Showing posts with label ಮನರಂಜನೆ. Show all posts
Showing posts with label ಮನರಂಜನೆ. Show all posts

ಸೋನಿ ಸ್ಪೋರ್ಟ್ಸ್ ಕನ್ನಡ: ಅವ್ರು ಕೊಟ್ಟಾಯ್ತು! ನಾವು ನೋಡೋದು ಬಾಕಿ ಅಷ್ಟೇ!!

 


ಹೌದೂ ಗುರೂ, ಕನ್ನಡ ಆಟೋಟದ ವಾಹಿನಿಗೆ ಸೋನಿ ಕೂಡ ಸೇರ್ಪಡೆಯಾಗಿದೆ. ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲಿ ಸಿಗಬೇಕು, "ಕೇಳಲಿ ಕನ್ನಡ - ಕಾಣಲಿ ಕನ್ನಡ" ಅನ್ನೋದನ್ನು ಸಾಧಿಸಬೇಕು ಅನ್ನೋ ಮಾತಿಗೆ ಪೂರಕವಾಗಿ ಈ ವಾಹಿನಿ ಶುರುವಾಗಿದೆ. ಸೋನಿ  ಸ್ಪೋರ್ಟ್ಸ್ ಚಾನಲ್‌ಗೆ ಅಭಿನಂದನೆಗಳು.


ಇದು ಒಂದು ದಿನದಲ್ಲಿ ಆದದ್ದಲ್ಲ!

ಕನ್ನಡದಲ್ಲಿ ಆಟೋಟದ ಚಾನಲ್ ಬರಬೇಕು ಅನ್ನೋದರ ಬೀಜ ಹುಟ್ಟಿದ್ದು, ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟರಿ ಬರಬೇಕು ಅನ್ನೋ ಮೂಲಕ. ಕ್ರಿಕೆಟ್ ಇತಿಹಾಸದಲ್ಲಿ ಐಪಿಎಲ್ ಆರಂಭವಾದದ್ದು ಒಂದು ದೊಡ್ಡ ಮೈಲಿಗಲ್ಲಿನ ಘಟನೆ. 2008ರಲ್ಲಿ ಮೊದಲ ಸೀಸನ್ ನಡೆಯಿತು. ಆಗಿಂದಲೂ ಕನ್ನಡದಲ್ಲಿ ಕಾಮೆಂಟರಿ ಬರಬೇಕು ಅನ್ನೋ ಕೂಗು ಇತ್ತು. 2017ರಲ್ಲಿ ಸೋನಿಯವರು ಐಪಿಎಲ್ ಕಾಮೆಂಟರಿಯನ್ನು ಇಂಗ್ಲೀಷ್, ತಮಿಳು, ತೆಲುಗು, ಹಿಂದೀ ಮತ್ತು ಬಂಗಾಳಿ ಭಾಷೆಗಳಲ್ಲಿ ಕಾಮೆಂಟರಿ ಆರಂಭಿಸುತ್ತೇವೆ ಎಂದಾಗ "ಮಲಗಿದ್ದ" ಕನ್ನಡಿಗರಿಗೆ ಎಚ್ಚರವಾಯಿತು. ಅಂತರ್ಜಾಲ ತಾಣದಲ್ಲಿ ಒತ್ತಾಯದ ಕೂಗು ಮೊಳಗಿತು. ಆದರೆ ಸೋನಿ ಮಣಿದಿರಲಿಲ್ಲ. ಆನಂತರವೂ ಕನ್ನಡ ಗ್ರಾಹಕ ಕೂಟದ ವತಿಯಿಂದ 2020ರಲ್ಲಿ ಒಂದು ಆನ್‌ಲೈನ್ ಪಿಟಿಷನ್ ಆರಂಭವಾಗಿತ್ತು. ಸುಮಾರು 9000ಕ್ಕೂ ಹೆಚ್ಚು ಜನರು ಅದಕ್ಕೆ ಸಹಿ ಹಾಕಿ ಸೋನಿ ಸಂಸ್ಥೆಯು ಕನ್ನಡದಲ್ಲಿ ಸ್ಪೋರ್ಟ್ಸ್ ಚಾನಲ್ ಶುರು ಮಾಡಬೇಕೆಂದು ಆಗ್ರಹಿಸಿದ್ದರು. ಕನ್ನಡದ ಸ್ಪೋರ್ಟ್ಸ್ ಚಾನಲ್‌ಗಾಗಿ ಗ್ರಾಹಕರ ಕೂಟದ ಸದಸ್ಯರು ಮುಂಬೈಗೂ ಭೇಟಿ ನೀಡಿ, ವಾಹಿನಿಗಳ ಮಾಲೀಕರಿಗೆ ಕನ್ನಡದ ಮಾರುಕಟ್ಟೆಯಲ್ಲಿನ ಬಹುದೊಡ್ಡ ಅವಕಾಶವನ್ನು ಮನವರಿಕೆ ಮಾಡಿಕೊಟ್ಟಿದ್ದರು.


ಸ್ಟಾರ್ ಸ್ಪೋರ್ಟ್ಸ್ ಕನ್ನಡ

2018ರಲ್ಲಿ ಸ್ಟಾರ್ ಸ್ಪೋರ್ಟ್ಸ್‌ನವರು ಐಪಿಎಲ್ ಕಾಮೆಂಟರಿ ಪ್ರಸಾರವನ್ನು ವಹಿಸಿಕೊಂಡ ನಂತರ ಆ ವರ್ಷವೇ ಭಾರತೀಯ ಭಾಷೆಗಳಲ್ಲಿ ಕಾಮೆಂಟರಿ ನೀಡುವ ಪ್ರಯೋಗ ಮಾಡಿದರು. 2019ರಲ್ಲಿ ಮೊದಲನೆಯ ಕನ್ನಡದ ಸ್ಪೋರ್ಟ್ಸ್ ಚಾನಲ್ ಅನ್ನು ಶುರು ಮಾಡಿದರು. ಇದಕ್ಕಾಗೇ ಬಕಪಕ್ಷಿಗಳಂತೆ ಕಾಯುತ್ತಿದ್ದ ಕನ್ನಡ ಪ್ರೇಕ್ಷಕರು ಮುಗಿಬಿದ್ದರು. ಕನ್ನಡದ ವಾಹಿನಿ ಮುಂಚೂಣಿ ಚಾನಲ್‌ಗಳಲ್ಲಿ ಒಂದಾಯಿತು.  2019ರಿಂದ ಪ್ರೋ-ಕಬಡ್ಡಿ, ಐಪಿಎಲ್, ವಿಶ್ವಕಪ್... ಹೀಗೆ ನಾನಾ ಆಟೋಟಗಳು ಕನ್ನಡದಲ್ಲಿ ಪ್ರ್ವಸಾರ ಕಂಡವು. 2025ರಲ್ಲಿ ಸ್ಟಾರ್ ಸ್ಪೋರ್ಟ್ಸ್ ತನ್ನ ಎರಡನೆಯ ಕನ್ನಡ ಸ್ಪೋರ್ಟ್ಸ್ ಆರಂಭಿಸಿತು. 


ಸೋನಿ ಸ್ಪೋರ್ಟ್ಸ್ ಚಾನಲ್ 

ಇದೀಗ 2026ರ ಏಪ್ರಿಲ್ ತಿಂಗಳಿನಿಂದ ಕನ್ನಡದಲ್ಲಿ ತನ್ನ ಮೊದಲನೆಯ ಸ್ಪೋರ್ಟ್ಸ್ ಚಾನಲ್ ಅನ್ನು ಸೋನಿ ಕೂಡ ಆರಂಭಿಸಿತು. ಇಂಥದ್ದೊಂದು ಬೆಳವಣಿಗೆ ಕನ್ನಡ ನಾಡಿನ ಒಳಿತಿನ ದೃಷ್ಟಿಯಿಂದ ಒಳ್ಳೆಯದು. ಇನ್ನು ಕನ್ನಡದಲ್ಲೇ ಆಟೋಟಗಳನ್ನು ನೋಡಿ, ಕನ್ನಡದ ಚಾನಲ್‌ಗಳನ್ನು ಬೆಳೆಸುವ ಹೊಣೆಗಾರಿಕೆ ನಾಡಿನ ಎಲ್ಲ ಕನ್ನಡಿಗರದ್ದು! 

ಇನ್ನೇನು, ಇನ್ಮೇಲೆ ಕನ್ನಡದಲ್ಲೇ ಎಲ್ಲಾ ಆಟೋಟಗಳನ್ನು ನೋಡೋಣ. ಇದು ಸಾಮಾನ್ಯ ಕನ್ನಡಿಗರು ಕನ್ನಡಕ್ಕೆ  ನೀಡುವ ದೊಡ್ಇಡ ಕೊಡುಗೆ ಆಗಿದೆ ಅಂದರೆ, ಅದರಲ್ಲಿ ತಪ್ಪೇನಿಲ್ಲಾ ಗುರೂ!! 


ಲೂಸಿಯಾ: ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ.

(ಕೃಪೆ: ಲೂಸಿಯಾ ಮಿಂದಾಣ)
"ಈ ಹೊಸತನದ ಪ್ರಯೋಗವನ್ನು ಮೆಚ್ಚದವರು ಯಾರಾದರೂ ಇದ್ದೀರಾ?" ಎಂದು ಟಾರ್ಚ್ ಬಿಟ್ಕೊಂಡು ನೋಡ್ತಿರೋ ಹಾಗಿರೋ ಈ ಜಾಹಿರಾತು "ಲೂಸಿಯಾ" ಚಿತ್ರತಂಡದ ಕ್ರಿಯಾಶೀಲತೆಗೆ, ಕನ್ನಡ ಚಿತ್ರರಂಗದಲ್ಲಿನ್ನೂ ಹೊಸ ಹೊಸ ಸೃಜನಶೀಲ ಪ್ರಯತ್ನಗಳು ಆಗುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಇದಷ್ಟೇ ಆಗಿಲ್ಲದೆ ಕನ್ನಡದ ನುಡಿ ಸಾಧ್ಯತೆಯ ಪಟ್ಟಿಗೆ "ನೋಡುಗರ ಹೂಡಿಕೆಯ ಸಿನಿಮಾ" ಎನ್ನುವ ಹೊಸದೊಂದು ಸಾಲನ್ನು ಸೇರಿಸುತ್ತಿದೆ.

"ಲೂಸಿಯಾ" ಹೆಸರಿನ ಹೊಸ ಸಿನಿಮಾವೊಂದು ಒಂದೆರಡು ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು ನಿಧಾನವಾಗಿ ಪ್ರಚಾರ ಕಳೆಗಟ್ಟತೊಡಗಿದೆ. ಲೂಸಿಯ ಸಿನಿಮಾಗಿಂತಲೂ ನಮಗೆ ಮಹತ್ವದ್ದಾಗಿ ಕಾಣುತ್ತಿರುವುದು ಆ ಸಿನಿಮಾ ತಯಾರಾದ ಬಗೆ. ನೋಡುಗರೇ ಹೂಡಿಕೆದಾರರಾಗುವ ವಿಭಿನ್ನವಾದ ಅವಕಾಶದಿಂದಾಗಿ "ಆಡಿಯನ್ಸ್ ಫಿಲ್ಮ್" ಎಂಬ ಹೊಸ ವಿಧಾನವೊಂದು ನಮ್ಮ ನಾಡಲ್ಲಿ ಚಿಗುರುತ್ತಿರುವುದು ಎಲ್ಲರ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಈ ಹೊಸ ಬೆಳವಣಿಗೆ ಹೊಸತನದಿಂದ ಕೂಡಿದ್ದು ಹೊಸದೊಂದು ಮಾದರಿಯಾಗುವ ಲಕ್ಷಣ ಹೊಂದಿದೆ.

ಹೊಸತನದ ಪ್ರಯೋಗ

ಸಿನಿಮಾವೊಂದಕ್ಕೆ ದೊಡ್ಡಮೊತ್ತದ ಬಂಡವಾಳ ಬೇಕೆನ್ನುವುದು ಗೊತ್ತಿರುವ ಸಂಗತಿಯೇ! ಈ ಬಂಡವಾಳವನ್ನು ತನ್ನ ಹಿಂದಿನ ಸಿನಿಮಾ ಹುಟ್ಟುಹಾಕಿದ ಭರವಸೆಯನ್ನು ಮುಂದೊಡ್ಡಿ ನೋಡುಗರೇ ತೊಡಗಿಸುವಂತೆ ಮಾಡಿದ ಈ ಬಗೆ ನಾಡಿಗೆ ಹೊಸದು. ಇದೇ ಕಾರಣಕ್ಕಾಗಿ ಲೂಸಿಯಾ ತಂಡಕ್ಕೆ ಪ್ರಶಸ್ತಿಯೂ ಬಂದದ್ದು, ಈ ಪ್ರಯತ್ನಕ್ಕೊಂದು ದೊಡ್ಡಬಲ ಬಂದಂತಾಗಿದೆ. ಇಂಥದ್ದೊಂದು ಪ್ರಯತ್ನದ ಹಿಂದೆ ದೊಡ್ಡದಾದ ಪ್ರಯೋಗಶೀಲತೆಯಿದೆ. ಮೇಲ್ನೋಟಕ್ಕೆ ಬಹಳ ಸುಲಭವಾದ ಪಟ್ಟಿನಂತೆ ಕಾಣುವ ಈ ಪ್ರಯೋಗವು ಬಹಳ ಎದೆಗಾರಿಕೆಯಿಂದ ಕೂಡಿರುವುದಾಗಿದೆ. ಈ ರೀತಿಯ ಹೊಸಪ್ರಯತ್ನಗಳು ಗೆಲ್ಲುವುದಾದಲ್ಲಿ ಇಂತಹ ಇನ್ನಷ್ಟು ಪ್ರಯೋಗಗಳು ನಮ್ಮಲ್ಲಾಗುತ್ತದೆ.

ವಾಸ್ತವವಾಗಿ ಸಿನಿಮಾವೊಂದನ್ನು ಹೀಗೆ ನೋಡುಗರೇ ಒಂದಷ್ಟು ಮಂದಿ ಹಣ ತೊಡಗಿಸಿ ನಿರ್ಮಾಣ ಮಾಡಬೇಕೆಂದರೆ ಅದರ ನಿರ್ಮಾಣದ ಬಗ್ಗೆ ಗಟ್ಟಿಯಾದ ನಂಬಿಕೆ ಇರಬೇಕಾಗುತ್ತದೆ. ಇಂತಹ ನಂಬಿಕೆ ಒಂದೇ ಬಾರಿಗೇ/ ಮೊದಲಬಾರಿಗೇ ಒಬ್ಬ ನಿರ್ದೇಶಕರ ಮೇಲೆ ಹುಟ್ಟುವುದು ಕಷ್ಟ! ಹಾಗಾಗಿ ಯಾವುದೇ ನಿರ್ದೇಶಕರಾದರೂ ಕೂಡಾ ಜನರಿಗೆ ತಮ್ಮ ಹಿಂದಿನ ಯಶಸ್ಸನ್ನು ತೋರಿಸಿ, ತಮ್ಮಲ್ಲಿರುವ ಪ್ರತಿಭೆಯ ಬಗ್ಗೆ ನಂಬಿಕೆ ಮೂಡಿಸಿಯೇ ಇಂಥಾ ಹೂಡಿಕೆ ಗಳಿಸಿಕೊಳ್ಳಲು ಸಾಧ್ಯ. ಈ ಕಾರಣದಿಂದಲೇ ಕನ್ನಡಚಿತ್ರರಂಗದಲ್ಲಿ ಇನ್ನಷ್ಟು ಮತ್ತಷ್ಟು ಹೊಸ ಪ್ರತಿಭೆಗಳು, ಒಳ್ಳೆಯ ಚಿತ್ರಗಳು ಮೂಡಿಬರಲಿವೆ. ಈ ಕಾರಣಕ್ಕಾಗಿ ಲೂಸಿಯಾ ಚಿತ್ರ ಗೆಲ್ಲಬೇಕು. ಹಾಗೆ ಗೆಲ್ಲಬೇಕೆಂದರೆ, ಅದಾಗುವುದು ನಾವೂ ನೀವು ಮನಸ್ಸು ಮಾಡಿದರೆ ಮಾತ್ರವೇ!

ಕೊನೆಹನಿ: ಈ ಚಿತ್ರದ ಹಂಚಿಕೆಯನ್ನೂ ನೋಡುಗರೇ ಮಾಡಬಹುದೆನ್ನುವ ಮತ್ತೊಂದು ಪ್ರಯೋಗವನ್ನೂ ಲೂಸಿಯಾ ತಂಡ ಮಾಡುತ್ತಿದೆ. ನಿಮಗೆ ಮನಸ್ಸಿದ್ದಲ್ಲಿ ಇದೇ ಆಗಸ್ಟ್ ೧೫ಕ್ಕೆ ಮೊದಲು ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ... ಪವನ್ ಕುಮಾರ್ ತಂಡದೊಡನೆ ಕೈಜೋಡಿಸಿ.  http://www.hometalkies.com/lucia/pre-order/ 

"ಮಾಲ್ಗುಡಿ ಡೇಸ್" ಕನ್ನಡದಲ್ಲಿ ಬರಲಿ - ಮನವಿ ಸಲ್ಲಿಕೆ



ಇತ್ತೀಚಿಗೆ ಜನಶ್ರೀ ಸುದ್ದಿವಾಹಿನಿಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದ ಶ್ರೀ ಶಂಕರ್‌ನಾಗ್‌ರವರು ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿರುವ ಸುದ್ದಿಯನ್ನು ಜಾಹೀರಾತುಗಳ ಮೂಲಕ ಪ್ರಸಾರ ಮಾಡಲಾಯಿತು. ಈ ಧಾರಾವಾಹಿಯನ್ನು ಮೂಲದಲ್ಲಿ ಹಿಂದೀ/ ಇಂಗ್ಲೀಶ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ಈಗ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕನ್ನಡದ ಅಡಿಬರಹಗಳೊಂದಿಗೆ (SubTitle) ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬಹುತೇಕ ಕನ್ನಡದ ನಟರು, ತಾಂತ್ರಿಕ ವರ್ಗ ಹೊಂದಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲಾಗಿರುವ ಈ ಧಾರಾವಾಹಿಯನ್ನು ಕನ್ನಡಿಗರಿಗೆ ತಲುಪಿಸುವ ವಾಹಿನಿಯ ಪ್ರಯತ್ನವು ಅಭಿನಂದನಾರ್ಹವಾಗಿದೆ. “ಮಾಲ್ಗುಡಿ ಡೇಸ್” ಧಾರಾವಾಹಿಯನ್ನು ಅಡಿಬರಹಗಳೊಂದಿಗೆ ಹಿಂದಿಯಲ್ಲಿ ಪ್ರಸಾರ ಮಾಡುವ ಬದಲು ಕನ್ನಡದಲ್ಲಿ (ಡಬ್ ಮಾಡಿ) ಪ್ರಸಾರ ಮಾಡಬೇಕೆಂಬ ಪ್ರೇಕ್ಷಕರ ಅನಿಸಿಕೆಯನ್ನು ಜನಶ್ರೀಯವರಿಗೆ ತಲುಪಿಸಲು ಒಂದು ಮಿಂಬಲೆ ಮನವಿ (ಆನ್ಲೈನ್ ಪೆಟಿಷನ್)ಯನ್ನು ಆರಂಭಿಸಲಾಯಿತು.

ಮನವಿಯ ಸಾರ

ಶಂಕರ್‌ನಾಗ್‌ರವರ ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಯು ಕನ್ನಡದಲ್ಲಿಯೇ ಪ್ರಸಾರವಾಗಬೇಕೆಂದೂ, ಇದು ಕನ್ನಡದಲ್ಲಿಯೇ ಮನರಂಜನೆಯನ್ನು ಪಡೆದುಕೊಳ್ಳುವ ಕನ್ನಡಿಗರ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತಿರುವ ಕ್ರಮವಾಗಿದ್ದು, ಪರಭಾಷೆಯಲ್ಲಿ ತಯಾರಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಇತರೆ ಭಾರತೀಯ ಪ್ರಜೆಗಳಂತೆಯೇ, ನಮ್ಮ ತಾಯ್ನುಡಿಯಲ್ಲೇ ನೋಡುವ ಅವಕಾಶ ಮಾಡಿಕೊಡಬೇಕೆಂದೂ ಕೋರುತ್ತಾ ಮಾಲ್ಗುಡಿ ಡೇಸ್ ಕನ್ನಡದಲ್ಲೇ ಬರಬೇಕೆಂದು ಮನವಿ ನೀಡಲಾಯಿತು. ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯವರಿಗೆ ಮನವಿ ಮಾಡಲಾಯಿತು.

ಈ ಮನವಿಗೆ ಸಹಿ ಹಾಕುವ ಪ್ರಕ್ರಿಯೆಯನ್ನು http://www.change.org/petitions/janashree-news-telecast-kannada-version-of-malgudi-days ಮಿಂಬಲೆಯಲ್ಲಿ ಸೋಮವಾರ 11.06.2012ದಂದು ಶುರುಮಾಡಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು, ಕೇವಲ 72 ಗಂಟೆಗಳಲ್ಲೇ 830 ಜನರು ಸಹಿ ಹಾಕಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ಈಗಲೂ ನಡೆಯುತ್ತಿದ್ದು ಕನ್ನಡದಲ್ಲಿಯೇ “ಮಾಲ್ಗುಡಿ ಡೇಸ್” ಕಾರ್ಯಕ್ರಮವನ್ನು ನೋಡುವ ತೀವ್ರವಾದ ಹಂಬಲವು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಭಾರತದ ನಾನಾ ಊರುಗಳಲ್ಲಿರುವವರಷ್ಟೇ ಅಲ್ಲದೆ ವಿಶ್ವದ ಮೂಲೆಮೂಲೆಗಳ ಕನ್ನಡಿಗರು ಆನ್‌ಲೈನ್ ಪಿಟಿಷನ್ನಿಗೆ ಸಹಿ ಹಾಕುವ ಮೂಲಕ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾಹಿನಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಇಂದು ಅವರಿಗೆ 830 ಸಹಿಗಳ ಸದರಿ ಮನವಿಯನ್ನು ತಲುಪಿಸಿ, “ಮಾಲ್ಗುಡಿ ಡೇಸ್” ಧಾರಾವಾಹಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಸಾರ ಮಾಡಬೇಕೆಂದೂ ತನ್ಮೂಲಕ ಕನ್ನಡಿಗರಿಗೆ ಕಳೆದ ನಾಲ್ಕು-ಐದು ದಶಕಗಳಿಂದ ನಿರಾಕರಿಸಲಾಗಿರುವ “ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕ”ನ್ನು ದಕ್ಕಿಸಿಕೊಟ್ಟ ಐತಿಹಾಸಿಕ ಗೌರವಕ್ಕೆ ಪಾತ್ರರಾಗಬೇಕೆಂದು ಕೋರಲಾಯಿತು.

ಭಾರತೀಯ ಸ್ಪರ್ಧಾ ಆಯೋಗ (CCI)ದ ತೀರ್ಪು: ಮುಂದೇನು?

"ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗಿರೋದು ಕನ್ನಡ ಚಿತ್ರರಂಗವೇ! ತನ್ನ ಸ್ವಾರ್ಥದಿಂದಾಗಿ, ತನ್ನ ಸದ್ಯದ ಲಾಭಕ್ಕಾಗಿ ಇಡೀ ಚಿತ್ರರಂಗದ ಜೊತೆಜೊತೆಗೆ ಕನ್ನಡನಾಡನ್ನೇ ಬಲಿಕೊಡಲು ಮುಂದಾಗಿರೋ ಚಿತ್ರರಂಗದ ಕೆಲವು ಜನರಿಂದಾಗಿಯೇ ಈ ದುಃಸ್ಥಿತಿ ಬಂದಿದೆ!!"

CCI ಅಂದರೆ, ಭಾರತೀಯ ಸ್ಪರ್ಧಾ ಆಯೋಗವು ಮೊನ್ನೆ ಮೊನ್ನೆ "ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ಏಳು ವಾರಗಳ ಅಂತರ, ಇಂತಿಷ್ಟೇ ಪ್ರತಿಗಳ ಮಿತಿ ಹೇರಿರುವುದು ತಪ್ಪು, ಇನ್ಮುಂದೆ ಇವೆಲ್ಲಾ ನಡೆಯಲ್ಲಾ, ಈಗ ನೀವು ದಂಡ ಕಟ್ಟಿ" ಎಂದು ನೀಡಿದ ತೀರ್ಪನ್ನು ನೋಡಿದಾಗ ಇಂಥದ್ದೊಂದು ಭಾವನೆ ನಿಮ್ಮಲ್ಲೂ ಮೂಡಿದ್ದರೆ ಆಶ್ಚರ್ಯವಿಲ್ಲ. ಆದರೆ ಇಂಥಾ ತೀರ್ಪಿಗೆ ಕನ್ನಡ ಚಿತ್ರರಂಗದ ಹುಂಬತನದ, ಅವೈಜ್ಞಾನಿಕವಾದ, ಅಸಂವಿಧಾನಿಕವಾದ ನಿಲುವುಗಳು ಹೇಗೆ ಕಾರಣವೋ, ಹಾಗೇ ಭಾರತದ ಹುಳುಕಿನ ಭಾಷಾನೀತಿಯೂ, ಈ ನೀತಿಯ ಹುನ್ನಾರವನ್ನು ಅರಿತೋ ಅರಿಯದೆಯೋ ತೆಪ್ಪಗಿರುವ ಕರ್ನಾಟಕ ರಾಜ್ಯಸರ್ಕಾರವೂ ಕಾರಣ ಎಂದರೆ ತಪ್ಪಾಗಲಾರದು. ಹೇಗೆ ಅಂತಾ ಸ್ವಲ್ಪ ನೋಡೋಣ ಬನ್ನಿ!
ಸಮಸ್ಯೆ ಏನು?


ಕರ್ನಾಟಕದಲ್ಲಿ ಸುಮಾರು ೬೦೦ ಚಿತ್ರಮಂದಿರಗಳಿವೆ. ಈಚಿನ ದಿನಗಳಲ್ಲಿ ಯಾವುದೇ ಚಿತ್ರ ಬಿಡುಗಡೆಯಾದರೆ ಒಟ್ಟೊಟ್ಟಿಗೆ ಹೆಚ್ಚೆಚ್ಚು ತೆರೆಗಳಲ್ಲಿ ಬಿಡುಗಡೆ ಮಾಡುವ ಪದ್ದತಿ ಶುರುವಾಗಿದೆ. ಪರಭಾಷಾ ಚಿತ್ರಗಳು ಬಿಡುಗಡೆಯಾಗಬೇಕಾದರೆ ಒಟ್ಟಿಗೆ ಇನ್ನೂರು ಮುನ್ನೂರು ತೆರೆಗಳನ್ನು ಬಳಸಲು ಶುರುಮಾಡಿದರೆ ಆಗ ಕನ್ನಡ ಚಿತ್ರಗಳಿಗೆ ತೆರೆಗಳೇ ಸಿಗುವುದಿಲ್ಲ ಎನ್ನುವುದು ಸಮಸ್ಯೆ. ಹಬ್ಬಗಳ ಸಮಯದಲ್ಲಂತೂ ಹೆಚ್ಚು ಜನ ಸಿನಿಮಾ ನೋಡ್ತಾರೆ ಎಂದು ಎಲ್ಲರೂ ಒಟ್ಟೊಟ್ಟಿಗೆ ಬಿಡುಗಡೆ ಮಾಡಲು ಮುಂದಾಗುತ್ತಾರೆ. ಹಾಗೆ ಕನ್ನಡ ಸಿನಿಮಾಗಳೇ ಸಾಲುಸಾಲಾಗಿ ನಿಂತಿರುವಾಗ ಹಿಂದೀದೋ, ಮತ್ತೊಂದು ಭಾಷೇದೋ ಚಿತ್ರಗಳು ಮುನ್ನೂರು ನಾನ್ನೂರು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡರೆ ಏನು ಮಾಡೋದು? ಹೌದು! ಬಿಡುಗಡೆ ಎಷ್ಟ್ರಲ್ಲೇ ಆಗಲಿ, ಚೆನ್ನಾಗಿಲ್ಲದಿದ್ದರೆ ಒಂದೇ ವಾರಕ್ಕೆ ಎತ್ತಂಗಡಿಯೂ ಆಗಲಿ.. ಆದರೆ ಹಬ್ಬದಂಥಾ ಪ್ರಮುಖ ಸಂದರ್ಭದಲ್ಲಿ ನಮ್ಮ ಚಿತ್ರಗಳಿಗೆ ಟಾಕೀಸು ಸಿಗದೆ ಹೋಗುತ್ತದಲ್ಲಾ ಇದಕ್ಕೇನು ಮಾಡೋದು? ಇಂತಹ ಕಾರಣದಿಂದಲೇ ಪರಭಾಷೆಯ ಚಿತ್ರಗಳಿಗೆ ಚಿತ್ರಮಂದಿರಗಳ ಸಂಖ್ಯೇನ ಮಿತಿಗೊಳಿಸೋ ಪ್ರಯತ್ನಾನ ಚಿತ್ರರಂಗದವರು ಮಾಡಿದ್ದು ಅನ್ನಿಸುತ್ತದೆ. ಇದೇ ಕೆಲಸಾನ ರಾಜ್ಯಸರ್ಕಾರವೇ ಮಾಡಿದ್ದಲ್ಲಿ ಸಮಸ್ಯೇನೇ ಇರ್ತಿರಲಿಲ್ಲವೇನೋ? ಆಗ ಕೇಸು ಸರ್ಕಾರದ ಮೇಲೆ ಬೀಳ್ತಿತ್ತು ಅನ್ನೋದಾದರೆ ಸರ್ಕಾರ ತನ್ನ ಬತ್ತಳಿಕೆಯಲ್ಲಿ ಇರೋ ನೂರಾರು ಅಸ್ತ್ರಗಳನ್ನು ಬಳಸಿ ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿತ್ತು!

ಸ್ಪರ್ಧಾ ಆಯೋಗದ ತೀರ್ಪು

ಕೆಲವರ್ಷಗಳ ಹಿಂದೆ ಕರ್ನಾಟಕದಲ್ಲಿ ರಿಲೆಯನ್ಸ್ ಸಂಸ್ಥೆಯವರು ಕೈಟ್ ಎನ್ನುವ ಹಿಂದೀ ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಹಾಕಿರುವ ನಿಯಮಗಳನ್ನು ಲೆಕ್ಕಕ್ಕಿಡದೆ ತಮಗೆಷ್ಟು ಕಡೆ ಆಗುತ್ತೋ ಅಷ್ಟೂ ಕಡೆ ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ಆಗ ಕನ್ನಡ ಚಿತ್ರರಂಗದೋರು ಭಾರೀ ಪ್ರತಿಭಟನೆ ಮಾಡಿದ್ದರಿಂದಾಗಿ ಅದಕ್ಕೆ ಮಣಿದವರಂತೆ ಮಾಡಿ ಹಿಂದಡಿಯಿಟ್ಟರು. ನಂತರ ಭಾರತೀಯ ಸ್ಪರ್ಧಾ ಆಯೋಗ (CCI)ದ ಮುಂದೆ ಒಂದು ದೂರು ಕೊಟ್ಟು ‘ಹೀಗೆ ಕರ್ನಾಟಕದ ಚಿತ್ರರಂಗದವರು ಸಂಘ ಮಾಡಿಕೊಂಡು ಅಸಂವಿಧಾನಿಕ ನಿಯಮಗಳನ್ನು ಹೇರಿ ನಮ್ಮನ್ನು ಸ್ಪರ್ಧೆ ಮಾಡದಂತೆ ತಡೆದು ನಷ್ಟಕ್ಕೆ ಕಾರಣರಾಗಿದ್ದಾರೆ’ ಎಂದರು. ಈ ದೂರನ್ನು ಸಲ್ಲಿಸಿದವರು ಬರೀ ರಿಲಯನ್ಸ್‍ನವರು ಮಾತ್ರವಲ್ಲ. ಇವರೊಟ್ಟಿಗೆ ನಂತರದಲ್ಲಿ ಯುಟಿವಿ  ಸಾಫ಼್ಟ್‌ವೇರ್ ಕಮ್ಯುನಿಕೇಶನ್ಸ್, ಎರೋಸ್ ಇಂಟರ್ ನ್ಯಾಶನಲ್ ಮತ್ತು ಫಿಕ್ಕಿ ಮಲ್ಟಿಫ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾದವರು ಸೇರಿಕೊಂಡರು. ದೂರಿನ ಮುಖ್ಯ ಅಂಶ ಏನೆಂದರೆ ಕೆಲವು ಸಂಘ ಸಂಸ್ಥೆಗಳು ಸೇರಿಕೊಂಡು ನ್ಯಾಯವಾಗಿ ತಾವು ವ್ಯಾಪಾರ ಮಾಡಲು ಬಿಡುತ್ತಿಲ್ಲ, ಸದಸ್ಯತ್ವ ತೆಗೆದುಕೊಳ್ಳದೆ ವ್ಯವಹರಿಸುವಂತಿಲ್ಲ ಎಂಬ ಕಟ್ಟಳೆ ಮಾಡುತ್ತಿವೆ ಎಂಬುದಾಗಿದೆ. ಇದಕ್ಕೆ ಸ್ಪಂದಿಸಿರುವ ಸಿಸಿಐ, ಪ್ರಾದೇಶಿಕ ಚಿತ್ರರಂಗಗಳ ಮೇಲೆ ಗದೆ ಬೀಸಿದೆ. ತೀರ್ಪಿನ ಅನ್ವಯ ಇನ್ಮುಂದೆ ಹೀಗೆಲ್ಲ ಮಾಡುವಂತಿಲ್ಲ. "ಇದುವರೆಗೆ ನಡೆದುಕೊಂಡ ರೀತಿ ತಪ್ಪು. ಪರಭಾಷಾ ಚಿತ್ರಗಳನ್ನು ಯಾವುದೇ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಹಕ್ಕು, ಯಾವುದೇ ಸಂಘ ಸಂಸ್ಥೆಯ ಸದಸ್ಯರಾಗದೆಯೂ ವ್ಯಾಪಾರ ಮಾಡುವ ಹಕ್ಕು ಇದೆ. ಯಾವುದೇ ಭಾಷೆಯ ಚಿತ್ರಗಳನ್ನು ಎಷ್ಟಾದರೂ ಕೇಂದ್ರಗಳಲ್ಲಿ ಬಿಡುಗಡೆ ಮಾಡಬಹುದು" ಎಂದಿದೆ ಈ ತೀರ್ಪು.

ತೀರ್ಪಿನ ತೊಡಕು

ಈ ತೀರ್ಪನ್ನು ನೋಡಿದಾಗ ಚಿತ್ರರಂಗದವರ ನಡವಳಿಕೆ ಸರಿಯಿಲ್ಲವೆಂದೂ, ಸ್ಪರ್ಧೆಗೆ ತೆರೆದುಕೊಳ್ಳುವುದು ಸರಿಯಾದುದೆಂದೂ ಅನ್ನಿಸಬಹುದು. ಆದರೆ ವಾಸ್ತವವಾಗಿ ಇದು ಒಂದು ಭಾಷಾ ಜನಾಂಗದ ಮೇಲೆ ಎಸಗಲಾಗುತ್ತಿರುವ ಅನ್ಯಾಯದ ಕ್ರಮ ಎನ್ನುವುದನ್ನು ನಾವು ಅರಿಯಬಹುದಾಗಿದೆ. ಈ ತೀರ್ಪಿನಿಂದಾಗಿ ನಾಳೆ ಕನ್ನಡನಾಡಿನಲ್ಲಿ ಕನ್ನಡ ಚಿತ್ರಗಳು  ಮೊದಲು ಚಿತ್ರಮಂದಿರಗಳಿಲ್ಲದೆ ಸೊರಗಬೇಕಾಗುತ್ತದೆ, ನಂತರ ಚಿತ್ರ ತಯಾರಿಸುವರೂ, ನೋಡುವವರೂ ಇಲ್ಲದೆ ಶಾಶ್ವತವಾಗಿ ಕಣ್ಮುಚ್ಚಬೇಕಾಗುತ್ತದೆ. ಹಿಂದೀ, ತೆಲುಗು, ತಮಿಳು ಮೊದಲಾದ ಪರಭಾಷಾ ಚಿತ್ರಗಳಿಗೆ ಕರ್ನಾಟಕದ ಮಾರುಕಟ್ಟೆ ಮೊದಲ ಮಾರುಕಟ್ಟೆಯಲ್ಲ. ಅವುಗಳಿಗೆ ಇದು ಹೆಚ್ಚುವರಿ ಮಾರುಕಟ್ಟೆ ಮಾತ್ರಾ. ದಾರ ಕಟ್ಟಿ ಬೆಟ್ಟ ಎಳೆದು ಬಂದರೆ ಬೆಟ್ಟ ಹೋದರೆ ದಾರ ಎನ್ನುವಂತೆ ಇಲ್ಲಿನ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಗಳು ಬಿಡುಗಡೆಯಾಗಲು ಅತಿ ಕಡಿಮೆ ದುಡ್ಡಿಗೆ ವಿತರಣೆಯ ಹಕ್ಕುಗಳನ್ನು ಇವರು ನೀಡಬಲ್ಲವರಾಗುತ್ತಾರೆ. ಅದೇ ಹೊತ್ತಲ್ಲಿ ಖಾಲಿ ಚಿತ್ರಮಂದಿರಗಳನ್ನೂ ದುಬಾರಿ ಬಾಡಿಗೆ ಕೊಟ್ಟು ಉಳಿಸಿಕೊಳ್ಳಬಲ್ಲವರಾಗಿರುತ್ತಾರೆ. ಹಾಗಾಗಿ ಇಲ್ಲೊಂದು ನ್ಯಾಯಯುತ ಸ್ಪರ್ಧೆಯೇ ಇಲ್ಲವಾಗುತ್ತದೆ. ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗ ಕಣ್ಣು ಮುಚ್ಚಬಹುದಾಗಿದೆ. (ತಮಾಶೆಯೆಂದರೆ ಸಿಸಿಐ ನೇರವಾಗಿ ಇಲ್ಲಿ  ಎದುರಾಳಿಗಳನ್ನಾಗಿಸಿರುವುದು ಪ್ರಾದೇಶಿಕ ಚಿತ್ರಗಳು ಮತ್ತು ರಾಷ್ಟ್ರೀಯ ಚಿತ್ರಗಳನ್ನಂತೆ! ವರದಿಯಲ್ಲಿ ಹೀಗೆ ಬರೆಯುವ ಮೂಲಕ ಪತ್ರಿಕೆ, ಹಿಂದೀಯೊಂದೇ ರಾಷ್ಟ್ರೀಯ ಎನ್ನುವ ತೀರ್ಪನ್ನು ನೀಡಿದೆ!) ಮೂಲತಃ ಸಿಸಿಐ ನೀಡಿರುವ ತೀರ್ಪಿನಿಂದ ಎಲ್ಲಾ ರಾಜ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕಡೆಗೆ ಲಾಭವಾಗುವುದು ಹಿಂದೀ ಚಿತ್ರಗಳಿಗೇ ಆಗಿದೆ. ಇದಕ್ಕೆ ಹೊಣೆ ಮೊದಲೇ ಹೇಳಿದ ಹಾಗೆ ಚಿತ್ರರಂಗ, ಕೇಂದ್ರ ಮತ್ತು ರಾಜ್ಯಸರ್ಕಾರಗಳೇ ಆಗಿವೆ.

ಕೇಂದ್ರಸರ್ಕಾರ ಮತ್ತು ಸ್ಪರ್ಧೆ!

ಭಾರತದ ಕೇಂದ್ರಸರ್ಕಾರಕ್ಕೆ ಭಾರತೀಯರೆಲ್ಲಾ ಒಂದೇ. ಹಾಗಾಗಿ ಹಿಂದೀ ಸಿನಿಮಾ ಕನ್ನಡ ಚಿತ್ರರಂಗವನ್ನು ಕೊಂದು ಹಾಕಿದರೂ ಅದಕ್ಕೆ ಪರವಾಗಿಲ್ಲ.. ಏಕೆಂದರೆ ಹಿಂದೀ ಈ ದೇಶದ ಬಹುಜನರ ಭಾಷೆ ಎನ್ನುವುದು ಅದರ ಲೆಕ್ಕಾಚಾರವಿರಬಹುದು. ನೀವೇ ಗಮನಿಸಿ ನೋಡಿ... ಈ ದೇಶದಲ್ಲಿ ಗ್ರಾಹಕ ಸೇವೆ ಕಾಯ್ದೆಗಳಲ್ಲಿ ಭಾಷಾ ಆಯಾಮವೇ ಇಲ್ಲ! ಕನ್ನಡನಾಡಿನಲ್ಲಿ ಕನ್ನಡದಲ್ಲಿ ಎಲ್ಲಾ ಸೇವೆಗಳೂ ಸಿಗಬೇಕೆನ್ನುವ ಒತ್ತಾಸೆಯೇ ಕೇಂದ್ರಕ್ಕಿಲ್ಲ. ಅದೇನಿದ್ದರೂ ‘ಭಾರತದಲ್ಲಿ ಬಹುಜನರಾಡುವ ಭಾಷೆಯಾದ ಹಿಂದೀಯಲ್ಲಿ ಎಲ್ಲಾ ಸೂಚನೆಗಳು ಇರತಕ್ಕದ್ದು’ ಎಂದು ಕಾನೂನು ಮಾಡಬಲ್ಲದು ಅಷ್ಟೇ. ಹಿಂದೀಯೇತರ ಭಾಷೆಗಳ ಬಗ್ಗೆ ಇಂತಹ ಕಿಂಚಿತ್ತು ಸಂವೇದನೆಯನ್ನೂ ಹೊಂದಿರದ ಕೇಂದ್ರಸರ್ಕಾರ, ಅರವತ್ತು ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಮಾತ್ರಾ ಹಿಂದಿಯನ್ನು ಭಾರತೀಯರಿಗೆಲ್ಲಾ ಒಪ್ಪಿಸುವ ಕೆಲಸವನ್ನು ಮಾತ್ರವೇ. ಸಮಾಜವಾದದ ಹೆಸರಲ್ಲಿ ಸಮೂಹ ಮಾಧ್ಯಮಗಳನ್ನು ತಾನೇ ನಡೆಸುತ್ತಾ ದೂರದರ್ಶನ, ಆಕಾಶವಾಣಿಗಳ ಮೂಲಕ ಮಾಡಿದ್ದು ಹಿಂದೀ ಪ್ರಚಾರವನ್ನೇ. ಇಂತಹ ನಿಲುವಿನ ಕೇಂದ್ರಸರ್ಕಾರಕ್ಕೆ ಇನ್ನೆಂಥಾ ಮನಸ್ಥಿತಿ ಇದ್ದೀತು? ಫೇರ್ ಕಾಂಪಿಟೇಶನ್ ಪರವಾಗಿ ತೀರ್ಪು ನೀಡುವೆ ಎನ್ನುವ ಸಂಸ್ಥೆಗೆ ಮೊದಲ ಮಾರುಕಟ್ಟೆ ಮತ್ತು ಹೆಚ್ಚುವರಿ ಮಾರುಕಟ್ಟೆಗಳ ವ್ಯತ್ಯಾಸವನ್ನೇ ಗುರುತಿಸಲಾಗದ ಕುರುಡುತನ ಇದೆಯೇನೋ ಎಂಬ ಅನುಮಾನ ಕನ್ನಡಿಗರದ್ದು.

ಕನ್ನಡ ಚಿತ್ರರಂಗದ ತಪ್ಪುಹೆಜ್ಜೆಗಳು

ತಾವೆಲ್ಲಾ ಸೇರಿಕೊಂಡು ಒಂದು ಸಂಘ ಮಾಡಿಕೊಂಡು ಬಿಟ್ಟರೆ ಇಡೀ ವ್ಯವಸ್ಥೆ ತಾನು ಹೇಳಿದಂತೆ ನಡೆಯುತ್ತದೆ ಎನ್ನುವ ಭ್ರಮೆ ನಮ್ಮ ಚಿತ್ರ ಜಗತ್ತಿಗಿದ್ದಂತಿದೆ. ಇಂಥಾ ಭ್ರಮೆಯನ್ನೇ ಈಗಿನ ಈ ತೀರ್ಪು ಒಡೆದು ಹಾಕಿರುವುದು. ಈ ಭ್ರಮೆಯ ಇನ್ನೊಂದು ರೂಪ ಡಬ್ಬಿಂಗ್ ನಿಷೇಧ ಎನ್ನುವ ನಿಲುವಿನದೂ ಆಗಿದೆ. ತಾವು ಹೇಳಿದ್ದೆ ಆಟ ಎನ್ನುವಂತೆ ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿಯೇ ಇಂದು ಚಿತ್ರರಂಗಕ್ಕೆ ಈ ಸ್ಥಿತಿ ಬಂದಿರುವುದು ಎಂದರೆ ತಪ್ಪಿಲ್ಲ, ಅರೆರೆ... ಡಬ್ಬಿಂಗ್ ಮಾತ್ಯಾಕೆ ಇಲ್ಲಿ ಬಂತು ಎಂದುಕೊಳ್ಳುವಿರಾದರೆ ಸ್ವಲ್ಪ ತಾಳಿ, ನಿಧಾನಕ್ಕೆ ಆ ವಿಷಯಕ್ಕೂ ಹೋಗೋಣ. ಸದ್ಯದ ಮಾತೆಂದರೆ ತಮ್ಮ ಉದ್ಯಮದ ಉಳಿವಿಗಾಗಿ ಕನ್ನಡ ಚಿತ್ರರಂಗವು ತೆಗೆದುಕೊಂಡಿರುವ 'ಏಳು ವಾರ ತಡೆದು ಬಿಡುಗಡೆ ಮಾಡಬೇಕು, ನಾಲ್ಕೇ ಪ್ರಿಂಟ್ ಇರಬೇಕು, ಡಬ್ಬಿಂಗ್ ನಿಷೇಧ...' ಇತ್ಯಾದಿ ಕ್ರಮಗಳು ಸಂವಿಧಾನಬಾಹಿರವಾಗಿವೆ. ಹಾಗಾಗೆ ಈಗ ಸಿಸಿಐನ ತೀರ್ಪಿನಿಂದ ಕಂಗೆಟ್ಟಿರುವ ಚಿತ್ರರಂಗವು ದೇಶದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವ ಮಾತಾಡುತ್ತಿದೆ. ಅಲ್ಲೂ ಕೂಡಾ ಇದಕ್ಕಿಂತ ಭಿನ್ನವಾದ ತೀರ್ಪಿನ ಸಾಧ್ಯತೆ ಕಮ್ಮಿಯೇ. ಹಾಗೆ ಅಲ್ಲೂ ಇದೇ ತೀರ್ಪು ಬಂದಲ್ಲಿ ಮುಂದಿನ ದಾರಿಯೇನು? ಬೀದಿಗಿಳಿದು ಹೋರಾಟವೇ? ಉಪವಾಸ ಸತ್ಯಾಗ್ರಹವೇ? ಮತ್ತೊಂದು ಸುತ್ತಿನ ಹೋರಾಟವೇ?

ಚಿತ್ರರಂಗದ ಗೆಳೆಯರು ಅರಿಯಬೇಕಾದ ಒಂದು ಮಾತೆಂದರೆ ಸ್ಪರ್ಧೆಯನ್ನು ಎದುರಿಸಲು ಇಂಥಹ ಅಸಂವಿಧಾನಿಕ ಕ್ರಮಗಳು ಶಕ್ತವಾಗಿಲ್ಲ. ಸ್ಪರ್ಧೆ ಇದ್ದಲ್ಲಿ ಗುಣಮಟ್ಟ, ಸ್ಪರ್ಧೆಯಿದ್ದಲ್ಲಿ ಗ್ರಾಹಕನಿಗೆ ಅತ್ಯುತ್ತಮ ಸೇವೆ. ಹಾಗಾಗಿ ಸ್ಪರ್ಧೆ ಸಹಜ ಮತ್ತು ಅನಿವಾರ್ಯವೇ ಆಗಿದೆ! ಹಾಗಾದರೆ ಸ್ಪರ್ಧೆಯನ್ನೂ ಎದುರಿಸಿ, ಎದುರಾಳಿಗೂ ಸಮಾನ ಅವಕಾಶ ನೀಡಿ, ಕನ್ನಡ ಚಿತ್ರರಂಗವನ್ನೂ ಕಾಪಾಡಿಕೊಳ್ಳುವುದು ಯಾರ ಹೊಣೆ? ಇಷ್ಟಕ್ಕೂ ಸಮಾನ ಅವಕಾಶದ ಸ್ಪರ್ಧೆ ಎಂದರೇನು? ಹೇಗೆ ಕರ್ನಾಟಕದ ಒಳಗೆ ಕನ್ನಡ ಮತ್ತು ಕನ್ನಡೇತರ ಚಿತ್ರಗಳು ಸಮಾನ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಕನ್ನಡ ಕನ್ನಡತನ ಕನ್ನಡಿಗರ ಉಳಿವಿಗೆ ಬೇಕಿರುವುದು ಏನು? ಯಾರು ಈ ಹೊಣೆ ಹೊಂದಿದ್ದಾರೆ? ಎಂದರೆ ಇದಕ್ಕುತ್ತರ ಕರ್ನಾಟಕ ರಾಜ್ಯಸರ್ಕಾರ ಎನ್ನುವುದಾಗಿದೆ.

ರಾಜ್ಯಸರ್ಕಾರ ಮರೆತ ಹೊಣೆಗಾರಿಕೆ!

ಭಾರತ ಸರ್ಕಾರಕ್ಕೆನೋ ಕನ್ನಡನಾಡು ನುಡಿ ಉಳಿಸಬೇಕೆಂಬ ದರ್ದು ಇಲ್ಲದಿರಬಹುದು, ಸಹಿಸೋಣ. ಆದರೆ ನಮ್ಮದೇ ನಾಡಿನ ಸರ್ಕಾರಗಳಿಗೆ ಏನು ಧಾಡಿ ಬಂದಿದೆಯೋ ಗೊತ್ತಿಲ್ಲ. ನ್ಯಾಯಯುತ ಸ್ಪರ್ಧೆಯ ಸರಿಯಾದ ಅರ್ಥವಾದರೂ ರಾಜ್ಯಸರ್ಕಾರ ತಿಳಿದಿರಬೇಕು. ನ್ಯಾಯಯುತ ಸ್ಪರ್ಧಾತ್ಮಕೆಯ ಹೆಸರಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಎಗ್ಗುಸಿಗ್ಗಿಲ್ಲದೆ ಬಿಡುಗಡೆಯಾಗುವುದು ಕನ್ನಡಿಗರ ಮೇಲೆ ಕೇಂದ್ರ ನಡೆಸುವ ದೌರ್ಜನ್ಯ ಎನ್ನುವುದನ್ನಾದರೂ ಅರಿಯಬೇಕು. ಇದರಿಂದಾಗುವ ಕೆಡುಕನ್ನು ತಪ್ಪಿಸಬಲ್ಲ ಮನಸ್ಸು ನಮ್ಮ ಸರ್ಕಾರಕ್ಕಿರಬೇಕು. ವಿಶ್ವಸಂಸ್ಥೆಯ ಭಾಷಾ ನೀತಿಯಲ್ಲಿ ಏನು ಹೇಳಿದೆ ಎನ್ನುವ ಅರಿವು ಸರ್ಕಾರಕ್ಕೆ ಇರಬೇಕು. ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾಹಕ್ಕು ಘೋಷಣೆಯ ಈ ಎರಡು ಅಂಶಗಳೇ ಸಾಕು...

Article 44
All language communities are entitled to access to intercultural programmes, through the dissemination of adequate information, and to support for activities such as teaching the language to foreigners, translation, dubbing, post-synchronization and subtitling.
Article 45
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life).
ಆದರೆ ಇಂದು ಕನ್ನಡ ಚಿತ್ರರಂಗವನ್ನು ಅದರ ಸಂಘ ಸಂಸ್ಥೆಗಳಿಗೆ ಆಳಿಕೊಳ್ಳಲು ಬಿಟ್ಟಂತೆ ಸರ್ಕಾರ ಸುಮ್ಮನಿದೆ. ನಾಳೆ ಪರಭಾಷಾ ಚಿತ್ರವೊಂದು ಬಿಡುಗಡೆಯಾಗಿ ಏನಾದರೋ ಪ್ರತಿಭಟನೆ ಗಿತಿಭಟನೆ ಅಂತಾ ಗಲಾಟೆಯಾದರೆ ಮಾತ್ರಾ ಕಾನೂನು ಸುವ್ಯವಸ್ಥೆ ಎಂದು ಲಾಟಿ ಹಿಡಿದು ಮೈಮೇಲೆ ಬಿದ್ದೀತು ಅಷ್ಟೇ! ಇಂಥದಕ್ಕೆ ಆಸ್ಪದ ನೀಡದೆ, ಈಗಲೇ ಎಚ್ಚೆತ್ತು  ಸೂಕ್ತಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಆಗ್ರಹ! ಪ್ರೊಟೆಕ್ಷನಿಸಂ ಅನ್ನೋದು ಇರಬಾರದು, ಅದು ಸ್ಪರ್ಧಾ ಮನೋಭಾವಕ್ಕೆ ವಿರುದ್ಧವಾಗಿದೆ ಎನ್ನುವ ಮಾತು ಒಪ್ಪತಕ್ಕದ್ದಾದರೂ ಕೆಲವಷ್ಟು ವಿಷಯಗಳಿಗೆ ಈ ರೀತಿಯ ರಕ್ಷಣೆ ಬೇಕಾಗಿಯೇ ಇರುತ್ತದೆ ಮತ್ತು ಜಗತ್ತಿನ ಯಾವ ದೇಶದಲ್ಲೂ ಇಂತಹ ರಕ್ಷಣೆ ಇಲ್ಲದೆ ಇಲ್ಲ. ಹಾಗಾಗಿ ಈ ಹೊಣೆ ರಾಜ್ಯಸರ್ಕಾರದ್ದೇ ಆಗಿದೆ.

ಕನ್ನಡ ಚಿತ್ರರಂಗಕ್ಕಿಂತಾ ಕನ್ನಡ ಸಮಾಜ ಪ್ರಮುಖವಾದುದು!

ಹೌದೂ! ಇಂಥದ್ದೊಂದು ಮಾತು ಹೇಳಲೇಬೇಕಾಗಿದೆ. ಇಡೀ ಕನ್ನಡ ಸಮಾಜದ ಒಂದು ಅಂಗ ಮಾತ್ರವೇ ಕನ್ನಡ ಚಿತ್ರರಂಗ. ಅದು ತನ್ನ ಉಳಿವಿನ ಹೆಸರಿನಲ್ಲಿ ಅಸಂವಿಧಾನಿಕವಾಗಿ ನಡೆದುಕೊಂಡು ಇಡೀ ಕನ್ನಡಕುಲಕ್ಕೇ ಮಾರಕವಾಗುವಂತೆ ನಡೆದುಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ಹಾಗಾಗಿ ರಾಜ್ಯಸರ್ಕಾರವೇ ಈಗ ಕೇಂದ್ರಸರ್ಕಾರದ ಜೊತೆ ಮಾತಾಡಬೇಕಾಗಿದೆ. ಆಯೋಗ ನೀಡಿದ ತೀರ್ಪು ಹೇಗೆ ವಿಶ್ವಸಂಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ, ಹೇಗೆ ಕನ್ನಡ ಜನಾಂಗವನ್ನೇ ಕಂಟಕಕ್ಕೆ ತಳ್ಳಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಹಾಗಾದರೆ ನ್ಯಾಯಯುತ ಸ್ಪರ್ಧೆಯಲ್ಲಿ ಪರಭಾಷಿಕರು ಭಾಗವಹಿಸಬಾರದೆ? ಅವರೂ ಭಾರತೀಯರಲ್ಲವೇ? ಎನ್ನುವ ಪ್ರಶ್ನೆಗೆ ಉತ್ತರವನ್ನೂ ಕಂಡುಕೊಳ್ಳಬೇಕಾಗಿದೆ.

ಹೋಮ್ ಟಾಕೀಸು: ಚಿತ್ರರಂಗದಲ್ಲೊಂದು ಬದಲಾವಣೆಯ ಸಣ್ಣ ಎಲೆ ಅಲುಗಾಡುತ್ತಿದೆ!


ಹೌದೂ ಗುರೂ! ಕನ್ನಡ ಸಿನಿಮಾರಂಗದಲ್ಲೊಂದು ಬದಲಾವಣೆಯ ಸಣ್ಣ ಎಲೆ ಅಲುಗಾಡಲು ಶುರುವಾಗಿದೆ. ಮಿಂಬಲೆಯಲ್ಲಿ ಕನ್ನಡ ಚಿತ್ರಗಳನ್ನು ನೋಡಲು ಸಿಗುವಂತೆ ಒಂದು ಏರ್ಪಾಡನ್ನು ಚಿತ್ರರಂಗದಲ್ಲಿ ತನ್ನ ಹೊಸತನದ ತುಡಿತದಿಂದ ಹೆಸರಾಗಿರುವ ಶ್ರೀ ಪವನ್ ಕುಮಾರ್ ಅವರು ಮಾಡಿದ್ದಾರೆ. ಈ ತಾಣದ ಹೆಸರು "ಹೋಮ್ ಟಾಕೀಸ್". ಕನ್ನಡ ಚಿತ್ರಗಳಿಗೆ ಹೊರದೇಶದಲ್ಲಿ ಮಾರುಕಟ್ಟೆ ಕಟ್ಟಿಕೊಡುವಲ್ಲಿ ಈ ಪ್ರಯತ್ನ ಸಹಕಾರಿಯಾಗಿದೆ.


ಏನಿದು ಹೋಮ್ ಟಾಕೀಸು?

ಮನೆಯಲ್ಲಿ ಕುಳಿತೇ ಸಿನಿಮಾಗಳನ್ನು ನೋಡಬೇಕೆಂದರೆ ಸಿ.ಡಿಗಳ ಮೊರೆ ಹೋಗಬೇಕಾಗಿತ್ತು ಮತ್ತು ಸಿನಿಮಾಗಳ ಸಿ.ಡಿ ಬರಬೇಕು ಎಂದರೆ ಸಿನಿಮಾ ತನ್ನ ಮೊದಲ ಸುತ್ತಿನ ಟಾಕೀಸು ಪ್ರಯಾಣ ಮುಗಿಸಿರಬೇಕಾಗಿತ್ತು. ಅಂದರೆ ಬೇಕೆಂದವರು ಹಳೆ ಸಿನಿಮಾಗಳನ್ನು ನೋಡಲು ಮಾತ್ರಾ ಸಾಧ್ಯವಿತ್ತು. ಹೊಸದು ನೋಡಬೇಕೆನ್ನುವ ಹಂಬಲವಿದ್ದವರನ್ನು ಹಾದಿ ತಪ್ಪಿಸಲೆಂದೇ ನಕಲಿ ಸಿ.ಡಿಗಳು, ಕಳಪೆ ಮುದ್ರಿತ ಸಿ.ಡಿಗಳು ಕಾನೂನು ಬಾಹಿರವಾಗಿ ಮಾರಾಟವಾಗುತ್ತಿದ್ದವು. ಕನ್ನಡದ ಒಂದೊಳ್ಳೆ ಹೊಸ ಸಿನಿಮಾ ನೋಡಬಯಸುವವರು ಇಲ್ಲವೇ ಅದು ಹಳತಾಗುವವರೆಗೆ ಕಾಯಬೇಕಿತ್ತು ಅಥವಾ ಕಳ್ಳದಾರಿಯ ಸಿ.ಡಿ ಕೊಳ್ಳಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಪವನ್ ಕುಮಾರ್ ತಮ್ಮ ಗೆಳೆಯರ ಜೊತೆಗೂಡಿ ರೂಪಿಸಿದ ಹೊಸ ಏರ್ಪಾಡಿನ ಹೆಸರೇ "ಹೋಮ್ ಟಾಕೀಸ್". ಇದರಲ್ಲಿ ಆಸಕ್ತರು ಹೊಸ ಹೊಸ ಚಿತ್ರಗಳನ್ನು ಬಾಡಿಗೆಗೆ ಪಡೆದು ಮಿಂಬಲೆಯಲ್ಲಿ ನೋಡಬಹುದಾಗಿದೆ. ಹೊಚ್ಚ ಹೊಸ ಚಿತ್ರಗಳನ್ನು, ಸದಭಿರುಚಿಯ ಚಿತ್ರಗಳನ್ನು ಇಲ್ಲಿ ಈಗಾಗಲೇ ಸಿಗುವಂತೆ ಮಾಡಲಾಗಿದೆ. ಕನ್ನಡ ಅಭಿಮಾನಿಗಳಿಗಂತೂ ಸಂತಸ ತರುವ ವಿಷಯವೆಂದರೆ ಬಹುಶಃ ಇಲ್ಲೆಂದೂ ರಿಮೇಕ್ ಚಿತ್ರಗಳು ಸಿಗಲಾರವು. ಯಾಕೆಂದರೆ ಪವನ್ ಮತ್ತು ತಂಡ "ನಾವು ರಿಮೇಕಿನ ವಿರೋಧಿಗಳು ಮತು ಇಲ್ಲಿ ಮೂಲ ಕನ್ನಡಚಿತ್ರಗಳು ಮಾತ್ರವೇ ಸಿಗುವುದು. ಕನ್ನಡ ಚಿತ್ರರಂಗ ಕಟ್ಟಲು ಇದೊಂದು ಚಳವಳಿ" ಎಂದು ಹೇಳಿಕೊಂಡಿದ್ದಾರೆ.

ಇದು ಇನ್ನಷ್ಟು ಬೆಳೆದು ಮಾದರಿಯಾಗಲಿ!

ಕನ್ನಡ ಚಲನಚಿತ್ರಗಳು ದೇಶವಿದೇಶಗಳಲ್ಲೂ ಮಾರುಕಟ್ಟೆ ಕಟ್ಟಿಕೊಳ್ಳಬೇಕು ಎಂಬ ಹೆಬ್ಬಯಕೆಗೆ ಪೂರಕವಾಗಿರುವ ಒಂದು ಮಹತ್ವದ ಹೆಜ್ಜೆಯನ್ನು ಈ ತಂಡ ಇಟ್ಟಿದೆ. ಮೂಲತಃ ಪ್ರತಿಭಾವಂತರ ಪಡೆಯನ್ನು ಹುಟ್ಟುಹಾಕಿ ಹೊಸತನದ ಗಾಳಿ ಚಿತ್ರರಂಗದಲ್ಲಿ ಬೀಸಲು ಕಾರಣವಾಗಿರುವ ಶ್ರೀ ಯೋಗರಾಜ್ ಭಟ್ ಅವರ ತಂಡದಲ್ಲೊಬ್ಬರಾಗಿರುವ ಪವನ್ ಕುಮಾರ್ ಅವರ ಈ ಪ್ರಯತ್ನ ಯಶಸ್ಸು ಗಳಿಸಲಿ. ಇದೀಗ ಬರೀ ಹೊರದೇಶಗಳಲ್ಲಿ ಸಿಗುತ್ತಿರುವ ಈ ಸೌಕರ್ಯ ನಾಳೆ ನಮ್ಮೂರುಗಳಲ್ಲೂ ಸಿಗುವಂತಾಗಲಿ. ಕನ್ನಡ ಚಿತ್ರಗಳು ಮಾರುಕಟ್ಟೆ ವಿಸ್ತರಣೆಯ ಈ ಸಾಧ್ಯತೆಯನ್ನು ಬಳಸಿಕೊಳ್ಳಲಿ ಎಂದು ಹಾರೈಸೋಣ. ಈ ಪೈರಸಿಯಂತಹ ಪಿಡುಗು ಬರಿಯ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಪಿಡುಗಾಗಿಲ್ಲ. ಇದೊಂದು ಸಮಾಜವೇ ತಿರಸ್ಕರಿಸಬೇಕಾದ ಸಮಸ್ಯೆಯಾಗಿದೆ. ಇದು ನಿನ್ನೆಯೂ ಇತ್ತು, ಇಂದೂ ಇದೆ, ನಾಳೆಯೂ ಇರಬಲ್ಲದು... ಇದರಿಂದೆಲ್ಲಾ ಕುಗ್ಗದೆ ಮುಂದಡಿಯಿಡುವುದು, ಈ ತೊಡರುಗಳನ್ನು ಮೀರಿ ಬೆಳೆಯುವುದು ಹೋಮ್ ಟಾಕೀಸಿಗೆ ಸಾಧ್ಯ. ಪವನ್ ತಂಡಕ್ಕೆ ಒಳಿತಾಗಲಿ.

ಕೊನೆಹನಿ: ಈ ಎಲ್ಲಾ ಮೆಚ್ಚುಗೆಯ ನಂತರವೂ ಹೇಳಲೇ ಬೇಕಾದ ಮಾತು... ಈ ತಾಣ ಕನ್ನಡದಲ್ಲಿ ಮೂಡಿಬರಲಿ. ಮಿಂಬಲೆ ತೆಗೆದೊಡನೆ ಕನ್ನಡವೇ ಕಾಣಲಿ. ಇಂಗ್ಲೀಶ್ ಆಯ್ಕೆಯಿದ್ದರೇನೂ ತೊಡಕಿಲ್ಲ. ಬರೀ ಇಂಗ್ಲೀಶ್ ಅಲ್ಲದೆ ಇತರೆ ಭಾಷೆಗಳ ಆಯ್ಕೆಯೂ ಇರಲಿ... ಅಲ್ವಾ ಗುರೂ!

ಕನ್ನಡನಾಡಿನ ತೆರೆಗಳಲ್ಲಿ ಕನ್ನಡದ ಚಿತ್ರಗಳಿರಲಿ!


ಕನ್ನಡ ಚಿತ್ರರಂಗದಲ್ಲಿ ಆಗಾಗ ಇಂಥಾ ಸನ್ನಿವೇಶ ಹುಟ್ತಾನೆ ಇದೆ! ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಚಿತ್ರಮಂದಿರಗಳು ಸಿಗ್ತಿಲ್ಲಾ ಅನ್ನೋದು ನಿಜಕ್ಕೂ ನಾಡಿನ ಶೋಚನೀಯ ಸ್ಥಿತಿಯನ್ನು ತೋರುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಿನಿಮಾಗಳನ್ನು ಬಿಡುಗಡೆ ಮಾಡೋದು ವಾಡಿಕೆ. ನಮ್ಮ ರವಿಚಂದ್ರನ್ ಅವರ ಬಹುತೇಕ ಸೂಪರ್ ಹಿಟ್ ಚಿತ್ರಗಳು ತೆರೆ ಕಂಡಿದ್ದು ಇದೇ ದಿನ. ಪ್ರತಿಹಬ್ಬದ ಸಂದರ್ಭದಲ್ಲೂ ಹೆಚ್ಚಿಚ್ಚು ಸಿನಿಮಾಗಳು ಬಿಡುಗಡೆಯಾಗುವುದು ಒಂದು ಸಾಮಾನ್ಯ ರೂಢಿ. ಯಾಕೆಂದರೆ ಹಬ್ಬದ ರಜ ಮತ್ತು ಹಬ್ಬದ ಸಂತಸದಲ್ಲಿರುವ ಉಲ್ಲಾಸದ ಮನಸ್ಸುಗಳು ಜನರನ್ನು ಚಿತ್ರಮಂದಿರಕ್ಕೆ ಕರೆತಂದುಬಿಡುವ ಸಾಧ್ಯತೆಗಳು ಆಗ ಉಳಿದೆಲ್ಲಾ ದಿನಗಳಿಗಿಂತಾ ಹೆಚ್ಚು. ಹಾಗಾಗೇ ಹಬ್ಬ ಬಂದಾಗ ಸಿನಿಮಾಗಳಿಗೆ ಬಿಡುಗಡೆಯ ಸುಗ್ಗಿ! ಆದರೆ ಇತ್ತೀಚಿಗೆ ನಮ್ಮ ನಾಡಿನಲ್ಲಿ ಹಬ್ಬದ ಸಂದರ್ಭದಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯನ್ನೇ ಕಾಣದ ಹೀನಾಯ ಪರಿಸ್ಥಿತಿ ಬಂದೊದಗಿದೆ. ಕಳೆದ ದೀಪಾವಳಿಯ ಸಂದರ್ಭದಲ್ಲಂತೂ ಒಂದೂ ಚಿತ್ರ ಬಿಡುಗಡೆಯಾಗಲಿಲ್ಲ. ಕಾರಣ "ಆ ಸಮಯದಲ್ಲಿ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ, ಅವುಗಳ ಪೈಪೋಟಿ ಎದುರಿಸಲಾಗಲ್ಲಾ.. ಹಾಗಾಗಿ ಕನ್ನಡ ಚಿತ್ರ ಈ ಬಾರಿ ಇಲ್ಲ…" ಎನ್ನುವ ಮಾತುಗಳು ಕೇಳಿಬಂದವು. ಈ ಬಾರಿ ಸಂಕ್ರಾಂತಿಯ ಸಮಯದಲ್ಲೂ ಇಂಥದ್ದೇ ಮತ್ತೊಂದು ಸನ್ನಿವೇಶ ಎದುರಾಗಿದೆ. ಈ ಬಾರಿ ಬಿಡುಗಡೆಗೆ ಕಾದಿರೋ ಕನ್ನಡ ಚಿತ್ರಗಳಿಗೆ ಚಿತ್ರಮಂದಿರವಿಲ್ಲಂತೆ! ಇದೆಂಥಾ ದುರಂತಾ ನೋಡಿ. ನಮ್ಮ ನಾಡಲ್ಲೇ ನಮಗೆ ಹಬ್ಬದ ಸಂದರ್ಭದಲ್ಲಿ ಕನ್ನಡದ ಹೊಸಚಿತ್ರಗಳಿಗೆ ಸಾಕಷ್ಟು ಚಿತ್ರಮಂದಿರಗಳಿಲ್ಲವಂತೆ! ಯಾರು ಹೊಣೆ ಇದಕ್ಕೇ? ಪರಭಾಷಾ ಚಿತ್ರಗಳನ್ನು ತೆಗೆಯೋರಾ? ಅವರ ಕೆಲಸ ಅವರು ಮಾಡ್ತಿದಾರೆ, ನಿಜವಾಗ್ಲೂ ಸರಿಯಿಲ್ಲದೇ ಇರೋರು ನಮ್ಮವರೇ! ನಮ್ಮ ಕನ್ನಡ ಚಿತ್ರರಂಗದ ಬೃಹಸ್ಪತಿಗಳೇ!!

ಪರಭಾಷಾ ಚಿತ್ರಗಳನ್ನು ತಡೆಯೋಕಾಗಲ್ವಾ?

ಇವತ್ತಿನ ದಿನ, ಪರಭಾಷಾ ಚಿತ್ರಗಳ ಬಿಡುಗಡೆಯನ್ನು ತಡೆಯೋಕೆ ಕಾನೂನಿನ ರೀತ್ಯಾ ಆಗಲ್ಲ. ಹೀಗೆ ತಡೆಯಬಲ್ಲವರು ವಾಣಿಜ್ಯ ಮಂಡಲಿಯೋರು, ಸರ್ಕಾರದವರು ಮತ್ತು ಜನರು! ಇದುವರೆಗೂ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಪರಭಾಷಾ ಚಿತ್ರಗಳ ಬಿಡುಗಡೆಯನ್ನು ತಡೆಯೋಕೆ ಅಂತಾ ಮಾಡಿಕೊಂಡಿದ್ದ, ಏಳು ವಾರಗಳ ಅಂತರದ ಬಿಡುಗಡೆ ಹಾಗೂ ಇಂತಿಷ್ಟೇ ಪ್ರಿಂಟುಗಳ ಬಿಡುಗಡೆ ಎಂಬ ಕಟ್ಟಳೆಗಳನ್ನು ಒಳಗೊಂಡಿರೋ “ಜಂಟಲ್‍ಮನ್ ಅಗ್ರಿಮೆಂಟ್” ಎನ್ನೋ ಕೆಲಸಕ್ಕೆ ಬಾರದ ನಿಯಮದಿಂದ ಈ ಕೆಲಸ ಸಾಧ್ಯವೇ ಇಲ್ಲವಾಗಿದೆ. ಇದಕ್ಕೆ ಈ ಹಿಂದೆಯೂ ನಿಯಮ ಮೀರಿ ಬಿಡುಗಡೆಯಾದ ಪರಭಾಷಾ ಚಿತ್ರಗಳೇ ಸಾಕ್ಷಿ. ಅಷ್ಟಕ್ಕೂ ಮೀರಿ ವಾಣಿಜ್ಯ ಮಂಡಳಿಯೋರು ರಾವಣನ್ ಸಿನಿಮಾ ಬಿಡುಗಡೆ ತಡೆಗೆ ಯತ್ನಿಸಿದಾಗ, ಇವರ ಒತ್ತಡಕ್ಕೆ ಮಣಿದ ರಿಲಯನ್ಸ್ ಚಿತ್ರ ತಕ್ಷಣಕ್ಕೆ ಬಿಡುಗಡೆ ಮಾಡಿದ್ದನ್ನು ಹಿಂತೆಗೆದುಕೊಂಡರೂ ಬೆನ್ನಲ್ಲೇ “ಕಾಂಪಿಟೇಶನ್ ಕೌನ್ಸಲ್ ಆಫ್ ಇಂಡಿಯಾ” (ಸಿಸಿಐ)ಕ್ಕೆ ದೂರು ನೀಡಿತು. ಆ ಸಂಸ್ಥೆಯೋರು ಈಗ ವಾಣಿಜ್ಯ ಮಂಡಳಿಗೇ ದಂಡ ಹಾಕಿರೋ ಸುದ್ದಿಯಿದೆ. ಹಾಗಾಗಿ ಮಂಡಳಿಗೆ, ತನ್ನ ಯಾವುದೇ ನಿಯಮಾನ ತೋರಿಸಿ ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ! ಇನ್ನುಳಿದಂತೆ  ಜನತೆ ಪರಭಾಷಾ ಚಿತ್ರಗಳತ್ತ ಮನಸ್ಸು ಮಾಡದೆ ಕನ್ನಡ ಸಿನಿಮಾ ನೋಡಬೇಕು! ಇದೂ ಕೂಡಾ ಆಗದ ಹೋಗದ ಮಾತು. ಯಾರನ್ನೂ ಇಂಥದ್ದನ್ನು ನೋಡಬೇಡಿ ಎಂದು ಯಾರೂ ತಡೆಯಲಾಗದು. ಹಾಗಾದರೆ ಸರ್ಕಾರ ಈ ಬಗ್ಗೆ ರಂಗಕ್ಕಿಳಿಯಬಹುದೇ? ಹೌದೂ! ಕರ್ನಾಟಕ ಸರ್ಕಾರ ಇಂಥದ್ದೊಂದು ದಿಟ್ಟಕ್ರಮಕ್ಕೆ ಮುಂದಾಗಬಹುದು.

ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಘೋಷಣೆ!

ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಘೋಷಣೆಯಲ್ಲಿ ಜಗತ್ತಿನ ಪ್ರತಿಯೊಂದು ಭಾಷಿಕ ಜನಾಂಗಕ್ಕೂ ಇರುವ ಹಕ್ಕುಗಳ ಬಗ್ಗೆ ಮಾತಾಡಲಾಗಿದೆ. ಭಾಷಿಕ ಸಮುದಾಯಗಳು ಅವು ಯಾವುದೇ ದೇಶದಲ್ಲಿರಲಿ, ಯಾವುದೇ ರಾಜಕೀಯ ಪರಿಸ್ಥಿತಿಯಲ್ಲಿರಲಿ, ಆಯಾ ದೇಶದಲ್ಲಿ ಎಂಥದ್ದೇ ಕಾನೂನಿರಲಿ... ಅವುಗಳ ಭಾಷಿಕ ಹಕ್ಕುಗಳಿಗೆ ಧಕ್ಕೆ ತರುವಂತಿಲ್ಲ ಎನ್ನುವ ಈ ಘೋಷಣೆಯಲ್ಲಿ ಒಂದು ಭಾಷಿಕ ಜನಾಂಗದ ನಾಡಲ್ಲಿ ಪರಭಾಷೆಯ ಮನರಂಜನೆಗಳು ಯಾವ ಪ್ರಮಾಣದಲ್ಲಿರಬಹುದು ಎನ್ನುವುದನ್ನು ತೀರ್ಮಾನಿಸುವುದು ಆಯಾ ಭಾಷಿಕರಿಗೆ ಇರುವ ಹಕ್ಕೆಂದು ಹೇಳಲಾಗಿದೆ.

Article 45
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life)
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರವೇ ಪರಭಾಷಾ ಚಿತ್ರಗಳ ಕಡಿವಾಣಕ್ಕೆ ಮುಂದಾಗಬೇಕಾಗಿದೆ. ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಹಾಕೋಕೆ ಅವಕ್ಕೆ ಹೆಚ್ಚಿನ ತೆರಿಗೆ ಹಾಕೋ, ಇಂತಿಷ್ಟೇ ಟಾಕೀಸು ಅನ್ನೋ ನಿಯಾಮಾನ ಸರ್ಕಾರ ಮಾಡಬೇಕಾಗುತ್ತೆ. ಯಾಕಂದರೆ ಇಲ್ಲೂ ಮಾತು ‘ಸರಿಯಿಲ್ಲದ ಒಕ್ಕೂಟ ವ್ಯವಸ್ಥೆ’ಯ ಬುಡಕ್ಕೇ ಬರುತ್ತೆ. ಕನ್ನಡ ಸಿನಿಮಾಗಳಿಗೆ ಪ್ರೈಮರಿ ಮಾರುಕಟ್ಟೆ ಕರ್ನಾಟಕ, ಆದರೆ ಇದು ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ/ ಸೆಕಂಡರಿ ಮಾರುಕಟ್ಟೆ. ಇಂಥಾ ಸನ್ನಿವೇಶದಲ್ಲಿ ನಮ್ಮ ಮಾರುಕಟ್ಟೆ ಕಾಪಾಡಿಕೊಳ್ಳೋ ಹಕ್ಕು ನಮಗಿರಲೇಬೇಕಲ್ಲವೇ? "ಹಾಗೆ ಮಾಡಕ್ಕಾಗಲ್ಲಾ, ಇದು ಭಾರತ, ಇಲ್ಲಿ ಎಲ್ಲಾ ಭಾಷೆಯೋರೂ ಒಂದೇ, ದೇಶವೆಲ್ಲಾ ಒಂದೇ ನಿಯಮಾ, ಭಾರತ ದೇಶದಲ್ಲಿ ಯಾರಿಗಾದರೂ ಎಲ್ಲಾದರೂ ಹೋಗಿ ವ್ಯಾಪಾರ ಮಾಡೋ ಹಕ್ಕು ಭಾರತದ ಪ್ರಜೆಗಳಿಗಿದೆ" ಅಂತಂದುಕೊಂಡು ಹೋದರೆ ನಾಳೆ ನಮ್ಮ ಉಳಿವಿಗೇ ಗ್ಯಾರಂಟಿಯಿಲ್ಲ! ಸರ್ಕಾರ ವಿಶ್ವಸಂಸ್ಥೆಯ ಭಾಷಾಹಕ್ಕುಗಳತ್ತ ಸ್ವಲ್ಪ ಕಣ್ಣು ಹಾಯಿಸಿ ಕನ್ನಡವನ್ನು ಉಳಿಸಲು ಮುಂದಾಗಬೇಕು. ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಮೊದಲ ಆದ್ಯತೆಯನ್ನು ನೀಡುವುದನ್ನು ಕಾನೂನು ಬದ್ಧಗೊಳಿಸಲೇಬೇಕು!

ಇದೆಲ್ಲಾ ಆಗುತ್ತಾ? ಅಂದ್ರೆ ಆಗುತ್ತೆ ಆದ್ರೆ ಅದುಕ್ಕೆ ಇಚ್ಛಾಶಕ್ತಿ ಬೇಕು...ಅಷ್ಟೇ! ಈಗ ನೋಡಿ ಒಂದು ಜನಾಂಗದ ಭಾಷಾಹಕ್ಕಿಗೆ ಧಕ್ಕೆಯಾಗೋದಾದ್ರೆ ಯಾವುದಕ್ಕೆ ಪ್ರಾಮುಖ್ಯತೆ ಸಿಗಬೇಕು ಅಂತಾ ವಿಶ್ವಸಂಸ್ಥೆ ಹೇಳಾಗಿದೆಯಲ್ಲಾ...ಒಟ್ನಲ್ಲಿ ಕೇಳೋಕೆ ಮನಸ್ಸು ಬೇಕು ಅಷ್ಟೆ!

ಕನ್ನಡ ಜನರ ಉಳಿವು ಮತ್ತು ಡಬ್ಬಿಂಗ್!

ಈ ನಿಲುವು ತೆಗೆದುಕೊಂಡರೆ ಕನ್ನಡದ ಜನರು ಉಳಿದ ಭಾಷೆಯ ಚಿತ್ರಗಳನ್ನು ಹೇಗೆ ನೋಡೋದು ಎನ್ನುವ ಪ್ರಶ್ನೆಗೆ ಉತ್ತರ... ಡಬ್ಬಿಂಗ್ ಮೂಲಕ ಎನ್ನಬಹುದು. (ಭಾಷೆಯನ್ನು ಉಳಿಸಿಕೊಳ್ಳೋಕೆ ಇದನ್ನೂ ಒಂದು ಸಾಧನವೆಂದೇ ವಿಶ್ವಸಂಸ್ಥೆ ಪರಿಗಣಿಸುತ್ತಿದೆ.) ಕರ್ನಾಟಕದಲ್ಲಿ ಪ್ರದರ್ಶನವಾಗೋ ಎಲ್ಲಾ ಕನ್ನಡದಲ್ಲಿರಬೇಕಾದ್ದು ಕನ್ನಡದವರ ಹಕ್ಕು. ಹಾಗಾಗಿ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಬೇಕು. "ಅಲ್ರೀ, ಈಗ ಒರಿಜಿನಲ್ ಬಂದ್ರೇ ನಮ್ಮ ಚಿತ್ರಕ್ಕೆ ಟಾಕೀಸ್ ಸಿಗಲ್ಲಾ, ಇನ್ನು ಡಬ್ಬಿಂಗ್ ಬರಕ್ ಬಿಟ್ರೆ ನಮ್ ಗತಿ ಏನು?" ಅನ್ನೋ ಪ್ರಶ್ನೆ ಚಿತ್ರರಂಗದೋರಲ್ಲಿ ಹುಟ್ಟಬಹುದು. ಮೊದಲು ಕನ್ನಡದೋರು ಕನ್ನಡದಲ್ಲಿ ಮನರಂಜನೆಯನ್ನು ಪಡ್ಕೊಳ್ಳೋ ವ್ಯವಸ್ಥೆ ಗಟ್ಟಿಯಾಗಲಿ. ಕನ್ನಡ ಮೊದಲು ಉಳಿದರೆ ಕನ್ನಡ ಚಿತ್ರರಂಗದೋರು ಕೂಡಾ ಉಳಿಯೋದು ಅಲ್ವಾ! ಹಾಗಾಗಿ ಚಿತ್ರರಂಗದೋರಿಗೆ "ಚೆನ್ನಾಗಿರೋ ಸಿನಿಮಾ ತೆಗೀರಿ, ಜನಾ ನೋಡ್ತಾರೆ. ಇಡೀ ಕನ್ನಡನಾಡಿನ ಜನರನ್ನು ಡಬ್ಬಿಂಗ್ ಮೂಲಕ ಕನ್ನಡ ಭಾಷೆಯ ಚಿತ್ರಗಳತ್ತ ಸೆಳೆದಾದ ಮೇಲೆ ನಿಮ್ಮ ಚಿತ್ರಗಳಿಂದ ಅವರನ್ನು ಸೆಳೀರಿ" ಅನ್ನದೇ ವಿಧಿಯಿಲ್ಲ.

ಕನ್ನಡಕ್ಕೆ ಡಬ್ಬಿಂಗ್ ಬೇಡಾ, ಬೇಡಾ ಅಂತಂದು ಅಂದೂ... ಈಗ ಕನ್ನಡದ ಜನರೇ ಪರಭಾಷಾ ಚಿತ್ರಗಳನ್ನು ಆಯಾಯಾ ಭಾಷೆಗಳಲ್ಲೇ ನೋಡಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ ನಿಧಾನವಾಗಿ ಕನ್ನಡ ಚಿತ್ರಗಳಿಂದ ಅವರು ದೂರಾಗ್ತಿದಾರೆ. ಬರೀ ಇಷ್ಟೇ ಆಗಿದ್ದಿದ್ರೆ ಸಹಿಸಬೋದಿತ್ತು.. ಇದರ ಪರಿಣಾಮವಾಗಿ ಮನರಂಜನಾ ಕ್ಷೇತ್ರದಿಂದ ಕನ್ನಡ ಅಳಿದುಹೋಗುವ ಅಪಾಯ ಇದೆ. ಲಾಭವೊಂದನ್ನೇ ಗುರಿಯಾಗಿಸಿಕೊಂಡೋರು ಪರಭಾಷಾ ಚಿತ್ರಗಳ ವಿತರಣೇಲೆ ತೇಲಾಡ್ತಿರೋದು ಒಂದು ಕಡೆಯಾದ್ರೆ, ಡಬ್ಬಿಂಗ್ ವಿರೋಧ ಮಾಡ್ತಾನೇ "ರಿಮೇಕ್ ಒಂದು ಕಷ್ಟದ ಕಲೆ, ಅದನ್ನು ಮಾಡೋಕೂ ತಾಕತ್ತು ಬೇಕು" ಅನ್ನೋ ನಿರ್ದೇಶಕರಂಥಾ ಜನ ಇನ್ನೊಂದು ಕಡೆ, ಪರಭಾಷೆಯಲ್ಲಿ ಚಿತ್ರ ಬಿಡುಗಡೆಯಾಗೋದುನ್ನೇ ಕಾಯ್ಕೊಂಡು ಓಡೋಗಿ ರಿಮೇಕ್ ಹಕ್ಕು ಪಡ್ಕೊಂಡು ಬರೋ ನಿರ್ಮಾಪಕರು ಮೂರನೇ ಕಡೆ... ಡಬ್ಬಿಂಗ್ ಬಂದ್ರೆ ಸಂಸ್ಕೃತಿ ಹಾಳು, ಭಾಷೆ ಹಾಳು ಅಂತನ್ನೋರು ಮತ್ತೊಂದು ಕಡೆ... ಎಲ್ಲಾ ಒಟ್ಟೊಟ್ಗೆ ನಾಡುನ್ನ ಮಕಾಡೆ ಮಲಗುಸ್ತಾ ಇರೋದ್ ಹೆಂಗೆ ನೋಡ್ಕೊಂಡಿರೋದು ಗುರೂ? ಕನ್ನಡ ಚಿತ್ರಗಳು ನಿಧಾನವಾಗಿ ಶಾಶ್ವತವಾಗಿ ಮರೆಯಾಗಲು ಕಾರಣವಾಗುತ್ತಿರುವ ಮತ್ತೆಂದೂ ಏಳಲಾಗದ ಇಂತಹ ಸಾವಿಗಿಂತ ಡಬ್ಬಿಂಗ್ ತರುವ ಸಣ್ಣ ಜರ್ಕ್ ವಾಸಿ ಅನ್ಸಲ್ವಾ!

ನಮ್ಮ ಚಿತ್ರರಂಗದೋರು "ಇಲ್ಲಪ್ಪಾ... ನಮಗೆ ಸ್ಪರ್ಧೆ ಬೇಡಾ, ನಮಗೆ ಬರೀ ಸಬ್ಸಿಡಿ ಬೇಕು, ನಮ್ಮ ಚಿತ್ರಗಳಿಗೆ ಜನರು ಬರಲೀ ಅಂತಾ ತೆರಿಗೆ ವಿನಾಯ್ತಿ ಕೊಡಬೇಕು" ಅಂತಾ ಸದಾ ಸರ್ಕಾರದ ಮುಂದೆ ಕೈಯ್ಯೊಡ್ಡಿ ನಿಲ್ಲದೆ ಒಳ್ಳೊಳ್ಳೆ ಚಿತ್ರ ತೆಗೆದು, ಸ್ಪರ್ಧೆ ಎದುರಿಸಿ ಗೆದ್ದು ತೋರುಸ್ತೀವಿ ಅನ್ನೋ ಸ್ವಾಭಿಮಾನಿಗಳಾಗಬೇಕು. ಇಂಥಾ ಕೆಚ್ಚೆದೆಯ ಕನ್ನಡದೋರುನ್ನ ನಮ್ಮೋರು,. ನಿಜವಾದ ಕನ್ನಡಿಗರು ಅನ್ನಬಹುದು... ಅದು ಬಿಟ್ಟು ಪರಭಾಷೆ ಚಿತ್ರಾ ಪರಭಾಷೇಲೇ ನೋಡಿ, ಯಾಕಂದ್ರೆ ಅದು ಕನ್ನಡದಲ್ಲಿ ಡಬ್ ಆಗ್ಬುಟ್ರೆ ನಮ್ ಸಿನಿಮಾ ನೋಡೋರಿರಲ್ಲಾ, ಕನ್ನಡ ಸಿನಿಮಾ ತೆಗ್ಯೋರಿರಲ್ಲಾ ಅನ್ನೋ ಹೇಡಿತನದಿಂದಾ ನಾಳೆ ಕನ್ನಡನೆಲದಿಂದ ಕನ್ನಡಾನೇ ಅಳಿದುಹೋಗೋದನ್ನು ನೋಡ್ಕೊಂಡು ಸಹಿಸೋದು ಹೇಗೆ ಗುರೂ!

ಕೊನೆಹನಿ:  ತಮಾಶೆ ಅಂದ್ರೆ ಕಳೆದ ದೀಪಾವಳಿ ಸಮಯದಲ್ಲಿ ಕನ್ನಡದ ಚಿತ್ರರಂಗದವರು ಚಿತ್ರ ಬಿಡುಗಡೆ ಮಾಡೊಕೆ ಬೆದರಿದ್ದು ವೇಲಾಯುದಂ, ಏಳುಂ ಅರಿವುಮ್ ಮತ್ತು ರಾ ಒನ್ ಚಿತ್ರಗಳ ಅಬ್ಬರಕ್ಕೆ ಬೆದರಿ. ಆದರೆ ಈ ಮೂರರಲ್ಲಿ ಒಂದೂ ಕೂಡಾ ನಮ್ಮಲ್ಲಿ ಗೆಲ್ಲಲಿಲ್ಲ. ಅಂದ್ರೇನರ್ಥ? ನಮ್ಮವರೇ ಸ್ಪರ್ಧೆಗೆ ಮುಂಚೆ ಸೋತು ಶರಣಾದರು ಅಂತಲ್ಲವೇ?

ಹಿಸ್ಟರಿಯ ಮಿಸ್ಟರಿಯೂ ಕನ್ನಡದಲ್ಲಿ ಸಿಗಲಿ!

ಇತ್ತೀಚಿಗೆ ಹಿಸ್ಟರಿ ಚಾನಲ್‍ನ ಫೇಸ್‍ಬುಕ್ಕಿನಲ್ಲೊಂದು ಶುಭಾಶಯ ಸಂದೇಶ ಹಾಕಲಾಗಿತ್ತು. ಈ ಸಂದೇಶವನ್ನು ತಮಿಳು, ತೆಲುಗು, ಬೆಂಗಾಲಿ, ಮರಾಠಿ ಹಾಗೂ ಹಿಂದೀಯಂತಹ ಕೆಲವು ಭಾರತೀಯ ಭಾಷೆಗಳಲ್ಲಿ ಹಾಕಿದ್ದರು. ಈ ಸಂದರ್ಭದಲ್ಲಿ ಬರೆಯಲಾದ ಒಂದು ಕಮೆಂಟ್ "ಕನ್ನಡದಲ್ಲಿ ಹಿಸ್ಟರಿ ಚಾನೆಲ್ ಯಾವಾಗ ಪ್ರಾರಂಭವಾಗಲಿದೆ? ಆದಷ್ಟು ಬೇಗನೆ ಶುರು ಮಾಡಿರಿ" ಎನ್ನುವ ಅರ್ಥದಲ್ಲಿತ್ತು. ಅದಕ್ಕೆ ಚಾನಲ್ಲಿನವರು ಕೊಟ್ಟ ಉತ್ತರ ದಂಗುಬಡಿಸುವಂತಿತ್ತು! ಅದ್ಯಾರೋ ಪುಣ್ಯಾತ್ಮರು "ಕನ್ನಡನಾಡಿನಲ್ಲಿ ಡಬ್ಬಿಂಗ್ ನಿಶೇಧವಿದೆ, ಹಾಗಾಗಿ ಇಲ್ಲಿ ಹಿಸ್ಟರಿ ಚಾನಲ್ ಶುರುಮಾಡಲಾಗುವುದಿಲ್ಲ" ಎನ್ನುವ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎನ್ನಿಸುತ್ತೆ! ಹಾಗಾಗಿ ಅದೇ ಉತ್ತರವನ್ನು ಚಾನಲ್ಲಿನವರು ಫೇಸ್‍ಬುಕ್ಕಿನಲ್ಲೂ ಬರೆದುಬಿಟ್ಟರು.

ಕಾನೂನು ಮತ್ತು ಕಟ್ಟುಪಾಡು!

ಕನ್ನಡ ಚಿತ್ರರಂಗದಲ್ಲಿದ್ದ ಡಬ್ಬಿಂಗ್ ನಿಶೇಧವೆನ್ನುವ ಪಿಡುಗು ಮುಂದೆ ದೂರದರ್ಶನಕ್ಕೂ ಕಾಲಿಟ್ಟದ್ದು ಇತಿಹಾಸ. ಹಿಂದೆ ಹಿರಿಯರು ಯಾವುದೋ ಸಂದರ್ಭದಲ್ಲಿ ಕೈಗೊಂಡಿದ್ದ ನಿಲುವನ್ನೇ ಮುಂದು ಮಾಡಿಕೊಂಡು, ಇಂದಿಗೂ ಚಿತ್ರೋದ್ಯಮದ ಕೆಲವು ಪಟ್ಟಭದ್ರರು "ಡಬ್ಬಿಂಗ್ ಬೇಡ" ಎಂದು "ಕನ್ನಡದಲ್ಲೇ ಮನರಂಜನೆ" ಪಡೆದುಕೊಳ್ಳುವ ತಮ್ಮ ಸಹಜವಾದ ಹಕ್ಕನ್ನು ಕನ್ನಡಿಗರಿಗೆ ನಿರಾಕರಿಸುತ್ತಾ ಬಂದಿದ್ದಾರೆ.
ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಜನ ಜಾಗೃತಿಯಾಗುತ್ತಿರುವುದನ್ನೂ, ಹಲವರು ಡಬ್ಬಿಂಗ್ ಆದ ಚಿತ್ರಗಳ ನಿಶೇಧ ತೆರವು ಮಾಡಿಸಲು ಕೋರ್ಟಿನ ಮೊರೆಹೋಗಲು ಸಿದ್ಧತೆ ನಡೆಸುತ್ತಿರುವ ಸುದ್ದಿ ಕೇಳಿಬರುತ್ತಿರುವುದರಿಂದಲೂ ಬಹುಷಃ ವಿಚಲಿತರಾದಂತೆ ಕಾಣುತ್ತಿದೆ. ಹಾಗಾಗೇ.. ಹಿಂದೆಲ್ಲಾ ಕಾನೂನು ಎಂದು ಕೇಳಿಬರುತ್ತಿದ್ದ ಆಕ್ಷೇಪಗಳು ಇದೀಗ ಕಟ್ಟುಪಾಡು ಎಂದು ಕೇಳಿಬರುತ್ತಿದೆ. ಕಾನೂನು ಮಾಡುವುದು ಜನರಿಂದ ಆಯ್ಕೆಯಾದ ಶಾಸನ ಸಭೆ... ಅದೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಮಾತ್ರಾ! ಅಂತಹ ಯಾವ ಕಾನೂನೂ ಇಂದು ಡಬ್ಬಿಂಗಿನ ವಿರುದ್ಧವಾಗಿ ಇಲ್ಲ!! ಇನ್ನು ಸಮಾಜ ಮಾಡಿಕೊಂಡಿರುವ ಕಟ್ಟುಪಾಡು ಎನ್ನುವುದಕ್ಕೆ ಅರ್ಥವೇನು? ಯಾರು ಕನ್ನಡ ಸಮಾಜವೆಂದರೆ? ಸಮಾಜದ ಕಟ್ಟುಪಾಡು ಯಾವ ರೀತಿಯಲ್ಲಿರುತ್ತದೆ? ಇಂದಿಗೂ ಕನ್ನಡ ಸಮಾಜ ಡಬ್ಬಿಂಗ್ ನಿಶೇಧದ ಅಂತಹ ಕಟ್ಟುಪಾಡನ್ನು ಒಪ್ಪಿಕೊಂಡೇ ಇದೆಯೋ ಇಲ್ಲವೋ ತಿಳಿಯುವುದು ಹೇಗೆ?...

ಕಟ್ಟುಪಾಡಿನ ಪರೀಕ್ಷೆ ಆಗಿಯೇ ಬಿಡಲಿ!

ಇಂತಹ ಪ್ರಶ್ನೆಗಳಿಗೆ ಗೊಂದಲವಿಲ್ಲದ ಉತ್ತರ ಸಿಗುವುದು ಕಷ್ಟ. ಹಾಗಾಗಿ ಕನ್ನಡ ಸಮಾಜ ಡಬ್ಬಿಂಗ್ ಕಟ್ಟುಪಾಡನ್ನು ಒಪ್ಪಿದ್ದರೆ ಅಂತಹ ಚಿತ್ರಗಳನ್ನು ನೋಡದೇ ಇರುವ ಮೂಲಕ, ಗಲ್ಲಾಪೆಟ್ಟಿಗೆಯಲ್ಲಿ ಸೋಲಿಸುವ ಮೂಲಕ ಉತ್ತರ ನೀಡುತ್ತಾರೆ. ಇಂತಹ ಅವಕಾಶವನ್ನೇ ನಿರಾಕರಿಸುವಂತಹ ವ್ಯವಸ್ಥೆ ನಮ್ಮಲ್ಲಿರುವುದು ಸರಿಯಲ್ಲ. ಹಿಸ್ಟರಿ ಚಾನೆಲ್ ಕನ್ನಡದಲ್ಲಿ ಬಾರದೆ ಇರುವುದರಿಂದಾಗಿ ಅದೆಷ್ಟೋ ಆಸಕ್ತರಿಗೆ ಹಕ್ಕಿನ ನಿರಾಕರಣೆಯಾಗುತ್ತಿರುವಂತೆಯೇ, ಕನ್ನಡ ಸಿನಿಮಾರಂಗದಲ್ಲಿ ಡಬ್ಬಿಂಗ್ ಇಲ್ಲದಿರುವುದರಿಂದ ತಾಯ್ನುಡಿಯಲ್ಲಿನ ನಮ್ಮ ಮನರಂಜನೆಯನ್ನು ನಿರಾಕರಿಸಲಾಗುತ್ತಿದೆ ಎನ್ನುವುದೂ ಸತ್ಯವಾಗಿದೆ. ಇಂತಹ ನಿರಾಕರಣೆ ನಡೆಯುತ್ತಿರುವುದು ದಬ್ಬಾಳಿಕೆಯಿಂದಲೇ ಎನ್ನುವುದನ್ನೂ ನಾವು ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಅದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ "ಝಾನ್ಸಿ ರಾಣಿ ಲಕ್ಷ್ಮಿಬಾಯಿ" ಸೀರಿಯಲ್ ವಿಷಯವಾಗಿ ಜ಼ೀ ಕನ್ನಡ ವಾಹಿಯ ಕಚೇರಿಯ ಮೇಲೆ ನಡೆದ ದಾಳಿ. ಚಿತ್ರರಂಗದ ಗಣ್ಯರೆನ್ನಿಸಿಕೊಂಡ ಕೆಲವರು ಬೀದಿಗಿಳಿಯುವ, ಯಾವ ಹಂತಕ್ಕಾದರೂ ಹೋರಾಟ ಮಾಡುವಂತಹ ವೀರಾವೇಶದ ಬೆದರಿಕೆಯ ಮಾತುಗಳು!! ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೀಗೆ ನಾಗರೀಕರ ಹಕ್ಕುಗಳ ದಮನ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದು ಎಷ್ಟು ಸತ್ಯವೋ ಮುಂದಿನ ದಿನಗಳಲ್ಲಿ ಡಬ್ಬಿಂಗ್ ಬರುವುದನ್ನು ತಡೆಯುವುದೂ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದೂ ಅಷ್ಟೇ ಸತ್ಯಾ! ಕನ್ನಡ ಸಮಾಜಕ್ಕೆ ಡಬ್ಬಿಂಗ್ ಬೇಕೋ ಬೇಡವೋ ಎನ್ನುವುದು ಗಲ್ಲಾಪೆಟ್ಟಿಗೆಗಳು ತೀರ್ಮಾನಿಸಲಿ! ಇದು ಪ್ರಜಾಸತ್ತೆಯಲ್ಲಿ ನಂಬಿಕೆಯಿರುವವರು ಒಪ್ಪುವ ಮಾತಲ್ಲವಾ ಗುರೂ?

ಕೊನೆಹನಿ: ಹಿಸ್ಟರಿ ಚಾನಲ್ಲಿನವರಿಗೆ ಕನ್ನಡದಲ್ಲಿ ವಾಹಿನಿ ಆರಂಭಿಸಲು ರಾಶಿ ರಾಶಿ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ "ಕನ್ನಡದಲ್ಲೂ ವಾಹಿನಿ ಆರಂಭಿಸುವುದನ್ನು ಪರಿಗಣಿಸುತ್ತೇವೆ ಮತ್ತು ಬೆಳವಣಿಗೆಗಳನ್ನು ಹಂಚಿಕೊಳ್ಳುತ್ತೇವೆ" ಎಂಬ ಉತ್ತರ ಅವರ ಗೋಡೆಯಲ್ಲಿ ಹಂಚಿಕೊಂಡಿದ್ದಾರೆ!

ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲೇ ನೋಡಿ ಅನ್ನೋದು ಕನ್ನಡಪರಾನಾ?


ಕರ್ನಾಟಕದಲ್ಲಿ ಕನ್ನಡಪರವಾಗಿ ದೊಡ್ಡದನಿಯಲ್ಲಿ ಹೋರಾಟ ಮಾಡುವವರಲ್ಲಿ ಶ್ರೀಯುತ ವಾಟಾಳ್ ನಾಗರಾಜ್ ಅವರದ್ದು ಪ್ರಮುಖವಾದ ಹೆಸರು. ಅರವತ್ತರ ದಶಕದಿಂದಲೇ ಕನ್ನಡಪರವಾಗಿ ಹೋರಾಟ ಮಾಡಿದ್ದಲ್ಲದೇ, ವಿಧಾನಸಭೆಯಲ್ಲೂ ಕನ್ನಡದ ಪರವಾಗಿ ಕೊರಳೆತ್ತಿದವರು ಅವರು. ಇವರು ಮೊನ್ನೆ ನೀಡಿರೋ ಡಬ್ಬಿಂಗ್ ವಿರುದ್ಧವಾಗಿ ರಾಜ್ಯಾದ್ಯಂತ ಹೋರಾಡುತ್ತೇವೆ ಅನ್ನೋ ಹೇಳಿಕೆ ಮಾತ್ರಾ ವಿಷಯದ ಪೂರ್ಣ ಅರಿವಿಲ್ಲದೆ, ತಪ್ಪು ಮಾಹಿತಿಯಿಂದ ಪ್ರೇರಿತವಾದಂತಿದೆ.

ಡಬ್ಬಿಂಗ್ ವಿರೋಧಿಗಳಿಗೆ ಈ ಪ್ರಶ್ನೆ!

ಹೀಗೆ ಆವೇಶದಲ್ಲಿ ಹೇಳಿಕೆ ಕೊಡೊ ಮುನ್ನ ಕನ್ನಡಪರವಾದದ್ದು ಯಾವುದು? ಕನ್ನಡಕ್ಕೆ ಮಾರಕವಾದದ್ದು ಯಾವುದು? ಅನ್ನೋದ್ರು ಬಗ್ಗೆ ತಾವೇ ಆಲೋಚಿಸಬೇಕಿತ್ತು. ಅಥವಾ ಡಬ್ಬಿಂಗ್ ಪರ ಮತ್ತು ವಿರೋಧದ ಬಗ್ಗೆ ಇರೋ ನಿಲುವುಗಳನ್ನು ಅರ್ಥ ಮಾಡ್ಕೊಂಡು ಮಾತಾಡಬೇಕಿತ್ತು. ಇರಲಿ, ಆದರೂ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಟ್ಕೊಂಡ್ರೆ ಒಳ್ಳೇದು...

- ಕನ್ನಡಿಗರಿಗೆ ಕನ್ನಡದಲ್ಲೇ ತಮ್ಮ ಮನರಂಜನೆಯನ್ನು ಪಡೆದುಕೊಳ್ಳೋ ಹಕ್ಕಿಲ್ವಾ? ಈ ಹಕ್ಕನ್ನು ನಿರಾಕರಿಸೋದು ಕನ್ನಡಪರಾನಾ?

- ಕನ್ನಡಿಗರು ಕನ್ನಡನಾಡಲ್ಲೇ ಪರಭಾಷಾ ಚಿತ್ರಗಳನ್ನು ಬೇರೆಭಾಷೇಲೇ ನೋಡಬೇಕಾ? ಇದು ಕನ್ನಡ ಪರಾನಾ?

- ಕರ್ನಾಟಕದ ಟಾಕೀಸುಗಳಲ್ಲಿ ಎಗ್ಗುಸಿಗ್ಗಿಲ್ದೇ ಪರಭಾಷಾ ಚಿತ್ರಗಳು ಓಡಬೇಕಾ? ಇದು ಕನ್ನಡ ಪರಾನಾ?

- ಕನ್ನಡಿಗರೆಲ್ಲಾ ನಿಧಾನವಾಗಿ ಸಿನಿಮಾ ನೋಡಕ್ಕೇ ಬೇರೆ ಬೇರೆ ಭಾಷೆಗಳನ್ನು ಕಲಿತು ಕೊಳ್ಳಬೇಕಾ? ಇದು ಕನ್ನಡ ಪರವಾದ ನಿಲುವಾ?

- ಹೀಗೆ ಕನ್ನಡನಾಡಲ್ಲಿ ಬೇರೆ ಬೇರೆ ಭಾಷೆಗಳ ಚಿತ್ರಗಳೆಲ್ಲಾ ಅವವೇ ಭಾಷೇಲಿ ಓಡ್ತಾ, ಅವುನ್ನೆಲ್ಲಾ ಆಯಾ ನಾಡಿಂದ ಬಂದವರು ನಮ್ಮ ನಾಡಲ್ಲಿ ಅವರ ಭಾಷೇಲೆ ನೋಡಿ ಮನರಂಜನೆ ಪಡ್ಕೋತಾ, ಕನ್ನಡ ಕಲಿಯೋ ಹಂಗಿಲ್ಲದೇ ಇರಬೇಕೇನು? ಇದು ಕನ್ನಡ ಪರವಾದ ನಿಲುವಾ?

- ಇದರಿಂದಾಗಿ ಕರ್ನಾಟಕದಲ್ಲಿ ಕನ್ನಡದ ವಾತಾವರಣ ಇಲ್ಲದಂತಾಗುವುದಿಲ್ಲವೇ?

ಕನ್ನಡಿಗರು ಕನ್ನಡದಲ್ಲಿ ಮನರಂಜನೆ ಪಡ್ಕೋತೀನಿ ಅನ್ನೋದ್ರು ವಿರುದ್ಧವಾಗೇ ದನಿಯೆತ್ತೋದು ಹೇಗೆ ಕನ್ನಡಪರ ಅಂತಾ ವಾಟಾಳರು ಆತ್ಮಾವಲೋಕನ ಮಾಡ್ಕೊಳ್ಳೋದು ಒಳ್ಳೇದು... ಅಲ್ವಾ ಗುರೂ!

ಡಬ್ಬಿಂಗ್ ಬಂದ್ರೆ ಕನ್ನಡ್ದೋರು ಬೇರೆ ಬಾಶೆ ಕಲ್ಯಾಕಿಲ್ಲಾ..!


"ಇಡೀ ಕನ್ನಡ ಚಿತ್ರರಂಗವೇ ಇಂದು ದೊಡ್ಡು ಬಿಕ್ಕಟ್ಟಿನ ಅಂಚಲ್ಲಿ ಬಂದ್ನಿಂತದೆ. ಇಡೀ ಕನ್ನಡ ಕುಲ ಅಳಿದು ಹೋಯ್ತಿದೆ, ಕನ್ನಡದೋರ ಸ್ವಾಭಿಮಾನ, ಸಂಸ್ಕೃತಿ, ನುಡಿ, ಪರಂಪರೆಗಳು ವಿನಾಶದ ಅಂಚಲ್ಲಿ ಬಂದು ನಿಂತವೆ. ಇದುಕ್ಕೆಲ್ಲಾ ಕಾರಣ ನಾಳೆ ಕನ್ನಡದಲ್ಲಿ ಒಂದು ಡಬ್ಬಿಂಗ್ ಪಿಚ್ಚರ್ ರಿಲೀಜ್ ಆಯ್ತಾ ಇದೆ. ಇಂತಾ ಹೊತ್ತಲ್ಲಿ ಕನ್ನಡ ನಾಡು ನುಡಿಯನ್ನು ಉಳಿಸಕ್ಕೆ ಇಡೀ ಕನ್ನಡ ಚಿತ್ರರಂಗ ಒಂದಾಗಿ ಟೊಂಕಕಟ್ಟಿ ನಿಂತಿರುವಾಗ, ಕೆಲವು ಕನ್ನಡ ದ್ರೋಹಿಗಳು ಡಬ್ಬಿಂಗ್ ಪರವಾಗಿ ವಕಾಲತ್ತು ಮಾಡುತ್ತಾ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇವರಿಗೆಲ್ಲಾ ಉತ್ತರ ನೀಡಬೇಕಾದ ಹೊಣೆಗಾರಿಕೆ ನಮಗಿದೆ" ಅಂತಾ ಕನ್ನಡ ಚಿತ್ರರಂಗದ ದೊಡ್ಡೋರೊಬ್ರು ನಮ್ಮ ಎಂಕನ್ ತಾವ ಬಾಯ್ ಬುಟ್ರಂತೆ.

ಅವರಂದಿದ್ದು ಏನ್ ಗೊತ್ರಾ?

ನಮ್ ಕನ್ನಡ ಸಿನಿಮಾದಾಗೆ ಇವತ್ತು ಕತೆ-ಪತೇ ಎಲ್ಲಾ ಎಲ್ಲೈತೆ? ತೆಮಿಳು, ತೆಲುಗು, ಹಿಂದಿ ಸಿನಿಮಾದೋರು ತೆಗುದ್ರೆ ತಾನೇ ನಮಗೆ ಕತೆ ಸಿಗದು... ಈಗ ಅವುನ್ನೆಲ್ಲಾ ಸೀದಾ ಕನ್ನಡಕ್ಕೆ ಡಬ್ ಮಾಡ್ಬುಟ್ರೆ ನಮ್ ಒಳ್ಳೊಳ್ಳೆ ನಿರ್ದೇಶಕರು ಎಂಗ್ ಸಿನಿಮಾ ತೆಗ್ಯಕ್ ಆದೀತು? ಬೇರೆ ಬಾಸೇಲಿ ಗೆದ್ದಿರೋ ಸಿನಿಮಾ ಅಂದ್ರೆ ನಮ್ ನಿರ್ಮಾಪಕರು ಸೇಪು, ನಮ್ ತಂತ್ರಗ್ನರಿಗೂ ಕೆಲಸ ಸಿಗುತ್ತೆ. ಕನ್ನಡದ ಮುಂಡೆವುಕ್ಕೆ ಇಷ್ಟು ಸಾಲ್ದಾ? ಆ ಹಾಳು ಟೈಟಾನಿಕ್ಕು, ಅವತಾರ್, ಸೂಪರ್ ಮ್ಯಾನು, ಸ್ಪೈಡರ್ ಮ್ಯಾನು ಅಂತಾ ಕಿತ್ತೋಗಿರೋ ಇಂಗ್ಲೀಶ್ ಪಿಚ್ಚರೆಲ್ಲಾ ಯಾಕ್ ನೋಡಬೇಕು? ಇದೇ ಇಂಗ್ಲೀಸೋರು ತಾನೆ ನಮ್ಮುನ್ ಆಳಿದ್ದು? ನಾವು ಮಾಬಾರತ ಸೀರಿಲ್ಲು ತೆಗ್ಯಕ್ ಆಗಲ್ಲಾ ಅಂದ್ರೆ ಅದು ಇಡೀ ಕನ್ನಡಿಗರ ಕರ್ಮ, ನಮ್ಮೋರೆ ಸೀತೆ ಅಂತಾ ತೆಗೀತಿಲ್ವಾ? ಅದುನ್ನೇ ನೋಡಲಿ... ನಮ್ ಅಳ್ಳಿ ಐಕ್ಳು ಇಂಗ್ಲೀಸ್ ಪಿಚ್ಚರ್ ನೋಡಿ ಕಲ್ಯದಾರೂ ಏನೈತೆ? ಇನ್ನು ಆ ಅಮೀರ್ ಕಾನ್ ತೆಗ್ದಿರೋ ತಾರೆ ಜಮೀನ್ ಪರ್, ಅಮಿತಾಬನ ಪಾ ಎಲ್ಲಾ ನೋಡಿ ನಮ್ಮವು ಏನು ಸಾದುಸ್ತಾರೆ? ಸಿನಿಮಾ ಮನರಂಜನೆಗೆ ಮಾತ್ರಾ ಇರೋದು. ಅಂತಾ ಸಿನ್ಮಾದಿಂದೇನು ಸಮಾಜ ಉದ್ದಾರ ಆಗಕ್ಕಿಲ್ಲ. ಅಷ್ಟಕ್ಕೂ ಸಿನ್ಮಾ ಅನ್ನೋದು ಸಮಾಜಾನ ಬದಲಾಯಿಸೋಕಿಲ್ಲ. ಯಾವನೋ ಕೊಲೆ ಮಾಡ್ದಾ ಅಂತಾ ಸಿನಿಮಾದಲ್ಲಿ ತೋರ್ಸಿದ್ಕೆ ಅವ್ನು ಅಂಗ್ ಮಾಡ್ದಾ ಅನ್ನಕ್ ಆಯ್ತುದಾ? ಒಟ್ನಾಗೆ ಕನ್ನಡಕ್ಕೆ ಡಬ್ಬಿಂಗ್ ಪಿಚ್ಚರ್ ಬರಬಾರದು.
ಇನ್ನು ತುಳುನೋರು, ಕೊಡಗಿನೋರು ಅವರವರ ಬಾಸೇಲೇ ಪಿಚ್ಚರ್ ತೆಗೀಬೇಕು, ಅವನ್ನೂ ಡಬ್ ಮಾಡಬಾರ್ದು. ಯಾಕಂದ್ರೆ ಕನ್ನಡ್ದೋರು ತುಳು, ಕೊಡವ ಬಾಸೇ ಎಲ್ಲಾ ಕಲ್ಯದ್ ಬ್ಯಾಡ್ವಾ? ಒಸಿ ಯೋಚ್ಸಿ. ಕನ್ನಡದೋರು ಬೇರೆ ಬೇರೆ ಬಾಸೆ ಪಿಚ್ಚರ್ರುಗಳ್ನ ಅವವೇ ಬಾಸೇಲಿ ನೋಡುದ್ರೆ ಯಾಪಾಟಿ ಬಾಸೆ ಕಲೀಬೌದು ಅಂತಾ. ಆಗ ಕೆಲ್ಸ ಉಡಿಕ್ಕೊಂಡು ತಮಿಳ್ನಾಡು, ಆಂದ್ರ, ಕೇರಳ, ಬಾಂಬೆ,ಉತ್ತರ ಬಾರತ ಅಂತಾ ಯಾಕಡೆ ಓದ್ರು ಬದಿಕ್ಕೋಬೋದು. ಅಂಗಾಗಿ ಡಬ್ಬಿಂಗು ಬರಬಾರ್ದು.
ಅಂಗೂ ಬೇಕಾರೆ ಜಾಕಿನಾ, ಸೂಪರ್ರುನ್ನಾ ತೆಲ್ಗು ಬಾಸೆಗೆ ಡಬ್ ಮಾಡಾಯ್ತಲ್ವಾ? ಈಗ ಅವುನ್ನ ಬೇರೆ ಬೇರೆ ಬಾಸೆಗೂ ಡಬ್ ಮಾಡಿ ಬೆಂಗಳೂರೂ ಸೇರ್ದಂಗೆ ಇಡೀ ಕರ್ನಾಟಕದಲ್ಲಿ ರಿಲೀಜ್ ಮಾಡಮಾ. ಆಗ ನಮ್ಮಲ್ಲಿರೋ ಬೇರೆ ಬಾಸೆಯೋರೂ ’ಕನ್ನಡದಲ್ಲಿ ಪಸಂದಾಗಿ ಪಿಚ್ಚರ್ರು ತೆಗೀತಾರೆ, ನಾಳೆಯಿಂದ ನಾವು ಕನ್ನಡ ಕಲ್ತುಬುಡಮಾ’ ಅಂದ್ಕೊಂತಾರೆ.
ಇನ್ನು ಈ ನಮ್ ಹೋರಾಟದಲ್ಲಿ ಇಡೀ ಚಿತ್ರರಂಗದ ಎಲ್ಲಾರೂ ಪಾಲ್ಗೊಳ್ತೀವಿ. ಎಲ್ರೂ ತಮ್ಮ ಸ್ವಂತ ಇಷ್ಟದಿಂದ ಬತ್ತಾಔರೆ. ಅಂಗೂ ಯಾರಾನಾ ಸ್ವಂತ ಇಷ್ಟ ಪಟ್ಟು ಬರಲಿಲ್ಲಾ ಅಂದ್ರೆ ಅವುರನ್ನ ಚಿತ್ರರಂಗದಿಂದ ಬಹಿಸ್ಕಾರ ಹಾಕ್ತೀವಿ. ಯಾವನಾರಾ ಟಾಕೀಸೋನು ಡಬ್ಬಿಂಗ್ ಪಿಚ್ಚರ್ ಹಾಕುದ್ರೆ ಆ ಟಾಕೀಸೋರುನ್ನ ಬಹಿಸ್ಕಾರ ಮಾಡ್ತೀವಿ. ಅಂಥಾ ಟಾಕೀಸಾಗೆ ಕಾನೂನು ಮೀರಿ ಏನಾರಾ ದೊಂಬಿ ಗಿಂಬಿ ಆದ್ರೆ ಮಾತ್ರಾ ನಾವು ಅದುಕ್ ಜವಾಬ್ದಾರ್ರಲ್ಲಾ... ಕರ್ನಾಟಕದಲ್ಲಿ ಚಿತ್ರರಂಗ ನಂಬ್ಕೊಂಡು ಸಾವಿರಾರು ಕುಟುಂಬಗಳು ಬದುಕ್ತಾ ಇವೆ. ಇವರೆಲ್ಲಾ ಬದುಕೋದ್ ಬ್ಯಾಡ್ವಾ? ಅದುಕ್ಕೇ ಕನ್ನಡ ಸಿನಿಮಾ ಎಂಗೇ ಇದ್ರೂ ಕನ್ನಡದೋರು ಬಂದು ನೋಡಲೇಬೇಕು. ನಿಮಗೇನಾರಾ ಬೇರೆ ಬಾಸೆ ಪಿಚ್ಚರ್ ಮೆಚ್ಚುಗೆ ಆಯ್ತಾ? ನಮಗೆ ಯೋಳಿ. ನಾಕೇ ವಾರದಲ್ಲಿ ರಿಮೇಕು ಮಾಡಿ ನಿಮ್ಮುಂದೆ ತಂದು ಮಡುಗ್ತೀವಿ. ನಮ್ ಕಯ್ಯಾಗ್ ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳ ಬಗ್ಗೆ ಮಾತಾಡ್ ಬ್ಯಾಡ್ರಿ. ನಾವು ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳನ್ನು ನೋಡಲೇ ಬ್ಯಾಡ್ರೀ.. ಅದು ಕನ್ನಡ ದ್ರೋಹ... ಆಮೇಲೆ ನೀವೇನಾರ ನಾಳೆ ಆ ಡಬ್ಬಿಂಗ್ ಪಿಚ್ಚರ್ ನೋಡಕ್ಕೆ ಟಾಕೀಸ್ ಕಡೆ ಬಂದ್ರೋ ಬುಲ್ಡೆಗೆ ಬಿಸ್ನೀರ್ ಕಾಸಿಬುಡ್ತೀವಿ. ನಮ್ ಕನ್ನಡ ನಾಡಿನ ಸಂಸ್ಕೃತಿ, ಬಾಸೆ ಉಳ್ಸಕ್ಕೆ ನಾವು ಪ್ರಾಣಾ ಕೊಡಕ್ಕೂ ರೆಡಿ..

ಆ ವಯ್ಯನ ಮಾತು ಕೇಳಿದ್ದೆ ಎಂಕಾ ಎದ್ನೋ ಬಿದ್ನೋ ಅಂತಾ ಪೇರಿ ಕಿತ್ನಂತೆ ಗುರೂ!

ವೀಡಿಯೋಕಾನ್ ಗೆಲುವಿನ ಗುಟ್ಟು


ಇತ್ತೀಚಿಗಷ್ಟೇ ಡಿಶ್ ಮಾರುಕಟ್ಟೆಗೆ ಇಳಿದ ವಿಡಿಯೋಕಾನ್ d2h ಕಂಪನಿಯು “ಅತೀ ಹೆಚ್ಚು ಕನ್ನಡ ಚಾನಲ್ಲುಗಳನ್ನ ಕೊಡ್ತೀವಿ” ಅಂತ ಹೇಳುತ್ತಾ 13 ಕನ್ನಡ ಚಾನಲ್ಲುಗಳನ್ನು ನೀಡಿ ಗ್ರಾಹಕರನ್ನು ಸೆಳೆಯೋ ಪ್ರಯತ್ನ ಮಾಡ್ತಿರೋದರ ಬಗ್ಗೆ ಈ ಹಿಂದೆ ಏನ್ಗುರುವಿನಲ್ಲಿ ಬರೆದಿದ್ದೆವು. ಅದೇ ವಿಡಿಯೋಕಾನ್ d2h ಕಂಪನಿಯು ಈಗ ಇಪ್ಪತ್ತು ಲಕ್ಷ ಗ್ರಾಹಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆಯಂತೆ. ಈ ಮೈಲಿಗಲ್ಲು ತಲುಪಲು “ಜನರ ಭಾಷೆಯ” ಹೆಚ್ಚು ಹೆಚ್ಚು ಚಾನಲ್ಲುಗಳನ್ನು ಕೊಟ್ಟಿದ್ದೇ ಕಾರಣವಾಗಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್-ನಲ್ಲಿ ಮೂಡಿ ಬಂದ ಈ ಅಂಕಣ ಹೇಳ್ತಿದೆ ಗುರು.

ಬೇಕಾದ್ದು ಕೊಟ್ಟರೆ ಮಾತ್ರ ಗ್ರಾಹಕರನ್ನು ಗೆಲ್ಲಬಹುದು

ವಿಡಿಯೋಕಾನ್ ಕಂಪನಿಯು ಡಿಶ್ ಮಾರುಕಟ್ಟೆಗೆ ಇಳಿಯೋ ಮುನ್ನ ಮಾರುಕಟ್ಟೆಯಲ್ಲಿ ಇದ್ದ ಹಲವು ಕಂಪನಿಗಳು, ಗ್ರಾಹಕರ ಬೇಕುಗಳನ್ನು ಅರಿಯುವಲ್ಲಿ ಎಡವಿದ್ದಂತೆ ಕಾಣುತ್ತಿದ್ದವು. “ಸೌತ್ ಜಂಬೋ ಪ್ಯಾಕ್”, “ಸೌತ್ ಸಿಲ್ವರ್ ಪ್ಯಾಕ್” ಎಂಬ ತರತರದ ಹೆಸರಿನಲ್ಲಿ ಮೂರೋ ನಾಲ್ಕೋ ಕನ್ನಡ ಚಾನಲ್ಲುಗಳನ್ನು ಕೊಡುತ್ತಿದ್ದವರೇ ಹೆಚ್ಚು. ಕನ್ನಡಿಗ ಗ್ರಾಹಕರಿಗೆ ಕನ್ನಡ ಚಾನಲ್ಲುಗಳೇ ಬೇಕು ಎಂಬ ಸಾಮಾನ್ಯ ಅರಿವೂ ಮುಂಚಿನ ಕಂಪನಿಗಳ ಗಮನಕ್ಕೆ ಬಾರದೇ ಹೋದಂತಿತ್ತು.

ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡಕ್ಕಿರೋ ಬೇಡಿಕೆಯನ್ನು ಅರ್ಥ ಮಾಡಿಕೊಂಡಂತಿರುವ ವಿಡಿಯೋಕಾನ್, ಅದನ್ನೇ ಗ್ರಾಹಕರಿಗೆ ಒದಗಿಸುವ ಮೂಲಕ ಹೆಚ್ಚು ಗ್ರಾಹಕರನ್ನು ತನ್ನೆಡೆಗೆ ಸೆಳೆದಿರುವುದಂತೂ ದಿಟ. ಡಿಶ್ ಒಂದೇ ಅಲ್ಲದೇ, ಮನರಂಜನೆ ಉದ್ದಿಮೆಯಲ್ಲಿ ತೊಡಗಿಕೊಂಡಿರೋ ಬೇರೆ ಕಂಪನಿಗಳೂ ಕನ್ನಡಕ್ಕಿರೋ ಬೇಡಿಕೆಯನ್ನ ಅರ್ಥ ಮಾಡ್ಕೋಬೇಕಾಗಿದೆ ಗುರೂ. ಬೇರೆ ಭಾಷೆಯಲ್ಲಿ ಮನರಂಜನೆಗಿಂತಾ, ಕನ್ನಡದಲ್ಲಿ ಮನರಂಜನೆಯೇ ಕನ್ನಡಿಗರಿಗೆ ಅಚ್ಚುಮೆಚ್ಚು ಎಂಬುದನ್ನು ಕಂಡುಕೋಬೇಕಾಗಿದೆ.

ಅನ್ನದಾತರನ್ನೇ ಕಡೆಗಣಿಸಿತೇ ಕನ್ನಡ ಚಿತ್ರರಂಗ?


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ, ಕಳೆದ ಕೆಲವು ದಿನಗಳಿಂದ ಎದ್ದಿರೋ ಕೋಲಾಹಲ ನೋಡ್ತಾಯಿದ್ರೆ ಈ ಚಿತ್ರರಂಗದ ಒಳಗಿನ ಮಂದೀನೇ ಕನ್ನಡ ಚಿತ್ರರಂಗವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಿರೋ ಹಾಗೆ ಕಾಣ್ತಾಯಿಲ್ಲಾ ಗುರೂ! ಇಲ್ಲಿರೋ ಜನಾ ಇಡೀ ನಾಡುನ್ನ, ಉದ್ಯಮಾನಾ ಮತ್ತು ಸರ್ಕಾರಾನಾ ಬ್ಲಾಕ್‍ಮೇಲ್ ತಂತ್ರ ಉಪಯೋಗಿಸಿ ಆಡುಸ್ತಾ ಇದಾರಾ ಅನ್ನೋ ಅನುಮಾನ ಜನರಲ್ಲಿ ಇಷ್ಟೊತ್ತಿಗೆ ಮೂಡಿರಲೂಬಹುದು. ಒಟ್ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತಪ್ಪು ನಡೆ ಇಡ್ತಿದ್ಯಾ? ಇಂಥಾ ನಡೆಗಳಿಂದಾಗಿ ಇಡೀ ಚಿತ್ರೋದ್ಯಮ ಮತ್ತು ಕನ್ನಡನಾಡಿಗೇ ಹಾನಿ ಮಾಡ್ತಿದ್ಯಾ? ಅನ್ನೋ ಪ್ರಶ್ನೆಗಳು ಜನರಲ್ಲಿ ಹುಟ್ಕೊಂಡಂಗಿದೆ ಗುರೂ!

ಚಿತ್ರರಂಗ ಕಡೆಗಣಿಸಿರೋ ಅನ್ನದಾತರು!

ಹೌದೂ, ಮಾತೆತ್ತುದ್ರೆ ಅನ್ನದಾತರು, ಅಭಿಮಾನಿ ದೇವರೂ ಅಂತಾ ಜನರನ್ನು ಅಟ್ಟಕ್ಕೇರಿಸೋ ಈ ಜನ, ನಿಜಕ್ಕೂ ಈ ಇಡೀ ಪ್ರಕರಣದಲ್ಲಿ ಜನರ `ಆಯ್ಕೆಯ ಸ್ವಾತಂತ್ರ್ಯಾ'ನ ಮತ್ತು ಜನರು ತಮ್ಮ `ತಾಯ್ನುಡಿಯಲ್ಲಿ ಮನರಂಜನೆ' ಪಡೆಯೋ ಹಕ್ಕುನ್ನ ನಿರಾಕರುಸ್ತಾನೆ ಬಂದಿದಾರೆ. ಪರಭಾಷಾ ಚಿತ್ರಗಳ ಬಗ್ಗೆ, ಡಬ್ಬಿಂಗ್ ಬಗ್ಗೆ ಕಿಡಿ ಕಾರುವ ಸದರಿ ವಾಣಿಜ್ಯ ಮಂಡಲಿಯವನ್ನೂ, ಇವರನ್ನು ಬೆಂಬಲಿಸೋ ಚಿತ್ರರಂಗದವರನ್ನೂ "ಅನ್ನದಾತರೂ, ಅಭಿಮಾನಿ ದೇವರೂ - ಅಂತಾ ನೀವು ಪದೇ ಪದೇ ಹೊಗಳಿ ಅಟ್ಟಕ್ಕೇರಿಸುವ ಕನ್ನಡ ಪ್ರೇಕ್ಷಕನಿಗೆ ಏನು ಬೇಕು? ಏನು ಬೇಡಾ? ಅಂತಾ ಯಾವತ್ತಾದ್ರೂ ಯೋಚಿಸಿದ್ದೀರಾ" ಅಂತಾ ಕೇಳಬೇಕಾಗಿದೆ. "ಹೊಲಸು ರಿಮೇಕುಗಳು, ಕೆಟ್ಟದಾಗಿ ಕನ್ನಡ ಉಲಿಯುವ ಹಾಡುಗಾರರು, ಇಲ್ಲಿ ಅವಕಾಶಕ್ಕಾಗಿ ಕಾದಿರುವ ಪ್ರತಿಭಾವಂತರನ್ನು ಕಡೆಗಣಿಸಿ ಕರೆತರೋ ನಾಯಕಿಯರು, ನಟರುಗಳು ಇವನ್ನೆಲ್ಲಾ ಯಾಕೆ ತಂದಿರಿ ಅಂತಾ ನಾವೇನೂ ಕೇಳಿಲ್ಲಾ… ನಮಗೆ ಇಷ್ಟವಾದಾಗ ಗೆಲ್ಸಿದೀವಿ, ಚೆನ್ನಾಗಿಲ್ಲದಿದ್ದಾಗ ಸೋಲಿಸಿದ್ದೀವಿ... ಜನಕ್ ಬೇಡದಿದ್ರೆ ಮಾರುಕಟ್ಟೆ ಗೆಲ್ಲಕ್ ಆಗಲ್ಲಾ" ಅನ್ನೋದೇ ದಿಟವಾದ ಮಾತು. ಆದರೆ ಜನರಿಗೆ ಆಯ್ಕೆಯ ಸ್ವಾತಂತ್ರ ಇರಬೇಕು, ಅವರಿಗೆ ಬೇಕಾದ್ದನ್ನು ಪಡೆದುಕೊಳ್ಳುವ, ಬೇಡದ್ದನ್ನು ನಿರಾಕರಿಸುವ ಹಕ್ಕು ಇರಬೇಕು ತಾನೆ? 500 ಸಿನಿಮಾ ಸರದಿಯಲ್ಲಿ ಡಬ್ ಆಗಿ ಕಾಯ್ತಿದೆ ಅಂದ್ರೆ… ಬರಲಿ ಬಿಡಿ. ಜನ ಬೇಕಾದ್ದನ್ನು ಹಿಟ್ ಮಾಡ್ತಾರೆ, ಬೇಡದಿದ್ರೆ ಡಬ್ಬಾ ಸೇರುಸ್ತಾರೆ. ವರ್ಷಕ್ಕೆ ನಾಲ್ಕೇ ಸಿನಿಮಾ ಹಿಟ್ ಮಾಡ್ಬೇಕು ಅಂತಾ ಜನರೇನೂ ಆಣೆ ಮಾಡಿಲ್ವಲ್ವಾ? ಚೆನ್ನಾಗಿರೋ ಸಿನಿಮಾ ಕನ್ನಡದೋರು ತೆಗೆದರೂ ಓಡುತ್ತವೆ. ಹಾಗಾಗಿ ಇದ್ದಕ್ಕಿದ್ದಂತೆ ಹತ್ತು ಪರಭಾಷೆಯ ಚಿತ್ರಗಳು ಡಬ್ ಆಗಿ ಬಂದು ಚೆನ್ನಾಗಿ ಓಡುದ್ರೆ ಕನ್ನಡ ಚಿತ್ರಾನ ಜನ ನೋಡಲ್ಲಾ ಅನ್ನೋ ಭಯಾ ಏಕೆ? ಹೊಸಬರ ಅನೇಕ ಸಿನಿಮಾಗಳು ಕೂಡಾ ಯಶಸ್ವಿಯಾಗುತ್ತಿರೋದು ಆ ಚಿತ್ರಗಳು ಚೆನ್ನಾಗಿವೆ ಅನ್ನೋ ಒಂದೇ ಕಾರಣಕ್ಕ ತಾನೇ? ಇಷ್ಟಕ್ಕೂ ಗ್ರಾಹಕನಿಗೆ ಇರಬೇಕಾದ ಆಯ್ಕೆಯ ಸ್ವಾತಂತ್ರವನ್ನು ನಿರಾಕರಿಸೋ ಹಕ್ಕನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗಾಗಲೀ ಚಿತ್ರರಂಗಕ್ಕಾಗಲೀ ಕೊಟ್ಟೋರು ಯಾರು? ಇವರು ‘ಚಿತ್ರರಂಗದ ಕಾರ್ಮಿಕರ ಹಿತ’ ಅನ್ನೋ ವಾದ ಮುಂದಿಟ್ಟುಕೊಂಡು ಕನ್ನಡದ ಗ್ರಾಹಕರ ಹಿತವನ್ನು ಕಡೆಗಣಿಸೋದು ಸರೀನಾ… ಗುರೂ?

ನೆನಪಿರಲಿ...

ಇಷ್ಟೆಲ್ಲಾ ಆಗ್ತಿದ್ರೂ ಕನ್ನಡ ಚಲನಚಿತ್ರರಂಗದವರು ತಾವು ಸ್ವತಂತ್ರವಾಗಿ ಬದುಕಬೇಕು ಅನ್ನೋ ಮನಸ್ಥಿತೀಲೇ ಇದ್ದಂಗಿಲ್ಲಾ. ಸಿನಿಮಾ ತೆಗೆದರೆ ಸಬ್ಸಿಡಿ, ತೆರಿಗೆ ವಿನಾಯ್ತಿ ಅಂತಾ ಸರ್ಕಾರದ ಕಡೆ ಊರುಗೋಲಿಗಾಗಿ ನೋಡೋದನ್ನು ಇನ್ನಾದ್ರೂ ಬಿಡಬೇಕಾಗಿದೆ. ಇದನ್ನು ಒಂದು ಇಂಡಸ್ಟ್ರಿ ಅಂತಾ ಪರಿಗಣಿಸಿ, ತಮ್ಮ ಸಿನಿಮಾನ ಒಂದು ಮಾರುಕಟ್ಟೆಯನ್ನು ಗೆಲ್ಲಲಿ ಅಂತಾ ಬಿಡಬೇಕಾದ ಉತ್ಪನ್ನ ಎಂದು ಪರಿಗಣಿಸಬೇಕಾಗಿದೆ. ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು - ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಇದು ಬಡಕಲು, ಇದು ಅಳಿವಿನಂಚಿನಲ್ಲಿದೆ - ಅಂತ ಅಂದಂದೇ ಸಬ್ಸಿಡಿ ರೂಪದಲ್ಲೂ, ವಿನಾಯ್ತಿ ರೂಪದಲ್ಲೂ ಪಡೆದುಕೊಳ್ತಾನೆ ಇದ್ರೆ ಯಾವಾಗ ನಮ್ಮ ಚತ್ರರಂಗ ತನ್ನ ಕಾಲಮೇಲೆ ತಾನು ನಿಲ್ಲುವುದು? ಹೀಗೆ ಊರುಗೋಲನ್ನೇ ನಂಬಿರೋ ಚಿತ್ರರಂಗ ಹೇಗೆ ತಾನೇ ಉಳಿದೀತು? ಪರಭಾಷೆ ಚಿತ್ರ ಬ್ಯಾನ್, ಡಬ್ಬಿಂಗ್ ಬ್ಯಾನ್ ಅನ್ನುವಂತಹ ನಕಾರಾತ್ಮಕ ಕ್ರಮಮಗಳಿಂದ ಚಿತ್ರರಂಗಕ್ಕೆ ಏನುಪಯೋಗ? ಎನ್ನುವುದನ್ನೆಲ್ಲಾ ಚಿಂತಿಸಬೇಕಾಗಿದೆ.
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ? ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ? ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ಹೊಸಹೊಸ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದ್ರು ಬಗ್ಗೆ ಚಿತ್ರರಂಗ ಯೋಚಿಸಬೇಕಾಗಿದೆಯೇ ಹೊರತು ಬರೀ... ಸರ್ಕಾರ ನಮಗೆ ಸಬ್ಸಿಡಿ ಅದೂ ಇದೂ ಅಂತಾ ಜನರ ತರಿಗೆ ದುಡ್ಡುನ್ನ ಕೊಡ್ತಾನೆ ಇರಬೇಕು, ನಮ್ಮ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಬಾರದು, ಬೇರೆ ಭಾಷೆಯ ಚಿತ್ರಗಳು ಬರಬಾರದು, ನಮಗೆ ಇಂತಿಷ್ಟು ಸವಲತ್ತುಗಳು ಬೇಕು ಅನ್ನೋ ‘ದೇಹಿ’ ಅನ್ನೋ ಮನಸ್ಥಿತಿಯಿಂದ ಹೊರಬರಬೇಕಾಗಿದೆ ಗುರೂ! ಊರುಗೋಲಿನ ಆಸರೆ ಬಯಸುತ್ತಲಿದ್ದಷ್ಟು ದಿನವೂ ಕನ್ನಡ ಚಿತ್ರರಂಗ ಏಳಿಗೆ ಕಾಣೋದು ಕಷ್ಟ ಅನ್ನೋದು ಕನ್ನಡ ಚಿತ್ರರಂಗಕ್ಕೆ ನೆನಪಿರಲಿ...

ಡಿಶ್ ಮಾರುಕಟ್ಟೆಗೆ ಕನ್ನಡ ಆಯಾಮ


ವಿಡಿಯೋಕಾನ್ ಸಂಸ್ಥೆಯ ಈ ಜಾಹೀರಾತು ವಿಜಯ ಕರ್ನಾಟಕ ದಿನ ಪತ್ರಿಕೆಯ 08.09.2010ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ವಿಡಿಯೋಕಾನ್ ಸಂಸ್ಥೆಯೋರು ಅತಿಹೆಚ್ಚಿನ ಸಂಖ್ಯೆಯ ಕನ್ನಡ ಚ್ಯಾನೆಲ್‍ಗಳು ಅಂತಾ ಹಾಕೋ ಮೂಲಕ ಕನ್ನಡಿಗರ ಗಮನಾನ ಸೆಳೆಯೋ ಪ್ರಯತ್ನಾ ಮಾಡಿದಾರೆ.

ಡಿಶ್ ಎಂಬ ಮನೆಮನೆಯ ಕಿರೀಟ!

ಟಿ.ವಿ ಕ್ಷೇತ್ರದಲ್ಲಿ ಖಾಸಗಿ ಚಾನೆಲ್ಲುಗಳ ಪ್ರವೇಶ ಒಂದು ಕ್ರಾಂತಿಯನ್ನುಂಟು ಮಾಡಿದ ಹಾಗೇ, ಇಂಥಾ ವಾಹಿನಿಗಳನ್ನು ಮನೆಮನೆಗೆ ಮುಟ್ಟಿಸುವಲ್ಲಿ ಡಿ.ಟಿ.ಎಚ್ ಮಾಡಿರೋ ಕ್ರಾಂತಿಯೂ ಪ್ರಮುಖವಾದದ್ದು. ಯಾವುದೇ ತಂತಿಗಳ ಸಹಾಯವಿಲ್ಲದೆ ಮನೆ ಮನೆಯ ಮೇಲೆ ಕಿರೀಟದಂತೆ ಕೂಡಿಸಲಾಗೋ ಡಿಶ್‍ಗಳ ಮೂಲಕ ನೂರಾರು ಚಾನೆಲ್ಲುಗಳು ಅತ್ಯದ್ಭುತ ಎನ್ನಿಸೋ ಗುಣಮಟ್ಟದಲ್ಲಿ ಸಿಗುತ್ತವೆ ಅನ್ನೋದು ತಂತ್ರಜ್ಞಾನದ ಕೊಡುಗೆ. ಇಂಥಾ ಕ್ರಾಂತಿಯನ್ನು ಉದ್ಯಮವಾಗಿಸಿಕೊಂಡು ನಾಡಿನ ಹಳ್ಳಿಹಳ್ಳಿಗಳನ್ನೂ ಮುಟ್ಟುತ್ತಿರೋ ಸಂಸ್ಥೆಗಳು ಹತ್ತಾರು. ಇಂಥಾ ಸಂಸ್ಥೆಗಳಲ್ಲಿ ದೊಡ್ಡ ಹೆಸರಿನವುಗಳಾದ ಸನ್, ರಿಲಯನ್ಸ್, ಏರ‍್ಟೆಲ್, ಡಿಶ್, ಟಾಟಾ ಸ್ಕೈ ಮೊದಲಾದವುಗಳ ಸಾಲಿಗೆ ಈಗ ವಿಡಿಯೋಕಾನ್ ಸೇರಿಕೊಂಡಿದೆ.

ಕೊಳ್ಳುಗರಿಗೆ ಬೇಕಾದ್ದು ಕೊಡಬೇಕು.

ಈ ಚಾನೆಲ್ಲುಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಕೊಡೋ ಜಾಹೀರಾತುಗಳಲ್ಲಿ "ಸೌತ್ ಪ್ಯಾಕು" "ಸೌತ್ ಸ್ಪೆಷಲ್ ಪ್ಯಾಕು" ಅಂತೆಲ್ಲಾ ಹೇಳ್ತಾ ತಮ್ಮಲ್ಲಿ ನೂರಾರು ಚಾನೆಲ್ಲುಗಳಿವೆ ಅಂತಾ ಪೈಪೋಟಿ ಮಾಡ್ತಾರೆ, ಅದರ ಬದಲು ಕನ್ನಡಿಗರಿಗೆ ಎಷ್ಟು ಕನ್ನಡ ಚಾನಲ್ ಕೊಡ್ತೀವಿ ಅನ್ನೋದು ಮಾರುಕಟ್ಟೆ ತಂತ್ರ ಆಗಬೇಕು ಅಂತಾ ಹಿಂದೊಮ್ಮೆ ಏನ್‍ಗುರುವಿನಲ್ಲಿ ಬರೆದಿದ್ದೆವು. ಇದೀಗ ವಿಡಿಯೋಕಾನ್ ಸಂಸ್ಥೆಯ ಕಡೆಯಿಂದ ಈ ದಿಕ್ಕಲ್ಲಿ ಮೊದಲ ನಡೆ ಕಾಣ್ತಾಯಿದೆ. ಅತಿಹೆಚ್ಚು ಕನ್ನಡ ಚಾನೆಲ್ಲುಗಳನ್ನು ಕೊಡ್ತೀವಿ, ನಮ್ಮದನ್ನು ತೊಗೊಳ್ಳಿ ಅನ್ನೋ ಜಾಹೀರಾತು ಮಾರುಕಟ್ಟೆಯಲ್ಲಿ ಕನ್ನಡ ಭಾಷೆ ತೆಗೆದುಕೊಳ್ಳುತ್ತಿರುವ ಪ್ರಾಮುಖ್ಯತೆಯನ್ನೂ, ಕನ್ನಡಿಗರಲ್ಲಿ ಉಂಟಾಗುತ್ತಿರುವ ಜಾಗೃತಿಯನ್ನೂ ತೋರಿಸುತ್ತಿದೆ. ಈ ಜಾಹೀರಾತಲ್ಲಿ ಕನ್ನಡದಲ್ಲಿ ಬರೆದಿರೋ ಹಿಂದೀ ಸಾಲುಗಳನ್ನು ಬಲಾಯಿಸಿಕೊಳ್ಳಿ ಅಂತಾ ವಿಡಿಯೋಕಾನ್ ಸಂಸ್ಥೆಯೋರಿಗೆ ಹೇಳ್ತಾ, ಅತಿಹೆಚ್ಚು ಕನ್ನಡ ಚಾನೆಲ್ಲು ಕೊಡ್ತೀನಿ ಅಂದಿದ್ದಕ್ಕೆ ಪ್ರೋತ್ಸಾಹಿಸಿ ಅಭಿನಂದಿಸೋದು ಸರಿಯಾಗಿದೆ ಅಲ್ವಾ ಗುರೂ!

ಕನ್ನಡ ಚಿತ್ರರಂಗದ ಸಮಸ್ಯೆ!

ಇದುವರೆಗೆ...

ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ E&Y ಮತ್ತು FICCI ಒಂದು ವರದಿಯನ್ನು ಹೊರತಂದಿದ್ದು ಅದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಇರುವ ಮಾಹಿತಿ ತಪ್ಪಾಗಿದ್ದು, ಉದ್ಯಮದ ಬೆಳವಣಿಗೆಗೆ ಮಾರಕವಾಗಿತ್ತು. ಈ ವರದಿಯನ್ನು ಚಿತ್ರರಂಗದ ಗಣ್ಯರ ಜೊತೆ ಬಳಗ ಹಂಚಿಕೊಳ್ಳಲು ಮುಂದಾಯಿತು. ಕರ್ನಾಟಕ ಚಲನಚಿತ್ರ ಅಕಾಡಮಿಯು ಇದರಲ್ಲಿ ಆಸಕ್ತಿ ತೋರಿ ಚಿತ್ರರಂಗದ ಎಲ್ಲಾ ಪ್ರಮುಖ ಕ್ಷೇತ್ರಗಳ ಪ್ರತಿನಿಧಿ ಸಭೆಯನ್ನು ಕರೆದು ವರದಿ ಬಗ್ಗೆ ಮಾಹಿತಿ ಹಂಚಿಕೊಂಡಿತು. ಆಗ ಸರಿಯಾದ ಮಾಹಿತಿ ನೀಡಲು ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಲಾಯಿತು. ಬಳಗ ಮತ್ತು ಅಕಾಡಮಿಗಳು ಒಗ್ಗೂಡಿ ಏಳು ತಿಂಗಳು ಶ್ರಮಿಸಿ "ಕನ್ನಡ ಚಿತ್ರರಂಗ: ಒಂದು ಸಮೀಕ್ಷೆ" ಯನ್ನು ಹೊರತಂದವು.

ಸಮೀಕ್ಷೆಯ ಬಿಡುಗಡೆ ಮತ್ತು ಪ್ರತಿಕ್ರಿಯೆ!

ಸದರಿ ಸಮೀಕ್ಷೆಯನ್ನು ಅಕಾಡಮಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯ್ತು. ಸಮಿತಿಯ ಸಮೀಕ್ಷೆಯಲ್ಲಿ ಮೂಡಿಬಂದಿದ್ದ ಕೆಲ ಅಂಶಗಳ ಬಗ್ಗೆ ಕೆಲವರಿಂದ ವಿರೋಧ ಮೂಡಿಬಂದಿತು. ಹಾಗಾಗಿ ವರದಿಯನ್ನು ಅಕಾಡಮಿ ಹಿಂಪಡೆಯಿತು.

ಕನ್ನಡ ಚಿತ್ರರಂಗಕ್ಕೆ ಬೇಡವಾದ ಸತ್ಯ!

ಕನ್ನಡ ಚಿತ್ರರಂಗಕ್ಕೆ E&Y ಮತ್ತು FICCI ನೀಡಿದ ವರದಿಯ ಅಪಾಯದ ಬಗ್ಗೆಯಾಗಲೀ, ಆ ವರದಿಗೆ ಉತ್ತರ ನೀಡಬೇಕಾದ ಅಗತ್ಯದ ಬಗ್ಗೆಯಾಗಲೀ ಅರಿವಿದ್ದಂತಿಲ್ಲ. ಅಕಾಡಮಿ ಮತ್ತು ಬಳಗ ನಡೆಸಿದ ಸಮೀಕ್ಷೆಯಲ್ಲಿನ ಅಭಿಪ್ರಾಯಗಳನ್ನು ತೂಗಿ ನೋಡಬೇಕೆನ್ನುವ, ನಿಜಕ್ಕೂ ಚಿತ್ರರಂಗದ ಸಮಸ್ಯೆಗಳೇನು? ಎದುರಿಸಬೇಕಾದ ಸವಾಲುಗಳೇನು? ಎಂದು ಯೋಚಿಸಬೇಕೆಂಬ
ಮನಸ್ಥಿತಿ ಇರುವಂತೆಯೂ ಕಾಣಲಿಲ್ಲ. ಮುಂದೆ ಬರಲಿರುವ ದಿನಗಳು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತಂದಾವು ಅದನ್ನು ಎದುರಿಸಲು ಒಂದಾಗಿ ಯೋಚಿಸೋಣ ಎನ್ನುವ ಅರಿವೂ ಕಾಣಲಿಲ್ಲ.

ಚಿತ್ರರಂಗದ ಮುಂದಿರುವ ಸವಾಲು!

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ವಿಧಿಸಿರುವ ಪ್ರಿಂಟ್ ಸಂಖ್ಯೆಯ, ಏಳುವಾರದ ಗಡುವಿನ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಇರುವುದಿಲ್ಲ. ಇದರಿಂದಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿ ತಮಿಳು, ತೆಲುಗು, ಇಂಗ್ಲೀಷ್, ಹಿಂದೀ ಇತ್ಯಾದಿ ಚಿತ್ರಗಳು ರಾರಾಜಿಸುವುದರ ಜೊತೆಯಲ್ಲೇ ಇಡೀ ಕನ್ನಡ ಜನತೆ ನಿಧಾನವಾಗಿ ಕನ್ನಡ ಚಿತ್ರಗಳಿಂದ ದೂರವಾಗುವ ಸಾಧ್ಯತೆಗಳು ಕಾಣುತ್ತಿವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಈಗಲೇ ಇಲ್ಲದಂತಾಗಿದೆ. ಇದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಸದಸ್ಯರನ್ನು ಒಮ್ಮೆಗೇ ಅಮಾನತ್ತು ಗೊಳಿಸಿದಾಗ ಸಾಬೀತಾಗಿದೆ. ಗೋವಾ ಚಿತ್ರೋತ್ಸವದಲ್ಲಿ ಆಗುತ್ತಿರುವ ಅಪಮಾನಗಳಿಗಂತೂ ಲೆಕ್ಕವೇ ಇಲ್ಲ. ಪಾಲಿಸಿ ಮಾಡುವಾಗ ನಮ್ಮವರ ಮಾತಿಗೆ ಸರ್ಕಾರ ಯಾಕಾದರೂ ಬೆಲೆ ಕೊಟ್ಟೀತು. "ನಾವು ತೆಗೆಯೋ ಚಿತ್ರಗಳ ರಿಮೇಕೆಂಬ ಎಂಜಲು ತಿನ್ನುವವವರು ನೀವು" ಎನ್ನುವ ಅವಹೇಳನ ಅದೆಷ್ಟು ಕಡೆ ತಾನೇ ಆಗಿಲ್ಲ. ನಮ್ಮ ಚಿತ್ರರಂಗ ಉದ್ಧಾರವಾಗಲು ಇದೀಗ ಗಂಭೀರವಾಗಿ ಚಿಂತಿಸಲು ಸಕಾಲ.

ಏನೇನಾಗಬೇಕು?

ಕನ್ನಡ ಚಿತ್ರರಂಗದಲ್ಲಿ ಹೊಸಬರ, ಹೊಸತನದ ಚಿತ್ರಗಳು ತಯಾರಾಗಬೇಕಾಗಿದೆ. ವೃತ್ತಿಪರತೆ ಹೆಚ್ಚಾಗಬೇಕಿದೆ. ಪ್ರತಿಭಾ ಶೋಧ, ತರಬೇತಿಗಳಿಗೆ ಗಮನ ಕೊಡಬೇಕಾಗಿದೆ. ಹಣಕಾಸು ವ್ಯವಸ್ಥೆಯೂ ಮೀಟರ್ ಬಡ್ಡಿ ರೂಪದಲ್ಲಿ ಹರಡಿಕೊಂಡಿರುವುದು ನಿಂತು ಸಂಸ್ಥಾ ಹಣಕಾಸು ವ್ಯವಸ್ಥೆಗೆ ಸಾಗಬೇಕಿದೆ. ತಯಾರಿಕೆಯ ವೆಚ್ಚ ಕೆಟ್ಟ ಯೋಜನೆಯಿಂದಾಗಿ ಹೆಚ್ಚಾಗದಂತೆ ಸಿನಿಮಾ ನಿರ್ಮಾಣದ ತರಬೇತಿಗಳು ನಡೆಯಬೇಕಾಗಿದೆ. ಚಿತ್ರಮಂದಿರಗಳ ಅವ್ಯವಸ್ಥೆ, ಟಿಕೆಟ್ ಮಾರಾಟದಲ್ಲಿನ ಹುಳುಕುಗಳನ್ನು ಇಲ್ಲವಾಗಿಸಬೇಕಾಗಿದೆ. ವಿತರಕ, ಪ್ರದರ್ಶಕ, ನಿರ್ಮಾಪಕರ ನಡುವೆ ಯೋಗ್ಯವಾದ ರೀತಿಯಲ್ಲಿ ಲಾಭ ಹಂಚಿಕೆ, ಕಾರ್ಮಿಕರಿಗೆ ಗುಂಪುವಿಮೆ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕನ್ನಡ ಚಿತ್ರಗಳ ಮಾರುಕಟ್ಟೆಗಳನ್ನು ನಾಡಿನೊಳಗಡೆ ಗಟ್ಟಿಮಾಡಿಕೊಳ್ಳಬೇಕಾಗಿದೆ. ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಬೇಕಾಗಿದೆ. ಅಂತರ್ಜಾಲ, ಆಡಿಯೋ ವೀಡಿಯೋ ಮಾರುಕಟ್ಟೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಪುಟ್ಟ ಪುಟ್ಟ ಚಿತ್ರಮಂದಿರಗಳನ್ನು ರಾಜ್ಯದ ಎಲ್ಲೆಡೆ ಕಟ್ಟುವ ಮೂಲಕ ಚಿತ್ರಮಂದಿರಗಳ ಕೊರತೆ ನೀಗಿಸಬೇಕಾಗಿದೆ. ಹೀಗೆ... ಮಾಡಲು ಹತ್ತಾರು ಕೆಲಸಗಳಿವೆ. ಇದನ್ನು ಬಿಟ್ಟು ಗತವೈಭವದಲ್ಲೇ ತೇಲಾಡಿಕೊಂಡು ಇರ್ತೀವಿ, ಕಾನೂನು ಬಾಹಿರವೂ ನ್ಯಾಯಬಾಹಿರವೂ ಆದ ಮಾರ್ಗದಲ್ಲಿ ಸ್ಪರ್ಧೆ ತಡೀತೀನಿ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ.

ಕನ್ನಡ ಚಿತ್ರರಂಗವು ಕೆಲವು ಸ್ವಹಿತಾಸಕ್ತಿಯ ನಾಯಕರ ಮಾತುಗಳಿಗೆ ಮರುಳಾಗದೆ ಇಡೀ ಚಿತ್ರರಂಗದ ನಾಳೆಗಳ ಬಗ್ಗೆ ಒಂದು ಆರೋಗ್ಯಕರವಾದ ಚರ್ಚೆಗೆ ತನ್ನನ್ನು ತಾನು ತೆರೆದುಕೊಂಡಿದ್ದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಾದರೂ ಇದೆ ಅನ್ನಿಸುವುದಿಲ್ಲವೇನು? ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯು ಕನ್ನಡದಲ್ಲೇ ಇರಬೇಕಾದ್ದು ಕನ್ನಡಿಗರು ಹಕ್ಕು ಎಂಬುದನ್ನೂ, ಈಗಿರುವಂತೆಯೇ ಪರಭಾಷಾ ಚಿತ್ರಗಳು ಆಯಾ ಭಾಷೆಗಳಲ್ಲೇ ಕನ್ನಡ ನಾಡಿನ ಹಳ್ಳಿಹಳ್ಳಿಗಳಲ್ಲಿ ನಡೆಯುವುದು ಮುಂದಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡವೆಲ್ಲಿ ಉಳಿದೀತು? ಕನ್ನಡ ಚಿತ್ರರಂಗವೆಲ್ಲಿ ಉಳಿದೀತು? ಅನಿಸುವುದಿಲ್ಲವೇ?

ಪಾ: ಸಾಮಾಜಿಕ ಸಂದೇಶ ಮತ್ತು ಡಬ್ಬಿಂಗ್


ಬೆಂಗಳೂರಲ್ಲಿ, ನಿನ್ನೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರು, ಮತ್ತವರ ಸಂಪುಟದ ಹಲವು ಸಹೋದ್ಯೋಗಿಗಳು, ಹಿಂದಿ ಚಿತ್ರ ನಟ ಶ್ರೀ ಅಮಿತಾಭ್ ಬಚ್ಚನ್ ಅವರೊಡನೆ ಪಾ ಅನ್ನೋ ಸಿನಿಮಾ ನೋಡಲು ಹೋಗಿದ್ರಂತೆ. ಈ ‘ಪಾ ಅನ್ನೋ ಚಿತ್ರ "ಪ್ರೊಜೇರಿಯಾ" ಅನ್ನೋ ವಿಚಿತ್ರ ಕಾಯಿಲೆ ಬಗ್ಗೆ ಮಾಹಿತಿ ನೀಡುವ ಚಿತ್ರವಾಗಿದ್ದು, ಈ ಖಾಯಿಲೆ ಬಗ್ಗೆ ತಿಳಿದುಕೊಳ್ಳೋ ಸಲುವಾಗಿಯಾದರೂ ನಾಡಿನ ಸಾಮಾನ್ಯ ಜನರು ಈ ಚಿತ್ರವನ್ನು ನೋಡಲೇಬೇಕು’ ಅಂತ ಯಡಿಯೂರಪ್ಪನವರು ಹೇಳಿರೋ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ ಗುರು.

ಜನಜಾಗೃತಿಗೆ ದಾರಿ ಯಾವುದಯ್ಯ?

ಈ ಚಲನಚಿತ್ರ, ಒಂದು ವಿಚಿತ್ರ ಖಾಯಿಲೆ ಬಗ್ಗೆ ತಿಳಿ ಹೇಳುವ ಸಾಮಾಜಿಕ ಸಂದೇಶ ಇರೋ ಸಿನೆಮಾ ಆಗಿದ್ದಲ್ಲಿ, ಆ ಸಂದೇಶ ಖಂಡಿತವಾಗ್ಯೂ ಕನ್ನಡ ನಾಡಿನ ಸಾಮಾನ್ಯ ಜನರಿಗೆ ತಲುಪಲೇಬೇಕು. ಆದ್ರೆ ಈಗಿರೋ ರೂಪದಲ್ಲೇ ಈ ಚಲನಚಿತ್ರಾನಾ ಕರ್ನಾಟಕದ ಒಂದೊಂದು ಮನೆಗೂ ಹೋಗಿ ತೋರ್ಸುದ್ರೂ ಕೂಡಾ ಅಂದುಕೊಂಡ ಅರಿವು ಮೂಡಿಸೋ ಕೆಲಸ ಆಗಲ್ಲ. ಯಾಕೆ ಅಂತೀರಾ? ಚಿತ್ರ, ಜನ ಸಾಮಾನ್ಯರಿಗೆ ಅರ್ಥ ಆಗೋ ಭಾಷೇಲಿದ್ರೆ ತಾನೇ ಅದು ಆಗೋದು? ಎಲ್ಲೋ ಅಲ್ಪ ಸ್ವಲ್ಪ ಜನರಿಗೆ ಬರೋ ಭಾಷೆಲಿದ್ರೆ, ಅದು ಜನಸಾಮಾನ್ಯರನ್ನೆಲ್ಲ ತಲುಪೋಕೆ ಸಾಧ್ಯಾನಾ? ಈ ಹಿಂದೀ ಸಿನೆಮಾ, ಇಲ್ಲವೇ ಸಾಮಾಜಿಕ ಸಂದೇಶ ಹೊತ್ತು ಬರೋ ಬೇರಾವುದೇ ಪರಭಾಷಾ ಸಿನಿಮಾ, ಅದು ಕನ್ನಡಕ್ಕೆ ಡಬ್ ಆಗಿ ಆಮೇಲೆ ಕನ್ನಡಿಗರ ಎದುರಿಗೆ ಬಂದ್ರೆ ತಾನೇ ಆ ಸಂದೇಶ ಅವರಿಗೆ ನಿಜಕ್ಕೂ ತಲುಪೋದು? ಎಲ್ಲ ಜನರು ಪಾ ಸಿನೆಮಾ ನೋಡಲಿ ಅನ್ನೋ ಮುಂಚೆ, ಅದನ್ನ ಕನ್ನಡಕ್ಕೆ ಡಬ್ ಮಾಡೋಣ ಅಂತ ಅಂದಿದ್ದಿದ್ರೆ ಮುಖ್ಯಮಂತ್ರಿಗಳ ಜನರಲ್ಲಿ ಜಾಗೃತಿ ತರೋ ಆಶಯ ಈಡೇರುತ್ತಾ ಇತ್ತೋ ಏನೋ ಗುರು.

ಕೊನೆಹನಿ
ಬೆಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಪಾ ಚಿತ್ರದ ಈ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿದ್ದು ಸಮಾಜ ಕಲ್ಯಾಣ ಇಲಾಖೇನೋ, ಆರೋಗ್ಯ ಇಲಾಖೇನೋ ಅಂದ್ಕೊಂಡ್ರೇನೋ? ಊಹೂಂ... ಈ ವ್ಯವಸ್ಥೆ ಮಾಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತೆ!

ಇದನ್ನೂ ಓದಿ:
ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ !
ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳಸುತ್ತೆ!

ರುಚಿ ರುಚಿಯಾದ ಕಲ್ಚರಲ್ ಕರ್ರಿ!


ಜೂನ್ 2 ರಿಂದ ಜೂನ್ 14 ರವರೆಗೆ ಕರ್ನಾಟಕದ ನಾನಾ ಭಾಗಗಳ, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ, ತಿನಿಸು ಊಟಗಳ ಹಬ್ಬವೊಂದು ಬೆಂಗಳೂರಿನ ಚಾನ್ಸರಿ ಹೋಟೆಲ್ ನಲ್ಲಿ ನಡದಿರೋ ಸುದ್ದಿ ಬಂದಿದೆ ಗುರು. "ಕರ್ನಾಟಕ ಫೆಸ್ಟಿವಲ್ - ಎ ಕಲ್ಚರಲ್ ಕರ್ರಿ" (Karnataka Festival - A Cultural curry) ಅನ್ನೋ ಹೆಸರಿನ ಈ ವಿಶೇಷ ಕಾರ್ಯಕ್ರಮದ ಮೂಲಕ ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸೋದು ಸಂಘಟಕರ ಉದ್ದೇಶ ಆಗಿದ್ದು, ಅದಕ್ಕೆ ಸಕತ್ ಪ್ರತಿಕ್ರಿಯೆ ಕೂಡಾ ಸಿಕ್ಕಿದೆಯಂತೆ. ಇದು ನಿಜಕ್ಕೂ ಸಕತ್ ಒಳ್ಳೆಯ ಬೆಳವಣಿಗೆ ಗುರು.
ಊಟ-ತಿಂಡಿಗೆ ರುಚಿ ಜೊತೆ ಇತಿಹಾಸವೂ ಇದೆ!
ನಮ್ಮ ಕಲೆ, ಸಂಸ್ಕೃತಿ, ಪರಂಪರೆಯಷ್ಟೇ ವೈವಿಧ್ಯತೆ, ಇತಿಹಾಸ ನಮ್ಮ ನಾಡಿನ ಆಹಾರಕ್ಕೂ ಇದೆ. ನಮ್ಮ ಆಹಾರ ಪದ್ಧತಿ ನಮ್ಮ ಸಂಸ್ಕೃತಿಯ ಒಂದು ಭಾಗವೂ ಹೌದು. ರಾಗಿ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ, ಎಣಗಾಯಿ ಪಲ್ಲ್ಯ, ಗುರೆಳ್ಳು ಚಟ್ನಿ, ಪುಳಿಯೋಗರೆ, ಬಿಸಿಬೇಳೆ ಬಾತ್, ಅಂಬೋಡೆ, ಮೈಸೂರು ಪಾಕ್, ಧಾರವಾಡ ಪೇಡೆ, ಕರಾವಳಿಯ ಅದ್ಭುತವಾದ ಮೀನಿನ ಅಡುಗೆ, ಹೀಗೆ ಉತ್ತರದ ಬೀದರಿನಿಂದ ಹಿಡಿದು, ದಕ್ಷಿಣದ ಮೈಸೂರಿನವರೆಗೂ ನಮ್ಮಲ್ಲಿ ವಿಧ ವಿಧವಾದ ರುಚಿಕರ ತಿಂಡಿ-ತಿನಿಸುಗಳು, ಆಹಾರ ಪದ್ಧತಿಗಳಿವೆಯಲ್ಲಾ, ಇವನ್ನೆಲ್ಲ ನಮ್ಮ ಹೋಟೆಲ್ ಉದ್ಯಮಿಗಳು ಅವರ ಮೆನುನಲ್ಲಿ ಹಾಕಬೇಕು, ಸರಿಯಾದ ಪ್ರಚಾರ ತಂತ್ರ ಬಳಸಿ ಕರ್ನಾಟಕ ಅಡುಗೆ ಅನ್ನುವುದನ್ನೇ ಒಂದು ದೊಡ್ಡ ಬ್ರಾಂಡ್ ಆಗಿಸಬೇಕು ಮತ್ತು ಇದರಿಂದ ದೊಡ್ಡ ಮಟ್ಟದಲ್ಲಿ ಲಾಭ ಮಾಡ್ಕೋಬೇಕು. ಒಟ್ಟಾರೆ ಕರ್ನಾಟಕದ ಅಡುಗೇನೂ ಕರ್ನಾಟಕ ಪ್ರವಾಸೋದ್ಯಮದ ಒಂದು ಪ್ರಮುಖ ಆಕರ್ಷಣೆ ಆಗ್ಬೇಕು ಗುರು.
ನಮ್ಮದು ಕೆಲವು ಜವಾಬ್ದಾರಿ ಇದೆ...
ನಾವೂ ಅಷ್ಟೆ! ಕನ್ನಡೇತರರ ಜೊತೆ ಹೊರಗೆ ಊಟಕ್ಕೆ ಹೋದಾಗ ನಮ್ಮ ಆಹಾರಗಳನ್ನ ಅವರಿಗೆ ಪರಿಚಯಿಸೋ ಜವಾಬ್ದಾರಿ ತಗೋಬೇಕು. ನಮ್ಮ ಕನ್ನಡದ ಆಹಾರಕ್ಕೆ ಆದ್ಯತೆ ಕೊಡ್ಬೇಕು. ನಮ್ಮ ನಮ್ಮ ಕಛೇರಿಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಊಟಕ್ಕೆ ಕರ್ನಾಟಕದ ಅಡುಗೆಯನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಬೇಕು. ಕರ್ನಾಟಕದ ಊಟ ಉಪಹಾರದ ಬಗ್ಗೆ ನಡೆಯುವ ಮೇಳಗಳಿಗೆ ನಿಮ್ಮ ಕನ್ನಡೇತರ ಸ್ನೇಹಿತರನ್ನು ತಪ್ಪದೇ ಕರೆದುಕೊಂಡು ಹೋಗ್ಬೇಕು. ಕರ್ನಾಟಕದ ಆಹಾರ, ವೈವಿಧ್ಯತೆಯಲ್ಲಿ ಸಂಪದ್ಭರಿತ ಅನ್ನೋದನ್ನ ತೋರಿಸಿಕೊಡಬೇಕು. ಏನಂತೀಯ ಗುರು ?

ಕನ್ನಡ ಚಿತ್ರರಂಗದಲ್ಲೀಗ ಹೊಸದೊಂದು "ಜೋಷ್"!

ಸಿಕ್ಕಾಪಟ್ಟೆ ಮಜಾ,, ಸ್ವಲ್ಪ ಫೀಲಿಂಗ್ಸ್ ಅಂತ ಹೇಳ್ತಾ ಈ ಬೇಸಿಗೆ ರಜೆ ಟೈಮ್ ಅಲ್ಲಿ ಜೋಶ್ ಅನ್ನೋ ಸಿನೆಮಾ ಬಂದಿದೆ ಗುರು. ಇದ್ರಲ್ಲಿ ಹೆಚ್ಚಾಗಿ ಕನ್ನಡದ ಕಲಾವಿದರು, ತಂತ್ರಜ್ಞರನ್ನೇ ಬಳಸಿಕೊಂಡಿದಾರಂತೆ. ಹದಿಹರೆಯದ ಹುಡುಗರ ತಮಾಷೆ, ತಲ್ಲಣಗಳ ಸುತ್ತ ಸ್ವಂತ ಕಥೆ ಹೆಣದು ಮಾಡಿರೋ ಈ ಸಿನೆಮಾ ಈಗ ಸಕತ್ ಸುದ್ದೀಲಿದೆ! ಪತ್ರಿಕೆಗಳಲ್ಲಿ ಇದರ ಬಗ್ಗೆ ಒಳ್ಳೇ ಮೆಚ್ಚುಗೆಯ ಮಾತುಗಳು ಕಂಡುಬರ್ತಾ ಇವೆ.



ಹತ್ತಾರು ವರ್ಷಗಳ ಹಿಂದೆ ಬಂದಂತಹ ಪ್ರೇಮಲೋಕ, ಚೈತ್ರದ ಪ್ರೇಮಾಂಜಲಿ, ನೆನಪಿರಲಿ, ಮುಂಗಾರುಮಳೆ... ಮುಂತಾದ ಚಿತ್ರಗಳೆಲ್ಲಾ ತಾವು ಮಾತ್ರಾ ಯಶಸ್ಸು ಗಳಿಸದೆ, ಇಡೀ ಕನ್ನಡ ಚಿತ್ರರಂಗಕ್ಕೊಂದು ಹೊಸ ತಿರುವು ಮತ್ತು ಚೈತನ್ಯವನ್ನು ತಂದುಕೊಟ್ಟವು. ಇದಕ್ಕೆ ಮೂಲಕಾರಣವೇ ಇವುಗಳಲ್ಲಿನ ಹೊಸತನ. ಕನ್ನಡ ಚಿತ್ರರಂಗ ನಿಜವಾಗ್ಲೂ ಬೆಳೀಬೇಕೂ ಅಂದ್ರೆ ಇಂತಹ ಹೊಸತನದ ರಂಗು ಆಗಾಗ, ಮತ್ತೆಮತ್ತೆ ಹೊಮ್ಮುತ್ತಲೇ ಇರಬೇಕು. ಕಥೆ, ಸಂಗೀತ, ಕಲಾವಿದರ ಆಯ್ಕೆ, ತಾಂತ್ರಿಕತೆ, ಹೀಗೆ ಚಿತ್ರ ನಿರ್ಮಾಣದ ಎಲ್ಲ ಹಂತದಲ್ಲೂ ಹೊಸ ಹೊಸ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ಕೊಡೊ ಪ್ರಯತ್ನಗಳು ನಡೆಯಬೇಕು. ಅಂತಹ ಎಲ್ಲ ಪ್ರಯತ್ನಗಳಿಗೆ ನಮ್ಮ ಜನರು ಉತ್ತೇಜನ ಕೊಡಬೇಕು. ಇಂತಹದೊಂದು ಪ್ರಯತ್ನವನ್ನು ಜೋಶ್ ಮೂಲಕ ಮಾಡಿರೋ ಶಿವಮಣಿ ಮತ್ತವರ ತಂಡಕ್ಕೆ ಅಭಿನಂದನೆ ಹೇಳೋಣ ಹಾಗೂ ಇನ್ನಷ್ಟು ಇಂತಹ ಪ್ರಯತ್ನಗಳು ನಮ್ಮ ಚಿತ್ರರಂಗದಲ್ಲಿ ನಡೆಯಲಿ ಅಂತ ಹಾರೈಸೋಣ. ಏನಂತೀ ಗುರು?

ಚಿತ್ರರಂಗದ ನಿರ್ಣಯಗಳು : ಜೊಳ್ಳು ಮತ್ತು ಕಾಳು


ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಸಂಭ್ರಮದಿಂದ ನಡೆಯಿತು. ಈ ಕಾರ್ಯಕ್ರಮದ ಕಡೇ ದಿವ್ಸ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದಾರೆ ಅನ್ನೋ ಸುದ್ದಿ 04.03.2009ರ ಕನ್ನಡಪ್ರಭದ ಮೂರನೇ ಪುಟದಲ್ಲಿ ಬಂದಿದೆ. ಕನ್ನಡ ಚಿತ್ರರಂಗದ ಏಳಿಗೆಗೆ ಅಗತ್ಯವಿದೆ ಅಂತ ಇವರು ಅಂದ್ಕೊಂಡಿರೋ ಆ ನಿರ್ಣಯಗಳ ಜೊತೆಗೆ ಇನ್ನೊಂದಿಷ್ಟು ವಿಚಾರಗಳ ಬಗ್ಗೇನೂ ನಿರ್ಣಯ ಕೈಗೊಳ್ಳಬೇಕಿತ್ತು ಗುರು!
ನಿರ್ಣಯಗಳು ಬೇಡಿಕೆ ಪಟ್ಟಿ ಮಾತ್ರಾ ಆಗಬಾರದು!
ಈ ಬಾರಿಯ ನಿರ್ಣಯಗಳಲ್ಲಿ ಚಿತ್ರರಂಗ ಮುಂದೆ ಏನೇನು ಯೋಜನೆ ಹೊಂದಿದೆ ಅನ್ನಕ್ಕಿಂತ ಉಳಿದವರು ಏನು ಮಾಡಬೇಕು ಅನ್ನೋ ಬಗ್ಗೇನೇ ಹೆಚ್ಚು ಒತ್ತುಕೊಟ್ಟಂಗಿದೆ. ಕನ್ನಡ ಚಿತ್ರಗಳ ಬಗ್ಗೆ ಜಾಗೃತಿ ಯಾತ್ರೆ ಅನ್ನೋ ಒಂದು ನಿರ್ಣಯ, ಚಿತ್ರಬೇತಿ ತರಬೇತಿ ಕಮ್ಮಟ ಅನ್ನೋ ಎರಡು ನಿರ್ಣಯಗಳನ್ನು ಬಿಟ್ಟರೆ ಉಳಿದದ್ದೆಲ್ಲಾ ಬೇಡಿಕೆಗಳೇ ಆಗಿವೆ. ಸಂತೋಷ. ಬೇಡಿಕೆಗಳ ಜೊತೆಗೆ ಒಳಗಿಂದ ಹ್ಯಾಗೆ ಚಿತ್ರರಂಗಾನ ಕಟ್ಕೋಬೇಕು, ಗಟ್ಟಿ ಮಾಡ್ಕೊಬೇಕು ಅನ್ನೋ ಮತ್ತಷ್ಟು ಆಳವಾದ ಚಿಂತನೇನೂ ಇರಬೇಕಿತ್ತು.
ಚಿತ್ರರಂಗ ಬೆಳಗಕ್ಕೆ ನಿಜಕ್ಕೂ ಬೇಕಿರೋದು?
ಗುಣಮಟ್ಟದ ಚಿತ್ರಗಳು ಇಂದಿನ ಅಗತ್ಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಗುಣಮಟ್ಟ ಅನ್ನೋದ್ರ ವಿವರಣೆ ಸ್ವಲ್ಪ ಕಷ್ಟಾನೆ. ನಿಜಕ್ಕೂ ನಮ್ಗೆ ಬೇಕಿರೋದು ಯಶಸ್ವಿಯಾಗಬಲ್ಲ ಚಿತ್ರಗಳು. ಇಂಥದೇ ಚಿತ್ರ ಗೆಲ್ಲುತ್ತೆ ಅಂತ ಹೇಳಕ್ ಆಗ್ದಿದ್ರೂ ಉತ್ತಮವಾದ ಕಥೆ, ಚಿತ್ರಕಥೆ, ನಿರೂಪಣೆ, ನಟನೆ, ಸಂಗೀತ ಇರೋವು ಗೆಲ್ಲಬಲ್ಲವು. ಚಿತ್ರರಂಗ ಈ ಹೊಸ ಉತ್ತಮ ಪ್ರತಿಭೆಗಳನ್ನು ಬೆಳೆಸೋಕೆ ಮುಂದಾಗಬೇಕು. ಹೊಸ ತರನಾದ ಪ್ರಯೋಗಗಳಿಗೆ ಮುಂದಾಗಬೇಕು. ಮುಂದಾಗೋರಿಗೆ ಉತ್ತೇಜನ ಕೊಡಬೇಕು. ಇದಕ್ಕಾಗಿ ಪ್ರತಿ ನಿರ್ಮಾಪಕನೂ ತನ್ನ ಚಿತ್ರಗಳಲ್ಲಿ ಇಂತಿಷ್ಟು ಹೊಸಮುಖಗಳಿಗೆ ಅವಕಾಶ ಕೊಡಬೇಕು ಅನ್ನೋ ಸ್ವಯಂಕಟ್ಟುಪಾಡು ಮಾಡ್ಕೊಬೌದಲ್ವಾ? ಇಂಥಾ ಒಂದು ಪ್ರತಿಭೆಗಳ, ಕಥೆಗಳ, ಚಿತ್ರಕಥೆಗಳ ಒಂದು ಬ್ಯಾಂಕ್ ಕಟ್ಟೋದು ಒಳ್ಳೇದಲ್ವಾ ಗುರು!
ಚಿತ್ರರಂಗದ ಕಾರ್ಮಿಕರ ಬದುಕಿಗೆ ಭದ್ರತೆ!
ಚಿತ್ರರಂಗದ ಕಾರ್ಮಿಕರಿಗೆ ಗ್ರೂಪ್ ಇನ್ಷುರೆನ್ಸ್ ಥರದ ಜೀವವಿಮೆಗಳಿಗೆ ಮುಂದಾಗಿ, ಕಲಾವಿದರ ಬದುಕಿಗೆ ಭದ್ರತೆ ಕಟ್ಟಿಕೊಡೋಕೆ ಯೋಜನೆ ಮಾಡಬೌದು. ನಿವೃತ್ತ ಕಲಾವಿದರಿಗೆ ಪಿಂಚಣಿ ದೊರೆಯೋ ಹಾಗೇ, ಅಸಹಾಯಕರಿಗೆ ವೈದ್ಯಕೀಯ ನೆರವು ದೊರೆಯೋ ಹಾಗೇ ಯೋಜನೆಗಳನ್ನು ರೂಪಿಸಬೇಕಲ್ವಾ? ಚಿತ್ರನಿರ್ಮಾಣ ಅನ್ನೋದು ಒಂದು ಗಂಭೀರವಾದ ಉದ್ದಿಮೆ ಅಂತ ಅರಿತು ನಿರ್ಮಾಣದಲ್ಲಿ ತೊಡಗೋ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳೂ ಇಂದಿನ ಅಗತ್ಯವಾಗಿದೆ. ಕಾರ್ಪೋರೇಟ್ ರೀತಿಯಲ್ಲಿ ವೃತ್ತಿಪರವಾಗಿ ಚಿತ್ರನಿರ್ಮಾಣಕ್ಕೆ ಇಳಿದಾಗ ಯಶಸ್ಸಿನ ಪ್ರಮಾಣಾನೂ ಹೆಚ್ಚುತ್ತದೆ. ಇವತ್ತು ಚಿತ್ರರಂಗಾನ ತಿಂದುಹಾಕ್ತಿರೋ ಮೀಟರ್ ಬಡ್ಡಿ ವ್ಯವಹಾರಕ್ಕೆ ಕೊನೆ ಹಾಡದೆ ನಿರ್ಮಾಪಕ್ರು ಚಿತ್ರಮಾಡಿ ಗೆಲ್ಲೋದು ಕಷ್ಟಾನೆ ಇದೆ. ತಮ್ಮದೇ ಆದ ಸಹಕಾರ ಸಂಘ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಚಿತ್ರ ನಿರ್ಮಾಣಕ್ಕೆ ಸಾಲ ಕೊಡೋ ವ್ಯವಸ್ಥೆ ಮಾಡ್ಕೊಬೌದಲ್ವಾ? ಚಿತ್ರನಿರ್ಮಾಣದ ನಾನಾ ಹಂತಗಳಾದ ಫಿಲ್ಮ್, ಪ್ರೊಸೆಸ್ಸಿಂಗ್, ಸೆಟ್ಟುಗಳು ಇವೆಲ್ಲಾನೂ ನಿರ್ಮಾಪಕರಿಗೆ ಹೊರೆಯಾಗದಂತೆ ಒದಗಿಸಿಕೊಳ್ಳೋ ವ್ಯವಸ್ಥೆ ಬೇಕಾಗಿದೆ.
ಮಾರುಕಟ್ಟೆ ಕಟ್ಟಿಕೊಳ್ಳೋ ತಂತ್ರಗಾರಿಕೆ!
ಇದರ ಜೊತೆಗೆ ಈಗಾಗಲೇ ನಿರ್ಣಯ ಮಾಡಿರೋ ಹಾಗೇ ಕನ್ನಡದ ತಾರೆಯರು ತಮ್ಮ ಚಿತ್ರ ಬಿಡುಗಡೆಯ, ಕ್ಯಾಸೆಟ್ ಸಿಡಿ ಬಿಡುಗಡೆಯ ಕಾರ್ಯಕ್ರಮಗಳ್ನ ಗಡಿ ಊರುಗಳಲ್ಲಿ ಹಮ್ಮಿಕೊಳ್ಳಬೇಕು. ಕನ್ನಡ ಚಿತ್ರ ಪ್ರದರ್ಶನ ಲಾಭದಾಯಕ ಉದ್ದಿಮೆಯಾಗಬೇಕೂಂದ್ರೆ ಸಹಜವಾಗೇ ಜನರನ್ನು ಸೆಳೆಯೋ ಶಕ್ತಿ ಚಿತ್ರಗಳಿಗೆ ಇರಬೇಕು. ಸರ್ಕಾರ ಎಲ್ಲಾ ಕಡೆ ಚಿತ್ರಮಂದಿರ ಆರಂಭಿಸಲು ಅನುಮತಿ ನೀಡಬೇಕಾದ ಪ್ರಕ್ರಿಯೆ ಸರಳವಾಗುವಂತೆ ಏಕಗವಾಕ್ಷಿ ವ್ಯವಸ್ಥೆ, ಹೊಸ ಉದ್ದಿಮೆಗಳಿಗೆ ನೀಡುವಂತೆ ಕೆಲವರ್ಷದ ತೆರಿಗೆ ರಜೆಗಳು ಬೇಕೆಂದು ಸರ್ಕಾರಾನ ಕೇಳೋದೇನೋ ಸರಿಯಾಗಿದೆ. ಚಿತ್ರಮಂದಿರಗಳ ಬಾಡಿಗೆ ದರವನ್ನು ಗೊತ್ತುಮಾಡಕ್ಕೆ ಚಿತ್ರಮಂದಿರಗಳ ಮಾಲೀಕರನ್ನು ಪ್ರತಿನಿಧಿಸೋ ಸರಿಯಾದ ಸಂಘಟನೆ ಜೊತೆ ಸಂಪರ್ಕ ಇಟ್ಕೊಂಡು ಒಪ್ಪಂದಗಳ ಮೂಲಕ ಬಾಡಿಗೆ ತೀರ್ಮಾನ ಮಾಡ್ಕೊಳ್ಳೋದು ಒಳ್ಳೇದು!
ನಕಲಿ ಸಿ.ಡಿ ಹಾವಳಿ ತಡೆಗೊಂದು ಯೋಜನೆ!
ನಕಲಿ ಸಿಡಿಗಳ ವಿರುದ್ಧ ಜನಜಾಗೃತಿ ಮಾಡಿ ಅಂತಹ ದುಷ್ಟ ಶಕ್ತಿಗಳನ್ನು ಸಾರ್ವಜನಿಕರ ಸಹಕಾರದಿಂದ ಕಂಡುಹಿಡಿದು ಅಂಥವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಈ ಪಿಡುಗನ್ನು ನಿವಾರಿಸಲು ಮುಂದಾಗಬೋದಿತ್ತು. ಜಾಗೃತಿ ಯಾತ್ರೆಯ ಜೊತೇಲೇ ಇದನ್ನೂ ಮಾಡುದ್ರೆ ಪೈರಸಿ ತಡ್ಯಕ್ಕೆ ಆಗಲ್ವಾ? ಅಂತ ಯೋಚುಸ್ಬೌದಿತ್ತು. ನಕಲಿ ಸಿ.ಡಿ ತಯಾರ್ಸೋ ಒಂದೊಂದು ಅಂಗಡಿನ ಹಿಡ್ಕೊಟ್ಟ ಸಾರ್ವಜನಿಕರಿಗೆ ಅವರ ಮೆಚ್ಚಿನ ಒಬ್ಬೊಬ್ಬ ತಾರೆಯ ಜೊತೆ ಒಂದು ಡಿನ್ನರ್ ಮಾಡುಸ್ತೀವಿ ಅಂದ್ರೂ ಆಗ್ತಿತ್ತಪ್ಪ. ಈ ಪೈರಸಿ ಅಂಗಡಿಗಳ ಬಾಗಿಲು ಹಾಕ್ಸೋದ್ ಕಷ್ಟ ಆಗಲಾರದು ಅನ್ಸುತ್ತೆ!
ಕನ್ನಡ ಚಿತ್ರರಂಗ ಬೆಳೆಯೋಕೆ ಬೇಕಿರೋದು!
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ?. ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ?, ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದನ್ನೆಲ್ಲಾ ಮುಕ್ತವಾಗಿ ಚರ್ಚೆ ಮಾಡಬೇಕಿತ್ತು ಗುರು! ಆಗ ನಾಳಿನ ಬಗ್ಗೆ ಯೋಚನೆ ಮಾಡ್ತಿರೋ ಕನ್ನಡ ಚಿತ್ರರಂಗದ ಈ ತಲೆಮಾರನ್ನು ಸ್ವರ್ಗದಿಂದಲೇ ನಮ್ಮ ಹಿರಿಯರು ಹರಸ್ತಿದ್ರು! ಏನಂತೀರಾ?

'ಬಂಗಾರದ ಮನುಷ್ಯ'ನ ಬಂಗಾರದಂಥಾ ಹಾಡು

ಸಾವಿರಾರು ಜನರ ಜೀವನ ಶೈಲೀನೆ ಬದಲ್ಸೋ ಶಕ್ತಿ ಒಂದು ಸಿನಿಮಾ ಹಾಡಿಗೆ ಇರುತ್ತೆ ಅಂದ್ರೆ ಅಚ್ಚರಿ ಆಗುತ್ತಲ್ವಾ? ಸಾವಿರ ಮೈಲಿಯ ಪಯಣವೂ ಒಂದು ಹೆಜ್ಜೆಯಿಂದಲೇ ಆಗೋದು, ಪ್ರಯತ್ನ ಪಡಬೇಕು, ಎಂದೆಗುಂದಬಾರ್ದು ಅನ್ನೋ ಸಂದೇಶಗಳನ್ನೆಲ್ಲಾ ಅದೆಷ್ಟು ಚೆನ್ನಾಗಿ ಬಂಗಾರದ ಮನುಷ್ಯ ಚಿತ್ರದ ಈ ಹಾಡಲ್ಲಿ ಕೊಟ್ಟಿದಾರೆ ನೋಡಿ.

ಸಖತ್ ಸ್ಪೂರ್ತಿ ಕೊಡೋ ಈ ಹಾಡಲ್ಲಿರೋ ವಿಶೇಷನಾದ್ರೂ ಏನಂತೀರಾ? ಎಷ್ಟು ಸಾರ್ತಿ ಕೇಳುದ್ರೂ ಇಂಪಾಗಿರೋ ಸಂಗೀತ, ಮೈ ಮನಗಳಲ್ಲಿ ಅದಮ್ಯವಾದ ಕಸುವು ತುಂಬುವ ಸಾಹಿತ್ಯ, ಕಣ್ ತಣಿಸೋ ನೋಟ, ಮನ ತಟ್ಟೋ ಅಭಿನಯಾ... ಆಹಾ ಇನ್ನೊಂದಪಾ ನೋಡ್ಮಾ ಬನ್ನಿ.


ಈ ಸಿನಿಮಾನಾ, ಈ ಹಾಡನ್ನ ನೋಡ್ಕೊಂಡು ಎಷ್ಟೋ ಜನರು ತಮ್ಮ ಬದುಕಿನ ದೃಷ್ಟಿಕೋನವನ್ನೇ ಬದಲಿಸಿಕೊಂಡ್ರಂತೆ.

ಕನ್ನಡ ನಾಡು ಕಟ್ಟೋಕೆ ಹೊರಡೋ ಕಟ್ಟಾಳುಗಳಿಗೂ ಹೆಜ್ಜೆಗೊಂದು ಸವಾಲು ಎದ್ರಾಗಬೋದು. ಏನೆ ಬಂದ್ರೂ ಮುಂದಡಿಯಿಡ್ತೀವಿ ಅನ್ನೋ ಧೃಡಸಂಕಲ್ಪ ಇದ್ರೆ ಎದ್ರಾಗೋ ಬಂಡೆಗಳೂ ಪುಡಿಪುಡಿ..

ಇಂಥಾ ಹಾಡುಗಳು ಈಗ್ಲೂ ಪರಿಣಾಮಕಾರಿಯಾಗಿ ಪ್ರೇರಣೆ ನೀಡ್ತಿರೋದು ಅವುಗಳ ಸಾರ್ಥಕತೆಗೆ ಸಾಕ್ಷಿ.

ಮಿಲನದ ಹಾಡಿಗೆ ಎಂಕನ ಭಾಷ್ಯ

ಹುಚ್ಚುಹಿಡಿದ ಭಕ್ತ ಒಬ್ಬ ಪ್ರತಿಯೊಂದರಲ್ಲೂ ತನ್ನ ಪ್ರೀತಿಯ ಭಗವಂತನ್ನ ಕಾಣೋಹಾಗೆ, ಪ್ರೀತಿಸುತ್ತಾ ಇರೋ ಒಬ್ಬನಿಗೆ ಎಲ್ಲೆಲ್ಲೂ ತನ್ನ ನಲ್ಲೆ ಕಂಡಂಗೆ ಎಂಕನಿಗೆ ಮಿಲನ ಚಿತ್ರದಲ್ಲಿ ಜಯಂತ ಕಾಯ್ಕಿಣಿ ಬರೆದಿರೋ ಒಂದು ಹಾಡಲ್ಲಿ ಬರೀ ಕನ್ನಡಿಗನಿಗೆ ಏಳಿಗೆಯ ಕಿವಿಮಾತೇ ತುಂಬಿತ್ತು ಅಂತ ನಮಗೆ ಬಂದು ಹೇಳಿದ. "ಅದೆಂಗ್ಲಾ ಎಂಕ?" ಅಂತ ಕೇಳಿದಾಗ ಔನು ಆ ಹಾಡಿಗೆ ಕೊಟ್ಟ ಭಾಷ್ಯ ಒಸಿ ಹಿಂಗಿತ್ತು:

ಈ ಹಾಡಲ್ಲಿ ಒಬ್ಬ ಕನ್ನಡಿಗ ತನ್ನ ಕನಸಿನ ಕರ್ನಾಟಕದೆಡೆಗೆ ಹೊರ್ಟಿರ್ತಾನೆ ಗುರು! ಅವನಿಗೆ ಕವಿ ಹೀಗೆ ಹೇಳ್ತಾನೆ:
ಕಿವಿಮಾತೊಂದು ಹೇಳಲೇ ನಾನಿಂದು ದಾರಿ ನಿಂತಾಗ ಸಾಗಲೇ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೇ ಬೇಕಿಂದು ||ಪ||

ಕನ್ನಡಿಗನಿಗೆ ಏಳಿಗೆಯ ದಾರಿ ನಿಂತುಹೋಗಿದೆ ಅನ್ನಿಸಿದೆ. ಅವನಿಗೆ ಕವಿ ಹೇಳಿರೋದು ಏನು ಅಂದ್ರೆ - ನೀನು ನಿನ್ನೆ ಏನೇ ಆಗಿರು (ವಿಜಯನಗರದ ಅರಸನೇ ಆಗಿರು, ಇಲ್ಲವೇ ಬ್ರಿಟಿಷರ ಕಾಲಾಳೇ ಆಗಿರು), ಆ ನೆನ್ನೆ ಅನ್ನೋದು ಈಗಿಲ್ಲ. ನಾಳೆ ನೀನೇನಾಗ್ತ್ಯಾ ಅನ್ನೋದು ತಿಳಿದಿಲ್ಲ. ಆದ್ರೆ ಒಂದು ಖಂಡಿತ ಏನಪ್ಪಾ ಅಂದ್ರೆ ನೀನು ಇವತ್ತು ನಿನ್ನತನವನ್ನ ಬಿಟ್ಟು ಬಾಳಕ್ಕಾಗಲ್ಲ, ನೀನು ನೀನಾಗೇ ಬಾಳಬೇಕು. ಅಂದ್ರೆ - ನೀನು ನಿನ್ನ ಕನ್ನಡತನವನ್ನ ಬಿಡದೇ ಬಾಳಬೇಕು. ಹೀಗೆ ನೀನಾಗಿ ಬಾಳುವುದು ಬಿಡುವುದು ಎಂಬ ಆಯ್ಕೆ ನಿನ್ನದಲ್ಲ. ನೀನಿಲ್ಲಿ ಅಸ್ವತಂತ್ರ. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ನೀನಾಗಿ ಬಾಳಲೇಬೇಕು.
ಹಸಿರಾಗಿದೆ ದ್ವೀಪವು ನಿನಗಾಗಿ ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ||೧||

ಹಸಿರಾದ ದ್ವೀಪ ಅಂದರೆ ಕನಸಿನ ಕರ್ನಾಟಕ. ಹಸಿರು ಸಮೃದ್ಧಿಯ ಸೂಚಕ. ದ್ವೀಪ ಹೇಗೆ? ಹೇಗೆ ಎಂದರೆ ಇಡೀ ಪ್ರಪಂಚ ಎಂಬ ಸಾಗರದಲ್ಲಿರೋದರಿಂದ ದ್ವೀಪ. ಈ ಕನಸಿನ ಕರ್ನಾಟಕ - ಯಾವುದು ಗುರಿಯೋ ಆ ಕನಸಿನ ಕರ್ನಾಟಕ ನಿನಗಾಗೇ ಇದೆ, ಮತ್ತೊಬ್ಬನಿಗಲ್ಲ. ಮತ್ತೂ ಏನೆಂದರೆ ಆ ಹಸಿರಾದ ದ್ವೀಪ - ಎಂದರೆ ಸಮೃದ್ಧ ಕರ್ನಾಟಕ - ಮುಂದೆ ಇದ್ದೇ ಇದೆ. ಇದೆಯೋ ಇಲ್ಲವೋ ಎನ್ನುವ ಸಂದೇಹ ಬೇಡ. ಆ ಗುರಿಯ ಕಡೆಗೆ ನಸುನಗುತಲೇ ನೀನು ಗೆಲುವುಮೊಗದವನಾಗಿ ಸಾಗು! ಹೊಸ ಎಂದರೆ ಇವತ್ತಿನ ಜಾಗತೀಕರಣವಾಗಿರೋ. ತಂಗಾಳಿ ಯಾಕೆ ಅಂದರೆ ಅದರಿಂದ ಕನ್ನಡಿಗನಿಗೆ ಒಳಿತೇ ಆಗಿದೆ. ಅ ಹೊಸ ತಂಗಾಳಿ ಮೆಲುವಾಗಿ ಹೇಳಿದೆ. ಮೆಲುವಾಗಿ ಎಂದರೆ ಬುದ್ಧಿವಂತರ ಕಿವಿಗೆ ಮಾತ್ರ ಕೇಳಿಸುವ ಹಾಗೆ. ಏನು ಹೇಳಿದೆ? ಈ ಬಾಳುಂಟು ಬಾಳುವ ಸಲುವಾಗಿ. ಈ ಬಾಳು ಎಂದರೆ ಕನ್ನಡಿಗನಾಗಿ ಹುಟ್ಟಿರುವ ಈ ಬಾಳು. ಇದು ಬಾಳುವ ಸಲುವಾಗಿಯೇ ಇದೆ ಎಂದರೆ ನೀನು ಕನ್ನಡಿಗನಾಗಿಯೇ ಸದಾಕಾಲ ಬಾಳಬೇಕು ಎಂದರ್ಥ. ಬಾಳೇ ಬಾಳ್ತೀಯ, ಬಾಳದೆ ಹೇಗಿರಬಲ್ಲೆ ನೀನು? ಇದು ನಿನ್ನ ಕೈಯಲ್ಲಿ ಇಲ್ಲವೇ ಇಲ್ಲ!
ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು ಓಡಲೇಬೇಕು ನೀನಿಂದು ||೨||

ಕನ್ನಡಿಗ ಇವತ್ತಿನ ದಿನ ನಾಲ್ಕು ಗೋಡೆಗಳ ನಡುವ ಒಬ್ಬೊಬ್ಬನೇ ಇದ್ದಾನೆ, ಇತರ ಕನ್ನಡಿಗರೊಡನೆ ಒಗ್ಗೂಡಿಲ್ಲ. ಆ ನಾಲ್ಕುಗೋಡೆಗಳ ಬಾಗಿಲಿನಾಚೆಗೆ ಬಾಳು - ಎಂದರೆ ಜೀವನ - ಅವನನ್ನು ಬಾ ಎಂದು ಕರೆದಿದೆ. ಇಲ್ಲಿ ಕನ್ನಡಿಗ ಎಂದರೆ ಒಬ್ಬನೇ ಅಲ್ಲ, ಕೋಟಿಗಟ್ಟಲೆ ಜನ. ಇವರೆಲ್ಲ ಬಾಗಿಲಿನಾಚೆಗೆ ಬಂದಾಗಲೇ ಅದು ಬಾಳು. ಎಂದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಗೂಡಿನಿಂದ ಹೊರಬಂದು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟನ್ನೇ ಇಲ್ಲಿ ಬಾಳು ಎಂದಿರುವುದು. ಒಗ್ಗಟ್ಟಿಲ್ಲದೆ ತನ್ನ ನಾಲ್ಕು ಗೋಡೆಯೊಳಗೆ ಕೂತಿರುವುದು ಬಾಳೇ ಅಲ್ಲ, ಸಾವು! ಹೀಗೆ ಒಗ್ಗಟ್ಟೆಂಬ ಬಾಳು ಕೂಗಿದಾಗ ನೀನು ಸಂತಸದಿಂಡ ಓಗೊಟ್ಟು ಓಡಲೇಬೇಕು ಇಂದು - ಎಂದರೆ ನಿನಗೆ ಓಡದೆ ಬೇರೆ ದಾರಿಯಿಲ್ಲ; ಓಡದೆ ಇರುವುದು ನಿನ್ನ ನಿಯಂತ್ರಣದಲ್ಲಿಲ್ಲ!
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದೂ
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು ||೩||

ಸಮಯ - ಎಂದರೆ ಹಿಂದು, ಇಂದು ಮತ್ತು ಮುಂದು - ಇವೆಲ್ಲವೂ ನಿನಗಾಗಿ ಸಾವಿರ ಕಣ್ಣಿನ ನವಿಲಾಗಿ ನಿಂತಿದೆ. ಕಣ್ಣೇಕೆ ಎಂದರೆ ಅದು ನಿನ್ನನ್ನು ನೋಡುತ್ತಿರುವುದರಿಂದ. ಎಂದರೆ ನಿನ್ನ ಹಿಂದಿನವರು, ಇಂದಿನವರು ಮತ್ತು ಮುಂದಿನವರು - ಇವೆರಲ್ಲಾ ನಿನ್ನನ್ನು ಅಸಂಖ್ಯಾತ ಕಣ್ಣುಗಳಿಂದ ನೋಡುತ್ತಿದ್ದಾರೆ, ನಿನ್ನ ಪ್ರತಿಯೊಂದು ಹೆಜ್ಜೆಯನ್ನೂ ಆಲಿಸುತ್ತಿದ್ದಾರೆ. ಇಡೀ ಸಮಯವನ್ನು ಒಂದು ನವಿಲೆಂದಿರುವುದು ಅದರ ಅಂದವನ್ನು ಸೂಚಿಸಲು. ಹೀಗೆ ಸಮಯವೆನ್ನುವುದೇ ಹೆಪ್ಪುಗಟ್ಟಿ ನಿನ್ನನ್ನು ನೋಡುತ್ತಿದ್ದಾಗ ಹಗುರಾಗಿ ಕಣ್ಣನ್ನು ತೆರೆದು ನೀನು ಅದನ್ನು ನೋಡಲೇಬೇಕು ಬಂದು. ಹಗುರಾಗಿ ಏಕೆ ಎಂದರೆ ಪೂರ್ತಿ ನೋಡಲು ಹೊರಟರೆ ನಿನ್ನ ಕಣ್ಣು ಸುಟ್ಟುಹೋದೀತು, ಅದಕ್ಕೆ. ನೋಡಲೇ ಬೇಕು ಎಂದರೆ ಮತ್ತೆ ನಿನಗೆ ನೋಡದೆ ಆಯ್ಕೆಯೇ ಇಲ್ಲ ಎಂಬ ಅರ್ಥ. ಇಡೀ ಸಮಯವೇ ನಿನ್ನ ಮುಂದೆ ನಿಂತಿದ್ದಾಗ ನೀನು ನೋಡದೆ ಇರಲಾರೆ ಎನ್ನುವುದು ಕವಿವಾಣಿ. ಇಲ್ಲೂ ನೋಡುವುದು ಬಿಡುವುದು ನಿನ್ನ ಹತೋಟಿಯಲ್ಲಿಲ್ಲ; ಅಸ್ವತಂತ್ರನು ನೀನು.
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ ||೪||

ಕನ್ನಡಿಗನ ಮೇಲೆ ಕವಿದಿರುವ ಮೋಡಕ್ಕೆ ಒಂದು ಬೆಳ್ಳಿಯ ಅಂಚಿದೆ, ಆದ್ದರಿಂದ ಮೋಡ ಬಾನಲ್ಲಿ ನಗುವ ಬೀರಿದೆ. ಮೋಡ ಇವತ್ತಿನ ತೊಂದರೆಗಳು. ಆ ತೊಂದರೆಗಳೇ ಏಳಿಗೆಗೆ ಬೇಕಾದ್ದೆಲ್ಲವನ್ನೂ ತುದಿಯಲ್ಲಿ ಹೊಂದಿರುವುದರಿಂದ ಬೆಳ್ಳಿಯ ಅಂಚಿರುವುದು. ಹೀಗಿರುವಾಗ ನಿನ್ನ ಬಾಳಿನ ಸಂಗೀತವನ್ನ. ಸಂಗೀತ ಎಂದರೆ ಲಯಬದ್ಧವಾದ ಮತ್ತು ಎಲ್ಲರಿಗೂ ಇಷ್ಟವಾಗುವಂಥ ಒಂದು ಗುಂಪುಗಾಯನ. ಇಂತಹ ಒಗ್ಗಟ್ಟಿನ ಗುಂಪುಗಾಯನದಲ್ಲಿ ನಿನ್ನ ಪಾಲನ್ನು ನೀನು ಹಾಡಲೇಬೇಕು. ಹಾಡದೆ ಆಯ್ಕೆ ನಿನಗಿಲ್ಲ ಇಲ್ಲಿ!
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ ||೫||

ಆ ನಿನ್ನ ಕನಸಿನ ಕರ್ನಾಟಕ ಯಾವುದಿದೆಯೋ ಅದರ ಕಡೆಗೆ ನೀನು ಮಿಂಚುವ ಅಲೆಗಳ ನದಿಯಾಗಿ ಬೇಗನೆ ಚಲಿಸು. ಮಿಂಚುವ ಅಲೆ ಏತಕ್ಕೆ ಎಂದರೆ ಸೂರ್ಯನ ಶಕ್ತಿಯನ್ನು ಬಿಂಬಿಸುವುದರಿಂದ. ನದಿ ಬೇಗ ಏತಕ್ಕೆ ಚಲಿಸುತ್ತದೆ ಎಂದರೆ ಕಲ್ಲು-ಬಂಡೆಗಳ ಅಡಚಣೆಗಳಿಂದ. ಹೀಗೆ ಬೇಗ ಬೇಗನೆ ನದಿಯಾಗಿ ಹರಿದು ನೀನು ನಿನ್ನ ಪಾಲಿನ ಆಟವನ್ನು ಆಡಲೇಬೇಕು. ಏನು ಆಟ? ಈ ಬಾಳೆಂಬ ಆಟ - ಯಾವುದರಲ್ಲಿ ನೀನು ಕನಸಿನ ಕರ್ನಾಟಕವನ್ನು ಕಟ್ಟಲು ಹೊರಟಿದೆಯೋ ಆ ಆಟ. ಆಡಲೇಬೇಕು ಎಂದರೆ ಅದು ಕವಿ ಕನ್ನಡಿಗನಿಗೆ ಮಾಡಿರುವ ಆಜ್ಞೆಯಲ್ಲ, ಅವನ ಅಸ್ವತಂತ್ರತೆಯನ್ನ ಸೂಚಿಸುತ್ತಿದೆ. ಆ ಆಟವನ್ನು ನೀನು ಆಡುವುದಿಲ್ಲ ಎಂದುಕೊಂಡರೂ ನೀನು ಆಡಲೇಬೇಕು. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ಆಡಲೇಬೇಕು, ಕನ್ನಡಿಗನಾಗಿ ಬಾಳಲೇಬೇಕು, ನಿಂತ ದಾರಿಯಲ್ಲಿ ಮುಂದೆ ಸಾಗಲೇಬೇಕು, ಒಗ್ಗಟ್ಟಾಗಲೇಬೇಕು, ನಿನ್ನ ಕನಸಿನ ಕರ್ನಟಕವನ್ನು ನೀನು ಹೋಗಿ ಮುಟ್ಟಲೇಬೇಕು; ನಿನಗಿಲ್ಲಿ ಆಯ್ಕೆಯಿಲ್ಲ, ಇದಾವುದೂ ನಿನ್ನ ಹತೋಟಿಯಲ್ಲಿಲ್ಲ; ಎಲ್ಲಾ ಆಗಲೇಬೇಕು!

ಅಲ್ಲ - "ಅದೆಂಗ್ಲಾ ಎಂಕ?" ಅಂತ ಕೇಳಿದ ತಕ್ಷಣ ಇಷ್ಟೆಲ್ಲಾ ಹೇಳಿದನಲ್ಲ, ಎನಾದರೂ ಅರ್ಥವಾಯಿತಾ ಗುರು? ಸುಮ್ಮನೆ ಹೋಗಿ ಪೂಜಾ ಗಾಂಧೀನೂ ಐಟಂ ಹಾಡ್ನೂ ನೋಡ್ಕೊಂಡ್ ಬಾರ್ಲಾ ಅಂದ್ರೆ ಯೇನೋ ಬುಟ್ಟ ಸಿದ್ಧಾಂತ!

ಕನ್ನಡ ಚಿತ್ರಗಳಿಂದ ನಾವೇ ದುಡ್ಡು ಮಾಡ್ಕೋಬೇಕು

ಗೋವಾದಲ್ಲಿ ನಡಿತಿರೋ 38ನೇ ಅಂತರ್ರಾಷ್ಟ್ರೀಯ ಚಲನ-ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಮಿನುಗುತ್ತಿವೆ ಅಂತ ಡೆಕ್ಕನ್ ಹೆರಾಲ್ಡ್ ನಲ್ಲಿ ಸುದ್ಧಿ. ಕನ್ನಡದಲ್ಲಿ ಒಳ್ಳೇ ಚಿತ್ರಗಳು ಇವೆಯಾ, ಅಥವಾ ಇರಕ್ಕೆ ಸಾಧ್ಯ ಇದೆಯಾ, ಜನ ಅದನ್ನು ನೋಡುತ್ತಾರಾ ಅಂತ ಕುಹಕ ಪ್ರಶ್ನೆಗಳ್ನ ಹಾಕೋರಿಗೆ ಈ ವರದಿ ಸರಿಯಾದ ಉತ್ತರ ನೀಡತ್ತೆ ಗುರು!

ಕಳೆದ ಎರಡು ವರ್ಷದಿಂದ ಅನೇಕ ಕನ್ನಡ ಚಿತ್ರಗಳು ಯಶಸ್ಸು ಕಂಡು ಬಂಡವಾಳ ಹಾಕೋರ ಜೇಬು ತುಂಬಿಸಿ ಕನ್ನಡ ಚಿತ್ರಗಳಿಗೆ ಬೇಜಾನ್ ಮಾರುಕಟ್ಟೆ ಇದೆ ಅಂತ ಸಾಬೀತು ಮಾಡಿವೆ. ಅನೇಕ ಯುವ ನಟ-ನಟಿಯರು, ಕಲಾವಿದರು, ತಂತ್ರಜ್ಞರು ಕನ್ನಡ ಚಿತ್ರರಂಗ ಪ್ರವೇಶಿಸಿ ಹೊಸ ಹೊಸ ಪ್ರಯೋಗಗಳ ಮೂಲಕ ಮೆರಗು-ಬೆರಗು ಹುಟ್ಟಿಸಿದ್ದಾರೆ.

ಆದ್ರೆ ಕನ್ನಡ ಚಿತ್ರಗಳಿಗಿರೋ ಮಾರುಕಟ್ಟೆಯಿಂದ ಇವತ್ತಿನ ದಿನ ಎರ್ರಾಬಿರ್ರಿ ದುಡ್ಡು ಮಾಡ್ಬೋದು ಅಂತ ಅರ್ಥ ಮಾಡ್ಕೊಂಡಿರೋ ನಿರ್ದೇಶಕ, ನಿರ್ಮಾಪಕರಲ್ಲಿ ಪರಭಾಷಿಕರು ಸಕ್ಕತ್ ಜನ ಇದಾರೆ ಅನ್ನೋದು ನಮ್ಮ ಮುಟ್ಠಾಳತನದ ಗುರುತು! ನಮ್ಮ ಭಾಷೆಯ ಚಿತ್ರಗಳ್ನ ಮಾಡ್ಕೊಂಡು ನಾವೇ ದುಡ್ಡು ಮಾಡ್ಕೊಳೋ ಯೋಗ್ಯತೇನೂ ನಮಗೆ ಇಲ್ಲವಾ? ನಮ್ಮ ಕನ್ನಡದ ನಿರ್ದೇಶಕ-ನಿರ್ಮಾಪಕರು ದುಡ್ಡು ಸುರಿದು ಒಳ್ಳೊಳ್ಳೇ ಚಿತ್ರಗಳ್ನ ತೆಗೀಬೇಕು, ಕನ್ನಡದ ಮಾರುಕಟ್ಟೆಯಿಂದ ಲಾಭ ಪಡ್ಕೋಬೇಕು. ಈ ಲಾಭಾನೂ ಬೀದೀಲಿ ಹೋಗೋರೆಲ್ಲಾ ಹೊಡ್ಕೊಂಡು ಹೋಗಕ್ಕೆ ಬಿಡಬಾರದು ಗುರು! ಸೋಲಿಗೆ ಹೆದರಿ "ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ" ಆಗದು ಗೆಲುವು ಎಂದೂ ಅಂತ ನಾವು ಅರ್ಥ ಮಾಡ್ಕೋಬೇಕು.
Related Posts with Thumbnails