371 ಜೆ ಮತ್ತು ಕೇಂದ್ರಸರ್ಕಾರದ ಅಧಿಕಾರದ ಹಪಾಹಪಿ!

(ಫೋಟೋ: ವಿಜಯ ಕರ್ನಾಟಕದ ಮುಖಪುಟ)
ಕರ್ನಾಟಕದ ಅತಿಯಾಗಿ ಹಿಂದುಳಿದಿರುವ ಆರು ಜಿಲ್ಲೆಗಳನ್ನು ಒಳಗೊಂಡ ಭಾಗ ಹೈದರಾಬಾದ್ ಕರ್ನಾಟಕ. ಇದರಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಮತ್ತು ಬೀದರ್ ಸೇರಿವೆ. ಈ ಭಾಗ ಐತಿಹಾಸಿಕವಾಗಿ ಹೈದರಾಬಾದಿನ ನಿಜಾಮರ ಆಳ್ವಿಕೆಗೆ ಸೇರಿದ್ದ ಭಾಗವಾಗಿತ್ತು. ಇದು ತೀರಾ ಹಿಂದುಳಿದಿದೆ, ಹಾಗಾಗಿ ಇದಕ್ಕೆ ಸಂವಿಧಾನದ ವಿಶೇಷ ವಿಧಿಯನ್ನು ರೂಪಿಸಿ ಅದರನ್ವಯ ಏಳಿಗೆಗೆ ಗಮನ ನೀಡಬೇಕೆಂಬ ಕೂಗು ಐವತ್ತು ವರ್ಷಗಳಿಂದಲೂ ಕೇಳಿಬರುತ್ತಿದ್ದು ಇದೀಗ ಭಾರತದ ಸಂಸತ್ತು ಸಂವಿಧಾನದ ೩೭೧ನೇ ಜೆ ವಿಧಿಗೆ ಒಪ್ಪಿಗೆ ನೀಡಿದೆ. ಇಡೀ ನಾಡು ಮತ್ತು ಮಾಧ್ಯಮಗಳು ಇದನ್ನು ದೊಡ್ಡ ಸಾಧನೆಯಾಗಿ ಸಂಭ್ರಮವಾಗಿ ಆಚರಿಸುತ್ತಿದೆ. ಇರಲಿ, ಹೈದರಾಬಾದ್ ಕರ್ನಾಟಕ ಏಳಿಗೆ ಹೊಂದಲಿ ಎಂಬುದೇ  ನಮ್ಮದೂ ಹಾರೈಕೆ.

ಜೆ - ಒಕ್ಕೂಟ ಸ್ವರೂಪದ ವಿಡಂಬನೆ!

ಈ ವಿಧಿಯನ್ನು ಜಾರಿಗೊಳಿಸಲು ಮುಂದಾದಾಗ ಇದರ ಸ್ವರೂಪದ ಬಗ್ಗೆ ರಾಜ್ಯಸರ್ಕಾರ ಒಂದು ತಕರಾರನ್ನು ಎತ್ತಿತ್ತು. ಬಿಜೆಪಿ ಮತ್ತು ಜೆಡಿಎಸ್, ಎರಡೂ ಪಕ್ಷಗಳು ಎತ್ತಿದ್ದ ‘ಸದರಿ ವಿಧಿಯಲ್ಲಿ ಕೇಂದ್ರಸರ್ಕಾರ ರಾಜ್ಯಪಾಲರ ಮೂಲಕ ಹೊಂದಲು ಮುಂದಾಗಿರುವ ಹಿಡಿತ ಸರಿಯಲ್ಲ’ ಎನ್ನುವ ತಕರಾರು ನಿಜಕ್ಕೂ ಸರಿಯಾಗಿಯೇ ಇತ್ತು. ಏಕೆಂದರೆ ಇದು, ಈ ಭಾಗದ ಎಲ್ಲಾ ಯೋಜನೆಗಳು ಇನ್ಮುಂದೆ ರಾಜ್ಯಪಾಲರ ಮೂಲಕ ಜಾರಿಯಾಗಲು ಅನುವು ಮಾಡಿಕೊಡುತ್ತದೆ. ಇದು ದೇಶವು ಒಕ್ಕೂಟ ವ್ಯವಸ್ಥೆಯತ್ತ ಸಾಗುವ ಬದಲಿಗೆ ವಿರುದ್ಧ ದಿಕ್ಕಿಗೆ ಸಾಗುತ್ತಿರುವಂತಿದೆ.

ಪಾಪಾ! ಎರಡೂ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಹೇಳಿಕೊಳ್ಳಲಿಕ್ಕೂ ಬಿಡದೆ ಇವರು ಹೈ-ಕ ವಿರೋಧಿಗಳು ಎನ್ನುವಂತೆ ಕಾಂಗ್ರೆಸ್ ಯಶಸ್ವಿಯಾಗಿ ಬಿಂಬಿಸಿದ್ದೂ, ಹತ್ತಿರದಲ್ಲೇ ಇರುವ ಮುಂದಿನ ಚುನಾವಣೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರೀತು ಎನ್ನುವ ದಿಗಿಲಿನಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ತೆಪ್ಪಗಾಗಿದ್ದೂ ನಡೆಯಿತು. ವಾಸ್ತವವಾಗಿ ಒಕ್ಕೂಟದ ಪರವಾಗಿ ದನಿಯೆತ್ತಿದ್ದ ಈ ಎರಡೂ ಪಕ್ಷಗಳು ಸರಿಯಾದ ನಿಲುವನ್ನೇ ಹೇಳಿದ್ದವು!

ಪ್ರಜಾಪ್ರಭುತ್ವ ಎಂದರೇನೇ ನಮ್ಮನ್ನು ನಾವು ಆಳಿಕೊಳ್ಳುವುದು, ಅದರ ಆಶಯಕ್ಕೆ ಬೆಂಬಲವಾಗಿರುವುದು ಅಧಿಕಾರ ವಿಕೇಂದ್ರೀಕರಣ. ಇದೀಗ ಅಂತಹ ವಿಕೇಂದ್ರೀಕರಣವನ್ನು ವಿಡಂಬನೆ ಮಾಡುವಂತೆ ಈ ವಿಧಿಯಲ್ಲಿ ರಾಜ್ಯಪಾಲರಿಗೆ, ಆ ಮೂಲಕ ಕೇಂದ್ರಸರ್ಕಾರಕ್ಕೆ ಅಧಿಕಾರ ಒಪ್ಪಿಸಿದಂತಾಗಿದೆ. ನಾವು ಅನುದಾನ ನೀಡುತ್ತೇವೆ ಮತ್ತು ನಾವೇ ಅದನ್ನು ಯೋಜನೆಗಳಾಗಿ ಜಾರಿಗೊಳಿಸುತ್ತೇವೆ ಎನ್ನುವುದು ಕೇಂದ್ರಕ್ಕೆ ರಾಜ್ಯಸರ್ಕಾರದ ಮೇಲೆ ನಂಬಿಕೆ ಇಲ್ಲದಂತೆಯೂ, ತಾನೇನೋ ಅನುದಾನವನ್ನು ತನ್ನ ಪಾಕೇಟಿನಿಂದ ಕೊಡುತ್ತಿರುವ ಮನಸ್ಥಿತಿಯಂತೆಯೂ ಕಾಣುತ್ತದೆ. ಒಟ್ಟಾರೆಯಾಗಿ ಯೋಜನೆಯ ಅನುಶ್ಟಾನದ ಅಧಿಕಾರಗಳು ರಾಜ್ಯಸರ್ಕಾರದ ಬಳಿಯೇ ಇರಬೇಕಾಗಿತ್ತು! ಹೌದಲ್ವಾ ಗುರೂ!?

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ! ನಿಮ್ಮ ದನಿಯೂ ಜೊತೆಯಾಗಲಿ...


ಒಂದು ನಾಡಿನ ವ್ಯವಸ್ಥೆಯ ಮುಖ್ಯ ಉದ್ದೇಶಗಳಲ್ಲಿ ಪ್ರಮುಖವಾದವುಗಳೆಂದರೆ, ಆ ನೆಲದ ಜನರಿಗೆ ಕಲಿಕೆಯ ಹಾಗೂ ದುಡಿಮೆಯ ಅವಕಾಶಗಳನ್ನು ಒದಗಿಸಿಕೊಡುವುದು. ಈ ದಿಕ್ಕಿನಲ್ಲಿ ನಾಡಿನ ಉದ್ದಿಮೆಗಳು, ಸರ್ಕಾರಿ, ಖಾಸಗಿ ಕಚೇರಿಗಳು ಮೊದಲಾದ ಎಲ್ಲೆಡೆ ಆ ನಾಡಿನ ಜನರಿಗೆ ದುಡಿಮೆ ಒದಗಿಸಿಕೊಡುವುದು, ಬಹು ಮುಖ್ಯವಾಗಿದೆ. ನಮ್ಮ ಕರ್ನಾಟಕದಲ್ಲಿ ಸ್ವಾತಂತ್ರ್ಯಾ ನಂತರ ಆರಂಭವಾದ ಅನೇಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕರ್ನಾಟಕದವರಲ್ಲದವರಿಗೆ ಹೆಚ್ಚಿನ ಅವಕಾಶ ದೊರೆಯುತ್ತಿದೆ ಮತ್ತು ಕನ್ನಡಿಗರ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ತೀವ್ರವಾದ ಕಳಕಳಿಗಳು ಹುಟ್ಟಿಕೊಂಡು... ಇವೆಲ್ಲಾ ಕನ್ನಡಿಗರಿಗೆ ನ್ಯಾಯ ಒದಗಬೇಕೆನ್ನುವ ಕೂಗಾಗಿ ತಿರುಗಿದವು. ಕರ್ನಾಟಕ ರಾಜ್ಯಸರ್ಕಾರವು ಈ ಹಿನ್ನೆಲೆಯಲ್ಲಿ ೧೯೮೩ರಲ್ಲಿ ನೇಮಿಸಿದ ಆಯೋಗ "ಡಾ. ಸರೋಜಿನಿ ಮಹಿಷಿ ಸಮಿತಿ".

ಡಾ ಸರೋಜಿನಿ ಮಹಿಷಿ ವರದಿ

ಈ ಸಮಿತಿಯು ಆಳವಾಗಿ ಅಧ್ಯಯನ ಮಾಡಿ, ಸರ್ಕಾರಕ್ಕೆ ೧೯೮೬ರಲ್ಲೇ ತನ್ನ ವರದಿಯನ್ನು ಸಲ್ಲಿಸಿತು. ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಶಿಫಾರಸ್ಸನ್ನು ಮಾಡಲಾಗಿತ್ತು. ಇದೀಗ ವರದಿ ಸಲ್ಲಿಕೆಯಾಗಿ ೨೬ ವರ್ಷಗಳೇ ಆಗಿಹೋದರೂ, ಅದ್ಯಾಕೋ ಏನೋ ನಮ್ಮ ಸರ್ಕಾರಗಳು ಇಂದಿಗೂ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಮುಂದಡಿಯಿಟ್ಟಿಲ್ಲ! 

ಈ ಸಂದರ್ಭದಲ್ಲಿ ಸರೋಜಿನಿ ಮಹಿಷಿ ವರದಿಯ ಜಾರಿ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಹಲವಾರು ಸಂಘಟನೆಗಳು ದನಿ ಎತ್ತಿವೆ. ಇದೀಗ ಈ ದನಿಗಳಿಗೆ ಮತ್ತೊಂದು ಹೊಸ ಕೊರಳಾಗಿರುವವರು ಶ್ರೀಮತಿ ವಿನುತಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಇವರು ನಡೆಸುತ್ತಿರುವ ನಾನಾ ಸ್ತರದ ಹೋರಾಟಗಳು ನಿಜಕ್ಕೂ ಸ್ಪೂರ್ತಿದಾಯಕ. ಈ ವರದಿ ಜಾರಿಗಾಗಿ ಇವರು ವಿಧಾನಸೌಧದ ಬಾಗಿಲಿಗೆ ಸಾಕಷ್ಟು ಎಡೆತಾಕಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದೀಗ ಜನರ ದನಿಯನ್ನು ಒಗ್ಗೂಡಿಸಲು ಒಂದು ಚಿಕ್ಕೋಲೆ (SMS) ಚಳವಳಿಯನ್ನು ಹುಟ್ಟುಹಾಕಿದ್ದಾರೆ. 

ಇಲ್ಲಿಗೆ ಚಿಕ್ಕೋಲೆ (SMS) ಕಳಿಸಿ ಈ ಹೋರಾಟವನ್ನು ಬೆಂಬಲಿಸಿ:  92430 00111

ಇಷ್ಟೇ ಅಲ್ಲದೇ, ಇದೀಗ ಮಿಂಬಲೆತಾಣದಲ್ಲಿ ಒಂದು ಹಕ್ಕೊತ್ತಾಯ ಮನವಿಯನ್ನು ಕೂಡಾ ಸಿದ್ಧಪಡಿಸಿದ್ದಾರೆ. ಮಿಂಬಲೆಯ ಈ ತಾಣದ ಕೊಂಡಿ ಇಲ್ಲಿದೆ: ಸರೋಜಿನಿ ಮಹಿಷಿ ವರದಿ ಜಾರಿಗೆ ಹಕ್ಕೊತ್ತಾಯ.

ನಾವೂ ಈ ಹೋರಾಟದಲ್ಲಿ ಪಾಲ್ಗೊಳ್ಳೋಣ. ಈ ಸಂಖ್ಯೆಗೆ ಚಿಕ್ಕೋಲೆ ಕಳಿಸುವ ಮೂಲಕವೂ, ಹಕ್ಕೊತ್ತಾಯಕ್ಕೆ ಸಹಿ ಹಾಕುವ ಮೂಲಕವೂ ನಮ್ಮ ಕೈಜೋಡಿಸೋಣ.
Related Posts with Thumbnails