Showing posts with label ಸಾಹಿತ್ಯ ಪರಿಶತ್ತು. Show all posts
Showing posts with label ಸಾಹಿತ್ಯ ಪರಿಶತ್ತು. Show all posts

ಕನ್ನಡ ನುಡಿಯರಿಮೆಯ ಇಣುಕುನೋಟ: ಶಂಕರಬಟ್ಟರ ಹೊಸಹೊತ್ತಗೆ ಮಾರುಕಟ್ಟೆಗೆ!


ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಪಡೆದಿರುವ ನಾಡಿನ ಹೆಮ್ಮೆಯ ಭಾಷಾವಿಜ್ಞಾನಿ ನಾಡೋಜ ಡಾ. ಡಿ ಎನ್ ಶಂಕರ ಬಟ್ಟರ ಹೊಸಹೊತ್ತಗೆಯೊಂದು ಬಿಡುಗಡೆಯಾಗಿದೆ. ಯುವಚಿಂತಕ ಶ್ರೀ ಕಿರಣ್ ಬಾಟ್ನಿಯವರು ಸಂಪಾದಿಸಿರುವ ಕನ್ನಡ ನುಡಿಯರಿಮೆಯ ಇಣುಕುನೋಟ ಹೆಸರಿನ ಈ ಹೊತ್ತಗೆ ಕನ್ನಡ ಸಮಾಜಕ್ಕೆ ದಾರಿತೋರುಕವಾದುದಾಗಿದೆ. ತಮ್ಮ ಎಡೆಬಿಡದ ಹತ್ತಾರು ವರ್ಷಗಳ ಅಧ್ಯಯನದ ಸಾರವನ್ನು ಎಳೆಯರಿಗೂ ಅರ್ಥವಾಗುವಂತೆ ತಿಳಿಯಾಗಿ ತಿಳಿಸಬಲ್ಲ ಸಾಮರ್ಥ್ಯವಿರುವ ಬಟ್ಟರ ಬರಹದ ಶೈಲಿ ಈ ಹೊತ್ತಗೆಯಲ್ಲೂ ಇದ್ದು ಓದುಗರಿಗೆ ಸರಳವಾಗಿ ಅರಿಮೆಯನ್ನು ತಲುಪಿಸುತ್ತದೆ. ಈ ಹೊತ್ತಗೆಯು ಮಡಿಕೇರಿಯಲ್ಲಿನ "೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಮೊದಲಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬನವಾಸಿ ಬಳಗ ಪ್ರಕಾಶನದ ಮಳಿಗೆಯಲ್ಲಿ ಮಾರಾಟಕ್ಕೆ ಸಿಗುತ್ತಿರುವ ಈ ಹೊತ್ತಗೆಯ ಮೊದಲಲ್ಲಿ ಸಂಪಾದಕರಾದ ಕಿರಣ ಬಾಟ್ನಿಯವರು ಹೀಗೆ ಬರೆದಿದ್ದಾರೆ.

ಇಣುಕುನೋಟದ ಮುನ್ನುಡಿಯಲ್ಲಿ...

ಬರಹದ ಕನ್ನಡವು ಕಾಲಕಾಲಕ್ಕೆ ಮಾರ್ಪಡುತ್ತಲೇ ಬಂದಿದೆ. ಬರಿಗೆಮಣೆ (ಅಕ್ಶರಮಾಲೆ), ಪದಬಳಕೆಹಾಗೂ ಒಡ್ಡವದಲ್ಲಾದ ಮಾರ್ಪಾಡುಗಳು ಒಂದು ಬಗೆಯವಾದರೆ, ಬರವಣಿಗೆಯ ಇಟ್ಟಳದಲ್ಲಾದ ಮಾರ್ಪಾಡುಗಳು ಇನ್ನೊಂದು ಬಗೆಯವು ಎನ್ನಬಹುದು. ಆದರೆ ಇವೆರಡು ಬಗೆಯ ಮಾರ್ಪಾಡುಗಳು ಒಂದನ್ನೊಂದು ಬೆಂಬಲಿಸಿಯೇ ನಡೆದಿವೆ ಎನ್ನಬಹುದು. ಎತ್ತುಗೆಗೆ, -ಕಾರ ಮತ್ತು ಱ-ಕಾರಗಳು ಚಲಾವಣೆಯಲ್ಲಿದ್ದಾಗ ಬರವಣಿಗೆಯನ್ನು ಹೆಚ್ಚು-ಕಡಿಮೆ ದಾರ್ಮಿಕ ವಿಶಯಗಳನ್ನು ಪದ್ಯರೂಪದಲ್ಲಿ ಹೇಳುವುದಕ್ಕಾಗಿ ಮಾತ್ರವೇ ಬಳಸಲಾಗುತ್ತಿತ್ತು; ಆದರೆ, ಕಾಲ ಕಳೆದಂತೆ ಈ ಬರಿಗೆಗಳು ಕಾಣೆಯಾದವಶ್ಟೇ ಅಲ್ಲ, ದರ್ಮಕ್ಕೆ ನಂಟಿರದ ವಿಶಯಗಳನ್ನು ಪದ್ಯವಲ್ಲದ ಒಡ್ಡವಗಳಲ್ಲಿ ಹೇಳುವಂತಹ ಬರವಣಿಗೆಗಳೂ ಕಾಣಿಸಿಕೊಂಡವು.


ಇವತ್ತಿನ ದಿನವಂತೂ ಹೊಚ್ಚಹೊಸದಾದ ಅರಿಮೆಗಳನ್ನು ಆಯಾ ಅರಿಮೆಯ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಗೆ ಇಳಿಸಬೇಕಾದ ಪರಿಸ್ತಿತಿಯಿದೆ. ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.


ಇದನ್ನೆಲ್ಲ ಅರಿತು, ಈ ಬೆಳವಣಿಗೆಗಳು ಆಗದಿದ್ದರೆ ಕನ್ನಡಿಗರು ಪಡಲಿರುವ ಕಶ್ಟವನ್ನೆಲ್ಲ ಮನಗಂಡು, ನಲ್ಬರಹವನ್ನು ಬಿಟ್ಟು ಬೇರೆಲ್ಲೂ ಕನ್ನಡದ ಬಳಕೆ ಆಗುತ್ತಿಲ್ಲವೆಂದು ಕಣ್ಣೀರು ಸುರಿಸುವುದೊಂದೇ ನಮ್ಮ ಪಾಡೆಂದು ನಂಬಲು ತಯಾರಿಲ್ಲದ ಕನ್ನಡದ ಯುವಕರ ಪಡೆಯೊಂದು ಮೆಲ್ಲನೆ ಎದ್ದುನಿಲ್ಲುತ್ತಿದೆ, ಮತ್ತು ಅದರಿಂದ ಕನ್ನಡದಲ್ಲಿ ಹಿಂದೆಂದೂ ಕಂಡಿರದ ರೀತಿಯ ಬರವಣಿಗೆಗಳು ಇಂದು ಮೂಡುತ್ತಿವೆ.ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗಎಲ್ಲರ ಕನ್ನಡವೊಂದು ರೂಪುಗೊಳ್ಳುತ್ತಿದೆ. ಇದರಲ್ಲಿ ಕನ್ನಡಿಗರ ಉಲಿಕೆಯಲ್ಲಿಲ್ಲದ ಮಹಾಪ್ರಾಣಗಳಿಲ್ಲ, ಋಕಾರವಿಲ್ಲ, ವಿಸರ್ಗವಿಲ್ಲ; -ಕಾರ, -ಕಾರಗಳಿಲ್ಲ. ಹಾಗೆಯೇ, ‘ಎಲ್ಲರ ಕನ್ನಡವೆಂದರೆ ನಿಜಕ್ಕೂ ಎಲ್ಲರದಾಗಿದ್ದು, ಅತಿ ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸುವ ಬದಲು ಆದಶ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ.

ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಕೆಲವು ಜಾತಿಗಳ ಬೆರಳೆಣಿಕೆಯ ಮಂದಿಯದಲ್ಲ, ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಕನ್ನಡ ಸಮಾಜದ ಬಗ್ಗೆ ಕಾಳಜಿಯಿರುವ, ಕನ್ನಡಿಗರ ಏಳಿಗೆಗೆ ದಾರಿ ಹುಡುಕುತ್ತಿರುವ ಮಂದಿಗೆ ಈ ಹೊತ್ತಗೆ ದಾರಿದೀಪವಾದರೆ ನುಡಿಯರಿಮೆಯನ್ನು ಸಾಮಾನ್ಯರೂ ಅರಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಿಮ್ಮಲ್ಲಿರಲೇಬೇಕಾದ ಹೊತ್ತಗೆ.

ಸಾಹಿತ್ಯ ಸಮ್ಮೇಳನದ ನಿರ್ಣಯಗಳೂ ಮತ್ತು ತೊಡಕಿನ ಬೇರುಗಳೂ...

(ಚಿತ್ರ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಫ಼ೆಬ್ರವರಿ ೯,೧೦ ಮತ್ತು ೧೧ರಂದು ಸೊಗಸಾಗಿ, ಅಚ್ಚುಕಟ್ಟಾಗಿ ಬಿಜಾಪುರದಲ್ಲಿ ನಡೆದ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಗಿದಿದೆ. ಗಡಿಜಿಲ್ಲೆಯಾದ ಬಿಜಾಪುರದಲ್ಲಿ ನಡೆದ ಮೂರುದಿನಗಳ ಈ ನುಡಿಹಬ್ಬದಲ್ಲಿ ನಡೆದ ಕಾರ್ಯಕ್ರಮಗಳು ಅನೇಕ. ದೊಡ್ಡದಾದ ಸೈನಿಕ ಶಾಲೆಯ ಆವರಣದಲ್ಲಿ ಜಾಗಕ್ಕೆ ಕೊರತೆಯಿರಲಿಲ್ಲ. ಎಲ್ಲೆಲ್ಲೂ ಜನರು, ಹಾರಾಡುತ್ತಿದ್ದ ಕನ್ನಡ ಬಾವುಟಗಳು ನೂರಾರು ಅಂಗಡಿಗಳು, ತುಂಬಿ ತುಳುಕುತ್ತಿದ್ದ ಸಭಾಂಗಣ, ವಿಶಾಲವಾದ ಮಂಟಪ, ನಡೆದ ಗೋಷ್ಟಿಗಳು.. ಎಲ್ಲವೂ ರಸವತ್ತಾಗಿದ್ದವು. 

ಮಹತ್ವದ ನಿರ್ಣಯಗಳು

ಕೊನೆಯ ದಿವಸ ಸಾಹಿತ್ಯ ಸಮ್ಮೇಳನದ ವತಿಯಿಂದ ಒಂಬತ್ತು ಮಹತ್ವದ ನಿರ್ಣಯಗಳನ್ನು ಮಂಡಿಸಲಾಯಿತು. ಬಿಜಾಪುರಕ್ಕೆ ಸಂಬಂಧಿಸಿದಂತೆ ಮೂರು, ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದಂತೆ ಎರಡು, ಕಲಿಕೆಗೆ ಸಂಬಂಧಿಸಿದಂತೆ ಒಂದು ನಿರ್ಣಯವನ್ನು ಮಂಡಿಸಲಾಯಿತು. ಕಾವೇರಿ ನದಿ ಹಂಚಿಕೆ ವಿಷಯದಲ್ಲಿ ಸುಪ್ರಿಂಕೋರ್ಟು ಮಾನವೀಯ ನೆಲೆಯಲ್ಲಿ ಕರ್ನಾಟಕದ ಅಹವಾಲನ್ನು ಆಲಿಸಬೇಕು ಎನ್ನುವ ಒಂದು ನಿರ್ಣಯ ಮಂಡಿಸಲಾಯ್ತು. ಈ ನಿರ್ಣಯಗಳಲ್ಲಿ ನಮ್ಮ ಬದುಕಿಗೆ ಹತ್ತಿರವಾಗಿರುವ, ನಮ್ಮನ್ನೆಲ್ಲಾ ನಿಧಾನವಾಗೇ ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿರುವ ಅಪಾಯದ ವಿರುದ್ಧ ಎತ್ತಿದ ದನಿಯೂ ಒಂದು. ಎಪ್ಪತ್ತೊಂಬತ್ತು ಸಮ್ಮೇಳನಗಳಲ್ಲಿ ಇದೇ ಮೊದಲಬಾರಿಗೆ ಭಾರತದ ಸಂವಿಧಾನವೇ ಕನ್ನಡಿಗರ ಬದುಕಿಗೆ ಒಡ್ಡಿರುವ ಅಪಾಯದ ವಿರುದ್ಧ ನಿರ್ಣಯ ಮಂಡಿಸಿದ್ದು ವಿಶೇಷ! ಭಾರತದ ಹುಳುಕಿನ ಭಾಷಾನೀತಿಗೆ ಕಾರಣವಾಗಿರುವ ಸಂವಿಧಾನದ ೩೪೩ನೇ ಪರಿಚ್ಛೇದದಿಂದ ೩೫೧ನೇ ಪರಿಚ್ಛೇದದವರೆಗಿನ "ದೇಶದ ಭಾಷಾನೀತಿಗೆ ಮಾರ್ಗಸೂಚಿಯಾಗಿರುವ" ಕಲಮ್ಮುಗಳಿಗೆ ತಿದ್ದುಪಡಿ ಮಾಡಿ, ಕನ್ನಡವೂ ಸೇರಿದಂತೆ ಸಂವಿಧಾನದ ಎಂಟನೇ ಅನುಬಂಧದಲ್ಲಿ ಸೂಚಿಸಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳಿಗೆ "ದೇಶದ ಆಡಳಿತ ಭಾಷೆ"ಯ ಸ್ಥಾನಮಾನ ನೀಡಬೇಕೆನ್ನುವುದೇ ಆ ನಿರ್ಣಯವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಶತ್ತಿನ ಜೊತೆಯಲ್ಲಿ ಈ ವಿಷಯವಾಗಿ ಕನ್ನಡನಾಡಿನ ಜನರು, ನಾಡಿನ ರಾಜಕೀಯ ಪಕ್ಷಗಳೂ ದನಿಗೂಡಿಸಬೇಕಾಗಿದೆ. ಇಲ್ಲದಿದ್ದರೆ ಮುಂದೊಮ್ಮೆ ಹಿಂದೀ ಸಾಮ್ರಾಜ್ಯದಲ್ಲಿ ನಾವು ಗುಲಾಮರಾಗಿರುವ ದಿನಗಳು ಕಟ್ಟಿಟ್ಟ ಬುತ್ತಿ!!

ಡಬ್ಬಿಂಗ್ ಬೇಡೆನ್ನುವ ನಿರ್ಣಯ

ಮತ್ತೊಂದು ಮಹತ್ವದ ನಿರ್ಣಯವೆಂದರೆ ಕನ್ನಡಕ್ಕೆ ಡಬ್ಬಿಂಗ್ ಬರಬಾರದಂತೆ ತಡೆಯಬೇಕು ಎನ್ನುವುದು. ಈ ನಿರ್ಣಯ ಇಡಿಯ ಕನ್ನಡ ಸಮಾಜವನ್ನು ಗಣನೆಗೆ ತೆಗೆದುಕೊಳ್ಳದೆ ಚಿತ್ರೋದ್ಯಮಕ್ಕೆ ಸೇರಿದ ಒಂದು ವರ್ಗವನ್ನು ಮಾತ್ರಾ ಗಮನದಲ್ಲಿಟ್ಟುಕೊಂಡು  ತೆಗೆದುಕೊಂಡಂತಿದೆ. ಆರುಕೋಟಿ ಕನ್ನಡಿಗರ ಬದುಕಿನ ಪುಟಗಳಲ್ಲಿ "ಕನ್ನಡದಲ್ಲಿ ಮನರಂಜನೆ" ಎನ್ನುವ ಪುಟ ಹರಿದುಹೋಗುತ್ತಿರುವುದನ್ನು ಅದೇಕೋ ಕನ್ನಡ ಸಾಹಿತ್ಯ ಪರಿಶತ್ತು ಗಮನಿಸಿದಂತಿಲ್ಲ!

ಸಮ್ಮೇಳನ ನಡೆದ ಬಿಜಾಪುರದಲ್ಲಿ ಒಟ್ಟು  ಏಳು ಚಿತ್ರಮಂದಿರಗಳಿವೆ. ಬರುವ ಫ಼ೆಬ್ರವರಿ ೧೪ರಂದು ಆ ಊರಿನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳು ಐದು. ವೀರಪ್ಪನ್ ಅಟ್ಟಹಾಸ ಎನ್ನುವ ಕನ್ನಡ ಚಿತ್ರದ ಜೊತೆಯಲ್ಲಿ ಒಂದು ಮರಾಟಿ, ಒಂದು ಹಿಂದೀ ಮತ್ತು ಎರಡು ತೆಲುಗು ಚಿತ್ರಗಳು ತೆರೆಕಾಣುತ್ತಿವೆ ಎನ್ನುವುದನ್ನು ನೋಡಿದರೆ ಕನ್ನಡಿಗರು ಕನ್ನಡದ ಮನರಂಜನೆಯಿಂದ ದೂರಸಾಗುತ್ತಿರುವ ಸುಳಿವು ಸಿಗುತ್ತದೆ. ಇದು ಒಂದು ಬಿಜಾಪುರದ ಕಥೆಯಲ್ಲ! ಇಕೊಳ್ಳಿ ನಮ್ಮ ಮಂಡ್ಯದಲ್ಲಿ ನೋಡಿ. ಇಲ್ಲಿರುವುದೂ ಏಳು ಚಿತ್ರಮಂದಿರಗಳೇ! ಈ ಏಳರಲ್ಲಿ ಕನ್ನಡದ ಸಿನಿಮಾಗಳು ಇರೋದು ಎರಡೇ! ಎರಡು ಕಡೆ ಸಂಗೊಳ್ಳಿ ರಾಯಣ್ಣ, ಒಂದರಲ್ಲಿ ಚಾರ್‌ಮಿನಾರ್ ಇದೆ. ಇನ್ನುಳಿದಂತೆ ತೆಲುಗಿನ ಮಿರ್ಚಿ, ತೆಲುಗಿನ ವಿಶ್ವರೂಪಂ, ಹಿಂದೀಯ ವಿಶ್ವರೂಪಂ, ಹಿಂದೀಯ ಎಬಿಸಿಡಿ ಚಿತ್ರಗಳಿವೆ. ಇದು ಬರೀ ಎರಡು ಊರುಗಳ ಕಥೆಯಲ್ಲ! ಇಡೀ ಕರ್ನಾಟಕದ ಕಥೆ! ತಾಯ್ನುಡಿಯಲ್ಲಿ ಮನರಂಜನೆಯನ್ನು ಪಡೆದುಕೊಳ್ಳಲಾಗದ ಕನ್ನಡಿಗರ ವ್ಯಥೆ!! ಇದನ್ನು ಗಮನಿಸದೇ ಸಾಹಿತ್ಯ ಸಮ್ಮೇಳನ ಕಳೆದ ಸಲದಿಂದ ಡಬ್ಬಿಂಗ್ ವಿರೋಧಿ ನಿರ್ಣಯವನ್ನು ಮಂಡಿಸುತ್ತಾ ಬಂದಿದೆ!

ಸಾಹಿತ್ಯ ಸಮ್ಮೇಳನದ ನಿರ್ಣಯದ ಮಹತ್ವ!

ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳು ಮಹತ್ವದ್ದಾಗಿವೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ! ಈ ನಿರ್ಣಯಗಳನ್ನು ಇಡೀ ಕನ್ನಡ ಸಮಾಜ, ಕನ್ನಡದ ಜನತೆ ತೆಗೆದುಕೊಂಡ ನಿರ್ಣಯವೆಂದು ಬಿಂಬಿಸುವುದು ಸರಿಯೇ ಎಂದು ಯೋಚಿಸಬೇಕಾಗಿದೆ. ನಾಡಿನ ಸಾಹಿತ್ಯ ವಲಯವು, ನಮ್ಮ ನಾಡಿನ ಜನರಿಗೆ ಇದು ಒಳಿತು ಎಂದು ತನಗೆ ಅನ್ನಿಸಿದ್ದನ್ನು ತನ್ನ ವಾರ್ಷಿಕ ಸಮ್ಮೇಳನಗಳಲ್ಲಿ ನಿರ್ಣಯಗಳ ಮೂಲಕ ವ್ಯಕ್ತಪಡಿಸುತ್ತದೆ. ಇದು ವಾಸ್ತವ. ಈ ನಿರ್ಣಯಗಳು ಜನಸಾಮಾನ್ಯರ ಒಪ್ಪಿಗೆ ಗಳಿಸಿ, ಅವರಿಂದ ಸ್ವೀಕರಿಸುವುದೋ ತಿರಸ್ಕರಿಸುವುದೋ ಆಗಬೇಕಾಗುತ್ತದೆ ಅಷ್ಟೇ! ಯಾವುದನ್ನೇ ಆಗಲಿ, ಜನರಿಗೆ ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅವಕಾಶವನ್ನೇ ಇಲ್ಲವಾಗಿಸಿರುವುದು ‘ಡಬ್ಬಿಂಗ್ ನಿಶೇಧ’ವೆನ್ನುವ ಅಸಾಂವಿಧಾನಿಕ ಆಚರಣೆ. ಹಾಗಾಗಿ ಪರಿಶತ್ತಿನ ಈ ನಿರ್ಣಯ ಜನವಿರೋಧಿ ಎನ್ನದೇ ವಿಧಿಯಿಲ್ಲ!

ಸಮಸ್ಯೆಗೆ ಮೇಲುಮೇಲಿನ ಪರಿಹಾರಗಳು!

ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳತ್ತ ಒಮ್ಮೆ ನೋಡಿದರೆ ನಮ್ಮ ಸಾಹಿತ್ಯ ಪರಿಶತ್ತು ಇನ್ನಷ್ಟು ಆಳಕ್ಕೆ ಇಳಿದು, ಸಮಸ್ಯೆಗಳ ಬೇರನ್ನು ಶೋಧಿಸಬೇಕಾಗಿದ್ದುದರ ಅಗತ್ಯ ಕಾಣುತ್ತದೆ. ಇಲ್ಲಿ ಹಿಂದೀ ಹೇರಿಕೆಯ ವಿರುದ್ಧವಾಗಿ ಕೈಗೊಂಡ ನಿರ್ಣಯವೊಂದೇ ಹೆಚ್ಚೂ ಕಡಿಮೆ ಅಂತಹ ಬುಡಕ್ಕೆ ಕೈಹಾಕಿರುವಂತಹದ್ದಾಗಿದೆ.

ಕಾವೇರಿ ನೀರುಹಂಚಿಕೆಯಲ್ಲಿ ನ್ಯಾಯಾಲಯ ಮಾನವೀಯತೆಯಿಂದ ನೋಡುವುದಿಲ್ಲ! ಅದು ಕಾನೂನಾತ್ಮಕವಾಗಿ ನೋಡುತ್ತದೆ. ಭಾರತದ ಸಂವಿಧಾನದಲ್ಲಿ ಅಂತರರಾಜ್ಯ ನದಿನಂಚಿಕೆಗೆ ರಾಷ್ಟ್ರೀಯ ಜಲನೀತಿಯೇ ಇಲ್ಲದಿರುವಾಗ ನ್ಯಾಯಾಲಯ ಏನು ತೀರ್ಪು ಕೊಡುತ್ತದೆ? ನ್ಯಾಯಾಧಿಕರಣದಲ್ಲಿ ಆಗಿರುವ ಅನ್ಯಾಯಗಳನ್ನು ಸುಪ್ರಿಂಕೋರ್ಟು ಅದು ಹೇಗೆ ಸರಿಪಡಿಸುತ್ತದೆ? ಇದು ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡಂತೆ ಮಾತ್ರವಲ್ಲವೇ? ಕಾವೇರಿ ಐತೀರ್ಪನ್ನು ಈ ಸಮ್ಮೇಳನ ಒಪ್ಪುವುದಿಲ್ಲಾ ಎಂದಿದ್ದರೂ ಸ್ವಲ್ಪ ಅರ್ಥಪೂರ್ಣ ಪ್ರತಿಭಟನೆಯೆನ್ನಿಸುತ್ತಿತ್ತು!!

ಇನ್ನು ಸರೋಜಿನಿ ಮಹಿಷಿ ವರದಿ, ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಎನ್ನುವ ನಿರ್ಣಯಗಳು. ಇವು ಇಂದಿನ ಸಂವಿಧಾನದ ಪ್ರಕಾರ ಎಂದಿಗೂ ಜಾರಿಯಾಗಲಾರದ ನಿರ್ಣಯಗಳು ಎನ್ನುವ ನಿಷ್ಠುರ ಸತ್ಯವನ್ನು ಹೇಳಬೇಕಾಗಿದೆ. ಹೀಗೆ ನಮ್ಮ ನಾಡಿನಲ್ಲಿ ಕೆಲಸ ನಮ್ಮ ಹಕ್ಕು ಎನ್ನುವುದಕ್ಕೂ ಬೇಕಾದದ್ದು ಸಂವಿಧಾನಕ್ಕೆ ತಿದ್ದುಪಡಿಯೇ! ಯಾರು ಎಲ್ಲಿಗೆ ಬೇಕಾದರೂ ಹೋಗಿ ಬದುಕಬಹುದೆನ್ನುವ, ಯಾವುದೇ ಕಟ್ಟುಪಾಡಿರದ ವಲಸೆಗೆ ಉತ್ತೇಜನ ನೀಡುವಂತಹ ಸಾಲುಗಳು ಸಂವಿಧಾನದಲ್ಲಿ ಇರುವಾಗ ಈ ನಿರ್ಣಯಗಳ ಜಾರಿ ಹೇಗೆ? ನ್ಯಾಯಾಲಯಗಳು ಇಂತಹ ವರದಿ ಜಾರಿ ಮಾಡುವುದನ್ನು ನೇರವಾಗಿ ಅಸಿಂಧುಗೊಳಿಸಿಬಿಡುತ್ತವೆ.

ನಿರ್ಣಯದಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳ ಹಾಜರಾತಿ ಕೊರತೆಯಾಗದಂತಹ ವಾತಾವರಣ ನಿರ್ಮಿಸಬೇಕು ಎಂದುಬಿಟ್ಟರೆ ಸಾಕೇ? ಏನದು ಅಂತಹ ವಾತಾವರಣ? ಕನ್ನಡದಲ್ಲಿ ಕಲಿತೂ ಮೃಷ್ಟಾನ್ನ ಗಳಿಸಿಕೊಳ್ಳಬಹುದು ಮತ್ತು ಜಗತ್ತಿನ ಯಾವಮೂಲೆಯಲ್ಲಾದರೂ ಏನನ್ನಾದರೂ ಸಾಧಿಸಲು ಸಾಧ್ಯ ಎನ್ನುವ ನಂಬಿಕೆ ಹುಟ್ಟುವಂತಹ ವಾತಾವರಣ ಕಟ್ಟದೆ, ಕನ್ನಡದಲ್ಲಿಯೇ ಎಲ್ಲಾ ಉನ್ನತ ಕಲಿಕೆಗಳನ್ನು ತರದೆ ಇಂತಹ ವಾತಾವರಣ ಹುಟ್ಟುವುದಾದರೂ ಹೇಗೆ? ಈ ಬಗ್ಗೆ ಮಾತಾಡದೆ ಬರೀ ವಾತಾವರಣ ನಿರ್ಮಿಸಿ ಎಂದುಬಿಟ್ಟರೆ ಸಾಕೇ?

ಒಟ್ಟಾರೆ ನಾವುಗಳು, ನಮ್ಮ ಸಾಹಿತಿಗಳು, ನಮ್ಮ ಪರಿಶತ್ತುಗಳು ಇನ್ನಷ್ಟು ಆಳವಾಗಿ ಯೋಚಿಸುವುದನ್ನೂ... ಸಮಸ್ಯೆಯ ಆಳಕ್ಕಿಳಿದು ಪರಿಹಾರ ಹುಡುಕುವುದನ್ನೂ ಕಲಿಯಬೇಕಾಗಿದೆ. ಏನಂತೀ ಗುರೂ?!
Related Posts with Thumbnails