ಕನ್ನಡ ನೆಲದಲ್ಲಿನ ಕೆಲಸ - ಕನ್ನಡಿಗರ ಹಕ್ಕು!


ನಾಳೆ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಿಂದೊಂದು ಮೆರವಣಿಗೆ ಹೊರಡಲಿದೆ. ಇದು ಸ್ವಾತಂತ್ರ್ಯ ಉದ್ಯಾನದವರೆಗೂ ಸಾಗಲಿದ್ದು "ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ..." ಎಂಬ ಹಕ್ಕೊತ್ತಾಯವನ್ನು ಹೊತ್ತು ಸಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಏರ್ಪಡಿಸಿರುವ ಈ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದು ಕನ್ನಡಿಗರ ಬದುಕು ಹಸನುಗೊಳಿಸುವ ಸಲುವಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಹಕ್ಕೊತ್ತಾಯವಾಗಿದೆ.

ಈ ಹಕ್ಕೊತ್ತಾಯ ಅಸಹಜವೇನು?!

ನಮ್ಮ ನಾಡಲ್ಲಿರುವ ಸಂಪನ್ಮೂಲಗಳನ್ನು ಕಡಿಮೆ ಬೆಲೆಗೆ/ ಉಚಿತವಾಗಿ ಸರ್ಕಾರ ಕೊಡುವುದೇ ಇಲ್ಲಿನ ಜನರಿಗೆ ಕೆಲಸದ ಅವಕಾಶ ಸಿಗಬೇಕೆಂದು. ಆ ಮೂಲಕ ಜನರ ಬದುಕು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು. ಆದರೆ ಇಲ್ಲಿ ನಮ್ಮ ಜನ ಎಂದರೆ ಯಾರು ಎನ್ನುವುದರಲ್ಲೇ ಗೊಂದಲ ಹುಟ್ಟುಹಾಕಿದ ವ್ಯವಸ್ಥಿತ ಕ್ರಿಯೆ ನಡೆದಿದೆ. ಈ ಕಾರಣದಿಂದಾಗಿಯೇ ನಮ್ಮ ನಾಡಿಗೆ ಕೇಂದ್ರಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು ಬಂದಾಗ "ಓಹೋ ಆ ಸಂಸ್ಥೆ ಬಂತು... ಆಹಾ ಈ ಸಂಸ್ಥೆ ಬಂತು" ಎಂದು ಹಿಗ್ಗುವ ಹಾಗೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ! ಯಾಕೆಂದರೆ ಹೀಗೆ ಬರುವ ಉದ್ದಿಮೆಗಳು ಉದ್ದಿಮೆಯ ಜೊತೆಯಲ್ಲಿ ಸಾವಿರಾರು ಹೊರನಾಡಿನವರನ್ನು ನಮ್ಮ ನಾಡಿಗೆ ವಲಸೆ ಮಾಡಿಸಿದೆ. ನಮ್ಮ ಜನರ ಕೆಲಸದ ಅವಕಾಶಗಳನ್ನು ಕಳೆದು ಹಾಕುವುದರ ಜೊತೆಯಲ್ಲೇ ನಮ್ಮೂರಿನ ಜನಲಕ್ಷಣವನ್ನು ಇದು ಬದಲಿಸಿಹಾಕಿದೆ. ಭಾರತದ ಸಂವಿಧಾನದ ರೀತ್ಯಾ "ಕರ್ನಾಟಕದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು" ಎಂಬ ಈ ಹಕ್ಕೊತ್ತಾಯ ಅಸಂವಿಧಾನಿಕವಾದುದೂ, ರಾಷ್ಟ್ರೀಯವಾದಿಗಳ ರೀತ್ಯಾ ಇದು ಸಂಕುಚಿತ ಬುದ್ಧಿಯದ್ದೂ ಆಗಿ ಕಾಣಬಹುದು. ಆದರೆ ನ್ಯಾಯದ ದೃಷ್ಟಿಯಲ್ಲಿ ಅತ್ಯಂತ ಸಹಜವೂ, ಸರಿಯೂ ಆದುದಾಗಿದೆ. ಇಷ್ಟಕ್ಕೂ ನಮ್ಮೂರಿನ ಜನರಿಗೆ ಕೆಲಸ ಒದಗಿಸದ, ನಮ್ಮ ಜನರ ಬದುಕನ್ನು ಹಸನು ಮಾಡುವ ಉದ್ದೇಶವಿರದ ಯಾವುದೇ ಉದ್ದಿಮೆಯಾದರೂ ನಮ್ಮ ನಾಡಿಗೆ ಏಕೆ ಬೇಕು ಎಂಬುದು ಸರಳವಾದ ನೇರತರ್ಕವಾಗಿದೆ!

ಸರೋಜಿನಿ ಮಹಿಷಿ ವರದಿ ಮತ್ತು ಕೆಲಸದಲ್ಲಿ ಮೀಸಲು!

ಡಾ. ಸರೋಜಿನಿ ಮಹಿಷಿಯವರ ಮುಂದಾಳ್ತನದಲ್ಲಿ ಸ್ಥಳೀಯರಿಗೆ ಕೆಲಸದಲ್ಲಿ ಮೀಸಲಾತಿ ನೀಡುವ ಬಗ್ಗೆ ಒಂದು ಅಧ್ಯಯನ ನಡೆಸಿ ವರದಿಯನ್ನು ಕರ್ನಾಟಕ ರಾಜ್ಯಸರ್ಕಾರದ ವತಿಯಿಂದ ತರಿಸಿಕೊಳ್ಳಲಾಗಿತ್ತು. ವರದಿಯಲ್ಲಿ ಅಂದಿನ ಕಾಲಕ್ಕೆ ಹೊಂದುವಂತೆ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮೀಸಲು ಇರಬೇಕು ಎಂದೂ ಬರೆಯಲಾಗಿತ್ತು. ಈ ವರದಿ ಸಲ್ಲಿಕೆಯಾಗಿ ೨೮ ವರ್ಷಗಳೇ ಆದವು. ಇದುವರೆಗಿನ ಯಾವುದೇ ಸರ್ಕಾರಕ್ಕೂ ಈ ವರದಿಯನ್ನು ಜಾರಿಮಾಡಲು ಸಾಧ್ಯವಾಗಿಲ್ಲ. ಒಂದು ಜನಪರವಾದ ವರದಿಯನ್ನು ಇದುವರೆವಿಗೂ ಜಾರಿ ಮಾಡಲಾಗದಿರುವುದಕ್ಕೆ ರಾಜಕೀಯ ಇಚ್ಚಾಶಕ್ತಿ ಮತ್ತು ಚಾಣಾಕ್ಷತನದ ಕೊರತೆ ಕಾರಣವೆನ್ನದೇ ವಿಧಿಯಿಲ್ಲಾ! "ಕರ್ನಾಟಕ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲಿ" ಎನ್ನುವುದು ಸರಿಯಾದ ಹಕ್ಕೊತ್ತಾಯವೇ ಆಗಿದೆ. ಇಲ್ಲವೇ ಸರ್ಕಾರಕ್ಕೆ ಈ ವರದಿಯನ್ನು ಜಾರಿ ಮಾಡಲು ತಾಂತ್ರಿಕವಾದ ಅಡ್ಡಿಗಳಿದ್ದರೆ ವರದಿಯನ್ನು ತಿರಸ್ಕರಿಸಲಿ.. ಇನ್ನು ಈ ವರದಿ ಇಂದಿನ ದಿನಕ್ಕೆ ಹೊಂದುವಂತಿಲ್ಲಾ ಎನ್ನುವುದಾದರೆ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ ಸಂವಿಧಾನದ ರೀತಿಯೇ ಸ್ಥಳೀಯರಿಗೆ ಕೆಲಸ ಕೊಡಿಸಿಕೊಡಬಲ್ಲ ನೀತಿಗಳನ್ನು ರೂಪಿಸಲು ಬೇಕಾದ ಸಲಹೆಗಳನ್ನು ಪಡೆದುಕೊಳ್ಳಲಿ. ಒಟ್ಟಿನಲ್ಲಿ ಆದಷ್ಟು ಬೇಗನೆ ಸರಿಯಾದ ತೀರ್ಮಾನ ಕೈಗೊಳ್ಳಲಿ. ಈ ಆಶಯದೊಡನೆ ನಾಳೆ ನಡೆಯಲಿರುವ ಮೆರವಣಿಗೆ ಯಶಸ್ವಿಯಾಗಲಿ. ಯಾರ ಬಗ್ಗೆಯೇ ಆಗಲಿ ನಿಜವಾದ ಕಾಳಜಿಯಿದ್ದರೆ ಅಂಥವರ ಆರ್ಥಿಕ ಸಬಲತೆಗಾಗಿ ದುಡಿಯುವುದು ಸೂಕ್ತವಾಗುತ್ತದೆ. ನಾಳಿನ ಪ್ರತಿಭಟನಾ ಕಾರ್ಯಕ್ರಮ ಕನ್ನಡಿಗರ ನಿಜವಾದ ಏಳಿಗೆಗೆ ಕಾರಣವಾಗಬಲ್ಲುದಾದ, ಅನಿಯಂತ್ರಿತ ವಲಸೆ ತಡೆ- ಬಡತನ ನಿರ್ಮೂಲನೆ - ಆರ್ಥಿಕ ಏಳಿಗೆಗಳಿಗೆ ಕಾರಣವಾಗಬಲ್ಲ ಮಹತ್ವದ ಕಾರ್ಯಕ್ರಮವಾಗಿದೆ. ಈ ಹೋರಾಟ ಗೆಲ್ಲಲಿ!

ಕೊನೆಹನಿ: ಜಪಾನಿನಲ್ಲಿನ ಕೆಲಸಗಳನ್ನು ಜಪಾನಿಯರಿಗೇ ಕೊಡಿ ಎನ್ನುವುದು, ಇಂಗ್ಲೇಂಡಿನಲ್ಲಿರುವ ಕಾರುಗಳ ನೇಮ್‌ಪ್ಲೇಟುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಬಿಡಿ ಎನ್ನುವುದು, ಜರ್ಮನಿಯಲ್ಲಿ ಎಲ್ಲಾ ಗ್ರಾಹಕಸೇವೆಗಳನ್ನು ಜರ್ಮನ್ ನುಡಿಯಲ್ಲಿ ಕೊಡಿ ಎನ್ನುವುದು ಅಸಹಜವಾಗುವುದಾದರೆ ಕನ್ನಡನಾಡಿನ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಕೆಲಸಗಳನ್ನು ಕೊಡಿ ಎನ್ನುವುದು ಕೂಡಾ ಅಸಹಜ ಎನ್ನಬಹುದು!

ಕನ್ನಡಿಗರ ಕೆಲಸಕ್ಕೆ ಕಲ್ಲು! ರೈಲು, ಬ್ಯಾಂಕು ಆಯ್ತು.. ಇದೀಗ ವಿಮೆ..

ಭಾರತದ ಹುಳುಕಿನ ಭಾಷಾನೀತಿಗೆ ಮತ್ತು ಆ ಮೂಲಕ ಹಿಂದೀ ಭಾಷಿಕರಿಗೆ ವಿಶೇಷ ಉಪಕಾರ ಮಾಡಿಕೊಡುತ್ತಾ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುತ್ತಿರುವುದಕ್ಕೆ ಕೇಂದ್ರಸರ್ಕಾರದ ಅಧೀನದಲ್ಲಿರುವ ವಿಮಾ ಸಂಸ್ಥೆಗಳಲ್ಲಿ ಇತ್ತೀಚಿಗೆ ಆಗುತ್ತಿರುವ ನೇಮಕಾತಿ ಪ್ರಕ್ರಿಯೆಗಳು ತಾಜಾ ಉದಾಹರಣೆಯಾಗಿ ನಿಂತಿವೆ. 

ಹಿಂದೀಭಾಷಿಕರಿಗೆ ಸುಲಭ!

ಕೇಂದ್ರದ ಅಧೀನದ ಸಾರ್ವಜನಿಕ ವಲಯದ ನಾಲ್ಕು ವಿಮಾಸಂಸ್ಥೆಗಳಾದ ನ್ಯಾಶನಲ್, ಓರಿಯಂಟಲ್, ನ್ಯೂ ಇಂಡಿಯಾ ಮತ್ತು ಯುನೈಟಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಗಳಲ್ಲಿ ೨೬೦೦, ಕ್ಲಾಸ್ ಮೂರರ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇದಲ್ಲದೆ  ಭಾರತಾದ್ಯಂತ ಒಂದೇಸಲಕ್ಕೆ ನಡೆಸಲಾಗುತ್ತಿರುವ ಈ ನೇಮಕಾತಿಯ ಅಂಗವಾಗಿ ಕರ್ನಾಟಕದಲ್ಲಿ ಒಟ್ಟು ೧೮೧ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿದೆ. ವಿಷಯವೇನೆಂದರೆ ಈ ನೇಮಕಾತಿಯು ಹಿಂದೀ ಭಾಷಿಕರಿಗೆ ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಮಾಡಿಕೊಡುತ್ತಿದೆ ಮತ್ತು ಹಿಂದೀಯೇತರರ ಅವಕಾಶಗಳನ್ನು ಮೊಟಕು ಮಾಡುತ್ತಿದೆ. 

ಕನ್ನಡಿಗರಿಗೆ ಮೋಸ!

ಈ ಪರೀಕ್ಷೆಗಳು ನಡೆಯುವ ಬಗೆಯನ್ನು ನೋಡಿ. ಇಂಗ್ಲೀಶ್ ಭಾಷೆಯ ಬಗ್ಗೆ ಇರುವ ಒಂದು ಪ್ರಶ್ನೆಪತ್ರಿಕೆಯನ್ನು ಬಿಟ್ಟರೆ ಉಳಿದೆಲ್ಲವನ್ನೂ ಹಿಂದೀ/ ಇಂಗ್ಲೀಶುಗಳಲ್ಲಿ ನೀಡಲಿದ್ದಾರಂತೆ. ಈ ಪ್ರಶ್ನೆಗಳು "ಸರಿ ಉತ್ತರವನ್ನು ಗುರುತಿಸಿ" ಎಂಬ ಮಾದರಿಯವಾದ್ದರಿಂದ ಹಿಂದೀ ಭಾಷೆಯವರಿಗೆ ಉಳಿದವರಿಗಿಂತಲೂ ಈ ಪ್ರಶ್ನೆಗಳು ಸುಲಭವಾಗುತ್ತದೆ. ಕನ್ನಡಿಗನೊಬ್ಬ ಇಂಗ್ಲೀಶ್ ಅಥವಾ ಹಿಂದೀಯಲ್ಲಿ ಈ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕು. ಆದರೆ ಹಿಂದೀಯವರು ಹಿಂದೀ ಅಥವಾ ಇಂಗ್ಲೀಶಿನಲ್ಲಿ ಎದುರಿಸಬಹುದು ಎಂಬ ನೀತಿಯೇ ದುರುದ್ದೇಶದ್ದು! ಹೀಗಾಗಿ ನೇರವಾಗಿ ಈ ಪ್ರವೇಶ ಪರೀಕ್ಷೆಗಳು ತಾರತಮ್ಯದ ಅನ್ಯಾಯವನ್ನು ಎತ್ತಿಹಿಡಿಯುವ ನಡೆಯಾಗಿವೆ ಎನ್ನದೆ ವಿಧಿಯಿಲ್ಲಾ! ಇದೇ ರೀತಿಯ ತಾರತಮ್ಯದ ಕೆಲಸವನ್ನು ಈ ಹಿಂದೆ ಭಾರತೀಯ ರೈಲ್ವೇ ಇಲಾಖೆಯು ಮಾಡಿತ್ತು! ಬ್ಯಾಂಕುಗಳ ನೇಮಕಾತಿಯಲ್ಲೂ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ  "ಹಿಂದೀ"ಯನ್ನು ಓದಿರುವ ಪುರಾವೆ ಇರಬೇಕು ಎಂದಿತ್ತು! ಈಗ ವಿಮಾ ಸಂಸ್ಥೆಗಳ ನೇಮಕಾತಿಯಲ್ಲೂ ಇಂಥದ್ದೇ ಏರ್ಪಾಡಿರುವುದು ಕಾಣುತ್ತಿದೆ. ಒಟ್ಟಾರೆ ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಿಂದೀಯವರ ಸ್ವತ್ತು ಎಂಬಂತೆ ಭಾರತ ಸರ್ಕಾರದ ನೀತಿಗಳು ಕೊರಳೆತ್ತಿ ಸಾರುತ್ತಿರುವಂತಿದೆ. ಇದು ಸರಿ ಹೋಗಬೇಕೆಂದರೆ ಹುಳುಕಿನ ಭಾಷಾನೀತಿಯನ್ನು ಬದಲಿಸುವುದೊಂದೇ ದಾರಿ.

ಕೊನೆಹನಿ: ಈ ನೇಮಕಾತಿಯ ಜಾಹೀರಾತಿನಲ್ಲಿ ಸ್ಥಳೀಯ ಭಾಷೆಯ ಅರಿವು ಅಭ್ಯರ್ಥಿಗಳಿಗೆ ಇರಬೇಕು ಎಂದು ಬರೆಯಲಾಗಿದೆ. ಅಂದರೆ ಕರ್ನಾಟಕದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಬರಬೇಕು ಎನ್ನುವುದು ಇದರ ಅರ್ಥ. ತಮಾಶೆಯೆಂದರೆ ಅಭ್ಯರ್ಥಿಗಳ ಸ್ಥಳೀಯ ಭಾಷೆಯ ಜ್ಞಾನವನ್ನು ಹೇಗೆ ಅಳೆಯಲಾಗುತ್ತದೆ? ಅದಕ್ಕೆ ಯಾವ ಪರೀಕ್ಷೆಯಿದೆ? ಯಾವ ಮಟ್ಟದ ಅರಿವು ಇರಬೇಕು? ಇತ್ಯಾದಿಗಳ ಬಗ್ಗೆ ಏನೂ ಮಾಹಿತಿಯಿಲ್ಲಾ! ಅಂದರೆ ಈ ನಿಯಮವನ್ನು ಬರೀ ತೋರಿಕೆಗಾಗಿ ಕಾಟಾಚಾರಕ್ಕೆಂಬಂತೆ ಮಾಡಿರಬಹುದೆನ್ನುವ ಅನುಮಾನ ಮೂಡುತ್ತದೆ.

ಹಿಂದೀಹೇರಿಕೆಗೆ ಬ್ಯಾಂಕುಗಳನ್ನೂ ಬಿಡದೆ ಬಳಸಿಕೊಳ್ಳೋ ಭಾರತ ಸರ್ಕಾರ!

(ಫೋಟೋ ಕೃಪೆ: ಉದಯವಾಣಿ ಈ ಪತ್ರಿಕೆ)

"ಹಿಂದೀ ಭಾರತದ ರಾಷ್ಟ್ರಭಾಷೆ, ಇದು ರಾಷ್ಟ್ರೀಯ ಭಾವನಾತ್ಮಕ ಭಾಷೆ, ದೇಶದ ಸಂಸ್ಕೃತಿಯ ಹಿರಿಮೆ ಮತ್ತು ಸಾಮಾಜಿಕ ಬಾಂಧವ್ಯ ಉಳಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ" ಎಂದೆಲ್ಲಾ ಸುಳ್ಳಾಡಿಯಾದರೂ ಸರಿ ಹಿಂದೀಯನ್ನು ಹರಡಬೇಕೆನ್ನೋ ಹಂತಕ್ಕೆ ಭಾರತದ ಕೇಂದ್ರಸರ್ಕಾರದ ಅಧಿಕಾರಿಗಳು ತಲುಪಿದ್ದಾರೆಂಬ ಅನುಮಾನಕ್ಕೆ ಕಾರಣವಾಗುವಂತೆ... ಮಂಗಳೂರಿನಲ್ಲಿ ಟೋಲಿಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಆಶ್ರಯದಲ್ಲಿ ನಡೆದ ೨೦೧೩ರ ಹಿಂದೀ ದಿವಸ್ ಕಾರ್ಯಕ್ರಮದಲ್ಲಿ ಶ್ರೀ ಅಮರ್‌ಲಾಲ್ ದೌಲ್ತಾನಿ ಎಂಬ ಕಾರ್ಪೋರೇಶನ್ ಬ್ಯಾಂಕಿನ ದೊಡ್ಡ ಅಧಿಕಾರಿಯೊಬ್ಬರು ಮಾತಾಡಿದ್ದಾರೆ.

ಸುಳ್ಳಿನ ಸರಮಾಲೆ!

ಹೀಗೆ ಹಿಂದೀ ದಿವಸ್ ಎನ್ನುವ ಆಚರಣೆಗೂ, ಬ್ಯಾಂಕುಗಳೆಂಬ ಹಣಕಾಸು ವಹಿವಾಟಿನ ಉದ್ದೇಶದ ಸಂಸ್ಥೆಗಳಿಗೂ ಏನು ಸಂಬಂಧವೆನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಬ್ಯಾಂಕುಗಳು ರಾಷ್ಟ್ರೀಕರಣವಾದ ಮೇಲೆ ಅವು ಕೇಂದ್ರಸರ್ಕಾರಿ ಉದ್ದಿಮೆಗಳಾದ ನಂತರ, ಅಲ್ಲಿಯೂ ಭಾರತದ ಭಾಷಾನೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತದೆ, ರಾಜ್‌ಭಾಷಾ ಇಲಾಖೆ. ಅಂತೆಯೇ ನಿಮ್ಮ ಗ್ರಾಹಕರನ್ನು ಹಿಂದೀಯಲ್ಲಿ ವ್ಯವಹರಿಸಲು ಉತ್ತೇಜಿಸಿ ಎನ್ನುತ್ತಾ ಹಿಂದೀ ಪ್ರಚಾರ ಮಾಡುವ ಬ್ಯಾಂಕಿಗೆ ಪ್ರಶಸ್ತಿಯನ್ನು ಕೊಡುತ್ತದೆ. ಹೀಗೆಲ್ಲಾ ಮಾಡೋದಕ್ಕೆ ಮುಖ್ಯ ಕಾರಣ ಭಾರತೀಯರೆಲ್ಲಾ, ಅವರು ಯಾವುದೇ ಭಾಷೆಯವರಾದರೂ ಒಂದಲ್ಲಾ ಒಂದು ದಿವಸ, ಯಾವುದಾದರೂ ಬ್ಯಾಂಕಿಗೆ, ಯಾವುದಾದರೂ ಕೆಲಸಕ್ಕೆ ಬರಲೇಬೇಕು. ಆಗಾದರೂ ಅವರಿಗೆ ಹಿಂದೀಯನ್ನು ಕಲಿಸೋಣ ಎನ್ನುವ ದೂರದ ದುರಾಲೋಚನೆಯೇ ಎನ್ನಿಸುತ್ತದೆ. ಇಲ್ಲದಿದ್ದರೆ ಎಲ್ಲಾ ಬ್ಯಾಂಕುಗಳಲ್ಲಿ ದಿನಕ್ಕೊಂದು ಪದ ಎಂದು, ಒಂದು ಹಿಂದೀ ಪದವನ್ನು ಕಲಿಸುವಂತೆ ಬೋರ್ಡಿನ ಮೇಲೆ ಬರೆದು ಎಲ್ಲರಿಗೂ ಕಾಣುವಂತೆ ಹಾಕುವುದಾದರೂ ಏಕೆ? ಒಟ್ಟಲ್ಲಿ ಹೀಗೆ ಜನರ ಅನಿವಾರ್ಯತೆಯನ್ನು ತನ್ನ ಹಿಂದೀ ಹೇರಿಕೆಯ ಉದ್ದೇಶಕ್ಕೆ ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿರುವ ಭಾರತ ಸರ್ಕಾರದವರು ನಾಳೆ ಮಸಣದಲ್ಲಿ ಸಂಸ್ಕಾರ ಮಾಡುವ ಅರ್ಜಿಯನ್ನು ಹಿಂದೀಯಲ್ಲೇ ತುಂಬಬೇಕು ಎಂದು ಮಾಡಿದರೂ ಮಾಡಬಹುದು. ಏಕೆಂದರೆ ಹುಟ್ಟಿದವರೆಲ್ಲಾ ಸಾಯಲೇಬೇಕು. ಅವರ ಹೆಣಕ್ಕೆ ಸಂಸ್ಕಾರವಾಗಲೇ ಬೇಕಲ್ಲವೇ!? ಆಗ ಎಲ್ಲಾ ಭಾರತೀಯರಿಗೂ ಹಿಂದೀ ಕಲಿಸಿಬಿಡಬಹುದಲ್ಲಾ!?

ಒಟ್ಟಾರೆಯಾಗಿ ಭಾರತದ ಹುಳುಕಿನ ತಾರತಮ್ಯದ ಈ ಭಾಷಾನೀತಿ ಬದಲಾಗಬೇಕೆಂದು ಬಯಸುವವರು ಇನ್ನಾದರೂ ದನಿ ಎತ್ತಬೇಕಾಗಿದೆ. ನೀವೂ ನಮ್ಮೊಡನೆ ದನಿಗೂಡಿಸುವುದಿದ್ದಲ್ಲಿ ಸಮಾನತೆಯ ಭಾಷಾನೀತಿಯನ್ನು ಒತ್ತಾಯಿಸುವ ಈ ಪಿಟಿಷನ್ನಿಗೆ ಸಹಿ ಮಾಡಿರಿ! ಹಿಂದೀ ಹೇರಿಕೆಯ ವಿರುದ್ಧ ದನಿ ಎತ್ತಿರಿ!

ರೈಲ್ವೇ ಉದ್ಧಟತನಕ್ಕೆ ಭಾರತದ ಹುಳುಕಿನ ಭಾಷಾನೀತಿಯೇ ಕಾರಣ!


ನೈರುತ್ಯ ರೈಲ್ವೇ ವಲಯದ ಕೇಂದ್ರಕಚೇರಿ ಇರೋದು ನಮ್ಮ ಹುಬ್ಬಳ್ಳಿಯಲ್ಲಿ... ಈ ವಲಯದ ಹರವು ಇಡೀ ಕರ್ನಾಟಕದ ಎಲ್ಲಾ ರೈಲುಮಾರ್ಗಗಳನ್ನು ಒಳಗೊಳ್ಳುತ್ತದೆ. ಈ ಹಿಂದೆ ಕೇಂದ್ರ ರೈಲ್ವೆ ವಲಯದಲ್ಲಿದ್ದ ಹುಬ್ಬಳ್ಳಿ, ದಕ್ಷಿಣ ವಲಯದಲ್ಲಿದ್ದ ಬೆಂಗಳೂರು ಮತ್ತು ಮೈಸೂರುಗಳನ್ನು ಒಗ್ಗೂಡಿಸಿ ೨೦೦೩ರಲ್ಲಿ ಈ ನೈರುತ್ಯ ರೈಲ್ವೇ ವಲಯವನ್ನು ಹುಟ್ಟುಹಾಕಲಾಯಿತು. ಈ ವಲಯದಲ್ಲಿ ಇರುವ ಹೆಚ್ಚಿನ ಪ್ರದೇಶ ಕನ್ನಡನಾಡು. ಆದರೆ ಈ ವಿಭಾಗದಲ್ಲಿ ಕನ್ನಡದ ಬಳಕೆ ಇಲ್ಲವೇ ಇಲ್ಲಾ ಎನ್ನಬಹುದು. ರೈಲ್ವೇ ಟಿಕೆಟ್ಟುಗಳಲ್ಲಿ ಕನ್ನಡವೇ ಇರುವುದಿಲ್ಲಾ. ರೈಲ್ವೇ ಮುಂಗಡ ಕಾಯ್ದಿರುಸುವಿಕೆಯ ಪಟ್ಟಿಯನ್ನು ರೈಲಿನ ಬೋಗಿಗಳ ಮೇಲೆ ರೈಲು ಹೊರಡುವ ಅರ್ಧಗಂಟೆ ಮೊದಲು ಅಂಟಿಸುತ್ತಾರೆ. ಯಾವ ಬೋಗಿಯಲ್ಲಿ ನಮ್ಮ ಹೆಸರಿದೆ ಎಂದು ಹುಡುಕುವವರಿಗೆ ಕನ್ನಡವೊಂದೇ ಬರುತ್ತಿದ್ದರೆ ದೇವರೇ ಗತಿ. ಯಾಕೆಂದರೆ ಈ ಪಟ್ಟಿ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರಾ ಇರುತ್ತದೆ. ಇದು ರೈಲಿನ ಒಳಗಡೆಯಿರುವ ತುರ್ತು ನಿರ್ಗಮನದಲ್ಲೂ ಹಾಗೇ ಇರುತ್ತದೆ. ಯಾಕಪ್ಪಾ ಹೀಗೇ? ಕನ್ನಡದವರಿಗೆ ಕನ್ನಡದಲ್ಲಿ ಸೇವೆ ಯಾಕೆ ಕೊಡೋದಿಲ್ಲಾ ನೀವು? ಎಂದು ಗೆಳೆಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿರುವ  ಮಾಹಿತಿ ಕೋರಿಕೆ ಅರ್ಜಿಗೆ, ಇಲಾಖೆಯವರು ಕೊಟ್ಟಿರುವ ಉತ್ತರವನ್ನು ಇಲ್ಲಿ ನೋಡಿ:


ಯಾಕೆ ಕನ್ನಡದಲ್ಲಿ ಟಿಕೆಟ್ ಕೊಡಲಾಗದು ಎಂಬುದಕ್ಕೆ ನೈರುತ್ಯ ರೈಲ್ವೇ ಮಂದಿ ಹೇಳಿರುವುದು "ಕಾಯ್ದಿರಿಸದ ಚೀಟಿಗಳನ್ನು ಭಾರತದ ಯಾವುದೇ ನಿಲ್ದಾಣಕ್ಕೆ ಕೊಡಲಾಗುವುದರಿಂದ ಪ್ಯಾನ್ ಇಂಡಿಯನ್ ಭಾಷೆಗಳಾದ ಹಿಂದೀ/ ಇಂಗ್ಲೀಷುಗಳಲ್ಲಿ ಕೊಡಲಾಗುತ್ತದೆ" ಎಂದು. ಇದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರೈಲಿನಲ್ಲಿ ನೀವು ನಾಯಂಡಹಳ್ಳಿ ನಿಲ್ದಾಣದಲ್ಲಿ ರೈಲು ಹತ್ತಿ ಮಂಡ್ಯಕ್ಕೆ ಟಿಕೆಟ್ ಕೊಂಡುಕೊಂಡರೆ ಅದರಲ್ಲಿ ಕನ್ನಡದಲ್ಲಿ ಮಾಹಿತಿ ಕೊಡಲಾಗುವುದಿಲ್ಲಾ.. ಏಕೆಂದರೆ ನಾಯಂಡಹಳ್ಳಿಯಿಂದ ನೀವು ದೆಹಲಿಗೂ, ದಿಬ್ರೂಗಡಕ್ಕೂ, ಅಮೃತಸರಕ್ಕೂ, ಇಂದೂರಿಗೂ, ಕೊಲ್ಕತ್ತಾಗೂ ಕೂಡಾ ಟಿಕೆಟ್ ಕೊಳ್ಳಲು ಸಾಧ್ಯವಿದೆ... ಹಾಗಾಗಿ ಹಿಂದೀ/ ಇಂಗ್ಲೀಷಿನಲ್ಲಿ ಮಾತ್ರಾ ಟಿಕೆಟ್ ಕೊಡಲಾಗುತ್ತದೆ ಎಂದು. ಇದೊಂದು ಅವಿವೇಕದ ಪರಮಾವಧಿಯ ಸಮರ್ಥನೆ ಎನ್ನಿಸುವುದಿಲ್ಲವೇ?!

ಏನಿದು ಪ್ಯಾನ್ ಎಂದರೆ? ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಪ್ಯಾನ್ ಎಂದರೆ "ಸಂಪೂರ್ಣ, ಒಟ್ಟಾರೆ, ಎಲ್ಲವನ್ನೂ ಒಳಗೊಂಡ" ಎಂದು ಅರ್ಥ. ಇಲ್ಲಿ ಹಿಂದೀ/ ಇಂಗ್ಲೀಷು ಅದು ಹೇಗೆ ಎಲ್ಲಾ ಭಾರತೀಯರ ನುಡಿಯಾಗಿದೆ? ಸರಿಯಾದ ಏರ್ಪಾಡಿನಲ್ಲಿ ಕರ್ನಾಟಕದಿಂದ ಹೊರಡುವ ಎಲ್ಲಾ ರೈಲುಗಳಲ್ಲಿ ಟಿಕೆಟ್ಟು ಮತ್ತು ಸೂಚನೆಗಳು ಕನ್ನಡದಲ್ಲಿ ಇರಬೇಕಿತ್ತು. ರೈಲ್ವೇ ಹೇಳುತ್ತಿರುವ ನೆಪವಾದ ಭಾರತದ ಯಾವ ರೈಲ್ವೇ ನಿಲ್ದಾಣಕ್ಕೆ ಬೇಕಾದರೂ ಟಿಕೆಟ್ ಕೊಡಬೇಕಿದ್ದರೆ ಆ ನಿಲ್ದಾಣವಿರುವ ರಾಜ್ಯದ ನುಡಿ ಮತ್ತು ನಡುವಿನ ಅಧಿಕಾರಿಗಳ ಅನುಕೂಲಕ್ಕಾಗಿ ಇಂಗ್ಲೀಷಿನಲ್ಲಿ ಮಾಹಿತಿ ಇರಬೇಕಿತ್ತು. ಇದು ಸರಿಯಾದ ತ್ರಿಭಾಷಾಸೂತ್ರವಾದೀತು!

ನೈರುತ್ಯ ರೈಲ್ವೇ ಇಲಾಖೆಯವರು ಇದೀಗ ನೀಡಿರುವ ಉತ್ತರ ಕೈಲಾಗದವರು ನೀಡುವ ನೂರೆಂಟು ನೆಪದ ಹಾಗೆ ಕಾಣುತ್ತಿದೆ. ಇಂಥಾ ಉದ್ಧಟತನದ ಉತ್ತರಕ್ಕೆ ಕಾರಣವೇ ಭಾರತದ ಹುಳುಕಿನ ಭಾಷಾನೀತಿಯಾಗಿದೆ. ಸಂವಿಧಾನವೇ ಹಿಂದೀಯವರಿಗೆ "ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇಡಿಯಾಗಿ ನಿಮ್ಮದು, ಇದನ್ನು ನಿಮ್ಮನುಕೂಲಕ್ಕೆ ಬೇಕಾದಂತೆ ಆಳಿಕೊಳ್ಳಿ" ಎಂದು ಬರೆದುಕೊಟ್ಟಿರುವಂತೆ ರೂಪಿಸಲಾಗಿರುವ ಭಾಷಾನೀತಿಯ ಕಾರಣದಿಂದಲೇ ರೈಲ್ವೇಯವರಿಗೆ ಇಂಥಹ ಉದ್ಧಟತನದ ಉತ್ತರ ನೀಡಲು ಆಗುತ್ತಿರುವುದು. ಈ ನೀತಿ ಬದಲಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ ಹಿಂದೀಯೇತರ ಜನಗಳ ಮೇಲಿನ ಈ ದೌರ್ಜನ್ಯ ಹೀಗೇ ಮುಂದುವರೆಯುತ್ತದೆ. ಸಮಾನತೆಯ ಕೂಗಿಗೆ ನಿಮ್ಮ ದನಿಗೂಡಿಸಲು "ಭಾರತದ ಭಾಷಾನೀತಿ ಬದಲಾಗಬೇಕು" ಎನ್ನುವ ಈ ಪಿಟಿಷನ್ನಿಗೆ ಸಹಿ ಮಾಡಿರಿ.

ರಾಷ್ಟ್ರೀಯ ಪಕ್ಷಗಳು ಮತ್ತು ಹಿಂದೀ ಹೇರಿಕೆ!


ಈ ಮೇಲೆ ಹಾಕಿರುವ ಫೋಟೋ ನೋಡಿರಿ. ಇದನ್ನು ಬೆಂಗಳೂರಿನ ಪ್ರಮುಖ ಬಡಾವಣೆಯೊಂದರಲ್ಲಿ ಹಾಕಿದ್ದಾರೆ. ಇದನ್ನು ಹಾಕಿರುವವರು ಭಾರತೀಯ ಜನತಾ ಪಕ್ಷದವರು. ಶುದ್ಧಕನ್ನಡನಾಡಲ್ಲಿ ಪರಿಶುದ್ಧ ಹಿಂದೀಯಲ್ಲಿ ಅಷ್ಟು ದೊಡ್ದದಾಗಿ ಅದೇನನ್ನೋ ಬರೆಯಲಾಗಿದೆ. ಇಷ್ಟಕ್ಕೂ ಈ ಫಲಕವನ್ನು ಯಾರಿಗಾಗಿ ಹಾಕಲಾಗಿದೆ? ಹೋಗಿ ಬರುವ ದಾರಿಹೋಕರಿಗಾಗಿದ್ದರೆ ಇದನ್ನು ಜನರ ನುಡಿಯಾದ ಕನ್ನಡದಲ್ಲಿ ಹಾಕಬೇಕಿತ್ತಲ್ಲಾ? ಏನು ಹೀಗೆ ಹಿಂದೀಯಲ್ಲಿ ಹಾಕುವ ಉದ್ದೇಶ? ಬೆಂಗಳೂರಿನ ಸಾರ್ವಜನಿಕ ಜಾಗದಲ್ಲಿ ಹಾಕುವ ಜಾಹೀರಾತನ್ನು ಹಿಂದೀಯಲ್ಲಿ ಹಾಕಿದರೆ ಇನ್ನೊಂದು ಔನ್ಸ್ ಹೆಚ್ಚಿನ ದೇಶಪ್ರೇಮ ಪ್ರದರ್ಶನವಾಗುತ್ತದೆ ಎಂದು ಬಿಜೆಪಿಯವರು ಭಾವಿಸಿರಬಹುದೇನೋ? ಸಂಘ ಸಿದ್ಧಾಂತದ ಮೂಸೆಯಲ್ಲಿ ಸಿದ್ಧವಾಗಿರುವ ಭಾರತೀಯ ಜನತಾಪಕ್ಷವು ಮೊದಲಿನಿಂದಲೂ ಹಿಂದೀವಾದಿಯೇ ಆಗಿದೆ. ಅದಕ್ಕೆ ಈ ಮೇಲಿನ ಫೋಟೋ ಸಾಕ್ಷಿಯಾಗಿದೆ.

ಹಿಂದೀ ಭಾಷೆಯನ್ನು ಭಾರತದ ಮೇಲೆ ಹೇರಿದವರಲ್ಲಿ ಮೊದಲಿಗರು ಕಾಂಗ್ರೆಸ್ ಪಕ್ಷದವರು. ಈ ಪಕ್ಷದ ಮಹಾನ್ ನಾಯಕರಾಗಿದ್ದ ರಾಷ್ಟ್ರಪಿತ ಶ್ರೀ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರೇ ಹಿಂದೀಭಾಷೆಯ ಪ್ರಬಲ ಸಮರ್ಥಕರಾಗಿದ್ದರು. ಹೀಗಿದ್ದಾಗ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ಸಿನ ಸರ್ಕಾರಗಳು ಸಾಗಿದ್ದು ಸಹಜವಾಗಿದ್ದು ಅದೇ ಇಂದಿನ ಹುಳುಕಿನ ಭಾಷಾನೀತಿಗೆ ಕಾರಣವಾಗಿದೆ ಮತ್ತು ಇಂದೂ ಮುಂದುವರೆದುಕೊಂಡು ಬರುತ್ತಿದೆ. ಈ ಫೋಟೋ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ಅರ್ಜಿಯಲ್ಲಿನ ಒಂದು ಪುಟ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವವರೆಲ್ಲಾ ಈ ಕರಾರನ್ನು ಒಪ್ಪಬೇಕಾಗಿದೆ. ಇದರಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ಹಿಂದೀ ಭಾಷೆಯ ಪ್ರಚಾರಕ್ಕಾಗಿ ಶ್ರಮಿಸುತ್ತೇವೆ ಎಂದು ಬರೆದುಕೊಡಬೇಕು!


ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಬೇಕೆಂದರೆ ಹಿಂದೀ ಹೇರಿಕೆಯನ್ನು ಮಾಡಲೇಬೇಕೆಂದು ಈ ಎರಡೂ ಪಕ್ಷಗಳು ಅಂದುಕೊಂಡಿರಬಹುದು. ಭಾರತದ ಹುಳುಕಿನ ಭಾಷಾನೀತಿಯು ಬದಲಾಗಬೇಕೆಂದರೆ ಇದು ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಂತಾನೆ ಆಗುವುದು ಕನಸಿನ ಮಾತು! ಈ ಕೆಲಸಗಳಾಗಬೇಕೆಂದರೆ ಜನರ ಮನದಾಶಯ ಇವುಗಳ ಕಿವಿಗೆ ಬೀಳಬೇಕು. ಜನರ ಈ ಸಮಾನತೆಯ ಒತ್ತಾಯದ ಕೂಗು ಈ ಪಕ್ಷಗಳ ರಾಜ್ಯಘಟಕಗಳು ಈ ದನಿಯನ್ನು ತಮ್ಮ ಕೇಂದ್ರಕಚೇರಿಗಳಿಗೆ ಮುಟ್ಟಿಸಬೇಕು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬನವಾಸಿ ಬಳಗವು ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಿ. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚಿನ ನಾಗರೀಕರು, ಹನ್ನೆರಡು ಮಂದಿ ಗಣ್ಯರು ಈ ಪಿಟಿಷನ್ನಿಗೆ ಸಹಿ ಹಾಕಿದ್ದಾರೆ. ಕನ್ನಡನಾಡಿನಿಂದ ಎದ್ದಿರುವ ಈ ಬದಲಾವಣೆಯ ಹಕ್ಕೊತ್ತಾಯದ ಕೂಗಿಗೆ ತಮ್ಮ ದನಿಯನ್ನೂ ಸೇರಿಸಿರಿ.

ಮಹಾತ್ಮಾಗಾಂಧಿ ಮತ್ತು ಹಿಂದೀ ಹೇರಿಕೆ!


(ಚಿತ್ರ ಕೃಪೆ: ವಿಜಯ ಕರ್ನಾಟಕ ದಿನಪತ್ರಿಕೆ)
ಹಿಂದೀ ಭಾಷೆಯನ್ನು ಭಾರತದ ಮೇಲೆ ಹೇರುವಲ್ಲಿ ಪ್ರಮುಖಪಾತ್ರ ಕಾಂಗ್ರೆಸ್ ಪಕ್ಷದ್ದು. ಈ ಪಕ್ಷದ ಶ್ರೀ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರೇ ಹಿಂದೀಭಾಷೆಯ ಪ್ರಬಲ ಸಮರ್ಥಕರಾಗಿದ್ದರು. ಮಹಾತ್ಮಾಗಾಂಧಿಯವರು ಹಿಂದೀ ಭಾರತೀಯತೆಗೆ ಸಂಕೇತವೆಂದೂ ಇಂಗ್ಲೀಷು ಗುಲಾಮಗಿರಿಯ ಸಂಕೇತವೆಂದೂ ಪ್ರಬಲವಾಗಿ ನಂಬಿದ್ದರು. ನಿನ್ನೆಯ (೦೮.೦೯.೨೦೧೩ರ) ವಿಜಯಕರ್ನಾಟಕದಲ್ಲಿ ಜಗತ್ತಿನ ಅತ್ಯುತ್ತಮ ಭಾಷಣಗಳೆಂದು ಗುರುತಿಸಲಾದವುಗಳ ಪೈಕಿ ಆಯ್ದ ಕೆಲವೆಂದು ಪ್ರಕಟಿಸಿದ್ದ  ಬರಹಗಳಲ್ಲಿ ಮಹಾತ್ಮಗಾಂಧಿಯವರ ಒಂದು ಭಾಷಣವೂ ಇದೆ. ಈ ಭಾಷಣದಲ್ಲಿ ಗಾಂಧಿಯವರು ಹೇಳಿರುವ ಮಾತುಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ.

ಇಂಗ್ಲೀಷ್ ನಮ್ಮಿಂದ ದೂರ...ಸರಿ! ಹಿಂದೀ..?

ಈ ಬರಹದಲ್ಲಿ ಗಾಂಧೀಜಿಯವರು ಹಿಂದೀಯನ್ನು ಮುಂಬೈ ಸಂಸ್ಥಾನದ ನುಡಿಯಿಂದ ಬೇರೆಮಾಡುವ ಯಾವ ಗೆರೆಯೂ ಕಾಣುತ್ತಿಲ್ಲ ಎಂದಿದ್ದಾರೆ. ಮರಾಠಿ/ ಗುಜರಾತಿ ನುಡಿಗಳ ಬಗ್ಗೆ ಈ ಮಾತುಗಳನ್ನು ಅವರು ಹೇಳಿದ್ದಾರೆ. ಈ ಮಾತು ಸಂಸ್ಕೃತ ಮೂಲದ ನುಡಿಗಳಿಗೆ ಹೊಂದಿದರೂ ಹೊಂದಬಹುದು! ಕನ್ನಡ, ತಮಿಳು, ತೆಲುಗು, ಮಲಯಾಳಂಗಳ ಬಗ್ಗೆ ಇದೇ ಮಾತನ್ನು ಹೇಳಲಾಗುವುದಿಲ್ಲವಲ್ಲಾ! ಗಾಂಧೀಜಿಯವರು ಮುಂದುವರೆಯುತ್ತಾ "ನಮ್ಮದಲ್ಲದ ಇಂಗ್ಲೀಷ್ ಎಂದಾದರೂ ಈ ದೇಶದ ರಾಷ್ಟ್ರೀಯ ಭಾಷೆಯಾದೀತೇ?" ಎಂದಿದ್ದಾರೆ. ವಾಸ್ತವವಾಗಿ ಇಂದು ಇವರದ್ದೇ ಕಾಂಗ್ರೆಸ್ಸಿನ ತಪ್ಪು ಭಾಷಾನೀತಿಯ ಕಾರಣದಿಂದಾಗಿ ನಿಜವಾಗಿದೆ. ಭಾರತದಲ್ಲಿ ಇಂದು ಜ್ಞಾನ ವಿಜ್ಞಾನದ ನುಡಿಯಾಗಿ ಇಂಗ್ಲೀಷು ಎದೆಯೆತ್ತಿ ನಿಂತಿರುವುದು... ಅದಕ್ಕೆ ಸಮನಾಗಿ ಭಾರತೀಯ ಭಾಷೆಗಳು ಬೆಳೆಯದಿರುವುದು.. ಇವೆಲ್ಲಕ್ಕೂ ಕಾರಣ ಇದೇ ಭಾಷಾನೀತಿಯೇ! ದೇಶಪ್ರೇಮದ ಹೆಸರಲ್ಲಿ ಹಿಂದೀ ಒಪ್ಪಿ ಎನ್ನುವ, ಇಂಗ್ಲೀಷನ್ನು ಓಡಿಸಿಬಿಡಬೇಕು ಎನ್ನುವ ಜನರೆಲ್ಲರನ್ನೂ ಸೇರಿಸಿ ಇಡೀ ಭಾರತೀಯರೆಲ್ಲಾ ಮೃಷ್ಟಾನ್ನದ ಭಾಷೆಯಾಗಿ ಗುರುತಿಸಿ ಒಪ್ಪಿರುವುದು.. ಇಂಗ್ಲೀಷನ್ನೇ!

ಮಹಾತ್ಮಾಗಾಂಧಿಯವರು ಮುಂದುವರೆಯುತ್ತಾ ಜಗತ್ತಿನ ಪರಮಸತ್ಯವೊಂದನ್ನು ತೆರೆದಿಟ್ಟು "ಇಂಗ್ಲೀಷ್ ಭಾಷೆಯ ಹುಡುಗನೊಬ್ಬನ ಜೊತೆ ನಮ್ಮ ಹುಡುಗರ ಸ್ಪರ್ಧೆ ಎಷ್ಟು ಸಮಾನವಾದದ್ದು" ಎಂದು ಕಳವಳ ಪಟ್ಟಿರುವುದನ್ನು ನೋಡಿ. ಇಡೀ ಇಂಗ್ಲೀಷನ್ನು ತುಳಿಯುವವರ ಪ್ರತಿನಿಧಿಯಾಗಿಯೂ ಹಿಂದೀಯವರನ್ನು (ಭಾರತೀಯರನ್ನು) ತುಳಿಸಿಕೊಂಡವರ ಪ್ರತಿನಿಧಿಗಳಾಗಿಯೂ ಗುರುತಿಸುತ್ತಿರುವುದನ್ನು ಇಲ್ಲಿ ಕಾಣಬಹುದು. ಆದರೆ ಇದೇ ಗಾಂಧೀಜಿಯವರು ಬಹುಷಃ ಹಿಂದೀಯೇತರ ಹುಡುಗರಿಗೂ ಮುಂದೊಮ್ಮೆ ಭಾರತದ ಕೇಂದ್ರಸರ್ಕಾರಿ ಕೆಲಸ ಸಿಗಬೇಕೆಂದರೆ ಇಂಥದ್ದೇ ಅಸಮಾನತೆಯ ಸ್ಪರ್ಧೆ ಏರ್ಪಡುತ್ತದೆ ಮತ್ತು ಇಲ್ಲಿ ತುಳಿಸಿಕೊಳ್ಳುವವರು ಈ ದೇಶದ ಎಪ್ಪತ್ತರಷ್ಟಿರುವ ಹಿಂದೀಯೇತರರು ಎಂಬ ಸಣ್ಣ ಅನುಮಾನವೂ ಇದ್ದಂಗಿರಲಿಲ್ಲಾ! ಹೂಂ... ರಾಷ್ಟ್ರಪಿತರಿಗೆ ಬಹುಷಃ ಇಂದಿನ ಭಾರತ ಅಂದು ಕಾಣಲಿಲ್ಲ. ಆದರೆ ಭಾರತದ ಇಂದಿನ ಸ್ಥಿತಿಗೆ ಗಾಂಧೀಜಿಯವರ ಅಂದಿನ ಹಿಂದೀಪರವಾದ ನಿಲುವೇ ಪ್ರಮುಖವಾದ ಕಾರಣ ಎಂದರೆ ತಪ್ಪೇನಿಲ್ಲ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದ ಸ್ಥಾಪನೆಗೆ ಗಾಂಧೀಜಿಯವರೇ ಅಡಿಗಲ್ಲು ಹಾಕಿದವರು!! ದುರಂತವೆಂದರೆ ಮೇಲಿನ ಇಡೀ ಭಾಷಣದಲ್ಲಿ ಗಾಂಧೀಜಿಯವರಿಗೆ ಭಾರತೀಯರ ತಾಯ್ನುಡಿಯಾಗಿ ಹಿಂದೀಯೊಂದೇ ಕಂಡಂತಿದೆ. ಇಲ್ಲದಿದ್ದರೆ ಹಿಂದೀಗೂ ನಮಗೂ ಇರುವ ದೂರ ಇಂಗ್ಲೀಷಿಗೂ ನಮಗೂ ಇರುವ ದೂರದಷ್ಟೇ ಎಂದು ಗುರುತಿಸಲು ಅವರು ವಿಫಲರಾಗುತ್ತಿರಲಿಲ್ಲಾ!

ಭಾರತದ ಹುಳುಕಿನ ಭಾಷಾನೀತಿ ರೂಪುಗೊಳ್ಳುವ ಹೊತ್ತಿಗೆ ದೈಹಿಕವಾಗಿ ಗಾಂಧೀಜಿ ಇಲ್ಲದಿದ್ದರೂ ಅವರ ಹಿಂದೀಪರವಾದ ನಿಲುವು ಕಾಂಗ್ರೆಸ್ಸನ್ನೆಲ್ಲಾ ಆವರಿಸಿತ್ತು. ದೇಶವನ್ನೆಲ್ಲಾ ಒಗ್ಗೂಡಿಸಲು ಹಿಂದೀ ಬೇಕು ಎನ್ನುವ ಹುಸಿನಂಬಿಕೆಯು ರಾಜಾಜಿಯಂತಹ ಅಪ್ಪಟ ತಮಿಳನನ್ನೇ ದಶಕಗಳ ಕಾಲ ಭ್ರಮೆಯಲ್ಲಿಟ್ಟಿತ್ತು! ಇದೇ ಹುಳುಕು ಇಂದು ಹಿಂದೀಯೇತರ ಜನರನ್ನು ತಮ್ಮದೇ ನಾಡಿನಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿರುವುದು! ಇದು ಬದಲಾಗದಿದ್ದರೆ ನಮಗೆ ಉಳಿಗಾಲವಿಲ್ಲ!! ಬಹುಷಃ ಇಂದು ಮಹಾತ್ಮರು ಬದುಕಿದ್ದಿದ್ದರೆ ಹಿಂದೀ ಸಾಮ್ರಾಜ್ಯಶಾಹಿಯ ವಿರುದ್ಧ ಇನ್ನೊಂದು ಸ್ವಾತಂತ್ರ್ಯ ಸಮರಕ್ಕೆ ಧುಮುಕಿರುತ್ತಿದ್ದರು!

ಭಾರತದಲ್ಲಿರುವ ಎಲ್ಲರೂ ಸಮಾನರು ಎನ್ನುವುದಾದರೆ ಎಲ್ಲಾ ನುಡಿಗಳೂ ಸಮಾನವೆನ್ನಲೇಬೇಕು. ಎಲ್ಲಾ ನುಡಿಗಳೂ ಅವುಗಳ ನೆಲದಲ್ಲಿ ಸಂಪೂರ್ಣ ಸಾರ್ವಭೌಮತೆಯನ್ನು ಹೊಂದಿರಲೇ ಬೇಕು. ಇದು ನಿಜವಾದ ಸಮಾನತೆ! ನೀವು ಇಂತಹ ಸಮಾನತೆಯನ್ನು ಬಯಸುವವರಾದರೆ, ಈ ಕೂಗಿಗೆ ದನಿಗೂಡಿಸಿರಿ. ಭಾರತದ ಹುಳುಕಿನ ಭಾಷಾನೀತಿ ಬದಲಾಗಲೆಂಬ ಈ ಪಿಟಿಷನ್ನಿಗೆ ಸಹಿ ಹಾಕಿರಿ.

ಶಿಕ್ಷಕರ ದಿನಾಚರಣೆಯಂದು "ವಿಶೇಷ" ಶಿಕ್ಷಕರಿಗೊಂದು ಕರೆ!


ಇವತ್ತು, ಸೆಪ್ಟೆಂಬರ್ ೫. ಶಿಕ್ಷಕರ ದಿನಾಚರಣೆ. ಮಕ್ಕಳ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅತಿದೊಡ್ಡ ಪಾತ್ರವಹಿಸುವ ಶಿಕ್ಷಕರನ್ನು ಸ್ಮರಿಸಿಕೊಳ್ಳುವ ದಿನ. ಈ ದಿವಸವನ್ನೇ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಇರುವ ಕಾರಣ- ತತ್ವಶಾಸ್ತ್ರ ಪ್ರವೀಣರಾಗಿದ್ದು, ವೃತ್ತಿಯಿಂದ ಶಿಕ್ಷಕರಾಗಿ, ದೇಶದ ರಾಷ್ಟ್ರಪತಿ ಸ್ಥಾನದ ಹಂತಕ್ಕೇರಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹುಟ್ಟಿದ ದಿನ ಇಂದು. ಈ ದಿವಸ ನಾಡಿನ ಪ್ರಜೆಗಳ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ, ಸಮಾಜವು ಗೌರವ ತೋರಿಸುವ ಮೂಲಕ ಕೃತಜ್ಞತೆ ತೋರಿಸುತ್ತದೆ. ಈ ಸಂದರ್ಭದಲ್ಲಿ "ಕೆಲವು" ವಿಶೇಷ ಶಿಕ್ಷಕರಿಗೊಂದು ಮನವಿಪೂರ್ವಕ ಕರೆ! ಈ "ಕೆಲವ"ರ ವಿಶೇಷತೆ ಏನೆಂದರೆ ಇವರುಗಳು "ಭಾರತದ ರಾಷ್ಟ್ರಭಾಷೆ - ಹಿಂದೀ" ಎಂದೇ ಮಕ್ಕಳಿಗೆ ಹೇಳಿಕೊಡುತ್ತಿರುವ ಶಿಕ್ಷಕರಾಗಿದ್ದಾರೆ!

ಸತ್ಯವನ್ನೇ ಹೇಳಿಕೊಡಿ..

ನಮ್ಮ ಮಕ್ಕಳಿಗೆ ದಯಮಾಡಿ ಸುಳ್ಳು ಹೇಳಿಕೊಡಬೇಡಿ. ಅರೆ... ಇದೆಂಥಾ ಮಾತು! ಪುಣ್ಯಕೋಟಿ ಕಥೆಯನ್ನು ಕಲಿಸುವ ನಾವು, ಮಕ್ಕಳಿಗೆ ಸುಳ್ಳು ಯಾಕೆ ಹೇಳಿಕೊಡ್ತೀವಿ ಎಂದುಕೊಳ್ಳಬೇಡಿ. ನಿಜಾ! ಉದ್ದೇಶಪೂರ್ವಕವಾಗಲ್ಲದೆ ಇದ್ದರೂ ನಮ್ಮ ಮಕ್ಕಳಿಗೆ "ಹಿಂದೀ ಭಾರತದ ರಾಷ್ಟ್ರಭಾಷೆ" ಎಂದು ತಾವು ಹೇಳಿಕೊಡುತ್ತಿದ್ದಲ್ಲಿ ದಯವಿಟ್ಟು ಅದನ್ನು ಕೈಬಿಡಿ. ಯಾಕೆಂದರೆ ಭಾರತದ ಸಂವಿಧಾನದ ಯಾವುದೇ ಪುಟದಲ್ಲಿ, ಯಾವುದೇ ಸಾಲಿನಲ್ಲಿ ಹಿಂದೀಯನ್ನು ಭಾರತದ ರಾಷ್ಟ್ರಭಾಷೆಯೆಂದು ಬರೆದಿಲ್ಲಾ. ಅಸಲಿಗೆ ಭಾರತಕ್ಕೆ ಒಂದು ರಾಷ್ಟ್ರಭಾಷೆಯೇ ಇಲ್ಲಾ! ನಮ್ಮ ಕನ್ನಡಿಗರಲ್ಲಿ ಹಿಂದೀ ಬಗ್ಗೆ ಇರುವ ಶರಣಾಗತಿಸಹಿತವಾದ ಗೌರವದ ಭಾವನೆಗೆ ಮೂಲಕಾರಣವೇ ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಶಾಲೆಗಳಲ್ಲಿ ತುಂಬಲಾಗುತ್ತಿರುವ "ಹಿಂದೀ ಭಾರತದ ರಾಷ್ಟ್ರಭಾಷೆ" ಎಂಬ ಸುಳ್ಳು. ಈ ಸುಳ್ಳನ್ನು ದಯಮಾಡಿ ಮಕ್ಕಳಿಗೆ ಕಲಿಸಬೇಡಿ.

ನಿಜವನ್ನು ಹೇಳಿಕೊಡಿ..

ಸಮಾನತೆ, ಸಹೋದರತ್ವವೇ ಭಾರತದ ಜೀವಾಳ ಎನ್ನುವ ನಾವುಗಳು ಮಕ್ಕಳಿಗೆ ಸಮಾನತೆಯ ಪಾಠವನ್ನೇ ಹೇಳಬೇಕಾಗಿದೆ. ಭಾರತದಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಈ ಭಾಷೆಗಳೆಲ್ಲಾ ಸಮಾನ. ಈ ನುಡಿಯಾಡುವ ಜನರಲ್ಲಿ ಮೇಲುಕೀಳು ಎನ್ನುವುದು, ಅವರಾಡುವ ನುಡಿಯ ಕಾರಣದಿಂದಲೇ ಇರಬಾರದು. ದುರದೃಷ್ಟವಶಾತ್ ನಮ್ಮ ದೇಶವಾದ ಭಾರತದಲ್ಲಿ ಇದಕ್ಕೆ ವಿರುದ್ಧವಾದ ನೀತಿಯಿದೆ. ಅದನ್ನು ಭಾರತೀಯ ಸಂವಿಧಾನದಲ್ಲೇ ಅಡಕಗೊಳಿಸಲಾಗಿದೆ. ಸಂವಿಧಾನದಲ್ಲಿ ಭಾಷಾನೀತಿಯೊಂದಿದ್ದು ಅದರಲ್ಲಿ ಹಿಂದೀ ಭಾಷೆಗೆ ಉಳಿದವುಗಳಿಗೆ ಕೊಟ್ಟಿರದ ಹೆಚ್ಚುಗಾರಿಕೆಯನ್ನು ಕೊಡಲಾಗಿದೆ. ಹಿಂದೀ ಭಾಷೆಯ ಪ್ರಚಾರಕ್ಕೆ ಶ್ರಮಿಸುವಂತೆಯೂ ಹೇಳಲಾಗಿದೆ. ಭಾರತದ ಭಾಷಾನೀತಿಯಲ್ಲಿ ಇಂಥಾ ಹುಳುಕು ಇದೆ ಮತ್ತು ಇದನ್ನು ಸರಿಯಾಗಿಸಬೇಕಾಗಿದೆ... ಎಂಬ ದಿಟವನ್ನು ಹೇಳಿಕೊಡಿ. 

ಕೊನೆಹನಿ: ಅಂದ ಹಾಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರೂ ಕೂಡಾ ಕಲಿಕೆಯಲ್ಲಿ ಹಿಂದೀಯನ್ನು ಕಡ್ಡಾಯಮಾಡುವುದರ ವಿರುದ್ಧವಾಗಿದ್ದರು. ಸ್ವತಂತ್ರಕ್ಕೆ ಮೊದಲೇ ತನ್ನ ಪಕ್ಷವಾಗಿದ್ದ ಕಾಂಗ್ರೆಸ್ಸಿನ ಹಿಂದೀ ಕಡ್ಡಾಯದ ನಿಲುವನ್ನು ಇವರು ವಿರೋಧಿಸಿದ್ದರು. ಇವರನ್ನೇ ಆದರ್ಶವಾಗಿಸಿಕೊಂಡಿರುವ ತಾವು ಬೇರೇನಿಲ್ಲದಿದ್ದರೂ ಒಂದು ಸುಳ್ಳನ್ನು ಕಲಿಸುವುದನ್ನು ನಿಲ್ಲಿಸಿ, ಒಂದು ದಿಟವನ್ನು ಸಾರಿದರೆ... ನಾಳಿನ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಭಾಷಿಕ ಕೀಳರಿಮೆಯ ಬೀಜ ಮೊಳಕೆಯೊಡೆಯುವುದನ್ನು ತಪ್ಪಿಸಿದಂತಾಗುತ್ತದೆ. ಅಂದಹಾಗೆ, ಭಾರತದ ಹುಳುಕಿನ ಭಾಷಾನೀತಿಯ ಬಗ್ಗೆ ಹೆಚ್ಚಿನ ಮಾಹಿತಿಯು "ಹಿಂದೀ ಹೇರಿಕೆ: ಮೂರುಮಂತ್ರ - ನೂರು ತಂತ್ರ" ಹೊತ್ತಗೆಯಲ್ಲಿ ದೊರೆಯುತ್ತದೆ. ನೀವು ಶಿಕ್ಷಕರೆನ್ನುವ ಒಂದು ಗುರುತಿನ ದಾಖಲೆಯ ಜೊತೆ ನಮಗೆ ಬರೆಯಿರಿ. ಉಚಿತವಾಗಿ ಈ ಪುಸ್ತಕವನ್ನು ತಲುಪಿಸಲಾಗುತ್ತದೆ.

ನಮ್ಮ ಸಂಪರ್ಕ ವಿಳಾಸ : kacheri@banavasibalaga.org

ಮಕ್ಕಳ ಕಲಿಕೆಯಲ್ಲಿ ತ್ರಿಭಾಷಾ ಸೂತ್ರವೆಂಬ ಶೂಲವಿದೆಯೇ?


"ಭಾರತದ ಭಾಷಾನೀತಿಯಲ್ಲಿ ಹಿಂದೀ ಭಾಷೆಗೆ ಉಳಿದವುಗಳಿಗಿಂತ ಹೆಚ್ಚಿನ ಸ್ಥಾನಮಾನ ಕೊಟ್ಟಿರುವುದು ಸರಿಯಲ್ಲಾ, ಈ ಸ್ಥಾನಮಾನ ಉಳಿದೆಲ್ಲಾ ಭಾಷೆಗಳಿಗೂ ಸಿಗಬೇಕು" ಎನ್ನುವ ಹಕ್ಕೊತ್ತಾಯ ಕನ್ನಡನಾಡಲ್ಲಿ ಕೇಳಿಬರುತ್ತಿದೆ. ಈ ಬೇಡಿಕೆ ಭಾರತದ ಇತರೆ ಕಡೆಗಳಿಂದಲೂ ಕೇಳಿಬರುತ್ತಿರುವುದು ಗೊತ್ತೇ ಇದೆ. ಭಾರತದ ಸಂಸತ್ತಿನಲ್ಲಿ ಸಂಸದರೊಬ್ಬರು ಈಗಾಗಲೇ ಸಮಾನ ಭಾಷಾನೆತ್ತಿಗಾಗಿ ಆಗ್ರಹಿಸಿ ಖಾಸಗಿ ಮಸೂದೆಯೊಂದನ್ನು ಕೂಡಾ ಮಂಡಿಸಿದ್ದಾರೆ.

ಭಾರತದ ಹುಳುಕಿನ ಭಾಷಾನೀತಿಯನ್ನು ೧೯೫೦ರ ಸಂವಿಧಾನದಲ್ಲಿ ಸೇರಿಸಿದ ನಂತರ ಅದಕ್ಕೊಂದು ಇಲಾಖೆಯನ್ನು ಕಟ್ಟಲಾಯಿತು. ಈ ಭಾಷಾನೀತಿಯ ಗುರಿಯೇ ಇಡೀ ದೇಶದ ಎಲ್ಲ ಭಾಷೆಯ ಜನರು ಹಿಂದೀಯನ್ನು ಬಳಸುವಂತೆ ಮಾಡುವುದು. ಆ ಮೂಲಕ ಇಡೀ ದೇಶದ ಯಾವುದೇ ಮೂಲೆಗೆ ಹೋದರೂ ಹಿಂದೀ ಕಲಿತವರಿಗೆ/ ಬಲ್ಲವರಿಗೆ ಯಾವುದೇ ತೊಡಕಿಲ್ಲದಂತೆ ವ್ಯವಹರಿಸಲು ಸಾಧ್ಯವಾಗುವಂತೆ ಮಾಡುವುದು. ಇಂಥಾ ವ್ಯವಸ್ಥೆಯು ಇಡೀ ದೇಶದ ವೈವಿಧ್ಯತೆಯ ಬುನಾದಿಗೆ ಕೊಡಲಿ ಏಟು ನೀಡುವುದಕ್ಕೂ, ಹಿಂದೀಯೇತರ ಜನರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವುದಕ್ಕೂ ಕಾರಣವಾಗಿದೆ. ಇದೆಲ್ಲಾ ಸೂಕ್ಷ್ಮಗಳಿಗೆ ಕುರುಡು, ಕಿವುಡು ಆಗಿರುವ ಭಾರತ ಸರ್ಕಾರ ಮಾತ್ರಾ ತನ್ನ ಹಿಂದೀ ಪ್ರಚಾರವನ್ನು ಮುಂದುವರೆಸುತ್ತಾ, ಹಿಂದೀ ಹರಡುವಿಕೆ ದಿನೇ ದಿನೇ ಹೆಚ್ಚುವುದನ್ನು ಖಾತ್ರಿಪಡಿಸಿಕೊಳ್ಳುತ್ತಾ, ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ಸಾಗುತ್ತಿದೆ. ಬದುಕಿನ ಯಾವ ಅಂಗವನ್ನೂ ಬಿಡದೆ, ಸಾಧ್ಯವಿರುವ ಯಾವ ವಿಧಾನವನ್ನೂ ಬಿಡದೆ ಹಿಂದೀ ಹರಡುವಿಕೆಯನ್ನು ಮುಂದುವರೆಸುತ್ತಿದೆ. ಇಂಥಾ ಒಂದು ವಿಧಾನ, ಮಕ್ಕಳಿಗೆ ಶಾಲೆಯ ಹಂತದಿಂದಲೇ ಹಿಂದೀಯನ್ನು ಕಡ್ಡಾಯಗೊಳಿಸುವಿಕೆ. 

ಶಾಲಾಹಂತದಲ್ಲೇ ಹಿಂದೀ ಕಲಿಸುವಿಕೆ

ಹಿಂದೀ ಹೇರಿಕೆ ಮತ್ತದರ ವಿರೋಧದ ಸಂಘರ್ಷದ ನಾನಾ ಕಾಲಘಟ್ಟದಲ್ಲಿ ತ್ರಿಭಾಷಾ ಸೂತ್ರವೆಂಬುದು ಬಹುಮಹತ್ವದ್ದು. ಮೇಲ್ನೋಟಕ್ಕೆ ತ್ರಿಭಾಷಾಸೂತ್ರವೆಂದರೆ "ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದೀ, ಇಂಗ್ಲೀಶ್ ಜೊತೆಯಲ್ಲಿ ರಾಜ್ಯದ ಭಾಷೆಯನ್ನು ಬಳಸುವುದು" ಎಂಬುವಂತೆ ಕಾಣುವ ಇದರ ಒಳಹೂರಣ ಬೇರೆಯೇ ಆಗಿದೆ. ಇದು ಮೂಲತಃ ಮಕ್ಕಳ ಕಲಿಕೆಯಲ್ಲಿ ಯಾವ ಭಾಷೆಗಳನ್ನು ಕಲಿಸಬೇಕು ಎಂಬುದರ ಕುರಿತಾಗಿದೆ. ಹಿಂದೀ ನಾಡುಗಳಲ್ಲಿ ದಕ್ಷಿಣದ ಒಂದು ಭಾಷೆಯನ್ನೂ, ಹಿಂದೀಯೇತರ ನಾಡುಗಳಲ್ಲಿ ಹಿಂದೀಯನ್ನು ಕಲಿಸಬೇಕೆಂಬ ನೀತಿಯಿದೆ. ಅಂದರೆ ಇದರ ಅರ್ಥ, ಭಾರತದ ಎಲ್ಲೆಡೆ ಹಿಂದೀ ಕಲಿಸುವುದು ಕಡ್ಡಾಯ ಎಂಬುದೇ ಆಗಿದೆ. ವಾಸ್ತವವಾಗಿ ಹೀಗೆ ಹಿಂದೀಯೊಂದಕ್ಕೆ ಮೇಲಿನ ಸ್ಥಾನ ನೀಡಿರುವ ನೀತಿಯೇ ಹುಳುಕಿನದ್ದಾಗಿದೆ. ಯಾಕೆಂದರೆ... ನಮ್ಮ ಮಕ್ಕಳು ಶಾಲೆಯಲ್ಲಿ ಭಾಷೆಗಳನ್ನು ಕಲಿಯಬೇಕೆಂದರೆ ಭೂಮಿಯ ಮೇಲೆ ಹಿಂದೀಯಲ್ಲದೇ ನೂರಾರು ಭಾಷೆಗಳಿವೆ! ಕನ್ನಡನಾಡಲ್ಲೇ ತುಳು,ಕೊಡವದಂಥಾ ನುಡಿಗಳಿವೆ. ನಮ್ಮ ರಾಜ್ಯಕ್ಕೆ ಹೆಚ್ಚು ಹತ್ತಿರದಲ್ಲಿರುವ ತಮಿಳು, ತೆಲುಗು, ಮಲಯಾಳಂ, ಮರಾಠಿ ಮೊದಲಾದ ನುಡಿಗಳಿವೆ. ಇವುಗಳನ್ನು ಆರಿಸಿಕೊಳ್ಳಬೇಕೆಂದು ಯಾರಾದರೂ ಅಂದುಕೊಂಡರೆ ಅದಕ್ಕೆ ಅವಕಾಶವೆಲ್ಲಿದೆ? ಆಯ್ಕೆಯ ಅವಕಾಶವನ್ನೇ ಬರಿದಾಗಿಸಿ ಹಿಂದೀಯೊಂದನ್ನೇ ಕಲಿಯಬೇಕೆಂಬ ನೀತಿಯನ್ನು ಅನುಸರಿಸುವುದು ಅಮಾನವೀಯ. ಇಷ್ಟಕ್ಕೂ ಶಾಲೆಗಳ ಕಲಿಕೆಯ ಈ ತ್ರಿಭಾಷಾ ಸೂತ್ರ ನಮ್ಮಲ್ಲಿದೆಯೇ ಹೊರತು ಬೇರೆಡೆ ಇಷ್ಟೊಂದು ಪರಿಣಾಮಕಾರಿಯಾಗಿರುವುದು ಕಾಣುತ್ತಿಲ್ಲ. ಅಂದರೆ ಕರ್ನಾಟಕದ ಮಕ್ಕಳು ಹಿಂದೀ ಕಲಿಯುತ್ತಿರುವುದನ್ನು ಕಾಣುತ್ತಿದ್ದೇವೆಯೇ ಹೊರತು ಭಾರತದ ಇನ್ಯಾವುದೇ ರಾಜ್ಯದಲ್ಲಿ (ವಿಶೇಷವಾಗಿ ಹಿಂದೀ ಭಾಷೆಯ ರಾಜ್ಯಗಳಲ್ಲಿ) ಕನ್ನಡವನ್ನು ಮೂರನೆಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸುವುದನ್ನು ಕಾಣಲಾರೆವು! ಕನ್ನಡಿಗರಲ್ಲಿ ಹಿಂದೀ ಬಗ್ಗೆ, ಹಿಂದೀಭಾಷಿಕರ ವಲಸೆಯ ಬಗ್ಗೆ, ಹಿಂದೀ ಸಿನಿಮಾಗಳ ಬಗ್ಗೆ ಶರಣಾಗತಿ ಸಹಿತವಾದ ಒಪ್ಪಿಗೆಯ ಮನೋಭಾವನೆ ಮೂಡುವಲ್ಲಿ ಶಾಲಾಹಂತದಲ್ಲಿಯೇ ಆರಂಭವಾಗಿರುವ ಹಿಂದೀ ಹೇರಿಕೆಯೇ ಮೂಲಕಾರಣವಾಗಿದೆ. ಕನ್ನಡಿಗರ ಮನಸ್ಸಲ್ಲಿ "ಇದು ಹೇರಿಕೆಯೇ ಅಲ್ಲಾ! ಹಿಂದೀಯನ್ನು ಯಾಕೆ ತಾನೇ ವಿರೋಧಿಸಬೇಕು?" ಎಂಬ ಕುರುಡನ್ನು ತುಂಬುತ್ತಿರುವುದು ಕೂಡಾ ಇದೇ ಆಗಿದೆ!

ಇಂಥಾ ನೀತಿಯ ಬೆನ್ನತ್ತಿ!

ರಾಜ್ಯದ ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡ, ಇಂಗ್ಲೀಶ್ ಜೊತೆಯಲ್ಲಿ ಹಿಂದೀಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ನೀತಿ ಇದೆಯೇನೋ ಎನ್ನುವಂತೆ ಕಾಣುತ್ತಿದ್ದು, ನಿಜಕ್ಕೂ ಕರ್ನಾಟಕ ಪ್ರಾಥಮಿಕ ಶಿಕ್ಷಣ ಇಲಾಖೆಯು ಇಂಥದ್ದೊಂದು ನೀತಿಯನ್ನು ಅಳವಡಿಸಿಕೊಂಡಿದೆಯೋ ಇಲ್ಲವೋ ಎನ್ನುವುದು ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ೧೯೮೨ಕ್ಕೆ ಮುನ್ನ ಕರ್ನಾಟಕದ ಶಾಲೆಗಳಲ್ಲಿ ಹಿಂದೀ ಕಲಿಕೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕಾದ ವಿಷಯವೇ ಆಗಿರಲಿಲ್ಲಾ. ಮುಂದೆ ಇದು ಐವತ್ತರ ಅಂಕೆಯ ಪರೀಕ್ಷೆಯ ವಿಷಯವಾದರೂ ಪಾಸಾಗಲು ೧೩ ಅಂಕ ಬಂದರೆ ಸಾಕು ಎಂದಾಗಿದ್ದು ಮುಂದೆ ನೂರಂಕೆಯ ಕಡ್ಡಾಯವಾಗಿ ಪಾಸಾಗಲೇ ಬೇಕಾದ ವಿಷಯವಾಗಿ ಬದಲಾಗಿದೆಯೆಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ಹಾಗಾಗಿದ್ದಲ್ಲಿ ಈ ಬದಲಾವಣೆಗೆ ಕಾರಣವೇನು? ಕರ್ನಾಟಕದ ಶಾಲಾಕಲಿಕೆಯಲ್ಲಿ ಅಸಲಿಗೆ ಇರುವ ನೀತಿಯೆಂಥದ್ದು? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗೆಳೆಯರೊಬ್ಬರು ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮಾಹಿತಿಯನ್ನು ಕೋರಿ "ಮಾಹಿತಿ ಹಕ್ಕು ಕಾಯ್ದೆ:೨೦೦೫"ರ ಅನ್ವಯ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ಪೂರ್ಣಪಾಟ ಇಲ್ಲಿದೆ:

1. ಕರ್ನಾಟಕದ ಶಿಕ್ಷಣ ಇಲಾಖೆಯ ನೀತಿಯಂತೆ, ಪ್ರಾಥಮಿಕ ಶಾಲೆಗಳಲ್ಲಿ ಐದರಿಂದ-ಏಳನೇ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೂರು ಭಾಷೆ ಕಲಿಯುವುದು ಕಡ್ಡಾಯವೇ?

2.  ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಪ್ರಾಥಮಿಕ ಶಾಲೆಗಳಲ್ಲಿ ಐದರಿಂದ ಏಳನೇ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಮೂರು ಭಾಷೆ ಕಲಿಯುವುದು ಕಡ್ಡಾಯವೆಂದಾದರೆ, ಮೂರು ಭಾಷೆಗಳನ್ನು ಕಲಿಸಬೇಕು ಮತ್ತು ಅವಕ್ಕೆ ಪರೀಕ್ಷೆ ನಡೆಸಬೇಕು ಎಂಬ ನೀತಿ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯನ್ನು ಕರ್ನಾಟಕ ರಾಜ್ಯ ಸರ್ಕಾರ ನಿರ್ದೇಶಿಸಿತ್ತೇ?
3. ಪ್ರಶ್ನೆ 2ಕ್ಕೆ ಉತ್ತರ, "ರಾಜ್ಯ ಸರ್ಕಾರ ನಿರ್ದೇಶಿಸಿದ್ದು ಹೌದು" ಎಂದಾದಲ್ಲಿ, ನಿರ್ದೇಶನವಿರುವ ಧ್ರುಡೀಕ್ರುತ ಪತ್ರದ ಪ್ರತಿಯೊಂದನ್ನು ನೀಡಿ.
4. ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಪ್ರಾಥಮಿಕ ಶಾಲೆಗಳಲ್ಲಿ ಐದರಿಂದ ಏಳನೇ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಮೂರು ಭಾಷೆಗಳ ಕಲಿಕೆ ಕಡ್ಡಾಯವೆಂದಾದರೆ, ಆ ಮೂರರಲ್ಲಿ ಹಿಂದಿ ಭಾಷೆಯು ಕಡ್ಡಾಯವೇ?
5. ಪ್ರಶ್ನೆ 4ಕ್ಕೆ ಉತ್ತರ "ಹಿಂದಿ ಕಡ್ಡಾಯವಲ್ಲ" ಎಂದಾದಲ್ಲಿ, ಬೇರೆ ಯಾವ ಯಾವ ಭಾಷೆಗಳನ್ನು ಕಲಿಕೆಗೆ ಆರಿಸಿಕೊಳ್ಳುವ ಆಯ್ಕೆಯಿರುತ್ತದೆ? ತಿಳಿಸಿ.


6. ಪ್ರಶ್ನೆ 4ಕ್ಕೆ ಉತ್ತರ "ಹಿಂದಿ ಕಡ್ಡಾಯ" ಎಂದಾದಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದ ಮೇಲೆ ಹಾಗೆ ಮಾಡಲಾಗಿದೆಯೇ? ಹಾಗೊಂದು ನಿರ್ದೇಶನ ಕರ್ನಾಟಕ ಸರ್ಕಾರದಿಂದ ಬಂದಿದ್ದರೆ, ಆ ನಿರ್ದೇಶನವಿರುವ ಧ್ರುಡೀಕ್ರುತ ಪತ್ರದ ಪ್ರತಿಯೊಂದನ್ನು ನೀಡಿ.
7. ಹಲ ವರುಶಗಳ ಹಿಂದೆ, ಕರ್ನಾಟಕ ಶಿಕ್ಷಣ ಇಲಾಖೆಯು ನಡೆಸುವ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತ್ರುತೀಯ ಭಾಷೆಯನ್ನು ಐವತ್ತು ಮಾರ್ಕಿನ ಪರೀಕ್ಷೆ ಎಂದು ಮಾಡಲಾಗಿತ್ತು. ಯಾವಾಗಲಿಂದ ತ್ರುತೀಯ ಭಾಷೆಯನ್ನು ನೂರು ಮಾರ್ಕಿನ ಪರೀಕ್ಷೆ ಎಂದು ಮಾಡಲಾಗಿದೆ? ಮತ್ತು, ಹಾಗೆ ಬದಲಾಯಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತೇ? ಹಾಗೊಂದು ನಿರ್ದೇಶನ ಕರ್ನಾಟಕ ಸರ್ಕಾರದಿಂದ ಬಂದಿದ್ದರೆ, ಆ ನಿರ್ದೇಶನವಿರುವ ಧ್ರುಡೀಕ್ರುತ ಪತ್ರದ ಪ್ರತಿಯೊಂದನ್ನು ನೀಡಿ.
ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕುವುದು ನಮಗೆ ಬೇಕಿಲ್ಲಾ ಎಂಬ ಅನಿಸಿಕೆಯನ್ನು ಹೊಂದಿರುವವರೆಲ್ಲಾ ಈ ಹೆಜ್ಜೆಯನ್ನು ಬೆಂಬಲಿಸುವ ಭರವಸೆ ನಮ್ಮದು. 

ನೀವೂ ದನಿಗೂಡಿಸಿ..

ಭಾರತದ ಭಾಷಾನೀತಿಯು ಬದಲಾಗುವುದು ಈ ಹುಳುಕಿಗೆ ಮದ್ದು! ಈ ನಿಟ್ಟಿನಲ್ಲಿ ಭಾರತ ಸರ್ಕಾರವನ್ನು ಕರ್ನಾಟಕ ರಾಜ್ಯಸರ್ಕಾರವು "ಸಮಾನತೆಯ ಭಾಷಾನೀತಿ"ಗಾಗಿ ಒತ್ತಯಿಸಬೇಕೆಂದು ಬಯಸುವ ಹೆಜ್ಜೆಯೊಂದನ್ನು ಬನವಾಸಿ ಬಳಗ ಇಟ್ಟಿದೆ. ಮಿಂಬಲೆ ತಾಣದಲ್ಲಿ ಆರಂಭಿಸಲಾಗಿರುವ "ಭಾರತದ ಹುಳುಕಿನ ಭಾಷಾನೀತಿಯನ್ನು ಬದಲಿಸಬೇಕೆಂಬ ಆಶಯ"ದ ಕೂಗಿಗೆ ನೀವೂ ದನಿ ಸೇರಿಸಿ. ಈ ಪಿಟಿಷನ್‌ಗೆ ಸಹಿ ಮಾಡಿರಿ!
Related Posts with Thumbnails