Showing posts with label ಪ್ರಾದೇಶಿಕ ಪಕ್ಷ. Show all posts
Showing posts with label ಪ್ರಾದೇಶಿಕ ಪಕ್ಷ. Show all posts

ಅಯ್ಯೋ! ದಳಕ್ಕೆಂಥಾ ಗತಿ ಬಂತು!!

 


ಒಂದು ರಾಷ್ಟ್ರ ಒಂದು ಚುನಾವಣೆಯೆನ್ನುವ ಪ್ರಾದೇಶಿಕ ಪಕ್ಷಗಳ ಸಾವಿನ ಕುಣಿಕೆಯನ್ನು ಮುತ್ತಿಕ್ಕಿ ಬೆಂಬಲಿಸುತ್ತಿರುವ ಜನತಾ ದಳದವರ ಅಸಹಾಯಕತೆಯನ್ನು ಕಂಡರೆ ಅಯ್ಯೋ ಅನ್ನಿಸುತ್ತಿಲ್ವಾ ಗುರೂ? ಪಾಪ, ಅದರ ಮುಖ್ಯಸ್ಥರು ಕೆಲವು ಬೇಡಿಕೆಗಳನ್ನೂ ಇಟ್ಟಿದ್ದಾರೆ. ಪ್ರಾದೇಶಿಕ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಧಕ್ಕೆಯಾಗಬಾರದು, ಸಮ್ಮಿಶ್ರ ಸರ್ಕಾರಗಳಿಗೆ ರಕ್ಷಣೆಯ ಭರವಸೆ ನೀಡಬೇಕು ಅನ್ನೋದು ಅವರ ಬೇಡಿಕೆ.

ಎರಡು ಪಕ್ಷದ ರಾಜಕಾರಣದೆಡೆಗೆ!


ಹಾಗೆ ನೋಡಿದರೆ. ’ಹಣ ಉಳಿಯುತ್ತೆ - ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ’ ಮುಂತಾದ ಕಾರಣಗಳನ್ನು ’ಒಂದು ರಾಷ್ಟ್ರ ಒಂದು ಚುನಾವಣೆ’ಗೆ ಸಮರ್ಥನೆಯಾಗಿ ನೀಡಲಾಗುತ್ತದೆ. ಆದರೆ ಅವು ಕೇವಲ ಹೇಗೆ "ನೆಪ"ಗಳಾಗಿವೆ ಎಂಬುದನ್ನು ಇಲ್ಲಿ ಓದಿ. 

ಮಹಾನ್ ರಾಜಕೀಯ ಮುತ್ಸದ್ದಿಗಳಾದ ಶ್ರೀ ಕುಮಾರಸ್ವಾಮಿಯವರಿಗಾಗಲೀ, ಅವರ ಪಿತಾಶ್ರೀಯವರೂ, ರಾಜಕೀಯ ಭೀಷ್ಮರೂ (ವಯಸ್ಸಿನಲ್ಲಿ) ಆಗಿರುವ ಶ್ರೀ ದೇವೇಗೌಡರಿಗಾಗಲೀ ಇವೆಲ್ಲಾ ತಿಳಿಯುವುದಿಲ್ಲ ಎಂಬುದನ್ನು ಯಾರದರೂ ನಂಬಲು ಸಾಧ್ಯವೇ? ಪಕ್ಷವನ್ನು ಗಟ್ಟಿಗೊಳಿಸಬೇಕೆಂದರೆ ಅದು ಉಳಿಯಬೇಕು ಸರಿ. ಆದರೆ ಉಳಿಸಿಕೊಳ್ಳುವ ಭರದಲ್ಲಿ ಪಕ್ಷಕ್ಕೆ ಕುಣಿ ತೆಗೆಯಲು ಇವರು ಮುಂದಾಗಿಬಿಟ್ಟರೇ ಎಂಬುದನ್ನು ಬೆಂಬಲಿಗರು ಯೋಚಿಸಬೇಕಿದೆ. ನೀನೇನಂತೀಯಾ ಗುರೂ?

ರಾಷ್ಟ್ರರಾಜಕಾರಣ, ಪ್ರಾದೇಶಿಕ ಪಕ್ಷ & RSSನ ಆತಂಕ!


ಭಾರತದ ಅತಿದೊಡ್ಡ ಸಾಮಾಜಿಕ ಸಂಘಟನೆಗಳಲ್ಲೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರ ಮುಖಂಡರಲ್ಲಿ ಒಬ್ಬರಾದ ಶ್ರೀ ಸುರೇಶ್ ಜೋಷಿಯವರು ಸಂಘದ ಕೇಂದ್ರಸ್ಥಾನವಾದ ನಾಗ್ಪುರದಲ್ಲಿ ಕುಳಿತು ಒಂದು ಹೇಳಿಕೆ ನೀಡಿ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆತಂಕ' ತೋರಿಸಿದ್ದಾರೆ ಎನ್ನುವ ಸುದ್ದಿ ಮಾರ್ಚ್ ೧೯ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ. ಈ ಸುದ್ದಿ ನಿಜವೇ ಆಗಿದ್ದರೆ ಸಂಘ ಸಿದ್ಧಾಂತವು ಭಾರತದ ಸ್ವರೂಪದ ಬಗ್ಗೆ ಹೊಂದಿರುವ ತಿಳುವಳಿಕೆ ಸರಿಯಾಗಿಲ್ಲವೇನೋ ಎನ್ನುವ ಅನುಮಾನ ಹುಟ್ಟಿಸುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಬಂದರೆ ಆತಂಕ ಪಟ್ಟುಕೊಳ್ಳುವ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗುತ್ತದೆ. ಇರಲಿ, ಚುನಾವಣಾ ಆಯೋಗದ ಲೆಕ್ಕದಲ್ಲಿ  ಭಾರತದಲ್ಲಿ ಇವತ್ತು ಇರುವ ರಾಷ್ಟ್ರೀಯಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಾರ್ಟಿ, ಬಹುಜನ್ ಸಮಾಜ್ ಪಾರ್ಟಿ, ಸಿಪಿಎಂ, ಸಿಪಿಐ ಮತ್ತು ಎನ್.ಸಿ.ಪಿಗಳು. ಆದರೆ ದೇಶ ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಾತ್ರಾ ಎರಡೇ..

ಕೇಂದ್ರಸರ್ಕಾರ ಎನ್ನುವುದು ಮೇಲಿನದ್ದು ಮತ್ತು ರಾಜ್ಯಸರ್ಕಾರಗಳು ಕೆಳಗಿನದ್ದು, ಕೇಂದ್ರಸರ್ಕಾರ ರೂಪಿಸೋ ನಿಯಮಾನಾ, ತೆಗೆದುಕೊಳ್ಳೋ ನಿರ್ಣಯಾನ ಕೆಳಗಿರೋ ರಾಜ್ಯಗಳು ಸಾಮಂತರಂತೆ ಒಪ್ಪಿಕೋಬೇಕು ಅನ್ನೋ ಮನಸ್ಥಿತಿ ಸುರೇಶ್ ಜೋಷಿಯವರ ಮಾತುಗಳ ಆಳದಲ್ಲಿ ಇರುವಂತೆ ತೋರುತ್ತಿದೆ. ವಾಸ್ತವವಾಗಿ ರಾಜ್ಯಗಳ ಪ್ರತಿನಿಧಿಗಳಿಗಾಗೆ ರಾಜ್ಯಸಭೆ ಇದೆ.  ಸಂಸತ್ತಿನ ಯಾವುದೇ ನಿಯಮ, ಬಿಲ್ಲು, ಕಾಯ್ದೆ, ಕಾನೂನು ಈ ರಾಜ್ಯಸಭೆಯಲ್ಲೂ ಒಪ್ಪಿತವಾಗಬೇಕು. ಅಂದರೆ ರಾಜ್ಯಗಳು ಒಗ್ಗೂಡಿ ಕಟ್ಟಿಕೊಂಡಿರುವ ವ್ಯವಸ್ಥೆ ಭಾರತದ್ದು! ಅಧಿಕಾರ ಮೇಲಿನವರು ಕೆಳಗಿನವರಿಗೆ ಕೊಡಲ್ಪಟ್ಟಿಲ್ಲ ಮತ್ತು ಅದು ರಾಜ್ಯಗಳು ಕೇಂದ್ರಕ್ಕೆ ಬಿಟ್ಟುಕೊಟ್ಟದ್ದಾಗಿರಬೇಕೆನ್ನುವುದು ಸರಿಯಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪ್ರಾದೇಶಿಕ ಪಕ್ಷಗಳು    ರಾಷ್ಟ್ರ ರಾಜಕಾರಣಕ್ಕೆ ಬರುವುದು/ ಬಂದಿರುವುದು ಪ್ರಜಾಪ್ರಭುತ್ವದ ನಿಜ ಅರ್ಥವೆನಿಸುತ್ತದೆ.

ರಾಷ್ಟ್ರರಾಜಕಾರಣದ ಅರ್ಹತೆ!

ಆದರೂ ಒಮ್ಮೆ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣಕ್ಕೆ ಬರುವುದು ಆತಂಕಕಾರಿ' ಎನ್ನುವ ಈ ನಿಲುವಿನ ದನಿ ನಿಜಕ್ಕೂ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ನೋಡಬೇಕಾಗಿದೆ. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಭಾರತದ ಸಂಸತ್ತಿನಲ್ಲಿ ಯಾವುದಾದರೂ ನಿರ್ಣಯ ತೆಗೆದುಕೊಳ್ಳುವುದಿದ್ದಲ್ಲಿ, ಅಲ್ಲಿನ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ದನಿ ಇರಬೇಡವೇ? ಹಾಗೇ ಈಶಾನ್ಯ ರಾಜ್ಯಗಳ ಜನರ ದನಿಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ/ ಪರಿಣಾಮಕಾರಿಯಾಗಿ ತೆರೆದಿಡಲು ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಸಮರ್ಥವಲ್ಲವೇ? ರಾಷ್ಟ್ರ ರಾಜಕಾರಣವೆಂದರೆ 'ದೆಹಲಿ ಗದ್ದುಗೆ' ಎಂದುಕೊಳ್ಳುವುದಾದರೆ, 'ಭಾರತದ ಸಂಸತ್ತು' ಎಂದುಕೊಳ್ಳುವುದಾದರೆ, ಅದಕ್ಕೆ 'ಇಡೀ ಭಾರತಕ್ಕೆ ಅನ್ವಯವಾಗುವಂತೆ ನೀತಿಗಳನ್ನು ರೂಪಿಸುವ ಹೊಣೆಗಾರಿಕೆಯಿದೆ' ಎನ್ನುವುದನ್ನು ಒಪ್ಪುವುದಾದರೆ... ಇಂಥಾ ಸಂಸತ್ತಿನಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸೋ ಪಕ್ಷಗಳಿಗೆ ಇರಬೇಕಾದ ಮೂಲ ಕಾಳಜಿ ಯಾವುದಾಗಿರಬೇಕು? ತನ್ನ ಜನರು, ತನ್ನ ರಾಜ್ಯದ ಜನರ ಹಿತ ಉಳಿಸಿಕೊಳ್ಳುವ ಬದ್ಧತೆಯೂ? ರಾಜ್ಯಗಳೆಲ್ಲಾ ಕಡಿಮೆ ಪ್ರಾಮುಖ್ಯತೆ ಹೊಂದಿವೆ, ರಾಷ್ಟ್ರೀಯ ಹಿತದ ಬಗ್ಗೆ ಮಾತ್ರಾ ಸಂಸತ್ತಿನಲ್ಲಿ ಪ್ರಾಮುಖ್ಯತೆ ಇರಬೇಕು ಎನ್ನುವಿಕೆಯೋ? ರಾಜ್ಯಗಳ ಹಿತವನ್ನು ಕೇಂದ್ರವಾಗಿಸಿಕೊಂಡು ಇಡೀ ದೇಶಕ್ಕೆ ರೀತಿ ರೂಪಿಸಲು ಮುಂದಾಗುವಿಕೆಯೋ? ಇಂತಹ ಒಂದು ಬದ್ಧತೆ ರಾಷ್ಟ್ರೀಯಪಕ್ಷಗಳಿಗೆ ಇದೆಯೋ ಇಲ್ಲವೋ? ನಿಜಕ್ಕೂ ರಾಷ್ಟ್ರ ರಾಜಕಾರಣದ ಅರ್ಹತೆ ಯಾರಿಗಿದೆ? ಎನ್ನುವಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇಂಥಾ ಉತ್ತರ ಕಂಡುಕೊಳ್ಳಬೇಕೆಂದರೆ ಇದುವರೆಗೂ ಪ್ರಾದೇಶಿಕ ಪಕ್ಷಗಳಾಗಲೀ, ರಾಷ್ಟ್ರೀಯ ಪಕ್ಷಗಳಾಗಲೀ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ನೋಡಿದರೆ ತಕ್ಕಮಟ್ಟಿಗೆ ಅರ್ಥವಾಗುತ್ತದೆ. 

ಕಣ್ಣೆದುರಿನ ದಿಟಗಳು!

ಆಗಲೇ ಹೇಳಿದಂತೆ ಇಂದಿನ ಭಾರತದಲ್ಲಿ ಇದುವರೆಗೂ ಆಳಿದ ದೊಡ್ಡ ರಾಷ್ಟ್ರೀಯ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೇ. ಅರವತ್ನಾಲ್ಕು ವರ್ಷಗಳ ಸ್ವತಂತ್ರ ಭಾರತದಲ್ಲಿ ಈ ದೇಶವು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಗಳಿಗೆ ಎದುರಾದ ಸವಾಲುಗಳನ್ನು ಇವು ಹೇಗೆ ನಿಭಾಯಿಸಿವೆ  ಎನ್ನುವುದನ್ನು ನೋಡಿದರೆ ರಾಷ್ಟ್ರೀಯ ಪಕ್ಷಗಳಿಂದ ಈ ಸವಾಲುಗಳು ಎದುರಿಸಲ್ಪಟ್ಟ ಬಗೆ ನಿರಾಸೆ ಹುಟ್ಟಿಸುವಂತಿದೆ. ಹೋಗಲೀ ರಾಜ್ಯಗಳ ಸಮಸ್ಯೆಗಳಿಗೆ ಇವು ಸ್ಪಂದಿಸಿರುವ ಬಗೆ ನೋಡಿದರೆ ಇನ್ನೂ ಬಗೆಹರಿಯದ ಅಂತರರಾಜ್ಯ ನದಿನೀರು ಹಂಚಿಕೆ, ಅಂತರರಾಜ್ಯ ಗಡಿ ಸಮಸ್ಯೆಗಳೇ ಮೊದಲಾದ ಇನ್ನೂ ಜೀವಂತವಿರುವ ಸಮಸ್ಯೆಗಳೇ ಉತ್ತರ ಹೇಳುತ್ತವೆ... ಈ ಮಾತುಗಳನ್ನು ಅರಿಯಲು ಸ್ವಲ್ಪ ಸಾವಧಾನದಿಂದ ಇತಿಹಾಸದ ಪುಟ ತಿರುಗಿಸಿ, ಸುದ್ದಿಹಾಳೆಗಳನ್ನು ತಿರುವಿದರೆ ಸಾಕು... ತಿಳಿಯುತ್ತದೆ. ಹಾಗೇ ಈ ದೇಶದ ಪ್ರಾದೇಶಿಕ ಪಕ್ಷಗಳು ನಡೆದುಕೊಂಡಿರುವ ಬಗೆಯನ್ನೂ ನೋಡಿದರೆ ತಮಿಳುನಾಡಿಗೆ ಅಲ್ಲಿನ ಡಿಎಂಕೆ - ಅಣ್ಣಾ ಡಿಎಂಕೆಗಳು, ಆಂಧ್ರದಲ್ಲಿ ತೆಲುಗುದೇಶಂ, ಒರಿಸ್ಸಾದಲ್ಲಿ ಬಿಜು ಜನತಾದಳ ಮೊದಲಾದ ಪಕ್ಷಗಳು ಅವುಗಳ ರಾಜ್ಯಗಳಿಗೆ ಮಾಡಿರುವ ಒಳಿತುಗಳನ್ನು ನೋಡಿದರೆ ಅರ್ಥವಾಗುತ್ತದೆ. ಇನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯಿಂದಲೇ ರೈಲ್ವೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು ಎಂದಾಗಿರುವುದು... ರೈಲ್ವೆ ಲಾಭದತ್ತ ಕಾಲಿಟ್ಟಿದ್ದೆ ರಾಷ್ಟ್ರೀಯ ಜನತಾದಳವೆನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕರಾದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಅಲ್ಲವೇ? ಭಾರತದ ಅತ್ಯುತ್ತಮ ರಕ್ಷಣಾ ಸಚಿವರು ಎನ್ನಿಸಿದ್ದ ಜಾರ್ಜ್ ಫರ್ನಾಂಡಿಸ್ ಕೂಡಾ ಸಮತಾಪಕ್ಷದವರಾಗಿದ್ದಾರೆ ಎನ್ನುವುದನ್ನು ಮರೆಯಲಾಗುವುದೇ?

ಬಹುಭಾಷಾ ಬಹುಸಂಸ್ಕೃತಿಗಳ ರಾಜ್ಯಗಳಿಂದಾದ ಭಾರತದಂತಹ ದೇಶದ ವೈವಿಧ್ಯತೆಗಳನ್ನು, ಪ್ರಾದೇಶಿಕ ಆಶೋತ್ತರಗಳನ್ನು ಅರ್ಥ ಮಾಡಿಕೊಂಡರೆ ಈ ವೈವಿಧ್ಯತೆಗಳನ್ನು ನಿಜಕ್ಕೂ ಪ್ರತಿನಿಧಿಸುವ, ಈ ಪ್ರದೇಶಗಳ ಹಿತಕ್ಕಾಗಿ ತುಡಿಯುವ ಪ್ರಾದೇಶಿಕ ಪಕ್ಷಗಳಿಂದಲೇ ಸರಿಯಾದ ವ್ಯವಸ್ಥೆಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಮನವರಿಕೆಯಾಗುತ್ತದೆ. ಮಹಾರಾಷ್ಟ್ರದ ಹಿತಕ್ಕಾಗಿ ಕಟಿಬದ್ಧವಾದ ಅಲ್ಲಿನ ಪ್ರಾದೇಶಿಕ ಪಕ್ಷ ಮತ್ತು ಕನ್ನಡಿಗರ ಹಿತಕ್ಕಾಗಿ ಬಡಿದಾಡುವ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದಾಗಲೇ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂತ್ರ ರೂಪಿಸಲು ಸಾಧ್ಯವಾಗಬಹುದಾಗಿದೆ. ಇಷ್ಟು ವರ್ಷ ಈ ಸಮಸ್ಯೆಗಳಿಂದ ಪಲಾಯನ ಮಾಡಿ ಚಾಪೆಯಡಿ ಹಾಕಿಕೊಂಡು ಕೂತ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಸಮಸ್ಯೆಗಳಾಗಲೀ, ರಾಷ್ಟ್ರೀಯ ಸಮಸ್ಯೆಗಳಾಗಲೀ ಪರಿಹಾರ ಕಾಣುವುದು ಅಸಾಧ್ಯವೇ ಅನ್ನಿಸುತ್ತದೆ. ಲಕ್ಷಾಂತರ ಭಾರತೀಯರು ಸಂಘ  ಹೇಳಿದ್ದನ್ನು ವೇದವಾಕ್ಯವೆಂದು ಪರಿಗಣಿಸಿ, ಮಾರ್ಗದರ್ಶನ ಪಡೆದುಕೊಳ್ಳುತ್ತಿರುವಾಗ... ಸಂಘದೋರು ಇಂಥಾ ನಿಲುವುಗಳ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡೋದು ಒಳ್ಳೇದು! ಆಲ್ವಾ ಗುರೂ?

ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್‍ತಾನೇ ಬೇಡಾ ಅಂತಾನೇ?


ಕರ್ನಾಟಕ ಕಂಡ ಅಪರೂಪದ ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮಿನ್‍ಮಟ್ಟು ಅವರದ್ದು ದೊಡ್ಡಹೆಸರು. ತೀಕ್ಷ್ಣವೂ ವಸ್ತುನಿಷ್ಠವೂ ಆದ ಬರಹಗಳಿಂದಲೂ, ಆಳವಾದ ಒಳನೋಟದಿಂದಲೂ ಪತ್ರಿಕಾ ವಲಯದಲ್ಲಿ ಹೆಸರುವಾಸಿಯಾಗಿರುವ ಇವರು ಪ್ರತಿವಾರ ಪ್ರಜಾವಾಣಿಯಲ್ಲಿ ಅನಾವರಣವೆನ್ನುವ ಅಂಕಣವನ್ನು ಬರೆಯುತ್ತಿದ್ದಾರೆ. ಡಿಸೆಂಬರ್ ೧೯ನೇ ತಾರೀಕಿನಂದು ಅನಾವರಣದಲ್ಲಿ "ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ" ಎನ್ನುವ ಒಂದು ಬರಹ ಪ್ರಕಟವಾಗಿತ್ತು. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಲಿದ್ದ ಸಂದರ್ಭಗಳ ಬಗ್ಗೆ, ಅವು ಏಕೆ ಯಶಸ್ವಿಯಾಗಲಿಲ್ಲ ಎನ್ನುವ ಬಗ್ಗೆ ದಿನೇಶ್ ಅವರು ಬರೆದಿರುವ ಈ ಲೇಖನ ಬಹಳ ಚೆನ್ನಾಗಿದ್ದು, ಒಂದು ಹಂತದವರೆಗೆ ವಸ್ತುನಿಷ್ಠವಾಗಿದೆ ಎನ್ನಿಸಿತು. ದೇವರಾಜ ಅರಸರಿಂದ ಆರಂಭವಾದ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನಗಳ ವಿವರಣೆ ನೀಡಿದ ದಿನೇಶ್ ಅವರು ಒಂದು ಹಂತದಲ್ಲಿ ಹೀಗೆಂದು ಬರೆದಿದ್ದಾರೆ...

ಸಿದ್ಧರಾಮಯ್ಯನವರು "ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಅದಕ್ಕೆ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ" ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಮೊಳೆ ಬಿದ್ದದ್ದೇ ಆಗ."
ಮುಂದುವರೆದು...

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು. ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ`ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ. ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು. ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ. ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.
ಮೊದಲ ಓದಿಗೆ ದಿನೇಶ್ ಅವರ ಮಾತುಗಳು ದಿಟವಾಗಿಯೇ ತೋರುತ್ತದೆ. ಬಹಳಷ್ಟು ಸರಿಯಾಗಿಯೇ ಬರೆದಿದ್ದಾರೆ. ಎಲ್ಲಾ ಬರೆದ ಮೇಲೆ ಕೊನೆಗೆ ಒತ್ತುಕೊಟ್ಟಿರುವ ವಿಷಯ ಮಾತ್ರಾ ತಪ್ಪು ಸಂದೇಶ ಹೊಂದಿದೆ. ಆ ಬರಹದ ಕೊನೆಯ ವಾಕ್ಯವನ್ನೊಮ್ಮೆ ಓದಿನೋಡಿ. ಅದರ ಸಾರವಾದ "ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದರೆ ಅದರಿಂದ ರಾಜ್ಯಕ್ಕೆ ನೆಮ್ಮದಿ ಎನ್ನುವುದಾಗಲೀ, ವಿಫಲರಾದರೆ ಜನತೆಗೆ ನೆಮ್ಮದಿ ಎನ್ನುವುದಾಗಲೀ" ಆತುರದ ನಿಲುವಿನಂತೆ ತೋರುತ್ತದೆ.

ಯಡ್ಯೂರಪ್ಪನವರ ಪ್ರಾದೇಶಿಕ ಪಕ್ಷ ನಾಡಿಗೆ ನಿರುಪಯುಕ್ತ

ಯಡ್ಯೂರಪ್ಪನವರು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದರೂ, ವಿಫಲರಾದರೂ ನಾಡಿನ ಜನರಿಗೆ ನಷ್ಟವೇ ಆಗಲಿದೆ. ಇಲ್ಲಿನವರೆಗೆ ಕರ್ನಾಟಕದಲ್ಲಿದ್ದ ಪ್ರಾದೇಶಿಕ ಪಕ್ಷಗಳ ಗತಿಯೇ ಇದಕ್ಕೂ ಆಗಲಿದೆ. ಯಾಕೆಂದರೆ ಇದುವರೆವಿಗೂ ಹಾಗೆ ಪಕ್ಷ ಕಟ್ಟಿದವರು ಕನ್ನಡ - ಕನ್ನಡಿಗ - ಕರ್ನಾಟಕ ಕೇಂದ್ರಿತ ರಾಜಕಾರಣದ ಸಿದ್ಧಾಂತವನ್ನು ಹೊಂದಿರಲಿಲ್ಲ ಮತ್ತು ಯಡ್ಯೂರಪ್ಪನವರದ್ದೂ ಅಂತಹ ಸಿದ್ಧಾಂತವಲ್ಲ. ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿನ ಬಗ್ಗೆ ನೋಡಿದರೆ ಅದು ಅರಿವಾಗುತ್ತದೆ. ಶಿವಸೇನೆ - ಮರಾಠಿ ಕೇಂದ್ರಿತ, ತೆಲುಗುದೇಶಂ - ತೆಲುಗರ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು, ದ್ರಾವಿಡ ಕಳಗಗಳು - ದ್ರಾವಿಡ ಸಿದ್ಧಾಂತ ಕೇಂದ್ರಿತ... ಹೀಗೆ ಆಯಾ ಪ್ರದೇಶದ ಜನಹಿತದ ಪರಮ ಉದ್ದೇಶವನ್ನು ಘೋಷಿಸಿ, ಸಿದ್ಧಾಂತವಾಗಿಸಿಕೊಂಡಿರುವ ಪಕ್ಷಗಳು ಯಶಸ್ವಿಯಾಗಿವೆ. ಆದರೆ ನಮ್ಮ ನಾಡಿನ ಪಕ್ಷಗಳಿಗೆ ಹಿಂದೂ ಇಂತಹ ಯಾವ ಸ್ಪಷ್ಟವಾದ ಸಿದ್ಧಾಂತಗಳೂ ಇರಲಿಲ್ಲ. ಇದ್ದ ರೈತಸಂಘದಂತಹವೂ ಕೂಡಾ ನಾಡಿನ ಎಲ್ಲಾ ವರ್ಗಗಳನ್ನೊಳಗೊಳ್ಳುವ ನಿಲುವನ್ನು ಜನರಿಗೆ ಮನವರಿಕೆ ಮಾಡಿಸಲು ಸಫಲವಾಗಿರಲಿಲ್ಲ ಎನ್ನಬಹುದು.

ಇನ್ನೊಂದೆಡೆ ಕರ್ನಾಟಕದಲ್ಲಿನ್ನೂ ಕನ್ನಡಿಗ ಐಡೆಂಟಿಟಿ ಜಾಗೃತಿಯೇ ಎಳವೆಯ ಹಂತದಲ್ಲಿದೆ. ನಾನೊಬ್ಬ ಕನ್ನಡಿಗ ಎನ್ನುವುದನ್ನೇ ಅರವತ್ತು ವರ್ಷಗಳಿಂದ ನಗಣ್ಯವಾಗಿಸಿಕೊಂಡು ಬಂದಿರುವ ಕರ್ನಾಟಕದಲ್ಲಿ, ನಮ್ಮವರ ಮೈಮರೆವಿನ ಕೊಳೆಯಿನ್ನೂ ತೊಳೆಯಲ್ಪಟ್ಟಿಲ್ಲದಿರುವಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಯಡ್ಯೂರಪ್ಪನವರು ಹೊಸ ಪಕ್ಷ ಕಟ್ಟಿದರೆ, ಅದು ಗೆದ್ದರೂ ಕೆಲವೇ ಸಮಯದಲ್ಲಿ ಮತ್ತೆ ಮೂಲಸಿದ್ಧಾಂತದ ಪಕ್ಷದೊಂದಿಗೆ ವಿಲೀನವಾಗದೆ ಇರುವುದಿಲ್ಲ. ಹಾಗಾಗುವುದಾದರೆ ನಾಳೆ, ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷದ ಹುಟ್ಟಿನ ಬಗ್ಗೆ ಮತ್ತಷ್ಟು ಅಪನಂಬಿಕೆ ಜನರಲ್ಲಿ ಹುಟ್ಟೀತಲ್ಲವೇ? ಇನ್ನು ಅವರ ಪ್ರಯತ್ನ ವಿಫಲವಾದರೆಂತೂ ಹೇಳುವಂತಿಲ್ಲ, ದಿನೇಶರ ಬರಹದ ತಲೆಬರಹ ನಾಳೆ ಕನ್ನಡಿಗರ ಮನದಲ್ಲಿ ಬದಲಾಗದ ನಂಬಿಕೆಯಾಗಿಬಿಡುವ ಅಪಾಯವಿದೆ.

ಪ್ರಾದೇಶಿಕ ಪಕ್ಷ ಬೇಕಿರುವುದು ಯಾರದ್ದೋ ತಾಕತ್ತಿನ ಪರೀಕ್ಷೆಗಲ್ಲ!

ಬರಹದ ಕೊನೆಯಲ್ಲಿ ಹೇಳಿದಂತೆ ಯಾರ್ಯಾರಿಗೋ ಅವರವರ ಯೋಗ್ಯತೆಗಳು, ಬಲಾಬಲಗಳು ಮನವರಿಕೆಯಾಗಬೇಕೆಂಬ ಕಾರಣದಿಂದಾಗಿ ಪ್ರಾದೇಶಿಕ ಪಕ್ಷಗಳು ಹುಟ್ಟುವುದೋ, ಸಾಯುವುದೋ ಆದಲ್ಲಿ ನಿಜಕ್ಕೂ ನಷ್ಟ ಅನುಭವಿಸುವವರು ನಾವೇ. ಕರ್ನಾಟಕದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಸಿದ್ಧಾಂತದ, ನಿಜವಾದ ಒಪ್ಪುಕೂಟದ ಪರವಾದ, ಸಮರ್ಥವಾದ ಪ್ರಾದೇಶಿಕ ಪಕ್ಷವೊಂದು ಹುಟ್ಟಲೇಬೇಕು. ಅದು ತನ್ನ ಸಿದ್ಧಾಂತಗಳ, ನಿಲುಮೆಗಳ ಕಾರಣದಿಂದಾಗಿ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲೂ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಬೇಕು, ಪ್ರೇರಣೆಯಾಗಬೇಕು. ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟವೊಂದು ಅಸ್ತಿತ್ವಕ್ಕೆ ಬಂದು ಸಂಸತ್ತಿನ ಅಧಿಕಾರ ಇವುಗಳ ಕೈಗೆ ಸಿಗಬೇಕು. ಅಂತಹ ಸರ್ಕಾರ ಮಾತ್ರವೇ ವೈವಿಧ್ಯತೆಗಳನ್ನು ಉಳಿಸಿಕೊಂಡೇ ಭಾರತದ ರಾಜ್ಯಗಳು ಸೌಹಾರ್ದತೆಯಿಂದ ಬಾಳುವಂತಾಗುವಂತಹ ನೀತಿ ನಿಲುವುಗಳನ್ನು ರೂಪಿಸಬಲ್ಲವು. ಗಡಿ ತಕರಾರಿರಲಿ, ನದಿ ನೀರು ಹಂಚಿಕೆಯ ರಾಷ್ಟ್ರೀಯ ನೀತಿಯಿರಲಿ, ರಾಜ್ಯಗಳಿಗೆ ಬೇಕಾದ ಸ್ವಾಯತ್ತತೆಯಿರಲಿ, ಈಗ ಕೇಂದ್ರಪಟ್ಟಿ ಮತ್ತು ಜಂಟಿಪಟ್ಟಿಯಲ್ಲಿರುವ.. ಕಲಿಕೆಯೂ ಸೇರಿದಂತೆ ಅನೇಕ ವಿಷಯಗಳಲ್ಲಿ ಹೆಚ್ಚಿನವನ್ನು ರಾಜ್ಯಪಟ್ಟಿಗೆ ತರುವುದಾಗಲೀ... ಅಷ್ಟೇಕೆ ಭಾರತ ನಿಜವಾದ ಒಪ್ಪುಕೂಟವಾಗಲಾಗಲೀ.. ಸಾಧ್ಯವಾಗುವುದು ಇಂತಹ ಸರ್ಕಾರದಿಂದಲೇ!

ಕೊನೆಹನಿ: "ಪ್ರಾದೇಶಿಕ ಪಕ್ಷಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ" ಎನ್ನುವಂತಹ ಮಾತುಗಳು ತೀವ್ರವಾದ ನಿರಾಶವಾದ ಅಥವಾ ಪ್ರಾದೇಶಿಕ ಪಕ್ಷಗಳೆಡೆಗಿನ ನಿಕೃಷ್ಟ ಭಾವನೆಯನ್ನು ತೋರುತ್ತಿದೆಯಾದರೂ ಅದನ್ನು ಆಕಸ್ಮಿಕವೆಂದೇ ತಿಳಿದು ಬಿಟ್ಟುಬಿಡೋಣ...

ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ಬ್ರೇಕು!

(ಫೋಟೋ ಕೃಪೆ: ಸುಲೇಖಾ.ಕಾಮ್)
ಲೋಕಸಭೆಯಲ್ಲಿ ಒಪ್ಪಿತವಾಗಿ ಬಂದ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, 2011"ಗೆ ಸದ್ಯಕ್ಕೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿಯವರಿಂದ ಸಕ್ಕತ್ತಾಗಿ ಬ್ರೇಕ್ ಬಿದ್ದಿದೆ. ರಾಜ್ಯಸಭೆಯಲ್ಲಿ ಇನ್ನೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವ ಮಸೂದೆ ಮತಕ್ಕೆ ಬೀಳುವ ಸಾಧ್ಯತೆಗಳು ಕಮ್ಮಿ. ಉದ್ದೇಶಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ, ವಿಕೇಂದ್ರಿಕರಣಕ್ಕೆ ವಿರುದ್ಧವಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಸಿದ್ಧಾಂತಗಳಿಗೆ ಮಾರಕವಾಗಿದೆ ಎನ್ನುವ ಸರಿದನಿಯನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಎತ್ತಿದ್ದು ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಮಂತ್ರಿಗಳು ಅಚ್ಚರಿ ಹುಟ್ಟಿಸುವಂತೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟಕ್ಕೆ ಧಕ್ಕೆಯಾದರೂ ಅಡ್ಡಿಯಿಲ್ಲ ಎನ್ನುವಂತೆ ಮಾತಾಡಿದ್ದಾರೆ. ಇಷ್ಟಕ್ಕೂ ಅಂತಹದ್ದೇನನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ನೋಡೋಣ.

ಒಕ್ಕೂಟ ಧರ್ಮಕ್ಕೆ ವಿರುದ್ಧವಾಗಿರುವ ನಿಲುವುಗಳು

ಈ ಮಸೂದೆಯ ಹೆಸರನ್ನೇ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, ೨೦೧೧" ಎಂದು ಇಡಲಾಗಿದೆ. ಅಂದರೆ ರಾಜ್ಯಗಳ ಲೋಕಾಯುಕ್ತ ಇನ್ಮೇಲೆ ಕೇಂದ್ರದ ಅಧೀನ ಅಂದಂಗಾಯ್ತು. ಈ ಮಸೂದೆಯ ಮೂರನೇ ಭಾಗದಲ್ಲಿ (Part III) "ಲೋಕಾಯುಕ್ತ" ಸಂಸ್ಥೆಯ ಬಗ್ಗೆ ಹೇಳಲಾಗಿದೆ. ೬೪(೧)ರಲ್ಲಿ ಸದರಿ ಮಸೂದೆ ಜಾರಿಯಾದ ದಿನದಿಂದ ಪ್ರತಿಯೊಂದು ರಾಜ್ಯವೂ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೊಳಿಸತಕ್ಕದ್ದು ಎನ್ನಲಾಗಿದೆ. ಇದು ರಾಜ್ಯಗಳು ಲೋಕಾಯುಕ್ತ ಸಂಸ್ಥೆಯನ್ನು ರಚಿಸುವುದನ್ನು ಕಡ್ಡಾಯಗೊಳಿಸುತ್ತದೆ. ಹೀಗೆ ರಾಜ್ಯಗಳ ಆಡಳಿತದಲ್ಲಿ ಮೂಗು ತೂರಿಸುವುದು ಅವುಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ನಿಲುವಾಗಿದೆ ಎನ್ನುವುದು ತೃಣಮೂಲ ಮತ್ತದರ ಸಹಯೋಗಿ ಪಕ್ಷಗಳ ನಿಲುವು. ಈ ನಿಲುವಿನ ನಿಜಾಯತಿಯನ್ನು ಅನುಮಾನಿಸದೇ ನೋಡಿದರೆ ಒಕ್ಕೂಟ ಧರ್ಮದ ಪರವಾಗಿ ಇದು ಇರುವುದು ಎದ್ದು ಕಾಣುತ್ತದೆ. ಈ ಮಸೂದೆಯ ಮೂಲಕ ರಾಜ್ಯಗಳ ’ಆಡಳಿತವನ್ನು ರೂಪಿಸುವ, ಅದಕ್ಕೆ ಬೇಕಾದ ಸಂಸ್ಥೆಗಳನ್ನು ರೂಪಿಸುವ ಅಧಿಕಾರದಲ್ಲಿ’ ಕೇಂದ್ರ ಕೈಯ್ಯಾಡಿಸುತ್ತಿರುವ ಮತ್ತು ಅಂತಹ ಅಧಿಕಾರವನ್ನು ರಾಜ್ಯಗಳ ಕೈಯ್ಯಿಂದ ಕಸಿಯುವಂತಹ ನಿಯಮಗಳು ಮಸೂದೆಯಲ್ಲಿದೆ ಎನ್ನುವುದು ಅರಿವಾಗುತ್ತದೆ.

ರಾಜ್ಯಸರ್ಕಾರ ಏಕಿದೆ?

ರಾಜ್ಯಗಳಲ್ಲೂ ಸರ್ಕಾರಗಳಿವೆ, ಅದರಲ್ಲೂ ಜನರಿಂದಲೇ ಆಯ್ಕೆಯಾಗೋ ಶಾಸಕರಿದ್ದಾರೆ. ತನ್ನ ನಾಡಿಗೆ ಅಗತ್ಯವಿರುವ ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಗಳೇ ಕಟ್ಟಿಕೊಳ್ಳುತ್ತವೆ. ರಾಜ್ಯಗಳ ಈ ಅಧಿಕಾರವನ್ನು ಕೇಂದ್ರ ಕಿತ್ತುಕೊಳ್ಳೋದು ಸರಿಯಲ್ಲ. ಹಾಗೆ ಮಾಡೋದು ನಿಮಗೆ ನಿಮ್ಮನ್ನು ಆಳಿಕೊಳ್ಳುವ ಯೋಗ್ಯತೆಯಿಲ್ಲ, ‘ನಾವು ನಿಯಮ ರೂಪಿಸುತ್ತೇವೆ ನೀವು ಜಸ್ಟ್ ಫಾಲೋ ಮಾಡಿ’ ಅಂದಂಗಲ್ವಾ? ರಾಜ್ಯಸಭೆಯ ಒಬ್ಬ ಸಂಸದರು ಇದೇ ಮಾತನ್ನು ಚರ್ಚೆಯಲ್ಲಿ ಹೇಳುತ್ತಾ.. "ಕೇಂದ್ರವೇನು ಮೊಗಲ್ ಸಾಮ್ರಾಜ್ಯವಲ್ಲ.. ನೀವು ಅಕ್ಬರ್ ಬಾದಶಹಾನೂ ಅಲ್ಲಾ, ರಾಜ್ಯಗಳು ನಿಮ್ಮ ಸಾಮಂತ ರಾಷ್ಟ್ರಗಳೂ ಅಲ್ಲಾ" ಎಂದದ್ದು ಸಕ್ಕತ್ತಾಗಿತ್ತು. ಉತ್ತರಾಖಂಡ, ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಈಗಾಗಲೇ ಬಲಿಷ್ಠವಾಗಿರುವ ಲೋಕಾಯುಕ್ತ ಕಾಯಿದೆಯಿದ್ದು ಅವುಗಳ ಗತಿ ಏನಾದೀತು ಎನ್ನುವ ಆತಂಕವೂ ವ್ಯಕ್ತವಾಗಿದೆ.

ದನಿಯೆತ್ತಿರುವ ಪ್ರಾದೇಶಿಕ ಪಕ್ಷಗಳು

ರಾಜ್ಯದ ಅಧಿಕಾರ ಮೊಟಕುಗೊಳಿಸುವ ಈ ಮಸೂದೆಗೆ ಈ ಕಾರಣಕ್ಕಾಗಿ ವಿರೋಧ ತೋರಿಸಿದ್ದು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು. ಇದಕ್ಕೆ ಎಐಡಿಎಂಕೆ, ಬಿಜೆಡಿ, ಬಿಎಸ್ಪಿ, ಎಸ್ಪಿ... ಮೊದಲಾದ ಪ್ರಾದೇಶಿಕ ಪಕ್ಷಗಳು ದನಿಗೂಡಿಸಿವೆ. ಬಿಜೆಪಿಯೂ ಇವರೊಡನೆ ದನಿಯೆತ್ತಿದೆ. ಧರ್ಮಾಧಾರಿತ ಮೀಸಲಾತಿಯ ಬಗೆಗಿನ ಆಕ್ಷೇಪದ ಜೊತೆಯಲ್ಲಿಯೇ ಒಕ್ಕೂಟ ಶಿಥಿಲಗೊಳಿಸುವ ಈ ಅಂಶವನ್ನೂ ಸೇರಿಸಿಕೊಂಡು ವಿರೋಧಪಕ್ಷವಾದ ಬಿಜೆಪಿ ಕೂಡಾ ತೃಣಮೂಲದ ಈ ನಿಲುವನ್ನು ಬೆಂಬಲಿಸಿದೆ.

ಮುಂದೇನಾದೀತು?

ಇಂದೇನಾದರೂ ಈ ಮಸೂದೆ ಇದೇ ರೂಪದಲ್ಲಿ ಮಂಡನೆಯಾದರೆ ಸೋಲು ಕಾಣುವುದು ಖಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಲೋಕಾಪಾಲ್ ಮಸೂದೆ ತಿದ್ದುಪಡಿಯಾಗಿ ಮಂಡಿತವಾಗಬೇಕಾದರೆ ಮತ್ತೆ ಲೋಕಸಭೆಯಲ್ಲಿ ಮಂಡಿತವಾಗಿ ಒಪ್ಪಿಗೆ ಪಡೆದುಕೊಳ್ಳಬೇಕು. ಅಥವಾ ಈಗ ಮಸೂದೆಗೆ ವಿರೋಧ ತೋರಿಸದೆ ಒಪ್ಪಿಕೊಳ್ಳಿ, ಮುಂದೆ ತಿದ್ದುಪಡಿಯ ಮೂಲಕ ಬದಲಾವಣೆ ಮಾಡುತ್ತೇವೆ ಎಂದು ಪ್ರಾದೇಶಿಕ ಪಕ್ಷಗಳ ಮನವೊಲಿಸಬೇಕು. ಆದರೆ ಲೋಕಸಭೆ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡಿಕೆಯಾಗಿರುವುದರಿಂದ ಮುಂದಿನ ಅಧಿವೇಶನದವರೆಗೂ ಸದರಿ ಮಸೂದೆ ಮಂಡನೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಏನಾಗುವುದೋ ಕಾದು ನೋಡೋಣ. ಒಟ್ಟಿನಲ್ಲಿ ಲೋಕಾಯುಕ್ತ ನಿರ್ವಹಿಸುವ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದ ಲೋಕಪಾಲ್ ಮಸೂದೆ ಒಪ್ಪಿಗೆಯಾಗುವುದೇ ಎನ್ನುವುದು ಕುತೂಹಲದ ವಿಷಯವಾಗಿದೆ.

ಕೊನೆಹನಿ: ಈಗಾಗಲೇ ಕೇಂದ್ರೀಯ ತನಿಖಾದಳದಂತಹ ಸಂಸ್ಥೆಗಳು ಬಳಕೆಯಾಗುತ್ತಿರುವ ಬಗೆಯನ್ನು ನೋಡಿದರೆ ಲೋಕಪಾಲ್ ಎನ್ನುವುದೂ ಕೂಡಾ ಪ್ರಾದೇಶಿಕ ಪಕ್ಷಗಳನ್ನು ಅದುಮಿಡುವ, ರಾಷ್ಟ್ರೀಯ ಪಕ್ಷಗಳ ಕೈ ಅಸ್ತ್ರವಾದೀತೆನ್ನುವ ಆತಂಕವಿರುವುದಂತೂ ದಿಟ!

ಕನ್ನಡ ಕಲಿಕೆ ಕಡ್ಡಾಯ ಆಗಬೇಕಾದ್ರೆ ಪ್ರಾದೇಶಿಕ ಪಕ್ಷಗಳು ಹುಟ್ಟಬೇಕು, ಆಡಳಿತಕ್ಕೆ ಬರಬೇಕು

ತಮಿಳ್ನಾಡು ಸರ್ಕಾರ ಜಾರಿಗೆ ತಂದಿದ್ದ "ತಮಿಳು ಕಲಿಕೆಯ ಕಾಯ್ದೆ 2006" ವಿರೋಧಿಸಿ ತಮಿಳ್ನಾಡಲ್ಲೇ ತಮಿಳು ಕಲಿಯಲ್ಲ ಅನ್ನೋ ಹುನ್ನಾರ ತೋರಿಸಿ ನ್ಯಾಯಾಲಯಕ್ಕೆ ಕೆಲವರು ಸಲ್ಲಿಸಿದ್ದ ಮನವೀನ ಚೆನ್ನೈ ಉಚ್ಚನ್ಯಾಯಾಲಯ ತಳ್ಳಾಕಿ, ಕಾಯ್ದೇನ ಎತ್ತಿ ಹಿಡಿದಿದೆ ಅಂತ ಪ್ರಜಾವಾಣೀಲಿ ಹಾಗೂ ಇಂಡಿಯನ್ ಎಕ್ಸ್‍ಪ್ರೆಸ್‍ ನಲ್ಲಿ ಸುದ್ದಿ. ಆ ಕಾಯ್ದೇಲಿ ಏನಿದೆ ಒಸಿ ನೋಡಿ:

3. (1) Tamil shall be taught as a subject in standards I to X in all schools, in a phased manner, commencing from the academic year 2006-2007 for standard I, from the academic year 2007-2008 for standards I and II and shall be extended upto X standard in a like manner.

(2) For the purpose of sub-section (1), the pattern of education shall be as follows:-
Part-I Tamil (Compulsory)
Part-II English(Compulsory)
Part-III Other Subjects (Mathematics, Science, Social Science, etc.)
Part-IV Students who do not have either Tamil or English as their mother tongue can study their mother tongue as an optional subject.

ಅಂದ್ರೆ,
  • ತಮಿಳುನಾಡಲ್ಲಿ 1ನೇ ತರಗತಿಯಿಂದ 10ನೇ ತರಗತಿ ವರೆಗೆ ಎಲ್ಲಾ ವಿದ್ಯಾರ್ಥಿಗಳೂ ತಮಿಳ್ನ ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲೀಲೇಬೇಕು. ಅಂದ್ರೆ ನಾಡಿನ ಭಾಷೆಯನ್ನು ಕಲಿಯೋದಿಲ್ಲ ಅನ್ನುವುದು ತಮಿಳುನಾಡಲ್ಲಿ ಕಾನೂನುಬಾಹಿರ. ಆದರೆ ಕರ್ನಾಟಕದಲ್ಲಿ ನಾಡಿನ ಭಾಷೆಯಾದ ಕನ್ನಡವನ್ನ ಕಲೀದೇ ಹೋದರೂ ಪರವಾಗಿಲ್ಲ ಅನ್ನೋ ನಿಯಮ!
  • ಉಪಯೋಗವಿಲ್ಲದ ಹಿಂದಿ ಕಲಿಯೋ ಅವಶ್ಯಕತೆಯಿಲ್ಲ. ಆದರೆ ಕರ್ನಾಟಕದಲ್ಲಿ ಹಿಂದಿ ಕಲಿಕೆ ಕಡ್ಡಾಯ!
  • ತಮಿಳು ಮಕ್ಕಳಿಗೆ ಅನವಶ್ಯಕವಾಗಿ ನಮ್ಮ ಕರ್ನಾಟಕದಲ್ಲಿ ಹೇರೋ ಹಾಗೆ 3 ಭಾಷೆಗಳ್ನ (ಅದ್ರಲ್ಲಿ ಒಂದು ಯಾವುದಕ್ಕೂ ಉಪಯೋಗವಿಲ್ಲದಿರೋ ಹಿಂದಿ) ಹೇರಿಲ್ಲ! ಆದರೆ ಕರ್ನಾಟಕದಲ್ಲಿ ಕನ್ನಡದ ಮಕ್ಕಳ ಮೇಲೆ ಅನವಶ್ಯಕವಾಗಿ ಮೂರು ಭಾಷೆಗಳ ಹೊರೆ!
  • ತಮಿಳು ಅಥವಾ ಇಂಗ್ಲೀಷು ನಿಮ್ಮ ಮಾತೃಭಾಷೆಯಾಗಿಲ್ದೇ ಹೋದ್ರೆ ಆ (ಮೂರನೇ) ಭಾಷೇನ ಐಚ್ಛಿಕವಾಗಿ ಕಲೀಬೋದು, ಅಷ್ಟೆ. ಅಂದ್ರೆ - ನೀವು ತಮಿಳ್ನಾಡಲ್ಲಿರೋ ಕನ್ನಡಿಗರೋ ಹಿಂದಿಯೋರೋ ಆಗಿದ್ರೆ ನಿಮಗೆ ಕನ್ನಡ ಮತ್ತು ಹಿಂದಿಗಳು ಐಚ್ಛಿಕ ವಿಷಯಗಳೇ ಹೊರತು ತಮಿಳಲ್ಲ. ಅಂದ್ರೆ ಮಾತೃಭಾಷೆಗಿಂತ ಮೇಲಿನ ಸ್ಥಾನ ನಾಡಿನ ಭಾಷೆಗೆ. ಆದರೆ ಕರ್ನಾಟಕದಲ್ಲಿ ನಾಡಿನ ಭಾಷೆಗಿಂತ ಮಾತೃಭಾಷೆಗೇ ಮೇಲಿನ ಸ್ಥಾನ.ಇದೇ ತಮಿಳ್ರು ಬಂದು ಕರ್ನಾಟಕದಲ್ಲಿ "ನಾಡಿನ ಭಾಷೆ ಕಲಿಯೊಲ್ಲ, ಮಾತೃಭಾಷೇನೇ ಮೇಲು" ಅಂತ ವಾದಿಸಿ ಕನ್ನಡವನ್ನ ಕಸಕ್ಕಿಂತ ಕಡೆಯಾಗಿ ಕಂಡರೂ ಅದಕ್ಕೆ ವಿರುದ್ಧವಾದ ಯಾವ ಕಾನೂನೂ ಕರ್ನಾಟಕದಲ್ಲಿಲ್ಲ!
  • ಇದು ಸಿ.ಬಿಎಸ್.ಇ ಮತ್ತು ಐ.ಸಿ.ಎಸ್.ಇ. ನೋರಿಗೂ ಅನ್ವಯಿಸತ್ತೆ ಅನ್ನೋದನ್ನ ಮರೀಬೇಡಿ! ಆದರೆ ಕರ್ನಾಟಕದಲ್ಲಿ ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ. ಗಳಿಗೆ ಕರ್ನಾಟಕದ ಯಾವುದೇ ಕಲಿಕೆ ಕಾಯ್ದೆಗಳು ಅನ್ವಯಿಸುವುದಿಲ್ಲ!
ಕರ್ನಾಟಕದಲ್ಲಿ ಕನ್ನಡ ಕಲಿಕೇನ ಕಡ್ಡಾಯ ಮಾಡಕ್ಕೆ ಬೇಕಾಗಿರೋ ಗಂಡಸುತನ ಇಲ್ಲೀವರೆಗೆ ಬಂದ ಯಾವ ಕರ್ನಾಟಕ ಸರ್ಕಾರಕ್ಕೂ ಇರಲಿಲ್ಲವಲ್ಲ, ಯಾಕೆ? ಯಾಕೇಂದ್ರೆ ಇಲ್ಲೀವರೆಗೆ ಯಾವ ಕರ್ನಾಟಕ ಸರ್ಕಾರವೂ ನಮ್ಮದೇ ಆದ ಪಕ್ಷದ್ದು ಆಗೇ ಇರಲಿಲ್ಲವಲ್ಲ, ಅದೇ ಕಾರಣ ಗುರು. ನಮ್ನ ಆಳಿರೋ ಪಕ್ಷಗಳೆಲ್ಲ ಎಷ್ಟೇ ಆದ್ರೂ "ರಾಷ್ಟ್ರೀಯ" ಪಕ್ಷಗಳೇ ತಾನೆ? ಇವರ ಟೊಳ್ಳು ರಾಷ್ಟ್ರೀಯತೆಗೆ ಕನ್ನಡ-ಕನ್ನಡತನ-ಕರ್ನಾಟಕಗಳೆಲ್ಲ ಗೌಣ! ಇವರೆಲ್ಲ ಹಿಂದೀದಾಸರೇ. ಹೈಕಮ್ಯಾಂಡು "ಅಪಾರ್ಥ" ಮಾಡ್ಕೊಂಬುಡತ್ತೆ ಅಂತ ಹೇಡಿಗಳ ತರ ಹೆದ್ರುಕೊಂಡು ಕನ್ನಡಕ್ಕೆ ದ್ರೋಹ ಬಗೆದಿರೋ ಪಕ್ಷಗಳೇ ಇಲ್ಲೀವರೆಗೆ ನಮ್ನ ಆಳಿರೋದು ಗುರು!

ಒಟ್ಟಿನಲ್ಲಿ ಈ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು ತಮಗೆ ನರ ಸತ್ತುಹೋಗಿದೆ ಅನ್ನೋ ಕಾರಣಕ್ಕೆ ಇವತ್ತಿಗೂ ನಂ ನಾಡ್ನ ಬಲಿ ಕೊಡ್ತಿದಾರೆ ಗುರು! ಈ ಅಯೋಗ್ಯ "ರಾಷ್ಟ್ರೀಯ" ಪಕ್ಷಗಳ್ಗೆ ಬುದ್ಧಿ ಬರತ್ತೆ ಅಂತ ನಂಬೋದೇ ತಪ್ಪು ಗುರು! ಈ ಕೆಲಸ ನಿಜವಾಗಲೂ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗೇ ಹುಟ್ಟುನಿಂತ ಪ್ರಾದೇಶಿಕ ಪಕ್ಷಗಳಿಂದ್ಲೇ ಸಾಧ್ಯ. ಅಂತಹ ಪ್ರಾದೇಶಿಕ ಪಕ್ಷಗಳು ಹುಟ್ಟಬೇಕು, ನಾವು ಅವುಗಳಿಗೆ ಬೆಂಬಲ ಕೊಟ್ಟು ಗೆಲ್ಲಿಸಬೇಕು, ಆಡಳಿತಕ್ಕೆ ತರಬೇಕು ಗುರು!
Related Posts with Thumbnails