕಿದ ೩೦ ದಿನದ ಒಳಗೆ ಸಲ್ಲಿಸಬಹುದು. ಪ್ರತಿಯೊಂದು ಸಂಸ್ಥೆಗಳಲ್ಲಿ ಮೊದಲ ಮೇಲ್ಮನವಿ ಅಧಿಕಾರಿಯನ್ನು ನೇಮಿಸಿರುತ್ತಾರೆ. ಈ ಅಧಿಕಾರಿಯು ಸಾರ್ವಜನಿಕ ಮಾಹಿತಿ/ ಸಂಪರ್ಕ ಅಧಿಕಾರಿಗಳಿಗಿಂತ ಹಿರಿಯ ಸ್ಥಾನದಲ್ಲಿರುತ್ತಾರೆ. ಕರ್ನಾಟಕ ಸರ್ಕಾರದ ನಿಯಮದಂತೆ ಮೊದಲ ಮೇಲ್ಮನವಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಮೊದಲ ಮೇಲ್ಮನವಿ ಪ್ರಾದಿಕಾರಕ್ಕೆ  ೪೫ ದಿನಗಳಲ್ಲಿ ಮಾಹಿತಿ ನೀಡಬೇಕಾದ ಸಮಯದ ಮಿತಿಯಿದೆ. ಮೇಲ್ಮನವಿ ಪ್ರಾಧಿಕಾರವು ಮೊದಲ ಮೇಲ್ಮನವಿ ವಿಚಾರಣೆಗೆ ಅಗತ್ಯವಿಲ್ಲದೇ ಅರ್ಜಿದಾರರನ್ನು ಕರೆಯುವಂತಿಲ್ಲ.

ಮೊದಲ ಮೇಲ್ಮನವಿಗೆ ಕೂಡ ಉತ್ತರ ಬರದಿದ್ದಲ್ಲಿ ಏನು ಮಾಡಬೇಕು?

ಮೊದಲ ಮೇಲ್ಮನವಿಗೂ ಕೂಡ ಯಾವುದೇ ಉತ್ತರ ಬರದಿದ್ದಲ್ಲಿ ಮೊದಲನೇ ಮೇಲ್ಮನವಿಯ ಅವಧಿ ಮುಗಿದ ೯೦ ದಿನಗಳ ಒಳಗೆ ಕೇಂದ್ರಸರ್ಕಾರ ಅಥವಾ ರಾಜ್ಯಸರ್ಕಾರದ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬೇಕು. ಇದನ್ನು ಮೇಲ್ಮನವಿಯ ರೂಪದಲ್ಲಾಗಲೀ ದೂರಿನ ರೂಪದಲ್ಲಾಗಲೀ ಅಥವಾ ಎರಡನ್ನೂ ಸಲ್ಲಿಸಬಹುದಾಗಿದೆ. ಎರಡನೇ ಮೇಲ್ಮನವಿಯನ್ನು ತೀರ್ಮಾನ ಮಾಡಲು ಯಾವುದೇ ಕಾಲಮಿತಿಯಿಲ್ಲ. ಆದ್ದರಿಂದ ನೀವು ಮಾಹಿತಿ ಆಯೋಗವನ್ನು ಸಂಪರ್ಕಿಸಿ ನಿಮ್ಮ ಮೇಲ್ಮನವಿಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು.  ವಿಪರೀತ ವಿಳಂಬವಾದಲ್ಲಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಆಯೋಗವನ್ನು ಕೇಳಿಕೊಳ್ಳಬಹುದು ಅಥವಾ ಹೈಕೋರ್ಟ್ ಅಥವಾ ಸುಪ್ರೀಮ್‌ಕೋರ್ಟ್‌ಗೆ ಕೂಡ ಮೊರೆ ಹೋಗುವ ಆಯ್ಕೆ ನಿಮಗೆ ಇದೆ.  ಎರಡನೇ ಮೇಲ್ಮನವಿಯ ವಿಚಾರಣೆಯ ವೇಳೆ ಇಚ್ಛೆಪಟ್ಟಲ್ಲಿ ಅರ್ಜಿದಾರರೂ ಸಹ ಭಾಗವಹಿಸಬಹುದು. ಎರಡನೇ ಮೇಲ್ಮನವಿಯ ಫಲಶ್ರುತಿಯ ಬಗ್ಗೆ ತಮಗೆ ತೃಪ್ತಿಯಿಲ್ಲದಿದ್ದರೆ ವಿವರವಾದ ಕಾರಣ ನೀಡಿ ಪುನರ್ವಿಮರ್ಶೆಗೆ ಮತ್ತೆ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಹೈಕೋರ್ಟ್ ಅಥವಾ ಸುಪ್ರೀಮ್ ಕೋರ್ಟ್‌ಗೆ ಮೇಲ್ಮನವಿ ಮಾಡಿ ರಿಟ್ ಅರ್ಜಿ ಸಲ್ಲಿಸಬಹುದು. ರಾಜ್ಯಸರ್ಕಾರಕ್ಕೆ ಸಂಬಂಧಿಸಿದ ಮನವಿಯನ್ನು ರಾಜ್ಯ ಆಯೋಗಕ್ಕೂ ಕೇಂದ್ರಕ್ಕೆ ಸಂಬಂಧಿಸಿದ್ದನ್ನು ಕೇಂದ್ರ ಆಯೋಗಕ್ಕೂ ಸಲ್ಲಿಸಬಹುದೇ ಹೊರತು ಒಂದು ಇನ್ನೊಂದರ ಅಧೀನವಲ್ಲ.

ಉತ್ತರ ನೀಡದ ಅಧಿಕಾರಿಗಳಿಗೆ ದಂಡವಿದೆಯೇ?

ಹೌದು! ಕಾರಣವಿಲ್ಲದೆ ಮಾಹಿತಿಯನ್ನು ನೀಡದೆ ಇರುವುದು ಮಾಹಿತಿ ನಿರಾಕರಣೆಗೆ ಸಮವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಹೀಗೆ ಮಾಹಿತಿ ನೀಡಲು ವಿಫಲನಾಗುವ ಅಧಿಕಾರಿಯು ದಂಡನೆಗೆ ಅರ್ಹನಾಗಿದ್ದಾನೆ. ಎರಡನೇ ಮೇಲ್ಮನವಿಯನ್ನು ಸಲ್ಲಿಸುವಾಗಲೇ ಪರಿಹಾರಕ್ಕಾಗಿಯೂ ಬೇಡಿಕೆ ಇಡಬಹುದಾಗಿದೆ. ದಿನವೊಂದಕ್ಕೆ ೨೫೦/- ರೂಪಾಯಿ ದಂಡ (ಹೆಚ್ಚೆಂದರೆ ೨೫,೦೦೦/-) ತೆರಲು ಅಧಿಕಾರಿ ಬಾಧ್ಯನಾಗಿರುತ್ತಾನೆ.

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಳಾಸ: ೩ ನೇ ಮಹಡಿ, ೩ ನೇ ಸ್ಟೇಜ್ , ಬಹುಮಹಡಿ ಕಟ್ಟಡ(MS Building) ಡಾ. ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧

ಕೇಂದ್ರ ಮುಖ್ಯಮಾಹಿತಿ ಆಯೋಗದ ವಿಳಾಸ: ಮುಖ್ಯ ಮಾಹಿತಿ ಆಯುಕ್ತರು, ಕೇಂದ್ರ ಮಾಹಿತಿ ಆಯೋಗ, ೪ ನೇಬ್ಲಾಕ್, ೫ ನೇಮಹಡಿ, ಹಳೇ ಜೆ.ಎನ್.ಯು. ಆವರಣ. ದೆಹಲಿ.

ಕನ್ನಡಿಗರು ಮಾಹಿತಿ ಹಕ್ಕು ಕಾಯ್ದೆಯನ್ನು ಹೆಚ್ಚು ಹೆಚ್ಚು ಬಳಸಿ ಗ್ರಾಹಕಸೇವೆಯಲ್ಲಿ ಕನ್ನಡದ ಬಳಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ಇನ್ನೇಕೆ ತಡಾ... ಮಾಹಿತಿ ಹಕ್ಕು ಸಹಾಯ ಸಂಸ್ಥೆಗಳ/ ಕಾನೂನು ತಜ್ಞರ ಸಹಾಯದೊಂದಿಗೆ ಇವತ್ತೇ ಶುರು ಮಾಡ್ಕೊಳೋಣ್ವಾ... ಗುರೂ!




Related Posts with Thumbnails