Showing posts with label ನಾಡಿನ ಸಂಪತ್ತು. Show all posts
Showing posts with label ನಾಡಿನ ಸಂಪತ್ತು. Show all posts

ಬಂಡಿಪುರ: ಸರಿಯಾದ ನಿಲುವು ತೋರಿದ ಸರ್ಕಾರ!

(ಫೋಟೋ ಕೃಪೆ: ಉದಯವಾಣಿ)

ಬಂಡಿಪುರದ ಕಾಡಿನ ನಡುವೆ ಕರ್ನಾಟಕ - ಕೇರಳ - ತಮಿಳುನಾಡಿಗೆ ಸಾಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ದಾರಿಗಳಲ್ಲಿ ಇರುಳು ಸಂಚಾರವನ್ನು ನಿಶೇಧಿಸಲಾಗಿದೆ. ಇದಕ್ಕೆ ಈ ದಾರಿಗುಂಟಾ ಇರುವ ವೈವಿಧ್ಯಮಯ ವನ್ಯಜೀವಿಗಳ ಜೀವ ಮತ್ತು ಖಾಸಗಿತನದ ರಕ್ಷಣೆಯ ಬಗ್ಗೆ ಇರುವ ಕಾಳಜಿಯೇ ಕಾರಣವಾಗಿದ್ದು... ಕರ್ನಾಟಕ ಸರ್ಕಾರ ತನ್ನ ನೆಲದಲ್ಲಿ ಈ ನಿಶೇಧವನ್ನು ಜಾರಿಮಾಡಿದೆ. ಈ ನಿಲುವಿನಿಂದಾಗಿ ಕೇರಳ ಕಸಿವಿಸಿಗೊಳಗಾಗಿದ್ದು ಈ ಇರುಳು ಸಂಚಾರ ನಿಶೇಧವನ್ನು ತೆಗೆದುಹಾಕುವಂತೆ ಎಲ್ಲಾ ಬಗೆಯಲ್ಲಿ ಒತ್ತಡವನ್ನು ಕರ್ನಾಟಕದ ಮೇಲೆ ಹಾಕುತ್ತಾ ಬಂದಿದೆ.

ಇಂಥದ್ದೇ ಒತ್ತಡ ಹಾಕಲು ಈ ಬಾರಿಯೂ ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಉಮ್ಮಾನ್ ಚಾಂಡಿಯವರು ಬೆಂಗಳೂರಿಗೆ ಬಂದಿದ್ದರು. ಇವರನ್ನು ಭೇಟಿ ಮಾಡಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನೇರವಾಗಿಯೇ ನಿಶೇಧ ತೆರವು ಮಾಡಲಿಕ್ಕಾಗದು ಎಂದಿದ್ದಾರೆ. ಬದಲಿ ಮಾರ್ಗವನ್ನು ಕಂಡುಕೊಳ್ಳುವ ಬಗ್ಗೆ ಒಲವು ತೋರಿದ್ದಾರೆ.. ಕರ್ನಾಟಕದ ಆನೆ, ಹುಲಿ, ಕಾಡೆಮ್ಮೆ, ಜಿಂಕೆಗಳೇ ಸೇರಿದಂತೆ ವನ್ಯಜೀವಿ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಟ್ಟಿನಿಲುವು ತೋರಿದ್ದಾರೆ. ಅಭಿನಂದನೆಗಳು.

ಕೊನೆಹನಿ: ಕರ್ನಾಟಕದ ಜನರಿಂದಲೇ ಆಯ್ಕೆಯಾಗಿರುವ ವಲಸಿಗರಾದ ಒಬ್ಬ ಸಚಿವಮತ್ತೊಬ್ಬ ಶಾಸಕರು ಈ ವಿಷಯವಾಗಿ ಕೇರಳದ ಪರವಾದ ಲಾಬಿಯನ್ನು ನಡೆಸಿ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಲು ಮುಂದಾದರು ಎಂಬ ಸುದ್ದಿಯನ್ನು ನೋಡಿದಾಗ ನಮ್ಮವರೇ ನಮ್ಮ ಜನಪ್ರತಿನಿಧಿಗಳಾಗಿರಬೇಕಾದ ಅಗತ್ಯ ಅರಿವಾಗುತ್ತದೆ. ಯೋಚಿಸಿ ನೋಡಿ... ರಾಜಕೀಯದ ಈ ಏರಿಳಿತದಾಟದಲ್ಲಿ ನಾಳೆ ನಮ್ಮ ನಾಡಿನವರಲ್ಲದ ವ್ಯಕ್ತಿಯೇ ಕರ್ನಾಟಕದ ಮುಖ್ಯಮಂತ್ರಿಯಾಗಿಬಿಟ್ಟರೆ ನಾಡನ್ನು ತಮ್ಮ ತವರಿನ ಪದತಳಕ್ಕೆ ಅರ್ಪಿಸುವುದಿಲ್ಲಾ ಎನ್ನಲಾಗುವುದೇ!




ಕನ್ನಡಿಗರ ಕಣ್ಮಣಿಯ ನೆನಪಲ್ಲಿ...


(ವಿಡಿಯೋ ಕೃಪೆ: ಯೂಟ್ಯೂಬ್)

ಇಂದು ಡಾ. ರಾಜ್‌ಕುಮಾರ್ ಹುಟ್ಟಿದ ದಿನ. ಕನ್ನಡಪರರ ಪಾಲಿಗೆ ನಾಡಪರ ಬದ್ಧತೆಯನ್ನು ಮರುಖಾತ್ರಿ ಪಡಿಸುವ ದಿನವಿದು ಎಂದರೆ ತಪ್ಪಾಗಲಾರದು. ತನ್ನ ಚಿತ್ರಗಳಿಂದ, ಚಿತ್ರಗಳಲ್ಲಿನ ಪಾತ್ರಗಳಿಂದ ನಮ್ಮೆಲ್ಲರ ಮೈಮನಗಳನ್ನು ಆವರಿಸುವ ರಾಜ್ ಅವರು ನಮ್ಮ ಸಮಕಾಲೀನರು ಎನ್ನುವುದೇ ಒಂದು ಹೆಮ್ಮೆಯ ವಿಷಯ. ಈ ದಿನ ಅವರನ್ನು ನೆನೆಸದ ಕನ್ನಡಿಗರೇ ಇಲ್ಲಾ! ರಾಜ್! ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನದ ಮನವೇ ಇಲ್ಲಾ!

ತಾವು ಅಭಿನಯಿಸಿದ ಪಾತ್ರಗಳು ಎಂಥವೇ ಇರಲಿ.. ಎಂದಿಗೂ ಸಭ್ಯತೆಯನ್ನು ಮೀರದ ಪಾತ್ರಗಳು ಅವಾಗಿರುತ್ತಿದ್ದವು. ಕನ್ನಡಜನತೆಯ ಇತಿಹಾಸವನ್ನು ಮತ್ತೆ ಕಣ್ಮುಂದೆ ಕಟ್ಟಿಕೊಟ್ಟು ನಾವೇನೂ ಕುರಿಮರಿಗಳಲ್ಲಾ... ದೊಡ್ಡದನ್ನು ಸಾಧಿಸಲೆಂದೇ ಹುಟ್ಟಿರುವ ಸಿಂಹಗಳು ಎಂಬುದನ್ನು ಸದಾ ನೆನಪಿಸುವ ಮಯೂರ ಚಿತ್ರದ ಈ ದೃಶ್ಯ ಸದಾ ಪ್ರೇರಕ, ಸ್ಪೂರ್ತಿದಾಯಕ. ಡಾ. ರಾಜ್ ಹುಟ್ಟುಹಬ್ಬದ ಶುಭಾಶಯಗಳು!!

ಅಕ್ರಮ ಮೀನುಗಾರಿಕೆ ಮತ್ತು ನಾಡಿನ ಸಂಪನ್ಮೂಲ ರಕ್ಷಣೆಯ ಹೊಣೆ!

(ಫೋಟೋ ಕೃಪೆ: ಗೂಗಲ್ ಅಂತರ್ಜಾಲ ತಾಣ)
ಕರ್ನಾಟಕ ರಾಜ್ಯದ ಅತಿ ದೊಡ್ಡ ನೈಸರ್ಗಿಕ ಬಂದರಾದ ಮಲ್ಪೆ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇದು ಇಡೀ ಕರಾವಳಿಗೆ ಮೀನುಗಾರಿಕೆಯ ರಾಜಧಾನಿಯಿದ್ದಂತೆ! ಒಟ್ಟು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ, ಕಡಲನ್ನೇ ದೈವವೆಂದು ತಿಳಿದು, ಮೀನುಗಾರಿಕೆಯಿಂದಲೇ ಬದುಕುತ್ತಿರುವ ಸಾವಿರಾರು ಮೀನುಗಾರ ಕುಟುಂಬಗಳು ನಮ್ಮ ಕರಾವಳಿಯಲ್ಲಿವೆ. ಇತ್ತೀಚಿಗೆ ಇವರುಗಳು ಸೇರಿ ನಡೆಸಿದ ಪ್ರತಿಭಟನೆಯೊಂದರ ಬಗ್ಗೆ ವರದಿಗಳು (ಹಿಂದೂ, ದಟ್ಸ್ ಕನ್ನಡ, ಗಲ್ಫ಼್ ಕನ್ನಡಿಗ) ಪ್ರಕಟವಾಗಿದೆ. ಮೇಲ್ನೋಟಕ್ಕೆ ಇದು ಮೀನುಗಾರಿಕೆ ಸಮಸ್ಯೆಯ ಹಾಗೆ ಕಂಡರೂ ಒಳಸುಳಿ ಬೇರೆಯೇ ಇದೆ. ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಇದು ಎತ್ತುವ ಪ್ರಶ್ನೆಗಳು ಅನೇಕ!

ಕರಾವಳಿ ಮೀನುಗಾರಿಕೆಗೆ ಇರುವ ನಿಯಮ!

ನಮ್ಮ ಕರಾವಳಿಯಲ್ಲಿ ಒಂದು ವಿಶೇಷ ತಳಿಯ ಮೀನಿದೆ. ಇದರ ಹೆಸರು "ಕಟ್ಲ್ ಫಿಶ್" ಅಂದರೆ ಕಪ್ಪೆ ಬೊಂಡಾಸೆ ಮೀನು. ಈ ಮೀನು ಹಿಡಿಯಲು ಸಾಂಪ್ರದಾಯಿಕ ಶೈಲಿಯನ್ನು ಇಲ್ಲಿನ ಮೀನುಗಾರರು ಬಳಸುತ್ತಿದ್ದಾರಂತೆ. ಆದರೆ ಇತ್ತೀಚಿಗೆ ಕೆಲವರ್ಷಗಳಿಂದ ತಮಿಳುನಾಡಿನಿಂದ ವಲಸೆ ಬಂದಿರುವ ಮೀನುಗಾರರು ಸಿಡಿಮದ್ದು ಸಿಡಿಸಿ ಒಟ್ಟೊಟ್ಟಿಗೆ ರಾಶಿ ರಾಶಿ ಮೀನುಗಳನ್ನು ಹಿಡಿದು ಹಾಕುತ್ತಿದ್ದಾರೆ ಎನ್ನುವುದು ಸ್ಥಳೀಯ ಮೀನುಗಾರರ ದೂರು! ಈ ಜಾತಿಯ ಮೀನುಗಳು ಮರಿಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೂ ಈ ಮೀನು ಹಿಡಿಯುವುದಿಲ್ಲ. ಏಕೆಂದರೆ ಇದರಿಂದ ಇವುಗಳ ಸಂತತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಈ ಸಮಯದಲ್ಲಿ ಮೀನುಗಾರಿಕೆಯನ್ನು ಅದರಲ್ಲೂ ವಿಶೇಷವಾಗಿ ಯಾಂತ್ರಿಕ ದೋಣಿ ಬಳಕೆಯೂ ಸೇರಿದಂತೆ ಎಲ್ಲಾ ಅಸಂಪ್ರದಾಯಿಕ ವಿಧಾನವನ್ನು ನಿಶೇಧಿಸಲಾಗಿದೆ. ಈಗಾಗಲೇ ಉಡುಪಿ ಜಿಲ್ಲಾ ಆಡಳಿತ ಸಿಡಿಮದ್ದು ಬಳಸಿ ಮೀನು ಹಿಡಿಯುವುದನ್ನು ನಿಶೇಧಿಸಿದೆ. ಹೀಗಿದ್ದರೂ ಪರರಾಜ್ಯದ ಮೀನುಗಾರರುಗಳು ಕಾನೂನು ಮುರಿಯುವ ಮೂಲಕ ಆ ಬಗೆಯ ಮೀನುಗಳ ಸರ್ವನಾಶಕ್ಕೆ ಕಾರಣವಾಗಿದ್ದಾರೆ ಎನ್ನುವುದು ನಮ್ಮ ಬೆಸ್ತರ ಕಾಳಜಿಯಾಗಿದೆ. ಈ ಕಾರಣದಿಂದಾಗಿ ಕೆಲದಿನಗಳ ಹಿಂದೆ ಒಂದು ಬಂದ್ ಕೂಡಾ ನಡೆದಿದೆ. ಇದಕ್ಕೆಂದೇ ನಮ್ಮ ಕರಾವಳಿಯ ಬೆಸ್ತರು ಹೊರರಾಜ್ಯದ ಬೆಸ್ತರ ದೋಣಿಗಳು ನಮ್ಮ ರಾಜ್ಯದ ಕಡಲಗಡಿಗೆ ಬಾರದಂತೆಯೂ, ಹೊರರಾಜ್ಯದ ಮೀನುಗಾರರಿಗೆ ಕಡಿವಾಣ ಹಾಕುವಂತೆಯೂ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಉತ್ತರವಾಗಿ ಶಾಸಕ ಶ್ರೀ ರಘುಪತಿಭಟ್ ಅವರು ಮಾತಾಡಿ "ಅನ್ಯರಾಜ್ಯದವರು ಇಲ್ಲಿಗೆ ಬಂದು ಮೀನುಗಾರಿಕೆ ನಡೆಸಬಾರದೆನ್ನುವ ಯಾವುದೇ ಕಾಯ್ದೆಯೂ ನಮ್ಮಲ್ಲಿಲ್ಲಾ, ಆದರೂ ಮುಖ್ಯಮಂತ್ರಿಗಳ ಬಳಿ ಹೇಳಿ ಮಸೂದೆ ಮಂಡಿಸುತ್ತೇನೆ" ಎಂದು ಸ್ವಲ್ಪ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರಂತೆ! ನಮ್ಮ ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲುಬೇಕಾದ ನೀತಿ ನಿಯಮಗಳನ್ನು ರೂಪಿಸಿಕೊಳ್ಳುವ ಹಕ್ಕು ನಮ್ಮ ರಾಜ್ಯಸರ್ಕಾರದ ಕೈಲಿರಬೇಕಾದ್ದು ನ್ಯಾಯವಲ್ಲವಾ ಗುರೂ!? ಹೊರನಾಡಿನ ಮೀನುಗಾರರು ನಮ್ಮ ಪ್ರದೇಶದೊಳಗೆ ಬರಬೇಕಾದರೆ ನಮ್ಮ ರಾಜ್ಯಸರ್ಕಾರದ ಅನುಮತಿ ಪಡೆದುಕೊಳ್ಳಬೇಕಲ್ಲವಾ? ಇವೆಲ್ಲವನ್ನೂ ಸರ್ಕಾರ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ನಲಿವಿನ ಹಾರೈಕೆಗಳು ನೆಚ್ಚಿನ ಕಂಬಾರ ಅವರಿಗೆ !

ಕನ್ನಡನಾಡಿನ ಹೆಮ್ಮೆಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರಿಗೆ ಈಗ ಜ್ಞಾನಪೀಠ ಪ್ರಶಸ್ತಿಯ ಗರಿ. ಇದು ಕರ್ನಾಟಕಕ್ಕೆ ಎಂಟನೆ ಬಾರಿ ಸಂದ ಗೌರವ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಚಿತ್ರನಟ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಕನ್ನಡ ಸಾಹಿತ್ಯ ಲೋಕದ ಸಿರಿಯನ್ನು ಹೆಚ್ಚಿಸಿದವರು ಇವರು. ಕುವೆಂಪು, ಶಿವರಾಮ ಕಾರಂತ, ದ ರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ ಕೃ ಗೋಕಾಕ, ಗಿರೀಶ್ ಕಾರ್ನಾಡ್ ಮತ್ತು ಯು ಆರ್ ಅನಂತಮೂರ್ತಿಯವರ ನಂತರ ಈಗ ಕಂಬಾರರು ಕರ್ನಾಟಕಕ್ಕೆ ಗೌರವ ತಂದಿದ್ದಾರೆ. ಅವರಿಗೆ ಬನವಾಸಿ ಬಳಗ ಮನದುಂಬಿ ಶುಭಾಶಯಗಳನ್ನು  ಸಲ್ಲಿಸುತ್ತದೆ.

ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?

ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ. ಏನಿದು ಮಹದಾಯಿ ಯೋಜನೆ? ಏನು ಈ ವಿವಾದ? ಎಂಬುದನ್ನು ಸ್ವಲ್ಪ ನೋಡೋಣ ಬಾ ಗುರು!

ಮಹದಾಯಿ ಹುಟ್ಟು ಮತ್ತು ಹರಿವು
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.

ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ

1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು. ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.

ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾ
ಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.

ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ? ಒಟ್ಟಿನಲ್ಲಿ ಇದು ಹುಬ್ಬಳ್ಳಿ ಗದಗುಗಳ ಕುಡಿಯುವ ನೀರಿನ ಬವಣೆಯನ್ನು ಇನ್ನೂ ಹೆಚ್ಚು ಮಾಡುತ್ತದೆ ಅಲ್ವಾ ಗುರೂ?

ಹೊಗೇನಕಲ್ ವಿವಾದ: ಸರಿಯಾಗಿ ದನಿ ಎತ್ತಬೇಕು!


ತಮಿಳುನಾಡು ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಂಡಿರೋದ್ರು ಬಗ್ಗೆ ಘನ ಕರ್ನಾಟಕ ರಾಜ್ಯ ಸರ್ಕಾರದೋರು ಕೇಂದ್ರಸರ್ಕಾರಕ್ಕೆ ದೂರು ಒಯ್ದು, ನ್ಯಾಯ ಕೇಳಿದ್ದಕ್ಕೆ ಕೇಂದ್ರಸರ್ಕಾರದೋರು ಸಕ್ಕತ್ತಾಗಿ ಮಂಗಳಾರತಿ ಎತ್ತಿ ಕಳಿಸಿರೋ ಸುದ್ದಿ ದಿನಾಂಕ 22.06.2010ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ರಾರಾಜುಸ್ತಿದೆ ಗುರೂ! ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರ್ನಾಟಕ ಎತ್ತಿರೋ ತಕರಾರಿನ ಬಗ್ಗೆ ಅಸಮಾಧಾನ ತೋರಿಸಿದೆ.

ತಕರಾರಿನ ಬಗ್ಗೆ ಕೇಂದ್ರಕ್ಕೆ ಗೊತ್ತಾ?
ಈ ವರದಿ ಓದಿದಾಗ, ಇಡೀ ಹೊಗೇನಕಲ್ ಯೋಜನೇನಾ ಕರ್ನಾಟಕ ಯಾಕೆ ವಿರೋಧುಸ್ತಾಯಿದೆ ಅನ್ನೋದ್ರು ಬಗ್ಗೆಯೇ ಕೇಂದ್ರಕ್ಕೆ ಸ್ಪಷ್ಟತೆ ಇದ್ದಂಗಿಲ್ಲ ಅನ್ಸುತ್ತೆ. ತಮಿಳುನಾಡಿನೋರು ಯೋಜನೆಯ ಆರಂಭದಲ್ಲಿ 1.4 ಟಿ.ಎಂ.ಸಿ ಅಂದು, 2.1 ಟಿ.ಎಂ.ಸಿ ಬಳುಸ್ತಾರೆ ಅನ್ನೋದು ಕರ್ನಾಟಕದ ಪ್ರಮುಖ ಆರೋಪ ಆಗಿತ್ತೇನೋ ಅಂತಾ ವರದಿ ನೋಡಿದಾಗ ಅನ್ನಿಸುತ್ತೆ. ನಮ್ಮ ನೆಲದಲ್ಲಿ ಅಕ್ರಮವಾಗಿ ಯೋಜನೆ ಮಾಡ್ತಾ ಇದಾರೆ ಅನ್ನೋ ಕಾರಣಕ್ಕೆ ಇದುನ್ನ ತಡೀಬೇಕು. ಜಂಟಿ ಸರ್ವೇ ಆದಮೇಲೆ ಮುಂದುವರುಸ್ಲಿ ಅನ್ನೋ ವಿಷಯದ ಮೇಲೆ ಯಾಕೋ ಒತ್ತು ಕೊಟ್ಟಿರೋ ಹಾಗೇ ಕಾಣ್ತಿಲ್ಲ. ಯಾಕಂದ್ರೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ, ನಿಮ್ಮ ತಕರಾರು ಗಡಿ ಬಗ್ಗೆ ಇದ್ದಲ್ಲಿ ಗೃಹ ಖಾತೆ ಹತ್ರ ದೂರು ಒಯ್ಯಿರಿ ಅಂತಾ ಅಂದಿದೆ.

ಗಡಿ ಅತಿಕ್ರಮಣವೇ ಮುಖ್ಯ ವಿಷಯ.
ನಿಜವಾಗಲೂ ಕರ್ನಾಟಕದ ತಕರಾರು ಇರೋದು ಗಡಿ ಅತಿಕ್ರಮಣದ ಬಗ್ಗೆ. ಯಾಕೆ ತಮಿಳುನಾಡು ಹೊಗೇನಕಲ್ ಗಡಿಯ ಜಂಟಿ ಸಮೀಕ್ಷೆಯನ್ನು ಅರ್ಧದಲ್ಲೇ ನಿಲ್ಲಿಸಿ ಮುಂದುವರಿಸಲು ಒಪ್ಪದೆಯೇ ಯೋಜನೆ ಆರಂಭಿಸುತ್ತಿದೆ ಅನ್ನೋದರ ಬಗ್ಗೆ. ಕೇಂದ್ರಸರ್ಕಾರ ಮಧ್ಯಸ್ಥಿಕೆ ವಹಿಸಿ ಗಡಿ ಸಮೀಕ್ಷೆ ಮಾಡಿಸಿ, ಅವರ ನೆಲದಲ್ಲಿ ಅವರು ಕುಡಿಯುವ ನೀರಿನ ಯೋಜನೆಯನ್ನು ಒಪ್ಪಂದದಂತೆ ಮಾಡಲು ನಮ್ಮ ಅಭ್ಯಂತರವೇನಿಲ್ಲಾ. ಈ ನಮ್ಮ ನಿಲುವಿನ ಬಗ್ಗೆ ಚಕಾರವನ್ನೇ ಎತ್ತದೆ ಕೇಂದ್ರ ಸಚಿವಾಲಯ ಕಳಸಾ ಭಂಡೂರಾ ತಕರಾರನ್ನು ಇದರೊಟ್ಟಿಗೆ ತಳುಕು ಹಾಕಿದ ಹಾಗಿದೆ. ಇಷ್ಟಕ್ಕೂ ಕರ್ನಾಟಕ ಈ ಹಿಂದೆ ಚೆನ್ನೈನ ಕುಡಿಯುವ ನೀರಿನ ಯೋಜನೆಗಾಗಿ ಕೃಷ್ಣಾ ನದಿಯ ನಮ್ಮ ಪಾಲಿನ ಐದು ಟಿ.ಎಂ.ಸಿಯಷ್ಟು ನೀರನ್ನು ಬಿಟ್ಟು ಕೊಟ್ಟಿರೋದನ್ನು ನಾವಾದ್ರೂ ನೆನಪು ಮಾಡಬೇಕಿತ್ತು. ಇಲ್ಲಾಂದ್ರೆ ಹೀಗೆ ‘ಕರ್ನಾಟಕ ಕುಡಿಯೋ ನೀರಿನ ಯೋಜನೆಗೆ ತೊಡರುಗಾಲಿಕ್ಕುವ ಅಮಾನವೀಯ ರಾಜಕೀಯ ಮಾಡ್ತಾಯಿದೆ’ ಅನ್ನೋ ಥರದಾ ಆರೋಪಕ್ಕೆ ಗುರಿಯಾಗಬೇಕಿತ್ತಾ? ಇದುಕ್ಕೆಲ್ಲಾ ನಮ್ಮ ರಾಜ್ಯ ಸರಿಯಾದ ಉತ್ತರ ಕೊಡಬೇಕಿದೆ. ನಿಜಕ್ಕೂ ರಾಜ್ಯದ ಹಕ್ಕುಗಳಿಗಾಗಿ ಬಡಿದಾಡಬೇಕು ಅನ್ನೋ ರಾಜಕೀಯ ಇಚ್ಛಾಶಕ್ತಿ ತನಗಿದೆ ಅನ್ನೋದನ್ನು ನಮ್ಮ ರಾಜ್ಯಸರ್ಕಾರ ತೋರಿಸಿಕೊಡಬೇಕಾಗಿದೆ. ಅಲ್ವಾ ಗುರೂ!

ನಮ್ ಕಾಡೊಳಿಕ್ ನುಗ್ತಿರೋ ಪುಂಡುದನಗೋಳ್ನ ತಡ್ಯೋರು ಯಾರು?

ನಮ್ಮ ಬಂಡೀಪುರದ ಕಾಡೊಳಕ್ಕೆ ಪಕ್ಕದ್ ಕೇರಳದಿಂದ ಪ್ರವಾಸಿಗಳು ಬಂದು ಕಾಡ್ನ ಎಕ್ಕುಟ್ಟುಸ್ತಾ ಔರೆ ಅನ್ನೋ ಒಂದ್ ಸುದ್ದಿ ಇತ್ತೀಚ್ಗೆ "ದಿ ಹಿಂದೂ" ಪೇಪರ‍್ನಾಗ್ ಬಂದೈತೆ ಗುರೂ! ಅಲ್ಲಾ... ನಮ್ ನಾಡಲ್ಲಿ ಈ ಮಟ್ಟಿಗೆ ಏಳೋರು ಕೇಳೋರು ಇಲ್ದಂಗ್ ಆಗೋಯ್ತಾ? ನಮ್ ಪೊಲೀಸು, ಕಾಡಾಪೀಸೋರು ಎಲ್ಲಾ ಏನ್ ಕಳ್ಳೆಪುರಿ ತಿಂತಾ ಔರಾ ಅಂತಾ ನಾಡ್ ಜನವೆಲ್ಲಾ ಉರ‍್ಕೊಂಡ್ ಎಗುರ್ ಬೀಳ್ತಾ ಔರಂತೆ ಗುರೂ!


ರಕ್ಸಿತ ಅರಣ್ಯ ಪ್ರದೇಸ!


ಈ ಬಂಡೀಪುರ ಅನ್ನೋದೇ ಒಂಥರಾ ಆನೆ, ಕಾಡ್‍ಕ್ವಾಣ, ಉಲಿ, ಜಿಂಕೆ, ಆವು ಅಂತಾ ಪಿರಾಣಿಗಳಿಗೆ ಸ್ವರ್ಗಾ ಇದ್ದಂಗೆ. ಇವೆಲ್ಲಾ ದೇಸುದ್ ಸಂಪತ್ತು ಅಂತಾ ಇವುನ್ನ ಕಾಪಾಡ್ಕೊಂಬೇಕು ಅಂತಾನೇ ಇಡೀ ಕಾಡುನ್ನ ರಕ್ಸಿತ ಪ್ರದೇಸ ಅಂತಾ ಮಾಡವ್ರೆ. ಅಲ್ಲಿ ಅರಣ್ಯ ಇಲಾಖೆಯೋರು ಇರೋ ೯೯೦ ಚ.ಕೀ ಜಾಗದಲ್ಲಿರೋ ೩೨ ಚ.ಕೀ ಅಷ್ಟ್ ಜಾಗಾನ ಪ್ರವಾಸೋದ್ಯಮಕ್ಕೆ ಅಂತಾ ಬುಟ್ಕಂಡವ್ರೆ. ಆದ್ರೆ ಗುಂಡ್ರೆ, ಬೇಗೂರ್ ಅನ್ನೋ ಕಾಡ್ ಪ್ರದೇಶಕ್ಕೆ ಕೇರಳದ್ ಕಡೆಯಿಂದ ಉಂಡಾಡಿ ದನಗೋಳಂಗೆ ಮಜಾ ಮಾಡಕ್ಕೆ ಜನುಗೋಳ್ ಬಂದ್ ಓಯ್ತಿರ್ತಾರಂತೆ. ಇಂಗ್ ಬರೋರಿಂದ ಇಲ್ಲಿ ಕಾಡು ಪ್ರಾಣಿಗಳ ನೆಮ್ಮದಿ ಎಕ್ಕುಟ್ ಓಗಿದೆಯಂತೆ. ಅದೂ ಅಲ್ದೆ ಅಂಗ್ ಬರೋರ ಪ್ರಾಣುಕ್ ಏನಾರ ಎಚ್ಚೂ ಕಮ್ಮಿ ಆಯ್ತೂಂದ್ರೆ ನಾಳೆ ಅದುಕ್ ಯಾರ್ ಒಣೆ ಅಂತಾ. ಇದ್ಯಾಕೋ ಸರೀಗಿಲ್ಲಾ ಗುರೂ! ಇಂಗ್ ಬರೋ ಬಡ್ಡೆತ್ತವುನ್ನ ಕಂಟ್ರೋಲ್ ಮಾಡಕ್ಕೆ ಕೇರಳ ಸರ್ಕಾರದೋರು ಕ್ರಮಾ ತೊಗೊಂಬೇಕು. ಇಲ್ಲಾ ಅಂದ್ರೆ ನಮ್ ಕಾಡು ಕಾಯೋ ಪೋಲೀಸ್ನೋರಾದ್ರೂ ಸರಿಯಾದ್ ಕಡೆ ಅಂದ್ರೆ ಎಲ್ಡೂ ರಾಜ್ಯಾ ಸೇರೋ ಸೇತುವೇ ತಾವ ಬಲವಾದ ಕಾವಲು ಹಾಕ್ಬೇಕು. ಮೊನ್ ಮೊನ್ನೆ ತಾನೆ ಕೇರಳುದ್ ಸರ್ಕಾರದೋರು ಕರ್ನಾಟಕದ್ ಕಾಡು, ಕಾಡುಪ್ರಾಣಿ ಎಲ್ಲಾ ಆಳಾದ್ರೂ ಪರ್ವಾಗಿಲ್ಲಾ, ರಾತ್ರಿ ಓಡಾಡಕ್ ರಸ್ತೇಲಿ ಬುಡಬೇಕು ನಮ್ ಗಾಡಿಗೋಳ್ಗೆ ಅವಕಾಸ ಕೊಡಬೇಕು ಅನ್ನೋ ಕೂಗೆಬ್ಬಿಸಿ ಲಾಬಿ ಮಾಡ್ತಾ ಇದ್ದುದ್ ಸುದ್ದಿ ಬಂದಿತ್ತು. ಈಗ್ ನೋಡುದ್ರೆ ಜನ್ರು ಕಾಟ. ಒಟ್ನಲ್ಲಿ ನಮ್ ಕರ್ನಾಟಕದಾಗಿರೋ ನೀರು, ಕಾಡು, ರೋಡು ಎಲ್ಲಾನೂ ಒಳ್ಳೇ ತ್ವಾಟದಪ್ಪನ್ ಚತ್ರುದ್ ಥರಾ ಆಗೋಗದೇ ಅಂತಾ ಜನ ಮುನುಸ್ಕೊಂಡ್ ಕುಂತವ್ರೇ ಗುರೂ!

ಬಂಡಿಪುರ ರಸ್ತೆ ಮತ್ತು ಒಕ್ಕೂಟ ವ್ಯವಸ್ಥೆ!

ಬಂಡಿಪುರ ಕಾಡಲ್ಲಿ ಇರುಳಲ್ಲಿ ಗಾಡಿಗಳು ಓಡಾಡಬಾರದು ಅಂತಾ ರಾಜ್ಯ ಹೈಕೋರ್ಟು ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಹೇಳಿದ್ದ ಸುದ್ದಿ ಇತ್ತೀಚಿಗೆ ನಾವೆಲ್ಲಾ ಓದಿದೀವಿ ಗುರು! ಕಾಡುಪ್ರಾಣಿಗಳು ಇರುಳಲ್ಲಿ ಓಡಾಡೋ ಗಾಡಿಗಳಿಗೆ ಸಿಕ್ಕಿ ಸಾಯ್ತಿವೆ ಅನ್ನೋ ಕಳವಳಕಾರಿ ವಿಷಯದಿಂದಾಗಿ ಇಂಥಾ ಕ್ರಮ ಜಾರಿಯಾಗಿದೆ ಅನ್ನೋದೂ ದಿಟ. ಹೊಸಾ ಸುದ್ದಿ (ಪ್ರಜಾವಾಣಿ, ದಿ.09.02.2010 ಪುಟ 3) ಏನಪ್ಪಾ ಅಂದ್ರೆ ಈಗ ಕೇಂದ್ರಸರ್ಕಾರದೋರು ಕರ್ನಾಟಕಕ್ಕೆ ಬುದ್ಧಿ ಹೇಳಿ, ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಕೊಡಿ ಅಂತಾ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಒತ್ತಡಾ ಹೇರಕ್ಕೆ ಮುಂದಾಗಿದಾರಂತೆ.

ಕೇರಳ ಹಾಕ್ತಿರೋ ಒತ್ತಡ!

ಕೇರಳದ ಸಾರಿಗೆ ಮಾಫಿಯಾ ಅಲ್ಲಿನ ರಾಜಕಾರಣದಲ್ಲಿ ಹೊಂದಿರೋ ಬಿಗಿ ಹಿಡಿತದಿಂದಾಗಿ ಆ ರಾಜ್ಯದ ರಾಜಕಾರಣಿಗಳು ‘ತಮ್ಮ ರಾಜ್ಯದ ಆರ್ಥಿಕತೆಗೆ ಈ ರಾತ್ರಿ ಪ್ರಯಾಣ ನಿಲ್ಲಿಸಿದ್ದರಿಂದ ತೊಂದರೆ ಆಗಿದೆ’ ಅನ್ನೋ ಶಂಖಾನಾ ಜೋರಾಗೇ ಹೊಡ್ಕೊಳ್ಳೋಕೆ ಶುರು ಮಾಡಿದಾರೆ. ಆ ಜನ ನಮ್ಮ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಬಂದು ಮೊದಲಿಗೆ ಚಾಮರಾಜನಗರದ ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧದ ಆಜ್ಞೇನಾ ಯಶಸ್ವಿಯಾಗಿ ತೆರವು ಮಾಡ್ಸಿದ್ರು. ಆದ್ರೆ ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ನಿಷೇಧ ಮತ್ತೆ ಜಾರಿಯಾಯ್ತು. ಇದು ರಾಜ್ಯಸರ್ಕಾರಕ್ಕೆ ಈ ವಿಷಯದಲ್ಲಿ ಇರೋ ಅಸಡ್ಡೇನಾ ತೋರ್ಸುತ್ತೆ ಅಂತಾ ಹಿಂದಿನ ಸಾರೀನೇ ಜನ ಬೇಜಾರಾಗಿದ್ರು! ಈ ಸಲ ಕೇರಳದ ಲಾಬಿ ದಿಲ್ಲಿಯಲ್ಲಿ, ಕೇಂದ್ರಸರ್ಕಾರದ ಮಟ್ಟದಲ್ಲಿ ಜೋರಾಗಿ ನಡೆದಿದೆ. ಅದುಕ್ಕೇ ಕೇಂದ್ರದೋರು ಹೊಸ ವರಸೆ ತೆಗೆದಿದ್ದಾರೆ! ರಾಜ್ಯಸರ್ಕಾರ ಶರತ್ತುಬದ್ಧ ಅನುಮತಿಯ ಹೆಸರಲ್ಲಿ ಗಾಡಿಗಳ ಓಡಾಟಕ್ಕೆ ಅನುಮತಿ ಕೊಡೋ ಲಕ್ಷಣಗಳು ಕಾಣ್ತಿವೆ.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಅಧಿಕಾರ ವ್ಯಾಪ್ತಿ!

ಈ ವರದಿಯಲ್ಲಿರೋ ತಮಾಶೆ ನೋಡಿ. ಯಾವುದೇ ರಾಜ್ಯ ಸರ್ಕಾರ ತನ್ನ ನೆಲದಲ್ಲಿ ಸಂಚಾರ ನಿರ್ಬಂಧ ಹೇರಲು ಅವಕಾಶ ಇದ್ಯಂತೆ. ಆದ್ರೆ ಎರಡು ರಾಜ್ಯಗಳಿಗೆ ಸಂಬಂಧಿಸಿದ ರಸ್ತೆ ಆಗ್ಬುಟ್ರೆ ಕೇಂದ್ರ ರಸ್ತೆ ಸಾರಿಗೆ ಇಲಾಖೆಯೋರು ತಲೆ ತೂರುಸ್ಬೋದಂತೆ. ಇದು ಸಾಮಾನ್ಯ ಸಂದರ್ಭಗಳಲ್ಲಿ ಒಪ್ಪಬಹುದಾದ ಒಂದು ವ್ಯವಸ್ಥೆ ಅಂದುಕೊಂಡ್ರೂ ಕೇಂದ್ರಸರ್ಕಾರಕ್ಕೆ ನಮ್ಮ ಮೇಲೆ ತನ್ನ ನಿಲುವು ಹೇರೋ ಅಧಿಕಾರ ಇರೋದು ಎಷ್ಟು ಸರಿ? ಅನ್ಸಲ್ವಾ! ಬೇಕಂದ್ರೆ ಎರಡೂ ರಾಜ್ಯಗಳ ನಡುವೆ ಬಿಕ್ಕಟ್ಟು ಬರದಂಗೆ ಮಧ್ಯಸ್ಥಿಕೆ ವಹಿಸ್ತೀನಿ ಅನ್ನೋದ್ನ ಒಪ್ಪಬಹುದು. ಈಗ ನ್ಯಾಯಾಲಯ ತನ್ನ ನಿಲುವು ಸೂಚಿಸಿರೋ ವಿಷಯಕ್ಕೆ, ಅದೂ ಕಾಡುಪ್ರಾಣಿಗಳು ವಾಹನಗಳಿಗೆ ಬಲಿಯಾಗ್ಬಾರ್ದು ಅನ್ನೋ ಕಾರಣಕ್ಕೆ ಜಾರಿಗೆ ತಂದಿರೋ ನಿರ್ಬಂಧಾನ ಹೀಗೆ ರಾಜಕೀಯ ಲಾಬಿಯ ಕಾರಣದಿಂದಾಗಿ ತೆಗೆದು ಹಾಕ್ಸೋ ಪ್ರಯತ್ನ ಮಾಡೋದು ಸರೀನಾ? ಗುರು! ಎರಡು ರಸ್ತೆಗಳಲ್ಲಿ ರಾತ್ರಿ ಒಂಬತ್ತರಿಂದ ಬೆಳಗಿನ ಆರರವರೆಗೆ ಸಂಚಾರ ನಿಷೇಧ ಮಾಡೋ ಕಾರಣದಿಂದಾನೆ ಹಾಳಾಗಿಬಿಡೋ ಅಷ್ಟು ಕಳಪೆ ಆರ್ಥಿಕ ಪರಿಸ್ಥಿತಿ ಯಾವುದಾದ್ರೂ ರಾಜ್ಯಕ್ಕೆ ಇದೆ ಅನ್ನೋದೇ ನಂಬಕ್ಕಾಗದ ಮಾತು. ಅಂಥಾದ್ರಲ್ಲಿ ಆ ಮಾತ್ ಕಟ್ಕೊಂಡು ನಮ್ಮ ಮೇಲೆ ಅಧಿಕಾರ ಚಲಾಯ್ಸೋಕೆ ಅವಕಾಶ ಮಾಡಿಕೊಡೋ ಅಂಥಾ ವ್ಯವಸ್ಥೆ ನಮ್ಮ ಭಾರತ ಒಕ್ಕೂಟದ್ದು ಅನ್ನೋದು, ನಿಜಕ್ಕೂ ಯೋಚನೆ ಮಾಡಬೇಕಾದ ವಿಷಯಾ ಅಲ್ವಾ? ಈಗ ಕರ್ನಾಟಕ ರಾಜ್ಯ ಸರ್ಕಾರದೋರೇ ‘ಕಾಡುಪ್ರಾಣಿಗಳ ಉಳಿವಿಗಾಗಿ ಲಾಬಿಗಳಿಗೆ ಮಣಿಯಲ್ಲಾ... ನಾಡು, ನಾಡಿನ ಜನ, ನಾಡಿನ ಸಂಪತ್ತು, ನಾಡಿನ ಜೀವವೈವಿಧ್ಯ ಕಾಪಾಡೋ ವಿಷಯದಲ್ಲಿ ರಾಜಿಯಾಗಲ್ಲಾ’ ಅನ್ನೋದನ್ನ ಸಾಬೀತು ಮಾಡ್ತಾರಾ? ಗುರು!

ಚಾಮಯ್ಯ ಮೇಷ್ಟ್ರು ಇನ್ನಿಲ್ಲ !

ಸುಮಾರು 370ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ, ಕಳೆದ ಹಲವು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ಸಾಮಾಜಿಕ, ಸಾಂಸಾರಿಕ ಪಾತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಂತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಹಿರಿಯ ನಟ ರಾಮಾಚಾರಿಯ ಚಾಮಯ್ಯ ಮೇಷ್ಟ್ರು ಕೆ.ಎಸ್ ಅಶ್ವತ್ಥ್ ನಮ್ಮನ್ನೆಲ್ಲ ಅಗಲಿದ ದುಃಖದ ಸುದ್ದಿ ಬಂದಿದೆ ಗುರು ! ತಂದೆ ಅಂದರೆ ಇವರಂತೆ ಇರಬೇಕು ಅನ್ನುವ ಹಾಗೇ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದ ಇವರು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಮೊನ್ನೆಯಷ್ಟೇ ವಿಷ್ಣುವರ್ಧನ್, ಗಾಯಕ ಅಶ್ವಥ್ ಅವರನ್ನು ಕಳೆದುಕೊಂಡು ಬಡವಾಗಿದ್ದ ಕನ್ನಡ ಚಿತ್ರರಂಗಕ್ಕೆ ಇದು ಬರ ಸಿಡಿಲಿನಂತೆ ಎರಗಿದೆ ಗುರು. ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಕಾಡನ್ನು ಕಾಪಾಡಬೇಕಾದ ಸರ್ಕಾರವೆಂಬ ಬೇಲಿಯೇ ಮೇಯದಿರಲಿ!

ಕಾಡುಪ್ರಾಣಿಗಳ ಜೀವ ತೆಗೆಯೋ ಇರುಳು ಓಡಾಟಕ್ಕೆ ಅನುಮತಿ ಕೊಡೋ ಕ್ರಮಕ್ಕೆ ಮುಂದಾಗಬೇಡಿ ಅಂತಾ ಹೈಕೋರ್ಟು ಕರ್ನಾಟಕ ರಾಜ್ಯಸರ್ಕಾರಾನ ತರಾಟೆಗೆ ತೊಗೊಂಡಿರೋ ಸುದ್ದಿ ದಿನಾಂಕ 05.11.2009ರ ವಿಜಯಕರ್ನಾಟಕದ 12ನೇ ಪುಟದಲ್ಲಿ ಬಂದಿದೆ ಗುರು! ನಮ್ಮ ಕರ್ನಾಟಕದ ಬಂಡಿಪುರದ ಕಾಡು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆಗಳಂತಹ ಪ್ರಾಣಿಗಳ ಜೊತೆಗೆ ಅನೇಕ ಅಪರೂಪದ ಜೀವಿಗಳಿಗೆ ತವರಾಗಿದೆ. ಅಷ್ಟೇ ಅಲ್ದೆ ಇಲ್ಲಿ ಅತ್ಯಂತ ಬೆಲೆಬಾಳುವ ಶ್ರೀಗಂಧದಂತಹ ಮರಗಿಡಗಳೂ ಬೆಳೆಯುತ್ತವೆ. ಇದುನ್ನೆಲ್ಲಾ ಕಾಪಾಡ್ಕೋಬೇಕಾದ್ದು ನಮ್ಮ ಅಂದ್ರೆ ನಮ್ಮ ಸರ್ಕಾರದ ಹೊಣೆ. ಈ ಮಾತ್ನ ಕರ್ನಾಟಕ ಸರ್ಕಾರಕ್ಕೆ ರಾಜ್ಯ ಹೈಕೋರ್ಟು ಬೈದು ಹೇಳಿದೆ.

ಇಷ್ಟಕ್ಕೂ ಆಗಿದ್ದೇನಪ್ಪಾ ಅಂದ್ರೆ, ಮೈಸೂರು-ನಂಜನಗೂಡು-ಬಂಡಿಪುರ ಮಾರ್ಗವಾಗಿ ಕೇರಳಕ್ಕೆ ಒಂದು ರಸ್ತೆ ಹೋಗುತ್ತೆ. ಇದರಲ್ಲಿ ಲಾರಿಪಾರಿ ಥರದ ಸಕ್ಕತ್ ಗಾಡಿಗಳು ಓಡಾಡ್ತಾ ಇರ್ತವೆ. ಈ ಗಾಡಿಗಳು ಹೋಗೋವಾಗ ನಡುಮಧ್ಯೆ ಕಾಡುಪ್ರಾಣಿಗಳು ಸಿಗೋದೂ ಸಹಜ. ಅದ್ಯಾವ ಕಾರಣಕ್ಕೋ ಏನೋ ಒಟ್ನಲ್ಲಿ ದಾರಿ ಮಧ್ಯದಲ್ಲಿ ಅನೇಕ ಆನೆಗಳು, ಹುಲಿಗಳು, ಜಿಂಕೆಗಳು, ಹಾವುಗಳು, ಕಾಡೆಮ್ಮೆಗಳೂ ಈ ಗುರುತಿಲ್ಲದ ಗಾಡಿಗಳಿಗೆ ಸಿಕ್ಕು ಸಾಯ್ತಾಯಿರೋ ಕಳವಳಕಾರಿ ಘಟನೆಗಳು ನಡೆದಿವೆ. ಇಂಥಾ ದುರಂತಗಳೂ ಕೂಡಾ ಇರುಳಲ್ಲಿ ಓಡಾಡೋ ಗಾಡಿಗಳಿಂದಲೇ ಆಗ್ತಿವೆ ಅನ್ನೋ ಕಾರಣದಿಂದಾಗಿ ಸಂಜೆ ಕತ್ತಲಾದ ಮೇಲೆ ಈ ದಾರಿಗಳಲ್ಲಿ ಗಾಡಿಗಳು ಓಡಾಡಬಾರದು ಅನ್ನೋ ಕಟ್ಟುಪಾಡು ಜಾರಿ ಮಾಡಿದ್ರಂತೆ. ಈ ಥರ ಮಾಡಿದ್ರಿಂದ ಅನೇಕ ಪ್ರಾಣಿಗಳ ಜೀವ ಉಳ್ಯೋದ್ರು ಜೊತೆಗೇ ಇನ್ನೊಂದು ಉಪಕಾರವೂ ಆಗಿದೆ. ಮರಗಳನ್ನು ಕದ್ದು ಮಾರೋ ಕಳ್ಳಕಾಕರ ಓಡಾಟ ವಹಿವಾಟೆಲ್ಲಾ ಇರುಳಲ್ಲೇ ನಡೀತಾ ಇದ್ದುದ್ದು ಈಗ ಅಂಥದ್ದಕ್ಕೆಲ್ಲಾ ಕಡಿವಾಣ ಹಾಕ್ದಂಗಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ?

ಚಾಮರಾಜನಗರದ ಜಿಲ್ಲಾಧಿಕಾರಿಗಳು ಇಂಥಾ ಆದೇಶ ಹೊರಡಿಸಿದ್ದು ಜೂನ್ ತಿಂಗಳಲ್ಲಿ, ಇದಾದ ವಾರದ ಒಳಗೇ ಮುಖ್ಯಮಂತ್ರಿಗಳ ಕಛೇರಿಯಿಂದ ಬಂದ ನಿರ್ದೇಶನದ ಕಾರಣದಿಂದ ವಾಪಸ್ಸು ಪಡೆಯಲಾಯಿತು ಅನ್ನೋ ಸುದ್ದಿ ನೋಡುದ್ರೆ ಇದೇನು? ನಮ್ಮ ರಾಜ್ಯದ ರಾಜ್ಯ ಸರ್ಕಾರ ಯಾವ ಯಾವುದೋ ಲಾಬೀಗೆ ಬಗ್ಗುತ್ತಲ್ಲ ಅನ್ನೋದು ಗೊತ್ತಾಗುತ್ತೆ ಗುರು. ನೆರೆಯ ಕೇರಳ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂಗೆ ರಾತ್ರಿ ಹೊತ್ತಲ್ಲಿ ಸಂಚಾರಕ್ಕೆ ಅಡ್ಡಿ ಮಾಡಿರೋದ್ರಿಂದ ನಮ್ಮ ಜನರಿಗೆ ಕರ್ನಾಟಕಕ್ಕೆ ಹೋಗಿಬರಕ್ಕೆ ತೊಂದ್ರೆ ಆಗ್ತಿದೆ. ನಮ್ಮೂರಿನ ಸರಕು ಸಾಗಣೆ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ ಅಂತಾ ಕಿರಿಕ್ ಮಾಡ್ತು. ಕರ್ನಾಟಕ ರಾಜ್ಯ ಸರ್ಕಾರ ನಮ್ಮ ಕಾಡುಪ್ರಾಣಿಗಳ ಬೆಂಬಲಕ್ಕೆ ನಿಲ್ತೇನು? ಇವೂ ನಮ್ಮ ಕನ್ನಡದ ಜನರಂಗೇ ಮೂಕ ಮುಂಡೇವು ಅಂತಾ ರಸ್ತೆ ತೆರವಿನ ಪರವಾಗಿ ಒಂದು ಅಫಿಡವಿಟ್ಟು ಹಾಕಕ್ಕೆ ತಯಾರಾಗೇ ಬುಡ್ತು. ಬಹಳ ಆತಂಕ ತರೋ ಮಾತಂದ್ರೆ ಕರ್ನಾಟಕ ಸರ್ಕಾರ ಕೇರಳದ ರಾಜಕೀಯದ ಲಾಬಿ ಕರ್ನಾಟಕದ ಮುಖ್ಯಮಂತ್ರಿಗಳ ಕಛೇರಿ ತನಕ ಹರಡಿರೋದು. ಅಲ್ಲಿನ ಅರಣ್ಯ ಸಚಿವ ಇಲ್ಲಿಗೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಿರ್ಬಂಧ ತೆರವು ಮಾಡುಸ್ತಾರೆ ಅನ್ನೋದು ಎಂಥಾ ನಾಚಿಕೆಗೇಡಿನ ಸಂಗತಿ ಅಲ್ವಾ? ಇಷ್ಟು ಸಾಲ್ದು ಅಂತಾ ಈ ರಸ್ತೇಲಿ ವಾಹನಗಳು ಓಡಾಡಕ್ಕೆ ಅನುಕೂಲ ಮಾಡ್ಕೊಡೋ ಪ್ರಮಾಣಪತ್ರಾನ ಕೋರ್ಟಿಗೆ ಸಲ್ಲಿಸೋ ಬಗ್ಗೆ ಆಲೋಚನೆ ಮಾಡೋದೂ ಎಂಥಾ ದುರಂತ ಅಲ್ವಾ ಗುರು!

ಸರ್ಕಾರ ನಾಡಸಂಪತ್ತು ಕಾಪಾಡೋ ವಿಷ್ಯದಲ್ಲಿ ರಾಜಿಯಾಗದಿರಲಿ!

ಏನೋ, ನಮ್ಮ ಕಾಡು ಪ್ರಾಣಿಗಳ ಪುಣ್ಯದ ಫಲವಾಗಿ ರಾಜ್ಯ ಹೈಕೋರ್ಟು ಈಗ ಎರಡೂ ಸರ್ಕಾರಗಳ ಮೇಲ್ಮನವಿ ವಜಾ ಮಾಡಿ ಎರಡೂ ಸರ್ಕಾರಗಳಿಗೆ ಸರಿಯಾಗಿ ಬುದ್ಧಿ ಹೇಳಿದೆ. ಆ ರಸ್ತೇಲಿ ಸಾಯೋ ಪ್ರಾಣಿಗಳಿಗೆ ಜೀವ ಕೊಟ್ಟು ಆಮೇಲೆ ಆ ರಸ್ತೇನಾ ಸಂಚಾರಕ್ಕೆ ತೆರೀರಿ ಅಂದುಬುಟ್ಟಿದೆ. ಅಲ್ಲಾ ಗುರು? ಕೋರ್ಟಿಗೆ ಇರೋ ಕಾಳಜಿ ನಮ್ಮ ಸರ್ಕಾರಕ್ಕೆ ಯಾಕಿಲ್ಲಾ ಅಂತ ಅನ್ನುಸ್ತಿಲ್ವಾ? ಆ ಹುಲಿಗಳೂ, ಜಿಂಕೆಗಳೂ, ಚಿರತೆಗಳೂ, ಕಾಡೆಮ್ಮೆಗಳೂ, ಆನೆಗಳೂ ಓಟು ಬ್ಯಾಂಕು ಮಾಡ್ಕೊಂಡಿದ್ದಿದ್ರೆ ಆಗ ಒಸಿ ಕಾಳಜಿ ತೋರುಸ್ತಿತ್ತೇನೋ ಈ ಸರ್ಕಾರ, ಅನ್ನುಸ್ತಿಲ್ವಾ ಗುರು? ನಮ್ಮ ನಾಡು, ನಮ್ಮ ನುಡಿ, ನಮ್ಮ ನಾಡಿನ ಸಂಪತ್ತು, ನಮ್ಮ ಕಾಡುಗಳು, ನಮ್ಮ ವನ್ಯಕುಲ ಸಂಕುಲ ಇವುನ್ನೆಲ್ಲಾ ಕಾಪಾಡಕ್ಕೇ ಅಂತಾನೆ ನಾವಿಲ್ಲಿ ಅಧಿಕಾರದಲ್ಲಿರೋದು ಅಂತಾ ನಮ್ಮ ಸರ್ಕಾರಗಳಿಗೆ, ಸರ್ಕಾರ ನಡ್ಸಕ್ಕೆ ತುದಿಗಾಲಲ್ಲಿ ಸದಾ ನಿಲ್ಲೋ ರಾಜಕೀಯ ಪಕ್ಷಗಳಿಗೆ ಅನ್ನಿಸೋದು ಎಂದಿಗೆ ಗುರು?

ಗಣಿಗಾರಿಕೆಯಿಂದ ಗರಿಷ್ಟ ಲಾಭ ಸಿಗ್ಬೇಕು


ಇತ್ತೀಚಿಗೆ ಮುಖ್ಯಮಂತ್ರಿಗಳು ಗಣಿ ಪರವಾನಿಗೆ ಬೇಕಂದ್ರೆ ಉಕ್ಕು ಕಾರ್ಖಾನೇನೂ ಸ್ಥಾಪಿಸಬೇಕು ಅಂತಂದ ಸೊಗಸಾದ ಹೇಳಿಕೆ ಕೊಟ್ಟಿದಾರೆ ಗುರು! ನಿಜಕ್ಕೂ ಇದು ಒಂದು ಒಳ್ಳೆಯ ಅತ್ಯಗತ್ಯವಾದ ನಡೆಯಾಗಿದೆ.

ಕರಗೋ ನೈಸರ್ಗಿಕ ಸಂಪತ್ತು

ನಮ್ಮ ನಾಡು ಬಹಳ ಸಮೃದ್ಧವಾದ ನಾಡು. ಇವತ್ತಿಗೂ ಕನ್ನಡನಾಡಲ್ಲೇ ಅತಿ ಹೆಚ್ಚು ಚಿನ್ನ ಸಿಗ್ತಿರೋದು. ಹಾಗೇ ನೋಡ್ತಾ ಹೋದ್ರೆ ನಮ್ಮ ಕಾಡುಗಳಲ್ಲಿ ಬೆಳೆಯೋ ಅನೇಕ ಮರಗಳು ಅತ್ಯಂತ ಬೆಲೆಬಾಳೋ ಅಪೂರ್ವವಾದವುಗಳು. ನಮ್ಮ ನಾಡಲ್ಲಿ ಹರಿಯೋ ನದಿಗಳು ಅನೇಕ... ಒಟ್ಟಲ್ಲಿ ಆ ದೇವರು ಒಳ್ಳೇ ಮೂಡಲ್ ಇದ್ದಾಗ ಸೃಷ್ಟಿ ಮಾಡಿದ್ದು ನಮ್ ನಾಡನ್ನ ಅಂದ್ರೆ ತಪ್ಪಾಗಲ್ಲಾ ಗುರು! ಇಂಥಾ ಸಮೃದ್ಧ ನಾಡಿನ ನೈಸರ್ಗಿಕ ಸಂಪತ್ತಿನ ಹಕ್ಕುದಾರರು ಯಾರು? ತಲತಲಾಂತರಗಳಿಂದ ಇದೇ ಮಣ್ಣಲ್ಲಿ ಬದುಕಿದ ನಮ್ಮ ಹಿರಿಯರು, ಈಗ ಬದುಕುತ್ತಿರೋ ನಾವು ಮತ್ತು ಮುಂದಿನ ನಮ್ಮ ನೂರಾರು ತಲೆಮಾರುಗಳು. ಈ ನೈಸರ್ಗಿಕ ಸಂಪತ್ತನ್ನು ನಾವು ಕರಗ್ಸೋದಾದ್ರೆ ಮುಂದಿನೋರಿಗೆ ಏನುತ್ತರ ಕೊಟ್ಟೇವು? ಹಾಗಂದ್ರೆ ಇದನ್ನು ನಾವು ಖರ್ಚು ಮಾಡಲೇ ಬಾರದೆನು? ಇಂದು ನಾವಲ್ಲದಿದ್ರೆ ಮುಂದಿನ ಇನ್ಯಾರಾದರೋ ಇದನ್ನು ಬಳಸಲೇ ಬೇಕು. ಆಗಲೇ ಇದನ್ನು ಸಂಪನ್ಮೂಲ ಅನ್ನಕ್ಕೆ ಸಾಧ್ಯ. ಇದು ತೆಗೆದ ಹಾಗೆಲ್ಲಾ ಕರಗೋ ಸಂಪತ್ತು ಅನ್ನೋದು ಎಷ್ಟು ಸತ್ಯಾನೋ, ತೆಗೀದೆ ಇರೋದು ಪೆದ್ದುತನ ಅನ್ನೋದೂ ಅಷ್ಟೆ ಸತ್ಯಾ ಗುರು!ಹಾಗಿದ್ರೆ ಇದನ್ನು ಎಷ್ಟು ಯೋಗ್ಯವಾಗಿ ಹೇಗೆ ಬಳಸಬೇಕು ಅನ್ನೋದೊಂದೇ ನಮ್ಮ ಮುಂದಿರೋ ಪ್ರಶ್ನೆ ಅಲ್ವಾ!

ಗರಿಷ್ಟ ಲಾಭ ತಂದುಕೊಡಬೇಕು ಗಣಿ!

ಇವತ್ತಿನ ದಿನ ಒಂದು ಟನ್ ಕಬ್ಬಿಣದ ಅದಿರನ್ನು ತೆಗೆದಾಗ ಅಂತಹ ಗಣಿ ಉದ್ಯಮಿ ಸರ್ಕಾರಕ್ಕೆ ಕಟ್ಟೋ ಶುಲ್ಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ದಕ್ಕೋದು ಶೇಕಡಾ ಒಂದರಷ್ಟು ಮಾತ್ರಾ ಅಂದ್ರೆ ಇಪ್ಪತ್ತು ರೂಪಾಯಿಗಿಂತಲೂ ಕಮ್ಮಿ!!! ನಮ್ಮ ನಾಡಲ್ಲಿ ಗಣಿಗಾರಿಕೆ ಮಾಡಿ ನಮ್ಮ ಸಂಪನ್ಮೂಲಾನ ಶಾಶ್ವತವಾಗಿ ಬರಿದು ಮಾಡೋದಕ್ಕೆ ಅನುಮತಿಸಿದ್ದಕ್ಕೆ ನಮಗೆ ಸಿಗ್ತಿರೋ ಪ್ರತಿಫಲ ಇಷ್ಟೇ ಆದ್ರೆ ಹೆಂಗೆ ಗುರು? ಗಣಿಗಾರಿಕೆಯಿಂದ ನಮ್ಮ ಸರ್ಕಾರಕ್ಕೆ ಸಂಪನ್ಮೂಲ ಹರಿಹರಿದು ಬರಬೇಕು. ನಿಜಕ್ಕೂ ಗಣಿಯಿಂದ ಅದಿರು ತೆಗೆಯೋ ಪರವಾನಿಗೆ ಇರೋರಿಗೆ ಸಿಗಬೇಕಾದ್ದು ಬರೀ ಸಂಸ್ಕರಣಾ ಶುಲ್ಕ ಮಾತ್ರಾ ಅಲ್ವಾ ಗುರು? ಗಣಿಗಾರಿಕೆಯಿಂದ ತೆಗೆದ ಕಬ್ಬಿಣದ ಅದಿರನ್ನು ಇಲ್ಲೇ ಸಂಸ್ಕರಿಸಿ ಉಕ್ಕು ಕಾರ್ಖಾನೆ ತೆಗೆದರೆ ನಮ್ಮ ಜನಕ್ಕೆ ದೊರಕುವ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತೆ. ಆ ಕಾರಣದಿಂದ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ ಆ ಮಟ್ಟಿಗೆ ನಾಡಿಗೆ ಉಪಯೋಗಕಾರಿಯಾಗಿದೆ. ಆದ್ರೆ ಇಷ್ಟರಿಂದಲೇ ನಾವು ತೃಪ್ತರಾದ್ರೆ ತಪ್ಪಾಗುತ್ತೆ, ನಿಜಕ್ಕೂ ನಮ್ಮ ಜನರ ಸಂಪತ್ತನ್ನು ನಾವು ಮಾರಿಕೊಳ್ಳೋದರಿಂದ ಸಿಗೋ ಅಷ್ಟೂ ಬೆಲೆ ನಮ್ಮ ಸರ್ಕಾರಕ್ಕೇ ಸಿಗಬೇಕಾದದ್ದೂ, ಹಾಗೆ ಸಿಕ್ಕೋ ಸಂಪತ್ತಿಂದ ನಮ್ಮ ಜನರ ಕಲ್ಯಾಣ, ಕಲಿಕೆ, ಉದ್ಯೋಗಗಳಿಗೆ ನೆರವು ಸಿಗೋದು... ಇದೇ ಸರಿ ಅಲ್ವಾ ಗುರು?
ಕೊನೆಹನಿ : ಒಂದು ಟನ್ ಮರಳಿಗೆ ಸರ್ಕಾರ ಗಳಿಸೋ ರಾಯಧನ 25 ರೂಪಾಯಿ, ಆದ್ರೆ ಕಬ್ಬಿಣದ ಅದಿರಿಗೆ ಸಿಗೋದು ಬರೀ 15 ರೂಪಾಯಿ ಅನ್ನೋದು ಎಂಥಾ ಸೋಜಿಗದ ವಿಷ್ಯಾ ಅಲ್ವಾ ಗುರು?

ಕನ್ನಡ ನಾಡು: ಬರೀ ಚಿನ್ನದ ಬೀಡಲ್ಲ, ಚಿನ್ನದಂಥಾ ಜನರ ಬೀಡು!

ಕನ್ನಡಿಗ್ರು, ನಾವೇನಾ ಇಂಗಿದ್ದೋರು ಅಂತ ಅಚ್ಚರಿ ಪಡೋ ಸುದ್ದಿ ಡೆಕ್ಕನ್-ಹೆರಾಲ್ಡಲ್ಲಿ ಬಂದೈತೆ ಗುರು! ನಮ್ಮೋರು ಅಟ್ಟಿ ಗಣಿಯೊಳಕ್ಕೆ ಇಳ್ಯಕ್ ಸುರು ಅಚ್ಕೊಂಡು ಎಲ್ಡು ಸಾವ್ರ ವರ್ಸಕ್ಕಿಂತ ಜಾಸ್ತಿ ಆಯ್ತಂತೆ. ಬಾಳ ಇಂದೆ ಅಂದ್ರೆ ಕ್ರಿಸ್ತ ಉಟ್ಟಕ್ಕೂ ನಲವತ್ತು ವರ್ಸ ಮೊದ್ಲು ಅಟ್ಟಿನಲ್ಲಿ ಚಿನ್ನ ತೆಗ್ಯಕ್ ಮೊದಲಾದ್ರಂತೆ. ಆಗ ನಮ್ಮೋರು ಬಳುಸ್ತಿದ್ದ ತಂತ್ರಗ್ನಾನ ನೋಡ್ಬುಟ್ಟು ಪರಪಂಚದ ಅತಿ ಅಳೇ ನಾಗರೀಕತೆ ಅಂತ ಕರುಸ್ಕೊತಾ ಇರೋ ಗ್ರೀಕ್ ಜನ್ರು ತಮ್ಮ ಗಣಿಗಾರಿಕೆ ಇದಾನಾನ ಸುದಾರುಸ್ಕೊಂಡ್ರಂತೆ ಗುರು! ಈ ಸುದ್ದಿ ಕೇಳ್ತಿದ್ರೆ ಒಳ್ಳೆ ಕರದೆಮ್ಮೆ ಅಸಿ ಆಲು ಕುಡ್ದಸ್ಟ್ ಕುಸಿ ಆಯ್ತುದೆ.
ಇರಿಯರು ಸಾದಿಸಿದ್ದ ಇರಿಮೆ

ನಾವು ಇವತ್ತೆಲ್ಲಾ ನಮ್ಮಲ್ಲಿ ಗಣಿಗಾರಿಕೆ ಮಾಡಬೇಕು ಅಂದ್ರೆ ಜಪಾನಿನ ತಂತ್ರಗ್ನಾನ, ಜರ್ಮನಿ ತಂತ್ರಗ್ನಾನ ಅಂತೆಲ್ಲಾ ಅವೇ ಗ್ರೇಟು ಅಂತ ಅವ್ರುನ್ನೆ ಕರ್ದು ಗಣಿಗಾರಿಕೆ ಮಾಡುಸ್ತೀವಿ. ಆದ್ರೆ ಆವತ್ತು ಹೊರ ದೇಸದವ್ರೂ ನಮ್ಮುನ್ ನೋಡಿ ಕಲೀತಿದ್ರು ಅನ್ನದ್ ಕುಸಿ ಇಸ್ಯಾ ಅಲ್ವಾ? ಆ ಮಟ್ಟಕ್ಕೆ ನಮ್ಮೋರು ಇರಿಮೆ ಸಾದಿಸಿದ್ರು ಅಂದ್ರೆ ನಮ್ಮ ಕನ್ನಡದೋರು ಪರಪಂಚದಾಗೇ ದೊಡ್ಡು ಜನ ಅಲ್ವುರಾ? ಇಂತಾ ಇರಿಮೆ ಬರೀ ಅವತ್ತಿನ ಗಣಿಗಾರಿಕೆ ಒಂದ್ರಲ್ಲೇ ಅಲ್ಲಾ, ಕಲ್ಲು ಕೆತ್ತೋದ್ರಲ್ಲಿ, ಬೆಳೆ ಬೆಳ್ಯೋದ್ರಲ್ಲಿ, ಬೆಳೆಗೆ ನದೀ ನೀರು ಅರಿಸೋದ್ರಲ್ಲಿ, ಅರಮನೆ ಕಟ್ಟೋದ್ರಲ್ಲಿ, ಬೇಸ್ಗೆ ಬಿಸ್ಲು ಸುಡದಂಗೆ ಗ್ವಾಡೆ ಒಳಿಕ್ಕೇ ನೀರ್ ಆಯುಸ್ಕೊಂಡು ತಂಪು ಮಾಡ್ಕೊಳೊದ್ರಲ್ಲಿ ನಮ್ಮೋರು ಎತ್ತುದ್ ಕೈಯ್ಯಿ ಗುರು! ಇಂತಾ ಸುದ್ದಿ ಕೇಳ್ದಾಗೆಲ್ಲಾ, ನಮ್ಮ ಮೈಯ್ಯಾಗೆ ಅರಿತಿರೋ ರಗುತ ಬರೀ ಕೆಂಪು ನೀರಲ್ಲ, ಅದು ದೊಡ್ಡ ದೊಡ್ಡ ಸಾದ್ನೆಗೆ ಕಾರಣ ಆಗಿರೋದು ಅಂತ ಒಸಾ ಉಮ್ಮಸ್ಸು ಉಟ್ಟುತ್ತೆ ಗುರು!

ಕೊನೆಹನಿ: ಆವತ್ತು ಇಂಗೆಲ್ಲಾ ನಮ್ಮೋರು ದೇಸ ಇದೇಸಗಳೆಲ್ಲಾ ಅನುಕರ್ಸೋ ಸಾದ್ನೆ ಮಾಡಿ, ಅಲ್ಲಿಂದೆಲ್ಲ ಬರೋ ಜನ್ರುಗೆ ಏಳಿ ಕೊಡ್ತಿದ್ರು ಅಂದ್ರೆ ಅವುರೆಲ್ಲಾ ಇಂಗ್ಲಿಸು ಕಲ್ತಿರಲಿಲ್ಲಾ ಗುರು! ಅಸಲ್ಗೆ ಇಂಗ್ಲಿಸು ಉಟ್ಟೇ ಇರಲಿಲ್ಲ.

ನಾಡಿನ ಕನ್ನಡಿಗಳನ್ನು ಹಂಚೋಣ ಬನ್ನಿ!

ಕೇಂದ್ರ ಸರ್ಕಾರಕ್ಕೆ ಅಂಚೆ ಚೀಟಿ ಸಲಹಾ ಸಮಿತಿಯು ಇತ್ತೀಚೆಗೆ ೨೦೦೮ರ ಸಾಲಿನ ಅಂಚೆ-ಚೀಟಿಗಳ ಪಟ್ಟಿ ಸೂಚಿಸಿದೆ. ಇದ್ರಲ್ಲಿ ಕನ್ನಡಿಗರು ಖುಷಿ ಪಡುವಂತ ಇಸ್ಯ ಇದೆ ಗುರು! ಈ ಬಾರಿ ಹೊರ ಬರ್ತಿರೋ ಅಂಚೆ-ಚೀಟಿಗಳಿಗೆ ಕನ್ನಡದ ಮೇರುನಟ ರಾಜ್ ಅವರನ್ನು ಮತ್ತು ಬೆಂಗಳೂರಲ್ಲಿರೋ ಭಾರತೀಯ ವಿಜ್ಞಾನ ಮಂದಿರಾನ ಆಯ್ಕೆ ಮಾಡಿದಾರೆ. ಆದರೆ ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ಈ ರೀತಿ ಎಷ್ಟು ಬಾರಿ ಅಂಚೆ-ಚೀಟಿಗಳ ಒಪ್ಪಿಗೆ ಸಿಕ್ಕಿದೆ? ಎಷ್ಟು ಅಂಚೆ-ಚೀಟಿಗಳು ಕರ್ನಾಟಕವನ್ನು ಪ್ರತಿನಿಧಿಸಿವೆ? ೬೦ ವರ್ಷಗಳಲ್ಲಿ ಹೊರಬಂದಿರೋ ೨೦೦೦ಕ್ಕಿಂತ್ಲೂ ಹೆಚ್ಚು ಅಂಚೆ-ಚೀಟಿಗಳಲ್ಲಿ ಕರ್ನಾಟಕನ ಪ್ರತಿನಿಧಿಸೋ ಚೀಟಿಗಳು ಕೇವಲ ೨೭!


ಅರ್ಹತೆ ಇದ್ರೂ ಹೋರಾಡ್ಬೇಕು. ಹೋರಾಡಿದ್ರೂ ಗೆರೆ ಇರ್ಬೇಕು!

ಭಾರತದ ಅಂಚೆ-ಚೀಟಿ ಇತಿಹಾಸದ ಮೇಲೊಂದು ಕಣ್ಣು ಹಾಯಿಸಿ ನೋಡಿದ್ರೆ, ಅದ್ರಲ್ಲೂ ಗಣ್ಯರ ಜ್ಞಾಪಕಾರ್ಥವಾಗಿ ಹೊರಡಿಸಿರೋ ಅಂಚೆ-ಚೀಟಿಗಳ ಲೆಕ್ಕ ನೋಡಿದ್ರೆ, ನಮ್ಮ ನಾಡಿನಲ್ಲಿ ಅಂಚೆ-ಚೀಟಿಗೆ ಲಾಯಕ್ಕಾದ ಉದಾಹರಣೆಯೇ ವಿರಳ ಅನ್ನೋ ಸಂದೇಶ ಕಾಣತ್ತೆ! ಬೇರೆ ರಾಜ್ಯಗಳೊಡನೆ ಹೋಲಿಸಿದ್ರೆ ನಮ್ಗೆ ಸಿಕ್ಕಿರೋದು ಬೆಣ್ಣೆ ಹೆಸ್ರಲ್ಲಿ ಸುಣ್ಣವೇ ಗುರು! ಅಲ್ಲಿ ಇಲ್ಲಿ, ಅದೂ ಕನ್ನಡ ಪರ ಸಂಘಟ್ನೆಗಳ ಒತ್ತಾಯಕ್ಕೆ ಒಂದೋ ಎರ್ಡೋ ಅಂಚೆ-ಚೀಟಿ ಹೊರಬಂದಿವೆ. ಅಂಚೆ-ಚೀಟಿಯ ವಸ್ತು ಆಯ್ಕೆ ನಿಯಮಗಳ ಪ್ರಕಾರ ಅರ್ಹರಾದ ಗಣ್ಯರೇ ಇರ್ಲಿ, ಅಥ್ವಾ ಒಳ್ಳೆಯ ಜಾಗ ಮತ್ತು ನೈಸರ್ಗಿಕ ಸಂಪತ್ತಾಗ್ಲಿ ಕರ್ನಾಟಕದಲ್ಲೇನು ಕಡಿಮೆ? ಇಷ್ಟೆಲ್ಲಾ ಇದ್ರೂ ಪ್ರತಿ-ವರ್ಷ ಅಂಚೆ-ಚೀಟಿ ಹೊರಡಿಸೋ ಮುನ್ನ ಕನ್ನಡಿಗರು ನಮ್ಮ ನಾಡಿನ ಚೀಟಿ ಬರ್ಲಿ... ಬರ್ಲಿ... ಅಂತ ಒತ್ತಾಯ ಮಾಡ್ಬೇಕಾಗಿದೆ. ಇದು ಕನ್ನಡ ನಾಡಿನ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತು ರಾಜ್ಯದ ಅಂಚೆ ಇಲಾಖೆಯ ಪ್ರಮುಖರಲ್ಲಿ ಕರ್ನಾಟಕದ ಹಿತಾಸಕ್ತಿಯ ಕೊರತೇನ ತೋರ್ಸೋದಲ್ದೆ ಅಂಚೆ-ಚೀಟಿ ವ್ಯವಸ್ಥೆಯ ನ್ಯೂನತೆಯನ್ನೂ ಬಿಂಬಿಸ್ತಾ ಇದೆ.

ಚೀಟಿ ಬರ್ಬೇಕು, ಆದ್ರೆ ಹೇಗಿರ್ಬೇಕು?

ರಾಜ್ ಮುಖ ಇರೋ ಅಂಚೆ-ಚೀಟಿ ಬರ್ತಿರೋದ್ರಿಂದ ನಮಗೆ ಖುಷಿಯಂತೂ ಆಗೋದೇ. ಆದ್ರೆ ಕರ್ನಾಟಕಕ್ಕೆ ಹೆಮ್ಮೆ ತರುವ ಈ ಅಂಚೆ-ಚೀಟಿ ಕೇವಲ ಜ್ಞಾಪಕಾರ್ಥಕದ ನಮೂನೆ ಚೀಟಿಯಾಗದೇ, ನಿಜವಾಗ್ಲೂ ಬಳಕೆಗೆ ಬರುವಂತ ಚೀಟಿ ಆಗ್ಬೇಕು. ಅಂಚೆ ಇಲಾಖೆಯ ನಿಯಮದ ಪ್ರಕಾರ ಜ್ಞಾಪಕಾರ್ಥಕ್ಕೆ ಅಂತ ಹೊರಬರೋ ಚೀಟಿಗಳು ದಿನ-ನಿತ್ಯದ ಉಪಯೋಗಕ್ಕೆ ಬರೋಲ್ವಂತೆ. ಅವು ಕೇವಲ ಸಂಗ್ರಹಕ್ಕೆ ಅಂತ್ಲೇ ಮುದ್ರಿತವಾಗತ್ವಂತೆ! ನಾಡಿನ ಗಣ್ಯರ ಮತ್ತು ನಾಡಿನ ಸಿರಿ-ಸಂಪತ್ತುಗಳ ಬಗ್ಗೆ ಜನರಿಗೆ ತಿಳ್ಸೋಕ್ಕೆ ಒಳ್ಳೇ ಮಾಧ್ಯಮ ಈ ಅಂಚೆ-ಚೀಟಿ ಆಗಿರೋವಾಗ ಚೀಟೀನ ಪುಸ್ತಕದೊಳ್ಗೇ ಇರಿಸೋ ಈ ನಿಯಮ ಯಾರಿಗ್ ಬೇಕು ಗುರು? ನಿಜ್ವಾಗ್ಲೂ ಡಾ. ರಾಜ್ ಅವರ ಹೆಸ್ರಲ್ಲಿ ಬರೋ ಅಂಚೆ-ಚೀಟಿ ಒಂದು ರುಪಾಯಿಂದ ಹಿಡಿದು ಅತಿ ಹೆಚ್ಚಿನ ಮೌಲ್ಯದ ಚೀಟಿವರೆಗೂ ಹೊರಬರ್ಬೇಕು, ದೇಶದೆಲ್ಲೆಡೆ ಸಿಗೋ ಹಾಗೂ ಆಗ್ಬೇಕು. ಹೀಗೆ ಮಾಡೋದ್ರಿಂದ ಬೇರೆ ರಾಜ್ಯದೋರೂ ಕರ್ನಾಟಕದ ಗಣ್ಯರ ಬಗ್ಗೆ ತಿಳ್ಕೊಳೋದು ಸಾಧ್ಯವಾದೀತು. ಆಗ್ಲೇ ಅಂಚೆ ಚೀಟಿಯ ನಿಜವಾದ ಲಾಭ - ನಾಡಿನ ಕನ್ನಡಿಯಾಗಲು ಸಾಧ್ಯ. ಅಲ್ದೇ ಹೋದ್ರೆ ಸುಮ್ನೆ ಟಸ್ಸೆ ಒತ್ತಿ ಕಳ್ಸಿದ್ರೆ ಅಂಚೆ ಏನು ಹೋಗಲ್ಲ ಅಂತದಾ ಗುರು? ಏನಂತ್ಯಾ?

ಕನ್ನಡ ಮಾಧ್ಯಮ ಎಡವುತ್ತಿರುವುದು ಯಾಕೆ?

ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಪ್ರತಿಯೊಂದು ಮಗೂನೂ ಚಿನ್ನ. ಪ್ರತಿಯೊಂದು ಮಗೂನಲ್ಲೂ ಅದ್ಭುತವಾದ ಪ್ರತಿಭೆ ಅಡಗಿದೆ. ನಮ್ಮ ಮಕ್ಕಳಲ್ಲಿ ಮುಂದಿನ ನೊಬೆಲ್ ಪ್ರಶಸ್ತಿಗಳ್ನ ಗೆಲ್ಲೋರಿದಾರೆ, ಪ್ರಪಂಚವೇ ಬೆರಗಾಗೋಂಥಾ ವೈಜ್ಞಾನಿಕ ಆವಿಷ್ಕಾರಗಳ್ನ ಮಾಡೋರಿದಾರೆ, ಸಾಟಿಯಿಲ್ಲದ ಅರ್ಥಶಾಸ್ತ್ರಪ್ರವೀಣರಾಗೋರಿದಾರೆ...ಕಲಿಕೆಯ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ತುಟ್ಟತುದೀನ ಮುಟ್ಟೋಂಥಾ ಪ್ರಚಂಡರಿದಾರೆ. ನಮ್ಮ ಮಕ್ಕಳಿಗೂ ಇಂಗ್ಲೇಂಡಲ್ಲೋ ಅಮೇರಿಕದಲ್ಲೋ ಹುಟ್ಟೋ ಮಕ್ಕಳಿಗೂ ಪ್ರತಿಭೆಯಲ್ಲಿ ಎತ್ವಾಸ ಏನಾರೂ ಇದ್ದರೆ ಅದು ನಮ್ಮ ಮಕ್ಕಳೇ ಮುಂದಿರೋದು. ಇದಕೆ ಸಂಶಯ ಬೇಡ (ಕಷ್ಟದಲ್ಲಿ ಬೆಳೆದ ಮಕ್ಕಳಿಗೆ ಬುದ್ಧಿ ಜಾಸ್ತಿ).

ನಮ್ಮ ನಾಡಿನ ಮಕ್ಕಳು ಮಾತಾಡೋದು ಕನ್ನಡ. ಔರ್ ತಲೇಲಿ ಸಿಗೋದು ಕನ್ನಡದ ಅಕ್ಷರಾನೇ. ಔರಿಗೆ ಅರ್ಥ ಆಗೋದು ಕನ್ನಡಾನೇ. ಈಗ ಈ ಮಕ್ಕಳ್ನ ಬಳಸಿಕೊಂಡು ನಾಡು ಕಟ್ಟೋದು ಹೇಗೆ? ಈ ಮಕ್ಕಳ ಬುದ್ಧಿವಂತಿಕೇನ ಹಾಲು ಕರೆದಹಂಗೆ ಕರೆಯೋ ವ್ಯವಸ್ಥೆ ಹೇಗಿರಬೇಕು? ಅವರಿಗೆ ಅರ್ಥವಾಗದೇ ಇರೋ ಒಂದು ಭಾಷೆಯಲ್ಲಿ ವಿದ್ಯೆ ಕಲಿಸಕ್ಕೆ ಹೋಗಬೇಕಾ ಆ ವ್ಯವಸ್ಥೆ? ಅಥವಾ ಔರಿಗೆ ಗೊತ್ತಿರೋ ಭಾಷೇಲೇ ತಿಳುವಳಿಕೆ ಹೆಚ್ಚಿಸಿ ಆದಷ್ಟು ಬೇಗ ಅವರೇ ತಿಳುವಳಿಕೆಯ ಎಲ್ಲೆಗಳ್ನೇ ಹೆಚ್ಚಿಸೋಹಾಗೆ ಮಾಡಬೇಕಾ? ಉತ್ತರ ಎರಡನೇದೇ.

ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೌಕೊಂಡಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ.

ಇಷ್ಟೆಲ್ಲ ವೈಜ್ಞಾನಿಕ ಸತ್ಯಗಳಿದ್ದರೂ ಇವತ್ತಿನ ದಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಕುಂಟುಕೊಂಡು ಕುಂಟುಕೊಂಡು ನಡೀತಿರೋದು ಯಾಕೆ? ಈ ವ್ಯವಸ್ಥೆಯಲ್ಲಿ ಏನು ಕುಂದು ಕೊರತೆಗಳಿವೆ ಅಂತ ನೋಡೋಣ.

ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಮೊದಲನೇ ಕಾರಣ

ಹೀಗೆ ಕನ್ನಡ ಮಾಧ್ಯಮ ಎಡವುತ್ತಾ ಇರೋದರ ಒಳಗಿನ ಕಾರಣ ಏನು ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ ನಮಗೆ ಸಿಗೋ ಮೊದಲನೇ ಉತ್ತರ ಏನಪ್ಪಾ ಅಂದ್ರೆ ನಮ್ಮ ಶಿಕ್ಷಣ ವ್ಯವಸ್ಥೇಲಿ ಯಾವುದನ್ನ ಕನ್ನಡ ಅಂತ ಕಲಿಸುತ್ತಾ ಇದ್ದಾರೋ ಅದು ಸಾಮಾನ್ಯ ಕನ್ನಡಿಗರಿಗೆ ಬಹಳ ದೂರವಾಗಿದೆ. ಉದಾಹರಣೆಗೆ "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟಾತು?

ಇವತ್ತಿನ ದಿನ ಬರಹದಲ್ಲಿ ಇರೋ ಕನ್ನಡಕ್ಕೆಲ್ಲ ಈ ರೋಗ ಇದೆ. ಆಡುನುಡಿ ಕೈಬಿಟ್ಟಷ್ಟೂ ಅದು ಒಳ್ಳೇ ಕನ್ನಡ ಅಂತ ನಂಬಿಕೊಂಡಿರೋ ಪೆದ್ದರು ನಾವು. ಆದ್ರೆ ಅದು ಬರೀ ತಪ್ಪು. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.

(ಕನ್ನಡಿಗರ ಈ ಪೆದ್ದತನ ನೋಡಿ ಗೆಲಿಲಿಯೋ ತಲೆ ಚೆಚ್ಚಿಕೊಂಡಿದ್ದು ಗೊತ್ತಾ ನಿಮಗೆ? ಇಲ್ಲಿ ಓದಿ)

ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಎರಡನೇ ಕಾರಣ

ಇನ್ನು ಎರಡನೇ ಕಾರಣ ಏನಪ್ಪಾ ಅಂದ್ರೆ ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಪೂರ್ಣ ವ್ಯವಸ್ಥೆ ಆಗಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತಗಳ ವರೆಗೆ ಏನೋ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗತ್ತೆ. ಆದ್ರೆ ಪದವಿ ಪೂರ್ವ ಮತ್ತು ಪದವಿ ಹಂತಗಳ ವರೆಗೆ ತಲುಪೋ ಹೊತ್ತಿಗೆ ಕನ್ನಡ ಕಾಣಸಿಗೋದೇ ಕಡಿಮೆ ಆಗೋಗತ್ತೆ. ವಿಜ್ಞಾನ-ತಂತ್ರಜ್ಞಾನಗಳು, ಅರ್ಥಶಾಸ್ತ್ರ, ಮ್ಯಾನೇಜ್ಮೆಂಟು ಇಂಥವಂತೂ ಕನ್ನಡದಲ್ಲಿ ಸಾಧ್ಯವೇ ಇಲ್ಲ ಅಂತ ನಾವು ಒಪ್ಪಿಕೊಂಡಂತಿದೆ. ಇದು ಇವತ್ತಿನ ಕನ್ನಡದ ಶಿಕ್ಷಣ ವ್ಯವಸ್ಥೆ.

ಏನೋ ಹಳ್ಳೀ ಮುಂಡೇವು ಒಂದಿಷ್ಟು ಅಕ್ಷರ ಕಲೀಲಿ ಹೆಬ್ಬೆಟ್ಟ್ ಒತ್ತೋ ಬದ್ಲು ಅಂತ ವ್ಯವಸ್ಥೆ ಕಟ್ಟಿದಹಂಗಿದೆ! ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರುವವರೆಲ್ಲರ ಪ್ರತಿಭೆ ಬೆಳಕಿಗೆ ಬರಬೇಕಾದ್ರೆ ಕನ್ನಡದ ಶಿಕ್ಷಣ ವ್ಯವಸ್ಥೆ ಅನ್ನೋದು ಬರೀ ಹೆಬ್ಬೆಟ್ ಒತ್ತೋದನ್ನ ಹೋಗಲಾಡಿಸಿದರೆ ಸಾಲದು ಗುರು! ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್, ಇಂಗ್ಲೇಂಡ್ ಮುಂತಾದ ಕಡೆಯೆಲ್ಲ ಹೇಗೆ ತಮ್ಮತಮ್ಮ ನುಡಿಗಳಲ್ಲಿ ಉನ್ನತಶಿಕ್ಷಣಾನೂ ಕೊಡೋ ವ್ಯವಸ್ಥೆಗಳಿವೆಯೋ ಹಾಗೆ ಇಲ್ಲೂ ಬರಬೇಕು. ಇಲ್ಲದೆ ಹೋದರೆ ಎಂದಿಗೂ ನಮ್ಮ ನಾಡಿನ ನಿಜವಾದ ಪ್ರತಿಭೆ ಬೆಳಕಿಗೆ ಬರೋದಿಲ್ಲ.

ನಿಜಕ್ಕೂ ಇದನ್ನ ಮಾಡೋದು ಕಷ್ಟದ ಕೆಲಸವೇನಲ್ಲ. ಆದರೆ ಇದನ್ನ ಮಾಡಬೇಕಾದರೆ ಕನ್ನಡಿಗರಲ್ಲಿ ಬಹಳ ಒಗ್ಗಟ್ಟು ಬೇಕು. ನಿಜವಾದ ಶಿಕ್ಷಣತಜ್ಞರು ಬೇಕು. ನಿಜವಾದ ಉದ್ಯಮಿಗಳು ಬೇಕು. ನಿಜವಾದ ಕಾಳಜಿಯುಳ್ಳ ಸರಕಾರ ಬೇಕು, ಅಷ್ಟೆ.

ಎಡವೋದು ನಿಲ್ಲಲೇಬೇಕು, ಬೇರೆ ದಾರಿಯಿಲ್ಲ

ಆಯಿತು. ಈಗ ನಮಗೆ ಕನ್ನಡ ಮಾಧ್ಯಮ ಶಿಕ್ಷಣವ್ಯವಸ್ಥೆಯಲ್ಲಿರೋ ಕುಂದು ಕೊರತೆಗಳು ಅರ್ಥವಾಗಿವೆ. ಈಗ ಈ ಕುಂದು ಕೊರತೆಗಳ್ನ ಧೈರ್ಯವಾಗಿ ಎದುರಿಸೋ ಮನಸ್ಸು ಕನ್ನಡಿಗರು ಮಾಡಬೇಕು. ಯಾಕೇಂದ್ರೆ ಇದನ್ನ ಎದುರಿಸದೆ ನಾಡಿನ ಪ್ರತಿಭೆಯೆಲ್ಲ ಬೆಳಕಿಗೆ ಬರೋ ಸಾಧ್ಯತೇನೇ ಇಲ್ಲ. ಕನ್ನಡ ನಾಡು ಚಿನ್ನದ ಬೀಡು ಅಂತ ಎಷ್ಟು ಬಡ್ಕೊಂಡ್ರೂ ಏನ್ ಪ್ರಯೋಜನ? ಆ ಚಿನ್ನ ಬೆಳಕಿಗೆ ಬರದೆ ಹೋದ್ರೆ ಅದು ಚಿನ್ನವಾಗಿದ್ರೇನು ತಗಡಾಗಿದ್ರೇನು?

ಈ ನಮ್ಮ ಶಿಕ್ಷಣ ವ್ಯವಸ್ಥೇನ ಜಗತ್ತಿನಲ್ಲಿ ಅತ್ಯುತ್ತಮ ಮಟ್ಟದ ಒಂದು ವ್ಯವಸ್ಥೆ ಮಾಡಕ್ಕೆ ಏನೇನು ಮಾಡಬೇಕು ಅಂತ ನಾವು ಯೋಚಿಸಬೇಕು. ಇವತ್ತಿನ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಹೇಗೆ ಬದಲಾಗಬೇಕು? ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ನಾವು ಮೇಲೆ ತೋರಿಸಿರುವ ತೊಂದರೆಗಳ್ನ ಬಗೆಹರಿಸಿಕೊಳ್ಳಕ್ಕೆ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೇ ನಾವು ಬದುಕುದ್ವಿ. ಇಲ್ದೇ ಹೋದ್ರೆ ಎಂದೆಂದಿಗೂ ನಮ್ಮ ನಮ್ಮ ನಾಡಿನ ಮಕ್ಕಳಿಗೆ ಒಳ್ಳೇ ಭವಿಷ್ಯ ಅನ್ನೋದು ಇಲ್ಲ. ಒಳಗೆ ಬುದ್ಧಿವಂತರಾಗಿದ್ದ್ರೇನು ಬಂತು?

ಹೊಗೇನಕಲ್ಲಿಂದ ಸವಾಲು: "ಕನ್ನಡಿಗರು ಷಂಡರಾ?"

ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ. ಆದ್ರೆ ಅವತ್ತಿಗೂ ಇವತ್ತಿಗೂ ಎದ್ದ್ ಕಾಣ್ತಿರೋ ವ್ಯತ್ಯಾಸ ಏನಪ್ಪಾ ಅಂದ್ರೆ - ಅವತ್ತು ಅವರ ಕಿರುಕುಳ ನಿಲ್ಲಿಸಿ ಕರ್ನಾಟಕವನ್ನ ರಕ್ಷಿಸೋ ಗಂಡಸರು ಸರಿಯಾದ ಸ್ಥಾನಗಳಲ್ಲಿ ಇದ್ದರು; ಇವತ್ತು ಅಂತಾ ಗಂಡಸರು ಇದ್ದರೂ ಅವರಿಗೇ ಎಲ್ಲರೂ ತೊಂದರೆ ಕೊಡೋರೇ!

ಇತ್ತೀಚೆಗೆ ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ನಡುಗಡ್ಡೆ ತಮಿಳ್ನಾಡಿಗೆ ಸೇರಿದೆ ಅನ್ನೋ ಸುಳ್ಳು ಹಬ್ಬಿಸಿ ಅಲ್ಲಿ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗೆ ತಮಿಳ್ನಾಡು ಕೈಹಾಕಿದೆ. ಔರೂ ನೋಡುದ್ರು - ಈ ಕನ್ನಡಿಗರು ಪೆದ್ದುಮುಂಡೇವು, ಷಂಡ್ರು, ಇವ್ರಿಗೆ ತಮ್ಮ ಹೆಂಡತೀನ ಹೊತ್ತುಕೊಂಡು ಹೋದ್ರೂ ಗೊತ್ತಾಗಲ್ಲ, ಗೊತಾಗ್ತಿದ್ರೂ ಏನೂ ಕಿಸಿಯಕ್ ಆಗಲ್ಲ, ನಮ್ಮ ತೀಟೆ ನಾವು ತೀರುಸ್ಕೊಳಮ ಅಂತ. ಕಾವೇರಿ ನದಿನೀರು ಹಂಚಿಕೆ ವಿಷಯ ಇನ್ನೂ ನ್ಯಾಯಾಲಯದಲ್ಲಿ ಇರುವಾಗ್ಲೇ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳ್ಕೊಳೋ ಈ ತಮಿಳ್ರು ಹೇಗೆ ಹೊಗೇನಕಲ್ ನಲ್ಲಿ ಯೋಜನೆಗೆ ಕೈ ಹಾಕುದ್ರು? ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇರೋ ಪರಿಸ್ಥಿತಿ ನೋಡಿ ತಮ್ಮ ತೀಟೆ ತೀರಿಸಿಕೊಳ್ಳೋ ಖದೀಮರು ಇವ್ರು!

ನಾವು ಇನ್ನು ಎಚ್ಚೆತ್ತುಕೊಳ್ಳಬೇಕಷ್ಟೆ! ತಮಿಳ್ನಾಡಿಂದ ನಮಗೆ ಏನೇನು ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ಯಾಕ್ ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ನಮ್ಮ ರಾಜಕಾರಣಿಗಳು ಕರ್ನಾಟಕವನ್ನ ಮಾರ್ಕೋತಿದಾರಲ್ಲ, ಇದನ್ನ ನಿಲ್ಲಿಸೋದು ಹೇಗೆ ಅಂತ ಅರ್ಥ ಮಾಡ್ಕೋಬೇಕು. ಇನ್ನೇನು ಕರ್ನಾಟಕದಲ್ಲಿ ಚುನಾವಣೆ ನಡ್ಯೋದ್ರಲ್ಲಿದ್ಯಲ್ಲ, ಕೇಳ್ಬೇಕು ನಮ್ಮ ರಾಜಕಾರಣಿಗಳ್ನ - "ಥೂ! ನಿಮ್ಮ ಜನುಮಕ್ಕೆ ನಾಚಿಕೆ ಆಗಬೇಕು! ಕಾವೇರಿ ತೀರ್ಪಲ್ಲಿ ನಮಗೆ ಕೆರ ತೊಗೊಂಡು ಹೊಡ್ದಿದಾರಲ್ಲ, ನಮ್ಮ ನೀರೆಲ್ಲಾ ತಮಿಳರಿಗೆ ಬರ್ದು ಕೊಟ್ಟಿದಾರಲ್ಲ, ಅದಕ್ಕೆ ನೀವ್ ಏನ್ ಮಾಡ್ತೀರಿ? ಹೊಗೇನಕಲ್ನ ತಮಿಳ್ನಾಡಿಗೆ ಸೇರಿಸಕ್ಕೆ ಹೊರ್ಟಿದಾರಲ್ಲ ತಮಿಳ್ರು, ಅದಕ್ಕೆ ಏನ್ ಕಿಸೀತೀರಿ?" ಅಂತ.

ಇಲ್ಲಾ ನಮ್ಮ ಟೀಷರ್ಟುಗಳ ಮೇಲೆ ಬರಿಸಿಕೊಳ್ಳಬೇಕು, ನಮ್ಮ ಮನೆ ಗೋಡೆಗಳ ಮೇಲೆ ಎಲ್ರುಗೂ ಕಾಣೋಹಂಗೆ ಬರುಸ್ಕೋಬೇಕು, ಅಂತರ್ಜಾಲದಲ್ಲೆಲ್ಲಾ ಒಪ್ಪಿಕೋಬೇಕು - "ಹೌದು! ನಾವು ಕನ್ನಡಿಗರು ಪೆದ್ದುಮುಂಡೇವು, ಷಂಡ್ರು" ಅಂತ. ಏನ್ ಗುರು?

ಜೊತೆಗೆ ಇದ್ನೂ ಓದಿ: ಹೊಗೇನಕಲ್ಲಿಗೇ ಹೊಗೆ!

ಕನ್ನಡ ನಾಡು! ಚಿನ್ನದ ಬೀಡು!

ಈ ತಿಂಗಳ 25ರಂದು ವಿಜಯ ಕರ್ನಾಟಕದಲ್ಲಿ ಕರ್ನಾಟಕದ ಇನ್ನೂ 9 ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ದೊರಕಲಿದೆ ಅಂತ ವರದಿ ಆಗಿದೆ. ಇದು ಕನ್ನಡಿಗರಿಗೆಲ್ಲಾ ಹೆಮ್ಮೆ, ಮರ್ಯಾದೆ ಹಾಗೂ ಸಂತಸ ತರೋ ವಿಷಯ ಗುರು! ನಮ್ಮ ನಾಡಿನ ಬೆಳೆಗಳಲ್ಲಿ ಎಂತಹ ವೈಶಿಷ್ಟ್ಯತೆ ಅಡಗಿದೆ ಅನ್ನೋ ಮಾಹಿತಿ ಇಂತಹ ಮಾನ್ಯತೆಗಳಿಂದ ಜಗತ್ತಿಗೆಲ್ಲಾ ಪಸರುತ್ತಿರೋದು ಇನ್ನೂ ಹೆಚ್ಚು ಖುಷಿಗೆ ಕಾರಣ ಗುರು! ಈಗಾಗ್ಲೇ ನೋಂದಣಿಯಾಗಿರೋ ನಮ್ಮ ಬೆಳೆಗಳಲ್ಲಿ ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ ಹೀಗೆ ಹಲವಿವೆ. ಕರ್ನಾಟಕದ ವಿಶಿಷ್ಟ ಬೆಳೆಗಳು ಅಂದ್ರೆ ಇಷ್ಟೇ ಅಲ್ಲ, ಈ ನಾಡಲ್ಲಿ ಇನ್ನು ಸಕ್ಕತ್ ವೈಶಿಷ್ಟ್ಯತೆ ಇದೆ ಅಂತ ತೋರ್ಸಕ್ಕೆ ಈ ಪಟ್ಟಿಗೆ ಇನ್ನೂ 9 ಬೆಳೆಗಳ್ನ ಸೇರ್ಸೋ ಕೆಲ್ಸ ನಡ್ದಿದೆ.

ಮಾನ್ಯತೆ ಪಡೆದ ಹತ್ತರಲ್ಲಿ ಆರು!

ಒಂದು ನೆಲದ ಮಣ್ಣಿನ ಮತ್ತು ಅಲ್ಲಿನ ಹವಾಮಾನದ ವೈಶಿಷ್ಟ್ಯತೆ ಆಧರಿಸಿ ಅಲ್ಲಿ ಬೆಳೆಯೋ ಕೆಲವು ಬೆಳೆಗಳ ರೂಪ, ಗುಣಮಟ್ಟ ಹಾಗೂ ಅವುಗಳ ಸೊಗಡು ಇನ್ನೆಲ್ಲಿ ಬೆಳೆದ್ರೂ ಸಿಗದು ಅಂತಾದಾಗ ಇಂತಹ ಬೆಳೆಗಳ ವೈಶಿಷ್ಟ್ಯತೆ ಕಾಪಾಡಿ ಅವುಗಳನ್ನು ಬೆಳ್ಯೋರಿಗೆ ಪ್ರೋತ್ಸಾಹ ನೀಡಿ ಆ ಬೆಳೆಗೆ ಹೆಚ್ಚು ಮಾರುಕಟ್ಟೆ ಸಿಗೋ ಹಾಗೆ ಈ ಭೌಗೋಳಿಕ ಮಾನ್ಯತೆ ಮಾಡತ್ತೆ ಗುರು! ಕರ್ನಾಟಕದ ಭೌಗೋಳಿಕ ವೈಶಿಷ್ಟ್ಯತೆ ಎಷ್ಟು ಅಂದರೆ ಈಗಾಗ್ಲೇ ನಮ್ಮ ದೇಶದಿಂದ ಹೋಗಿರುವ 10 ಇಂತಹ ಬೆಳೆಗಳಲ್ಲಿ 6 ನಮ್ಮ ರಾಜ್ಯದ್ದೇ. ಈ ಬೆಳೆಗಳು - ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ, ನಂಜನಗೂಡು ರಸಬಾಳೆ, ಮೂರು ಬಗೆಯ ಮಲ್ಲಿಗೆ ಹೂಗಳು.

ಕನ್ನಡ ನಾಡು ಚಿನ್ನದ ಬೀಡು

ನಮ್ಮ ಕನ್ನಡ ನಾಡಿನ ಭೂಪ್ರದೇಶ ಬಹಳ ಸಮೃದ್ಧವಾದ್ದು ಗುರು! ಭಾರತದ ಒಟ್ಟು ನೆಲದ-ಮೇಲಿನ-ನೀರ ವಿಸ್ತೀರ್ಣದ ಶೇಕಡ 5ರಷ್ಟು ನೀರು ಇಲ್ಲೇ ಹರಿಯತ್ತೆ. ಈ ನಮ್ಮ ನಾಡಲ್ಲಿ 7 ನದಿಗಳ ನೀರು ನೀರಾವರಿ, ಪ್ರವಾಸೋದ್ಯಮ, ವಿದ್ಯುತ್, ಕುಡಿವ ನೀರು ಹೀಗೆ ಹಲವು ಯೋಜನೆಗಳಿಗೆ ಪೂರೈಕೆ ಮಾಡಿವೆ. ಪ್ರಕೃತಿಯ ಯಾವುದೇ ಏರು-ಪೇರು, ವಿಕೋಪ ಪ್ರಕೋಪಗಳಿಲ್ಲದ ಭೂಪ್ರದೇಶವಾಗಿದ್ದು ಇದು ಎಲ್ಲಾ ಬಗೆಯ ವಾಣಿಜ್ಯ, ವ್ಯಾಪಾರ ಮತ್ತು ವ್ಯವಸಾಯಗಳಿಗೆ ಪ್ರಿಯವಾದ ಭೂಮಿಯಾಗದೆ ಗುರು!

ಕರುನಾಡಲ್ಲಿ ಬೆಳ್ಯೋ ಶ್ರೀಗಂಧ ಇನ್ನೆಲ್ಲಿ ಬೆಳುದ್ರೂ ಆ ಕಂಪು ಬರೋಕ್ಕೆ ಸಾಧ್ಯವೇ ಇಲ್ಲ ಅಂತನ್ನೋದು ಈಗಾಗ್ಲೇ ಜಗತ್ತಿಗೆಲ್ಲಾ ತಿಳ್ದಿರೋ ಸತ್ಯವೇ ಹೌದು. ನಮ್ಮ ನಾಡಿನ ಎಡಭಾಗದಲ್ಲಿ ಹರಡ್ಕೊಂಡಿರುವ ಮಲೆನಾಡು ಪ್ರದೇಶದಲ್ಲಿ ಸಿಗುವ ಔಷದ ಮೂಲಿಕೆಗಳು ಎಣಿಕೆ ಮೀರಿದೆ, ಕೊಡಗಿನಲ್ಲಿ ಬೆಳೆವ ಕಿತ್ತಳೆ ಮತ್ತು ಕಾಫಿಯ ಸೊಬಗು, ಇಲ್ಲಿಯ ನೈಸರ್ಗಿಕ ಸೌಂದರ್ಯ ಎಲ್ಲವೂ ಅದ್ಭುತ! ಆದ್ರೆ ಮಳೆ-ಬೆಳೆಗಳಷ್ಟೇ ನಮ್ಮ ಹಿರಿಮೆಯಾಗಿರದೇ ನಮ್ಮ ಭೂಮಿ ಕೈಗಾರಿಕಾ ಕ್ಷೇತ್ರಕ್ಕೂ ಪೂರಕವಾಗುವಂತೆ ದೇಶದಲ್ಲೇ ಅತಿ ಹೆಚ್ಚು ಚಿನ್ನದ ಉತ್ಪಾದನೆ ಮಾಡುವ ರಾಜ್ಯವಾಗಿದೆ, ಅಲ್ಲದೆ ಇತರ ಮುಖ್ಯ ಖನಿಜಗಳಿಗೆ ನಮ್ಮ ರಾಜ್ಯ ಹೆಸರಾಗಿದೆ ಗುರು!

ಈ ಸಂಪತ್ತು ನಮ್ಮ ಸೊತ್ತು!

ಈ ಖಜಾನೆಯ ವಾರಸುದಾರ ಸಹಜವಾಗೇ ಈ ಮಣ್ಣಿನ ಮಕ್ಕಳು. ಇಲ್ಲಿ ಕಾಣುವ ಪ್ರತಿಯೊಂದು ವಸ್ತುವಿನಿಂದ್ಲೂ ಕನ್ನಡಿಗನಿಗೇ ಲಾಭ ಆಗ್ಬೇಕು ಗುರು. ಇಲ್ಲಿ ಲಾಭದ ಅವಕಾಶ ಹೊರಗಿನವರಿಗೆ ಕಂಡರೂ ಅವರ ಲಾಭದಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕದ ಲಾಭವೇ ಮೊದಲಾಗಿರಬೇಕು ಗುರು. ನಮ್ಮ ನೆಲದಲ್ಲಿ ನಡೀತಿರೋ ಗಣಿಗಾರಿಕೆ ಕನ್ನಡನಾಡಿಗೆ ಸಂಪತ್ತು ಸುರಿಸಬೇಕು. ಅದು ನಮ್ಮ ಜನರ ಬಾಳನ್ನು ಹಸನಾಗಿಸಬೇಕು.

ಇಂತಹ ಸೊಬಗಿನ ಸಿರಿ ತುಂಬಿದ ನಾಡು ನಾಡು ನಮ್ಮ ಕನ್ನಡ ನಾಡು. ಈ ನಾಡಲ್ಲಿ ಹುಟ್ಟಿರೋ ನಾವು ಈ ನೆಲಕ್ಕೆ ಪ್ರತಿದಿನ ಕೈಜೋಡಿಸಿ ನಮಿಸಿದ್ರೂ ಸಾಲ್ದು ಗುರು! ನಮ್ಮ ನಾಡಿನ ಈ ಸಿರಿಯನ್ನು ಸರಿಯಾಗಿ ಅರ್ಥ ಮಾಡ್ಕೊಳೋಣ, ಅದನ್ನ ಕಾಪಾಡೋ ಜವಾಬ್ದಾರಿ ತೊಗೊಳೋಣ. ಈ ಮಣ್ಣಿಗೆ, ಇಡಿಯ ಕನ್ನಡ ಕುಲಕೋಟಿಗೆ ಜೀವನ ಕೊಡಬಲ್ಲ ಮತ್ತದನ್ನ ಬೇಕಾದಷ್ಟು ಹಸನು ಮಾಡಬಲ್ಲ ಶಕ್ತಿ ಇದೆ ಎಂದೂ ಅರಿಯೋಣ ಗುರು.

"ಬ್ಯಾಡ" ಅನ್ನಕ್ಕಾಗದ ಬ್ಯಾಡಗಿ ಮೆಣಸಿನ್ಕಾಯಿ!

ಉತ್ತರ ಕರ್ನಾಟಕದಲ್ಲಿ ನಮ್ಮ ರೈತರು ಬೆಳೆಯೋ ಮಸಾಲೆಗಳ ಬೆಳೆ ದೇಶದೋರ ಬಾಯಲ್ಲೆಲ್ಲಾ ನೀರೂಡಿಸ್ತಿದೆ! ಇವ್ಗಳ ಮಧ್ಯೆ ಬ್ಯಾಡಗಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳ್ಯೋ ಬ್ಯಾಡ್ಗಿ-ಮೆಣಸಿನಕಾಯಿಯ ಗುಣಮಟ್ಟ ಮತ್ತು ರಫ್ತಾಗ್ತಿರೋ ಪ್ರಮಾಣ ನೋಡಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದಲ್ಲಿ 10 ಕೋಟಿಯ ಮಸಾಲೆಗಳ-ಪಾರ್ಕ್ (spices-park) ಶುರು ಮಾಡಲು ಯೋಜನೆ ಹಾಕಿದೆ . ಇದು ನಮ್ಮ ನಾಡಿನ ರೈತರಿಗೆ ಸಕ್ಕತ್ ಸಂತೋಷದ ಸುದ್ಧಿ ಮತ್ತು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ವಿಷಯ ಗುರು! ಇದರ ಪೂರ್ತಿ ಲಾಭ ನಮ್ಮ ರೈತರಿಗೇ ಸಿಗ್ಬೇಕು ಗುರು!

ಅಂಕಿ-ಅಂಶಗಳು
ಜಗತ್ತಿನ ಮೆಣಸಿನಕಾಯಿ ಬೆಳೆಯ ಶೇಕಡ 25ರಷ್ಟು ಬೆಳೆ ಭಾರತದಲ್ಲೇ ಬೆಳ್ಯತ್ತೆ, ಮತ್ತೆ ಇದ್ರಷ್ಟು ಇನ್ಯಾವ ದೇಶದಲ್ಲೂ ಬೆಳ್ಯೋಲ್ಲ. ಭಾರತದ ಒಟ್ಟು ಮೆಣಸಿನಕಾಯಿಯ ಕೊಯ್ಲಿನ ಶೇ.14ರಷ್ಟು ಭಾಗ ಕರ್ನಾಟಕದಲ್ಲೇ ಆಗ್ತಿದ್ದು ನಮ್ಮ ರಾಜ್ಯ ದೇಶದಲ್ಲೇ ಎರಡನೆಯ ಸ್ಥಾನದಲ್ಲಿದೆ. ಆದ್ರೆ ಬ್ಯಾಡಗಿ ಮೆಣಸಿಗೆ ಜಗತ್ತಿನಲ್ಲೇ ಅತಿ-ವಿಶಿಷ್ಟ ಬೇಡಿಕೆಯಿದ್ದು ಅದರ ಮಾರುಕಟ್ಟೆ ಅತಿ ಹೆಚ್ಚು ಲಾಭದಾಯಕ ಆಗಿದೆ. ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮೆಣಸುಗಳ ಪಟ್ಟಿಯಲ್ಲಿ ಬ್ಯಾಡಗಿ ದೊಡ್ಡ ಜಾಗ ಪಡೆದಿದೆ. ಯೂರೋಪಿನ ದೇಶಗಳಲ್ಲಿ ಖಾರ ತಿನ್ನುವುದು ಕಡಿಮೆಯಾದ್ರಿಂದ ಬ್ಯಾಡ್ಗಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದ ಬ್ಯಾಡ್ಗಿಗೆ ತುಂಬ ದೊಡ್ಡ ಮಾರುಕಟ್ಟೆ ಇದೆ. ಬ್ಯಾಡ್ಗಿಗೆ ಇದ್ರಲ್ಲಿರೋ ಲಾಭ ಅಪಾರ ಗುರು! ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಬ್ಯಾಡ್ಗಿ ಮೆಣಸಿಕಾಯಿ ವಿಶಿಷ್ಟ ಜಾಗ ಪಡೆದಿದೆ.

"ಪಾರ್ಕ್" ಸಂಸ್ಥೆಯಿಂದ ಅಪೇಕ್ಷೆ ಏನು?
ಈ ಮಸಾಲೆ-ಪಾರ್ಕ್ ಯೋಜನೆ ಕನ್ನಡ ನಾಡಿನ ಮೆಣ್ಸಿನ್ಕಾಯಿ ಬೆಳ್ಯೋ ರೈತರಿಗೇ ಲಾಭ ತರಬೇಕು. ಇಂತಹ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ದೃಷ್ಟಿಯಿಂದ ಕೆಲವು ಮುಖ್ಯ
ಯೋಜನೆಗಳಾದ:
  1. ಮೆಣ್ಸಿನ್ಕಾಯಿ ಬೀಜದ ಸಂಸ್ಕರಣೆ
  2. ಮೆಣ್ಸಿನ್ಕಾಯಿಯ ಸಂಸ್ಕರಣೆ ಮತ್ತು ಬೇಗನೆ ವಣಗಿಸುವಿಕೆ
  3. ಮೆಣ್ಸಿನ್ಕಾಯಿ ಬೆಳೆಗೆ ರೋಗ ನಿಯಂತ್ರಣಾ ವಿಧಾನಗಳು
  4. ಮೆಣ್ಸಿನ್ಕಾಯಿಯ ಗುಣಮಟ್ಟ ತಪಾಸಣೆ ಮತ್ತು ಹೆಚ್ಚಳ
  5. ಮೆಣ್ಸಿನ್ಕಾಯಿಯ ಹೆಚ್ಚು ಫಸ್ಲಿರೋ ಹೊಸ ತಳಿಗಳ ಕಂಡುಹಿಡಿಯುವಿಕೆ
  6. ಮೇಣ್ಸಿನ್ಕಾಯಿಯ ರಫ್ತು ಹೆಚ್ಚಳಕ್ಕೆ ಹೆಜ್ಜೆ
  7. ಮೆಣ್ಸಿನ್ಕಾಯಿಯ ಆಧುನಿಕ ಮಾರಾಟ-ಕವಚ ವಿನ್ಯಾಸ (packaging)
  8. ಮೆಣ್ಸಿನ್ಕಾಯಿಯ ಮಾರುಕಟ್ಟೆ ಹೆಚ್ಚಳಕ್ಕೆ ಬೇಕಾದ ಮಾರುಕಟ್ಟೆ ವಿಶ್ಲೇಶಣೆ
ಗಳನ್ನು ಕೈಗೆತ್ತಿಕೊಂಡು ಈ ಸಂಸ್ಥೆ ಕನ್ನಡದ ರೈತರಿಗೆ ತಮ್ಮ ಫಸಲು ಮತ್ತು ಗಳಿಕೆಗಳನ್ನು ಉತ್ತಮಗೊಳಿಸಲು ನೆರವಾಗ್ಬೇಕು ಗುರು! ಜೊತೆಗೆ ಈ ಮೆಣ್ಸಿನ್ಕಾಯಿ ಬ್ಯಾಡ್ಗಿ ಪ್ರದೇಶಗಳಿಗೇ ಪ್ರತ್ಯೇಕವಾದ ಬೆಳೆ ಆಗಿದ್ದು, ಇಂತಹ ತಳಿ ಇನ್ನೆಲ್ಲೂ ಬೇರೆಡೆ ಬೆಳ್ಯೋಕ್ಕೆ ಸಾಧ್ಯವಲ್ಲದ ಕಾರಣ ಇದಕ್ಕೆ (ಪ್ರಾದೇಶಿಕ-ಸೂಚಕ) GI ಪಟ್ಟ ಕೊಡ್ಸಕ್ಕೆ ಈ ಸಂಸ್ಥೆ ಮುಂದಾಗ್ಬೇಕು. ಇದಕ್ಕೆ ಕೂಡಲೆ ಬೇಕಾದ ಹಜ್ಜೆ ತೊಗೊಳ್ಬೇಕು.

ಬೆಳೆಗಾರ್ರು ಏನ್ ಮಾಡ್ಬೇಕು?
ಭಾರತದಲ್ಲಿ ಬೆಳ್ಯೋ ಹಲವಾರು ಬಗೆಯ ಮೆಣ್ಸಿನ್ಕಾಯಿಗಳ ನಡುವೆ ನಮ್ಮ ಬ್ಯಾಡ್ಗಿ ಮೆಣ್ಸಿನ್ಕಾಯ್ಗೆ ಇಷ್ಟು ಬೆಲೆ ದೊರಕಿ ಅದರ ಮಾರುಕಟ್ಟೆ ಹೆಚ್ಚಿಸಲು ಒಂದು ಸಂಸ್ಥೆಯು ನಿರ್ಮಾಣ ಆಗ್ತಿರುವಾಗ ಕನ್ನಡದ ರೈತರು ಇದರ ಲಾಭ ತೊಗೊಳಕ್ಕೆ ಮುಂದಾಗ್ಬೇಕು ಗುರು. ಪ್ರತಿಯೊಬ್ಬ ರೈತನೂ ತನ್ನ ಬೆಳೆಯ ವಿಚಾರ ಈ ಸಂಸ್ಥೆಯವರೊಡನೆ ಹಂಚಿಕೊಂಡು ಅವರಿಂದ ಹೇಗೆ ಲಾಭ ಪಡೀಬೋದು ಅಂತ ತಿಳ್ಕೊಳ್ಬೇಕು. ಅವರು ಮಾಡುವ ಸಂಶೋಧನೆಗಳಿಗೆ ಸ್ಪಂದಿಸಿ ತಮ್ಮ ಲಾಭವನ್ನ ತಾವೇ ರೂಪಿಸಿಕೊಳ್ಬೇಕು ಗುರು!

ಒಟ್ಟಿನಲ್ಲಿ ಇಂದು ಜಗತ್ತಿನೆಲ್ಲೆಡೆ ಈ ಮೆಣ್ಸಿನ್ಕಾಯಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲಿ ಇನ್ನೂ ಕರ್ನಾಟಕ ರಾಜ್ಯ ಎರಡನೇ ಜಾಗದಲ್ಲಿರೋದ್ರಿಂದ ಈ ಯೋಜನೆಯಿಂದ ನಾವು ಮೊದಲನೆ ಜಾಗ ಗಳಿಸುವಂತಾಗ್ಬೇಕು. ಜಗತ್ತಿನಲ್ಲಿ ನಮ್ಮ ಮೆಣ್ಸಿನ್ಕಾಯಿಗೆ ಅತಿ ಹೆಚ್ಚಿನ ಬೇಡಿಕೆ ಹುಟ್ಟಿಸಿ ಜಗತ್ತಿಗೇ ಬ್ಯಾಡ್ಗಿಯ ಹುಚ್ಚೆಬ್ಬಿಸ್ಬೇಕು ಗುರು! ಏನಂತೀರ?

ಕಲೆಯಲ್ಲವಿದು, ತಂತ್ರಜ್ಞಾನದ ಉತ್ತುಂಗ


ಜನವರಿ 26ರಂದು ದಿಲ್ಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕರ್ನಾಟಕದ ಕಡೆಯಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರ ತೋರಿಸಲಾಗಿತ್ತು. ಇದು ಎರಡನೇ ಅತ್ಯುತ್ತಮ ಸ್ತಬ್ಧ-ಚಿತ್ರ, ಅತ್ಯುತ್ತಮ ಫ್ಯಾಬ್ರಿಕೇಷನ್ ಹಾಗೂ ವಿಷಯವನ್ನು ಅತ್ಯುತ್ತಮವಾಗಿ ಬಿಂಬಿಸಿದೆ ಎಂದು ಬಹುಮಾನ ಗಳಿಸಿದೆ. ಇದು ನಿಜಕ್ಕೂ ಕನ್ನಡಿಗರ ಕಿರೀಟದಲ್ಲಿನ ಇನ್ನೊಂದು ಗರಿಯಾಗಿದೆ. ಹಿಂದೊಮ್ಮೆ 2005ರಲ್ಲಿ ಮೊದಲನೇ ಬಹುಮಾನ ಗೆದ್ದಿದ್ದ ಗೊಮಟೇಶ್ವರನ ಸ್ತಬ್ಧ-ಚಿತ್ರ ಇನ್ನೂ ನೆನಪಿನಲ್ಲಿರುವಾಗ್ಲೇ ಈ ಬಹುಮಾನವೂ ಕರ್ನಾಟಕಕ್ಕೆ ದೊರಕಿದೆ! ಇದು ನಮಗೆಲ್ಲಾ ಎಂತಹ ಒಳ್ಳೇ ಸಂದೇಶ ಕೊಡ್ತಿದೆ ಅನ್ನೋದ್ನ ಗಮನಿಸಿ.

ಬಹುಮಾನ ಟ್ಯಾಬ್ಲೋಗಲ್ಲ, ನಮ್ಮ ಹಿಂದಿನವರ ಕುಶಲತೆಗೆ

ಬೇಲೂರಿನ ದೇವಾಲಯದ ಕೇವಲ ಒಂದು ನಕಲು-ಪ್ರತಿಗೇ ಇಷ್ಟು ಗೌರವ ನೀಡ್ಬೇಕಾಗಿ ಬಂದಿದೆ ಅಂದ್ರೆ ಇನ್ನು ನಿಜವಾದುದರ ಹಿರಿಮೆ ಏನು ಅನ್ನೋದ್ನ ತಿಳ್ಕೋಬೇಕು ನಾವು. ಈ ಕುಶಲತೆಯನ್ನು ಬರೀ ಬೇಲೂರಿನ ಒಂದು ದೇವಾಲಯಕ್ಕೆ ಅಂದುಕೊಳ್ಳದೆ ಕಣ್ಣು ಹಾಯಿಸಿದರೆ ಕಾಣೋದು ಹಂಪೆ-ಬಾದಾಮಿ-ಐಹೊಳೆ-ಪಟ್ಟದಕಲ್ಲಿನ ವಿನ್ಯಾಸಗಳು, ಕರಾವಳಿಯ ಮುರುಡೇಶ್ವರ, ಸೋಮನಾಥಪುರ, ಮೈಸೂರಿನ ಅರಮನೆ, ಬೆಂಗಳೂರಿನ ವಿಧಾನ ಸೌಧ ಮತ್ತನೇಕ.

ಕಲೆಯಲ್ಲವಿದು, ತಂತ್ರಜ್ಞಾನದ ಶಿಖರ ಸಾಧನೆಯ ಹೆಗ್ಗುರುತು!


ಓ ಕನ್ನಡಿಗಾ, ಇವುಗಳಲ್ಲಿ ಕಾಣುತ್ತಿರುವುದು ಬರಿಯ ಕಲೆಯ ಉತ್ತುಂಗವಲ್ಲ. ಇದರಲ್ಲಿರುವುದು ಉನ್ನತ ತಂತ್ರಜ್ಞಾನ. ಅಂದಿನ ದಿನಗಳಲ್ಲಿ ಪ್ರಪಂಚದಲ್ಲಿ ಅತಿ ವಿರಳವಾದ ತಂತ್ರಜ್ಞಾನ. ಅದು ಒಂದೇ ಕಲ್ಲಿನಲ್ಲಿ ಕೆತ್ತಿರೋ ಬೆಳಗೋಳದ 57 ಅಡಿ ಎತ್ತರದ ಗೊಮ್ಮಟನೇ ಇರ್ಬೋದು, ಬೇಲೂರಿನ ಶಿಲಾ-ಬಾಲಿಕೆಯರ ಮೋಹಕ ವಿನ್ಯಾಸವೇ ಇರ್ಬೋದು, ಹಂಪೆಯ ಸಂಗೀತ ಮೂಡಿಸುವ ಕಂಬಗಳೇ ಇರ್ಬೋದು, ಸುಂದರ ಸ್ನಾನದ ಕೊಳವಿರವಿರಬಹುದು, ನೀರಾವರಿ ಕಾಲುವೆಗಳಿರಬಹುದು, ಸಂಕ್ರಮಣದ ಸಮಯದಲ್ಲಿ ಸರಿಯಾಗಿ ಸೂರ್ಯನ ಪ್ರಕಾಶ ಒಂದೇ ಕಡೆ ಬೀಳೋ ಹಾಗಿರೋ ಗವಿಪುರಂನ ಶಿವಮಂದಿರ ಇರ್ಬೋದು, ಹಂಪೆಯಲ್ಲಿರುವ ಹವಾನಿಯಂತ್ರಿತ ಅರಮನೆಯೇ ಇರ್ಬೋದು.. ಹೀಗೇ ನೂರಾರು ಉದಾಹರಣೆ ಇರ್ಬೋದು - ಇವೆಲ್ಲವೂ ಕಲೆಯ ಹೊದಿಕೆಯಲ್ಲಡಗಿರೋ ತಂತ್ರಜ್ಞಾನದ ಉತ್ತುಂಗ ಸಾಧನೆಯಲ್ಲವೇ?
ಇಂದಿಗೂ ತಂತ್ರಜ್ಞಾನದ ಮುಂಚೂಣಿಗೆ ಕನ್ನಡಿಗ ಬರಬೇಕು

ಅಂದೇ ತಂತ್ರಜ್ಞಾನದಲ್ಲಿ ಅಂತಹ ಸಾಧನೆಗೈದಿದ್ದ ಕನ್ನಡಿಗರು ನಾವು ಇಂದೂ ಕೂಡಾ ತಂತ್ರಜ್ಞಾನದ ಮುಂಚೂಣಿಯಲ್ಲಿ ನಿಂತು ಅದರ ಕರ್ತಾರರಾಗ್ಬೋದು. ಇಂತಹ ಇತಿಹಾಸವಿರೋ ನಮಗೆ ಯಾವ ಕೀಳರಿಮೆಯೂ ಇರಬೇಕಿಲ್ಲ. ನಮ್ಮ ರಕ್ತದಲ್ಲೇ ಆ ಹಿರಿಮೆ ಇರೋದ್ರಿಂದ ಮನಸ್ಸು ಮಾಡಿ ಸಾಧಿಸಿ ತೋರಿಸಿದ್ರೆ ಸಾಕು, ಇಡೀ ಜಗತ್ತೇ ನಿಬ್ಬೆರಗಾಗೋ ಅವಿಷ್ಕಾರಗಳನ್ನು ನಾವು ಮಾಡಬಹುದು. ಮಾಡಬೇಕು. ಅದಕ್ಕೆ ನಮ್ಮ ಹಿರಿಯರ ಅಂದಿನ ಸಾಧನೆಗಳು ಪ್ರೇರಣೆ ನೀಡುತ್ತಿವೆ. ಅಗೋ ನೋಡಿ, ಕನ್ನಡಿಗ ಏನೆಲ್ಲಾ ಸಾಧಿಸುವನೆಂದು ಕಾಣಲೆಂದೇ ಆ ಸ್ಮಾರಕಗಳೆಂಬ ಸಾಧನೆಯ ಹೆಗ್ಗುರುತುಗಳು ಕಾತರಿಸುತ್ತಾ ಕಾಯುತ್ತಿವೆ.

ಥೂ! ಇದು ಮೈಸೂರು ಮಲ್ಲಿಗೆಯಲ್ಲ, ತಮಿಳು ಮಲ್ಲಿಗೆ!

ತಮಿಳರು ಕೊಯಮತ್ತೂರಿನ ಯಾವುದೋ ಮಲ್ಲಿಗೆ ಹೂನ ಮೈಸೂರು ಮಲ್ಲಿಗೆ ಅಂತ ಮಾರಾಟ ಮಾಡಿ ಅದನ್ನ ಬೆಳೆಯೋರು ಅವರೇ ಅಂತ ಕೂಡ ಹೇಳ್ತಿದಾರೆ ಅಂತ ಅಕ್ಟೋಬರ್ 14ರ ಕನ್ನಡಪ್ರಭ ವರದಿ ಮಾಡಿದೆ. ಮೈಸೂರು ಮತ್ತು ಸುತ್ತಮುತ್ತಲ ರೈತರು ಮಲ್ಲಿಗೆ ಬೆಳೆಯೋದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರೋ ಹಿನ್ನೆಲೇಲಿ ಈ ಥರಾ ನಡೀತಿರೋದು ಕಾನೂನುಬಾಹಿರವೂ ಹೌದು, ಕನ್ನಡಿಗರ ಭವಿಷ್ಯಕ್ಕೆ ಬಹಳ ರೀತಿಗಳಲ್ಲಿ ಒಳ್ಳೇದೂ ಅಲ್ಲ ಗುರು. ಇಲ್ಲಿ ಜನ ಸಾಯ್ತಾ ಬಿದ್ದಿದ್ದರೂ ಕಾವೇರಿ ನೀರ್ನ ತಲೆತಲಾಂತರಗಳಿಂದ ಮೋಸದಿಂದ ತಮ್ಮಕಡೆಗೆ ಎಳ್ಕೊಂಡ ತಮಿಳುನಾಡಿನ ಜನ ನೀರು ಕೊಡ್ತಿರೋ ನಮಗೇ ಚಳ್ಳೇಹಣ್ಣು ತಿನ್ನಿಸ್ತಾ ಇದಾರಲ್ಲ ಗುರು! ಹೇಗಿದೆ ನಮ್ಮ ವಿಶ್ವಮಾನವತ್ವಕ್ಕೆ ಉಡುಗೊರೆ?!

ತಮಿಳು ಮಲ್ಲಿಗೆಯಿಂದ ಮೈಸೂರು ಮಲ್ಲಿಗೆಗೆ ಕೆಟ್ಟ ಹೆಸರು

ಮೈಸೂರು ಮಲ್ಲಿಗೆ ಹೆಸರಿನ ಪ್ರಕಾರ ಈ ಹೂವು ಬೆಳೆಯೋದು ಮೈಸೂರಿನ ಕೆಲವು ಭಾಗಗಳಲ್ಲಿ ಮಾತ್ರ. ಕನ್ನಡದ ಮಣ್ಣಿಗಿರೋ ಭೌಗೋಳಿಕ ಮತ್ತು ರಾಸಾಯನಿಕ ಗುಣಗಳು ಈ ಮಲ್ಲಿಗೆ ಹೂವಿಗೆ ಅದರ ವಿಶಿಷ್ಟ ಕಂಪನ್ನು ನೀಡತ್ತೆ. ಮೈಸೂರು ಮಲ್ಲಿಗೆ ಅಂತ ಹೆಸರು ಉಪ್ಯೋಗ್ಸಿ ತಮಿಳ ಮಲ್ಲಿಗೆ ತಂದು ಮಾರ್ತಿರೋದ್ರಿಂದ ಯಾರಿಗೂ ಮೈಸೂರಲ್ಲಿ ಇತ್ತೀಚೆಗೆ ಸಿಗ್ತಿರೋ ಮಲ್ಲಿಗೆ ಇಷ್ಟ ಆಗ್ತಿಲ್ಲ. ಹೇಗೆ ತಾನನೆ ಇಷ್ಟವಾದೀತು? ಮೈಸೂರು ಮಲ್ಲಿಗೆಗಿರುವ ಮನಸೆಳೆಯುವ ಸುವಾಸನೆ ಈ ತಮಿಳು ಮಲ್ಲಿಗೆಗೆ ಸ್ವಲ್ಪವೂ ಇಲ್ಲ! ಹೀಗಾಗಿ ಮೈಸೂರಿನ ನಿಜವಾದ ಮಲ್ಲಿಗೆಗೆ ಅದರ ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ ಕೆಟ್ಟ ಹೆಸರು ಬರ್ತಿದೆ ಗುರು! ಹೀಗೇ ಮುಂದುವರೆದರೆ ಮೈಸೂರ ಮಲ್ಲಿಗೆ ಕೊಂಡ್ಕೊಳ್ಳೋರೇ ಕಡಿಮೆಯಾಗಿಹೋಗೋ ದಿನ ಬರಬಹುದು. ಮೈಸೂರು ಮಲ್ಲಿಗೆಯ ವಿಶಿಷ್ಟ ಇತಿಹಾಸ ಮಣ್ಣಪಾಲಾಗ್ಬೋದು. ಮುಂದೆ ಮೈಸೂರಲ್ಲಿ ಮಲ್ಲಿಗೆ ಕೊಳ್ಬೇಕು ಅಂದ್ರೆ ತಮಿಳರು ಹೇಳಿದ ಬೆಲೆಯನ್ನೇ ತೆರಬೇಕಾಗತ್ತೆ, ಅದೂ ಸುವಾಸನೆಯಿಲ್ಲದ, ಕನ್ನಡದ ಮಣ್ಣಿನಲ್ಲಿ ಬೆಳೆಯದ ತಮಿಳು ಮಲ್ಲಿಗೆಗೆ!

ತಮಿಳ್ನಾಡಿನ ಮಲ್ಲಿಗೇನ ಮೈಸೂರು ಮಲ್ಲಿಗೆ ಅಂತ ಕರಿಯೋದು ಕಾನೂನಿನ ಉಲ್ಲಂಘನೆ

ಇದೇ ವರ್ಷದ ಸೆಪ್ಟೆಂಬರ್ 27ರಂದು ಮೈಸೂರು ಮಲ್ಲಿಗೆಯನ್ನ ಬೆಳೆಯೋ ಹಕ್ಕು ಮೈಸೂರು ಮತ್ತು ಸುತ್ತಮುತ್ತಲ ಕನ್ನಡಿಗರಿಗೇ ಕಾದಿರಿಸಿದೆ ಅಂತ ಕಾನೂನೇ ಹೊರಡಿಸಲಾಯಿತು. ದಿ ಹಿಂದೂ ವರದಿ ಪ್ರಕಾರ:
The bond between city and the flower has now grown stronger with Mysore Mallige getting the Geographical Indication (GI) tag, which will provide exclusive rights to the local community to cultivate the crop for 10 years.

ಅಂದರೆ - ಮೈಸೂರಿನ ಕೆಲ ಭಾಗಗಳಲ್ಲಿ ಬೆಳ್ಯೋ ಮಲ್ಲಿಗೆ ಹೂವ್ನ ಇನ್ನು 10 ವರ್ಷ ಮೈಸೂರಿನ ಜನರಿಗೆ ಮಾತ್ರ ಬೆಳ್ಯೋ ಹಕ್ಕು ಇರತ್ತೆ ಅಂತ ಗುರು! ಹಿಂಗೆಲ್ಲಾ ಕಾವಲು ನಿಂತಿರೋ ಕಾನೂನು ಇದ್ದಾಗ್ಲೇ ನಮ್ಮ ಪಕ್ಕದ ತಮಿಳ್ರು ನಮ್ಮ ಮಲ್ಲಿಗೇನ ಔವ್ರು ಬೆಳ್ದಿರೋದಲ್ದೆ, ಮೈಸೂರು ಮಲ್ಲಿಗೆ ಅವರದ್ದೇ ಅಂತ ಬೇರೆ ಹೇಳ್ತಿದಾರಲ್ಲ, ಇದು ಹಾಡಹಗಲಲ್ಲೇ ಮಾಡ್ತಿರೋ ಅಪರಾಧ ಗುರು! ಇಂತಹ ಅಪಾರಾಧಗಳಿಂದ ಕರ್ನಾಟಕ-ತಮಿಳುನಾಡಿನ ಮಧ್ಯೆ ಸಂಬಂಧಗಳು ಇನ್ನೂ ಹದಗೆಡತ್ತೆ ಅಷ್ಟೆ.

ಮೈಸೂರು ಮಲ್ಲಿಗೆಗಿರೋ ಸಾವಿರಾರು ಕೋಟಿ ರೂ ಮಾರುಕಟ್ಟೇನ ಕನ್ನಡಿಗರು ಕೈಬಿಡಬಾರದು

ಇಷ್ಟೆಲ್ಲಾ ಆಗ್ತಿರೋದಕ್ಕೆ ನಮ್ಮ ಕನ್ನಡಿಗರು ಮೈಸೂರು ಮಲ್ಲಿಗೆ ಬೆಳೆಯೋದು ನಿಲ್ಲಿಸ್ತಾ ಇರೋದೂ ಕಾರಣ ಗುರು. ನಮ್ಮ ಮಣ್ಣಿನಲ್ಲಿ ಮಾತ್ರ ಬೆಳೆಯೋಂಥಾ ಈ ಹೋಲಿಕೆಯಿಲ್ಲದ ಹೂವಿನ ಸುತ್ತ ಒಂದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬೇಕು ಗುರು! ಮೂಗೊಳಗೆ ತುರುಕಿಕೊಂಡರೂ ಒಂಚೂರೂ ವಾಸನೆಯಿಲ್ಲದ ಟ್ಯೂಲಿಪ್ ಹೂ ಹಿಡ್ಕೊಂಡು ಡಚ್ ಜನ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿರುವಾಗ ನಮ್ಮ ಮೈಸೂರಿನ ರೈತರಿಗೇನು ಬಂದಿದೆ ಧಾಡಿ? ಸಾವಿರಗಟ್ಲೆ ಎಕರೆ ಮೈಸೂರು ಮಲ್ಲಿಗೆ ಬೆಳೀಬೇಕು, ದೇಶವಿದೇಶಗಳಿಗೆ ಮಾರಾಟ ಮಾಡ್ಬೇಕು. ಮಲ್ಲಿಗೆ ಜಡೆ, ಮಲ್ಲಿಗೆ ಸೆಂಟು, ಚಿಕ್ಕಮಲ್ಲಿಗೆ, ದೊಡ್ಡಮಲ್ಲಿಗೆ, ಮಲ್ಲಿಗೆ ಬೊಕ್ಕೆ, ಮದುವೆ ಹಾರ, ರಾಜಕಾರಣಿಗಳಿಗೆ ಹಾರ, ಮಲ್ಲಿಗೆ ಅದು, ಮಲ್ಲಿಗೆ ಇದು ಅಂತ ಇಡೀ ಪ್ರಪಂಚವನ್ನೇ ಮೈಸೂರು ಮಲ್ಲಿಗೆಯಿಂದ ಮೋಡಿ ಮಾಡಿ ದುಡ್ಡು ಸಂಪಾದಿಸಬೇಕು ಗುರು!

ಮುಂದಿನ ಹೆಜ್ಜೆ ಏನು?

ತಮಿಳರ ಈ ಮಲ್ಲಿಗೇನ ಮಾರುಕಟ್ಟೇಲಿ ಕಂಡರೆ ಅದನ್ನ ಕೊಳ್ಳದೆ ಮೂಸಿ ನೋಡಿ, ಇಲ್ಲವೇ ಎಲ್ಲೀದು ಅಂತ ಕೇಳಿ ಬಿಸಾಕಬೇಕು. ಮೈಸೂರು ಮಲ್ಲಿಗೆ ಅಂತ ಸುಳ್ಳು ಹೇಳೋ ತಮಿಳರನ್ನ ಪೋಲೀಸರಿಗೆ ಒಪ್ಪಿಸಬೇಕು ಗುರು! ನಮ್ಮ ಸರ್ಕಾರ ಎಚ್ಚೆತ್ಕೊಂಡು ತಮಿಳ್ನಾಡಿನ ಜನ ಹೀಗೆ ಮಾಡ್ತಿರೋದು ಕಾನೂನು ಉಲ್ಲಂಘನೆ ಅಂತ ತಮಿಳ್ನಾಡು ಸರ್ಕಾರದ ಗಮನಕ್ಕೆ ತಂದು ಈ ವಿಷಯದಲ್ಲಿ ನಮಗೆ ನ್ಯಾಯ ಸಿಗೋವರೆಗೂ ನೆಮ್ಮದಿಯ ಉಸಿರು ಬಿಡಬಾರದು ಗುರು!

ನಂ ನಾಡ್ನ "ಗಂಧದ್ ಗುಡಿ" ಅನ್ನೋದು ಕಾಟಾಚಾರಕ್ಕಲ್ಲ ಗುರು!

"ನಾವಾಡುವ ನುಡಿಯೇ ಕನ್ನಡ ನುಡಿ...ನಾವಿರುವಾ ತಾಣವೆ ಗಂಧದಗುಡಿ" ಅಂತ ಪಿ.ಬಿ.ಶ್ರೀನಿವಾಸು ಡಾ ರಾಜ್ ಗೆ ಹಿನ್ನೆಲೆ ಸಂಗೀತ ಕೊಟ್ಟಿರೋದೇನೋ ನಮಗೆ ಗೊತ್ತೇ ಇದೆ. ಏನು ಹಾಡು ಗುರು ಅದು! ಅದೆಷ್ಟು ಸರಿ ಕೇಳ್ದ್ರೂ ಬೇಜಾರಾಗಲ್ಲ! ಅದೆಷ್ಟು ಸರಿ ನೋಡಿದರೂ ಇನ್ನೊಂದ್ಸಾರಿ ನೋಡ್ಮ ಅನ್ಸತ್ತಲ್ಲ ಗುರು! ಇನ್ನೊಂದ್ಸಲಿ ನೋಡ್ಮ:


ಹಾಗೇ....ನಿಜಕ್ಕೂ ಗಂಧದಗುಡಿ ಅಂದ್ರೆ ಕರ್ನಾಟಕಾನೇ ಅನ್ನೋದು ಗೊತ್ತಿತ್ತಾ? ಶ್ರೀಗಂಧ ಇನ್ನೆಲ್ಲೂ ಬೆಳ್ಯಲ್ಲ ಗುರು! ಇಲ್ಲಿ ನೋಡಿ:



ಪೂರ್ತಿ ಬರಹಕ್ಕಾಗಿ 1990ರಲ್ಲಿ ಹವಾಯಿಯಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಓದಲಾದ ಬರಹ ನೋಡಿ. ಇಲ್ಲಿ ಯಾವುದನ್ನ ತಮಿಳುನಾಡು ಅಂತ ಕರೀತಿದಾರೋ ಅದು ಇವತ್ತು ಭೌಗೋಳಿಕವಾಗಿ ತಮಿಳ್ನಾಡೇನೋ ನಿಜ. ಆದರೆ ಅಲ್ಲಿರೋರೆಲ್ಲ ಹೆಚ್ಚು-ಕಡಿಮೆ ಬಡಗರು ಮತ್ತು ಕನ್ನಡಕ್ಕೆ ಹತ್ತಿರವಿರೋ ಇನ್ನೂ ಕೆಲವು ಭಾಷೆಗಳನ್ನು ಆಡೋರೇ. ಬಡಗರು ಅಂದ್ರೆ ಕನ್ನಡಿಗರೇ. ಮೈಸೂರು-ಚಾಮರಾಜನಗರದ ಕನ್ನಡಕ್ಕೆ ಸಕ್ಕತ್ ಹತ್ರ ಬಡಗರ ನುಡಿ. ತಮಿಳ್ಗೂ ಬಡಗಕ್ಕೂ ಒಂಚೂರೂ ನಂಟಿಲ್ಲದಿದ್ದರೂ ಈಗ ಬಡಗನಾಡು ತಮಿಳ್ನಾಡಲ್ಲಿದೆ ಅನ್ನೋದು ಕಟುಸತ್ಯ. ಭಾಷಾವಾರು ರಾಜ್ಯಗಳ ವಿಂಗಡನೆಯಾಗುವಾಗ ಕರ್ನಾಟಕ ಬಡಗನಾಡನ್ನು ಕಳ್ಕೋತು, ಅಷ್ಟೆ. ಈಗ ನಾವು ಕಣ್ ಮುಚ್ಕೊಂಡಿದ್ರೆ ಬೆಳಗಾವಿ ಹೇಗೆ ಕೈಬಿಟ್ಟುಹೋದೀತೋ ಹಾಗೆ.
Related Posts with Thumbnails