ಎಲ್ಲಾ ಓ.ಕೆ. ಇದೊಂದು ಸಾಲು ಯಾಕೆ?


ಕರ್ನಾಟಕದಲ್ಲಿ ಸದ್ಯಕ್ಕೆ ಸಕ್ಕತ್ ಧೂಳೆಬ್ಬಿಸಿರೋ ರಾಜಕೀಯದ ಸುದ್ದಿ ಅಂದ್ರೆ ಗಣಿ. ಅದ್ರಲ್ಲೂ ಬಳ್ಳಾರಿ ಗಣಿ. ಇದೇ ವಿಷಯವಾಗಿ ಕಾಂಗ್ರೆಸ್ಸಿನೋರು ಒಂದು ಪಾದಯಾತ್ರೇನಾ ಹಮ್ಮಿಕೊಂಡ್ರು ಅಂತಾ ಸುದ್ದಿ ಬಂತು. ಕಾಂಗ್ರೆಸ್ ಪಕ್ಷದ ವತಿಯಿಂದ ಈ ಪಾದಯಾತ್ರೆ ಬಗ್ಗೆ ಒಂದು ಪತ್ರಿಕಾ ಜಾಹೀರಾತು ಕೂಡಾ ಮೇಲಿನ ಚಿತ್ರದಂತೆ ಪತ್ರಿಕೆಗಳಲ್ಲಿ ಪ್ರಕಟವಾಯ್ತು.

ಎಲ್ಲಾ ಓಕೆ! ಇದೊಂದು ಸಾಲು ಯಾಕೆ?

ನೋಡ್ರಪ್ಪಾ ಗುರುಗೋಳೇ, ಈ ಗಣಿಗಾರಿಕೆ ಅಕ್ರಮದ ಬಗ್ಗೆ ಆಗಲೀ, ಇದುನ್ನ ಯಾರು ಮಾಡ್ತಿದಾರೆ ಅನ್ನೋದಾಗ್ಲೀ, ಕಾಂಗ್ರೆಸ್ಸು ಪಾದಯಾತ್ರೆ ಮಾಡ್ತಿರೋದು ಸರೀನಾ? ತಪ್ಪಾ? ಇದರ ಹಿಂದೆ ಇನ್ನೇನಾದ್ರೂ ಉದ್ದೇಶ ಇದ್ಯಾ? ಅನ್ನೋದಾಗ್ಲೀ ಈ ನಮ್ಮ ಬರಹದ ವ್ಯಾಪ್ತಿಯಲ್ಲಿ ಇಲ್ಲಾ. ನಮ್ಮ ನಾಡನ್ನು ದಶಕಗಳ ಕಾಲ ಆಳಿದ ರಾಜಕೀಯ ಪಕ್ಷವೊಂದರ ಗುಲಾಮಗಿರಿ ಮನಸ್ಥಿತಿ ಬಗ್ಗೆ ಮಾತ್ರಾ ನಿಮ್ಮ ಗಮನ ಸೆಳೆಯೋದು ನಮ್ಮ ಉದ್ದೇಶ. ಅಲ್ಲಾ ಅಂಥಾ ಬಂಗಾರದಂಗೆ ನಾಡರಕ್ಷಣಾ ನಡಿಗೆ ಅಂತಾ ಹೆಸರಿಟ್ಟುಕೊಂಡು, ದೊಡ್ಡ ಬ್ಯಾನರ್ರು, ಪುಟದಗಲದ ಅಡ್ವಟೈಸ್‍ಮೆಂಟು ಹಾಕಿಸಿರೋ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೋರು ಅದ್ಯಾಕೆ ಅಷ್ಟು ಅವಲಕ್ಷಣವಾಗಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಅಂತಾ ಬರೆದಿದ್ದಾರೆ ಅನ್ಸಲ್ವಾ ಗುರೂ? ಹೋಗ್ಲಿ, ದಿಲ್ಲಿಯಲ್ಲಿ ಕೂತಿರೋ ತಮ್ಮ ಹೈಕಮಾಂಡ್ ದಣಿಗಳನ್ನು ಮೆಚ್ಚಿಸೋ ಉದ್ದೇಶ ಇದೆ ಅಂತಾಗಿದ್ರೆ ಇದುನ್ನ ಕನ್ನಡ ಲಿಪಿಯಲ್ಲಿ ಯಾಕೆ ಬರೆಸಿದ್ದಾರೆ? ಕನ್ನಡದೋರಿಗೆ ಹಿಂದೀ ಕಲಿಸೋಕೆ ಇದುನ್ನೂ ಒಂದು ಅವಕಾಶ ಅಂದ್ಕೊಂಬುಟ್ರಾ ಅಂತಾ ಅನ್ಸಲ್ವಾ? ನಾಡು ನುಡಿ ಬಗ್ಗೆ ಕಾಳಜಿ ಜೊತೆಗೆ ಚೂರು ಸ್ವಾಭಿಮಾನಾನೂ ಕರ್ನಾಟಕ ಕಾಂಗ್ರೆಸ್ಸೂ ಸೇರಿದಂತೆ ರಾಜ್ಯದಲ್ಲಿರೋ ರಾಷ್ಟ್ರೀಯ ಪಕ್ಷಗಳಿಗೆ ಇರಬೇಕಲ್ವಾ? ಇದುನ್ನೆಲ್ಲಾ ನೋಡುದ್ರೆ ಕರ್ನಾಟಕದ ರಾಜಕಾರಣ ಕನ್ನಡ ಕೇಂದ್ರಿತ ಆಗಬೇಕಾಗಿದೆ ಅನ್ಸುತ್ತಲ್ವಾ? ಗುರೂ!

ವಿಕ್ಷನರಿಯೆಂಬ ನುಡಿಕಡಲು!


ಅಂತರ್ಜಾಲ ಲೋಕದಲ್ಲಿ ವಿಕಿಪೀಡಿಯಾದೋರು ಕೊಡಮಾಡಿರೋ ಒಂದು ಮಾಯಾದಂಡ ಅಂದ್ರೆ ವಿಕ್ಷನರಿ. ಇದು ವಿಕಿ+ಡಿಕ್ಷನರಿ ಎಂಬ ಎರಡು ಪದಗಳ್ನ ಬೆರೆಸಿ ಮಾಡಿರೋ ಹೆಸರು. ಅಂತರ್ಜಾಲದಲ್ಲಿ ತನ್ನ ಇರುವಿಕೆಯನ್ನು ನೆಲೆ ನಿಲ್ಲಿಸಿ ತನ್ನ ಹರವನ್ನು ಹೆಚ್ಚಿಸಿಕೊಳ್ಳಬಯಸೋ ಪ್ರತಿಯೊಂದು ಭಾಷೆಗೂ ಈ ತಾಣ ಅಮೃತ ಪಾನ.

ವಿಕ್ಷನರಿಯ ಮಹತ್ವ

ಇದು ಅಂತರ್ಜಾಲ ನಿಘಂಟು ಎನ್ನುವಂತೆ ಮೇಲುನೋಟಕ್ಕೆ ತೋರಿದರೂ ಬುಡಮಟ್ಟದಲ್ಲೇ ನಿಘಂಟಿಗೂ ಕೆಲವು ವ್ಯತ್ಯಾಸಗಳಿವೆ. ಇಲ್ಲಿನ ನುಡಿಕಡಲಿಗೆ ಯಾರು ಬೇಕಾದರೂ ಪದ ಸೇರಿಸಬಹುದು. ಪ್ರತಿಯೊಂದು ಪದಕ್ಕೂ ಒಂದೊಂದು ಪುಟ ಹುಟ್ಟುಹಾಕಿ ಪದದ ಬಗ್ಗೆ ಅನೇಕ ಮಾಹಿತಿ ನೀಡಬಹುದು. ಪ್ರತಿ ಪದಕ್ಕೂ ಯಾವ ಭಾಷೆಯಲ್ಲಿ ಬೇಕಾದರೂ ಅರ್ಥ ನೀಡಬಹುದು. ಅಂದರೆ ಒಂದು ಕನ್ನಡ ಪದಕ್ಕೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ ಅಂತ ಬರೀಬಹುದು. ಮುಂದಿನ ದಿನಗಳಲ್ಲಿ ನಮ್ಮ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳೇ ಇದ್ದು ಇಂತಹ ಅಂತರ್ಜಾಲ ನಿಘಂಟಿನ/ ನುಡಿಕಡಲಿನ ಪಾತ್ರ ಮಹತ್ವದ್ದೂ ಹೆಚ್ಚಿನದ್ದೂ ಆಗಲಿದೆ. ಆ ದೃಷ್ಟಿಯಿಂದ ನೋಡಿದಾಗ ವಿಕ್ಷನರಿಯಲ್ಲಿ ಕನ್ನಡ ಪದಗಳು ಹೆಚ್ಚು ಹೆಚ್ಚು ಇರಬೇಕಾದ ಅಗತ್ಯ ಮತ್ತು ಇದ್ದರೆ ಆಗುವ ಉಪಯೋಗಗಳು ಮನದಟ್ಟಾಗುತ್ತವೆ.

ಕನ್ನಡ ವಿಕ್ಷನರಿ ಅಂದು - ಇಂದು

ಸುಮಾರು ಒಂದು ವರ್ಷದ ಹಿಂದೆ (ಜೂನ್ 2009) ಕನ್ನಡ ವಿಕ್ಷನರಿಯಲ್ಲಿ ಇದ್ದ ಪದಗಳ ಮೊತ್ತ ಮುನ್ನೂರಕ್ಕಿಂತ ಕಮ್ಮಿ. ಇನ್ನೂರೈವತ್ತರ ಆಸುಪಾಸು. ಇಂತಹ ಸಂದರ್ಭದಲ್ಲಿ ಬನವಾಸಿ ಬಳಗವು ಕನ್ನಡ ವಿಕ್ಷನರಿಯನ್ನು ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿತು. ಸಮಾನ ಮನಸ್ಕರನ್ನು ಒಗ್ಗೂಡಿಸುವ, ಅಗತ್ಯ ಇರುವವರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುವ, ವಿಕ್ಷನರಿಯಲ್ಲಿ ಪದಗಳನ್ನು ತುಂಬುವ ಯೋಜನೆಯನ್ನು ರೂಪಿಸಿತು. ಕನ್ನಡಮ್ಮನ ಕೈಂಕರ್ಯಕ್ಕೆ ಕಂದಮ್ಮಗಳ ಕೊರತೆಯೇ? ಹತ್ತಾರು ಆಸಕ್ತರು ಈ ಕೆಲಸದಲ್ಲಿ ಕೈ ಜೋಡಿಸಿದರು. ಈ ಎಲ್ಲರ ಶ್ರಮದ ಫಲವಾಗಿ ಇಂದು ವಿಕ್ಷನರಿಯಲ್ಲಿ ಸುಮಾರು ಅರವತ್ತಾರು ಸಾವಿರದ ನೂರಾ ನಲವತ್ನಾಲ್ಕು(66, 144) ಪದಗಳಿವೆ. ಸಂಖ್ಯಾಬಲದಲ್ಲಿ ಕನ್ನಡವು ಜೂನ್ 2009ರಲ್ಲಿ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಕೊಟ್ಟಕೊನೆಯಲ್ಲಿತ್ತು. ಇದೀಗ ಎರಡನೇ ಸ್ಥಾನಕ್ಕೇರಿದೆ. ಅತಿಹೆಚ್ಚು ಪದಗಳನ್ನು ಹೊಂದಿರುವ ಭಾರತೀಯ ಭಾಷೆ ತಮಿಳು. ಇದರಲ್ಲಿ ಒಂದು ಲಕ್ಷದ ಹತ್ತೊಂಬತ್ತು ಸಾವಿರದ ಎಂಟುನೂರಾ ಎಪ್ಪತ್ತೈದು (119,875) ಪದಗಳಿವೆ. ಕನ್ನಡದ ನಂತರದ ಸ್ಥಾನ ಮಲಯಾಳಮ್ದು. ಇದರಲ್ಲಿ ಐವತ್ತೊಂಬತ್ತು ಸಾವಿರದ ಒಂಬೈನೂರಾ ಐವತ್ತೊಂಬತ್ತು (59,959) ಪದಗಳಿವೆ. ನಂತರದ್ದು ತೆಲುಗಿನದ್ದು. ಇದರಲ್ಲಿ ಒಟ್ಟು ಮೂವತ್ನಾಲ್ಕು ಸಾವಿರದ ಏಳುನೂರಾ ಇಪ್ಪತ್ನಾಲ್ಕು (34, 724) ಪದಗಳಿವೆ. ಇಡೀ ವಿಶ್ವದಲ್ಲಿರೋ ಭಾಷೆಗಳನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ ಕನ್ನಡದ ಸ್ಥಾನ ಇಪ್ಪತ್ತೊಂದನೇದು.
ಬಹಳ ಚುರುಕಾಗಿ, ವೇಗವಾಗಿ ನಾವು ಮುಂದುವರೀತಾ ಇದೀವಿ ಗುರೂ! ಆದರೆ ಅಂತರ್ಜಾಲ ತಾಣದಲ್ಲಿ ಕನ್ನಡದ ನುಡಿಗುಡಿಯ ಈ ತೇರು ಎಳೆಯೋಕೆ ನಿಮ್ಮದೂ ಎರಡು ಕೈ ಸೇರಿದರೆ ಬೊಂಬಾಟಾಗಿರುತ್ತೆ. ನಿಮಗೂ ವಿಕ್ಷನರಿಗೆ ಕನ್ನಡ ಪದಗಳನ್ನು ಸೇರಿಸೋ ಮನಸ್ಸಿದ್ದಲ್ಲಿ ವಿಕ್ಷನರಿಯ ತಾಣಕ್ಕೆ ಭೇಟಿ ಕೊಡಿ. ಅಲ್ಲಿರೋ ಸಮುದಾಯ ಪುಟದಲ್ಲಿ ಹೇಗೆ ಪದ ಸೇರಿಸಬೇಕು ಅಂತಾ ಇದೆ. ಅದರಲ್ಲಿ ಬರೆದಿರೋ ರೀತೀಲಿ ಪದ ಸೇರಿಸಿದರೆ ಆಯ್ತು. ನಿಮಗೆ ನಮ್ಮೊಂದಿಗೆ ಕೈಜೋಡಿಸೋಕೆ ಆಸಕ್ತಿ ಇದ್ದಲ್ಲಿ sanjeeva@banavasibalaga.org ಗೆ ಒಂದು ಮಿಂಚೆ ಹಾಕಿ...ಗುರೂ!!

ಬೆಳಗಾವಿ ಮತ್ತು ಕೇಂದ್ರದ ಪ್ರಮಾಣಪತ್ರ


ಬೆಳಗಾವಿ ವಿಷಯವಾಗಿ ಕೇಂದ್ರ ಸರ್ಕಾರದೋರು ಇದು ಕರ್ನಾಟಕಕ್ಕೆ ಸೇರಿದ್ದು ಅನ್ನೋ ಒಂದು ಪ್ರಮಾಣ ಪತ್ರಾನ ಇತ್ತೀಚಿಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿತು. ಸುಮಾರು ನಾಲ್ಕು ವರ್ಷದ ಹಿಂದೇನೂ ಇದೇ ವಿಷಯವಾಗಿ ಇದೇ ಥರದ ಪ್ರಮಾಣಪತ್ರಾನ ಸಲ್ಲಿಸಿ ಎರಡೇ ದಿನದಲ್ಲಿ ವಾಪಸ್ಸು ಪಡ್ಕೊಂಡಿತ್ತು. ಆದ್ರೆ ಈ ಸಲದ ಪ್ರಮಾಣಪತ್ರಾನೇ ಅಂತಿಮ, ಯಾವ ಕಾರಣಕ್ಕೂ ಬದಲಾಯಿಸಲ್ಲಾ ಅನ್ನೋ ಮಾತನ್ನೂ ಹೇಳಿರೋದ್ರಿಂದ ಇದೇ ಅಂತಿಮ ಅಂದ್ಕೊಂಡು ಕನ್ನಡಿಗರು ನೆಮ್ಮದಿಯ ನಿಟ್ಟುಸಿರು ಬಿಡ್ತಿದಾರೆ ಗುರೂ!

ಕನ್ನಡಿಗರ ಪರ ನಿಂತ ಕೇಂದ್ರ!
ಅಂತರರಾಜ್ಯ ಸಮಸ್ಯೆಗಳ ವಿಷಯಕ್ಕೆ ಬಂದಾಗಲೆಲ್ಲಾ ಇದುವರೆಗೂ ಕೇಂದ್ರದ ನಿಲುವುಗಳು ಕರ್ನಾಟಕದ ಹಿತಕ್ಕೆ ಪೂರಕವಾಗಿ ಇದ್ದದ್ದು ಬಹಳ ಅಪರೂಪದ ಮಾತಾಗಿತ್ತು ಅಂದರೆ ತಪ್ಪಾಗಲಾರದು. ಈಗ ಬೆಳಗಾವಿ ವಿಷಯದಲ್ಲಿ ಕೇಂದ್ರ ಕರ್ನಾಟಕದ ಪರವಾಗಿ ಮಾತಾಡಿರೋದ್ರಿಂದ ಅಚ್ಚರಿಗೊಳಗಾಗಿರುವುದು ಬರೀ ಮಹಾರಾಷ್ಟ್ರ ಮಾತ್ರಾ ಅಲ್ಲಾ, ಕರ್ನಾಟಕವೂ ಕೂಡಾ. ಹೀಗಾಗಲು ಕಾರಣ 2005ರಿಂದೀಚಿಗೆ ಬೆಳಗಾವಿಯ ವಿಷಯವಾಗಿ ಕನ್ನಡಿಗರಲ್ಲುಂಟಾಗಿರೋ ಜಾಗೃತಿ, ಕನ್ನಡಿಗರ ಸಂಘಟಿತ ಬಲ ಪ್ರದರ್ಶನಗಳೇ ಕಾರಣ. ಒಟ್ನಲ್ಲಿ ಕೇಂದ್ರಸರ್ಕಾರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸೋದನ್ನು ನಿಲ್ಲಿಸಲು ಕನ್ನಡಿಗರಲ್ಲಿ ಉಂಟಾಗುವ ಜಾಗೃತಿ, ಒಗ್ಗಟ್ಟು, ರಾಜಕೀಯ ಪ್ರಜ್ಞೆಗಳೇ ಕಾರಣವಾಗಿದ್ದಲ್ಲಿ ಈ ದಿಕ್ಕಲ್ಲಿ ಮತ್ತಷ್ಟು ಕೆಲಸಗಳಾಗಬೇಕು ಅನ್ನೋದ್ರಲ್ಲಿ ಅನುಮಾನಾ ಇಲ್ಲಾ. ಅಲ್ವಾ ಗುರೂ!

ಸಿಟಿ ಬ್ಯಾಂಕಿನಲ್ಲಿ ಬೀಸಿದ ಬದಲಾವಣೆಯ ತಂಗಾಳಿ!!

ಇದು ಉರಿ ಬಿಸಿಲಿನಲ್ಲಿ ತಣ್ಣುಗಿರೋ ನೀರು ಕುಡಿಯಕ್ಕೆ ಸಿಕ್ಕುದ್ರೆ ಆಗೋ ಖುಷಿಯಂತಹುದ್ದೇ ಅನುಭವಾ ಕೊಡ್ತಿರೋ ಸುದ್ದಿ. ಏನಪ್ಪಾ ಅಂದ್ರೆ ಪಕ್ಕದಲ್ಲಿ ಹಾಕಿರೋ ಸಿಟಿಬ್ಯಾಂಕಿನ ಈ ಗ್ರಾಹಕ ಕೈಪಿಡಿಯನ್ನು ನೋಡಿ! ಹ್ಞಾಂ! ಸಿಟಿ ಬ್ಯಾಂಕೋರು ಕನ್ನಡದಲ್ಲಿ ಕೈಪಿಡಿ ಮಾಡಿದಾರೆ ಅಂತಾ ಬಾಯ್ಬುಡ್ಕೊಂಡು ನೋಡ್ತಿದೀರಾ? ಇದುನ್ ನೋಡಿದ್ ಕೂಡ್ಲೇ ನಮಗೂ ಹಂಗೇ ಆಗಿತ್ತು...ಗುರೂ! ಬೆಂಗಳೂರಿನಲ್ಲಿ ಹತ್ತಾರು ಶಾಖೆ ಹೊಂದಿರುವ, ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಈ ಬ್ಯಾಂಕಿನೋರು ತಡವಾಗಿಯಾದರೂ ಕನ್ನಡಿಗ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ - ಈ ಹೆಜ್ಜೆ ಗ್ರಾಹಕರಿಗೆ ಅನುಕೂಲವಷ್ಟೇ ಅಲ್ಲದೆ ತಮಗೂ ಲಾಭದಾಯಕ ಅಂತ ಸಿಟಿಬ್ಯಾಂಕಿಗೆ ಮನವರಿಕೆ ಆದಂಗಿದೆ! ಏನಂದ್ರೂ ಸಿಟಿಬ್ಯಾಂಕಿನ ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮದೊಂದು ಅಭಿನಂದನೆ!!

ಹೇಗೆ ಸಾಧ್ಯವಾಯಿತು?

ಕೆಲವು ತಿಂಗಳುಗಳ ಹಿಂದೆ ಒಬ್ರು ತಮ್ಮ ಕ್ರೆಡಿಟ್ ಕಾರ್ಡಿನ ವಹಿವಾಟಿಗೆ ಸಂಬಂಧಿಸಿದಂತೆ ಸಿಟಿಬ್ಯಾಂಕಿನೋರಿಗೆ ಒಂದು ಪತ್ರ ಬರೆದಿದ್ದರು. ಇಡೀ ಪತ್ರ ಮತ್ತು ಸಹಿ ಕನ್ನಡದಲ್ಲಿತ್ತು ಅನ್ನೋ ಕಾರಣದಿಂದಾಗಿ ಬ್ಯಾಂಕು ಗ್ರಾಹಕರ ಮನವಿ ಪತ್ರವನ್ನು ತಿರಸ್ಕರಿಸಿ ಹಿಂದಿ ಅಥವಾ ಇಂಗ್ಲೀಷಿನಲ್ಲಿ ಮಾತ್ರವೇ ಇರುವ ಪತ್ರಗಳಿಗೆ ನಾವು ಉತ್ತರಿಸುತ್ತೇವೆ ಅಂದಿತ್ತು. ನಮ್ಮ ಈ ಜಾಗೃತ ಗ್ರಾಹಕರು ಇಷ್ಟಕ್ಕೆ ಸುಮ್ಮನಾಗದೆ ಭಾರತೀಯ ರಿಜರ್ವ್ ಬ್ಯಾಂಕಿಗೆ ಈ ಪ್ರಕರಣ ಕುರಿತು ದೂರಿದ್ದರು. ಆರ್.ಬಿ.ಐ ಹೊರಡಿಸಿದ್ದ Fair Practices Code ಪ್ರಕಾರ ಈ ಬ್ಯಾಂಕು ನಡೆದುಕೊಂಡಿಲ್ಲ ಎಂದು ಆ ಸಂದರ್ಭದಲ್ಲಿ ಆರ್.ಬಿ.ಐ ಈ ಬ್ಯಾಂಕಿಗೆ ಛೀಮಾರಿ ಹಾಕಿತ್ತು. ಪರಿಣಾಮವಾಗಿ ಅಲ್ಲಿಯವರೆಗೆ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿರೋ ಪತ್ರಕ್ಕೆ ಮಾತ್ರಾ ಮಾನ್ಯತೆ ಅಂತ ಹೇಳಿದ್ದ ಆ ಬ್ಯಾಂಕಿನೋರು ಕನ್ನಡದ ಪತ್ರವನ್ನು ತಕ್ಷಣ ಒಪ್ಪಿಕೊಂಡು ಕನ್ನಡದಲ್ಲಿ ವಹಿವಾಟು ಮಾಡಲಾಗುತ್ತದೆ ಎಂಬ ಸಂದೇಶ ಕೊಟ್ಟಿದ್ದರು! ಇದು ಯಾವುದೋ ಒಂದು ಬ್ಯಾಂಕಿಗೆ ಸೀಮಿತವಾಗಿರಲಿಲ್ಲ.

ಹಿಂದೆ ಹಾಗಿದ್ದ ಪರಿಸ್ಥಿತಿ ಈಗ ಹೇಗೆ ಸುಧಾರಿಸಿತು ಅಂದ್ರೆ ಇತ್ತೀಚಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ಇರಬೇಕು ಅನ್ನೋ ಜಾಗೃತಿ ಕನ್ನಡಿಗರಲ್ಲಿ ಹೆಚ್ಚೆಚ್ಚು ಉಂಟಾಗಿ ಬ್ಯಾಂಕಿಗೆ ಅದನ್ನು ತಿಳಿಸಿದ್ದರಿಂದಾಗಿಯೇ ಆಯ್ತು ಅಂತನ್ನಬಹುದು. ನಾವು ಹೆಚ್ಚಿನ ಸಂಖ್ಯೇಲಿ ಗ್ರಾಹಕ ಹಕ್ಕುಗಳಿಗಾಗಿ ಒತ್ತಾಯಿಸಿದಾಗ ಸಹಜವಾಗಿ ಅದು ಇಂತಹ ಬದಲಾವಣೆಗಳಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಒಂದು ಸನ್ನಿವೇಶ ಒಳ್ಳೇ ಉದಾಹರಣೆಯಾಗಿದೆ.

ನಮ್ಮ ಉತ್ಸಾಹ ಹೆಚ್ಚಿಸಿ ಸ್ಪೂರ್ತಿ ನೀಡಲಿ!

ತಡವಾಗಿಯೇ ಸರಿ ಕೊನೆಗೂ ಈ ಬ್ಯಾಂಕಿನೋರು ಗ್ರಾಹಕರ ಬೇಡಿಕೆ ಏನು ಅಂತ ಅರ್ಥ ಮಾಡಿಕೊಂಡಿದ್ದಾರೆ. ಹಾಗಂತ ಈ ಬ್ಯಾಂಕುಗಳಲ್ಲಿ ಎಲ್ಲೆಡೆ ಕನ್ನಡ ಕಂಗೊಳಿಸುತ್ತಿದೆ ಅಂತೇನಲ್ಲ. ಈಗಲೂ ಬ್ಯಾಂಕಿನ ಇತರ ಹಲವಾರು ಸೇವೆಗಳಲ್ಲಿ ಕನ್ನಡ ಬಳಕೆ ಆಗುತ್ತಿಲ್ಲ. ಅದು ಬ್ಯಾಂಕಿನಿಂದ ಬರುವ ದೂರವಾಣಿ ಕರೆ ಇರಬಹುದು, ಬ್ಯಾಂಕಿನೊಳಗೆ ಸಿಗುವ ಹಲವಾರು ಅರ್ಜಿ ಕಡತಗಳು ಇರಬಹುದು ಅಥವಾ ಬ್ಯಾಂಕಿನೋರು ಹೊರಡಿಸುವ ಜಾಹಿರಾತುಗಳೇ ಇರಬಹುದು. ಇವುಗಳಲ್ಲಿಯೂ ಕನ್ನಡವು ಬಳಕೆಯಾಗುವ ಹಾಗೆ ಒತ್ತಾಯಿಸುವುದು ನಮ್ಮೆಲ್ಲರ ಹೊಣೆ ಆಗಿದೆ. ಸಿಟಿಬ್ಯಾಂಕಿನ ಈ ಬದಲಾವಣೆಯನ್ನು ಮೆಚ್ಚಿ ಬೆನ್ತಟ್ಟೋಣ. ಹಾಗೇ ಗ್ರಾಹಕರಾಗಿ ಕನ್ನಡದಲ್ಲಿ ಎಲ್ಲಾ ಸೇವೆ ಪಡೆಯುವ ಹಕ್ಕೊತ್ತಾಯವನ್ನು ಆಗಿಂದಾಗ್ಗೇ ಮಾಡುತ್ತಿರೋಣ. ಏನಂತೀರಾ ಗುರೂ!

Related Posts with Thumbnails