ವಿಷ್ಣುವರ್ಧನ್ ಇನ್ನಿಲ್ಲ: ಮುಗಿಯಿತು ಮುತ್ತಿನ ಹಾರದ ಕವನ!


ಇಂದು ಬೆಳಗ್ಗೆ ಕನ್ನಡದ ಹಿರಿಯ ನಾಯಕ ನಟರಾದ ಡಾ. ವಿಷ್ಣುವರ್ಧನ್ (ಫೋಟೋ ಕೃಪೆ : ಒನ್ ಇಂಡಿಯ.ಇನ್) ಅವ್ರು ಮೈಸೂರಿನಲ್ಲಿ ತೀರಿಕೊಂಡಿದ್ದಾರೆ. ವಂಶವೃಕ್ಷದ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಪತ್ ಕುಮಾರ್, ನಾಗರಹಾವು ಚಿತ್ರದಲ್ಲಿ ನಾಯಕರಾಗಿ ವಿಷ್ಣುವರ್ಧನ್ ಎಂಬ ಹೆಸರಲ್ಲಿ ಮನೆ ಮಾತಾದರು. ಇದುವರೆಗೂ ಇವರು 197 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿನ್ನೆಯಷ್ಟೇ ತೀರಿಕೊಂಡಿದ್ದ ಶ್ರೀ. ಸಿ.ಅಶ್ವತ್ಥ್ ಅವರ ಸಾವಿನಿಂದ ಕಂಗೆಟ್ಟಿದ್ದ ಕನ್ನಡ ಜನತೆಗೆ ಇವರ ಸಾವು ಮತ್ತೊಂದು ಆಘಾತಕಾರಿ ಸುದ್ದಿಯಾಗಿದೆ. 2009, ಹೋಗುವ ಮುನ್ನ ಕನ್ನಡದ ಸಂಪತ್ತನ್ನೆಲ್ಲಾ ಕಸಿದು ಒಯ್ಯುತ್ತಿದೆಯೇನೋ ಎನ್ನುವ ನೋವಿನ ಚೀತ್ಕಾರ ಕನ್ನಡಿಗರಲ್ಲುಂಟು ಮಾಡಿದೆ. ಡಾ. ವಿಷ್ಣು ಆತ್ಮಕ್ಕೆ ಚಿರಶಾಂತಿ ಲಭಿಸಲಿ.

ಸಿ. ಅಶ್ವತ್ಥ್ : ಹಾರಿ ಹೋದ ಹಾಡುಹಕ್ಕಿ


ಕನ್ನಡವೇ ಸತ್ಯ ಖ್ಯಾತಿಯ ಹೆಮ್ಮೆಯ ಗಾಯಕ, ಸಂಗೀತ ನಿರ್ದೇಶಕ, ಸುಗಮ ಸಂಗೀತದ ಮಾಂತ್ರಿಕ, ಏರುದನಿಯ ಹಾಡುಗಾರ, ನಮ್ಮೆಲ್ಲರ ಪ್ರೀತಿಯ ಶ್ರೀ. ಸಿ. ಅಶ್ವಥ್ ಅವರು ಇಂದು ನಿಧನರಾಗಿದ್ದಾರೆ. ಅಶ್ವಥ್ ಎಂದೊಡನೆ ನೆನಪಾಗುವುದು ಕಾಮನ ಬಿಲ್ಲು ಚಿತ್ರದ "ನೇಗಿಲ ಹಿಡಿದು ಹೊಲವನು..." ಹಾಡು ಮತ್ತು ಆ ಹಾಡು ನಾಡಲ್ಲಿ ಮೂಡಿಸಿದ ಸಂಚಲನ. ಶಿಶುನಾಳ ಶರೀಫ ಅಂದರೆ ಕಣ್ಮುಂದೆ ಬರುವುದು ಅಶ್ವತ್ಥರ ಹಾಡುಗಳು.
ಏನ್ ಗುರು ಶ್ರೀಯುತರಿಗೆ ಗೌರವ ಪೂರ್ವಕವಾದ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತದೆ. ಪ್ರೀತಿಪೂರ್ವಕ... ಕಂಬನಿ ತುಂಬಿದ ವಿದಾಯಗಳು.

ದಾರಿ ತಪ್ಪಿದ ಸಂದೇಶ

ಬೆಂಗಳೂರಿನ ನಗರ ಪಾಲಿಕೆಗೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮತದಾರರಲ್ಲಿ ಈ ಚುನಾವಣೆಯ ಪ್ರಾಶಸ್ತ್ಯ ಮತ್ತು ಅದರಲ್ಲಿ ಮತದಾರರ ಮುಖ್ಯ ಪಾತ್ರದ ಬಗ್ಗೆ ಜನ್ರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ ಒಂದು ಕಾರ್ಯಕ್ರಮ ಜರುಗಿತು. ಮತದಾನ ಬಹಳ ಮುಖ್ಯ ವಿಚಾರ, ಅದರಲ್ಲಿ ಜನರ ಪಾತ್ರ ಅತಿ ಮುಖ್ಯ, ಇದನ್ನು ಜನರಿಗೆ ತಿಳಿ ಹೇಳಬೇಕು, ಎಲ್ಲಾ ಸರಿ. ಆದರೆ ಬೆಂಗಳೂರಿನ ಮತದಾರರಿಗೆ ಜಾಗೃತಿಯ ವಿಷಯ ಹಿಂದಿಯಲ್ಲಿ "ಜಾಗ್ತೇ ರಹೋ" ಎಂದು ಹಿಂದಿ ಭಾಷೇಲಿ ಹೇಳಿದರೆ ಕೆಲ್ಸ ಆಗತ್ತಾ ಗುರು?

ಈ ಚುನಾವಣೆ ಬೆಂಗಳೂರಿನ ಪಾಲಿಕೆಗೇ ತಾನೆ?

ಅಲ್ಲಾ, ಈ ಚುನಾವಣೆ ಬೆಂಗಳೂರಿನ ಮಹಾನಗರ ಪಾಲಿಕೆಗೋ, ಅಥವಾ ಭೂಪಾಲ ನಗರಕ್ಕೋ? ಇದರ ಆಯೋಜಕರು ಈ ಪ್ರಶ್ನೆಗೆ ಉತ್ತರ ಕಂಡುಕೊಂಡ ಬಳಿಕ ಕಾರ್ಯಕ್ರಮ ನಡೆಸಿದ್ದರೆ ಚೆನ್ನಾಗಿರ್ತಿತ್ತು. ಚುನಾವಣೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು, ತಮ್ಮ ಮತ ಹಾಕಬೇಕು, ಚುನಾವಣೆಯನ್ನು ಯಶಸ್ವಿಗೊಳಿಸಬೇಕು, ಸರಿಯಾದ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಬೇಕು, ಸರಿ. ಆದರೆ ಈ ಎಲ್ಲಾ ಸಂದೇಶಗಳನ್ನು ಒಂದೆರಡು ಪದಗಳಲ್ಲಿ ಜನರಿಗೆ ಹೇಳಲು ಹೊರಟು, ಬೆಂಗಳೂರಿನ ಈ ಚುನಾವಣೆಗೆ ಏನೇನೂ ಸಂಬಂಧವಿರದ ಹಿಂದಿ ಭಾಷೆಯನ್ನು ಬಳಸಿದರೆ ಹೇಗೆ?! ಇಲ್ಲಿ ಮತದಾರರಿಗೆ "ಎದ್ದೇಳು ಮತದಾರ" ಎಂದು ಹೇಳಿದರೆ ಕಾರ್ಯಕ್ರಮ ನಡೆಸಲು ಅಸಾಧ್ಯವಾಗುತ್ತಿತ್ತೇ? ಬೆಂಗಳೂರಿನ ಜನರಿಗೆ ಸಂದೇಶ ರವಾನಿಸಲು ಯಾವ ಭಾಷೆ ಸರಿಯಾದ್ದು ಎಂದೇ ಅರಿಯದ ಇವರು ಚುನಾವಣೆಯಂತ ಮುಖ್ಯ ಸಂದೇಶ ಕೊಡಲಾದೀತೇ?

ಆದೀತು.. ಇನ್ನೂ ಕಾಲ ಮಿಂಚಿಲ್ಲ. ಚುನಾವಣೆಗೆ ಮುನ್ನ ಇರುವ ಸಮಯದಲ್ಲಿ ಈ ಕಾರ್ಯಕ್ರಮದ ಹೆಸರು, ಅದರೊಳಗೆ ಹೇಳಬೇಕೆಂದಿರುವ ಸಂದೇಶಗಳನ್ನೆಲ್ಲಾ ಬೆಂಗಳೂರಿನ ಜನರಿಗೆ ಅರ್ಥವಾಗುವಂತೆ ಲಕ್ಷಣವಾಗಿ ಕನ್ನಡದಲ್ಲಿ ಹೇಳಿ ಜನರನ್ನು ತಲುಪಬಹುದು, ಸಂದೇಶವನ್ನು ಸರಿಯಾಗಿ ತಲುಪಿಸಬಹುದು. ಆಗ ನೋಡಿ, ನಿಜಕ್ಕೂ ಚುನಾವಣೆಯೆಂದರೆ ನಿದ್ದೆ ಮಾಡುವವರೂ ಎದ್ದು ಬಂದು ಮತ ಹಾಕ್ಯಾರು!

ಹಿಂದೀ ಪ್ರಚಾರ ಸಭೆಗಳು ಬೇಕಾ?

ಇತ್ತೀಚಿಗೆ ಬೆಂಗಳೂರಿನ ಚೌಡಯ್ಯಾ ಮೆಮೋರಿಯಲ್ ಹಾಲ್‍ನಲ್ಲಿ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನೋರು 43ನೇ ಪದವಿ ಪ್ರದಾನ ಸಮಾರಂಭ ಮಾಡುದ್ರು. ಅದರಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹಂಸರಾಜ ಭಾರಧ್ವಾಜರು ಸೊಗಸಾಗಿ ಹಿಂದೀ ಹೇರಿಕೆಗೆ ಒಂದು ಪಾವಿತ್ರ್ಯತೆ ತಂದುಕೊಡೋ ಕೆಲಸಕ್ ಕೈ ಹಾಕಿದಾರೆ. ಇವರ ಜೊತೆಯಲ್ಲಿ ರತ್ನಾಕರ ಪಾಂಡೆ ಎನ್ನೋ ಮಹನೀಯರೂ ಆಣಿಮುತ್ತುಗಳಾಡಿದ್ದಾರೆ.

ಉದುರಿದ ನುಡಿಮುತ್ತುಗಳು!

"ಸ್ವಾತಂತ್ರ ಹೋರಾಟದಲ್ಲಿ ಭಾರತೀಯರೆಲ್ಲಾ ಹಿಂದಿಯ ಮೂಲಕ ಸಂಘಟಿತರಾದರು. ಕನ್ನಡ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರೋದ್ರಿಂದ ಈ ಜನರು ಹಿಂದೀನ ಬಳುಸ್ತಾರೆ" ಅಂತ ಅವರಂದ್ರೆ ಪರಿಷತ್‍ನ ಮಹಾ ಪೋಷಕರಾದ ಡಾ.ರತ್ನಾಕರ ಪಾಂಡೆಯವ್ರು ‘ಈಚಿನ ವರ್ಷಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ತೀವ್ರವಾಗಿದ್ದು, ಪ್ರಾಂತೀಯ ಭಾಷೆಗಳ ಬಳಕೆ ಕ್ಷೀಣಿಸುತ್ತಿದೆ. ಪ್ರತಿಯೊಂದು ರಾಜ್ಯದವರು ತಮ್ಮ ಮಾತೃಭಾಷೆಯನ್ನೇ ಬಳಸಲಿ. ಆದರೆ ಇತರೆ ಭಾಷಿಗರೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್‌ಗೆ ಬದಲಾಗಿ ಹಿಂದಿ ಬಳಸಬೇಕು’ ಎಂದು ಕರೆ ನೀಡಿದರು.

ಅದೇ ಹಳೇ ಟ್ರಿಕ್ಕುಗಳು!

ಹಿಂದೀನಾ ಭಾರತದ ಜನರ ಮೇಲೆ ಹೊರೆಸಲು ಇವ್ರುಗಳು ಬಳುಸ್ತಿರೋ ಮಾಮೂಲಿ ಹಳೇ ಟ್ರಿಕ್ಕುಗಳೇ ಇವಾಗಿವೆ ಗುರು! ನಮ್ಮೂರಲ್ಲಿ ನಾವು ಪರಭಾಷೆಯೋರ ಜೊತೆ ಹಿಂದಿ ಬಳುಸ್ಬೇಕಂತೆ. ಪರಭಾಷಿಕರು ಅಂದ್ರೆ ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರು, ಬೆಂಗಾಲಿಗಳು, ಪಂಜಾಬಿಗಳು, ಗುಜರಾತಿಗಳೂ...ಸೇರಿದ ಹಾಗೆ ಎಲ್ಲಾ ಭಾಷೆ ಮಾತಾಡೋರೂ ಅಂತಾ ಅರ್ಥ. ಆಕಸ್ಮಾತ್ ನಾವು ಬಂದೋರ ಜೊತೇಲೆಲ್ಲಾ ಹಿಂದೀ ಬಳುಸಕ್ ಶುರು ಹಚ್ಕೊಂ
ಡ್ರೆ ನಮ್ಮ ನಾಡಲ್ಲಿ ನಮ್ಮ ನುಡಿ ಉಳಿದೀತಾ ಗುರು? ಅದರ್ ಬದ್ಲು ಇವ್ರುಗಳು ‘ಕನ್ನಡನಾಡಿಗೆ ಬಂದೋರೆಲ್ಲಾ ತಮ್ಮ ತಾಯ್ನುಡೀನಾ ಮನೇಲಿ ಬಿಟ್ಟು ಕನ್ನಡದಲ್ಲೇ ವ್ಯವಹರುಸ್ಬೇಕು‘ ಅನ್ನಬೇಕಿತ್ತಲ್ವಾ? ಈ ಜನಗಳ ಇನ್ನೊಂದು ಟ್ರಿಕ್ಕು ಇಂಗ್ಲಿಷ್ ಭಾಷೇ ನಮ್ಮನ್ನು ಗುಲಾಮರಾಗಿ ಮಾಡಿಕೊಂಡಿದ್ದ ಬ್ರಿಟೀಷರ ಭಾಷೆ. ಅದನ್ನು ಬಳುಸೋದು ಗುಲಾಮಗಿರಿ ಸಂಕೇತ ಅನ್ನೋ ಧ್ವನೀಲಿ ಮಾತಾಡೋದು. ಆ ಮೂಲಕ ಇವರೇನು ಕನ್ನಡ ಬಳಸಿ ಅಂತಿಲ್ಲಾ... ‘ಇಂಗ್ಲಿಷ್ ಬ್ಯಾಡಾ ಹಿಂದೀ ಬಳಸಿ’ ಅಂತಿದಾರೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಅನ್ನೋ ಸಂಸ್ಥೇ ಮೂಲಕ ಈ ಪ್ರಚಾರದ ಕೆಲಸಕ್ಕೆ ಮುಂದಾಗಿದಾರೆ. ಇಂಥಾ ಪ್ರಚಾರಗಳ ಪೊಳ್ಳುತನ, ಅದರಿಂದಾಗೋ ಅಪಾಯಗಳ್ನ ನಾಡಿನ ಜನತೆ ಅರ್ಥ ಮಾಡ್ಕೋಬೇಕಾಗಿದೆ. ಅದು ಅಂಥಾ ಕಷ್ಟದ್ ಕೆಲ್ಸಾನೂ ಅಲ್ಲಾ ಗುರೂ! ಸುಮ್ನೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಲಾಂಛನದಲ್ಲಿ ಬರೆದಿರೋ ಸಾಲುಗಳನ್ನು ಓದಿಕೊಂಡ್ರೆ ಸಾಕು. ಅದರಲ್ಲೇನಿದೆ ಅಂದ್ರಾ... " ಏಕ್ ರಾಷ್ಟ್ರಭಾಷಾ ಹಿಂದೀ ಹೋ! ಏಕ್ ಹೃದಯ್ ಹೋ ಭಾರತ್ ಜನನಿ " ಅಂತಾ ಇದೆ. ಇದರರ್ಥ ಹಿಂದಿ ಅಲ್ಲದ ನುಡಿಗಳಿಗೆಲ್ಲಾ ಭಾರತದಲ್ಲಿ ಜಾಗಾ ಇಲ್ಲಾ ಅಂತ ಇದ್ದಂಗಿಲ್ವಾ? ಗುರೂ!!

ಕೊನೆಹನಿ : ತೆರಿಗೇ ರೂಪದಲ್ಲಿ ನಮ್ಮದೇ ಹಣಾ ತೊಗೊಂಡು, ನಮ್ಮೂರಲ್ಲೇ, ನಮಗೇ, ನಮ್ಮದಲ್ಲದ ಹಿಂದೀನಾ ಕಲಿಸೋ ಇಂಥಾ ಪ್ರಚಾರ ಸಭಾಗಳು ಯಾಕೆ ಬೇಕು? ಇಂಥಾ ಸಭೆಗಳ ಘೋಷಿತ ಉದ್ದೇಶಾನೇ ‘ಭಾರತಾನಾ ಒಂದಾಗಿಟ್ಕೊಳ್ಳೋಕೇ ನಮ್ಮದಲ್ಲದ ನುಡೀನಾ ನಮಗೆ ಕಲಿಸೋದು’ ಅನ್ನೋದಾದ್ರೆ ‘ಭಾರತದ ಏಕತೆ’ ಅಷ್ಟೊಂದು ಅಸಹಜವಾಗಿರೋದಾ ಅನ್ಸಲ್ವಾ ಗುರು?

ಬಿ.ಎಸ್.ಈ ತಾಣ - ಕನ್ನಡಕ್ಕಿಲ್ಲ ಸ್ಥಾನ !

ದೇಶದ ಅಗ್ರ ಶೇರು ಮಾರುಕಟ್ಟೆಯಾದ ಬಿ.ಎಸ್.ಈ ಭಾರತದ ಹಲವು ಭಾಷೆಗಳಲ್ಲಿ ಶೇರು ವಹಿವಾಟು ನಡೆಸಲು ಅನುಕೂಲವಾಗುವಂತೆ ಅಂತರ್ಜಾಲದ ತಾಣಗಳನ್ನು ವಿನ್ಯಾಸಗೊಳಿಸುವುದಾಗಿ ಹೇಳಿರುವ ಸುದ್ಧಿ ಬಂದಿದೆ ಗುರು.

ಶೇರು ಮಾರುಕಟ್ಟೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ, ಅದರಿಂದ ಸಿಗುವ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವಲ್ಲಿ ಈ ನಡೆ ಖಂಡಿತ ಸಹಾಯ ಮಾಡಲಿದೆ. ಆದರೆ, " ಸಕಲ ಗುಣ ಸಂಪನ್ನ, ಏಕ ಗುಣ ಹೀನ" ಅನ್ನೋ ಸಂಸ್ಕೃತದ ಗಾದೆಯಂತೆ, ಈ ನಡೆಯಂತೆ ಶುರುವಾಗಲಿರುವ ತಾಣಗಳ ಪಟ್ಟಿಯಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟಿಲ್ಲ ಗುರು !

ಕನ್ನಡದಲ್ಲಿ ತಾಣ ಹೆಚ್ಚಿಸುತ್ತೆ ವಹಿವಾಟು !
ಶೇರು ಮಾರುಕಟ್ಟೆಯನ್ನು ಮತ್ತು ಅದರಲ್ಲಿ ಹೂಡಿಕೆಯಿಂದ ಆಗೋ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮರಾಠಿ, ತಮಿಳು, ತೆಲುಗು ಮತ್ತು ಪಂಜಾಬಿ ಭಾಷೆಯಲ್ಲಿ ಈ ತಾಣಗಳನ್ನು ರೂಪಿಸುವುದಾಗಿ BSE ತಿಳಿಸಿದೆ. ಕನ್ನಡವನ್ನು ಕಡೆಗಣಿಸಿರುವ ಇವರನ್ನು ಜಾಗೃತ ಕನ್ನಡದ ಗ್ರಾಹಕರು ಮಾತ್ರ ಎಚ್ಚರಿಸಬಲ್ಲರು ಗುರು. ಕನ್ನಡದಲ್ಲೂ ಈ ತಾಣ ರೂಪಿಸುವುದು ಕರ್ನಾಟಕದಲ್ಲಿ BSE ಶೇರು ವಹಿವಾಟನ್ನು ಇನ್ನಷ್ಟು ಜನಪ್ರಿಯಗೊಳಿಸುವುದಲ್ಲದೇ, ವಹಿವಾಟು ನಡೆಸುವ ಜನರಿಗೂ ಹಾಗೂ BSE ಗೂ ಹೆಚ್ಚಿನ ವಹಿವಾಟಿನ ಲಾಭ ತಂದು ಕೊಡಲಿದೆ ಎಂದು ಇವರಿಗೆ ತಿಳಿ ಹೇಳೊಣ, ಆ ಮೂಲಕ ಬದಲಾವಣೆಯೊಂದಕ್ಕೆ ಕಾರಣವಾಗೋಣ. ಏನಂತೀಯ ಗುರು ?

ಎಸ್ಸೆಮ್ಮೆಸ್ಸು!

ಭಾರತದಲ್ಲಿ 40 ಕೋಟಿಯಷ್ಟು ಜನ ಮೊಬೈಲು ಬಳಕೆದಾರರು ಇರೋದು ನಿಮಗೆ ಗೊತ್ತಿರ್ಬೋದು. ತಿಂಗಳೊಂದರಲ್ಲೇ ಸುಮಾರು ಒಂದು ಕೋಟಿ ಜನ ಹೊಸದಾಗಿ ಮೊಬೈಲು ಚಂದಾದಾರರು ಆಗ್ತಿರೋದೂ ನಿಮಗೆ ಗೊತ್ತಿರ್ಬೋದು. ಆದ್ರೆ ಅದರಲ್ಲಿ 10 ಕೋಟಿಗಿಂತಲೂ ಕಡಿಮೆ ಜನರು ಇಂಗ್ಲಿಶ್ ಬಲ್ಲವರು ಅಂತ ಗೊತ್ತಿತ್ತಾ? ಅಥವಾ ಆ ಹತ್ತು ಕೋಟಿ ಜನರಲ್ಲಿ SMS ಕಳಿಸುವಾಗ ಇಂಗ್ಲಿಶ್ ಬಳಕೆ ಮಾಡುವ ಜನ ಇನ್ನೂ ಕಡಿಮೆ ಅಂತ ನಿಮಗೆ ಗೊತ್ತಿತಾ? ಇತ್ತೀಚೆಗೆ ಎಕನಾಮಿಕ್ ಟೈಮ್ಸ್ ಅವರು ನವೆಂಬರ್ ತಿಂಗಳ 24ರಂದು ಇದೇ ಸುದ್ಧಿ ಹೊರತಂದವ್ರೆ.

ಇಲ್ಲಿ ಮೊಬೈಲು, ಎಸ್ಸೆಮ್ಮೆಸ್ಸು ಇಷ್ಟೇ ಇಲ್ಲ ವಿಷಯ. ಇಲ್ಲಿ ಟಾಕಿಯಾನ್ ಟೆಕ್ ಅವರು "ಕ್ವಿಲ್-ಪ್ಯಾಡ್" ಎಂಬ ಹೊಸದೊಂದು ತಂತ್ರಾಂಶ ಹೊರತಂದಿರೋದು ವಿಷಯ. ಈ ತಂತ್ರಾಂಶ ಉಪಯೋಗಿಸಿ ಯಾವುದೇ ಮೊಬೈಲ್ ಫೋನಿನಿಂದ ಕನ್ನಡ ಅಥವಾ ಬೇರೆ ನಾಲ್ಕೈದು ಭಾಷೆಗಳಲ್ಲಿ ಎಸ್ಸೆಮ್ಮೆಸ್ಸ್ ಕಳಿಸಬಹುದು ಅಂತೆಲ್ಲಾ ಹೇಳವ್ರೆ! ಇದು ಸಕ್ಕತ್ ಒಳ್ಳೇದಾಯ್ತು ಗುರು! ಮುಂದೆ ಕನ್ನಡದಾಗೇ ಆರಾಮಾಗಿ ಎಸ್ಸೆಮ್ಮೆಸ್ಸು ಕಳಿಸ್ಬೋದು, ಅಲ್ವ? ಈ ಕ್ವಿಲ್-ಪ್ಯಾಡ್ ಅಂತಹ ತಂತ್ರಾಂಶಗಳು ಎಲ್ಲಾ ಮೊಬೈಲುಗಳೊಳಗೆ ಹೊಕ್ಕೋದಂತೂ ಖಚಿತ ಗುರು!

ಪ್ರತ್ಯೇಕ ಮೊಬೈಲು ಕೊಳ್ಳದೇ ಕನ್ನಡದಲ್ಲಿ ಎಸ್ಸೆಮ್ಮೆಸ್ಸು ಕಳಿಸೋಕ್ಕೆ ಈ ತಂತ್ರಾಂಶ ಅವಕಾಶ ಮಾಡಿಕೊಟ್ಟಿದೆ. ಇದ್ರಿಂದ ಇದುವರೆಗೂ ಕಷ್ಟ ಪಟ್ಕೊಂಡು ಇಂಗ್ಲಿಶಿನಲ್ಲಿದ್ದ ಎಸ್ಸೆಮ್ಮೆಸ್ಸು ಓದುವ ಗೋಜು ನಿಲ್ಲುತ್ತೆ. ಆದರೆ ಇದರಲ್ಲಿ ಇನ್ನೂ ಎಸ್ಸೆಮ್ಮೆಸ್ಸು ಕಳಿಸಲು ಇಂಗ್ಲಿಶ್ ಬಳಕೆ ಬೇಕಾದ್ದರಿಂದ ಕೀಲಿಮಣೆಯೂ ಕನ್ನಡದಲ್ಲೇ ಇದ್ದರೆ ಇನ್ನೂ ಅನುಕೂಲ ಹೆಚ್ಚು. ಇಂತಹ ಅವಶ್ಯಕತೆಯನ್ನು ಅರಿತು ಮೊಬೈಲು ಉತ್ಪಾದಕರು ಈ ಅವಕಾಶವನ್ನು ತಮ್ಮ ಲಾಭವಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕನ್ನಡಿಗ ಗ್ರಾಹಕರು ಮೊಬೈಲಿನಲ್ಲಿ ಕನ್ನಡದ ಬಳಕೆ ಹೆಚ್ಚು ಮಾಡಬೇಕು, ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನೂ ವ್ಯಕ್ತ ಪಡಿಸಿಬೇಕು, ಅಷ್ಟೆ!

ಭಾಷಾವಾರು ಪ್ರಾಂತ್ಯ ಮತ್ತು ಭಾರತ!


ಮನುಷ್ಯ ಬದುಕೋಕೆ ತನ್ನ ಸುತ್ತ ಒಂದು ಸಮಾಜ ಕಟ್ಕೊಂಡಿರ್ತಾನೆ ಮತ್ತು ಸಹಕಾರದ ಆಧಾರದ ಮೇಲೇ ಬದುಕು ಸಾಗುಸ್ತಾನೆ. ಆ ಕಾರಣದಿಂದಲೇ ತಾನಿರುವ ಸಮಾಜದಲ್ಲಿ ಕೊಂಡಿಯಂತೆ ಒಗ್ಗಟ್ಟನ್ನು ಇಟ್ಕೊಂಡಿರ್ತಾನೆ. ಈ ಒಗ್ಗಟ್ಟು ಎರಡು ತೆರನಾಗಿದ್ದು ಮೊದಲನೇದು ‘ದೇಶದಲ್ಲಿನ ಒಗ್ಗಟ್ಟು’. ಅಂದರೆ ಆ ಸಮಾಜ ಹರಡಿರೋ ಪ್ರದೇಶದ ಒಟ್ಟೂ ಜನರಲ್ಲಿರುವ ಒಗ್ಗಟ್ಟು ಮತ್ತು ಎರಡನೇದು ‘ಕಾಲದಲ್ಲಿನ ಒಗ್ಗಟ್ಟು’. ಅಂದ್ರೆ ತಲತಲಾಂತರವಾಗಿ ಹರಿದು ಬಂದ/ ಹರಿದು ಸಾಗುವ ಒಗ್ಗಟ್ಟುಗಳಾಗಿರುತ್ತವೆ. ನಾಡೆಂಬುದರಲ್ಲಿ ಒಂದು ಪ್ರದೇಶದ ಸಮಾಜ, ಅದರ ನಂಬಿಕೆಗಳು, ಮನಸ್ಥಿತಿ, ಆಚರಣೆ, ವಿಚಾರ ಮಾಡೋ ವಿಧಾನಗಳು, ಅದರಲ್ಲಿನ ಸಹಕಾರಗಳೆಲ್ಲಾ ಅಡಕವಾಗಿರುತ್ತವೆ. ಇದೇ ಒಂದು ನಾಡಿನ ಒಳಗಿರೋ ಸಹಜವಾದ ನಿಜ ಸ್ವರೂಪ. ಒಂದು ಸಮಾಜ ತನ್ನೊಳಗೆ ಮಾಡಿಕೊಂಡಿರುವ ಕಟ್ಟುಪಾಡುಗಳು, ಕಲಿಕೆಗೆ ದುಡಿಮೆಗೆ ರೂಪಿಸಿಕೊಳ್ಳುವ ವ್ಯವಸ್ಥೆಗಳೆಲ್ಲಾ ಆ ಪ್ರದೇಶದ ಹಣೆಬರಹಾನ ಬರೆದಿಡುತ್ತೆ. ನಾಗರೀಕತೆ ಬೆಳೆದಂತೆಲ್ಲಾ ಇಂಥಾ ವ್ಯವಸ್ಥೆಗಳೂ ಆಧುನಿಕವಾಗುತ್ತಾ ಬಂದಿವೆ ಮತ್ತು ಇವುಗಳಲ್ಲಿ ಎಲ್ಲಾ ದೇಶಗಳಿಗೂ, ಸಮಾಜಗಳಿಗೂ ಅನ್ವಯವಾಗೋ ಅನೇಕ ಸಮಾನ ಅಂಶಗಳು ರೂಪುಗೊಂಡಿವೆ.

ಭಾಷೆ ಮತ್ತು ಸಮಾಜ

ಒಂದು ಸಮಾಜದ ಅಡಿಗಲ್ಲೇ ಸಹಕಾರವಾಗಿರುವಾಗ, ಅಂತಹ ಸಹಕಾರಕ್ಕೆ ಪ್ರಮುಖ ಸಾಧನವಾಗೋದು ಜನರ ನಡುವಿನ ಸಂವಹನ ಮತ್ತು ಹೆಚ್ಚಿನೆಡೆಗಳಲ್ಲಿ ಸಂವಹನದ ಸಾಧನವಾದ ಆ ಜನರಾಡುವ ನುಡಿ. ಹೌದೂ... ಭಾಷೆ ಸಮಾಜದ ಸಂಪರ್ಕ ಮಾಧ್ಯಮ ಮಾತ್ರಾ ಅಲ್ಲ, ಅದು ಸಹಕಾರದ ಮಾಧ್ಯಮ. ಇದೇ ಒಂದು ಭಾಷೆಗಿರುವ ಪ್ರಾಮುಖ್ಯ. ಒಂದು ಪ್ರದೇಶದ ಏಳಿಗೆಗೆ ಅಥವಾ ಹಿಂಬೀಳುವಿಕೆಗೆ ಆ ಪ್ರದೇಶದ ಜನರು ತಮ್ಮ ನುಡಿಗೆ ತಮ್ಮ ಸಮಾಜದಲ್ಲಿ ಯಾವ ಸ್ಥಾನ ಕೊಟ್ಟುಕೊಂಡಿದ್ದಾರೆಂಬುದು ಮಹತ್ವದ ಕಾರಣವಾಗಿರುತ್ತದೆ. ಒಂದು ಪ್ರದೇಶದಲ್ಲಿನ ಜನತೆ ಸಹಜವಾಗಿಯೇ ತಮ್ಮ ನುಡಿಗಳಲ್ಲಿ ಕಲಿಕೆ, ಆಡಳಿತ, ದುಡಿಮೆಯೇ ಮೊದಲಾದ ಪ್ರತಿಯೊಂದು ಕೆಲಸವನ್ನು ಮಾಡಿಕೊಳ್ಳುವುದು ಸರಿಯಾದ ಮತ್ತು ಸಹಜವಾದ ವಿಧಾನ. ಇದೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವ ತತ್ವ. ಇನ್ನೊಂದು ಮಹತ್ವದ ವಿಷಯವೂ ಇದೆ. ಅದೆಂದರೆ ಭೌಗೋಳಿಕವಾಗಿ ಒಂದು ಪ್ರದೇಶ ದೊಡ್ಡದಾಗಿದ್ದು... ಆ ಪ್ರದೇಶದ ಜನಸಂಖ್ಯೆಯು ಹೆಚ್ಚಾಗಿರುವುದು ಬಲದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಿರುವುದೇನೋ ಸರಿಯೇ. ಆದರೆ ಇಂತಹ ದೊಡ್ಡ ಪ್ರದೇಶದ ಅಸ್ತಿತ್ವ ಸಹಜವೋ, ರೂಪಿತವೋ ಅನ್ನುವುದು ಗಮನಿಸಬೇಕಾದ ಅಂಶ. ಒಂದು ದೇಶದ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯು, ಆ ಪ್ರದೇಶದಲ್ಲಿ ವಾಸಿಸುವ ವಿಭಿನ್ನ ಜನಾಂಗಗಳ ಕಲಸು ಮೇಲೋಗರವಾದರೆ ಏನಾಗುವುದು? ಹೀಗೆ ಭಿನ್ನ ಜನಾಂಗಗಳ ನಡುವೆ ಒಗ್ಗಟ್ಟು ಮೂಡಿಸಬೇಕಾದಾಗ ಸಹಜವಾಗಿರುವ ಸಾಮಾನ್ಯ ವಿಷಯವನ್ನು ಆಧಾರವಾಗಿಸಿಕೊಳ್ಳದೇ, ಇಲ್ಲದ ಸಮಾನತೆಯನ್ನು ಹೇರುವುದನ್ನು ಮಾಡುವುದು ಆ ಪ್ರದೇಶದ ಒಗ್ಗಟ್ಟಿಗೆ ದೀರ್ಘಾವಧಿಯಲ್ಲಿ ಮಾರಕವೇ ಆಗಿದೆ. ಬಲ ತೋರಿಕೆಗಾಗಿ ಅಸಹಜವಾದ ಒಗ್ಗಟ್ಟು ರೂಪಿಸಲು ಮಾಡುವ ಪ್ರಯೋಗಗಳು ಅಂತಹ ನಾಡುಗಳ ಒಳಗಣ ಒಗ್ಗಟ್ಟು ಮುರಿಯುವ ಸಾಧ್ಯತೆಯೇ ಹೆಚ್ಚು.

ಭಾರತ ಮತ್ತು ಏಕತೆ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದ ಮೇಲೆ ‘ನಾಡು ಅಷ್ಟು ಶತಮಾನಗಳ ಗುಲಾಮಗಿರಿಗೆ ಒಳಗಾಗಿದ್ದೇ ಒಗ್ಗಟ್ಟಿನ ಕೊರತೆಯಿಂದಾಗಿ’ ಎನ್ನುವ ನಂಬಿಕೆಯ ಆಧಾರದ ಮೇಲೆ ದೇಶದಲ್ಲಿ ಒಗ್ಗಟ್ಟು ಸಾಧಿಸಲು ಅನುಸರಿಸಿದ ಕ್ರಮಗಳು ದುರಾದೃಷ್ಟವಶಾತ್ ಎರಡನೇ ಮಾದರಿಯದಾಗಿದ್ದವು. ಈ ಮಾತನ್ನು ಕೊಂಚ ಬದಿಗಿಟ್ಟು ನೋಡಿದರೆ 1947ರ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದ ಕಾರಣವಾಗಿ ಅಧಿಕಾರವನ್ನು ಜನರೆಡೆಗೇ ಒಯ್ಯುವ ವ್ಯವಸ್ಥೆ ರೂಪಿಸಲು ಮುಂದಾಗಲಾಯಿತು. ಹಾಗಾಗಿ ಅನೇಕ ಪ್ರಾಂತ್ಯಗಳನ್ನು ರಚಿಸಬೇಕಾಯ್ತು. ಇಂಥಾ ಪ್ರಾಂತ್ಯಗಳನ್ನು ಯಾವ ಆಧಾರದ ಮೇರೆಗೆ ರೂಪಿಸಬೇಕು? ಎನ್ನುವ ಪ್ರಶ್ನೆಗೆ ಉತ್ತರವಾಗಿ ಕೆಲ ನಾಯಕರು ಭೂಪಟಾನಾ ಮುಂದಿಟ್ಟುಕೊಂಡು ಉದ್ದುದ್ದ ಅಡ್ಡಡ್ಡ ಗೆರೆ ಎಳೆದು ಪ್ರಾಂತ್ಯಗಳನ್ನು ಮಾಡೋದೇ ಸರಿ ಎಂದರು. ಅನೇಕರು ಯಾವುದೇ ಒಂದು ಸಮಾಜದ ಆಡಳಿತ, ಕಲಿಕೆ, ದುಡಿಮೆ, ಒಗ್ಗಟ್ಟು ಮತ್ತು ಏಳಿಗೆಗಳ ಸಹಜ ಸೂತ್ರವಾದ ಭಾಷೆಯ ಆಧಾರದ ಮೇಲೆ ಇಂತಹ ಪ್ರಾಂತ್ಯಗಳನ್ನು ರೂಪಿಸುವುದು ಸರಿಯೆಂದರು. ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡಾ ಈ ನಿಲುವನ್ನೇ ಹೊಂದಿತ್ತು. ಆದರೆ ಇದನ್ನು ಜಾರಿ ಮಾಡಲು ಸರ್ಕಾರ ಮೀನ ಮೇಷಾ ಎಣಿಸುತ್ತಿದ್ದಾಗ, 1952ರಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ರಚನೆಗೆ ಒತ್ತಾಯಿಸಲಾಯಿತು. ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಚೆನ್ನೈನ ಪೊಟ್ಟಿ ಶ್ರೀರಾಮುಲು (ಅಮರಜೀವಿ ಶ್ರೀರಾಮುಲು) 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದರು. ಕೊನೆಗೆ ಡಿಸೆಂಬರ್ 15ರ ನಡುರಾತ್ರಿಯಲ್ಲಿ ಮರಣಹೊಂದಿದರು. ಇದಾದ ನಂತರ ಭಾರತದ ಮೊಟ್ಟ ಮೊದಲ ಭಾಷಾವಾರು ಪ್ರಾಂತ್ಯವಾಗಿ ಆಂಧ್ರಪ್ರದೇಶ ಹುಟ್ಟಿಕೊಂಡಿತು. ಮೂರು ವರ್ಷಗಳಾದ ಮೇಲೆ ರಾಜ್ಯಗಳ ಪುನರ್ವಿಂಗಡನಾ ಸಮಿತಿಯ ವರದಿಯ ಆಧಾರದ ಮೇಲೆ ತೆಲಂಗಣಾ ಪ್ರದೇಶ ಆಂಧ್ರವನ್ನು ಸೇರಿಕೊಂಡಿತು. ಆಗಲೇ ನಮ್ಮ ನಾಡಿನಲ್ಲೂ ಐವತ್ತು ವರ್ಷಕ್ಕೂ ಹಿಂದಿನಿಂದ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳವಳಿ ಫಲ ನೀಡಿ ಕರ್ನಾಟಕ ರಾಜ್ಯ ನಿರ್ಮಾಣವಾಯ್ತು. ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವುದರ ಹಿಂದಿರುವ ಉದ್ದೇಶವೇ ಭಾಷಾವಾರು ರಾಜ್ಯಗಳ ಸರ್ವತೋಮುಖ ಏಳಿಗೆಯಾಗಲಿ, ಆ ಮೂಲಕ ಭಾರತದ ಏಳಿಗೆಯಾಗಲೀ ಎಂಬುದೇ ಆಗಿದೆ. ಇದನ್ನು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ಹೇಳಿದ್ದಾರೆ - "ಬಹುಭಾಷಿಕ ರಾಜ್ಯಗಳಾದರೆ, ಅಂದ್ರೆ ಭಾಷಾವಾರು ರಾಜ್ಯಗಳಾಗದೇ ಹೋದರೆ ಭಾರತ ಒಡೆದು ಹೋದೀತು". ಸರಿಯಾದ ಮಾತಲ್ವಾ ಗುರೂ!!

ಹಿಂದಿಯೋರ ಮೇಲೇ “ಹಿಂದಿ ಹೇರಿಕೆ”!!!

ಹಿಂದೀ ಹೇರಿಕೆ ಬರೀ ಹಿಂದಿಯೇತರರ ಮೇಲೆ ಮಾತ್ರಾ ಆಗ್ತಿಲ್ಲ. ಹಿಂದೀ ಭಾಷಿಕರು ಅಂತ ಕರೆಸಿಕೊಳ್ತಾ ಇರೋ ಉತ್ತರ ಭಾರತದ ಬಹುತೇಕ ಎಲ್ಲಾ ಭಾಷಾ ಜನಗಳ ಮೇಲೆ ಹಿಂದೀ ಹೇರಿಕೆ ಆಗ್ತಾಯಿದೆ ಅಂದ್ರೆ ನಂಬ್ತೀರಾ? ಗುರೂ! ಹೌದು, ಉತ್ತರ ಭಾರತದಲ್ಲಿರೋ ಅನೇಕ ಭಾಷೆಗಳನ್ನು ಹಿಂದಿ ಅನ್ನೋ ಆಲದ ಮರದಡಿ ಹರವಿ (ಆಲದ ಮರದ ಕೆಳಗೆ ಏನೂ ಬೆಳ್ಯಲ್ಲಾ ಅನ್ನೋದು ಮರೀಬೇಡಿ) ಅವ್ರುನ್ನೆಲ್ಲಾ ಹಿಂದಿಯೋರೂ ಅಂದು ಅವರದಲ್ಲದ ನುಡೀನಾ ಅವರುಗಳ ಮೇಲೆ ಹೇರುತ್ತಾ ಇರೋದು ದಿಟಾ ಗುರು!!

ಅದೆಂಗೇ ಅಂತೀರಾ?

ಈ ಚಿತ್ರ ನೋಡಿ ಗುರುಗಳೇ. ಇದು ಕರ್ನಾಟಕದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯೋರು ಅಪಾಯಾಕಾರಿಯಾದ ಕಸವನ್ನು ಸರಿಯಾದ ರೀತೀಲಿ ನಿರ್ವಹಿಸೋಕೆ ಅಂತಾ ರೂಪಿಸಿರೋ ಒಂದು ನಿಯಮದ ಅಂಗವಾಗಿರೋ ಸಣ್ಣ ಅಂಟುಚೀಟಿ.


ಈ ಅಂಟುಚೀಟೀನಾ ಸಂಬಂಧಪಟ್ಟ ಉತ್ಪಾದಕರು/ ಬಳಕೆದಾರರು (ಕಾರ್ಖಾನೆಯೋರು) ಬಹಳಾ ಮುತುವರ್ಜಿಯಿಂದ, ಬಿಸಾಕಲೆಂದು ಕೂಡಿಟ್ಟ ಅಪಾಯಕಾರಿ ಕಸದ ಡಬ್ಬಿಯ ಮೇಲೆ ಅಂಟಿಸಬೇಕು. ಇದರ ಮೇಲೆ ದೊಡ್ಡದಾಗಿ ಭವ್ಯ ಭಾರತದ ಮಹತ್ಸಾಧನೆಯಾದ ತ್ರಿಭಾಷಾ ಸೂತ್ರದ ಅನ್ವಯ ಮೂರು ಭಾಷೇಲಿ ಮುದ್ರಿಸಿದ್ದಾರೆ. ಕನ್ನಡದಲ್ಲಿ (?) “ಅಪಾಯಕಾರಿ ತ್ಯಾಜ್ಯ” ವೆಂದೂ, ಇಂಗ್ಲೀಷಿನಲ್ಲಿ “hazardous waste” ಎಂದೂ ಬರೆದಿದಾರೆ. ಆದ್ರೆ ದೇವನಾಗರೀ ಲಿಪಿಯಲ್ಲಿ ಬರೆದಿರೋ ಸಾಲುಗಳೇನು? ಅದು ಯಾವ ಭಾಷೇದು? ಅಂತಾ ವಸಿ ನೋಡು ಗುರು... “ಪರಿಸಂಕಟಮಯ ಅಪಶಿಷ್ಟ” ಅನ್ನೋದು ಯಾವ ಭಾಷೆ ಗುರೂ? ಇದನ್ನು ವಿನ್ಯಾಸ ಮಾಡಿರೋ ಮಹನೀಯರು ಹಿಂದೀ ಅಂತಾನೆ ಈ ಪದ ಬಳಸಿರೋದು. ಯಾವ ಹಿಂದೀ ಭಾಷಿಕರು ಇದನ್ನು ಬಳುಸ್ತಾರೆ? ಬಳುಸದ್ ಬಿಡಿ, ಯಾವ ಹಿಂದಿಯವನಿಗೆ ಇದು ಅರ್ಥವಾಗುತ್ತೆ? ಹಿಂದೀನೂ ಬಿಡಿ, ಹಿಂದೀ ಅನ್ನೋ ದೇವತೆ(?) ಇದುವರೆಗೂ ನುಂಗಿ ನೀರು ಕುಡ್ದಿರೋ ಭೋಜ್‍ಪುರಿ, ರಾಜಸ್ಥಾನಿ, ಪಹಾಡಿ, ಬ್ರಿಜ್ ಭಾಷಾ, ಅವಧಿ... ಮುಂತಾದ ೪೯ ಭಾಷೆಗಳಲ್ಲಿ ಯಾವ ಭಾಷೇಲಿ ಇದನ್ನು ಬಳುಸ್ತಾರೆ ಅಂತಾ ಕೇಳುದ್ರೆ... ‘ಊಹೂಂ ಯಾವ ಭಾರತೀಯ ಭಾಷೇಯ ಜನರೂ ಈ ಪದಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸಲ್ಲ’ ಅನ್ನೋದೇ ಉತ್ತರವಾಗಿದೆ ಗುರು. ಮತ್ಯಾಕೆ ಇವರು ಹೀಗೆ ಈ ಪದಗಳ್ನ ಬಳಸಿದಾರೆ? ಇದ್ಯಾವ ಭಾಷೇದೂ?

ಕಪ್ಪು ನಾಯೀನ ಬಿಳೀ ಮಾಡೊ ಪ್ರಯತ್ನ!

ಇಂದು ಹಿಂದೀ ಭಾಷೆ ಅಂತಾ ಕರೀತಿರೋದ್ರಲ್ಲಿ ಒಟ್ಟು ೪೯ ಭಾಷೆಗಳು ಅಡಕವಾಗಿವೆ. ಹಿಂದೀ ಭಾಷೆ ಮಾತಾಡೋರ ಸಂಖ್ಯೆ ಜಾಸ್ತಿ ಅಂತಾ ಬಿಂಬಿಸಿ ಹಿಂದೀನ ಎಲ್ಲರ ಮೇಲೆ ಹೇರೋ ಪ್ರಯತ್ನಾನ ಭಾರತ ಸರ್ಕಾರ ಹಿಂದಿನಿಂದಲೂ ಮಾಡ್ಕೊಂಡೇ ಬಂದಿದೆ. ಇಂಥಾ ಪ್ರಯತ್ನದ ಅಂಗವಾಗಿ ಪಂಜಾಬಿ ಭಾಷೇನೂ ಹಿಂದೀನೇ ಅಂತ ಅಂದು, ಅದರಿಂದ ಪಂಜಾಬು ಹತ್ತುರಿದದ್ದೂ ಆಗಿ ಕೊನೆಗೆ ಪಂಜಾಬಿ ಭಾಷೆಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲೊಂದು ಜಾಗ ಸಿಕ್ಕಿದ್ದು ಇತಿಹಾಸ. ಇರಲಿ, ಹೀಗೆ ೪೯ ಬೇರೆ ಬೇರೆ ನುಡಿಗಳನ್ನು ನುಂಗಿ ಆ ನುಡಿಗಳೆಲ್ಲವೂ ಹಿಂದೀನೇ ಅನ್ನೋವಾಗ ಜನರು ಯಾವ ಪದಾನ ಬಳುಸ್ಬೇಕು ಅನ್ನೋ ಗೊಂದಲಾ ಹುಟ್ಕೊಂಡ್ತು. ಕೆಲವರು ಅಪಾಯ ಅಂತಾ ಅಂದ್ರೆ, ಇನ್ನು ಕೆಲವರು ಖತ್ರಾ ಅಂದ್ರು. ಅದಕ್ಕೇ ಹೀಗಾಗೋದ್ ಬ್ಯಾಡಾ ಅಂತಾ ಕೇಂದ್ರಸರ್ಕಾರದೋರು ಹಿಂದೀ ಅಂದ್ರೆ ಇಂಥದ್ದು, ಇದು ಸ್ಟಾಂಡರ್ಡ್ ಹಿಂದಿ, ಇದುನ್ನೇ ಇನ್ಮೇಲೆ ನೀವೆಲ್ಲಾ ಬಳುಸ್ಬೇಕು, ಅಂತಾ ಹೇಳಕ್ಕೇ ಅಂತಲೇ “Centre for Hindi Directorate” ಅಂತಾನೆ ಒಂದು ಇಲಾಖೆ ತೆಕ್ಕೊಂಡು ಕೂತಿದೆ. ಇವ್ರು ಹಿಂದೀಲಿ ಯಾವ ಪದ ಬಳುಸ್ಬೇಕು ಅಂತಾ ತೀರ್ಮಾನ ಮಾಡ್ತಾರೆ. ಹೊಸಪದಗಳನ್ನು ಹುಟ್ಟು ಹಾಕ್ತಾರೆ. ಒಟ್ಟಾರೆ ಜನರು ಬಳಸದ ತಥಾ, ಪರಂತು, ಕೇವಲ್, ಅನುಸಾರ್ ಮುಂತಾದ ಪದಗಳನ್ನು ಹುಟ್ಟು ಹಾಕೋರಿಗೆ ಏನನ್ನಬೇಕು ಗುರು?

ಹಿಂದಿಯೋರ ಮೇಲೇ ಹಿಂದಿ ಹೇರಿಕೆ

ಈಗೆ ಹೇಳಿ ಗುರುಗಳೇ, ಹಿಂದಿಯೋರ ಮೇಲೇ ಹಿಂದಿ ಹೇರಿಕೆ ಆಗ್ತಿದ್ಯೋ ಇಲ್ವೋ ಅಂತಾ. ಭಾಷಾ ವಿಜ್ಞಾನ ಅಂದ್ರೇನು? ಭಾಷೇ ಅಂದ್ರೇನು? ಇದು ಸಮಾಜದಲ್ಲಿ ಯಾವ ಪಾತ್ರ ವಹಿಸುತ್ತೆ? ಅನ್ನೋದನ್ನೆಲ್ಲಾ ಮರ್ತು ಒಂದು ದೇಶ ಅಂದಮೇಲೆ ಒಂದು ಭಾಷೇ ಬೇಡ್ವಾ? ಒಂದು ಭಾಷೆ ಅಂದಮೇಲೆ ಅದರಲ್ಲಿ ಎಲ್ರೂ ಬಳ್ಸೋ ಸ್ಟಾಂಡರ್ಡ್ ಪದಗಳೇ ಇರಬೇಕಲ್ವಾ? ಇದುಕ್ ಒಂದು ಸಣ್ಣ ಉದಾಹರಣೆ : ಇಡೀ ಕರ್ನಾಟಕ 'ಇದೆ' ಅನ್ನೋ ಪದಾನಾ ಇನ್ಮುಂದೆ 'ಇದೆ' ಅಂತಾನೇ ಅನ್ನಬೇಕು, ಅದಾವ, ಐತಿ, ಐತೆ, ಉಂಟು ಅನ್ನೋದನ್ನೆಲ್ಲಾ ಬಳುಸ್ಬಾರ್ದು ಅಂದ್ರೆ ಹೆಂಗೆ? ಈಗ ಹಾಗೇ ಇದೆ ಕೇಂದ್ರದ ಈ ಪ್ರಯತ್ನ. ದೇಶದಲ್ಲಿ ಒಗ್ಗಟ್ಟು ಮೂಡಿಸಲು ಆಗೋದು ನಮ್ಮ ನಡುವೆ ಈಗಾಗಲೇ ಇರೋ ಸಮಾನವಾದದ್ದನ್ನು ಎತ್ತಿ ಹಿಡಿಯುವ ಮೂಲಕವೇ ಹೊರತು ಇಲ್ಲದ ಸಮಾನತೇನಾ ಹೇರೋದ್ರ ಮೂಲಕ ಅಲ್ಲಾ ಅಲ್ವಾ ಗುರು?
Related Posts with Thumbnails