Showing posts with label ಡಬ್ಬಿಂಗ್. Show all posts
Showing posts with label ಡಬ್ಬಿಂಗ್. Show all posts

ವಿರೋಧವೇನೋ ಸಂವಿಧಾನ ಬದ್ಧ! ಆದರೆ "ನಿಶೇಧ" ಅಲ್ವಲ್ಲಾ ಗುರುಗಳೇ!

(ಚಿತ್ರಕೃಪೆ: ಪ್ರಜಾವಾಣಿ ದಿನಪತ್ರಿಕೆ)
ಕಳೆದ ವಾರದಲ್ಲೊಂದು ದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಾಡಿನ ಹಿರಿಯ ಸಾಹಿತಿ ಚಿಂತಕರೆಂದು ಹೆಸರಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಬರೆದ ಬರಹವೊಂದು ಪ್ರಕಟವಾಯಿತು. “ಡಬ್ಬಿಂಗ್ ವಿರೋಧ, ಸಂವಿಧಾನ ಬದ್ಧ” ಎಂಬ ತಲೆಬರಹದ ಬರಹದಲ್ಲಿ ಶ್ರೀಯುತರು ಡಬ್ಬಿಂಗ್ ವಿರೋಧವಾಗಿ ಮಾತನಾಡುತ್ತಾ ಡಬ್ಬಿಂಗ್ ಮೇಲಿನ ನಿಶೇಧವನ್ನು ಸಮರ್ಥಿಸುತ್ತಿರುವುದು ಕಂಡಿತು. ಇವರ ಮಾತುಗಳನ್ನು ಒಂದೊಂದಾಗಿ ಬಿಡಿಸಿ ನೋಡಿದರೆ ಇದರ ಪೊಳ್ಳುತನ ತಿಳಿಯುವುದಷ್ಟೇ ಅಲ್ಲದೆ ಡಬ್ಬಿಂಗ್ ವಿರೋಧದ ತಮ್ಮ ನಿಲುವಿನ ಬೆಂಬಲಕ್ಕಾಗಿ ಹೇಗೆ ಸಂವಿಧಾನವನ್ನು ಗುರಾಣಿಯಂತೆ ಬಳಸಲು ತಪ್ಪು ತಪ್ಪಾಗಿ ಬಳಸಿದ್ದಾರೆ ಎಂಬುದು  ತಿಳಿಯುತ್ತದೆ.

ವಿರೋಧದ ಕಾರಣಗಳು
೧. ಡಬ್ಬಿಂಗ್ ಚಿತ್ರಗಳು ಸೃಜನಶೀಲತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಇದಕ್ಕೆ ನನ್ನ ವಿರೋಧವಿದೆ ಎಂದಿರುವ ಶ್ರೀಯುತರ ಅಭಿಪ್ರಾಯವನ್ನು ಗೌರವಿಸುತ್ತಾ ಅವರಿಗೇ ಆಗಲೀ ಮತ್ತೊಬ್ಬರಿಗೇ ಆಗಲಿ ಡಬ್ಬಿಂಗ್ ಚಿತ್ರ ವಿರೋಧಿಸುವ ಸ್ವತಂತ್ರ ಇದ್ದೇ ಇದೆ ಎನ್ನಬೇಕಾಗಿದೆ. ಏಕೆಂದರೆ ಡಬ್ಬಿಂಗ್ ಬೇಕು ಎನ್ನುವ ಸ್ವಾತಂತ್ರ್ಯವನ್ನು ಈ ನಾಡಿನಲ್ಲಿ ಹತ್ತಿಕ್ಕಲಾಗುತ್ತಿದೆಯೇ ಹೊರತು ಬೇಡ ಎನ್ನುವ ಸ್ವಾತಂತ್ರ್ಯವನ್ನಲ್ಲಾ! ಶ್ರೀಯುತರು ಮುಂದುವರೆಯುತ್ತಾ ತಾವೇ ತಾವಾಗಿ ಎದುರಾಳಿಗಳ ಪ್ರಶ್ನೆಗಳನ್ನೆತ್ತಿ ಉತ್ತರಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಾಸ್ತವವಾಗಿ ಕನ್ನಡ ಚಿತ್ರಗಳು ಸೃಜನಶೀಲವಾಗಿಲ್ಲದಿರುವುದಕ್ಕೆ ಡಬ್ಬಿಂಗ್ ಚಿತ್ರಗಳು ಬರಬೇಕೆನ್ನುವ ವಾದವೇ ಇಲ್ಲದಿರುವಾಗ ಹಾಗೊಂದು ಪ್ರಶ್ನೆ ಹುಡುಕಿ ಅದಕ್ಕೊಂದು ಉತ್ತರ ನೀಡಿರುವುದು ಇವರು ವಿಷಯ ವಿಶ್ಲೇಷಣೆಗಿಳಿಯದೆ ಸುಮ್ಮನೇ ಅನಿಸಿಕೆಯೊಂದನ್ನು ರೂಪಿಸಿಕೊಂಡು ಅದಕ್ಕೆ ಸಮರ್ಥನೆ ಹುಡುಕುತ್ತಿರುವಂತೆ ಅನ್ನಿಸುತ್ತದೆ. ಕನ್ನಡ ಚಿತ್ರಗಳು ಅದ್ಭುತವಾಗಿದ್ದರೂ, ಸೃಜನಶೀಲತೆ ಅಲ್ಲಿ ಸಾಕಾರವಾಗುತ್ತಿದ್ದರೂ, ಜಗತ್ತಿನಲ್ಲೇ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮ ನಮ್ಮ ಮುಂದೆ ತಂದಿಡುತ್ತಿದ್ದರೂ “ಡಬ್ಬಿಂಗ್ ಚಿತ್ರಗಳನ್ನು ನೋಡಬೇಕು” ಎಂದು ಕನ್ನಡದ ಪ್ರೇಕ್ಷಕ ಬಯಸುವುದು ಅಪರಾಧವೇನೂ ಅಲ್ಲಾ! ಆಗಲೂ ತನ್ನ ತಾಯ್ನುಡಿಗೆ ಡಬ್ ಆದ ಕಾರ್ಯಕ್ರಮಗಳನ್ನು ನೋಡುವ ಆಯ್ಕೆ ಕನ್ನಡಿಗನಿಗೆ ಸಿಗಲೇಬೇಕಲ್ಲವೇ? ಇದೇ ರೀತಿ ‘ಜಾಗತೀಕರಣದ ಯುಗದಲ್ಲಿ ಕನ್ನಡ ಚಿತ್ರಗಳಿಗೆ ಎದುರಾಗಿ ಡಬ್ಬಿಂಗ್ ಚಿತ್ರಗಳನ್ನು ಇಡುವ ಬದಲಿಗೆ ಕೆಟ್ಟ ಕನ್ನಡ ಚಿತ್ರಗಳಿಗೆ, ಒಳ್ಳೆಯ ಕನ್ನಡ ಚಿತ್ರಗಳನ್ನು ಎದುರಾಗಿಸುವುದು ಒಳಿತೆಂ’ದು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಕೇಂದ್ರಿತ ಮನೋಭಾವ ಸೃಜನಶೀಲತೆಗೆ ಮಾರಕ ಎಂದೂ ಹೇಳಿ ಇಡೀ ವಿಷಯವನ್ನು ಗೊಂದಲಮಯವಾಗಿಸಿದ್ದಾರೆ. ಕಲೆ, ಸೃಜನಶೀಲತೆಗಳೇ ಸರಕಾಗಿರುವ ಚಿತ್ರೋದ್ಯಮ ಇವರ ಮಾತನ್ನು ಒಪ್ಪಿದರೆ, ನಾಳೆಯಿಂದ ಯಾವ ಸಿನಿಮಾಕ್ಕೂ ಟಿಕೆಟ್ ಇಟ್ಟು ತೋರಿಸುವ ಹಾಗಿರುವುದಿಲ್ಲಾ! ಯಾಕೆಂದರೆ ಸೃಜನಶೀಲ ಚಿತ್ರಗಳು ತೆರೆಕಾಣಲೂ ಕೂಡಾ ವ್ಯಾಪಾರ ಮಾಡಬೇಕು. ಇವರಿಗೆ ಅದೇಕೆ ವ್ಯಾಪಾರ, ಮಾರುಕಟ್ಟೆ, ಗ್ರಾಹಕ ಎಂದೊಡನೆ “ಅದು ಕೆಟ್ಟದ್ದು” ಎಂದೆನ್ನಿಸುತ್ತದೆ ಎಂಬುದಕ್ಕೆ ಉತ್ತರವಿಲ್ಲಾ!

೨. ಡಬ್ಬಿಂಗ್ ಚಿತ್ರಗಳು ಬರುವುದರಿಂದ ಸ್ವಂತ ಚಿತ್ರನಿರ್ಮಾಣ ನಿಂತು ಕಾರ್ಮಿಕರ ಬದುಕುವ ಹಕ್ಕು ಕಿತ್ತುಕೊಂಡಂತಾಗುತ್ತದೆ ಎನ್ನುವ ಮಾತುಗಳನ್ನು ಆಡಿರುವ ಶ್ರೀಯುತರು, ವಾಸ್ತವವಾಗಿ ನಿರೀಕ್ಷಿಸುತ್ತಿರುವುದಾದರೋ ಏನನ್ನು? ಚಿತ್ರರಂಗದಲ್ಲಿ ಹಣ ಹೂಡುವವರು ತಮಗೆ ಯಾವುದು ಲಾಭದಾಯಕವೋ  ಅದನ್ನು ತಾನೇ ಮಾಡುತ್ತಾರೆ. ನಿಮಗೆ ಲಾಭದ ದಾರಿ ಮುಚ್ಚುತ್ತೇವೆ, ನಷ್ಟವಾದರೂ ಇದೇ ದಾರಿಯಲ್ಲಿ ಸಾಗಿ ಸಾವಿರಾರು ಕಾರ್ಮಿಕರನ್ನು ಉಳಿಸಿ ಎನ್ನುವ ನಿಲುವು ಸರಿಯಾದುದೇ ಎಂದು ಪ್ರಾಜ್ಞರು ಯೋಚಿಸಬೇಕು. ನಿರ್ಮಾಪಕನಿಗೆ ತನ್ನ ಆಯ್ಕೆಯ ಚಿತ್ರ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗದೇ? ಡಬ್ಬಿಂಗ್ ಚಿತ್ರಗಳು ಮತ್ತು ತುಟಿಚಲನೆ, ಗುಣಮಟ್ಟದ ಕೊರತೆ ಮುಂತಾಗಿ ಹೇಳುವ ಬರಗೂರರು ಅಂತಹ ಚಿತ್ರಗಳನ್ನು ಒಪ್ಪುವ, ತಿರಸ್ಕರಿಸುವ ಅಥವಾ ಮೆಚ್ಚುವ ಅವಕಾಶವನ್ನೇ ನಿರಾಕರಿಸುವುದನ್ನು ಹೇಗೆ ತಾನೇ ಸಮರ್ಥಿಸಿಕೊಳ್ಳಬಲ್ಲರು?

೩. ಇನ್ನು ಕನ್ನಡದ ಬೆಳವಣಿಗೆ ಮತ್ತು ಡಬ್ಬಿಂಗ್ ಎನ್ನುವ ವಿಷಯವಾಗಿ ಮಾತಾಡುತ್ತಾ, ಡಬ್ಬಿಂಗಿನಿಂದ ಕನ್ನಡ ಬೆಳವಣಿಗೆ ಆಗದು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಯಾವ ಆಧಾರವನ್ನೂ ನೀಡಿಲ್ಲಾ. ವಾಸ್ತವವಾಗಿ ಕನ್ನಡದ ಮಕ್ಕಳು/ ಜನರು ತಮ್ಮ ಇಷ್ಟದ ಪರಭಾಷೆಯ ಕಾರ್ಯಕ್ರಮಗಳನ್ನು/ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡುವ ಅವಕಾಶ ದೊರೆಯುವುದಕ್ಕಿಂತಾ ದೊಡ್ಡದು ಬೇರೇನು ಬೇಕು? ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸದೆ ಕನ್ನಡಕ್ಕೆ ಅಂಟಿಕೊಳ್ಳುವುದಕ್ಕಿಂತಾ ದೊಡ್ಡ ಇನ್ನಾವ ಕನ್ನಡದ ಬೆಳವಣಿಗೆ ಬೇಕಾಗಿದೆ? ಡಬ್ಬಿಂಗ್ ಚಿತ್ರಗಳಲ್ಲಿ ನಾನಾ ಬಗೆಯ ಕನ್ನಡಕ್ಕೆ ಅವಕಾಶವಿಲ್ಲ ಎನ್ನುವುದರ ಅರ್ಥವಾದರೂ ಏನು? ಯಾಕೆ ಅದು ಸಾಧ್ಯವಾಗುವುದಿಲ್ಲಾ? ಯಾಕೆ ತುಟಿಚಲನೆಗಾಗೇ ಡೈಲಾಗ್ ಬರೀಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇಲ್ಲಾ! ಪ್ರಪಂಚದಲ್ಲಿ ಡಬ್ ಮಾಡುವ ಎಲ್ಲೆಡೆಯೂ ಇರದ ಇಂತಹ ನಿಯಮವನ್ನು ತಡೆಗಾಗಿಯೇ ಬಳಸುತ್ತಿರುವಂತೆ ತೋರುತ್ತದೆ. ವಾಸ್ತವವಾಗಿ ಹಾಗೆ ತುಟಿಚಲನೆಗೆ ಸಂಪೂರ್ಣವಾಗಿ ಹೊಂದಿಸಿ ಡಬ್ ಮಾಡುವುದು ಎಂದಿಗೂ ಎಲ್ಲಿಯೂ ಯಾರಿಗೂ ಸಾಧ್ಯವೇ ಆಗದ ಕ್ರಿಯೆ! ಯಾರಾದರೂ ಇಂಗ್ಲೀಶ್ ಸಿನಿಮಾಗೆ ಕನ್ನಡದ ಡೈಲಾಗ್ ಕೂಡಿಸಿ ಬರೆಯಲು ಸಾಧ್ಯವೇ? ಫ್ರೆಂಚ್ ಸಿನಿಮಾಗೆ  ಜಪಾನೀಸ್ ಭಾಷೆ ಕೂಡಿಸಲು ಸಾಧ್ಯವೇ? ಡಬ್ ಸಿನಿಮಾ ಎಂದರೇ ತುಟಿಚಲನೆ ಹೊಂದಿಕೆಯಾಗಿರುವುದಿಲ್ಲ ಎನ್ನುವುದನ್ನು ನೋಡುಗ ತಿಳಿದೇ ಇರುತ್ತಾನೆ ಮತ್ತು ಈ ಹೊಂದಾಣಿಕೆಯಿಲ್ಲದೆ ಇರುವುದೇ ಅವನು ಡಬ್ಬಿಂಗ್ ಸಿನಿಮಾವನ್ನು ಮೆಚ್ಚದಿರಲು ಕಾರಣವಾಗಬಹುದು ಎಂಬುದನ್ನು ಅದ್ಯಾಕೋ ಚಿತ್ರರಂಗದ ಮಂದಿ ಯೋಚಿಸುವುದಿಲ್ಲ!

ಸಂವಿಧಾನದ ತಪ್ಪು ವ್ಯಾಖ್ಯಾನ

ಇನ್ನು ಬರಗೂರರು ಸಂವಿಧಾನವನ್ನು ಉದ್ಗರಿಸಿ ಡಬ್ಬಿಂಗ್ ನಿಶೇಧವನ್ನು ಎತ್ತಿಹಿಡಿಯುವ ವ್ಯರ್ಥಸಾಹಸಕ್ಕೆ ಮುಂದಾಗಿದ್ದಾರೆ. ಸಂವಿಧಾನದ ನಾಲ್ಕು ವಿಧಿಗಳ ಬಗ್ಗೆ ಮಾತಾಡಿದ್ದಾರೆ. ೧೯ (ಜಿ), ೧೯ (೬), ೨೧, ೨೩ ಮತ್ತು ೨೪ನ್ನು ಎತ್ತಿ ಆಡಿದ್ದಾರೆ. ಡಬ್ಬಿಂಗ್ ನಿಶೇಧವನ್ನು ಸಮರ್ಥಿಸಲು ಸಂವಿಧಾನವನ್ನೂ ಬಿಡದೆ ಬಳಸಿಕೊಂಡಿರುವ ಶ್ರೀಯುತರು ಈ ಭರದಲ್ಲಿ ತಮಗೆ ಬೇಕಾದಂತೆ ಟಿಪ್ಪಣಿ ನೀಡಿದ್ದಾರೆ ಮತ್ತು ಕನ್ನಡನಾಡಲ್ಲಿರುವ ಅಸಾಂವಿಧಾನಿಕ ಡಬ್ಬಿಂಗ್ ತಡೆಯೆನ್ನುವುದು ಎಲ್ಲಾ ರೀತಿಯಲ್ಲೂ ಸಂವಿಧಾನಕ್ಕೆ ವಿರುದ್ಧವಾದುದು ಎನ್ನುವುದನ್ನೇ ಮರೆತಿರುವಂತೆ ನಡೆದುಕೊಳ್ಳುತ್ತಿರುವುದು ಮಾತ್ರಾ ದುರಂತ! ಭಾರತೀಯ ಸಂವಿಧಾನದ ೧೯(ಜಿ) ತನ್ನ ಪ್ರಜೆಗಳಿಗೆ ಯಾವುದೇ ನ್ಯಾಯಬದ್ಧ ವ್ಯಾಪಾರ ಮಾಡುವ ಹಕ್ಕಿದೆ ಎನ್ನುತ್ತದೆ. ಡಬ್ಬಿಂಗ್ ಕಾನೂನುಬದ್ಧವಾದ ಕ್ರಿಯೆಯಾದ್ದರಿಂದ ಇದನ್ನು ಸಂವಿಧಾನ ಎತ್ತಿ ಹಿಡಿಯುತ್ತದೆನ್ನುವ ಬರಗೂರರ ಮಾತುಗಳು ಒಪ್ಪಬೇಕಾದ್ದೇ! ಆದರೆ ಅವರ ಮುಂದಿನ ಮಾತುಗಳನ್ನು ಸಾಣೆ ಹಿಡಿಯಬೇಕಾಗಿದೆ.

೧೯(೬)ರ ಪ್ರಕಾರ ಸರ್ಕಾರಕ್ಕೆ ಯಾವುದನ್ನೇ ನಿಶೇಧಿಸುವ ಹಕ್ಕಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧವಾಗಬೇಕು ಎನ್ನುವ ಅರ್ಥದಲ್ಲಿ ಶ್ರೀಯುತರು ಬರೆದಿದ್ದಾರೆ. ಇಲ್ಲಿ ಸರ್ಕಾರಕ್ಕೆ “ನ್ಯಾಯೋಚಿತ ನಿಶೇಧ” ಹೇರುವ ಅವಕಾಶವಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧ ಮಾಡಬಹುದು ಎಂದಿದ್ದಾರೆ. ಈ ನ್ಯಾಯೋಚಿತ ನಿಶೇಧ ಅನ್ನುವುದರ ವ್ಯಾಖ್ಯಾನವಾದರೂ ಏನು? ಯಾವುದರಿಂದ ಸಮಾಜದ ಸ್ವಾಸ್ಥ್ಯ/ ಜನರ ಆರೋಗ್ಯ/ ಬದುಕು ಹಾನಿಗೊಳಗಾಗುತ್ತೋ ಅಂಥದ್ದನ್ನು ಇದರಡಿಯಲ್ಲಿ ಸರ್ಕಾರ ನಿಶೇಧ ಮಾಡಿರೋದನ್ನು ಕಾಣಬಹುದು. ಒಂದಂಕಿ ಲಾಟರಿ, ಸರಾಯಿ, ಗುಟ್ಕಾ ಮೊದಲಾದವು... ಈ ಪಟ್ಟಿಯಲ್ಲಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಸರ್ಕಾರ ಸಮರ್ಥನೆ ನೀಡಿರುವುದೂ ಕೂಡಾ ಇವು ನಿಯಂತ್ರಿಸಲಾಗದಂತಹ... ಆರೋಗ್ಯಕ್ಕೆ/ ಬದುಕಿಗೆ ಹಾನಿಕರವಾದವು ಎಂದೇ.  ಇಲ್ಲಿ ಡಬ್ಬಿಂಗ್ ಎನ್ನುವುದು ಹೇಗೆ ಹಾನಿಕರ ಎನ್ನುವುದನ್ನು ಇಡೀ ಜಗತ್ತು ಒಪ್ಪುವಂತೆ ವಿವರಿಸದೆ ಸರ್ಕಾರ ಇಂಥಾ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದಲ್ಲಿ ಚೀಮಾರಿಗೊಳಗಾಗುವುದು ನಿಶ್ಚಿತ.

ಇನ್ನು ಸಂವಿಧಾನದ ೨೩, ೨೪ನೇ ಕಾಲಮ್ಮುಗಳನ್ನು ಸಂಬಂಧವೇ ಇಲ್ಲದಿದ್ದರೂ ಎಳೆದುತಂದಿದ್ದಾರೆ. ೨೩ನೇ ಕಾಲಮ್ಮು ಜೀತಪದ್ದತಿ ಹಾಗೂ ಅಕ್ರಮ ಮಾನವ ಸಾಗಣೆಗಳ ನಿಶೇಧಗಳ ಬಗ್ಗೆ, ಸೇವಾ ಕಾಯ್ದೆಯಾದ ಎಸ್ಮಾ ಬಗ್ಗೆ ಮಾತಾಡಿದೆ.  ೨೪ನೇ ಕಾಲಮ್ಮಿನಲ್ಲಿ ಬಾಲಕಾರ್ಮಿಕ ಪದ್ದತಿ ನಿಶೇಧದ ಬಗ್ಗೆ ಮಾತಾಡಲಾಗಿದೆ. ಇದಕ್ಕೂ ಡಬ್ಬಿಂಗಿಗೂ ಅದೆಲ್ಲಿಂದ ಸಂಬಂಧವಿದೆಯೋ ಬಲ್ಲವರೇ ಹೇಳಬೇಕು.

ಸಿಸಿಐನ ವ್ಯಾಪ್ತಿ ಮತ್ತು ಮನರಂಜನೆ

ಇನ್ನು ಕಡೆಯದಾಗಿ ಭಾರತೀಯ ಸ್ಪರ್ಧಾ ಆಯೋಗದ ಬಗ್ಗೆಯೂ ತಪ್ಪುತಪ್ಪಾದ ಮಾಹಿತಿ ನೀಡಿದ್ದಾರೆ. ಸಿಸಿಐ ಗ್ರಾಹಕ ಹಕ್ಕು ಮತ್ತು ಸರಕುಗಳಿಗೆ ಸಂಬಂಧಿಸಿದ್ದು ಎಂಬುದು ಸರಿಯಲ್ಲಾ. ಮೂಲತಃ ಸಿಸಿಐ ಅಡಿಯಲ್ಲಿ ಮನರಂಜನೆಯೂ ಕೂಡಾ ಬರುತ್ತಿದ್ದು ಜನರಿಂದ ಹಣಪಡೆದು ನೀಡುವ ಯಾವುದೇ ಸೇವೆಯೂ ಕೂಡಾ ಗ್ರಾಹಕ ಸೇವೆಯೇ ಆಗಿದೆ ಎನ್ನುತ್ತಾ ಹಾಗಾಗಿ ಚಲನಚಿತ್ರವೂ ಸೇರಿದಂತೆ ಇಡೀ ಮನೋರಂಜನಾ ವಲಯವೂ ಸಿಸಿಐ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆಂದು ಬರೆಯಲಾಗಿದೆ.

ಸಿಸಿಐ ಕಾಯ್ದೆಯ ೫೪ನೇ ಕಾಲಮ್ಮಿನಲ್ಲಿ ಯಾವುದನ್ನೇ ಆಗಲಿ ಸಿಸಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಕಾರ ಕೇಂದ್ರಸರ್ಕಾರಕ್ಕಿದೆ ಎಂದಿರುವ ಶ್ರೀಯುತರು ಅರೆಸತ್ಯವೊಂದನ್ನು ಮಾತ್ರಾ ಮಾತಾಡಿದ್ದಾರೆ. ಮುಂದುವರೆಯುತ್ತಾ ಇದೇ ಕಾಲಮ್ಮಿನಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಕೇಂದ್ರಸರ್ಕಾರ ಇಂಥಾ ಕ್ರಮಕ್ಕೆ ಮುಂದಾಗಬಹುದು ಎಂದೂ ವಿವರಿಸುತ್ತಾ ಸರ್ಕಾರದ ಭದ್ರತೆಗೆ, ಜನತೆಯ ಹಿತಕ್ಕೆ ಧಕ್ಕೆ ತರುವಂತಿದ್ದರೆ, ಅಂತರದೇಶೀಯ ಒಪ್ಪಂದಗಳಿಗೆ ಧಕ್ಕೆ ತರುವಂತಿದ್ದರೆ, ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕಾಗಿ ದುಡಿಯುವ ಯಾವುದೇ ಸಂಸ್ಥೆಯಾಗಿದ್ದರೆ ವಿನಾಯ್ತಿ ನೀಡಬಹುದು.. ಅದೂ ಕೂಡಾ ಸಾರ್ವಭೌಮತ್ವದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿನಾಯ್ತಿ ನೀಡಬಹುದು ಎನ್ನಲಾಗಿದೆ ಅಷ್ಟೇ!


ಇಷ್ಟಕ್ಕೂ ಕೇಂದ್ರವೋ ರಾಜ್ಯವೋ ಮತ್ತೊಂದು ಸರ್ಕಾರ ಡಬ್ಬಿಂಗನ್ನು ನಿಶೇಧ ಮಾಡಿದ್ದ ಪಕ್ಷದಲ್ಲಿ ಇವರಾಡಿದ ಮಾತುಗಳನ್ನು ಒಪ್ಪಬಹುದಾಗಿತ್ತು. ಅಂತಹ ಯಾವ ನಿಶೇಧವೂ ಇಲ್ಲದಿದ್ದರೂ ಚಿತ್ರರಂಗದ ದೊಣೇನಾಯಕರ ಪರ ವಹಿಸಿರುವುದು ಅಚ್ಚರಿಯೆನ್ನಿಸುತ್ತದೆ. ಒಟ್ಟಾರೆ ಶತಾಯ ಗತಾಯ ಡಬ್ಬಿಂಗ್ ತಡೆಯಲೇ ಬೇಕೆನ್ನುವ ಉಮ್ಮೇದಿನಲ್ಲಿ ಬರಗೂರು ರಾಮಚಂದ್ರಪ್ಪನವರಂಥಾ ಹಿರಿಯರೂ ಕೂಡಾ ಈ ದೇಶದ ಸಂವಿಧಾನ, ಜನಸಾಮಾನ್ಯರ ಆಯ್ಕೆಸ್ವಾತಂತ್ರ್ಯ, ಸ್ಪರ್ಧೆಗಳ ಮೂಲ ಆಶಯಗಳನ್ನೇ ಮರೆತವರಂತೆ ನಡೆದುಕೊಂಡಿರುವುದು ಮಾತ್ರಾ ವಿಷಾದನೀಯ.

"ವ್ಯಾಪಾರಿ" ನಿರ್ಮಾಪಕ ಮತ್ತು "ಗ್ರಾಹಕ" ಕಲಾರಸಿಕ!

(ಚಿತ್ರಕೃಪೆ: ಪ್ರಜಾವಾಣಿ)
ಡಬ್ಬಿಂಗ್ ತಡೆಯುತ್ತೇವೆ ಎನ್ನುವ ಕೂಗು ತಾರಕಕ್ಕೇರಿರುವ ಈ ಹೊತ್ತಿನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಚಿತ್ರನಿರ್ಮಾಪಕರಲ್ಲಿ ಹಲವರು ನಡೆಸಿದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು. ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಈ ವರದಿಯನ್ನು ನೋಡಿದರೆ ನಿರ್ಮಾಪಕರುಗಳು ಡಬ್ಬಿಂಗ್ ಪರವಾಗಿದ್ದಾರೆ ಎಂಬುದು ಅರಿವಾಗುತ್ತದೆ. ಆದರೆ ಇದಕ್ಕೂ ಮಿಗಿಲಾದದ್ದೇನೆಂದರೆ ಸಿನಿಮಾ ಕಲೆಯಷ್ಟೇ ಅಲ್ಲಾ, ಅದು ವ್ಯಾಪಾರ ಎನ್ನುವುದು ಮನದಟ್ಟಾಗುತ್ತದೆ.

ನಿರ್ಮಾಪಕ ಅನ್ನದಾತನೇ? ಪ್ರೇಕ್ಷಕ ಗ್ರಾಹಕನೇ?

ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು "ಅನ್ನದಾತ"ರೆಂದೂ ಪ್ರೇಕ್ಷಕರನ್ನು "ಅಭಿಮಾನಿ ದೇವರು"ಗಳೆಂದೂ ಕರೆಯುತ್ತಿದ್ದುದನ್ನು ಎಲ್ಲರೂ ಬಲ್ಲೆವು. ಆದರೆ ಚಿತ್ರರಂಗದ ಕೆಲಮಂದಿ "ಸಿನಿಮಾ ಒಂದು ಕಲೆ, ಇದು ಉದ್ಯಮವಲ್ಲ" "ಪ್ರೇಕ್ಷಕ ಕಲಾರಸಿಕ, ಗ್ರಾಹಕನಲ್ಲ" ಎಂದು ಆಡುವ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ವಾಸ್ತವವಾಗಿ ಮೇಲಿನ ಸುದ್ದಿ ಅದನ್ನು ಅಲ್ಲಗಳೆಯುತ್ತಿದೆ. ಸಿನಿಮಾ ಕಲೆಯೂ ಹೌದು, ಪ್ರೇಕ್ಷಕ ರಸಿಕನೂ ಹೌದು. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ಉದ್ಯಮವೂ ಆಗಿದೆ. ಪ್ರೇಕ್ಷಕ ಗ್ರಾಹಕನೂ ಆಗಿದ್ದಾನೆ ಎಂಬುದನ್ನು ಅಲ್ಲಗಳೇಯಲಾಗದು.

ಡಬ್ಬಿಂಗ್ ಬಂದೊಡನೆ ಕನ್ನಡ ಚಿತ್ರರಂಗ ಉದ್ಧಾರವಾಗಿಬಿಡುತ್ತದೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಸಿನಿಮಾ ರಂಗ ಅಳಿದು ಹೋಗುತ್ತದೆ ಎನ್ನಲೂ ಆಗದು. ಚಿತ್ರವೊಂದು ಎಷ್ಟೇ ಕಲಾತ್ಮಕವಾಗಿದೆ ಎಂದರೂ ಅಲ್ಲಿ "ಎಕನಾಮಿಕ್ಸ್" (ಲಾಭ ನಷ್ಟದ ಲೆಕ್ಕಾಚಾರ) ಇದ್ದೇ ಇರುತ್ತದೆ. ಯಾಕೆಂದರೆ ಯಾವ ಸಿನಿಮವನ್ನೂ ಪುಗಸಟ್ಟೆ ತೆಗೆಯಲು ಸಾಧ್ಯವಾಗದು. ಅದಕ್ಕೆ ಹಣ ಬೇಕೇ ಬೇಕು ಮತ್ತು ಹಾಗೆ ತೊಡಗಿಸಿದವನು ಹಾಕಿದ್ದನ್ನು ಕಳೆದುಕೊಳ್ಳಲು ಎಂದೂ ಸಿದ್ಧನಾಗನು. ಹೀಗಿದ್ದಾಗ ಸಹಜವಾಗೇ ಬಂಡವಾಳ ಹಾಕುವವನು ಸಿನಿಮಾ ತಯಾರಾದ ನಂತರದ ಲಾಭ-ನಷ್ಟವನ್ನೂ ಎಣಿಕೆ ಹಾಕಲೇಬೇಕಾಗುತ್ತದೆ. ಆದರೆ ನಿರ್ದೇಶಕ, ತಂತ್ರಜ್ಞರು, ನಟರೂ ಸೇರಿದಂತೆ ಎಲ್ಲಾ ಕಲಾವಿದರಿಗೂ ತಮ್ಮ ಸಂಭಾವನೆ ಸಿಕ್ಕರೆ ಮುಗಿಯಿತು. ಇದನ್ನೆಲ್ಲಾ ನೀಡುವ ನಿರ್ಮಾಪಕನೇ ಚಿತ್ರರಂಗದ ಎಲ್ಲಾ ಕಾರ್ಮಿಕರ ಅನ್ನದಾತ! ನಿರ್ಮಾಪಕರನ್ನು ಹೊರತುಪಡಿಸಿ ಉಳಿದವರಿಗೆ ಒಂದು ಸಿನಿಮಾ ತಯಾರಾದ ನಂತರ ಅದು ಬಿಡುಗಡೆಯಾಗುತ್ತಾ, ಬಿಡುಗಡೆಯಾದರೂ ಓಡುತ್ತಾ, ದುಡ್ಡು ಮಾಡುತ್ತಾ ಅನ್ನೋದೆಲ್ಲಾ ಮಹತ್ವದ್ದಲ್ಲವೇನೋ ಎನ್ನಿಸುತ್ತದೆ. "ವರ್ಷವೊಂದಕ್ಕೆ ನೂರಿಪ್ಪತ್ತು ಸಿನಿಮಾ ಬರುತ್ತೆ, ಅದರಲ್ಲಿ ಐದೋ ಆರೋ ಮಾತ್ರಾ ಲಾಭ ತರುತ್ತೆ ಎಂದು ಒಪ್ಪಿಕೊಳ್ಳುತ್ತಲೇ ನಮ್ಮ ಕಾರ್ಮಿಕರಿಗೆ ೧೨೦ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ, ಅದರಿಂದ ಹೊಟ್ಟೆ ಹೊರೆಯಬೇಕು, ಡಬ್ಬಿಂಗ್ ಬಂದರೆ ಅದು ನಿಲ್ಲುತ್ತದೆ" ಎಂದು ಇವರಾಡುವ ಮಾತಿನ ಹಿಂದಿರುವ ಗೂಡಾರ್ಥವೇನು? ನಷ್ಟವೆಲ್ಲಾ ನಿರ್ಮಾಪಕರದ್ದಾಗಲಿ, ನಮ್ಮ ಸಂಭಾವನೆ ನಮಗೆ ಸಿಗುತ್ತಿರಲಿ ಎಂದಲ್ಲವೇ? ಹೀಗಿದ್ದಾಗ ನಿರ್ಮಾಪಕರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸಹಜವೇ ಅಲ್ಲವೇ? ಬಂಡವಾಳವನ್ನು ಹೂಡುವುದಷ್ಟೇ ಅಲ್ಲದೆ ಅತಿ ಹೆಚ್ಚು ಮಾರುಕಟ್ಟೆ ಗಂಡಾಂತರಕ್ಕೆ(ರಿಸ್ಕಿಗೆ) ತನ್ನನ್ನು ತಾನು ಒಡ್ಡಿಕೊಳ್ಳುವ ನಿರ್ಮಾಪಕನಿಗೇ ಸಿನಿಮಾ ಮಾರುಕಟ್ಟೆಯ ಬಗ್ಗೆ ಮಾತಾಡುವ, ತೀರ್ಮಾನಿಸುವ ಹಕ್ಕಿರುವುದಲ್ಲವೇ? ವಾಸ್ತವ ಹೀಗಿರುವಾಗ ಕನ್ನಡ ಚಿತ್ರರಂಗದ ಮಂದಿ ಡಬ್ಬಿಂಗ್ ಬೇಕೆನ್ನುವ ನಿರ್ಮಾಪಕರನ್ನು "ಕನ್ನಡ ದ್ರೋಹಿ"ಗಳ ಪಟ್ಟಿಗೆ ಸೇರಿಸಲಾರರು ಎಂದುಕೊಳ್ಳೋಣ.

ಇನ್ನು ಸಿನಿಮಾ ಎಷ್ಟೇ ಕಲಾತ್ಮಕವಾದರೂ ಅದನ್ನು ತನ್ನ ದುಡ್ಡು ಮತ್ತು ಸಮಯ ಖರ್ಚು ಮಾಡೇ ನೋಡುವ ಪ್ರೇಕ್ಷಕನು ಕಲಾರಸಿಕನೇ ಆಗಿದ್ದರೂ ಜೊತೆಯಲ್ಲೇ ಗ್ರಾಹಕನೂ ಆಗಿರುತ್ತಾನೆ. ಇಲ್ಲಿ ಸಾಮಾನ್ಯ ಗ್ರಾಹಕನಿಗೆ ಇರುವ ಎಲ್ಲಾ "ಹಕ್ಕುಗಳು" ಅವನಿಗೆ ಇರಬೇಕೆನ್ನುವುದಕ್ಕಿಂತಲೂ "ಗೌರವ" ಇರಬೇಕೆನ್ನುವುದು ಮುಖ್ಯವಾದುದಾಗಿದೆ. ಇಡೀ ಡಬ್ಬಿಂಗ್ ಚರ್ಚೆಯಲ್ಲಿ ಡಬ್ಬಿಂಗ್ ತಡೆಯುವ ಮಾತಾಡುತ್ತಿರುವವರು ಒಮ್ಮೆಯಾದರೂ ಗ್ರಾಹಕನ ಈ ಬೇಕು ಬೇಡಗಳಿಗೆ ಸ್ಪಂದಿಸಿದ್ದಾರೆಯೇ? ಇವರು "ನಾವೆಷ್ಟೊಂದು ಅದ್ಭುತ ಸಿನಿಮಾಗಳನ್ನು ತೆಗೆದಿದ್ದೇವೆ, ಕನ್ನಡಿಗರು ಅವನ್ನು ನೋಡಲ್ಲಾ, ಅವರಿಗೆ ಬೇರೆ ಭಾಷೇದೇ ಬೇಕು" ಎಂದು ದೂರಲು ಮಾತ್ರಾ ಪ್ರೇಕ್ಷಕ ಬಳಕೆಯಾಗುತ್ತಾನೆ! ಸತ್ಯಮೇವ ಜಯತೇ ಬೇಕೆಂದರೆ ಬದುಕು ಜಟಕಾ ಬಂಡಿ ನೋಡಿ ಎನ್ನುವ ಉದ್ಧಟತನ ಇವರದ್ದು! ಈ ಮಂದಿ ನಮಗೇನು ಬೇಕು ಬೇಡ ಎಂಬುದನ್ನು ತೀರ್ಮಾನಿಸುವ ದೊಣೆನಾಯಕರಾಗಿಬಿಡುತ್ತಾರೆ! ಇದು ಬಿಟ್ಟು ಇನ್ನುಳಿದಂತೆ ಗ್ರಾಹಕನ ಯಾವುದೇ ಬೇಕು ಬೇಡಗಳಿಗೆ ಇವರಿಂದ ಸ್ಪಂದನೆಯೂ ಇಲ್ಲಾ, ಬೆಲೆಯೂ ಇಲ್ಲಾ. ಹಾಗೆ ಗ್ರಾಹಕ, ಇವರದೇ ಭಾಷೆಯಲ್ಲಿ ಪ್ರೇಕ್ಷಕ, ಕಲಾರಸಿಕನ ಬಗ್ಗೆ ಕಿಂಚಿತ್ತದರೂ ಗೌರವವಿದ್ದಿದ್ದರೆ ಅಷ್ಟೊಂದು ಮಂದಿ ಬೇಕು ಬೇಕು ಎನ್ನುತ್ತಿದ್ದರೂ... ಮೂರೇ ದಿನದಲ್ಲಿ ಮೂವತ್ತು ಸಾವಿರ ಮಂದಿ ಅಂತರ್ಜಾಲ ತಾಣದಲ್ಲಿಯೇ ನೋಡಿ ತಣಿಯುತ್ತಿದ್ದುದನ್ನು ಸಹಿಸದೇ "ಸತ್ಯಮೇವ ಜಯತೇ" ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ತೆಗೆಸಿ ಹಾಕುತ್ತಿರಲಿಲ್ಲಾ!! (ಅಯ್ಯೋ, ಅದು ನಾವು ತೆಗೆಸಿದ್ದಲ್ಲಾ, ಅವರೇ ತೆಗೆದದ್ದು ಎನ್ನುವ ಗೋಸುಂಬೆ ಮಾತುಗಳನ್ನು ಇನ್ನು ನಿರೀಕ್ಷಿಸಬಹುದು!) ಹೀಗಿದ್ದಾಗ ಚಲನಚಿತ್ರವನ್ನು ನೋಡುವವನೊಬ್ಬ ತನ್ನ ಬೇಕು ಬೇಡಗಳ ಹಕ್ಕನ್ನು ಗ್ರಾಹಕನಾಗಿ ಚಲಾಯಿಸದೇ ಇರುತ್ತಾನೆಯೇ? ತೀರಾ ಸಾರಾಸಗಟು ನಿಶೇಧ ಎನ್ನುತ್ತಾ ನೋಡುಗನ ಅವಕಾಶಗಳ ಬಾಗಿಲುಗಳನ್ನು ಮುಚ್ಚಿದರೆ ಅವನಾದರೋ ಏನು ತಾನೇ ಮಾಡಬಲ್ಲ? ಇರುವ ಕಾನೂನಿನ ಎಲ್ಲ ಅವಕಾಶಗಳನ್ನು ಬಳಸಿ ಕೊಳ್ಳುವುದು ಸಹಜ!

ಇರಲಿ, ನಿರ್ಮಾಪಕ ವ್ಯಾಪಾರಿಯೋ ಅಲ್ಲವೋ, ಸಿನಿಮಾ ಸರಕೋ ಅಲ್ಲವೋ ಬೇರೆಯದೇ ಮಾತು. ಆದರೆ ಸಿನಿಮಾವನ್ನು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನೊಬ್ಬನಿಗೆ ತನಗೆ ಬೇಕಾದುದನ್ನು ನೋಡುವ, ಮೆಚ್ಚುವ, ತಿರಸ್ಕರಿಸುವ ಆಯ್ಕೆ ಸ್ವಾತಂತ್ರ್ಯವಿರುವುದನ್ನಾದರೂ ಚಿತ್ರರಂಗ ಗೌರವಿಸಬೇಕಾಗುತ್ತದೆ. ಇದನ್ನು ಕಡೆಗಣಿಸಿದಾಗ ಕಾನೂನು ಈ ಹಕ್ಕನ್ನು ಎತ್ತಿಹಿಡಿಯುವುದು ಮಾತ್ರಾ ದಿಟ! ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲಾ, ದೇಶದ ಪ್ರಧಾನಿಯೇ ಮಧ್ಯಸ್ತಿಕೆಗಿಳಿದರೂ ಆಗಬೇಕಾದ್ದೂ, ಆಗುವುದೂ ಇದೇ!

ಡಬ್ಬಿಂಗ್ ಬೇಕೆನ್ನೋದು ಬರೀ ಹಕ್ಕಲ್ಲಾ!


ಕನ್ನಡಕ್ಕೆ ಡಬ್ಬಿಂಗ್ ಬರಲು ಬಿಡದೇ ತಡೆಯುತ್ತಿರುವ ಹತೋಟಿಕೂಟವೊಂದು ಇದೆ ಎನ್ನುವುದು ಈ ಬಾರಿ ಅನುಮಾನಕ್ಕೆಡೆಯಿರದ ರೀತಿಯಲ್ಲಿ ಸಾಬೀತಾಗುತ್ತಿದೆ. ಕನ್ನಡ ಗ್ರಾಹಕ ಕೂಟವು ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ - ಕಾಂಪಿಟೇಶನ್ ಕಮಿಶನ್ ಆಫ಼್ ಇಂಡಿಯಾ) ಸಲ್ಲಿಸಿದ್ದ ದೂರನ್ನು ಆಧರಿಸಿ ಆಯೋಗದ ಶೋಧನಾ ಸಮಿತಿಯು ಸಿದ್ಧಪಡಿಸಿದೆಯೆನ್ನಲಾದ ವರದಿಯೊಂದು ಅದು ಹೇಗೋ ಮಾಧ್ಯಮಗಳಿಗೆ ಸೋರಿ ಹೋಗಿ ಪ್ರಕಟವಾದ ಕ್ಷಣದಿಂದಲೇ ಕಲ್ಲುಬಿದ್ದ ಜೇನುಗೂಡಿನಂತೆ ಇಡೀ ಹತೋಟಿ ಕೂಟವು ಚಡಪಡಿಸಲು ಶುರುಮಾಡಿ ತಾನಾಗೇ ಹೊರಬಂದು ತನ್ನ ಅಸ್ತಿತ್ವವನ್ನು ಸಾರುತ್ತಿರುವುದು ಕಾಣುತ್ತಿದೆ. ಇದನ್ನು ಕಂಡಾಗ ಕನ್ನಡದಲ್ಲಿರುವ ಅಘೋಶಿತ ಡಬ್ಬಿಂಗ್ ನಿಶೇಧ ಇನ್ನಿಲ್ಲವಾಗುವ ಗಳಿಗೆ ಹತ್ತಿರವಾದಂತೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತಾದ ಕೆಲ ವಿಶಯಗಳತ್ತ ಕಣ್ಣು ಹಾಯಿಸೋಣ.

೬೦ರ ದಶಕದ ಐತಿಹಾಸಿಕ ನಿಶೇಧದಿಂದೀಚೆಗೆ...

ಕನ್ನಡ ಚಿತ್ರರಂಗ ಮದ್ರಾಸಿನ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ಡಬ್ಬಿಂಗಿನಿಂದಾಗಿ ಕನ್ನಡದಲ್ಲಿಯೇ ಚಿತ್ರ ತೆಗೆಯುವುದು ಕಡಿಮೆಯಾಗಿ ಕನ್ನಡ ಕಲಾವಿದರಿಗೆ, ಚಿತ್ರೋದ್ಯಮಿಗಳಿಗೆ ಅವಕಾಶ ಇಲ್ಲವಾಗುತ್ತಿದೆ ಎಂದು ಡಬ್ಬಿಂಗ್ ವಿರೋಧಿ ಹೋರಾಟವೊಂದು ನಡೆದು ನಮ್ಮ ನಾಡಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳು ಬಿಡುಗಡೆಯಾಗುವುದು ನಿಂತಿತು. ಆಗಲೂ ಇದು ಸಂವಿಧಾನ, ನೆಲದ ಕಾನೂನುಗಳಿಗೆ ವಿರುದ್ಧವಾಗಿಯೇ ಇತ್ತು. ಬಹುಷಃ, ಈ ಏರ್ಪಾಟಿನಿಂದಾಗಿ ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನು ಆ ಭಾಷೆಗಳು ಬಾರದು ಎನ್ನುವ ಕಾರಣಕ್ಕೆ ನೋಡದೆ (ಆ  ಮೂಲಕ ಅವುಗಳಿಗೆ ಯಶಸ್ಸು ತಂದುಕೊಡದೆ) ಕನ್ನಡ ಚಿತ್ರಗಳನ್ನು ಮಾತ್ರಾ ನೋಡಿ ಮೆಚ್ಚಿ ಗೆಲ್ಲಿಸುವ ಹಂತಕ್ಕೆ ಬಂದರೇನೋ ಗೊತ್ತಿಲ್ಲಾ!

ನಿಜವಾದ ಭಯ ಏನೆಂದರೆ...

ಆದರೆ ನಿಧಾನವಾಗಿ ಪರಭಾಷೆಯ ಚಿತ್ರಗಳು ಪ್ರತಿಊರಿನಲ್ಲೂ ಬೆಳಗಿನ ಆಟ, ಒಂದು ಟಾಕೀಸಿನಿಂದ ಶುರುವಾಗಿ ಇದೀಗ ಕನ್ನಡನಾಡಲ್ಲೇ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿವೆ. ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿಯೂ ದೊಡ್ಡ ಕನ್ನಡ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗುತ್ತಿದ್ದ ದಿನಗಳು ಇತ್ತೀಚೆಗೆ ಮರೆಯಾಗಿ ಹಬ್ಬದ ಸಂದರ್ಭದಲ್ಲೂ ಪರಭಾಷೆಯ ದೊಡ್ಡಚಿತ್ರ ಬರುತ್ತಿದೆ ಎಂದು ಬೆದರಿ ಕನ್ನಡ ಚಿತ್ರಗಳು ಬಿಡುಗಡೆ ಆಗುವುದೇ ನಿಂತು ಹೋಗಿದೆ. ಇದು ಚಲನಚಿತ್ರಗಳಿಗೆ ಸಂಬಂಧಿಸಿದಂತಾದರೆ ದೂರದರ್ಶನಗಳದ್ದು ಮತ್ತೊಂದು ಕಥೆ! ಪ್ರತಿಮನೆಯಲ್ಲೂ ಮಕ್ಕಳು ನೋಡುವ ಕಾರ್ಟೂನ್ ಸಿನಿಮಾಗಳು, ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್ ಥರದ ಅನೇಕ ಚಾನೆಲ್ಲುಗಳಲ್ಲಿ ಕನ್ನಡವಿರದೆ, ಕನ್ನಡದ ಮಕ್ಕಳು ಚಿಕ್ಕಂದಿನಿಂದಲೇ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸುವ ಪರಿಸ್ಥಿತಿ ಹುಟ್ಟಿಕೊಂಡಿದೆ. ಹೀಗೆ ಬಾಲ್ಯದಿಂದಲೇ ಮನರಂಜನೆಯ ವಿಷಯದಲ್ಲಿ ಪರಭಾಷೆಗೆ ಅಂಟಿಕೊಳ್ಳುವ ಮಕ್ಕಳು ನಾಳೆ ಕನ್ನಡ ಚಿತ್ರಗಳನ್ನು ನೋಡುವುರಾದರೋ ಹೇಗೇ? ಡಬ್ಬಿಂಗ್ ನಿಶೇಧ ಎನ್ನುವುದು ಇಂದು ಕನ್ನಡಿಗರನ್ನು ಕನ್ನಡದಿಂದ ದೂರ ಮಾಡುವ ಕ್ರಮವಾಗಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಇಂದಿನ ಬೆಳವಣಿಗೆಗೆ ಕಾರಣ...

ಇಷ್ಟಕ್ಕೂ ನಮ್ಮ ವಿರೋಧವಿರುವುದು ಸಾರಾಸಗಟು ನಿಶೇಧಕ್ಕೆ ಮಾತ್ರವೇ! ಆದರೆ ಖಾಸಗಿ ಟಿ.ವಿ ವಾಹಿನಿಯವರು ಸತ್ಯಮೇವ ಜಯತೇ ಎಂಬ ಹಿಂದೀ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಮುಂದಾದಾಗ, ಚಿತ್ರೋದ್ಯಮದ ಕೆಲಗಣ್ಯರು ಸಾರ್ವಜನಿಕವಾಗಿ "ಸೌಹಾರ್ದತೆ"ಯಿಂದ ಮಾಲೀಕರೇ ಒಪ್ಪಿ ಹಿಂತೆಗೆದೆರೆನ್ನುತ್ತಾ ಕನ್ನಡ ಕಾರ್ಯಕ್ರಮವನ್ನು ಪ್ರಸಾರ ಮಾಡುವುದನ್ನು ತಡೆಹಿಡಿದದ್ದಲ್ಲದೆ... ವಾಹಿನಿಯವರು ವೆಬ್‌ಕ್ಯಾಸ್ಟ್ ಮಾಡಿದ್ದಕ್ಕೂ ಕತ್ತರಿ ಹಾಕಿಸಿದ್ದರಿಂದಾಗಿ ಬೇರೆ ದಾರಿಯಿರದ ನೋಡುಗರು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದರಿಂದಾಗಿ ಭಾರತೀಯ ಸ್ಪರ್ಧಾ ಆಯೋಗ(ಸಿ.ಸಿ.ಐ)ಕ್ಕೆ ದೂರು ಸಲ್ಲಿಸಲಾಯಿತು. ಸದರಿ ದೂರಿನ ತನಿಖೆಯನ್ನು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿಗೆ ಸಿ.ಸಿ.ಐ ಒಪ್ಪಿಸಿತು. ಈ ಸಮಿತಿಯ ವರದಿಯೇ ಇದೀಗ ಮಾಧ್ಯಮಗಳಿಗೆ ಸೋರಿ ಹೋಗಿ ಊರೆಲ್ಲಾ ಢಾಣಾಡಂಗೂರವಾಗಿರುವುದು! ಈ ವರದಿ ಪತ್ರಿಕೆಯಲ್ಲಿ ಪ್ರಕಟವಾದದ್ದೇ ತಡ ಡಬ್ಬಿಂಗ್ ವಿರೋಧಿ ಹೋರಾಟವನ್ನು ನಡೆಸುವುದಾಗಿ ಚಿತ್ರರಂಗ ಸಾರಿತು! ಅಲ್ಲೂ ಪರ ವಿರೋಧದ ವಾಗ್ವಾದಗಳು ನಡೆದವು. ಡಬ್ಬಿಂಗ್ ನಿಶೇಧ ಕಾನೂನುಬಾಹಿರ ಎನ್ನುವುದನ್ನು ಒಪ್ಪದ ಕೆಲವರಂತೂ ಸಿಸಿಐ ಅಸ್ತಿತ್ವವನ್ನೇ ಪ್ರಶ್ನಿಸಿದರು! ವಾಸ್ತವವಾಗಿ ನ್ಯಾಯಾಲಯವೊಂದು ನೀಡುವ ತೀರ್ಪು ಸಮ್ಮತವಲ್ಲದಿದ್ದರೆ ಮೇಲಿನ ನ್ಯಾಯಾಲಯಕ್ಕೆ ಹೋಗಬೇಕಲ್ಲದೇ ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನೆ ಮಾಡೊದು ಹತಾಶೆಯ ಪರಮಾವಧಿ ಎನ್ನಿಸುತ್ತದೆ! ಹಾಸ್ಯಾಸ್ಪದವಾಗುತ್ತದೆ!

ವಿಷಯ ಡಬ್ಬಿಂಗ್ ಅಲ್ಲಾ... ನುಡಿಹಮ್ಮುಗೆಯದು!

ವಾಸ್ತವವಾಗಿ ಮೇಲ್ನೋಟಕ್ಕೆ ಇದು ಕನ್ನಡದಲ್ಲಿ ಮನರಂಜನೆ ಬೇಕೆಂದು ಹಟ ಹಿಡಿದ ಕೆಲವರ ಕಾನೂನು ಹೋರಾಟದ ಹಾಗೆ ಕಂಡರೂ ಆಳದಲ್ಲಿ ಇದು ಕನ್ನಡದ ನುಡಿಹಮ್ಮುಗೆಯ ವಿಷಯಕ್ಕೆ ಸಂಬಂಧಿಸಿದಂತಹುದು. ಕನ್ನಡಕ್ಕೆ ಮಾತ್ರಾ ಸೀಮಿತವಲ್ಲದ ಈ ನುಡಿಹಮ್ಮುಗೆ, ನುಡಿಯೊಂದು ಎಷ್ಟೆಲ್ಲಾ ಹರವು ಹೊಂದಿರಬೇಕೆನ್ನುವುದನ್ನು ಹೇಳುತ್ತದೆ. ನುಡಿಯೊಂದರ ಇಂತಹ ಹರವು... ಆಯಾಜನಾಂಗದ ಕಲಿಕೆ, ಮನರಂಜನೆ, ದುಡಿಮೆ, ಗ್ರಾಹಕಸೇವೆ ಮೊದಲಾದ ಹತ್ತುಹಲವು ಆಯಾಮಗಳನ್ನು ಹೊಂದಿರುತ್ತದೆ ಮತ್ತು ಇಲ್ಲೆಲ್ಲಾ ನುಡಿಯೊಂದು ತನ್ನ ಅಸ್ತಿತ್ವವನ್ನು ಹೊಂದಿರಬೇಕಾದ್ದು ಮಹತ್ವದ್ದಾಗಿರುತ್ತದೆ. ಇದಕ್ಕೆ ಡಬ್ಬಿಂಗ್ ಕೂಡಾ ಒಂದು ಸಾಧನವಾಗಿದೆ ಎನ್ನುವುದನ್ನು ವಿಶ್ವಸಂಸ್ಥೆ(UNESCO)ಯೂ ಬಾರ್ಸಿಲೋನಾ ಭಾಷಾ ಘೋಷಣೆಯ ಮೂಲಕ ಎತ್ತಿಹಿಡಿದಿರುವುದನ್ನು ಗಮನಿಸಿದಾಗ "ಡಬ್ಬಿಂಗ್ ನುಡಿಯೊಂದಕ್ಕೆ ಮಾರಕವಲ್ಲಾ, ಬದಲಿಗೆ ಪೂರಕ" ಎನ್ನುವುದು ಅರಿವಾಗುತ್ತದೆ. ಒಟ್ಟಾರೆ ಡಬ್ಬಿಂಗ್ ಎನ್ನುವುದು "ನುಡಿಹಮ್ಮುಗೆ"ಯಲ್ಲೊಂದು ಪ್ರಮುಖ ಅಸ್ತ್ರವಾಗಿದೆ ಎಂಬುದು ಮಾತ್ರಾ ಸತ್ಯ. ಕನ್ನಡದ ನುಡಿಹರವಿನ ಒಂದು ಅಂಗ, ಕನ್ನಡಿಗರ ಮನರಂಜನೆ. ಇಲ್ಲಿ ಕನ್ನಡವಿರಬೇಕಾದ್ದು ಕನ್ನಡಿಗರ ಅಸ್ತಿತ್ವ ಮತ್ತು ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದಾಗಿದೆ. ಹಾಗೆಂದು ಇದು ಮನರಂಜನೆ ಮಾತ್ರಾ ಸೀಮಿತವಾದುದಲ್ಲಾ! ಮನರಂಜನೆಯೂ ಇದರಲ್ಲಿ ಸೇರಿರುವುದರಿಂದಾಗಿ ಇಂದು ಡಬ್ಬಿಂಗ್ ಹೋರಾಟ, ಡಬ್ಬಿಂಗ್ ಚರ್ಚೆ ಮುಂಚೂಣಿಗೆ ಬಂದು ನಿಂತಿದೆ...

ಡಬ್ಬಿಂಗ್ ಬಂದರೆ ಕನ್ನಡ ಬೆಳೆಯುತ್ತದೆಯೇ? ತೊಂದರೆ ಇಲ್ಲವೇ?

ಈ ಪ್ರಶ್ನೆಗೆ ಉತ್ತರ "ಹೌದು" ಮತ್ತು "ಇದೆ" ಎಂಬುದಾಗಿದೆ. ಬದಲಾವಣೆ ಎಂದಿಗೂ ನೋವಿನಿಂದಲೇ ಕೂಡಿರುವುದು ಸಹಜ. ಡಬ್ಬಿಂಗ್ ಬಂದೊಡನೇ ಕನ್ನಡ ಉದ್ಧಾರವಾಗಿಬಿಡುತ್ತದೆ ಎನ್ನುವ ಭ್ರಮೆ ನಮಗೂ ಇಲ್ಲಾ. ಮೊದಲಿಗೆ ಕೆಟ್ಟಾಕೊಳಕಾ ಚಿತ್ರಗಳ ಸುರಿಮಳೆಯೂ ಆದೀತು, ಗುಣಮಟ್ಟದಲ್ಲೂ ಡಬ್ ಆದವು ಕೆಟ್ಟದಾಗಿರಬಹುದು! ಮುಂದೆ ಇದು ಸುಧಾರಿಸುವುದಂತೂ ಖಂಡಿತಾ! ಯಾಕೆಂದರೆ ಮಾರುಕಟ್ಟೆಯೇ ಬದಲಾವಣೆಯನ್ನು ನಿರ್ಣಯಿಸುತ್ತದೆ! ಡಬ್ಬಿಂಗ್ ಬಂದೊಡನೆಯೇ ಮೂಲಚಿತ್ರಗಳ ಸಂಖ್ಯೆ ಕಡಿಮೆಯೂ ಆಗಬಹುದು. ಆದರೆ ಡಬ್ಬಿಂಗ್ ಎನ್ನುವುದು, ತಮ್ಮ ಮನರಂಜನೆಗಾಗಿ ನಿಧಾನವಾಗಿ ಕನ್ನಡದಿಂದಲೇ ದೂರಾಗುತ್ತಿರುವ ಪ್ರೇಕ್ಷಕರನ್ನು ಖಚಿತವಾಗಿ ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಡಬ್ಬಿಂಗ್ ಚಿತ್ರಗಳು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ನೆಲದ ಸೊಗಡಿನ, ನಮ್ಮ ಬೇರ್ಮೆಯನ್ನು ಎತ್ತಿಹಿಡಿವ ಚಿತ್ರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಾವಿರಾರು ಜನರಿಗೆ ಇದು ಅನ್ನವೇ ಆಗಿದ್ದರೂ ಕೋಟ್ಯಾಂತರ ಜನರಿಗೆ ಮನರಂಜನೆ ಎನ್ನುವುದನ್ನು ಕಡೆಗಣಿಸಲಾಗದು. ಕನ್ನಡದ ಮನರಂಜನೆ ನಿಧಾನ ಸಾವಿಗೆ ತುತ್ತಾಗುತ್ತಿರುವುದನ್ನು ಗಮನಿಸಬಲ್ಲ ಜನರು ಡಬ್ಬಿಂಗನ್ನು ಒಂದು ಮದ್ದು ಎಂದು ಗುರುತಿಸಬಲ್ಲರು. ಈ ಮದ್ದು ಕೆಲವರಿಗೆ ಕಹಿಯೂ ಆಗಿರಬಹುದು... ಆದರೆ ಡಬ್ಬಿಂಗಿನಿಂದಾಗಿ ನಮ್ಮ ಸಂಸ್ಕೃತಿ ಹಾಳಾಗುತ್ತದೆ, ಭಾಷೆ ಅಳಿಯುತ್ತದೆ ಮುಂತಾಗಿ ಹೇಳುವುದು ಮಾತ್ರಾ ಪೊಳ್ಳು ಎನ್ನಿಸುತ್ತದೆ. ಕನ್ನಡ ಚಿತ್ರೋದ್ಯಮವೂ ಕೂಡಾ ಡಬ್ಬಿಂಗ್ ಒಡ್ಡುವ ಗುಣಮಟ್ಟದ ಸವಾಲನ್ನು ಸರಿಯಾಗಿ ಸ್ವೀಕರಿಸಿ ಒಳ್ಳೊಳ್ಳೆಯ ಸ್ವಂತಿಕೆಯ ಚಿತ್ರಗಳನ್ನು ನೀಡುವ ಮೂಲಕವೇ ತನ್ನ ಅಸ್ತಿತ್ವ ಕಾಯ್ದುಕೊಳ್ಳಬೇಕಲ್ಲದೆ ಆ ಸಬ್ಸಿಡಿ, ಈ ವಿನಾಯಿತಿ, ಆ ನಿಶೇಧ, ಈ ಸಹಾಯಧನಗಳಿಂದ ಅಲ್ಲಾ!! ಇಷ್ಟಕ್ಕೂ ಕನ್ನಡದ ಪ್ರೇಕ್ಷಕನು ತನಗೇನು ಬೇಕೋ ಅದನ್ನು ಮಾತ್ರವೇ ಹೀರಿಕೊಳ್ಳಬಲ್ಲನಲ್ಲದೆ ಡಬ್ಬಿಂಗ್ ಆದವುಗಳನ್ನೆಲ್ಲಾ ಒಪ್ಪಿಕೊಂಡು ಮೂಲಚಿತ್ರಗಳಿಂದ ದೂರಾಗುತ್ತಾನೆ ಎನ್ನುವಂತಿಲ್ಲಾ! ಹಾಗಾಗಿ ಕನ್ನಡ ಚಿತ್ರರಂಗದ ಮಂದಿ ಸ್ಪರ್ಧೆಯನ್ನು ಎದುರಿಸುವ ರಾಜಮಾರ್ಗವನ್ನು ಹಿಡಿಯಲಿ ಮತ್ತು ಅದರಲ್ಲಿ ಗೆಲ್ಲಲಿ ಎಂದು ಆಶಿಸೋಣ. ಏನಂತೀ ಗುರೂ?

ಬಿಜೆಪಿ ಪ್ರಣಾಳಿಕೆಯಲ್ಲಿ ಡಬ್ಬಿಂಗ್‌ಗೆ ಪರವಾನಿಗೆ!

ಭಾರತೀಯ ಜನತಾಪಕ್ಷದ ವಿಧಾನಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಇದರಲ್ಲಿ ಬಹಳ ವಿಶೇಶವಾದ ಸಂಗತಿಯೆಂದರೆ ಡಬ್ಬಿಂಗ್ ಬಗ್ಗೆ ಬಿಜೆಪಿ ಮಾಡಿರುವ ಪ್ರಸ್ತಾಪ. ರಾಜಕೀಯ ಪ್ರಣಾಳಿಕೆಯ ಅಂಗವಾಗುವಷ್ಟರ ಮಟ್ಟಿಗೆ "ಡಬ್ಬಿಂಗ್" ಎನ್ನುವುದು ಕನ್ನಡ ಸಮಾಜದಲ್ಲಿ ಚರ್ಚೆಯ ಮುಖ್ಯ ಅಂಶವಾಗಿರುವುದು ಗಮನಾರ್ಹವಾದ ವಿಷಯವಾಗಿದೆ!

ಪ್ರಣಾಳಿಕೆಯಲ್ಲಿ ಡಬ್ಬಿಂಗ್

ಬಿಜೆಪಿಯ ಪ್ರಣಾಳಿಕೆಯಲ್ಲಿ ಡಬ್ಬಿಂಗ್ ಕುರಿತಾಗಿ ಹೀಗೆ ಬರೆಯಲಾಗಿದೆ: ಸಾರಾಸಗಟು ಡಬ್ಬಿಂಗ್ ಮಾಡುವುದಕ್ಕೆ ನಿಯಂತ್ರಣ; ಸಮುದಾಯಕ್ಕೆ ಶಿಕ್ಷಣ, ಜಾಗೃತಿ ನೀಡುವ ಸಾಕ್ಷ್ಯಚಿತ್ರಗಳಿಗೆ ಮೊದಲು ಕನ್ನಡದ ಸಬ್‌ಟೈಟಲ್; ಅತ್ಯಂತ ಅಗತ್ಯವಿದ್ದರೆ ಮಾತ್ರ ಸೂಕ್ತ ಪರವಾನಗಿ ವಿಧಾನದಲ್ಲಿ ಪರವಾನಗಿ.

ಈ ಭರವಸೆಯನ್ನು ಕಂಡಾಗ ಮನಸ್ಸೊಳಗೆ ಹೊಸ ಭರವಸೆ ಮೂಡ್ತಾಯಿದೆ ಗುರೂ! ಒಟ್ನಲ್ಲಿ ಕನ್ನಡಿಗರಿಗೆ ಶಾಪವಾಗಿದ್ದ "ಸಾರಾಸಗಟು ಡಬ್ಬಿಂಗ್ ನಿಶೇಧ"ವನ್ನು ಇಲ್ಲವಾಗಿಸಲಾಗುತ್ತದೆ ಎನ್ನುವ ಹಿಗ್ಗು ಒಂದೆಡೆಯಾದರೆ ಈ ಭರವಸೆಯ ಹಿಂದಿರುವ ಮನಸ್ಥಿತಿ ನಾಡಿನ ಆರುಕೋಟಿ ಜನರ ಪರವಾಗಿರದೆ ಕೆಲವು ಉದ್ಯಮದ ಮಂದಿಯ ಪರವಾಗಿದೆಯೇನೋ ಎನ್ನುವಂತಿರುವುದು  ಒಂಚೂರು ಕಸಿವಿಸಿಗೆ ಕಾರಣವಾಗಿದೆ.

ಮೊದಲು ಸಬ್‌ಟೈಟಲ್ಲು,ವಿಧಿಯಿಲ್ಲದಿದ್ದರೆ ಡಬ್ಬಿಂಗಿಗೆ ಪರವಾನಗಿ ಕೊಡಲಾಗುತ್ತದೆ ಎನ್ನುವುದರಲ್ಲೇ ನಲವತ್ತೈದಕ್ಕೂ ಹೆಚ್ಚು ವರ್ಷಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳು ಬರದಂತೆ ತಡೆಯುತ್ತಿರುವ  "ಹತೋಟಿಕೂಟ"ಕ್ಕೆ ಅಧಿಕೃತತೆಯನ್ನು ತಂದುಕೊಡುತ್ತಿರುವ ಧ್ವನಿಯಿದೆ! ಒಟ್ಟಿನಲ್ಲಿ ಭಾರತದ ಸಂವಿಧಾನ  ನೀಡಿರುವ ಮೂಲಭೂತಹಕ್ಕನ್ನು ಕಸಿದುಕೊಂಡಿರುವವರ ರಾಯಭಾರಿಗಳಾಗಿ "ಇನ್ನು ನಿಮಗಿಷ್ಟು ಸ್ವಾತಂತ್ರ್ಯ ಕೊಡುತ್ತಿದ್ದೇವೆ" ಎನ್ನುವ ದೊಣೆನಾಯಕರಾಗಿ ಬಿಜೆಪಿ ನೀಡಿರುವ ಪ್ರಣಾಳಿಕೆಯಿರುವುದು ಸೋಜಿಗದ ವಿಷಯವಾಗಿದೆ ಗುರೂ!

ಡಬ್ಬಿಂಗ್ ಬೇಡ ಎನ್ನಲು ಈ ಪರಿ ಪೊಳ್ಳುವಾದ ಬೇಕೇ?

"ದೃಶ್ಯ ಮಾಧ್ಯಮದ ಡಬ್ಬಿಂಗ್ ಕನ್ನಡಕ್ಕೆ ಮಾರಕವೋ ಪೂರಕವೋ" ಎಂಬ ಕಾರ್ಯಕ್ರಮ ನಡೆದ ಬಗ್ಗೆ ಏನ್‌ಗುರುವಿನಲ್ಲಿ ಬರೆದಿದ್ದೆವು. ಅದರಲ್ಲಿ ಡಬ್ಬಿಂಗ್ ವಿರೋಧಿಸಿ ಅಭಿಪ್ರಾಯ ಮಂಡಿಸಿದ್ದ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕವರೇಣ್ಯರು ಆಡಿದ ಮಾತುಗಳ ಬಗ್ಗೆ ಮಾತಾಡಿದ್ದೆವು. ನಿನ್ನೆಯ ದಿನದ (೦೭.೦೧.೨೦೧೩ರ) ಕನ್ನಡಪ್ರಭದಲ್ಲಿ ಇದೇ ಕಾರ್ಯಕ್ರಮದ ವರದಿಯಲ್ಲಿ ಮತ್ತಷ್ಟು ಕುತೂಹಲಕಾರಿ ವಿಷಯಗಳಿರುವುದನ್ನು ನಾವು ಗಮನಿಸಬಹುದಾಗಿದೆ!

ಅಪ್ಪಣೆ ಕೊಡೋ ದೊಣೆನಾಯಕರು!

ಹೌದೂ... ಚಿತ್ರರಂಗದ ಈ ದೊಣೇನಾಯಕರಿಗೆ ಪೋಗೋ, ಚಿಂಟು, ಡಿಸ್ಕವರಿ, ಅನಿಮಲ್ ಪ್ಲಾನೆಟ್ ಮೊದಲಾದ ವಾಹಿನಿಗಳು ಮತ್ತು ಅನಿಮೇಶನ್ ಆಧಾರಿತ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಡಬ್ ಮಾಡುವುದಕ್ಕೆ ಅಡ್ಡಿಯಿಲ್ಲವಂತೆ! ಆದರೆ ಚಿತ್ರಗಳನ್ನು ಡಬ್ ಮಾಡುವುದಕ್ಕೆ ಮಾತ್ರಾ ಆಕ್ಷೇಪವಂತೆ!! ಇಷ್ಟಕ್ಕೂ ಡಬ್ಬಿಂಗ್ ಬೇಕು ಎನ್ನುವವರು ಪೋಸ್ಟ್‌ಸಿಂಕ್ರನೈಸಿಂಗ್ ಉಪಕರಣಗಳನ್ನು ನೀಡುವಂತೆ ಥಿಯೇಟರ್‌ನವರನ್ನು ಒತ್ತಾಯಿಸಬೇಕಂತೆ! ಅಂದರೆ ಜನರು ಇಂಥದ್ದನ್ನು ನೋಡಬೇಕು, ಇಂಥದ್ದನ್ನು ನೋಡಬಾರದು, ಇಂಥದ್ದನ್ನು ಕೇಳಬೇಕು, ಇಂಥದ್ದನ್ನು ಕೇಳಬಾರದು ಎಂದು ತೀರ್ಮಾನಿಸುವ ಅಧಿಕಾರವನ್ನು ಇವರಿಗೆ ಅದ್ಯಾರು ಕೊಟ್ಟರೋ ಏನೋ? ಹಿಂದೀ ಸಂಭಾಷಣೆಯು ಕನ್ನಡಕ್ಕೆ ಡಬ್ ಆದಾಗ ತುಟಿ ಚಲನೆ ಹೊಂದುವುದಿಲ್ಲಾ ಎನ್ನುವ ಇವರುಗಳು "ತುಟಿಚಲನೆ ಸರಿ ಇಲ್ಲದಿರುವುದು ಜನರಿಗೆ ಒಪ್ಪಿಗೆಯಾಗದಿದ್ದಲ್ಲಿ ಅಂತಹ ಸಿನಿಮಾಗಳನ್ನು ಒಪ್ಪುವ, ಒಪ್ಪದಿರುವ ಹಕ್ಕನ್ನು ಹೊಂದಿರುತ್ತಾರೆ" ಎನ್ನುವುದನ್ನು ಅದ್ಯಾಕೆ ಮರೆಮಾಚುತ್ತಾರೋ ಗೊತ್ತಿಲ್ಲಾ! ಇಷ್ಟಕ್ಕೂ ಕನ್ನಡ ಸಿನಿಮಾಗಳಲ್ಲಿ ನಟಿಸುವ ಕನ್ನಡಬಾರದ ನಟನಟಿಯರು ಶೂಟಿಂಗ್ ನಡೆಸುವಾಗ ಹೇಗೆ ಸಂಭಾಷಣೆ ಹೇಳುತ್ತಾರೆ ಎನ್ನುವುದನ್ನು ಇವರುಗಳೇ ಹೇಳಲಿ! (ಈ ಪರಭಾಷಾ ನಟರುಗಳು ಎ.ಬಿ.ಸಿ.ಡಿ.... ಅಂತಾನೋ ಮತ್ತೇನೋ ಹೇಳುತ್ತಾ ಶೂಟಿಂಗ್ ಮಾಡಿದ ಉದಾಹರಣೆಗಳೂ ಇವೆಯಂತೆ!). ಯಾಕೆ ಇವರುಗಳು ಹೀಗೆ ಜನರ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತಾ ದೊಣೇನಾಯಕರಾಗುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ!

ವಾದ ಮಾಡಲು ಸುಳ್ಳು ಮಾಹಿತಿ!

ಇನ್ನು ಡಬ್ಬಿಂಗ್ ಬೇಡ ಎನ್ನಲು "ಇಡೀ ಕನ್ನಡ ಭಾಷೆ, ನುಡಿ ಹಾಗೂ ಜನಾಂಗಗಳೇ ಅಪಾಯದಲ್ಲಿವೆ, ಡಬ್ಬಿಂಗ್ ಭೂತ ಬಂದರೆ ಇವೆಲ್ಲಾ ಸರ್ವನಾಶವಾಗುತ್ತದೆ" ಎಂದು ನಾಡನ್ನು ನಂಬಿಸಲು ಅನೇಕ ಅಂಕಿಅಂಶಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ಈ ಮಾಹಿತಿಗಳಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂದು ನೋಡಬೇಕಾಗಿದೆ. ಕರ್ನಾಟಕದ ಒಟ್ಟು ಜನಸಂಖ್ಯೆ ೨೦೧೧ರ ಜನಗಣತಿಯಂತೆ ಸುಮಾರು ಆರು ಕೋಟಿ ಹನ್ನೊಂದು ಲಕ್ಷದಷ್ಟಿದೆ. ೨೦೦೧ರ ಭಾಷಿಕ ಜನಾಂಗದ ಮಾಹಿತಿಯಂತೆ ಕರ್ನಾಟಕದಲ್ಲಿ ಕನ್ನಡಿಗರ ಒಟ್ಟು ಪ್ರಮಾಣ ನೂರಕ್ಕೆ ೬೬ರಷ್ಟು. ಇದು ಬರೀ ಕನ್ನಡವನ್ನು ತಾಯ್ನುಡಿಯಾಗಿ ಹೊಂದಿರುವವರ ಸಂಖ್ಯೆ! ಇನ್ನು ತುಳು, ಕೊಡವ, ತೆಲುಗು, ತಮಿಳು, ಉರ್ದು ಮೊದಲಾದವುಗಳನ್ನು ತಾಯ್ನುಡಿಯೆಂದು ಜನಗಣತಿಯಲ್ಲಿ ಬರೆಸಿದ ಅದೆಷ್ಟೋ ಲಕ್ಷ ಕನ್ನಡಿಗರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಕರ್ನಾಟಕದಲ್ಲಿ ಇಂದು ಕನ್ನಡಿಗರ ಸಂಖ್ಯೆ ನೂರಕ್ಕೆ ೮೫ಕ್ಕಿಂತ ಹೆಚ್ಚಿದೆ ಅನ್ನಿಸೋಲ್ವಾ ಗುರೂ! ಹೋಗಲಿ ದಾಖಲಾತಿಗಳಂತೆ ನೋಡಿದರೂ ಕನ್ನಡಿಗರ ಸಂಖ್ಯೆ ನೂರಕ್ಕೆ ೭೦ರಷ್ಟಿದೆ. ಇಷ್ಟಕ್ಕೂ ಯಾವ ಹತ್ತೊಂಬತ್ತು ಜಿಲ್ಲೆಗಳಲ್ಲಿ ಪರಭಾಷಿಕರು ಬಹುಸಂಖ್ಯಾತರು ಎನ್ನುವುದನ್ನು ಇವರು ತಿಳಿಸಬಲ್ಲರೇ? ಯಾವ ಅಂಕಿಅಂಶದ ಆಧಾರದ ಮೇಲೆ ಇವರು ಹೇಳುತ್ತಿದ್ದಾರೆ? ನಿಜಕ್ಕೂ ಈ ಸುದ್ದಿಯ ಮಾಹಿತಿ ಮೂಲದ ಬಗ್ಗೆ ಕುತೂಹಲ ಉಂಟಾಗುತ್ತದೆ!!

ಇವರು ಹೇಳಿದ್ದೇ ನಿಜವಾದರೆ...

ಇವರು ಹೇಳಿದ್ದು ನಿಜವೆಂದೇ ಒಪ್ಪುವುದಾದರೆ ಕರ್ನಾಟಕದಲ್ಲಿ ಡಬ್ಬಿಂಗ್ ಬರುವುದರಿಂದ ಏನಾಗುತ್ತದೆ? ಪರಭಾಷಿಕರು ಕೂಡಾ ಕನ್ನಡದಲ್ಲಿ ನೋಡ್ತಾರೆ ಎನ್ನುವುದನ್ನು ಇವರಂತೂ ಒಪ್ಪುವುದಿಲ್ಲಾ! ಆದರೆ ಕಡೇಪಕ್ಷ ಕನ್ನಡಿಗರು ಪರಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆಯನ್ನು ಡಬ್ಬಿಂಗ್ ತಪ್ಪಿಸುವುದಿಲ್ಲವೇ? ನೀವುಗಳು "ಕನ್ನಡಿಗರು ಬೇರೆ ಭಾಷೆ ಕಲಿಯೋದನ್ನು  ತಪ್ಪಿಸುತ್ತಿದ್ದೀರಿ" ಎಂದು ಸುಲಭವಾಗಿ ಈ ಜನ ಆರೋಪಿಸುತ್ತಾರೆ. ಆದರೆ ಇಲ್ಲಿ ಯಾರು ತಾನೇ ಬೇರೆ ಭಾಷೆ ಕಲಿಯಬೇಡಿ ಎನ್ನುತ್ತಿದ್ದಾರೆ? ಒಂದೊಳ್ಳೆ ಬೇರೆ ಭಾಷೆಯ ಸಿನಿಮಾ ನೋಡಿ ಅರ್ಥಮಾಡಿಕೊಳ್ಳಬೇಕೆಂದರೆ ಪರಭಾಷೆ ಕಲಿಯಲೇಬೇಕೆನ್ನುವ ಅನಿವಾರ್ಯತೆಯನ್ನು ಹುಟ್ಟುಹಾಕಿರುವುದು ಯಾರು? ಇದಕ್ಕೆ ಕಾರಣ ಕನ್ನಡದಲ್ಲಿ ಡಬ್ಬಿಂಗ್ ಇಲ್ಲದಿರುವುದೇ ಅಲ್ಲವೇ? ಇವರಂದದ್ದು ನಿಜವೇ ಆಗಿದ್ದಲ್ಲಿ, ತಮ್ಮದೇ ನೆಲದಲ್ಲಿ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಕನ್ನಡ ಉಳಿಸಿಕೊಳ್ಳಲು ಡಬ್ಬಿಂಗ್ ಪೂರಕವೇ ಅಲ್ಲವೇ? ಇಲ್ಲಾ ಕನ್ನಡಿಗರು ಡಬ್ಬಿಂಗ್ ನೋಡಲ್ಲಾ ಅನ್ನೋದಾದರೆ ಅದನ್ನು ತೀರ್ಮಾನಿಸಬೇಕಿರೋದು ಯಾರು? ಜನರು ಮಾರುಕಟ್ಟೆಯಲ್ಲಿ ಡಬ್ ಆದ ಸಿನಿಮಾಗಳನ್ನು ನೋಡಿ ಗೆಲ್ಲಿಸುವ ಮೂಲಕ ಅಥವಾ ನೋಡದೆ ಸೋಲಿಸುವ ಮೂಲಕ ತೀರ್ಮಾನಿಸಬೇಕಲ್ಲವೇ? ಒಟ್ಟಾರೆ ಡಬ್ಬಿಂಗ್ ಬೇಡವೆನ್ನುವ ಇವರ ವಾದ ಪೊಳ್ಳೋ, ಗಟ್ಟಿಯೋ ಎನ್ನುವುದನ್ನು ಜನರು ಅರಿಯಲಾರರೇ?!

ಡಬ್ಬಿಂಗ್ ವಿರೋಧಿ ವಾದಗಳ ಪೊಳ್ಳುತನ!


ಕರ್ನಾಟಕ ಕೈಗಾರಿಕೆ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಿನ್ನೆ "ಡಬ್ಬಿಂಗ್ ಕನ್ನಡಕ್ಕೆ ಪೂರಕವೋ ಮಾತಕವೋ" ಕುರಿತ ಸಂವಾದವೊಂದನ್ನು ಏರ್ಪಡಿಸಿತ್ತೆಂದೂ ಅದರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಇಬ್ಬರು ಗಣ್ಯರು ಮಾತನ್ನಾಡಿದ್ದನ್ನು ಇಂದಿನ (೦೭.೦೧.೨೦೧೩) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ನಿಜಕ್ಕೂ ಡಬ್ಬಿಂಗ್ ವಿರೋಧಿಸುವ ಒಂದು ಲಾಬಿ, ಇಡೀ ಸಮಾಜವನ್ನು ಸ್ವಾರ್ಥಕ್ಕೆ ತಪ್ಪುದಾರಿಗೆ ಎಳೆಯುತ್ತಿದೆಯೇನೋ ಎನ್ನುವಂತೆ ಇವರ ಮಾತುಗಳಿವೆ!

ಕರುಳಿಗೇ ಕೈಯಿಕ್ಕೋರು...

ಯಾವ ಕಾರಣಕ್ಕೆ ಡಬ್ಬಿಂಗ್ ಬೇಡ ಎಂದು ವಾದ ಮಂಡಿಸುವಾಗ ಇವರು ತೀರಾ ಕನ್ನಡಿಗರ ಕರುಳಬಳ್ಳಿಗೇ ಕೈಯಿಕ್ಕಿದ್ದಾರೆ. ‘ಕನ್ನಡ ತಾಯಿಯನ್ನು ಒಂದು ಉತ್ಪಾದನಾ ವಸ್ತುವಾಗಿ ಕಾಣುಲಾಗುತ್ತಿದೆ’ ಎನ್ನುವ ಮಾತುಗಳನ್ನು ಕೇಳಿದಾಗ ಚಿತ್ರರಂಗದವರು ಮಾಡುತ್ತಿರುವುದೂ ಅದನ್ನೇ ಅಲ್ಲವೇ ಅನ್ನಿಸುತ್ತದೆ. ಪಕ್ಕಾ ಭಾವನಾತ್ಮಕವಾಗಿರುವ ಇವರ ಹೇಳಿಕೆ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಡಬ್ಬಿಂಗ್ ಬರುವುದನ್ನು ತಳುಕು ಹಾಕುವಲ್ಲಿಗೆ ಬಂದು ನಿಂತಿದೆ. ಈ ಮಾತನ್ನೇ ನೋಡಿದರೆ ಕನ್ನಡ ಶಾಲೆಗಳನ್ನು ಮುಚ್ಚುವುದು ಎಷ್ಟರಮಟ್ಟಿಗೆ ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಒಯ್ಯುತ್ತದೆಯೋ... ಡಬ್ಬಿಂಗ್ ಇಲ್ಲದೆ ಪರಭಾಷಾ ಕಾರ್ಯಕ್ರಮಗಳನ್ನು ಪರಭಾಷೆಗಳಲ್ಲೇ ನೋಡಬೇಕಾದ ಅನಿವಾರ್ಯತೆ ಹುಟ್ಟುಹಾಕುತ್ತಿರುವುದೂ ಕೂಡಾ ಅಷ್ಟೇ ದೂರಕ್ಕೆ ಒಯ್ಯುತ್ತಿರುವುದು ಕಾಣುತ್ತದೆ. ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಮೇಲೆ ಭಾರಿ ಹೊಡೆತ ಬೀಳಲಿದೆ ಎನ್ನುವ ಇವರು ಹೇಗೆ ಬೀಳುತ್ತದೆ ಎನ್ನುವುದನ್ನೂ ವಿವರಿಸಬೇಕಿತ್ತು! ಚಿತ್ರರಂಗವೊಂದು ಸಂಸ್ಕೃತಿಗೆ ಕನ್ನಡಿಯಾಗಬಲ್ಲದೇ ಹೊರತು ಅದೇ ಒಂದು ನಾಡಿನ ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದನ್ನು ನಂಬಲಿಕ್ಕಾಗದು. ಹಾಗಿದ್ದಿದ್ದರೆ ಬರೀ ಇಂಥದ್ದೇ ಸಿನಿಮಾಗಳನ್ನು ತೆಗೆದು ಕನ್ನಡನಾಡಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿಬಿಡುವ ಕಾಂಟ್ರಾಕ್ಟನ್ನು ಚಿತ್ರರಂಗಕ್ಕೆ ಕೊಟ್ಟುಬಿಡಬಹುದಿತ್ತು!

ಡಬ್ಬಿಂಗ್ ಪರರು ಕನ್ನಡ ದೂಶಿಸುವವರೆನ್ನುವ ಆರೋಪ!

ಇದುವರೆಗೆ ದಿನದಿಂದ ದಿನಕ್ಕೆ ಡಬ್ಬಿಂಗ್ ಬಂದರೆ ಬೀದಿಗೆ ಬೀಳುತ್ತಾರೆನ್ನುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನೀವು ಗಮನಿಸಿರಬಹುದು! ಮೊದಲೆಲ್ಲಾ ನಾಲ್ಕೈದು ಸಾವಿರ ಎನ್ನುತ್ತಿದ್ದವರು ಇದೀಗ ಎಪ್ಪತ್ತೈದು ಸಾವಿರದವರೆಗೆ ತಂದು ನಿಲ್ಲಿಸಿದ್ದಾರೆ! ಇನ್ನೇನು ಲಕ್ಷದ ಗಡಿ ಮುಟ್ಟೋ ತವಕದಲ್ಲಿದ್ದಾರೆ. ಇರಲಿ! ವಾಸ್ತವವಾಗಿ ಇವರ ಮಾತುಗಳನ್ನು ಕೇಳಿದರೆ ಡಬ್ಬಿಂಗ್ ಬರುವುದರಿಂದ ಇನ್ಮುಂದೆ ಕನ್ನಡದಲ್ಲಿ ಚಿತ್ರೋದ್ಯಮದ ಚಟುವಟಿಕೆಗಳೆಲ್ಲಾ ಸಂಪೂರ್ಣವಾಗಿ ನಿಂತುಹೋಗೇ ಬಿಡುತ್ತದೆನ್ನುವ ಅನಿಸಿಕೆ ಹರಿಯ ಬಿಡುತ್ತಿದ್ದಾರೆ ಎನ್ನಿಸಿಬಿಡುತ್ತದೆ! ಹೌದಾ? ಕನ್ನಡ ಚಿತ್ರರಂಗ ಮತ್ತು ದೂರದರ್ಶನಗಳಲ್ಲಿ ಮೂಲಚಿತ್ರ ತೆಗೆಯುವವರು ಮಾಯವಾಗಿಬಿಡುತ್ತಾರೆ ಎನ್ನುವ ಅನಿಸಿಕೆ ಸರಿಯೇ? ಜಗತ್ತಿನ ಯಾವುದೇ ಭಾಗವಾದರೂ ಭಾಷೆ ಅನ್ನ ಉದ್ಯೋಗ ಸಂಸ್ಕೃತಿಗಳು ಆರೋಗ್ಯದಿಂದರಬೇಕು ಎಂದು ಹೇಳಿ ಡಬ್ಬಿಂಗ್ ಬಂದರೆ ಇವೆಲ್ಲಾ ನಾಶವಾಗುತ್ತದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಇದೂ ಕೂಡಾ ಜನರಲ್ಲಿ ಭೀತಿ ಹುಟ್ಟಿಸಿ ಬೆಂಬಲ ಗಿಟ್ಟಿಸಿಕೊಳ್ಳುವ ತಂತ್ರವಾಗೇ ಜನಕ್ಕೆ ಕಂಡರೆ ಅಚ್ಚರಿಯೇನಿಲ್ಲಾ! ನಿಜವಾಗಿಯೂ ಕನ್ನಡ ಚಿತ್ರರಂಗ/ ದೃಶ್ಯ ಮಾಧ್ಯಮ ಡಬ್ಬಿಂಗನ್ನು ತಮ್ಮ ವೈಫಲ್ಯಕ್ಕೆ ನೆಪವಾಗಿಸಿಕೊಳ್ಳದೆ, ಸವಾಲಾಗಿ ಪರಿಗಣಿಸಿ ಉತ್ತಮ ಕಾರ್ಯಕ್ರಮಗಳನ್ನು ನೀಡಲಿ ಎನ್ನುವ ಅನಿಸಿಕೆಯನ್ನು ತಿರುಚಿ "ಡಬ್ಬಿಂಗ್ ಪರರು ಕನ್ನಡ ಕಾರ್ಯಕ್ರಮ ಕಳಪೆ ಎನ್ನುತ್ತಾರೆ" ಎಂದು ದೂಶಿಸುತ್ತಿದ್ದಾರೇನೋ ಎನ್ನಿಸುತ್ತದೆ.

ಜನರ ಬೇಕು ಬೇಡ ಇಲ್ಲಿ ಲೆಕ್ಕಕ್ಕೇ ಇಲ್ಲವೇ?

ಇಷ್ಟೆಲ್ಲಾ ವಾದಿಸುವ ಮಂದಿ, ಪ್ರಜಾಪ್ರಭುತ್ವದ ಪರವಾದಿಗಳು ಎನ್ನುವ ಮಂದಿ... ನಿಜಕ್ಕೂ ಸ್ವಲ್ಪ ತಾಳ್ಮೆಯಿಂದ ಯೋಚಿಸಿದರೆ ನಿಜವಾಗಲೂ ಜನರ ಆಯ್ಕೆ ಸ್ವಾತಂತ್ರವನ್ನು ತಾವು ಕಿತ್ತುಕೊಳ್ಳುವುದರ ಪರವಾಗಿ ಮಾತಾಡುತ್ತಿದ್ದೇವೆ ಎನ್ನುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಇಡೀ ಒಂದು ಜನಾಂಗದ ಆಯ್ಕೆ ಸ್ವಾತಂತ್ರವನ್ನು ತಮ್ಮ ನಯಗಾರಿಕೆಯ ಮಾತುಗಳಿಂದ ಕಿತ್ತುಕೊಳ್ಳುತ್ತಿರುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಡಬ್ಬಿಂಗಿನಿಂದಾಗಿ ಯಾವ ಭಾಷೆ, ಯಾವ ಸಂಸ್ಕೃತಿ ನಾಶವಾಗಿದೆ ಎನ್ನುವುದನ್ನು ಜನರು ಕಂಡುಕೊಳ್ಳಬಲ್ಲರು ಎನ್ನುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಯಾವುದನ್ನು ಇಡೀ ಜನರು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ತೀರ್ಮಾನಿಸಬೇಕಾಗಿದೆಯೋ ಅದನ್ನು ನಿಶೇಧದ ಮೂಲಕ, ಯಾವುದಾದರೂ ದಾರಿಯ ಮೂಲಕ ತಡೆಯುವುದು ಮತ್ತು ತಡೆಯುವುದನ್ನು ಉತ್ತೇಜಿಸುವುದು, ಸಮರ್ಥಿಸುವುದು ಹೆಚ್ಚು ಕಾಲ ನಡೆಯದು ಮತ್ತು ಜನರ ಹಕ್ಕುಗಳನ್ನು ಸದಾಕಾಲ ದಮನ ಮಾಡುವುದು ಅಸಾಧ್ಯ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ!!

ಡಬ್ಬಿಂಗ್: ಇದು ಕನ್ನಡಪರ ಹೇಗೆ?



ಡಬ್ಬಿಂಗ್ ವಿಷಯಕ್ಕೆ ಬಂದಾಗ ಚಿತ್ರರಂಗದ ಕೆಲವರು ಡಬ್ಬಿಂಗ್ ಬೇಕೆನ್ನೋದು ಕನ್ನಡ ವಿರೋಧಿ ನಿಲುವು ಎಂಬ ಮಾತನ್ನಾಡುತ್ತಾರೆ. ಡಬ್ಬಿಂಗ್ ಒಂದು ಭೂತವೆಂದೂ, ಅದು ಕನ್ನಡದ್ರೋಹವೆಂದೂ, ಕನ್ನಡ ಚಿತ್ರರಂಗಕ್ಕೆ ಮಾರಕವಾಗೋ ಮೂಲಕ ಕನ್ನಡತನವನ್ನು ನಾಶಮಾಡುತ್ತದೆಂದೂ, ಸಾವಿರಾರು ಕನ್ನಡಿಗರು ಬೀದಿಪಾಲಾಗುತ್ತಾರೆಂದೂ ಹೇಳಲಾಗುತ್ತದೆ. ಈ ಮಾತನ್ನು ಸಾಣೆ ಹಿಡಿಯದೆ ಕೇಳಿದಾಗ ಹೌದಪ್ಪಾ! ಕನ್ನಡ ಉಳಿಬೇಕೆಂದರೆ ಕನ್ನಡ ಚಿತ್ರರಂಗಕ್ಕೆ ಯಾವ ತೊಂದರೇನೂ ಆಗಬಾರದು ಎಂದು ಜನರು ಅಂದುಕೊಳ್ಳೋದು ಕೂಡಾ ಸಹಜ. ವಾಸ್ತವವಾಗಿ ಡಬ್ಬಿಂಗ್ ಪರ ಮಾತಾಡುತ್ತಿರುವವರಿಗೆ ಚಿತ್ರರಂಗದ ಬಗ್ಗೆಯಾಗಲೀ, ಅಲ್ಲಿನ ಯಾವುದೇ ಕಲಾವಿದರ ಬಗ್ಗೆಯಾಗಲೀ ದ್ವೇಷವಿದೆ ಎನ್ನುವ ಅಪಪ್ರಚಾರವೂ ಇದೆ. ಆದರೆ ಇಲ್ಲಿರುವುದು ಕನ್ನಡ ಚಿತ್ರರಂಗವನ್ನೂ ಒಳಗೊಂಡಂತೆ ಕನ್ನಡದ ಮೇಲಿರುವ ಕಾಳಜಿಯೊಂದೇ. ಇರಲಿ... ಈಗ ಡಬ್ಬಿಂಗ್ ಕನ್ನಡಪರಾನೋ ಅಲ್ವೋ ಅನ್ನೋದನ್ನು ನೋಡೋಣ.

ಡಬ್ಬಿಂಗ್ ಕನ್ನಡಕ್ಕೆ ಮಾರಕವೇ?

ಈ ಪ್ರಶ್ನೆ ನಿಜಕ್ಕೂ ನಾವು ಕೇಳಿಕೊಳ್ಳಬೇಕಾಗಿದೆ. ಸಾಮಾನ್ಯ ಕನ್ನಡಿಗನನ್ನು ಕಾಡುವುದು "ಕನ್ನಡನಾಡಲ್ಲಿ ಪರಭಾಷೆಯ ಚಿತ್ರಗಳೆಲ್ಲಾ ಡಬ್ ಆಗಿ ಬಂದುಬಿಟ್ಟರೆ, ನಾವು ನಾಳೆ ಚಿರಂಜೀವಿ, ಸೂರ್ಯ, ವಿಕ್ರಂ, ಮೋಹನ್‍ಲಾಲ್, ಮುಮ್ಮುಟ್ಟಿ, ಮಹೇಶ್ ಬಾಬು, ಜೂ. ಎನ್‌ಟಿಆರ್... ಹೀಗೆ ಕನ್ನಡದವರಲ್ಲದವರ ಕಟೌಟ್‌ಗಳನ್ನು ನಮ್ಮೂರಲ್ಲಿ ನೋಡಬೇಕಾಗುತ್ತದೆ" ಎನ್ನುವ ಭೀತಿ. "ಡಬ್ಬಿಂಗ್‌ನಿಂದ ಕನ್ನಡ ಚಿತ್ರರಂಗ ಬಾಗಿಲು ಹಾಕಬೇಕಾಗುತ್ತೆ, ಆಮೇಲೆ ಚಲನಚಿತ್ರ ಎಂಬ ಕ್ಷೇತ್ರದಲ್ಲಿ ಕನ್ನಡ ಅಳಿಸಿಹೋಗುತ್ತದೆ" ಎನ್ನುವ ಆತಂಕ, ಡಬ್ಬಿಂಗನ್ನು ವಿರೋಧಿಸುವ ಸಾಮಾನ್ಯ ಜನರಲ್ಲಿರುವ ಕಾಳಜಿಯಾಗಿದೆ. ಪ್ರಪಂಚದ ಎಲ್ಲಾದರೂ ಈ ರೀತಿ ಆದದ್ದಿದೆಯೇ? ಡಬ್ಬಿಂಗ್ ಬಂದುಬಿಟ್ಟರೆ ಕನ್ನಡದಲ್ಲಿ ಚಿತ್ರಗಳನ್ನು ತೆಗೆಯುವವರೇ ಇರುವುದಿಲ್ಲವೇ?   ಎನ್ನುವುದನ್ನು ನೋಡಿದರೆ ಈ ಆತಂಕಕ್ಕೆ ಸಮಾಧಾನ ಸಿಗುತ್ತದೆ. ಯಾವುದೇ ನಾಡಲ್ಲಿ ಡಬ್ಬಿಂಗ್ ಆದ ಚಿತ್ರಗಳೆಲ್ಲಾ ಯಶಸ್ಸು ಗಳಿಸುತ್ತವೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲಾ. ಅದರಂತೆಯೇ ಡಬ್ಬಿಂಗ್ ಒಪ್ಪಿದ ಕಾರಣಕ್ಕೇ... ಒಂದಿಡೀ ಚಿತ್ರರಂಗವೇ ಮುಳುಗಿಹೋಗಿರುವ ಉದಾಹರಣೆಯೂ ಇಲ್ಲ. ವಾದಕ್ಕೆ ಮರಾಠಿ ಚಿತ್ರೋದ್ಯಮ ಡಬ್ಬಿಂಗ್‌ನಿಂದಾಗಿ ಮುಳುಗುತ್ತಿದೆ ಎನ್ನುವವರಿದ್ದಾರೆ. ಆದರೆ ಮರಾಠಿ ಚಿತ್ರರಂಗದ ದುಸ್ಥಿತಿಗೆ ಕಾರಣ ಆ ಜನರು ಹಿಂದೀಯನ್ನು ಒಪ್ಪಿದ್ದೇ ಆಗಿದೆ. ಮೊದಲಿನಿಂದಲೇ ಆ ಚಿತ್ರೋದ್ಯಮ ಸಾಗಿಬಂದ ದಾರಿಯನ್ನು ನೋಡಿದರೆ, ಇಡೀ ಮಹಾರಾಷ್ಟ್ರದ ಹೃದಯಭಾಗವಾದ ಮುಂಬೈಯಲ್ಲೇ ಮರಾಠಿಗೆ ಇರುವ ಪರಿಸ್ಥಿತಿ ನೋಡಿದರೆ, ಮುಂಬೈಯಲ್ಲಿನ ಅನಿಯಂತ್ರಿತ ವಲಸೆ ನೋಡಿದರೆ, ಮರಾಠಿ ನೆಲೆದಲ್ಲಿ ನೆಲೆ ನಿಂತು ಸೊಂಪಾಗಿ ಬೆಳೆದಿರುವ ಬಾಲಿವುಡ್ ಚಿತ್ರೋದ್ಯಮವನ್ನು ನೋಡಿದರೆ... ಮರಾಠಿ ಚಿತ್ರರಂಗ ಸೊರಗಲು ಇವು ಕಾರಣಗಳೇ ಹೊರತು ಡಬ್ಬಿಂಗ್ ಅಲ್ಲಾ ಎನ್ನುವುದು ಅರಿವಾಗುತ್ತದೆ! ಇಷ್ಟಕ್ಕೂ ಡಬ್ಬಿಂಗ್ ಇರುವ ಆಂಧ್ರ, ತಮಿಳುನಾಡುಗಳಿಗೆ ಏನಾಗಿವೆ? ನಮಗಿಂತಲೂ ಚಿಕ್ಕರಾಜ್ಯ ಕೇರಳಕ್ಕೆ ಏನಾಗಿದೆ? ಇದನ್ನೆಲ್ಲಾ ಯೋಚಿಸಿದರೆ ಡಬ್ಬಿಂಗ್ ಕನ್ನಡ ಚಿತ್ರೋದ್ಯಮವನ್ನು ನಿರ್ನಾಮ ಮಾಡುತ್ತದೆ ಎನ್ನುವುದನ್ನು ನಂಬಲಾಗುವುದೇ?

ಚಿತ್ರರಂಗದವರ ಪೊಳ್ಳು ವಾದ!

ಎಗ್ಗುಸಿಗ್ಗಿಲ್ಲದೆ ರಿಮೇಕ್ ಮಾಡೋ ಚಿತ್ರರಂಗದವರಿಗೆ ಡಬ್ಬಿಂಗ್ ಕನ್ನಡದ ಮೇಲೆ ಸಾಂಸ್ಕೃತಿಕ ದಾಳಿಯನ್ನು ಮಾಡುತ್ತೆ ಎನ್ನುವ ನೈತಿಕತೆ ಇದೆಯೇ? ರಿಮೇಕ್ ಮಾಡೋದ್ರಿಂದ ಕಾರ್ಮಿಕರಿಗೆ ಕೆಲಸ ಸಿಗುತ್ತೆ ಅನ್ನುವವರು ರಿಮೇಕಿನಿಂದಾಗಿ ಕನ್ನಡದ ಕಥೆಗಾರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಏನೆನ್ನುತ್ತಾರೆ? ಏಕೆ ಕನ್ನಡದ ಕಲಾವಿದರನ್ನು ಬಿಟ್ಟು ಹೊರನಾಡಿನಿಂದ ಕಲಾವಿದರನ್ನು ಆಮದು ಮಾಡಿಕೊಳ್ಳಲಾಗುತ್ತದೆ? ನಮ್ಮಲ್ಲಿ ನಾಯಕಿಯರಿಲ್ಲಾ, ಈ ಪಾತ್ರಕ್ಕೆ ಅವರೇ ಸೂಕ್ತ, ಈ ಹಾಡಿಗೆ ಅವರದೇ ದನಿ ಸರಿ... ಹೀಗೆ ಸಮರ್ಥನೆಗಳ ಸುರಿಮಳೆ ಸುರಿಸುವಾಗ ಕನ್ನಡದ ಕಲಾವಿದರ ಕೆಲಸದ ಕಾಳಜಿ ಎಲ್ಲಿ ಮರೆಯಾಗುತ್ತದೆ? ಕನ್ನಡ ಚಿತ್ರವೊಂದಕ್ಕೆ ಪರಭಾಷೆಯ ನಟನಟಿಯರನ್ನು, ತಂತ್ರಜ್ಞರನ್ನು, ಹಾಡುಗಾರರನ್ನು, ಕಥೆಗಾರರನ್ನು ಕೈ ಹಿಡಿದು ತರುವಾಗ ಕನ್ನಡನೆಲದ ಕಲಾವಿದರ ಬಗ್ಗೆ ಕಾಳಜಿ ಎಲ್ಲಿ ಹೋಗಿರುತ್ತದೆ? ಚಿತ್ರರಂಗದ ಕೆಲವರ ಇಂಥಾ ನಿಲುವಿನ ಹಿಂದಿರೋದು ಯಾವ ರೀತಿಯಲ್ಲಿ ಕನ್ನಡಪರ ಮನಸ್ಸು ಎಂಬುದನ್ನು ಜನರು ಅರ್ಥಮಾಡ್ಕೊಳ್ಳಬಲ್ಲರು. ಇಷ್ಟಕ್ಕೂ ಸ್ವಂತಿಕೆಯ ಗುಣಮಟ್ಟದ ನಿರ್ದೇಶಕರೊಬ್ಬರು ಕನ್ನಡದಲ್ಲಿ ಸಿನಿಮಾ ತೆಗೆಯೋದನ್ನು ನಿಲ್ಲಿಸಿಬಿಡುತ್ತಾರೆ ಎನ್ನುವುದನ್ನು ಹೇಗೆ ನಂಬುವುದು? ನಮ್ಮ ಚಿತ್ರರಂಗದಲ್ಲಿ ಹುಳುಕಿದೆ, ಆದರೆ ಅದಕ್ಕಾಗಿ ನೆರೆಮನೆಯ ಮಾರಿಯನ್ನು ತರುವುದು ಸರಿಯಲ್ಲಾ ಎನ್ನುವ ಮಾತನ್ನು ಡಬ್ಬಿಂಗ್ ಬೇಡವೆನ್ನುವವರು ಹೇಳುತ್ತಾರೆ. ವಾಸ್ತವವಾಗಿ ಡಬ್ಬಿಂಗ್ ಕಾರ್ಯಕ್ರಮಗಳು ಬಂದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹೆಚ್ಚುವುದೇ ಹೊರತು ಕುಗ್ಗುವುದಿಲ್ಲಾ!

ಡಬ್ಬಿಂಗ್ ಕನ್ನಡದ ಪ್ರೇಕ್ಷಕರನ್ನು ಹುಟ್ಟುಹಾಕುತ್ತದೆ!

ಇಷ್ಟಕ್ಕೂ ಕನ್ನಡವೆಂದರೆ ಚಿತ್ರರಂಗ ಮಾತ್ರಾನಾ? ಕನ್ನಡಿಗರ ಮನರಂಜನೆ ಎಂದರೆ ಅದು ಚಲನಚಿತ್ರಗಳು ಮಾತ್ರಾನಾ? ಅನಿವಾರ್ಯವಾಗಿ ಕಾರ್ಟೂನ್ ನೆಟ್‌ವರ್ಕ್, ಪೋಗೋ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಹಿಸ್ಟರಿ ಮೊದಲಾದ ವಾಹಿನಿಗಳನ್ನು ಕನ್ನಡದ ಮಕ್ಕಳು ಕನ್ನಡದಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಚಿಕ್ಕಂದಿನಿಂದಲೇ ಮನರಂಜನೆ ಕನ್ನಡದಲ್ಲಿ ಪಡೆದುಕೊಳ್ಳುವುದನ್ನು ಅರಿಯದ ಮಕ್ಕಳು, ನಾಳೆ ಕನ್ನಡ ಚಿತ್ರಗಳನ್ನು ಯಾಕಾದರೂ ನೋಡುತ್ತಾರೆ? ಕನ್ನಡದಿಂದ ಮುಂದಿನ ಪೀಳಿಗೆ ದೂರವಾದರೆ ನಾಳೆ ಅದ್ಭುತವಾದ ಕನ್ನಡ ಚಿತ್ರವನ್ನು ತೆಗೆದರೂ ನೋಡುವವರಾರೂ ಇರುವುದಿಲ್ಲಾ ಎನ್ನುವ ಅಪಾಯವನ್ನು ಗುರುತಿಸಬೇಕಾಗಿದೆ. ಇಂದು ಡಬ್ಬಿಂಗ್ ಬಂದರೆ ಕನ್ನಡದ ಮಕ್ಕಳು ಕನ್ನಡಕ್ಕೆ ಅಂಟಿಕೊಳ್ಳುತ್ತಾರೆ. ನಾಳೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರೂ ಇರುತ್ತಾರೆ.

ಡಬ್ಬಿಂಗ್ ವಿರೋಧದಿಂದ ಕುಗ್ಗುತ್ತಿರುವ ಕನ್ನಡದ ಮನರಂಜನೆ

ಚಿತ್ರರಂಗ ಈಗಿರೋ ಡಬ್ಬಿಂಗ್ ವಿರೋಧಿ ನಿಲುವಿನಿಂದಾಗೇ ಮುಳುಗಿಹೋಗುತ್ತಿರುವುದು ಕಾಣುತ್ತಿದೆ. ಕರ್ನಾಟಕದ ಗಡಿ ಊರುಗಳಲ್ಲಿ ಮಾತ್ರಾ ತೆರೆಕಾಣುತ್ತಿದ್ದ ಪರಭಾಷಾ ಚಿತ್ರಗಳು ಇಂದು ಒಳ ನಾಡುಗಳ ಹಳ್ಳಿ ಹಳ್ಳಿಗಳಲ್ಲಿ ತೆರೆಕಾಣುತ್ತಿದೆ. ಇಂತಿಷ್ಟೇ ಕೇಂದ್ರದಲ್ಲಿ, ಇಂತಿಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು ಎನ್ನೋ ನಿಯಮ ಇಂದು ಅಳಿದುಹೋಗಿ ಪರಭಾಷಾಚಿತ್ರಗಳು ಇನ್ನೂರು ಮುನ್ನೂರು ಕೇಂದ್ರಗಳಲ್ಲಿ ತೆರೆಕಾಣುತ್ತಿದೆ. ಇದನ್ನು ತಪ್ಪಿಸದೇ ಹೋದರೆ... ನಮ್ಮದು ಚಿಕ್ಕ ಮಾರುಕಟ್ಟೆ ಅವರೊಡನೆ ಸ್ಪರ್ಧೆ ಅಸಾಧ್ಯ ಎಂದುಕೊಳ್ಳುತ್ತಾ ಹೋದರೆ... ನಾಳೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಬರೀ ಪರಭಾಷೆಯ ಚಿತ್ರಗಳೇ ರಾರಾಜಿಸುತ್ತವೆ.

ಈ ಹಿನ್ನೆಲೆಯಲ್ಲಿ ನಾವು ನೋಡಿದರೆ ಕರ್ನಾಟಕದ ತುಂಬೆಲ್ಲಾ ಪರಭಾಷಾ ಚಿತ್ರಗಳು ತೆರೆಕಾಣುತ್ತಾ ಕನ್ನಡಿಗರು ಮನರಂಜನೆಗಾಗಿ ಪರಭಾಷಾ ಚಿತ್ರಗಳನ್ನೇ ಅವಲಂಬಿಸುವುದು ಒಳಿತೋ? ಅಥವಾ ಡಬ್ಬಿಂಗ್ ಆದ ಚಿತ್ರಗಳು ಇರುವ ಕಾರಣದಿಂದಾಗಿ ಎನ್‌ಟಿಆರೋ, ಮಹೇಶ್ ಬಾಬೂನೋ ಯಾರಾದರೇನು.. ಕನ್ನಡದಲ್ಲಿ ಮನರಂಜನೆ ಸಿಗುತ್ತದೆಯೆನ್ನುವುದು ಒಳಿತೋ? ಇದರರ್ಥ ಪರಭಾಷಾ ನಟರು ಇಲ್ಲಿ ಗೆಲ್ಲುತ್ತಾರೆ ಎನ್ನುವುದಕ್ಕಾಗುವುದಿಲ್ಲ, ಏನೆಂದರೂ ಕನ್ನಡಿಗರಿಗೆ ಕನ್ನಡದ ನಟರೇ ಪ್ರಿಯರು! ಇದಕ್ಕೂ ನಾವು ನೆರೆಯ ನಾಡುಗಳನ್ನು ನೋಡಿದರೆ ಸಾಕು. ಎಂದಿಗೂ ಆಂಧ್ರಕ್ಕೆ ಸೂಪರ್‌ಸ್ಟಾರ್ ಚಿರಂಜೀವಿಯೇ, ತಮಿಳುನಾಡಿಗೆ ರಜನಿಕಾಂತೇ... ಡಬ್ಬಿಂಗ್ ಇದ್ದರೂ ಅವರು ಇಲ್ಲಿ, ಇವರು ಅಲ್ಲಿ ಸೂಪರ್‌ಸ್ಟಾರ್ ಆಗಲು ಸಾಧ್ಯವಾಗಿಲ್ಲ! ಇವೆಲ್ಲಾ ಮಾತಾಡಿದರೆ ಆ ಮಾರುಕಟ್ಟೆ ದೊಡ್ಡದು, ಆ ಜನರು ಸ್ವಾಭಿಮಾನಿಗಳು, ಕನ್ನಡದವರು ನಿರಭಿಮಾನಿಗಳು, ಹಾಗಾಗಿ ಇಲ್ಲಿ ಡಬ್ಬಿಂಗ್ ಬಂದರೆ ಎಲ್ಲಾ ಮುಳುಗುತ್ತದೆ ಎನ್ನುವ ಮಾತಾಡಿದರೆ ಅದನ್ನು ಒಪ್ಪಲಾಗುವುದೇ?

ಒಳ್ಳೆಯದನ್ನು ಜನರಿಂದ ತಪ್ಪಿಸಲು ಯಾರಿಗೂ ಆಗಲ್ಲಾ!

ಕೆಲವು ಬುದ್ಧಿವಂತರು "ಒಳ್ಳೇದು ಅಂದ್ರೆ ಯಾವುದು?" ಅನ್ನೋದನ್ನೇ ಜಿಜ್ಞಾಸೆ ಮಾಡ್ತಾರಲ್ಲಾ... ಹಾಗಲ್ಲದೆ ಜನರಲ್ಲಿ ಕುತೂಹಲ ಹುಟ್ಟುಹಾಕಲು ಯಶಸ್ವಿಯಾಗಿರುವ, ನೋಡಿದವರೆಲ್ಲಾ ಮೆಚ್ಚುತ್ತಿರುವ ಸಿನಿಮಾಗಳನ್ನು ಇಲ್ಲಿ ಒಳ್ಳೇದು ಎಂದು ಕರೆದು... ಇದನ್ನು ಜನರು ನೋಡೋದನ್ನು ತಪ್ಪಿಸಲು ಯಾವ ದೊಣೇನಾಯ್ಕನಿಂದಲೂ ಸಾಧ್ಯವಿಲ್ಲಾ ಅನ್ನೋ ಮೊದಲನೇ ಮಾತನ್ನು ಹೇಳಬೇಕಾಗಿದೆ. ಬಹುಶಃ ಇದನ್ನು ನಮ್ಮ ಚಿತ್ರರಂಗದೋರೂ ಒಪ್ತಾರೆ. ಕನ್ನಡದ ಕಲಾವಿದರು ಪರಭಾಷಾ ಸಿನಿಮಾದಲ್ಲಿ ಮಾಡೋದನ್ನೇ ತಪ್ಪೆಂದೆಣಿಸಿ, ಪರಭಾಷೆಯಲ್ಲಿ ಮಾಡದಿರುವುದೇ ಹೆಚ್ಚುಗಾರಿಕೆ ಎನ್ನುವುದು ಸರಿಯಲ್ಲಾ! ಕನ್ನಡದ ಕಲಾವಿದರು ಕನ್ನಡೇತರ ಚಿತ್ರರಂಗಕ್ಕೂ ಹೋಗಬೇಕು, ಅಲ್ಲೂ ಮೆರೆಯಬೇಕು, ಕನ್ನಡದ ಚಿತ್ರಗಳು ಪರಭಾಷೆಗೂ ಡಬ್ ಆಗಿ ಅಲ್ಲೂ ನಮ್ಮವರು ಮಿಂಚಬೇಕು... ಇದ್ಯಾವುದೂ ಕನ್ನಡವಿರೋಧಿಯಲ್ಲ! ವಾಸ್ತವವಾಗಿ ಕನ್ನಡ ಪ್ರೇಮದಿಂದ ನಾನು ಕನ್ನಡದಲ್ಲೇ ಇರ್ತೀನಿ, ಕನ್ನಡದೋರು ಪರಭಾಷೇಲಿ ಎಷ್ಟೇ ಉತ್ತಮವಾದ್ದು ಬಂದರೂ ನೋಡಬೇಡಿ ಅಥವಾ ಅದೇ ಭಾಷೇಲಿ ನೋಡಿ ಎನ್ನೋ ಮನಸ್ಥಿತಿಯೇ ಕನ್ನಡಕ್ಕೆ ಹಾನಿ ಮಾಡುವಂಥದ್ದು! ಅಭಿಮಾನಕ್ಕಾಗಿ ಕನ್ನಡ ಸಿನಿಮಾ ನೋಡಿ ಎನ್ನೋ ಮಾತಿನ ಮೋಡಿಗೆ, ಜನರನ್ನು ಪರಭಾಷೆಯಲ್ಲಿರುವ ಒಳ್ಳೆಯದನ್ನು ಪಡೆಯುವುದರಿಂದ ದೂರ ಮಾಡಲು ಆಗುವುದಿಲ್ಲಾ ಅನ್ನೋದನ್ನು ಇವರೂ ಅರಿತರೆ ಒಳ್ಳೇದು!

ಡಬ್ಬಿಂಗ್ ನಿಶೇಧ ಕನ್ನಡ ಉಳಿಸುತ್ತೆ ಅನ್ನೋದು ಹುಸಿಯಾಗ್ತಿದೆ!

ವಾಸ್ತವವಾಗಿ ಡಬ್ಬಿಂಗ್ ಸಿನಿಮಾ ಬಂದರೆ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇರಲ್ಲಾ ಎನ್ನೋದಕ್ಕೆ ಮೂಲಕಾರಣ ಕನ್ನಡದೋರು ಪರಭಾಷೆಯ ಚಿತ್ರಗಳನ್ನು ನೋಡದೆ ಬರೀ ಕನ್ನಡದಲ್ಲೇ ಚಿತ್ರಗಳನ್ನು ನೋಡ್ತಾರೆ ಎನ್ನೋ ನಂಬಿಕೆ. ಇದು ಹೀಗೇ ಇದ್ದ ಕಾಲವೂ ಇತ್ತು! ಹೆಚ್ಚಿನ ಸಾಮಾನ್ಯ ಕನ್ನಡಿಗರಾರೂ ಪರಭಾಷೆಯ ಚಿತ್ರಗಳನ್ನು ನೋಡಲ್ಲಾ ಎನ್ನೋ ಕಾಲವಿತ್ತು. ಆಗ ಪರಭಾಷೆಯವು ಕನ್ನಡಕ್ಕೆ ಡಬ್ ಆಗಿ ಬರಲು ಶುರುವಾಗಿದ್ದನ್ನು "ಇವೆಲ್ಲಾ ಕನ್ನಡದಲ್ಲೇ ಬಂದರೆ ಕನ್ನಡ ಸಿನಿಮಾ ನೋಡೋರಿರಲ್ಲಾ" ಎಂದುಕೊಂಡು ನಿಶೇಧ ನಿಶೇಧ ಎಂದು ಅನ್ನಿಸುತ್ತೆ. ಆರಂಭದಲ್ಲಿ ಭಾಷೆ ಬರಲ್ಲಾ ಅನ್ನೋ ಕಾರಣದಿಂದಾಗೇ ಜನರು ಪರಭಾಷೆ ಚಿತ್ರಗಳನ್ನು ನೋಡ್ತಿರಲಿಲ್ಲವಾದರೂ ಈಗಿನ ಪರಿಸ್ಥಿತಿ ಏನಾಗಿದೆ? ಕನ್ನಡದೋರು ಬೇರೆ ಭಾಷೆ ಚಿತ್ರಗಳನ್ನು ಅವವೇ ಭಾಷೇಲೇ ನೋಡಲು ಶುರು ಮಾಡಿದಾರೆ. ಇದರ ಅಪಾಯ ಚಿತ್ರರಂಗದೋರಿಗೆ ಕಾಣ್ತಾ ಇಲ್ಲಾ ಅನ್ನೋದು ದುರಂತ!! ಇತ್ತೀಚಿಗೆ ಇಂತಿಷ್ಟೇ ಪರಭಾಷಾ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗಬೇಕು ಎನ್ನೋ ನಿಯಮಾ ಬಿದ್ದು ಹೋಗಿ ಪರಭಾಷಾ ಚಿತ್ರಗಳು ಇಲ್ಲಿ ನೂರಿನ್ನೂರು ತೆರೆಗಳ ಲೆಕ್ಕದಲ್ಲಿ ಬಿಡುಗಡೆಯಾಗ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ನಾಳೆ ಕನ್ನಡ ಸಿನಿಮಾನ ಕನ್ನಡದೋರು ಕೂಡಾ ನೋಡುವ ಸಾಧ್ಯತೆಯಿರುವುದಿಲ್ಲ! ಬೇಕೋ ಬೇಡವೋ ಜನರು ಇವತ್ತೇ ಕನ್ನಡ ಚಿತ್ರಗಳನ್ನು ಬೇರೆ ಭಾಷೆ ಚಿತ್ರಗಳ ಜೊತೆ ಹೋಲಿಕೆ ಮಾಡ್ತಿದಾರೆ. ನಮ್ಮದು ಸಣ್ಣ ಮಾರುಕಟ್ಟೆ, ಕಮ್ಮಿ ಬಜೆಟ್ ಅಂತೆಲ್ಲಾ ಅತ್ಕೊಂಡರೆ ಜನರೇನು ಕ್ಯಾರೇ ಅನ್ನಲ್ಲಾ... ಕನ್ನಡನಾಡಲ್ಲೇ ತೆಲುಗು ಚಿತ್ರವೊಂದು ವಾರವೊಂದರಲ್ಲಿ ೪ ಕೋಟಿ ಸಂಪಾದನೆ ಮಾಡುತ್ತಿರುವ ಇಂಥಾ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಕನ್ನಡ ಪರವಾದ ಹೆಜ್ಜೆಯಾಗೋದರಲ್ಲಿ ಸಂದೇಹವಿಲ್ಲ.

ಡಬ್ಬಿಂಗ್ ಬೇಕು ಅನ್ನೋದೇ ಕನ್ನಡ ಪರ!

ಇಡೀ ನಾಡಿನ ಜನರಿಗೆ ತಮ್ಮ ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವುದನ್ನು ತಪ್ಪಿಸುತ್ತಿರುವುದು ಕನ್ನಡಪರ ಹೇಗಾಗುತ್ತದೆ? ಕನ್ನಡದ ಜನರು ಚಲನಚಿತ್ರ, ಟಿವಿ ಮೊದಲಾದ ಎಲ್ಲವನ್ನೂ ಕನ್ನಡದಲ್ಲೇ ನೋಡುವ ಅವಕಾಶ ಪಡೆದಾಗ ಸಹಜವಾಗಿಯೇ ಮೂಲ ಕನ್ನಡ ಚಿತ್ರಗಳ ಮಾರುಕಟ್ಟೆಯೂ ಹಬ್ಬುತ್ತದೆ. ರಿಮೇಕಿನ ಹಾವಳಿ ಕಡಿಮೆಯಾಗುತ್ತದೆ. ಡಬ್ ಆದ ಚಿತ್ರಗಳ ಗೆಲುವಿನ ಪ್ರಮಾಣ ಶುರುವಿನಲ್ಲಿ ಹೆಚ್ಚೇ ಇದ್ದರೂ ಕೆಲವೇ ಸಮಯದಲ್ಲಿ ಕಡಿಮೆಯಾಗುತ್ತದೆ. ಇಂದು ಡಬ್ಬಿಂಗ್‌ ಕನ್ನಡದ ಗುಣಮಟ್ಟ ಕೆಡಿಸುತ್ತದೆ ಎನ್ನುವುದು ನಾಳೆ ಅದರಲ್ಲಿಯೇ ಸ್ಪರ್ಧೆಯ ಕಾರಣದಿಂದ ಉತ್ತಮವಾಗಿ ಡಬ್ ಆಗಿ ಬರುವ ಸಾಧ್ಯತೆಯಿರುತ್ತದೆ. ಕನ್ನಡ ಚಿತ್ರರಂಗವು ಡಬ್ಬಿಂಗ್ ವಿರೋಧಿ ನೀತಿಯಿಂದ ನಿಧಾನವಾಗಿ ಪರಭಾಷಾ ಚಿತ್ರಗಳಿಗೆ ಜಾಗ ಖಾಲಿಮಾಡಿಕೊಟ್ಟು ಹೋಗುತ್ತಿರುವುದರ ಅಪಾಯ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರಾ ತಟ್ಟುವುದಿಲ್ಲ. ಅದು ಇಡೀ ಕನ್ನಡವನ್ನೇ ನುಂಗುತ್ತದೆ. ನಾಡಿನ ಕನ್ನಡಿಗರು ಪರಭಾಷೆಗಳಲ್ಲೇ ಮನರಂಜನೆ ಪಡೆದುಕೊಳ್ಳಲು ಶುರು ಮಾಡಿದರೆ ವಲಸಿಗರಿಗೆ ಈ ನಾಡು ಸ್ವರ್ಗವಾಗಿ ಬಿಡುತ್ತದೆ! ಕನ್ನಡವೆನ್ನುವುದು ಕನ್ನಡ ಚಿತ್ರರಂಗ ಎನ್ನುವುದಕ್ಕಿಂತಾ ಹಿರಿದು ಎನ್ನುವ ನೆಲೆಯಲ್ಲಿ ಯೋಚಿಸಿದರೂ ಡಬ್ಬಿಂಗ್ ನಮ್ಮ ನಾಡಿಗೆ ಅಗತ್ಯವೆನ್ನಿಸುತ್ತದೆ. ಇವೆಲ್ಲಾ ಬರೀ ಊಹೆ ಎನ್ನುವುದಾದರೆ ಕಣ್ಣ ಮುಂದೆ ಪ್ರಪಂಚದಲ್ಲಿ ಡಬ್ಬಿಂಗ್ ಇಟ್ಟುಕೊಂಡೂ ತಮ್ಮತನ ಉಳಿಸಿಕೊಂಡಿರುವ ನೂರಾರು ನಾಡುಗಳು ಕಾಣುತ್ತವೆ. ಬೇಡಪ್ಪಾ ನಮ್ಮ ಕನ್ನಡಿಗರು ನಿರಭಿಮಾನಿಗಳು, ಅವರಂತಲ್ಲಾ, ಇವರಂತಲ್ಲಾ ಎನ್ನುವುದಾದರೆ... ಕಡೇ ಪಕ್ಷ ಕನ್ನಡಿಗರಿಗೆ ಕನ್ನಡದಲ್ಲೇ ಮನರಂಜನೆ ದೊರೆಯಲು ಡಬ್ಬಿಂಗ್ ದೊಡ್ಡ ಸಾಧನವಾಗುತ್ತದೆ ಎಂಬುದನ್ನಂತೂ ಒಪ್ಪದೆ ಇರಲಾಗುತ್ತದೆಯೇ? ಈ ಎಲ್ಲವನ್ನೂ ನೋಡಿದಾಗ ಡಬ್ಬಿಂಗ್ ಕನ್ನಡಪರ ಎನ್ನುವುದು ಮನದಟ್ಟಾಗುತ್ತದೆ.

ಕನ್ನಡ ಟಿವಿಯಲ್ಲಿ ಪರಭಾಷಾ ಕಾರ್ಯಕ್ರಮ ಸರೀನಾ?



ಕನ್ನಡದ ಸುದ್ದಿವಾಹಿನಿ ಜನಶ್ರೀ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಶುರುಮಾಡಿದೆ. ಕನ್ನಡ ಚಿತ್ರೋದ್ಯಮ ಮತ್ತು ದೂರದರ್ಶನ ರಂಗದ ಜನರು ಹೇರುತ್ತಿರುವ "ಡಬ್ಬಿಂಗ್ ನಿಶೇಧ" ಎನ್ನುವ ಅಸಂವಿಧಾನಿಕ ಕ್ರಮವು ಕನ್ನಡಿಗರ ಬದುಕಿನ ಮೇಲೆ ಎಂಥಾ ಪರಿಣಾಮ ಬೀರಬಹುದು ಎನ್ನುವುದಕ್ಕೆ ಇದು ಮುನ್ನುಡಿ ಬರೆದ ಹಾಗಿದೆ. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿಟ್ಟುಕೊಂಡು ಸ್ವಾರ್ಥವಿಲ್ಲದೇ ಯೋಚಿಸಿ ನೋಡಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ.

ನಾಳೆ ಹೀಗಾಗಬಹುದು!

ಇವತ್ತು ಮಾಲ್ಗುಡಿ ಡೇಸ್ ಸರಣಿಯನ್ನು ಪ್ರಸಾರ ಮಾಡುವಾಗ ಹೇಳುತ್ತಿರುವುದು ಇದು ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ಶಂಕರ್‌ನಾಗ್ ತೆಗೆದಿರೋ, ಕನ್ನಡಿಗರೇ ಸಂಪೂರ್ಣವಾಗಿ ಆವರಿಸಿಕೊಂಡಿರೋ ಧಾರಾವಾಹಿ ಎಂಬುದಾಗಿ ಬಿಂಬಿಸುತ್ತಲೇ.  ಶಂಕರ್‌ನಾಗ್‌ರವರು ಗಳಿಸಿರುವ ಜನಪ್ರಿಯತೆಯನ್ನು ಬಳಸಿಕೊಂಡು ಇವತ್ತು ಜನಶ್ರೀಯಲ್ಲಿ ಮಾಲ್ಗುಡಿ ಡೇಸ್ ಶುರುವಾಗಿದೆ. ಆದರೆ ಕನ್ನಡದ ವಾಹಿನಿಯೊಂದರಲ್ಲಿ ಪರಭಾಷೆಯ ಧಾರಾವಾಹಿಯೊಂದು ಪ್ರಸಾರವಾಗುತ್ತಾ ಕನ್ನಡಿಗರನ್ನೆಲ್ಲಾ ತನ್ನ ಮುಂದೆ ಕೂರಿಸಿಕೊಳ್ಳುತ್ತಿರುವುದು ನಾಳೆ ಏನೆಲ್ಲಾ ಆಗಲು ಕಾರಣವಾಗಬಹುದು ಎಂದು ನೋಡೋಣ.

ಇವತ್ತು ಮಾಲ್ಗುಡಿ ಡೇಸ್ ಎನ್ನುವ ಹಿಂದೀ ಧಾರಾವಾಹಿ "ನಮ್ಮ ಶಂಕರ್‌ನಾಗ್‌"ರ ಕಾರ್ಯಕ್ರಮ ಎಂದು, ಶಂಕರನ ನೆನಪು ಹಸಿರಾಗಿರಲಿ ಎಂದೂ ಪ್ರಸಾರವಾಗುತ್ತಿದೆ. ನಾಳೆ ಕನ್ನಡಿಗನದ್ದೇ ಕಥೆ, ಕನ್ನಡಿಗನೇ ತೆಗೆದಿರುವುದು ಎಂದು "ಸ್ವೋರ್ಡ್ ಆಫ಼್ ಟಿಪ್ಪೂಸುಲ್ತಾನ್" ಹಿಂದೀಲಿ ಮತ್ತೊಂದು ವಾಹಿನಿಯಲ್ಲಿ ಪ್ರಸಾರವಾಗಬಹುದು. ನಾಡಿದ್ದು ದೇಶಪ್ರೇಮಿಯ ಕಥೆ ಎಂದು "ಝಾನ್ಸಿ ಕೀ ರಾಣಿ" ಮಗದೊಂದರಲ್ಲಿ ಹಿಂದೀಲಿ ಪ್ರಸಾರವಾಗಬಹುದು. ಇನ್ನೊಂದು ದಿನ ಇನ್ನೊಂದು ವಾಹಿನಿಯಲ್ಲಿ "ನಮ್ಮ ಮಾಳವಿಕಾ ಅವಿನಾಶ್" ಮಾಡಿದ ಧಾರಾವಾಹಿ ಎಂದು "ಅರಸಿ" ತಮಿಳಿನಲ್ಲಿಯೇ ಪ್ರಸಾರವಾಗಬಹುದು. ಇನ್ಯಾವುದೋ ವಾಹಿನಿ, ನಮ್ಮ ಪ್ರಶಸ್ತಿ ವಿಜೇತ ನಾಯಕಿ "ಕಲ್ಯಾಣಿ" ಅಭಿನಯ ಮಾಡಿದ್ದಾರೆಂಬ ಕಾರಣಕ್ಕೆ ತೆಲುಗಿನ "ಮಂಥರಾ" ಧಾರಾವಾಹಿಯನ್ನು ತೆಲುಗಿನಲ್ಲೂ ಪ್ರಸಾರ ಮಾಡಬಹುದು. ಎಲ್ಲಾ ಧಾರಾವಾಹಿಗಳಿಗೂ "ಕನ್ನಡ ಸಬ್‌ಟೈಟಲ್" ಹಾಕಿ ಪ್ರಸಾರ ಮಾಡಿದರೆ ಆಯಿತಲ್ಲಾ? ಆಹಾ!! ಕನ್ನಡದ ಮುಂಡೇವಕ್ಕೆ ಸಬ್‌ಟೈಟಲ್ ಸಾಕು, ಹಿಂದೀ, ತಮಿಳು, ತೆಲುಗು ಭಾಷೆಗಳಲ್ಲಿ ಧಾರಾವಾಹಿಗಳನ್ನು ಹಾಕಿಬಿಡೋಣ ಎಂದುಕೊಳ್ಳುವ ದಿನಗಳು ಬರಬಹುದಲ್ಲಾ ಗುರೂ!!

ಕನ್ನಡ ಜನರು ಒಳ್ಳೇ ಕಾರ್ಯಕ್ರಮಾನಾ ಅವವೇ ಭಾಷೇಲಿ ನೋಡ್ಕೊಳ್ಳಲಿ ಎನ್ನೋ ನಿಲುವಿನ ಉದ್ದಿಮೆಯ ಜನರು, ಕನ್ನಡಿಗರೆಲ್ಲಾ ಹೀಗೆ ಪರಭಾಷೇಲೇ ಕಾರ್ಯಕ್ರಮಗಳನ್ನು ನೋಡೋಕೆ ಶುರು ಮಾಡುದ್ರೆ, ನಾಳೆ ಯಾವ ಭಾಷೇಲಿ ಸೀರಿಯಲ್ ತೆಗೆದಾರು? ಯಾವ ಭಾಷೇಲಿ ಸಿನಿಮಾ ತೆಗೆದಾರು? ಡಬ್ಬಿಂಗ್ ನಿಶೇಧವೆನ್ನುವುದು ಕನ್ನಡಿಗರನ್ನು ಕನ್ನಡದ ಮನರಂಜನೆಯಿಂದ ದೂರಾ ಒಯ್ಯುತ್ತೆ ಎನ್ನೋದಕ್ಕೆ ನಮ್ಮ ಜನಶ್ರೀ ವಾಹಿನಿಯನ್ನು, ಶನಿವಾರ ಮತ್ತು ಭಾನುವಾರದ ರಾತ್ರಿ ೯:೩೦ರಿಂದ ೧೦:೦೦ರವರೆಗೆ, ಕನ್ನಡದ ಕಾರ್ಯಕ್ರಮವಿಲ್ಲದೇ ಇದ್ದರೂ ಜನ ಅಂಟಿಕೊಂಡು ಕೂತು ನೋಡೋದೇ ಪುರಾವೆಯಾಗಿದೆ. ಇನ್ನಾದರೂ ನಾಡಿನೆಲ್ಲ ಜನರು ಈ ಬಗ್ಗೆ ಗಂಭೀರವಾಗಿ ಯೋಚಿಸೋದು ಒಳ್ಳೇದು!

"ಮಾಲ್ಗುಡಿ ಡೇಸ್" ಕನ್ನಡದಲ್ಲಿ ಬರಲಿ - ಮನವಿ ಸಲ್ಲಿಕೆ



ಇತ್ತೀಚಿಗೆ ಜನಶ್ರೀ ಸುದ್ದಿವಾಹಿನಿಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದ ಶ್ರೀ ಶಂಕರ್‌ನಾಗ್‌ರವರು ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿರುವ ಸುದ್ದಿಯನ್ನು ಜಾಹೀರಾತುಗಳ ಮೂಲಕ ಪ್ರಸಾರ ಮಾಡಲಾಯಿತು. ಈ ಧಾರಾವಾಹಿಯನ್ನು ಮೂಲದಲ್ಲಿ ಹಿಂದೀ/ ಇಂಗ್ಲೀಶ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ಈಗ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕನ್ನಡದ ಅಡಿಬರಹಗಳೊಂದಿಗೆ (SubTitle) ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬಹುತೇಕ ಕನ್ನಡದ ನಟರು, ತಾಂತ್ರಿಕ ವರ್ಗ ಹೊಂದಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲಾಗಿರುವ ಈ ಧಾರಾವಾಹಿಯನ್ನು ಕನ್ನಡಿಗರಿಗೆ ತಲುಪಿಸುವ ವಾಹಿನಿಯ ಪ್ರಯತ್ನವು ಅಭಿನಂದನಾರ್ಹವಾಗಿದೆ. “ಮಾಲ್ಗುಡಿ ಡೇಸ್” ಧಾರಾವಾಹಿಯನ್ನು ಅಡಿಬರಹಗಳೊಂದಿಗೆ ಹಿಂದಿಯಲ್ಲಿ ಪ್ರಸಾರ ಮಾಡುವ ಬದಲು ಕನ್ನಡದಲ್ಲಿ (ಡಬ್ ಮಾಡಿ) ಪ್ರಸಾರ ಮಾಡಬೇಕೆಂಬ ಪ್ರೇಕ್ಷಕರ ಅನಿಸಿಕೆಯನ್ನು ಜನಶ್ರೀಯವರಿಗೆ ತಲುಪಿಸಲು ಒಂದು ಮಿಂಬಲೆ ಮನವಿ (ಆನ್ಲೈನ್ ಪೆಟಿಷನ್)ಯನ್ನು ಆರಂಭಿಸಲಾಯಿತು.

ಮನವಿಯ ಸಾರ

ಶಂಕರ್‌ನಾಗ್‌ರವರ ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಯು ಕನ್ನಡದಲ್ಲಿಯೇ ಪ್ರಸಾರವಾಗಬೇಕೆಂದೂ, ಇದು ಕನ್ನಡದಲ್ಲಿಯೇ ಮನರಂಜನೆಯನ್ನು ಪಡೆದುಕೊಳ್ಳುವ ಕನ್ನಡಿಗರ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತಿರುವ ಕ್ರಮವಾಗಿದ್ದು, ಪರಭಾಷೆಯಲ್ಲಿ ತಯಾರಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಇತರೆ ಭಾರತೀಯ ಪ್ರಜೆಗಳಂತೆಯೇ, ನಮ್ಮ ತಾಯ್ನುಡಿಯಲ್ಲೇ ನೋಡುವ ಅವಕಾಶ ಮಾಡಿಕೊಡಬೇಕೆಂದೂ ಕೋರುತ್ತಾ ಮಾಲ್ಗುಡಿ ಡೇಸ್ ಕನ್ನಡದಲ್ಲೇ ಬರಬೇಕೆಂದು ಮನವಿ ನೀಡಲಾಯಿತು. ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯವರಿಗೆ ಮನವಿ ಮಾಡಲಾಯಿತು.

ಈ ಮನವಿಗೆ ಸಹಿ ಹಾಕುವ ಪ್ರಕ್ರಿಯೆಯನ್ನು http://www.change.org/petitions/janashree-news-telecast-kannada-version-of-malgudi-days ಮಿಂಬಲೆಯಲ್ಲಿ ಸೋಮವಾರ 11.06.2012ದಂದು ಶುರುಮಾಡಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು, ಕೇವಲ 72 ಗಂಟೆಗಳಲ್ಲೇ 830 ಜನರು ಸಹಿ ಹಾಕಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ಈಗಲೂ ನಡೆಯುತ್ತಿದ್ದು ಕನ್ನಡದಲ್ಲಿಯೇ “ಮಾಲ್ಗುಡಿ ಡೇಸ್” ಕಾರ್ಯಕ್ರಮವನ್ನು ನೋಡುವ ತೀವ್ರವಾದ ಹಂಬಲವು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಭಾರತದ ನಾನಾ ಊರುಗಳಲ್ಲಿರುವವರಷ್ಟೇ ಅಲ್ಲದೆ ವಿಶ್ವದ ಮೂಲೆಮೂಲೆಗಳ ಕನ್ನಡಿಗರು ಆನ್‌ಲೈನ್ ಪಿಟಿಷನ್ನಿಗೆ ಸಹಿ ಹಾಕುವ ಮೂಲಕ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾಹಿನಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಇಂದು ಅವರಿಗೆ 830 ಸಹಿಗಳ ಸದರಿ ಮನವಿಯನ್ನು ತಲುಪಿಸಿ, “ಮಾಲ್ಗುಡಿ ಡೇಸ್” ಧಾರಾವಾಹಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಸಾರ ಮಾಡಬೇಕೆಂದೂ ತನ್ಮೂಲಕ ಕನ್ನಡಿಗರಿಗೆ ಕಳೆದ ನಾಲ್ಕು-ಐದು ದಶಕಗಳಿಂದ ನಿರಾಕರಿಸಲಾಗಿರುವ “ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕ”ನ್ನು ದಕ್ಕಿಸಿಕೊಟ್ಟ ಐತಿಹಾಸಿಕ ಗೌರವಕ್ಕೆ ಪಾತ್ರರಾಗಬೇಕೆಂದು ಕೋರಲಾಯಿತು.

ಡಬ್ಬಿಂಗ್ ಬೇಡ ಎಂಬ ವಾದ ಹೀಗೆ ಹರಿದು ಬಂತು!

(ಫೋಟೋ ಕೃಪೆ: ಸುವರ್ಣ ಟಿವಿ)

ಡಬ್ಬಿಂಗ್ ಪರ ಮತ್ತು ವಿರೋಧವಾಗಿ ಇದುವರೆಗೆ ಬೇರೆ ಬೇರೆ ಸ್ತರಗಳಲ್ಲಿ ವಾದಗಳು ನಡೆದಿವೆ. ಒಂದೆಡೆ ತರ್ಕಬದ್ಧವಾಗಿ ವಾದ ನಡೆಯುತ್ತಿದ್ದರೆ ಇಂತಹ ವಾದಕ್ಕೆ ತಕ್ಕ ಉತ್ತರಗಳನ್ನು ಕೂಡಾ ನೀಡಲಾಯಿತು. ಈ ವಾದಸರಣಿ ಹರಿದು ಬಂದ ಬಗೆಯನ್ನು    ನೋಡಲು ಕುತೂಹಲಕಾರಿಯಾಗಿದೆ.

ಆರಂಭ!

ಈ ಬಗ್ಗೆ ಬಳಗದ ಮೊದಲ ಬರಹ ಪ್ರಕಟವಾಗಿದ್ದು ೨೦೦೭ರ ಆಗಸ್ಟ್ ೪ನೇ ತಾರೀಕಿನಂದು. ಇದಕ್ಕೂ ಮೊದಲೂ ಕೂಡಾ ಕೆಲವರು ತಮ್ಮ ಬ್ಲಾಗುಗಳಲ್ಲೂ ಬರೆದುಕೊಂಡಿದ್ದರು. ಹೀಗೆ ಬರೆದುಕೊಳ್ಳಲು ಸಾಧ್ಯವಾಗಿದ್ದು ಕೂಡಾ ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಿಕ್ಕ ತಂತ್ರಜ್ಞಾನದ ಸಹಕಾರದಿಂದಲೇ... ಹೀಗೆ ಸಣ್ಣದನಿಯಾಗಿ ಶುರುವಾದ ಅನಿಸಿಕೆಗಳು ಮುಂದೆ ಹಲವಾರು ಬಾರಿ ಆಗಾಗ ಪ್ರಕಟವಾಗುತ್ತಲೇ ಬಂದಿವೆ. ಇದನ್ನು ಮೊದಲು ಡಬ್ಬಿಂಗ್ ವಿರೋಧಿಗಳು ಗುರುತಿಸಿ ಪ್ರತಿಕ್ರಿಯೆ ನೀಡುವ ಹಂತಕ್ಕೆ ಬಂದದ್ದು ಇತ್ತೀಚಿಗೇನೇ... ಡಬ್ಬಿಂಗ್ ಪರವಾಗಿ ಮಾತಾಡಿದವರೆಲ್ಲಾ ಮೂಲತಃ ಪ್ರಸ್ತಾಪಿಸಿದ್ದು ಮೂರು ವಿಷಯಗಳನ್ನು.

ಡಬ್ಬಿಂಗ್ ಬೇಕೆನ್ನಲು ಮೂರು ಕಾರಣಗಳು

ಮೊದಲಿಗೆ ಕನ್ನಡಿಗರಿಗೆ ತಾಯ್ನುಡಿಯಲ್ಲೇ ಮನರಂಜನೆ, ಜ್ಞಾನ ವಿಜ್ಞಾನದ ಕಲಿಕೆಗೆ ಅವಕಾಶ ಇರಬೇಕು ಮತ್ತು ನಾಡಿನ ಮೂಲೆಮೂಲೆಗಳಲ್ಲಿರುವ ಬರೀ ಕನ್ನಡವನ್ನಷ್ಟೇ ಬಲ್ಲ ದೊಡ್ಡ ಸಂಖ್ಯೆಯ ಜನರಿಗೆ ಇವೆಲ್ಲವೂ ಕನ್ನಡದಲ್ಲೇ ಪಡೆದುಕೊಳ್ಳುವ ಅವಕಾಶ ಇರಬೇಕೆನ್ನುವುದು. ಎರಡನೆಯದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಶೇಧವೆನ್ನುವ ಅಸಂವಿಧಾನಿಕ ಮತ್ತು ದಬ್ಬಾಳಿಕೆಯ ನಡೆಯ ಮೂಲಕ ಜನರ  ಆಯ್ಕೆಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ ಎನ್ನುವುದು ಮತ್ತು ಮೂರನೆಯದಾಗಿ ಕನ್ನಡನಾಡಿನಲ್ಲಿ ಕನ್ನಡಿಗರು ಕನ್ನಡದಿಂದ ದೂರ ಸರಿಯುವ ವ್ಯವಸ್ಥೆ ಇಂದು ಡಬ್ಬಿಂಗ್ ಇಲ್ಲದಿರುವ ಕಾರಣದಿಂದಾಗಿ ಉಂಟಾಗಿದ್ದು ಇದು ನಿವಾರಣೆಯಾಗಿ ಕನ್ನಡಿಗರು ಕನ್ನಡವನ್ನು ಉಳಿಸಿಕೊಳ್ಳಲು ಇದು ಸಹಕಾರಿ ಎನ್ನುವುದು. ಈ ಅನಿಸಿಕೆಗಳಿಗೆ ಪೂರಕವಾಗಿ ಹತ್ತಾರು ಉದಾಹರಣೆಗಳನ್ನು ನೀಡಲಾಯಿತು, ಹತ್ತಾರು ಗಣ್ಯರ ಜೊತೆ ಚರ್ಚೆ ನಡೆಸಬೇಕಾಯ್ತು. ಈ ಚರ್ಚೆಯ ದಾರಿ ಬಲು ಸೋಜಿಗದ್ದು. ಡಬ್ಬಿಂಗ್ ನಿಶೇಧದ ಪರವಾದವರ ವಾದ ಸರಣಿಯು ಕಾಲದಿಂದ ಕಾಲಕ್ಕೆ ಹೊಸ ಹೊಸ ಅಸ್ತ್ರಗಳನ್ನೆತ್ತಿಕೊಂಡು ಪ್ರಯೋಗಿಸುವುದೂ, ಅದಕ್ಕೆ ತಕ್ಕ ಉತ್ತರ ಇತ್ತ ಕಡೆಯಿಂದ ಹೋಗುವುದೂ ನಡೆದಿತ್ತು.

ಡಬ್ಬಿಂಗ್ ಬೇಡೆಂಬ ಶಸ್ತ್ರಾಸ್ತ್ರ ಪ್ರಯೋಗ!

"ಡಬ್ಬಿಂಗ್ ತರಬೇಕು ಎನ್ನುವುದು ಹಿರಿಯರ ಆಶಯಕ್ಕೆ ವಿರುದ್ಧವಾದದ್ದು! ಅರವತ್ತರ ದಶಕದಲ್ಲೇ ಡಾ. ರಾಜ್, ಅನಕೃ ಮೊದಲಾದವರು ಡಬ್ಬಿಂಗ್ ಬೇಡ ಎಂದಿದ್ರು... ಅವರ ಮಾತನ್ನು ಧಿಕ್ಕರಿಸಬಾರದು" ಎನ್ನುವ ಮಾತುಗಳಿಗೆ ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಎಳವೆಯ ದಿನಗಳಲ್ಲಿದ್ದ ಪರಿಸ್ಥಿತಿಗೂ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾ ಮಾಡೋ, ತನ್ನದೇ ನಾಡಿನಲ್ಲೇ ಉದ್ದಿಮೆ ಕಟ್ಟಿಕೊಂಡಿರೋ ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಗೂ ಇರುವ ವ್ಯತ್ಯಾಸಗಳ ಬಗ್ಗೆ ತಿಳಿಸಿಕೊಡಬೇಕಾಯ್ತು. ಅಂದು ಅಸ್ತಿತ್ವದಲ್ಲೇ ಇರದಿದ್ದ ಟಿವಿ ಉದ್ಯಮ, ಜಾಹೀರಾತು ಉದ್ಯಮ, ಅನಿಮೇಶನ್ ಮತ್ತು ಜ್ಞಾನ ವಿಜ್ಞಾನದ ವಾಹಿನಿಗಳ ಬಗ್ಗೆ ತಿಳಿಸಬೇಕಾಯ್ತು.

ಕನ್ನಡ ಚಿತ್ರೋದ್ಯಮ ಇಲ್ಲವಾಗುತ್ತದೆ ಎಂಬ ಭೀತಿ ಹರಡುವಿಕೆ!

ಚಿತ್ರೋದ್ಯಮ ನಂಬಿಕೊಂಡ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ, ಕನ್ನಡ ಚಿತ್ರರಂಗವೇ ಇಲ್ಲವಾಗುತ್ತದೆ ಎನ್ನುವ ವಾದ ನಂತರದ್ದು... ಸ್ಪರ್ಧೆಯ ಭಯದಿಂದ ಇಂತಹ ಮಾತುಗಳು ಹುಟ್ಟುತ್ತವೆಂದೂ, ಡಬ್ಬಿಂಗ್ ಬಂದೊಡನೇ ಚಿತ್ರ ತಯಾರಿಕೆ ನಿಂತುಹೋಗುತ್ತದೆ ಎನ್ನುವುದನ್ನು ನಂಬಲಾಗದೆಂದೂ, ಹಿಂದೆ ಕಾಯಿನ್ ಬೂತ್ ಫೋನುಗಳನ್ನು ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಮೊಬೈಲ್ ಫೋನ್ ಬಂದಾಗ ಹೇಗೆ ಸ್ಪರ್ಧೆಯನ್ನು ಎದುರಿಸಬೇಕಾಯ್ತು ಎನ್ನುವುದನ್ನೂ ತಿಳಿಸಬೇಕಾಯ್ತು. ಕೊನೆಗೆ ಇದು ಹೊಟ್ಟೆಪಾಡಿನ ಸಮಸ್ಯೆಯಲ್ಲಾ... ಕನ್ನಡ ಭಾಷೆಯ ಉಳಿವಿನ ಪ್ರಶ್ನೆ, ಸೃಜನಶೀಲತೆಯು ಅಳಿಯುವ ಪ್ರಶ್ನೆ ಎನ್ನುವ ಅಸ್ತ್ರ ಬತ್ತಳಿಕೆಯಿಂದ ಹೊರಬಂತು.

ಸೃಜನಶೀಲತೆ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆ

ಚಿತ್ರೋದ್ಯಮದ ಗಣ್ಯ ನಿರ್ದೇಶಕರುಗಳಲ್ಲಿ ಕೆಲವರು, ಡಬ್ಬಿಂಗ್ ಬಂದರೆ ಸೃಜನಶೀಲತೆ ಅಳಿದುಹೋಗುತ್ತದೆಯೆಂದೂ, ಭಾಷೆ ಕಳೆದುಹೋಗುತ್ತದೆಯೆಂದೂ, ಸಂಸ್ಕೃತಿ ಪಲ್ಲಟವಾಗುತ್ತದೆಯೆಂದೂ ವಾದ ಮುಂದಿಟ್ಟರು. ಜನರಿಗೆ ಒಳಿತನ್ನು ಒಪ್ಪುವ ತಿರಸ್ಕರಿಸುವ ಅವಕಾಶವನ್ನೇ ನಿರಾಕರಿಸಿ, ನಾವ್ಯಾರೋ ಬುದ್ಧಿವಂತರು ನಿಮ್ಮ ಪರವಾಗಿ ತೀರ್ಮಾನಿಸುತ್ತೇವೆ ಎನ್ನುವ ಬೌದ್ಧಿಕ ಅಹಂಕಾರ ಸರಿಯಲ್ಲವೆಂದೂ, ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಹಾಳಾಗಿ ಹೋದ ಭಾಷೆ, ಜನಾಂಗದ ಉದಾಹರಣೆ ತೋರಿಸಿ ಎಂದೂ ಕೇಳಲಾಯ್ತು. ಇದಕ್ಕೆ ತಮಿಳುನಾಡಿನಲ್ಲಿ ಇಂದು ಸೆಂದಮಿಳ್ ಓದುವವರಿಲ್ಲ ಎಂದರು. "ಸರಿ, ಕನ್ನಡದಲ್ಲಿ ಡಬ್ಬಿಂಗ್ ಇಲ್ಲಾ... ಇಲ್ಲೆಷ್ಟು ಜನರಿಗೆ ಹಳೆಗನ್ನಡ ಓದಲು ಬರುತ್ತದೆ" ಎಂದರೆ ಉತ್ತರವಿರದಾಯ್ತು. ಸೃಜನಶೀಲತೆ ಅಳಿದುಹೋಗುತ್ತದೆ ಎನ್ನುವ ಮಾತಿಗೆ ಕನ್ನಡದ ಇಂದಿನ ಸೃಜನಶೀಲ ನಿರ್ದೇಶಕರು, ನಿರ್ಮಾಪಕರು ಡಬ್ಬಿಂಗ್ ಬಂದೊಡನೆ ಚಿತ್ರ ತಯಾರಿಸಲು ಆಗುವುದಿಲ್ಲ ಮತ್ತು ಕನ್ನಡ ಜನತೆ ಅಂಥಾ ಒಳ್ಳೆ ಯತ್ನಗಳನ್ನು ಬೆಂಬಲಿಸುವುದಿಲ್ಲಾ ಎನ್ನಲಾಗದು ಎಂದು ಹೇಳಬೇಕಾಯ್ತು.

ಜನಾಭಿಪ್ರಾಯಗಳು!

ಇವೆಲ್ಲಾ ನಡೆಯುತ್ತಿರುವಾಗಲೇ ದಟ್ಸ್ ಕನ್ನಡ, ಸಂಪಾದಕೀಯ ಮೊದಲಾದ ಮಿಂಬಲೆತಾಣಗಳಲ್ಲಿ "ಡಬ್ಬಿಂಗ್ ಬೇಕೆ? ಬೇಡವೇ?" ಚರ್ಚೆ ಆರಂಭವಾಗಿ, ಮತದಾನಗಳು ನಡೆದು ಡಬ್ಬಿಂಗ್ ಬೇಕೆನ್ನುವವರ ಸಂಖ್ಯೆ ಬೇಡೆಂದವರಿಗಿಂತಾ ಹೆಚ್ಚಾಗಿ... ಮೊದಲು "ಡಬ್ಬಿಂಗ್  ವಿರುದ್ಧ ಈ ತಾಣಕ್ಕೆ ಹೋಗಿ ಮತ ಹಾಕಿ" ಅಂದವರೇ "ಇದು ಮತದಾನದ ಮೂಲಕ  ತೀರ್ಮಾನವಾಗುವ ಮಾತಲ್ಲಾ" ಎನ್ನುವವರೆಗೆ ಬೆಳೆದವು. ಇದೇ ಸಂದರ್ಭದಲ್ಲಿ "ಸತ್ಯಮೇವ ಜಯತೇ" ಕನ್ನಡದಲ್ಲಿ ಡಬ್ ಆಗುವುದೆಂಬ ಸುದ್ದಿ! ಸುವರ್ಣ ವಾಹಿನಿಯ ಈ ಪ್ರಯತ್ನವನ್ನು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ತಡೆದೆವು ಎಂಬ ಬೆಳವಣಿಗೆಗಳು... ತಾಯ್ನುಡಿಯಲ್ಲಿ ಜ್ಞಾನ ವಿಜ್ಞಾನ ಮನರಂಜನೆಗಳನ್ನು ಪಡೆದುಕೊಳ್ಳಬಯಸಿದ ಸಾವಿರಾರು ಕನ್ನಡಿಗರಿಂದ "ಮಿಂಬಲೆ ಮನವಿ" ಸಲ್ಲಿಕೆ... ಅಂತರ್ಜಾಲದಲ್ಲಿ ಡಬ್ ಆದ ಅವತರಣಿಕೆ ಪ್ರಸಾರ, ಮೂರೇ ದಿನದಲ್ಲಿ ೩೦,೦೦೦ಕ್ಕೂ ಹೆಚ್ಚು ಜನರಿಂದ ವೀಕ್ಷಣೆ, ಟಿವಿಗಳಲ್ಲಿ ಡಬ್ಬಿಂಗ್ ಚರ್ಚೆಗಳು ಆರಂಭವಾದವು. ಇದೇ ಸಂದರ್ಭದಲ್ಲಿ ಅಂತರ್ಜಾಲ ತಾಣದಿಂದ ಕನ್ನಡದ ಅವತರಣಿಕೆಯನ್ನು ತೆಗೆದುಹಾಕಿದ ಘಟನೆಗಳೂ ನಡೆದವು. ಬಾಯಲ್ಲಿ ಮಾತ್ರಾ "ಇಲ್ಲಿ ಡಬ್ಬಿಂಗ್ ನಿಶೇಧವಿಲ್ಲಾ... ಇದು ಸಾಮಾಜಿಕ ಕಟ್ಟುಪಾಡು" ಎನ್ನುತ್ತಲೇ ಡಬ್ ಆದ ಕಾರ್ಯಕ್ರಮಗಳನ್ನು ತಡೆಯುವ, ತೆಗೆದುಹಾಕಿಸುವ ಜನರ ಸೋಗಲಾಡಿತನಗಳು ಬಯಲಾದವು.

ಹತಾಶೆಯ ಹೀನಾಸ್ತ್ರಗಳು

ಚರ್ಚೆಗಳಲ್ಲಿ ನಂತರ ಶುರುವಾದದ್ದೊಂಥರಾ ಹೀನಾಸ್ತ್ರ ಪ್ರಯೋಗಗಳು! ಡಬ್ಬಿಂಗ್ ಬೇಕೆನ್ನುತ್ತಿರುವವರು ಕೇವಲ ಐಟಿ ಬಿಟಿ ಮಂದಿ, ಇವರು ನೂರಕ್ಕಿಂತಾ ಕಮ್ಮಿ ಜನಾ, ಡಬ್ಬಿಂಗ್ ಬೇಕೆನ್ನುವವರು ನಾಡಿನ ದಲಿತರ ವಿರೋಧಿಗಳು, ಪುರೋಹಿತಶಾಹಿ ಮನಸ್ಸಿನವರು, ರೈತರ ವಿರೋಧಿಗಳು...ಹೀಗೆ ನಾನಾ ಪಟ್ಟಕಟ್ಟುವ ಪ್ರಯತ್ನಗಳಾದವು. ಈ ಸಂದರ್ಭದಲ್ಲೇ ನಡೆದ "ವಿಚಾರ ಸಂಕಿರಣ"ದಲ್ಲಿ ದಲಿತ ಮುಖಂಡರೂ, ರೈತ ಮುಖಂಡರೂ, ಕನ್ನಡಪರ ಸಂಘಟನೆಗಳ ಮುಖಂಡರೂ, ಪತ್ರಕರ್ತರೂ, ಅಲ್ಪಸಂಖ್ಯಾತ ಮುಖಂಡರೂ ಪಾಲ್ಗೊಂಡು "ಇದು ಕೆಲವರ ಕೂಗಲ್ಲಾ, ನಾಡಿನ ಜನರ ಕೂಗು" ಎಂದು ಸಾರಬೇಕಾಯ್ತು. ಇದೇ ವೇಳೆಗೆ ಚಿತ್ರರಂಗದ, ಸಾಹಿತ್ಯ ವಲಯದ, ಚಿಂತಕರ ವಲಯದ ಕೆಲಜನರು ಡಬ್ಬಿಂಗ್ ಬರುವುದು ತಪ್ಪಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆಗಳನ್ನು ನೀಡಿದರು. ಇದಕ್ಕೆ ಪ್ರತಿಯಾಗಿ ಕೇಳಿ ಬಂದದ್ದೇ ಚಿತ್ರೋದ್ಯಮದ ಗೌರವಾನ್ವಿತ ಗಣ್ಯರ ಅಪ್ಪಟ ಬೆದರಿಕೆಯ ಮಾತುಗಳು!! ಡಬ್ಬಿಂಗ್ ಬೇಕೆನ್ನೋರು ಉಳಿಯೋದಿಲ್ಲಾ, ಡಬ್ಬಿಂಗ್ ತಡೀದೆ ಬಿಡಲ್ಲಾ, ಡಬ್ಬಿಂಗ್ ಬೇಕೆನ್ನೋರುನ್ನಾ ಜನರು ಉಳಿಸೋದಿಲ್ಲಾ ಅನ್ನೋ ಮಾತುಗಳು... ಡಬ್ಬಿಂಗ್ ಬೇಕೆನ್ನೋರು ನಾಡದ್ರೋಹಿಗಳು, ಇವರಿಗೆ ಹೊಡಿಮಗಾ ಹೊಡಿಮಗಾ ಅನ್ನಬೇಕಾಗುತ್ತೆ ಅನ್ನೋ ಥರದ ಮಾತುಗಳು ಕೇಳಿಬಂದವು. ಡಬ್ಬಿಂಗ್ ಬೇಕೆನ್ನೋರು ಕನ್ನಡ ಸಿನಿಮಾನೇ ನೋಡಲ್ಲಾ ಎನ್ನುವ ಆರೋಪಗಳು, ಇವರು ಅಮೇರಿಕಾ ಏಜೆಂಟರು, ಡಬ್ಬಿಂಗ್ ಪರ ವಾಹಿನಿಗಳ, ಡಬ್ಬಿಂಗ್ ಪರ ನಿರ್ಮಾಪಕರ ಏಜೆಂಟರು, ಅಮೀರ್‌ಖಾನ್‌ರ ಏಜೆಂಟರು... ಎಂಬ ಆರೋಪಗಳು ಶುರುವಾದವು.

ಮತ್ತಷ್ಟು ಸೋಜಿಗದ ಮಾತುಗಳು!

ಮತ್ತೊಂದೆಡೆ ಸತ್ಯಮೇವ ಜಯತೇ ಕಾರ್ಯಕ್ರಮ ಕಳಪೆಯೆನ್ನುವ, ಅದು ಸೋಗಿನದ್ದು ಎನ್ನುವ, ಅಮೀರ್‌ಖಾನ್ ಬರೆದ ಪತ್ರದ ಸಹಿಯೇ ಬೋಗಸ್ ಎನ್ನುವ ಅಸಂಬದ್ಧವಾದ ಹತಾಶೆಯ ಮಾತುಗಳು ಮೂಡಿ ಬಂದದ್ದು ಸೋಜಿಗದ ವಿಷಯ! ಕನ್ನಡದ ಕಾರ್ಯಕ್ರಮಗಳೇ ಇಲ್ಲವಾ, ಅವುನ್ನೇ ನೋಡಿ.. ಬದುಕು ಜಟಕಾ ಬಂಡಿ ನೋಡಿ... ಕಥೆಯಲ್ಲಾ ಇದು ಜೀವನಾ ನೋಡಿ... ನಮ್ಮವರ ಕಾರ್ಯಕ್ರಮಗಳು ಪ್ರಾಮಾಣಿಕವಾದವು, ಅವರದ್ದು ಕೀಳು ಎಂಬಂತಹ ಮಾತುಗಳ ಮೂಲಕ "ನಾವು ಕೊಡೋದನ್ನು ನೋಡಿಕೊಂಡು ತೆಪ್ಪಗಿರಿ" ಎನ್ನುವ ದನಿಯ ಮಾತುಗಳು ಕೇಳಿಬಂದವು.

ಇವಕ್ಕೆ ವ್ಯತಿರಿಕ್ತವಾಗಿ ಇಲ್ಲೂ ನಡುನಡುವೆ ರವಿಚಂದ್ರನ್‌ರವರ ಸವಾಲು/ ಸ್ಪರ್ಧೆ ಎದುರಿಸುವ ಮಾತುಗಳು, ಅಂಬರೀಶ್‌ರವರ ಎದುರಾಳಿಗಳನ್ನು ಗೌರವದಿಂದಲೇ ನೋಡುವ ಮಾತುಗಳೂ ಕತ್ತಲೆಯಲ್ಲಿನ ಮಿಂಚುಗಳಂತೆ ಬೆಳಗಿದ್ದು ನಿಜಾ! ಕೆಲ ಪತ್ರಿಕೆಗಳ ಸಂಪಾದಕರುಗಳು ಮಿಂಬಲೆಯಲ್ಲಿ ಆರೋಗ್ಯಕರವಾದ ಚರ್ಚೆಗಳನ್ನು ನಡೆಸಿದ್ದು ಕೂಡಾ ಮೆಚ್ಚುವಂತಹುದ್ದೇ! ಹೀಗೆ ಇಂದು ದಿನಪತ್ರಿಕೆಗಳಲ್ಲಿ, ಸಿನಿಮಾ ಸಂಚಿಕೆಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವಿಷಯ ಡಬ್ಬಿಂಗ್ ಆಗಿದ್ದು... ಮುಂದಿನ ದಿನಗಳಲ್ಲಿ ಸಾರಾಸಗಟು ನಿಶೇಧವೆನ್ನುವುದನ್ನು ಅಪ್ರಜಾಸತ್ತಾತ್ಮಕವೆಂದು ಪರಿಗಣಿಸುವ ಎಲ್ಲಾ ನಾಡಪರರೂ ಈ ಬಗ್ಗೆ ದನಿಯೆತ್ತಬೇಕಾಗಿದೆ. ಇಷ್ಟಕ್ಕೂ ಯಾರಿಗಾದರೂ ಕೂಡಾ... ಇನ್ನೆಷ್ಟು ದಿನಗಳ ಕಾಲ ಕನ್ನಡದ ಜನರನ್ನು ಬೆದರಿಕೆ ಮತ್ತು ಹುಸಿವಾದಗಳನ್ನು ಬಳಸಿ, ಅಸಂವಿಧಾನಾತ್ಮಕವಾದ ನಿಶೇಧ ಹೇರಿ, ಭಾಷೆ ಸಂಸ್ಕೃತಿ ಅಳಿದುಹೋಗುತ್ತದೆ ಎನ್ನುವ ಗುಮ್ಮ ತೋರಿಸಿ... ವಂಚಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯಾ?!

ಡಬ್ಬಿಂಗ್ ಮತ್ತು ಜನಪರತೆ


ಡಬ್ಬಿಂಗ್ ಕನ್ನಡಕ್ಕೆ ಬರಬೇಕು ಎನ್ನುವ ದನಿಗಳು ಇದೀಗ ಬಲ ಪಡೆದುಕೊಳ್ಳುತ್ತಿದ್ದು ಜನಪರ ಸಂಘಟನೆಗಳು ಈ ನಿಲುವಿಗೆ ಸಹಮತ ತೋರುತ್ತಿರುವುದನ್ನು ನಾವು ಕಾಣಬಹುದು. ಡಬ್ಬಿಂಗ್ ಬರುವುದರಿಂದ ಕೆಲಸ ಕಳೆದುಕೊಳ್ಳುತ್ತೇವೆಂಬ ದಿಗಿಲಿನಿಂದ ನಲುಗುತ್ತಿರುವ ಚಿತ್ರರಂಗದ ಒಂದು ವರ್ಗ ಒಂದೆಡೆಯಾದರೆ ಕನ್ನಡ ಸಂಸ್ಕೃತಿಯ ಅಳಿವು ಡಬ್ಬಿಂಗ್‌ನಿಂದಾಗುತ್ತದೆ ಎನ್ನುವ ನಿಲುವಿನ ಕೆಲವು ಹಿರಿಯರು ಇನ್ನೊಂದೆಡೆ... ಇದು "ಡಬ್ಬಿಂಗ್ ಬೇಡ" ಎನ್ನುವ ಪಕ್ಷದೊಳಗಿನ ಪ್ರಮುಖ ಪಂಗಡಗಳು. ಡಬ್ಬಿಂಗ್ ಕೇವಲ ಫೇಸ್‌ಬುಕ್ಕಿಗರಿಗೆ ಬೇಕೆನ್ನೋ ಹಾದಿ ತಪ್ಪಿಸೋ ಮಾತಾಡ್ತಿರೋ ಚಿತ್ರರಂಗದವರು, ಯಾವ ಆಧಾರದ ಮೇಲೆ ಡಬ್ಬಿಂಗ್ ಆರು ಕೋಟಿ ಜನರಿಗೆಲ್ಲಾ ಬೇಡಾ ಎಂದು ಹೇಳುತ್ತಿದ್ದಾರೆ ತಿಳಿಯುತ್ತಿಲ್ಲ. ಫೇಸ್‌ಬುಕ್ಕಿನಲ್ಲಿ ಚರ್ಚೆ ಮಾಡುವವರು ನೂರಾರು ಜನರಿರಬಹುದು... ಪಿಟಿಷನ್‌ಗೆ ಸಾವಿರಾರು ಜನರು ಸಹಿ ಹಾಕಿರಬಹುದು, ಅಂತರ್ಜಾಲದಲ್ಲಿ ಡಬ್ ಆದ ಸತ್ಯಮೇವ ಜಯತೇ ನೋಡಿದ ಮೂವತ್ತು ಸಾವಿರ ಜನರಿರಬಹುದು ಅಥವಾ ಪತ್ರಿಕೆಗಳಿಗೆ ಪತ್ರ ಬರೆಯುತ್ತಿರುವ, ಕೆಲವೆಡೆಗಿನ ಮತದಾನಗಳಲ್ಲಿ ಡಬ್ಬಿಂಗ್ ಬೇಕೆಂದು  ಮತನೀಡುತ್ತಿರುವ ಮತ್ತಷ್ಟು ಜನರಿರಬಹುದು, ಚಿತ್ರರಂಗದ ಒಳಗಿದ್ದೇ ಬಹಿರಂಗವಾಗಿ ದನಿಯೆತ್ತಿರುವ ಬೆರಳೆಣಿಕೆಯವರಿರಬಹುದು... ಈ ಎಲ್ಲಾ ಒಟ್ಟಾಗಿ ಪ್ರತಿನಿಧಿಸುತ್ತಿರುವುದು ಕನ್ನಡ ಜನತೆಯನ್ನೇ ಅಲ್ಲವೇ? ಸಮತಾ ಸೈನಿಕ ದಳವಾಗಲೀ, ಕರ್ನಾಟಕ ರಾಜ್ಯ ರೈತ ಸಂಘವಾಗಲೀ ಜನರನ್ನು ಪ್ರತಿನಿಧಿಸುತ್ತಿಲ್ಲವೇ? ಇವೆಲ್ಲಾ ಕಾಣುತ್ತಿದ್ದರೂ ಇವರಿಗೆ ಬಹುಷಃ ಕನ್ನಡಿಗರೆಲ್ಲಾ "ನಮಗೆ ಡಬ್ಬಿಂಗ್ ಬೇಕು" ಎಂದು ಬರೆದು ಕೇಳಿಕೊಳ್ಳಬೇಕೇನೋ...?! ಇಷ್ಟಕ್ಕೂ ಮಾರುಕಟ್ಟೆಯಲ್ಲಿ ಸಿನಿಮಾಗಳನ್ನು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ನೀಡುವ ಉತ್ತರ ಸಾಲದೇ? ಡಬ್ ಆದವೂ ಕೂಡಾ ಇದೇ ಪ್ರಕ್ರಿಯೆಗೆ ಒಳಗಾಗುವ ಅವಕಾಶ ಇರಬೇಕಲ್ಲವೇ?

ವಾಸ್ತವವಾಗಿ ‘ಡಬ್ಬಿಂಗ್ ಎನ್ನುವುದು ಭಾಷೆಯನ್ನು ಉಳಿಸುವ ಸಾಧನ’ವೆನ್ನುವ ವಿಶ್ವಸಂಸ್ಥೆಯ ನಿಲುವಿನ ಹಿನ್ನೆಲೆಯಲ್ಲಿ ನಾವು ಇಡೀ ಪ್ರಕರಣವನ್ನು ನೋಡಬೇಕಾಗಿದೆ. ನಾಳೆ ಡಬ್ಬಿಂಗ್ ಬರುವುದರಿಂದ ಕನ್ನಡ ನಾಡಿಗೆ ಕೆಟ್ಟಾ-ಕೊಳಕಾ ಕಾರ್ಯಕ್ರಮಗಳು ದಾಳಿಯಿಡುತ್ತವೆ ಎನ್ನುವ ಆತಂಕ ನಿಜವಾಗಲೂಬಹುದು! ಆದರೆ ಇದು ವರ್ಷಗಳಿಂದ ಮುಚ್ಚಲಾಗಿದ್ದ ಅಣೆಕಟ್ಟೆಯ ತೂಬು ತೆರೆದಾಗ ಮೊದಲು ನುಗ್ಗುವ ಕಸದಂತೆಯೇ ಇರುತ್ತದೆ. ಕನ್ನಡ ಜನರು ಇಂಥಾ ಕಸ ಕಡ್ಡಿಗಳನ್ನು ಮಾರುಕಟ್ಟೆಯಲ್ಲಿ ಸೋಲಿಸುವ ಮೂಲಕ ಮುಂದೊಮ್ಮೆ ಒಳ್ಳೆಯವಕ್ಕೆ ಮಾತ್ರಾ ಗೆಲುವು ತಂದುಕೊಟ್ಟಲ್ಲಿ ಈ ಬಾಧೆ ನಿವಾರಣೆಯಾಗುತ್ತದೆ. ಈ ಮಾತಿಗೆ ಇಂದು ನೆರೆಯ ತಮಿಳು ತೆಲುಗು ಚಿತ್ರರಂಗಗಳಲ್ಲಿ ಡಬ್ ಆಗುತ್ತಿರುವ ಚಿತ್ರಗಳ ಪ್ರಮಾಣವೇ ಸಾಕ್ಷಿಯಾಗಿದೆ. ಅಲ್ಲಿ ವರ್ಷಕ್ಕೆ ಇಪ್ಪತ್ತಕ್ಕಿಂತಾ ಕಡಿಮೆ ಸಿನಿಮಾಗಳು ಡಬ್ ಆಗೋದನ್ನು ನಾವು ನೋಡಬಹುದು! ಡಬ್ಬಿಂಗ್ ಅಧಿಕೃತವಾದಾಗ ಅಲ್ಲೂ ಗುಣಮಟ್ಟದ ಸಂಭಾಷಣೆ, ದನಿಲೇಪನಗಳು ನಡೆಯಬಹುದು!!

ಆದರೆ ಡಬ್ಬಿಂಗ್ ಬರುವುದರಿಂದ ನೇರವಾಗಿ ಆಗುವ ಬದಲಾವಣೆಗಳು ಅತ್ಯಂತ ಉಪಕಾರಿಯಾದುವಾಗುವ ಸಾಧ್ಯತೆಗಳೇ ಹೆಚ್ಚು! ಕನ್ನಡದಲ್ಲಿ ಪೋಗೋ, ಕಾರ್ಟೂನ್ ನೆಟ್‌ವರ್ಕ್ ಮೊದಲಾದ ಮೂಲತಃ ಮಕ್ಕಳನ್ನು ಸೆಳೆಯುವ ವಾಹಿನಿಗಳು ಕನ್ನಡದಲ್ಲಿ ಬರಬೇಕಾಗಿದೆ. ಜ್ಞಾನ ಹೆಚ್ಚಿಸುವ ಹಿಸ್ಟರಿ, ಡಿಸ್ಕವರಿ, ನ್ಯಾಶನಲ್ ಜಿಯಾಗ್ರಫಿ ಮೊದಲಾದ ವಾಹಿನಿಗಳು ಕೂಡಾ ಕನ್ನಡದಲ್ಲಿರುವುದು ಕನ್ನಡಿಗರ ಅರಿಮೆಯ ಮಟ್ಟ ಹೆಚ್ಚಿಸಲು ಸಹಕಾರಿ. ಅಂತೆಯೇ ಹಲವಾರು ಜನಪ್ರಿಯ/ ಗುಣಮಟ್ಟದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಬರುವುದು ಕೂಡಾ ಸಹಕಾರಿ. ಇವೆಲ್ಲಾ ಬೆಳವಣಿಗೆಗಳು ನೇರವಾಗಿ ಕನ್ನಡಿಗರನ್ನು ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲ! ಜೊತೆಗೇ ಕನ್ನಡದಲ್ಲೇ ಸುಲಭವಾಗಿ ಅರಿವು ಸಿಗಲು ಇವು ಸಹಕಾರಿಯಾಗಲಿವೆ!!

ಕನ್ನಡ ಕಲಾವಿದರು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾತು ನಿಜವೋ ಸುಳ್ಳೋ ತೀರ್ಮಾನವಾಗುವುದು ಕನ್ನಡ ಚಿತ್ರರಂಗ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ. ಡಬ್ಬಿಂಗ್‌ಗೆ ಅವಕಾಶವಾಯಿತೆಂದು ಕನ್ನಡ ಚಿತ್ರ ತೆಗೆಯುವುದನ್ನು ನಿರ್ಮಾಪಕರು ನಿಲ್ಲಿಸಿಯೇ ಬಿಡುತ್ತಾರೆ ಎನ್ನುವುದಾಗಲೀ... ಈಗಿನಷ್ಟೇ ಸಂಖ್ಯೆಯ ಚಿತ್ರಗಳು ಬರುತ್ತವೆ ಎನ್ನುವುದಾಗಲೀ ಕೇವಲ ಊಹೆಯ ಮಾತಾಗುತ್ತದೆ. ವಾಸ್ತವವಾಗಿ ಈ ಎರಡೂ ಸ್ವಲ್ಪ ಸ್ವಲ್ಪ ಆಗುವ ಸಾಧ್ಯತೆಗಳಿದ್ದು ಸ್ಪರ್ಧೆಯ ಕಾರಣದಿಂದ ಗುಣಮಟ್ಟದ ಚಿತ್ರಗಳು ಖಂಡಿತಾ ಬರುತ್ತವೆ ಎನ್ನಬಹುದು. ರಿಮೇಕು ಚಿತ್ರಗಳು ಕಡಿಮೆಯಾಗಬಹುದು! ಇವತ್ತೂ ಕೂಡಾ ತಯಾರಾಗುವ ೧೨೦+ ಚಿತ್ರಗಳಲ್ಲಿ ಗೆಲ್ಲುವುದು/ ಬಂಡವಾಳ ವಾಪಸ್ಸು ತರುವುದು ಕೆಲವೇ ಚಿತ್ರಗಳು ಎನ್ನುವಾಗ ಹಣ ಕಳೆದುಕೊಳ್ಳುವ ನಿರ್ಮಾಪಕರ ಸಂಖ್ಯೆ ಕಮ್ಮಿಯಾಗಬಹುದು ಅಷ್ಟೇ! ಆದರೆ ನೋಡುಗನಿಗೆ ಇದರಿಂದ ಲಾಭವೇ ಹೆಚ್ಚು. ಕನ್ನಡದ ಜನರು ತಮಗೆ ಬೇಕಾದ ಯಾವುದೇ ಭಾಷೆಯ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡುವ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆನ್ನುವುದು ಮಾತ್ರಾ ಹದಿನಾರಾಣೆ ಸತ್ಯಾ!! ಇನ್ನು ಕನ್ನಡ ಕಿರುತೆರೆಯಲ್ಲಿ ಮೂಲ ಧಾರವಾಹಿಗಳು ನಿಲ್ಲುತ್ತವೆಯೋ, ಪರಭಾಷೆಯಿಂದ ರಿಮೇಕ್ ಆಗುವ ಧಾರಾವಾಹಿಗಳು ನಿಂತು ಮೂಲ ಕನ್ನಡದ ಸೊಗಡಿನ ಈ ನೆಲದ ಕಥೆಯ ಧಾರಾವಾಹಿಗಳು ಮಾತ್ರಾ ಉಳಿಯುತ್ತವೆಯೋ ಎನ್ನುವುದೂ ಕೂಡಾ ಬಲ್ಲವರಿಲ್ಲ! ಸ್ಪರ್ಧೆಯನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಇದು ತೀರ್ಮಾನವಾಗಲಿದೆ. ಏನೆಂದರೂ ಕನ್ನಡದ್ದೇ ಮೂಲದ ಮೂಡಲಮನೆ, ಮುಕ್ತಾಮುಕ್ತಾ, ಗುರುರಾಘವೇಂದ್ರ ವೈಭವ ರೀತಿಯ ಧಾರಾವಾಹಿಗಳೆಲ್ಲಾ ನಿಂತುಬಿಡುತ್ತವೆ ಎನ್ನುವುದು ನಂಬಲಾಗದ ಮಾತು! ಇಲ್ಲೂ ಕೂಡಾ ನೋಡುಗನಿಗೆ ಗುಣಮಟ್ಟದ ಹೊಸತನದ ಕಾರ್ಯಕ್ರಮಗಳು ಸಿಗುವ ಸಾಧ್ಯತೆಯೇ ಹೆಚ್ಚು!

ಇವೆಲ್ಲವೂ ಕೂಡಾ ಕನ್ನಡಿಗನನ್ನು ಕನ್ನಡದಿಂದ ದೂರ ಹೋಗದ ಹಾಗೆ ನೋಡಿಕೊಳ್ಳೋ ಸಾಧ್ಯತೆಗಳು ಹೆಚ್ಚು. ಜೊತೆಗೆ ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಯಾವೊಂದು ನುಡಿಗೂ ಆಗಿರದ ತೊಂದರೆ, ಯಾವ ಸಂಸ್ಕೃತಿಗೂ ಆಗಿರದ ತೊಂದರೆ ಕನ್ನಡಕ್ಕಾಗುತ್ತದೆ ಎನ್ನುವುದನ್ನು ನಂಬುವುದಕ್ಕಿಂತಲೂ... ಸಂವಿಧಾನ ಕೊಡಮಾಡಿರುವ, ವಿಶ್ವಸಂಸ್ಥೆಯೇ ಎತ್ತಿಹಿಡಿದಿರುವ ನಿಲುವನ್ನು ಬೆಂಬಲಿಸುವುದು ಸೂಕ್ತ! ಗೆಳೆಯರೊಬ್ಬರು ಬರೆದಂತೆ "ಗುಮ್ಮನಿಗೆ ಹೆದರಿ ಅಮ್ಮನಿಗೂ ಕದ ತೆರೆಯಲಿಲ್ಲ" ಎನ್ನುವ ಮಾತು ಡಬ್ಬಿಂಗಿಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗಕ್ಕೆ ಸಕ್ಕತ್ತಾಗೇ ಅನ್ವಯಿಸುತ್ತದೆ!! ಚಿತ್ರರಂಗದೋರು ಅಮ್ಮನನ್ನಾದರೂ ಒಳಗೆ ಬಿಟ್ಟುಕೊಳ್ಳಬೇಕು... ಅಲ್ವಾ ಗುರೂ? ಇಲ್ಲಾಂದ್ರೆ ಮುಂದೆ ಇವತ್ತಿನ ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗೋ ರಚ್ಚಾ ಪಚ್ಚಾಗಳು ಇರೋ ಆರುನೂರನ್ನೂ ಆಕ್ರಮಿಸಿಕೊಳ್ಳೋ ಕಾಲ ಬಂದೀತು!

ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್ - ಒಂದು ವಿಚಾರ ಸಂಕಿರಣ


"ಸತ್ಯಮೇವ ಜಯತೇ" ನಿಲ್ಲಿಸಿದ್ದು ಯಾಕೆ? ಸತ್ಯವನ್ನು ಹೇಳಿ ಸ್ಟಾರ್ ಸುವರ್ಣಾ...


ಸನ್ಮಾನ್ಯರೇ,

ಕೆಲದಿನಗಳ ಹಿಂದೆ ತಾವೊಂದು ಪ್ರಕಟಣೆಯ ಮೂಲಕ ಅಮೀರ್‌ಖಾನ್‌ರವರ "ಸತ್ಯಮೇವ ಜಯತೇ" ದೂರದರ್ಶನ ಕಾರ್ಯಕ್ರಮವನ್ನು ತಮ್ಮ ಪ್ರತಿಷ್ಠಿತ ವಾಹಿನಿಯಾದ ಸುವರ್ಣ ಕನ್ನಡ ವಾಹಿನಿಯಲ್ಲಿ ಕನ್ನಡದಲ್ಲಿಯೇ ಪ್ರಸಾರ ಮಾಡುವುದಾಗಿ ಹೇಳಿಕೆ ನೀಡಿದ್ದಿರಿ. ಕೆಲವು ಕನ್ನಡ ಚಲನಚಿತ್ರ ಹಾಗೂ ಟಿವಿ ಕಲಾವಿದರ ಸಂಘದ ಪದಾಧಿಕಾರಿಗಳನ್ನು ಭೇಟಿಯಾದ ನಂತರ ನಿಮ್ಮ ನಿಲುವನ್ನು ಬದಲಿಸಿರುವುದಾಗಿ ಮತ್ತೊಂದು ಹೇಳಿಕೆಯನ್ನು ಕೂಡಾ ನೀಡಿದಿರಿ. 

ನಿಮ್ಮ ಮೊದಲ ಹೇಳಿಕೆಯಿಂದ "ಕನ್ನಡಿಗರಿಗೆ ಹತ್ತಿದ್ದ ನಲವತ್ತು ವರ್ಷಗಳ ಶಾಪ" ಕಳೆಯಿತು ಎಂಬ ಸಂತಸದಲ್ಲಿದ್ದ ಕನ್ನಡ ಪ್ರೇಕ್ಷಕನಿಗೆ ನಿಮ್ಮ ಎರಡನೆಯ ಹೇಳಿಕೆ ನಿರಾಸೆಯುಂಟು ಮಾಡಿದ್ದು ಸತ್ಯ! ಈ ಪ್ರಕ್ರಿಯೆಗಳಲ್ಲಿ ಕನ್ನಡ ನೋಡುಗನ ಅನಿಸಿಕೆಗೂ ಮಹತ್ವವಿದ್ದೀತೆಂದು ಭಾವಿಸಿ "ಮಿಂಬಲೆ ಮನವಿ" (ಆನ್‌ಲೈನ್ ಪಿಟಿಷನ್) ಒಂದನ್ನು ಆರಂಭಿಸಿ ಕೇವಲ ಎರಡೇ ದಿನಗಳಲ್ಲಿ ಒಂಬೈನೂರಾ ಐವತ್ತಕ್ಕೂ ಹೆಚ್ಚಿನ ಸಹಿಗಳನ್ನು ಸಂಗ್ರಹಿ,ಸಿ ತಮ್ಮ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಮಾಡಿ ಮನವಿ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ತಮ್ಮ ಮುಖ್ಯಸ್ಥರು ಸದರಿ ಕನ್ನಡದ ಸತ್ಯಮೇವ ಜಯತೇ ಸರಣಿಯನ್ನು ವೆಬ್‌ಕ್ಯಾಸ್ಟ್ ಮೂಲಕ ಪ್ರಕಟಿಸುವುದಾಗಿ ಭರವಸೆಯನ್ನು ನೀಡಿದ್ದರು.

ತಮ್ಮ ಮಾತಿನಂತೆಯೇ ಕನ್ನಡದಲ್ಲಿ "ಸತ್ಯಮೇವ ಜಯತೇ" ಸರಣಿಯ ಮೊದಲನೇ ಕಂತನ್ನು ವೆಬ್‌ಕ್ಯಾಸ್ಟ್ ಮೂಲಕ ಪ್ರಕಟಿಸಿಯೂ ಬಿಟ್ಟಿರಿ. ಆ ಮೂಲಕ ಕನ್ನಡದಲ್ಲಿ ನಮ್ಮ ಮನರಂಜನೆಯನ್ನು ಪಡೆದುಕೊಳ್ಳುವ ನಮ್ಮ ಹಕ್ಕನ್ನು ಎತ್ತಿಹಿಡಿದಿರೆಂದು ಜನತೆ ಹಿಗ್ಗಲು ಕಾರಣರಾದಿರಿ. ಜನರಿಗೆ ಡಬ್ಬಿಂಗ್ ಆದ ಕಾರ್ಯಕ್ರಮ ಬೇಕು ಎನ್ನುವುದಕ್ಕೆ ಪುರಾವೆಯೆಂಬಂತೆ ಕೇವಲ ಮೂರೇ ದಿನದಲ್ಲಿ ೩೦,೦೦೦ಕ್ಕೂ ಹೆಚ್ಚು ಜನರು ಕನ್ನಡದಲ್ಲಿ ಡಬ್ ಆದ ಆ ಕಾರ್ಯಕ್ರಮವನ್ನು ನೋಡಿದ್ದು ತಮ್ಮ ಗಮನಕ್ಕೂ ಬಂದಿದೆಯೆಂದು ಭಾವಿಸುತ್ತೇವೆ.

ಇದಾದ ನಂತರ ತಮ್ಮದೇ ಸುದ್ದಿವಾಹಿನಿಯ ಮೂಲಕ ಮಿಂಬಲೆಯಲ್ಲಿ ಜನಾಭಿಪ್ರಾಯವನ್ನು ಪಡೆದುಕೊಂಡಿರಿ. ಇದರಲ್ಲಿ ನೂರಕ್ಕೆ ೯೧ರಷ್ಟು ಮಂದಿ ಡಬ್ಬಿಂಗ್ ಕಾರ್ಯಕ್ರಮವನ್ನು ಬೆಂಬಲಿಸಿ ಮತದಾನ ಮಾಡಿದ್ದನ್ನು ತಾವೇ ಪ್ರಕಟಿಸಿದಿರಿ. ಡಬ್ಬಿಂಗ್ ಪರವಾದ ಜಾಗೃತಿಯು ಕೇವಲ ಅಂತರ್ಜಾಲದಲ್ಲಷ್ಟೇ ಆಗಿಲ್ಲ ಎನ್ನುವುದನ್ನು ಸಾಬೀತು ಪಡಿಸುವಂತೆ, ಎಸ್ಸೆಮ್ಮೆಸ್ ಮೂಲಕ ನಡೆದ ಮತದಾನದಲ್ಲಿ ನೂರಕ್ಕೆ ೮೭ರಷ್ಟು ಜನರು ಡಬ್ಬಿಂಗ್ ಪರವಾಗಿದ್ದುದನ್ನು ಕೂಡಾ ತಾವೇ ಪ್ರಕಟಿಸಿದಿರಿ. ದುರಾದೃಷ್ಟವಶಾತ್ ಈ ಫಲಿತಾಂಶಗಳನ್ನು ಇತ್ತ ತಮ್ಮ ಸುದ್ದಿ ವಾಹಿನಿಯು ಪ್ರಕಟಿಸುತ್ತಿರುವಾಗಲೇ ಅತ್ತ ಕನ್ನಡದಲ್ಲಿ ಡಬ್ ಆಗಿ ಅಂತರ್ಜಾಲದಲ್ಲಿ ಮಾತ್ರಾ ಸಿಗುತ್ತಿದ್ದ, ಎರಡೇ ದಿನಗಳಲ್ಲಿ ೩೦,೦೦೦ಕ್ಕೂ ಹೆಚ್ಚು ಜನರಿಂದ ನೋಡಲಾದ ಕನ್ನಡ ಅವತರಣಿಕೆಯ "ಸತ್ಯಮೇವ ಜಯತೇ" ಕಾರ್ಯಕ್ರಮದ ಮೊದಲ ಕಂತಿನ ವೀಡಿಯೋವನ್ನು ಯೂಟ್ಯೂಬಿನಿಂದ ತೆಗೆದು ಹಾಕಿಬಿಟ್ಟಿರಿ!

ಈ ಮೂಲಕ ತಮ್ಮನ್ನು "ಕನ್ನಡಿಗ ಪ್ರೇಕ್ಷಕರು ಯಾವ ತಪ್ಪೆಸೆಗಿದ್ದಕ್ಕಾಗಿ ಹೀಗೆ ತಾವು ಮಾಡಿದಿರಿ? ಅದಾವ ಕಾಣದ ಕೈಗಳ ಒತ್ತಡಕ್ಕೆ ತಾವು ಮಣಿಯಬೇಕಾಯಿತು? ಇದ್ದ ಸೀಮಿತ ಸಮಯದಲ್ಲೇ ಅತ್ಯಂತ ಹೆಚ್ಚು ಜನರಿಂದ ನೋಡಲ್ಪಟ್ಟ ಒಂದು ಕಾರ್ಯಕ್ರಮವನ್ನು ತಾವು ಹೀಗೆ ಏಕೆ ಏಕಾಏಕಿ ತೆಗೆದುಹಾಕಿಬಿಟ್ಟಿರಿ?" ಎಂದು ಕೇಳ ಬಯಸುತ್ತೇವೆ. ಇಷ್ಟಕ್ಕೂ ತಮ್ಮ ವಾಹಿನಿ, ತಮ್ಮ ಕಾರ್ಯಕ್ರಮ... ಹಾಗಾಗಿ  ತಮಗೆ ಬೇಕಾದುದನ್ನು ಹಾಕುವ, ತೆಗೆಯುವ, ಹಾಕುತ್ತೇವೆಂದು ಹೇಳಿ ಹಾಕದಿರುವ, ಹಾಕಿಯೂ ತೆಗೆದು ಹಾಕುವ, ತೆಗೆದು ಹಾಕಿದ್ದಕ್ಕೆ ಕಾರಣವನ್ನು ನೀಡದಿರುವ ಎಲ್ಲಾ ಸ್ವಾತಂತ್ರ್ಯವೂ ತಮಗಿದೆ ಎನ್ನುವುದನ್ನು ಗೌರವಿಸುತ್ತಲೇ "ಸತ್ಯಮೇವ ಜಯತೇ" ಕಾರ್ಯಕ್ರಮದ ಕನ್ನಡ ಅವತರಣಿಕೆಯನ್ನು ಯಾವ ಕಾರಣಕ್ಕಾಗಿ ತೆಗೆದುಹಾಕಿಬಿಟ್ಟಿರಿ ? ಎನ್ನುವುದಕ್ಕೆ ಜನರಿಗೆ ಉತ್ತರ ನೀಡಬೇಕಾದ ನೈತಿಕ ಹೊಣೆ ತಮ್ಮದೆಂದು ಮಾತ್ರಾ ನೆನಪು ಮಾಡಲು ಬಯಸುತ್ತೇವೆ. ಹೇಳಿ... ಸತ್ಯಮೇವ ಜಯತೇ ಎಂದು ಇಡೀ ಭಾರತಕ್ಕೇ ಸಾರಲು ಹೊರಟಿರುವ ನೀವು "ಸತ್ಯಮೇವ ಜಯತೇ" ಕನ್ನಡ ಅವತರಣಿಕೆಯನ್ನು ತೆಗೆದುಹಾಕಿದ್ದು ಯಾಕೆ? ಸತ್ಯಾ ಹೇಳಿ ಸ್ಟಾರ್ ಸುವರ್ಣಾ...!

ಗ್ರಾಹಕ ಹಕ್ಕು ಮತ್ತು ಡಬ್ಬಿಂಗ್

(ಫೋಟೋ ಕೃಪೆ: ಪ್ರಜಾವಾಣಿ)

ಇಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ನಾನಾರೀತಿಯ ಮನೋರಂಜನೆ, ಸಿನಿಮಾ, ಟಿವಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಇವುಗಳನ್ನು ಯಾರಾದರೂ ನೋಡಬೇಕೆಂದರೆ ಅವನ್ನು ತಮ್ಮ ಭಾಷೆಗೆ ಮಾತು ಬದಲಿಸಿಅಂದರೆ ಡಬ್ ಮಾಡಿ ನೋಡುವ ಏರ್ಪಾಡಿದೆ. ಭಾರತದಲ್ಲೂ ಡಬ್ಬಿಂಗ್ ವ್ಯವಸ್ಥೆ ಹೆಚ್ಚಿನ ಎಲ್ಲಾ ಕಡೆ ಜಾರಿಯಲ್ಲಿದ್ದರೂ ನಮ್ಮ ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ನಿಷೇಧವಿದೆ. ಕನ್ನಡದ ಮಕ್ಕಳು ತಮ್ಮಿಷ್ಟದ ಪೋಗೋ, ಕಾರ್ಟೂನ್ ಮೊದಲಾದ ವಾಹಿನಿಗಳನ್ನೂ ಅವತಾರ್, ಜುರಾಸಿಕ್ ಪಾರ್ಕ್, ಜಂಗಲ್‌ಬುಕ್ ಮೊದಲಾದ ಚಿತ್ರಗಳನ್ನೂ ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲ. ಕನ್ನಡವಲ್ಲದೆ ಬೇರಾವ ಭಾಷೆಯನ್ನೂ ಅರಿಯದ ಕನ್ನಡಿಗರು ಪರಭಾಷೆಯ ಚಿತ್ರಗಳನ್ನು, ಜ್ಞಾನ ವಿಜ್ಞಾನದ ವಾಹಿನಿಗಳನ್ನು ನೋಡಬೇಕೆಂದರೆ... ಇಲ್ಲವೇ ಅರ್ಥವಾಗದೆ ನೋಡಬೇಕು ಅಥವಾ ಆಯಾಭಾಷೆಗಳನ್ನು ಕಲಿತು ನೋಡಬೇಕು. ಹೀಗೆ ಅವಕಾಶ ಇಲ್ಲದಿರಲು ಕಾರಣ ಯಾವುದೋ ಸರ್ಕಾರಿ ಕಾಯ್ದೆಯಾಗಲೀ, ಇಂತಹ ಕಾರ್ಯಕ್ರಮಗಳನ್ನು ನೀಡುವವರು ಇಲ್ಲದೇ ಆಗಲೀ ಅಲ್ಲಾ. ಬದಲಿಗೆ ಕನ್ನಡ ದೂರದರ್ಶನ ಮತ್ತು ಚಿತ್ರರಂಗದ ಕಾನೂನುಬಾಹಿರವಾದ ಡಬ್ಬಿಂಗ್ ನಿಷೇಧದ ಕಾರಣದಿಂದ. ಭಾರತದಲ್ಲಿ ಸಂವಿಧಾನದ ನೆಲೆಯಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನುಬಾಹಿರವಾದ ನಿಲುವು. ಡಬ್ಬಿಂಗ್ ನಿಷೇಧ ಎನ್ನುವ ನಿಲುವು ವಾಸ್ತವವಾಗಿ ಪ್ರಜಾಪ್ರಭುತ್ವ ವಿರೋಧಿಯಾದುದಾಗಿದೆ.


ಪ್ರೇಕ್ಷಕನೆಂಬ ಗ್ರಾಹಕ ಧ್ವನಿ


ತಾಂತ್ರಿಕವಾಗಿ ಸಾಧ್ಯವಿರುವಾಗ, ದೇಶದಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನಾಗಿಲ್ಲದಿರುವಾಗ ಪ್ರೇಕ್ಷಕನಿಗೆ ಡಬ್ ಆದ ಚಿತ್ರಗಳನ್ನು ನೋಡುವ ಅವಕಾಶ ಇರಬೇಕಾಗಿದೆ. ಡಬ್ಬಿಂಗ್ ಬೇಡ ಎನ್ನುವವರಿಗೆ ಸಂಘ ಸಂಸ್ಥೆಗಳಂತಹ ವೇದಿಕೆಗಳಿದ್ದು ಪ್ರತಿಭಟನೆಯನ್ನು ದಾಖಲಿಸುವುದು ಸುಲಭ. ಆದರೆ ಪ್ರೇಕ್ಷಕನಿಗೆ ಇಂತಹ ಯಾವುದೇ ವೇದಿಕೆ/ಅವಕಾಶ ಇಲ್ಲದಿರುವಾಗ ಆತ ತನ್ನ ನಿಲುವನ್ನು ಪತ್ರಿಕೆಗಳಿಗೆ ಬರೆಯುವ ಮೂಲಕ, ಮಿಂಬಲೆ ತಾಣಗಳ ಚರ್ಚೆಗಳಲ್ಲಿ ದನಿಯೆತ್ತುವ ಮೂಲಕ ತೋರಬಲ್ಲನಷ್ಟೆ. ಇದನ್ನುಪಯೋಗಿಸಿಕೊಂಡು ಡಬ್ಬಿಂಗಿಗೆ ಜನರ ಬೇಡಿಕೆಯಿಲ್ಲಾ, ಇದು ಕೆಲವರ ಅನಿಸಿಕೆ ಅಷ್ಟೇ ಎನ್ನುವುದು ಅಪ್ರಜಾಸತ್ತಾತ್ಮಕವಾದುದಾಗಿದೆ.


ಪ್ರಜಾಪ್ರಭುತ್ವದಲ್ಲಿ ಡಬ್ಬಿಂಗ್


ಪ್ರೇಕ್ಷಕನೆಂಬ ಗ್ರಾಹಕನ ಒಲವು ಒಂದು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವ ಮೂಲಕ ಅಥವಾ ಸೋಲಿಸುವ ಮೂಲಕ ವ್ಯಕ್ತವಾಗುತ್ತದೆ. ಹೀಗೆ ತೀರ್ಮಾನಿಸುವ ಅವಕಾಶವನ್ನು ಡಬ್ ಆದ ಚಿತ್ರಗಳಿಗೂ ನೀಡಬೇಕಾದ್ದು ಸಹಜನ್ಯಾಯವಾಗಿದೆ. ಡಬ್ಬಿಂಗ್ ಆದ ಚಿತ್ರಗಳ ಹಣೇಬರಹವನ್ನು ನಿರ್ಣಯಿಸುವ ಅವಕಾಶ ಪ್ರೇಕ್ಷಕ ಮಹಾಪ್ರಭುವಿಗೆ ಇರಬೇಕಾದ್ದೇ ಸರಿಯಾದುದಾಗಿದೆ. ನಿಜಕ್ಕೂ ಡಬ್ಬಿಂಗ್ ಎನ್ನುವುದು ಹಾನಿಕರ ಎನ್ನುವುದಾದಲ್ಲಿ ಆ ನಿಲುವನ್ನು ಕರ್ನಾಟಕದ ಜನರಲ್ಲಿ ಪ್ರಚುರಪಡಿಸಿ ಅವರೇ ಅಂತಹ ಚಿತ್ರಗಳನ್ನು ತಿರಸ್ಕರಿಸುವಂತೆ ಮಾಡುವುದರಲ್ಲಿದೆಯೇ ಹೊರತು ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸುವ ಸಂವಿಧಾನಬಾಹಿರವಾದ ನಡೆಯಲ್ಲಿಲ್ಲ!


ವಿಶ್ವಸಂಸ್ಥೆ ನಿಲುವು ಮತ್ತು ಭಾಷೆಯ ಉಳಿವು


ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯ ಮೂಲಕ ಪ್ರತಿಯೊಂದು ಭಾಷಿಕ ಜನರಿಗೂ ತನ್ನ ನುಡಿ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳಲು ಹಲವು ಹಕ್ಕುಗಳಿರುವುದನ್ನು ಗುರುತಿಸಿ ಎತ್ತಿ ಹಿಡಿದಿದೆ. ಅದರಲ್ಲಿ ಡಬ್ಬಿಂಗ್ ಎನ್ನುವುದನ್ನೂ ಕೂಡಾ ಒಂದು ಅಸ್ತ್ರವೆಂದಾಗಿಯೇ ಪರಿಗಣಿಸಲಾಗಿದೆ. ಯಾವುದೇ ಜನಾಂಗಕ್ಕೆ ತನ್ನ ಭಾಷೆಗೆ ಪರಭಾಷೆಯ ವಿಷಯ/ ಮಾಹಿತಿ ಮೊದಲಾದವುಗಳನ್ನು ತರ್ಜುಮೆ ಮಾಡುವ/ ಡಬ್ಬಿಂಗ್ ಮಾಡುವ ಹಕ್ಕಿದೆ ಎನ್ನುತ್ತದೆ ಸೆಕ್ಷನ್ ೪೪. ಅಂದರೆ ಡಬ್ಬಿಂಗ್ ಎನ್ನುವುದು ಸಂವಿಧಾನ ಬಾಹಿರವಾದುದೂ ಅಲ್ಲಾ, ಭಾಷೆಗೆ ಹಾನಿ ಮಾಡುವುದೂ ಅಲ್ಲ ಎನ್ನುವುದು ಇದರ ಸಾರ. ಕನ್ನಡತನಕ್ಕೆ ಡಬ್ಬಿಂಗ್ ಮಾರಕವಾದುದು ಎನ್ನುವ ವಾದವನ್ನು ನಾವು ಕೇಳಬಹುದಾಗಿದೆ. ವಾಸ್ತವ ಇದಕ್ಕೆ ವಿರುದ್ಧವಾಗಿದೆ.


ಕನ್ನಡತನ ಮತ್ತು ಡಬ್ಬಿಂಗ್


ಡಬ್ಬಿಂಗ್ ಇಲ್ಲದೇ ಹೋದರೆ ಪರಭಾಷೆಯ ಚಿತ್ರಗಳನ್ನು/ ಕಾರ್ಯಕ್ರಮಗಳನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ತಮಿಳಿನ, ತೆಲುಗಿನ, ಹಿಂದಿಯ, ಇಂಗ್ಲೀಷಿನ... ಇನ್ನಾವುದೇ ಭಾಷೆಯ ಕಾರ್ಯಕ್ರಮವನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ಕನ್ನಡವೊಂದಲ್ಲದೇ ಬೇರೆ ನುಡಿ ಅರಿಯದವರಿಗೆ ಇದು ತೊಡಕಿನ ವಿಷಯವಾಗಿದೆ. ಈಗ ನೀವೇ ಹೇಳಿ... ಕನ್ನಡಿಗನೊಬ್ಬ ತನ್ನೆಲ್ಲಾ ಮನರಂಜನೆಯನ್ನು ಕನ್ನಡದಲ್ಲಿಯೇ ಪಡೆದುಕೊಳ್ಳುವುದು ಕನ್ನಡಪರವೋ? ತನ್ನದಲ್ಲದ ನುಡಿಯಲ್ಲಿ ನೋಡುವುದೋ? ಇನ್ನೂ ತಮಾಶೆಯ ವಿಷಯವೆಂದರೆ ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಒಂದು ಇಂಗ್ಲೀಷ್ ಚಿತ್ರ ಡಬ್ಬಿಂಗ್ ಆಗಿ ತಮಿಳು, ತೆಲುಗು, ಹಿಂದೀ ಭಾಷೆಗಳಲ್ಲೂ ಬಿಡುಗಡೆಯಾಗುತ್ತದೆ. ಆದರೆ ಕನ್ನಡದಲ್ಲಿ ಮಾತ್ರಾ ಆಗುವುದಿಲ್ಲ. ಅಂದರೇನರ್ಥ? ನಾವು ಕನ್ನಡಿಗರಾಗಿ ಹುಟ್ಟಿರುವುದೇ ಪಾಪ ಎಂದು ಜನರಿಗೆ ಅನ್ನಿಸಿದರೆ ಅಚ್ಚರಿಯಿಲ್ಲ! ಭಾರತದಲ್ಲಿ ಎಲ್ಲಾ ಜನರಿಗೆ ಸಿಗುತ್ತಿರುವ, ಕನ್ನಡಿಗರಿಗೆ ವಂಚಿಸಲಾಗಿರುವ ತಾಯ್ನುಡಿಯಲ್ಲಿ ,ಮನರಂಜನೆ ಪಡೆದುಕೊಳ್ಳುವ ಹಕ್ಕುಇಲ್ಲವಾಗಿರುವುದು ಡಬ್ಬಿಂಗ್ ಎನ್ನುವ ಕಾನೂನು ಬಾಹಿರವಾದ ನಿಲುವಿನಿಂದಾಗಿಯೇ ಆಗಿದೆ!


ವಾಸ್ತವವಾಗಿ ಡಬ್ಬಿಂಗ್ ವಿರೋಧಿಗಳು ಮುಂದಿಡುವ ಕನ್ನಡ ಸಂಸ್ಕೃತಿ ನುಡಿ ರಕ್ಷಣೆಗಾಗಿ ಡಬ್ಬಿಂಗ್ ಬೇಡ ಎನ್ನುವ ಮಾತು ಪೊಳ್ಳಿನದ್ದಾಗಿದೆ ಎಂದು ಇಂದಿನ ಮಚ್ಚು ಲಾಂಗುಗಳ, ರಿಮೇಕ್ ಸಾಗರಗಳ ಸಿನಿಮಾಗಳನ್ನು ನೋಡಿದರೆ ಅರಿವಾಗುತ್ತದೆ. ಚಿತ್ರರಂಗ ಸಮಾಜದ ಕನ್ನಡಿಯೇ ಹೊರತು ಅದರಿಂದಾಗಿಯೇ ಸಂಸ್ಕೃತಿ ರೂಪುಗೊಳ್ಳುತ್ತದೆ ಎನ್ನುವುದು ಬರೀ ಪೊಳ್ಳು ಮಾತಾಗಿದೆ. ಹಾಗಿದ್ದಿದ್ದರೆ ಇವತ್ತು ಕನ್ನಡಿಗರೆಲ್ಲಾ ಮಚ್ಚು ಲಾಂಗುಗಳ ಕ್ರಿಮಿನಲ್ಲುಗಳಾಗುತ್ತಿದ್ದರು! ಅಷ್ಟೇ.



ಇನ್ನು ಸಾವಿರಾರು ಜನರ ಹೊಟ್ಟೆಪಾಡು ಎನ್ನುವ ಆತಂಕ ಡಬ್ಬಿಂಗ್ ವಿರೋಧಿಗಳದ್ದು. ಹಿಂದೆ ಸಾರಾಯಿ, ಆನ್‌ಲೈನ್ ಲಾಟರಿಗಳು ನಿಷೇಧವಾದಾಗ ಸುಮಾರು ಮೂರುಲಕ್ಷ ಜನರು ಉದ್ಯೋಗ ಕಳೆದುಕೊಳ್ಳಬೇಕಾಯಿತು. ಅದರಿಂದ ಈಗ ಏನಾಯಿತು? ಅವರೆಲ್ಲಾ ಪರ್ಯಾಯ ಉದ್ಯೋಗ ಕಂಡುಕೊಳ್ಳಲಿಲ್ಲವೇ? ಈ ಹಿಂದೆ ಕಾಯಿನ್ ಬೂತುಗಳನ್ನು ನಡೆಸುತ್ತಿದ್ದವರೆಲ್ಲಾ ಮೊಬೈಲು ಫೋನುಗಳು ಬರಬಾರದು ಎಂದು ಗೂಂಡಾಗಿರಿ ಮಾಡಿದ್ದರೆ ಒಪ್ಪಲಾಗುತ್ತಿತ್ತೇ? ಹಾಗೇ ಡಬ್ಬಿಂಗ್ ಬೇಡ ಎನ್ನುವವರು ಸ್ಪರ್ಧೆ ಎದುರಿಸಲಾಗದೆ ಈ ನಿಲುವಿಗೆ ಬಂದಿದ್ದಾರೆನ್ನುವುದೇ ವಾಸ್ತವ ಎನ್ನಿಸುತ್ತದೆ. ಇಲ್ಲದಿದ್ದರೆ ಡಬ್ಬಿಂಗ್ ತಡೆಯಲು ಕಾನೂನುಬಾಹಿರ ದಾಳಿ, ಬೆದರಿಕೆಗಳಂತಹ ಕ್ರಮಗಳಿಗೆ ಅವರು ಮುಂದಾಗುತ್ತಿರಲಿಲ್ಲ. ಒಟ್ಟಿನಲ್ಲಿ, ಯಾವುದೇ ಉದ್ದಿಮೆಯ ಉದ್ದೇಶವಾಗಿರುವ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ತನ್ನಿಷ್ಟದ ಸರಕುಗಳನ್ನು ಕೊಳ್ಳುವ ಹಕ್ಕು ಇರಬೇಕು. ಪ್ರೇಕ್ಷಕನಿಗೆ ಡಬ್ಬಿಂಗ್ ಸಿನಿಮಾ ನೋಡುವ ಮೆಚ್ಚುವ ತಿರಸ್ಕರಿಸುವ ಹಕ್ಕು ಇರಬೇಕು. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಅದಿಲ್ಲ! ಬರಬೇಕು! ಬರಲೇಬೇಕು!!


(ಪ್ರಜಾವಾಣಿ ದಿನಪತ್ರಿಕೆಯ ೨೮.೦೪.೨೦೧೨ರ ಸಂಚಿಕೆಯ ಅಂತರಾಳ ಪುಟದಲ್ಲಿ ಪ್ರಕಟವಾದ ಬರಹ)
Related Posts with Thumbnails