ಗ್ರಾಹಕ ಹಕ್ಕು ಮತ್ತು ಡಬ್ಬಿಂಗ್

(ಫೋಟೋ ಕೃಪೆ: ಪ್ರಜಾವಾಣಿ)

ಇಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ನಾನಾರೀತಿಯ ಮನೋರಂಜನೆ, ಸಿನಿಮಾ, ಟಿವಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಇವುಗಳನ್ನು ಯಾರಾದರೂ ನೋಡಬೇಕೆಂದರೆ ಅವನ್ನು ತಮ್ಮ ಭಾಷೆಗೆ ಮಾತು ಬದಲಿಸಿಅಂದರೆ ಡಬ್ ಮಾಡಿ ನೋಡುವ ಏರ್ಪಾಡಿದೆ. ಭಾರತದಲ್ಲೂ ಡಬ್ಬಿಂಗ್ ವ್ಯವಸ್ಥೆ ಹೆಚ್ಚಿನ ಎಲ್ಲಾ ಕಡೆ ಜಾರಿಯಲ್ಲಿದ್ದರೂ ನಮ್ಮ ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ನಿಷೇಧವಿದೆ. ಕನ್ನಡದ ಮಕ್ಕಳು ತಮ್ಮಿಷ್ಟದ ಪೋಗೋ, ಕಾರ್ಟೂನ್ ಮೊದಲಾದ ವಾಹಿನಿಗಳನ್ನೂ ಅವತಾರ್, ಜುರಾಸಿಕ್ ಪಾರ್ಕ್, ಜಂಗಲ್‌ಬುಕ್ ಮೊದಲಾದ ಚಿತ್ರಗಳನ್ನೂ ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲ. ಕನ್ನಡವಲ್ಲದೆ ಬೇರಾವ ಭಾಷೆಯನ್ನೂ ಅರಿಯದ ಕನ್ನಡಿಗರು ಪರಭಾಷೆಯ ಚಿತ್ರಗಳನ್ನು, ಜ್ಞಾನ ವಿಜ್ಞಾನದ ವಾಹಿನಿಗಳನ್ನು ನೋಡಬೇಕೆಂದರೆ... ಇಲ್ಲವೇ ಅರ್ಥವಾಗದೆ ನೋಡಬೇಕು ಅಥವಾ ಆಯಾಭಾಷೆಗಳನ್ನು ಕಲಿತು ನೋಡಬೇಕು. ಹೀಗೆ ಅವಕಾಶ ಇಲ್ಲದಿರಲು ಕಾರಣ ಯಾವುದೋ ಸರ್ಕಾರಿ ಕಾಯ್ದೆಯಾಗಲೀ, ಇಂತಹ ಕಾರ್ಯಕ್ರಮಗಳನ್ನು ನೀಡುವವರು ಇಲ್ಲದೇ ಆಗಲೀ ಅಲ್ಲಾ. ಬದಲಿಗೆ ಕನ್ನಡ ದೂರದರ್ಶನ ಮತ್ತು ಚಿತ್ರರಂಗದ ಕಾನೂನುಬಾಹಿರವಾದ ಡಬ್ಬಿಂಗ್ ನಿಷೇಧದ ಕಾರಣದಿಂದ. ಭಾರತದಲ್ಲಿ ಸಂವಿಧಾನದ ನೆಲೆಯಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನುಬಾಹಿರವಾದ ನಿಲುವು. ಡಬ್ಬಿಂಗ್ ನಿಷೇಧ ಎನ್ನುವ ನಿಲುವು ವಾಸ್ತವವಾಗಿ ಪ್ರಜಾಪ್ರಭುತ್ವ ವಿರೋಧಿಯಾದುದಾಗಿದೆ.


ಪ್ರೇಕ್ಷಕನೆಂಬ ಗ್ರಾಹಕ ಧ್ವನಿ


ತಾಂತ್ರಿಕವಾಗಿ ಸಾಧ್ಯವಿರುವಾಗ, ದೇಶದಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನಾಗಿಲ್ಲದಿರುವಾಗ ಪ್ರೇಕ್ಷಕನಿಗೆ ಡಬ್ ಆದ ಚಿತ್ರಗಳನ್ನು ನೋಡುವ ಅವಕಾಶ ಇರಬೇಕಾಗಿದೆ. ಡಬ್ಬಿಂಗ್ ಬೇಡ ಎನ್ನುವವರಿಗೆ ಸಂಘ ಸಂಸ್ಥೆಗಳಂತಹ ವೇದಿಕೆಗಳಿದ್ದು ಪ್ರತಿಭಟನೆಯನ್ನು ದಾಖಲಿಸುವುದು ಸುಲಭ. ಆದರೆ ಪ್ರೇಕ್ಷಕನಿಗೆ ಇಂತಹ ಯಾವುದೇ ವೇದಿಕೆ/ಅವಕಾಶ ಇಲ್ಲದಿರುವಾಗ ಆತ ತನ್ನ ನಿಲುವನ್ನು ಪತ್ರಿಕೆಗಳಿಗೆ ಬರೆಯುವ ಮೂಲಕ, ಮಿಂಬಲೆ ತಾಣಗಳ ಚರ್ಚೆಗಳಲ್ಲಿ ದನಿಯೆತ್ತುವ ಮೂಲಕ ತೋರಬಲ್ಲನಷ್ಟೆ. ಇದನ್ನುಪಯೋಗಿಸಿಕೊಂಡು ಡಬ್ಬಿಂಗಿಗೆ ಜನರ ಬೇಡಿಕೆಯಿಲ್ಲಾ, ಇದು ಕೆಲವರ ಅನಿಸಿಕೆ ಅಷ್ಟೇ ಎನ್ನುವುದು ಅಪ್ರಜಾಸತ್ತಾತ್ಮಕವಾದುದಾಗಿದೆ.


ಪ್ರಜಾಪ್ರಭುತ್ವದಲ್ಲಿ ಡಬ್ಬಿಂಗ್


ಪ್ರೇಕ್ಷಕನೆಂಬ ಗ್ರಾಹಕನ ಒಲವು ಒಂದು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವ ಮೂಲಕ ಅಥವಾ ಸೋಲಿಸುವ ಮೂಲಕ ವ್ಯಕ್ತವಾಗುತ್ತದೆ. ಹೀಗೆ ತೀರ್ಮಾನಿಸುವ ಅವಕಾಶವನ್ನು ಡಬ್ ಆದ ಚಿತ್ರಗಳಿಗೂ ನೀಡಬೇಕಾದ್ದು ಸಹಜನ್ಯಾಯವಾಗಿದೆ. ಡಬ್ಬಿಂಗ್ ಆದ ಚಿತ್ರಗಳ ಹಣೇಬರಹವನ್ನು ನಿರ್ಣಯಿಸುವ ಅವಕಾಶ ಪ್ರೇಕ್ಷಕ ಮಹಾಪ್ರಭುವಿಗೆ ಇರಬೇಕಾದ್ದೇ ಸರಿಯಾದುದಾಗಿದೆ. ನಿಜಕ್ಕೂ ಡಬ್ಬಿಂಗ್ ಎನ್ನುವುದು ಹಾನಿಕರ ಎನ್ನುವುದಾದಲ್ಲಿ ಆ ನಿಲುವನ್ನು ಕರ್ನಾಟಕದ ಜನರಲ್ಲಿ ಪ್ರಚುರಪಡಿಸಿ ಅವರೇ ಅಂತಹ ಚಿತ್ರಗಳನ್ನು ತಿರಸ್ಕರಿಸುವಂತೆ ಮಾಡುವುದರಲ್ಲಿದೆಯೇ ಹೊರತು ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸುವ ಸಂವಿಧಾನಬಾಹಿರವಾದ ನಡೆಯಲ್ಲಿಲ್ಲ!


ವಿಶ್ವಸಂಸ್ಥೆ ನಿಲುವು ಮತ್ತು ಭಾಷೆಯ ಉಳಿವು


ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯ ಮೂಲಕ ಪ್ರತಿಯೊಂದು ಭಾಷಿಕ ಜನರಿಗೂ ತನ್ನ ನುಡಿ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳಲು ಹಲವು ಹಕ್ಕುಗಳಿರುವುದನ್ನು ಗುರುತಿಸಿ ಎತ್ತಿ ಹಿಡಿದಿದೆ. ಅದರಲ್ಲಿ ಡಬ್ಬಿಂಗ್ ಎನ್ನುವುದನ್ನೂ ಕೂಡಾ ಒಂದು ಅಸ್ತ್ರವೆಂದಾಗಿಯೇ ಪರಿಗಣಿಸಲಾಗಿದೆ. ಯಾವುದೇ ಜನಾಂಗಕ್ಕೆ ತನ್ನ ಭಾಷೆಗೆ ಪರಭಾಷೆಯ ವಿಷಯ/ ಮಾಹಿತಿ ಮೊದಲಾದವುಗಳನ್ನು ತರ್ಜುಮೆ ಮಾಡುವ/ ಡಬ್ಬಿಂಗ್ ಮಾಡುವ ಹಕ್ಕಿದೆ ಎನ್ನುತ್ತದೆ ಸೆಕ್ಷನ್ ೪೪. ಅಂದರೆ ಡಬ್ಬಿಂಗ್ ಎನ್ನುವುದು ಸಂವಿಧಾನ ಬಾಹಿರವಾದುದೂ ಅಲ್ಲಾ, ಭಾಷೆಗೆ ಹಾನಿ ಮಾಡುವುದೂ ಅಲ್ಲ ಎನ್ನುವುದು ಇದರ ಸಾರ. ಕನ್ನಡತನಕ್ಕೆ ಡಬ್ಬಿಂಗ್ ಮಾರಕವಾದುದು ಎನ್ನುವ ವಾದವನ್ನು ನಾವು ಕೇಳಬಹುದಾಗಿದೆ. ವಾಸ್ತವ ಇದಕ್ಕೆ ವಿರುದ್ಧವಾಗಿದೆ.


ಕನ್ನಡತನ ಮತ್ತು ಡಬ್ಬಿಂಗ್


ಡಬ್ಬಿಂಗ್ ಇಲ್ಲದೇ ಹೋದರೆ ಪರಭಾಷೆಯ ಚಿತ್ರಗಳನ್ನು/ ಕಾರ್ಯಕ್ರಮಗಳನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ತಮಿಳಿನ, ತೆಲುಗಿನ, ಹಿಂದಿಯ, ಇಂಗ್ಲೀಷಿನ... ಇನ್ನಾವುದೇ ಭಾಷೆಯ ಕಾರ್ಯಕ್ರಮವನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ಕನ್ನಡವೊಂದಲ್ಲದೇ ಬೇರೆ ನುಡಿ ಅರಿಯದವರಿಗೆ ಇದು ತೊಡಕಿನ ವಿಷಯವಾಗಿದೆ. ಈಗ ನೀವೇ ಹೇಳಿ... ಕನ್ನಡಿಗನೊಬ್ಬ ತನ್ನೆಲ್ಲಾ ಮನರಂಜನೆಯನ್ನು ಕನ್ನಡದಲ್ಲಿಯೇ ಪಡೆದುಕೊಳ್ಳುವುದು ಕನ್ನಡಪರವೋ? ತನ್ನದಲ್ಲದ ನುಡಿಯಲ್ಲಿ ನೋಡುವುದೋ? ಇನ್ನೂ ತಮಾಶೆಯ ವಿಷಯವೆಂದರೆ ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಒಂದು ಇಂಗ್ಲೀಷ್ ಚಿತ್ರ ಡಬ್ಬಿಂಗ್ ಆಗಿ ತಮಿಳು, ತೆಲುಗು, ಹಿಂದೀ ಭಾಷೆಗಳಲ್ಲೂ ಬಿಡುಗಡೆಯಾಗುತ್ತದೆ. ಆದರೆ ಕನ್ನಡದಲ್ಲಿ ಮಾತ್ರಾ ಆಗುವುದಿಲ್ಲ. ಅಂದರೇನರ್ಥ? ನಾವು ಕನ್ನಡಿಗರಾಗಿ ಹುಟ್ಟಿರುವುದೇ ಪಾಪ ಎಂದು ಜನರಿಗೆ ಅನ್ನಿಸಿದರೆ ಅಚ್ಚರಿಯಿಲ್ಲ! ಭಾರತದಲ್ಲಿ ಎಲ್ಲಾ ಜನರಿಗೆ ಸಿಗುತ್ತಿರುವ, ಕನ್ನಡಿಗರಿಗೆ ವಂಚಿಸಲಾಗಿರುವ ತಾಯ್ನುಡಿಯಲ್ಲಿ ,ಮನರಂಜನೆ ಪಡೆದುಕೊಳ್ಳುವ ಹಕ್ಕುಇಲ್ಲವಾಗಿರುವುದು ಡಬ್ಬಿಂಗ್ ಎನ್ನುವ ಕಾನೂನು ಬಾಹಿರವಾದ ನಿಲುವಿನಿಂದಾಗಿಯೇ ಆಗಿದೆ!


ವಾಸ್ತವವಾಗಿ ಡಬ್ಬಿಂಗ್ ವಿರೋಧಿಗಳು ಮುಂದಿಡುವ ಕನ್ನಡ ಸಂಸ್ಕೃತಿ ನುಡಿ ರಕ್ಷಣೆಗಾಗಿ ಡಬ್ಬಿಂಗ್ ಬೇಡ ಎನ್ನುವ ಮಾತು ಪೊಳ್ಳಿನದ್ದಾಗಿದೆ ಎಂದು ಇಂದಿನ ಮಚ್ಚು ಲಾಂಗುಗಳ, ರಿಮೇಕ್ ಸಾಗರಗಳ ಸಿನಿಮಾಗಳನ್ನು ನೋಡಿದರೆ ಅರಿವಾಗುತ್ತದೆ. ಚಿತ್ರರಂಗ ಸಮಾಜದ ಕನ್ನಡಿಯೇ ಹೊರತು ಅದರಿಂದಾಗಿಯೇ ಸಂಸ್ಕೃತಿ ರೂಪುಗೊಳ್ಳುತ್ತದೆ ಎನ್ನುವುದು ಬರೀ ಪೊಳ್ಳು ಮಾತಾಗಿದೆ. ಹಾಗಿದ್ದಿದ್ದರೆ ಇವತ್ತು ಕನ್ನಡಿಗರೆಲ್ಲಾ ಮಚ್ಚು ಲಾಂಗುಗಳ ಕ್ರಿಮಿನಲ್ಲುಗಳಾಗುತ್ತಿದ್ದರು! ಅಷ್ಟೇ.ಇನ್ನು ಸಾವಿರಾರು ಜನರ ಹೊಟ್ಟೆಪಾಡು ಎನ್ನುವ ಆತಂಕ ಡಬ್ಬಿಂಗ್ ವಿರೋಧಿಗಳದ್ದು. ಹಿಂದೆ ಸಾರಾಯಿ, ಆನ್‌ಲೈನ್ ಲಾಟರಿಗಳು ನಿಷೇಧವಾದಾಗ ಸುಮಾರು ಮೂರುಲಕ್ಷ ಜನರು ಉದ್ಯೋಗ ಕಳೆದುಕೊಳ್ಳಬೇಕಾಯಿತು. ಅದರಿಂದ ಈಗ ಏನಾಯಿತು? ಅವರೆಲ್ಲಾ ಪರ್ಯಾಯ ಉದ್ಯೋಗ ಕಂಡುಕೊಳ್ಳಲಿಲ್ಲವೇ? ಈ ಹಿಂದೆ ಕಾಯಿನ್ ಬೂತುಗಳನ್ನು ನಡೆಸುತ್ತಿದ್ದವರೆಲ್ಲಾ ಮೊಬೈಲು ಫೋನುಗಳು ಬರಬಾರದು ಎಂದು ಗೂಂಡಾಗಿರಿ ಮಾಡಿದ್ದರೆ ಒಪ್ಪಲಾಗುತ್ತಿತ್ತೇ? ಹಾಗೇ ಡಬ್ಬಿಂಗ್ ಬೇಡ ಎನ್ನುವವರು ಸ್ಪರ್ಧೆ ಎದುರಿಸಲಾಗದೆ ಈ ನಿಲುವಿಗೆ ಬಂದಿದ್ದಾರೆನ್ನುವುದೇ ವಾಸ್ತವ ಎನ್ನಿಸುತ್ತದೆ. ಇಲ್ಲದಿದ್ದರೆ ಡಬ್ಬಿಂಗ್ ತಡೆಯಲು ಕಾನೂನುಬಾಹಿರ ದಾಳಿ, ಬೆದರಿಕೆಗಳಂತಹ ಕ್ರಮಗಳಿಗೆ ಅವರು ಮುಂದಾಗುತ್ತಿರಲಿಲ್ಲ. ಒಟ್ಟಿನಲ್ಲಿ, ಯಾವುದೇ ಉದ್ದಿಮೆಯ ಉದ್ದೇಶವಾಗಿರುವ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ತನ್ನಿಷ್ಟದ ಸರಕುಗಳನ್ನು ಕೊಳ್ಳುವ ಹಕ್ಕು ಇರಬೇಕು. ಪ್ರೇಕ್ಷಕನಿಗೆ ಡಬ್ಬಿಂಗ್ ಸಿನಿಮಾ ನೋಡುವ ಮೆಚ್ಚುವ ತಿರಸ್ಕರಿಸುವ ಹಕ್ಕು ಇರಬೇಕು. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಅದಿಲ್ಲ! ಬರಬೇಕು! ಬರಲೇಬೇಕು!!


(ಪ್ರಜಾವಾಣಿ ದಿನಪತ್ರಿಕೆಯ ೨೮.೦೪.೨೦೧೨ರ ಸಂಚಿಕೆಯ ಅಂತರಾಳ ಪುಟದಲ್ಲಿ ಪ್ರಕಟವಾದ ಬರಹ)

ಕನ್ನಡಮ್ಮನ ಕಿರೀಟದಿ ಹೊಳೆವ ಮುತ್ತು!


ಇವತ್ತು ಕನ್ನಡಿಗರ ಕಣ್ಮಣಿ ರಾಜಣ್ಣನ ಹುಟ್ಟುಹಬ್ಬ. ಡಾ.ರಾಜಕುಮಾರ್ ನಮ್ಮ ನಾಡು ಕಂಡ ಅದ್ಭುತವಾದ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇವ್ರು ತಮ್ಮ ಸರಳತೆ, ವಿನಯ ಮತ್ತು ನಡವಳಿಕೆಗಳಿಂದಲೂ, ತಾವು ಮಾಡಿದ ಪಾತ್ರಗಳಿಂದಲೂ ನಮ್ಮ ಮನಸ್ಸಲ್ಲಿ ಸದಾ ಉನ್ನತ ಸ್ಥಾನದಲ್ಲಿದಾರೆ ಅನ್ನೋದು ನಿಜವೇ ಆದರೂ ಕಲಾವಿದನೊಬ್ಬ ಹೇಗೆ ತನ್ನ ಇತಿಮಿತಿಯಲ್ಲೇ ನಾಡಿನ ಋಣ ತೀರಿಸಲು ಸಾಧ್ಯ ಅನ್ನೋದನ್ನು ಇವ್ರು ತೋರಿಸಿಕೊಟ್ಟಿದಾರೆ ಗುರು!


ಕನ್ನಡ ನಾಡಿಗೆ ರಾಜ್ ಕೊಡುಗೆ!

ಕನ್ನಡಿಗರ ಇತಿಹಾಸಾನ ಜನರಿಗೆ ಮುಟ್ಟಿಸೋದ್ರಲ್ಲಿ ರಾಜಣ್ಣಂದು ಮಹತ್ವದ ಕೊಡುಗೆ. ಕನ್ನಡದ ಮೊದಲ ದೊರೆ ಮಯೂರ ವರ್ಮ, ಪರಮೇಶ್ವರ ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ... ಹೀಗೆ ನಮ್ಮ ನಾಡಿನ ಮಹಾನ್ ರಾಜರುಗಳನ್ನು, ಕನ್ನಡಿಗರ ಶೌರ್ಯ-ಸಾಹಸ-ಹಿರಿಮೆ-ವೈಭವಗಳನ್ನು ನಮ್ಮ ಕಣ್ಣ ಮುಂದೆ ತಂದಿಟ್ಟಿದ್ದು ಇವ್ರೇ. ಇದರ ಮೂಲಕವೇ ಕೋಟಿ ಕೋಟಿ ಕನ್ನಡಿಗರಲ್ಲಿ ಕನ್ನಡತನದ ದೀವಿಗೆ ಬೆಳಗಿತು ಅಂದರೆ ಸುಳ್ಳಲ್ಲ.

ಸಮಾಜದಲ್ಲಿ ಆದರ್ಶವೇ ಮೈವೆತ್ತಂತೆ ಪಾತ್ರಗಳನ್ನು ಮಾಡುವ ಮೂಲಕ ಅದೆಷ್ಟೋ ಜನತೆಗೆ ಮಾದರಿಯಾಗಿದ್ದುದು, ಬಂಗಾರದ ಮನುಷ್ಯನಂತಹ ಚಿತ್ರದ ಮೂಲಕ ಅದೆಷ್ಟೋ ಜನ ಹಳ್ಳಿಗಳ ಏಳಿಗೆಗೆ ಕಂಕಣ ತೊಡುವಂತಾಗಿದ್ದುದು ನಮ್ಮ ರಾಜಕುಮಾರರ ಹಿರಿಮೆ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಅಭಿನಯಿಸದ ಪಾತ್ರವಿಲ್ಲ ಎಂಬಂತೆ ಸಾಮಾಜಿಕ, ಪೌರಾಣಿಕ, ಜಾನಪದ, ಐತಿಹಾಸಿಕವೂ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಿದ್ದು, ಡಾ.ರಾಜ್.

ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿನುಡಿಯೋ...

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೇ ಕನ್ನಡ ಮಣ್ಣಾ ಮೆಟ್ಟಬೇಕು...

ಎನ್ನುತ್ತಾ ಕನ್ನಡಿಗನಾಗಿರುವುದು ಹೆಮ್ಮೆ, ನಮ್ಮ ನಾಡು ಪವಿತ್ರವಾದದ್ದು, ನಮ್ಮ ನುಡಿ ಶ್ರೇಷ್ಠವಾದದ್ದು ಎಂಬ ಭಾವನೆಯನ್ನು ಕನ್ನಡಿಗನ ಮನಮನಗಳಲ್ಲಿ ಜಾಗೃತಗೊಳಿಸಿದ್ದು ಡಾ.ರಾಜ್ ಹಿರಿಮೆ.

ಒಬ್ಬ ನಟನಾಗಿ ನಾಡಿಗರನ್ನು ಒಗ್ಗೂಡಿಸುವ ಮೂಲಕ ತಾಯಿನಾಡಿನ ಋಣ ತೀರಿಸುವ ತನ್ನ ಪಾಲಿನ ಕರ್ತವ್ಯವನ್ನು ಅದ್ಭುತವಾಗಿ ನಿರ್ವಹಿಸಿದ್ದು ಡಾ. ರಾಜ್ ಕುಮಾರ್ ಅವರ ಸಾಧನೆ. "ನಾನು ನಾಡುನುಡಿ ಅಂತ ಹೇಳಿದ್ದು ಬರೀ ಪಾತ್ರವಾಗಿ, ನಾಡಪರ ಹೋರಾಟಕ್ಕೂ ನಂಗೂ ಸಂಬಂಧ ಇಲ್ಲ" ಅಂತ ಎಂದಿಗೂ ಹೇಳದೆ ನಾಡು ನುಡಿ ನಾಡಿಗರ ಸಂಕಷ್ಟದಲ್ಲಿ ತನ್ನ ಕೈಲಾದ ಸೇವೆ ಮಾಡಿದ್ದು ಇವರ ಹೆಗ್ಗಳಿಕೆ.

ಕನ್ನಡಮ್ಮನ ಹೊನ್ನ ಕಿರೀಟದಲ್ಲಿ ಸದಾ ಮಿರುಗುವ ಅತ್ಯಮೂಲ್ಯ ಮುತ್ತುಗಳ ರಾಜ ನಮ್ಮ ಮುತ್ತುರಾಜ... ಇವರಿಗೆ ನಮ್ಮದೊಂದು ಗೌರವ ತುಂಬಿದ ಪ್ರೀತಿಯ ನಮನ ಗುರು!

ಸತ್ಯಮೇವ ಜಯತೇ ಅಂದ್ರೆ ದಿಟವೊಂದೇ ಗೆಲ್ಲೋದು ಅಂತಾ...ಸ್ಟಾರ್ ಸಮೂಹದ ಅಂಗವಾಗಿರುವ ಸುವರ್ಣ ಕನ್ನಡ ವಾಹಿನಿಯವರು ಶ್ರೀ ಅಮೀರ್‌‍ಖಾನ್‌ರವರ ಅಮೀರ್‌ಖಾನ್ ಪ್ರೊಡಕ್ಷನ್ ಸಂಸ್ಥೆಯ "ಸತ್ಯಮೇವ ಜಯತೆ" ಕಾರ್ಯಕ್ರಮವನ್ನು, ಕನ್ನಡದಲ್ಲಿಯೂ ಡಬ್ ಮಾಡಿ ಪ್ರಸಾರ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಎನ್ನುವ ಸುದ್ದಿ ಬಂದ ಕೂಡಲೇ ಪ್ರಜಾಸತ್ತಾತ್ಮಕವಾಗಿ ಒಂದಷ್ಟು ಸಿನಿಮಾ/ಟಿವಿ ಮಂದಿ ಸುವರ್ಣ/ ಸ್ಟಾರ್ ಮುಖ್ಯಸ್ಥರನ್ನು ಭೇಟಿ ಮಾಡಿ ಅತ್ಯಂತ "ಪ್ರಜಾಸತ್ತಾತ್ಮಕ"ವಾದ ರೀತಿಯಲ್ಲಿ ಅವರನ್ನು ಡಬ್ಬಿಂಗ್ ಧಾರಾವಾಹಿ ಪ್ರಸಾರ ಮಾಡದಿರಲು ಒಪ್ಪಿಸಿ ಬಂದರಂತೆ. ಹೀಗೆ ಹೋದವರ ಕಣ್ಣಲ್ಲಿ "ಪ್ರಜಾಪ್ರಭುತ್ವ" ಅಂದ್ರೇ ಏನರ್ಥ ಅಂತಾ ತಿಳ್ಕೊಳ್ಳೋ ಕುತೂಹಲ! ಇರಲಿ.. ಈಗ ವಿಷಯದ ಬಗ್ಗೆ ಮಾತಾಡೋಣ ಗುರೂ!

ಜನರ ಅನಿಸಿಕೆ ಮತ್ತು ಚಿತ್ರರಂಗದ ನಿಲುವು! 

ನಮ್ಮ ನಾಡಲ್ಲಿ ಚಿತ್ರರಂಗದವರು (ಚಿತ್ರರಂಗದವರೆಂದರೆ ಚಲನಚಿತ್ರ ಮತ್ತು ದೂರದರ್ಶನಗಳ ಮಂದಿ) ಹೇಗೆ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡಿರುವರೋ ಹಾಗೆ ಜನಸಾಮಾನ್ಯರಿಗೆ ಅಂಥಾ ವೇದಿಕೆಯಿಲ್ಲ ಎನ್ನುವುದು ವಾಸ್ತವ. ಹಾಗಾಗಿ ಜನರು ತಮಗೆ ಸಿಗುವ ಫ಼ೇಸ್‍ಬುಕ್ಕು, ಟ್ವಿಟ್ಟರ್, ಪತ್ರಿಕೆಗಳ ವಾಚಕರ ಪತ್ರಗಳ ಮೂಲಕ, ಅಲ್ಲಿ ಇಲ್ಲಿ ಮಿಂಬಲೆತಾಣಗಳಲ್ಲಿ ಚರ್ಚೆಗಳಲ್ಲಿ, ಅದರ ಮತದಾನದಲ್ಲಿ ತಮ್ಮ ಅಭಿಪ್ರಾಯ ಹೇಳಬಲ್ಲರು ಅಷ್ಟೆ. ಇನ್ನು ಚಿತ್ರರಂಗದ ಒಳಗಿನ ಅದೆಷ್ಟೊ ಜನರು, ಖಾಸಗಿಯಾಗಿ ಡಬ್ಬಿಂಗ್ ಪರವಾಗಿ ಮಾತನ್ನಾಡಿದರೂ ಬಹಿಷ್ಕಾರ/ ಪ್ರತಿಭಟನೆಗಳ ಭಯದಿಂದ ಸಾರ್ವಜನಿಕವಾಗಿ ಈ ಬಗ್ಗೆ ದನಿಯೆತ್ತಲಾರರು! ಇಂಥಾ ಸನ್ನಿವೇಶ ನಮ್ಮ ನಾಡಲ್ಲಿದ್ದು ಕನ್ನಡ ಚಿತ್ರರಂಗದೋರು ತಮ್ಮ ಸಂಘಟನೆಗಳನ್ನೇ ಬಂಡವಾಳ ಮಾಡಿಕೊಂಡು ಕಾನೂನುಬಾಹಿರವಾಗಿ ನಿಶೇಧವನ್ನು ಸಮರ್ಥಿಸುತ್ತಾ ಹೇಳೋ ಮಾತುಗಳು ಮಜವಾಗಿದೆ.  ನಮ್ಮ ನಾಯಕರೊಬ್ಬರು ಜನರೆನ್ನುವ ನಿಜವಾದ "ಅಭಿಮಾನಿ ದೇವರು"ಗಳನ್ನು "ಫೂಲುಗಳು" ಎನ್ನುತ್ತಿದ್ದರೆ, ಗಣ್ಯ ನಿರ್ದೇಶಕರೊಬ್ಬರು "ಡಬ್ಬಿಂಗ್ ಬೇಕೆನ್ನೋರು ಲಾಭಬಡುಕ ಕನ್ನಡ ದ್ರೋಹಿಗಳು" ಅಂತಾರೆ. "ಡಬ್ಬಿಂಗ್ ಮಾಡ್ಲಿ, ಅದೆಂಗೆ ಪ್ರಸಾರ ಮಾಡ್ತಾರೋ ನೋಡೇ ಬುಡ್ತೀವಿ" ಅಂದವರು ಮತ್ತೊಬ್ಬ ನಟಿಮಣಿ. ಒಟ್ನಲ್ಲಿ ಡಬ್ಬಿಂಗ್ ಎನ್ನುವ ‘ನುಡಿ ಉಳಿಸೋ ಅಸ್ತ್ರ’ವನ್ನು, ಸ್ಪರ್ಧೆ ಎದುರಿಸಲಾಗದ ಕೆಲಮಂದಿ ಹಿಂದೆಂದೋ ಆಗಿದ್ದ ನಿಶೇಧವನ್ನು ಮುಂದುವರೆಸಲು ಮಾಡಿರೋ ತಂತ್ರಗಳ ಸಾಲಿಗೆ ಈಗ ಇದಕ್ಕೆ "ಪ್ರಜಾಪ್ರಭುತ್ವ" ಎನ್ನುವ ನುಣುಪುಲೇಪ ಹಚ್ಚಲು ತೊಡಗಿದ್ದಾರೆ. ಇರಲಿ... ಇವರು ಯಾರಿಗೂ ಕೂಡಾ ತಾವು "ಜನಸಾಮಾನ್ಯರ ತಮ್ಮ ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ" ಮತ್ತು ಅದು ಪಾಪ ಎನ್ನುವ ಪ್ರಜ್ಞೆಯೂ ಇಲ್ಲಾ. ಎಷ್ಟೆಂದರೂ ತಾವು ಉಳಿದರೆ ಸಾಕು... ನಾಡು ಹಾಳಾದರೇನು? ನಾಡಿನ ಜನಕ್ಕೆ ಅನ್ಯಾಯವಾದರೇನು? ಅಲ್ವಾ ಅನ್ನೋ ಮನಸ್ಥಿತಿ ಇವರದ್ದಿರುವಂತಿದೆ. ವಿಶ್ವಸಂಸ್ಥೆಯೂ ಕೂಡಾ ಡಬ್ಬಿಂಗ್ ಎನ್ನುವುದನ್ನು ಒಂದು ಭಾಷಿಕರಿಗೆ ತಮ್ಮ ಭಾಷೆಯನ್ನುಳಿಸಿಕೊಳ್ಳಲು ಇರುವ ಅಸ್ತ್ರವೆಂದೇ ಪರಿಗಣಿಸಿರುವ ಹಿನ್ನೆಲೆಯಲ್ಲಿ ನೋಡಿದರೆ ಚಿತ್ರರಂಗದ ಕೆಲಮಂದಿ ತಮ್ಮ ಸ್ವಹಿತಾಸಕ್ತಿಯ ಕಾರಣದಿಂದ, ಕಾನೂನುಬಾಹಿರವಾಗಿರುವ ಒಂದು ನಿಶೇಧವನ್ನು ಉಳಿಸಿಕೊಳ್ಳಲು ಶ್ರಮಿಸುವುದಕ್ಕೆ "ಪ್ರಜಾಪ್ರಭುತ್ವ"ದ ಮುಸುಕು ಹಾಕೋದು, "ಕನ್ನಡಪ್ರೇಮ"ದ ನೆಪ ಹೇಳೋದೂ ಹಾಸ್ಯಾಸ್ಪದವೇ ಆಗಿದೆ!

ಯಾರು ತೀರ್ಮಾನಿಸಬೇಕು? ಏನು ತೀರ್ಮಾನವಾಗಬೇಕು?

ಹಾಗೆ ನೋಡಿದರೆ ಡಬ್ಬಿಂಗ್ ಬೇಕಾ? ಬೇಡ್ವಾ? ಅನ್ನೋದು ಮತದಾನದಿಂದ ತೀರ್ಮಾನವಾಗೋ ಮಾತಲ್ಲವೇ ಅಲ್ಲ. ಹೀಗೆ ಮಾಡಬೇಕೂ ಅನ್ನೋದೇ... ಜೋಗಿ ಪುಸ್ತಕ ಬರೀಬೇಕೋ ಬೇಡ್ವೋ, ವಿಜಯಕರ್ನಾಟಕ ಪತ್ರಿಕೆ ಪ್ರಕಟವಾಗಬೇಕೋ ಬೇಡವೋ? ಪುನೀತ್ ಸಿನಿಮಾದಲ್ಲಿ ನಟಿಸಬೇಕೋ ಬೇಡವೋ?  ಸುರೇಶ್ ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ? ಅಂತಾ ಮತದಾನ ಮಾಡಿ ತೀರ್ಮಾನಿಸಬೇಕು ಎನ್ನುವಷ್ಟೇ ಮೂರ್ಖತನವಾಗುತ್ತದೆ. ಇವೆಲ್ಲವೂ ಮಾರುಕಟ್ಟೆಯಲ್ಲಿ ಹೇಗೆ ತಮ್ಮನ್ನು ತಾವು ಜನರ ಮುಂದೆ ನಿಂತು ಪರೀಕ್ಷೆಗೆ ಒಡ್ಡಿಕೊಂಡು ಜನರ ಮೆಚ್ಚುಗೆಗೆ ಅಥವಾ ತಿರಸ್ಕಾರಕ್ಕೆ ಎದೆಯೊಡ್ಡುತ್ತಾವೋ ಅಂಥದ್ದೇ ಅವಕಾಶ ಡಬ್ ಆಗಿರೋ ಸಿನಿಮಾಗಳಿಗೂ ಇರಬೇಕು... ಇದೇ ಸರಿಯಾದ ಮಾರ್ಗ! ಹಾಗಾದ್ರೆ ಬ್ಲೂಫಿಲಂ ತೆಗೀಬೋದಾ ಅನ್ನೋ ಮೊಂಡುವಾದವೂ ಬರುತ್ತೆ! ಸ್ವಾಮೀ... ‘ಅದು ಕಾನೂನು ಬಾಹಿರವಾಗಿದ್ದರೆ ತೆಗೆಯುವಂತಿಲ್ಲ! ಕಾನೂನು ಬಾಹಿರವಾಗಿಲ್ಲದಿದ್ದರೆ ತೆಗೆಯಬಹುದು’ ಎನ್ನುವುದು ಕಾನೂನಿನ ಪ್ರಾಥಮಿಕ ಜ್ಞಾನವಿರುವವರಿಗೆ ಅರ್ಥವಾಗೋ ವಿಷಯವಾಗಿದೆ. ಗ್ರಾಹಕನೇ ಬೇಕು ಬೇಡಾ ನಿರ್ಧಾರ ಮಾಡೋ ಅತಿದೊಡ್ಡ ವ್ಯಕ್ತಿ, ಶಕ್ತಿ. ಇದನ್ನು ಕೃತಕವಾಗಿ ನಿಶೇಧಗಳ ಮೂಲಕ ಕಟ್ಟಿ ಹಾಕೋದನ್ನು ಪ್ರಜಾಪ್ರಭುತ್ವವಾದಿಗಳು ಎಂದು ಹೇಳಿಕೊಳ್ಳುವವರೇ ಒಪ್ಪುವುದಾದರೆ ಸಾಮಾನ್ಯ ಜನರೂ ಸುಮ್ಮನಿರಲಾದೀತೇ?

ಈ ಪಿಟಿಶನ್ ಮೂಲಕ ದನಿ ಎತ್ತೋಣ!

ಮತದಾನವಲ್ಲದ ದಾರಿಯ ಮೂಲಕ ನಾವು ಎಚ್ಚೆತ್ತ ಗ್ರಾಹಕರು ಎನ್ನುವ ಸಂದೇಶವನ್ನು ನೀಡಲು... ನಮ್ಮ ಹಕ್ಕುಗಳನ್ನು ಇನ್ನು ದಮನಿಸಲಾಗದು ಎನ್ನುವುದನ್ನು ಸಾರಲು... ಎಲ್ಲಕ್ಕಿಂತಾ ಮುಖ್ಯವಾಗಿ ಸುವರ್ಣ/ ಸ್ಟಾರ್ ಸಮೂಹದವರಿಗೆ ಪ್ರೇಕ್ಷಕರಾದ ನಮ್ಮ ನಿಲುವು ತಿಳಿಸಲು, ‘ಪಟ್ಟಭದ್ರರ ಬೆದರಿಕೆಗೆ ಬಾಗಬೇಡಿರೆಂದೂ ನಿಮ್ಮೊಂದಿಗೆ ನಾವಿದ್ದೇವೆಂದೂ’ ಸಾರಲು ಈ ಒಂದು ಮಿಂಬಲೆ ಮನವಿ("ಆನ್‍ಲೈನ್ ಪಿಟಿಶನ್")ಯನ್ನು ಸಮಾನ ಮನಸ್ಕರು ಆರಂಭಿಸಿದ್ದೇವೆ. ಜಾಗೃತ ಗ್ರಾಹಕರು ಎನ್ನುವ ಹೆಸರಿನಲ್ಲಿ ನಾವು ಇದನ್ನು https://www.change.org/petitions/suvarna-tv-telecast-satyameva-jayate-in-kannada ಮಿಂಬಲೆ ತಾಣದಲ್ಲಿ ಹಾಕಿದ್ದೇವೆ. ದೂರದರ್ಶನ/ ಚಿತ್ರರಂಗದ ಕೆಲಸಂಘಟನೆಗಳ ಜನವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನೂ ಖಂಡಿಸುತ್ತಾ, ನಮ್ಮ ‘ತಾಯ್ನುಡಿಯಲ್ಲಿನ ಮನರಂಜನೆಯ ಹಕ್ಕಿ’ಗಾಗಿ ದನಿ ಎತ್ತೋಣ. ಈ ಮನವಿಗೆ ನೀವೂ ಸಹಿ ಹಾಕಿ, ನಿಮ್ಮ ಗೆಳೆಯರಿಗೂ ಸಹಿ ಹಾಕಲು ಹೇಳಿ. ಇದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕನ್ನಡ ಕನ್ನಡಿಗ ಕರ್ನಾಟಕಗಳ ಒಳಿತಿಗೆ ಡಬ್ಬಿಂಗ್ ಚಿತ್ರಗಳು ಪೂರಕವಲ್ಲವಾಗಬಲ್ಲುವೇ ಹೊರತು ಮಾರಕವಲ್ಲಾ ಎನ್ನುವ ದಿಟವೇ ಗೆಲ್ಲಲಿ!!

ಕಲಿಕೆ ಹಕ್ಕು ಕಾಯ್ದೆ: ಸರ್ವೋಚ್ಚ ನ್ಯಾಯಾಲಯದ ತೀರ್ಪು!


ಭಾರತದ ಸರ್ವೋಚ್ಚ ನ್ಯಾಯಾಲಯವು "ಕಲಿಕೆ ಹಕ್ಕು ಕಾಯ್ದೆ - ೨೦೦೯"ರ ಕುರಿತಾಗಿ ಒಂದು ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಅನುದಾನಿತ, ಅರೆಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲೂ ೨೫%ರಷ್ಟು ಸೀಟುಗಳನ್ನು ಬಡ ವಿದ್ಯಾರ್ಥಿಗಳಿಗೆ ಮೀಸಲಿಡಬೇಕಾಗುತ್ತದೆ. ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಎಚ್. ಕಪಾಡಿಯಾ, ಶ್ರೀ ರಾಧಾಕೃಷ್ಣನ್ ಮತ್ತು ಶ್ರೀ ಸ್ವತಂತರ್ ಕುಮಾರ್ ಇವರುಗಳನ್ನೊಳಗೊಂಡಿದ್ದ ತ್ರಿಸದಸ್ಯ ಪೀಠವು ತೀರ್ಪನ್ನು ನೀಡಿದೆ.  

ಕಲಿಕೆಯ ಹಕ್ಕು ಕಾಯ್ದೆ - ೨೦೦೯

ಭಾರತೀಯ ಸಂವಿಧಾನಕ್ಕೆ ೨೦೦೨ನೇ ಇಸವಿಯಲ್ಲಿ ಮಾಡಲಾದ ಎಂಬತ್ತಾರನೇ ತಿದ್ದುಪಡಿಯು ಸಂವಿಧಾನದ ೨೧ನೇ ಅನುಚ್ಛೇಧಕ್ಕೆ ೨೧(ಎ) ಅನ್ನು ಸೇರಿಸಲು ಕಾರಣವಾಯ್ತು. ೨೧ನೇ ಅನುಚ್ಛೇಧದಲ್ಲಿ ವ್ಯಕ್ತಿಸ್ವಾತಂತ್ರ ಮತ್ತು ಜೀವಕ್ಕೆ ರಕ್ಷಣೆಯ ಬಗ್ಗೆ ಹೇಳಲಾಗಿದೆ. ಇದರ ಜೊತೆಯಲ್ಲಿ ಈಗ ೨೧(ಎ) ಮೂಲಕ ಕಲಿಕೆಯ ಹಕ್ಕನ್ನೂ ಸೇರಿಸಲಾಯಿತು. ಇದರ ಆಧಾರದ ಮೇಲೆ ರೂಪಿಸಲಾದ ಕಾಯ್ದೆಯೇ "ಕಲಿಕೆಯ ಹಕ್ಕು ಕಾಯ್ದೆ - ೨೦೦೫". ಇದರಲ್ಲಿ ಪ್ರತಿಯೊಂದು ಮಗುವಿಗೂ ಕಲಿಕೆಯು ಮೂಲಭೂತ ಹಕ್ಕಾಗಿದ್ದು ಸರ್ಕಾರಗಳಿಗೆ ಅದನ್ನು ಒದಗಿಸಿಕೊಡುವ ಹೊಣೆಗಾರಿಕೆಯನ್ನು ಹೊರಿಸಲಾಗಿದೆ. ಆರರಿಂದ ಹದಿನಾಲ್ಕು ವಯಸ್ಸಿನ ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ ಕೊಡಬೇಕೆನ್ನುವುದು ಈ ಕಾಯ್ದೆಯ ತಿರುಳು.

ಇದನ್ನು ಪ್ರಶ್ನಿಸಿದ ಖಾಸಗಿ ಶಿಕ್ಷಣಸಂಸ್ಥೆಗಳು

ರಾಜಸ್ಥಾನ ಮೂಲದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘವೊಂದೂ ಸೇರಿದಂತೆ ಅನೇಕರು ಈ ಕಾಯ್ದೆಯ ಹರವಿನ ಬಗ್ಗೆ ರಿಟ್ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ಅವುಗಳು ‘ಸಂವಿಧಾನದ ೧೯(ಜಿ)ರ ಅನ್ವಯ ವ್ಯಾಪಾರ ಮಾಡಲು ಇರುವ ಮೂಲಭೂತ ಹಕ್ಕನ್ನು ಈ ಕಾಯ್ದೆಯು ಉಲ್ಲಂಘಿಸುತ್ತಿದ್ದು ಇದು ಸಂವಿಧಾನಕ್ಕೆ ಪೂರಕವಾಗಿಲ್ಲ’ ಎನ್ನುವ ದನಿ ಎತ್ತಿದ್ದರು. ಈ ಹಿಂದಿನ ಹಲವು ತೀರ್ಪುಗಳನ್ನು ಪರಿಶೀಲಿಸಿ ಸಂವಿಧಾನದ ಎರಡೆರಡು ಅನುಚ್ಛೇದಗಳು ಒಂದಕ್ಕೊಂದು ಎದುರಾದಾಗ ಯಾವ ಸೂತ್ರವನ್ನು ಬಳಸಬೇಕೆಂದು ಪರಾಮರ್ಶಿಸಿ ಈ ತ್ರಿಸದಸ್ಯ ಪೀಠ ಮೇಲಿನಂತೆ ತೀರ್ಪು ನೀಡಿದೆ. ಆ ಮೂಲಕ ಮಕ್ಕಳ ಕಲಿಕೆಯ ಮೂಲಭೂತ ಹಕ್ಕನ್ನು ಎತ್ತಿಹಿಡಿದು "ಕಲಿಕೆಯ ಹಕ್ಕು ಕಾಯ್ದೆ - ೨೦೦೫" ಸಂವಿಧಾನ ಬದ್ಧವಾಗಿದೆ ಎನ್ನುವ ತೀರ್ಪು ನೀಡಿದೆ.

ತೀರ್ಪು ಎತ್ತಿ ಹಿಡಿದ ಕೆಲ ವಿಷಯಗಳು

ಈ ತೀರ್ಪು ಎತ್ತಿಹಿಡಿದಿರುವ ಕೆಲವು ಮಹತ್ವದ ವಿಷಯಗಳಲ್ಲೊಂದು ಸಮಾನ ಶಿಕ್ಷಣದ ಮಹತ್ವವನ್ನು ಸಾರುವಂತಿದೆ. ತೀರ್ಪು ನೀಡುವಾಗ ಗೌರವಾನ್ವಿತ ನ್ಯಾಯಮೂರ್ತಿಗಳು “moving towards composite classrooms with children from diverse backgrounds, rather than homogeneous and exclusivist schools” ಎಂದು ಹೇಳುವ ಮೂಲಕ ಈ ದಿಕ್ಕಿನೆಡೆಗೆ ಸರ್ಕಾರ ಸಾಗುವುದು ಸರಿಯಾದದ್ದು ಎಂದೂ ಹೇಳಿದಂತಿದೆ. ಕಲಿಕೆಯ ಹಕ್ಕನ್ನು ದಕ್ಕಿಸಿಕೊಡುವುದರ ಜೊತೆಯಲ್ಲಿ ನಾಡಿನ ಏಳಿಗೆಯು ಎಲ್ಲರಿಗೂ ಕಲಿಕೆಯು ಸಿಗುವುದರಿಂದಲೇ ಸಾಧ್ಯ ಎನ್ನುವುದನ್ನು ಎತ್ತಿ ಹಿಡಿದಿದೆ. ಇದೆಲ್ಲಕ್ಕಿಂತಾ ಮುಖ್ಯವಾಗಿ ಸರ್ಕಾರಗಳ ನಿಯಮಾವಳಿಗಳನ್ನು ಸಂವಿಧಾನದ ೧೯(ಜಿ) ಅಂಶವನ್ನು ಬಳಸಿಕೊಂಡು, ತಮಗೆ ಲಂಗುಲಗಾಮು ಇಲ್ಲವೇ ಇಲ್ಲಾ ಎನ್ನುವಂತೆ ನಡೆದುಕೊಳ್ಳುತ್ತಿದ್ದ ಖಾಸಗಿ ಶಾಲೆಗಳಿಗೆ ಕೊಂಚವಾದರೂ ಮೂಗುದಾರ ಹಾಕಿದ ಹಾಗಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣ: ಬದಲಾದ ಹೆಸರು ಮೂಡಿಸಿದ ಪ್ರಶ್ನೆಗಳು!

( BIALನ ಚಿಹ್ನೆ ಹೀಗಾಗಬಹುದೇ? - ಕಾಲ್ಪನಿಕ ಚಿತ್ರ)
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಇನ್ನೇನು "ಕೆಂಪೇಗೌಡ ಅಂತರರಾಷ್ತ್ರೀಯ ವಿಮಾನ ನಿಲ್ದಾಣ" ಎಂದಾಗಲಿದೆ ಎನ್ನುವ ಸುದ್ದಿ ಇತ್ತೀಚಿಗೆ ಪ್ರಕಟವಾಗಿದೆ. ನಮ್ಮೂರಿನ ವಿಮಾನ ನಿಲ್ದಾಣದ ಹೆಸರನ್ನು ನಮಗೆ ಬೇಕಾದಂತೆ ಇಟ್ಕೊಳ್ಳೋ ಅವಕಾಶ ಸಿಕ್ಕಿದ್ದು ಸಂತಸದ ವಿಷಯ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಹೆಸರಿಡುವಂತೆ ದನಿ ಎತ್ತಿ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಗೆ ಇದೊಂದು ಹುಮ್ಮಸ್ಸಿನ ಯಶಸ್ಸು! ಅಭಿನಂದನೆಗಳು!!

ಹೆಸರಿಡಲು ಇರುವ ಅಡ್ಡಿಗಳು!

ನಮಗೆ ಬೇಕಾದ ಹೆಸರುಗಳನ್ನು ನಮ್ಮೂರಿನ ವಿಮಾನ ನಿಲ್ದಾಣಕ್ಕೆ ಇಡಲು ಅದೆಷ್ಟು ಸಮಯ ಬೇಕಾಯಿತು? ಅದೆಷ್ಟು ತೊಡಕುಗಳು ಎನ್ನುವುದನ್ನು ಗಮನಿಸಿ ನೋಡಿದಾಗ ಈ ತೊಡಕುಗಳು ಬರೀ ವಿಮಾನ ನಿಲ್ದಾಣದ ಹೆಸರಿಡುವಲ್ಲಿ ಮಾತ್ರಾ ಆಗಿಲ್ಲಾ ಎನ್ನುವುದು ಕಾಣುತ್ತದೆ. ನಮ್ಮೂರಿನ ಹೆಸರುಗಳ ಬದಲಾವಣೆಯ ಕಥೇನೇ ನೋಡಿ. ಬೆಂಗಳೂರಾಗಲು ನಾವಿನ್ನೂ ಎಷ್ಟು ಕಾಯಬೇಕೋ ಎನ್ನಿಸುವಂತಿದೆ. "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವಾ ಹೂಡಿ" ಬರುವಂತೆ ಆಗಾಗ ಬರುವ ಪತ್ರಿಕಾ ವರದಿಗಳು ನಮ್ಮಲ್ಲಿ ಆಶಾಭಾವನೆಗೆ ಕಾರಣವಾಗುತ್ತಿದೆಯಷ್ಟೇ ಹೊರತು ಇನ್ನೂ ಆಸೆ ಫಲಿಸುತ್ತಿಲ್ಲಾ ಎನ್ನುವಂತಿದೆ... ಪರಿಸ್ಥಿತಿ. ಮೂಲತಃ ಇರುವ ತೊಡಕುಗಳಲ್ಲಿ ಪ್ರಮುಖವಾದದ್ದು.. ನಮ್ಮ ಜನರಲ್ಲಿ ಇನ್ನೂ ಎಚ್ಚರವಾಗಿರದ ಕನ್ನಡತನ! ನಮ್ಮವರೇ ಇಲ್ಲಿನ ಕಟ್ಟಡ, ಯೋಜನೆ, ಬೀದಿ, ಅಣೇಕಟ್ಟೆ, ಉದ್ಯಾನವನ, ಬಡಾವಣೆಗಳಿಗೆ ಹೆಸರಿಡುವಾಗ ಸೂಚಿಸೋದು ಕನ್ನಡೇತರರ ಹೆಸರನ್ನೇ ಅನ್ನುವ ಹಾಗಿದೆ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ಇಂದಿರಾಗಾಂಧಿ ವೃತ್ತ, ದೋನಿ ವೃತ್ತ,  ರಾಜಾಜಿನಗರ, ಜಯಪ್ರಕಾಶನಗರ, ರಾಜೀವ್ ಗಾಂಧಿನಗರ, ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೇಕಟ್ಟೆ, ಇಂದಿರಾಗಾಂಧಿ ಉದ್ಯಾನವನ, ನೆಹರೂ ತಾರಾಲಯ, ದೀನದಯಾಳ ಉಪಾಧ್ಯಾಯ ರಸ್ತೆ, ಅಟಲ್ ಸಾರಿಗೆ, ವಿವೇಕಾನಂದನಗರ, ರಾಮಕೃಷ್ಣ ನಗರ, ಶಾರದಾದೇವಿನಗರ... ಹೀಗೆ! ಅಂದರೆ ರಾಷ್ಟ್ರೀಯ(?) ನಾಯಕರುಗಳ ಹೆಸರನ್ನು ಇಡಲೇಬಾರದು ಎನ್ನುವುದು ನಮ್ಮ ನಿಲುವಲ್ಲ! ಎಲ್ಲೋ ಅಪರೂಪಕ್ಕೊಂದು ಹೀಗೆ ಇಟ್ಟಿದ್ದರೆ ಪರ್ವಾಗಿರಲಿಲ್ಲ! ಆದರೆ ಹಾಗಾಗದೆ ಏನೇ ಹೊಸದು ಬಂದರೂ ಪರಭಾಷಿಕರ ಹೆಸರಲ್ಲೇ ಬರೋದು ಒಳ್ಳೇದಲ್ಲಾ ಅನ್ನೋದು ನಮ್ಮ ನಿಲುವು. ಇನ್ನೂ ನಮ್ಮ ಕನ್ನಡದ ಸಮಾಜವನ್ನೇ ಬೆಳಗಿದ ಅನೇಕ ಕನ್ನಡಿಗ ನಾಯಕರುಗಳ ಹೆಸರುಗಳೇ ಪ್ರಮುಖವಾಗಿ ಬಳಕೆಯಲ್ಲಿ ತಂದಿಲ್ಲದಿರುವಾಗ ಇದ್ಯಾಕಪ್ಪಾ ಈ ಪ್ರವಾಹ ನಮ್ಮ ಮೇಲೆ ಎನ್ನಿಸುತ್ತದೆ! ಇನ್ನು ಎರಡನೆಯ ಅಡ್ಡಿ, ಹೀಗೆ ಹೆಸರನ್ನು ನಾವು ಇಡಬೇಕೆಂದುಕೊಂಡರೂ ಅದಕ್ಕೆ ಒಪ್ಪಿಗೆ ಕೊಡಬೇಕಾದವರು ದೆಹಲಿ ದೊರೆಗಳು! ತಪ್ಪು ಉಚ್ಚರಣೆಯ ನಮ್ಮೂರ ಹೆಸರುಗಳನ್ನು ಬದಲಾಯಿಸಲು ನಮಗೆ ಸ್ವಾತಂತ್ರವಿಲ್ಲ! ನಮ್ಮೂರ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕೆಂದರೆ ಕೇಂದ್ರ ಅನುಮತಿ ಕೊಡಬೇಕು! ಇದೆಲ್ಲಾ ನೋಡಿದಾಗ ಭಾರತದಲ್ಲಿ ರಾಜ್ಯಗಳಿಗೆ ಇಂಥಾ ವಿಷಯಗಳಲ್ಲಾದರೂ ಸ್ವಲ್ಪ ಅಧಿಕಾರ ಇರಬೇಕು ಅನ್ನಿಸೋಲ್ವಾ ಗುರೂ!

"ಸಕಾಲ" - ಸರ್ಕಾರಿ ಕೆಲಸ, ಆಗಲಿ ಇನ್ನು ಸುಲಭ!


ರಾಜ್ಯದ ಆಡಳಿತದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯ ನಿರೀಕ್ಷೆಯನ್ನು ಹುಟ್ಟು ಹಾಕಿದಂತಹ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ - ೨೦೧೧ ಇದೀಗ "ಸಕಾಲ" ಯೋಜನೆಯಾಗಿ ಏಪ್ರಿಲ್ ೨ರಿಂದ ರಾಜ್ಯಾದ್ಯಂತ ಜಾರಿಯಾಗಿದೆ. ಒಟ್ಟು ಹನ್ನೊಂದು ಇಲಾಖೆಗಳ ಒಂದುನೂರಾ ಐವತ್ತೊಂದು ಸೇವೆಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಡುವ ಬದ್ಧತೆಯ ಘೋಷಣೆಯು ಜನರಲ್ಲಿ ಹೊಸ ಭರವಸೆ ಹುಟ್ಟಲು ಕಾರಣವಾಗಿದೆ. ಈಗಾಗಲೇ ಇಂತಹ ಕಾಯ್ದೆಯನ್ನು ಜಾರಿಮಾಡಿರುವ  ಮಧ್ಯಪ್ರದೇಶ, ಬಿಹಾರಗಳ ಸಾಲಿಗೆ ರಾಜ್ಯವೂ ಸೇರಿದ್ದು, ಕರ್ನಾಟಕದ ಭಾರತೀಯ ಜನತಾಪಕ್ಷದ ಸರ್ಕಾರ ನಿಜಕ್ಕೂ ಒಂದು ಸಾರ್ಥಕವಾದ ಕೆಲಸಾ ಮಾಡಿ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸರ್ಕಾರಿ ಕೆಲಸ ದೇವರ ಕೆಲಸ!

ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ಬೇಕಾದಷ್ಟು ಕೆಲಸಗಳಾಗಬೇಕಿರುತ್ತವೆ. ಸಾಮಾನ್ಯವಾಗಿ ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ದೇವರೇ ಬಂದು ಮಾಡಿಕೊಡಬೇಕಾದ ಕೆಲಸ ಎಂದು ವ್ಯಂಗ್ಯವಾಡುವಷ್ಟು ನಿಧಾ...ನವಾಗಿ ನಡೆಯುತ್ತದೆ ಎನ್ನುವುದು ಜನರ ದೂರಾಗಿತ್ತು. ಒಂದು ಕಡತ ಒಬ್ಬ ಅಧಿಕಾರಿಯಿಂದ ಮುಂದಿನ ಅಧಿಕಾರಿಯ ಟೇಬಲ್ ತಲುಪಬೇಕೆಂದರೆ ಅದೆಷ್ಟು ಸಮಯ ಬೇಕಾಗುತ್ತೋ ಎಂದು ಜನ ನಿರಾಸೆಯಿಂದ ನಿಟ್ಟುಸಿರು ಬಿಡಬೇಕಾದ ಕೆಟ್ಟಕಾಲ ಮುಗಿಯೋ ಒಳ್ಳೆಕಾಲ ಇನ್ಮುಂದೆ ಬರಲಿದೆ ಎನ್ನುವ ಭರವಸೆಯು, ಈ ಕಾಯ್ದೆಯ ಕಾರಣದಿಂದಾಗಿ ಜನರಲ್ಲಿ ಮೂಡಿದೆ.

ಈ ಕಾಯ್ದೆಯಡಿ ಬರುವ ಹನ್ನೊಂದು ಇಲಾಖೆಗಳು ತಾವು ನೀಡುವ ಪ್ರತಿಯೊಂದು ಸೇವೆಗೂ ಇಂತಿಷ್ಟೇ ಸಮಯ ಸಾಕು ಎಂದು ಕಾಲಮಿತಿಯನ್ನು ಹಾಕಿಕೊಂಡಿದ್ದಾವೆ. ಇಡೀ ಕಾಯ್ದೆಯು "ಮಾಹಿತಿ ಹಕ್ಕು ಕಾಯ್ದೆ - ೨೦೦೫"ರ ಮುಂದುವರಿಕೆಯಂತೆ ಕಾಣುತ್ತಿದೆ. ಜನರಿಗೆ ಯಾವುದೇ ಇಲಾಖೆ ತಮ್ಮ ಕೆಲಸಗಳನ್ನು ಮಾಡಿಕೊಡುವುದು  "ಆ ಇಲಾಖೆಯ ನೌಕರರು ನಮಗೆ ಮಾಡುವ ಉಪಕಾರವಲ್ಲಾ" ಎನ್ನುವ ಸಂದೇಶವನ್ನು ನೀಡುತ್ತಿರುವ ಸಕಾಲದಲ್ಲಿ, ಜನರು ತಾವು ಬಯಸಿದ ಸೇವೆ ಇಂತಿಷ್ಟೇ ಸಮಯದಲ್ಲಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದನ್ನು ಎತ್ತಿ ಹಿಡಿಯಲಾಗಿದೆ. ಯಾವುದೇ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಸಹಕಾರಿಯಾಗಿರುವ ಸಕಾಲ ವ್ಯವಸ್ಥೆಯಲ್ಲಿ ಜನರು ಬಯಸಿದ ಸೇವೆಯನ್ನು ಪಡೆಯುವಲ್ಲಿ ತಡವಾದಲ್ಲಿ ದೂರು ನೀಡುವ ವ್ಯವಸ್ಥೆಯೂ ಇದೆ. ನಿಗದಿತ ಸಮಯಕ್ಕಿಂತಾ ಹೆಚ್ಚು ಸಮಯ ತೆಗೆದುಕೊಂಡಲ್ಲಿ ದಿನವೊಂದಕ್ಕೆ ೨೦ ರೂಪಾಯಿ ಪರಿಹಾರವಾಗಿ ನೀಡಬೇಕಾದ ಹೊಣೆಗಾರಿಕೆಯನ್ನೂ ಸಂಬಂಧಿಸಿದ ನೌಕರರಿಗೆ ಹೊರಿಸಲಾಗಿದೆ. ಮೇಲ್ಮನವಿ, ದೂರು ಇತ್ಯಾದಿಗಳನ್ನು ಸಲ್ಲಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಶಿಸ್ತನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಇದನ್ನು ಜಾರಿ ಮಾಡಲು ಕಾರಣವಾದ ಸರ್ಕಾರಕ್ಕೆ ಅಭಿನಂದನೆಗಳು! ಜನರು ಕಟ್ಟುವ ತೆರಿಗೆ ಹಣದಿಂದಲೇ ರೂಪುಗೊಳ್ಳುವ ಇಂತಹ ಯೋಜನೆಗಳು ಯಶಸ್ವಿಯಾದರೆ ಸರ್ಕಾರವು ಜನರಿಂದ ತೆರಿಗೆ ಕಟ್ಟಿಸಿಕೊಂಡ ಋಣವನ್ನು ಸ್ವಲ್ಪಮಟ್ಟಿಗೆ  ತೀರಿಸಿಕೊಂಡಂತಾಗುತ್ತದೆ. ಅದಕ್ಕೇ ಸರ್ಕಾರಿ ಕೆಲಸ ದೇವರ ಕೆಲಸವಾಗದೆ ಜನರ ಕೆಲಸ ಎನ್ನುವಂತಾಗಬೇಕು ಎನ್ನುವುದು ಸರಿಯಾಗಿದೆ!

ಸಕಾಲದ ಸರಿ ಜಾರಿಯಾಗಲಿ!

ಸಕಾಲ ಕುರಿತಾಗಿ ಮಾಹಿತಿ ಪಡೆಯಲು ಮಿಂಬಲೆತಾಣವನ್ನು ರೂಪಿಸಲಾಗಿದೆ. ಈ ತಾಣ ತೆರೆದುಕೊಳ್ಳುವುದೇ ಇಂಗ್ಲೀಶಿನಲ್ಲಿ! ಪಕ್ಕದಲ್ಲಿ ಕೆಟ್ಟ ಕನ್ನಡದಲ್ಲಿ ಒಂದು "ಕನ್ನಡ ಅವತರಣ"ವಿದೆ. ಅಲ್ಲಿ "ಸೆವೆಗಳ ಸ್ಥಾನ-ಮಾನ ಪರಿಶಿಲಿಸಿ" ಎಂದು ಕೂಡಾ ಬರೆಯಲಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಹೊಂದಿರುವ ಸರ್ಕಾರ, ತನ್ನ ತಾಣದಲ್ಲಿ ಇಂತಹ ನಿರ್ಲಕ್ಷ್ಯ ತೋರಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಿಜಕ್ಕೂ ತಾನು ರೂಪಿಸಿರುವ ಜನಪರವಾದ ಕಾಯ್ದೆ/ ಯೋಜನೆ ಜನರನ್ನು ಮುಟ್ಟಬೇಕಾದರೆ ಜನರ ಭಾಷೆಯಲ್ಲಿ "ಸರಿಯಾಗಿ" ಇರಬೇಕಾದ್ದು ಬಹುಮುಖ್ಯ ಎನ್ನುವುದನ್ನು ಸಂಬಂಧಿಸಿದ ಅಧಿಕಾರಿಗಳು ಮನಗಂಡರೆ ಒಳ್ಳೆಯದು. ಅನ್ನ ಅರೆ ಬೆಂದಿರುವುದಕ್ಕೆ ಸಾಕ್ಷಿಯಾದ ಅಗುಳಿನಂತೆ ಈ ತಾಣದ ಮುಂಪಟ ಇರದಿರಲಿ ಎನ್ನುವುದು ನಮ್ಮ ಆಶಯ. ಅತ್ಯುತ್ತಮ ಯೋಜನೆಗಳೂ ಕೂಡಾ ಯಶಸ್ವಿಯಾಗಲು ಅತ್ಯುತ್ತಮ ರೀತಿಯಲ್ಲಿ ಜಾರಿಗೊಳ್ಳಬೇಕಾಗುತ್ತದೆಯಾದ್ದರಿಂದ ಸರ್ಕಾರ ಈಗಿರುವ ಕುಂದುಕೊರತೆಗಳನ್ನು ನಿವಾರಿಸಿ ಸಕಾಲವನ್ನು ಪರಿಣಾಮಕಾರಿಯಾಗಿ ಮಾಡಲಿ. ಹೌದಲ್ವಾ ಗುರೂ?

ತಂತ್ರಜ್ಞಾನ ಕನ್ನಡಕ್ಕೆ ಬದಲಿಯಲ್ಲ!

ನೀವು ಸುಮ್ಮನೆ ಗಮನಿಸಿ ನೋಡಿ... ಬೆಂಗಳೂರು ಟ್ರಾಫಿಕ್ ಪೊಲೀಸಿನವರದ್ದೊಂದು ಮಿಂಬಲೆ ತಾಣವಿದೆ. ಅಲ್ಲೂ ಜನರಿಗೆ ಅನುಕೂಲವಾಗುವಂತಹ ನಾನಾ ಸೇವೆಗಳು ತಂತ್ರಜ್ಞಾನದ ಕಾರಣದಿಂದಾಗಿ ದೊರಕಿಸಿಕೊಡಲಾಗಿದೆ. ದುರಂತವೆಂದರೆ ಅಲ್ಲಿ ಕನ್ನಡಕ್ಕೆ ಮಾತ್ರಾ ಮನ್ನಣೆಯಿಲ್ಲ! ಕನ್ನಡದಲ್ಲಿ ಸೇವೆ ಕೊಡ್ರೀ ಅಂದ್ರೆ ಆ ತಂತ್ರಜ್ಞಾನ ಇಲ್ಲಾ, ಈ ಮೊಬೈಲ್ ಕಂಪನಿಯವರು ಕನ್ನಡ ಕೊಡ್ತಿಲ್ಲಾ.. ಇಂಥಾ ಅದ್ಭುತ ಸೌಕರ್ಯ ಕೊಡ್ತಿದೀವಿ, ಇಲ್ಲೂ ಕನ್ನಡ ಕನ್ನಡಾ ಅಂತೀರಾ... ಹಾಳೂ ಮೂಳೂ ಅನ್ನೋ ನೆಪಗಳನ್ನು ಹೇಳ್ತಾರೆ. ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಿಂಬಲೆಯಲ್ಲೂ ಇದೇ ಗೋಳು! ಯಾಕ್ರೀ ಟಿಕೆಟ್ ಕನ್ನಡದಲ್ಲಿಲ್ಲಾ ಅಂದ್ರೆ ತಂತ್ರಜ್ಞಾನ ಇಲ್ಲಾ ಅಂತಾರೆ! ಕನ್ನಡದೋರು ಆರೂವರೆ ಕೋಟಿ ಇದ್ದೀವಿ ಇದ್ದೀವಿ ಅಂತಾ ಹೇಳ್ಕೊಳ್ಳೋದು ಯಾಕೆ? ಇಷ್ಟು ಜನಸಂಖ್ಯೆ ಒಂದು ತಂತ್ರಜ್ಞಾನ ರೂಪಿಸಿ ಜಾರಿಗೆ ತರೋರಿಗೆ ಸಾಲದಾ? ನಮ್ಮ ಉದ್ದೇಶ ಇಂಥದ್ದು ನಮಗೆ ಕನ್ನಡದಲ್ಲಿ ಸೇವೆ ಬೇಕು ಅಂತಾ ನಮ್ಮ ರಾಜ್ಯದ ಸಂಸ್ಥೆಗಳು, ಇಲಾಖೆಗಳು ತಂತ್ರಜ್ಞಾನಾನಾ ತರಕ್ ಆಗಲ್ವಾ? ಒಂದಂತೂ ನಿಜಾ! ಕನ್ನಡ ಕಡೆಗಣಿಸಿ ಕನ್ನಡವಿಲ್ಲದೆ ಕೊಡುವ ಯಾವ ತಂತ್ರಜ್ಞಾನವೂ ಕನ್ನಡದೋರಿಗೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ! ತಂತ್ರಜ್ಞಾನಾ ಅನ್ನೋದು ಕನ್ನಡಾನ ಬಳಸದೆ ಇರೋಕೆ ಒಂದು ನೆಪವಾಗೋದನ್ನು ಎಂದಿಗೂ ಒಪ್ಪಕ್ಕಾಗಲ್ಲಾ ಗುರೂ! ಸಕಾಲವೂ ಕೂಡಾ ತನ್ನ ಮೊದಲ ಆದ್ಯತೆಯನ್ನು ಕನ್ನಡಕ್ಕೆ ನೀಡಿದಾಗ ಮಾತ್ರಾ ಅದು ಯಶಸ್ವಿಯಾಗುತ್ತದೆ ಮತ್ತು ಸಾರ್ಥಕವಾಗುತ್ತದೆ!

ಹೊಸ ಹೊತ್ತಗೆಮನೆ " ಮುನ್ನುಡಿ" - ಕನ್ನಡಕ್ಕೊಂದು ಮರು ಪರಿಚಯ!


ಬೆಂಗಳೂರಿನ ಬಸವನಗುಡಿಗೆ ಖಳೆ ತರೋಕೆ ಅಂತಾನೆ ಇಲ್ಲೊಂದು ಹೊಸ ಅಂಗಡಿ ಶುರುವಾಗಿದೆ. ಇಡೀ ಕನ್ನಡನಾಡಿನಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಕನ್ನಡದ ಹೈಟೆಕ್ ಹೊತ್ತಗೆಮನೆಯನ್ನು ಶುರುಮಾಡಿದಾರೆ! ಸಂಪೂರ್ಣ ಹವಾನಿಯಂತ್ರಿತ ಕಟ್ಟಡದಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಹೊತ್ತಗೆಗಳನ್ನು ಕಂಡಾಗ ಯಾವುದೋ ಅಂತರರಾಷ್ಟ್ರೀಯ ಲೈಬ್ರರಿಯನ್ನು ಹೊಕ್ಕಂತಾಗುತ್ತದೆ... "ಮುನ್ನುಡಿ" ಎಂಬ ಹೆಸರಿನ ಈ ಹೊತ್ತಗೆಮನೆಯ ಹೆಸರಿನ ಮುಂದೆ "ಕನ್ನಡಕ್ಕೊಂದು ಮರು-ಪರಿಚಯ" ಎಂದು ಬರೆಯಲಾಗಿದೆ. ಎಲ್ಲಿದೆ ಈ ಮಳಿಗೆ? ಏನಿದೆ ಇದರಲ್ಲಿ? ಇದರಲ್ಲಿ ಏನೇನು ಸವಲತ್ತುಗಳಿವೆ? ನೋಡೋಣ... ಬನ್ನಿ!

ಹೊಸಬಗೆಯ ಗ್ರಂಥಾಲಯ ಏರ್ಪಾಟಿಗಿದು ಮುನ್ನುಡಿ!

ಈ ಮಳಿಗೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ಅಭಿರುಚಿಗೆ ತಕ್ಕಂತ ನೂರಾರು ಹೊತ್ತಗೆಗಳಿವೆ. ಚಂದನೆಯ ಕಟ್ಟು ಹಾಕಲ್ಪಟ್ಟ ಈ ಹೊತ್ತಗೆಗಳನ್ನು ಕೈಯ್ಯಲ್ಲಿ ಹಿಡಿಯಲೇ ಖುಶಿಯಾಗುವಂತೆ ಇಟ್ಟುಕೊಂಡಿದ್ದಾರೆ. ನೂರುರೂಪಾಯಿ ಮರುಪಾವತಿಸಬಹುದಾದ ಠೇವಣಿಯ ಜೊತೆ, ನೋಂದಣಿ ಶುಲ್ಕ ನೂರು ರೂಪಾಯಿ ಮತ್ತು ಆರಿಸಿಕೊಂಡ ಯೋಜನೆಯ ಶುಲ್ಕವನ್ನು ಕಟ್ಟಿ ಚಂದಾದಾರರಾಗಿಬಿಟ್ಟರೆ ಸಾಕು... ಈ ಎಲ್ಲಾ ಹೊತ್ತಗೆಗಳೂ ನಮ್ಮ ಬೆರಳತುದಿಗೇ ಸೋಕಿಬಿಡುತ್ತವೆ! ತಿಂಗಳ, ಅರ್ಧವರ್ಶದ, ಒಂದುವರ್ಶದ ಶುಲ್ಕವನ್ನು ಕಟ್ಟಬೇಕು. ನಮಗೆ ಒಟ್ಟಿಗೆ ಎಷ್ಟು ಹೊತ್ತಗೆಗಳು ಬೇಕು ಎನ್ನುವುದರ ಮೇಲೆ ಬೇರೆ ಬೇರೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.

ಬೇಕಿರೋ ಹೊತ್ತಗೆ ಮನೆಬಾಗಿಲಿಗೇ!

ನೋಂದಣಿ ಅರ್ಜಿಯನ್ನು ಕನ್ನಡದಲ್ಲೇ ಮಾಡ್ಸಿದಾರೆ. ಇಲ್ಲಿ ಒಮ್ಮೆ ನೋಂದಣಿ ಪಡೆದುಕೊಂಡಮೇಲೆ ಬೇಕಾದ ಹೊತ್ತಗೆಯನ್ನು ಆರಿಸಿಕೊಂಡು ಮನೆಗೆ ತರಬಹುದು. ಅದೂ ನಾವಾಗೆ ಅಲ್ಲಿರುವ ಕಂಪ್ಯುಟರ್‌‍ನ ಮುಂದೆ ನಮ್ಮ ನೋಂದಣಿ ಚೀಟಿ ಮತ್ತು ಆರಿಸಿಕೊಂಡಿರುವ ಹೊತ್ತಗೆಯನ್ನು ಹಿಡಿದರೆ ಆಯ್ತು. ತಾನೇ ತಾನಾಗಿ ವಿವರಗಳನ್ನು ಬರೆದುಕೊಂಡುಬಿಡುತ್ತೆ. ಅಷ್ಟಾದರೆ ಮುಗೀತು. ಪುಸ್ತಕ ತೊಗೊಂಡು ಮನೆಗೆ ಬಂದುಬಿಡ್ಬೋದು! ಇನ್ನು ವಾರ್ಶಿಕ ಚಂದಾದಾರರಾದರಂತೂ ಬೇಕಾದ ಹೊತ್ತಗೆಯನ್ನು ಮನೇಲಿ ಕುಳಿತೇ ಆರಿಸಿಕೊಳ್ಳಬಹುದು! ಹಾಗೆ ಆರಿಸಿಕೊಂಡ ಹೊತ್ತಗೆಯನ್ನು ಮನೆಬಾಗಿಲಿಗೇ ತಲುಪಿಸುತ್ತಾರೆ. ನೀವು ಹೊತ್ತಗೆಯನ್ನು ಓದಿ ಮುಗಿಸೋ ತನಕ ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಬಹುದು. ತಡವಾಗಿ ಹಿಂತಿರುಗಿಸಿದ್ದಕ್ಕೆ ದಂಡ ಗಿಂಡಾ ಏನಿರಲ್ಲಾ!! ಹಾಳು ಮಾಡಿದರೆ ಮಾತ್ರಾ ನಷ್ಟ ತುಂಬಿಕೊಡಬೇಕಾಗುತ್ತೆ!

ಈ ಹೊತ್ತಗೆಮನೆಯು ಸ್ಟ್ರಾಟಾ ರೀಟೇಲ್ ಎನ್ನುವ ಸಂಸ್ಥೆಯ ಒಂದು ಮುಂದಾಳ್ತನದಲ್ಲಿ ಆರಂಭವಾಗಿರುವ ಯೋಜನೆ.  ಇಂಥದ್ದೇ ಇಂಗ್ಲೀಶ್ ಹೊತ್ತಗೆಗಳ ೬೨ ಮಳಿಗೆಗಳನ್ನು ಭಾರತದಾದ್ಯಂತ ಹೊಂದಿರುವ ಇವರು ಬೆಂಗಳೂರೊಂದರಲ್ಲೇ ೩೨ ಮಳಿಗೆಗಳನ್ನು ಹೊಂದಿದ್ದಾರೆ. ಕನ್ನಡದ ಹೊತ್ತಗೆಮನೆಗೆ ಇರುವ ಬೇಡಿಕೆಯನ್ನು ಗಮನಿಸಿ ಕನ್ನಡದ್ದೇ ಹೊತ್ತಗೆಗಳನ್ನು ಪೂರೈಸುವ "ಮುನ್ನುಡಿ"ಯನ್ನು ಆರಂಭಿಸಿ ಹೊಸದೊಂದು ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಬಸವನಗುಡಿಯಲ್ಲಿ ಮೊದಲನೇ ಮಳಿಗೆಯನ್ನು ತೆರೆದಿರುವ ಇವರಿಗೆ ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ಶಾಖೆಗಳನ್ನು ಆರಂಭಿಸುವ ಉದ್ದೇಶವಿದೆ. ಸದ್ಯದಲ್ಲೇ ವಿಜಯನಗರದಲ್ಲೂ ಶುರು ಮಾಡ್ತಾರಂತೆ! ತಿಂಗಳೊಪ್ಪತ್ತಿನಲ್ಲಿ ಇದರ ಮಿಂಬಲೆತಾಣವೂ ಶುರುವಾಗಲಿದೆಯಂತೆ...

ಎಲ್ಲಿದೆ ಮುನ್ನುಡಿ?

ಬಸವನಗುಡಿಯಲ್ಲಿ ಕೃಷ್ಣರಾವ್ ಉದ್ಯಾನವನವಿದೆಯಲ್ಲಾ, ಅದರ ದಕ್ಷಿಣದ ಗೇಟಿನ ಎದುರು ಯಡಿಯೂರು ಕೆರೆ ಕಡೆಗೆ ಹೋಗುವ ಒಂದು ರಸ್ತೆ ಇದೆ. ಈ ರಸ್ತೆಗೆ  ದಿವಾನ್ ಮಾಧವರಾವ್ ರಸ್ತೆ ಅಂತಾರೆ. ಇಲ್ಲಿ ಎಡಕ್ಕೆ ಎರಡನೇದೋ ಮೂರನೇದೋ ಕಟ್ಟಡದಲ್ಲಿ ಮುನ್ನುಡಿ ಇದೆ.

ಇದರ ವಿಳಾಸ ಹೀಗಿದೆ:
ಮುನ್ನುಡಿ ಗ್ರಂಥಾಲಯ,
ನೆಲಮಹಡಿ, ನಂ ೩/೩-೧, ದಿವಾನ್ ಮಾಧವರಾವ್ ರಸ್ತೆ,
ಸೌತ್ ಕ್ರಾಸ್ ರಸ್ತೆ, ಬಸವನಗುಡಿ,
ಬೆಂಗಳೂರು - ೫೬೦ ೦೦೪ ದೂರವಾಣಿ :೦೮೦ - ೪೦೯೩೭೭೯೩.
ಕನ್ನಡ ಹೊತ್ತಗೆಮನೆಯ ಕ್ಷೇತ್ರಕ್ಕೆ ಹೊಸತನದ ತಂಗಾಳಿಯಂತಿರುವ ಮುನ್ನುಡಿಗೆ ನಮ್ಮ ಅಭಿನಂದನೆಗಳು. ಇನ್ನೂ ಏನ್  ಯೋಚುಸ್ತಿದೀರಾ ಗುರೂ? ಬೇಗ ಹೋಗಿ ಸದಸ್ಯತ್ವ ಪಡೆದುಕೊಳ್ಳಿ (ಸೋಮವಾರ ರಜೆ). ಹೊಸಪ್ರಯತ್ನಾನ ಮೆಚ್ಚಿ ಪ್ರೋತ್ಸಾಹಿಸೋದ್ರು ಜೊತೆಗೆ ಹೈಟೆಕ್ ಕನ್ನಡದ ಹೊತ್ತಗೆಮನೆಯ ಮಜಾ ಸವಿಯಿರಿ!
Related Posts with Thumbnails