ಹಿಂದೀ ಹೇರಿಕೆಯ ಹೊಸ ಮಜಲು: ಸಹೀ ರೀ ಸಹೀ!

ಭಾರತದ ಸಂವಿಧಾನದ ಆಶಯದಂತೆ ಎನ್ನುತ್ತಾ ಆಡಳಿತ ಭಾಷಾ ಇಲಾಖೆಯನ್ನು ತೆರೆದು ಅದರ ಮೂಲಕ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ಕೇಂದ್ರಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಹಿಂದೀ ಹೇರಿಕೆಯನ್ನು ನಡೆಸುತ್ತಾ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಈ ಬಾರಿ ನಾವು ನಿಮಗೆ ಹೇಳಲು ಮುಂದಾಗಿರುವುದು ಈ ಹೇರಿಕೆಯ ಇನ್ನೊಂದು ಮಜಲನ್ನು.

ಕೆಲಸಕ್ಕೆ ಹಿಂದೀ ಕಡ್ಡಾಯ!

ಹಿಂದೀ ಬರದೇ ಇರುವವರಿಗೆ ಕೆಲಸ ಸಿಗುವುದಿಲ್ಲಾ ಅನ್ನುವುದನ್ನು ಹೇಳೋ ವಿಧಾನವೆಂದರೆ ಹಿಂದೆ ರೈಲು ನೇಮಕಾತಿಯಲ್ಲಿ ಹಿಂದೀ/ ಇಂಗ್ಲೀಷಲ್ಲಿ ಮಾತ್ರ ಅರ್ಜಿ ಬರೆಯಬೇಕೆನ್ನುವ ನಿಬಂಧನೆ ಹಾಕಿದ್ದು, ಬ್ಯಾಂಕ್ ನೌಕರಿಗೆ ಅರ್ಜಿ ಹಾಕಲು ನಿಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ಹಿಂದೀ ಅನ್ನೋ ವಿಷಯ ಇರಬೇಕು ಎನ್ನುವಂತಹ ಕಟ್ಟಳೆ ಹಾಕಿದ್ದು... ಇತ್ಯಾದಿಯೆಲ್ಲಾ ಇರುವುದನ್ನು ನಿಮ್ಮ ಗಮನಕ್ಕೆ ಈ ಹಿಂದೆಯೇ ತಂದಿದ್ದೆವು. ಹೀಗೆಲ್ಲಾ ಮಾಡುವ ಮೂಲಕ ನಮ್ಮ ನಾಡಿನ ಕೆಲಸಗಳನ್ನು ಹಿಂದೀ ಬಲ್ಲವರಿಗೆ ಕೊಡುವ ಕೇಂದ್ರಸರ್ಕಾರದ ಮನಸ್ಥಿತಿಯನ್ನು ತೆರೆದಿಟ್ಟಿದ್ದೆವು. ಈ ಬಾರಿ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಸಾಗಿರುವ ಭಾರತದ ರೈಲ್ವೇ ನೇಮಕಾತಿ ಮಂಡಲಿಯ ಈ ಅರ್ಜಿಯನ್ನು ನೋಡಿ.

ಸಹೀ ಇಂಗ್ಲೀಶ್/ ಹಿಂದೀಲಿರಬೇಕಂತೆ!

ಈ ಅರ್ಜಿಯ ಕೊನೆಯಲ್ಲಿ ಹೀಗೆ ಸೂಚನೆ ಬರೆದಿದ್ದಾರೆ:

೧. ಅಭ್ಯರ್ಥಿಗಳು ತಮ್ಮ ಹೆಸರು, ತಂದೆಯ ಹೆಸರು ಮತ್ತು ಹುಟ್ಟಿದ ದಿನಾಂಕಗಳನ್ನು ಮೆಟ್ರಿಕ್ ಪರೀಕ್ಷೆಯ ಪ್ರಮಾಣಪತ್ರದಲ್ಲಿರುವಂತೆ ಬರೆಯತಕ್ಕದ್ದು.

೨. ಅಭ್ಯರ್ಥಿಯು ಅರ್ಜಿಯಲ್ಲಿ ಸೂಚಿಸಿರುವ ಎಲ್ಲೆಡೆಯಲ್ಲೂ ಒಂದೇ ಭಾಷೆಯಲ್ಲಿ ಸಹಿ ಹಾಕಬೇಕು. (ಹಿಂದೀ ಅಥವಾ ಇಂಗ್ಲೀಶಿನಲ್ಲಿ)

ಪ್ರಪಂಚದಲ್ಲಿ ಸಹಿ ಅನ್ನೋದಕ್ಕೆ ಯಾವ ಭಾಷೆಯ ಕಟ್ಟುಪಾಡೂ ಇಲ್ಲ. ಸಹಿಯನ್ನು ಯಾವ ಭಾಷೆಯಲ್ಲಿ ಮಾಡಿದರೂ ಒಪ್ಪಲಾಗುತ್ತದೆ ಎನ್ನುವುದು ಸಾಮಾನ್ಯ ರೀತಿನೀತಿ. ನಾವು ಬ್ಯಾಂಕ್ ಚೆಕ್‍ಗಳಲ್ಲಿ ನಮ್ಮ ನುಡಿಯಲ್ಲಿಯೇ ಸಹಿ ಹಾಕಬಹುದು. ಪಾಸ್‍ಪೋರ್ಟ್‍ಗಳಲ್ಲಿ ನಮ್ಮ ನುಡಿಯಲ್ಲೇ ಸಹಿ ಹಾಕಬಹುದು. ಆದರೆ ರೈಲ್ವೇ ಇಲಾಖೆಯಲ್ಲಿನ ನೇಮಕಾತಿಗಾಗಿರುವ ಈ ಅರ್ಜಿಯಲ್ಲಿ ಸಹೀನೂ ಇಂಥದ್ದೇ ಭಾಷೇಲಿ ಇರಬೇಕು ಅಂದಿದ್ದಾರಲ್ಲಾ? ಏನನ್ನಬೇಕು ಗುರೂ ಇದಕ್ಕೇ?

ಜನಲೋಕಪಾಲ್ ಮತ್ತು ಭ್ರಷ್ಟಾಚಾರ ನಿರ್ಮೂಲನೆ


ಭಾರತೀಯರಿಗೆ, ಸದ್ಯಕ್ಕೆ ಭ್ರಷ್ಟ ರಾಜಕಾರಣಿಗಳ ವಿರುದ್ಧವಾಗಿ ಬ್ರಹ್ಮಾಸ್ತ್ರವಾಗಿ ಕಾಣಿಸುತ್ತ ಇರೋದು, ಪರಮ ಪ್ರಾಮಾಣಿಕ ಎನ್ನಿಸಿರುವ, ಮಾಜಿ ಸೈನಿಕರಾಗಿರುವ, ಅನೇಕ ಸಾಮಾಜಿಕ ಹೋರಾಟಗಳ ಮಹಾಸೇನಾನಿ ಶ್ರೀ ಅಣ್ಣಾ ಹಜ಼ಾರೆಯವರು. ಕಳೆದ ಏಪ್ರಿಲ್‍ನಲ್ಲಿ ಇವರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದು "ಜನಲೋಕ್ ಪಾಲ್ ಮಸೂದೆ"ಯನ್ನು ಜಾರಿ ಮಾಡಲು ಒತ್ತಾಯಿಸಿ. ಕೇಂದ್ರಸರ್ಕಾರ ಅಣ್ಣಾ ಬೇಡಿಕೆಗಳಿಗೆ ಮಣಿದು ಲೋಕ್‍ಪಾಲ್ ಮಸೂದೆಯ ಕರಡು ಸಮಿತಿಯನ್ನು ರಚಿಸಿ ಅದರಲ್ಲಿ ಸಂಸದರಲ್ಲದ ಐವರನ್ನು ಸೇರಿಸಿಕೊಂಡಿತು. ಈ ಸಮಿತಿಯು ಕರಡು ಪ್ರತಿ ಸಿದ್ಧಪಡಿಸುವಲ್ಲಿ ಒಮ್ಮತಕ್ಕೆ ಬರುವಲ್ಲಿ ಇನ್ನೂ ಸಫಲವಾಗಿರಲಿಲ್ಲ. ಅಷ್ಟರಲ್ಲಿ ಬಾಬಾ ರಾಮ್‍ದೇವ್ ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಅದನ್ನು ಸರ್ಕಾರ ಎದುರಿಸಿದ ರೀತಿಯನ್ನು ಕಂಡು, ಸಮಿತಿಯ ಐವರು ಸಂಸದೇತರ ಸದಸ್ಯರು ಸಮಿತಿಯ ಕರಡು ತಯಾರಿಕಾ ಸಭೆಯನ್ನು ಬಹಿಷ್ಕರಿಸಿದರು. ಕೊನೆಗೆ ಸರ್ಕಾರ ಸಂಸತ್ತಿನ ಮುಂದೆ ತನ್ನದೇ ಲೋಕ್‍ಪಾಲ್ ಮಸೂದೆಯ ಕರಡನ್ನು ಮಂಡಿಸಿತು. ಇದನ್ನು ಒಪ್ಪದ ಸಮಿತಿಯ ಅಣ್ಣಾ ಹಜ಼ಾರೆಯವರು ಇದೀಗ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಾ ಕುಳಿತಿದ್ದಾರೆ. ಏನ್‍ಗುರು, ಏಪ್ರಿಲ್ ತಿಂಗಳಲ್ಲಿ ಅಣ್ಣಾ ಉಪವಾಸವನ್ನು ಬೆಂಬಲಿಸಿ ಒಂದು ಬರಹವನ್ನು ಪ್ರಕಟಿಸಿತ್ತು.. "ಈ ಹೋರಾಟ ಗೆಲ್ಲಲೇ ಬೇಕು" ಎಂದು. ಹೌದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಗೆಲ್ಲಲೇಬೇಕು. ಆದರೆ ದಿನಗಳೆದಂತೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಮತ್ತೊಂದು ಮಗ್ಗುಲಿನಿಂದ ಹೋರಾಟವನ್ನು ನೋಡಿದಾಗ ಬೇರೆಯೇ ಆಯಾಮ ಕಾಣುತ್ತಿದೆ! ನಮ್ಮ ನಿಲುವಿನಲ್ಲಿ ಭ್ರಷ್ಟಾಚಾರ ಅಳಿಯಬೇನ್ನುವುದರ ಬಗ್ಗೆ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಅಣ್ಣಾ ಹಜ಼ಾರೆಯವರು ಅನುಸರಿಸುತ್ತಿರುವ ಕ್ರಮ, ಭ್ರಷ್ಟಾಚಾರ ತಡೆಗೆ ಯೋಚಿಸುತ್ತಿರುವ ಒಂಬಡ್ಸ್‍ಮನ್ ಹುದ್ದೆ ಸೃಷ್ಟಿಯ ಪರಿಣಾಮಕಾರಿತನದ ಬಗ್ಗೆ, ಭ್ರಷ್ಟಾಚಾರವನ್ನು ಅಳಿಸಲು ಸಾಗಬೇಕಾದ ದಾರಿಯ ಬಗ್ಗೆ... ಬೇರೆಯೇ ಅನಿಸಿಕೆ ಮೂಡುತ್ತಿದೆ.

ಭ್ರಷ್ಟಾಚಾರ ಅಳಿಯಬೇಕು!

ಅಣ್ಣಾ ಮತ್ತವರ ಬೆಂಬಲಿಗರ ಮೂಲೋದ್ದೇಶವಾದ ಭ್ರಷ್ಟಾಚಾರ ಅಳಿಯಬೇಕು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಭಾರತದ ಹಣ ಹಿಂತಿರುಗಿ ತರಬೇಕೆನ್ನುವ ಬೇಡಿಕೆಯ ಬಗ್ಗೆ ಎರಡನೇ ಮಾತಿಲ್ಲ. ಭಾರತವು ಟ್ರಾನ್ಸ್‍ಪರೆನ್ಸಿ ಇಂಟರ್ ನ್ಯಾಶನಲ್ ಸಂಸ್ಥೆಯು ಬಿಡುಗಡೆ ಮಾಡಿರುವ ೨೦೧೦ರ ಪ್ರಪಂಚದಲ್ಲಿ ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ೮೭ನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್, ಸಿಂಗಾಪುರ್, ಆಸ್ಟೇಲಿಯಾ, ನ್ಯೂಜಿಲಾಂಡ್ ಮೊದಲಾದವು ಇವೆ. ಈ ಪಟ್ಟಿಯ ಮೇಲಿನ ಸ್ಥಾನದಲ್ಲಿ ಭಾರತ ಇರಬೇಕೆನ್ನುವುದು ನಮ್ಮಾಸೆಯೂ ಹೌದು. ದೇಶದ ಜನಸಾಮಾನ್ಯರು ಭ್ರಷ್ಟಾಚಾರದಿಂದ ಅನುಭವಿಸುತ್ತಿರುವ ಪಾಡು ಇಲ್ಲವಾಗಬೇಕೆನ್ನುವ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.

ಆದರೆ ಜನ್‍ಲೋಕಪಾಲ್ ವ್ಯವಸ್ಥೆಯು ಇಂಥಾ ಗುರಿ ಮುಟ್ಟಲು ಪರಿಣಾಮಕಾರಿಯಾಗಬಲ್ಲುದೇ? ಇಂತಹ ಮಸೂದೆ ರೂಪಿಸಲು ಹೋರಾಡುತ್ತಿರುವವರು ಅನುಸರಿಸುತ್ತಿರುವ ಮಾರ್ಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಾರದೇ? ಲೋಕಪಾಲರೆಂಬ ಪೋಲೀಸಿನ ಸೃಷ್ಟಿಗಿಂತಲೂ ಭ್ರಷ್ಟಾಚಾರ ಇಲ್ಲವಾಗಿಸಲು ಪರಿಣಾಮಕಾರಿಯಾದ ವಿಧಾನವಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕಂಡುಕೊಳ್ಳಬೇಕಾಗಿದೆ.

ಭ್ರಷ್ಟರನ್ನು ಶಿಕ್ಷಿಸುವ ಸಾಧನಕ್ಕಿಂತ ಭಷ್ಟತನ ಮಾಡಲಾಗದಂತಹ ವ್ಯವಸ್ಥೆ ಪರಿಣಾಮಕಾರಿ!

ಭ್ರಷ್ಟಾಚಾರ ಇಲ್ಲವಾಗಿಸಲು ಒಂದು ದಾರಿ ಭ್ರಷ್ಟರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಇದರಲ್ಲಿನ ತೊಡಕೆಂದರೆ ಹಾಗೆ ಶಿಕ್ಷಿಸುವವರು ಯಾರು? ಅವರೂ ಭ್ರಷ್ಟರಾಗುವುದಿಲ್ಲ ಎನ್ನಲು ಏನು ಭರವಸೆ? ಆಕಸ್ಮಾತ್ ಅವರೂ ಭ್ರಷ್ಟರಾದರೆ ಮುಂದೇನು? ಕಳ್ಳರನ್ನು ಹಿಡಿಯಲು ಪೊಲೀಸ್, ಪೊಲೀಸ್ರೇ ಕಳ್ಳರಾದರೆ ಅಂತಹಾ ಕಳ್ಳ ಪೊಲೀಸ್ರನ್ನು ಹಿಡಿಯಲು ಮತ್ತೊಂದು ಪೊಲೀಸ್.. ಅವರನ್ನು ಹಿಡಿಯ್ತಲು ಮತ್ತೊಂದು ಇಲಾಖೆ... ಹೀಗೆ ಕೊನೆಯಿರದ ಸುಳಿಯಿದು. ಆದರೆ ಇಂತಹಾ ವ್ಯವಸ್ಥೆಯೇ ಬೇಡವೇ? ಬೇಕು... ಇಂತಹ ವ್ಯವಸ್ಥೆಯೂ ಬೇಕು. ಅದು ಭ್ರಷ್ಟಾಚಾರ ನಿಯಂತ್ರಣದ ವ್ಯವಸ್ಥೆಯ ಒಂದು ಅಂಗವಾಗಿ ಅಷ್ಟೆ. ಆದರೆ ನಮಗೆ ಬೇಕಿರುವುದು ಇದಕ್ಕಿಂತಾ ಪರಿಣಾಮಕಾರಿಯಾದ ದಾರಿ. ಅದು ಭ್ರಷ್ಟತೆಗೆ ಅವಕಾಶವನ್ನೇ ಇಲ್ಲವಾಗಿಸುವ ವ್ಯವಸ್ಥೆ. ಇದರಲ್ಲಿ ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಳ್ಳುವುದು ಒಂದೊಳ್ಳೆ ಸಾಧನ. ಪ್ರತಿಯೊಂದನ್ನೂ ತಾನೇ ಮಾಡುತ್ತೇನೆನ್ನುವ ಸರ್ಕಾರ ಸರಿಯಾದ ಕಟ್ಟುಪಾಡು, ನೀತಿ ನಿಯಮ ರೂಪಿಸಲಷ್ಟೇ ತನ್ನ ಪಾತ್ರವನ್ನು ಸೀಮಿತಿಗೊಳಿಸಿಕೊಳ್ಳುವುದು ಮತ್ತೊಂದು ವಿಧಾನ.
ಉದಾಹರಣೆಗೆ ಹೇಳಬೇಕೆಂದರೆ ರಸ್ತೆಗಳಲ್ಲಿ ಅಲ್ಲಲ್ಲಿ ಜಂಕ್ಷನ್‍ಗಳಿದ್ದು ಪ್ರತಿಯೊಂದಕ್ಕೂ ಟ್ರಾಫಿಕ್ ಸಿಗ್ನಲ್ ಹಾಕಿ, ಅದನ್ನು ದಾಟುವವರಿಗೆ ದಂಡ ಹಾಕುವ ಪೋಲೀಸನನ್ನು, ಅವನು ಭ್ರಷ್ಟಾಚಾರ ಮಾಡದಂತೆ ತಡೆಯಲು ಇನ್ಸ್‍ಪೆಕ್ಟರ್‍‍ನನ್ನು ನೇಮಿಸುತ್ತಾ ಹೋಗುವುದಕ್ಕಿಂತಾ ದಾರಿಯಲ್ಲಿ ಸಿಗ್ನಲ್‍ಗಳೇ ಇರದ, ಫ್ಲೈ ಓವರ್‌ಗಳನ್ನು ನಿರ್ಮಿಸುವುದು ಹೇಗೆ ಹೆಚ್ಚು ಪರಿಣಾಮಕಾರಿಯೋ ಹಾಗೇ ಭ್ರಷ್ಟತೆಗೆ ಅವಕಾಶ ನೀಡದ... ಸರ್ಕಾರದ ಹಸ್ತಕ್ಷೇಪ ಕಡಿಮೆಯಿರುವ... ಲೈಸೆನ್ಸ್ ರಾಜ್‍ ಇಲ್ಲದ ವ್ಯವಸ್ಥೆಯನ್ನು ಕಟ್ಟುವುದು ಹೆಚ್ಚು ಪರಿಣಾಮಕಾರಿಯಾದ ರೀತಿ. ಇದಾಗದ ಹೊರತು ಲೋಕಪಾಲರಂತಹ ಎಷ್ಟೇ ಸಂಸ್ಥೆಗಳು ಬಂದರೂ, ದಿನಕ್ಕೆ ನೂರಾರು ಭ್ರಷ್ಟ್ರರನ್ನು ಜೈಲಿಗಟ್ಟಿದರೂ, ಭ್ರಷ್ಟರಿಗೆ ಮರಣದಂಡನೆಯೇ ಶಿಕ್ಷೆಯೆಂದರೂ ಹೆಚ್ಚು ಪರಿಣಾಮವಾಗದು. ಯಾಕೆಂದರೆ ‘ದುಡ್ಡು ತಿನ್ನುವ ಅವಕಾಶವಿದೆ, ತಿಂದರೆ ತಲೆ ತೆಗೆಯುತ್ತೇವೆ’ ಎನ್ನುವ ವ್ಯವಸ್ಥೆಯಿದ್ದರೆ ತಲೆ ಉಳಿಸಿಕೊಂಡು ತಿನ್ನುವ ಮತ್ತೊಂದು ಕಳ್ಳದಾರಿ ಹುಡುಕುತ್ತಾರೆಯೇ ಹೊರತು ಶಿಕ್ಷೆಯ ಭಯದಿಂದ ತಿನ್ನದೇ ಇರುವುದನ್ನಲ್ಲ!

ಅಣ್ಣಾ ಹೋರಾಟದ ಬಗ್ಗೆ!

ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?

ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡು ಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ!

ಇಗೋ... ಸ್ವಾತಂತ್ರ್ಯ ದಿನಕ್ಕೊಂದು ರಾಮ ಬಾಣ!!


ಕನ್ನಡಿಗರೇ,

ಇಗೋ ತೊಗೊಳ್ಳೀ, ಭವ್ಯ ಭಾರತದ ಅರವತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಬದುಕನ್ನು ಉದ್ಧಾರ ಮಾಡೋಕೆ, ಭವ್ಯ ಭಾರತದ ಒಗ್ಗಟ್ಟು ಹೆಚ್ಚಿಸೋಕೆ ಅಂತಾ ಒಂದು ಹೊಸ ಯೋಜನೇನಾ ಸಿದ್ಧ ಮಾಡ್ಕೊಂಡು ಒಂದು ಬಿಲ್ ಮೂಲಕ ಸಂಸತ್ತಿನಲ್ಲಿ ಚರ್ಚೆ ಮಾಡಲು ನಮ್ಮ ಕರ್ನಾಟಕದ, ಕನ್ನಡಿಗರಾದ ಶ್ರೀ ಶ್ರೀ ಶ್ರೀ ೧೦೦೮ ರಾಮಾಜೊಯ್ಸ್ ಮಹಾಸ್ವಾಮಿಗಳು ಮುಂದಾಗಿದ್ದಾರೆ. ಪಾಪಾ! ಮಹಾನ್ ದೇಶಪ್ರೇಮಿ ಪಕ್ಷದ ರಾಜ್ಯಸಭೆಯ ಸದಸ್ಯರಾಗಿರೋ ಶ್ರೀಯುತರು ಭಾರತದ ಒಗ್ಗಟ್ಟಿಗಾಗೇ ಹಗಲಿರುಳು ತಪಸ್ಸು ಮಾಡಿ ಕಂಡುಕೊಂಡಿರೋ ಈ ಯೋಜನೆ ಏನಪ್ಪಾ ಅಂತಾ ಗೊತ್ತಾದ್ರೆ ನಾವೂ ಕೈಜೋಡಿಸೋಣ ಅಂತಾ ಅಂದ್ಕೊತಿದೀರಾ? ಬನ್ನಿ! ನೋಡಿ ಈ ಬಿಲ್ಲಿನಿಂದ ಮಂಡಗದ್ದೆಯ ರಾಮಾಜೊಯ್ಸರು ಬಿಡ್ತಾ ಇರೋ ರಾಮಬಾಣಾನಾ!!

ಈ ರಾಮನು ಬಿಡುವಾ ಬಾಣದ ಗುರಿಯೂ...

ಈ ನಮ್ಮ ಕನ್ನಡಿಗರ ಹೆಮ್ಮೆಯಾದ ಶ್ರೀ ಶ್ರೀ ಶ್ರೀ ರಾಮಾಜೋಯ್ಸ್ ಅವರು ಈ ಪಾಟಿ ಹೊಗುಳುಸ್ಕೊಳ್ಳೋ ಅಂಥಾ ಅದ್ಯಾವ ಬಾಣಾನಾ ಬತ್ತಳಿಕೆಯಿಂದಾ ತೆಗೀತಾ ಇದಾರೆ ಅಂತೀರಾ! ಅದು "ದೇವನಾಗರೀ ಲಿಪಿಯ ಕಲಿಯುವಿಕೆಯ (ಭಾರತದ ಒಗ್ಗಟ್ಟಿಗಾಗಿ) ಬಿಲ್, ೨೦೧೧" ಅನ್ನೋ ಹೆಸರಿನದ್ದು! ಆ ರಾಮನು ಇಟ್ಟಾ ಬಾಣದ ಗುರಿ ತಪ್ಪಲಿಲ್ವಂತೆ... ಆದರೆ ಈ ರಾಮಾಜೋಯ್ಸರ ಬಾಣದ ಗುರಿ ತಪ್ಪಲೇ ಬೇಕಾಗಿದೆ. ಯಾಕಂದ್ರೆ ಅವರ ಬಿಲ್ಲಿನಿಂದ ಹೊರಡೋ ಬಾಣದ ಗುರಿ ಮಾತ್ರಾ ನಮ್ಮ ನಿಮ್ಮಂಥಾ ಬಡಪಾಯಿ ಕನ್ನಡಿಗರೂ ಸೇರಿದಂತೆ ಭಾರತದ ಎಲ್ಲಾ ಹಿಂದೀಯೇತರರು ಆಗಿದ್ದಾರೆ. ರಾಜ್ಯಸಭಾ ಸದಸ್ಯರ ಅಧಿಕೃತ ಅಂತರ್ಜಾಲ ತಾಣದಲ್ಲಿ ಶ್ರೀ ರಾಮಾಜೋಯ್ಸರ ಈ ವಿಧೇಯಕದ ಬಗ್ಗೆ ಬರೆಯಲಾಗಿದೆ. ಖಾಸಗಿಯಾಗಿ ಇವರು ಮೊನ್ನೆ ಮೊನ್ನೆ ಅಂದ್ರೆ ಇದೇ ಆಗಸ್ಟ್ ೦೫ನೇ ತಾರೀಕಿನಂದು ಮಂಡಿಸಿರುವ ಈ ವಿಧೇಯಕ ಇನ್ನೂ ಚರ್ಚೆಗೆ ಬಂದು ಕಾನೂನಾಗಿ ಜಾರಿಯಾಗೋಕೆ ಸಮಯ ತಗಲುತ್ತೆ ಅನ್ನೋದು ನಿಜಾನೇ ಆದರೂ ಇದರಲ್ಲಿರೋದನ್ನು ನೋಡಿದರೆ ಈ ವಿಧೇಯಕ ಸಲ್ಲಿಸೋ ಮನಸ್ಸು, ಅದರ ಹಿಂದಿರೋ ತತ್ವ ಸಿದ್ಧಾಂತ, ಆ ಸಿದ್ಧಾಂತದ ಮಹಾಮನೆ... ಎಲ್ಲದರ ನಿಜ ಸ್ವರೂಪ ಗೊತ್ತಾಗುತ್ತೆ. ಅಂಥಾದ್ದೇನಿದೆ ನೋಡೋಣ!

ದೇಶದ ಜನರಿಗೆಲ್ಲಾ ದೇವನಾಗರಿ ಕಡ್ಡಾಯ!

ಸಂವಿಧಾನದ ೩೪೩ನೇ ವಿಧಿಯನ್ವಯ ಹಿಂದೀ ಭಾರತದ ಆಡಳಿತ ಭಾಷೆ. ಹಾಗಾಗಿ ಭಾರತದ ನಾಗರೀಕರೆಲ್ಲಾ ಹಿಂದೀಯನ್ನು ಕಲಿಯಬೇಕು. ಅಂದರೆ ಹಿಂದೀ ಕಲಿಕೆಗೆ ಬೇಕಿರೋ ಲಿಪಿ ದೇವನಾಗರಿಯದ್ದು. ಎಂಟನೇ ಶೆಡ್ಯೂಲ್‍ನಲ್ಲಿರುವ ೨೨ ಭಾಷೆಗಳಲ್ಲಿ ಸಂಸ್ಕೃತ, ಮರಾಠಿ ಮತ್ತು ಹಿಂದೀಗಳನ್ನು ಇದೇ ಲಿಪಿಯಲ್ಲಿ ಬರೆಯುವುದು. ಈಗ ಭಾರತದಲ್ಲಿ ಎಲ್ಲಾರೂ ದೇವನಾಗರಿ ಲಿಪಿಯನ್ನು ಬಹಳ ತಡವಾಗಿ ಕಲಿಯುತ್ತಾ ಇದ್ದಾರೆ... ಆದ್ದರಿಂದ ದೇವನಾಗರಿ ಲಿಪಿ ಕಲಿಕೆಯನ್ನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ಹೇಳಿಕೊಡಬೇಕು. ಇನ್ಮುಂದೆ ಎಲ್ಲಾ ರಾಜ್ಯಗಳ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ದೇವನಾಗರೀ ಲಿಪಿಯಲ್ಲೇ ಬೋರ್ಡುಗಳನ್ನು ಬರೆಯಬೇಕು. ವಿಶೇಷವಾಗಿ ಮೈಲಿಗಲ್ಲುಗಳನ್ನು ಈ ಲಿಪಿಯಲ್ಲಿ ಬರೆದರೆ ತಮ್ಮ ರಾಜ್ಯಗಳನ್ನು ಬಿಟ್ಟು ಹೊರಗೆ ಹೋಗುವವರಿಗೂ ಏನೂ ತೊಂದರೆಯಾಗುವುದಿಲ್ಲ. ಇದರಿಂದ ದೇಶದಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಹಾಗಾಗಿ ಈ ವಿಧೇಯಕ ಒಪ್ಪಿಗೆಯಾಗಿ ಕಾನೂನು ಆಗುವ ದಿನದಿಂದಲೇ ದೇಶದ ಎಲ್ಲೆಡೆ ದೇವನಾಗರಿಯನ್ನು ಪ್ರಾಥಮಿಕ ಶಾಲಾ ಹಂತದಲ್ಲೇ ಕಲಿಸುವುದನ್ನು ಕಡ್ಡಾಯ ಮಾಡತಕ್ಕದ್ದು...

ವೈವಿಧ್ಯತೆಯನ್ನು ಶಾಪವೆನ್ನುವ ಮನಸ್ಥಿತಿ!

ಇಡೀ ವಿಧೇಯಕದ ಹಿಂದಿರುವ ಮನಸ್ಥಿತಿ ನಾಡಿನ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿ, ಅದನ್ನೆಲ್ಲಾ ಮಣ್ಣಾಗಿಸಿದರೆ ಏಕತೆ ಮೂಡುತ್ತದೆ ಎನ್ನುವ ಭ್ರಮೆ. ಶ್ರೀಯುತರಾದ ರಾಮಾಜೋಯಿಸ್ ಅವರೇ ಹಿಂದೊಮ್ಮೆ ನ್ಯಾಯಸ್ಥಾನದಿಂದ ತಾಯ್ನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಇರಬೇಕು ಎನ್ನುವ ತೀರ್ಪನ್ನು ನೀಡಿದ್ದರಂತೆ! ಇದೀಗ ಇಂಥಾ ವಿಧೇಯಕವೇನಾದರೂ ಜಾರಿಯಾದರೆ ಏನಾದೀತು ಎಂದು ಯೋಚಿಸಿರುವರೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಇದರಿಂದ ಕರ್ನಾಟಕದ ಎಲ್ಲಾ ನಾಮಫಲಕಗಳೂ ಹಿಂದೀಯಲ್ಲಿರುತ್ತದೆ. (ದೇವನಾಗರೀ ದೇವನಾಗರೀ ಅನ್ನೋ ಸುತ್ತುಬಳಸಿನ ಮಾತು ಬಿಟ್ಟು ಇನ್ಮುಂದೆ ಹಿಂದೀ ಲಿಪಿ ಅಂತೀವಿ. ಎರಡೂ ಒಂದೇನೆ ಬಿಡೀ!) ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಮರಿಗಳು ಒಂದನೇ ತರಗತಿಯಿಂದ ಹಿಂದೀಲೇ ಬರೆಯೋದನ್ನು ಕಲಿಯಬೇಕಾಗುತ್ತದೆ. ಕಾನೂನು ಹಾಗೆ ಕಡ್ಡಾಯ ಮಾಡುತ್ತದೆ. ಇನ್ನು ಕನ್ನಡವನ್ನು ಯಾಕಾದ್ರೂ ಕಲೀಬೇಕು? ಕನ್ನಡ ಲಿಪಿ ಬಳಕೆಯಲ್ಲಿದ್ದರೆ ತಾನೇ ಕಲಿಯೋ ಅಗತ್ಯವಿರುವುದು... ನಮ್ಮೂರಿನ ಎಲ್ಲಾ ಅಂಗಡಿ, ಮುಂಗಟ್ಟು, ಬಸ್ಸು, ರೈಲು, ಆಸ್ಪತ್ರೆ ಎಲ್ಲೆಡೆ ಹಿಂದೀ ತಾನೇ ಇರುತ್ತೆ. ಬರೀ ಕಥೆ ಕವನ ಸಾಹಿತ್ಯವನ್ನು ಓದೋಕಷ್ಟೇ ಕನ್ನಡ ಬೇಕಾಗೋ ಹಾಗಿದ್ರೆ... ಯಾಕೆ ಯಾರಾದ್ರೂ ಕಲೀಬೇಕು? ಇನ್ನು ಕನ್ನಡದ ಹೆಸರುಗಳೆಲ್ಲಾ ಹಿಂದೀಲಿ ಇರೋ ಅಕ್ಷರಗಳಿಗೆ ಹೊಂದುವಂತೆ ಇರಬೇಕಾಗುತ್ತೆ. ಬೆಂಗಳೂರು ಇನ್ಮೇಲೆ ಬೆಂಗಲೂರು ಆಗುತ್ತೆ... ಕೆ, ಕೇ ಎಲ್ಲಾ ಒಂದೇ... ದೀರ್ಘ ಇಲ್ಲಾ ಹಿಂದೀಲಿ ಅಂತಾ!!! ಹಿಂದೀಲಿ ಎಲ್ಲಾ ಸೂಚನೆ ಬರೀತಾ ಹೋದರೆ ಹಿಂದೀಯವರಿಗೆ ಕನ್ನಡವನ್ನು ಕೆಟ್ಟದಾಗಿಯಾದರೂ ಓದಕ್ಕಂತೂ ಅದೀತು... ಅರ್ಥವಾದೀತಾ? ಅವೆಲ್ಲಾ ಬಿಡಿ, ಹಿಂದೀ ಲಿಪಿಯನ್ನು ಕಲಿತು ಬೇರೆ ನಾಡಿಗೆ ಹೋದಾಗ ತೊಂದರೆ ಆಗಲ್ಲಾ ಅನ್ನೋ ಮಾತಾಡೋ ಸಂಸದರು, ಇದರಿಂದಾಗಿ ನಮ್ಮೂರಿನ ವ್ಯವಸ್ಥೆಯೆಲ್ಲಾ ಹಿಂದೀಲೇ ಆಗಬೇಕಾಗುತ್ತದೆ ಅಂತಾ ತಿಳಿದುಕೊಳ್ಳದೇ ಹೋದರಾ ಗುರೂ! ಅಥ್ವಾ ಭಾರತದಲ್ಲಿ ಹಿಂದೀ ಮತ್ತು ಹಿಂದೀಯೋರು ಮಾತ್ರವೇ ಇರಬೇಕು ಅನ್ನೋದು ಅವರ ಆಶಯಾನಾ? "ಒಂದು ಭಾಷೆ: ಒಂದು ದೇಶ" ಆಗಬೇಕು ಅಂತಾ ಅವರು ಆಸೆ ಪಟ್ಟು ಈ ವಿಧೇಯಕ ಮಂಡಿಸಿರಬಹುದು! ಹಿಂದೀ ದೇಶಾನ ಒಗ್ಗೂಡಿಸಲ್ಲಾ ಒಡೆಯುತ್ತೆ ಅನ್ನೋದು ಇವರಿಗೆ ಹೇಳಿಕೊಡೋ ಮಹಾಮನೆ ಇನ್ನೆಲ್ಲೆದೆಯೋ? ಒಟ್ನಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಇವರನ್ನು ಕಳಿಸಿದ್ದಕ್ಕೂ ಸಾರ್ಥಕ!!

ಡಬ್ಬಿಂಗ್ ಬೇಕೆನ್ನೋ ಫೂಲ್‍ಗಳು ಅರ್ಥ ಮಾಡ್ಕೋಬೇಕು - ಶಿವಣ್ಣ!


ಅಂತೂ ಕನ್ನಡ ಚಿತ್ರರಂಗ ಡಬ್ಬಿಂಗ್ ಎದುರಿಸೋ ಉದ್ದೇಶದಿಂದ ತನ್ನ ಮತ್ತೊಂದು ಅಸ್ತ್ರವನ್ನು ಬಿಟ್ಟಿರೋ ಹಾಗಿದೆ. ನಮ್ಮ ನೆಚ್ಚಿನ ಡಾ. ರಾಜ್‍ರ ದೊಡ್ಡಮಗನೂ ಸ್ವತಃ ನಟನೂ ಆಗಿರುವ ಶ್ರೀ ಶಿವರಾಜ್‍ಕುಮಾರ್ ಅವರು ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯಾನಾ ‘ಹೀಗೆ’ ಹೇಳಿದಾರೆ ಅಂತಾ ನಾಡಿನ ಖ್ಯಾತ ಚಲನಚಿತ್ರ ತಿಂಗಳ ಪತ್ರಿಕೆ ರೂಪತಾರಾ ಪ್ರಕಟಿಸಿದೆ. ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದಂತಿರುವ ಈ ಸಂದರ್ಶನದಲ್ಲಿ ಡಬ್ಬಿಂಗ್ ಬಗ್ಗೆ "ಕನ್ನಡಕ್ಕೆ ಡಬ್ಬಿಂಗ್ ತರಬೇಕೆಂದು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಶಿವಣ್ಣ ಯಾಕೆ ಮಾತಾಡುತ್ತಿಲ್ಲ?" ಎಂದು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಮತ್ತೂ ಮುಂದುವರೆಯುತ್ತಾ ಶಿವಣ್ಣ "ಡಬ್ಬಿಂಗ್ ಬೇಕು ಅಂತಾ ಒತ್ತಾಯ ಮಾಡ್ತಿರೋ ಫೂಲ್‍ಗಳು ಒಂದು ವಿಷಯ ಅರ್ಥ ಮಾಡ್ಕೋಬೇಕು. ನಮ್ಮ ಭಾಷೆ ಚಿತ್ರಗಳು ಬೇರೆ ಕಡೆ ಬಿಡುಗಡೆ ಮಾಡಲ್ಲ. ಹಾಗಿರುವಾಗ ಅವರ ಚಿತ್ರಗಳನ್ನು ನಾವು ಮೆರೆಸಬೇಕಾ. ಸ್ಯಾಟಲೈಟ್ ರೈಟ್‍ನಿಂದ ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಕೆಲಸ ಮಾಡಬೇಡಿ. ದುಡ್ಡು ಸಂಪಾದಿಸಬೇಕು ಅಂದ್ರೆ ನಿಯತ್ತಾಗಿರಬೇಕು. ಆಗ ದುಡಿದ ದುಡ್ಡು ಸಹಾ ಅರಗುತ್ತೆ. ಇದನ್ನು ನಾನು ಕನ್ನಡಿಗರ ಪರವಾಗಿ ಹೇಳ್ತಿದ್ದೇನೆ" ಎಂದಿದ್ದಾರೆ.

ರಿಮೇಕ್ ಬಗ್ಗೆ...

ಮತ್ತೊಂದು ಪ್ರಶ್ನೆ ರಿಮೇಕ್ ಬಗ್ಗೆ ಇದ್ದು ಹೀಗಿದೆ: ರಿಮೇಕ್‍ಗಳ ಬಗ್ಗೆ ನಿಮ್ಮ ಸದ್ಯದ ನಿಲುವೇನು?" (ಎರಡೂ ಪ್ರಶ್ನೆಗಳನ್ನು ಕೇಳಿರುವ ವಿಧಾನದಲ್ಲಿರೋ ವ್ಯತ್ಯಾಸ ಗಮನಿಸಿ. ಡಬ್ಬಿಂಗ್ ಬಗ್ಗೆ - ಯಾಕೆ ಸುಮ್ಮನಿದ್ದೀರಾ? ಎಂದಿದ್ದರೆ ರಿಮೇಕ್ ಬಗ್ಗೆ - ಸದ್ಯದ ನಿಲುವು ಕೇಳ್ತಿದಾರೆ. ಪಾಪ ಓದುಗರೇ ಕೇಳಿರೋ ಪ್ರಶ್ನೆಗಳಂತೆ ಇವು!). ಇದಕ್ಕೆ ಶಿವಣ್ಣ "ನಾನು ರಿಮೇಕ್ ಮಾಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಮಾತನಾಡೋದು ತಪ್ಪಾಗಬಹುದು. ಸಿನಾಮಾನ ನಂಬಿ ಬದುಕೋ ಸಾಕಷ್ಟು ಜನ ಇದ್ದಾರೆ. ರಿಮೇಕೋ, ಸ್ವಮೇಕೋ ಸಿನಿಮಾಗಳು ಬರುತ್ತಿದ್ದರೆ ಮಾತ್ರಾ ಅವರೆಲ್ಲರ ಹೊಟ್ಟೆ ತುಂಬೋಕೆ ಸಾಧ್ಯ. ಆ ದೃಷ್ಟಿಯಿಂದ ಏನೂ ಹೇಳಲು ಸಾಧ್ಯವಿಲ್ಲ. ಇನ್ನು ನಾನಂತೂ ಸ್ವಮೇಕ್ ಮಾಡುತ್ತಲೇ ಇದ್ದೇನೆ. ಚಿತ್ರ ಹಿಟ್ ಆಯಿತೋ ಫ಼್ಲಾಪ್ ಆಗುತ್ತಿದೆಯೋ ಬೇರೆ ಮಾತು. ನನ್ನ ನಿರ್ಧಾರ ಮಾತ್ರಾ ಬದಲಾಗಿಲ್ಲ" ಎಂದಿದ್ದಾರೆ.

ಎರಡೂ ಉತ್ತರಗಳಲ್ಲಿರೋ ಅನುಕೂಲ ಸಿಂಧುತ್ವ ಗಮನಿಸಿದಿರಾ? ಇರಲಿ ಬನ್ನಿ ಈಗ ಶಿವಣ್ಣನವರನ್ನು ಮಾತಾಡಿಸೋಣ.

ಹಿರಿಯರು ಅಂದಿದ್ರೂ ಅಂತಾ...

ಹಿರಿಯರು ಡಬ್ಬಿಂಗ್ ಬೇಡಾ ಅಂದಿದಾರೆ ಅದಕ್ಕೆ ಬೇಡಾ ಅಂದುಬುಟ್ರೆ ಹೆಂಗೆ ಶಿವಣ್ಣಾ? ಹಿರಿಯರು ಬೇಡಾ ಅಂದಿದ್ದ ಸಂದರ್ಭ ಎಂಥದ್ದು? ಯಾಕೆ ಬೇಡಾ ಅಂದಿದ್ರು? ಇವತ್ತಿನ ಪರಿಸ್ಥಿತಿ ಹಂಗೇ ಇದೆಯಾ? ಇಷ್ಟಕ್ಕೂ ಆವತ್ತು ಹಿರಿಯರು ಬೇಡಾ ಅಂದಿದ್ದು ಸರೀನಾ ಅಂತಾ ಈಗಿನವರು ವಿಚಾರ ಮಾಡಬೇಕಲ್ವಾ? ಹಿಂದೆ ನಮ್ಮ ತಾತನ ಕಾಲದಲ್ಲಿ ಪ್ಯಾಂಟ್ ಹಾಕ್ಕೋಂಡ್ರೇ ಮೊಕಕ್ ಉಗೀತಿದ್ರು, ಪ್ಯಾಂಟ್ ಹಾಕ್ಕೋಬಾರ್ದು ಪಂಚೇ ಉಟ್ಕಳ್ಳಿ ಅಂತಿದ್ರು... ಈಗಲೂ ಹಂಗೇ ಮಾಡಬೇಕಾ? ಕಾಲಕ್ಕೆ ತಕ್ಕಂತೆ ಕುಣಿಯಬೇಕು ಅಂತಾ ಅಣ್ಣಾವ್ರೇ ಹೇಳಿಲ್ವಾ?

ಇದೇನು ಬೆದರಿಕೇನಾ ಶಿವಣ್ಣಾ?

ಇಷ್ಟಕ್ಕೂ ಈಗ ಜಬರ‍್‍ದಸ್ತಿ ಮಾಡ್ತಾ ಇರೋದು ಯಾರು? ಕಾನೂನು ಬಾಹಿರವಲ್ಲದ ಒಂದು ಕೆಲಸಾನಾ, ಕಾನೂನು ಬಾಹಿರವಾಗಿ ಬ್ಯಾನ್ ಮಾಡ್ತೀನಿ ಅನ್ನೋಕೆ ಚಲನಚಿತ್ರರಂಗವೇನು ಯಾರದೋ ಪಾಳೇಗಾರಿಕೇನಾ? ಡಬ್ಬಿಂಗ್ ಅವಶ್ಯಕತೆ ಇದೆಯೋ ಇಲ್ವೋ ಅಂತಾ ಹೇಳೋಕೆ ನಾನೂ ನೀವೂ ತಾನೇ ಏನು ಅಧಿಕಾರ ಹೊಂದಿದೀವಿ? ಈಗ ಪ್ರೇಕ್ಷಕರಾದ ನಾವು ಡಬ್ಬಿಂಗ್ ಬೇಕು ಅಂತಿದೀವಿ. ನಮ್ಮ ಬೇಡಿಕೆ ಪೂರೈಸಲು ಆಗುವವರು ಪೂರೈಸುತ್ತಾರೆ. ಯಾರಿಗೆ ಬೇಕೋ ಅವರು ಅಂಥಾ ಸಿನಿಮಾ ನೋಡ್ಕೋತಾರೆ. ಅಂಥಾ ಸಿನಿಮಾಗಳು ವ್ಯಾವಹಾರಿಕವಾಗಿ ಲಾಭ ಅನ್ಸುದ್ರೆ ಉಳೀತಾವೆ, ಇಲ್ದಿದ್ರೆ ಇಲ್ಲಾ. ಈಗ ಚಿತ್ರರಂಗದೋರು ತೆಗಿತಾ ಇರೋ ರಿಮೇಕುಗಳನ್ನು ನಾವು ತಡ್ಯಕ್ಕೆ ಬೀದಿಗಿಳೀತೀವಿ, ಯಾವ ಲೆವೆಲ್ಲಿಗಾದ್ರೂ ಇಳೀತೀವಿ ಅನ್ನೋಕಾಗುತ್ತಾ? ಹುಡುಗ್ರು ಹಿಟ್ ಆಗೋದಾದ್ರೆ ಸಂತೋಷ... ಎಲ್ಲೀ ತನಕ ಜನರಿಗೆ ಸಿನಿಮಾ ನೋಡೋ, ಗೆಲ್ಲಿಸೋ, ಸೋಲಿಸೋ ಸ್ವಾತಂತ್ರವಿದೆಯೋ ಅಲ್ಲೀ ತನಕ ಎಲ್ಲಾ ಸರೀನೆ. ಅದು ಬಿಟ್ಟು, ಇದುನ್ನಾ ತಡೀತೀವಿ, ಇದುನ್ನಾ ಬ್ಯಾನ್ ಮಾಡ್ತೀವಿ ಅಂತಾ ಅನ್ನೋಕೆ ತಮ್ಮದೇನು ಜನರಿಂದ ರಾಜ್ಯ ಆಳಕ್ಕೆ ಅಂತಾ ಆರಿಸಲ್ಪಟ್ಟ ಸರ್ಕಾರಾನಾ? ಅಷ್ಟಕ್ಕೂ ಈ ದೇಶದಲ್ಲಿ ಸಂವಿಧಾನ, ಕಾನೂನು ಅಂತಾ ಇರೋದು ತಮ್ಮ ಗಮನದಲ್ಲಿಲ್ವಾ? ಕಾನೂನು ಏನೇ ಇದ್ಕೊಳ್ಲಿ, ನಾವು ಬೀದಿಗೆ ಇಳಿದು ಹೋರಾಟ ಮಾಡ್ತೀವಿ ಅಂದ್ರೇನರ್ಥ? ಅಂದಹಾಗೆ ಯಾವ ಲೆವೆಲ್ಲಿಗೆ ಬೇಕಾದ್ರೂ ಇಳೀತೀವಿ ಅಂತೀರಲ್ಲಾ? ಇದೇನು ಬೆದರಿಕೇನಾ ಶಿವಣ್ಣಾ? ಇಂಥಾ ಬೆದರಿಕೆಯಿಂದಾ ಕನ್ನಡಿಗರಿಗೆ ತಮ್ಮ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳೋ ಹಕ್ಕನ್ನು ನಿರಾಕರಿಸೋದು ತಪ್ಪಲ್ವಾ?

ಕನ್ನಡತನಾ ಅಂದ್ರೆ...

ಇನ್ನು ನಮ್ಮಂಥಾ ಬರೀ ಕನ್ನಡ ಮಾತ್ರಾ ಗೊತ್ತಿರೋ ಕನ್ನಡಿಗರಿಗೆ ಇವರುಗಳ ಕನ್ನಡತನಾನೇ ಅರ್ಥವಾಗದು. ಕನ್ನಡದಲ್ಲಿ ಎಲ್ಲಾ ಭಾಷೆಯ ಚಿತ್ರ ನೋಡೋದು ಕನ್ನಡತನವೋ? ಕನ್ನಡಿಗರೆಲ್ಲಾ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಅವವೇ ಭಾಷೇಲಿ ನೋಡೋದು ಕನ್ನಡತನವೋ? ಬೇರೆ ಭಾಷೆ ಚಿತ್ರಗಳು ನಮ್ಮಲ್ಲಿ ಬಿಡುಗಡೆ ಆಗ್ತಿವೆ ಅದುಕ್ಕೆ ಡಬ್ಬಿಂಗ್ ಬೇಡಾ... ಕನ್ನಡದವುನ್ನ ಬೇರೆ ಕಡೆ ಬಿಡುಗಡೆ ಮಾಡಲ್ಲ, ಅದುಕ್ಕೆ ನಮ್ ಸಿನಿಮಾ ಡಬ್ ಆಗ್ಲೀ ಅನ್ನೋದು ಬೂಟಾಟಿಕೆ ಅನ್ಸಲ್ವಾ? ಕರ್ನಾಟಕದ ಆಚೆ ಇರೋ ಕನ್ನಡಿಗರು ಕನ್ನಡದಲ್ಲಿ ಸಿನಿಮಾ ನೋಡದೇ ಅವರಿರೋ ರಾಜ್ಯಗಳ ಭಾಷೇಲಿ ಡಬ್ ಆದ ರೂಪದಲ್ಲಿ ನಮ್ಮ ಸಿನಿಮಾ ನೋಡಲೀ ಅನ್ನೋದಾದರೆ, ಇದೇ ನ್ಯಾಯಾ ಪರಭಾಷಾ ಚಿತ್ರಗಳಿಗೂ ಅನ್ವಯವಾಗಲ್ವಾ? ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಬೇಕು ಅನ್ನುವಂತೆ ‘ನಮ್ಮಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆಯಾಗ್ತಿರುವಾಗ ಡಬ್ಬಿಂಗ್ ಯಾಕೆ?’ ಅನ್ನೋ ನೀವು, ಕನ್ನಡಿಗರೆಲ್ಲಾ ಪರಭಾಷೆಗಳನ್ನು ಕಲಿತುಕೊಂಡು ಆಯಾಭಾಷೆಯಲ್ಲಿ ಆಯಾ ಸಿನಿಮಾ ನೋಡಿ ಅನ್ನೋದಾಗಲೀ, ಭಾಷೆ ಬರದಿದ್ರೂ ಆ ಭಾಷೇಲೇ ನೋಡಿ ಅನ್ನೋದಾಗ್ಲೀ ನಿಮ್ಮ ಸ್ವಾರ್ಥದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮಾಡ್ತಿರೋ ಮೋಸ ಅಲ್ವಾ ಶಿವಣ್ಣಾ? ಇದುನ್ನಾ ಕನ್ನಡತನಾ ಅನ್ನಕ್ ಆದೀತಾ? ಆಯ್ತು.. ಕನ್ನಡಚಿತ್ರರಂಗದ ದೊಣೇನಾಯಕರೇ ಈಗ ಕೊರಿಯನ್, ಜಪಾನೀಸ್ ಸಿನಿಮಾಗಳು ಇಲ್ಲಿ ಬಿಡುಗಡೆ ಆಗ್ತಿಲ್ಲಾ... ಇವುನ್ನಾ ಡಬ್ ಮಾಡ್ಬೋದಾ?

ನಿಯತ್ತಿನ ಸಂಪಾದನೇ ಅಂದ್ರೆ...

ಯಾವುದೇ ವಿಷಯದ ಬಗ್ಗೆ ನಿಮಗಿಂತಾ ಬೇರೆಯಾದ ಅಭಿಪ್ರಾಯ ಹೊಂದಿರೋದು ಮೂರ್ಖತನಾ ಅನ್ನೋದು ಎಷ್ಟು ಸರೀ ಶಿವಣ್ಣಾ? ಇನ್ನು ಡಬ್ಬಿಂಗ್‍ನಿಂದಾ ಸಂಪಾದಿಸೋ ದುಡ್ಡು ನಿಯತ್ತಿನದಲ್ಲಾ ಅಂತೀರಲ್ಲಾ? ಇದೇ ಮಾತುನ್ನಾ ಫ್ರೇಮ್ ಟೊ ಫ್ರೇಮ್ ರಿಮೇಕ್ ಮಾಡೋ ಬಗ್ಗೆ ಯಾಕೆ ಹೇಳಲ್ಲಾ? ಇತ್ತೀಚಿಗೆ ನಿಮ್ಮದೇ ಕುಟುಂಬದ "ಜಾಕಿ" ಬೇರೆ ಭಾಷೆಗೆ ಡಬ್ ಆದಾಗ ಹೆಮ್ಮೆ ಪಟ್ಕೊತೀರಲ್ಲಾ? ಅದ್ಯಾವ ಸೀಮೆ ನ್ಯಾಯಾ? ಹಾಗೆ ಬೇರೆ ಭಾಷೆಗೆ ಡಬ್ ಮಾಡಿ ಸಂಪಾದಿಸೋ ದುಡ್ಡು ನಿಯತ್ತಿಂದಲ್ಲಾ ಅನ್ನಕ್ ಆಗುತ್ತಾ? ಕಾನೂನು ಬಾಹಿರವಲ್ಲದ ಮಾರ್ಗದಲ್ಲಿ ಸಂಪಾದಿಸೋ ಎಲ್ಲಾನೂ ನಿಯತ್ತಿನ ಸಂಪಾದನೇನೇ ಅಲ್ವಾ ಶಿವಣ್ಣಾ?

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಅಣ್ಣಾವ್ರು, ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಅಂತಿದ್ರೂ... ತಾವು ಫೂಲ್‍ಗಳು ಅಂದ್ರೀ ಅಂತಿದೆ ರೂಪತಾರಾ?ನಂಬಕ್ಕಾಗ್ತಿಲ್ಲಾ... ಹಿರಿಯರು ಡಬ್ಬಿಂಗ್ ಬೇಡಾ ಅಂದ್ರು ಅದ್ಕೆ ಬೇಡಾ ಅಂತಾ ಆ ಪಾಟಿ ಗೌರವಾ ಕೊಡ್ತಿರೋ ನೀವು, ನಿಮ್ಮದಲ್ಲದ ಅಭಿಪ್ರಾಯ ಇಟ್ಕೊಂಡೋರ ಬಗ್ಗೆ ಹಿಂಗೆಲ್ಲಾ ಅನ್ನೋದನ್ನು ಹಿರಿಯರು ಮೆಚ್ಚುತ್ತಿದ್ರು ಅಂತೀರಾ ಶಿವಣ್ಣಾ?

ರಾಜ್ಯದಿಂದ ಕೇಂದ್ರ ಅನ್ನೋ ಸಂದೇಶಾ ಕೊಡ್ತಿರೋ ಯಡ್ಯೂರಪ್ನೋರು!


ನೋಡ್ರಣ್ಣಾ! ನಾವೇನು ಯಡ್ಯೂರಪ್ಪನೋರಿಗೆ ಯಾವ್ ಥರಾನೂ ನೆಂಟ್ರು ಪಂಟ್ರು ಅಲ್ಲಾ! ಅವರೇನಾರಾ ತೆಪ್ ಮಾಡುದ್ರೆ ಅವುರುನ್ನ ಒಪ್ಪಿಟ್ಟುಕೊಳ್ಳೋದೂ ಇಲ್ಲಾ! ಆ ಯಪ್ಪಾ ಮಾಡಿರಬಹುದಾದ ಭ್ರಷ್ಟಾಚಾರಾನೂ ಒಪ್ಕೊಳಾಕಿಲ್ಲ! ಆದ್ರೂ ಮುಕ್ಯಮಂತ್ರಿ ಸಾಹೇಬ್ರು ತಮ್ ಜುಟ್ಟು ಹಿಡ್ಯಕ್ ಮುಂದಾದ ಹೈಕಮಾಂಡಿನೋರುನ್ನಾ ಹಿಗ್ಗಾಮುಗ್ಗಾ ಬೆಚ್ಚಿ ಬೀಳ್ಸೋ ಹಾಂಗೆ ಪಟ್ಟು ಹಾಕ್ತಾ ಇರೋದುನ್ನಾ ಮೆಚ್ಚಿಕೊಳ್ದೇ ಇರಕ್ ಆಗತಿಲ್ಲಾ ಗುರುಗೋಳೇ!

ಹೈಕಮಾಂಡಿನೋರು ಸಾಮ್ರಾಟರಾ?

ಹೂಂ.. ಕಣ್ರಣ್ಣಾ... ಹಳೇಕಾಲದಲ್ಲಿ ಒಬ್ಬ ಸಾಮ್ರಾಟ ಇರೋನು... ಅವನ ಕೆಳಗೆ ಸಾಮಂತರು, ಅವ್ರು ಕೆಳ್ಗೆ ಮಾಂಡಲೀಕರು, ಅವ್ರು ಕೆಳ್ಗಡೆ ದಂಡನಾಯಕ್ರು, ದೊಣೆನಾಯಕ್ರು.... ಹಿಂಗಿರೋದು ಗುಲಾಮಗಿರಿ ಚೈನು! ಬ್ರಿಟೀಶಿನೋರು ಬಿಟ್ಟು ಹೋಗಿ ಬರೀ ಅರವತ್ತು ವರ್ಸ ಆಗೈತೆ... ಸಾವರಾರು ವರ್ಶದ ಗುಲಾಮಗಿರಿ ಬುದ್ದಿ ಅಷ್ಟು ಸಲೀಸಾಗ್ ಹೋಗಿಬುಡ್ತದಾ? ರಾಷ್ಟ್ರೀಯ ಪಕ್ಷಗಳು ಅನ್ನೋ ಸಾಮ್ರಾಟರ ಎದ್ರು ಕೈಕೊಟ್ಟುಕೊಂಡು, ಅವರು ಹೇಳೋರು ಸಾಮಂತರಾಗೋ ರಾಜ್ಯಗಳ ಶಾಕೆಗಳು... ಏನಾರಾ ಯೆತ್ವಾಸಾ ಕಾಣ್ತುದಾ ದಣೀ? ಇಂಥಾ ಯವಸ್ತೇನಾಗೆ ಐಕಮಾಂಡು ಕುಂತ್ಕಾ ಅಂದ್ರೆ ಕುಂತ್ಕೊಂಡು, ನಿಂತ್ಕೋ ಅಂದಾಗ ನಿಂತ್ಕಂಡು, ಮನಿಕ್ಕೋ ಅಂದಾಗ ಮನಿಕ್ಕೊಂಡು, ಎದ್ದೇಳ್ಲಾ ಅಂದಾಗ ಎದ್ದೋಗ್ದಲೇ... "ಎಲಾ ಬಡ್ಡೆತವಾ... ಕೇಂದ್ರ ಅನ್ನೋದು ರಾಜ್ಯಗಳಿಂದ ಆಗಿರೋದು ಕಣ್ರುಲಾ" ಅನ್ನೋಂಗೆ ಕರ್ನಾಟಕದ ರಾಜಕಾರಣಾನಾ ನಾವೇ ನೋಡ್ಕೊಂತೀವಿ ಅಂತಾ ಯಡ್ಯೂರಪ್ಪನೋರು ಸಡ್ಡು ಹೊಡ್ದಿರೋದು ಮಸ್ತಾಗೈತೆ ಗುರೂ! ನೀ ಏನಂತೀಯಾ? ಯಡ್ಯೂರಪ್ಪನೋರು ಭಂಡ, ಪುಂಡ ಅನ್ನೋದೆಲ್ಲಾ ನಿಜಾನೋ ಸುಳ್ಳೋ ಪಕ್ಕಕ್ಕಿಟ್ಟು ಪ್ರಚಂಡಾ ಅನ್ನೋದ್ನಾ ಒಪ್ಕೊಬೇಕಾಯ್ತುದೆ ಅಲ್ವಾ?

ಕನ್ನಡದ ಸೊಲ್ಲರಿಮೆ - ಎರಡನೇ ಹೊತ್ತಗೆ ಮಾರುಕಟ್ಟೆಗೆ!



ಡಾ. ಡಿ ಎನ್ ಶಂಕರಬಟ್ ಅವರ "ಕನ್ನಡ ಬರಹದ ಸೊಲ್ಲರಿಮೆ - ೨" ಹೊತ್ತಗೆ ಮಾರುಕಟ್ಟೆಗೆ ಬಂದಿದೆ. ಮೊದಲ ಹೊತ್ತಗೆಯಲ್ಲಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ ಮತ್ತು ಹೆಸರು ಪದಗಳ ಬಗ್ಗೆ ವಿವರಿಸಲಾಗಿತ್ತು. ಈ ಹೊತ್ತಗೆಯಲ್ಲಿ ಎಸಕಪದಗಳ ಬಳಕೆ ಮತ್ತು ಹೆಸರುಕಂತೆಗಳ ಇಟ್ಟಳಗಳ ಬಗ್ಗೆ ವಿವರಿಸಿದ್ದಾರೆ.

ಕನ್ನಡದ ಸೊಲ್ಲರಿಮೆ...

ಕಳೆದ ವರ್ಶದ ಆಗಸ್ಟ್ ತಿಂಗಳಲ್ಲಿ ನಾವು "ಅಂತೂ ಬಂತು ಕನ್ನಡದ್ದೇ ವ್ಯಾಕರಣ..." ಎನ್ನುವ ಬರಹ ಬರೆದಿದ್ದೆವು. ಆ ಹೊತ್ತಗೆಯ ಮೊದಲಲ್ಲಿ ಡಾ. ಶಂಕರಬಟ್ ಅವರು ಬರೆದಿದ್ದ ಈ ಕೆಳಗಿನ ಮಾತುಗಳತ್ತ ಒಮ್ಮೆ ಮರುನೋಟ ಬೀರೋಣ.
ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮೊರೆ ಹೋಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ ಪದಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲದು.

ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.

ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.

ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.
ಬಾಶಾ ಪ್ರಕಾಶನದವರು ಹೊರತಂದಿರುವ ಈ ಹೊತ್ತಗೆಯನ್ನು ಮಂಗಳೂರಿನ ಅತ್ರಿ ಬುಕ್ ಸೆಂಟರ್ ಅವರು ಹಂಚಿಕೆ/ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಹೆಸರಾಂತ ಹೊತ್ತಗೆಯಂಗಡಿಗಳಲ್ಲಿ ಸಿಗುತ್ತಿದೆ. ಕನ್ನಡದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

"ಹಿಂದೀ ಕಲೀರಿ: ರಾಷ್ಟ್ರಪ್ರೇಮ ಮೂಡುತ್ತೆ" ಅಂದ ಉದಯವಾಣಿ!


ತೊಂಬತ್ತು ವರ್ಷದ ಹಿಂದೆ ಮಹಾತ್ಮ ಗಾಂಧಿ ಯಾವ ಉದ್ದೇಶದಿಂದ "ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ" ಶುರು ಮಾಡಿದ್ರೋ, ಭಾರತದ ಸಂವಿಧಾನದ ಆಶಯ ಅನ್ನುತ್ತಾ ಭಾರತದ ಕೇಂದ್ರಸರ್ಕಾರವು ಅರವತ್ತು ವರ್ಷಗಳಿಂದ ಹಿಂದೀಯೇತರ ಭಾರತೀಯರಿಗೆ (ಹಿಂದಿ ಬರದೇ ಇರುವವರನ್ನೂ ಭಾರತೀಯರು ಅಂತೀರಾ? ಛೇ! ಅನ್ನುತ್ತೇನೋ) ಹಿಂದಿ ಕಲಿಸಿ ಸರಿಯಾದ ಭಾರತೀಯರನ್ನಾಗಿಸಲು ಪಣತೊಟ್ಟು ಏನೇನೆಲ್ಲಾ ಮಾಡ್ತಾ ಇದೆಯೋ, ಅದೆಲ್ಲಾ ಫಲ ಕೊಡ್ತಿದೆ ಅನ್ನೋಕೆ ಉದಯವಾಣಿಯಲ್ಲಿ ಜುಲೈ ಒಂಬತ್ತರಂದು ಪ್ರಕಟವಾಗಿರೋ "ಪ್ರೌಢಶಾಲಾ ಹಂತದಲ್ಲಿ ಹಿಂದಿ ಕಲಿಕೆಯ ಮಹತ್ವ" ಅನ್ನೋ ಲೇಖನ ಸಾಕ್ಷಿಯಾಗಿದೆ ಗುರೂ!

ಬರಹದಲ್ಲಿರೋ ಕೆಲ ಆಣಿಮುತ್ತುಗಳು!

ಹಿಂದೀ ಭಾರತದ ರಾಷ್ಟ್ರಭಾಷೆಯೆನ್ನುವ ಹಸಿಸುಳ್ಳನ್ನು ಚೂರೂ ನಾಚಿಕೆಯಿಲ್ಲದೆ ಬರೆದಿದ್ದಾರೆ ಈ ಬರಹದಲ್ಲಿ. ಬಹುತೇಕ ರಾಜ್ಯಗಳಲ್ಲಿ ಇದುನ್ನ ಕಲಿಸ್ತಾರೆ ಆದ್ದರಿಂದ ಇದು ಭಾರತೀಯ ಪೌರನ ಶಿಕ್ಷಣದಲ್ಲಿ ಮಹತ್ವದ್ದಂತೆ. ಗಾಂಧೀಜಿ ದೇಶ ಎಲ್ಲಾ ಸುತ್ತಿ ಹಿಂದೀನ ರಾಷ್ಟ್ರಭಾಷೆ ಮಾಡುದ್ರಂತೆ, ಅದುಕ್ಕೆ ಭಾರತೀಯರೆಲ್ಲಾ ಒಂದಾದ್ರಂತೆ. ಬ್ರಿಟೀಷರನ್ನು ಓಡಿಸುದ್ರಂತೆ! ತಮಾಶೆ ಅಂದ್ರೆ ಹಿಂದೀ ಸಾಹಿತ್ಯದ ಅಧ್ಯಯನಕ್ಕೆ ಹಿಂದೀ ಕಲೀಬೇಕು ಅದಕ್ಕೆ ಕಲೀರಿ ಅಂತಾರೆ ಲೇಖಕರು. (ಕನ್ನಡ ಸಾಹಿತ್ಯ ಓದಕ್ಕೆ ಹಿಂದೀ ಕಲೀರಿ ಅನ್ನಲಿಲ್ಲ! ನಮ್ಮ ಪುಣ್ಯ!!) ಈ ಬರಹ ಬರೆದಿರುವವರ ಪ್ರಕಾರ ಹಿಂದಿ ಕಲಿಯೋದ್ರಿಂದ ಜ್ಞಾನ ಹೆಚ್ಚುತ್ತಂತೆ. ನಮ್ಮೊಳಗೆ ದೇಶಪ್ರೇಮ ಹೆಚ್ಚಾಗುತ್ತದೆಯಂತೆ. ದೇಶದಲ್ಲಿ ಏಕತೆ ಮೂಡುತ್ತದೆಯಂತೆ. ಉತ್ತರ ಭಾರತಕ್ಕೆ ನಾವು ಹೋದಾಗ ಅಲ್ಲಿನ ಜನರ ಜೊತೆ ವ್ಯವಹರಿಸಲು ಅನುಕೂಲವಂತೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾವನ್ನು ಮಹಾತ್ಮಗಾಂಧಿಯವರು ಶುರು ಮಾಡುದ್ರಂತೆ, ಅದರಿಂದ ಇಲ್ಲಿ ನಾವು ಹಿಂದಿ ಕಲೀಬೇಕಂತೆ. ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಬೇಕಾದರೆ ಉತ್ತಮ ಶಿಕ್ಷಣದ ಅಗತ್ಯವಿದೆ ಎನ್ನುವ ಬರಹಗಾರರು ಅದಕ್ಕಾಗಿ ಹಿಂದೀ ಕಲೀರಿ ಅನ್ನುತ್ತಿದ್ದಾರೆ ಎನ್ನಿಸುವಂತೆ ಈ ಬರಹ ಬರೆದಿದ್ದಾರೆ.

ಇನ್ನು ಹಿಂದೀನಾ ಹೇಗೆ ಕಲೀಬೇಕು ಅನ್ನೋಕೆ ಶ್ರೀಯುತರು ಹಿಂದೀ ಸಿನಿಮಾ ನೋಡಿ, ಹಿಂದೀ ಟಿವಿ ನೋಡಿ, ಹಿಂದಿ ದಿನಪತ್ರಿಕೆ, ವಾರಪತ್ರಿಕೆ, ಕಥೆ ಪುಸ್ತಕ ತರಿಸಿ ಓದಿ, ಹಿಂದೀ ಕಾರ್ಟೂನ್ ನೋಡಿ, ಹಿಂದೀ ಶಿಕ್ಷಕರ ಜೊತೆ ಹಿಂದೀಲೇ ಮಾತಾಡಿ, ಪದಬಂಧ, ಶಬ್ದಬಂಡಿ ಆಡಿ ಕಲೀರಿ ಅಂತೆಲ್ಲಾ ಸಲಹೆ ಕೊಟ್ಟಿದ್ದಾರೆ. ಕೊನೆಯಲ್ಲಿ ಇವರು ಹೇಳೋ ಮಾತು ಕೇಳಿ... ನಮ್ಮ ಮಕ್ಕಳು ಹಿಂದೀ ಎಂಬ ಭಾರತದ ಅಖಂಡತೆಯ ಸಂಕೇತವಾದ ಸರಳ ಸುಂದರ ಭಾವನಾತ್ಮಕವಾದ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕಂತೆ. ಆ ಮೂಲಕ ಸಂವಿಧಾನಾತ್ಮಕ ಮನ್ನಣೆಯಿರುವ ಭಾಷೆಯನ್ನು ಕಲಿತು ದೇಶದ ಏಕತೆಯನ್ನು ಉಳಿಸಬೇಕಂತೆ!

ಇದು ಅರಿವುಗೇಡಿತನವೋ? ಅವಿವೇಕವೋ?

ಭಾರತದ ಏಕತೆಯನ್ನು ಹಿಂದಿಯಲ್ಲಿ ವ್ಯವಹರಿಸೋ ಮೂಲಕ ಉಳಿಸಬೇಕು ಎನ್ನೋ ಮನಸ್ಥಿತಿ, ಭಾರತೀಯರೆನ್ನಿಸಿಕೊಳ್ಳಲು ಹಿಂದೀ ಕಲಿತಿರಬೇಕು ಅನ್ನೋ ಮನಸ್ಥಿತಿ... ತುಂಬಿರೋ ಬರಹವನ್ನು ಬರೆದಿರೋ ಬರಹಗಾರರಿಗೇನೋ ಅರಿವಿನ ಕೊರತೆ ಎನ್ನೋಣ. ಆದರೆ ಇದನ್ನು ಪ್ರಕಟ ಮಾಡೋ ದಿನಪತ್ರಿಕೆಯವರಿಗೆ ಕೂಡಾ ಹಿಂದೀ ಮಾಯೆ ಮುಸುಕಿದೆ ಎನ್ನುವುದು ಆತಂಕಕಾರಿ. ಈ ಮಾಯೆಯ ವಿಷವು "ಹಿಂದೀ ಎಂಬ ಭಾರತದ ೨೯% ಜನರಾಡುವ ನುಡಿಯು ಭಾರತದ ಒಗ್ಗಟ್ಟಿಗೂ, ದೇಶಪ್ರೇಮಕ್ಕೂ ಅತ್ಯಗತ್ಯ" ಎನ್ನುವ ಸಿಹಿಯನ್ನು ತನ್ನಮೇಲೆ ಲೇಪಿಸಿಕೊಂಡು ಯಾರ್ ಯಾರುನ್ನೆಲ್ಲಾ ಯಾಮಾರಿಸುತ್ತಿದೆ ಅನ್ನೋದು ಕಂಡಾಗ ಆತಂಕವಾಗುತ್ತೆ ಗುರೂ. ಹಿಂದೀ ಭಾರತದ ರಾಷ್ಟ್ರಭಾಷೆಯಲ್ಲಾ ಅನ್ನೋ ಅರಿವು ಇಲ್ಲದೆ ಇಂಥಾ ತಪ್ಪೆಸಗಿದರೆ ಸಹಿಸಬಹುದು. ಆದರೆ ಗೊತ್ತಿದ್ದೂ ಹೀಗೆಲ್ಲಾ ಹಸಿಸುಳ್ಳು ಬರೆದರೆ ಏನೆನ್ನಬೇಕು? ಹಿಂದಿಯನ್ನು ನಾಡಿನ ಜನರೆಲ್ಲಾ ಒಪ್ಪಿ, ತಲೆ ಮೇಲಿಟ್ಟುಕೊಂಡು ಪೂಜಿಸಿದರೆ ನಾಳೆ ಇಡೀ ಕನ್ನಡ ಕುಲದ ಸರ್ವನಾಶವಾದೀತು ಎನ್ನುವ ಆಲೋಚನೆಯೂ ಇಲ್ಲದವರನ್ನು ಕಂಡಾಗ "ವಿಷದ ಮೊಲೆವಾಲನ್ನು ಅಮೃತವೆಂದು ಉಣ್ಣುತ್ತಿರುವ ಕನ್ನಡಿಗರನ್ನು ಪೊರೆವವರಾರು ನನ್ನಪ್ಪಾ?" ಎಂದನಿಸದೇ ಗುರೂ!

"e - ಆಡಳಿತ" ಅಂದ್ರೆ ಇಂಗ್ಲೀಶ್ ಆಡಳಿತಾನಾ?

- ವಿಕ್ರಮ್ ಹೆಗ್ಡೆ, ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವೀಧರರು




E-governance ಅಥವಾ E- ಆಡಳಿತದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿಬರ್ತಿದೆ ಅಲ್ವ? ಏನು ಈ ಇ- ಗವರ್ನೆನ್ಸ್ ಅಂದರೆ? ಸಾಮಾನ್ಯವಾಗಿ ಎಲ್ಲರೂ ಇದನ್ನ electronic governance ಅಂತ ವಿಸ್ತರಿಸಿ, ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ದೊರಕಿಸುವುದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿ ಇದನ್ನು ಅಳವಡಿಸಿರುವ ಪರಿ ನೋಡಿದ್ರೆ ಬೇರೇನೇ ಅಭಿಪ್ರಾಯ ಬರಬಹುದು. ಇ-ಗವರ್ನೆನ್ಸ್ ನ ವಿಸ್ತಾರ ರೂಪ English governance ಇದ್ದಿರಬಹುದೇನೋ ಎಂದೆನಿಸುತ್ತೆ. ಕುಶಾಲಿಗಲ್ಲ! ಅಂಕಿ ಅಂಶಗಳ ಸಹಿತ ವಿವರಿಸುತ್ತೇನೆ ನೋಡಿ.

ಕರ್ನಾಟಕದ ತಾಣಗಳ ಹಣೆಬರಹ!

ಇಲ್ಲಿ ನೋಡಿ. ಇದರಲ್ಲಿ ಕರ್ನಾಟಕದ ಎಲ್ಲ ಇ-ಗವರ್ನೆನ್ಸ್ ಯೋಜನೆಗಳ ಪಟ್ಟಿ ಇದೆ. ಈ ವೆಬ್ಸೈಟ್ ಯಾವ ಭಾಷೆಯಲ್ಲಿದೆ ನೋಡಿ. ಎಲ್ಲಾದರೂ 'ಕನ್ನಡ ಆವೃತ್ತಿ' ಅಂತ ಕೊಂಡಿಯಾದ್ರೂ ಕಂಡು ಬರುತ್ತಿದೆಯಾ? ಹೋಗಲಿ, ಇವರ E - ಆಡಳಿತ ಹುಡುಕಿಕೊಂಡು ಯಾರಾದರೂ ಆ ತಾಣಗಳಿಗೆ ಹೋದ್ರೆ ಅವರಿಗೆ ಸಿಗೋದು ಏನು ಗೊತ್ತಾ? ಅಲ್ಲಿರುವ ೧೫ ಕೊಂಡಿಗಳಲ್ಲಿ ೪ ಮಾತ್ರ ಕನ್ನಡ ಆವೃತ್ತಿಗೆ ಅವಕಾಶ ಮಾಡಿಕೊಡುತ್ತವೆ. ನೆನಪಿರಲಿ ಇವು ಯಾವು ನೇರವಾಗಿ ಕನ್ನಡದಲ್ಲಿ ಮೂಡಿ ಬರಲ್ಲ. ಬಂದಮೇಲೆ ಕನ್ನಡ ಆವೃತ್ತಿ ಎಲ್ಲಿ ಸಿಗಬಹುದು ಅಂತ ನಾವೇ ಹುಡುಕಿಕೊಳ್ಳಬೇಕು.

ಅಲ್ಲೇ police constable ಸೇರ್ಪಡೆಗೆ ಪ್ರಕಟಣೆ ಇದೆ ನೋಡಿ. ಇದು ಕೂಡಾ ಕನ್ನಡದಲ್ಲಿಲ್ಲ. ಆ ವೆಬ್ಸೈಟ್ ಬರೀ ಇಂಗ್ಲಿಶಿನಲ್ಲಿದೆಯ? ಇಲ್ಲ, ಇನ್ನೊಂದು ಭಾಷೆ ಕೂಡ ಇದೆ. ಹಿಂದಿ. ಏನಿದರ ಅರ್ಥ?

ಇನ್ನೊಂದು ನೋಡಿ. ಇದು ಎಲ್ಲ ಜಿಲ್ಲಾಡಳಿತಗಳ ಅಂತರ್ಜಾಲ ತಾಣಗಳ ಪಟ್ಟಿ. ಕೆಲವು ಜಿಲ್ಲಾ ಪಂಚಾಯ್ತಿಗಳ ವೆಬ್ಸೈಟ್ ಕೂಡಿ ಒಟ್ಟು ೩೪ ಇವೆ. ಇದರಲ್ಲಿ ಎಷ್ಟು ಕನ್ನಡದಲ್ಲಿದೆ?

ಸೊನ್ನೆ.

ಇಲಾಖೆಗಳ ಅಂತರ್ಜಾಲ ತಾಣಗಳು? ಇದರಲ್ಲಿ ನಾನು ನೋಡಿದ ಪೈಕಿ ನಾಲ್ಕೈದು ಬಿಟ್ಟರೆ ಮತ್ತೆಲ್ಲ English governance ರೂಪದಲ್ಲೇ ಇವೆ.

ತಂತ್ರಜ್ಞಾನ ಜನರ ಬದುಕನ್ನು ಸರಳಗೊಳಿಸಬೇಕು!

ನಿಜವಾಗಿಯೂ ತಂತ್ರಜ್ಞಾನ ಎಲ್ಲೆಲ್ಲಿ ಸಾಧ್ಯನೋ ಅಲ್ಲೆಲ್ಲ ಉಪಯೋಗಿಸಿಕೊಳ್ಳಬೇಕು. ಇನ್ನು ಹೇಳ್ಬೇಕು ಅಂದ್ರೆ ಜನರು ಸರ್ಕಾರಿ ಕಚೇರಿ ತಿರುಗಾಡೋ ಪ್ರಸಂಗವೇ ಬರಬಾರದು. ಆದರೆ ಈ ಸೌಕರ್ಯನ ಬರೀ ಇಂಗ್ಲಿಷ್ ಭಾಷೇಲಿ ಕೊಟ್ರೆ ಏನು ಪ್ರಯೋಜನ ಹೇಳಿ?

ಇದನ್ನ ಈ ಮುಂಚೆ ಒಮ್ಮೆ ನಾನು ನಮ್ಮ ನ್ಯಾಯಾಲಯಗಳ ವಿಷಯದಲ್ಲಿ ಒಬ್ಬ ನ್ಯಾಯಮೂರ್ತಿಗಳ ಹತ್ತಿರ ಕೇಳಿದಾಗ "ಕನ್ನಡ ಆವೃತ್ತಿನೂ ಇರುತ್ತೆ, ನಿಮಗೆ ಸರಿಯಾಗಿ ಹುಡುಕಲಿಕ್ಕೆ ಬಂದಿರುವುದಿಲ್ಲ" ಅಂದರು. ಕಾನೂನು ಕಲಿಕೆಯ ಮೊದಲನೆಯ ಸಾಲಿನಲ್ಲಿದ್ದ ನಾನು ಹೀಗೇ ಇರಬಹುದೇನೋ ಎಂದುಕೊಂಡೆ. ಇರಲಿ, ನಾನು ಈ ವಿಷಯದಲ್ಲಿ ದಡ್ಡನೇ ಆಗಿರಬಹುದು. ಆದರು ದಡ್ಡನಿಗೂ ತಿಳಿವಂತೆ ಸೌಲಭ್ಯಗಳನ್ನು ದೊರಕಿಸುವುದು ಸರಕಾರದ ಕರ್ತವ್ಯವಲ್ಲವೇ?

ಇನ್ನು UID ಬರುತ್ತಿದೆ. ಯೋಜನೆಯ ಪ್ರಕಾರ ನಡೆದರೆ ಮುಂದೆ ಹೆಚ್ಚು ಹೆಚ್ಚು ಸರಕಾರೀ ಸೌಲಭ್ಯಗಳು ಇ-ಗವರ್ನೆನ್ಸ್ ಮೂಲಕವೇ ಲಭ್ಯವಾಗುತ್ತವೆ. ಆಗಲೂ ಇದೇ ಧೋರಣೆ ಮುಂದುವರೆದರೆ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆದೀತು.

ಕಲಿಕೆಯ ಮಾಧ್ಯಮ ಮತ್ತು ರಾಜ್ಯಸರ್ಕಾರದ ಹೊಣೆಗಾರಿಕೆ!

ಕರ್ನಾಟಕ ರಾಜ್ಯಸರ್ಕಾರದ ಶಿಕ್ಷಣ ಮಂತ್ರಿಗಳಾದ ಮಾನ್ಯಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ರಾಜ್ಯದಲ್ಲಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರು ಮಾಡುವ ಬಗ್ಗೆ ತುಮಕೂರಿನಲ್ಲಿ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ. ಶ್ರೀಯುತರು ತಮ್ಮ ಹೇಳಿಕೆಯಲ್ಲಿ “ಜನರಿಂದ ಬೇಡಿಕೆ ಬಂದಲ್ಲಿ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಆರನೇ ತರಗತಿಯಿಂದ ಆರಂಭಿಸುತ್ತೇವೆ. ಇದು ಸರ್ಕಾರದ ಭಾಷಾನೀತಿಗೆ ವಿರುದ್ಧವಾಗಿಲ್ಲ, ಏಕೆಂದರೆ ಸರ್ಕಾರದ ಭಾಷಾನೀತಿ ಒಂದರಿಂದ ಐದನೇ ತರಗತಿಯವರೆಗಿನ ಕಲಿಕೆಗೆ ಮಾತ್ರಾ ಅನ್ವಯವಾಗುತ್ತದೆ” ಎಂದಿದ್ದಾರೆ. ಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದಾಗ ಸರ್ಕಾರವು ಶಿಕ್ಷಣದಲ್ಲಿನ ಭಾಷಾನೀತಿಯ ಬಗ್ಗೆ ಹೊಂದಿರುವ ನಿಲುವನ್ನು ಸಡಿಲಗೊಳಿಸುತ್ತಿರುವುದು ಕಾಣುತ್ತದೆ ಮತ್ತು ತಪ್ಪುದಾರಿಯೆಡೆಗೆ ನಾಡನ್ನು ಒಯ್ಯುತ್ತಿರುವಂತೆ ತೋರುತ್ತದೆ.

ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರ

ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ರಾಜ್ಯಸರ್ಕಾರ ಹೊತ್ತಿರುವುದು ಸರಿಯಾಗಿದೆ. ಆದರೆ ನಿಭಾಯಿಸುತ್ತಿರುವ ರೀತಿ ನಿರಾಶಾದಾಯಕವಾಗಿದೆ.

ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ...

ಪ್ರಪಂಚದ ಮುಂದುವರೆದ ನಾಡುಗಳಲ್ಲೆಲ್ಲಾ ಕಲಿಕೆಯೆಂಬುದು ತಾಯ್ನುಡಿಯಲ್ಲೇ ಇರುವುದನ್ನು ನಾವು ಬಹುತೇಕ ಕಡೆ ನೋಡಬಹುದು. ಜಪಾನ್, ಚೀನಾ, ಇಂಗ್ಲೇಂಡು, ಫ್ರಾನ್ಸ್, ಜರ್ಮನಿ... ಮೊದಲಾದ ಅನೇಕ ದೇಶಗಳು ಇದಕ್ಕೆ ಉದಾಹರಣೆಯಾಗಿ ನಿಂತಿವೆ. ಯುನೆಸ್ಕೋ ಕೂಡಾ ತಾಯ್ನುಡಿಯಲ್ಲಿನ ಕಲಿಕೆಗೆ ಒತ್ತು ನೀಡಿ ನಿಲುವನ್ನು ಘೋಷಿಸಿದೆ. ಪ್ರಪಂಚದ ನಾನಾ ವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಈ ಬಗ್ಗೆ ಗೊಂದಲವಿಲ್ಲದ ಒಂದೇ ತೆರನಾದ ಅನಿಸಿಕೆ ಹೊಂದಿದ್ದಾರೆ. ಕರ್ನಾಟಕ ರಾಜ್ಯಸರ್ಕಾರವೂ ಸುಪ್ರಿಂಕೋರ್ಟಿನ ಒಂದು ಆಶಯದಂತೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟು ಭಾಷಾನೀತಿ ರೂಪಿಸಿಕೊಂಡಿದೆ. ಹಾಗಾಗಿ ತಾಯ್ನುಡಿಯಲ್ಲಿ ಕಲಿಕೆಯು ಪರಿಣಾಮಕಾರಿ ಎನ್ನುವುದರ ಬಗ್ಗೆ ಈ ಹಿನ್ನೆಲೆಯಲ್ಲಿ ಯಾವ ಅಪಸ್ವರವೂ ಇಲ್ಲ ಎನ್ನುವುದು ವಾಸ್ತವವಾಗಿದೆ. ಅಷ್ಟೇ ಏಕೆ ಯಾವುದೇ ವಿಷಯವನ್ನು ನಮ್ಮ ತಾಯ್ನುಡಿಯಲ್ಲಿ ಕಲಿಯುವುದು ಸಮರ್ಪಕವೂ ಸುಲಭವೂ ಆಗಿದೆಯೆನ್ನುವುದು ಎಲ್ಲರಿಗೂ ಅನುಭವ ವೇದ್ಯವಾಗಿದೆ.

ಕರ್ನಾಟಕದ ಪರಿಸ್ಥಿತಿ

ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೫ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ” ಎನ್ನುವ ಅನಿಸಿಕೆಯಿದೆ. ವಾಸ್ತವವಾಗಿ ಇವುಗಳಲ್ಲಿ ಕೆಲವಲ್ಲಿ ಹುರುಳೂ ಇಲ್ಲದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದಲ್ಲಿ ಮಾತ್ರವೇ ಉನ್ನತ ಶಿಕ್ಷಣವಿರುವಾಗ ಅದಕ್ಕೆ ಹೋಗುವಾಗ ತೊಡಕಾಗುತ್ತದೆ ಎನ್ನುವುದು ದಿಟ. ವಾಸ್ತವವಾಗಿ ಉನ್ನತ ಶಿಕ್ಷಣವೂ ಸೇರಿದ ಹಾಗೆ ಎಲ್ಲ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕೆಂಬುದೇ ಸರಿಯಾದದ್ದಾದರೂ ಇಂದು ಪರಿಸ್ಥಿತಿ ಹಾಗಿಲ್ಲ ಅನ್ನುವುದು ವಾಸ್ತವ. ಹಾಗಾದರೆ ಈ ಕಲಿಕಾಮಾಧ್ಯಮ ಬದಲಾವಣೆಯೆನ್ನುವುದನ್ನು ಸಲೀಸಾಗಿ ಆಗಿಸುವಂತಹ ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ. ಒಂದು ಹಂತದವರೆಗೆ ಕನ್ನಡದಲ್ಲಿ ಕಲಿಕೆ ನಡೆಯಿಸಿ, ಇಂಗ್ಲೀಶ್ ಭಾಷೆಯನ್ನು ಸರಿಯಾಗಿ ಕಲಿಸುವುದರ ಮೂಲಕ ತೊಡಕನ್ನು ಕಡಿಮೆ ಮಾಡಿಸಬಹುದಾಗಿದೆ. ಕನ್ನಡದಲ್ಲೇ ಕಲಿತ ಪೋಶಕರನೇಕರು ತಾವು ಇಂಗ್ಲೀಶ್ ಬರದೆ ಅನುಭವಿಸಿದ್ದ ಪಾಡು ನೆನೆದು ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸಲು ಸಜ್ಜಾಗುತ್ತಾರೆ. ಹಾಗೆ ಮಾಡುವ ಭರದಲ್ಲಿ ಮಗುವಿನ ವಾತಾವರಣವನ್ನೇ ಬದಲಿಸಲೂ ಮುಂದಾಗುತ್ತಾರೆ. ಹೀಗೆ ಪರಿಸರದ ನುಡಿಯೇ ಬದಲಾಗುವುದಾದರೆ ಮಗುವಿನ ಇಂಗ್ಲೀಶಿನಲ್ಲಿನ ಕಲಿಕೆ ಸಲೀಸೇ.. ಆದರೆ ಇಡೀ ಕನ್ನಡನಾಡಿನ ಪರಿಸರವನ್ನು ಬದಲಿಸಲಾಗದಲ್ಲಾ? ಇಂದು ಪರಿಸರದಲ್ಲಿ ಇಂಗ್ಲೀಶಿನ ಗಂಧಗಾಳಿಯಿಲ್ಲದ ಮಗುವನ್ನು ಇಂಗ್ಲೀಶ್ ಮಾಧ್ಯಮದ ಕಲಿಕೆಗೆ ಒಡ್ಡುವುದು ’ಈಜು ಬಾರದ ಕೂಸನ್ನು ನೀರಲ್ಲಿ ಮುಳುಗಿಸಿ ಕೊಂದಂತೆ’! ಹಾಗಾಗಿ ಪೋಶಕರು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸುವ ಮುನ್ನ ತಮ್ಮ ಮಕ್ಕಳು ಕನ್ನಡವೂ ಬಾರದ, ಇಂಗ್ಲೀಶಿನಲ್ಲೂ ಪರಿಣಿತಿಯಿಲ್ಲದೇ ಎಡಬಿಡಂಗಿಗಳಾಗುವ ಅಪಾಯವನ್ನು ಮನಗಾಣಬೇಕಾಗಿದೆ. ಇದನ್ನು ತಿಳಿಸಿ ಹೇಳುವವರಾರು? ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ, ಆದರೆ ಇಂಗ್ಲೀಶ್ ಮಾಧ್ಯಮಕ್ಕೆ ಮುಂದೆ ಬದಲಾಗುವಾಗ ತೊಡಕಾಗದಂತೆ ಜೊತೆಯಲ್ಲಿ ಇಂಗ್ಲೀಶನ್ನೂ ಕಲಿಸುತ್ತೇವೆ ಎನ್ನುವ ಭರವಸೆಯನ್ನು ಕೊಡಬೇಕಾದದ್ದು ಕರ್ನಾಟಕ ರಾಜ್ಯ ಸರ್ಕಾರ.

ಬುದ್ಧಿವಂತರಾಗುತ್ತಾರೆ ಅನ್ನೋ ಮಾರುಕಟ್ಟೆ ತಂತ್ರ!

ಮಕ್ಕಳು ಬುದ್ಧಿವಂತರಾಗುತ್ತಾರೆ ಎನ್ನುವುದು ಇಂಗ್ಲೀಶ್ ಮಾಧ್ಯಮ ಶಾಲೆಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಹಬ್ಬಿಸಿರುವ ಪೊಳ್ಳು ವದಂತಿ. ವಾಸ್ತವವಾಗಿ ತಾಯ್ನುಡಿಯಲ್ಲಿ ಕಲಿತ ಮಕ್ಕಳು “ಕಾನ್ಸೆಪ್ಚುಯಲ್ ಥಿಂಕಿಂಗ್”ನಲ್ಲಿ (ತಿರುಳು ಚಿಂತನೆ/ ಕಲಿಕೆಯಲ್ಲಿ) ಅತ್ಯುತ್ತಮರಾಗಿರುತ್ತಾರೆ ಎನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಟುಸ್ ಪುಸ್ ಇಂಗ್ಲೀಶ್ ಮಾತಾಡುವುದನ್ನೇ ಬುದ್ಧಿವಂತಿಕೆ ಎಂದು ನಂಬುವ ಅಮಾಯಕ ತಾಯ್ತಂದೆಯರು ಇಂಗ್ಲೀಶ್ ಮಾಧ್ಯಮದ ಮೊರೆ ಹೋಗುವುದು ಸಹಜ. ಈ ಪೊಳ್ಳನ್ನು ದೂರಮಾಡುವ ಹೊಣೆಗಾರಿಕೆ ಯಾರದ್ದು? ಕರ್ನಾಟಕ ರಾಜ್ಯ ಸರ್ಕಾರದ್ದು.. ಅಲ್ಲವೇ?

ಒಳ್ಳೇ ದುಡಿಮೆಯ ಅವಕಾಶ

ಇನ್ನು ಮೂರನೆಯ ಅನಿಸಿಕೆ ಎಂದರೆ ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವುದು. ಹೌದೂ, ಓದಿನಲ್ಲಿ ಹೆಚ್ಚಿನ ಅಂಕ ಪಡೆದು, ಸಂದರ್ಶನದಲ್ಲಿ ಚೆನ್ನಾಗಿ ಪಾಲ್ಗೊಳ್ಳುವವರಿಗೆ ಒಳ್ಳೆ ಕೆಲಸ ಸಿಗುವುದು ಸಹಜ. ಆದರೆ ಹೀಗೆ ಒಳ್ಳೆಯ ಅಂಕ ಗಳಿಸಲಾಗಲೀ, ಸಂದರ್ಶನದಲ್ಲಿ ಚೆನ್ನಾಗಿ ಮಾಡಲಾಗಲೀ ಬೇಕಿರುವುದು ಆತ್ಮವಿಶ್ವಾಸ ಮತ್ತು ಅರಿವು ಎನ್ನುವುದು ಇಂತಹ ಸಂದರ್ಶನಗಳನ್ನು ಎದುರಿಸಿದ ಮತ್ತು ನಡೆಸುತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜನರು, ಒಳ್ಳೆಯ ಕೆಲಸ ದಕ್ಕಿಸಿಕೊಳ್ಳಲು ಇಂಗ್ಲೀಶ್ ಭಾಷೆಯ ಕಲಿಕೆ ಸಾಕೋ, ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಕೆ ಬೇಕೋ ಎಂಬುದನ್ನು ಯೋಚಿಸಿ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂತಹ ಪರಿಣಿತಿಯನ್ನು, ನಿಮ್ಮ ಮಕ್ಕಳಿಗೆ ಅವರು ’ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುತ್ತಿರುವಾಗಲೂ’ ಒದಗಿಸಿಕೊಡುವ ಹೊಣೆಗಾರಿಕೆ ನಮ್ಮದು ಎನ್ನಬೇಕಾಗಿದೆ. ಯಾರು ಹೀಗೆನ್ನಬೇಕೆಂದರೆ ಅದು ಕರ್ನಾಟಕ ರಾಜ್ಯಸರ್ಕಾರ.

ಯಾವ ಕಟ್ಟುಪಾಡನ್ನೂ ಒಪ್ಪಬೇಕಿಲ್ಲ!

ಇವೆಲ್ಲಾ ಮಾಡುತ್ತಲೇ ಕನ್ನಡದಲ್ಲಿ ಕಲಿಕೆಯನ್ನು ಇಂದು ಪ್ರಾಥಮಿಕ ಹಂತದವರೆಗೆ ಕಡ್ಡಾಯ ಎನ್ನುವ ನಿಲುವನ್ನು ಹೊಂದಿದ್ದರೂ ಕಡ್ಡಾಯದ ಕಟ್ಟುಪಾಡು ಬಿಟ್ಟು ಕನ್ನಡದ ಕಲಿಕೆಯನ್ನು ಉನ್ನತ ಶಿಕ್ಷಣದವರೆಗೂ ವಿಸ್ತರಿಸಬೇಕಾದ ಹೊಣೆ ಸರ್ಕಾರದ್ದೇ ಆಗಿದೆ. ಹಾಗಿರುವಾಗ ’ನಮ್ಮ ಭಾಷಾನಿಯಮ ಬರೀ ಐದನೇ ತರಗತಿವರೆಗೆ ಮಾತ್ರಾ ಅನ್ವಯವಾಗುತ್ತೆ, ಹಾಗಾಗಿ ಆರರಿಂದ ಇಂಗ್ಲೀಶ್ ಮಾಧ್ಯಮ ಮಾಡ್ತೀವಿ’ ಅನ್ನೋದು ಆತ್ಮವಂಚನೆ ಮಾತ್ರವಲ್ಲಾ, ಆತ್ಮವಿಶ್ವಾಸದ ಕೊರತೆಯೂ ಹೌದು. ಸರ್ಕಾರಕ್ಕೆ ಕನ್ನಡ ಮಾಧ್ಯಮದ ಕಲಿಕೆಯಿಂದ ಕನ್ನಡಿಗರ ಬದುಕನ್ನು ಹಸನುಗೊಳಿಸಲು ಅಸಾಧ್ಯ ಅನ್ನಿಸಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಮಾಧ್ಯಮ ಆರಂಭಿಸಲಿ. ಹಾಗೆ ಆರಂಭಿಸುವ ಮುನ್ನ ಪರಿಸರದ ನುಡಿಯಲ್ಲಿನ ಕಲಿಕೆಗಿಂತಾ ಪರಭಾಷಾ ಮಾಧ್ಯಮವೊಂದರ ಮೂಲಕ ಯಾವುದೇ ಜನಾಂಗದ ಕಲಿಕೆ ಅತ್ಯುತ್ತಮವಾಗುತ್ತದೆ ಎನ್ನುವುದಕ್ಕೆ ಒಂದು ವೈಜ್ಞಾನಿಕ ಅಧ್ಯಯನದ ಆಧಾರ ಕೊಡಲಿ. ಈ ಹೊಣೆಗಾರಿಕೆ ಕರ್ನಾಟಕ ಸರ್ಕಾರದ್ದು!

ಬಲು ಮುಖ್ಯವಾಗಿ ಮೇಲಿನ ಮೂರು ಕಾರಣಗಳಿಂದಾಗಿ ಕನ್ನಡಿಗ ಪೋಶಕರು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಶ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಶ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ಸಮಾನತೆಯ ಆಕರ್ಶಕವಾದ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಶ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಸೆಳೆತಕ್ಕೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ,

ರಾಜ್ಯದ ನಿಯಮ ಯಾರನ್ನೋ ನೋಡಿ ನಿಕ್ಕಿಯಾಗದು

ಅಂತೆಯೇ ಜನರು ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ” ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಇಂದು ಯಾರೇ ತಾಯ್ನುಡಿಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿಲ್ಲವಾದಲ್ಲಿ ಅದು ಅವರು ತಮ್ಮ ಮಕ್ಕಳಿಗೆ ಬಗೆಯುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು. ಯಾರೋ ಕೆಲವರು (ಇದು ಹಲವರಾದರೂ...) ತಮ್ಮ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದ ಶಿಕ್ಷಣ ಕೊಡಿಸಿಬಿಟ್ಟರು ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಯನ್ನೇ ತೀರ್ಮಾನಿಸುವುದು ಸರಿಯಲ್ಲ. ಹಾಗಾಗಿ ರಾಜ್ಯಸರ್ಕಾರ ಕನ್ನಡದಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸಿ ಜಾರಿಮಾಡಲಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅವರ ಆಯ್ಕೆಯ ವಿದೇಶಿ ಭಾಷೆಯನ್ನು ಪ್ರಾಥಮಿಕ ಹಂತದ ನಂತರ ಒಂದು ಭಾಷೆಯಾಗಿ ಕಲಿಸಲು ಏರ್ಪಾಟು ಮಾಡಲಿ. ಈಗ ಇನ್ನೂ ಉನ್ನತ ಶಿಕ್ಷಣವು ಇಂಗ್ಲೀಶಿನಲ್ಲಿ ಮಾತ್ರಾ ಲಭ್ಯವಿರುವುದರಿಂದ, ಕನ್ನಡ ಮಾಧ್ಯಮದ ಮಕ್ಕಳಿಗೆ-ಇಂಗ್ಲೀಶ್ ಮಾಧ್ಯಮ ಕಲಿಕೆಗೆ ಬದಲಾಗುವಾಗ-ಆದಷ್ಟು ತೊಡಕನ್ನು ಕಡಿಮೆ ಮಾಡುವಂತಹ ಯೋಜನೆಗಳನ್ನು ತಾತ್ಕಾಲಿಕವಾಗಿ ರೂಪಿಸಿ ಜಾರಿಗೊಳಿಸಲಿ. ಇದೆಲ್ಲಾ ಬಿಟ್ಟು, ತಾನೇ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರುಮಾಡೋ ಮೂಲಕ, ಕನ್ನಡದ ಮಕ್ಕಳ ಕಲಿಕೆಯನ್ನು ಅವರ ಪರಿಸರದಲ್ಲಿಲ್ಲದ ಭಾಷೆಯೊಂದರಲ್ಲಿ ಮಾಡಿಸುವ ಮೂಲಕ, ಒಳ್ಳೇ ಕೆಲಸ – ಒಳ್ಳೇ ಓದು – ಬುದ್ಧಿವಂತಿಕೆ ಎನ್ನುವ ಬಣ್ಣದ ಸಕ್ಕರೆಕಡ್ದಿಯ ಮಾತುಗಳ ಮೂಲಕ... ಜನರನ್ನು ಏಳಿಗೆಯ ದಾರಿಯಿಂದ ಮತ್ತಷ್ಟು ದೂರ ಒಯ್ಯುವುದು ನಿಶ್ಚಿತ.

ಜನರೆಂದರೆ ಯಾರ್ ಯಾರು ಕಾಗೇರಿಯವರೇ?

ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ "ಬುಲೆಟ್ ಸಂದರ್ಶನ"ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.

ಸಾಹಿತಿಗಳಷ್ಟೇ... ಜನತೆಯಲ್ಲ!

ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ... ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ... ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ "ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?" ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ... ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.

ಜನರ ಶಿಕ್ಷಣದ ಬಗ್ಗೆ ಮಾತಾಡಬೇಕಾದವರು ಯಾರು?

ಕಾಗೇರಿಯವರು ಹೇಳಿದ ಹಾಗೆ ಸಾಹಿತಿಗಳು ಮಾತ್ರವೇ ಕನ್ನಡ ಜನರೆಲ್ಲಾ ಅಲ್ಲಾ ಸರಿ, ಹಾಗಾದ್ರೆ ನಾಡಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡೋ, ದಿಕ್ಕುತೋರಿಸೋ ಹೊಣೆಗಾರಿಕೆ ಯಾರದ್ದು? ನಮ್ಮಂಥಾ ಸಾಮಾನ್ಯರು ಮಾತಾಡುದ್ರೂ ಕಾಗೇರಿಯವರು ಮೊದಲನೇ ಪ್ರಶ್ನೆಯಾಗಿ "ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೀರಾ?" ಅಂದಾರು... ಮತ್ತೂ ಮುಂದುವರೆದು "ನೀವು ಹೇಳೋದು ಇಡೀ ಕನ್ನಡ ಜನರ ಮಾತಾ?" ಅಂದಾರು. ತಾಯ್ನುಡಿಯಲ್ಲಿ ಕಲಿಕೆ ಒಳ್ಳೇದು ಅಂತಾಗಲೀ, ಸರ್ಕಾರವೇ ಇಂಗ್ಲೀಶ್ ಶಾಲೆ ತೆಗೀಬಾರದು ಅನ್ನೋಕಾಗಲೀ ಸರ್ಕಾರ ನಿರ್ಧಾರ ತೆಗೆದುಕೊಳ್ಳೋಕೆ ಶಿಕ್ಷಣತಜ್ಞರು, ಸಮಾಜತಜ್ಞರೂ ಮುಂತಾದವರ ಸಲಹೆ ತೆಗೆದುಕೊಳ್ಳಬೇಕಲ್ಲವೇ? ಏನಂತಾರೆ ಕಲಿಕೆಯ ಬಗ್ಗೆ ಪ್ರಪಂಚದ ತಜ್ಞರು? ಏನನ್ನುತ್ತೆ ಯುನೆಸ್ಕೋ? ಪ್ರಪಂಚದಲ್ಲಿರೋ ನಾನಾ ದೇಶಗಳಲ್ಲಿ ಎಂಥಾ ವ್ಯವಸ್ಥೆಯಿದೆ? ಇವೆಲ್ಲವನ್ನೂ ಅಧ್ಯಯನ ಮಾಡಿ ಸರ್ಕಾರ ನಿರ್ಧಾರ ತೊಗೊಳ್ಳೋಕೆ ಮುಂದಾಗುತ್ತೇನು? ಒಂದು ನಿರ್ಧಾರ ತೊಗೊಂಡು... ಅದನ್ನು ವಿರೋಧ ಮಾಡಿದೋರುನ್ನೆಲ್ಲಾ ಒಂದಲ್ಲಾ ಒಂದು ಮಾತೆತ್ತಿ ಕೆಳಗೆ ಮಾಡಿ ತಾವಂದುಕೊಂಡಿದ್ದನ್ನು ಜಾರಿ ಮಾಡೋದ್ರಲ್ಲಿ ಈ ಸರ್ಕಾರಕ್ಕೆ ಈಗಾಗಲೇ ಅನುಭವ ಇದೆಯಲ್ಲಾ? ಆಗ ತಿರುವಳ್ಳುವರ್ ಪ್ರತಿಮೆ ನಿಲ್ಲಿಸಬೇಡಿ ಅಂದಾಗ ಜನರ ಹೋರಾಟದ ಕತ್ತು ಹಿಸುಕಿ, ಸಾಹಿತಿಗಳಿಂದ ಪತ್ರಿಕೆಗಳಲ್ಲಿ ದಿನಕ್ಕೊಂದು ಪತ್ರ ಬರೆಸಿ, ಅದನ್ನೇ ಜನಾಭಿಪ್ರಾಯ ಅಂದಿದ್ದನ್ನು ಜನರು ಮರೀತಾರಾ ಗುರೂ? ಪಾಪಾ! ಆಗ ಈ ಸಾಹಿತಿಗಳೇ ಅವರಿಗೆ ಇಡೀ ಕನ್ನಡ ಜನತೆ ಆಗಿದ್ರಾ?
Related Posts with Thumbnails