![]() |
| (ಕೃಪೆ: ಲೂಸಿಯಾ ಮಿಂದಾಣ) |
ಲೂಸಿಯಾ: ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ.
ಹೋಮ್ ಟಾಕೀಸು: ಚಿತ್ರರಂಗದಲ್ಲೊಂದು ಬದಲಾವಣೆಯ ಸಣ್ಣ ಎಲೆ ಅಲುಗಾಡುತ್ತಿದೆ!
ಕನ್ನಡಿಗರಿಗೆ ಕೆಲಸ: ರಾಜ್ಯಸರ್ಕಾರದಿಂದ ಒಂದೊಳ್ಳೇ ಹೆಜ್ಜೆ!
| (ಫೋಟೋ: http://sadanandagowda.com/news-events/cm-performed-bhumi-puja/) |
ಅನ್ನದಾತರನ್ನೇ ಕಡೆಗಣಿಸಿತೇ ಕನ್ನಡ ಚಿತ್ರರಂಗ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ, ಕಳೆದ ಕೆಲವು ದಿನಗಳಿಂದ ಎದ್ದಿರೋ ಕೋಲಾಹಲ ನೋಡ್ತಾಯಿದ್ರೆ ಈ ಚಿತ್ರರಂಗದ ಒಳಗಿನ ಮಂದೀನೇ ಕನ್ನಡ ಚಿತ್ರರಂಗವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಿರೋ ಹಾಗೆ ಕಾಣ್ತಾಯಿಲ್ಲಾ ಗುರೂ! ಇಲ್ಲಿರೋ ಜನಾ ಇಡೀ ನಾಡುನ್ನ, ಉದ್ಯಮಾನಾ ಮತ್ತು ಸರ್ಕಾರಾನಾ ಬ್ಲಾಕ್‍ಮೇಲ್ ತಂತ್ರ ಉಪಯೋಗಿಸಿ ಆಡುಸ್ತಾ ಇದಾರಾ ಅನ್ನೋ ಅನುಮಾನ ಜನರಲ್ಲಿ ಇಷ್ಟೊತ್ತಿಗೆ ಮೂಡಿರಲೂಬಹುದು. ಒಟ್ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತಪ್ಪು ನಡೆ ಇಡ್ತಿದ್ಯಾ? ಇಂಥಾ ನಡೆಗಳಿಂದಾಗಿ ಇಡೀ ಚಿತ್ರೋದ್ಯಮ ಮತ್ತು ಕನ್ನಡನಾಡಿಗೇ ಹಾನಿ ಮಾಡ್ತಿದ್ಯಾ? ಅನ್ನೋ ಪ್ರಶ್ನೆಗಳು ಜನರಲ್ಲಿ ಹುಟ್ಕೊಂಡಂಗಿದೆ ಗುರೂ!
ಚಿತ್ರರಂಗ ಕಡೆಗಣಿಸಿರೋ ಅನ್ನದಾತರು!
ಹೌದೂ, ಮಾತೆತ್ತುದ್ರೆ ಅನ್ನದಾತರು, ಅಭಿಮಾನಿ ದೇವರೂ ಅಂತಾ ಜನರನ್ನು ಅಟ್ಟಕ್ಕೇರಿಸೋ ಈ ಜನ, ನಿಜಕ್ಕೂ ಈ ಇಡೀ ಪ್ರಕರಣದಲ್ಲಿ ಜನರ `ಆಯ್ಕೆಯ ಸ್ವಾತಂತ್ರ್ಯಾ'ನ ಮತ್ತು ಜನರು ತಮ್ಮ `ತಾಯ್ನುಡಿಯಲ್ಲಿ ಮನರಂಜನೆ' ಪಡೆಯೋ ಹಕ್ಕುನ್ನ ನಿರಾಕರುಸ್ತಾನೆ ಬಂದಿದಾರೆ. ಪರಭಾಷಾ ಚಿತ್ರಗಳ ಬಗ್ಗೆ, ಡಬ್ಬಿಂಗ್ ಬಗ್ಗೆ ಕಿಡಿ ಕಾರುವ ಸದರಿ ವಾಣಿಜ್ಯ ಮಂಡಲಿಯವನ್ನೂ, ಇವರನ್ನು ಬೆಂಬಲಿಸೋ ಚಿತ್ರರಂಗದವರನ್ನೂ "ಅನ್ನದಾತರೂ, ಅಭಿಮಾನಿ ದೇವರೂ - ಅಂತಾ ನೀವು ಪದೇ ಪದೇ ಹೊಗಳಿ ಅಟ್ಟಕ್ಕೇರಿಸುವ ಕನ್ನಡ ಪ್ರೇಕ್ಷಕನಿಗೆ ಏನು ಬೇಕು? ಏನು ಬೇಡಾ? ಅಂತಾ ಯಾವತ್ತಾದ್ರೂ ಯೋಚಿಸಿದ್ದೀರಾ" ಅಂತಾ ಕೇಳಬೇಕಾಗಿದೆ. "ಹೊಲಸು ರಿಮೇಕುಗಳು, ಕೆಟ್ಟದಾಗಿ ಕನ್ನಡ ಉಲಿಯುವ ಹಾಡುಗಾರರು, ಇಲ್ಲಿ ಅವಕಾಶಕ್ಕಾಗಿ ಕಾದಿರುವ ಪ್ರತಿಭಾವಂತರನ್ನು ಕಡೆಗಣಿಸಿ ಕರೆತರೋ ನಾಯಕಿಯರು, ನಟರುಗಳು ಇವನ್ನೆಲ್ಲಾ ಯಾಕೆ ತಂದಿರಿ ಅಂತಾ ನಾವೇನೂ ಕೇಳಿಲ್ಲಾ… ನಮಗೆ ಇಷ್ಟವಾದಾಗ ಗೆಲ್ಸಿದೀವಿ, ಚೆನ್ನಾಗಿಲ್ಲದಿದ್ದಾಗ ಸೋಲಿಸಿದ್ದೀವಿ... ಜನಕ್ ಬೇಡದಿದ್ರೆ ಮಾರುಕಟ್ಟೆ ಗೆಲ್ಲಕ್ ಆಗಲ್ಲಾ" ಅನ್ನೋದೇ ದಿಟವಾದ ಮಾತು. ಆದರೆ ಜನರಿಗೆ ಆಯ್ಕೆಯ ಸ್ವಾತಂತ್ರ ಇರಬೇಕು, ಅವರಿಗೆ ಬೇಕಾದ್ದನ್ನು ಪಡೆದುಕೊಳ್ಳುವ, ಬೇಡದ್ದನ್ನು ನಿರಾಕರಿಸುವ ಹಕ್ಕು ಇರಬೇಕು ತಾನೆ? 500 ಸಿನಿಮಾ ಸರದಿಯಲ್ಲಿ ಡಬ್ ಆಗಿ ಕಾಯ್ತಿದೆ ಅಂದ್ರೆ… ಬರಲಿ ಬಿಡಿ. ಜನ ಬೇಕಾದ್ದನ್ನು ಹಿಟ್ ಮಾಡ್ತಾರೆ, ಬೇಡದಿದ್ರೆ ಡಬ್ಬಾ ಸೇರುಸ್ತಾರೆ. ವರ್ಷಕ್ಕೆ ನಾಲ್ಕೇ ಸಿನಿಮಾ ಹಿಟ್ ಮಾಡ್ಬೇಕು ಅಂತಾ ಜನರೇನೂ ಆಣೆ ಮಾಡಿಲ್ವಲ್ವಾ? ಚೆನ್ನಾಗಿರೋ ಸಿನಿಮಾ ಕನ್ನಡದೋರು ತೆಗೆದರೂ ಓಡುತ್ತವೆ. ಹಾಗಾಗಿ ಇದ್ದಕ್ಕಿದ್ದಂತೆ ಹತ್ತು ಪರಭಾಷೆಯ ಚಿತ್ರಗಳು ಡಬ್ ಆಗಿ ಬಂದು ಚೆನ್ನಾಗಿ ಓಡುದ್ರೆ ಕನ್ನಡ ಚಿತ್ರಾನ ಜನ ನೋಡಲ್ಲಾ ಅನ್ನೋ ಭಯಾ ಏಕೆ? ಹೊಸಬರ ಅನೇಕ ಸಿನಿಮಾಗಳು ಕೂಡಾ ಯಶಸ್ವಿಯಾಗುತ್ತಿರೋದು ಆ ಚಿತ್ರಗಳು ಚೆನ್ನಾಗಿವೆ ಅನ್ನೋ ಒಂದೇ ಕಾರಣಕ್ಕ ತಾನೇ? ಇಷ್ಟಕ್ಕೂ ಗ್ರಾಹಕನಿಗೆ ಇರಬೇಕಾದ ಆಯ್ಕೆಯ ಸ್ವಾತಂತ್ರವನ್ನು ನಿರಾಕರಿಸೋ ಹಕ್ಕನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗಾಗಲೀ ಚಿತ್ರರಂಗಕ್ಕಾಗಲೀ ಕೊಟ್ಟೋರು ಯಾರು? ಇವರು ‘ಚಿತ್ರರಂಗದ ಕಾರ್ಮಿಕರ ಹಿತ’ ಅನ್ನೋ ವಾದ ಮುಂದಿಟ್ಟುಕೊಂಡು ಕನ್ನಡದ ಗ್ರಾಹಕರ ಹಿತವನ್ನು ಕಡೆಗಣಿಸೋದು ಸರೀನಾ… ಗುರೂ?
ನೆನಪಿರಲಿ...
ಇಷ್ಟೆಲ್ಲಾ ಆಗ್ತಿದ್ರೂ ಕನ್ನಡ ಚಲನಚಿತ್ರರಂಗದವರು ತಾವು ಸ್ವತಂತ್ರವಾಗಿ ಬದುಕಬೇಕು ಅನ್ನೋ ಮನಸ್ಥಿತೀಲೇ ಇದ್ದಂಗಿಲ್ಲಾ. ಸಿನಿಮಾ ತೆಗೆದರೆ ಸಬ್ಸಿಡಿ, ತೆರಿಗೆ ವಿನಾಯ್ತಿ ಅಂತಾ ಸರ್ಕಾರದ ಕಡೆ ಊರುಗೋಲಿಗಾಗಿ ನೋಡೋದನ್ನು ಇನ್ನಾದ್ರೂ ಬಿಡಬೇಕಾಗಿದೆ. ಇದನ್ನು ಒಂದು ಇಂಡಸ್ಟ್ರಿ ಅಂತಾ ಪರಿಗಣಿಸಿ, ತಮ್ಮ ಸಿನಿಮಾನ ಒಂದು ಮಾರುಕಟ್ಟೆಯನ್ನು ಗೆಲ್ಲಲಿ ಅಂತಾ ಬಿಡಬೇಕಾದ ಉತ್ಪನ್ನ ಎಂದು ಪರಿಗಣಿಸಬೇಕಾಗಿದೆ. ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು - ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಇದು ಬಡಕಲು, ಇದು ಅಳಿವಿನಂಚಿನಲ್ಲಿದೆ - ಅಂತ ಅಂದಂದೇ ಸಬ್ಸಿಡಿ ರೂಪದಲ್ಲೂ, ವಿನಾಯ್ತಿ ರೂಪದಲ್ಲೂ ಪಡೆದುಕೊಳ್ತಾನೆ ಇದ್ರೆ ಯಾವಾಗ ನಮ್ಮ ಚತ್ರರಂಗ ತನ್ನ ಕಾಲಮೇಲೆ ತಾನು ನಿಲ್ಲುವುದು? ಹೀಗೆ ಊರುಗೋಲನ್ನೇ ನಂಬಿರೋ ಚಿತ್ರರಂಗ ಹೇಗೆ ತಾನೇ ಉಳಿದೀತು? ಪರಭಾಷೆ ಚಿತ್ರ ಬ್ಯಾನ್, ಡಬ್ಬಿಂಗ್ ಬ್ಯಾನ್ ಅನ್ನುವಂತಹ ನಕಾರಾತ್ಮಕ ಕ್ರಮಮಗಳಿಂದ ಚಿತ್ರರಂಗಕ್ಕೆ ಏನುಪಯೋಗ? ಎನ್ನುವುದನ್ನೆಲ್ಲಾ ಚಿಂತಿಸಬೇಕಾಗಿದೆ.
ಕನ್ನಡದ ಚಿತ್ರಗಳು ಗುಣಮಟ್ಟದ ಚಿತ್ರಗಳಾಗಿರಬೇಕು ಅಂದ್ರೆ ಸಾಲದು. ಇದರಲ್ಲಿ ಎಲ್ಲಾ ತೆರನಾದ ಅಭಿರುಚಿಗಳನ್ನೂ ಪೂರೈಸಬಲ್ಲ ಬಹುವಿಧದ ಚಿತ್ರಗಳು ಬರಬೇಕು. ಹೊಸ ಪ್ರತಿಭೆಗಳ ಪ್ರವಾಹ ಉಕ್ಕಿ ಹರೀಬೇಕು. ಚಿತ್ರರಂಗಾನ ಒಂದು ಉದ್ಯಮವಾಗಿ ಪರಿಗಣ್ಸೋ ಮನಸ್ಥಿತಿ ನಮ್ಮವರಿಗೆ ಬರಬೇಕು. ಆ ಸಹಾಯ ಕೊಡಿ, ಈ ಸಹಾಯ ಕೊಡಿ, ಸಬ್ಸಿಡಿ ಕೊಡಿ... ಅಂತ ಬರೀ ಬೇಡೋದೇ ಆಗಿಬಿಡಬಾರ್ದು. ಎಪ್ಪತ್ತೈದು ವರ್ಷಗಳಲ್ಲಿ ಚಿತ್ರರಂಗದ ಹಿರಿಯರು ಸಾಧಿಸಿದ್ದನ್ನು ಮುಂದಿನ ಇಪ್ಪತ್ತೈದು ವರ್ಷದಲ್ಲಿ ಹೇಗೆ ಸಾಧುಸ್ತೀವಿ? ಕನ್ನಡದ ಮಾರುಕಟ್ಟೆನಾ ಹೇಗೆ ಕರ್ನಾಟಕದಲ್ಲಿ ಗಟ್ಟಿ ಮಾಡ್ತೀವಿ? ಅದಕ್ಕೆ ಡಬ್ಬಿಂಗ್ ಅನ್ನೋ ಸಲಕರಣೆನಾ ಹ್ಯಾಗೆ ಬಳುಸ್ತೀವಿ? ಹೊರನಾಡುಗಳಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹ್ಯಾಗೆ ವಿಸ್ತರಿಸಿಕೊಳ್ತೀವಿ? ಹ್ಯಾಗೆ ಹೊಸಹೊಸ ತಂತ್ರಜ್ಞಾನಾನ ಬಳುಸ್ಕೊತೀವಿ?... ಅನ್ನೋದ್ರು ಬಗ್ಗೆ ಚಿತ್ರರಂಗ ಯೋಚಿಸಬೇಕಾಗಿದೆಯೇ ಹೊರತು ಬರೀ... ಸರ್ಕಾರ ನಮಗೆ ಸಬ್ಸಿಡಿ ಅದೂ ಇದೂ ಅಂತಾ ಜನರ ತರಿಗೆ ದುಡ್ಡುನ್ನ ಕೊಡ್ತಾನೆ ಇರಬೇಕು, ನಮ್ಮ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಬಾರದು, ಬೇರೆ ಭಾಷೆಯ ಚಿತ್ರಗಳು ಬರಬಾರದು, ನಮಗೆ ಇಂತಿಷ್ಟು ಸವಲತ್ತುಗಳು ಬೇಕು ಅನ್ನೋ ‘ದೇಹಿ’ ಅನ್ನೋ ಮನಸ್ಥಿತಿಯಿಂದ ಹೊರಬರಬೇಕಾಗಿದೆ ಗುರೂ! ಊರುಗೋಲಿನ ಆಸರೆ ಬಯಸುತ್ತಲಿದ್ದಷ್ಟು ದಿನವೂ ಕನ್ನಡ ಚಿತ್ರರಂಗ ಏಳಿಗೆ ಕಾಣೋದು ಕಷ್ಟ ಅನ್ನೋದು ಕನ್ನಡ ಚಿತ್ರರಂಗಕ್ಕೆ ನೆನಪಿರಲಿ...
ಚಲನಚಿತ್ರ ವಿತರಕರ ಸಂಘದ ಆದ್ಯತೆ ಕನ್ನಡ ಚಿತ್ರಗಳಾಗಲಿ!
ಏಪ್ರಿಲ್ 2ನೇ ತಾರೀಖು ಬೆಂಗಳೂರಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘದ ಉದ್ಘಾಟನೆ ಆಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯಾತೀಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದರು ಅಂತ ಏಪ್ರಿಲ್ 3ರ ವಿಜಯ ಕರ್ನಾಟಕದ ಒಂದು ವರದಿ ಹೇಳುತ್ತೆ. ಈ ಕಾರ್ಯಕ್ರಮದಲ್ಲಿ ಒಂದು ವಿಚಿತ್ರವಾದ ವಿಷಯ ಬೇರೇ ಚರ್ಚೆ ಆಯ್ತಂತೆ.
ವಿತರಕ ಸಂಘದ ಆದ್ಯತೆ ಏನು?
ಈ ಸಂಘದ ಜನ ಕನ್ನಡ ಚಿತ್ರಗಳ ವಿತರಣೆಯಲ್ಲಿ ಎದುರಾಗೋ ತೊಡಕುಗಳನ್ನು ಬಗೆಹರಿಸಿಕೊಳ್ಳೋದು ಹೇಗೆ? ಕನ್ನಡ ಸಿನಿಮಾಗಳ ಮಾರುಕಟ್ಟೇನಾ ಭದ್ರ ಮಾಡ್ಕೊಳ್ಳೋದು ಹೇಗೆ? ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳೋದು ಹೇಗೆ? ತಮ್ಮ ವಿತರಣಾ ಜಾಲಾನಾ ಹೆಚ್ಚಿಸಿಕೊಳ್ಳೋದು ಹೇಗೆ? ಸಿನಿಮಾದ ಯಶಸ್ಸಿಗಾಗಿ ಪ್ರಚಾರದ ಯಾವ ಹೊಸತಂತ್ರಗಳನ್ನು ಬಳಸಿಕೊಳ್ಳಬೇಕು? ಲಾಭ ಹಂಚಿಕೆ ಹೇಗೆ? ಕನ್ನಡಚಿತ್ರಗಳು ಪರಭಾಷಾ ಚಿತ್ರಗಳ ಪೈಪೋಟಿಯನ್ನು ಎದುರಿಸೋ ಹಾಗೇ ಮಾಡೋದು ಹೇಗೆ? ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡುದ್ರಾ ಅಂದ್ರೆ ನಿರಾಸೆ ಆಗುತ್ತೆ ಗುರೂ! ಅಲ್ಲಿರೋರಲ್ಲಿ ಒಗ್ಗಟ್ಟಾಗಿ ಗೆಲುವಿನತ್ತಾ ಸಾಗೋ ಮನಸ್ಥಿತಿ ಇತ್ತಾ ಅನ್ನೋದೆ ದೊಡ್ಡ ಪ್ರಶ್ನೆ. ಯಾಕಂದ್ರೆ ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಜೊತೇಲ್ ಸೇರಸ್ಕೊಂಡು ಮಾತಾಡಿದ್ ಏನು ಗೊತ್ತಾ?
ಪರಭಾಷಾ ಚಿತ್ರದ ವಿತರಣೆ ಹಕ್ಕಿಗಾಗಿ ಭಿಕ್ಷೆ!
ಕರ್ನಾಟಕದಲ್ಲಿ ಇಲ್ಲೀ ತನಕ ತೆಲುಗು ಚಿತ್ರಗಳ ಪ್ರದರ್ಶನದ ಹಕ್ಕು ಕರ್ನಾಟಕದ ಯಾವುದೋ ಒಬ್ಬ ವಿತರಕನಿಗೇ ಸಿಕ್ತಾ ಇತ್ತು. ಈಗೀಗ ಬಳ್ಳಾರಿ-ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಸಿನೆಮಾಗಳ ವಿತರಣೆ ಹಕ್ಕನ್ನು ಆಂಧ್ರದವರೇ ಇಟ್ಕೊಂತಾ ಇದಾರೆ. ಇದುನ್ನ ಹಿಂದಿನ ಹಾಗೇ ಕರ್ನಾಟಕದವರಿಗೇ ಕೊಡಿಸಬೇಕು, ಅದಕ್ಕೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತಂತೆ. ವಿತರಕರ ಸಂಘದೋರಿಗೆ ದಕ್ಷಿಣ ಭಾರತ ವಾಣಿಜ್ಯ ಮಂಡಳಿಯ ಕಲ್ಯಾಣ್ ಅನ್ನೋರು, ತೆಲುಗು ಸಿನಿಮಾ ವಿತರಣಾ ಹಕ್ಕುನ್ನ ಕನ್ನಡದೋರಿಗೇ ಕೊಡ್ಸಕ್ ಪ್ರಯತ್ನಾ ಮಾಡ್ತೀವಿ ಅಂತಾ ಭರವಸೆ ಬೇರೇ ಕೊಟ್ರಂತೆ. ಈ ಸುದ್ದಿ ಕೇಳಿ ನಗಬೇಕೋ ಅಳಬೇಕೋ ಗೊತ್ತಾಗದೆ ಕನ್ನಡ ಚಲನಚಿತ್ರರಂಗದ ಹಿತೈಶಿಗಳು ತಬ್ಬಿಬ್ಬಾಗಿದಾರಂತೆ! ಇದ್ನ ನೋಡುದ್ರೆ ಕರ್ನಾಟಕದ ಚಲನಚಿತ್ರ ವಿತರಕರು ತೀರಾ ದಯನೀಯ ಸ್ಥಿತೀಲಿ ಇದಾರೆ ಅಂತ ಜನುಕ್ ಅನ್ಸುದ್ರೆ ಆಶ್ಚರ್ಯ ಏನಿಲ್ಲಾ ಗುರೂ!
ಎರೆಹುಳುವಿನಾಸೆ ಬಿಡಬೇಕು!
ಕರ್ನಾಟಕದ ಮೂಲ ಮಾರುಕಟ್ಟೆ ಕನ್ನಡ ಸಿನಿಮಾಗಳದ್ದು. ಈ ಮಾರುಕಟ್ಟೇನ ಕನ್ನಡ ಸಿನಿಮಾ ಸರಿಯಾಗಿ ಬಳಸಿಕೊಳ್ಳದಿದ್ರೆ ಮಣ್ಣುಮುಕ್ಕಬೇಕಾಗುತ್ತೆ. ಕರ್ನಾಟಕವು ತಮಿಳು, ತೆಲುಗು, ಹಿಂದಿ ಮೊದಲಾದ ಚಿತ್ರೋದ್ಯಮಗಳಿಗೆ ಮೂಲಮಾರುಕಟ್ಟೆ ಅಲ್ಲ. ಕರ್ನಾಟಕವೇನಿದ್ರೂ ಬೋನಸ್ ಮಾರುಕಟ್ಟೆ. ಹೀಗಾಗಿ ಇಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಕ್ಕೆ ಆ ಚಿತ್ರಗಳೋರು ನಾನಾತಂತ್ರಗಳನ್ನು ಬಳಸೋದು ಸಹಜ. ಒಂದು ಹತ್ತಿಪ್ಪತ್ತು ವರ್ಷ ಹೀಗೆ ಮಾಡಿದ್ರೆ ಸಾಕು, ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗುತ್ತೆ ಅನ್ನೋದು ಈ ತಂತ್ರದ ಭಾಗ. ಹೀಗೆ ಆಗೋದ್ರಿಂದ ಕನ್ನಡ ಚಿತ್ರಗಳ ಮೇಲೆ ದೊಡ್ಡ ಹೊಡೆತ ಬೀಳುತ್ತೆ ಅಂತಾ ವಿತರಕರ ಸಂಘದೋರಿಗೇನು ಗೊತ್ತಿಲ್ವಾ? ಆದ್ರೆ ಇವತ್ತು ಸಿಗ್ತಾ ಇರೋ ಪುಡಿಗಾಸಿನ ಆಸೆಗೆ ನಮ್ಮ ಕರ್ನಾಟಕದ ಚಿತ್ರ ವಿತರಕರು ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೊ ಕೆಲಸ ಮಾಡ್ತಾ ಇದ್ದಾರಾ? ಅನ್ನೋ ಪ್ರಶ್ನೆ ಕಾಡುತ್ತೆ. ಎರೆಹುಳುವಿಗೆ ಆಸೆ ಪಟ್ಟು ಜೀವ ಕಳ್ಕೊಳ್ಳೋ ಪರಿಸ್ಥಿತಿ ಕನ್ನಡ ಚಿತ್ರರಂಗದ್ದಾದೀತು ಅನ್ನೋ ಅರಿವು ವಿತರಕರ ಸಂಘಕ್ಕೆ ಇಲ್ಲದಿದ್ರೇನಂತೆ? ಕಡೇ ಪಕ್ಷ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾದ್ರೂ ಇರಬೇಕಲ್ವಾ ಗುರೂ?
ಅವರೆ ಬೆಳೆ ಮೇಳ ಒಂದು ಉದ್ಯಮವಾಗಬೇಕು ಗುರು !
ಸಂಕ್ರಾಂತಿ ಸಮಯದಲ್ಲಿ ಬಸವನಗುಡಿಯ ಸಜ್ಜನ ರಾವ್ ವೃತ್ತದ ಬಳಿ ಹತ್ತು ದಿನಗಳ ಕಾಲ ನಡೆದ ವಾರ್ಷಿಕ ಅವರೆ ಮೇಳಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ ಗುರು. ಅವರೆ ಕಾಳೊಂದರಿಂದಲೇ ಮಾಡಿದ 30ಕ್ಕೂ ಹೆಚ್ಚು ಬಗೆಯ ತಿಂಡಿ-ತಿನಿಸುಗಳ ರುಚಿಯನ್ನು ಜನರು ಮುಗಿಬಿದ್ದು ಸವಿದರು. ಗ್ರಾಹಕರಿಗೂ ಖುಷಿ ಕೊಡೊ, ರೈತರಿಗೂ ಲಾಭ ಮಾಡ್ಕೊಡೋ ಈ ಮೇಳವನ್ನು ಪ್ರತಿ ವರ್ಷ ಯಶಸ್ವಿಯಾಗಿ ಒಂದು ಉದ್ಯಮದಂತೆ ನಡೆಸುಕೊಂಡು ಬರುತ್ತಿರುವ ಕನ್ನಡತಿ, ಕೆ.ಎಸ್. ಗೀತಾ ಶಿವಕುಮಾರ್ ಅವರ ಪ್ರಯತ್ನ, ಕನ್ನಡಿಗರಿಗೆ ಉದ್ಯಮಶೀಲರಾಗಲು ಪ್ರೇರಣೆ ನೀಡುವಂತಿದೆ ಗುರು !ಕನ್ನಡ ನಾಡಲ್ಲಿ ಬೆಳೆಯೋ, ಅದರಲ್ಲೂ ಮಾಗಡಿ ಭಾಗದಲ್ಲಿ ಬೆಳೆಯೋ ಅವರೆ ಕಾಳಿನ ರುಚಿಗೆ ಸಾಟಿಯಿಲ್ಲ. ಇಂತಹ ಅವರೆ ಕಾಳಿಂದ ಹುಳಿ, ಉಪ್ಪಿಟ್ಟು, ನಿಪ್ಪಟ್ಟು, ಒಬ್ಬಟ್ಟು ಅಂತಾ ಒಂದು ಮೂರೋ ನಾಲ್ಕೋ ಪದಾರ್ಧ ಮಾಡ್ಕೊಂಡು ಚಿಕ್ಕ ಅಂಗಡಿಲಿ ಮಾರಾಟ ಮಾಡ್ಕೊಂಡು, ಅಷ್ಟರಲ್ಲೇ ತೃಪ್ತಿ ಪಟ್ಕೊಂಡು ಇರದೇ, ಈ ಮೇಳದ ರೂಪದಲ್ಲಿ ಅವರೆಕಾಯಿಯ ಹೊಸ ಹೊಸ ರುಚಿಯನ್ನು ಜನಪ್ರಿಯಗೊಳಿಸುವತ್ತ, ಬೆಳೆ ಬೆಳೆದ ರೈತನಿಗೂ ಲಾಭ ಕಲ್ಪಿಸುವತ್ತ ಆಯೋಜಕರು ಮಾಡಿರೋ ಕೆಲಸ ಪ್ರಶಂಸೆಗೆ ಅರ್ಹವಾದದ್ದು. ಆದ್ರೆ ಇಷ್ಟೇ ಸಾಕಾ ಗುರು ?
ಅಕ್ಕನ ಚಾಳಿ ಮನೆಮಂದಿಗೆಲ್ಲ ಹರಡೋದು ಹೇಗೆ?
ಇದೇ ತಿಂಗಳ ೨೯ರಿಂದ ೩೧ರ ವರೆಗೆ ಅಮೇರಿಕದ ಶಿಕಾಗೋನಲ್ಲಿ ೫ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡಿಯಲಿದೆ. ಇದಕ್ಕೆ ಇಡೀ ಪ್ರಪಂಚದಿಂದ ಕನ್ನಡಿಗರು ಬಂದು ಸೇರ್ತಿದಾರೆ. ಕರ್ನಾಟಕದಿಂದಲೂ ಅನೇಕ ಪ್ರತಿನಿಧಿಗಳು ಹೋಗ್ತಿದಾರೆ. ಇಷ್ಟೆಲ್ಲ ತಿಳುವಳಿಕಸ್ತ ಕನ್ನಡಿಗರು ಸೇರುವುದು ಒಂದು ಬಹಳ ಒಳ್ಳೇ ವಿಷಯವೇ ಗುರು. ಕನ್ನಡಿಗರು ಒಟ್ಟಿಗೆ ಸೇರುವುದೇ ಕಡಿಮೆ ಅನ್ನೋ ಕೆಟ್ಟ ಹೆಸರು ಪಡ್ಕೊಂಡಿರುವಾಗ ಇಂಥಾ ಸಮ್ಮೇಳನಗಳಿಂದ ಆ ಕೆಟ್ಟ ಹೆಸರು ಹೋಗಬಹುದೇನೋ.ಈ ವರ್ಷದ ಅಕ್ಕ ಸಮ್ಮೇಳನದಲ್ಲಿ ಕನ್ನಡದ ಹೆಣ್ಣು-ಗಂಡುಗಳ ಕಣ್ಬೇಟೆಯಿಂದ ಹಿಡಿದು ಕನ್ನಡ ಸಾಹಿತ್ಯ ಮತ್ತು ಉದ್ಯಮಿಗಳ ಸಮ್ಮೇಳನಾನೂ ಇದೆ ಅಂತ ಕೇಳುದ್ರೆ ಸಕ್ಕತ್ ಖುಷಿಯಾಗುತ್ತೆ ಗುರು. ಒಂದು ರೀತಿಯಲ್ಲಿ ನವರಸಗಳೆಲ್ಲಾ ಈ ಸಮ್ಮೇಳನದಲ್ಲಿ ಹೇರಳವಾಗಿ ಸಿಗುತ್ತವೆ ಅನ್ನಿಸುತ್ತೆ! ನಾಡು-ನುಡಿ-ನಾಡಿಗರ ಏಳಿಗೆಯ ಹಾದಿಯಲ್ಲಿ ಇಂಥಾ ಸಮ್ಮೇಳನಗಳ ಪಾತ್ರವಾದರೂ ಏನು? ಇವುಗಳು ಇನ್ನೂ ಹೆಚ್ಚು ಹೆಚ್ಚು ಉಪಯುಕ್ತ ಅನಿಸಿಕೊಳ್ಳುವುದಕ್ಕೆ ಏನೇನಾಗಬೇಕು ಅಂತ ನೋಡೋಣ್ವಾ?
ಕರ್ನಾಟಕದ ಏಳಿಗೆ ಅಂದ್ರೆ ಏನು ಅನ್ನೋದರ ಬಗ್ಗೆ ಒಮ್ಮತ ಬೇಕುಕರ್ನಾಟಕದ ಏಳಿಗೆ ಎಂದರೆ ಏನು ಎನ್ನುವುದರ ಬಗ್ಗೆ ಸಮ್ಮೇಳನ-ಹೋಗುಗರಲ್ಲಿ ಒಮ್ಮತ ಬರಬೇಕು. ಕರ್ನಾಟಕದ ಏಳಿಗೆ ಅಂದರೆ ಏನು? ಅದಕ್ಕೂ ಅಮೇರಿಕ-ಯೂರೋಪುಗಳ ದೇಶಗಳ ಏಳಿಗೆಗೂ ವೆತ್ಯಾಸವೇನು? ಒಂದೇ ಸಮನಾಗಿರುವುದೇನು? ಎಂಬೀ ವಿಷಯಗಳ ಬಗ್ಗೆ ಒಮ್ಮೆ ಈ ಸಮ್ಮೇಳನದಲ್ಲಿ ಸೇರುವಂತಹ ಬುದ್ಧಿವಂತ ಕನ್ನಡಿಗರಲ್ಲಿ ಒಮ್ಮತ ಬಂದುಬಿಟ್ಟರೆ ಕನ್ನಡಿಗರಿಗೆ ಐದೂವರೆಕೋಟಿ ಆನೆಗಳ ಬಲ ಬಂದಂತೆ. ಕರ್ನಾಟಕ ಏಳಿಗೆ ಹೊಂದಿದೆ ಅಂತ ಹೇಳ್ಬೇಕಾದ್ರೆ ಕೆಲವು ಮೂಲಭೂತವಾದ ಬದಲಾವಣೆಗಳು ಈ ನಾಡಿನಲ್ಲಿ ಆಗಿರಲೇಬೇಕು. ಅವುಗಳು ಆಗಿಲ್ಲದೆ ಕರ್ನಾಟಕ ಏಳಿಗೆ ಹೊಂದಿದಂತಲ್ಲ. ಮೊದಲಿಗೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕರ್ನಾಟಕಕ್ಕೆ ಭಾರತದ ಇತರ ರಾಜ್ಯಗಳಿಂದ ಮೋಸವಾಗುತ್ತಿರಬಾರದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು. ಕನ್ನಡಿಗರಲ್ಲಿ ಕಲಿಕೆ / ಉದ್ದಿಮೆಗಳಿಗೆ ಕೊರತೆಯಿರಬಾರದು. ಕನ್ನಡಿಗರು ಜಾಗತಿಕ ಮಟ್ಟದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಒಟ್ಟಾಗಿ ಹೆಸರು ಮಾಡಬೇಕು (ಅಲ್ಲಿಲ್ಲಿ ಯಾರೋ ಒಬ್ಬಿಬ್ಬ ಕನ್ನಡಿಗರು ಹೆಸರು ಮಾಡಿದರೆ ಸಾಲದು!). ಮತ್ತೆ ಈ ಮೇಲಿನವೆಲ್ಲವೂ ಒಮ್ಮೆಗೇ ಆಗಿದ್ದರೆ ಮಾತ್ರ ಕರ್ನಾಟಕ ಏಳಿಗೆ ಹೊಂದಿದೆ ಎನ್ನಲು ಸಾಧ್ಯ. ಯಾವ ಒಂದು ಆಗಿಲ್ಲದಿದ್ದರೂ ನಾವು ಏಳಿಗೆ ಹೊಂದಿಲ್ಲವೆಂದೇ ಅರ್ಥ. ಯಾವ ಒಂದನ್ನು ಕೈಬಿಟ್ಟರೂ ಮಿಕ್ಕವುಗಳಲ್ಲಿ ಗೆಲುವಿಲ್ಲವೆನ್ನುವುದು ಹೊರದೇಶಗಳಲ್ಲಿ ಸಾಕಷ್ಟು ಓಡಾಡಿರುವವರಿಗೆ ಗೊತ್ತೇ ಇರುತ್ತದೆ. ಜರ್ಮನಿ ಜರ್ಮನ್ ಭಾಷೆಯನ್ನು ಬಿಟ್ಟಾಗಲಿ ತಮ್ಮದೇ ನಾಡಿನಲ್ಲಿ ಫ್ರೆಂಚಿಗರಿಗೆ ತಮಗಿಂತ ಹೆಚ್ಚಿನ ಸ್ಥಾನವನ್ನು ಕೊಟ್ಟಾಗಲಿ ಸರಿಯಾದ ಕಲಿಕೆ/ ಉದ್ದಿಮೆಗಳ ಏರ್ಪಾಡುಗಳಿಲ್ಲದೆಯಾಗಲಿ ಇವತ್ತಿನ ಸ್ಥಿತಿಗೆ ಬರಲಿಲ್ಲ. ಫ್ರಾನ್ಸೂ ಬರಲಿಲ್ಲ, ಇಸ್ರೇಲೂ ಬರಲಿಲ್ಲ, ಜಪಾನೂ ಬರಲಿಲ್ಲ, ಯಾವ್ ಬಡ್ಡೀಮಗನ್ ನಾಡೂ ಬರಲಿಲ್ಲ. ಕರ್ನಾಟಕವೂ ಬರಲ್ಲ. ಇದು ಅಕ್ಕ ಸಮ್ಮೇಳನಕ್ಕೆ ಹೋಗೋ ಕನ್ನಡಿಗರಿಗೆ ಅರ್ಥವಾಗಬೇಕಾದ ಮೊದಲನೇ ವಿಷಯ. ಈ ಸತ್ಯವನ್ನು ಅವರು ಎಂದಿಗೂ ಮರೀಬಾರ್ದು.
ಕನ್ನಡ ಮಾಧ್ಯಮ ಎಡವುತ್ತಿರುವುದು ಯಾಕೆ?
ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಪ್ರತಿಯೊಂದು ಮಗೂನೂ ಚಿನ್ನ. ಪ್ರತಿಯೊಂದು ಮಗೂನಲ್ಲೂ ಅದ್ಭುತವಾದ ಪ್ರತಿಭೆ ಅಡಗಿದೆ. ನಮ್ಮ ಮಕ್ಕಳಲ್ಲಿ ಮುಂದಿನ ನೊಬೆಲ್ ಪ್ರಶಸ್ತಿಗಳ್ನ ಗೆಲ್ಲೋರಿದಾರೆ, ಪ್ರಪಂಚವೇ ಬೆರಗಾಗೋಂಥಾ ವೈಜ್ಞಾನಿಕ ಆವಿಷ್ಕಾರಗಳ್ನ ಮಾಡೋರಿದಾರೆ, ಸಾಟಿಯಿಲ್ಲದ ಅರ್ಥಶಾಸ್ತ್ರಪ್ರವೀಣರಾಗೋರಿದಾರೆ...ಕಲಿಕೆಯ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ತುಟ್ಟತುದೀನ ಮುಟ್ಟೋಂಥಾ ಪ್ರಚಂಡರಿದಾರೆ. ನಮ್ಮ ಮಕ್ಕಳಿಗೂ ಇಂಗ್ಲೇಂಡಲ್ಲೋ ಅಮೇರಿಕದಲ್ಲೋ ಹುಟ್ಟೋ ಮಕ್ಕಳಿಗೂ ಪ್ರತಿಭೆಯಲ್ಲಿ ಎತ್ವಾಸ ಏನಾರೂ ಇದ್ದರೆ ಅದು ನಮ್ಮ ಮಕ್ಕಳೇ ಮುಂದಿರೋದು. ಇದಕೆ ಸಂಶಯ ಬೇಡ (ಕಷ್ಟದಲ್ಲಿ ಬೆಳೆದ ಮಕ್ಕಳಿಗೆ ಬುದ್ಧಿ ಜಾಸ್ತಿ).
ನಮ್ಮ ನಾಡಿನ ಮಕ್ಕಳು ಮಾತಾಡೋದು ಕನ್ನಡ. ಔರ್ ತಲೇಲಿ ಸಿಗೋದು ಕನ್ನಡದ ಅಕ್ಷರಾನೇ. ಔರಿಗೆ ಅರ್ಥ ಆಗೋದು ಕನ್ನಡಾನೇ. ಈಗ ಈ ಮಕ್ಕಳ್ನ ಬಳಸಿಕೊಂಡು ನಾಡು ಕಟ್ಟೋದು ಹೇಗೆ? ಈ ಮಕ್ಕಳ ಬುದ್ಧಿವಂತಿಕೇನ ಹಾಲು ಕರೆದಹಂಗೆ ಕರೆಯೋ ವ್ಯವಸ್ಥೆ ಹೇಗಿರಬೇಕು? ಅವರಿಗೆ ಅರ್ಥವಾಗದೇ ಇರೋ ಒಂದು ಭಾಷೆಯಲ್ಲಿ ವಿದ್ಯೆ ಕಲಿಸಕ್ಕೆ ಹೋಗಬೇಕಾ ಆ ವ್ಯವಸ್ಥೆ? ಅಥವಾ ಔರಿಗೆ ಗೊತ್ತಿರೋ ಭಾಷೇಲೇ ತಿಳುವಳಿಕೆ ಹೆಚ್ಚಿಸಿ ಆದಷ್ಟು ಬೇಗ ಅವರೇ ತಿಳುವಳಿಕೆಯ ಎಲ್ಲೆಗಳ್ನೇ ಹೆಚ್ಚಿಸೋಹಾಗೆ ಮಾಡಬೇಕಾ? ಉತ್ತರ ಎರಡನೇದೇ.
ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೌಕೊಂಡಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ.
ಇಷ್ಟೆಲ್ಲ ವೈಜ್ಞಾನಿಕ ಸತ್ಯಗಳಿದ್ದರೂ ಇವತ್ತಿನ ದಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಕುಂಟುಕೊಂಡು ಕುಂಟುಕೊಂಡು ನಡೀತಿರೋದು ಯಾಕೆ? ಈ ವ್ಯವಸ್ಥೆಯಲ್ಲಿ ಏನು ಕುಂದು ಕೊರತೆಗಳಿವೆ ಅಂತ ನೋಡೋಣ.
ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಮೊದಲನೇ ಕಾರಣ
ಹೀಗೆ ಕನ್ನಡ ಮಾಧ್ಯಮ ಎಡವುತ್ತಾ ಇರೋದರ ಒಳಗಿನ ಕಾರಣ ಏನು ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ ನಮಗೆ ಸಿಗೋ ಮೊದಲನೇ ಉತ್ತರ ಏನಪ್ಪಾ ಅಂದ್ರೆ ನಮ್ಮ ಶಿಕ್ಷಣ ವ್ಯವಸ್ಥೇಲಿ ಯಾವುದನ್ನ ಕನ್ನಡ ಅಂತ ಕಲಿಸುತ್ತಾ ಇದ್ದಾರೋ ಅದು ಸಾಮಾನ್ಯ ಕನ್ನಡಿಗರಿಗೆ ಬಹಳ ದೂರವಾಗಿದೆ. ಉದಾಹರಣೆಗೆ "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟಾತು?
ಇವತ್ತಿನ ದಿನ ಬರಹದಲ್ಲಿ ಇರೋ ಕನ್ನಡಕ್ಕೆಲ್ಲ ಈ ರೋಗ ಇದೆ. ಆಡುನುಡಿ ಕೈಬಿಟ್ಟಷ್ಟೂ ಅದು ಒಳ್ಳೇ ಕನ್ನಡ ಅಂತ ನಂಬಿಕೊಂಡಿರೋ ಪೆದ್ದರು ನಾವು. ಆದ್ರೆ ಅದು ಬರೀ ತಪ್ಪು. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.
(ಕನ್ನಡಿಗರ ಈ ಪೆದ್ದತನ ನೋಡಿ ಗೆಲಿಲಿಯೋ ತಲೆ ಚೆಚ್ಚಿಕೊಂಡಿದ್ದು ಗೊತ್ತಾ ನಿಮಗೆ? ಇಲ್ಲಿ ಓದಿ)
ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಎರಡನೇ ಕಾರಣ
ಇನ್ನು ಎರಡನೇ ಕಾರಣ ಏನಪ್ಪಾ ಅಂದ್ರೆ ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಪೂರ್ಣ ವ್ಯವಸ್ಥೆ ಆಗಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತಗಳ ವರೆಗೆ ಏನೋ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗತ್ತೆ. ಆದ್ರೆ ಪದವಿ ಪೂರ್ವ ಮತ್ತು ಪದವಿ ಹಂತಗಳ ವರೆಗೆ ತಲುಪೋ ಹೊತ್ತಿಗೆ ಕನ್ನಡ ಕಾಣಸಿಗೋದೇ ಕಡಿಮೆ ಆಗೋಗತ್ತೆ. ವಿಜ್ಞಾನ-ತಂತ್ರಜ್ಞಾನಗಳು, ಅರ್ಥಶಾಸ್ತ್ರ, ಮ್ಯಾನೇಜ್ಮೆಂಟು ಇಂಥವಂತೂ ಕನ್ನಡದಲ್ಲಿ ಸಾಧ್ಯವೇ ಇಲ್ಲ ಅಂತ ನಾವು ಒಪ್ಪಿಕೊಂಡಂತಿದೆ. ಇದು ಇವತ್ತಿನ ಕನ್ನಡದ ಶಿಕ್ಷಣ ವ್ಯವಸ್ಥೆ.
ಏನೋ ಹಳ್ಳೀ ಮುಂಡೇವು ಒಂದಿಷ್ಟು ಅಕ್ಷರ ಕಲೀಲಿ ಹೆಬ್ಬೆಟ್ಟ್ ಒತ್ತೋ ಬದ್ಲು ಅಂತ ವ್ಯವಸ್ಥೆ ಕಟ್ಟಿದಹಂಗಿದೆ! ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರುವವರೆಲ್ಲರ ಪ್ರತಿಭೆ ಬೆಳಕಿಗೆ ಬರಬೇಕಾದ್ರೆ ಕನ್ನಡದ ಶಿಕ್ಷಣ ವ್ಯವಸ್ಥೆ ಅನ್ನೋದು ಬರೀ ಹೆಬ್ಬೆಟ್ ಒತ್ತೋದನ್ನ ಹೋಗಲಾಡಿಸಿದರೆ ಸಾಲದು ಗುರು! ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್, ಇಂಗ್ಲೇಂಡ್ ಮುಂತಾದ ಕಡೆಯೆಲ್ಲ ಹೇಗೆ ತಮ್ಮತಮ್ಮ ನುಡಿಗಳಲ್ಲಿ ಉನ್ನತಶಿಕ್ಷಣಾನೂ ಕೊಡೋ ವ್ಯವಸ್ಥೆಗಳಿವೆಯೋ ಹಾಗೆ ಇಲ್ಲೂ ಬರಬೇಕು. ಇಲ್ಲದೆ ಹೋದರೆ ಎಂದಿಗೂ ನಮ್ಮ ನಾಡಿನ ನಿಜವಾದ ಪ್ರತಿಭೆ ಬೆಳಕಿಗೆ ಬರೋದಿಲ್ಲ.
ನಿಜಕ್ಕೂ ಇದನ್ನ ಮಾಡೋದು ಕಷ್ಟದ ಕೆಲಸವೇನಲ್ಲ. ಆದರೆ ಇದನ್ನ ಮಾಡಬೇಕಾದರೆ ಕನ್ನಡಿಗರಲ್ಲಿ ಬಹಳ ಒಗ್ಗಟ್ಟು ಬೇಕು. ನಿಜವಾದ ಶಿಕ್ಷಣತಜ್ಞರು ಬೇಕು. ನಿಜವಾದ ಉದ್ಯಮಿಗಳು ಬೇಕು. ನಿಜವಾದ ಕಾಳಜಿಯುಳ್ಳ ಸರಕಾರ ಬೇಕು, ಅಷ್ಟೆ.
ಎಡವೋದು ನಿಲ್ಲಲೇಬೇಕು, ಬೇರೆ ದಾರಿಯಿಲ್ಲ
ಆಯಿತು. ಈಗ ನಮಗೆ ಕನ್ನಡ ಮಾಧ್ಯಮ ಶಿಕ್ಷಣವ್ಯವಸ್ಥೆಯಲ್ಲಿರೋ ಕುಂದು ಕೊರತೆಗಳು ಅರ್ಥವಾಗಿವೆ. ಈಗ ಈ ಕುಂದು ಕೊರತೆಗಳ್ನ ಧೈರ್ಯವಾಗಿ ಎದುರಿಸೋ ಮನಸ್ಸು ಕನ್ನಡಿಗರು ಮಾಡಬೇಕು. ಯಾಕೇಂದ್ರೆ ಇದನ್ನ ಎದುರಿಸದೆ ನಾಡಿನ ಪ್ರತಿಭೆಯೆಲ್ಲ ಬೆಳಕಿಗೆ ಬರೋ ಸಾಧ್ಯತೇನೇ ಇಲ್ಲ. ಕನ್ನಡ ನಾಡು ಚಿನ್ನದ ಬೀಡು ಅಂತ ಎಷ್ಟು ಬಡ್ಕೊಂಡ್ರೂ ಏನ್ ಪ್ರಯೋಜನ? ಆ ಚಿನ್ನ ಬೆಳಕಿಗೆ ಬರದೆ ಹೋದ್ರೆ ಅದು ಚಿನ್ನವಾಗಿದ್ರೇನು ತಗಡಾಗಿದ್ರೇನು?
ಈ ನಮ್ಮ ಶಿಕ್ಷಣ ವ್ಯವಸ್ಥೇನ ಜಗತ್ತಿನಲ್ಲಿ ಅತ್ಯುತ್ತಮ ಮಟ್ಟದ ಒಂದು ವ್ಯವಸ್ಥೆ ಮಾಡಕ್ಕೆ ಏನೇನು ಮಾಡಬೇಕು ಅಂತ ನಾವು ಯೋಚಿಸಬೇಕು. ಇವತ್ತಿನ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಹೇಗೆ ಬದಲಾಗಬೇಕು? ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ನಾವು ಮೇಲೆ ತೋರಿಸಿರುವ ತೊಂದರೆಗಳ್ನ ಬಗೆಹರಿಸಿಕೊಳ್ಳಕ್ಕೆ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೇ ನಾವು ಬದುಕುದ್ವಿ. ಇಲ್ದೇ ಹೋದ್ರೆ ಎಂದೆಂದಿಗೂ ನಮ್ಮ ನಮ್ಮ ನಾಡಿನ ಮಕ್ಕಳಿಗೆ ಒಳ್ಳೇ ಭವಿಷ್ಯ ಅನ್ನೋದು ಇಲ್ಲ. ಒಳಗೆ ಬುದ್ಧಿವಂತರಾಗಿದ್ದ್ರೇನು ಬಂತು?
"ಬ್ಯಾಡ" ಅನ್ನಕ್ಕಾಗದ ಬ್ಯಾಡಗಿ ಮೆಣಸಿನ್ಕಾಯಿ!
ಉತ್ತರ ಕರ್ನಾಟಕದಲ್ಲಿ ನಮ್ಮ ರೈತರು ಬೆಳೆಯೋ ಮಸಾಲೆಗಳ ಬೆಳೆ ದೇಶದೋರ ಬಾಯಲ್ಲೆಲ್ಲಾ ನೀರೂಡಿಸ್ತಿದೆ! ಇವ್ಗಳ ಮಧ್ಯೆ ಬ್ಯಾಡಗಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳ್ಯೋ ಬ್ಯಾಡ್ಗಿ-ಮೆಣಸಿನಕಾಯಿಯ ಗುಣಮಟ್ಟ ಮತ್ತು ರಫ್ತಾಗ್ತಿರೋ ಪ್ರಮಾಣ ನೋಡಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದಲ್ಲಿ 10 ಕೋಟಿಯ ಮಸಾಲೆಗಳ-ಪಾರ್ಕ್ (spices-park) ಶುರು ಮಾಡಲು ಯೋಜನೆ ಹಾಕಿದೆ ಅಂಕಿ-ಅಂಶಗಳು
ಜಗತ್ತಿನ ಮೆಣಸಿನಕಾಯಿ ಬೆಳೆಯ ಶೇಕಡ 25ರಷ್ಟು ಬೆಳೆ ಭಾರತದಲ್ಲೇ ಬೆಳ್ಯತ್ತೆ, ಮತ್ತೆ ಇದ್ರಷ್ಟು ಇನ್ಯಾವ ದೇಶದಲ್ಲೂ ಬೆಳ್ಯೋಲ್ಲ. ಭಾರತದ ಒಟ್ಟು ಮೆಣಸಿನಕಾಯಿಯ ಕೊಯ್ಲಿನ ಶೇ.14ರಷ್ಟು ಭಾಗ ಕರ್ನಾಟಕದಲ್ಲೇ ಆಗ್ತಿದ್ದು ನಮ್ಮ ರಾಜ್ಯ ದೇಶದಲ್ಲೇ ಎರಡನೆಯ ಸ್ಥಾನದಲ್ಲಿದೆ. ಆದ್ರೆ ಬ್ಯಾಡಗಿ ಮೆಣಸಿಗೆ ಜಗತ್ತಿನಲ್ಲೇ ಅತಿ-ವಿಶಿಷ್ಟ ಬೇಡಿಕೆಯಿದ್ದು ಅದರ ಮಾರುಕಟ್ಟೆ ಅತಿ ಹೆಚ್ಚು ಲಾಭದಾಯಕ ಆಗಿದೆ. ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮೆಣಸುಗಳ ಪಟ್ಟಿಯಲ್ಲಿ ಬ್ಯಾಡಗಿ ದೊಡ್ಡ ಜಾಗ ಪಡೆದಿದೆ. ಯೂರೋಪಿನ ದೇಶಗಳಲ್ಲಿ ಖಾರ ತಿನ್ನುವುದು ಕಡಿಮೆಯಾದ್ರಿಂದ ಬ್ಯಾಡ್ಗಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದ ಬ್ಯಾಡ್ಗಿಗೆ ತುಂಬ ದೊಡ್ಡ ಮಾರುಕಟ್ಟೆ ಇದೆ. ಬ್ಯಾಡ್ಗಿಗೆ ಇದ್ರಲ್ಲಿರೋ ಲಾಭ ಅಪಾರ ಗುರು! ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಬ್ಯಾಡ್ಗಿ ಮೆಣಸಿಕಾಯಿ ವಿಶಿಷ್ಟ ಜಾಗ ಪಡೆದಿದೆ.
"ಪಾರ್ಕ್" ಸಂಸ್ಥೆಯಿಂದ ಅಪೇಕ್ಷೆ ಏನು?
ಈ ಮಸಾಲೆ-ಪಾರ್ಕ್ ಯೋಜನೆ ಕನ್ನಡ ನಾಡಿನ ಮೆಣ್ಸಿನ್ಕಾಯಿ ಬೆಳ್ಯೋ ರೈತರಿಗೇ ಲಾಭ ತರಬೇಕು. ಇಂತಹ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ದೃಷ್ಟಿಯಿಂದ ಕೆಲವು ಮುಖ್ಯ
- ಮೆಣ್ಸಿನ್ಕಾಯಿ ಬೀಜದ ಸಂಸ್ಕರಣೆ
- ಮೆಣ್ಸಿನ್ಕಾಯಿಯ ಸಂಸ್ಕರಣೆ ಮತ್ತು ಬೇಗನೆ ವಣಗಿಸುವಿಕೆ
- ಮೆಣ್ಸಿನ್ಕಾಯಿ ಬೆಳೆಗೆ ರೋಗ ನಿಯಂತ್ರಣಾ ವಿಧಾನಗಳು
- ಮೆಣ್ಸಿನ್ಕಾಯಿಯ ಗುಣಮಟ್ಟ ತಪಾಸಣೆ ಮತ್ತು ಹೆಚ್ಚಳ
- ಮೆಣ್ಸಿನ್ಕಾಯಿಯ ಹೆಚ್ಚು ಫಸ್ಲಿರೋ ಹೊಸ ತಳಿಗಳ ಕಂಡುಹಿಡಿಯುವಿಕೆ
- ಮೇಣ್ಸಿನ್ಕಾಯಿಯ ರಫ್ತು ಹೆಚ್ಚಳಕ್ಕೆ ಹೆಜ್ಜೆ
- ಮೆಣ್ಸಿನ್ಕಾಯಿಯ ಆಧುನಿಕ ಮಾರಾಟ-ಕವಚ ವಿನ್ಯಾಸ (packaging)
- ಮೆಣ್ಸಿನ್ಕಾಯಿಯ ಮಾರುಕಟ್ಟೆ ಹೆಚ್ಚಳಕ್ಕೆ ಬೇಕಾದ ಮಾರುಕಟ್ಟೆ ವಿಶ್ಲೇಶಣೆ
ಬೆಳೆಗಾರ್ರು ಏನ್ ಮಾಡ್ಬೇಕು?
ಭಾರತದಲ್ಲಿ ಬೆಳ್ಯೋ ಹಲವಾರು ಬಗೆಯ ಮೆಣ್ಸಿನ್ಕಾಯಿಗಳ ನಡುವೆ ನಮ್ಮ ಬ್ಯಾಡ್ಗಿ ಮೆಣ್ಸಿನ್ಕಾಯ್ಗೆ ಇಷ್ಟು ಬೆಲೆ ದೊರಕಿ ಅದರ ಮಾರುಕಟ್ಟೆ ಹೆಚ್ಚಿಸಲು ಒಂದು ಸಂಸ್ಥೆಯು ನಿರ್ಮಾಣ ಆಗ್ತಿರುವಾಗ ಕನ್ನಡದ ರೈತರು ಇದರ ಲಾಭ ತೊಗೊಳಕ್ಕೆ ಮುಂದಾಗ್ಬೇಕು ಗುರು. ಪ್ರತಿಯೊಬ್ಬ ರೈತನೂ ತನ್ನ ಬೆಳೆಯ ವಿಚಾರ ಈ ಸಂಸ್ಥೆಯವರೊಡನೆ ಹಂಚಿಕೊಂಡು ಅವರಿಂದ ಹೇಗೆ ಲಾಭ ಪಡೀಬೋದು ಅಂತ ತಿಳ್ಕೊಳ್ಬೇಕು. ಅವರು ಮಾಡುವ ಸಂಶೋಧನೆಗಳಿಗೆ ಸ್ಪಂದಿಸಿ ತಮ್ಮ ಲಾಭವನ್ನ ತಾವೇ ರೂಪಿಸಿಕೊಳ್ಬೇಕು ಗುರು!
ಒಟ್ಟಿನಲ್ಲಿ ಇಂದು ಜಗತ್ತಿನೆಲ್ಲೆಡೆ ಈ ಮೆಣ್ಸಿನ್ಕಾಯಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲಿ ಇನ್ನೂ ಕರ್ನಾಟಕ ರಾಜ್ಯ ಎರಡನೇ ಜಾಗದಲ್ಲಿರೋದ್ರಿಂದ ಈ ಯೋಜನೆಯಿಂದ ನಾವು ಮೊದಲನೆ ಜಾಗ ಗಳಿಸುವಂತಾಗ್ಬೇಕು. ಜಗತ್ತಿನಲ್ಲಿ ನಮ್ಮ ಮೆಣ್ಸಿನ್ಕಾಯಿಗೆ ಅತಿ ಹೆಚ್ಚಿನ ಬೇಡಿಕೆ ಹುಟ್ಟಿಸಿ ಜಗತ್ತಿಗೇ ಬ್ಯಾಡ್ಗಿಯ ಹುಚ್ಚೆಬ್ಬಿಸ್ಬೇಕು ಗುರು! ಏನಂತೀರ?
ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!
ಅಂತರ್ಜಾಲದಲ್ಲಿ ಸಕ್ಕತ್ ಪ್ರಸಿದ್ಧಿ ಹೊಂದಿರುವ ಗೂಗಲ್ ಸಂಸ್ಥೆಯ ಬ್ಲಾಗರ್ ಮತ್ತು ಆರ್ಕುಟ್ ತಾಣಗಳು ಇತ್ತೀಚೆಗೆ ರೋಮನ್ ನಿಂದ ಕನ್ನಡಕ್ಕೆ ಲಿಪಿ-ಬದಲಾವಣೆ ಮಾಡೋ ತಂತ್ರಾಂಶವನ್ನ ಜೋಡಿಸಿಕೊಂಡಿವೆ. ಈಗ ಇವೆರಡು ಜನಪ್ರಿಯ ತಾಣಗಳಲ್ಲಿ "ಬರಹ" ಮುಂತಾದ ಯಾವುದೇ ವಿಶೇಷ ತಂತ್ರಾಂಶವಿಲ್ಲದೆ ಲಿಪಿ-ಬದಲಾವಣೆ ಸಾಧ್ಯವಾಗಿದೆ. ಪ್ರಪಂಚದಲ್ಲಿ ಬೆರಳೆಣಿಕೆಯಷ್ಟೇ ಭಾಷೆಗಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಕನ್ನಡವೂ ಈ ಪಟ್ಟಿಯಲ್ಲಿರೋದು ಖುಶಿ ತರುವ ಸುದ್ದಿ ಗುರು!ಗೂಗಲ್ ಒಂದು ಬಹು-ಬಿಲಿಯನ್ ಡಾಲರ್ ವಹಿವಾಟಿರೋ ಬಹುರಾಷ್ಟ್ರೀಯ ಸಂಸ್ಥೆ. ಇದರ ಕಚೇರಿಗಳು ಬರೀ ಬೆಂಗ್ಳೂರಲ್ ಮಾತ್ರ ಅಲ್ಲ, ಅಮೇರಿಕ-ಗಿಮೇರಿಕ ಯೂರೋಪ್-ಗೀರೋಪಲ್ಲೆಲ್ಲಾ ಎರ್ರಾಬಿರ್ರಿ ಚೆಲ್ಲಾಡಿದಹಾಗಿವೆ. ಇವ್ರಿಗೇನು ತೀಟೆ ಕನ್ನಡದ ತಂತ್ರಾಂಶ ಮಾಡಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ಇಷ್ಟೇ: ಕನ್ನಡ ಅಂತರ್ಜಾಲದಲ್ಲಿ ಸಕ್ಕತ್ ಬಳಕೆ ಆಗ್ತಿದೆ. ಕನ್ನಡದ ಅಂತರ್ಜಾಲ ತಾಣಗಳ್ನ ಮಾಡೋರು, ಬ್ಲಾಗುಜೀವಿಗಳು, ಆರ್ಕುಟ್ಟೋರು - ಇವ್ರೆಲ್ಲ ಎಷ್ಟ್ ಜನ ಇದಾರೆ ಅಂದ್ರೆ ಗೂಗಲ್ಗೆ ಇಲ್ಲಿ ಒಂದು ಒಳ್ಳೇ ಲಾಭದಾಯಕ ಮಾರುಕಟ್ಟೆ ಕಾಣಿಸಿದೆ, ಅಷ್ಟೆ. ಯಾವ ಮಣ್ಣು ಕನ್ನಡದ "ಸೇವೆ" ಗೋಸ್ಕರಾನೂ ಇವ್ರು ಈ ಕೆಲ್ಸ ಮಾಡಿಲ್ಲ, ಮಾಡಬೇಕಾಗೂ ಇಲ್ಲ. ಬರೀ ಸೇವೆ ಮಾಡುಸ್ಕೊಂಡು ಒಂದು ಮೂಲೇಲಿ ಬಿದ್ದಿರಕ್ಕೆ ಕನ್ನಡ ಏನು ಒಂದು ಮುದಿ ಹೆಂಗ್ಸಲ್ಲ ಗುರು, ಹದಿಹರೆಯದ ಚೆಲುವೆ! ಇವಳನ್ನ ಮೆಚ್ಚಿಸಕ್ಕೆ ಬ್ಲಾಗರ್ ಮತ್ತು ಆರ್ಕುಟ್ ಲೈನ್ ಹೊಡೀತಿವೆ. ಏನ್ ಗುರು?
ಅಂದಹಾಗೆ...ಅದೇನೋ ಹೇಳ್ತಾರಲ್ಲ, ಅಮೇರಿಕದೋರಿಗೂ ಅರ್ಥವಾಗಿದೆ ಈಗ ಕನ್ನಡದ ಮಾರುಕಟ್ಟೆ ಎಷ್ಟಿದೆ ಅಂತ. ಶಂಕದಿಂದ ಬಂದೈತಲ್ಲ ತೀರ್ಥ, ಇನ್ನು ನಾವೂ ನಮ್ಮ ಮಾರುಕಟ್ಟೆ ಲಾಭ ಪಡ್ಕೋಬೋದು, ರೈಟ್!
ಎಂಕನ ಕನಸಲ್ಲಿ ನಾಣಿ!
ಇತ್ತೀಚೆಗೆ ಕನ್ನಡಿಗ ನಾರಾಯಣ ಮೂರ್ತಿಗಳಿಗೆ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಾರಾಯಣ ಮೂರ್ತಿಗಳ ಉದ್ಯಮ ಕ್ಷೇತ್ರದಲ್ಲಿನ ಅಪಾರವಾದ ಸಾಧನೆಗೆ ಸಂದ ಗೌರವವಾಗಿದೆ.ಇವೆಲ್ಲದರ ನಡುವೆ ನಮ್ಮ ಎಂಕ ಕಣ್ಮುಚ್ಕೊಂಡು ಅದೇನೇನೇನೋ ಕನಸ್ ಕಾಣ್ತಾವ್ನೆ. ಔನ್ ಕನಸು ಅಂಥಿಂಥದ್ದಲ್ಲ, ಇಪ್ಪತ್ತು ವರ್ಷ ಮುಂದಿನ್ದು. ಎಂಕನ್ ಕನಸಿಗೆ ಒಂದು ಬಾಲ್ಕನಿ ಟಿಕೆಟ್ ತಗಂಡ್ ಒಳಗ್ ಓಗ್ಮ ಬನ್ನಿ!
ಅಬ್ಬಬ್ಬಬ್ಬಾ ಏನ್ ಗುರು ಇದು? ಕನ್ನಡದ ಶಾಲೆ ಇಂಗೆಲ್ಲಾ ಇರ್ತುದಾ? ಅದೇನು ಎಕರೆಗಟ್ಟಲೆ ಮೈದಾನ, ತೋಟ, ಆಟದ ಮೈದಾನ, ಲಾನು... ಎಷ್ಟು ಸಖತ್ತಾಗ್ ಐತಲ್ಲಪ್ಪೋ ನಮ್ ಐಕ್ಳು ಹಾಕಿರೋ ಯೂನಿಫಾರ್ಮು? ಆ ಪ್ರೊಜೆಕ್ಟರ್ ಏನು? ಆ ಮಕ್ಳು ಬಳುಸ್ತಿರೋ ಸೌಕರ್ಯಗಳೇನು? ಇದ್ಯಾವ ಇಂಟರ್ ನ್ಯಾಸನಲ್ ಶಾಲೆಗೂ ಕಮ್ಮಿ ಇಲ್ದಂಗ್ ಐತಲ್ಲಪ್ಪೋ?
ಇಪ್ಪತ್ತು ವರ್ಷಗಳ ಹಿಂದೆ ಎಕ್ಕುಟ್ ಹೋಗಿದ್ದ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಗೆ ದೊಡ್ ತಿರುವು ಕೊಟ್ರು ನಮ್ ಮೂರ್ತಿಗಳು. ಕನ್ನಡ ಶಾಲೆಗಳು, ಮಾಧ್ಯಮ ಇವುಗಳ ಸ್ವರೂಪವನ್ನು ಜಿಲ್ಲೆಗೊಂದು ಮಾದರಿ ಶಾಲೆಗಳನ್ನು ಕಟ್ಟೋ ಮೂಲಕ ಬುಡಸಮೇತ ಬದ್ಲಾಯ್ಸುದ್ರು. ಕನ್ನಡದ ಮಕ್ಕಳ ಕಲಿಕೇನ ಸರಳ ಮಾಡಿ, ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಸಾಲಿನಲ್ಲಿ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೇನ ನಿಲ್ಸಿ ತೋರುಸ್ಕೊಟ್ರು. ಅಂಥಾ ನಾರಾಯಣ ಮೂರ್ತಿಗಳು ಕನ್ನಡದೋರು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಈ ಎಲ್ಲ ಜ್ಞಾನ ಸಂಪತ್ತು ಕನ್ನಡದಲ್ಲಿ ಇರಬೇಕಾದ ಅಗತ್ಯ ಅರ್ಥಮಾಡ್ಕೊಂಡು, ಕನ್ನಡ ತಂತ್ರಜ್ಞಾನ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಮೆಕಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ನ್ಯಾನೋ, ಬಯೋ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಪ್ರಪಂಚದ ಅತ್ಯುನ್ನತ ಅರಿವನ್ನು ಕನ್ನಡಕ್ಕೆ ತರುವ ಮೂಲಕ ಹೊಸ ಹೊಸ ಅವಿಷ್ಕಾರಗಳಿಗೆ ಕಾರಣವಾಗುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈಗಾಗ್ಲೆ ಇದುಕ್ಕೆ ಬೇಜಾನ್ ಪೇಟೆಂಟ್ಗಳು ಸಿಕ್ಕವೆ ಗುರು!
ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ಹೆಚ್ಚಿಸಲು ಮಾರ್ಗದರ್ಶನ/ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ಕಟ್ಟಿದಾರೆ. ಇದ್ರಾಗೆ ಯಶಸ್ವಿ ಉದ್ದಿಮೆಗಾರಿಕೆಯ ಬಗ್ಗೆ ತರಬೇತಿ ಕೊಡೋದ್ರು ಜೊತೆಗೆ ಕನ್ನಡ ನಾಡಿನ ಅನೇಕ ವಿಶ್ವವಿದ್ಯಾಲಯಗಳಲ್ಲೂ ಉದ್ದಿಮೆಗಾರಿಕೆ ಹೆಚ್ಚಿಸಲು ಅಗತ್ಯವಿರುವ ಕೋರ್ಸುಗಳನ್ನು ಆರಂಭಿಸಲು ಉತ್ತೇಜಿಸಲಾಗಿದೆ. ಶ್ರೀಯುತರು ಇಂತಹ ಕಡೆ ಅತಿಥಿ ಉಪನ್ಯಾಸಕರಾಗಿ ಮುನ್ನಡೆಸ್ತಿರೋದು ವಿಶೇಷವಾಗಿದೆ. ಇವರು ಇಪ್ಪತ್ ವರ್ಷದಿಂದ ಹೊಸ ಉದ್ದಿಮೆಗಾರರನ್ನು ಪ್ರೋತ್ಸಾಹಿಸ್ತಾ, ನಾಡಿಗೆ ಬಂಡವಾಳ ಹರಿದು ಬರಕ್ಕೆ ಕನ್ನಡಿಗರ ಬ್ರಾಂಡ್ ಅಂಬಾಸಿಡರ್ ಆಗಿಯೂ ಕೆಲಸ ಮಾಡಿ ಗೆದ್ದಿದ್ದಾರೆ. ಇದೀಗ ಉದ್ದಿಮೆಗಾರಿಕೆಗೆ ದಾರಿ ತೋರ್ಸಕ್ಕೆ ಇವರೇ ಹುಟ್ಟು ಹಾಕಿದ ಏಜೆನ್ಸಿಯೊಂದು ಕಾರ್ಯನಿರ್ವಹಿಸುತ್ತಿದ್ದು ಇಡೀ ಭಾರತ ಈ ಮಾದರಿಯನ್ನು ಅನುಸರಿಸತೊಡಗಿದೆ.
ಹೊರರಾಜ್ಯಗಳಲ್ಲೂ ಕೆಂಪು-ಹಳದಿ ಗಾಳಿಪಟ
ಈ ವರ್ಷ ಬಿಡುಗಡೆಯಾದ "ಪ್ರೀತಿ ಯಾಕೆ ಭೂಮಿ ಮೇಲಿದೆ?" ಒಟ್ಟು ತೊಂಬತ್ತೊಂಬತ್ತು ಪ್ರತಿ ಬಿಡುಗಡೆ ಆಗಿದ್ದರೆ "ಗಾಳಿಪಟ" ಎಪ್ಪತ್ತೈದು ಪ್ರತಿ ಬಿಡುಗಡೆ ಆಗ್ತಾ ಇದೆ. ಇದು ಹೈದರಾಬಾದ್, ಚೆನ್ನೈ, ಪುಣೆ, ಮುಂಬೈಗಳಲ್ಲೂ ಬಿಡುಗಡೆಯಾಗ್ತಿರೋ ಸುದ್ದಿ ಕನ್ನಡ ಚಲನ ಚಿತ್ರರಂಗದ ಮಾರುಕಟ್ಟೆ ಬೆಳೀತಿರೋ ಶುಭ ಸೂಚನೆಗಳಾಗಿವೆ. ಕನ್ನಡನಾಡಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಅಂತ ವಿತರಣೆಗೆ ತೊಗೊಳೋ ಚಿತ್ರರಂಗದ ಜನ ಹಾಗೇ ಹೊರರಾಜ್ಯದಲ್ಲೂ ಕನ್ನಡಕ್ಕೆ ಮಾರುಕಟ್ಟೆ ಇರುತ್ತೆ ಅಂತ ಇವತ್ತಾದರೂ ಮನವರಿಕೆ ಮಾಡಿಕೊಳ್ತಾ ಇರೋದು ಖುಷಿಯ ವಿಷಯ. ಒಟ್ನಲ್ಲಿ ಕನ್ನಡ ಮನರಂಜನಾ ಕ್ಷೇತ್ರವೆಂಬ ಗಾಳಿಪಟಾನೂ ಹೊಸ ಹೊಸ ಮಾರುಕಟ್ಟೇನ ಬೆಳುಸ್ಕೊಳ್ತಾ ಎಲ್ಲೆಯಿಲ್ಲದ ಅವಕಾಶಗಳ ಆಕಾಶದಲ್ಲಿ ಮತ್ತಷ್ಟು ಎತ್ತರಕ್ಕೇರಿಸಬೇಕು ಗುರು!
ಒಳ್ಳೇ ಫಸಲಾಗೋ ಮೊದಲು ಸುರಿಯೋ ಮಳೆಯಾಗಿ ಕಳೆದ ವರ್ಷ ಮುಂಗಾರುಮಳೆ ಸಖತ್ತಾಗ್ ಹೊಯ್ದಿದ್ದೇ ಹೊಯ್ದದ್ದು, ಹಳೆ ಕೊಳೆಯೆಲ್ಲ ತೊಳೆದುಹೋಗಿ ಝಗಝಗಸ್ತಾ ಇದೆಯೇನೋ ನಮ್ ಕನ್ನಡ ಚಿತ್ರರಂಗ ಅನ್ನೋ ಭರವಸೆಯ ಮಿಂಚುಗಳು ಮೂಡ್ತಾ ಇವೆ.
ದುನಿಯಾ ಮತ್ತು ಮುಂಗಾರುಮಳೆ ಕಳೆದ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರನ್ನು, ಹೊಸ ನಟರನ್ನು, ಹೊಸ ಸಾಹಿತ್ಯಕಾರರನ್ನು ಮಾತ್ರ ಪರಿಚಯ ಮಾಡಿಕೊಡ್ಲಿಲ್ಲ, ಇವು ಕನ್ನಡ ಚಿತ್ರರಂಗಕ್ಕಿರೋ ಬಹುದೊಡ್ದ ಮಾರುಕಟ್ಟೆಯ ಸಾಧ್ಯತೆಯನ್ನೂ ಅನಾವರಣ ಮಾಡಿದವು. ಉತ್ತಮ ಗುಣಮಟ್ಟದ ಸರಕನ್ನು ಉತ್ತಮವಾದ ಮಾರಾಟ ತಂತ್ರದ ಮೂಲಕ ಮಾರುಕಟ್ಟೆಗೆ ತಂದರೆ ಲಾಭಕರ ವಹಿವಾಟು ನಡೆಸೋಕ್ಕೂ ಸಾಧ್ಯ ಅನ್ನೋದನ್ನೂ ತೋರಿಸಿಕೊಡ್ತು. ಇಂದು ಕನ್ನಡ ಚಿತ್ರೋದ್ಯಮ ಒಳ ಮತ್ತು ಹೊರ ನಾಡುಗಳಲ್ಲಿ ನೂರಾರು ಕೋಟಿ ವಹಿವಾಟು ನಡೆಸಲು ಕಾರಣವಾಗಿದೆ.
ಸುಂದರವಾದ ವಿಷ್ಣುವರ್ಧನ್ ನಾಯಕನಾಗಿ, ಅತ್ಯುತ್ತಮವಾದ ನಿರೂಪಣೆ ಹೊಂದಿರೋ ಆಪ್ತಮಿತ್ರಕ್ಕಿಂತ ಹೆಚ್ಚಿನ ಮಾರುಕಟ್ಟೆಯನ್ನು ರಜನಿಕಾಂತರ ಚಂದ್ರಮುಖಿ ಹೇಗೆ ಪಡೆದುಕೊಳ್ಳಲು ಸಾಧ್ಯವಾಯಿತು? ಕನ್ನಡ ಚಿತ್ರರಂಗಕ್ಕೇ ಅಂತಹ ವಿಸ್ತಾರವಾದ ಮಾರುಕಟ್ಟೆ ಕನ್ನಡ ಚಿತ್ರಗಳಿಗೂ ಇದೆ ಎನ್ನುವ ಕಲ್ಪನೆಯೇ ಇರಲಿಲ್ಲವೇನೋ ಅನ್ಸುತ್ತೆ. ಹಿಂದೆಲ್ಲಾ ಯಾವುದು ಅಸಾಧ್ಯವಾಗಿತ್ತೋ ಇವತ್ತು ಅದು ಸಾಧ್ಯವಾಗ್ತಿದೆ. ಕನ್ನಡ ಚಿತ್ರಗಳು ಹೊರನಾಡಿನಲ್ಲಿ, ಹೊರದೇಶಗಳಲ್ಲಿ ಇದೀಗ ಬಿಡುಗಡೆಯಾಗುತ್ತಾ ಇರುವುದು ಒಳ್ಳೆ ಬೆಳವಣಿಗೆ ಗುರು. ಇದು ಕನ್ನಡ ಚಿತ್ರರಂಗದಲ್ಲೇ ಒಂದು ಆತ್ಮವಿಶ್ವಾಸಕ್ಕೆ ಆ ಮೂಲಕ ಹೊಸ ಹೊಸ ಸಾಹಸಗಳಿಗೆ ಪ್ರೇರಣೆಯಾಗಿರುವುದು ನಿಜ.
ಬೆಂಗಳೂರಿಗೆ ಉದ್ದಿಮೆ ಕಾರಿಡಾರ್: ಲಾಭ ಮಾತ್ರಾ ಚೆನ್ನೈಗೆ
ದಿಲ್ಲಿ-ಮುಂಬೈ ನಡುವೆ ಉದ್ದಿಮೆ ಕಾರಿಡಾರ್ ಯೋಜಿಸಿರೋ ಹಾಗೆ ದಕ್ಷಿಣ ಭಾರತದಲ್ಲೂ ಒಂದು ಉದ್ದಿಮೆ ಕಾರಿಡಾರ್ ಮಾಡೋ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿರೋ ಸುದ್ದಿ ನಮ್ಮ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತೆ ಗುರು. ಆದ್ರೆ ಈ ಕಾರಿಡಾರು ನಾಡಿಗೆ ಲಾಭ ತರ್ಬೇಕು ಅಂದ್ರೆ ಅದು ಚೆನ್ನೈ -ಬೆಂಗಳೂರು ಮಧ್ಯೆ ಅಲ್ಲಾ ಪುಣೆ - ಬೆಂಗಳೂರು ನಡುವೆ ಆಗಬೇಕು. ಅದೆಂಗಪ್ಪಾ ಅಂತ ವಸಿ ನೋಡ್ಮಾ ಬನ್ನಿ.ಚೆನ್ನೈ-ಬೆಂಗಳೂರು ಕಾರಿಡಾರಿಗೆ ಹೂಂ ಅಂದ್ರೆ ಕನ್ನಡಿಗರ ಕೈಗೆ ಚಿಪ್ಪೇ ಗತಿ.
ಕೈಗಾರಿಕಾ ಕೇಂದ್ರವನ್ನಾಗಿ ಹೊಸೂರನ್ನು ಬೆಳೆಸಿದ ತಮಿಳುನಾಡು ಹತ್ತಿರದ ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ಮುಂತಾದ ಸೌಕರ್ಯಗಳನ್ನು ಬಳಸಿಕೊಂಡೇ ಉದ್ಧಾರವಾಗಿ ಹೋಯಿತು. ಟೈಟಾನ್, ಅಶೋಕ್ ಲೈಲ್ಯಾಂಡ್, ಟಿವಿಎಸ್ ಮುಂತಾದ ಸಂಸ್ಥೆಗಳು ಅಲ್ಲಿ ಪ್ರಾರಂಭವಾದರೂ ಕನ್ನಡಿಗರಿಗೆ ಉದ್ಯೋಗಾವಕಾಶಗಳೂ ಗಿಟ್ಟಲಿಲ್ಲ, ಕರ್ನಾಟಕಕ್ಕೆ ಕಿಲುಬುಕಾಸಿನ ಆದಾಯವೂ ಹುಟ್ಟಲಿಲ್ಲ. ಅದಕ್ಕಿಂತ ಶೋಚನೀಯವಾದ ಸಂಗತಿಯೆಂದರೆ ಬೆಂಗಳೂರಿಗೆ ತಮಿಳರ ವಲಸೆ ಮತ್ತಷ್ಟು ಹೆಚ್ಚಾಯ್ತು ಅಷ್ಟೆ. ಈಗ ಯೋಜಿಸುತ್ತಿರುವ ಕಾರಿಡಾರ್ ಯೋಜನೆ ಕೂಡಾ ಹೆಸರಿಗೆ ಬೆಂಗಳೂರಿನಿಂದ ಚೆನ್ನೈ ತನಕ ಎಂದಿದ್ದರೂ ಈ ವಲಯ ಶೇಕಡಾ ನೂರರಷ್ಟು ಇರುವುದು ತಮಿಳುನಾಡಲ್ಲೇ. ಅತಿ ನಿರೀಕ್ಷಿತ ವಿದೇಶಿ ಬಂಡವಾಳ, ತೆರಿಗೆ, ಉದ್ಯೋಗಾವಕಾಶ, ಪೂರಕ ಉದ್ದಿಮೆಗಳು ಯಾವುದೂ ಕರ್ನಾಟಕಕ್ಕೆ ಗಿಟ್ಟದು. ಹಾಗಾಗಿ ಮೊಸರು ಮೂತಿಗೆ ಮೆತ್ತಿಸಿಕೊಂಡ ಮೇಕೆ ಆಗ್ತೀವಿ ಅಷ್ಟೆ.
ನಿಜವಾಗಿ ಆಗಬೇಕಾಗಿರೋದು ಬೆಂಗಳೂರು - ಪುಣೆ ಕಾರಿಡಾರು
ಕರ್ನಾಟಕದ ಅಧಿಕಾರಿಗಳು ಚರ್ಚೆ ಮಾಡ್ತಾ ಈ ಕಾರಿಡಾರನ್ನು ಬೆಳಗಾವಿವರೆಗೆ ವಿಸ್ತರಿಸಲು ಮನವಿ ಮಾಡ್ತಾರಂತೆ. ನಿಜ್ವಾಗ್ಲೂ ಕರ್ನಾಟಕ ಸರ್ಕಾರ ಚೆನ್ನೈ ಕಾರಿಡಾರಿನ ಬಗ್ಗೆ ಯಾವುದೇ ಆಸಕ್ತೀನೂ ತೋರುಸ್ದೆ, ದಕ್ಷಿಣ ಭಾರತಕ್ಕೆ ಕೊಡಮಾಡಲಿರುವ ಈ ಯೋಜನೆಯನ್ನು ತನ್ನದು ಮಾಡಿಕೊಳ್ಳಬೇಕು. ಕರ್ನಾಟಕದ ಹಿತ ಕಾಪಾಡಕ್ ಆಗೋದು ಇದ್ರಿಂದ ಮಾತ್ರ ಗುರು.
ಭಾರತಕ್ಕೂ ಲಾಭ ಇದ್ರಿಂದಲೇ...
ಈಗಾಗಲೇ ಯೋಜಿತವಾಗಿರೋ ದಿಲ್ಲಿ ಮುಂಬೈ ಕಾರಿಡಾರನ್ನು ಮುಂದೆ ವಿಸ್ತರಿಸುವ ಮೂಲಕ ಅದನ್ನು ದಿಲ್ಲಿ, ಮುಂಬೈ, ಬೆಂಗಳೂರು ಕಾರಿಡಾರ್ ಮಾಡಬೇಕು. ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ, ಬಜಾಜ್, ಫೆರೋಡಿಯಾ ಬಜಾಜ್, ಕೈನೆಟಿಕ್ ತರಹದ ದೈತ್ಯ ಸಂಸ್ಥೆಗಳಿಗೆ ತವರಾಗಿರೋ ಪೂನಾ, ಅಲ್ಯುಮಿನಿಯಂ ತಯಾರಿಕೆ ಮತ್ತು ಅಚ್ಚು ಉದ್ದಿಮೆಗೆ ಹೆಸರಾದ ಬೆಳಗಾವಿ ಇದೇ ವಲಯದಲ್ಲಿ ಬರುತ್ತವೆ. ಉಕ್ಕು ತಯಾರಿಕೆಯ ತೋರಣಗಲ್ಲು, ಕರ್ನಾಟಕದ ಸುಮಾರು ಆರುನೂರು ಕಿಲೋಮೀಟರ್ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಕಾರಿಡಾರ್ ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ನೀಡಲಿದೆ. ನಾವು ಮೈಮರೆಯದೆ ಸದುಪಯೋಗ ಮಾಡಿಕೋಬೇಕು ಅಷ್ಟೆ. ಈ ವಲಯದ ಉದ್ದಕ್ಕೂ ನೀರಿನ ಸೌಕರ್ಯ ಕಲ್ಪಿಸಲು ಕಾವೇರಿ, ಕೃಷ್ಣಾ, ತುಂಗಭದ್ರಾ ನದಿಗಳಿವೆ. ಉತ್ತಮ ರೈಲು ಸಂಪರ್ಕವಿದೆ. ನಾಲ್ಕು ದಾರಿಗಳ ಹೆದ್ದಾರಿ ಇದೆ. ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ವಿಮಾನ ನಿಲ್ದಾಣಗಳಿವೆ. ಉದ್ದಿಮೆ ಆರಂಭಿಸಲು ಬೇಕಾದ ಹಿತಕರವಾದ ವಾಯುಗುಣ ನಮ್ಮಲ್ಲಿ ಇದೆ. ಮೇಲಾಗಿ ನೈಸರ್ಗಿಕ ವಿಕೋಪಗಳ ಭೀತಿ ಕಡಿಮೆ ಇದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟು ನಮ್ಮ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಿ ಪುಣೆ-ಬೆಂಗಳೂರು ಉದ್ದಿಮೆ ಮೊಗಸಾಲೆಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಬೇಕು. ಕೇಂದ್ರದ ಹಣಕಾಸು ಸಚಿವರಾದ ಪಿ.ಚಿದಂಬರಂ ಇಡಿಯ ಭಾರತಕ್ಕೆ ಹಣಕಾಸು ಸಚಿವರೆಂಬುದನ್ನು ನೆನಪು ಮಾಡಿಕೊಟ್ಟು ಬರುವ ಮುಂಗಡ ಪತ್ರದಲ್ಲಿ ಈ ಯೋಜನೆ ಘೋಷಿತವಾಗುವಂತೆ ಮಾಡಬೇಕು ಗುರು.
ಕರ್ನಾಟಕ ಪ್ರವಾಸೋದ್ಯಮ ಕನ್ನಡಿಗರಿಗೇ ಅನ್ನ ಕೊಡ್ಬೇಕು!
ಕರ್ನಾಟಕ ರಾಜ್ಯ ಸರ್ಕಾರ, ಪ್ರವಾಸೋದ್ಯಮದ ಬೆಳವಣಿಗೆಗಾಗಿ ಹೊಸ ಹೊಸ ಯೋಜನೆಗಳನ್ನುರೂಪುಸ್ತಾ ಪಕ್ಕಾ ಕಾರ್ಪೋರೇಟ್ ಆಗ್ತಿರೋ ಸುದ್ದಿ ಸಖತ್ ಖುಷಿ ತರ್ತಿದೆ . ನಿಜವಾಗ್ಲೂ ಪ್ರವಾಸೋದ್ಯಮವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿಬಿಟ್ರೆ ಕರ್ನಾಟಕ ಬೇಜಾನ್ ಉದ್ಧಾರ ಆಗಿಬಿಡುತ್ತೆ ಗುರು.ಪ್ರವಾಸೋದ್ಯಮದ ಮಹತ್ವ
ನಮ್ಮ ಹಳಮೆ, ಹಿರಿಮೆಗಳನ್ನು ನೋಡಲು ಪ್ರಪಂಚದ ಮೂಲೆ ಮೂಲೇಲಿರೋ ಜನರನ್ನು ಆಕರ್ಷಿಸಿ ಇಲ್ಲಿಗೆ ಬರೋ ಹಾಗೆ ಮಾಡಬೇಕು. ಇದರಿಂದ ನಮ್ಮ ಜನಕ್ಕೆ ಕೆಲಸ ಸಿಗಬೇಕು. ನಮ್ಮ ಸರ್ಕಾರಕ್ಕೆ ಸಂಪತ್ತು ಹರಿದು ಬರಬೇಕು ಅನ್ನೋ ವಿಷಯಗಳನ್ನು ಸದಾ ನೆನಪಲ್ಲಿ ಇಟ್ಕೊಂಡು ಬೆಳವಣಿಗೆಯ ಹೆಜ್ಜೆಗಳನ್ನು ಇಡಬೇಕು. ಅದರ ಜೊತೆಜೊತೆಗೆ ಈ ಹೆಜ್ಜೆ ಸರಿಯಾಗಿ ಇಡ್ದೇ ಇದ್ರೆ ನಮ್ಮ ನಾಡು, ನುಡಿ, ಸಂಸ್ಕೃತಿ, ಇತಿಹಾಸ... ಎಲ್ಲದರಲ್ಲೂ ನಮ್ಮತನಾನ ಕಳ್ಕೋಬೇಕಾಗುತ್ತೆ ಅನ್ನೋದನ್ನೂ ನೆನಪಲ್ಲಿ ಇಟ್ಕೊಬೇಕು ಗುರು.
ಪ್ರವಾಸೋದ್ಯಮ ಇಲಾಖೆ ಇದನ್ನು ಗಮನಿಸಲಿ..
ಈ ಪ್ರವಾಸಿ ತಾಣಗಳ ಬೆಳವಣಿಗೆಯಲ್ಲಿ ಹೊರ ನಾಡಿನ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆಗೆ ಅವಕಾಶ ನೀಡುವಾಗ ಮೊದಲೇ ಸರಿಯಾದ ನಿಬಂಧನೆಗಳನ್ನು ಹಾಕಬೇಕು.
- ಪರನಾಡಿನಿಂದ ಬಂಡವಾಳ ಮಾತ್ರ ಹರಿದು ಬರಬೇಕು. ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನಗಳಲ್ಲ
- ಕನ್ನಡ ಮತ್ತು ಕನ್ನಡ ಸಂಸ್ಕೃತಿಗಳು ನಮ್ಮ ಪ್ರವಾಸಿ ತಾಣಗಳ ಮೂಲ ಸರಕಾಗಬೇಕು.
- ಪ್ರವಾಸಿ ತಾಣಗಳ ಎಲ್ಲೆಡೆ ಕನ್ನಡದ ಹೆಸರುಗಳು, ನಮ್ಮತನದ ಪ್ರತೀಕಗಳಾಗಿ ನಮ್ಮ ಉಡುಗೆ ತೊಡುಗೆಗಳು, ತಿಂಡಿ ತಿನಿಸುಗಳು, ನಮ್ಮೂರ ಶೈಲಿಯ ತಂಗುದಾಣಗಳು... ಇವುಗಳು ಇರ್ಬೇಕು.
- ಕನ್ನಡಿಗರಿಗೇ ಎಲ್ಲ ಕೆಲಸಗಳು ಸಿಗಬೇಕು.
- ಪ್ರವಾಸಿ ಮಾರ್ಗದರ್ಶಕರು, ಭಾಷಾಂತರಕಾರರ ವ್ಯವಸ್ಥೆ ಯೋಗ್ಯವಾಗಿ ನಡೆಯಬೇಕು.
- ದೇಶ ವಿದೇಶಗಳಲ್ಲಿ ಆಯಾ ಭಾಷೆಗಳಲ್ಲಿಯೇ ನಮ್ಮ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಬೇಕು ಆದರೆ ನಮ್ಮ ಪ್ರವಾಸಿ ತಾಣಗಳಲ್ಲಿ ಮಾತ್ರಾ ನಮ್ಮತನ ಮೆರೆದಾಡಬೇಕು.
"ಬೆಂಗಳೂರು ಹಬ್ಬ" ಅಂತ ಹೆಸ್ರಿಡಕ್ಕೆ ಇವ್ರಿಗೆ ಯಾರ್ ಬಿಟ್ರು?
ಬಾಂಬೆ ಹಬ್ಬದ ಕಲಾವಿದರ ಪಟ್ಟಿ ಒಮ್ಮೆ ತೆಗೆದು ನೋಡಿ. ನಿಮಗೆ ಮಹಾರಾಷ್ಟ್ರದ ಹೊರಗಿನವರ ಒಬ್ಬರ ಹೆಸರೂ ಸಿಗೋದಿಲ್ಲ! ಸ್ಥಳೀಯ ಕಲಾವಿದರ ಕಡೆಗಣಿಕೆ ಆಗುತ್ತಿರುವುದು ಇಲ್ಲಿ (ಕರ್ನಾಟಕದಲ್ಲಿ) ಮಾತ್ರ.
ಅಲ್ಲ - ಈ ರೋಗ ಕರ್ನಾಟಕದಲ್ಲಿ ಮಾತ್ರ ಯಾಕೆ ಗುರು? ಇನ್ನೇನೂ ಇಲ್ಲ, ಕನ್ನಡಿಗರ ವಿಶ್ವಮಾನವತ್ವಕ್ಕೆ ಇದೂ ಒಂದು ಬಹುಮಾನ, ಅಷ್ಟೇ. 1962ರಲ್ಲಿ ಬೆಂಗಳೂರಿನ ರಾಮೋತ್ಸವಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿಯಂಥಾ ಹೊರಗಿನೋರಿಗೇ ಮಣೆ ಹಾಕಲಾಗಿ ಕನ್ನಡದ ಕಲಾವಿದರಿಗೆ ಅವಕಾಶ ಸಿಗದೆ ಇದ್ದಾಗ ಅ.ನ.ಕೃ. ಅವರು ಕನ್ನಡೇತರರಿಗೆ ಕಲಿಸಿದ ಪಾಠ ಇವತ್ತು ಇನ್ನೊಂದ್ಸತಿ ಕಲಿಸಬೇಕಾದ ಪರಿಸ್ಥಿತಿ ಬಂದಿದೆ ಗುರು! ಸ್ಥಳೀಯ ಕಲಾವಿದರಿಗೆ ಸ್ಥಾನ ಇಲ್ಲದೇ ಇರೋ ಹಬ್ಬ ಕಟ್ಕೊಂಡ್ ನಮಗೇನು? ಈ ನಾಡಿನ ಸಂಸ್ಕೃತಿಯನ್ನ ಬಿಂಬಿಸದೇ ಹೋದ್ರೆ ಇಂಥಾ ಕಾರ್ಯಕ್ರಮಗಳಿಗೆ ಬೆಂಗಳೂರಿನ ಹೆಸರು ಇಡಕ್ಕೆ ಬಿಡೋದೇ ತಪ್ಪು!
ಕನ್ನಡ ಸಂಸ್ಕೃತಿ ಬಿಂಬಿಸದ ಹಬ್ಬ "ಬೆಂಗಳೂರು ಹಬ್ಬ" ಅಲ್ಲ
ಅಷ್ಟೇ ಅಲ್ಲ, ಕನ್ನಡದ ಸಂಸ್ಕೃತಿ ಬಿಂಬಿಸದ ಈ ಕನ್ನಡೇತರರ ಹಾವಳಿಗೆ "ಬೆಂಗಳೂರು ಹಬ್ಬ" ಅನ್ನೋ ಹೆಸರು ಇಡೋ ಹಕ್ಕನ್ನೇ ಕಿತ್ತುಕೊಳ್ಳಬೇಕು. ಕರ್ಕೊಳ್ಳಿ ಇನ್ನೇನಾದ್ರೂ ಹೆಸರಿಟ್ಟು, ಬೇಡ ಅನ್ನಲ್ಲ. ಆದ್ರೆ "ಬೆಂಗಳೂರು ಹಬ್ಬ" ಅನ್ನೋದಾದ್ರೆ ಈ ಹಬ್ಬದಲ್ಲಿ ಕನ್ನಡದ ಕಲಾವಿದರದೇ ಮೇಲುಗೈ ಇರಬೇಕು. ನಮ್ಮ ಜಾನಪದದೋರು, ನಮ್ಮ ಸಂಪ್ರದಾಯದ ಹಾಡುಗರು, ನಮ್ಮ ಭಾವಗೀತೆಯೋರು, ನಮ್ಮ ಲಾವಣಿಯೋರು, ನಮ್ಮ ಹೊಸ ಕಲಾವಿದರು - ಇವೆರಿಗೆಲ್ಲ ಬೆಂಗಳೂರು ಹಬ್ಬದಲ್ಲಲ್ಲದೆ ಏನಾದ್ರೂ ಚೆನ್ನೈ ಹಬ್ಬದಲ್ಲೋ ಅಥವಾ ಮುಂಬೈ ಹಬ್ಬದಲ್ಲೋ ಅವಕಾಶ ಸಿಗತ್ತಾ? ಖಂಡಿತ ಇಲ್ಲ!
ಕನ್ನಡಿಗರು ಮುನ್ನುಗ್ಗಿ ಈ ಹೆಸರು ತಮ್ಮದಾಗಿಸಿಕೊಳ್ಳಬೇಕು, ಇಂಥಾ ಹಬ್ಬಗಳ್ನ ನಡೆಸಿ ಕನ್ನಡ ಸಂಸ್ಕೃತಿಯನ್ನ ಇಡೀ ಪ್ರಪಂಚದ ಮುಂದೆ ಇಡಬೇಕು, ದುಡ್ಡೂ ಮಾಡ್ಕೋಬೇಕು. ಇಲ್ಲದೇ ಹೋದ್ರೆ ಇವತ್ತು ಕನ್ನಡದಲ್ಲಿ ಹೆಸರಾದ್ರೂ ಬರೀತಿದಾರೆ, ನಾಳೆ ಅದೂ ಹೋಗಿ ಹಿಂದೀಲೋ ತಮಿಳಲ್ಲೋ ತೆಲುಗಲ್ಲೋ ಇಂಗ್ಲೀಷಲ್ಲೋ ಬರೆಯಕ್ಕೆ ಶುರು ಮಾಡ್ತಾರೆ, ಈಗ ಕಾಟಾಚಾರಕ್ಕೆ ಕನ್ನಡಕ್ಕೆ ಕೊಡ್ತಿರೋ ಸ್ಥಾನಾನೂ ಕಿತ್ತಾಕ್ತಾರೆ. ಆಗ ಕನ್ನಡದ ಕಲಾವಿದರು ಬೀದೀಲಿ "ಅಮ್ಮಾ! ತಾಯಿ!" ಅಂತ ನಾಕಾಣಿ-ಎಂಟಾಣಿ ಏಣುಸ್ಕೊಂಡಿರಬೇಕಾಗತ್ತೆ, ಅಷ್ಟೆ!
"ಕಳ್ಳೇಕಾಯ್! ಕಳ್ಳೇಕಾಯ್!"

ಪರಿಷೆ ಮುಂದಿನ ಹಂತಕ್ಕೆ ಹೋಗಬೇಕು
ಅಚ್ಚರಿಯ ಇತಿಹಾಸದ ಹಿನ್ನಲೆ ಇರುವ ಈ ಕಡಲೆಕಾಯಿ ಜಾತ್ರೆಯಲ್ಲಿ ಕರ್ನಾಟಕದೆಲ್ಲೆಡೆಗಳಲ್ಲಿ ಬೆಳೆಯುವ ವಿವಿಧ ತಳಿಗಳ ತರಹಾವರಿ ಕಡಲೆಕಾಯಿಗಳನ್ನು ಕಾಣಬಹುದಾಗಿದೆ. ನಮ್ಮ ಸಂಸ್ಕೃತಿಯನ್ನು ಇಂದಿನ-ಮುಂದಿನ ಪೀಳಿಗೆಗೆ ತಲುಪಿಸುವ ಇಂತಹ ಜಾತ್ರಗಳು ಅತ್ಯವಶ್ಯಕ. ಆದರೆ ಈ ಜಾತ್ರೆ ಕೇವಲ ಕಡಲೆಕಾಯಿ ಮಾರುವ/ಕೊಳ್ಳುವ ತಾಣ ಮಾತ್ರ ಆಗಬಾರದು. ಕಡಲೆಕಾಯಿ ಬೆಳೆಗಾರರು ಮತ್ತು ಪರಿಷೆಯ ಆಯೋಜಕರು ಉತ್ಪನ್ನಗಳ ಪ್ರದರ್ಶನ, ಅವುಗಳ ಕುರಿತ ಮಾಹಿತಿ, ದೇಶ-ವಿದೇಶಗಳಲ್ಲಿ ಅವುಗಳಿಗಿರುವ ಬೇಡಿಕೆ, ಬೆಳೆಯಲು ಇರುವ ಅವಕಾಶಗಳು ಮತ್ತು ಸವಾಲುಗಳು ಹೀಗೆ ಕಡಲೆ ಕಾಯಿ ಬಗ್ಗೆ ಸಂಪೂರ್ಣ ವರ್ತಮಾನ ನೀಡುವ ವೇದಿಕೆ ಆಗಬೇಕು.
ಕಡಲೇಕಾಯಿಂದ ಹೊಸ ಹೊಸ ತಿಂಡಿ ತಯಾರಿಸಿ ಇಡೀ ಪ್ರಪಂಚಕ್ಕೇ ಮಾರಬೇಕು
ಕಡಲೇ ಕಾಯಿ ಬೆಳೆಗೆ ಪೂರಕವಾದ ಮಣ್ಣು, ನೀರು, ಹವಾಗುಣ ಕರ್ನಾಟಕದಲ್ಲಿ ವಿಫುಲವಾಗಿದೆ. ಭಾರತದಲ್ಲಿ ಕಡಲೆಕಾಯಿ ಬೆಳೆಯುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕದ್ದು ಸಹ ದೊಡ್ಡ ಪಾಲಿದೆ. ಈಗಿರುವ ಕಡಲೆ ಕಾಯಿ ವ್ಯವಸಾಯದ ವ್ಯಾಪ್ತಿಯನ್ನು ಮೀರಿ ಮೊದಲ ಸ್ಥಾನಕ್ಕೇರುವ ಎಲ್ಲ ಅರ್ಹತೆ ಮತ್ತು ಅವಕಾಶಗಳು ಸಹ ಹೇರಳವಾಗಿದೆ. ಅದರ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ರೈತರು ಕಾರ್ಯಯೋಜಿತರಾಗಬೇಕಿದೆ.
ಬ್ರೆಡ್ಡು, ಬನ್ನುಗಳ ಜತೆ ನೆಂಚಿಕೊಳ್ಳುವುದಕ್ಕೆ 'Peanut butter' (ಕಡಲೆಕಾಯಿ ಹಿಟ್ಟಿನಂಟು) ಇಂದು ಹೊರದೇಶಗಳಲ್ಲಿ ತುಂಬ ಜನಪ್ರಿಯ. ಈ ರೀತಿಯ ಪದಾರ್ಥಗಳನ್ನು ನಮ್ಮಲ್ಲೇ ತಯಾರು ಮಾಡಿ ಹೊರಕ್ಕಟ್ಟುವ ವ್ಯವಸ್ಥೆ ಆದಲ್ಲಿ ಬೆಳೆಗಾರರಿಗೆ ಹೆಚ್ಚಿನ ಸ್ಪೂರ್ತಿ ದೊರಕತ್ತಲ್ವ ಗುರು?
ಬೆಂಗಳೂರಿನ ಗಾಂಧಿ ಬಜಾರಿನ ಬೇರೆಬೇರೆ ರೀತಿಯ ಕಡಲೆಕಾಯಿ ಮಸಾಲಗಳನ್ನು ಮತ್ತು ತಿಂಡಿಗಳನ್ನು ಇತರೆಡೆಗಳಿಗೆ / ಹೊರದೇಶಗಳಿಗೆ ರುಚಿ ತೋರಿಸಬೇಕು. ಕಳ್ಳೇಕಾಯಿಂದ ಏನೇನು ಮಾಡಬೋದು ಅನ್ನೋದರ ಬಗ್ಗೆ ನಾವು ಯೋಚ್ನೆ ಮಾಡಿ ಜನಮೆಚ್ಚುವ ತಿಂಡಿಗಳ್ನ ಮಾರುಕಟ್ಟೇಗೆ ತರ್ಬೇಕು. ವನೀಲಾ ಕಳ್ಳೇಕಾಯಿ, ಚಾಕಲೇಟ್ ಕಳ್ಳೇಕಾಯಿ, ಕಳ್ಳೇಕಾಯಿ ಐಸ್ ಕ್ರೀಮ್ - ಹೀಗೆ ಹತ್ತು ಹಲವಾರು ರುಚಿಯ ತಿಂಡಿಗಳ್ನ ಮಾಡಿ ಮಾರುಕಟ್ಟೆಗೆ ಬರಬಹುದು. ಮಾರುಕಟ್ಟೆ ವಿಸ್ತರಿಸುವ ಜಾಣ್ಮೆಯನ್ನು ನಾವು ತೋರಿಸಬೇಕಿದೆ ಅಷ್ಟೆ. ನಾವು ಕನ್ನಡಿಗರು ತೋರಿಸದೇ ಹೋದರೆ ಹಿಂದಿಯೋನೋ ತಮಿಳನೋ ಅಥವಾ ಅಮೇರಿಕದೋನೋ ಯಾವನೋ ಒಬ್ಬ ತೋರುಸ್ತಾನೆ, ನಾವು ಎಂದೆಂದಿಗೂ ಕಡಲೇಕಾಯಿ ಬೆಳ್ಕೊಂಡು ಹೀಗೇ ಬೀದೀಲಿ ಕೂತ್ಕೊಂಡು ಮೂರುಕಾಸಿಗೆ ಕಳ್ಳೇಕಾಯಿ ಮಾರಾಟ ಮಾಡ್ಕೊಂಡಿರಬೇಕಾಗತ್ತೆ. ಏನ್ ಗುರು?
ಕನ್ನಡ ಚಿತ್ರಗಳಿಂದ ನಾವೇ ದುಡ್ಡು ಮಾಡ್ಕೋಬೇಕು
ಕಳೆದ ಎರಡು ವರ್ಷದಿಂದ ಅನೇಕ ಕನ್ನಡ ಚಿತ್ರಗಳು ಯಶಸ್ಸು ಕಂಡು ಬಂಡವಾಳ ಹಾಕೋರ ಜೇಬು ತುಂಬಿಸಿ ಕನ್ನಡ ಚಿತ್ರಗಳಿಗೆ ಬೇಜಾನ್ ಮಾರುಕಟ್ಟೆ ಇದೆ ಅಂತ ಸಾಬೀತು ಮಾಡಿವೆ. ಅನೇಕ ಯುವ ನಟ-ನಟಿಯರು, ಕಲಾವಿದರು, ತಂತ್ರಜ್ಞರು ಕನ್ನಡ ಚಿತ್ರರಂಗ ಪ್ರವೇಶಿಸಿ ಹೊಸ ಹೊಸ ಪ್ರಯೋಗಗಳ ಮೂಲಕ ಮೆರಗು-ಬೆರಗು ಹುಟ್ಟಿಸಿದ್ದಾರೆ.
ಆದ್ರೆ ಕನ್ನಡ ಚಿತ್ರಗಳಿಗಿರೋ ಮಾರುಕಟ್ಟೆಯಿಂದ ಇವತ್ತಿನ ದಿನ ಎರ್ರಾಬಿರ್ರಿ ದುಡ್ಡು ಮಾಡ್ಬೋದು ಅಂತ ಅರ್ಥ ಮಾಡ್ಕೊಂಡಿರೋ ನಿರ್ದೇಶಕ, ನಿರ್ಮಾಪಕರಲ್ಲಿ ಪರಭಾಷಿಕರು ಸಕ್ಕತ್ ಜನ ಇದಾರೆ ಅನ್ನೋದು ನಮ್ಮ ಮುಟ್ಠಾಳತನದ ಗುರುತು! ನಮ್ಮ ಭಾಷೆಯ ಚಿತ್ರಗಳ್ನ ಮಾಡ್ಕೊಂಡು ನಾವೇ ದುಡ್ಡು ಮಾಡ್ಕೊಳೋ ಯೋಗ್ಯತೇನೂ ನಮಗೆ ಇಲ್ಲವಾ? ನಮ್ಮ ಕನ್ನಡದ ನಿರ್ದೇಶಕ-ನಿರ್ಮಾಪಕರು ದುಡ್ಡು ಸುರಿದು ಒಳ್ಳೊಳ್ಳೇ ಚಿತ್ರಗಳ್ನ ತೆಗೀಬೇಕು, ಕನ್ನಡದ ಮಾರುಕಟ್ಟೆಯಿಂದ ಲಾಭ ಪಡ್ಕೋಬೇಕು. ಈ ಲಾಭಾನೂ ಬೀದೀಲಿ ಹೋಗೋರೆಲ್ಲಾ ಹೊಡ್ಕೊಂಡು ಹೋಗಕ್ಕೆ ಬಿಡಬಾರದು ಗುರು! ಸೋಲಿಗೆ ಹೆದರಿ "ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ" ಆಗದು ಗೆಲುವು ಎಂದೂ ಅಂತ ನಾವು ಅರ್ಥ ಮಾಡ್ಕೋಬೇಕು.
ಅಥಣಿ ರೈತರ ಸಂಶೋಧನೆಗೆ ದಕ್ಕಲಿರೋ ಪೇಟೆಂಟು
ಈ ಪೇಟೆಂಟಿಗೆ ಇಂಗ್ಲೀಷೇನು ಬೇಕಾಗಲಿಲ್ಲ
ಕರ್ನಾಟಕದ ರೈತರು ಮಾಡಿರೋ ಈ ಸಾಧನೆ ಅಂತಿಂತದ್ದಲ್ಲ ಗುರು! ನಮ್ಮ ರೈತರು ಹೊಸ-ಹೊಸ ತಂತ್ರಜ್ಞಾನಗಳ್ನ ಕಂಡುಹಿಡಿದು ಮಾರುಕಟ್ಟೆಯಲ್ಲಿ ಹೆಚ್ತಿರೋ ಬೇಡಿಕೆಗಳಿಗೆ ಸ್ಪಂದಿಸಿ ಲಾಭ ಪಡ್ದುಕೊಳ್ತಿದಾರೆ ಅನ್ನೋದು ಒಳ್ಳೇ ಬೆಳವಣಿಗೇನೇ. ರಾಜ್ಯದ ಹಲವು ಕಡೆ ರೈತರು ಸಾಲ ತೀರಿಸಕ್ಕಾಗದೆ ನರಳುತ್ತಾ ಆತ್ಮಹತ್ಯೆ ಮಾಡ್ಕೊಂಡಿರೋದೂ ಉಂಟು. ಈ ಹಿನ್ನೆಲೆಯಲ್ಲಿ ಅಥಣಿ ರೈತರು ಮಾಡಿರೋ ಕೆಲ್ಸ ಎಲ್ಲರಿಗೂ ದಾರಿ ತೋರ್ಸೋಹಂಗಿದೆ ಗುರು! ಯಾವ ಕೆಲ್ಸದಲ್ಲಿ ನಷ್ಟದ ಸಾಧ್ಯತೆ ಇಲ್ಲ ಹೇಳಿ? ನಷ್ಟಗಳಿಂದ ತಪ್ಪಿಸ್ಕೊಳಕ್ಕೆ ಹೊಸ ಚಿಂತನೆ ಮತ್ತು ಕ್ರಿಯಾಶೀಲತೆ ಬಹಳ ಉಪಯುಕ್ತ ಸಾಧನ ಅಂತ ತೋರ್ಸ್ಕೊಟ್ಟಿದಾರೆ ಇವ್ರು.
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಹೊಂದಿರೋ ನಮ್ಮ ರೈತರು ಆಂಗ್ಲ ಮಾಧ್ಯಮದಲ್ಲಿ ಓದಿ ಕೊಳೆ ಹಾಕ್ಕೊಂಡಿರೋರಿಗೂ ಕಷ್ಟ ಅನ್ನಿಸೋ ಪೇಟೆಂಟಿಗೇ ಕೈ ಹಾಕಿದಾರೆ. ಮೂಲಭೂತ ಕಲಿಕೆ ಮಾತ್ರ ಪಡೆಯೋ ನಮ್ಮ ರೈತರು ಇಂಥಾ ಸಂಶೋಧನೆಗಳ್ನ ಮಾಡ್ತಿರುವಾಗ ಒಳ್ಳೇ ಉನ್ನತಶಿಕ್ಷಣವನ್ನ ಕನ್ನಡದಲ್ಲೇ ಪಡ್ಕೊಂಡ್ರೆ ಇನ್ನೇನೇನು ಸಾಧಿಸಬಹುದು ಅಂತ ಯೋಚ್ನೆ ಮಾಡಿದರೇ ಕೈಯಲ್ಲಿ ಕೂದಲು ಎದ್ದು ನಿಲ್ಲತ್ತೆ ಗುರು!
ಪೇಟೆಂಟುಗಳಿಂದ ಇಡೀ ಪ್ರಪಂಚದಿಂದ ಗೌರವಧನ ಗಿಟ್ಟಿಸಿಕೊಳ್ಳಬೇಕು
ಈ ಪೇಟೆಂಟಿಂದ ನಮ್ಮ ರೈತರ ಸಂಶೋಧನೆಗೆ ರಕ್ಷಣೆ ಏನೋ ಸಿಗೋಹಾಗಿದೆ. ಆದ್ರೆ ಇಂತಹ ಉತ್ತಮ ಸಂಶೋಧನೆಗಳ್ನ ಪೇಟೆಂಟು ಮಾಡಿಸಿಕೊಂಡು ಗೌರವಧನ ಗಿಟ್ಟಿಸಿಕೊಳಕ್ಕೆ ಯಾಕೆ ಪ್ರಯತ್ನ ಮಾಡಬಾರದು? ಹುಳಿಮಾವಿನ ಜೈವಿಕ-ಕೇಂದ್ರದ ಮುಖ್ಯಸ್ತರು ಹೇಳಿರೋ ಪ್ರಕಾರ ಈ ಪೇಟೆಂಟಿಂದ ನಮಗೆ ದುಡ್ಡು ಹುಟ್ಟೋ ಮಟ್ಟಿಗೆ ಕಾಣೆ! ಈ ವಿಷಯದಲ್ಲಿ ನಾವು ಸಕ್ಕತ್ ಹುಷಾರಾಗಿರಬೇಕು ಗುರು! ಪೇಟೆಂಟ್ ಮಾಡಿಕೊಂಡು ಇಡೀ ಪ್ರಪಂಚದಿಂದ ಗೌರವಧನ ಗುಟ್ಟಿಸಿಕೊಳೋದು ಹೇಗೆ ಅಂತ ನೋಡ್ಕೋಬೇಕು. ಯಾವುದೋ ಕೀಳರಿಮೆಗೆ ತಲೆಬಗ್ಗಿಸಿಕೊಂಡು ಇಂಥಾ ಒಳ್ಳೇ ಅವಕಾಶಾನ ಕೈಬಿಡಬಾರದು. ಏನ್ ಗುರು?
ಬೆಳಗಾವಿ ಕುಂದಾ ಒಳಗಿರೋ ಪಾಠ
ಹಿತ್ತಲ ಗಿಡವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸಬೇಕು
ಇವತ್ತಿನ ದಿನ ಯಾವುದೇ ಒಳ್ಳೇ ಬಹುರಾಷ್ಟ್ರೀಯ ಕಂಪನಿ ತೊಗೊಂಡ್ರೂ ಅದು ತನ್ನ ಸುತ್ತಮುತ್ತಲ ಸಂಪನ್ಮೂಲ-ಸಾಮರ್ಥ್ಯ-ಬೇಡಿಕೆಗಳ್ನ ಬಳಸಿಕೊಂಡೇ ಮುಂದೆ ಬಂದಿರೋದು. ಉದ್ದಿಮೆಯಲ್ಲಿ ಗೆಲುವು ಸಾಧಿಸಿರೋರು ಯಾರೂ ಸುತ್ತಮುತ್ತಲಲ್ಲಿರೋ ಸಂಪನ್ಮೂಲಗಳ್ನ, ಸುತ್ತಮುತ್ತಲ ಜನರ ಸಾಮರ್ಥ್ಯಗಳ್ನ, ಸುತ್ತಮುತ್ತಲ ಜನರ ಬೇಡಿಕೆಗಳ್ನ ಕಡೆಗಣಿಸಿಲ್ಲ ಗುರು! ಅವರೆಲ್ಲಾ ಸುತ್ತಮುತ್ತಲಲ್ಲಿರೋದನ್ನ ಸರಿಯಾಗಿ ನಿಭಾಯಿಸೋ ಕಲೆ ಕಲ್ತು ಇಡೀ ಪ್ರಪಂಚವನ್ನೇ ಮಾರುಕಟ್ಟೆಯಾಗಿ ಬದಲಾಯಿಸಿಕೊಂಡೌರೆ ಗುರು.
ಇದಕ್ಕೆ ಇತ್ತೀಚೆಗೆ ಕರ್ನಾಟಕಕ್ಕೂ ಲಗ್ಗೆ ಇಟ್ಟಿರೋ ಪೀಜಾ ಕಂಪನಿಗಳೇ ಉದಾಹರಣೆ. ಇವತ್ತಿನ ದಿನ ಮೂರು ಹೊತ್ತೂ ಊಟ ಮಾಡೋ ಮಾಲೀಕರಿರೋ ಪೀಜಾ ಕಂಪನಿಗಳ್ಯಾವೂ ಈ ನೆಲದಲ್ಲಿ ಹುಟ್ಟಿರೋವಲ್ಲ. ಇಡೀ ಪ್ರಪಂಚಕ್ಕೇ Pizza Hut, Dominos ಮುಂತಾದೋರು ಪೀಜಾ ಮಾರ್ತಾರೆ? ಯಾಕೆ? ಯಾಕೇಂದ್ರೆ ಮೊದ್ಲು ಔರು ತಮ್ಮ ತಮ್ಮ ನಾಡಿನಲ್ಲಿ ಹೇಗೆ (ಅತೀ ಕಡಿಮೆ ದುಡ್ಡಲ್ಲಿ, ಅತೀ ಹೆಚ್ಚು ರುಚಿಯಿರೋಹಾಗೆ) ಪೀಜಾ ತಯಾರಿಸೋದು, ಹೇಗೆ ಜನ ನಾಮುಂದು-ತಾಮುಂದು ಅಂತ ಕೊಂಡ್ಕೊಳೋಹಂಗೆ ಮಾರೋದು ಅನ್ನೋ ವಿದ್ಯೇನ ಸಕ್ಕತ್ತಾಗಿ ಕಲ್ತುಕೊಂಡ್ರು, ಅದಕ್ಕೆ. ಅದು ಬಿಟ್ಟು ಇಟಲಿ ಜನ "ಛೆ! ಛೆ! ಪೀಜಾ ಎಷ್ಟೇ ಆದರೂ ಹಿತ್ತಲ ಗಿಡ!" ಅಂದ್ಕೊಂಡಿದ್ದರೆ ಇವತ್ತು ಇಡೀ ಪ್ರಪಂಚಕ್ಕೆ ಹರಡುಕೊಳ್ಳಕ್ಕೆ ಆಗ್ತಿತ್ತಾ? ಖಂಡಿತ ಇಲ್ಲಾಮ್ಮಾ!
ಸುತ್ತಮುತ್ತಲಲ್ಲಿರೋದ್ನ ಮರೆತರೆ ಕೈಗೆ ಚಿಪ್ಪೇ
ಆದ್ದರಿಂದ ಇವತ್ತೂ ಕನ್ನಡಿಗರು ವ್ಯಾಪಾರದಲ್ಲಿ ಗೆಲುವು ಸಾಧಿಸಕ್ಕೆ ಮೊದಲನೇ ಹೆಜ್ಜೇನೇ ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು:
- ನನ್ನ ಸುತ್ತಮುತ್ತ ಸಿಗೋ ಸಂಪನ್ಮೂಲಗಳು ಯಾವುವು?
- ನನ್ನ ಸುತ್ತಮುತ್ತ ಇರೋರ ಸಾಮರ್ಥ್ಯಗಳು ಯಾವುವು?
- ನನ್ನ ಸುತ್ತಮುತ್ತ ಇರೋರ ಬೇಡಿಕೆಗಳು ಯಾವುವು?
- ಇವುಗಳ್ನ ಬಳಸಿಕೊಂಡು ನಾನು ಹೇಗೆ ಇಡೀ ಪ್ರಪಂಚದಿಂದ ದುಡ್ಡು ಮಾಡಬಹುದು?
- ನಾನೂ ದುಡ್ಡು ಮಾಡ್ಕೊಂಡು ನನ್ನ ಸುತ್ತಮುತ್ತ ಇರೋರ ಜೀವನಾನೂ ಹೇಗೆ ಹಸನಾಗಿಸೋದು?
ಮನೆ-ತಂಗುದಾಣಗಳಲ್ಲಿ ಕನ್ನಡ ಮೆರೀಬೇಕು
ಎಣ್ಣೆ ಬಂದಾಗ ಕನ್ನಡಿಗರು ಕಣ್ಮುಚ್ಚಿಕೊಂಡಿರಬಾರದು
ಹೊರ ರಾಜ್ಯದೋರು ಮೈಸೂರಿಗೆ ಎದ್ನೋ ಬಿದ್ನೋ ಅಂತ ಬಂದು 60x40 ಸೈಟುಗಳ್ನ ತೊಗೊಂಡು ಈ ಉದ್ದಿಮೆಗೆ ಇಳಿಯಕ್ಕೆ ಮುಂಚೆ ಕನ್ನಡಿಗರು ಈ ಅವಕಾಶಾನ ತಮ್ಮ ತೆಕ್ಕೆಗೆ ತೊಗೋಬೇಕು ಗುರು! ಈಗ ಎಚ್ಚರವಾಗದೆ ಹೋದರೆ ಹೊರಗಿಂದ ಬಂದು ಉದ್ಯಮ ಸ್ಥಾಪಿಸಿಕೊಳ್ಳೋರ ಮುಂದೆ ನಾವು ಕೆಲಸಕ್ಕೆ ಅವರ ಕೈ ಹಿಡೀಬೇಕಾದ ದಿನ ಬರತ್ತೆ, ಅಷ್ಟೆ!
ಈಗ ಇರೋ ಸ್ವಂತ ಜಾಗ ಮತ್ತು ಸಣ್ಣ ಬಂಡವಾಳದಿಂದ ಈ ಉದ್ಯಮದ ಅನುಭವ ತೊಗೊಂಡು ಆಮೇಲೆ ದೊಡ್ಡ ಹೋಟಲ್-ಗೀಟಲ್ ಸ್ಥಾಪನೆಗೆ ಧೈರ್ಯ ಮತ್ತು ಮನಸ್ಥಿತಿಗಳ್ನ ಈ ಮನೆ-ತಂಗುದಾಣಗಳು ಕೊಡಬಲ್ಲವು ಗುರು! ಇದಕ್ಕೆ ದುಡ್ಡಿಲ್ಲ ಅಂತ ಕೈಕಟ್ಟಿ ಕೂರೋದೂ ಬೇಕಾಗಿಲ್ಲ. ಸಾಲ ಕೊಡಕ್ಕೆ ತಯಾರಿಗಿರೋ ಬ್ಯಾಂಕುಗಳು ಸಾಲುಗಟ್ಟಿ ನಿಂತಿವೆ ಗುರು!
ಕನ್ನಡ ವಾತಾವರಣಕ್ಕಾಗೇ ಹೊರಗಿನೋರು ಬರೋದು
ಪ್ರವಾಸಿಗನ ಕಣ್ಣು-ಕಿವಿ-ಮೂಗು-ನಾಲಿಗೆ ಮತ್ತು ಮನ ಏನಾದ್ರೂ ಹೊಸದನ್ನ ಸವಿಯಕ್ಕೆ ಹವಣಿಸುತ್ತಿರುತ್ತವೆ. ಪ್ರವಾಸದ ಉದ್ದೇಶವೇ ಹೊಸ ಅನುಭವ. ಹಾಗಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳನ್ನ ನೋಡಕ್ಕೆ ಬರೋ ಪ್ರವಾಸಿಗನಿಗೆ ಅದರ ಅನುಭವ ಈ ವಾಸದ ತಂಗುದಾಣಕ್ಕೆ ಬಂದ ತಕ್ಷಣವೇ ಕಾಣಿಸಬೇಕು. ವಾತಾವರಣದಿಂಡ ಇಲ್ಲಿನ ಸ್ಥಳೀಯತೆ, ಇಲ್ಲಿನ ಸಂಸ್ಕೃತಿ, ಇಲ್ಲಿನ ಬದುಕು ಪರಿಚಯಿಸಿ ಕೊಡೋಹಾಗಿರಬೇಕು.
ಉದಾಹರಣೆಗೆ, ಹೊರದೇಶದಿಂದ ಬರುವ ಪ್ರವಾಸಿಗನಿಗೆ WELCOME ಫಲಕ ತೂಗಿಹಾಕೋ ಬದಲು, ಮನೆಯ ಅಂಗಳದಲ್ಲಿ ಬಣ್ಣ ಬಣ್ಣ್ದದ ರಂಗೋಲಿ ಔನ್ನ ಸ್ವಾಗತಿಸಬೇಕು. ತಿಂಡಿಗೆ ಕಾರ್ನ್ ಫ್ಲೇಕ್ ಇಡೋ ಬದ್ಲು ಬಿಸಿಬಿಸಿ ಇಡ್ಲಿ ತಟ್ಟೆ ಅವನ ಮುಂದೆ ಬರಬೇಕು. ಇದ್ರಿಂದ ಅವನ ಮನಸ್ಸು ಇಲ್ಲಿನ ಇತರ ವಿಚಾರಗಳ್ನ ತಿಳ್ಕೊಳಕ್ಕೆ ಚಡಪಡಿಸೋ ಹಾಗೆ ಆಗತ್ತೆ ಗುರು. ತಂಗುದಾಣದ ಪರಿಚಾರಕರು ಎಲ್ಲವನ್ನೂ ಸಮರ್ಥವಾಗಿ ತಿಳಿಹೇಳೋದ್ನೂ ಸಹ ಕಲೀಬೇಕು.
ಹಂಗಂತ ಏಸಿ ರೂಮು ಮತ್ತು ಈಜುಕೊಳ ಸೇವೆ ಇರಬಾರದು ಅಂತೇನಿಲ್ಲ. ಕೊಡಬೇಕು, ಆದರೆ ಕನ್ನಡತನವನ್ನು ಕಡೆಗಣಿಸಬಾರದು. ಏಸಿ ಹಾಕಿದ್ರೆ ಕನ್ನಡ ಮಾತಾಡಬಾರದು ಅಂತೇನಿಲ್ಲವಲ್ಲ? ಏಸಿ ಏನು ಕೆಟ್ಟೋಗಲ್ಲ ತಾನೆ? ಅಥವಾ ಈಜುಕೊಳದ ಸುತ್ತ ಜನ ಕನ್ನಡ ಮಾತಾಡ್ತಿರಬಾರದು ಅಂತೇನಿಲ್ಲವಲ್ಲ? ಪ್ರವಾಸಿಗನಿಗೆ ಬೇಕಾಗಿರೋದೇ ಕನ್ನಡದ ವಾತಾವರಣ ಗುರು!
ಇಷ್ಟು ಒಳ್ಳೇ ಅನುಭವ ಕೊಟ್ಟು ಕನ್ನಡದ ವಾತಾವರಣಾನ ಪ್ರವಾಸಿಗನಿಗೆ ಕೊಟ್ರೆ ಔನು ತನ್ನ ಜಾಗಕ್ಕೆ ಹೋಗಿ ಕನ್ನಡದ ಕಂಪ್ನ ಬೀರ್‍ತಾನೆ ಗುರು! ಹಾಗೇ ಕನ್ನಡದ ನಾಲ್ಕು ಮಾತೂ ಆಡ್ತಾನೆ. ಹೇಗೆ ಜರ್ಮನಿಗೆ ಹೋದ್ರೆ ನಾವುಗಳು ಬಂದು ಖುಷಿಯಿಂದ ನಾಲ್ಕು ಪದ ಜರ್ಮನ್ ಮಾತಾಡ್ತೀವೋ ಹಾಗೆ!
ಕನ್ನಡೇತರರಿಗೆ ಈ ತಂಗುದಾಣಗಳ್ನ ತೆಗಿಯಕ್ಕೆ ಒಪ್ಪಿಗೆ ಸಿಗಬಾರದು
ಪಂಜಾಬದಿಂದ ಬಂದು ಪಂಜಾಭೀ ಡಾಬಾ ಇಡ್ತೀನಿ ಅನ್ನೋನಿಗಾಗಲಿ, ಚಿಟ್ಟಿನಾಡು ಅಥವ ಆಂದ್ರ ಊಟ ಹಾಕ್ತೀನಿ ಅನ್ನೋನಿಗಾಗಲಿ ಮೈಸೂರಿನ ನಗರಾಡಳಿತದೋರು ಮನೆ ತಂಗುದಾಣ ತೆಗಿಯಕ್ಕೆ ಒಪ್ಪಿಗೇನೇ ಕೊಡಬಾರದು. ಅರ್ಜಿ ಹಾಕ್ತಾ ಇರೋರು ಕನ್ನಡಿಗರು ಅಂತ ಖಚಿತಪಡಿಸಿಕೊಂಡೇ ಮುಂದುವರೀಬೇಕು ಗುರು! ಈ ರೀತಿಯ ತಂಗುದಾಣಗಳು ಕನ್ನಡತನ ಬಿಂಬಿಸೋ ಹಾಗೆ, ಕನ್ನಡ ಭಾಷೆ ಸಂಸ್ಕೃತಿ ಮತ್ತು ಬದುಕನ್ನು ಪರಿಚಯಿಸಿಕೊಡೋ ಹಾಗೆ ಮಾಡೋದು ಸರ್ಕಾರದ ಹೊಣೆ. ಸರ್ಕಾರದ ಕೈಲಿ ಹಾಗೆ ಮಾಡಿಸೋದು ನಮ್ಮ ಹೊಣೆ. ಇಂಥಾ ಮನೆ-ತಂಗುದಾಣಗಳಲ್ಲಿ ಕನ್ನಡದ ವಾತಾವರಣ ಇಲ್ಲದೆ ಇರೋದು ನಮ್ಮ ಕಣ್ಣಿಗೆ ಬಿದ್ದರೆ ಅವರಿಗೆ ಬುದ್ಧಿ ಹೇಳಿ, ಸರ್ಕಾರಕ್ಕೂ ದೂರು ಸಲ್ಲಿಸೋದು ನಮ್ಮ-ನಿಮ್ಮ ಕರ್ತವ್ಯ ಗುರು!
ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ

