ಕನ್ನಡ ಚಿತ್ರರಂಗ ಮತ್ತು ಸ್ಪರ್ಧೆ!


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮ ಮೀರಿ ರಾವಣ್ ಅನ್ನೋ ಹಿಂದಿ ಚಿತ್ರವನ್ನು ಕರ್ನಾಟಕದಾದ್ಯಂತ ಪ್ರದರ್ಶಿಸಲು ಮುಂದಾದ ಬಿಗ್ ಪಿಕ್ಚರ್ಸ್ ಅವರ ಕ್ರಮವನ್ನು ವಾಣಿಜ್ಯ ಮಂಡಳಿ ವಿರೋಧುಸ್ತು. ಮಂಡಳಿ ವಿರುದ್ಧ ಬಿಗ್ ಸಂಸ್ಥೆ ಕೋರ್ಟಿಗ್ ಹೋಯ್ತು. ಕೋರ್ಟು ಈ ಪ್ರಕರಣಾನಾ ಮಾರಕಟ್ಟೆಯಲ್ಲಿ ನ್ಯಾಯಯುತವಾದ ಸ್ಪರ್ಧೆಗೆ ಅನುವು ಮಾಡಿಕೊಡಲು ಇರುವ ಕಾಂಪಿಟೇಶನ್ ಕಮಿಶನ್ ಆಫ್ ಇಂಡಿಯಾ(ಸಿ.ಸಿ.ಐ) ಅನ್ನೋ ಸಂಸ್ಥೆಗೆ ವಹಿಸಿತ್ತು. ಸಿ.ಸಿ.ಐನವರು ಬಿಗ್ ಪಿಕ್ಚರ್ಸ್ ಪರವಾಗಿ ತೀರ್ಪು ಕೊಟ್ಟು, ಅವರು ಕರ್ನಾಟಕದಲ್ಲಿ ಎಷ್ಟು ಪ್ರತಿಗಳನ್ನು ಬೇಕಾದರೂ ಹಾಕಬಹುದು ಎಂಬ ತೀರ್ಪು ಕೊಟ್ಟಿದ್ದಾರೆ ಅನ್ನುತ್ತೆ ಜೂನ್ 22ನೇ ತಾರೀಖಿನ ಡಿ.ಎನ್.ಎ ಪತ್ರಿಕೆಯ ಒಂದು ವರದಿ. ಇದನ್ನು ನೋಡಿದ ಮೇಲೆ ನ್ಯಾಯಯುತವಾದ ಸ್ಪರ್ಧೆ ಅಂದ್ರೆ ಏನು ಅನ್ನೋ ಬಗ್ಗೆನೇ ಪ್ರಶ್ನೆಗಳು ಹುಟ್ತಾ ಇವೆ ಗುರು!

ಇವರು ಹೇಳಿದ್ದೇನು?

ಪತ್ರಿಕೆ ವರದಿ ಹೇಳೊದು ಹೀಗಿದೆ:
According to the CCI's order, the KFCC need not interfere with the screening of the film and it was entirely up to Big Pictures to release it in as many theatres as needed as it is an independent body and therefore has the right to do so.
ಏನಿದರ ಅರ್ಥ? ಬಿಗ್ ಸಂಸ್ಥೆಯವರು ಎಷ್ಟು ಚಿತ್ರಮಂದಿರದಲ್ಲಿ ಬೇಕಾದ್ರೂ ರಾವಣ್ ಬಿಡುಗಡೆ ಮಾಡಬಹುದು. ಅದುನ್ನ ಕೆ.ಎಫ್.ಸಿ.ಸಿ ಪ್ರಶ್ನಿಸೋ ಹಾಗಿಲ್ಲ ಅಂತಾ ತಾನೆ?. ಸ್ಪರ್ಧಾ ಆಯೋಗವು ಸಿನಿಮಾ ಅನ್ನೋದನ್ನು ಬರೀ ಒಂದು ಉದ್ದಿಮೆಯಾಗಿ, ಒಂದು ಉತ್ಪನ್ನವಾಗಿ ನೋಡಿ ಈ ರೀತಿಯ ಅನಿಸಿಕೆ ವ್ಯಕ್ತಪಡಿಸಿರಬಹುದು. ಆದರೆ ಮನರಂಜನಾ ಕ್ಷೇತ್ರ ಅನ್ನೋದು ಬರೀ ಮಾರುಕಟ್ಟೆಯ ಲಾಭನಷ್ಟಗಳ ಆಡುಂಬಲ ಮಾತ್ರಾ ಅಲ್ಲಾ. ಒಂದು ನಾಡಿನ ಅನನ್ಯತೆ, ನುಡಿ, ಸಂಸ್ಕೃತಿಗಳ ಮೇಲೆ ಈ ಕ್ಷೇತ್ರ ಬೀರೋ ಪ್ರಭಾವಾ ಮಹತ್ವದ್ದು. ಒಟ್ಟಲ್ಲಿ ಆಯೋಗದ ಈ ತೀರ್ಪು, ನಮ್ಮ ನಾಡಿನ ಸ್ಥಳೀಯವಾದ ಉದ್ದಿಮೆಯೊಂದು ಸಾಯೋಕೇ ಕಾರಣವಾದೀತು ಅನ್ನೋದನ್ನು ಗಮನಕ್ಕೆ ತೊಗೊಂಡು ಕೊಟ್ಟಹಾಗಿಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳಿಗೆ ಕರ್ನಾಟಕ ಅನ್ನುವುದು ಮೂಲ ಮಾರುಕಟ್ಟೆಯಲ್ಲ, ಆದರೆ ಕನ್ನಡ ಚಿತ್ರಗಳಿಗೆ ಅದೇ ಪ್ರಾಥಮಿಕ ಮತ್ತು ಸದ್ಯದ ಏಕೈಕ ಮಾರುಕಟ್ಟೆ. ಇರೋ 600 ಚಿತ್ರಮಂದಿರಗಳಲ್ಲಿ ಒಂದೊಂದು ಪರಭಾಷಾ ಚಿತ್ರಕ್ಕೇ ನೂರಾರು ಚಿತ್ರಮಂದಿರಗಳನ್ನು ಕೊಟ್ಟರೆ ಕನ್ನಡ ಚಿತ್ರಗಳೇನು ಮಾಡಬೇಕು ಅನ್ನೋದನ್ನೆಲ್ಲಾ ಆಯೋಗ ಗಮನಿಸಿದಂತಿಲ್ಲ.

ಅವರು ಬೆಳೆಯೋದು, ನಾವು ಅಳಿಯೋದೇ ನ್ಯಾಯವಾದ ಸ್ಪರ್ಧೆನಾ?

ಪ್ರತಿಯೊಂದು ದೇಶವೂ, ಪ್ರದೇಶವೂ ತನ್ನ ಮಾರುಕಟ್ಟೆಯನ್ನು ಸ್ಪರ್ಧೆಯಿಂದ ಕಾಪಾಡಿಕೊಳ್ಳುವ ಕ್ರಮವನ್ನು ಸದಾ ಕೈಗೊಂಡಿರುತ್ತೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಮುಕ್ತ ಮಾರುಕಟ್ಟೆಯನ್ನು ಒಪ್ಪಿರುವ ಜಗತ್ತಿನ ಎಲ್ಲ ದೇಶಗಳಲ್ಲೂ ಕೂಡಾ ತಮ್ಮ ಮಾರುಕಟ್ಟೆ, ತಮ್ಮ ಹಿತ ಕಾಯ್ದುಕೊಳ್ಳಲು ತನ್ನದೇ ನೀತಿ ನಿಯಮಗಳು ಇರುತ್ತವೆ. "ಮಾರುಕಟ್ಟೆಯೇ ಎಲ್ಲವನ್ನೂ ನಿರ್ಧರಿಸುತ್ತೆ, ಅಲ್ಲಿ ಯಾವುದೇ ರೀತಿಯ ಅಡೆತಡೆಗಳಿರಬಾರದು" ಅನ್ನೋದೊಂದೇ ದಿಟವಾಗುವುದಾದರೆ ಯಾಕೆ ಭಾರತ ಸರ್ಕಾರ, ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವಿನ ಮೇಲೂ ಆಮದು ಸುಂಕ ಹಾಕುತ್ತೆ? ಅದೂ ಎಲೆಕ್ಟ್ರಾನಿಕ್, ಕಾರು ಮುಂದಾದವುಗಳ ಮೇಲೆ ಯದ್ವಾತದ್ವಾ ಸುಂಕ ಯಾಕೆ ಹಾಕುತ್ತೆ? ಇಲ್ಲಿರುವ ಉದ್ಯಮದ ಹಿತ ಕಾಯುವ ಸಲುವಾಗಿ ತಾನೇ? ಹಾಗೆಯೇ ಕರ್ನಾಟಕದಲ್ಲಿ ಕನ್ನಡ ಚಿತ್ರೋದ್ಯಮದ ರಕ್ಷಣೆಗಾಗಿ ನಾವು ನಿಯಮ ಮಾಡಿಕೊಂಡಿರುವುದರಲ್ಲಿ ತಪ್ಪೇನಿದೆ? ನಮ್ಮ ನಾಡಿನ ಉದ್ಯಮದ ರಕ್ಷಣೆಗೆ ಇರುವ ನಿಯಮಾನ ಮುರಿಯಲು ನಿಂತಿರುವ ಸಂಸ್ಥೆಗೆ "ನ್ಯಾಯವಾದ ಸ್ಪರ್ಧೆ"ಯ ಹೆಸರಿನಲ್ಲಿ ‘ನೀ ಮಾಡಿದ್ದು ಸರಿ’ ಅಂತನ್ನೋದು ಸರಿಯೇ? ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಓಡ್ತಾ ಇರೋ ಚಿತ್ರಮಂದಿರಗಳಿಂದ ಆ ಚಿತ್ರಗಳನ್ನು ಕಿತ್ತೆಸೆದು ಹಿಂದಿ ಚಿತ್ರಗಳಿಗೆ ಕೊಡುವುದು ನ್ಯಾಯವಾದ ಸ್ಪರ್ಧೆನಾ? ಹಾಗೇ ಅವರು ಬೆಳೆದು, ನಾವು ಅಳಿಯೋದೇ ನ್ಯಾಯಯುತವಾದ ಸ್ಪರ್ಧೆನಾ?

ನಮ್ಮ ಉದ್ಯಮ ಉಳಿಸಿಕೊಳ್ಳುವುದು ನಮ್ಮ ಹಕ್ಕು

ಜಗತ್ತಿನಾದ್ಯಂತ ಯಾವುದೇ ಭಾಷಾ ಜನಾಂಗಕ್ಕೆ ತನ್ನ ಮಾರುಕಟ್ಟೆ, ತನ್ನತನವನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕಿದೆ. ಯುನೆಸ್ಕೊ ಪಟ್ಟಿ ಮಾಡಿರುವ ಭಾಷಾ ಹಕ್ಕುಗಳಲ್ಲಿಯೂ ಇದನ್ನು ಎತ್ತಿ ಹಿಡಿಯಲಾಗಿದೆ. ಆರ್ಟಿಕಲ್ 45 ಹೇಳುತ್ತೆ:
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life).

ಇದರಂತೆ ಕರ್ನಾಟಕದ ಜನತೆಗೆ ಕನ್ನಡ ಹಾಗೂ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಎಲ್ಲ ಅಧಿಕಾರವನ್ನು ಮಾನ್ಯಮಾಡಬೇಕಲ್ವಾ? ಈ ಹಕ್ಕು ಕನ್ನಡಿಗರಿಗೆ ಇರಬೇಕಲ್ವಾ? ಯಾವುದು ಏನೇ ಹೇಳಲಿ, ನಮ್ಮ ನಾಡಿನ ಜನರು ಈ ಎಲ್ಲಾ ಬೆಳವಣಿಗೆಗಳನ್ನು ಅರ್ಥಮಾಡ್ಕೊಂಡು ಪರಭಾಷಾ ಮನರಂಜನೆಯ ವ್ಯಾಮೋಹದಿಂದ ಹೊರಬರಬೇಕಾಗಿದೆ. ಇಂಥಾ ಜಾಗೃತಿಯನ್ನು ಮೂಡಿಸೋ ಹೊಣೆ ನಮ್ಮ ಕನ್ನಡ ಚಲನಚಿತ್ರರಂಗಕ್ಕಿದೆ ಅಲ್ವಾ ಗುರೂ!

ಹೊಗೇನಕಲ್ ವಿವಾದ: ಸರಿಯಾಗಿ ದನಿ ಎತ್ತಬೇಕು!


ತಮಿಳುನಾಡು ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಂಡಿರೋದ್ರು ಬಗ್ಗೆ ಘನ ಕರ್ನಾಟಕ ರಾಜ್ಯ ಸರ್ಕಾರದೋರು ಕೇಂದ್ರಸರ್ಕಾರಕ್ಕೆ ದೂರು ಒಯ್ದು, ನ್ಯಾಯ ಕೇಳಿದ್ದಕ್ಕೆ ಕೇಂದ್ರಸರ್ಕಾರದೋರು ಸಕ್ಕತ್ತಾಗಿ ಮಂಗಳಾರತಿ ಎತ್ತಿ ಕಳಿಸಿರೋ ಸುದ್ದಿ ದಿನಾಂಕ 22.06.2010ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ರಾರಾಜುಸ್ತಿದೆ ಗುರೂ! ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರ್ನಾಟಕ ಎತ್ತಿರೋ ತಕರಾರಿನ ಬಗ್ಗೆ ಅಸಮಾಧಾನ ತೋರಿಸಿದೆ.

ತಕರಾರಿನ ಬಗ್ಗೆ ಕೇಂದ್ರಕ್ಕೆ ಗೊತ್ತಾ?
ಈ ವರದಿ ಓದಿದಾಗ, ಇಡೀ ಹೊಗೇನಕಲ್ ಯೋಜನೇನಾ ಕರ್ನಾಟಕ ಯಾಕೆ ವಿರೋಧುಸ್ತಾಯಿದೆ ಅನ್ನೋದ್ರು ಬಗ್ಗೆಯೇ ಕೇಂದ್ರಕ್ಕೆ ಸ್ಪಷ್ಟತೆ ಇದ್ದಂಗಿಲ್ಲ ಅನ್ಸುತ್ತೆ. ತಮಿಳುನಾಡಿನೋರು ಯೋಜನೆಯ ಆರಂಭದಲ್ಲಿ 1.4 ಟಿ.ಎಂ.ಸಿ ಅಂದು, 2.1 ಟಿ.ಎಂ.ಸಿ ಬಳುಸ್ತಾರೆ ಅನ್ನೋದು ಕರ್ನಾಟಕದ ಪ್ರಮುಖ ಆರೋಪ ಆಗಿತ್ತೇನೋ ಅಂತಾ ವರದಿ ನೋಡಿದಾಗ ಅನ್ನಿಸುತ್ತೆ. ನಮ್ಮ ನೆಲದಲ್ಲಿ ಅಕ್ರಮವಾಗಿ ಯೋಜನೆ ಮಾಡ್ತಾ ಇದಾರೆ ಅನ್ನೋ ಕಾರಣಕ್ಕೆ ಇದುನ್ನ ತಡೀಬೇಕು. ಜಂಟಿ ಸರ್ವೇ ಆದಮೇಲೆ ಮುಂದುವರುಸ್ಲಿ ಅನ್ನೋ ವಿಷಯದ ಮೇಲೆ ಯಾಕೋ ಒತ್ತು ಕೊಟ್ಟಿರೋ ಹಾಗೇ ಕಾಣ್ತಿಲ್ಲ. ಯಾಕಂದ್ರೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ, ನಿಮ್ಮ ತಕರಾರು ಗಡಿ ಬಗ್ಗೆ ಇದ್ದಲ್ಲಿ ಗೃಹ ಖಾತೆ ಹತ್ರ ದೂರು ಒಯ್ಯಿರಿ ಅಂತಾ ಅಂದಿದೆ.

ಗಡಿ ಅತಿಕ್ರಮಣವೇ ಮುಖ್ಯ ವಿಷಯ.
ನಿಜವಾಗಲೂ ಕರ್ನಾಟಕದ ತಕರಾರು ಇರೋದು ಗಡಿ ಅತಿಕ್ರಮಣದ ಬಗ್ಗೆ. ಯಾಕೆ ತಮಿಳುನಾಡು ಹೊಗೇನಕಲ್ ಗಡಿಯ ಜಂಟಿ ಸಮೀಕ್ಷೆಯನ್ನು ಅರ್ಧದಲ್ಲೇ ನಿಲ್ಲಿಸಿ ಮುಂದುವರಿಸಲು ಒಪ್ಪದೆಯೇ ಯೋಜನೆ ಆರಂಭಿಸುತ್ತಿದೆ ಅನ್ನೋದರ ಬಗ್ಗೆ. ಕೇಂದ್ರಸರ್ಕಾರ ಮಧ್ಯಸ್ಥಿಕೆ ವಹಿಸಿ ಗಡಿ ಸಮೀಕ್ಷೆ ಮಾಡಿಸಿ, ಅವರ ನೆಲದಲ್ಲಿ ಅವರು ಕುಡಿಯುವ ನೀರಿನ ಯೋಜನೆಯನ್ನು ಒಪ್ಪಂದದಂತೆ ಮಾಡಲು ನಮ್ಮ ಅಭ್ಯಂತರವೇನಿಲ್ಲಾ. ಈ ನಮ್ಮ ನಿಲುವಿನ ಬಗ್ಗೆ ಚಕಾರವನ್ನೇ ಎತ್ತದೆ ಕೇಂದ್ರ ಸಚಿವಾಲಯ ಕಳಸಾ ಭಂಡೂರಾ ತಕರಾರನ್ನು ಇದರೊಟ್ಟಿಗೆ ತಳುಕು ಹಾಕಿದ ಹಾಗಿದೆ. ಇಷ್ಟಕ್ಕೂ ಕರ್ನಾಟಕ ಈ ಹಿಂದೆ ಚೆನ್ನೈನ ಕುಡಿಯುವ ನೀರಿನ ಯೋಜನೆಗಾಗಿ ಕೃಷ್ಣಾ ನದಿಯ ನಮ್ಮ ಪಾಲಿನ ಐದು ಟಿ.ಎಂ.ಸಿಯಷ್ಟು ನೀರನ್ನು ಬಿಟ್ಟು ಕೊಟ್ಟಿರೋದನ್ನು ನಾವಾದ್ರೂ ನೆನಪು ಮಾಡಬೇಕಿತ್ತು. ಇಲ್ಲಾಂದ್ರೆ ಹೀಗೆ ‘ಕರ್ನಾಟಕ ಕುಡಿಯೋ ನೀರಿನ ಯೋಜನೆಗೆ ತೊಡರುಗಾಲಿಕ್ಕುವ ಅಮಾನವೀಯ ರಾಜಕೀಯ ಮಾಡ್ತಾಯಿದೆ’ ಅನ್ನೋ ಥರದಾ ಆರೋಪಕ್ಕೆ ಗುರಿಯಾಗಬೇಕಿತ್ತಾ? ಇದುಕ್ಕೆಲ್ಲಾ ನಮ್ಮ ರಾಜ್ಯ ಸರಿಯಾದ ಉತ್ತರ ಕೊಡಬೇಕಿದೆ. ನಿಜಕ್ಕೂ ರಾಜ್ಯದ ಹಕ್ಕುಗಳಿಗಾಗಿ ಬಡಿದಾಡಬೇಕು ಅನ್ನೋ ರಾಜಕೀಯ ಇಚ್ಛಾಶಕ್ತಿ ತನಗಿದೆ ಅನ್ನೋದನ್ನು ನಮ್ಮ ರಾಜ್ಯಸರ್ಕಾರ ತೋರಿಸಿಕೊಡಬೇಕಾಗಿದೆ. ಅಲ್ವಾ ಗುರೂ!

ರಾಜ್ಯದಲ್ಲಿ CBSE ಶಾಲೆಗಳಿಗೆ ಅನುಮತಿ: ಹೇಗೆಂದು ಬಲ್ಲಿರಾ?


ಬೆಂಗಳೂರೂ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ, ಸಿ.ಬಿ.ಎಸ್.ಇ ಪದ್ದತಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲು ಕರ್ನಾಟಕ ರಾಜ್ಯಸರ್ಕಾರವು ಗಟ್ಟಿ ಮನಸ್ಸು ಮಾಡಿದ ಹಾಗಿದೆ. ಆದರೆ ಹೀಗೆ ಪಾಲಿಕೆಯ ಶಾಲೆಯನ್ನು ಭಾರತೀಯ ವಿದ್ಯಾಭವನಕ್ಕೆ ಕೇಂದ್ರೀಯ ಪಠ್ಯಕ್ರಮದಲ್ಲಿ ಕಲಿಸಲು ಒಪ್ಪಿಸಲು ಸರ್ಕಾರದ ನೀತಿನಿಯಮಗಳ ರೀತ್ಯಾ ಅವಕಾಶ ಇದೆಯೇ? ಅಂತಾ ನೋಡಿದರೆ ಕುತೂಹಲಕಾರಿ ವಿಷಯಗಳು ಕಾಣುತ್ತಿವೆ ಗುರೂ!

ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು ವಿಧಿಸಿರೋ ಕರಾರು...

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (N.O.C) ಸಲ್ಲಿಸಬೇಕು ಅನ್ನೋ ನಿಯಮಾನ ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆ ಇಲ್ಲ.

ನಿರಪೇಕ್ಷಣಾ ಪತ್ರ ಕೊಡಲು ಇರೋ ನಿಯಮಾ...

ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಪೇಕ್ಷಣಾ ಪತ್ರ ಕೊಡಕ್ಕೆ ಅಂತಾನೆ ಒಂದು ನಿಯಮಾನಾ 1989ರಲ್ಲೇ ಮಾಡಿದೆ. ಅದುಕ್ಕೆ ಆಗಿಂದಾಗ್ಗೆ ತಿದ್ದುಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.

- ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
- ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಸೂಚನೆಗಳನ್ನು ಪಾಲಿಸಿರಬೇಕು/ ಪಾಲಿಸಬೇಕು.

ಇದಕ್ಕೆ 2002ರಲ್ಲಿ ಒಂದು ತಿದ್ದುಪಡಿ ಮಾಡಿ, ‘ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು’ ಎಂದು ಸೇರಿಸಿದ್ದಾರೆ.

ಸರ್ಕಾರದ ನಿಲುವು ಸರಿಯೇ?

ಮುಂದಿನ ಹೆಜ್ಜೆ ಇಡುವ ಮೊದಲು ಘನ ಕರ್ನಾಟಕ ಸರ್ಕಾರ ಒಂದು ಸಲ ತಾನೇ ವಿಧಿಸಿರೋ ಈ ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ನೋಡಲಿ. ಈಗ ನಗರಪಾಲಿಕೆಯೋರು ಭಾರತೀಯ ವಿದ್ಯಾಭವನಕ್ಕೆ ಒಪ್ಪಿಸಲು ಮುಂದಾಗಿರೋ ಶಾಲೆಯಲ್ಲಿ ಕೇಂದ್ರಸರ್ಕಾರಿ ನೌಕರರ ಮಕ್ಕಳು, ವರ್ಗಾವಣೆಗೆ ಈಡಾಗಬಲ್ಲ ಮಕ್ಕಳು ಇರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆಯೇ? ರಾಜ್ಯ ಸರ್ಕಾರ, ತಾನೇ ವಿಧಿಸಿರುವ ಭಾಷಾನೀತಿ ಬಗೆಗಿನ ನಿಯಮಾನ ಉಲ್ಲಂಘನೆ ಮಾಡ್ತಾ ಇದೆಯೇ? ಅಷ್ಟೇ ಯಾಕೆ? ಇದುವರೆಗೂ ನಮ್ಮ ರಾಜ್ಯದಲ್ಲಿ ಗಲ್ಲಿಗೊಂದರಂತೆ ನಡೀತಾ ಇರೋ ಸಿ.ಬಿ.ಎಸ್.ಇ ಶಾಲೆಗಳಲ್ಲೆಲ್ಲಾ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲಿ/ ಕನ್ನಡದಲ್ಲಿ ಕಲಿಸುತ್ತಾ ಇದ್ದಾರೆಯೇ? ಅನ್ನೋದನ್ನೆಲ್ಲಾ ನೋಡಲಿ. ಇಲ್ಲದಿದ್ದಲ್ಲಿ ಜನರಿಗೆ ಹುಟ್ಟೋ ಅನುಮಾನವೇ ಬೇರೆ. ಸರ್ಕಾರಕ್ಕೇ ತನ್ನ ನೀತಿಗಳ ಬಗ್ಗೆ ಬೆಲೆಯಿಲ್ಲ, ಬರೀ ಕಣ್ಣೊರೆಸೋ ನಾಟಕ ಆಡ್ತಿದೆ ಅಂತಾ ಜನಾ ಅಂದುಕೊಳ್ಳಲ್ವಾ... ಗುರೂ?

ದೇವುಡು ಅವರ "ಮಯೂರ" ಕಾದಂಬರಿಯನ್ನು ನೀವಿನ್ನೂ ಓದಿಲ್ವಾ?


ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ. ಪಲ್ಲವರ ಕೈಯ್ಯಿಂದ ನಮ್ಮ ನಾಡನ್ನು ಮುಕ್ತಿಗೊಳಿಸಿ ಕನ್ನಡಿಗರ ಮಹಾನ್ ಸಾಮ್ರಾಜ್ಯದ ಮೊಳಕೆಯನ್ನು ಬನವಾಸಿಯಲ್ಲಿ ಕಟ್ಟಿದ ಶೂರ ಮಯೂರವರ್ಮ. ಹೀಗೆ ಮಯೂರನ ಕಥೆ ಹೇಳಿದರೆ, ಕದಂಬ ಸಾಮ್ರಾಜ್ಯ ಸ್ಥಾಪಕ ಮಯೂರನೆಂದರೆ ಕಣ್ಮುಂದೆ ಬರುವುದು ಡಾ.ರಾಜ್‍ಕುಮಾರ್ ಅಭಿನಯದ ಮಯೂರ ಚಲನಚಿತ್ರ.
"ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ನೆಲವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ...." ಎಂದು ಪೌರುಷದಿಂದ ಅಬ್ಬರಿಸುವ ರಾಜ್ ನಮ್ಮೆಲ್ಲರ ಮುಂದೆ ಅಂದಿನ ಕದಂಬ ಮಯೂರ ಹೀಗೇ ಇದ್ದನೇನೋ ಎನ್ನಿಸುವಂತೆ ನಟಿಸಿದ್ದಾರೆ. ಸುಮಾರು 1975ರಲ್ಲಿ ತೆರೆಕಂಡ ಈ ಚಿತ್ರ, ಅಂದು ಇಡೀ ನಾಡಿನಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರ. ಇಂಥಾ ಅದ್ಭುತವಾದ ಯಶಸ್ವಿ ಚಿತ್ರದ ಹಿಂದೆ ಇಡೀ ಒಂದು ತಂಡವೇ ಶ್ರಮವಹಿಸಿದೆ. ಇಂತಹ ಐತಿಹಾಸಿಕ ಮಹತ್ವದ ಈ ಚಿತ್ರದ ಕಥೆ ಬರೆದೋರು ಯಾರು?

ದೇವುಡು ಎಂಬ ಸಾಹಿತ್ಯ ಮಾಂತ್ರಿಕ!

ಸುಮಾರು ಎಂಬತ್ತು ವರ್ಷಗಳ ಹಿಂದೆ ಮಯೂರ ಕಾದಂಬರಿಯನ್ನು ರೋಚಕವಾದ ಶೈಲಿಯಲ್ಲಿ ಬರೆದವರು ದೇವುಡು ನರಸಿಂಹ ಶಾಸ್ತ್ರಿಗಳು. ಮಹಾಕ್ಷತ್ರಿಯ, ಮಹಾಬ್ರಾಹ್ಮಣ ಎನ್ನುವ ಕಾದಂಬರಿಗಳಿಂದ ಖ್ಯಾತರಾದ ದೇವಡು ಅವರು ಈ ಕಾದಂಬರಿಯನ್ನು ಲೋಕಕ್ಕೆ ಅರ್ಪಿಸುವಾಗ ಹೇಳುವ ಮಾತುಗಳು ಇಂತಿವೆ :

ಮಯೂರನನ್ನು ಓದಿದ ಕನ್ನಡಿಗನಿಗೆ ಕರ್ಣಾಟಕದ ಅಭಿಮಾನವು ಒಂದಿಷ್ಟು ಹೆಚ್ಚಿದರೆ ಸಾಕು, ನಾನು ಈ ಗ್ರಂಥಕ್ಕಾಗಿ ಪಟ್ಟ ಶ್ರಮವು ಸಾರ್ಥಕವಾಗುವುದು. ಮಯೂರನು ತನ್ನ ಸಿಂಹಾಸನವನ್ನು ಗೆದ್ದುಕೊಂಡಂತೆ ಈಗ ಕರ್ಣಾಟಕರು ತಮ್ಮ ಕರ್ಣಾಟಕತ್ವವನ್ನು ಗೆದ್ದುಕೊಳ್ಳಬೇಕಾಗಿದೆ. ಜೀವನದ ಆಶೋತ್ತರ ರೀತಿನೀತಿಗಳಲ್ಲಿ ಭಿನ್ನವಾಗಿ ಸರ್ವಗ್ರಾಹಿಯಾದ ಪರಸಂಸ್ಕೃತಿಯ ಧಾಳಿಯಲ್ಲಿ ನಮ್ಮ ಅಸ್ತಿತ್ವ ವ್ಯಕ್ತಿತ್ವಗಳು ಕೊಚ್ಚಿಹೋಗುತ್ತಿವೆ. ಅದಕ್ಕಾಗಿ ಹಿರಿಯರೂ ಕಿರಿಯರೂ ಸರ್ವರೂ ಹೆಣಗಬೇಕಾಗಿದೆ. ಕುಗ್ಗಿ ಬರುತ್ತಿರುವ ನಮ್ಮ ಈ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವ ಹಿರಿಯಾಸೆಯಿರುವವರಲ್ಲಿ ಒಬ್ಬರಾದ ಶ್ರೀಮಾನ್ ಎನ್.ಎಸ್.ಸುಬ್ಬರಾಯರವರಿಗೆ ಈ ಗ್ರಂಥವನ್ನು ಒಪ್ಪಿಸಿದ್ದೇನೆ.

ಮಯೂರದ ಮೊದಲನೆಯ ಮುದ್ರಣದ ಮುನ್ನುಡಿಯಲ್ಲಿ "ಮಯೂರವು ಕಥೆ, ಚರಿತ್ರೆಯಲ್ಲ. ಇದರಲ್ಲಿ ದಿಟಕ್ಕಿಂತಲೂ ದಿಟದಂತೆ ತೋರುವ ಸಟೆಯೇ ಹೆಚ್ಚು" ಎಂದು ಹೇಳಿಕೊಂಡಿದ್ದೇನೆ. ಅದನ್ನು ಈಗಲೂ ಬದಲಿಸಬೇಕಾಗಿಲ್ಲ. ಆದರೂ, ಈ ಕಥೆಯಲ್ಲಿ ಬರುವ ಒಂದೊಂದು ಅಂಶಕ್ಕೂ ಆಧಾರವಿದೆ.

ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯೋರು ಹೊರತಂದಿರುವ ಈ ಕಾದಂಬರಿ 35 ವರ್ಷಗಳ ನಂತರ ಮರುಮುದ್ರಣಗೊಂಡಿದೆ. ಇದು ಐದನೆಯ ಮುದ್ರಣ. ಈ ಪುಸ್ತಕಾನ ಇಂದೇ ಕೊಳ್ಳಿ. ಓದಿರಿ.

ಸಿ.ಬಿ.ಎಸ್.ಇ ಕಲಿಕೆ: ಬೇರು ಸಡಿಲಿಸೋ ಬಗೆ!

ಘನ ಕರ್ನಾಟಕ ರಾಜ್ಯಸರ್ಕಾರ, ಬೆಂಗಳೂರೂ ಸೇರಿದಂತೆ ರಾಜ್ಯದ ನಾನಾ ನಗರ ಪಾಲಿಕೆಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯನ್ನು (ಪ್ರಾಯೋಗಿಕವಾಗಿ?) ಆರಂಭಿಸಲು ಮನಸ್ಸು ಮಾಡಿದೆ ಅನ್ನೋ ಸುದ್ದಿ ಇತ್ತೀಚಿಗೆ ಹೊರಬಿದ್ದಿತ್ತು. ಇದು ಕರ್ನಾಟಕ ರಾಜ್ಯಸರ್ಕಾರವು ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ತನ್ನ ಮೂಲಭೂತ ಹೊಣೆಗಾರಿಕೆಯಿಂದ ನುಣುಚಿಕೊಳ್ಳೋ ನಡೆಯಾಗಿದೆ ಎಂತಲೂ, ಈ ಕಲಿಕಾ ವ್ಯವಸ್ಥೆಯಿಂದಾಗಿ ನಮ್ಮ ನಾಡಿನ ಮಕ್ಕಳು ತಮ್ಮ ನುಡಿಯಿಂದಲೇ ದೂರಾಗಿ, ಅವರ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಬೇರುಗಳು ಸಡಿಲವಾಗುತ್ತದೆಯೆಂಬುದಾಗಿಯೂ, ಆ ಕಾರಣದಿಂದಾಗಿಯೇ ಈ ನಿರ್ಧಾರವನ್ನು ಬದಲಿಸಬೇಕೆಂದೂ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಲಾಗಿತ್ತು. ಸಿ.ಬಿ.ಎಸ್.ಇ ಪದ್ದತಿಯನ್ನು ಪ್ರಾಥಮಿಕ ಶಾಲೆಯ ಹಂತದಲ್ಲಿ ಜಾರಿಗೆ ತರೋ ಉದ್ದೇಶ ಸರ್ಕಾರಕ್ಕೆ ಇರುವುದರಿಂದಾಗಿ, ಪ್ರಾಥಮಿಕ ಹಂತದ ಅಂದರೆ ಒಂದರಿಂದ ಏಳನೇ ತರಗತಿಯ ಹಂತದವರೆಗಿನ ಸಿ.ಬಿ.ಎಸ್.ಇ ಪದ್ದತಿಯ ಕಲಿಕೆಯಲ್ಲಿ ಯಾವುದು ತೊಡಕಿನದ್ದು ಅನ್ನುವುದರತ್ತ ಕೊಂಚ ಗಮನ ಸೆಳೆಯುವ ಪ್ರಯತ್ನ ನಮ್ಮದು.

ಅಧಿಕೃತ ಪಠ್ಯಪುಸ್ತಕ ಮತ್ತು ಸಿ.ಬಿ.ಎಸ್.ಇ

ಮೊದಲನೇ ತರಗತಿಯಿಂದ ಏಳನೇ ತರಗತಿಯವರೆಗಿನ ಪಠ್ಯಪುಸ್ತಕಗಳಲ್ಲಿ ‘ಎನ್.ಸಿ.ಇ.ಆರ್.ಟಿಯ ಮಾರ್ಗಸೂಚಿ ನಿಯಮಗಳಂತೆ ಸಿದ್ಧಪಡಿಸಲಾಗಿದೆ’ ಎನ್ನುವ ಒಕ್ಕಣೆ ಪುಸ್ತಕದ ರಕ್ಷಾಪುಟದಲ್ಲೇ ಅಚ್ಚು ಹಾಕಿರುತ್ತಾರೆ. ಈ ಪಠ್ಯಪುಸ್ತಕಗಳ ಪ್ರಕಾಶಕರು ಖಾಸಗಿ ಮಂದಿ. ಇದನ್ನು ಅಧಿಕೃತ ಪಠ್ಯಪುಸ್ತಕವೆಂದು ಎಲ್ಲೂ ಹೇಳಿರುವುದಿಲ್ಲ. ಆಯಾ ಶಾಲೆಯವರು ಬೇಕಾದ ಪ್ರಕಾಶಕರ ಪುಸ್ತಕಗಳನ್ನು ಅಳವಡಿಸಿಕೊಳ್ಳಲು ಸ್ವತಂತ್ರರು. ಅಂದರೆ ಇಡೀ ದೇಶಾದ್ಯಂತ ಒಂದೇ ಪಠ್ಯಪುಸ್ತಕವಿರುವುದಿಲ್ಲ. ಸಾಮಾನ್ಯವಾಗಿ ಈ ಪಠ್ಯಕ್ರಮದ ಯಾವ ಪುಸ್ತಕವೂ 125 ರೂಪಾಯಿಗಿಂತ ಕಮ್ಮಿ ಬೆಲೆ ಹೊಂದಿಲ್ಲ. ಏಳನೆ ತರಗತಿಯ ಪುಸ್ತಕದ ಬೆಲೆ 225 ರೂ ಅಂದರೆ ಅಚ್ಚರಿಯಾಗುತ್ತದೆ. ಹಾಗಂತಾ ಪುಸ್ತಕವೇನು ಅಷ್ಟೊಂದು ದೊಡ್ಡದ್ದೂ ಅಲ್ಲ, ಬರೀ 260 ಪುಟದ್ದು. ಒಂದೊಂದು ತರಗತಿಯ ಎಲ್ಲಾ ಪುಸ್ತಕಗಳನ್ನು ಕೊಳ್ಳಬೇಕೆಂದರೆ ಕಮ್ಮಿ ಎಂದರೂ ಅಂದಾಜು 15೦೦ ರೂಪಾಯಿ ಆಗುತ್ತದೆ. ಸರ್ಕಾರ ಈ ಖರ್ಚನ್ನೂ ಭರಿಸುವ ಉದ್ದೇಶ ಇಟ್ಟುಕೊಂಡಿದೆಯೋ ಏನೋ ಕಾಣೆವು! ಒಂದೊಂದು ವಿಷಯಕ್ಕೆ ಒಂದೊಂದು ಪ್ರಕಾಶನ ಸಂಸ್ಥೆ ಖ್ಯಾತಿ ಹೊಂದಿದೆ. ಹಾಗೆ ಸಿ.ಬಿ.ಎಸ್.ಇ ಪ್ರಾಥಮಿಕ ಶಿಕ್ಷಣದ ಸಮಾಜ ವಿಜ್ಞಾನದ ಪಠ್ಯಪುಸ್ತಕದ ವಿಷಯಕ್ಕೆ ಬಂದಾಗ ಹೈದರಾಬಾದ್ ಮೂಲದ ಓರಿಯೆಂಟ್ ಬ್ಲಾಕ್ ಸ್ವಾನ್ ಪ್ರಕಾಶಕರದ್ದು ಮುಂಚೂಣಿಯಲ್ಲಿರೋ ಪುಸ್ತಕ. ಇಲ್ಲಿ ಎನ್.ಸಿ.ಇ.ಆರ್.ಟಿ ಮಾನದಂಡಕ್ಕೆ ಇದು ಒಳಪಡುತ್ತಿದ್ದು, ಬೆಂಗಳೂರಿನ (ಕರ್ನಾಟಕದ?) ಶಾಲೆಗಳು ವ್ಯಾಪಕವಾಗಿ ಇದನ್ನೇ ಕೊಳ್ಳಲು ಶಿಫಾರಸ್ಸು ಮಾಡುವುದರಿಂದಾಗಿ ಆ ಪುಸ್ತಕಗಳೊಳಗೇನಿದೆ ಎಂಬುದನ್ನು ಸ್ವಲ್ಪ ನೋಡೋಣ. ಇದಲ್ಲದೆ ರತ್ನಸಾಗರ , ಗೋಯಲ್ ಬ್ರದರ್ಸ್ ಅನ್ನೋ ಪ್ರಕಾಶನದ ಪುಸ್ತಕಗಳೂ ಇದ್ದು ಒಳಗೇನಿದೆ ನೋಡೋಣ, ಬನ್ನಿ.

ಸಮಾಜದ ಪರಿಕಲ್ಪನೆ ಮತ್ತು ಮಕ್ಕಳಿಗೆ ಕಲಿಸುವಿಕೆಯ ವಿಧಾನ!

ಸಮಾಜದ ಪರಿಕಲ್ಪನೆಯನ್ನು ಮಕ್ಕಳಿಗೆ ಕಲಿಸುವ ಪಾಠಗಳಲ್ಲಿ ನಮ್ಮ ಪರಿಸರದ ಕುಟುಂಬಗಳ ಬಗ್ಗೆ ಪರಿಚಯ ಮಾಡಿಕೊಡಬೇಕಾಗುತ್ತದೆ. ಯಾವುದೇ ಕಲಿಕೆಯನ್ನು ಮಗುವಿನ ಅನುಭವಕ್ಕೆ ದೊರೆಯುವ ವಸ್ತು, ಮಾತು, ಭಾವನೆಗಳ ಆಧಾರದಲ್ಲಿ ಕಲಿಸುವುದು ಸರಿಯಾದ ವಿಧಾನ. ಆದರೆ ನಮ್ಮ ಮಕ್ಕಳಿಗೆ ಇಲ್ಲಿ ಮಿಸ್ಟರ್ ಶರ್ಮಾ, ಮಿಸೆಸ್ ಶರ್ಮಾ ಅನ್ನುವ ಕಲಿಕೆಯಿದೆ. ಕರ್ನಾಟಕದ ಬಹುಪಾಲು ಮಕ್ಕಳು ಕಂಡೇ ಇರದ ಸಿಕ್ಖರ ಕುಟುಂಬದ ಚಿತ್ರಗಳನ್ನು ಬಳಸಲಾಗಿದೆ. ಮದುವೆ ಎನ್ನುವುದರ ಚಿತ್ರದಲ್ಲಿ ಗಂಡು ಹೆಣ್ಣು ಧರಿಸಿರೋ ವೇಷ ನಮ್ಮ ಸಮಾಜದಲ್ಲಿ ಇಲ್ಲದ್ದು. ದೇವಸ್ಥಾನದ ಚಿತ್ರ, ಶಾಲೆಯ ಚಿತ್ರ, ಮದುವೆಯ ಚಿತ್ರ, ಮಾರುಕಟ್ಟೆ ಚಿತ್ರ... ಊಹೂಂ, ಇದರಲ್ಲಿ ಯಾವುದರಲ್ಲೂ ನಮ್ಮೂರಿನ ದೃಶ್ಯಗಳ ಚಿತ್ರಣ ಇಲ್ಲ. ನಮ್ಮ ದೇಶದ ಹಬ್ಬಗಳು ಎನ್ನುವುದನ್ನು ಪರಿಚಯಿಸುವಾಗ ಹೋಲಿ, ದಿವಾಲಿ, ದಶ್ಶೇರಾ ಮೊದಲಾದ ಹೆಸರುಗಳಿವೆ. ಹಚ್ಚಿನ ಕನ್ನಡಿಗರು ಹೆಸರೇ ಕೇಳಿರದ ಬಿಹು, ಗುರುಪರ್ವ್ ಅನ್ನೋ ಹಬ್ಬಗಳ ಪರಿಚಯ ಇದೆ. ನಮ್ಮ ಮನೆಗಳಲ್ಲಿ ಆಚರಿಸುವ ಸಂಕ್ರಾಂತಿ, ಯುಗಾದಿ, ಗಣಪತಿ ಹಬ್ಬ, ದೀಪಾವಳಿಗಳ ಪ್ರಸ್ತಾಪವೇ ಇಲ್ಲ. ಇದು ಮಕ್ಕಳ ಮನಸ್ಸಲ್ಲಿ ಯಾವ ಪರಿಣಾಮ ಉಂಟುಮಾಡೀತು? ನಮ್ಮ ಆಚರಣೆಗಳು ಭಾರತದ ಹಬ್ಬಗಳ ಪಟ್ಟಿಯಲ್ಲಿ ಸೇರಲು ಯೋಗ್ಯವಲ್ಲದ್ದು ಎಂತಲೇ? ಇನ್ನು ನಮ್ಮ ವಾತಾವರಣದ ಬಗ್ಗೆ ಬರೆಯುವಾಗ ಛಳಿಗಾಲದಲ್ಲಿ ಮನೆಗಳಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತೇವೆ ಎಂದಿದೆ. ಹೌದಾ? ಅಂತಾ ಮಕ್ಕಳು ಕೇಳಿದರೆ ಅಚ್ಚರಿಯಿಲ್ಲ.

ಭಾರತದ ವಿವಿಧ ನಗರಗಳ/ ರಾಜ್ಯಗಳ ಪರಿಚಯ ನೀಡುವ ಒಂದು ಪಾಠದಲ್ಲಿ ಬೆಂಗಳೂರಿನಲ್ಲಿ ಆಡುವ ಭಾಷೆ ಕನ್ನಡ ಮತ್ತು ಕೊಂಕಣಿ ಎಂದು ಬರೆಯಲಾಗಿದೆ. ಕರ್ನಾಟಕದ ಜನರ ಉಡುಗೆ ಎಂದರೆ ಸೀರೆ ಮತ್ತು ಪಂಚೆ ಎಂದು ಬರೆಯಲಾಗಿದೆ. ಇದ್ಯಾವ ಸೀಮೆಯ ಪರಿಚಯ? ನಮ್ಮ ಮಕ್ಕಳಿಗೆ ನಮ್ಮ ಕಣ್ಣೆದುರು ಇರುವುದನ್ನೇ ತಪ್ಪು ತಪ್ಪಾಗಿ ಪರಿಚಯಿಸುವ ಈ ಕ್ರಮದಿಂದ ಮಕ್ಕಳಿಗೆ, ತಾವು ಕಲಿಯುತ್ತಿರುವುದು ತಪ್ಪೆಂದು ತಿಳಿದರೂ ಹಾಗೇ ಓದಬೇಕಾದ, ಕಲಿಯಬೇಕಾದ, ಬರೆಯಬೇಕಾದ ಅನಿವಾರ್ಯತೆ ಹುಟ್ಟುವುದಿಲ್ಲವೇ?

ಭಾರತದ ಇತಿಹಾಸದಲ್ಲಿ ಕರ್ನಾಟಕ!

ನಂಬಿ, ಏಳನೇ ತರಗತಿಯವರೆಗೆ ಸಿ.ಬಿ.ಎಸ್.ಇ ಕಲಿಕೆಯಲ್ಲಿ ನಮ್ಮ ಮಕ್ಕಳು ಕನ್ನಡದ ಇತಿಹಾಸ ಎಂದು ಓದುವುದು ಅಬ್ಬಬ್ಬಾ ಎಂದರೆ ಎರಡು ಮೂರು ಪುಟಗಳಷ್ಟು ಮಾತ್ರಾ! ನಮ್ಮ ರಾಜ ಮನೆತನಗಳಲ್ಲಿ ಕೇಳುವ ಎರಡು ಹೆಸರುಗಳು ಚಾಲುಕ್ಯ ಮತ್ತು ವಿಜಯನಗರ ಮಾತ್ರಾ. ರಾಜರೆಂದರೆ ಪುಲಿಕೇಶಿನ್ (ಪುಲಿಕೇಶಿ ಅಲ್ಲಾ!) ಮತ್ತು ಕೃಷ್ಣದೇವರಾಯನೆಂಬ ಎರಡು ಹೆಸರು ಮಾತ್ರಾ! ವೀರ ಮಹಿಳೆ ಎಂದರೆ ಝಾನ್ಸಿರಾಣಿ ಲಕ್ಷ್ಮಿಬಾಯಿ. ಈ ವೀರಮಹಿಳೆಯರ ಸಾಲಿನಲ್ಲಿ ಚೆನ್ನಮ್ಮನ್ನೂ ಇಲ್ಲಾ, ಓಬವ್ವನೂ ಇಲ್ಲಾ, ಅಬ್ಬಕ್ಕನೂ ಇಲ್ಲಾ. ಉತ್ತರಾಪಥೇಶ್ವರ ಹರ್ಷವರ್ಧನನ ಬಗ್ಗೆ ಪುಟಗಟ್ಟಲೆ ಪಾಠವಿದೆ. ಅವನ ಆಡಳಿತದಲ್ಲಿ ಸಮಾಜಿಕ ವ್ಯವಸ್ಥೆ ಹೇಗಿತ್ತು? ಅದೂ ಇದೂ ಅಂತೆಲ್ಲಾ ಬರೆಯಲಾಗಿದೆ. ಆದರೆ ಅವನನ್ನು ಮಣ್ಣುಮುಕ್ಕಿಸಿ ದಕ್ಷಿಣಾಪಥೇಶ್ವರನಾಗಿದ್ದ ಇಮ್ಮಡಿ ಪುಲಿಕೇಶಿ ಪರಮೇಶ್ವರನಾದದ್ದು ಇಲ್ಲಿಲ್ಲ. ಗಂಗರ, ಕದಂಬರ, ರಾಷ್ಟ್ರಕೂಟರ ಪ್ರಸ್ತಾಪವೇ ಇಲ್ಲ. ಇಡೀ ಭಾರತದಲ್ಲಿ ಸಾವಿರ ವರ್ಷಕ್ಕಿಂತಲೂ ದೀರ್ಘಕಾಲ ಅವಿಚ್ಛಿನ್ನವಾಗಿ ಸಾಮ್ರಾಜ್ಯ ನಡೆಸಿದ ಕನ್ನಡಿಗರ ಬಗ್ಗೆ ಏನೂ ಇಲ್ಲಾ! ಇತಿಹಾಸವನ್ನು ತಿಳಿದವನು ಇತಿಹಾಸ ಬರೆಯಬಲ್ಲ ಎಂಬಾಶಯವನ್ನೇ ನಂಬುವುದಾದರೆ ನಮ್ಮ ಮಕ್ಕಳನ್ನು ಕನ್ನಡ ನಾಡಿನ ಇತಿಹಾಸದಿಂದಲೇ ದೂರಮಾಡುವ ಶಿಕ್ಷಣ ಪದ್ದತಿಗೆ ನಮ್ಮ ಸರ್ಕಾರವೇ ಮಣೆ ಹಾಕುವುದು ಸರಿಯೇ? ಈಗಾಗಲೇ ಕರ್ನಾಟಕದ ಏಕೀಕರಣ ಹೋರಾಟದ ತ್ಯಾಗ ಬಲಿದಾನಗಳ ಇತಿಹಾಸವನ್ನು ನಮ್ಮ ಮಕ್ಕಳಿಂದ ಮರೆ ಮಾಡಲಾಗಿದೆ. ಇನ್ನು ಸಿ.ಬಿ.ಎಸ್.ಇ ಕಲಿಕಾ ಪದ್ದತಿಗೆ ಮೊರೆ ಹೋದರೆ ನಾಳೆ ಎಂತಹ ಪೀಳಿಗೆಯನ್ನು ಸಿದ್ಧಪಡಿಸುತ್ತೇವೆಯೋ, ಆ ರಾಜರಾಜೇಶ್ವರಿಯೇ ಬಲ್ಲಳು. ಒಟ್ಟಾರೆ ನಮ್ಮತನವನ್ನೇ ಕಡೆಗಣಿಸುವ, ಕರ್ನಾಟಕದ ಇತಿಹಾಸಕ್ಕೆ ಎಳ್ಳುಮೊನೆಯಷ್ಟು ಮಾತ್ರವೇ ಮಾನ್ಯತೆಯಿರುವ ಸಿ.ಬಿ.ಎಸ್.ಇ ಕಲಿಕೆಗೆ ಸರ್ಕಾರ ಮುಂದಾಗದಿರಲಿ.

ಸಿ.ಬಿ.ಎಸ್.ಇ ಕಲಿಕಾ ಪದ್ದತಿ

ಇದರ ಮೂಲೋದ್ದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ, ಇಡೀ ಕಲಿಕಾ ವ್ಯವಸ್ಥೆಯನ್ನು ವಲಸಿಗ/ ವರ್ಗಾವಣೆಗೆ ಈಡಾಗಬಲ್ಲ ಕೇಂದ್ರಸರ್ಕಾರಿ ನೌಕರರ ಮಕ್ಕಳಿಗಾಗಿ ರೂಪಿಸಲಾಗಿದೆ. ಈ ಪದ್ದತಿಯ ಕಲಿಕೆಯಲ್ಲಿ ಹಾಗಾಗಿಯೇ ಭೌಗೋಳಿಕ ಹರವು ಹೆಚ್ಚು, ನಮ್ಮತನದ ಅರಿವು ಕಮ್ಮಿ. ನಮ್ಮ ನಿನ್ನೆಗಳ ಜೊತೆ, ನಮ್ಮತನದ ಜೊತೆ ಆಳವಾದ ಜೋಡಣೆಯೇ ಇಲ್ಲಿ ಮಾಯ. ಭಾರತವೆನ್ನುವ ವಿಶಾಲ ಭೂ ಪ್ರದೇಶದ ಸಾವಿರಾರು ವರ್ಷಗಳ ಕಥನವನ್ನು ಸಮಗ್ರವಾಗಿ ಹೇಳಿಬಿಡಬೇಕೆನ್ನುವ ದುಡುಕುತನ ಸಮಾಜ ವಿಜ್ಞಾನದ ಪಠ್ಯಗಳಲ್ಲಿ ಎದ್ದು ಕಾಣುತ್ತದೆ. ಆದ್ರೆ ಕರ್ನಾಟಕದ ಮಕ್ಕಳನ್ನು ಕರ್ನಾಟಕದ ಸಂಸ್ಕೃತಿಯ ಪರಿಚಯದಿಂದಲೇ ವಂಚಿಸಲಾಗುತ್ತದೆ. ಕರ್ನಾಟಕ ರಾಜ್ಯ ಶಿಕ್ಷಣ ಮಂತ್ರಿಗಳಾದ ಮಾನ್ಯ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರೂ, ನಗರಾಭಿವೃದ್ಧಿ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರೂ ಈ ವಿಷಯದಲ್ಲಿ ದುಡುಕದೆ ಘನ ಕರ್ನಾಟಕ ಸರ್ಕಾರದ “ಮಹಾನಗರ ಪಾಲಿಕೆ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಕಲಿಕಾ ಪದ್ದತಿ” ಎನ್ನುವ ನಿಲುವನ್ನು ಕೈಬಿಡಲಿ! ಏನಂತೀರಾ ಗುರೂ!

ಕನ್ನಡ ಚಿತ್ರರಂಗ: ಇಲ್ಲಿ ಆಟಕ್ಕೂ ಇಲ್ಲಾ, ಲೆಕ್ಕಕ್ಕೂ ಇಲ್ಲಾ!


ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಏರ್ಪಡಿಸಿದ್ದ ಹನ್ನೊಂದನೇ ಚಿತ್ರೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀಲಂಕಾ ದೇಶದಲ್ಲಿ ನಡೆಸಲಾಗುತ್ತಿದೆಯೆಂಬ ಕಾರಣಕ್ಕಾಗಿ- ಶ್ರೀಲಂಕಾ ತಮಿಳರ ಬೆಂಬಲಾರ್ಥವಾಗಿ - ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಬಹಿಷ್ಕರಿಸಿದ್ದಾರೆ. ಇದರಲ್ಲಿ ಯಾವ ಬಾಲಿವುಡ್ ಸೋದರರೂ ಭಾಗವಹಿಸಬಾರದೆಂದೂ, ಹಾಗೊಮ್ಮೆ ಭಾಗವಹಿಸಿದರೆ ಅಂಥವರ ಚಿತ್ರಗಳನ್ನು ದಕ್ಷಿಣ ಭಾರತದಲ್ಲಿ ಬಹಿಷ್ಕರಿಸಲಾಗುವುದೆಂದೂ, ಇಡೀ ದಕ್ಷಿಣ ಭಾರತದ ನಾಕೂ ಭಾಷೆಗಳ ಚಿತ್ರರಂಗದೋರು ಇನ್ಮುಂದೆ ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಬಾರದೆಂದು ತೀರ್ಮಾನಿಸುವುದರೊಂದಿಗೆ ಆ ದೇಶದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದೂ ಕೊಟ್ಟಿರೋ ಹೇಳಿಕೆ ದಿನಾಂಕ 29.05.2010ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿದೆ ಗುರೂ!

ಐ.ಐ.ಎಫ್.ಐ ಅಂದ್ರೆ ಹಿಂದಿ ಚಿತ್ರೋದ್ಯಮದೋರ ಸ್ವತ್ತಾ?

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಎನ್ನೋ ಹೆಸರಿನ (International Indian Film Academy IIFA) ಸಂಸ್ಥೆ ಕೆಲವು ವರ್ಷಗಳ ಹಿಂದೆ ಜನ್ಮ ತಳೆದಿದೆ. ಈ ಸಂಸ್ಥೆಯೋರು ಪ್ರತಿವರ್ಷಾ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಚಿತ್ರೋತ್ಸವಗಳ್ನ ಏರ್ಪಡಿಸಿ ಭಾರತೀಯ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೋ ಘನವಾದ ಉದ್ದೇಶ ಹೊಂದಿದಾರೆ. ಹಾಗಂತ ತಮ್ಮ ಅಂತರ್ಜಾಲ ತಾಣದಲ್ಲಿ ಬರೆದೂಕೊಂಡಿದ್ದಾರೆ. ಆದರೆ ಇವರ ಕಣ್ಣಲ್ಲಿ ಭಾರತ ಅಂದ್ರೆ ಉತ್ತರ ಭಾರತ, ಭಾರತೀಯ ಚಿತ್ರ ಅಂದ್ರೆ ಹಿಂದೀ ಚಿತ್ರಗಳು. ಬೇರೆ ಬೇರೆ ದೇಶಗಳಲ್ಲಿ ಇವರು ನಡೆಸಿರೋ ಇದುವರೆಗಿನ ಎಲ್ಲಾ ಹತ್ತು ಪ್ರಶಸ್ತಿ ಪ್ರದಾನ ಸಮಾರಂಗಳಲ್ಲಿಯೂ ಪ್ರಶಸ್ತಿ ಗಳಿಸಿದ್ದಿರಲಿ, ಪ್ರಶಸ್ತಿಗೆ ನಾಮಕರಣವಾದ ಚಿತ್ರಗಳೂ ಕೂಡಾ ಹಿಂದೀ ಭಾಷೆಯವೆ. ಹೀಗೆ ಪ್ರಪಂಚಕ್ಕೆಲ್ಲಾ ಭಾರತೀಯ ಚಿತ್ರರಂಗ ಅಂದ್ರೆ ಹಿಂದೀದು ಅನ್ನೋ ಅಪಪ್ರಚಾರ ಮಾಡ್ತಾ ಇರೋ ಈ ಸಂಸ್ಥೆ ಮತ್ತು ಹಿಂದಿ ಚಿತ್ರೋದ್ಯಮದ ಮಂದಿಯ ಕಣ್ಣಿಗೆ ಭಾರತದ ಇತರೆ ಭಾಷಾ ಚಿತ್ರಗಳು ಆಟಕ್ಕೆ ಇಲ್ಲವಾಗಿದೆ. ಇವರು ಒಂದುಕಡೆ ಭಾರತೀಯ ಚಿತ್ರರಂಗ ಅಂದ್ರೆ ಹಿಂದೀ ಅಂತಾ ಸಾರಕ್ ಮುಂದಾಗಿದ್ರೆ ಇನ್ನೊಂದು ಕಡೆ ದಕ್ಷಿಣ ಭಾರತದ ಚಿತ್ರೋದ್ಯಮ ಅಂದ್ರೆ ತಮಿಳು ಅನ್ನೋ ಹುಂಬತನಕ್ಕೆ ತಮಿಳು ಚಿತ್ರರಂಗದೋರು ಮುಂದಾಗಿದಾರೆ!

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಂದ್ರೆ ತಮಿಳರ ಸ್ವತ್ತಾ?
ಒಂದು ಕಡೆ ಹಿಂದೀ ಚಿತ್ರೋದ್ಯಮ ಕನ್ನಡವನ್ನೂ ಸೇರಿಸಿ ಭಾರತದ ಉಳಿದೆಲ್ಲಾ ಚಿತ್ರರಂಗಗಳನ್ನು ಆಟಕ್ಕಿಲ್ಲದಂತೆ ಮಾಡ್ತಿದ್ರೆ ಇನ್ನೊಂದು ಕಡೆ ತಮಿಳು ಚಿತ್ರೋದ್ಯಮ ನಮ್ಮುನ್ನ ಚಿನ್ನತಂಬಿ ಅಂತಾ ದೊಡ್ಡಣ್ಣನ ಮನಸ್ಥಿತಿ ತೋರುಸ್ತಿದೆ. ತಮಿಳರ ಮೇಲೆ ಶ್ರೀಲಂಕಾದಲ್ಲಿ ದೌರ್ಜನ್ಯಾ ನಡೀತು ಅಂತಾ ತಮಿಳುನಾಡಿನ ಕೆಲವು ತಮಿಳು ಸಂಘಟನೆಗಳೋರು ದನಿ ಎತ್ತಿದ್ದಕ್ಕೆ ಆ ದನಿಗೆ ತಮ್ಮ ದನಿಯನ್ನು ಸೇರಿಸಲು ತಮಿಳು ಚಿತ್ರರಂಗ ಮುಂದಾಗಿದ್ದಿದ್ರೆ, ಅದು ಅವರಿಷ್ಟ ಅನ್ಬೋದಿತ್ತು. ಆದ್ರೆ ಇಡೀ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಚಿತ್ರರಂಗದೋರನ್ನು ಪ್ರತಿನಿಧಿಸೋ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳೀದು ಈ ನಿಲುವು ಅಂತಾ ಹೇಗಂದ್ರು ಇವ್ರು? ಈ ನಿಲುವಿಗೆ ನಾಲ್ಕೂ ರಾಜ್ಯಗಳ ಎಲ್ಲಾ ನಟರ, ತಂತ್ರಜ್ಞರ, ವಿತರಕರ, ಪ್ರದರ್ಶಕ ಸೋದರರ ಸಮ್ಮತಿ ಇದೆ ಅಂತಾರಲ್ಲಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರುನ್ನಾ ಕೇಳಿ ಇಂಥಾ ಹೇಳಿಕೆ ಕೊಟ್ಟಿದಾರಾ? ಕಾವೇರಿ ಗಲಾಟೆ ಸಂದರ್ಭದಲ್ಲಿ, ಇದೇ ದ.ಭಾ.ಚ.ವಾ.ಮಂ ಅವ್ರು ಹೇಳ್ದೆ ಕೇಳ್ದೆ ಕನ್ನಡದೋರುನ್ನಾ ಮಂಡಳಿಯಿಂದ ಕಿತ್ತು ಬಿಸಾಕುದ್ರಲ್ಲಾ ಆಗೆಲ್ಲಿ ಹೋಗಿತ್ತು ಈ ಸೋದರ ಬಾಂಧವ್ಯ? ಇದುನ್ನೆಲ್ಲಾ ಸಹಿಸಿಕೊಂಡು ಕೂತಿರೋಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರಿಗೂ, ಕನ್ನಡ ಚಿತ್ರರಂಗದೋರಿಗೂ ಸ್ವಾಭಿಮಾನಾ ಸತ್ತು ಹೋಗಿದೆಯಾ? ಗುರೂ!

ಪಕ್ಷಗಳು ಮರೆತ ರಾಜ್ಯಸಭೆಯ ಉದ್ದೇಶ!


ಕರ್ನಾಟಕದಿಂದ ರಾಜ್ಯಸಭೆಗೆ ನಾಲ್ವರು ಸಂಸದರನ್ನು ಆರಿಸಿ ಕಳ್ಸೋ ಸಮಯ ಹತ್ತಿರ ಆಗ್ತಾಯಿದೆ. ಈ ಚುನಾವಣೇಲಿ ಪ್ರತಿಯೊಂದು ಪಕ್ಷಾನೂ ತನ್ನ ಶಾಸಕರ ಸಂಖ್ಯೆಗೆ ಅನುಗುಣವಾಗಿ ಅಭ್ಯರ್ಥೀನ ಕಣಕ್ಕಿಳುಸ್ತಿದೆ. ಇಲ್ಲೊಂದು ತಮಾಶೆ ಪರಿಸ್ಥಿತಿ ಹುಟ್ಕೊಂಡಿದೆ. ಬಿಜೆಪಿ ಇಬ್ಬುರನ್ನು ಖಂಡಿತ ಗೆಲ್ಲುಸ್ಕೊಳುತ್ತೆ. ಕಾಂಗ್ರೆಸ್ ಒಂದು ಸೀಟುನ್ನ ಗೆಲ್ಲುಸ್ಕೊಳುತ್ತೆ. ಆದ್ರೆ ಇನ್ನೊಂದು ಸ್ಥಾನ ಗೆಲ್ಲುಸ್ಕೊಳ್ಳಕ್ಕೆ ಯಾವ ಒಂದು ಪಕ್ಷಕ್ಕೂ ಬೇಕಾಗೊ ಶಾಸಕರ ಸಂಖ್ಯೆ ಇಲ್ಲ. ಹಂಗಾಗಿ ಈ ನಾಲ್ಕನೇ ಸ್ಥಾನಾ ಮಾರಾಟಕ್ಕಿದೆಯೇನೋ ಅಂತಾ ಇವತ್ತಿನ (06.06.2010ರ) ವಿಜಯ ಕರ್ನಾಟಕದ ಸುದ್ದಿ ಓದಿದಾಗ ಮನವರಿಕೆ ಆಗುತ್ತೆ. ಮೌಲ್ಯಾಧಾರಿತ ರಾಜಕಾರಣ, ಸಿದ್ಧಾಂತದ ರಾಜಕಾರಣ ಇವುಕ್ಕೆಲ್ಲಾ ನಮ್ಮ ರಾಜಕೀಯ ಪಕ್ಷಗಳು ಎಳ್ಳೂನೀರು ಬಿಟ್ಟು ಪ್ರಹಸನ ನಡುಸ್ತಿವೆ ಅಂತಾ ಗೊತ್ತಾಗುತ್ತೆ ಗುರೂ!

ರಾಜ್ಯಸಭೆ ಮತ್ತದರ ಉದ್ದೇಶ!

ಜನರೇ ನೇರವಾಗಿ ಪ್ರತಿನಿಧಿಗಳನ್ನು ಆರಿಸಿ ಕಳಿಸೋ ಸಂಸತ್ತಿನ ಮನೆ ಲೋಕಸಭೆ. ಆದರೆ ಭಾರತವನ್ನು ಒಪ್ಪುಕೂಟವನ್ನಾಗಿಸಲು ರಾಜ್ಯಸಭೆಯಂಥಾ ಇನ್ನೊಂದು ಮೇಲ್ಮನೆಯ ಅಗತ್ಯವನ್ನು ಮನಗಾಣಲಾಯಿತು. ಈಗಾಗಲೇ ಇರೋ ಲೋಕಸಭೆಯ ಜೊತೆ ಇನ್ನೊಂದು ಯಾಕೆ ಬೇಕು? ಅಂತಾ ಸಂಸತ್ತಿನಲ್ಲಿ ದೊಡ್ಡ ಚರ್ಚೆಯೇ ಆಯಿತು. ಕೊನೆಗೆ ದೇಶದ ವ್ಯವಸ್ಥೆ ಕಟ್ಟುವಾಗ ರಾಜ್ಯಗಳಿಗೆ ನೇರವಾಗಿ ಪಾಲ್ಗೊಳ್ಳಲು ಅನುಕೂಲ ಆಗಬೇಕು, ಇದು ಫೆಡರಲ್ ವ್ಯವಸ್ಥೆಯನ್ನು ಬಲಪಡ್ಸುತ್ತೆ ಅಂದು ನೇರವಾಗಿ ರಾಜ್ಯಗಳನ್ನು ಪ್ರತಿನಿಧಿಸೋ, ಆಯಾ ರಾಜ್ಯಗಳ ಶಾಸಕರಿಂದಲೇ ಆಯ್ಕೆ ಮಾಡಲ್ಪಟ್ಟ ಸಂಸದರನ್ನು ಒಳಗೊಂಡ ರಾಜ್ಯಸಭೆಯನ್ನು ರೂಪಿಸಿ ರಚಿಸಲಾಯ್ತು. ಇದು ಹೇಗೆ ಫೆಡರಲ್? ಅನ್ನೋದಾದ್ರೆ... ಒಂದು ಸಣ್ಣ ಉದಾಹರಣೆ ನೋಡಿ. ಕರ್ನಾಟಕದ ವಿಧಾನಸಭೆಗೆ ಬಿಜೆಪಿ, ಕಾಂಗ್ರೆಸ್ ಜೊತೆ ಮತ್ತೊಂದು ಪ್ರಾದೇಶಿಕ ಪಕ್ಷವೂ ಒಂದಿಪ್ಪತ್ತು ಸೀಟು ಗೆಲ್ತು ಅಂದ್ಕೊಳ್ಳೋಣ. ಆದ್ರೆ ಲೋಕಸಭಾ ಚುನಾವಣೇಲಿ ಅದುಕ್ಕೆ ಒಂದೂ ಸ್ಥಾನವೂ ಬರಲಿಲ್ಲಾ ಅಂದ್ರೆ ಕೇಂದ್ರದಲ್ಲಿ ಆ ಪಕ್ಷದ ಅಸ್ತಿತ್ವವೇ ಇರಲ್ಲ. ಅಂದ್ರೆ ಯಾವುದೇ ಬಿಲ್ಲು ಜಾರಿಗೆ ತರೋದ್ರಲ್ಲಿ, ನಿಯಮಾ ರೂಪಿಸೋದ್ರಲ್ಲಿ ಅದರ ಪಾತ್ರವೇ ಇರದಂಗೆ ಆಗ್ಬುಡುತ್ತೆ. ಅದುಕ್ಕೆ ರಾಜ್ಯದಲ್ಲಿ ಇಂತಿಷ್ಟು ಶಾಸಕರ ಸಂಖ್ಯಾಬಲ ಇದ್ರೆ ರಾಜ್ಯಸಭೆಗೆ ಸಂಸದರನ್ನು ಆರಿಸಿ ಕಳುಸ್ಬೋದು. ಹೀಗೆ ಆಯ್ಕೆ ಆಗೋರ ಮಹತ್ವ ಏನಪ್ಪಾ ಅಂದ್ರೆ ಯಾವುದೇ ಕಾಯ್ದೆ ಜಾರಿಯಾಗಬೇಕಾದ್ರೆ, ನಿಯಮ ರೂಪಿತವಾಗಬೇಕಾದ್ರೆ ರಾಜ್ಯಸಭೆಯಲ್ಲೂ ಅದು ಪಾಸ್ ಆಗ್ಬೇಕು. ಇಂತೆಲ್ಲಾ ಮಹತ್ವವಿರೋ ರಾಜ್ಯಸಭೆಗೆ ಕರ್ನಾಟಕದಿಂದ ನಮ್ಮ ರಾಜಕೀಯ ಪಕ್ಷಗಳು ಎಂಥವರನ್ನು, ಎಂಥೆಂಥವರನ್ನು ಆರಿಸಿ ಕಳಿಸಿವೆ, ಕಳುಸ್ತಿವೆ ಅಂತಾ ನೋಡುದ್ರೆ ಈ ಪಕ್ಷಗಳಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ, ಸಂವಿಧಾನದ ಆಶಯಗಳ ಬಗ್ಗೆ ಎಷ್ಟು ಗೌರವಾ ಇದೆ ತಿಳ್ಯುತ್ತೆ.

ನಮ್ಮ ರಾಜ್ಯಸಭಾ ಸಂಸದರು!

ರಾಜ್ಯಗಳ ಮಂಡಳಿ ಎಂಬ ಭಾರತದ ರಾಜ್ಯಸಭೆಗೆ ಕರ್ನಾಟಕದ ರಾಜಕೀಯ ಪಕ್ಷಗಳೋರು ಇದುವರೆಗೂ ಆರಿಸಿರೋದು... ಪದೇ ಪದೇ ಕರ್ನಾಟಕದಿಂದಲೇ ಆಯ್ಕೆಯಾಗುತ್ತಿದ್ದರೂ ಕನ್ನಡವನ್ನು ಮಾತಾಡಲು ಕಲಿಯಬೇಕು ಅನ್ನಿಸಿರದೇ ಇಂದಿಗೂ ಕನ್ನಡ ಕಲಿಯದೇ ಇರೋರು. ಸಂಸತ್ ಅಧಿವೇಶನಗಳಲ್ಲಿ ಶೇಕಡಾ 50ರಷ್ಟು ಮಾತ್ರವೇ ಭಾಗವಹಿಸಿರೋರು. ಸಂಸತ್ತಿನ ಅಧಿವೇಶನಗಳಲ್ಲಿ ಒಂದಾದರೂ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಶ್ನೆ ಎತ್ತದವರು, ತಮ್ಮ ಉದ್ದಿಮೆಯ ಹಿತರಕ್ಷಣೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ರಾಜಕೀಯದ ಗಂಧ ಗಾಳಿ ಇಲ್ಲದಿದ್ದರೂ ಹಣ ಚೆಲ್ಲಿ ಮತ ಖರೀದಿ ಮಾಡುವವರು, ನಾನು ರಾಷ್ಟ್ರೀಯ ನಾಯಕ- ಲೋಕಲ್ ವಿಷಯಕ್ಕೂ ನನಗೂ ಸಂಬಂಧವಿಲ್ಲಾ ಅನ್ನೋ ಧೋರಣೆಯೋರು. ಈಗಲೇ ನೋಡಿ ಯಾವ ಪಕ್ಷವೂ ಸ್ವತಂತ್ರವಾಗಿ ಗೆಲ್ಲಲಿಕ್ಕಾಗದ ನಾಲ್ಕನೇ ಸ್ಥಾನಾನ ಕೊಳ್ಳಲು ಉದ್ಯಮಿಗಳು ಮುಂದಾಗಿದ್ದಾರೆ ಅನ್ನೋ ಸುದ್ದಿ! ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಅದರ ಆಶಯಗಳು, ಆ ಆಶಯಗಳನ್ನು ಪೂರೈಸಲೆಂದೇ ರೂಪಿತವಾಗಿರುವ ರಾಜ್ಯಸಭೆ... ಇದರ ಚುನಾವಣೆ. ಇವೆಲ್ಲಾ ಕಂಡಾಗ ಭಾರತದ ಒಕ್ಕೂಟದ ಸ್ವರೂಪಕ್ಕೊಂದು ಸರಿಯಾದ ಸರ್ಜರಿ ಬೇಕು ಅನ್ಸಲ್ವಾ ಗುರೂ!

ಬಂಡವಾಳದ ಹೊಳೆ ಹರಿಯಲಿ ಉದ್ಯೋಗದ ಮಳೆ ಸುರಿಯಲಿ !

ನಾಳೆ (03.06.2010) ನಮ್ಮ ರಾಜ್ಯಸರ್ಕಾರ ಒಂದು ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡ್ತಾಯಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಾಳೆ ಮತ್ತು ನಾಡಿದ್ದು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ - 2010 ನಡೆಯಲಿದೆ. ಕರ್ನಾಟಕಕ್ಕೆ ಹೊಸ ಉದ್ದಿಮೆಗಳನ್ನು ಸೆಳೆಯಲು ಸರ್ಕಾರ ಮಾಡುತ್ತಿರುವ ಈ ಕಾರ್ಯಕ್ರಮ ಶ್ಲಾಘನೆಗೆ ಅರ್ಹವಾಗಿದೆ. ರಾಜ್ಯ ಸರ್ಕಾರಕ್ಕೆ, ಅದರ ನಾಯಕರಾದ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರಿಗೆ ನಮ್ಮ ಅಭಿನಂದನೆಗಳು. ಈ ಉದ್ದಿಮೆಗಳು ಶುರುವಾಗುವಾಗ ಡಾ.ಸರೋಜಿನಿ ಮಹಿಷಿ ವರದಿಯ ಆಧಾರದ ಮೇರೆಗೆ ಕನ್ನಡಿಗರಿಗೆ ಅಲ್ಲಿನ ಕೆಲಸಗಳನ್ನು ಕೊಡಬೇಕೆಂಬ ಅಂಶವನ್ನು ಸರ್ಕಾರ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಟ್ಟು ಕಟ್ಟಳೆಯನ್ನಾಗಿಸಲಿ. ನಮ್ಮ ನೆಲ ಜಲಗಳ ಸದ್ಬಳಕೆಯಾಗಲಿ, ಯಾವೊಬ್ಬ ರೈತನೂ ಕಣ್ಣೀರುಗರೆಯದಂತಾಗಲಿ ಎಂಬೆಲ್ಲಾ ಆಶಯಗಳೊಂದಿಗೆ ಈ ಹಿಂದೆ ಇಂತಹುದೇ ಸನ್ನಿವೇಶದಲ್ಲಿ ಬರೆಯಲಾಗಿದ್ದ ಎರಡು ಬರಹಗಳನ್ನು ಕೆಳಗೆ ನೀಡಿದ್ದೇವೆ.

1. ಬಂಡವಾಳ ಹೂಡಿಕೆ: ನಮ್ಮ ಜನರಿಗೆ ಕೆಲಸಾನೂ ಕೊಡಬೇಕು!
ಕರ್ನಾಟಕದಲ್ಲಿ ಟಾಟಾ ಸಂಸ್ಥೆಯೋರು ನ್ಯಾನೋ ಮಾದರಿ ಕಾರುಗಳನ್ನು ತಯಾರಿಸೋ ಘಟಕಾನ ಕಡೆಗೂ ಆರಂಭಿಸುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಂದೇನಾಗಬೇಕು ಅಂತ ಚೂರು ನೋಡೋಣ ಬಾ ಗುರು!

ಉದ್ದಿಮೆಗಾರಿಕೆ ಮತ್ತು ಉದ್ಯೋಗಾವಕಾಶ!ನಮ್ಮ ನಾಡಲ್ಲಿ ಉದ್ದಿಮೆಗಳ ಆರಂಭಕ್ಕಿರೋ ಮುಖ್ಯವಾದ ಆಯಾಮ ಸರ್ಕಾರಕ್ಕೆ ತೆರಿಗೆ ಮೂಲಕ ದೊರೆಯುವ ಆದಾಯ, ನಾಡಿನ ಜನರಿಗೆ ನೇರವಾಗಿ ಸಿಗಬಹುದಾದ ಉದ್ಯೋಗಗಳು ಮತ್ತು ಈ ಉದ್ದಿಮೆಗಳಿಗೆ ಪೂರಕವಾಗಿ ಆರಂಭವಾಗೋ ಇತರೆ ಉದ್ದಿಮೆಗಳು. ಈ ಉದ್ದೇಶಗಳ ಈಡೇರಿಕೆಗಾಗಿಯೇ ಸರ್ಕಾರಗಳು ಉದ್ದಿಮೆ ಆರಂಭಿಸಲು ಉತ್ತೇಜನ ಕೊಡ್ತಾ, ಕಡಿಮೆ ದರದಲ್ಲಿ ನೆಲ, ನೀರು, ವಿದ್ಯುತ್ ಇವುಗಳನ್ನು ಉದ್ದಿಮೆದಾರರಿಗೆ ನೀಡುತ್ತದೆ. ಇಂತಿಷ್ಟು ತೆರಿಗೆ ವಿನಾಯ್ತಿ, ಇಷ್ಟು ವರ್ಷದ ತೆರಿಗೆ ರಜಾಗಳನ್ನು ನೀಡುತ್ತದೆ. ಇಷ್ಟೆಲ್ಲಾ ಇದ್ದಾಗ್ಲೂ ನಮ್ಮ ಸರ್ಕಾರ ಈ ಬಾರಿ ಟಾಟಾ ಸಂಸ್ಥೆಯನ್ನು ಸೆಳೆಯಲು ಯಾಕೆ ವಿಫಲವಾಯ್ತು ಅಂತ ನೋಡುದ್ರೆ ಕರ್ನಾಟಕದ ರಾಜಕೀಯ ಸ್ಥಿತಿಗತಿ, ಇಲ್ಲಿನ ರೈತ ಸಮುದಾಯದ ಪ್ರತಿಕ್ರಿಯೆಗಳು, ಉದ್ದಿಮೆ ಎದುರಿಸಲು ಉಂಟಾಗಬಹುದಾದ ತೊಡಕುಗಳು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು, ಸರ್ಕಾರದ ನಿಯಮಾವಳಿಗಳ ಅಸ್ಥಿರತೆ/ ಅಸ್ಪಷ್ಟತೆ ಇವೆಲ್ಲಾ ಪ್ರಮುಖ ಪಾತ್ರ ವಹಿಸಿದ ಹಾಗೆ ಕಾಣ್ತಿದೆ ಗುರು!

ರೈತರ ಮನವೊಲಿಕೆಯ ಮಹತ್ವ!ಉದ್ದಿಮೆ ಆರಂಭಕ್ಕಾಗಿ ನೆಲ ವಶಪಡಿಸಿಕೊಳ್ಳಲು ಸರ್ಕಾರ ಅನುಸರಿಸೋ ನೀತಿ ಮತ್ತಷ್ಟು ಸುಧಾರಿಸಬೇಕಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಗುರುತಿಸಬೇಕಾದಾಗ ಅಲ್ಲಿ ಏನೇನಿರಬೇಕು ಅನ್ನೋದು ಸ್ಪಷ್ಟವಾಗಿರಬೇಕು. ಅಂತಹ ಭೂಮಿಯನ್ನು ನೀಡುವ ರೈತನಿಗೆ ಏನೆಲ್ಲಾ ಪರಿಹಾರ ಕೊಡಬೇಕು ಅನ್ನೋದು ರೈತನನ್ನು ಪ್ರೋತ್ಸಾಹಿಸೋ ಹಾಗಿರಬೇಕು. ದೇವನಹಳ್ಳಿ ಸುತ್ತಲ ಭೂಮಿನ ಸರ್ಕಾರ ವಶ ಪಡಿಸಿಕೊಂಡಾಗ ಯಾವ ಬೆಲೆಗೆ ಕೊಂಡುಕೊಳ್ತು? ಇವತ್ತು ಅದರಲ್ಲಿ ಎಷ್ಟು ಭಾಗ ಮಾತ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿದೆ? ಉಳಿದದ್ದನ್ನು ಯೋಜನೆಯಲ್ಲೇ ವಾಣಿಜ್ಯ ಉದ್ದೇಶಕ್ಕೆ ಅಂತ ತೋರಿಸಿ... ವಿಮಾನ ನಿಲ್ದಾಣ ಕಟ್ಟಿದ ಮೇಲೆ ಆ ನೆಲದ ಬೆಲೆ ಗಗನಕ್ಕೇರಿಸಿ ಲಾಭ ಹೆಚ್ಚಿಸಿಕೊಳ್ಳೋದನ್ನು ನೋಡಿದಾಗ ನೆಲ ಬಿಟ್ಟುಕೊಟ್ಟ ರೈತ, ನಾ ಕೊಟ್ಟ ಜಮೀನು ವಿಮಾನ ನಿಲ್ದಾಣಕ್ಕಲ್ಲ... ಅದನ್ನು ಕಟ್ಟಿದೋರ ಲಾಭ ಗಳಿಕೆಗೆ ಅಂತ ಅಸಮಾಧಾನ ಪಟ್ಕೊಳ್ಳೋ ಹಾಗೆ ನಮ್ಮ ನಿಯಮ ಇರಬಾರದು ಅಲ್ವಾ ಗುರು? ಅಂದ್ರೆ ನೆಲ ಕಳೆದುಕೊಳ್ಳುವವನು ಲಾಭದ ಭಾಗೀದಾರ ಆಗಬೇಕು ತಾನೆ? ಆಗ ಮಾತ್ರ ತಮ್ಮ ನೆಲ ಸರ್ಕಾರ ಕೊಂಡುಕೊಳ್ಳುತ್ತೆ ಅಂದ್ರೆ ಖುಷಿ ಪಟ್ಕೊಳ್ಳೋ ಪರಿಸ್ಥಿತಿ ಹುಟ್ಕೊಳ್ಳೋದು. ಒಳ್ಳೇ ಬೆಲೆ, ಸರಿಯಾದ ಪುನರ್ವಸತಿ, ದಬ್ಬಾಳಿಕೆ ಹಾಗೂ ಒತ್ತಾಯವಿಲ್ಲದ ಗೌರವದಿಂದ ನಡೆಸಿಕೊಳ್ಳೋದು ಇವೆಲ್ಲಾ ಸಾಧನಗಳನ್ನು ಬಳಸಿ ರೈತಣ್ಣನ ಮನವೊಲಿಸಬೇಕು.

ಏನೆಲ್ಲಾ ಕೊಡಬೇಕು?
ಅತ್ಯುತ್ತಮ ರಸ್ತೆ, ರೈಲು ಸಂಪರ್ಕಗಳ ಜೊತೆಯಲ್ಲಿ ಅಗತ್ಯವಾದ ನೀರು ಮತ್ತು ವಿದ್ಯುತ್ತುಗಳ ಪೂರೈಕೆ ಮಾಡಬೇಕಾಗಿದೆ. ಅದಕ್ಕೆ ಅಗತ್ಯವಾದಂತೆ ನದಿ ನೀರಿನ ಸದ್ಬಳಕೆಗೆ ಯೋಜನೆಗಳು, ವಿದ್ಯುತ್ ಉತ್ಪಾದನೆಗೆ ಬೇರೆ ಬೇರೆ ಶಕ್ತಿಮೂಲಗಳ ಬಳಕೆ, ಸೋರಿಕೆ ತಡೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರದ ನಾಯಕತ್ವ ಗಟ್ಟಿ ದೃಷ್ಟಿಕೋನದ, ದೂರಗಾಮಿ ಯೋಜನೆಯುಳ್ಳ, ನಾಡಿನ ಏಳಿಗೆಯ ಬಗ್ಗೆ ಸದಾ ತುಡಿಯುತ್ತಿರುವುದಾಗಿರಬೇಕು. ಕನ್ನಡನಾಡಿನ ಏಳಿಗೆಯೊಂದೇ ಪರಮಗುರಿಯಾಗಿರಬೇಕು. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸುತ್ತು ಬಳಸು ಮೀನ ಮೇಷವಿಲ್ಲದ ಪಾರದರ್ಶಕವಾದ ಚುರುಕಾದ ಆಡಳಿತ ಯಂತ್ರದ ಅಗತ್ಯವಿದೆ. ಉದ್ದಿಮೆ ಆರಂಭಿಸಲು ಬೇಕಾದ ಪರವಾನಿಗೆಗಳನ್ನು ಹಲವಾರು ಇಲಾಖೆಗಳಿಂದ ಪಡೆಯಬೇಕಾದ ಅಗತ್ಯವನ್ನು ಇಲ್ಲವಾಗಿಸಿ ಒಂದೇ ಸಂಸ್ಥೆಯಲ್ಲಿ ಸರಳವಾಗಿ ಲೈಸೆನ್ಸ್ ನೀಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ. ದೀರ್ಘಕಾಲಕ್ಕಾಗಿ ರೂಪಿಸಲಾದ, ಯಾವುದೆ ಸರ್ಕಾರವಿದ್ದರೂ ಬದಲಾಗದ ರೀತಿನೀತಿ ನಿಯಮಾವಳಿಗಳ ಅಗತ್ಯವಿದೆ.

ನಾಡಿನ ಏಳಿಗೆಗೆ ಉದ್ದಿಮೆಗಾರಿಕೆಯೇ ರಹದಾರಿ
ನಾಡು ಆರ್ಥಿಕವಾಗಿ ಬೆಳೆಯಲು, ನಾಡಿನ ಜನತೆಗೆ ಉದ್ಯೋಗಾವಕಾಶಗಳನ್ನು ತಂದುಕೊಡುವ ಉದ್ದಿಮೆಗಳೇ ಇಂದಿನ ಅಗತ್ಯವಾಗಿವೆ. ಸಿಂಗೂರಿಂದ ಟಾಟಾ ಎತ್ತಂಗಡಿ ಆಗುತ್ತೇ ಅಂದಾಗ ಸಂತೆಗೆ ಮೂರು ಮೊಳ ನೆಯ್ದಂಗೆ ತಕಾಪಕಾ ಕುಣಿದು ಟಾಟಾ ಮುಂದೆ ಲಾಗಾ ಹಾಕೊ ಬದಲಾಗಿ ನಾಡಿನ ಆಳುವ ಸರ್ಕಾರಗಳು ಈ ಬಗ್ಗೆ ಸರಿಯಾದ ನಿಯಮಗಳನ್ನು ಎಲ್ಲ ಕ್ಷೇತ್ರಗಳ ತಜ್ಞರ ಸಹಕಾರದಿಂದ ರೂಪಿಸಿ ಜಾರಿಗೆ ತರಬೇಕಾಗಿದೆ. ಇಗೋ! ಕರ್ನಾಟಕ ರಾಜ್ಯದ ಉದ್ದಿಮೆ ನೀತಿ ಇದು. ನಮ್ಮ ನಾಡಲ್ಲಿ ನೀವು ಉದ್ದಿಮೆ ಆರಂಭಿಸಲು ಇಂತಿಂತಹ ಪೂರಕ ವಾತಾವರಣವಿದೆ. ಈ ನಾಡಲ್ಲಿ ನಿಮಗೆ ಇಂತಿಂತಹ ಸವಲತ್ತುಗಳನ್ನು ಸರ್ಕಾರ ನಿಮಗೆ ನೀಡುತ್ತದೆ. ಬದಲಾಗಿ ನೀವು ಇಂತಿಷ್ಟು ಕನ್ನಡಿಗರಿಗೆ ಕೆಲಸ ಕೊಡಬೇಕು. ಉದ್ದಿಮೆ ಆರಂಭಕ್ಕಾಗಿ ಅಗತ್ಯವಿರುವ ನೆಲವನ್ನು ಸರ್ಕಾರ ರೈತರಿಂದ ಕೊಳ್ಳಲು ಇಂತಹ ನೀತಿಯನ್ನು ಅನುಸರಿಸುತ್ತದೆ, ಈ ಮಾನದಂಡದ ಆಧಾರದ ಮೇಲೆ ಇಂತಿಷ್ಟು ಪರಿಹಾರ ನೀಡಲಾಗುತ್ತದೆ... ಎಂಬೆಲ್ಲಾ ವಿಷಯಗಳು ಪಾರದರ್ಶಕವಾಗಿಯೂ, ಸ್ಫುಟವಾಗಿಯೂ ಇದ್ದಲ್ಲಿ ನಮ್ಮ ನಾಡಿಗೆ ಉದ್ದಿಮೆಗಳು ಹರಿದು ಬರುವುದು ಅಷ್ಟೊಂದು ಕಠಿಣವಾಗಲಾರದು ಗುರು!

2. ಬಂಡವಾಳ ಹರಿದು ಬರಲು ಗಟ್ಟಿನೀತಿ ಬೇಕು!ಆರ್ಸೆಲರ್ , ಪೋಸ್ಕೋ, ಲಫಾರ್ಜ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದ್ದು, ಸುಮಾರು ರೂ.1,38,000 ಕೋಟಿಯಷ್ಟು ಬಂಡವಾಳ ಹೂಡಲು ಮುಂದಾಗಿದ್ದಾರೆ ಮತ್ತು ಇದು 92,000ಕ್ಕೂ ಹೆಚ್ಚು ಕೆಲಸ ಹುಟ್ಟು ಹಾಕಲಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ! ಇದು ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ನೋಡಿದರೆ ಒಂದೊಳ್ಳೆ ಬೆಳವಣಿಗೆಯಾಗಿ ಕಾಣ್ತಿದೆ. ಈ ಸದವಕಾಶದ ಲಾಭ ನಮ್ಮ ನಾಡಿಗೆ ಸಂಪೂರ್ಣವಾಗಿ ಸಿಗಬೇಕಾದರೆ ಸರ್ಕಾರ ಈಗಿಂದಲೇ ಎಚ್ಚರಿಕೆಯಿಂದ ಕೆಲ್ಸ ಮಾಡ್ಬೇಕು. ಸರ್ಕಾರ ಎಚ್ಚರ ತಪ್ಪದ ಹಾಗೆ ಜನ ಎಚ್ಚರ ವಹಿಸಬೇಕು ಗುರೂ! ಇದು ಈ ಯೋಜನೆಯ ಸಂಪೂರ್ಣ ಲಾಭ ನಮ್ಮ ನಾಡಿಗೇ ಸಿಗೋಕ್ಕೆ ಭಾಳಾ ಅಗತ್ಯವಾಗಿದೆ.

ಏನೇನ್ ಆಗ್ತಿದೆ ?
ಈ ಯೋಜನೆಗಳಿಂದ ಸಿಮೆಂಟ್, ಕಬ್ಬಿಣ ಮತ್ತು ಅದಿರು ಮುಂತಾದ ವಿವಿಧ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಉದ್ಯೋಗದ ಅವಕಾಶಗಳು ಸೃಷ್ಟಿ ಆಗುವುದರ ಜೊತೆಗೆ, ಪೂರಕ ವಲಯಗಳಾದ ಬಿಡಿ ಭಾಗಗಳ ತಯಾರಿಕೆ, ಮೂಲ ಉತ್ಪನ್ನಗಳ ಪೂರೈಕೆ, ಹೊಸ ಸಂಶೋಧನಾ ಘಟಕಗಳು, ಹೀಗೆಯೇ ಹತ್ತಾರು ಕ್ಷೇತ್ರಗಳಲ್ಲಿ ಹೊಸ ಹೊಸ ಕೆಲಸಗಳು ಹುಟ್ಟಿಕೊಳ್ಳಲಿವೆ.

ಇತ್ತ ಗಮನವಿರಲಿ !
ಸರ್ಕಾರ ಈ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳೊ ಸಂದರ್ಭದಲ್ಲೇ ಕೆಳಗಿನ ಕೆಲವು ಮುಖ್ಯ ವಿಷಯಗಳ ಬಗ್ಗೆ ಗಮನ ಹರಿಸಬೇಕು ಗುರು. ಯೋಜನೆಗಳಿಂದ ಹುಟ್ಟುತ್ತಿರುವ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಹೇಗೆ ಕೊಡಿಸುವುದು ?
ಈ ಹೂಡಿಕೆಯಿಂದ ಯಾವ ಯಾವ ತರಹದ ಕೆಲಸಗಳು ಸೃಷ್ಟಿ ಆಗುತ್ತೆ? ಆ ಕೆಲಸಗಳಿಗೆಲ್ಲ ಬೇಕಾದ ನೈಪುಣ್ಯತೆ ಈ ಭಾಗದ ಕನ್ನಡಿಗರಲ್ಲಿದೆಯಾ? ಇಲ್ಲದೇ ಹೋದಲ್ಲಿ, ಅದನ್ನು ಹುಟ್ಟು ಹಾಕುವತ್ತ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು?
ನಮ್ಮ ನೆಲ, ಜಲ ಸೇರಿದಂತೆ ಎಷ್ಟು ಸಂಪನ್ಮೂಲದ ಬಳಕೆಯಾಗುತ್ತೆ? ಆ ಬಳಕೆಗೆ ತಕ್ಕ ಲಾಭ ನಾಡಿಗೆ ಆಗಲಿದೆಯೇ?
ಯೋಜನೆಗಳಿಗೆ ರೈತರಿಂದ ಪಡೆಯುತ್ತಿರುವ ಭೂಮಿ ಎಂತಹದ್ದು? ರೈತರಿಂದ ಫಲವತ್ತಾದ ಕೃಷಿ ಭೂಮಿ ಪಡೆಯುವುದು ಅನಿವಾರ್ಯ ಅನ್ನುವಂತಹ ಸಂದರ್ಭದಲ್ಲಿ, ರೈತರಿಗೆ ಸರಿಯಾದ ಪುನರ್ವಸತಿ ಸೌಲಭ್ಯ ಸಿಗುವಂತೆ ಮಾಡುವುದಕ್ಕೆ ಏನು ಮಾಡಬೇಕು? ಅದಕ್ಕೂ ಮೀರಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಗಳಲ್ಲಿ ಒಬ್ಬ ಭಾಗಿದಾರ ಅನ್ನುವಂತೆ ತೊಡಗಿಸಿಕೊಳ್ಳುವುದು ಹೇಗೆ? ಬಂಡವಾಳ ಹೂಡುತ್ತಿರುವ ಕಂಪನಿಗಳು ಶಾಲೆ, ಆಸ್ಪತ್ರೆ ನಿರ್ಮಾಣದಂತಹ ಕೆಲಸದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿಸುವಂತೆ ಅವರ ಮನ ಒಲಿಸುವುದು ಹೇಗೆ? ಬಂಡವಾಳ ತರೋದಷ್ಟೇ ತನ್ನ ಕೆಲಸ ಎಂದು ವರ್ತಿಸದೇ, ಸರ್ಕಾರ ಮೇಲಿನ ಎಲ್ಲ ಅಂಶಗಳ ಬಗ್ಗೆ ಸರಿಯಾದ ಗಮನ ಕೊಡಬೇಕು ಗುರು.
Related Posts with Thumbnails