Showing posts with label ಛಲ. Show all posts
Showing posts with label ಛಲ. Show all posts

ಕನ್ನಡ ರಾಜ್ಯೋತ್ಸವ ಮತ್ತು ಕನ್ನಡಿಗರ ಏಳಿಗೆ!


(ಕೃಪೆ: ಯೂಟ್ಯೂಬಿನಲ್ಲಿ ಶ್ರೀ ದಿನೇಶ್ ಕುಮಾರ್)

ಇಡೀ ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆಯೊಂದನ್ನು ಪುಟಿದೆಬ್ಬಿಸುವ ನವೆಂಬರ್ ಒಂದರ ನಾಡಹಬ್ಬ ನಾಳೆ. ಭಾರತದಲ್ಲಿ ಭಾಷಾವಾರು ರಾಜ್ಯ ರಚನೆಯು ಆರಂಭವಾದ ನಂತರ ಅದುವರೆಗೆ ಹತ್ತು ಹಲವು ಆಡಳಿತದಲ್ಲಿ ಹಂಚಿಹೋಗಿದ್ದ ಕನ್ನಡನಾಡು ೧೯೫೬ರ ನವೆಂಬರ್ ಒಂದರಂದು ಒಂದು ರಾಜ್ಯವಾಗಿ ರೂಪುಗೊಂಡಿತು. ಈ ದಿನವನ್ನೇ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದೇವೆ. ಈ ದಿನದಂದು ನಮ್ಮ ಹೆಚ್ಚಿನ ಗಮನ ನಿನ್ನೆಗಳ ಬಗ್ಗೆ ಮಾತ್ರಾ ಇರುತ್ತದೆ. ಅಂದರೆ ಏಕೀಕರಣಕ್ಕಾಗಿ ಇಂತಿಂತವರು ಹೋರಾಡಿದರು, ಏಕೀಕರಣಕ್ಕೆ ಮೊದಲು ಕನ್ನಡ ಜನಾಂಗ ಒಂದೇ ಆಳ್ವಿಕೆಯಲ್ಲಿರಬೇಕೆಂದು ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಕನಸು ಕಂಡರು, ರಂಜಾನ್ ಸಾಬ್ ಜೀವ ಕೊಟ್ಟರು, ಜಯದೇವಿ ತಾಯಿ ಲಿಗಾಡೆ  ನೆತ್ತರಲ್ಲಿ ಓಲೆ ಬರೆದರು, ಅದರಗುಂಚಿ ಶಂಕರಪಾಟೀಲರು ೨೩ ದಿವಸ ಉಪವಾಸ ಮಾಡಿದರು... ಹೀಗೆ ನೆನಪು ಮಾಡಿಕೊಳ್ಳುವುದು ಒಂದು ಕಡೆಯಾದರೆ, ಕದಂಬ ಚಾಲುಕ್ಯ ಹೊಯ್ಸಳ ರಾಷ್ಟ್ರಕೂಟ ಗಂಗ ವಿಜಯನಗರ ಮೊದಲಾದ ಮಹಾ ಸಾಮ್ರಾಜ್ಯಗಳ ವೈಭವ, ಕನ್ನಡನಾಡಿನ ಕಲೆ ಸಾಹಿತ್ಯಗಳ ಹಿರಿಮೆಗಳನ್ನು ನೆನೆದು ಕೊಂಡಾಡುತ್ತೇವೆ. ಇವೆಲ್ಲಾ ಸರಿಯೇ! ಇವೆಲ್ಲವನ್ನೂ ಮಾಡಬೇಕಾದ್ದೇ!! ಆದರೆ ನಿಜಕ್ಕೂ ಭಾಷಾವಾರು ರಾಜ್ಯರಚನೆಯಾಗಿದ್ದು ಏಕೆ? ಇದರ ಉದ್ದೇಶ ಈಡೇರಿಕೆ ಆಗುತ್ತಿದೆಯೇ? ಆಗಿಸಲು ನಾವೇನು ಮಾಡಬೇಕು? ಆಗಿಸಬೇಕಾದ ಅಗತ್ಯವೇನು? ಇವನ್ನೆಲ್ಲಾ ಯೋಚಿಸಬೇಕಿದೆ.

ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ!

ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲೋದ್ದೇಶವೇ ಅಧಿಕಾರ ವಿಕೇಂದ್ರೀಕರಣ. ಜನರಿಂದ ಜನರಿಗಾಗಿ ಆಡಳಿತ ವ್ಯವಸ್ಥೆ ಇರುತ್ತದೆ ಎನ್ನುವುದು ಮೊದಲ ಗುಣಲಕ್ಷಣ. ಹೀಗಿದ್ದಾಗ ಒಂದು ನಾಡಿನ ಜನಜೀವನದ ಬದುಕಿನ ಅತ್ಯಗತ್ಯ ಅಂಗಗಳಾದ ಕಲಿಕೆ, ದುಡಿಮೆ, ಸಾರ್ವಜನಿಕ ಆಡಳಿತದ ಕೆಲಸ ಕಾರ್ಯಗಳ ಏರ್ಪಾಡುಗಳೆಲ್ಲವೂ ಜನರಿಗೆ ಹತ್ತಿರವಾಗಬೇಕು. ಅವರ ಕೈಗೆಟುಕಬೇಕು. ಅವರನ್ನು ಒಳಗೊಳ್ಳಬೇಕು. ಇವಲ್ಲವೂ ಪರಿಣಾಮಕಾರಿಯಾಗಿ ಆಗಬೇಕಾದರೆ ಈ ಏರ್ಪಾಟುಗಳೆಲ್ಲಾ ಜನರಿಗೆ ಅರ್ಥವಾಗಬೇಕು, ಬಳಸಲು ಸುಲಭವಾಗಿರಬೇಕಾಗುತ್ತದೆ. ಇದು ಸಾಧ್ಯವಾಗಲು ಇರುವ ಒಂದೇ ಒಂದು ದಾರಿ ಆ ಜನರಾಡುವ ನುಡಿಯಲ್ಲಿ ನಾಡಿನ ವ್ಯವಸ್ಥೆಗಳನ್ನು ಕಟ್ಟುವುದು. ಹೀಗೆ ಎಲ್ಲಾ ವ್ಯವಸ್ಥೆಗಳೂ ಜನರನ್ನು ಒಳಗೊಂಡಾಗ ಜನರ ಮಾಡುಗತನ ಹೆಚ್ಚಬಲ್ಲದು, ನಾಡಿನ ಏಳಿಗೆಯ ಹೆಬ್ಬಾಗಿಲು ತೆರೆದುಕೊಳ್ಳುವುದು. ಒಂದು ನುಡಿಯಾಡುವ ಜನರಲ್ಲಿ ಆ ಕಾರಣದಿಂದಾಗಿ ಸಹಜವಾಗೇ  ಇರುವ ಒಗ್ಗಟ್ಟು ಮತ್ತಷ್ಟು ಬಲಗೊಂಡು ಸಾಧನೆಯ ಹಾದಿಯತ್ತ ಇಡೀ ಜನಾಂಗ ಸಾಗುವುದು. ಹೀಗೆ ಕನ್ನಡದ ಮೂಲಕ ಕನ್ನಡಿಗರೂ, ತಮಿಳಿನ ಮೂಲಕ ತಮಿಳರೂ, ಹಿಂದಿಯ ಮೂಲಕ ಹಿಂದಿಯವರೂ ಏಳಿಗೆ ಸಾಧಿಸುವುದಾದರೆ ಭಾರತವೂ ಏಳಿಗೆ ಹೊಂದುತ್ತದೆ ಎನ್ನುವ ಉದ್ದೇಶವೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವುದು. ಇದರಿಂದಾಗಿ ಭಾಷೆಯ ಜೊತೆಜೊತೆಗೇ ಮೈಗೂಡಿಕೊಂಡಿರುವ ಸಂಸ್ಕೃತಿ, ಪರಂಪರೆ, ತನ್ನತನದ ಅನನ್ಯತೆಗಳೂ ಪೊರೆಯಲ್ಪಡುತ್ತವೆ ಎನ್ನುವುದೂ ಕೂಡಾ ದಿಟ. ಇದು ಭಾಷಾವಾರು ಪ್ರಾಂತ್ಯ ರಚನೆಯ ಪ್ರಮುಖ ಉದ್ದೇಶ.

ವಾಸ್ತವ - ಆಶಯಕ್ಕಿಂತಾ ಬೇರೆ!

ಆದರೆ ಇಂದು ಈ ಆಶಯಗಳು ಈಡೇರಿವೆಯೇ? ಈಡೆರುವತ್ತಾ ನಾವು ಸಾಗುತ್ತಿದ್ದೇವೆಯೇ? ಎಂದೆಲ್ಲಾ ನೋಡಿದರೆ ನಿರಾಸೆಯಾಗುತ್ತದೆ. ಆರಂಭದಲ್ಲಿ ಸಂವಿಧಾನದಲ್ಲೂ ಬರೆದಿದ್ದ "ರಾಜ್ಯಗಳ ಆಡಳಿತ ಭಾಷೆಯ ಆಯ್ಕೆಯ ಹಕ್ಕು" ಕೇವಲ ತೋರಿಕೆಯದ್ದು ಎನ್ನಿಸುವಂತೆ ಇಂದಿನ ಏರ್ಪಾಟುಗಳಿರುವುದು ಕಾಣುತ್ತಿದೆ. ಕರ್ನಾಟಕದ ಆಡಳಿತ ಭಾಷೆ ಕನ್ನಡ ಎನ್ನುವುದನ್ನೇ  ನೋಡೋಣ. ಸಂವಿಧಾನ ರಾಜ್ಯಕ್ಕೆ ಈ ಆಯ್ಕೆಯ ಸ್ವಾತಂತ್ರ ಕೊಟ್ಟಿದ್ದು ಕರ್ನಾಟಕಕ್ಕೆ ಕನ್ನಡವನ್ನು ಆಡಳಿತ ಭಾಷೆ ಮಾಡಿಕೊಳ್ಳುವ ಸಂಪೂರ್ಣ ಸಂವಿಧಾನಿಕ ಹಕ್ಕು ಇದೆ. ಸರಿ, ಇದನ್ನು ಚಲಾಯಿಸಿ ನಾವು ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯಾಗಿಸಿಯೂ ಆಯ್ತು. ಇದು ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ? ಸರ್ಕಾರಿ ಕಚೇರಿಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ಏರ್ಪಾಟುಗಳಲ್ಲಿ ಕನ್ನಡದ ಜಾರಿಯನ್ನು ರಾಜ್ಯಸರ್ಕಾರ ಮಾಡುವುದರಲ್ಲೇ ಸಾಕಷ್ಟು ಕುಂದುಕೊರತೆ ಎದುರಿಸಿದೆ. ಇಂದು ಅವೆಲ್ಲವನ್ನೂ ಮಾಡಿದರೂ ಜನರೇ ಬಳಸಲು ಹಿಂದೇಟು ಹಾಕುತ್ತಿದ್ದೇವೆಯೇ? ಉದಾಹರಣೆಗೆ ಒಂದು ಆಸ್ತಿ ಕೊಂಡಾಗ ಅದರ ನೋಂದಣಿ ಪತ್ರ ಈಗೆಲ್ಲಾ ಇಂಗ್ಲೀಶಿನಲ್ಲೇ ಇರುತ್ತದೆಯೇ ಹೊರತು ಕನ್ನಡ ಮರೆಯಾಗುತ್ತಿದೆ. ಎಷ್ಟೋ ಕನ್ನಡಿಗರಿಗೆ ಸರ್ಕಾರಿ ಆದೇಶ ಇಂಗ್ಲೀಶಿನಲ್ಲಿರುವುದೇ ಹಿತ ಎನ್ನಿಸುತ್ತದೆ. ಅದೆಷ್ಟೋ ಕನ್ನಡಿಗರಿಗೆ ಕನ್ನಡವಲ್ಲದ ಹೆರನುಡಿ ಅನ್ನ ಗಳಿಸಿಕೊಡುವ ಸಾಧನವಾಗಿರುವುದು ಕಾಣುತ್ತಿದೆ. ಇಂತಹ ಪರಿಸ್ಥಿತಿಗೆ ಕಾರಣವೇನೆಂದು ನೋಡಿದರೆ ಕನ್ನಡಿಗರು ಕನ್ನಡದ ಬಳಕೆಯಿಂದ ದೂರಾಗುತ್ತಿರುವುದು ಕಾಣುತ್ತದೆ. ಇದು ಸಹಜವಾಗಿ ಆಗುತ್ತಿರುವುದಲ್ಲದೆ ನಾಡಿನ ವ್ಯವಸ್ಥೆಗಳು ದೂರಮಾಡುತ್ತಿರುವುದಾಗಿದೆ. ದುರಂತವೆಂದರೆ ಈ ಮೃಷ್ಟಾನ್ನದ ಸಾಧನವು ಕನ್ನಡದಲ್ಲೇ ದೊರೆಯುವಂತಾದರೆ, ಎಲ್ಲಾ ಕನ್ನಡಿಗರಿಗೂ ಕೈಗೆಟುಕಬಲ್ಲದು ಎನ್ನುವ ದಿಟವನ್ನು ನಾವು ಕಾಣದೆ ಹೋಗುತ್ತಿದ್ದೇವೆ. ಒಟ್ಟಾರೆ, ಕನ್ನಡಿಗರು ಕನ್ನಡದಿಂದ ದೂರಾಗುವ, ಆ ಮೂಲಕ ಕನ್ನಡದ ಬಳಕೆಯ ಸಾಧ್ಯತೆಯನ್ನು ಕುಗ್ಗಿಸುವ, ಆ ಮೂಲಕ ಸಾಧನೆಯ ಶಿಖರವನ್ನು ಏರಲಾಗದ ಮಿತಿಗೆ ಒಳಪಡುವ ಪರಿಸ್ಥಿತಿ ಇಂದಿನ ಕನ್ನಡನಾಡಿನ ವಾಸ್ತವತೆಯಾಗಿದೆ.

ಇದಕ್ಕೇನು ಕಾರಣ?

ಇದಕ್ಕೆ ಕಾರಣ ಕನ್ನಡದಿಂದ ಕನ್ನಡಿಗರು ದೂರ ಹೋಗುತ್ತಿರುವುದು!  ಭಾರತದ ಕೇಂದ್ರಸರ್ಕಾರದ ಕಚೇರಿಗಳಲ್ಲಿ ಆಡಳಿತ ಭಾಷೆ ಹಿಂದೀ/ ಇಂಗ್ಲೀಶ್ ಎನ್ನುವ ಕಾರಣದಿಂದ ಅಲ್ಲೆಲ್ಲಾ ಕನ್ನಡ ನಡೆಯದು ಎನ್ನುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಅಂದರೆ ಕಲಿಕೆಯಲ್ಲಿ, ದುಡಿಮೆಯಲ್ಲಿ, ಆಡಳಿತದಲ್ಲಿ ನಿಧಾನವಾಗಿ ಕನ್ನಡದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತಿರುವುದನ್ನು ನಾವು ಗಮನಿಸಬೇಕಾಗಿದೆ. ಹೌದು! ಕಡಿಮೆ ಆಗುತ್ತಿದೆ ಎನ್ನುವುದಕ್ಕಿಂತಾ ಕಡಿಮೆ ಮಾಡಲಾಗುತ್ತಿದೆನ್ನುವುದು ವಾಸ್ತವ. ಇದಕ್ಕೆ ನೆರವಾಗಿ ಭಾರತೀಯ ಸಂವಿಧಾನವೇ ಟೊಂಕಕಟ್ಟಿ ನಿಂತಿದೆ. ಶಿಕ್ಷಣದಲ್ಲಿ ಕನ್ನಡ ಹೈಸ್ಕೂಲಿಗೆ ಮಿತಿಗೊಂಡಿರುವುದು, ಮೃಷ್ಟಾನ್ನ ಕೊಡಬಲ್ಲ ಅರಿಮೆಯ ವಿದ್ಯೆಗಳು ಕನ್ನಡದಲ್ಲಿಲ್ಲದಿರುವುದು ಇದಕ್ಕೆ ಕಾರಣ. ಕನ್ನಡಿಗರಲ್ಲೇ ನಮ್ಮ ನುಡಿ ಕಥೆ, ಹಾಡು, ಮಾತು, ಸಾಹಿತ್ಯಗಳಿಗೆ ಮಾತ್ರಾ ಲಾಯಕ್ಕು ಎನ್ನುವ ಭಾವವಿರುವುದು ಕಾರಣ. ಈ ನಾಡಿನ ವ್ಯವಸ್ಥೆಗಳು ಈ ನೆಲದ ಜನರಿಗಾಗಿ ರೂಪುಗೊಳ್ಳದೆ ಬೆರಳೆಣಿಕೆಯ ವಲಸಿಗರಿಗಾಗಿ ರೂಪುಗೊಂಡು ರಾಷ್ಟ್ರದ ಏಕತೆಯ ಹೆಸರಲ್ಲಿ ಎಲ್ಲೆಡೆ ಚಲಾವಣೆಯಾಗುತ್ತಿರುವುದು ಕಾರಣವಾಗಿದೆ.

ರಾಜ್ಯೋತ್ಸವ ಒಂದು ದಿನ ಬಾವುಟ ಹಾರಿಸುವುದಕ್ಕಲ್ಲಾ!

ಇಂತಹ ಪರಿಸ್ಥಿತಿಯಲ್ಲಿ ಕನ್ನಡನಾಡಿನ ಕೋಟ್ಯಂತರ ಮಂದಿ ನವೆಂಬರ್ ಒಂದರಂದು ಹಳದಿ ಕೆಂಪು ಬಾವುಟವನ್ನು ಹಾರಿಸಿ, ದೂರದರ್ಶನ ವಾಹಿನಿಗಳಲ್ಲಿ ಕನ್ನಡಪ್ರೇಮದ ಚಲನಚಿತ್ರಗಳನ್ನು, ಕಾರ್ಯಕ್ರಮಗಳನ್ನು ನೋಡಿ ಸಾರ್ಥಕತೆಯ ಭಾವನೆ ಅನುಭವಿಸುವುದರಲ್ಲೇ ಕಳೆದುಹೋಗುತ್ತಿದ್ದೇವೆ ಅನ್ನಿಸುತ್ತದೆ. ಏಕೀಕರಣವಾಗಿದ್ದರ ಉದ್ದೇಶವೇ ನಿಧಾನವಾಗಿ ಶಿಥಿಲವಾಗುತ್ತಿರುವುದನ್ನು ಗುರುತಿಸಲಾಗದಷ್ಟು ಮೈಮರೆವೆ ನಮ್ಮಲ್ಲಿದೆ. ಇದು ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆ. ಕಿತ್ತೊಗೆಯದೆ ಏಳಿಗೆ ಅಸಾಧ್ಯ! ಹಾಗಾದರೆ ಏನು ಮಾಡಬೇಕು ನಾವು? ಏನು ಮಾಡಬೇಕು ಕನ್ನಡ ಜನಾಂಗ?

ಕೊಚ್ಚೇವು ಕೊಳೆಯ! ಹಚ್ಚೇವು ದೀಪ

ಕನ್ನಡದ ಜನರು ಏಳಿಗೆಯ ಗೀಳು ಹಿಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಅಡಿಪಾಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬುಡದಿಂದಲೇ ಬದಲಾಗಬೇಕು. ಕನ್ನಡದ ಜನರಿಗೆ ಹತ್ತಿರವಾಗಿರುವ ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನು ಕನ್ನಡದ ಸಮಾಜ ಕಟ್ಟಿಕೊಳ್ಳಬೇಕು. ಉನ್ನತ ಕಲಿಕೆಯೂ ಸೇರಿದಂತೆ ಸಂಶೋಧನೆಗಳೂ ಕೂಡಾ ಪ್ರತಿಯೊಂದೂ ಕನ್ನಡದಲ್ಲೇ ಆಗುವಂತಾಗಬೇಕು. ಹೊರಜಗತ್ತಿನ ಜೊತೆ ಸಂಪರ್ಕಕ್ಕೆ ಹೆರನುಡಿಗಳು ಬೇಕು ಎನ್ನುವುದನ್ನು ಇದೇನೂ ಕಡೆಗಣಿಸದು ಎನ್ನುವುದನ್ನು ನಾವು ಅರಿಯಬೇಕಾಗಿದೆ. ಕನ್ನಡನಾಡಿನ ಆಡಳಿತ ವ್ಯವಸ್ಥೆ ಕನ್ನಡದ್ದಾಗಬೇಕಾಗಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ರಾಜ್ಯದ್ದಾದರೂ, ಕೇಂದ್ರದ್ದಾದರೂ, ಅಂತರಾಷ್ಟ್ರೀಯವಾದದ್ದಾದರೂ ಅದು ಕನ್ನಡದಲ್ಲಿ ವ್ಯವಹರಿಸಬೇಕು. ಸರ್ಕಾರಿ, ಖಾಸಗಿ ಯಾವುದಾದರೂ ಕೂಡಾ ಕನ್ನಡದಲ್ಲಿ ವ್ಯವಹರಿಸುವ, ಸೇವೆ ಕೊಡಬೇಕಾದ್ದು ಕಡ್ಡಾಯವಾಗಬೇಕು. ಈ ನಾಡಿನ ರಾಜಕೀಯ ಕನ್ನಡ ಕನ್ನಡಿಗ ಕೇಂದ್ರಿತವಾಗಬೇಕು. ಭಾರತ ಸರಿಯಾದ ಸಮಾನ ಗೌರವದ, ಸಮಾನ ಅವಕಾಶದ, ಅಧಿಕಾರಗಳ ವಿಕೇಂದ್ರೀಕರಣಕ್ಕೆ ಒತ್ತುಕೊಡುವ ಒಕ್ಕೂಟವಾಗುವತ್ತ ಕನ್ನಡಿಗ ಶ್ರಮಿಸಬೇಕು. ಜೊತೆಗೆ ನಾಡಿನ ಜನಲಕ್ಷಣವನ್ನು ತೀವ್ರವಾಗಿ ಬುಡಮೇಲು ಮಾಡುತ್ತಿರುವ ಅನಿಯಂತ್ರಿತ ವಲಸೆಗೆ ಕಡಿವಾಣವಿಡುವ ನೀತಿ ಬೇಕು. ಜಗತ್ತಿನ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುವ, ಜಗತ್ತಿಗೆಲ್ಲಾ ಮಾರಬಲ್ಲ ಯೋಗ್ಯತೆಯನ್ನು ಕನ್ನಡಿಗ ಗಳಿಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಿಗ ಪರಿಣಿತಿ ಸಾಧಿಸಬೇಕು. ಈ ಎಲ್ಲಾ ಸಾಧನೆಗೆ ಕನ್ನಡನಾಡು ನೆಲೆಯಾಗಬೇಕು. ಇವೆಲ್ಲಾ ಸಾಧಿಸಲು ನಾವು ಮಾಡಲು ಬೇಕಾದ್ದನ್ನೆಲ್ಲಾ ಮಾಡುವ ಕಡೆ ಯೋಚಿಸದಿದ್ದಲ್ಲಿ, ಯೋಜಿಸದಿದ್ದಲ್ಲಿ ಕನ್ನಡ ಜನತೆ ನವೆಂಬರ್ ತಿಂಗಳಲ್ಲಿ ಬಾವುಟ ಹಾರಿಸುತ್ತಾ ಹಾರಿಸುತ್ತಲೇ ಹೊತ್ತು ಕಳೆದು ಏಳಿಗೆಯನ್ನು ಮರೆಯಬೇಕಾಗುತ್ತದೆ!

ಮೈಸೂರು ದಸರಾ! ಈ ತಾಣ ಎಷ್ಟೊಂದು ಸುಂದರಾ!

(ಫೋಟೋ ಕೃಪೆ: www.mysoredasara.gov.in)

ಮೈಸೂರು ದಸರಾ ನಮ್ಮದಾಗುವತ್ತಾ ಸಾಗುತ್ತಿರುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತಿದೆ ಗುರೂ! ಈ ಬಾರಿ ತನ್ನ ಹಿಂದಿನ ಎಲ್ಲಾ ಕೊರತೆಗಳನ್ನು ನೀಗಿಕೊಂಡು ಕಂಗೊಳಿಸುತ್ತಿದೆ... ಮೈಸೂರು ದಸರಾ ಹಬ್ಬದ ಮಿಂಬಲೆ ತಾಣ. ಈ ಬದಲಾವಣೆಯೇನೂ ತಂತಾನೆ ಆಗಿಲ್ಲಾ... ೨೦೦೭ರಲ್ಲಿ ಇದ್ದ ಪರಿಸ್ಥಿತಿ ಗಮನಿಸಿದ್ದವರಿಗೆ ಈ ಬದಲಾವಣೆ ಅದ್ಭುತ ಎನ್ನಿಸುತ್ತದೆ. ಈ ತಾಣದಲ್ಲಿ ಆಗ ಕನ್ನಡದ ಕಡೆಗಣನೆ ಆಗಿದ್ದನ್ನು ಕಂಡು ಹೊಟ್ಟೆ ಉರಿದುಕೊಂಡು ಅನೇಕ ಜನರು ಸಂಬಂಧಿಸಿದ ಅಧಿಕಾರಿಗಳಿಗೆ ವರ್ಷ ವರ್ಷ ಬಿಡದೇ ಮನವಿ/ ದೂರು ಸಲ್ಲಿಸಿ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಕನ್ನಡ ಗ್ರಾಹಕರ ದನಿ ಗೆದ್ದ ಮತ್ತೊಂದು ಉದಾಹರಣೆ... ಈ ಮೈಸೂರು ದಸರಾ ಅಂತರ್ಜಾಲ ತಾಣ. ಇಷ್ಟಕ್ಕೂ ಈ ಬಾರಿಯ ತಾಣದಲ್ಲಿ ಏನಪ್ಪಾ ಅಂಥಾ ವಿಶೇಷ ಅಂತೀರಾ? ಬನ್ನಿ ಒಮ್ಮೆ ಇಣುಕಿ ನೋಡಿ...

ಸರಿಯಾದ ತಾಣ!

ಈ ತಾಣದಲ್ಲಿ ಮೊದಲನುಡಿ ಇಂಗ್ಲೀಶ್ ಆಗಿತ್ತು. ಕನ್ನಡದಲ್ಲಿ ಇದ್ದದ್ದು ಕಾಟಾಚಾರಕ್ಕಾಗಿ ಅನ್ನುವಂತಿತ್ತು! ಈಗ ಸಂಪೂರ್ಣ ಬದಲಾಗಿದೆ ಈ ತಾಣ. ಇದು ಈಗ ನಮ್ಮ ಮೈಸೂರು ದಸರಾ ಅಂತರ್ಜಾಲ ತಾಣ ಎಂದು ಹೆಮ್ಮೆ ಪಡುವಂತೆ ಇದೆ. ಈ ತಾಣಕ್ಕೆ ಬಂದೊಡನೆ ಕಾಣುವುದು ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳ ಪುಟ. ಇಲ್ಲಿ ಮೇಲೆ ಒಂದು ಕನ್ನಡದ ಟ್ಯಾಬ್‌ಗಳಿದ್ದು ಇವು ಸದಾ ಇದ್ದೇ ಇರುವಂತೆ ರೂಪಿಸಿದ್ದಾರೆ. ಈ ತಾಣದಲ್ಲಿನ ಕನ್ನಡದ ಎಲ್ಲಾ ಕೊಂಡಿಗಳೂ ಶ್ರದ್ಧೆಯಿಂದ ರೂಪಿತವಾಗಿದ್ದು ಬಹುತೇಕ ಎಲ್ಲಾ ಪುಟಗಳು ಕೆಲಸ ಮಾಡುತ್ತಿವೆ. ನಮ್ಮ ಮೈಸೂರಿನ ಸೊಗಡಿನ, ನಮ್ಮತನ ಸೂಸುವ ಅನೇಕ ಚಿತ್ರಗಳನ್ನು ನಾವಿಲ್ಲಿ ನೋಡಬಹುದು. ಮೈಸೂರು ವಿಳ್ಯೆದೆಲೆ, ಮೈಸೂರು ರೇಶಿಮೆ ಸೀರೆ, ಚಿತ್ರಕಲೆ, ಅಗರಬತ್ತಿ, ಮೈಸೂರು ಬಾಳೆ ಎಲ್ಲವನ್ನೂ ಪರಿಚಯಿಸಿದ್ದಾರೆ.
(ಫೋಟೋ ಕೃಪೆ: www.mysoredasara.gov.in)

ಈ ತಾಣದಲ್ಲಿ ಒಟ್ಟು ಅರವತ್ತು ಭಾಷೆಗಳಲ್ಲಿ ಮಾಹಿತಿ ಇದೆ. ಯಾವುದೇ ಭಾಷೆಯನ್ನು ಆರಿಸಿಕೊಂಡರೂ ಆ ಭಾಷೆಯಲ್ಲಿ ಮಾಹಿತಿ ಸಿಗುವುದರ ಜೊತೆಯಲ್ಲಿ ಕನ್ನಡದ ಟ್ಯಾಬುಗಳು ಎಲ್ಲಾ ಹೊತ್ತಲ್ಲೂ ಕಾಣುತ್ತಿರುವಂತೆ ರೂಪಿಸಿದ್ದಾರೆ. ಈ ಭಾಷೆಗಳಲ್ಲಿ ಒಂದು ಆಯ್ಕೆ ಕಳೆದ ದಸರೆಯ ಅನುಭವದ ಬಗ್ಗೆ ಅನಿಸಿಕೆ ಕೇಳಲಾಗಿದೆ... ಆ ಅಭಿಮತವು ಆರಿಸಿಕೊಂಡ ಭಾಷೆಯ ಜೊತೆಯಲ್ಲಿ ಕನ್ನಡವೂ ಕಾಣುತ್ತಲೇ ಇರುತ್ತದೆ. ನೋಡಿ... ಹೀಗೆ ಒಂದಾರು ಭಾಷೆಗಳನ್ನು ಬೇರೆಬೇರೆಯಾಗಿ ಆಯ್ಕೆ ಮಾಡಿ  ಕೆಳಗಿನ ಚಿತ್ರವನ್ನು ಜೋಡಿಸಿ ಕೊಡಲಾಗಿದೆ.

(ಫೋಟೋ ಕೃಪೆ: www.mysoredasara.gov.in)

ಇನ್ನೇನು ಹೇಳುವುದು.. ಮೈಸೂರು ದಸರೆಯ ಅಂತರ್ಜಾಲ ತಾಣವಂತೂ ಈಗ ನಮ್ಮದು ಎನ್ನಿಸುತ್ತಿದೆ. ಇನ್ನು ದಸರೆಯ ಕಾರ್ಯಕ್ರಮಗಳಲ್ಲಿ ನಮ್ಮೂರಿನ, ನಮ್ಮವರ ಪ್ರತಿಭೆಗಳ ನಮ್ಮೂರ ಕಲೆಗಳ ಜಗತ್ ಪ್ರದರ್ಶನಕ್ಕೆ ಅವಕಾಶ ಸಿಗುವುದು ಮೊದಲ ಆದ್ಯತೆಯಾಗಿಬಿಟ್ಟರೆ ಸಾಕು! ಇನ್ನೇನು ತಾನೇ ಬೇಕೂ ಗುರೂ!! ಈ ಬದಲಾವಣೆಗೆ ಕಾರಣವಾಗಿರೋ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು!!

ಕೊನೆಹನಿ: ಅಲ್ಲಾ... ಮೈಸೂರಿನಂತಹ ಪುಟ್ಟ ಊರಿನ ಕಾರ್ಯಕ್ರಮದ... ಕರ್ನಾಟಕ ಸರ್ಕಾರದ ಅಧೀನದ ಈ ಅಂತರ್ಜಾಲ ತಾಣದಲ್ಲಿ ಜಗತ್ತಿನ ೬೦ ಭಾಷೆಗಳಲ್ಲಿ ಮಾಹಿತಿ/ ಸೇವೆ ನೀಡುವುದು ಸಾಧ್ಯವಾಗುತ್ತಿದೆ ಎನ್ನುವುದಾದರೆ... ಭಾರತದೇಶದ ಆಡಳಿತ ವ್ಯವಸ್ಥೆಯಲ್ಲಿ ಬ್ಯಾಂಕು, ರೈಲು ಟಿಕೆಟ್, ಪಾಸ್‌ಪೋರ್ಟ್, ವಿಮೆ, ಆದಾಯಕರ ಇಲಾಖೆಯಂತಹ ತಾಣಗಳಲ್ಲಿ ಭಾರತದ ೨೩ ಭಾಷೆಗಳಲ್ಲಿ ಸೇವೆ ಕೊಡುವಂತೆ ವ್ಯವಸ್ಥೆ ರೂಪಿಸುವುದು ಕಷ್ಟಾ ಅನ್ನೋದನ್ನು ನಂಬಕ್ಕಾಗುತ್ತಾ ಗುರೂ? ಸಮಾನ ಗೌರವದ ಭಾಷಾನೀತಿ ಜಾರಿ ಮಾಡೋಕೆ ತಂತ್ರಜ್ಞಾನದ್ದಂತೂ ಸಹಕಾರವಿದೆ! ದೆಹಲಿಯ ಜನಕ್ಕೆ ಇದನ್ನು ಮನವರಿಕೆ ಮಾಡಿಕೊಡೋ ಹೊಣೆ ನಮ್ಮ ನಿಮ್ಮದು ಅಷ್ಟೇ!

UPSC ಪರೀಕ್ಷೆ - ಕನ್ನಡದಲ್ಲೇ ಬರೆದು ವಿಜಯ ಸಾಧಿಸಿದ ವಿಜಯಕುಮಾರ್ !

ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ 2011ರ ನಾಗರೀಕ ಸೇವಾ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಕರ್ನಾಟಕದಿಂದ 56 ಜನರು ಆಯ್ಕೆಯಾಗಿರುವ ಸುದ್ದಿ ಪತ್ರಿಕೆಗಳಲ್ಲಿದೆ. 2009 ರಲ್ಲಿ ಕೇವಲ 12 ರಷ್ಟಿದ್ದ ಆಯ್ಕೆಯಾದವರ ಸಂಖ್ಯೆ ಈಗ ಅದರ ನಾಲ್ಕು ಪಟ್ಟು ಹೆಚ್ಚಿರುವುದು ಬಹು ಸಂತಸದ ಸಂಗತಿಯಾಗಿದೆ. ಆಯ್ಕೆಯಾದ ಎಲ್ಲರಿಗೂ ಸಿಹಿ ಹಾರೈಕೆಗಳನ್ನು ಸಲ್ಲಿಸುತ್ತಲೇ ಕನ್ನಡದಲ್ಲೇ ಈ ಪರೀಕ್ಷೆಗಳನ್ನು ತೆಗೆದುಕೊಂಡು ಗೆಲುವು ಸಾಧಿಸಿದ ಬನವಾಸಿ ಬಳಗದ ಹಿತೈಷಿಗಳು, ಗೆಳೆಯರೂ ಆದ ವಿಜಯಕುಮಾರ್ ಸಾಸಲು ಮಹದೇವಪ್ಪ ಅವರ ಪರಿಚಯ ಇಲ್ಲಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದವರಾದ ವಿಜಯಕುಮಾರ್ ಕಷ್ಟದ ನಡುವೆಯೇ ಛಲ ಬಿಡದೇ ವಿದ್ಯಾಭ್ಯಾಸ ಪೂರೈಸಿದ ಸಾಹಸಿ. ಬಿ.ಇ ಮೆಕಾನಿಕಲ್ ಪದವಿಧರರಾದ ಅವರು ಸತತ ಪ್ರಯತ್ನದ ನಂತಹ ಈ ವರ್ಷದ ಯು.ಪಿ.ಎಸ್.ಇ ಪರೀಕ್ಷೆಯಲ್ಲಿ ದೇಶಕ್ಕೆ 152ನೇ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಏನ್ ಗುರುವಿನ ಜೊತೆ ಫೋನಿನಲ್ಲಿ ನಡೆದ ಚಿಕ್ಕ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ:

ಏನ್ ಗುರು: ಕನ್ನಡದಲ್ಲೇ ಈ ಪರೀಕ್ಷೆ ತೆಗೆದುಕೊಂಡು ಗೆಲುವು ಸಾಧಿಸಿದ ಬಗ್ಗೆ ಏನು ಹೇಳುವಿರಿ?
ವಿಜಯ: ಕನ್ನಡದಲ್ಲಿ ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆಯಲು ಅಸಾಧ್ಯ ಅನ್ನುವ ಮಾತುಗಳೇ ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ಅದನ್ನು ಸುಳ್ಳೆಂದು ತೋರಿಸಲೇಬೇಕು, ಕನ್ನಡದಲ್ಲೂ ಇದನ್ನೆಲ್ಲ ಸಾಧಿಸಿ ತೋರಿಸಬಹುದು ಅನ್ನುವ ಹಟ ತೊಟ್ಟೇ ಕನ್ನಡದಲ್ಲಿ ಬರೆದೆ. ನನ್ನ ಕೆಲಸದಿಂದ ಇನ್ನಷ್ಟು ಕನ್ನಡದ ಯುವಕರಿಗೆ ಸ್ಪೂರ್ತಿ ಸಿಕ್ಕರೆ ನನ್ನ ಪ್ರಯತ್ನ ಸಾರ್ಥಕ ಅನ್ನಿಸುವುದು.

ಏನ್ ಗುರು: ಎಲ್ಲ ಸುತ್ತಿನಲ್ಲಿಯೂ ಕನ್ನಡದಲ್ಲಿ ಉತ್ತರಿಸುವ ಅವಕಾಶವಿದೆಯೇ?
ವಿಜಯ: ಮೊದಲ ಮತ್ತು ಎರಡನೆಯ ಹಂತದಲ್ಲಿ ಪ್ರಶ್ನೆ ಪತ್ರಿಕೆ ಇಂಗ್ಲಿಷ್-ಹಿಂದಿಯಲ್ಲಷ್ಟೇ ಇದ್ದರೂ ಕನ್ನಡದಲ್ಲಿ ಉತ್ತರ ಬರೆಯುವ ಅವಕಾಶವಿತ್ತು. ಅದನ್ನು ಉಪಯೋಗಿಸಿಕೊಂಡು ಕನ್ನಡದಲ್ಲೇ ಬರೆದು ಮುಂದಿನ ಹಂತಕ್ಕೆ ತೇರ್ಗಡೆಯಾದೆ. ಕೊನೆಯ ಸುತ್ತಿನ ಸಂದರ್ಶನದಲ್ಲೂ ಕನ್ನಡದಲ್ಲೇ ಮಾತನಾಡುವ ಅವಕಾಶ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಯು.ಪಿ.ಎಸ್.ಸಿ ಭಾರತದ ಬೇರೆ ಬೇರೆ ಭಾಷೆಯಲ್ಲೇ ಪರೀಕ್ಷೆ ತೆಗೆದುಕೊಳ್ಳಲು ಸಹಕಾರ ನೀಡುತ್ತೆ. ಆದ್ದರಿಂದ ಪರೀಕ್ಷೆ ಬರೆಯುವ ಹುಡುಗರು ಯಾವುದೇ ಅಳಕು, ಅಂಜಿಕೆಯಿಲ್ಲದೇ ತಮ್ಮ ತಾಯ್ನುಡಿಯಲ್ಲಿ ಪರೀಕ್ಷೆ ಬರೆಯಲು ಮುಂದಾಗಿ, ಗೆಲುವು ಖಂಡಿತ ಸಾಧ್ಯ

ಏನ್ ಗುರು: ಪರೀಕ್ಷೆಯ ತಯಾರಿಗಾಗಿ ವಿಶೇಷ ತರಬೇತಿ ಏನಾದರೂ ಪಡೆದಿದ್ರಾ?
ವಿಜಯ: ಇಲ್ಲವೇ ಇಲ್ಲ. ದೆಹಲಿ, ಜೈಪುರದಂತಹ ಊರಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ತರಬೇತಿ ತೆಗೆದುಕೊಂಡರಷ್ಟೇ ನಾಗರೀಕ ಸೇವಾ ಪರೀಕ್ಷೆಯಲ್ಲಿ ಗೆಲ್ಲಲು ಸಾಧ್ಯ ಅನ್ನುವ ನಂಬಿಕೆಯನ್ನು ತಪ್ಪೆಂದು ಸಾಧಿಸಬೇಕು ಅನ್ನುವ ಹಟ ನನ್ನಲ್ಲಿತ್ತು. ಹೀಗಾಗಿ ಯಾವುದೇ ತರಬೇತಿ ಪಡೆಯದೇ ಕುಳಿತು ಓದಿಯೇ ಈ ಹಂತಕ್ಕೆ ಬಂದೆ. ಚಿಕ್ಕಂದಿನಿಂದಲೂ ಇದ್ದ ಪತ್ರಿಕೆ, ಸಾಹಿತ್ಯದ ಓದು ದೊಡ್ಡ ಮಟ್ಟದಲ್ಲೇ ನನ್ನ ನೆರವಿಗೆ ಬಂತು.

ಏನ್ ಗುರು: ಹೆಚ್ಚೆಚ್ಚು ಕನ್ನಡಿಗರು ನಾಗರೀಕ ಸೇವಾ ಪರೀಕ್ಷೆ ಬರೆಯಬೇಕು ಅನ್ನುವ ಬಗ್ಗೆ ನಿಮ್ಮ ನಿಲುವು?
ವಿಜಯ: ಖಂಡಿತವಾಗಿಯೂ ಹೆಚ್ಚೆಚ್ಚು ಕನ್ನಡಿಗರು ನಾಗರೀಕ ಸೇವಾ ಪರೀಕ್ಷೆಗಳನ್ನು ಬರೆಯುವುದರ ಮೂಲಕ ವ್ಯವಸ್ಥೆಯ ಪಾಲುದಾರರಾಗಬೇಕು. ಕನ್ನಡ ಆಡಳಿತದ ನುಡಿಯಾಗದಿರಲು ಉನ್ನತ ಸ್ಥಾನದಲ್ಲಿರುವ ಅಧಿಕಾರಗಳೇ ಕಾರಣ ಅನ್ನುವ ಮಾತು ಯಾವತ್ತೂ ಕೇಳುತ್ತೇವೆ. ಕನ್ನಡದ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಹೆಚ್ಚಿದಷ್ಟು ಮತ್ತು ಅಂತವರು ಕರ್ನಾಟಕ ರಾಜ್ಯದ ಸೇವೆಗೆ ಸೇರಿಕೊಂಡಷ್ಟು ಕನ್ನಡ ಆಡಳಿತದ ನುಡಿಯಾಗಿ ಅನುಷ್ಟಾನಕ್ಕೆ ಬರುತ್ತೆ. ನನಗೆ ಕರ್ನಾಟಕ ರಾಜ್ಯದ ಕೇಡರ್ ಗೆ ಪೋಸ್ಟಿಂಗ್ ಸಿಗಲಿ ಎಂದು ನಿರೀಕ್ಷಿಸುತ್ತಿದ್ದೇನೆ. ಕನ್ನಡ, ಕನ್ನಡಿಗರ ಸೇವೆಗೆ ತೊಡಗುವುದಕ್ಕಿಂತ ಭಾಗ್ಯ ಇನ್ನೊಂದಿಲ್ಲ.

ಏನ್ ಗುರು: ನಿಮ್ಮ ಮುಂದಿನ ಹಾದಿಯಲ್ಲಿ ಒಳಿತಾಗಲಿ, ಗೆಲುವಾಗಲಿ.
ವಿಜಯ: ಧನ್ಯವಾದಗಳು.

ಬ್ಯಾಂಗಲೋರ್ ಬೆಂಗಳೂರು ಆಗಲು ಇಷ್ಟು ವರ್ಷಾ ಯಾಕೆ ಬೇಕಾಯ್ತು ಗೊತ್ತಾ?


ಸುಮಾರು ೨೦೦೬ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಹಕ್ಕೊತ್ತಾಯವನ್ನು ಮಂಡಿಸಿ, ಇಂಗ್ಲೀಶಿನಲ್ಲಿ ತಪ್ಪಾಗಿ ಬರೆಯಲಾಗುತ್ತಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮೊದಲಾದ ನಮ್ಮೂರ ಹೆಸರುಗಳನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಬೇಕೆಂಬ ಸಲಹೆಯನ್ನು ರಾಜ್ಯಸರ್ಕಾರದ ಮುಂದಿಟ್ಟಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂಸಿಂಗ್‍ರವರು ಇದಕ್ಕೆ ಶಾಸನಾತ್ಮಕವಾಗಿ ತಿದ್ದುಪಡಿಯುಂಟು ಮಾಡಲು ಮುಂದಾಗಿದ್ದರು. ಇದೀಗ ಅಂದಿಟ್ಟಿದ್ದ ಆ ಹೆಜ್ಜೆ ಮುಂದಿನ ತಿಂಗಳಿಂದ ಜಾರಿಯಾಗಲಿದೆ ಮತ್ತು ಇದುವರೆಗೂ ಅದಕ್ಕಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಮ್ಮಲ್ಲೂ ಇಲ್ಲಾ! ಆಳುವವರಲ್ಲೂ ಇಲ್ಲಾ!!

ನೀವು ಸುಮ್ಮನೆ ಗಮನಿಸಿ ನೋಡಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ತಮ್ಮ ಊರುಗಳ ಹೆಸರುಗಳನ್ನು ಬದಲಿಸಿದ್ದಾರೆ. ಕೊಲ್ಕೋತ್ತಾ, ಚೆನ್ನೈ, ತಿರುವನಂತಪುರಂ, ಮುಂಬೈ, ವಡೋದರ, ಇಂದೋರ್... ಹೀಗೆ ತಮ್ಮ ಊರಿನ ಹೆಸರುಗಳನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ.ಇತ್ತೀಚಿನ ಈ ಬದಲಾವಣೆಗಳಲ್ಲೆಲ್ಲಾ ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಮಾತ್ರಾ... ನಮ್ಮ ರಾಜ್ಯವೇ.  ಈ ವಿಳಂಬದ ಸಮಸ್ಯೆ ನಮ್ಮಲ್ಲಿರಲು ಕಾರಣವೇನು ಎಂದರೆ ಕಣ್ಣಿಗೆ ರಾಚುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ. ರಾಜ್ಯ ರಾಜಕಾರಣದ ಯಾವ ಪಕ್ಷಕ್ಕೂ ಕನ್ನಡ, ಕನ್ನಡಿಗ, ಕನ್ನಡನಾಡಿನ ಏಳಿಗೆಯ ಪರಮಗುರಿಯೇ ಸಿದ್ಧಾಂತವಾಗಿಲ್ಲದಿರುವುದು ಮತ್ತು ಅಂತಹ ರಾಜಕೀಯ ಶಕ್ತಿಯ ಅಗತ್ಯವನ್ನು ಕನ್ನಡಿಗರು ಇನ್ನೂ ಕಂಡುಕೊಂಡಿಲ್ಲದಿರುವುದು ಇಂಥವಕ್ಕೆಲ್ಲಾ ಪ್ರಮುಖ ಕಾರಣಗಳೆಂದರೆ ತಪ್ಪಾಗಲಾರದು. ನಮ್ಮ ರಾಜಕಾರಣಿಗಳಲ್ಲೂ, ಜನರಲ್ಲೂ "ಕನ್ನಡತನವೇ ನಮ್ಮ ಮೂಲಗುರುತು" ಎನ್ನುವ ಅರಿವು ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವಾಸ್ತವವಾಗಿ ರಾಜ್ಯಸರ್ಕಾರ ನಮ್ಮೂರ ಹೆಸರುಗಳನ್ನು ಬದಲಿಸಲು ೨೦೦೬ರಲ್ಲೇ ಪ್ರಯತ್ನ ಪಟ್ಟರೂ ಇದು ಜಾರಿಯಾಗಲು ವಿಳಂಬವಾಗುತ್ತಿದೆ. ಹೀಗೆ ಆರು ವರ್ಷ ವಿಳಂಬವಾಗಲು ಇದ್ದ ಕಾರಣ, ರಾಜ್ಯಸರ್ಕಾರದ ಈ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಒಂದೆರಡು ಅರ್ಜಿಗಳು. ಕೇವಲ ಒಬ್ಬಿಬ್ಬರು, ಒಂದೊಂದು ಕೇಸುಗಳ ಮೂಲಕ ಆರುಕೋಟಿ ಜನರ ರಾಜ್ಯಸರ್ಕಾರವನ್ನೇ ತಡೆಹಿಡಿಯಬಲ್ಲರು ಎನ್ನುವುದನ್ನು ಗಮನಿಸಬೇಕಾಗಿದೆ.

ಇದು ಬರೀ ಊರುಗಳ ಹೆಸರು ಬದಲಿಸುವಲ್ಲಿ ಎದುರಾದ ತೊಡರುಗಳಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಗಬೇಕೆಂದಾಗಲೂ ವಿಳಂಬವಾಗಿತ್ತು. ಅದಕ್ಕೂ ನಾವು ಹೋರಾಡಬೇಕಾಯ್ತು. ಕೊನೆಯಲ್ಲಿ ಗಾಂಧಿ ಎನ್ನುವ ಒಬ್ಬರು ದೂರದ ಚೆನ್ನೈನ ಹೈಕೋರ್ಟಿನಲ್ಲಿ ಹಾಕಿ ಕೂತ ಒಂದು ಕೇಸಿನ ಪರಿಣಾಮವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಸಿಗದಂತಾಯ್ತು! ಈ ಕೇಸಿನ ವಿಷಯದಲ್ಲೂ ರಾಜ್ಯಸರ್ಕಾರ ಹೇಗೆ ನಡೆದುಕೊಂಡಿತೆಂಬುದನ್ನು ಮೈಸೂರಿನ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ

ಅಂದರೆ ನಮ್ಮಲ್ಲಿ ತುರ್ತಾಗಿ ಆಗಬೇಕಾದ್ದು ಕನ್ನಡತನದ ಜಾಗೃತಿಯೇ ಆಗಿದೆ. ಕನ್ನಡತನವನ್ನು ಕಡೆಗಣಿಸಿ ರಾಷ್ಟ್ರೀಯತೆಯೆನ್ನುವುದು ಹುಸಿತನವೇ ಆಗಿದೆ. ಕನ್ನಡತನದಿಂದಲೇ ಕನ್ನಡಿಗರ ಭಾರತೀಯತೆ, ನಮ್ಮತನದ ಉಳಿವಿನಲ್ಲೇ ರಾಷ್ಟ್ರದ ಹಿತವಿರುವುದು ಎನ್ನುವುದನ್ನು ಅರಿಯದಿದ್ದಲ್ಲಿ ನಾವು ಹೀಗೇ ಅನುಭವಿಸುತ್ತಲೇ ಇರಬೇಕಾಗುತ್ತದೆ... ನಾಡೂ ಹೀಗೇ ಇರುತ್ತದೆ! ಅಲ್ವಾ ಗುರೂ?

ಈ ನಮ್ಮ ಹುಡುಗನ ಸಾಧನೆ ಸ್ಫೂರ್ತಿ ಕೊಡಲಿ!

ಚಾರ್ಟರ್ಡ್ ಅಕೌಂಟೆಂಟ್ ಆಗೋದು ಅಷ್ಟು ಸುಲಭದ ಮಾತಲ್ಲ, ಇದರ ಪರೀಕ್ಷೆಯನ್ನು ಪಾಸು ಮಾಡೋರ ಸಂಖ್ಯೆಯೇ ನೂರಕ್ಕೆ ಹತ್ತರ ಆಸುಪಾಸಿನಲ್ಲಿದೆ. ಅಂಥಾದ್ರಲ್ಲಿ ಕೆ.ಎನ್.ಸುಜಯ್ ಎಂಬ ನಮ್ಮ ಹುಡುಗ... ನವೆಂಬರ್ 2010ರಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲನೇ ರ‍್ಯಾಂಕು ಗಳಿಸಿದ್ದಾನೆ ಎಂದರೆ ಅಚ್ಚರಿ, ಖುಷಿ ಆಗುತ್ತೆ ಗುರೂ!

ಖುಷಿ ಯಾಕೆಂದರೆ...

ಸುಜಯ್ ಬಗ್ಗೆ ಟೈಮ್ಸ್ ಆಫ಼್ ಇಂಡಿಯಾ ದಿನಪತ್ರಿಕೆಯಲ್ಲಿ 14.02.2010ರಂದು ಬಂದಿರೋ ಈ ಸುದ್ದಿ ನೋಡಿದರೆ ಖುಷಿ ಆಗದೇ ಇರುತ್ಯೇ?

ಹೌದು! ಖುಷಿ ಪಡಲು ನಾನಾ ಕಾರಣಗಳಿವೆ.

ಈ ಹುಡುಗ ಸುಜಯ್ ಒಬ್ಬ ಕನ್ನಡಿಗ.

ಇವ ನಮ್ಮ ಕುಣಿಗಲ್ ಹುಡುಗ.

ಇವನೊಬ್ಬ ರೈತನ ಮಗ.

ಇವ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ.

ಇವ ಕಲಿತಿದ್ದು ಸರ್ಕಾರಿ ಕಾಲೇಜಿನಲ್ಲಿ...

ಇವ ಗಳಿಸಿದ್ದು ಅಖಿಲ ಭಾರತ ಮಟ್ಟದ ಸಿ.ಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕು.

ಕನ್ನಡ ಮಾಧ್ಯಮದಲ್ಲಿಯೇ ಕಲಿತು ಯಶಸ್ವಿಯಾದ ನಾರಾಯಣಮೂರ್ತಿ, ಸಿ ಎನ್ ಆರ್ ರಾವ್, ಡಾ. ಚಂದ್ರಶೇಖರ್, ಡಾ ರಮಣರಾವ್ (ನಿಜಕ್ಕೂ ಈ ಪಟ್ಟಿ ತುಂಬಾ ದೊಡ್ಡದು... ) ಇವರುಗಳ ಸಾಲಿನಲ್ಲಿ ಈ ಯಶಸ್ವಿ ಹುಡುಗನೂ ನಿಂತಿದ್ದಾನೆ. ಇವನಿಗೆ ಒಳಿತಾಗಲಿ. ಇವನ ಈ ಸಾಧನೆ ನಮ್ಮೆಲ್ಲಾ ಕನ್ನಡ ಮಕ್ಕಳಿಗೂ, ತಾಯ್ತಂದೆಯರಿಗೂ ಸ್ಪೂರ್ತಿಯಾಗಲಿ. ಏನಂತೀ ಗುರೂ!

ನಮ್ಮ ಜನಪ್ರತಿನಿಧಿ ನಮ್ಮೋರೇ ಆಗಿರಬೇಕಲ್ವಾ?


ಸಧ್ಯದಲ್ಲೇ ಕರ್ನಾಟಕದಿಂದ ರಾಜ್ಯಸಭೆಗೆ ಸಂಸದರನ್ನು ಆರಿಸಿಕಳಿಸಬೇಕಾಗಿದೆ. ನಮ್ಮ ನಾಡಿನ ಮೂರೂ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಆರಿಸೋ ಪ್ರಕ್ರಿಯೆಯಲ್ಲಿವೆ. ಇದೇ ಸಂದರ್ಭದಲ್ಲಿ `ರಾಜ್ಯಸಭೆಗೆ ಕನ್ನಡಿಗರನ್ನೇ ಆರಿಸಿ ಕಳಿಸಿ, ಇದುವರೆಗೂ ಕಳಿಸಿರೋ ಪರಭಾಷಿಕರಿಂದ ಈ ನಾಡಿನ ಹಿತ ಕಾಪಾಡಕ್ಕೆ ಆಗಿಲ್ಲಾ' ಅನ್ನೋ ಕೂಗು ಕೇಳಿಬಂದಿದೆ.

ಯಾಕೆ ಸ್ಥಳೀಯರನ್ನು ಆರಿಸಬೇಕು?
ಭಾರತ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರೋ ದೇಶ ಅಂತ ಹೆಸರು ಹೊಂದಿದೆ. ಸಂತೋಷ. ಇಂಥಾ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಮುಖ ಅಂಗ ಶಾಸಕಾಂಗ. ಜನಪ್ರತಿನಿಧಿಗಳು ಸೇರಿ ದೇಶಾನ ನಡ್ಸೋ ಉದ್ದೇಶ ಈ ವ್ಯವಸ್ಥೇದು. ಜನರಿಂದ, ಜನರಿಗೋಸ್ಕರ, ಜನರಿಗಾಗಿ ಅಂತನ್ನೋ ಮಾತಿಗೆ ಅರ್ಥ ಸಿಗ್ಬೇಕು ಅಂದ್ರೆ ಶಾಸಕಾಂಗ ಸಭೇಲಿ ಕೂಡೋ ನಮ್ಮ ಜನಪ್ರತಿನಿಧಿಗಳು ತಾವು ಯಾರಿಂದ ಅರಿಸಿ ಬಂದ್ರೋ ಅವರನ್ನು ಸರಿಯಾಗಿ ಪ್ರತಿನಿಧಿಸಬೇಕು.
ತಾಲೂಕು/ ಗ್ರಾಮ ಪಂಚಾಯ್ತಿಯಲ್ಲಾಗಲೀ, ವಿಧಾನಸಭೇಲಾಗಲಿ, ಲೋಕಸಭೇಲಾಗಲೀ, ರಾಜ್ಯಸಭೇಲಾಗಲೀ ನಮ್ಮುನ್ನ
ಪ್ರತಿನಿಧಿಸೋರಿಗೆ ಮೂಲಭೂತವಾಗಿ ಇರಬೇಕಾದ ಅರ್ಹತೆ ಏನಪ್ಪಾ ಅಂದ್ರೆ ನಮ್ಮ ಬದುಕು, ನಮ್ಮ ಸಮಸ್ಯೆ, ನಮ್ಮ ಅಗತ್ಯಗಳು, ನಮ್ಮ ಪರಿಸರ, ನಮ್ಮ ಸಂಪನ್ಮೂಲಗಳು... ಹೀಗೆ ನಮ್ಮದೆಲ್ಲದರ ಬಗ್ಗೆ ಅರಿವು ಇರಬೇಕಾದ್ದೇ ಆಗಿದೆ. ಇದರ ಜೊತೇಲಿ ನಮ್ಮ ಜನಕ್ಕೆ ಒಳ್ಳೇದು ಮಾಡಬೇಕು ಅನ್ನೋ ಕಾಳಜೀನೂ ಇರಬೇಕಾಗಿದೆ. ಒಟ್ಟಾರೆ ಅಂತಹ ಜನಪ್ರತಿನಿಧಿಯ ಬೇರು, ಹಿತಾಸಕ್ತಿಗಳು ಈ ನೆಲದಲ್ಲೇ ಇರಬೇಕಾದ್ದು ಅತ್ಯಂತ ಸರಳವಾದ ಮೂಲಭೂತ ಅಗತ್ಯವಾಗಿದೆ. ಯಾವ ಜನಪ್ರತಿನಿಧಿಗೆ ಕನಿಷ್ಠ ನಾವಾಡೋ ಭಾಷೇನೂ ಕಲಿಯಕ್ಕೆ ಸಾಧ್ಯವಾಗಿಲ್ಲವೋ ಅಂತಹವರು ನಮ್ಮನ್ನು ರಾಜ್ಯಸಭೇಲಿ ಸರಿಯಾಗಿ ಪ್ರತಿನಿಧಿಸಕ್ಕೆ ಸಾಧ್ಯಾನಾ? ನಿಜಕ್ಕೂ ಜನಕ್ಕೆ ಒಳ್ಳೇದು ಮಾಡಬೇಕು ಅನ್ನೋ ಮನಸ್ಥಿತಿ ನಮ್ಮ ರಾಜಕೀಯ ಪಕ್ಷಗಳಿಗೆ ಇದೆಯಾ? ಇದ್ದಿದ್ರೆ ಹೀಗೆ ಪರಭಾಷಿಕರನ್ನು ರಾಜ್ಯಸಭೇಗೆ ಪದೇ ಪದೇ ಕಳಿಸೋಕೆ ಮುಂದಾಗ್ತಾ ಇದ್ವಾ? ಹೋಗಲೀ, ಇದುವರೆಗೂ ಈ ರಾಜ್ಯಸಭಾ ಸಂಸದರು ನಾಡಿನ ಪರವಾಗಿ ಎಷ್ಟು ಸಲ ದನಿ ಎತ್ತಿದ್ದಾರೆ ಅನ್ನೋದನ್ನಾದ್ರೂ ಗಣನೆಗೆ ತೊಗೊಂಡಿದ್ದಾರಾ? ಏನಂತೀರಾ ಗುರುಗಳೇ?

ಮನೆಗೆ ಮಾರಿಯಾಗದಿರಲಿ ಕನ್ನಡಿಗ!!

ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!

"ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ" - ಅನಕೃ

"ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೆ - ಕವಿ ಮಾನವೀಯತೆಯ ಪ್ರವಾದಿ" ಎಂಬ ಕರೆ ನೀಡಿ, ತಮ್ಮ ನಡೆ ನುಡಿ ಆಚಾರ ವಿಚಾರ ಕೃತಿ ಭಾಷಣಗಳೆಲ್ಲದರಲ್ಲೂ ಸಹಜಧರ್ಮ, ಮನುಷ್ಯತ್ವ ಮಾನವೀಯತೆಯನ್ನು ಎತ್ತಿ ಹಿಡಿದ ಕನ್ನಡ ಸಾಹಿತ್ಯ ಲೋಕದ ಸವ್ಯಸಾಚಿ, ಕಾದಂಬರಿ ಸಾರ್ವಭೌಮ 'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್' ಕನ್ನಡ ಕುಲಕೋಟಿಗೆ ಅನಕೃ ಎಂದೇ ಚಿರಪರಿಚಿತರು. ಇದು ಅಚ್ಚ ಕನ್ನಡ ಕಾರ್ಯಕರ್ತರಾಗಿದ್ದ ಅನಕೃ ಅವರ ಪರಿಚಯಿಸುವ ಒಂದು ಕಿರು ಪ್ರಯತ್ನ ಮಾತ್ರ. ಸಮುದ್ರದಿಂದ ಒಂದು ಬೊಗಸೆ ನೀರು ಪಡೆದಂತೆ.

ಈ ಶತಮಾನದ ಕರ್ನಾಟಕದ ಪವಾಡಪುರುಷ

ಅನಕೃ (ಜನನ: ಕೋಲಾರ ಮೇ ೯, ೧೯೦೮, ಮರಣ: ಬೆಂಗಳೂರು ಜುಲೈ ೮, ೧೯೭೧) ಈ ಶತಮಾನದ ಕರ್ನಾಟಕದ ಪವಾಡಪುರುಷ. ಅವರು ರಚಿಸಿದ ಸಾಹಿತ್ಯ ೮೦,೦೦೦ ಪುಟಕ್ಕೂ ಮೇಲ್ಪಟ್ಟಿದ್ದು; ಮಾಡಿದ ಭಾಷಣಗಳು ಲೆಕ್ಕವಿಲ್ಲದಷ್ಟು; ಅವರಿಂದ ಪ್ರಭಾವಿತರಾದವರು, ಮುಂದೆ ಬಂದವರು ಅನೇಕರು; ಅವರ ಕನ್ನಡ ಸೇವೆ, ಕೃತಜ್ಞನಾದ ಕನ್ನಡಿಗ ಋಣ ತೀರಿಸಲಾರದಷ್ಟು. ಅನಕೃ ತಮ್ಮ ಜೀವಿತಾವಧಿಯಲ್ಲಿ ತಮ್ಮ ಪ್ರತಿಭೆ, ಸಾಹಿತ್ಯ, ಕನ್ನಡಪ್ರೇಮ, ಮಾತುಗಾರಿಕೆಗಳಿಂದ ಕನ್ನಡಿಗರ ಮೇಲೆ ಮೋಡಿ ಮಾಡಿದ್ದರು. ೧೯೩೦ ರಿಂದ ೧೯೭೧ ರವರೆಗೆ, ನಾಲ್ಕು ದಶಕಗಳ ಕಾಲ ಅನಕೃ ಕರ್ನಾಟಕದ ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಿಕ್ತ ದೊರೆ ಯಂತೆ ಜೀವಿಸಿದ್ದರು.

ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಹುಟ್ಟು ಸೇನಾನಿ, ನಿಷ್ಕಪಟ ದಂಗೆಕೋರ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಪ್ರಗತಿಶೀಲತೆಯ ಅಧ್ವರ್ಯು, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ ಅನಕೃ ಅವರನ್ನು ಇಂದಿನ ಕನ್ನಡ ಪೀಳಿಗೆ ಬಹುವಾಗಿ ಗುರುತಿಸುವುದು ಕನ್ನಡ ಚಳುವಳಿಯ ಪಿತಾಮಹರೆಂದೆ!

ಇಂದು ಏಕೀಕೃತ ಕರ್ನಾಟಕದ ಭಾವೈಕ್ಯಪಥದಲ್ಲಿ ಕನ್ನಡಿಗರು ಸಾಗುತ್ತಿದ್ದರೆ; ಅವರಲ್ಲಿ ಬಹುಕಾಲ ಸುಪ್ತವಾಗಿದ್ದ ಸ್ವಾಭಿಮಾನ ಜಾಗೃತವಾಗಿದ್ದರೆ; ಕನ್ನಡ ವಾಚಕರು ಅಗಣಿತವಾಗಿ ಬೆಳೆದಿದ್ದರೆ, ಕನ್ನಡ ಲೇಖಕರು ಗಣನೀಯವಾಗಿ ಹೆಚ್ಚಿದ್ದರೆ, ಕನ್ನಡ ನಾಡಿನ ಕರ್ನಾಟಕ ಸಂಗೀತಗಾರರು ನೆಮ್ಮದಿಯಿಂದಿದ್ದರೆ, ಕನ್ನಡ ಚಲನಚಿತ್ರ ಕಲಾವಿದರು ವೈಭವ ಜೀವನ ನಡೆಸುತ್ತಿದ್ದರೆ; ಒಟ್ಟಿನಲ್ಲಿ ಕನ್ನಡ ಕನ್ನಡಿಗರು ಭಾರತದ-ಅಷ್ಟೇಕೆ ಜಗತ್ತಿನ ದೃಷ್ಟಿಯಲ್ಲಿದ್ದರೆ ಇದಕ್ಕೆಲ್ಲ ಅನಕೃ ಬಹುಮಟ್ಟಿಗೆ ಕಾರಣರೆಂದರೆ ಅತ್ಯುಕ್ತಿಯಲ್ಲ.

ಅನಕೃ ಎಂಬ ಆ ಮೂರಕ್ಷರ ಕನ್ನಡಿಗರ ಬೀಜಮಂತ್ರ. ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಗಳ ಮೇಲೆ ಅಭಿಯೋಗ ನಡೆದಾಗಲೆಲ್ಲ ಸೂಕ್ತ ಉತ್ತರಕ್ಕಾಗಿ, ಇಡೀ ಕನ್ನಡನಾಡು ಅನಕೃ ಅವರ ಪ್ರತಿಕ್ರಿಯೆಗಾಗಿ ಎದುರುನೋಡುತ್ತಿತ್ತು. ಕನ್ನಡ ಹಾಗು ಕರ್ನಾಟಕಗಳ ಶ್ರೇಷ್ಠ ವಕ್ತಾರರಾಗಿದ್ದ ಕೃಷ್ಣರಾಯರು ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ, ಕರ್ನಾಟಕದ ಸಂಸ್ಕೃತಿಯೊಂದಿಗೆ ಪ್ರೇಮದ ತಾದ್ಯಾತ್ಮ್ಯ ಹೊಂದಿ ಹಾಲಿನಲ್ಲಿ ಸಕ್ಕರೆ ಬೆರೆತಂಥ ಸಮೀಕರಣ ಸಾಧಿಸಿದ್ದರು.

ಕನ್ನಡತನದ ಅಳಿವು-ಉಳಿವಿಗಾಗಿ ಜಾತಿ-ಮತ-ಧರ್ಮ-ದೇವರನ್ನು ತೊರೆದು ಕನ್ನಡತ್ವವನ್ನು ಅಪ್ಪಿ ಹಿಡಿಯಲು ಅಂದೇ ಕರೆನೀಡಿದ್ದವರು ಅನಕೃ. ಅವರ ಅಚ್ಚ ಕನ್ನಡ ಪ್ರೇಮ ಅನೇಕ ಸಲ ಅವರ ಸ್ವಂತ ಅಣ್ಣನನ್ನೂ ಒಳಗೊಂಡಂತೆ ತಮ್ಮ ಸಮಕಾಲೀನ ಕನ್ನಡ ದಿಗ್ಗಜರನ್ನು ಎದುರು ಹಾಕಿಕೊಳ್ಳುವಂತೆ ಮಾಡಿತ್ತು.

ಕನ್ನಡಕ್ಕಾಗಿ ಕನ್ನಡ ದಿಗ್ಗಜರೊಡನೆಯೇ ಜಟಾಪಟಿ

ಕನ್ನಡ ಪ್ರೇಮಿಯಾಗಿದ್ದ ಶ್ರೀ ರಂ.ರಾ.ದಿವಾಕರರವರು ೧೯೩೯ ರಲ್ಲಿ, ಬಳ್ಳಾರಿಯಲ್ಲಿ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಕನ್ನಡದ ಕೈಂಕರ್ಯ ಮತ್ತು ಧೀಕ್ಷೆ ತೊಡುವ ಬದಲು ಹಿಂದಿ ಮೋಹಕ್ಕೆ ಬಲಿಯಾಗಿ, ಹಿಂದಿ ಪ್ರಚಾರವನ್ನು ಶುರುವಿಟ್ಟುಕೊಂಡರು.ಅಂದಿನ ಸರ್ಕಾರದ ಮೊರೆಹೊಕ್ಕು, ದೇಶದಲ್ಲೆಲ್ಲಾ ಸಂಚರಿಸಿ ಹಿಂದಿ ಪ್ರಚಾರ ಮಾಡುವುದನ್ನು ತಮ್ಮ ಧ್ಯೇಯ ಮಾಡಿಕೊಂಡರು. ಇದು ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದ್ದ ಕನ್ನಡದ ಕೆಲಸವನ್ನು ಕುಂಟಿತಗೊಳಿಸಿತ್ತು. ಅಂದು ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ನುಡಿಯ ಸಂಪಾದಕರಾಗಿದ್ದ ಅನಕೃ ಈ ಕುರಿತು ದಿವಾಕರರ ನಿಲುವನ್ನು ಖಂಡಿಸಿ ಕನ್ನಡ ನುಡಿಯಲ್ಲಿ ಲೇಖನವನ್ನು ಬರೆದರು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀ. ಅವರು ಅನಕೃ, ದಿವಾಕರರ ಕ್ಷಮೆ ಕೇಳಿ ಕನ್ನಡ ನುಡಿಯಲ್ಲಿ ಪ್ರಕಟಿಸಬೇಕೆಂದು ಪಟ್ಟು ಹಿಡಿದಾಗ ಅನಕೃ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಹೊರನಡೆದಿದ್ದರು. ಅನಕೃ ಗೆ ಆಗ ಕೇವಲ ೩೦ ವರ್ಷ. ಅಂದಿನಿಂದ ನಾನು ಕನ್ನಡದ ಹಿರಿಯರ ಕಣ್ಣಿಗೆ ಬಂಡಾಯಗಾರನಾಗಿ ಕಂಡುಬಂದೆ ಎಂದು ಅನಕೃ ತಮ್ಮ " ನನ್ನನ್ನು ನಾನೇ ಕಂಡೆ" ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಆಣ್ಣನನ್ನು ಎದುರು ಹಾಕಿಕೊಂಡ ತಮ್ಮ

ಅನಕೃ ನೇತೃತ್ವದಲ್ಲಿ ಕನ್ನಡ ಚಳವಳಿ ಎಷ್ಟೊಂದು ವ್ಯಾಪಕವಾಗಿ ಹಬ್ಬಿತೆನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಕನ್ನಡಕ್ಕೆ ಸಂಬಂಧಪಟ್ಟ ಯಾವ ಕ್ಷೇತ್ರವನ್ನೂ ತಮ್ಮ ಚಳವಳಿಯಿಂದ ಬಿಡಲಿಲ್ಲ. ಆಗ ಬೆಂಗಳೂರಿನ ಕೋಟೆ ಮೈದಾನದಲ್ಲಿ ನಡೆಯುತ್ತಿದ್ದ ಶ್ರೀರಾಮ ಸೇವಾ ಮಂಡಳಿಯ ರಾಮ ನವಮಿ ಸಂಗೀತೋತ್ಸವ ಹೆಸರುವಾಸಿ. ಆದರೆ ಅಲ್ಲಿಗೆ ಹಾಡಲು ಬರುವ ಗಾಯಕರೆಲ್ಲ ಕನ್ನಡೇತರರು. ಜತೆಗೆ ಅವರೆಲ್ಲ ಹೆಚ್ಛಾಗಿ ಹಾಡುತ್ತಿದ್ದುದು ತಮಿಳು ಮತ್ತು ತೆಲುಗು ರಚನೆಗಳನ್ನೇ. ಇದು ಅನಕೃ ಅವರನ್ನು ಕೆರಳಿಸಿತು. ಇಂಥ ದಿನ ಕೋಟೆ ಮೈದಾನದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮೀ ಕಛೇರಿ. ಸೀದಾ ಕೋಟೆ ಮೈದಾನಕ್ಕೆ ಲಗ್ಗೆ ಕಾಹಿದ ಅನಕೃ ನೇತೃತ್ವದ ದಂಡು ಪ್ರತಿಭಟನೆಯ ದನಿ ಮೊಳಗಿಸಿಯೇ ಬಿಟ್ಟಿತು. 'ಕರ್ನಾಟಕದ ಕಲಾವಿದರನ್ನೇ ಹೆಚ್ಚಾಗಿ ಕರೆಯಬೇಕು ಮತ್ತು ಕನ್ನಡ ಕೃತಿಗಳಿಗೇ ಪ್ರಾಶಸ್ತ್ಯ ಇರಬೇಕು' ಎಂದು ಅನಕೃ ಪಟ್ಟು ಹಿಡಿದರು. ಮಂಡಳಿಯೂ ಇದಕ್ಕೆ ಅಸ್ತು ಎಂದಿತು. ಅಂದಹಾಗೆ ಅನಕೃ ಹೀಗೆ ಸಿಡಿದೆದ್ದಾಗ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾಗಿದ್ದವರು ಎ.ಎನ್.ರಾಮರಾವ್. ಇವರು ಅನಕೃ ಅವರ ಸ್ವಂತ ಅಣ್ಣ! ಕನ್ನಡದ ವಿಚಾರದಲ್ಲಿ ಅನಕೃ ಯಾವ ರಾಜಿಗೂ ಸಿದ್ಧರಿರಲಿಲ್ಲ ಎನ್ನಲು ಇಷ್ಟು ಸಾಕು. (ಪುಟ ೨, ವಿಜಯ ಕರ್ನಾಟಕ, ೩ನೇ ಡಿಸಂಬರ್ ೨೦೦೭). ಈ ಸಂದರ್ಭದಲ್ಲೇ ಅನಕೃ ಅವರು ಕನ್ನಡ ಚಳವಳಿ ಸಂಯುಕ್ತ ರಂಗದ ಮಿತ್ರರ ಹೆಸರಿನಲ್ಲಿ ಕನ್ನಡ ಬಾರದವರಿಗೂ ಹಾಗು ಹೊರ ನಾಡವರಿಗೂ ನಮ್ಮ ಚಳವಳಿಯ ಧ್ಯೇಯೋದ್ದೇಶಗಳು ಪೂರ್ಣ ಮನವರಿಕೆಯಾಗಲೆಂದೇ ಇಂಗ್ಲೀಷ್‌ನಲ್ಲೊಂದು ಭಿತ್ತಿಪತ್ರ ಹೊರಡಿಸಿದರು.

ಕನ್ನಡದ ಕೆಲಸ ಮಾಡುವಾಗ ನಿನ್ನ ಸ್ವಂತದ್ದೇನಿದ್ದರೂ ಮದ್ಯೆ ತೂರಿಸಬೇಡ

ಒಮ್ಮೆ ಕನ್ನಡದ ಆಸ್ತಿ ಮಾಸ್ತಿ ಯವರೊಡನೆ ಅನಕೃ ಪರಿಷತ್ತಿನ ಕೆಲಸವೊಂದರ ಸಲುವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಂದು ಸರ್ಕಾರದಲ್ಲಿ ಹೆಸರು ಮಾಡಿದ್ದ ನಿಷ್ಠಾವಂತ ಅಧಿಕಾರಿ ಎ.ಸಿ.ದೇವೇಗೌಡ ಸಹ ಪ್ರಯಾಣಿಕರಾಗಿದ್ದರು. ಹಾಗೆಯೇ ಮಾತನಾಡುತ್ತ ಪ್ರಯಾಣಿಸುತ್ತಿದ್ದಾಗ, ಮಾಸ್ತಿಯವರು ಗೌಡರನ್ನು ತಮ್ಮ ಸ್ವಂತ ಪತ್ರಿಕೆ 'ಜೀವನ' ಕ್ಕೆ ಚಂದಾದಾರರಾಗಬೇಕಂದರು. ಆಗ ಅನಕೃ, ಮಾಸ್ತಿಯವರನ್ನು ಕುರಿತು ಹೇಳಿದ್ದು ಹೀಗೆ 'ಈಗ ನಾವು ಹೊರಟಿರುವುದು ಪರಿಷತ್ತಿನ ಕೆಲಸಕ್ಕೆ ಹೊರತು ನಮ್ಮ ಸ್ವಂತ ಕೆಲಸಕ್ಕಲ್ಲ. ಈಗ ನಾವು ಮಾಡಬೇಕಾಗಿರುವುದು ಪರಿಷತ್ತಿಗೆ ಸದಸ್ಯರನ್ನು ಕೂಡಿಸುವ ಕೆಲಸ ಮಾತ್ರ. ಅಂದು ಗೌಡರು ನಾನು 'ಜೀವನ'ಕ್ಕೂ ಚಂದಾದಾರನಾಗುತ್ತೇನೆ ಮತ್ತು ಪರಿಷತ್ತಿಗೂ ಸದಸ್ಯನಾಗುತ್ತೇನೆ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು (ಪುಟ ೩೦೩, "ಬರಹಗಾರನ ಬದುಕು", ಅನಕೃ)

"ನನಗಿರುವುದು ಒಂದೇ ಕನ್ನಡ!"

ಅನಕೃ ಪದೇ ಪದೇ ಒಂದು ವಿಷಯ ಪ್ರಸ್ತಾಪಿಸುತ್ತಿದ್ದರು: "ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ". ಈ ಮಾತುಗಳನ್ನ ಕನ್ನಡಿಗರೆಲ್ಲರೂ ತಮ್ಮ ಜೀವನದಲ್ಲಿ ಒಮ್ಮೆ ನೆನಸ್ಕೊಂಡು, ಕನ್ನಡದ ಏಳಿಗೆಗೆ ಕಿರುಬೆರಳನ್ನಾದ್ರೂ ಎತ್ತಿದ್ರೆನೇ ಕನ್ನಡಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಅನಕೃ ಅವರ ಕನ್ನಡ ಪರ ಕಾಳಜಿಗೆ ಸಾರ್ಥಕತೆ ಸಿಗೋದಲ್ವ ಗುರು!

"ಬೆಂಗಳೂರು ಹಬ್ಬ" ಅಂತ ಹೆಸ್ರಿಡಕ್ಕೆ ಇವ್ರಿಗೆ ಯಾರ್ ಬಿಟ್ರು?

ಬೆಂಗಳೂರಿನಲ್ಲಿ ಡಿಸೆಂಬರ್ 2ರಿಂದ ಹತ್ತು ದಿನಗಳ "ಬೆಂಗಳೂರು ಹಬ್ಬ" ಶುರು ಆಗಿದೆ. ಈ ಬಾರಿಯ ಹಬ್ಬದಲ್ಲಿ ಕನ್ನಡ-ಇಂಗ್ಲೀಷು ಎರಡರಲ್ಲೂ ಹಬ್ಬದ ಹೆಸರಿನಲ್ಲಿ ಬೆಂಗಳೂರು ಅಂತ್ಲೇ ಹೆಸರು ಉಪ್ಯೋಗ್ಸಿರೋದು ಖುಶಿ ಏನೋ ತಂದಿದೆ, ಆದ್ರೆ ಈ ಹಬ್ಬದಲ್ಲಿ ಬರೀ ಕನ್ನಡೇತರರ ಕಲಾವಿದರ ದರ್ಬಾರು ನೋಡಿದರೆ ಉರಿಯತ್ತೆ ಗುರು! ಈ ವಿಷಯದ ಬಗ್ಗೆ ಹೆಸರಾಂತ ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ಔರ ಅನುಭವದ ಪ್ರಕಾರ -
ಬಾಂಬೆ ಹಬ್ಬದ ಕಲಾವಿದರ ಪಟ್ಟಿ ಒಮ್ಮೆ ತೆಗೆದು ನೋಡಿ. ನಿಮಗೆ ಮಹಾರಾಷ್ಟ್ರದ ಹೊರಗಿನವರ ಒಬ್ಬರ ಹೆಸರೂ ಸಿಗೋದಿಲ್ಲ! ಸ್ಥಳೀಯ ಕಲಾವಿದರ ಕಡೆಗಣಿಕೆ ಆಗುತ್ತಿರುವುದು ಇಲ್ಲಿ (ಕರ್ನಾಟಕದಲ್ಲಿ) ಮಾತ್ರ.

ಅಲ್ಲ - ಈ ರೋಗ ಕರ್ನಾಟಕದಲ್ಲಿ ಮಾತ್ರ ಯಾಕೆ ಗುರು? ಇನ್ನೇನೂ ಇಲ್ಲ, ಕನ್ನಡಿಗರ ವಿಶ್ವಮಾನವತ್ವಕ್ಕೆ ಇದೂ ಒಂದು ಬಹುಮಾನ, ಅಷ್ಟೇ. 1962ರಲ್ಲಿ ಬೆಂಗಳೂರಿನ ರಾಮೋತ್ಸವಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯಂಥಾ ಹೊರಗಿನೋರಿಗೇ ಮಣೆ ಹಾಕಲಾಗಿ ಕನ್ನಡದ ಕಲಾವಿದರಿಗೆ ಅವಕಾಶ ಸಿಗದೆ ಇದ್ದಾಗ ಅ.ನ.ಕೃ. ಅವರು ಕನ್ನಡೇತರರಿಗೆ ಕಲಿಸಿದ ಪಾಠ ಇವತ್ತು ಇನ್ನೊಂದ್ಸತಿ ಕಲಿಸಬೇಕಾದ ಪರಿಸ್ಥಿತಿ ಬಂದಿದೆ ಗುರು! ಸ್ಥಳೀಯ ಕಲಾವಿದರಿಗೆ ಸ್ಥಾನ ಇಲ್ಲದೇ ಇರೋ ಹಬ್ಬ ಕಟ್ಕೊಂಡ್ ನಮಗೇನು? ಈ ನಾಡಿನ ಸಂಸ್ಕೃತಿಯನ್ನ ಬಿಂಬಿಸದೇ ಹೋದ್ರೆ ಇಂಥಾ ಕಾರ್ಯಕ್ರಮಗಳಿಗೆ ಬೆಂಗಳೂರಿನ ಹೆಸರು ಇಡಕ್ಕೆ ಬಿಡೋದೇ ತಪ್ಪು!

ಕನ್ನಡ ಸಂಸ್ಕೃತಿ ಬಿಂಬಿಸದ ಹಬ್ಬ "ಬೆಂಗಳೂರು ಹಬ್ಬ" ಅಲ್ಲ

ಅಷ್ಟೇ ಅಲ್ಲ, ಕನ್ನಡದ ಸಂಸ್ಕೃತಿ ಬಿಂಬಿಸದ ಈ ಕನ್ನಡೇತರರ ಹಾವಳಿಗೆ "ಬೆಂಗಳೂರು ಹಬ್ಬ" ಅನ್ನೋ ಹೆಸರು ಇಡೋ ಹಕ್ಕನ್ನೇ ಕಿತ್ತುಕೊಳ್ಳಬೇಕು. ಕರ್ಕೊಳ್ಳಿ ಇನ್ನೇನಾದ್ರೂ ಹೆಸರಿಟ್ಟು, ಬೇಡ ಅನ್ನಲ್ಲ. ಆದ್ರೆ "ಬೆಂಗಳೂರು ಹಬ್ಬ" ಅನ್ನೋದಾದ್ರೆ ಈ ಹಬ್ಬದಲ್ಲಿ ಕನ್ನಡದ ಕಲಾವಿದರದೇ ಮೇಲುಗೈ ಇರಬೇಕು. ನಮ್ಮ ಜಾನಪದದೋರು, ನಮ್ಮ ಸಂಪ್ರದಾಯದ ಹಾಡುಗರು, ನಮ್ಮ ಭಾವಗೀತೆಯೋರು, ನಮ್ಮ ಲಾವಣಿಯೋರು, ನಮ್ಮ ಹೊಸ ಕಲಾವಿದರು - ಇವೆರಿಗೆಲ್ಲ ಬೆಂಗಳೂರು ಹಬ್ಬದಲ್ಲಲ್ಲದೆ ಏನಾದ್ರೂ ಚೆನ್ನೈ ಹಬ್ಬದಲ್ಲೋ ಅಥವಾ ಮುಂಬೈ ಹಬ್ಬದಲ್ಲೋ ಅವಕಾಶ ಸಿಗತ್ತಾ? ಖಂಡಿತ ಇಲ್ಲ!

ಕನ್ನಡಿಗರು ಮುನ್ನುಗ್ಗಿ ಈ ಹೆಸರು ತಮ್ಮದಾಗಿಸಿಕೊಳ್ಳಬೇಕು, ಇಂಥಾ ಹಬ್ಬಗಳ್ನ ನಡೆಸಿ ಕನ್ನಡ ಸಂಸ್ಕೃತಿಯನ್ನ ಇಡೀ ಪ್ರಪಂಚದ ಮುಂದೆ ಇಡಬೇಕು, ದುಡ್ಡೂ ಮಾಡ್ಕೋಬೇಕು. ಇಲ್ಲದೇ ಹೋದ್ರೆ ಇವತ್ತು ಕನ್ನಡದಲ್ಲಿ ಹೆಸರಾದ್ರೂ ಬರೀತಿದಾರೆ, ನಾಳೆ ಅದೂ ಹೋಗಿ ಹಿಂದೀಲೋ ತಮಿಳಲ್ಲೋ ತೆಲುಗಲ್ಲೋ ಇಂಗ್ಲೀಷಲ್ಲೋ ಬರೆಯಕ್ಕೆ ಶುರು ಮಾಡ್ತಾರೆ, ಈಗ ಕಾಟಾಚಾರಕ್ಕೆ ಕನ್ನಡಕ್ಕೆ ಕೊಡ್ತಿರೋ ಸ್ಥಾನಾನೂ ಕಿತ್ತಾಕ್ತಾರೆ. ಆಗ ಕನ್ನಡದ ಕಲಾವಿದರು ಬೀದೀಲಿ "ಅಮ್ಮಾ! ತಾಯಿ!" ಅಂತ ನಾಕಾಣಿ-ಎಂಟಾಣಿ ಏಣುಸ್ಕೊಂಡಿರಬೇಕಾಗತ್ತೆ, ಅಷ್ಟೆ!

ಕನ್ನಡಿಗರು ಒಗ್ಗೂಡದೆ ಗಣಕದಲ್ಲಿ ಕನ್ನಡದ ಮುನ್ನಡೆಯಿಲ್ಲ

ಗಣಕ ತಂತ್ರಜ್ಞಾನದಲ್ಲಿ ಕನ್ನಡದ ಮುನ್ನಡೆ ಆಗಿದೆ ಅಂತ ನವೆಂಬರ್ 1ರಂದು ವಿ.ಕ ಪತ್ರಿಕೆ ವರದಿ ಮಾಡಿದೆ. IISc ಸಂಸ್ಥೇಲಿ ಕನ್ನಡದಲ್ಲಿ ಗಣಕ ತಂತ್ರಜ್ಞಾನ ತರೋ ಪ್ರಯತ್ನದಲ್ಲಿ OCR ಎಂಬ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೆಲಸ ನಡ್ದಿರೋ ಬಗ್ಗೆ ಇಲ್ಲಿ ಹೇಳಿದಾರೆ. ಇದಲ್ದೆ ಕನ್ನಡದಲಿ ಶ್ರೀಲಿಪಿ, ನುಡಿ, ಕನ್ನಡ ಸ್ಪೆಲ್-ಚೆಕ್ಕರ್, ಮುಂತಾದ ಹೊಸ ತಂತ್ರಜ್ಞಾನಗಳೂ ಬಂದಿವೆ ಅಂತ್ಲೂ ವರದಿ ಹೇಳತ್ತೆ (ಆದ್ರೆ ಇಡೀ ಪ್ರಪಂಚವೇ ಉಪಯೋಗಿಸ್ತಾ ಇರೋ ಬರಹ ತಂತ್ರಾಂಶದ ಬಗ್ಗೆ ತುಟಿಕ್-ಪಿಟಿಕ್ ಅನ್ನಲ್ಲ ಆ ವರದಿ!). ಅಂತರ್ಜಾಲ ತಾಣಗಳಲ್ಲೂ ಇತ್ತೀಚೆಗೆ ಹೆಚ್ಚಿನ ಬರಹಗಳು ಕನ್ನಡದಲ್ಲೇ ಕಂಡು ಬರ್ತಿರೋದು ಖುಷಿಯ ವಿಷಯ ಆಗಿದೆ.

ಆದ್ರೆ ಈಗ ನಾವುಗಳು ಇಟ್ಟಿರೋ ಪುಟ್ಟಪುಟ್ಟ ಹೆಜ್ಜೆಗಳಿಂದ್ಲೇ ಸಂತೃಪ್ತರಾಗದೆ ಇನ್ನೂ ಬಹಳ ದೂರ ಹೋಗಬೇಕಿದೆ ಗುರು! ಅದಕ್ಕೆ ಈ ತಂತ್ರಜ್ಞಾನದ ಇವತ್ತಿನ ಸ್ಥಿತಿ ಏನು, ಇನ್ನೂ ಏನೇನಾಗಬೇಕು, ಅದಕ್ಕೆ ಏನೇನು ಬೇಕು ಅಂತ ಯೋಚನೆ ಮಾಡೋದು ಬಹಳ ಮುಖ್ಯ ಗುರು.

ಈಗಿರೋ ಕನ್ನಡ ಗಣಕ ತಂತ್ರಾಂಶಗಳಲ್ಲಿ ತೊಂದರೆಗಳಿವೆ
ಇವತ್ತು ಕನ್ನಡದಲ್ಲಿ ಇರೋ ತಂತ್ರಾಂಶಗಳ ಗುಣಮಟ್ಟ ಹೇಗಿದೆ, ಅವುಗಳಲ್ಲಿ ಏನು ತೊಂದರೆಗಳಿವೆ, ಅವುಗಳಲ್ಲಿ ಏನು ಬದಲಾವಣೆಗಳಾಗಬೇಕು ಅಂತ ನೋಡಿದರೆ ಮನಸ್ಸಿಗೆ ಬರೋ ಕೆಲವು ಇಲ್ಲಿವೆ:
  • ಹೆಚ್ಚಾಗಿ ಲಿಪಿ ತಂತ್ರಾಂಶಗಳು ಬಳಸೋ ಫಾಂಟ್-ಗಳು ಯೂನಿಕೋಡಿನಲ್ಲಿ ಬಹಳ ಸೀಮಿತ ರೀತಿಯಲ್ಲಿ ಸಿಗತ್ವೆ. ಆದ್ರಿಂದ ಇವುಗಳ್ನ ಉಪ್ಯೋಗ್ಸಿದ್ರೆ ಸುಮಾರು ಕಡೆ ಕನ್ನಡ ಅಕ್ಷರಗಳ ಬದ್ಲು "?" ಚಿನ್ನೆಯೇ ಗತಿ! ಇಂತಹ ಯಾವುದೇ ಫಾಂಟ್ ಗಳು ಪೂರ್ತಿಯಾಗಿ ಯೂನಿಕೋಡ್‍ನಲ್ಲಿ ದೊರೆಯಬೇಕು.
  • ಎಷ್ಟೇ ಬಗೆಯ ತಂತ್ರಜ್ಞಾನಗಳು ಕನ್ನಡದಲ್ಲಿ ಬಂದ್ರೂ ಇನ್ನೂ ನಾವು ಒಂದು ಗಣಕದೊಡನೆ ಮಾತಾಡಲು ಕನ್ನಡದ್ದೇ ಆದ ಕೀಲಿಮಣೆ ಮಾಡ್ಕೊಂಡಿಲ್ಲ! ಇದು ಕೂಡಲೆ ಬೇಕಿರೋ ಒಂದು ವಸ್ತು ಗುರು! ಇದಿಲ್ಲದೆ ನಾವೆಲ್ಲರೂ ಇಂಗ್ಲೀಷ್ ಕೀಲಿಮಣೇನೇ ಇಟ್ಕೊಂಡು ಕನ್ನಡ ಕುಟ್ತಾ ಇರೋದು ಒಂಥರಾ ಪೆದ್ದತನಾನೇ ಗುರು!
  • Windows XPನಲ್ಲೂ ಕನ್ನಡ language-interface-pack/support ಗಳು ಇಂದಿಗೂ ಪೂರ್ತಿಯಾಗಿಲ್ಲ. ಇದು ಪೂರ್ತಿಯಾಗೋವರ್ಗೂ ಅದರ ಉಪ್ಯೋಗ ಸೊನ್ನೇನೇ ಗುರು! ವಿಂಡೋಸ್ನಲ್ಲಿ ಪ್ರತಿಯೊಂದು ಹಂತದಲ್ಲೂ ನಮಗೆ ಕನ್ನಡದ ಉಪ್ಯೋಗವೇ ಮಾಡೋ ಹಾಗಿರ್ಬೇಕು. ಮತ್ತೆ ಇದರಲ್ಲಿ ಎಲ್ಲೆಡೆ ಕನ್ನಡದ ಅಕ್ಷರಗಳು ಸರಿಯಾಗಿ ಕಾಣಬೇಕು.
  • ಲಿನಕ್ಸ್ (Linux) ನಲ್ಲಂತೂ ಎಲ್ಲಾನೂ ನೀವೇ ಮಾಡ್ಕೊಳಿ ಅಂತ ಇಡೀ ಸೋರ್ಸ್-ಕೋಡ್ ಬಿಟ್ಟಿಯಾಗಿ ನಮ್ಮ ಮುಂದೆ ಇಟ್ಟಿದಾರೆ. ಬಳಕೆದಾರನಿಗೆ ಕನ್ನಡದ ಅನುಭವ ಕೊಡಿಸೋದು ಕನ್ನಡಿಗರದೇ ಕೆಲಸ ಇವತ್ತಿನ ದಿನ. ಆದರೆ ನಮ್ಮ ಕನ್ನಡಿಗರು ಈ KDE/GNOME ಅನುವಾದದ ಯೋಜನೆಯಲ್ಲೂ ಎಷ್ಟು ಹಿಂದಿದಾರೆ ಅಂತ ಯೋಚನೆ ಮಾಡಿದರೇ ನಾಚಿಕೆಯಾಗತ್ತೆ!
  • KDE/GNOME/Windows XP ಗಳ್ನ ಅನುವಾದ ಮಾಡೋರು ಕನ್ನಡದ ಪದಗಳ್ನ ಮರೆತು ಯಾರ ಬಾಯಲ್ಲೂ ಹೊರಳದಂಥಾ ಸಂಸ್ಕೃತದ ಪದಗಳ್ನ ಉಪಯೋಗಿಸಿದರೆ ಹೇಗೆ?
  • ಇಂದು ನಾವು ಕಾಣ್ತಿರೋ ಕನ್ನಡದ ಅಂತರ್ಜಾಲತಾಣಗಳಲ್ಲಿ ಅನೇಕವುಗಳ್ನ ಓದಕ್ಕೇ ಆಗಲ್ಲ. ಆ ತಾಣಗಳಿಗೆ ಹೋದ ಕನ್ನಡಿಗ ಏನೇನು ದೊಮ್ಮರಾಟ ಮಾಡುದ್ರೂ ಕನ್ನಡ ಕಾಣಿಸಲ್ಲ. ಇಲ್ಲಿ ಯೂನಿಕೋಡನ್ನು ಪಾಲಿಸದೇ ಇರೋದೇ ಕಾರಣ. ಪ್ರತಿ ಕನ್ನಡ ತಾಣವೂ ಯೂನಿಕೋಡನ್ನ ಪಾಲಿಸ್ಬೇಕು.
  • ಕನ್ನಡದಲ್ಲಿ ಲೇಟೆಕ್ ಇದೆ. ಯಾವುದೇ ಕನ್ನಡದ ಬರಹವನ್ನ PDFಆಗಿ ಮಾಡಲು ಸಹಾಯ ಏನೋ ನೀಡತ್ತೆ, ಇದ್ರೂ ಇದ್ರಲ್ಲೂ ಕಿರೀಕು ಅಂದ್ರೆ ಗಣಕದೊಡನೆ ಮಾತಾಡೋದು ಒಂದು ವಿಚಿತ್ರವಾದ ಕಂಗ್ಲಿಷಿನಲ್ಲೇ!
  • ಬರಹ ತಂತ್ರಾಂಶವು ಚೆನ್ನಾಗೇ ಇದೆ, ಆದ್ರೆ ಅದು ವಿಂಡೋಸ್-ನಲ್ಲಿ ಬಿಟ್ಟು ಇನ್ನ್ಯಾವ ಓ.ಎಸ್.ನಲ್ಲೂ ಸಿಗಲ್ಲ
ಜಗತ್ತಿನ ಬೇರೆ ಭಾಷೆಗಳಿಗೆ ಹೋಲಿಸಿದ್ರೆ ಕನ್ನಡದಲ್ಲಿ ಇನ್ನೂ ಸಕ್ಕತ್ ಕೆಲಸ ಆಗಬೇಕಾಗಿದೆ! ಜಪಾನ್ನವರ, ಚೈನಾದವರ ಬಹಳ ಕಷ್ಟ ಎನ್ನಲಾಗಿರೋ ಲಿಪಿ ಉಳ್ಳ ಭಾಷೆಗಳಲ್ಲಿ ಇಂಗ್ಲಿಷಿನ ಸಮಾನವಾದ ಸೌಕರ್ಯಗಳು ಈಗಾಗ್ಲೇ ಗಣಕಗಳಲ್ಲಿ ದೊರೆಯತ್ತೆ. ಸಕ್ಕತ್ ವೈಜ್ಞಾನಿಕ ಲಿಪಿ ಅಂತ ಕರೆಸಿಕೊಳ್ಳೋ ಕನ್ನಡಕ್ಕೇನು ಧಾಡಿ?!

ತೊಂದರೆಗಳ್ನ ಬಗೆಹರಿಸಲು ಏನೇನಾಗಬೇಕು?

ಮೇಲಿನ ತೊಂದರೆಗಳು ಬಗೆಹರಿದು ಗಣಕ ಆನುಮಾಡಿದ ತಕ್ಷಣ ಪೂರ್ತಿ ಕನ್ನಡದಲ್ಲಿ ಯಾವುದೇ ಕಿರೀಕೂ ಇಲ್ಲದೆ ವ್ಯವಹರಿಸೋ ಕನಸು ನನಸಾಗಬೇಕಾದ್ರೆ ಈ ಕೆಳಗಿನವು ಆಗಬೇಕು ಗುರು:
  • ಗಣಕದಿಂದ ಇಂಗ್ಲೀಷ್ನ ತೆಗೆಯಕ್ಕೆ ಆಗೋದೇ ಇಲ್ಲ ಅನ್ನೋ ಯೋಚನೆ ಕೈಬಿಡಬೇಕು. ಎಲ್ಲವೂ ಕನ್ನಡದಲ್ಲೇ ಸಾಧ್ಯ ಅನ್ನೋ ಗುರಿ ಇಟ್ಕೋಬೇಕು. ಯಾಕೆ ಸಾಧ್ಯವಿಲ್ಲ? ಕನ್ನಡಕ್ಕೆ ಯಾವ ರೋಗವೂ ಬಂದಿಲ್ಲ. ಬಂದಿರೋದು ನಿಜವೇ ಆದರೆ ಅದು ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿರೋ ಕನ್ನಡಿಗರಿಗೆ!
  • ಕನ್ನಡಿಗರು ಒಗ್ಗಟ್ಟಿಂದ ಕೆಲಸಗಳ್ನ ಮಾಡಬೇಕು. ಇವತ್ತಿನ ದಿನ ಪ್ರಪಂಚದಲ್ಲಿ ಎಲ್ಲೇ ಕೂತಿದ್ದರೂ ಅಂತರ್ಜಾಲದಲ್ಲಿ ಸಹಕರಿಸಿ ಕೆಲ್ಸ ಮಾಡಬಹುದು. ಮಾಡಿದ್ದನ್ನೇ ಮಾಡ್ಕೊಂಡು ಕಿಸ್ಬಾಯಿದಾಸ ಅಂದಹಾಗೆ ಇವತ್ತಿಂದ ಹತ್ತು ವರ್ಷ ಆದರೂ ಅದದೇ ಕೆಲ್ಸಗಳ್ನ ಮಾಡ್ತಾ ಇದ್ರೆ ನಮ್ಮಲ್ಲಿ ಸಹಕಾರದ ಬುದ್ಧಿ ಇಲ್ಲ ಅಂತ ತೋರ್ಸತ್ತೆ, ಅಷ್ಟೆ. ಹೀಗೇ ಮುಂದುವರೆದ್ರೆ ನಾವು ಉದ್ಧಾರ ಆದ್ವಿ, ಅದಾಯ್ತು!
  • ಮೂಲಭೂತ ಹಂತದಲ್ಲಿ ಸಂಶೋಧನೆ/ಅಭಿವೃದ್ಧಿಗಳ್ನ ಮಾಡಕ್ಕೆ ನಾವು ಹಿಂಜರೀಬಾರ್ದು, ನಮ್ಮ ವಿ.ವಿ.ಗಳು ಅಂಜಬಾರದು. ಉದಾಹರಣೆಗೆ ಇಂಗ್ಲೀಷಿನ ಕೀಲಿಮಣೇನೇ ನಮಗೆ ಗತಿ ಅಂತ ಹೇಳಿದೋರು ಯಾರು? ಅಂತರ್ಜಾಲ ತಾಣಗಳ ವಿಳಾಸಗಳು ರೋಮನ್ ಅಕ್ಷರಗಳಲ್ಲೇ ಇರಬೇಕು ಅಂತ ಹೇಳಿದೋರು ಯಾರು? ಪ್ರೋಗ್ರಾಮಿಂಗ್ ಕನ್ನಡದಲ್ಲಿ ಆಗಲ್ಲ ಅಂದೋರು ಯಾರು?
  • ಹೊಸ ಪದಗಳ್ನ ಹುಟ್ಟಿಸುವಾಗ ಆದಷ್ಟೂ ಆಡುನುಡಿಯಿಂದ್ಲೇ ಪದಗಳ್ನ ತೊಗೋಬೇಕು, ಬಾಯಲ್ಲಿ ಹೊರಳೋ ಪದಗಳ್ನೇ ಹುಟ್ಟಿಸಬೇಕು (ಆದು ಸಂಸ್ಕೃತದಿಂದ ಬಂದರೂ ತೊಂದರೆಯಿಲ್ಲ).
  • ಉದ್ದಿಮೆದಾರರು ಕನ್ನಡದ ತಂತ್ರಾಂಶಗಳ್ನ ತಯಾರಿಸಿ ಕರ್ನಾಟಕದಲ್ಲಿರೋ 5.5ಕೋಟಿ ಕನ್ನಡಿಗರ ಮಾರುಕಟ್ಟೇನ ಮುಟ್ಟೋ ಗುರಿ ಇಟ್ಟುಕೊಳ್ಳಬೇಕು. ಕನ್ನಡ ಅಂದ ತಕ್ಷಣ ಏನೋ ದಾನ-ಧರ್ಮ ಅನ್ನೋ ಅನಿಸಿಕೆ ಬಿಟ್ಟು ವ್ಯಾಪಾರ ಅಂತ ತೊಗೋಬೇಕು.
  • ಸರ್ಕಾರ ಇದರಲ್ಲೆಲ್ಲ ತನ್ನ ಪಾತ್ರ ಏನು ಅಂತ ಅರ್ಥ ಮಾಡ್ಕೋಬೇಕು. ಸರ್ಕಾರದ ಪಾತ್ರ ಈ ಕೆಲಸಗಳೆಲ್ಲಾ ಸುಗಮವಾಗಿ ಆಗೋಹಾಗೆ ನೋಡಿಕೊಳ್ಳೋದೇ ಹೊರತು, ವಿ.ವಿ.ಗಳಿಗೆ ಯೋಜನೆಗಳ್ನ ನಡೆಸೋದಕ್ಕೆ ದುಡ್ಡು ಕೊಡೋದೇ ಹೊರತು ತಾನೇ ತಂತ್ರಾಂಶಗಳ್ನ ಅಭಿವೃದ್ಧಿ ಪಡಿಸೋದಲ್ಲ (ಒಂದು ಕಾಲದಲ್ಲಿ ಸರ್ಕಾರ ಹೋಟೆಲ್ ನಡೆಸುತ್ತಾ ಇತ್ತು. ಆ ಕಾಲ ಹೋಯ್ತು!).
ಏನ್ ಗುರು?

ಇಗೋ ಬಂದ ಹೊಸ ಕನ್ನಡಿಗ!

ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡನಾಡಲ್ಲಿ ಒಂದು ಅದ್ಭುತವಾದ ಬೆಳವಣಿಗೆ ಆಗಿದೆ ಗುರು! ಆ ಬೆಳವಣಿಗೆ ಆಗುವಾಗ ಫಿಲಮ್ಮಲ್ಲಿ ತೋರ್ಸೋ ಹಾಗೆ ಏನು ಗಂಟೆಗಳು ಹೊಡ್ಕೊಳ್ಳಿಲ್ಲ, ಜೋರು ಮಳೆ ಬರಲಿಲ್ಲ, ಸಿಡಿಲು-ಗುಡುಗುಗಳಾಗಲಿಲ್ಲ. ಯಾರೂ ಅದನ್ನ ಗಮನಿಸಲೂ ಇಲ್ಲ. ಏನು ಆ ಬದಲಾವಣೆ ಅಂತೀರಾ? ಅದೇನೆಂದರೆ - ಒಬ್ಬ ಹೊಸಬ ನಮ್ಮ ನಡುವೆ ಹುಟ್ಟುಕೊಂಡಿದಾನೆ. ಈತ ಒಂದು ಹೊಸಬಗೆಯ ಕನ್ನಡಿಗ - ಹೊಸಗನ್ನಡಿಗ. ಇವನನ್ನ ಅರ್ಥ ಮಾಡ್ಕೊಳಕ್ಕೆ ಬಹಳ ಜನ ಪ್ರಯತ್ನ ಪಟ್ಟಿದಾರೆ, ಆದ್ರೆ ಔರಿಗೆ ಯಾಕೋ ಈ ಪಾಲ್ಟಿ ಅರ್ಥವೇ ಆಗ್ತಿಲ್ಲ!

ಇವತ್ತಿನ ದಿನ ಇವನ ಮೂರ್ತಿಯೂ ಚಿಕ್ಕದು, ಕೀರ್ತಿಯೂ ಚಿಕ್ಕದು. ಆದರೆ ನಾಳೆ ಇವನದೇ. ನಾಳಿನ ದಿನ ಇವನ ಮೂರ್ತಿ-ಕೀರ್ತಿಗಳೆರಡೂ ಇಡೀ ಜಗತ್ತನ್ನೇ ಹರಡುತ್ತವೆ, ಕಾದು ನೋಡಿ! ಇವನಿಂದಲೇ ಕನ್ನಡನಾಡಿನ ಏಳ್ಗೆ ಸಾಧ್ಯ! ಇವನಿಂದಲೇ ಭಾರತದ ಏಳ್ಗೆ ಸಾಧ್ಯ! ಇವನಿಂದಲೇ ಪ್ರಪಂಚದ ಎಲ್ಲಾ ಭಾಷಾವಾರು ಜನಾಂಗಗಳ ಏಳ್ಗೆ ಸಾಧ್ಯ! ಇವನಿಂದಲೇ ಈ ಜಗತ್ತಿಗೆ ನಾಲ್ಕೂ ಪುರುಷಾರ್ಥಗಳ ಸಾಧನೆ ಕಬ್ಬಿಣದ ಕಡಲೆ ಅನ್ನಿಸೋದು ನಿಲ್ಲೋದು! ಇವನು ಇವತ್ತು ಕೊಚ್ಚೆಯಲ್ಲಿ ಬಿದ್ದುಗೊಂಡೇ ಅರಳುತ್ತಿರೋ ತಾವರೆ! "ಯಾರಿವನು? ಈ ಮನ್ಮಥನು?" ಅಂತೀರಾ? ಈ ಪಾಲ್ಟಿ ಎಂಥೋನು ಅಂತ ಒಸಿ ನೋಡ್ಮ!

ಕನ್ನಡತನವೇ ಇವನ ಗುರುತು

ಯಾರಾದ್ರೂ "ಯಾರಪ್ಪಾ ನೀನು?" ಅಂದ್ರೆ ಇವನು "ನಾನೊಬ್ಬ ಕನ್ನಡಿಗ" ಅಂತ ಗುರುತಿಸಿಕೋತಾನೆ. ಕನ್ನಡತನವೇ ಇವನ ಗುರುತು. ಕನ್ನಡತನವೇ ಇವನ ಭಾರತೀಯತೆ. ಕನ್ನಡತನವೇ ಇವನ ಜಾತಿ. ಸಂತೆಯಲ್ಲಿ ಮನೆಯೋರ್ನ ಗುರುತಿಸೋಹಾಗೆ, ಗಾಡಿ-ನಿಲ್ದಾಣದಲ್ಲಿ ತನ್ನ ಕಾರು ಗುರುತಿಸೋ ಹಾಗೆ ಎಲ್ಲಿಗೆ ಹೋದರೂ ಇವನು ಕನ್ನಡಿಗನ್ನ ಗುರುತಿಸ್ತಾನೆ! ಯಾರು ಕನ್ನಡಿಗ, ಯಾರು ಕನ್ನಡೇತರ ಅಂತ ಇವನು "ಥಟ್ ಅಂತ" ಹೇಳ್ತಾನೆ! ಹತ್ತು ಜನ ಇದ್ದರೆ ಅವರಲ್ಲಿ ಕನ್ನಡಿಗರೆಷ್ಟು ಅನ್ನೋ ಪ್ರಶ್ನೇನ ಇವನ ಮನಸ್ಸು ಇವನ ಅರಿವಿಲ್ಲದೆಯೇ ಕೇಳತ್ತೆ! ಜಗತ್ತಿನಲ್ಲಿ ಯಾರುಯಾರು ಏನೇನೇ ಸಾಧಿಸಲಿ, "ಅವನು ಕನ್ನಡಿಗನಾ?", ಇಲ್ಲವೇ "ಕನ್ನಡಿಗ ಇದನ್ನೇ ಸಾಧಿಸಬೇಕಾದ್ರೆ ಏನಾಗಬೇಕು?" ಅನ್ನೋ ಪ್ರಶ್ನೆಗಳು ಇವನ ಮನಸ್ಸನ್ನ ಕಾಡುತ್ತವೆ! ಇವನ ಕನ್ನಡತನಕ್ಕೆ ಧಕ್ಕೆ ಬರುವ ಯಾವ ಚಿಂತನೆಗೂ ಇವನು ಸೊಪ್ಪು ಹಾಕಲ್ಲ. ಅಧ್ಯಾತ್ಮವೇ ಇರಲಿ, ರಾಷ್ಟ್ರೀಯತೆಯೇ ಇರಲಿ, ಜಾಗತೀಕರಣವೇ ಇರಲಿ - ಇದ್ಯಾವುದನ್ನೂ ಇವನು ಬಿಟ್ಟುಕೊಡದೆ ಎಲ್ಲದಕ್ಕೂ ಕನ್ನಡವೇ ಸಾಧನ, ಕನ್ನಡವೇ ಏಣಿ ಅನ್ನೋದು ಇವನಿಗೆ ಅರ್ಥವಾಗಿದೆ.

ಕರ್ನಾಟಕದಲ್ಲಿ ಕನ್ನಡದ ಪಾತ್ರ ಏನು ಅಂತ ಇವನಿಗೆ ಗೊತ್ತು

ಹಿಂದೆ ಏನೇ ಆಗಿರಲಿ, ಕನ್ನಡಕ್ಕೆ ಇವತ್ತು ಕರ್ನಾಟಕದಲ್ಲಿ ಏನೇ ಸ್ಥಾನ ಇರಲಿ, ಸರಿಯಾದ್ದೇನು ಅಂತ ಇವನಿಗೆ ಗೊತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅನ್ನೋ ಅರಿವು ಇವನಿಗಿದೆ. ಈ ರಾಜ್ಯ ಕನ್ನಡಿಗರಿಗಾಗಿಯೇ ಇರೋದು ಅಂತ ಇವನಿಗೆ ಗೊತ್ತಿದೆ. ಬೀದೀಲಿರೋ ಬೋರ್ಡುಗಳಿಂದ ಹಿಡಿದು ಉನ್ನತ ಶಿಕ್ಷಣದ ವರೆಗೂ ಎಲ್ಲವೂ ಕನ್ನಡದಲ್ಲಿರಬೇಕಾದ್ದೇ ಸರಿ ಅಂತ ಇವನಿಗೆ ಗೊತ್ತಿದೆ. ಕೆಲಸದಲ್ಲಾಗಲಿ ಕಲಿಕೆಯಲ್ಲಾಗಲಿ ಮನರಂಜನೆಯಲ್ಲಾಗಲಿ ಮತ್ತೊಂದರಲ್ಲಾಗಲಿ ಕನ್ನಡವೇ ಇಲ್ಲಿ ಮುಂಚೂಣಿಯಲ್ಲಿರಬೇಕು ಅನ್ನೋದು ಇವನ ನಿಲುವು.

ಭಾರತ ಅಂದ್ರೆ ಏನು ಅಂತ ಇವನಿಗೆ ಗೊತ್ತು

ಭಾರತ ಅಂದ್ರೆ ಎಲ್ಲಾಕಡೆ ಬರೀ ಹಿಂದಿ ಇರಬೇಕು ಅಂತ ವಾದಿಸೋರಿಗೆ, ಕರ್ನಾಟಕದಲ್ಲೇ ಕನ್ನಡಕ್ಕೆ ಎರಡನೇ ಸ್ಥಾನ ಕೊಡೋರಿಗೆ ಇವನು ಕಿವಿ ಕೊಡಲ್ಲ. ಭಾರತ ಅಂದ್ರೆ ಭಾಷಾವಾರು ರಾಜ್ಯಗಳ ಒಕ್ಕೂಟ, ಇಲ್ಲಿ ಬಲಿಷ್ಠವಾದ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಗುಜರಾತು - ಹೀಗೆ ಎಲ್ಲಾ ಭಾಷಾವಾರು ರಾಜ್ಯಗಳು ಉದ್ಧಾರವಾಗೋದೇ ಭಾರತದ ಉದ್ಧಾರ ಅಂತ ಇವನಿಗೆ ಗೊತ್ತಿದೆ. "ಕರ್ನಾಟಕದಲ್ಲಿ ಭಾರತ ಇದೆ" ಅನ್ನೋದು ಇವನ ನಿಲುವು. ಕರ್ನಾಟಕದ ಉದ್ಧಾರವಾಗದೆ ಭಾರತದ ಉದ್ಧಾರ ಸಾಧ್ಯವಿಲ್ಲ ಅನ್ನೋದು ಇವನ ನಿಲುವು. ಯಾವುದೇ ವಿಷಯದಲ್ಲಾಗಲಿ ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಮೊದಲನೇ ಸ್ಥಾನ ಹೋಗಿ ಎರಡನೇ ಸ್ಥಾನ ಯಾವುದರಿಂದ ಸಿಗುವುದೋ ಅದು ತನ್ನ ಉಳಿವಿಗೇ ಮಾರಕ ಅಂತ ಇವನಿಗೆ ಗೊತ್ತು, ಅದನ್ನು ಇಲ್ಲವಾಗಿಸುವುದು ಇವನ ಜೀವನದ ಧ್ಯೇಯ.

ಜಾಗತೀಕರಣದ ಲಾಭ ಪಡ್ಕೊಳಕ್ಕೆ ಕನ್ನಡವೇ ಸಾಧನ ಅನ್ನೋದು ಇವನ ನಿಲುವು

ಜಾಗತೀಕರಣದ ಈ ಯುಗದಲ್ಲಿ ಕನ್ನಡಕ್ಕೆ ಹಿಂದೆಂದೂ ಇಲ್ಲದ ಪ್ರಾಮುಖ್ಯತೆ ಇದೆ ಎನ್ನುವುದು ಇವನ ನಿಲುವು. ಸೋಮಾರಿಗಳು, ದೂರದೃಷ್ಟಿಯಿಲ್ಲದೋರು ಹೇಳೋಹಾಗೆ ಇವನು ಜಾಗತೀಕರಣದಲ್ಲಿ ಗೆಲ್ಲಕ್ಕೆ ಇಂಗ್ಲೀಷೇ ಸಾಧನ ಅನ್ನಲ್ಲ. ಜಾಗತೀಕರಣದಿಂದ ಲಾಭ ಪಡ್ಕೊಳಕ್ಕೆ ನಿಜವಾದ ಜ್ಞಾನವೇ ಸಾಧನ, ಆ ನಿಜವಾದ ಜ್ಞಾನ ಕನ್ನಡಿಗರನ್ನು ವ್ಯಾಪಿಸಬೇಕಾದರೆ ಅದು ಕನ್ನಡದಲ್ಲೇ ಸಾಧ್ಯ ಅಂತ ಇವನಿಗೆ ಸಕ್ಕತ್ತಾಗಿ ಮನವರಿಕೆ ಆಗಿದೆ. ಇವತ್ತಿನ ದಿನ "ಇಂಗ್ಲೀಷು! ಇಂಗ್ಲೀಷು!" ಅಂತ ಜನಕ್ಕೆ ಹತ್ತಿರೋ ಹುಚ್ಚು ನೋಡಿದರೆ ಇವನಿಗೆ ಮುಗುಳ್ನಗೆ ಬರತ್ತೆ!

ಇವನದು ದೊಡ್ಡ-ದೊಡ್ಡ ಕನಸುಗಳು

ಕನ್ನಡ-ಕನ್ನಡಿಗ-ಕರ್ನಾಟಕಗಳ ವಿಷಯದಲ್ಲಿ ಹಿಂದೆಂದೂ ಕೇಳಬರದಂತಹ ಕನಸುಗಳು ಇವನದು. ಇಡೀ ಪ್ರಪಂಚವೇ ಮೆಚ್ಚುವಂಥವರಾಗಬೇಕು ನಾವು ಕನ್ನಡಿಗರು, ಯಾವ ಕ್ಷೇತ್ರದಲ್ಲೂ ನಾವು ಕಡಿಮೆಯಿರಬಾರದು, ಇಡೀ ಜಗತ್ತೇ ಕನ್ನಡ ಕಲಿಯಕ್ಕೆ ನಾಮುಂದು-ತಾಮುಂದು ಅಂತ ಬರಬೇಕು ಅನ್ನೋದು ಇವನ ಗುರಿ. ಇದೆಲ್ಲಾ ಅಸಾಧ್ಯ ಅನ್ನೋರ ಮುಖಕ್ಕೆ ಉಗೀತಾನೆ, ಹೇಗೆ ಸಾಧ್ಯ, ಯಾವಾಗ ಸಾಧ್ಯ, ಏನು ಮಾಡಿದರೆ ಸಾಧ್ಯ ಅಂತ ತೋರಿಸಿಕೊಡ್ತಾನೆ!

ಒಗ್ಗಟ್ಟು ಕನ್ನಡಿಗರ ಏಳ್ಗೆಗೆ ಮುಖ್ಯ ಅಂತ ಇವನಿಗೆ ಗೊತ್ತಿದೆ

ಹಿಂದಿನವರಿಗೂ ಇವನಿಗೂ ಇದೊಂದು ಬಹಳ ಮುಖ್ಯವಾದ ಬದಲಾವಣೆಯೋ ಏನೋ! ಇವನಿಗೆ ಕನ್ನಡಿಗರ ಒಗ್ಗಟ್ಟು ಬಹಳ ಮುಖ್ಯ ಅನ್ನೋ ಅರಿವಾಗಿದೆ. ಕನ್ನಡಿಗರ ಒಗ್ಗಟ್ಟಿಗಾಗಿ ಇವನ ಮನಸ್ಸು ಹಾತೊರೆಯುತ್ತದೆ. ಕನ್ನಡಿಗರಲ್ಲಿ ಒಡಕುಂಟುಮಾಡುವ ಯಾವುದೊಂದನ್ನು ಕಂಡರೂ ಇವನ ರಕ್ತ ಕುದಿಯುತ್ತದೆ, ಕಣ್ಣು ಕೆಂಪಾಗುತ್ತದೆ! ಈ ಒಗ್ಗಟ್ಟಿಗಾಗಿ ಇವನು ಹಾತೊರೆಯುವುದು ಇವನಲ್ಲಿರೋ ಯಾವುದೋ ಒಂದು ಕೊರತೆಯಿಂದ ಪ್ರೇರಿತವಾಗದೆ ಮುಂದೆ ಮಾಡಬೇಕಾದ ಅದ್ಭುತವಾದ ಕೆಲಸಗಳಿಂದ ಪ್ರೇರಿತವಾಗಿದೆ. ಶಕ್ತಿಯಿಲ್ಲದ ಕಾರಣ ಇವನು ಒಗ್ಗಟ್ಟಾಗುತ್ತಿಲ್ಲ, ಇರುವ ಶಕ್ತಿ ಮಿತಿಯಿಲ್ಲದೆ ಬೆಳೆಯಲಿ ಎಂದು ಒಗ್ಗಟ್ಟಾಗುತ್ತಿದ್ದಾನೆ, ತನ್ನ ಚೌಕಾಸಿಯಿಲ್ಲದ ಕನಸುಗಳ್ನ ನನಸಾಗಿಸಕ್ಕಾಗಿ ಒಗ್ಗಟ್ಟಾಗುತ್ತಿದ್ದಾನೆ.

ಇವನು ನಿಜದಿಂದ ದೂರ ಹೋಗಿಲ್ಲ, ಬರೀ ಕನಸುಗಾರನಲ್ಲ

ಇಷ್ಟೆಲ್ಲ ಕನಸು ಕಂಡರೂ ಇವನು ನಿಜದಿಂದ ದೂರ ಹೋಗಿಲ್ಲ. ಇವತ್ತು ಮತ್ತು ನಾಳೆ ಎರಡನ್ನೂ ಅರ್ಥ ಮಾಡಿಕೊಂಡಿದ್ದಾನೆ. ಇವತ್ತು ಏನಿದೆ, ನಾಳೆ ಏನಾಗಬೇಕು ಎನ್ನುವುದು ಅವನಿಗೆ ಗೊತ್ತಿದೆ. ಇವತ್ತಿನ ಪರಿಸ್ಥಿತಿ ರಾತ್ರೋ ರಾತ್ರಿ ಬದಲಾಗಲ್ಲ, ಸಾಕಷ್ಟು ಸಮಯ ಬೇಕು ಅನ್ನೋದು ಇವನಿಗೆ ಗೊತ್ತಿದೆ. ಆಡಳಿತದಲ್ಲಿ ಇವತ್ತು ಕನ್ನಡದ ಸ್ಥಾನ ಏನು, ಶಿಕ್ಷಣದಲ್ಲಿ ಏನು ಕತೆ, ಉದ್ಯೋಗದಲ್ಲಿ ಏನು ಕತೆ, ಕನ್ನಡಿಗನ ಇವತ್ತಿನ ಸಮಸ್ಯೆಗಳೇನು, ಕರ್ನಾಟಕ ಎದುರಿಸುತ್ತಾ ಇರೋ ತೊಂದರೆಗಳೇನು - ಅಂತೆಲ್ಲಾ ಇವನಿಗೆ ಗೊತ್ತಿದೆ. ಇವೆಲ್ಲ ಗೊತ್ತಿದ್ದರೂ ಇವನು ತನ್ನ ಕನಸುಗಳ್ನ ನನಸಾಗಿಸೋ ಕೆಲಸ ಕೈಬಿಟ್ಟಿಲ್ಲ, ಇವನ ಎದೆಗುಂದಿಲ್ಲ. ನಿಧಾನವಾಗಿ ಒಗ್ಗಟ್ಟಿಂದ ತನ್ನ ಕನಸನ್ನು ನನಸಾಗಿಸ್ತಾ ಇದಾನೆ. ಬಹಳ ವೃತ್ತಿಪರ ರೀತಿಯಲ್ಲಿ ಕನ್ನಡಕ್ಕಾಗಿ ಕೆಲಸ ಮಾಡ್ತಿದಾನೆ. ಈತ ಬರೀ ಕನಸುಗಾರನಲ್ಲ. ಆ ಕನಸನ್ನು ನನಸಾಗಿಸೋದಕ್ಕೆ ಹಗಲು-ಇರುಳು ಕೆಲಸ ಮಾಡ್ತಿದಾನೆ.

ಇಂಥಾ ಒಬ್ಬ ಕನ್ನಡಿಗ ಹುಟ್ಟಿದಾನೆ. ಮನೆಮನೆಯಲ್ಲೂ ಹುಟ್ಟಿದಾನೆ ಗುರು! ಅಂದಹಾಗೆ ನವೆಂಬರ್ ಒಂದಕ್ಕೆ ಇವನೂ ಕನ್ನಡದ ಬಾವುಟ ಹಾರಿಸದೆ ಇರಲ್ಲ!

ಕನ್ನಡಿಗರ ಕೀಳರಿಮೆಗೊಂದು ಆಸ್ಪತ್ರೆ!

ನಮ್ ಬೆಂಗಳೂರಿನ ಬಸವನಗುಡೀಲಿರೋ ಶೇಖರ್ ಆಸ್ಪತ್ರೆ ಒಂದು ಮಾದರಿ ಆಸ್ಪತ್ರೆ ಗುರು! ಕನ್ನಡ ನಾಡಿನ ಎಲ್ಲ ವ್ಯವಸ್ಥೇನೂ, ಸೌಕರ್ಯಾನೂ ಪರಭಾಷಿಕರ ಪಾದಸೇವೆಗೇ ಮೀಸಲು ಅನ್ಕೊಂಡಿರೋಂಥಾ ಕನ್ನಡಿಗರಿಗೆ ಈ ಆಸ್ಪತ್ರೆ ಒಂದು ಪಾಠ ಗುರು!
ಹ್ಯಾಗೆ ಅಂತೀರಾ?

"ನಮ್ಮ ನಾಡಿನ ಅನುಕೂಲಗಳು ನಮಗಲ್ಲ, ನಮ್ಮ ಸ್ಥಳಗಳು ನಮ್ಮದಲ್ಲ ; ಇಲ್ಲಿ ನಾವೇ ಅಪರಿಚಿತರು, ನಮ್ಮ ಕನ್ನಡ ಭಾಷೆ ಬರೀ ಅಡಿಗೆಮನೆಗೆ ಮೀಸಲು" ಅನ್ಸೋ ವಾತಾವರಣಾನ ಬೆಂಗಳೂರಲ್ಲಿ ಕೀಳರಿಮೆ-ಕನ್ನಡಿಗರು ತಾವೇ ತರ್ತಾ ಇರೋವಾಗ.... ಬಸವನಗುಡಿ ರಸ್ತೇಲಿರೋ ಈ ಆಸ್ಪತ್ರೆ ಬೆಂಗಳೂರು ನಿಜವಾಗಲೂ ಕನ್ನಡದೋರ್ದು ಅನ್ನೋದನ್ನ ಮತ್ತೆ ನೆನಪಿಸಿಕೊಡೋದು ಮಾತ್ರಾ ಹದಿನಾರಾಣೆ ನಿಜಾ ಗುರು!

ಆಸ್ಪತ್ರೆ ಹೆಸರಿನ ನಾಮಫಲಕ ಮುಖ್ಯರಸ್ತೆ ಕಡೆ ದೊಡ್ಡದಾಗಿ ಹೊಳೆಯೋ ನಿಯಾನ್ ದೀಪಗಳಿಂದ ಹೇಗ್ ಕಂಗೊಳುಸ್ತಿದೆ ನೋಡೂ ಗುರೂ... ಒಳಗ್ ಬರ್ತಿದ್ ಹಾಗೆ ನಿಮ್ ಕಣ್ಣು, ಹೃದಯ ತುಂಬ್ಸೋದು 'ಕನ್ನಡಕ್ಕೆ ಆದ್ಯತೆ' ಅನ್ನೋ ಆತ್ಮೀಯ ಫಲಕ.

ಈ ಆಸ್ಪತ್ರೆಯ ಹೆಚ್ಚಿನ ಸಿಬ್ಬಂದಿಗಳು ಕನ್ನಡಿಗರು, ಇವರ ಜೊತೆ ಇರೋ ಕೆಲ ಪರಭಾಷಾ ಸಿಬ್ಬಂದಿಗಳಿಗೂ ಕನ್ನಡ ಬರುತ್ತೆ. ಯಾಕೇಂದ್ರೆ ಇಲ್ಲಿ ಕೆಲ್ಸ ಬೇಕು ಅಂದ್ರೆ ಕನ್ನಡ ಕಲಿತಿರ್ಲೇಬೇಕು ಗುರೂ...ಇಲ್ಲಿನ ಎಲ್ಲ ತಜ್ಞ ವೈದ್ಯರುಗಳೂ ಕನ್ನಡಿಗರು ಅಥವಾ ಕನ್ನಡ ಬಲ್ಲವರೇ ಆಗಿದ್ದಾರೆ.

ಈ ವಾತಾವರಣಕ್ಕೆ ಕಾರಣ ಈ ಆಸ್ಪತ್ರೆಯ ಯಜಮಾನರಾದ ಡಾ. ಪಿ.ವಿಷ್ಣುಮೂರ್ತಿ ಐತಾಳ್ ಅವರು. ಮೂಳೆತಜ್ಞರಾದ ಐತಾಳರು ಕನ್ನಡದ ಬಗ್ಗೆ ಹೊಂದಿರೋ ಅಭಿಮಾನ ಮತ್ತು ಸುತ್ತಮುತ್ತಲ ಜನರಿಗೆ ಅರ್ಥವಾಗೋ ಭಾಷೇಲೇ ಸೇವೆ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನಾನ ಔರು ಉಳಿಸಿಕೊಂಡು ಬಂದಿರೋದೇ, ಇವತ್ತು ಅವರ ಆಸ್ಪತ್ರೇಲಿ ಕನ್ನಡ ಮೆರೆಯೋದಕ್ಕೆ ಕಾರಣ. ರೋಗಿಗಳಿಗೆ ತಮ್ಮ ರೋಗದ ಜೊತೆ ಹೊಡೆದಾಡೋದ್ರ ಜೊತೆಗೆ ಯಾವುದೋ ಹೊರದೇಶದ ಭಾಷೆ ಜೊತೆಗೆ ಹೋರಾಡೋದು ತಪ್ತಿರೋದು ಸಕ್ಕತ್ ಒಳ್ಳೇದು ಗುರು! ಮುಂದಿನ ದಿನಗಳಲ್ಲಿ ಇಲ್ಲಿ ಬಳಸುವ ಅರ್ಜಿಗಳು, ನಮೂನೆಗಳು... ಹೀಗೆ ಎಲ್ಲವನ್ನು ಕನ್ನಡದಲ್ಲಿ ಮಾಡಿಸುವ ಉತ್ಸಾಹವನ್ನು ಆಡಳಿತ ಮಂಡಲಿ ಹೊಂದಿದೆ ಅಂತ ಆಡಳಿತಾಧಿಕಾರಿ ಶ್ರೀಧರ್ ಹೇಳ್ತಾರೆ.

ಕೊನೆ ಗುಟುಕು

ಅಲ್ಲಾ... ಒಂದು ಸಂಸ್ಥೆ ಸರ್ಯಾಗಿ ಇರಬೇಕಾದ್ರೆ ಯಜಮಾನ ನೆಟ್ಟಗಿರಬೇಕು ಅನ್ನೋದು ಹೇಗೆ ನಿಜವೋ ಹಾಗೇ ಈ ನಮ್ಮ ನಾಡು ಸರಿಯಾಗಿರಬೇಕಾದ್ರೆ ನಮ್ನ ಆಳೋ (ಇಲ್ಲವೇ ಆಳಬೇಕೂಂತಿರೋ) ರಾಜಕಾರಣಿಗಳು ನೆಟ್ಟಗಿರಲೇಬೇಕು ಅನ್ನೋದು ಸ್ಪಷ್ಟ ಗುರು! ಕನ್ನಡದ ಬಗ್ಗೆ ತಾವೇ ಕೀಳರಿಮೆ ಇಟ್ಕೊಂಡಿರೋ ನಮ್ಮ ರಾಜಕಾರಣಿಗಳು ಈ ಆಸ್ಪತ್ರೆಗೆ ಹೋಗಿ ಒಸಿ ಚಿಕಿತ್ಸೆ ಮಾಡಿಸಿಕೊಳೋದು ಲೇಸು ಗುರು!

ನಾವು ಕೀಳು ಜನ ಅಲ್ಲ, ಕೀಳರಿಮೆ ಜನ!

ಮೊನ್ನೆಮೊನ್ನೆ ಪ್ರಜಾವಾಣೀಲಿ ಬಂದ ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಮಾಡಿದರೆ ಉನ್ನತ ಹುದ್ದೆಗಳಿಗೆ ಏರಕ್ಕೆ ತೊಂದರೆಯೇನಿಲ್ಲ ಅಂತ ನ್ಯಾಯಾಧೀಶರು ಅಭಿಪ್ರಾಯ ನೀಡಿದಾರೆ. ಇದು ನಿಜ, ಗುರು. ಕನ್ನಡ ಮಾಧ್ಯಮದಲ್ಲಿ ಓದಿದರೆ ಏನೋ ಊನವಾಗಿಹೋಗತ್ತೆ ಅಂತ ಕನ್ನಡಿಗರು (ಹೆಚ್ಚಾಗಿ ನಗರಗಳಲ್ಲಿರೋರು) ಅಂದುಕೊಂಡಿರೋದು ಅವೈಜ್ಞಾನಿಕ. ಇದು ಇಡೀ ಕರ್ನಾಟಕ ಸೇರಿ ನಿಧಾನವಾಗಿ ತೊಗೋತಿರೋ ವಿಷ.

ವಿಶ್ವ ಸಂಸ್ಥೆಯ ಸಂಶೋಧನೆಯ ಪ್ರಾಕಾರವೂ ತಾಯ್ನುಡಿಯಲ್ಲಿ ಕಲಿಕೆ ಬಹುಮುಖ್ಯ. ಜರ್ಮನಿ, ಜಪಾನ್, ಚೀನ ಮುಂತಾದವುಗಳ ಏಳ್ಗೆ-ಸಾಧನೆಗಳ ಹಿಂದೆ ದೊಡ್ಡದೇನು ಗುಟ್ಟಿಲ್ಲ ಗುರು. ಇವರೆಲ್ಲರ ಶಿಕ್ಷಣ ವ್ಯವಸ್ಥೆ ಅವರವರ ತಾಯ್ನುಡಿಯಲ್ಲಿಯೇ ಇದೆ ಅನ್ನೋದೇ ಅವರ ಏಳ್ಗೆಗೆ ಅತಿಮುಖ್ಯವಾದ ಕಾರಣ. ಇಂತಹ ವ್ಯವಸ್ಥೆ ಇಟ್ಟ್ಕೊಂಡಿರೋ ದೇಶಗಳಿಂದ ಹೊರಬಂದಿರೋ ಪೇಟೆಂಟುಗಳ ಸಂಖ್ಯೆ, ಹೊಸ ತತ್ವಾನ್ವೇಷಣೆಗಳ ಸಂಖ್ಯೆಗೆ ಭಾರತದಿಂದ ಹೊರಬಂದಿರೋದನ್ನ ಹೋಲಿಸಿದರೆ ನಾಚಿಕೆ ಆಗತ್ತೆ ಗುರು! ಈ ದೇಶಗಳಿಗೂ ಭಾರತಕ್ಕೂ ಇರೋ ವೆತ್ಯಾಸ ಏನಪ್ಪಾ ಅಂದ್ರೆ ಶಿಕ್ಷಣ ವ್ಯವಸ್ಥೆ! ನಾವು ಜರ್ಮನ್ನರಿಗಿಂತ, ಜಪಾನಿಗಳಿಗಿಂತ, ಚೀನಾದೋರಿಗಿಂತ ಕೀಳು ಜನರೇನಲ್ಲ, ಆದರೆ ಪ್ರಾಯಶಃ ಪ್ರಪಂಚದಲ್ಲಿ ಮಿಗಿಲಿಲ್ಲದಷ್ಟು ಕೀಳರಿಮೆಯಿರೋ ಜನರು ನಾವು, ಅಷ್ಟೆ!

ಸುಟ್ಟಾಕ್ಬೇಕು ಆ ಕೀಳರಿಮೇನ! ಕನ್ನಡಿಗರಷ್ಟೆ ಅಲ್ಲ, ಭಾರತದೋರೆಲ್ಲ ಇಂಗ್ಲೀಷಿಗೆ ಕಣ್ಮುಚ್ಚಿಕೊಂಡು ಮೊರೆ ಹೋಗೋದು ಪೆದ್ದತನಾನೂ ಹೌದು, ನಮ್ಮ ಮಕ್ಕಳಿಗೆ ಮಾಡ್ತಿರೋ ಮೋಸಾನೂ ಹೌದು. ನಿಧಾನವಾಗಿ ಇದನ್ನ ರಿಪೇರಿ ಮಾಡ್ಬೇಕು, ಕನ್ನಡದ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನ ಸೇರಿಸೋದು ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಚೆನ್ನಾಗಿ ಆಗಬೇಕು, ನಮ್ಮ ಮಕ್ಕಳನ್ನ ಜಾಗತೀಕರಣದಲ್ಲಿ ನಿಜವಾದ ಆಟಗಾರರಾಗಕ್ಕೆ ಅನುವು ಮಾಡ್ಕೊಡಬೇಕು, ಇವತ್ತಿನಂಗೆ ಬರೀ ತ್ಯಾಪೆ ಕೆಲಸಗಾರರಾಗಿರ್ಲಿ ಅಂತ ಬಿಡಬಾರದು ಗುರು!

ಈ ಬದಲಾವಣೆ ಮಾಡುವಾಗ ಕೆಲವು ದಿನ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆ ಇಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ಅದನ್ನೇ ಶಾಶ್ವತವಾಗಿ ನಂಬಿಕೊಳ್ಳದೆ ಜೊತೆಜೊತೆಗೇ ಕನ್ನಡದ ಶಿಕ್ಷಣ ವ್ಯವಸ್ಥೇನ ಭದ್ರ ಮಾಡ್ಕೋಬೇಕು ಗುರು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ನೀವು ಐಟಿ ಕನ್ನಡಿಗರಾ?

೬ ತಿಂಗಳ ಹಿಂದೆ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ ಎದುರು ಕಾವೇರಿ ಪ್ರತಿಭಟನೆ ನಡೆದಾಗ ಬರದ ಪತ್ರಿಕೆಗಳಿಲ್ಲ, ತೋರಿಸದ ಟಿ.ವಿ ವಾಹಿನಿಗಳಿಲ್ಲ. ಯಾಕಪ್ಪ ಅಂದ್ರೆ ಆವತ್ತು ಕನ್ನಡದ ಬಾವುಟ ಹಿಡಿದು ಘೋಷಣೆಗಳ್ನ ಕೂಗ್ದೋರು ಬೇರೆ ಯಾರು ಅಲ್ಲಾ, ಕರ್ನಾಟಕದ ಮೂಲೆಮೂಲೆಗಳಿಂದ ಬಂದು ಬೆಂಗಳೂರಿಗೆ ಸೇರಿರೋ ಐಟಿ ಮಂದಿ.

ದಿನಕ್ಕೆ ೧೦ ಅಪರಾಧವಾದರೂ ಸುದ್ದಿ ಆಗದಿರೋದು, ಒಬ್ಬ ಐಟಿ ತಂತ್ರಜ್ಞನ ಮೇಲೆ ಆದರೆ ದೊಡ್ಡ ಸುದ್ದಿಯಾಗೊತ್ತೆ.



ಇದೆಲ್ಲಾ ಯಾಕೆ ಗುರು?

ನೀವು ಚೆನ್ನಾಗಿ ಓದಿದೀರಿ, ಅಮೇರಿಕಾ-ಯುರೋಪನ ಕಾಲಾಸಿಪಾಳ್ಯ-ಮೆಜಸ್ಟಿಕ್ ತರ ಸುತ್ತಿದೀರಿ, ಚೆನ್ನಾಗಿ ಸಂಪಾದನೆ ಮಾಡ್ತೀರಿ, ಕೈ ಹಾಕಿದ ಕೆಲ್ಸ ಸಖತ್ ಆಗಿ ಮಾಡ್ತೀರಿ... ಇವೆಲ್ಲಾ ಇದೆ ಅಂತಾನೇ ಈ ಸಮಾಜಕ್ಕೆ ನಿಮ್ಮ ಬಗ್ಗೆ ಬೋ ಗೌರವ ಇದೆ ಗುರು! ಅದಕ್ಕೇ ನೋಡಿ, ನಿಮಗೆ ಬೇಕೊ ಬೇಡ್ವೊ ಜನ ನಿಮ್ಮ ಅನುಕರಣೆ ಮಾಡ್ತಾರೆ. ನೀವು ಕನ್ನಡದ ಬಗ್ಗೆ ಕಾಳಜಿ ಮಾಡಿದ್ರೆ ಅವ್ರೂ ಮಾಡ್ತಾರೆ, ನೀವು ಮಾಡಲಿಲ್ಲ ಅಂದ್ರೆ ಅವ್ರೂ ಮಾಡಕ್ಕಿಲ್ಲ.

"ಸರಿ ಗುರುವೇ, ಈಗ ನಾವೇನು ಮಾಡಬೇಕು ಅಂತ ಒಸಿ ಹೇಳಿ" ಅಂತೀರಾ?
ಕಾಫಿ ಕುಡೀತಾ ಇಲ್ಲಿ ಕೇಳಿರೋ ಪ್ರಶ್ನೆಗಳ ಬಗ್ಗೆ ಒಮ್ಮೆ ಯೋಚನೆ ಮಾಡಿ:
  • ಒಂದು ಒಳ್ಳೆ ಕನ್ನಡ ಚಲನಚಿತ್ರ ನೋಡಿ, ಅದನ್ನು ಬೇರೆಯವರ ಜೊತೆ ಹಂಚ್ಕೊಬೇಕು ಅಂತ ಅನಿಸ್ತಾ ಇದೆಯಾ?
  • ನಿಮ್ಮ ಸಂಸ್ಥೆಯಲ್ಲಿ ಕನ್ನಡ ಕಲಿಸೋದು ಹೇಗೆ ಅಂತ ತಲೆ ಕೆಡ್ತಾ ಇದೆಯಾ?
  • ಯಾವುದೋ ಸಂಸ್ಥೆಗೆ ಕೆಲ್ಸಕ್ಕೆ ಹಾಕಬೇಕು, ಅಲ್ಲಿ ಕೆಲ್ಸ ಮಾಡೊರ ಸಂಪರ್ಕ ಬೇಕಾ?
  • ನಿಮ್ಮ ಸಂಸ್ಥೆಯಲ್ಲಿ ಕೆಲ್ಸ ಖಾಲಿ ಇದೆ, ಯಾವ ಕನ್ನಡಿಗನೂ ಬರ್ತಾ ಇಲ್ಲಾ ಅಂತ ಬೇಜಾರಾ?
  • ಕನ್ನಡ ಇರೋ ಸಂಚಾರಿ ದೂರವಾಣಿ ಬಗ್ಗೆ ತಿಳ್ಕೊಬೇಕಾ?
  • ತಂತ್ರಜ್ಞಾನದಲ್ಲಿ ಕನ್ನಡ ತರೋದು ಹೇಗೆ ಅಂತ ಚರ್ಚೆ ಮಾಡಬೇಕಾ? ಅಥವಾ ತರಬೇಕಾ? ಅಥವಾ ತಂದಿರೋದರ ಬಗ್ಗೆ ಚರ್ಚೆ ಮಾಡಬೇಕಾ?
  • ಕನ್ನಡ ಅಂದ್ರೆ ಎನ್ನಡ ಅನ್ನೋ ಗ್ರಾಹಕ ಸೇವೆ ಬಗ್ಗೆ ಉರಿ ಇದೆಯಾ ?
  • ನಿಮ್ಮ ಸಂಸ್ಥೆಯಲ್ಲಿ ಕನ್ನಡ ಸಮಾರಂಭ ಮಾಡೊಕ್ಕೆ ಭರ್ಜರಿ ಐಡಿಯಾ ಬೇಕಾ?
  • ನೀವು ಕೆಲಸ ಹುಡುಕಕ್ಕೆ ಪಟ್ಟ ಕಷ್ಟ ಬೇರೆಯವರಿಗೆ ಬರೋದು ಬೇಡ, ಹೊಸಬರಿಗೆ ದಾರಿ ತೋರಿಸಿಕೊಡಬ್ಕು ಅಂತ ಅನ್ನಿಸ್ತಾ ಇದೆಯಾ ?
ಮೇಲಿನ ಪ್ರಶ್ನೆಗಳಲ್ಲಿ ಒಂದಕ್ಕಾದರೂ ನಿಮ್ಮ ಉತ್ತರ "ಹೌದು" ಅನ್ನೋದಾದ್ರೆ, ಇನ್ನಾ ಏನು ಯೋಚನೆ ಮಾಡ್ತಾ ಇದ್ದೀರಿ? ಬಲಭಾಗದಲ್ಲಿ ನಿಮ್ಮ ಮಿಂಚೆ ವಿಳಾಸ ಕೊಟ್ಟು ನೀವೂ ಬನವಾಸಿ ಬಳಗದ ಐಟಿ ಕನ್ನಡಿಗರ ಗುಂಪಿಗೆ ಸೇರ್ಕೊಂಡು, ನಿಮ್ಮ ಗೆಳೆಯರ್ನ ಸೇರ್ಸಿ ಮತ್ತೆ...
Related Posts with Thumbnails