ಬೆಳಗಲಿ ನಾಡ ನಾಳೆಗಳು: ಹೊತ್ತಗೆ ಬಿಡುಗಡೆಗೆ ನಲ್‌ಬರವು


ಬನವಾಸಿ ಬಳಗವು ಹೊರ ತರುತ್ತಿರುವ ಹೊಸ ಹೊತ್ತಗೆ "ಬೆಳಗಲಿ ನಾಡ ನಾಳೆಗಳು: ಕಲಿಕಾ ವ್ಯವಸ್ಥೆಗೊಂದು ಕೈಮರ". ಈ ಹೊತ್ತಗೆಯ ಬಿಡುಗಡೆ ಕಾರ್ಯಕ್ರಮವನ್ನು ಆಗಸ್ಟ್ ೪ರ ಶನಿವಾರದಂದು ಬೆಂಗಳೂರಿನ ಬಸವನಗುಡಿಯ ಬಿ. ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ಼್ ವರ್ಲ್ಡ್ ಕಲ್ಚರ್‌ನಲ್ಲಿ ಏರ್ಪಡಿಸಲಾಗಿದೆ. ಬನ್ನಿ, ನಮ್ಮೊಂದಿಗೆ ಕೈಜೋಡಿಸಿ. 

ಯಾವುದೇ ನಾಡಿನ ಏಳಿಗೆಯಲ್ಲಿ ಕಲಿಕೆ ಏರ್ಪಾಡಿನ ಪಾತ್ರ ಬಹು ಮಹತ್ವದ್ದಾಗಿರುತ್ತದೆ. ತಾಯ್ನುಡಿಯಲ್ಲಿ ಕಲಿಕೆಯೇ ಪರಿಣಾಮಕಾರಿಯಾದುದು ಎಂಬುದನ್ನು ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ, ನುಡಿಯರಿಗರೂ ಸಾರಿ ಹೇಳುತ್ತಿದ್ದೂ, ತಾಯ್ನುಡಿಯಲ್ಲಿಯೇ ಎಲ್ಲವನ್ನೂ ಕಲಿಯುವ ಹಲದೇಶಗಳು ಏಳಿಗೆಯ ಮೆಟ್ಟಿಲಲ್ಲಿ ತುಂಬಾ ಮೇಲೇರಿ ನಿಂತಿರುವುದು ನಮ್ಮ ಕಣ್ಣಮುಂದೆ ಇದ್ದರೂ, ನಮ್ಮ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಎಲ್ಲಾ ಬಗೆಯ ಕಲಿಕೆ ಸಿಗುಬಹುದಾದಂತಹ ವ್ಯವಸ್ಥೆ ಕಟ್ಟಲಾಗಿಲ್ಲ ಎಂದೇ ಹೇಳಬಹುದು. ಮೊದಲ ಹಂತದ ಕಲಿಕೆಯಿಂದಾ ಹಿಡಿದು, ಮೇಲ್ಮಟ್ಟದ ಕಲಿಕೆಯವರೆಗೂ, ಕನ್ನಡದಲ್ಲಿಯೇ ಕಲಿಯಬಹುದಾದಂತಹ ಏರ್ಪಾಡು ಕನ್ನಡಿಗರಿಗೆ ಸಾಕಷ್ಟು ಒಳಿತು ಮಾಡಬಲ್ಲುದಾಗಿದೆ. ಆ ಮೂಲಕವೇ, ನಮ್ಮ ನಾಡಿನ ನಾಳೆಗಳು ಬೆಳಗಬಹುದಾಗಿವೆ. ಇಂತಹ ಒಂದು ಏರ್ಪಾಡು ಕಟ್ಟಿಕೊಂಡಿರುವ ನಾಡುಗಳು ಮಾತ್ರ ಇಂದು ಮುಂದುವರೆದ ನಾಡುಗಳೆನಿಸಿಕೊಂಡಿವೆ.
ನಮ್ಮ ನಾಡಿನಲ್ಲೂ ಜ್ಞಾನವು ಜನರಾಡುವ ನುಡಿಯಲ್ಲಿ ದೊರಕುವಂತಾಗಬೇಕು, ಮತ್ತು, ಆ ಮೂಲಕ ಜ್ಞಾನವು ಎಲ್ಲಾ ಕನ್ನಡಿಗರಿಗೆ ಒದಗುವಂತಿರಬೇಕು ಎಂಬ ಆಶಯದಿಂದಲೇ ಈ ಹೊತ್ತಗೆಯನ್ನು ಸಂಪಾದಿಸಲಾಗಿದೆ. ಅಂತಹ ಒಂದು ಏರ್ಪಾಡು ಕಟ್ಟಲು ನಮ್ಮ ಮುಂದಿರುವ ತೊಡಕುಗಳೇನು, ಅವುಗಳನ್ನು ನಿವಾರಿಸಿಕೊಳ್ಳುವ ದಾರಿಗಳಾವುವು, ಕಟ್ಟುವ ಕೆಲಸದಲ್ಲಿ ಯಾರೆಲ್ಲಾ ಪಾಲ್ಗೊಳ್ಳಬಹುದಾಗಿದೆ, ಬೇರೆ ಬೇರೆ ಆಯಾಮಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಬೇಕಾಗಿದೆ ಎಂಬ ಬಗ್ಗೆ ಚರ್ಚೆಗಳೂ ಈ ಹೊತ್ತಗೆಯಲ್ಲಿ ಕಂಡುಬರುತ್ತವೆ.

ಬನವಾಸಿ ಬಳಗವು ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ತಪ್ಪದೇ ಬನ್ನಿರಿ. ಕನ್ನಡಿಗರ ಏಳಿಗೆಗೆ ಬೇಕಾಗಿರುವ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾಗಿರುವ ಬಗ್ಗೆ ದನಿ ಎತ್ತೋಣ.


ಪರಭಾಷಿಕರಿಗೆ ಕನ್ನಡ ಕಲಿಸೋಕೆ ಶುರುವಾಗಿದೆ ಹೊಸ ಸಂಸ್ಥೆ!


ಕನ್ನಡನಾಡಿನ ಮುಖ್ಯವಾಹಿನಿಗೆ ಇಲ್ಲಿಗೆ ವಲಸೆ ಬಂದಿರೋ ಪರಭಾಷಿಕರು ಸೇರಬೇಕು ಅನ್ನೋ ಆಶಯದಿಂದ ನಮ್ಮಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿವೆ. ಇವುಗಳಲ್ಲಿ ಹೆಚ್ಚಿನವು ಉಚಿತವಾಗಿ ಕನ್ನಡ ಕಲಿಸೋ ಅಂಥವು. ಅಂತರ್ಜಾಲದಲ್ಲಿ ಉಚಿತವಾಗಿ ಸಿಗೋ ಪಾಠಗಳು, ಸಂಸ್ಥೆಗಳಲ್ಲಿ ಕನ್ನಡ ಕಲಿಸಲು ಆಯಾಸಂಸ್ಥೆಗಳ ಆಡಳಿತ ಮಂಡಳಿಯೋರುನ್ನಾ, ಅಲ್ಲಿನ ಮಾನವ ಸಂಪನ್ಮೂಲ ವಿಭಾಗದೋರುನ್ನಾ ಒಪ್ಪಿಸೋ ಕಷ್ಟ ಇಂಥಾ ತರಗತಿಗಳನ್ನು ಶುರು ಮಾಡಿದವರಿಗೇ ಗೊತ್ತು! ಹೆಚ್ಚಿನ ಸಲಾ ನಾವು ಕನ್ನಡ ಕಲಿಸೋಕೆ ಮುಂದಾಗೋದು ಕನ್ನಡ ಉಳಿಸೋಕೆ ಎನ್ನೋ ಮನಸ್ಸು ಹಲವರಲ್ಲಿರುತ್ತೆ. ಆದರೆ ವಲಸಿಗನೊಬ್ಬ ಸ್ಥಳೀಯ ಭಾಷೆ ಕಲಿಯೋದು ಅವನಿಗೇ ಅನುಕೂಲಕರ ಅನ್ನೋ ಕಡೆಯಿಂದ ಯೋಚನೆ ಮಾಡಿರೋರು ಕಮ್ಮಿ. ಅಂಥಾ ಕಮ್ಮಿ ಮಂದಿಯ ನಡುವೆ ಎದ್ದು ಕಾಣ್ತಿರೋ ಹೆಸರು "ಕನ್ನಡ ಲರ್ನಿಂಗ್ ಸ್ಕೂಲ್".

ಕನ್ನಡ ಕಲಿಸುವ ವೃತ್ತಿಪರ ಶಾಲೆ

ನಮ್ಮ ಕನ್ನಡನಾಡಲ್ಲಿ ಇದೀಗ ವಲಸಿಗರಿಗೆ ಕನ್ನಡ ಕಲಿಸೋಕೆ ಪಕ್ಕಾ ವೃತ್ತಿಪರತೆಯಿಂದ ಒಂದು ಸಂಸ್ಥೆಯನ್ನೇ ತೆರೆದು, ಹೊಸ ಸಾಹಸಕ್ಕೆ ಕೈಹಾಕಿದೆ "ಕನ್ನಡ ಲರ್ನಿಂಗ್ ಸ್ಕೂಲ್". ಇವರ ಮಿಂಬಲೆ ತಾಣವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದರಲ್ಲಿ ಹೀಗೆ ಬರೆದಿದ್ದಾರೆ

ಒಂದು ಕಾಲದಲ್ಲಿ "ಉದ್ಯಾನ ನಗರಿ" ಎಂದೇ ಪ್ರಸಿದ್ದಿ ಪಡೆದಿದ್ದ "ಬೆಂದಕಾಳೂರು", ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ದೇಶ ವಿದೇಶದ  ನಾನಾ ಭಾಗದಿಂದ ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿರುವ ಜನರು, ಬೆಂಗಳೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. ಹಾಗೆ ಬಂದ ಬಹಳಷ್ಟು ಜನರಿಗೆ ಕನ್ನಡ ಭಾಷೆಯ ಬಗ್ಗೆ ಒಂದಿಷ್ಟು ಕುತೂಹಲವಂತೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡೇತರರಿಗೆ ತಲುಪಿಸುವ ಮತ್ತು ಪರಿಚಯಿಸುವ "ನಿರಂತರ ಪ್ರಯತ್ನ" ದ ಅಗತ್ಯವಿದೆ.
ಕಳೆದ ಎರಡು ವರ್ಷದಿಂದ "ಕನ್ನಡ ಕಲಿ" ಕಾರ್ಯಕ್ರಮವನ್ನು ಬೆಂಗಳೂರಿನ ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಸಿಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದೇವೆ.  ಈಗ ಇದರ ಮುಂದಿನ ಭಾಗವಾಗಿ, "ಕನ್ನಡ ಕಲಿಕೆಯ ಶಾಲೆ ( Kannada Learning School)" ಯನ್ನು ಪ್ರಾರಂಭಿಸಿದ್ದೇವೆ.
ಈ ಮೂಲಕ ಮೊದಲನೇ ಹಂತದಲ್ಲಿ : "ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡವನ್ನು ಪರಿಚಯಿಸುವುದು (ಕಲಿಸುವುದು)" ಹಾಗೂ ಎರಡನೇ ಹಂತದಲ್ಲಿ :"ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಅಥವಾ ತಿಳುವಳಿಕೆಯನ್ನು ಮೂಡಿಸುವುದು" ನಮ್ಮ ಉದ್ದೇಶಗಳಾಗಿವೆ.

ತಮ್ಮಲ್ಲಿ ಒಂದು ಕೋರಿಕೆ:

ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ "Kannada Learning School" ಬಗ್ಗೆ ತಿಳಿಸಿ ಕೊಟ್ಟರೆ ನೀವು ನಮ್ಮನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. 
 ನಮ್ಮ ನಮ್ಮ ಸಂಪರ್ಕಕ್ಕೆ ಬರುವ ಪರಭಾಷಿಕರನ್ನು ಕನ್ನಡ ಕಲಿಯಲು ಆಸಕ್ತರನ್ನಾಗಿ ಮಾಡಿ ಈ ಸಂಸ್ಥೆಗೆ ಕಳಿಸೋಣ. ಏನಂತೀರಾ ಗುರೂ?

ಡಬ್ಬಿಂಗ್: ಇದು ಕನ್ನಡಪರ ಹೇಗೆ?ಡಬ್ಬಿಂಗ್ ವಿಷಯಕ್ಕೆ ಬಂದಾಗ ಚಿತ್ರರಂಗದ ಕೆಲವರು ಡಬ್ಬಿಂಗ್ ಬೇಕೆನ್ನೋದು ಕನ್ನಡ ವಿರೋಧಿ ನಿಲುವು ಎಂಬ ಮಾತನ್ನಾಡುತ್ತಾರೆ. ಡಬ್ಬಿಂಗ್ ಒಂದು ಭೂತವೆಂದೂ, ಅದು ಕನ್ನಡದ್ರೋಹವೆಂದೂ, ಕನ್ನಡ ಚಿತ್ರರಂಗಕ್ಕೆ ಮಾರಕವಾಗೋ ಮೂಲಕ ಕನ್ನಡತನವನ್ನು ನಾಶಮಾಡುತ್ತದೆಂದೂ, ಸಾವಿರಾರು ಕನ್ನಡಿಗರು ಬೀದಿಪಾಲಾಗುತ್ತಾರೆಂದೂ ಹೇಳಲಾಗುತ್ತದೆ. ಈ ಮಾತನ್ನು ಸಾಣೆ ಹಿಡಿಯದೆ ಕೇಳಿದಾಗ ಹೌದಪ್ಪಾ! ಕನ್ನಡ ಉಳಿಬೇಕೆಂದರೆ ಕನ್ನಡ ಚಿತ್ರರಂಗಕ್ಕೆ ಯಾವ ತೊಂದರೇನೂ ಆಗಬಾರದು ಎಂದು ಜನರು ಅಂದುಕೊಳ್ಳೋದು ಕೂಡಾ ಸಹಜ. ವಾಸ್ತವವಾಗಿ ಡಬ್ಬಿಂಗ್ ಪರ ಮಾತಾಡುತ್ತಿರುವವರಿಗೆ ಚಿತ್ರರಂಗದ ಬಗ್ಗೆಯಾಗಲೀ, ಅಲ್ಲಿನ ಯಾವುದೇ ಕಲಾವಿದರ ಬಗ್ಗೆಯಾಗಲೀ ದ್ವೇಷವಿದೆ ಎನ್ನುವ ಅಪಪ್ರಚಾರವೂ ಇದೆ. ಆದರೆ ಇಲ್ಲಿರುವುದು ಕನ್ನಡ ಚಿತ್ರರಂಗವನ್ನೂ ಒಳಗೊಂಡಂತೆ ಕನ್ನಡದ ಮೇಲಿರುವ ಕಾಳಜಿಯೊಂದೇ. ಇರಲಿ... ಈಗ ಡಬ್ಬಿಂಗ್ ಕನ್ನಡಪರಾನೋ ಅಲ್ವೋ ಅನ್ನೋದನ್ನು ನೋಡೋಣ.

ಡಬ್ಬಿಂಗ್ ಕನ್ನಡಕ್ಕೆ ಮಾರಕವೇ?

ಈ ಪ್ರಶ್ನೆ ನಿಜಕ್ಕೂ ನಾವು ಕೇಳಿಕೊಳ್ಳಬೇಕಾಗಿದೆ. ಸಾಮಾನ್ಯ ಕನ್ನಡಿಗನನ್ನು ಕಾಡುವುದು "ಕನ್ನಡನಾಡಲ್ಲಿ ಪರಭಾಷೆಯ ಚಿತ್ರಗಳೆಲ್ಲಾ ಡಬ್ ಆಗಿ ಬಂದುಬಿಟ್ಟರೆ, ನಾವು ನಾಳೆ ಚಿರಂಜೀವಿ, ಸೂರ್ಯ, ವಿಕ್ರಂ, ಮೋಹನ್‍ಲಾಲ್, ಮುಮ್ಮುಟ್ಟಿ, ಮಹೇಶ್ ಬಾಬು, ಜೂ. ಎನ್‌ಟಿಆರ್... ಹೀಗೆ ಕನ್ನಡದವರಲ್ಲದವರ ಕಟೌಟ್‌ಗಳನ್ನು ನಮ್ಮೂರಲ್ಲಿ ನೋಡಬೇಕಾಗುತ್ತದೆ" ಎನ್ನುವ ಭೀತಿ. "ಡಬ್ಬಿಂಗ್‌ನಿಂದ ಕನ್ನಡ ಚಿತ್ರರಂಗ ಬಾಗಿಲು ಹಾಕಬೇಕಾಗುತ್ತೆ, ಆಮೇಲೆ ಚಲನಚಿತ್ರ ಎಂಬ ಕ್ಷೇತ್ರದಲ್ಲಿ ಕನ್ನಡ ಅಳಿಸಿಹೋಗುತ್ತದೆ" ಎನ್ನುವ ಆತಂಕ, ಡಬ್ಬಿಂಗನ್ನು ವಿರೋಧಿಸುವ ಸಾಮಾನ್ಯ ಜನರಲ್ಲಿರುವ ಕಾಳಜಿಯಾಗಿದೆ. ಪ್ರಪಂಚದ ಎಲ್ಲಾದರೂ ಈ ರೀತಿ ಆದದ್ದಿದೆಯೇ? ಡಬ್ಬಿಂಗ್ ಬಂದುಬಿಟ್ಟರೆ ಕನ್ನಡದಲ್ಲಿ ಚಿತ್ರಗಳನ್ನು ತೆಗೆಯುವವರೇ ಇರುವುದಿಲ್ಲವೇ?   ಎನ್ನುವುದನ್ನು ನೋಡಿದರೆ ಈ ಆತಂಕಕ್ಕೆ ಸಮಾಧಾನ ಸಿಗುತ್ತದೆ. ಯಾವುದೇ ನಾಡಲ್ಲಿ ಡಬ್ಬಿಂಗ್ ಆದ ಚಿತ್ರಗಳೆಲ್ಲಾ ಯಶಸ್ಸು ಗಳಿಸುತ್ತವೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲಾ. ಅದರಂತೆಯೇ ಡಬ್ಬಿಂಗ್ ಒಪ್ಪಿದ ಕಾರಣಕ್ಕೇ... ಒಂದಿಡೀ ಚಿತ್ರರಂಗವೇ ಮುಳುಗಿಹೋಗಿರುವ ಉದಾಹರಣೆಯೂ ಇಲ್ಲ. ವಾದಕ್ಕೆ ಮರಾಠಿ ಚಿತ್ರೋದ್ಯಮ ಡಬ್ಬಿಂಗ್‌ನಿಂದಾಗಿ ಮುಳುಗುತ್ತಿದೆ ಎನ್ನುವವರಿದ್ದಾರೆ. ಆದರೆ ಮರಾಠಿ ಚಿತ್ರರಂಗದ ದುಸ್ಥಿತಿಗೆ ಕಾರಣ ಆ ಜನರು ಹಿಂದೀಯನ್ನು ಒಪ್ಪಿದ್ದೇ ಆಗಿದೆ. ಮೊದಲಿನಿಂದಲೇ ಆ ಚಿತ್ರೋದ್ಯಮ ಸಾಗಿಬಂದ ದಾರಿಯನ್ನು ನೋಡಿದರೆ, ಇಡೀ ಮಹಾರಾಷ್ಟ್ರದ ಹೃದಯಭಾಗವಾದ ಮುಂಬೈಯಲ್ಲೇ ಮರಾಠಿಗೆ ಇರುವ ಪರಿಸ್ಥಿತಿ ನೋಡಿದರೆ, ಮುಂಬೈಯಲ್ಲಿನ ಅನಿಯಂತ್ರಿತ ವಲಸೆ ನೋಡಿದರೆ, ಮರಾಠಿ ನೆಲೆದಲ್ಲಿ ನೆಲೆ ನಿಂತು ಸೊಂಪಾಗಿ ಬೆಳೆದಿರುವ ಬಾಲಿವುಡ್ ಚಿತ್ರೋದ್ಯಮವನ್ನು ನೋಡಿದರೆ... ಮರಾಠಿ ಚಿತ್ರರಂಗ ಸೊರಗಲು ಇವು ಕಾರಣಗಳೇ ಹೊರತು ಡಬ್ಬಿಂಗ್ ಅಲ್ಲಾ ಎನ್ನುವುದು ಅರಿವಾಗುತ್ತದೆ! ಇಷ್ಟಕ್ಕೂ ಡಬ್ಬಿಂಗ್ ಇರುವ ಆಂಧ್ರ, ತಮಿಳುನಾಡುಗಳಿಗೆ ಏನಾಗಿವೆ? ನಮಗಿಂತಲೂ ಚಿಕ್ಕರಾಜ್ಯ ಕೇರಳಕ್ಕೆ ಏನಾಗಿದೆ? ಇದನ್ನೆಲ್ಲಾ ಯೋಚಿಸಿದರೆ ಡಬ್ಬಿಂಗ್ ಕನ್ನಡ ಚಿತ್ರೋದ್ಯಮವನ್ನು ನಿರ್ನಾಮ ಮಾಡುತ್ತದೆ ಎನ್ನುವುದನ್ನು ನಂಬಲಾಗುವುದೇ?

ಚಿತ್ರರಂಗದವರ ಪೊಳ್ಳು ವಾದ!

ಎಗ್ಗುಸಿಗ್ಗಿಲ್ಲದೆ ರಿಮೇಕ್ ಮಾಡೋ ಚಿತ್ರರಂಗದವರಿಗೆ ಡಬ್ಬಿಂಗ್ ಕನ್ನಡದ ಮೇಲೆ ಸಾಂಸ್ಕೃತಿಕ ದಾಳಿಯನ್ನು ಮಾಡುತ್ತೆ ಎನ್ನುವ ನೈತಿಕತೆ ಇದೆಯೇ? ರಿಮೇಕ್ ಮಾಡೋದ್ರಿಂದ ಕಾರ್ಮಿಕರಿಗೆ ಕೆಲಸ ಸಿಗುತ್ತೆ ಅನ್ನುವವರು ರಿಮೇಕಿನಿಂದಾಗಿ ಕನ್ನಡದ ಕಥೆಗಾರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಏನೆನ್ನುತ್ತಾರೆ? ಏಕೆ ಕನ್ನಡದ ಕಲಾವಿದರನ್ನು ಬಿಟ್ಟು ಹೊರನಾಡಿನಿಂದ ಕಲಾವಿದರನ್ನು ಆಮದು ಮಾಡಿಕೊಳ್ಳಲಾಗುತ್ತದೆ? ನಮ್ಮಲ್ಲಿ ನಾಯಕಿಯರಿಲ್ಲಾ, ಈ ಪಾತ್ರಕ್ಕೆ ಅವರೇ ಸೂಕ್ತ, ಈ ಹಾಡಿಗೆ ಅವರದೇ ದನಿ ಸರಿ... ಹೀಗೆ ಸಮರ್ಥನೆಗಳ ಸುರಿಮಳೆ ಸುರಿಸುವಾಗ ಕನ್ನಡದ ಕಲಾವಿದರ ಕೆಲಸದ ಕಾಳಜಿ ಎಲ್ಲಿ ಮರೆಯಾಗುತ್ತದೆ? ಕನ್ನಡ ಚಿತ್ರವೊಂದಕ್ಕೆ ಪರಭಾಷೆಯ ನಟನಟಿಯರನ್ನು, ತಂತ್ರಜ್ಞರನ್ನು, ಹಾಡುಗಾರರನ್ನು, ಕಥೆಗಾರರನ್ನು ಕೈ ಹಿಡಿದು ತರುವಾಗ ಕನ್ನಡನೆಲದ ಕಲಾವಿದರ ಬಗ್ಗೆ ಕಾಳಜಿ ಎಲ್ಲಿ ಹೋಗಿರುತ್ತದೆ? ಚಿತ್ರರಂಗದ ಕೆಲವರ ಇಂಥಾ ನಿಲುವಿನ ಹಿಂದಿರೋದು ಯಾವ ರೀತಿಯಲ್ಲಿ ಕನ್ನಡಪರ ಮನಸ್ಸು ಎಂಬುದನ್ನು ಜನರು ಅರ್ಥಮಾಡ್ಕೊಳ್ಳಬಲ್ಲರು. ಇಷ್ಟಕ್ಕೂ ಸ್ವಂತಿಕೆಯ ಗುಣಮಟ್ಟದ ನಿರ್ದೇಶಕರೊಬ್ಬರು ಕನ್ನಡದಲ್ಲಿ ಸಿನಿಮಾ ತೆಗೆಯೋದನ್ನು ನಿಲ್ಲಿಸಿಬಿಡುತ್ತಾರೆ ಎನ್ನುವುದನ್ನು ಹೇಗೆ ನಂಬುವುದು? ನಮ್ಮ ಚಿತ್ರರಂಗದಲ್ಲಿ ಹುಳುಕಿದೆ, ಆದರೆ ಅದಕ್ಕಾಗಿ ನೆರೆಮನೆಯ ಮಾರಿಯನ್ನು ತರುವುದು ಸರಿಯಲ್ಲಾ ಎನ್ನುವ ಮಾತನ್ನು ಡಬ್ಬಿಂಗ್ ಬೇಡವೆನ್ನುವವರು ಹೇಳುತ್ತಾರೆ. ವಾಸ್ತವವಾಗಿ ಡಬ್ಬಿಂಗ್ ಕಾರ್ಯಕ್ರಮಗಳು ಬಂದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹೆಚ್ಚುವುದೇ ಹೊರತು ಕುಗ್ಗುವುದಿಲ್ಲಾ!

ಡಬ್ಬಿಂಗ್ ಕನ್ನಡದ ಪ್ರೇಕ್ಷಕರನ್ನು ಹುಟ್ಟುಹಾಕುತ್ತದೆ!

ಇಷ್ಟಕ್ಕೂ ಕನ್ನಡವೆಂದರೆ ಚಿತ್ರರಂಗ ಮಾತ್ರಾನಾ? ಕನ್ನಡಿಗರ ಮನರಂಜನೆ ಎಂದರೆ ಅದು ಚಲನಚಿತ್ರಗಳು ಮಾತ್ರಾನಾ? ಅನಿವಾರ್ಯವಾಗಿ ಕಾರ್ಟೂನ್ ನೆಟ್‌ವರ್ಕ್, ಪೋಗೋ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಹಿಸ್ಟರಿ ಮೊದಲಾದ ವಾಹಿನಿಗಳನ್ನು ಕನ್ನಡದ ಮಕ್ಕಳು ಕನ್ನಡದಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಚಿಕ್ಕಂದಿನಿಂದಲೇ ಮನರಂಜನೆ ಕನ್ನಡದಲ್ಲಿ ಪಡೆದುಕೊಳ್ಳುವುದನ್ನು ಅರಿಯದ ಮಕ್ಕಳು, ನಾಳೆ ಕನ್ನಡ ಚಿತ್ರಗಳನ್ನು ಯಾಕಾದರೂ ನೋಡುತ್ತಾರೆ? ಕನ್ನಡದಿಂದ ಮುಂದಿನ ಪೀಳಿಗೆ ದೂರವಾದರೆ ನಾಳೆ ಅದ್ಭುತವಾದ ಕನ್ನಡ ಚಿತ್ರವನ್ನು ತೆಗೆದರೂ ನೋಡುವವರಾರೂ ಇರುವುದಿಲ್ಲಾ ಎನ್ನುವ ಅಪಾಯವನ್ನು ಗುರುತಿಸಬೇಕಾಗಿದೆ. ಇಂದು ಡಬ್ಬಿಂಗ್ ಬಂದರೆ ಕನ್ನಡದ ಮಕ್ಕಳು ಕನ್ನಡಕ್ಕೆ ಅಂಟಿಕೊಳ್ಳುತ್ತಾರೆ. ನಾಳೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರೂ ಇರುತ್ತಾರೆ.

ಡಬ್ಬಿಂಗ್ ವಿರೋಧದಿಂದ ಕುಗ್ಗುತ್ತಿರುವ ಕನ್ನಡದ ಮನರಂಜನೆ

ಚಿತ್ರರಂಗ ಈಗಿರೋ ಡಬ್ಬಿಂಗ್ ವಿರೋಧಿ ನಿಲುವಿನಿಂದಾಗೇ ಮುಳುಗಿಹೋಗುತ್ತಿರುವುದು ಕಾಣುತ್ತಿದೆ. ಕರ್ನಾಟಕದ ಗಡಿ ಊರುಗಳಲ್ಲಿ ಮಾತ್ರಾ ತೆರೆಕಾಣುತ್ತಿದ್ದ ಪರಭಾಷಾ ಚಿತ್ರಗಳು ಇಂದು ಒಳ ನಾಡುಗಳ ಹಳ್ಳಿ ಹಳ್ಳಿಗಳಲ್ಲಿ ತೆರೆಕಾಣುತ್ತಿದೆ. ಇಂತಿಷ್ಟೇ ಕೇಂದ್ರದಲ್ಲಿ, ಇಂತಿಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು ಎನ್ನೋ ನಿಯಮ ಇಂದು ಅಳಿದುಹೋಗಿ ಪರಭಾಷಾಚಿತ್ರಗಳು ಇನ್ನೂರು ಮುನ್ನೂರು ಕೇಂದ್ರಗಳಲ್ಲಿ ತೆರೆಕಾಣುತ್ತಿದೆ. ಇದನ್ನು ತಪ್ಪಿಸದೇ ಹೋದರೆ... ನಮ್ಮದು ಚಿಕ್ಕ ಮಾರುಕಟ್ಟೆ ಅವರೊಡನೆ ಸ್ಪರ್ಧೆ ಅಸಾಧ್ಯ ಎಂದುಕೊಳ್ಳುತ್ತಾ ಹೋದರೆ... ನಾಳೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಬರೀ ಪರಭಾಷೆಯ ಚಿತ್ರಗಳೇ ರಾರಾಜಿಸುತ್ತವೆ.

ಈ ಹಿನ್ನೆಲೆಯಲ್ಲಿ ನಾವು ನೋಡಿದರೆ ಕರ್ನಾಟಕದ ತುಂಬೆಲ್ಲಾ ಪರಭಾಷಾ ಚಿತ್ರಗಳು ತೆರೆಕಾಣುತ್ತಾ ಕನ್ನಡಿಗರು ಮನರಂಜನೆಗಾಗಿ ಪರಭಾಷಾ ಚಿತ್ರಗಳನ್ನೇ ಅವಲಂಬಿಸುವುದು ಒಳಿತೋ? ಅಥವಾ ಡಬ್ಬಿಂಗ್ ಆದ ಚಿತ್ರಗಳು ಇರುವ ಕಾರಣದಿಂದಾಗಿ ಎನ್‌ಟಿಆರೋ, ಮಹೇಶ್ ಬಾಬೂನೋ ಯಾರಾದರೇನು.. ಕನ್ನಡದಲ್ಲಿ ಮನರಂಜನೆ ಸಿಗುತ್ತದೆಯೆನ್ನುವುದು ಒಳಿತೋ? ಇದರರ್ಥ ಪರಭಾಷಾ ನಟರು ಇಲ್ಲಿ ಗೆಲ್ಲುತ್ತಾರೆ ಎನ್ನುವುದಕ್ಕಾಗುವುದಿಲ್ಲ, ಏನೆಂದರೂ ಕನ್ನಡಿಗರಿಗೆ ಕನ್ನಡದ ನಟರೇ ಪ್ರಿಯರು! ಇದಕ್ಕೂ ನಾವು ನೆರೆಯ ನಾಡುಗಳನ್ನು ನೋಡಿದರೆ ಸಾಕು. ಎಂದಿಗೂ ಆಂಧ್ರಕ್ಕೆ ಸೂಪರ್‌ಸ್ಟಾರ್ ಚಿರಂಜೀವಿಯೇ, ತಮಿಳುನಾಡಿಗೆ ರಜನಿಕಾಂತೇ... ಡಬ್ಬಿಂಗ್ ಇದ್ದರೂ ಅವರು ಇಲ್ಲಿ, ಇವರು ಅಲ್ಲಿ ಸೂಪರ್‌ಸ್ಟಾರ್ ಆಗಲು ಸಾಧ್ಯವಾಗಿಲ್ಲ! ಇವೆಲ್ಲಾ ಮಾತಾಡಿದರೆ ಆ ಮಾರುಕಟ್ಟೆ ದೊಡ್ಡದು, ಆ ಜನರು ಸ್ವಾಭಿಮಾನಿಗಳು, ಕನ್ನಡದವರು ನಿರಭಿಮಾನಿಗಳು, ಹಾಗಾಗಿ ಇಲ್ಲಿ ಡಬ್ಬಿಂಗ್ ಬಂದರೆ ಎಲ್ಲಾ ಮುಳುಗುತ್ತದೆ ಎನ್ನುವ ಮಾತಾಡಿದರೆ ಅದನ್ನು ಒಪ್ಪಲಾಗುವುದೇ?

ಒಳ್ಳೆಯದನ್ನು ಜನರಿಂದ ತಪ್ಪಿಸಲು ಯಾರಿಗೂ ಆಗಲ್ಲಾ!

ಕೆಲವು ಬುದ್ಧಿವಂತರು "ಒಳ್ಳೇದು ಅಂದ್ರೆ ಯಾವುದು?" ಅನ್ನೋದನ್ನೇ ಜಿಜ್ಞಾಸೆ ಮಾಡ್ತಾರಲ್ಲಾ... ಹಾಗಲ್ಲದೆ ಜನರಲ್ಲಿ ಕುತೂಹಲ ಹುಟ್ಟುಹಾಕಲು ಯಶಸ್ವಿಯಾಗಿರುವ, ನೋಡಿದವರೆಲ್ಲಾ ಮೆಚ್ಚುತ್ತಿರುವ ಸಿನಿಮಾಗಳನ್ನು ಇಲ್ಲಿ ಒಳ್ಳೇದು ಎಂದು ಕರೆದು... ಇದನ್ನು ಜನರು ನೋಡೋದನ್ನು ತಪ್ಪಿಸಲು ಯಾವ ದೊಣೇನಾಯ್ಕನಿಂದಲೂ ಸಾಧ್ಯವಿಲ್ಲಾ ಅನ್ನೋ ಮೊದಲನೇ ಮಾತನ್ನು ಹೇಳಬೇಕಾಗಿದೆ. ಬಹುಶಃ ಇದನ್ನು ನಮ್ಮ ಚಿತ್ರರಂಗದೋರೂ ಒಪ್ತಾರೆ. ಕನ್ನಡದ ಕಲಾವಿದರು ಪರಭಾಷಾ ಸಿನಿಮಾದಲ್ಲಿ ಮಾಡೋದನ್ನೇ ತಪ್ಪೆಂದೆಣಿಸಿ, ಪರಭಾಷೆಯಲ್ಲಿ ಮಾಡದಿರುವುದೇ ಹೆಚ್ಚುಗಾರಿಕೆ ಎನ್ನುವುದು ಸರಿಯಲ್ಲಾ! ಕನ್ನಡದ ಕಲಾವಿದರು ಕನ್ನಡೇತರ ಚಿತ್ರರಂಗಕ್ಕೂ ಹೋಗಬೇಕು, ಅಲ್ಲೂ ಮೆರೆಯಬೇಕು, ಕನ್ನಡದ ಚಿತ್ರಗಳು ಪರಭಾಷೆಗೂ ಡಬ್ ಆಗಿ ಅಲ್ಲೂ ನಮ್ಮವರು ಮಿಂಚಬೇಕು... ಇದ್ಯಾವುದೂ ಕನ್ನಡವಿರೋಧಿಯಲ್ಲ! ವಾಸ್ತವವಾಗಿ ಕನ್ನಡ ಪ್ರೇಮದಿಂದ ನಾನು ಕನ್ನಡದಲ್ಲೇ ಇರ್ತೀನಿ, ಕನ್ನಡದೋರು ಪರಭಾಷೇಲಿ ಎಷ್ಟೇ ಉತ್ತಮವಾದ್ದು ಬಂದರೂ ನೋಡಬೇಡಿ ಅಥವಾ ಅದೇ ಭಾಷೇಲಿ ನೋಡಿ ಎನ್ನೋ ಮನಸ್ಥಿತಿಯೇ ಕನ್ನಡಕ್ಕೆ ಹಾನಿ ಮಾಡುವಂಥದ್ದು! ಅಭಿಮಾನಕ್ಕಾಗಿ ಕನ್ನಡ ಸಿನಿಮಾ ನೋಡಿ ಎನ್ನೋ ಮಾತಿನ ಮೋಡಿಗೆ, ಜನರನ್ನು ಪರಭಾಷೆಯಲ್ಲಿರುವ ಒಳ್ಳೆಯದನ್ನು ಪಡೆಯುವುದರಿಂದ ದೂರ ಮಾಡಲು ಆಗುವುದಿಲ್ಲಾ ಅನ್ನೋದನ್ನು ಇವರೂ ಅರಿತರೆ ಒಳ್ಳೇದು!

ಡಬ್ಬಿಂಗ್ ನಿಶೇಧ ಕನ್ನಡ ಉಳಿಸುತ್ತೆ ಅನ್ನೋದು ಹುಸಿಯಾಗ್ತಿದೆ!

ವಾಸ್ತವವಾಗಿ ಡಬ್ಬಿಂಗ್ ಸಿನಿಮಾ ಬಂದರೆ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇರಲ್ಲಾ ಎನ್ನೋದಕ್ಕೆ ಮೂಲಕಾರಣ ಕನ್ನಡದೋರು ಪರಭಾಷೆಯ ಚಿತ್ರಗಳನ್ನು ನೋಡದೆ ಬರೀ ಕನ್ನಡದಲ್ಲೇ ಚಿತ್ರಗಳನ್ನು ನೋಡ್ತಾರೆ ಎನ್ನೋ ನಂಬಿಕೆ. ಇದು ಹೀಗೇ ಇದ್ದ ಕಾಲವೂ ಇತ್ತು! ಹೆಚ್ಚಿನ ಸಾಮಾನ್ಯ ಕನ್ನಡಿಗರಾರೂ ಪರಭಾಷೆಯ ಚಿತ್ರಗಳನ್ನು ನೋಡಲ್ಲಾ ಎನ್ನೋ ಕಾಲವಿತ್ತು. ಆಗ ಪರಭಾಷೆಯವು ಕನ್ನಡಕ್ಕೆ ಡಬ್ ಆಗಿ ಬರಲು ಶುರುವಾಗಿದ್ದನ್ನು "ಇವೆಲ್ಲಾ ಕನ್ನಡದಲ್ಲೇ ಬಂದರೆ ಕನ್ನಡ ಸಿನಿಮಾ ನೋಡೋರಿರಲ್ಲಾ" ಎಂದುಕೊಂಡು ನಿಶೇಧ ನಿಶೇಧ ಎಂದು ಅನ್ನಿಸುತ್ತೆ. ಆರಂಭದಲ್ಲಿ ಭಾಷೆ ಬರಲ್ಲಾ ಅನ್ನೋ ಕಾರಣದಿಂದಾಗೇ ಜನರು ಪರಭಾಷೆ ಚಿತ್ರಗಳನ್ನು ನೋಡ್ತಿರಲಿಲ್ಲವಾದರೂ ಈಗಿನ ಪರಿಸ್ಥಿತಿ ಏನಾಗಿದೆ? ಕನ್ನಡದೋರು ಬೇರೆ ಭಾಷೆ ಚಿತ್ರಗಳನ್ನು ಅವವೇ ಭಾಷೇಲೇ ನೋಡಲು ಶುರು ಮಾಡಿದಾರೆ. ಇದರ ಅಪಾಯ ಚಿತ್ರರಂಗದೋರಿಗೆ ಕಾಣ್ತಾ ಇಲ್ಲಾ ಅನ್ನೋದು ದುರಂತ!! ಇತ್ತೀಚಿಗೆ ಇಂತಿಷ್ಟೇ ಪರಭಾಷಾ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗಬೇಕು ಎನ್ನೋ ನಿಯಮಾ ಬಿದ್ದು ಹೋಗಿ ಪರಭಾಷಾ ಚಿತ್ರಗಳು ಇಲ್ಲಿ ನೂರಿನ್ನೂರು ತೆರೆಗಳ ಲೆಕ್ಕದಲ್ಲಿ ಬಿಡುಗಡೆಯಾಗ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ನಾಳೆ ಕನ್ನಡ ಸಿನಿಮಾನ ಕನ್ನಡದೋರು ಕೂಡಾ ನೋಡುವ ಸಾಧ್ಯತೆಯಿರುವುದಿಲ್ಲ! ಬೇಕೋ ಬೇಡವೋ ಜನರು ಇವತ್ತೇ ಕನ್ನಡ ಚಿತ್ರಗಳನ್ನು ಬೇರೆ ಭಾಷೆ ಚಿತ್ರಗಳ ಜೊತೆ ಹೋಲಿಕೆ ಮಾಡ್ತಿದಾರೆ. ನಮ್ಮದು ಸಣ್ಣ ಮಾರುಕಟ್ಟೆ, ಕಮ್ಮಿ ಬಜೆಟ್ ಅಂತೆಲ್ಲಾ ಅತ್ಕೊಂಡರೆ ಜನರೇನು ಕ್ಯಾರೇ ಅನ್ನಲ್ಲಾ... ಕನ್ನಡನಾಡಲ್ಲೇ ತೆಲುಗು ಚಿತ್ರವೊಂದು ವಾರವೊಂದರಲ್ಲಿ ೪ ಕೋಟಿ ಸಂಪಾದನೆ ಮಾಡುತ್ತಿರುವ ಇಂಥಾ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಕನ್ನಡ ಪರವಾದ ಹೆಜ್ಜೆಯಾಗೋದರಲ್ಲಿ ಸಂದೇಹವಿಲ್ಲ.

ಡಬ್ಬಿಂಗ್ ಬೇಕು ಅನ್ನೋದೇ ಕನ್ನಡ ಪರ!

ಇಡೀ ನಾಡಿನ ಜನರಿಗೆ ತಮ್ಮ ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವುದನ್ನು ತಪ್ಪಿಸುತ್ತಿರುವುದು ಕನ್ನಡಪರ ಹೇಗಾಗುತ್ತದೆ? ಕನ್ನಡದ ಜನರು ಚಲನಚಿತ್ರ, ಟಿವಿ ಮೊದಲಾದ ಎಲ್ಲವನ್ನೂ ಕನ್ನಡದಲ್ಲೇ ನೋಡುವ ಅವಕಾಶ ಪಡೆದಾಗ ಸಹಜವಾಗಿಯೇ ಮೂಲ ಕನ್ನಡ ಚಿತ್ರಗಳ ಮಾರುಕಟ್ಟೆಯೂ ಹಬ್ಬುತ್ತದೆ. ರಿಮೇಕಿನ ಹಾವಳಿ ಕಡಿಮೆಯಾಗುತ್ತದೆ. ಡಬ್ ಆದ ಚಿತ್ರಗಳ ಗೆಲುವಿನ ಪ್ರಮಾಣ ಶುರುವಿನಲ್ಲಿ ಹೆಚ್ಚೇ ಇದ್ದರೂ ಕೆಲವೇ ಸಮಯದಲ್ಲಿ ಕಡಿಮೆಯಾಗುತ್ತದೆ. ಇಂದು ಡಬ್ಬಿಂಗ್‌ ಕನ್ನಡದ ಗುಣಮಟ್ಟ ಕೆಡಿಸುತ್ತದೆ ಎನ್ನುವುದು ನಾಳೆ ಅದರಲ್ಲಿಯೇ ಸ್ಪರ್ಧೆಯ ಕಾರಣದಿಂದ ಉತ್ತಮವಾಗಿ ಡಬ್ ಆಗಿ ಬರುವ ಸಾಧ್ಯತೆಯಿರುತ್ತದೆ. ಕನ್ನಡ ಚಿತ್ರರಂಗವು ಡಬ್ಬಿಂಗ್ ವಿರೋಧಿ ನೀತಿಯಿಂದ ನಿಧಾನವಾಗಿ ಪರಭಾಷಾ ಚಿತ್ರಗಳಿಗೆ ಜಾಗ ಖಾಲಿಮಾಡಿಕೊಟ್ಟು ಹೋಗುತ್ತಿರುವುದರ ಅಪಾಯ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರಾ ತಟ್ಟುವುದಿಲ್ಲ. ಅದು ಇಡೀ ಕನ್ನಡವನ್ನೇ ನುಂಗುತ್ತದೆ. ನಾಡಿನ ಕನ್ನಡಿಗರು ಪರಭಾಷೆಗಳಲ್ಲೇ ಮನರಂಜನೆ ಪಡೆದುಕೊಳ್ಳಲು ಶುರು ಮಾಡಿದರೆ ವಲಸಿಗರಿಗೆ ಈ ನಾಡು ಸ್ವರ್ಗವಾಗಿ ಬಿಡುತ್ತದೆ! ಕನ್ನಡವೆನ್ನುವುದು ಕನ್ನಡ ಚಿತ್ರರಂಗ ಎನ್ನುವುದಕ್ಕಿಂತಾ ಹಿರಿದು ಎನ್ನುವ ನೆಲೆಯಲ್ಲಿ ಯೋಚಿಸಿದರೂ ಡಬ್ಬಿಂಗ್ ನಮ್ಮ ನಾಡಿಗೆ ಅಗತ್ಯವೆನ್ನಿಸುತ್ತದೆ. ಇವೆಲ್ಲಾ ಬರೀ ಊಹೆ ಎನ್ನುವುದಾದರೆ ಕಣ್ಣ ಮುಂದೆ ಪ್ರಪಂಚದಲ್ಲಿ ಡಬ್ಬಿಂಗ್ ಇಟ್ಟುಕೊಂಡೂ ತಮ್ಮತನ ಉಳಿಸಿಕೊಂಡಿರುವ ನೂರಾರು ನಾಡುಗಳು ಕಾಣುತ್ತವೆ. ಬೇಡಪ್ಪಾ ನಮ್ಮ ಕನ್ನಡಿಗರು ನಿರಭಿಮಾನಿಗಳು, ಅವರಂತಲ್ಲಾ, ಇವರಂತಲ್ಲಾ ಎನ್ನುವುದಾದರೆ... ಕಡೇ ಪಕ್ಷ ಕನ್ನಡಿಗರಿಗೆ ಕನ್ನಡದಲ್ಲೇ ಮನರಂಜನೆ ದೊರೆಯಲು ಡಬ್ಬಿಂಗ್ ದೊಡ್ಡ ಸಾಧನವಾಗುತ್ತದೆ ಎಂಬುದನ್ನಂತೂ ಒಪ್ಪದೆ ಇರಲಾಗುತ್ತದೆಯೇ? ಈ ಎಲ್ಲವನ್ನೂ ನೋಡಿದಾಗ ಡಬ್ಬಿಂಗ್ ಕನ್ನಡಪರ ಎನ್ನುವುದು ಮನದಟ್ಟಾಗುತ್ತದೆ.

ಕನ್ನಡ ಚಿತ್ರರಂಗ ಕುಂಭಕರ್ಣ ನಿದ್ದೆ ಬಿಟ್ಟೇಳಲಿ!

(ಚಿತ್ರ ಕೃಪೆ: ವಿಜಯ ನೆಕ್ಸ್ಟ್ ಪತ್ರಿಕೆ)
ಇಂಥದ್ದೊಂದು ವಿಚಾರ ೨೦೧೨ರ ಜುಲೈ ೬ನೇ ದಿನಾಂಕದ ವಿಜಯಾ ನೆಕ್ಸ್ಟ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ವರದಿಯಲ್ಲಿ ಕನ್ನಡ ಚಿತ್ರರಂಗ ಅವಸಾನದತ್ತ ಸಾಗುತ್ತಿದೆ ಎನ್ನುವ ಅನಿಸಿಕೆಯಿದೆ.

ಏನಿದೆ ಈ ವರದಿಯಲ್ಲಿ?

ಇಡೀ ವರದಿಯ ಸಾರವೇನೆಂದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ಹಣ ಹೂಡಲು ಬರುವವರು ಸೋಲನ್ನು ಕಂಡು ಹಿಂಜರಿದಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸ ನಿರ್ಮಾಪಕರನ್ನು ಸುಲಿಗೆ ಮಾಡುವಂತೆ ಅಗತ್ಯಕ್ಕಿಂತ ದುಪ್ಪಟ್ಟು ಮುಪ್ಪಟ್ಟು ಖರ್ಚು ಮಾಡಿಸಿದ ಉದಾಹರಣೆಗಳಿವೆ. ಚಿತ್ರನಿರ್ಮಾಣದಲ್ಲಿ ದುಂದುವೆಚ್ಚ, ಚಿತ್ರಮಂದಿರಗಳಿಗೆ ದುಬಾರಿ ಬಾಡಿಗೆ ಕೊಟ್ಟು ಮುಂಗಡ ಕಾದಿರಿಸಬೇಕಾದ ವ್ಯವಸ್ಥೆ, ಕಲಾವಿದರ ದುಬಾರಿ ಸಂಭಾವನೆ, ಒಳಗಿನ ಸಾರಕ್ಕಿಂತ ಪ್ರಚಾರದ ಥಳುಕುಬಳುಕನ್ನೇ ಬಂಡವಾಳವಾಗಿಸಿಕೊಂಡಿರುವುದು, ಹೀರೋಗಳ ಪ್ರಾಬಲ್ಯದಿಂದ ನಿರ್ಮಾಪಕರಿಗೆ ಬೆಲೆಯಿಲ್ಲದಿರುವುದು, ಇದೆಲ್ಲಕ್ಕಿಂತಾ ದೊಡ್ಡ ಸಮಸ್ಯೆ ಕುಗ್ಗಿರುವ ಸ್ಯಾಟಲೈಟ್ ಹಕ್ಕುಗಳ ಕೊಳ್ಳುವಿಕೆ... ಇವೆಲ್ಲಾ ಕಾರಣಗಳಿಂದಾಗಿ ಚಿತ್ರರಂಗದ ವಹಿವಾಟು ೬೦%~ ೭೦% ಕುಸಿದಿದೆ ಎನ್ನುತ್ತದೆ ಈ ವರದಿ! 

ಬಳಗ ತಂದಿದ್ದ ವರದಿ!

ಈ ಹಿಂದೆ ಚಿತ್ರರಂಗದ ಸ್ಥಿತಿಗತಿಗೆ ಸಂಬಂಧಿಸಿದ ವರದಿಯೊಂದನ್ನು ಬನವಾಸಿ ಬಳಗ ಮತ್ತು ಕರ್ನಾಟಕ ಚಲನಚಿತ್ರ ಅಕಾಡಮಿ ೨೦೧೦ರಲ್ಲೇ ಹೊರತಂದಿತ್ತು! ವರದಿಯನ್ನು ಚಿತ್ರರಂಗ ಸ್ವೀಕರಿಸಿದ ಬಗೆ ನಿರಾಶದಾಯಕವಾಗಿತ್ತು. ವಾಸ್ತವ ಒಪ್ಪಿಕೊಳ್ಳದೆಯೇ ಭ್ರಮೆಯಲ್ಲೇ ತೇಲುತ್ತಿರುವವರಂತೆ, ಇಡೀ ವರದಿಯನ್ನು ಅದರಲ್ಲಿ "ಡಬ್ಬಿಂಗ್ ಬಗ್ಗೆ ಪ್ರಸ್ತಾಪಿಸಲಾಗಿತ್ತು" ಎಂಬ ಕಾರಣ ನೀಡಿ ಸಾರಾಸಗಟಾಗಿ ಹಿಂಪಡೆಯುವಂತೆ ಮಾಡಲಾಯಿತು. ಆ ವರದಿಯಲ್ಲಿ ಚಿತ್ರೋದ್ಯಮವನ್ನು ವೃತ್ತಿಪರವಾಗಿಸುವ ಬಗ್ಗೆ ಮಾತಾಡಲಾಗಿತ್ತು. ಈ ವರದಿ ಬಗ್ಗೆ ನಾವು ಬರೆದಿದ್ದ ಬರಹವನ್ನು ನಿಮ್ಮ ಓದಿಗಾಗಿ ಕೆಳಗೆ ಕೊಡಲಾಗಿದೆ:
ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ E&Y ಮತ್ತು FICCI ಒಂದು ವರದಿಯನ್ನು ಹೊರತಂದಿದ್ದು ಅದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಇರುವ ಮಾಹಿತಿ ತಪ್ಪಾಗಿದ್ದು, ಉದ್ಯಮದ ಬೆಳವಣಿಗೆಗೆ ಮಾರಕವಾಗಿತ್ತು. ಈ ವರದಿಯನ್ನು ಚಿತ್ರರಂಗದ ಗಣ್ಯರ ಜೊತೆ ಬಳಗ ಹಂಚಿಕೊಳ್ಳಲು ಮುಂದಾಯಿತು. ಕರ್ನಾಟಕ ಚಲನಚಿತ್ರ ಅಕಾಡಮಿಯು ಇದರಲ್ಲಿ ಆಸಕ್ತಿ ತೋರಿ ಚಿತ್ರರಂಗದ ಎಲ್ಲಾ ಪ್ರಮುಖ ಕ್ಷೇತ್ರಗಳ ಪ್ರತಿನಿಧಿ ಸಭೆಯನ್ನು ಕರೆದು ವರದಿ ಬಗ್ಗೆ ಮಾಹಿತಿ ಹಂಚಿಕೊಂಡಿತು. ಆಗ ಸರಿಯಾದ ಮಾಹಿತಿ ನೀಡಲು ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಲಾಯಿತು. ಬಳಗ ಮತ್ತು ಅಕಾಡಮಿಗಳು ಒಗ್ಗೂಡಿ ಏಳು ತಿಂಗಳು ಶ್ರಮಿಸಿ "ಕನ್ನಡ ಚಿತ್ರರಂಗ: ಒಂದು ಸಮೀಕ್ಷೆ" ಯನ್ನು ಹೊರತಂದವು.
ಸಮೀಕ್ಷೆಯ ಬಿಡುಗಡೆ ಮತ್ತು ಪ್ರತಿಕ್ರಿಯೆ!

ಸದರಿ ಸಮೀಕ್ಷೆಯನ್ನು ಅಕಾಡಮಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯ್ತು. ಸಮಿತಿಯ ಸಮೀಕ್ಷೆಯಲ್ಲಿ ಮೂಡಿಬಂದಿದ್ದ ಕೆಲ ಅಂಶಗಳ ಬಗ್ಗೆ ಕೆಲವರಿಂದ ವಿರೋಧ ಮೂಡಿಬಂದಿತು. ಹಾಗಾಗಿ ವರದಿಯನ್ನು ಅಕಾಡಮಿ ಹಿಂಪಡೆಯಿತು.
ಕನ್ನಡ ಚಿತ್ರರಂಗಕ್ಕೆ ಬೇಡವಾದ ಸತ್ಯ!

ಕನ್ನಡ ಚಿತ್ರರಂಗಕ್ಕೆ E&Y ಮತ್ತು FICCI ನೀಡಿದ ವರದಿಯ ಅಪಾಯದ ಬಗ್ಗೆಯಾಗಲೀ, ಆ ವರದಿಗೆ ಉತ್ತರ ನೀಡಬೇಕಾದ ಅಗತ್ಯದ ಬಗ್ಗೆಯಾಗಲೀ ಅರಿವಿದ್ದಂತಿಲ್ಲ. ಅಕಾಡಮಿ ಮತ್ತು ಬಳಗ ನಡೆಸಿದ ಸಮೀಕ್ಷೆಯಲ್ಲಿನ ಅಭಿಪ್ರಾಯಗಳನ್ನು ತೂಗಿ ನೋಡಬೇಕೆನ್ನುವ, ನಿಜಕ್ಕೂ ಚಿತ್ರರಂಗದ ಸಮಸ್ಯೆಗಳೇನು? ಎದುರಿಸಬೇಕಾದ ಸವಾಲುಗಳೇನು? ಎಂದು ಯೋಚಿಸಬೇಕೆಂಬ ಮನಸ್ಥಿತಿ ಇರುವಂತೆಯೂ ಕಾಣಲಿಲ್ಲ. ಮುಂದೆ ಬರಲಿರುವ ದಿನಗಳು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತಂದಾವು ಅದನ್ನು ಎದುರಿಸಲು ಒಂದಾಗಿ ಯೋಚಿಸೋಣ ಎನ್ನುವ ಅರಿವೂ ಕಾಣಲಿಲ್ಲ.
ಚಿತ್ರರಂಗದ ಮುಂದಿರುವ ಸವಾಲು!

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ವಿಧಿಸಿರುವ ಪ್ರಿಂಟ್ ಸಂಖ್ಯೆಯ, ಏಳುವಾರದ ಗಡುವಿನ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಇರುವುದಿಲ್ಲ. ಇದರಿಂದಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿ ತಮಿಳು, ತೆಲುಗು, ಇಂಗ್ಲೀಷ್, ಹಿಂದೀ ಇತ್ಯಾದಿ ಚಿತ್ರಗಳು ರಾರಾಜಿಸುವುದರ ಜೊತೆಯಲ್ಲೇ ಇಡೀ ಕನ್ನಡ ಜನತೆ ನಿಧಾನವಾಗಿ ಕನ್ನಡ ಚಿತ್ರಗಳಿಂದ ದೂರವಾಗುವ ಸಾಧ್ಯತೆಗಳು ಕಾಣುತ್ತಿವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಈಗಲೇ ಇಲ್ಲದಂತಾಗಿದೆ. ಇದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡ ಚಿತ್ರರಂಗದ ಸದಸ್ಯರನ್ನು ಒಮ್ಮೆಗೇ ಅಮಾನತ್ತುಗೊಳಿಸಿದಾಗ ಸಾಬೀತಾಗಿದೆ. ಗೋವಾ ಚಿತ್ರೋತ್ಸವದಲ್ಲಿ ಆಗುತ್ತಿರುವ ಅಪಮಾನಗಳಿಗಂತೂ ಲೆಕ್ಕವೇ ಇಲ್ಲ. ಪಾಲಿಸಿ ಮಾಡುವಾಗ ನಮ್ಮವರ ಮಾತಿಗೆ ಸರ್ಕಾರ ಯಾಕಾದರೂ ಬೆಲೆ ಕೊಟ್ಟೀತು. "ನಾವು ತೆಗೆಯೋ ಚಿತ್ರಗಳ ರಿಮೇಕೆಂಬ ಎಂಜಲು ತಿನ್ನುವವವರು ನೀವು" ಎನ್ನುವ ಅವಹೇಳನ ಅದೆಷ್ಟು ಕಡೆ ತಾನೇ ಆಗಿಲ್ಲ. ನಮ್ಮ ಚಿತ್ರರಂಗ ಉದ್ಧಾರವಾಗಲು ಇದೀಗ ಗಂಭೀರವಾಗಿ ಚಿಂತಿಸಲು ಸಕಾಲ.
ಏನೇನಾಗಬೇಕು?

ಕನ್ನಡ ಚಿತ್ರರಂಗದಲ್ಲಿ ಹೊಸಬರ, ಹೊಸತನದ ಚಿತ್ರಗಳು ತಯಾರಾಗಬೇಕಾಗಿದೆ. ವೃತ್ತಿಪರತೆ ಹೆಚ್ಚಾಗಬೇಕಿದೆ. ಪ್ರತಿಭಾ ಶೋಧ, ತರಬೇತಿಗಳಿಗೆ ಗಮನ ಕೊಡಬೇಕಾಗಿದೆ. ಹಣಕಾಸು ವ್ಯವಸ್ಥೆಯೂ ಮೀಟರ್ ಬಡ್ಡಿ ರೂಪದಲ್ಲಿ ಹರಡಿಕೊಂಡಿರುವುದು ನಿಂತು ಸಂಸ್ಥಾ ಹಣಕಾಸು ವ್ಯವಸ್ಥೆಗೆ ಸಾಗಬೇಕಿದೆ. ತಯಾರಿಕೆಯ ವೆಚ್ಚ ಕೆಟ್ಟ ಯೋಜನೆಯಿಂದಾಗಿ ಹೆಚ್ಚಾಗದಂತೆ ಸಿನಿಮಾ ನಿರ್ಮಾಣದ ತರಬೇತಿಗಳು ನಡೆಯಬೇಕಾಗಿದೆ. ಚಿತ್ರಮಂದಿರಗಳ ಅವ್ಯವಸ್ಥೆ, ಟಿಕೆಟ್ ಮಾರಾಟದಲ್ಲಿನ ಹುಳುಕುಗಳನ್ನು ಇಲ್ಲವಾಗಿಸಬೇಕಾಗಿದೆ. ವಿತರಕ, ಪ್ರದರ್ಶಕ, ನಿರ್ಮಾಪಕರ ನಡುವೆ ಯೋಗ್ಯವಾದ ರೀತಿಯಲ್ಲಿ ಲಾಭ ಹಂಚಿಕೆ, ಕಾರ್ಮಿಕರಿಗೆ ಗುಂಪುವಿಮೆ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕನ್ನಡ ಚಿತ್ರಗಳ ಮಾರುಕಟ್ಟೆಗಳನ್ನು ನಾಡಿನೊಳಗಡೆ ಗಟ್ಟಿಮಾಡಿಕೊಳ್ಳಬೇಕಾಗಿದೆ. ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಬೇಕಾಗಿದೆ. ಅಂತರ್ಜಾಲ, ಆಡಿಯೋ ವೀಡಿಯೋ ಮಾರುಕಟ್ಟೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಪುಟ್ಟ ಪುಟ್ಟ ಚಿತ್ರಮಂದಿರಗಳನ್ನು ರಾಜ್ಯದ ಎಲ್ಲೆಡೆ ಕಟ್ಟುವ ಮೂಲಕ ಚಿತ್ರಮಂದಿರಗಳ ಕೊರತೆ ನೀಗಿಸಬೇಕಾಗಿದೆ. ಹೀಗೆ... ಮಾಡಲು ಹತ್ತಾರು ಕೆಲಸಗಳಿವೆ. ಇದನ್ನು ಬಿಟ್ಟು ಗತವೈಭವದಲ್ಲೇ ತೇಲಾಡಿಕೊಂಡು ಇರ್ತೀವಿ, ಕಾನೂನು ಬಾಹಿರವೂ ನ್ಯಾಯಬಾಹಿರವೂ ಆದ ಮಾರ್ಗದಲ್ಲಿ ಸ್ಪರ್ಧೆ ತಡೀತೀನಿ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ.

ಕನ್ನಡ ಚಿತ್ರರಂಗವು ಕೆಲವು ಸ್ವಹಿತಾಸಕ್ತಿಯ ನಾಯಕರ ಮಾತುಗಳಿಗೆ ಮರುಳಾಗದೆ ಇಡೀ ಚಿತ್ರರಂಗದ ನಾಳೆಗಳ ಬಗ್ಗೆ ಒಂದು ಆರೋಗ್ಯಕರವಾದ ಚರ್ಚೆಗೆ ತನ್ನನ್ನು ತಾನು ತೆರೆದುಕೊಂಡಿದ್ದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶವಾದರೂ ಇದೆ ಅನ್ನಿಸುವುದಿಲ್ಲವೇನು? ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯು ಕನ್ನಡದಲ್ಲೇ ಇರಬೇಕಾದ್ದು ಕನ್ನಡಿಗರು ಹಕ್ಕು ಎಂಬುದನ್ನೂ, ಈಗಿರುವಂತೆಯೇ ಪರಭಾಷಾ ಚಿತ್ರಗಳು ಆಯಾ ಭಾಷೆಗಳಲ್ಲೇ ಕನ್ನಡ ನಾಡಿನ ಹಳ್ಳಿಹಳ್ಳಿಗಳಲ್ಲಿ ನಡೆಯುವುದು ಮುಂದಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡವೆಲ್ಲಿ ಉಳಿದೀತು? ಕನ್ನಡ ಚಿತ್ರರಂಗವೆಲ್ಲಿ ಉಳಿದೀತು? ಅನಿಸುವುದಿಲ್ಲವೇ?
ಚಲನಚಿತ್ರಗಳ ಗ್ರಾಹಕನಾಗಿರುವ ಪ್ರೇಕ್ಷಕನೆಂಬ ಅನ್ನದಾತನ ಬಗ್ಗೆ ಗೌರವವಿಲ್ಲದ ಯಾವುದೇ ಇಂಡಸ್ಟ್ರಿ, ಪ್ರತಿಭೆಗಳನ್ನು ಮುರುಟಿಹಾಕುವ ಯಾವುದೇ ಇಂಡಸ್ಟ್ರಿ ಮಣ್ಣುಪಾಲಾಗೋದನ್ನು ತಪ್ಪಿಸಲು ಆಗೋದಿಲ್ಲ! ಬದುಕಿನಲ್ಲಿ ಓಡೋ ಪಾಠಾನ ತಾನೇ ಬಿದ್ದು ಕಲಿಯೋಕೆ ಹೋಗದೆ... ಸೋಮೇಶ್ವರ ಶತಕದಲ್ಲಿ ಬರೆದಿರುವಂತೆ "ಕೆಲವಂ ಬಲ್ಲವರಿಂದ ಕಲ್ತುI ಕೆಲವಂ ಶಾಸ್ತ್ರಗಳಂ ಕೇಳುತಂII ಕೆಲವಂ ಮಾಳ್ಪವರಿಂದ ಕಂಡುI ಕೆಲವಂ ಸುಜ್ಞಾನದಿಂ ನೋಡುತಂ..." ಬೇಗ ಕಲಿತುಕೊಂಡರೆ ಬೀಳೋದು ತಪ್ಪುತ್ತೆ! ಇಲ್ಲದಿದ್ದರೆ ಮತ್ತೆ ಏಳಕ್ಕಾಗದ ಹಾಗೆ ಬಿದ್ದು ಮಣ್ಣು ಮುಕ್ಕ ಬೇಕಾಗುತ್ತೆ... ಅಲ್ವಾ ಗುರೂ?!

ನವರಂಗ್‍ನಲ್ಲಿ ಸ್ಪೈಡರ್‌ಮ್ಯಾನ್: ಸಿನಿಮಾ ಇಂಗ್ಲೀಶಲ್ಲಿ... ವಾಲ್‌ಪೋಸ್ಟ್ ತೆಲುಗಲ್ಲಿ!


ಇದು ನಮ್ಮ ಬೆಂಗಳೂರಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರೋ ನವರಂಗ್ ಚಿತ್ರಮಂದಿರದ ಮುಂದೆ ಹಾಕಿರೋ ಒಂದು ಜಾಹೀರಾತು! ಈ ಚಿತ್ರಮಂದಿರದಲ್ಲಿ "ದಿ ಅಮೇಜಿಂಗ್ ಸ್ಪೈಡರ್‌ಮ್ಯಾನ್" ಚಿತ್ರ ನಡೀತಾ ಇದೆ. ನಿನ್ನೆ ಈ ರಸ್ತೇಲಿ ಹೋಗೋವಾಗ ಕಂಡ ಈ ನೋಟವನ್ನು ಓದುಗರೊಬ್ಬರು ಸೆರೆಹಿಡಿದು ಕಳ್ಸಿದಾರೆ. ನೋಡಿದ ಕೂಡಲೇ ಇದೇನಪ್ಪಾ ಈ ಚಿತ್ರಮಂದಿರದಲ್ಲಿ ಇಂಗ್ಲೀಶ್ ಭಾಷೆಯ ಚಿತ್ರವೊಂದು ತೆಲುಗಲ್ಲಿ ಓಡ್ತಿದೆ ಅಂತಾ ನಮಗೂ ಮೊದಲು ಅಚ್ಚರಿಯಾಯ್ತು. ಆಮೇಲೆ ನೋಡಿದರೆ ಅದು ತೆಲುಗು ಚಿತ್ರದ ಪ್ರದರ್ಶನ ಅಲ್ಲಾ... ಇಂಗ್ಲೀಶ್‌ನ ಮೂಲಚಿತ್ರದ ಪ್ರದರ್ಶನವೇ ಆಗಿತ್ತು!

ಸಿನಿಮಾ ಇಂಗ್ಲೀಶ್! ವಾಲ್‌ಪೋಸ್ಟ್ ತೆಲುಗು!

ಇಲ್ಲಿ ಇಂಗ್ಲೀಶ್‌ನ ಮೂಲಚಿತ್ರದ ಪ್ರದರ್ಶನ ನಡೀತಾ ಇದ್ರೂ, ವಾಲ್‌ಪೋಸ್ಟ್ ಮಾತ್ರಾ ತೆಲುಗಲ್ಲಿದೆ!! ಇದ್ಯಾಕೆ ತೆಲುಗಲ್ಲಿದೆ ಅಂತೀರಾ? ಈ ಸಿನಿಮಾ ವಾಲ್‌ಪೋಸ್ಟ್‌ನ ಕನ್ನಡದಲ್ಲಿ ಹಾಕೋಕೂ ಡಬ್ಬಿಂಗ್ ವಿರೋಧಿ ಲಾಬಿ ಬಿಡ್ತಾ ಇಲ್ವಾ ಅಂತಾ ಗಾಬರಿಯಾಗ್ತಿದೀರಾ? ನಮಗಂತೂ ಅದು ಗೊತ್ತಿಲ್ಲಾ! ಆದರೂ ನಾವ್ಯಾರೂ, ಇಂಗ್ಲೀಶ್ ಸಿನಿಮಾವೊಂದು ತೆಲುಗಿಗೆ ಡಬ್ ಆಗಿ ಕನ್ನಡ ನಾಡಿನಲ್ಲಿ ಓಡ್ತಿಲ್ಲಾ ಅಂತಾ ಹಿಗ್ಗೋ ಹಾಗಿಲ್ಲಾ... ಯಾಕಂದ್ರೆ ಬೆಂಗಳೂರಿನ ಮೀನಾಕ್ಶಿ ಮಾಲ್‌ನಲ್ಲಿರೋ ಸಿನಿಪೊಲಿಸ್ ಎನ್ನೋ ಮಲ್ಟಿಪ್ಲಕ್ಸ್‌ನಲ್ಲಿ "ದಿ ಅಮೇಜಿಂಗ್ ಸ್ಪೈಡರ್‌‍ಮ್ಯಾನ್" ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರದರ್ಶನವಾಗುತ್ತಿದೆ. ಹಿಂದೀ ಭಾಷೇಲಿ ಪಲ್ಲವಿ, ಪರಿಮಳ, ವೆಂಕಟೇಶ್ವರ ಮತ್ತು ಮೀನಾಕ್ಶಿ ಸಿನೆಪೊಲಿಸ್‌ಗಳಲ್ಲಿ ಪ್ರದರ್ಶನವಾಗುತ್ತಿದೆ. ಡಬ್ಬಿಂಗ್ ವಿರೋಧಿ ಮಂದಿಯ ಕಾರಣದಿಂದಾಗಿ ಇವತ್ತು ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡುವ ಭಾಗ್ಯ ಕನ್ನಡಿಗರಿಗಿಲ್ಲ. ಆದರೆ ಡಬ್ಬಿಂಗ್ ಇರಬಾರದೆನ್ನುವ ಸಾಮಾಜಿಕ ಕಟ್ಟುಪಾಡು ತಮಿಳು, ತೆಲುಗು, ಹಿಂದೀಲಿ ಡಬ್ ಆಗಿ ಕನ್ನಡನಾಡಲ್ಲೇ ಪ್ರದರ್ಶನವಾಗೋ ಪರಭಾಷಾ ಚಿತ್ರಗಳಿಗೆ ಅನ್ವಯವಾಗಲ್ಲಾ!

ಇದಪ್ಪಾ... ಹೊಸ ಬಗೆ ಕನ್ನಡಪ್ರೇಮಾ!!

ಬೆಂಗಳೂರಲ್ಲಿ ಬದುಕೋ ನಾವು ಕನ್ನಡ ಬಿಟ್ಟು ಇನ್ನೊಂದು ಪರಭಾಷೆ ಕಲಿತುಬಿಟ್ರೆ ಸಾಕು... ಜಗತ್ತಿನ ಎಲ್ಲಾ ಭಾಷೆಯ ಸಿನಿಮಾಗಳನ್ನೂ ಕನ್ನಡನಾಡಲ್ಲೇ ಆ ಕಲಿತಭಾಷೇಲಿ ನೋಡಿ, ಅರ್ಥ ಮಾಡ್ಕೊಂಡು ಬಿಡಬಹುದು.  ಅಂದ್ರೆ ನೀವೀಗ ಕನ್ನಡದೋರು, ತಮಿಳು ಒಂದನ್ನು ಕಲಿತು ಬಿಡಿ. ಆಗ ಸ್ಪೈಡರ್‌ಮ್ಯಾನ್, ರಾವಣ್, ರಾ ಒನ್ ಎಲ್ಲಾನೂ ತಮಿಳಲ್ಲಿ ನೋಡಬಹುದು.. ಅದೂ ನಮ್ಮ ಬೆಂಗಳೂರಲ್ಲೇ! ಆಗ ಎಷ್ಟು ಲಾಭಾ ನೋಡಿ. ನಮ್ಮ ಕನ್ನಡ ಸಂಸ್ಕೃತಿ, ಕನ್ನಡಭಾಷೆ,  ಕನ್ನಡಿಗರ ಪರಂಪರೆ, ಕನ್ನಡದ ಸೊಗಡು... ಎಲ್ಲಾ ಉಳ್ಕೊಂಡಂಗೂ ಆಗುತ್ತೆ... ನಮಗೆ ಅರ್ಥವಾಗೋ ಭಾಷೇಲಿ ಮನರಂಜನೆ ಸಿಕ್ಕಂಗೂ ಆಗುತ್ತೆ! ಇಷ್ಟರ ಮೇಲೆ ಹಾಳಾಗೋದೇ ಆದ್ರೆ ಅದು ನಾವು ಕಲಿತ, ಪರಭಾಷೆಯಾಗಿರೋ ತಮಿಳು ತಾನೇ! ಸುಮ್ಮನೆ "ಬೇರೆ ಭಾಷೆ ಸಿನಿಮಾನಾ ಕನ್ನಡದಲ್ಲಿ ನೋಡೋದು ಕನ್ನಡ ಪ್ರೇಮ" ಅಂತಾ ಕನ್ನಡಕ್ಕೆ ಡಬ್ಬಿಂಗ್ ಬರಲೀ ಅನ್ನೋಕಿಂತಾ ಹೀಗೆ ಮಾಡೋದು ಒಳ್ಳೇದಲ್ವೇ? ಏನಂದ್ರೀ... ತಮಿಳು ಬರಲ್ವಾ? ಅಯ್ಯೋ ನಮ್ಮೂರಿಗೆ ದಿನಕ್ಕೆ ಹತ್ತಾರು ರೈಲು "ತಮಿಳುನಾಡಿಂದ ವಲಸೆ ಬರೋರಿಗೇ" ಅಂತಾನೇ ಬಿಟ್ಟಿದಾರೆ. ಅವರೆಲ್ಲರ ಜೊತೆ ಚೂರು ಚೂರೇ ತಮಿಳು ಮಾತಾಡಿ. ಅವರಿಗೆ ಕನ್ನಡ ಕಲಿಸದಿದ್ರೂ ಪರ್ವಾಗಿಲ್ಲಾ...  ಕನ್ನಡಿಗರು ಸಹೃದಯರು ಅನ್ನೋದನ್ನು ನಾವು ಮರೀಬಾರ್ದು! ಒಂದಷ್ಟು ಜನ ಕನ್ನಡದೋರು ತೆಲುಗು ಕಲಿಯೋಣ, ಒಂದಷ್ಟು  ಜನಾ ಹಿಂದೀ ಕಲಿಯೋಣ, ಮತ್ತೊಂದಷ್ಟು ಜನಾ ತಮಿಳು ಕಲಿಯೋಣ!! ಇದರಿಂದಾಗಿ ಪರಭಾಷಿಕರ ವಲಸೆ ಹೆಚ್ಚಾದ್ರೂ ತೊಂದರೆ ಇಲ್ಲಾ ಅಲ್ವೇ! ಇದೇ ಇವತ್ತಿನ ಹೊಸ ಬಗೆಯ ಕನ್ನಡ ಪ್ರೇಮಾ ಗುರೂ!!
Related Posts with Thumbnails