ಕನ್ನಡ ಚಲನಚಿತ್ರ ಹಂಚಿಕೆಗೊಂದು ಹೊಸ ಆಯಾಮ

ಕನ್ನಡ ಚಿತ್ರರಂಗದ ವರಾಂಡದೊಳಗಿಂದ ಇನ್ನೊಂದು ಒಳ್ಳೇಸುದ್ದಿ ಬಂದಿದೆ. ಚಿತ್ರಲೋಕದ ಶ್ರೀ ಕೆ.ಎಂ.ವೀರೇಶ್ ಅವ್ರು ಕನ್ನಡ ಚಿತ್ರಗಳಿಗೆ ವಿದೇಶದಲ್ಲಿ ಹಂಚಿಕೆದಾರರಾಗೋಕೆ ಹೊರಟಿದಾರೆ ಅನ್ನೋದೆ ಆ ಸುದ್ದಿ. ಈ ಸಾಹಸಕ್ಕೆ ಮುಂದಾಗಿರೋ ವೀರೇಶ್ ಅವರಿಗೆ ಒಳ್ಳೇದಾಗ್ಲಿ ಅಂತ ಬೆನ್ನು ತಟ್ತಾನೇ ಅವ್ರ ಈ ಸಾಹಸಾನ ಮೆಚ್ಕೊಬೇಕು ಗುರು.

ಬರೀ ಅಭಿಮಾನ ಅಲ್ಲ! ಉದ್ದಿಮೆಯೂ ಹೌದು!!

ಕನ್ನಡ ಚಿತ್ರಗಳನ್ನು ಹೊರದೇಶದಲ್ಲಿ ಪ್ರದರ್ಶನ ಮಾಡೋದು ಯಾಕೆ? ಅನ್ನೋ ಪ್ರಶ್ನೆಗೆ ಉತ್ತರ, ಅದು ಅಭಿಮಾನಕ್ಕಾಗಿ ಮಾತ್ರಾ ಅಲ್ಲ ಲಾಭದಾಯಕ ಉದ್ದಿಮೆಗಾಗಿ ಅನ್ನೋದಾಗಬೇಕು. ಹಾಗೆ ಆಗಬೇಕಂದ್ರೆ ಹೊರದೇಶದ ಕನ್ನಡಿಗರಿಗೆ ಕನ್ನಡ ಸಿನಿಮಾ ನೋಡಲಿಕ್ಕೆ ಅವಕಾಶ ಮಾಡಿಕೊಡೋದು ಮಾತ್ರಾ ಸಾಕಾಗಲ್ಲ, ಅವರಿಗೆ ಕನ್ನಡ ಚಿತ್ರಗಳ, ಚಿತ್ರಗೀತೆಗಳ ಗುಂಗು ಹಿಡುಸ್ಬೇಕು. ಅಭಿಮಾನಕ್ಕಾಗಿ ಕನ್ನಡ ಸಿನಿಮಾ ನೋಡಿ ಅನ್ನೋ ತಂತ್ರ ಸವಕಲು, ನಿಮ್ಮ ಮನರಂಜನೆಗಾಗಿ ಅತ್ಯುತ್ತಮವಾದದ್ದನ್ನು ನಿಮ್ಮವರೇ ಮಾಡಿದ್ದಾರೆ, ನೋಡಿ ಅನ್ನೋ ಹಂತಕ್ಕೆ ಕರೆದೊಯ್ಯಬೇಕು. ಕನ್ನಡ ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತು ಕಾಯೋಹಾಗೆ ಮಾಡಲು ನಾವು ಯಶಸ್ವಿಯಾದ್ರೆ ಈ ಉದ್ದಿಮೆ ಖಂಡಿತಾ ಲಾಭದಾಯಕವಾಗುತ್ತೆ ಗುರು.

ಬರೀ ಹಂಚಿಕೆ ಅಲ್ಲ ಮಾರುಕಟ್ಟೆ ನಿರ್ಮಾಣ

"ಕನ್ನಡದೋರು ಇಷ್ಟು ಲಕ್ಷ ಜನ್ರು ಈ ದೇಶದಲ್ಲಿದೀರಿ, ಬನ್ನಿ ನಿಮಗೆ ಕನ್ನಡ ಸಿನಿಮಾ ನೋಡಕ್ಕೆ ಅವಕಾಶ ಮಾಡಿಕೊಡ್ತೀವಿ ಅನ್ನೋದು ಅಷ್ಟು ಪರಿಣಾಮಕಾರಿ ಮಾರುಕಟ್ಟೆ ತಂತ್ರವಾಗೋಲ್ಲ. ಯಾಕಂದ್ರೆ ಕನ್ನಡಿಗರಲ್ಲಿ ವಿದೇಶಕ್ಕೆ ಹೋಗಿದ್ದೂ ನಾವು ಕನ್ನಡಿಗರಾಗಿದ್ದೀವಿ, ಕನ್ನಡತನವೇ ನಮ್ಮ ಗುರುತು, ನಮ್ಮ ನೆಲದ ಸಂಸ್ಕೃತಿ, ಭಾಷೆ ಇವುಗಳನ್ನೆಲ್ಲಾ ಉಳಿಸಿಕೊಳ್ಳೋದೇ ಸರಿಯಾಗಿರೋದು ಅನ್ನೋ ಮನೋಭಾವ ಇಲ್ಲದೇ ಹೋದ್ರೆ... ನಾವು ಸಿನಿಮಾನ ಬಿಟ್ಟಿ ತೋರುಸ್ತೀವಿ ಅಂದ್ರೂ ಜನನ್ನ ಸೆಳ್ಯಕ್ ಆಗಲ್ಲ. ಹಾಗಾದ್ರೆ ಏನ್ ಮಾಡಬೇಕು ಅಂದ್ರೆ ಸಖತ್ ಮಾರುಕಟ್ಟೆ ತಂತ್ರಗಳನ್ನು ಬಳುಸ್ಬೇಕು. ನಮ್ಮ ಸಿನಿಮಾ ತಾರೆಗಳನ್ನು ಕರ್ಕೊಂಡು ಹೋಗಿ ಆಕರ್ಷಕವಾದ ಕಾರ್ಯಕ್ರಮಗಳನ್ನು ನಡೆಸಿ, ಸಿನಿಮಾ ಹಾಡು ಬಿಡುಗಡೆ, ಸಿನಿಮಾ ಬಿಡುಗಡೆ ಅಂತ ಬಣ್ಣಬಣ್ಣದ ಕಾರ್ಯಕ್ರಮ ಮಾಡೋದ್ರು ಮೂಲಕ ಮಾರುಕಟ್ಟೆ ಕಟ್ಕೋಬೇಕು. ಕನ್ನಡ ಸಿನಿಮಾ ಬರೀ ಕನ್ನಡದೋರಿಗೆ ಮಾತ್ರಾ ಅಲ್ಲ, ಬೇರೆಯೋರೂ ಅದಕ್ಕೆ ಗ್ರಾಹಕರಾಗಬೇಕು ಅನ್ನೋ ಗುರಿ ಇಟ್ಕೊಂಡು ಡಬ್ಬಿಂಗು, ಸಬ್ ಟೈಟಲ್ಲು ಅದೂ ಇದೂ ಅಂತ ಇರೋಬರೋ ಎಲ್ಲಾ ತಂತ್ರಜ್ಞಾನಾನೂ ಬಳುಸ್ಕೋಬೇಕು. ಆ ಮೂಲಕ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಕಟ್ಕೊಬೇಕು.... " ಅನ್ನೋದನ್ನೆಲ್ಲಾ ಖಚಿತವಾಗಿ ಈ ಉತ್ಸಾಹಿ ಉದ್ದಿಮೆದಾರರು ನೆನಪಿಟ್ಟುಕೊಂಡೇ ಈ ಹೊಸ ಸಾಹಸಕ್ಕೆ ಕೈ ಹಾಕಿರ್ತಾರೆ ಗುರು. ವಿದೇಶದಲ್ಲಿರೋ ಕನ್ನಡಿಗ್ರೂ ಇವರ ಕೈ ಹಿಡೀಬೇಕು, ಕನ್ನಡ ಚಿತ್ರರಂಗ ಕೂಡಾ ಮಾರುಕಟ್ಟೆ ಬೇಡಿಕೇನ ಪೂರೈಸಕ್ಕೆ ಅಗತ್ಯವಿರೋ ಗುಣಮಟ್ಟಾನ ತಮ್ಮ ಕೈವಶ ಮಾಡ್ಕೋಬೇಕು... ನಮ್ಮ ಸಿನಿಮಾ ನೋಡೋದು ಮನಸ್ಸಿಗೆ ಖುಷಿ ಕೊಡೋದ್ರು ಜೊತೆಗೆ ಪ್ರಪಂಚದಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲದ ಹಾಗೆ ಸಿನಿಮಾ ಅನ್ನೋ ಕಲೇನ ಕರಗತ ಮಾಡ್ಕೊಂಡಿದೀವಿ ಅನ್ನೋ ಹೆಮ್ಮೆಗೆ ಕಾರಣವಾಗುವಂತಹ ದಿನಗಳು ಬರಬೇಕು ಗುರು!

ಕನ್ನಡನಾಡಿನ ಪ್ರತಿಭಾ ಪಲಾಯನ ನಿಲ್ಲಲಿ!

ಇತ್ತೀಚೆಗೆ ಮದುರೈನಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕದ ಆಟಗಾರರದ್ದೇ ದರ್ಬಾರಂತೆ. ಚಿನ್ನ, ಬೆಳ್ಳಿ ಕಂಚು ಎಲ್ಲಾ ಬಗೆಯ ಪದಕಗಳ್ನ ನಮ್ಮವರು ಗೆದ್ದದ್ದೇ ಗೆದ್ದದ್ದು. ಆದ್ರೆ ಖುಷಿ ಪಟ್ಟಿದ್ದು ಮಾತ್ರಾ ಆಂಧ್ರ, ಜಾರ್ಖಂಡ್ ಥರದ ಬೇರೆ ಬೇರೆ ರಾಜ್ಯಗಳು ಅನ್ನೋ ಸುದ್ದಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ. ನಿಜಾಂಶ ಕೆದಕಿ ನೋಡಿದ್ರೆ ಕರ್ನಾಟಕದ ಕ್ರೀಡಾ ವ್ಯವಸ್ಥೆಯೊಳಗಿನ ದುರಂತ ಕಾಣತ್ತೆ ಗುರು! ಯಾಕಂದ್ರೆ ಇವರೆಲ್ಲಾ ಪ್ರತಿನಿಧಿಸಿದ್ದು ನಮ್ಮ ನಾಡನ್ನಲ್ಲ, ಬದಲಾಗಿ ಆ ರಾಜ್ಯಗಳನ್ನು. ಅರೆ! ನಮ್ಮೊರನ್ನು ಹೊರರಾಜ್ಯದೋರು ಆದರುಸ್ತಾರೆ ಅಂತಾ ಖುಷಿ ಪಡೋದು ಬಿಟ್ಟು ಕ್ಯಾತೆ ತೆಗೀತೀರಾ ಅನ್ನಬೇಡಿ. ಇವರೆಲ್ಲಾ ಅಲ್ಲಿಗೆ ಹೋಗಿದ್ದು, ನಮ್ಮ ನಾಡಲ್ಲಿ ಆ ಪ್ರತಿಭೆಗಳಿಗೆ ಅವಕಾಶ ಸಿಕ್ತಿಲ್ಲ ಅನ್ನೋ ಕಾರಣಕ್ಕೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ ಆಲ್ವಾ ಗುರು?

ಈ ಪ್ರತಿಭೆಯ ಪಲಾಯನ ಏಕೆ?
ನಿಜವಾಗ್ಲೂ ನಮ್ಮ ರಾಜ್ಯದ ಆಟಗಾರರು ಯಾಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಹುಟ್ಟುತ್ತಿದೆ ಅಂತ ನೋಡಿದ್ರೆ ಇಲ್ಲಿ ಆವರಿಗೆ ಸಾಕಷ್ಟು ಸೌಕರ್ಯ, ಹಣ ಸಹಾಯ ಮತ್ತು ಪ್ರೋತ್ಸಾಹಗಳು ಸಿಗದ ಕೊರತೆ ಇದೆಯೇನೋ ಅನ್ಸುತ್ತೆ. ಇಂಥಾ ಕೊರತೆಗಳ ಕಾರಣಗಳಿಂದಲೇ ನಮ್ಮ ನಾಡಿನ ಪ್ರತಿಭೆಗಳು ಅವಕಾಶವನ್ನು ಅರಸಿ ಹೊರರಾಜ್ಯಕ್ಕೆ ಹೋಗ್ತಿರೋದು.
ಇದು ಹೀಗಾಗಬಾರದು.
ಹೇಗಿರ್ಬೇಕು ಪರಿಸ್ಥಿತಿ?
ತಮ್ಮಲ್ಲಿರೋ ಕ್ರೀಡಾ ಪ್ರತಿಭೆಯನ್ನೇ ನಂಬಿರೋ ಹಲವಾರು ಆಟಗಾರರಿಗೆ ನಾಡಿನ ಸರ್ಕಾರ ಸಾಕಷ್ಟು ಉತ್ತೇಜನ ಕೊಡಬೇಕು. ಒಂದು ರಾಜ್ಯದಲ್ಲಿ ಹುಟ್ಟಿ ತಮ್ಮ ಪ್ರತಿಭೆ ಪ್ರದರ್ಶಿಸೊಕ್ಕೆ ಮಾತ್ರ ಮತ್ತೊಂದು ರಾಜ್ಯದ ಮೋರೆ ಹೋಗಿ ಅಲ್ಲೇ ನೆಲೆಸಿ, ಅಲ್ಲಿಯವರಾಗೋದು ಆಟಗಾರರಿಗೂ ಮನಸ್ಸಿಗೆ ಕಷ್ಟವಾಗೋ ವಿಷಯಾನೇ ಆಗಿರಬಹುದು ಮತ್ತು ಅನಿವಾರ್ಯವಾಗಿ ಅವ್ರು ಹಾಗೆ ನಡ್ಕೊತಿರಬಹುದು. ಹೀಗಾಗದಂತೆ ಸರ್ಕಾರದ ಕ್ರೀಡಾ ಇಲಾಖೆ, ಕ್ರಮ ಕೈಗೊಂಡು ಪಟುಗಳಿಗೆ ಪ್ರೋತ್ಸಾಹ ನೀಡಲು ಎಲ್ಲಾ ಬಗೆಯ ಯೋಜನೆಗಳ್ನೂ ಕೈಗೆತ್ತಿಕೊಳ್ಳಬೇಕು. ಒಳ್ಳೊಳ್ಳೆ ಪ್ರಾಯೋಜಕರನ್ನು ಹುಡುಕಿ, ಆಟಗಾರರಿಗೂ ಪ್ರಾಯೋಜಕರಿಗೂ ನಡುವಿನ ಸೇತುವೆಯಾಗಿ ಕ್ರೀಡಾ ಪ್ರಾಧಿಕಾರಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿ ನಮ್ಮವರ ಏಳಿಗೆಗೆ ಕಾರಣವಾಗಬೇಕು. ಒಟ್ಟಿನಲ್ಲಿ ಕನ್ನಡಿಗರ ಪಾಲಿಗೆ ಕನ್ನಡ ನಾಡು ಎಲ್ಲ ಕ್ಷೇತ್ರಗಳಲ್ಲಿನ ಸಾಧನೆಗೆ ಫಲವತ್ತಾದ ನೆಲವಾಗಬೇಕು.

ಅಂತರರಾಜ್ಯ ವಲಸೆ ಬಗ್ಗೆ ಏನಂತೀರಾ? ಧಣಿಗಳೇ...


ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಒಳ್ಳೆ ಆಲೋಚನೆಯನ್ನು ಹರಿಬಿಟ್ಟಿದ್ದಾರೆ ಗುರು! ಬೆಂಗಳೂರು ಒಂದು ಬೆಳವಣಿಗೆ ಆದ್ರೆ ಮಾತ್ರಾ ಸಾಲ್ದು, ಕನ್ನಡ ನಾಡು ಉದ್ಧಾರ ಆಗಬೇಕು ಅಂದ್ರೆ ಬೇರೆ ಬೇರೆ ಕಡೆ ಬೆಳವಣಿಗೆಗಳು ಆಗಬೇಕು ಅಂದಿದ್ದಾರೆ. ನಿಜಕ್ಕೂ ಇದು ಮುಖ್ಯಮಂತ್ರಿಗಳು ನಾಡಿನ ಸರ್ವಾಂಗೀಣ ಏಳಿಗೆ ಬಗ್ಗೆ ಹೊಂದಿರೋ ಕಾಳಜಿ ತೋರುಸ್ತಿದೆ. ಆದರೆ ಇದಕ್ಕೆ ಸಾಹೇಬರು ಕೊಟ್ಟಿರೋ ಸಮರ್ಥನೆ ಮಾತ್ರಾ ಸೊಲ್ಪ ಎಡವಟ್ಟಾಗಿದೆ ಗುರು.

ನಗರಗಳಿಗೆ ವಲಸೆ ತಡೀಬೇಕು ಅನ್ನೋ ಕಾರಣ!

ಕನ್ನಡ ನಾಡಿನಲ್ಲಿರೋ ಜನರಲ್ಲಿ ಭಾಳಾ ಜನ್ರು ನಗರಗಳಿಗೆ ವಲಸೆ ಬರ್ತಾ ಇದಾರೆ, ಇದಕ್ಕೆ ಉದ್ದಿಮೆಗಳು ಬೆಂಗಳೂರಿನಲ್ಲಿ ಕೇಂದ್ರಿತವಾಗ್ತಿರೋದು ಕಾರಣ, ಹಾಗಾಗಿ ಬೆಳವಣಿಗೆ ಚಟುವಟಿಕೆಯನ್ನು ಬೆಂಗಳೂರಿನಿಂದ ಆಚೆಗೂ ವಿಸ್ತರಿಸಬೇಕು ಅಂತಾ ಹೇಳಿದಾರೆ. ಇದಕ್ಕೆ ಮೂಲ ಕಾರಣ ನಗರಗಳನ್ನು ನಿಭಾಯಿಸಕ್ಕೆ ಬರ್ತಾ ಬರ್ತಾ ಬಲೇ ತ್ರಾಸು ಉಂಟಾಗುತ್ತೆ ಅನ್ನೋದು ಒಂದ್ಕಡೆ ಆಗಿದ್ರೆ ಬೆಂಗಳೂರೊಂದೇ ಬೆಳವಣಿಗೆ ಹೊಂದ್ತಾ ಉಳಿದ ಕಡೆ ಹಿಂದುಳಿದೇ ಇದ್ರೆ ಸರಿಯಲ್ಲ ಅನ್ನೋದು ಇನ್ನೊಂದು ಕಡೆ. ಒಪ್ಪಲೇಬೇಕಾದ ಮಾತಂದ್ರೆ ಬೆಂಗಳೂರನ್ನ ಬಿಟ್ಟೂ ಹತ್ತಾರು ಕಡೆ ಆರ್ಥಿಕ ಚಟುವಟಿಕೆಗಳು ನಡೀಬೇಕು. ಅದಕ್ಕೆ ಬೇಕಾದ ಮೂಲಸೌಕರ್ಯಗಳಾದ ರಸ್ತೆ, ರೈಲು, ನೀರು, ವಿದ್ಯುತ್ ಎಲ್ಲಾ ಮಾಡಿಕೊಡಬೇಕು. ಇದು ನಿಜಕ್ಕೂ ಕನ್ನಡಿಗರಿಗೆ ಕೆಲಸ ಕೊಡ್ಸುತ್ತೆ, ನಮ್ಮ ಪರಿಣಿತಿ ಹೆಚ್ಚಿಸುತ್ತೆ, ನಮ್ಮ ಏಳಿಗೆ ಉಂಟಾಗಲು ಪೂರಕವಾಗುತ್ತೆ. ಆದ್ರೆ ಇದು ನಗರಗಳಿಗೆ ವಲಸೆ ತಡ್ಯಲ್ಲ, ಬದಲಾಗಿ ಬೆಂಗಳೂರಿಗೆ ವಲಸೆ ತಡೆದೀತು ಅಷ್ಟೇ. ಏನೇ ಅಂದ್ರು ಇದು ಆದ್ಯತೆ ಮೇಲೆ ಆಗಲೇ ಬೇಕಾದ ಕೆಲಸ ಗುರು.
ಅಂತರರಾಜ್ಯ ವಲಸೇನ್ನೇ ತಡೀಬೇಕಾದ್ದಲ್ವಾ?
ಒಳನಾಡಿನಿಂದ, ಹಳ್ಳಿಗಾಡಿನಿಂದ ನಗರಗಳಿಗೆ ವಲಸೆ ಬರ್ತಾರೆ ಜನಾ ಅನ್ನೋದಕ್ಕೆ ಇಷ್ಟು ಮಹತ್ವ ಕೊಟ್ಟಿರೋ ಮಾನ್ಯ ಮುಖ್ಯಮಂತ್ರಿಗಳು ಜೊತೆಯಲ್ಲೇ ಬಂಡವಾಳ ಹರಿವು ಯಾವ ಕಾರಣಕ್ಕೂ ಕೈ ತಪ್ಪದಂತೆ ನೋಡಿಕೊಳ್ಳೋ ಭರವಸೇನೂ ಕೊಟ್ಟಿದಾರೆ. "ಈಗ ಹೊಸ ಹೊಸ ಉದ್ದಿಮೆಗಳು ಆರಂಭ ಮಾಡೋದಾಗ್ಲೀ, ಇಲ್ಲಿ ಬಂಡವಾಳ ಹರಿದು ಬರಲಿ ಅಂತ ಅನೇಕ ರಿಯಾಯ್ತಿಗಳನ್ನು ಉದ್ದಿಮೆದಾರರಿಗೆ ಒದಗಿಸೋದಾಗ್ಲೀ, ನಮ್ಮ ನೆಲ, ಜಲವನ್ನೆಲ್ಲಾ ಕಡಿಮೆ ದರದಲ್ಲಿ ಒದಗಿಸಿ ಕೊಡೋದಾಗ್ಲಿ, ತೆರಿಗೆ ರಜಾ ವರ್ಷದ ಸವಲತ್ತು ಕೊಡೋದಾಗ್ಲೀ ಯಾಕೆ? ನಮ್ಮ ಜನರಿಗೆ ಉದ್ಯೋಗ ಸಿಗಲಿ, ನಮ್ಮೂರು ಆರ್ಥಿಕವಾಗಿ ಬೆಳೀಲಿ ಅನ್ನೋ ಕಾರಣಕ್ಕೆ ತಾನೆ? ಹಾಗಿದ್ರೆ ಕನ್ನಡ ನಾಡೆಂಬ ನಲ್ ತೋಟದಲ್ಲಿ ಮಸ್ತ್ ಮಸ್ತು ಹಣ್ಣು ಬೆಳ್ಸೋ ಮೊದಲು ಆ ಹಣ್ಣುಗಳು ನಮ್ಮೋರಿಗೆ ದಕ್ಕುತ್ತೆ ಅಂತ ಖಚಿತ ಮಾಡ್ಕೊಬೇಕಲ್ವಾ? ಅದುಕ್ಕೊಸ್ಕರ ಬೇಕಾಗೋ ಬೇಲಿ ಹಾಕಬೇಕಲ್ವಾ?ನಮ್ಮದನ್ನೆಲ್ಲಾ ತ್ಯಾಗ ಮಾಡಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡೋದೂ, ಆದ್ರೆ ನಮ್ಮ ಜನರಿಗೆ ಅಲ್ಲಿ ಕೆಲಸ ಇಲ್ಲವಾಗೊದೂ ಯಾವ ನ್ಯಾಯಾ? ಇಲ್ಲಿನ ಉದ್ದಿಮೆಗಳಿಗೆ ಹೊರ ರಾಜ್ಯಗಳ ನೌಕರರನ್ನು ಕರೆ ತರೋದು ತಪ್ಪಲ್ವಾ ಧಣಿಗಳೇ" ಅಂತ ಕನ್ನಡಿಗರು ಮುಖ್ಯಮಂತ್ರಿಗಳಾದ ಯಡ್ಯೂರಪ್ಪ ಅವರನ್ನು ಕೇಳ್ತಾ ಔರೆ ಗುರು. ಹೊರರಾಜ್ಯದೋರು ನಮ್ಮೂರಿಗೆ ಅಡೆತಡೆಯಿಲ್ಲದೆ ಪ್ರವಾಹವಾಗಿ ನುಗ್ಗಿ ಬರ್ತಿರೋದನ್ನು ತಡ್ಯಕ್ಕೆ ಏನಾದರೂ ಮಾಡಬೇಕೂ ಅನ್ನುಸ್ತಿಲ್ವಾ ಧಣಿಗಳೇ? ಅಂತರ ರಾಜ್ಯ ವಲಸೆ ನಿಯಂತ್ರಣದ ಬಗ್ಗೆ ನಿಮ್ಮ ಮತ್ತು ನಿಮ್ಮ ಸರ್ಕಾರದ ನಿಲುವೇನು? ಅದ್ರು ಬಗ್ಗೆನೂ ದನಿ ಎತ್ತಿ ಧಣಿಗಳೇ ಅಂತಾ ಕೇಳ್ತಾ ಔರೆ ಗುರು. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಬೇಕಾದ ಕಾಯ್ದೆಯೊಂದನ್ನು ಜಾರಿಗೆ ತರಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಮುಂದಾಗ್ತೀರಾ ಧಣಿಗಳೇ ಅಂತಾ ಕೇಳ್ತಾ ಔರೆ ಗುರು!

ಬಾ ಗುರು! ಕಾಫಿ ಕುಡಿಯೋಣ!!

ಅಕ್ಕರೆಯ ಓದುಗ,

ಬನವಾಸಿ ಬಳಗದ ವತಿಯಿಂದ ನಿಮಗೆಲ್ಲಾ ನಮಸ್ಕಾರ. ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಸಿದ್ಧಾಂತ ಪ್ರತಿಪಾದಿಸುತ್ತಿರುವ ಬನವಾಸಿ ಬಳಗ ತನ್ನ ನಾಡಪರವಾದ ಚಿಂತನೆಯನ್ನು ಪ್ರಚುರಪಡಿಸಲು ಸಾಧನವಾಗಿಯೂ, ತನ್ನ ಮುಖವಾಣಿಯಾಗಿಯೂ "ಏನ್ ಗುರು... ಕಾಫಿ ಆಯ್ತಾ?" ಬ್ಲಾಗನ್ನು ನಡೆಸುತ್ತಾ ಬಂದಿದೆ.

ಈ ಬ್ಲಾಗ್ ಆರಂಭವಾಗಿ ಒಂದು ವರ್ಷ ಆಯ್ತು. ಈ ಸಂದರ್ಭಾನ ಒಂದು ನೆಪ ಮಾಡ್ಕೊಂಡು ಓದುಗರಾದ ನಿಮ್ಮ ಜೊತೆ ಒಂದೆರಡು ಗಂಟೆ ಕಾಲ ಕಳೀಬೇಕು ಅನ್ನೋ ಆಸೆ ನಮಗೆ. ಹಾಗಾಗಿ ನಾವೆಲ್ಲಾ ಒಂದು ಕಡೆ ಸೇರಿ ಹರಟೆ ಹೊಡೆಯೋಣವಾ? ಎಲ್ಲಿ? ಯಾವಾಗ? ಅಂತೆಲ್ಲಾ ಪ್ರಶ್ನೇನ ನೀವು ಕೇಳಕ್ ಮೊದಲು ಉತ್ರ ಹೇಳ್ತೀವಿ ಇರಿ.

ಎಲ್ಲಿ?: ಬಿ.ಎಂ.ಶ್ರೀ ಕಲಾ ಭವನ, 3ನೇ ಮುಖ್ಯರಸ್ತೆ, ನರಸಿಂಹರಾಜ ಬಡಾವಣೆ, ಬಸವನ ಗುಡಿ, ಬೆಂಗಳೂರು 560019

ಯಾವತ್ತು? : 2008ರ ಜುಲೈ 6ನೇ ತಾರೀಕಿನ ಭಾನುವಾರದಂದು

ಯಾವಾಗ? : ಬೆಳಗ್ಗೆ 10.00ರಿಂದ 12.00ರ ವರೆಗೆ

ಹ್ಯಾಗೆ ಅಲ್ಲಿಗ್ ಬರೋದು? : ರಾಮಕೃಷ್ಣ ಆಶ್ರಮದ ಕಡೆಯಿಂದ ಬರೋರು ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜು ದಾಟಿದ ಮೇಲೆ ಗೋಖಲೆ ಸಾರ್ವಜನಿಕ ಸಂಸ್ಥೆ ಆದ ಮೇಲೆ ಎಡಕ್ಕೆ ತಿರುಗ್ಬೇಕು. ಮತ್ತೆ ಬಲಕ್ಕೆ ಎರಡನೇ ತಿರುವಲ್ಲಿ ತಿರುಗಬೇಕು. ಒಂದು ನಾಲ್ಕು ಕಟ್ಟಡಗಳಾದ ಮೇಲೆ ಬಲಕ್ಕೆ ಇರೋದೆ ಬಿ.ಎಂ.ಶ್ರೀ ಕಲಾಭವನ. ನರಸಿಂಹ ರಾಜ ಕಾಲೋನಿ ಕಡೆಯಿಂದ ಬರೋರು ಬಸ್ ನಿಲ್ದಾಣದಿಂದ ದ್ವಾರಕ ಹೋಟೆಲ್ ಕಡೆ ಬನ್ನಿ. ಅಲ್ಲಿ ರಸ್ತೆ ಕವಲಾಗಿ ಒಡ್ಯುತ್ತೆ. ಬಲಬದಿಯ ಫುಟ್ ಪಾತ್ ಮೇಲೆ ನಡ್ಕೊಂಡು ಬಂದ್ರೆ ಬಲಕ್ಕೆ ಮೂರನೇ ಮುಖ್ಯರಸ್ತೆ ಸಿಗುತ್ತೆ. ಅದರೊಳಕ್ಕೆ ಹೊಕ್ಕು ಅಲ್ಲೇ ಮುಂದೆ ಬಂದ್ರೆ ಎಡಭಾಗದಲ್ಲಿ ಬಿ.ಎಂ.ಶ್ರೀ ಕಲಾಭವನ ಸಿಗುತ್ತೆ.ಅಲ್ಲಿ ನಿಮಗೆ ಬನವಾಸಿ ಬಳಗದ ಬ್ಯಾನರ್ ಕಾಣುತ್ತೆ. ಅದಕ್ಕಿಂತ ಮುಖ್ಯವಾಗಿ ನಾವೆಲ್ಲಾ ನಿಮ್ಮನ್ನು ಬರಮಾಡಿಕೊಳ್ಳಲು ಕಾಯ್ತಿರ್ತೀವಿ. ತಪ್ಪದೇ ಬನ್ನಿ.

ಅಲ್ಲಿ ನಾವೆಲ್ಲಾ ಆಪ್ತವಾಗಿ ಹರಟೋಣ, ಏನ್ ಗುರು ಕಾರ್ಯಕ್ರಮ ಅಂದಮೇಲೆ ಅಲ್ಲಿ ಖಂಡಿತಾ ಬಿಸಿ ಬಿಸಿ ಕಾಫಿ ಗ್ಯಾರಂಟಿ. ಜೊತೆಗೆ ಏನ್ ಗುರು ತಂಡದ ಎಲ್ರೂ ಇರ್ತೀವಿ. ಒಂದೆರಡು ತಾಸು ಪುರುಸೊತ್ತು ಮಾಡ್ಕೊಂಡು ಬರ್ರೀಪ್ಪಾ!

ಹ್ಞಾಂ, ನೀವು ಬರೋದನ್ನು ಒಂದು ಮಿಂಚೆ ಹಾಕಿ ಖಚಿತ ಪಡುಸ್ತೀರಾ, ಪ್ಲೀಸ್...ಮಿಂಚಿಸಿ : engurublog@gmail.com ಗೆ.

ಯಾರಿಗಾಗಿ ಆಡಳಿತ ವ್ಯವಸ್ಥೆ ಇರಬೇಕು?

ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಮುಖ್ಯಮಂತ್ರಿ ಚಂದ್ರು ಅವರು ಆಡಳಿತ ಭಾಷೆಯಾಗಿ ಕನ್ನಡವನ್ನು ಜಾರಿಗೆ ತರ್ಬೇಕು ಅಂತ ಕೆಲವು ಕ್ರಮ ಕೈಗೊಳ್ಳಲು ಮುಂದಾದ್ರು. ಕನ್ನಡದಲ್ಲಿ ಆಡಳಿತ ಮಾಡಲು ಒಲ್ಲದ ಅಧಿಕಾರಿಗಳಿಗೆ ಚಾಟಿ ಬೀಸ್ತೀನಿ ಅಂತ ಎಚ್ಚರಿಕೆ ಕೂಡಾ ಕೊಟ್ರು. ತಕ್ಕಳಪ್ಪಾ, ಇದಾಗಿದ್ದೆ ತಡ ಬೆಂಗಳೂರು ಮಿರರ್ ಪತ್ರಿಕೇಲಿ ಒಂದು ಲೇಖನ ಪ್ರಕಟಣೆ ಮಾಡುದ್ರು. ಬೆಂಗಳೂರಿನ ಕಾಸ್ಮೋಪಾಲಿಟನ್ ಸ್ವರೂಪಕ್ಕೆ ಇದರಿಂದ ಧಕ್ಕೆ ಬರುತ್ತೆ ಅಂತಾ ಕೊಂಕು ಎತ್ತಿ ಜನರ ಅಭಿಪ್ರಾಯ ಸಂಗ್ರಹಣೆಗೂ ಮುಂದಾಯ್ತು ಆ ಪತ್ರಿಕೆ. ನಿಜವಾಗ್ಲೂ ಆಡಳಿತ ಭಾಷೆ ಅಂದ್ರೇನು? ಅದು ಯಾರ ಅನುಕೂಲಕ್ಕಾಗಿ ಮಾಡ್ಬೇಕು? ಅನ್ನೋ ಬುಡಮಟ್ಟದ ಅರಿವೇ ಇಲ್ಲದೆ ಇಂಥಾ ಬರವಣಿಗೆ ಪ್ರಕಟಿಸೋ ಮಿರರ್, ಈ ವಿಚಾರದಲ್ಲಿ ಬರೀ ಎಡವಿಲ್ಲ... ಸಖತ್ತಾಗೇ ಮುಗ್ಗರಿಸಿದೆ ಗುರು!

ಏನು ಆಡಳಿತ ಭಾಷೆ ಅಂದ್ರೆ?

ಪ್ರಜಾಪ್ರಭುತ್ವದ ಮೂಲ ಆಶಯವೇ ಜನರಿಂದ ಜನರಿಗಾಗಿ ಆಡಳಿತ ಅನ್ನೋದಾಗಿದೆ. ಅಂದ್ರೆ ಜನತೆಯ ಅನುಕೂಲಕ್ಕಾಗಿಯೇ ಇಡೀ ವ್ಯವಸ್ಥೆ ರೂಪುಗೊಂಡಿದೆ. ಸಹಜವಾಗಿಯೇ ಒಂದು ನಾಡಿನ ಆಡಳಿತ ಯಂತ್ರ ಇರಬೇಕಾದದ್ದು ಆ ನಾಡಿನ ಜನರ ಅನುಕೂಲಕ್ಕಾಗಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಜನರ ಅನುಕೂಲಕ್ಕಾಗಿ ಅನ್ನೋ ಈ ಮಾತಿಗೆ ತಪ್ಪಾಗಿ ತಮಗೆ ಬೇಕಾದ ಹಾಗೆ ಅರ್ಥ ಕೊಟ್ಕೊಂಡು ವಲಸಿಗರ ಅನುಕೂಲಕ್ಕಾಗಿ ಅಂತ ತೀರ್ಮಾನಿಸೋದು ದೊಡ್ಡ ತಪ್ಪಲ್ವಾ ಗುರು?

ಭಾರತವನ್ನು ಭಾಷಾವಾರು ಪ್ರಾಂತ್ಯ ಮಾಡಿದ್ದಾದ್ರೂ ಏಕೆ?


ಭಾರತದಲ್ಲಿ ರಾಜ್ಯಗಳೆಂಬ ಆಡಳಿತ ವಿಭಾಗಗಳನ್ನು ಮಾಡೋವಾಗಲೇ ಯಾವುದು ಸೂಕ್ತ ವಿಧಾನ ಅಂತ ಚರ್ಚೆ ಆಗಿತ್ತು. ಸರಳವಾಗಿ ಉದ್ದುದ್ದ ಅಡ್ಡಡ್ಡ ಗೆರೆ ಎಳೆದು ವಿಭಾಗ ಮಾಡೋಣ ಅಂದೋರೂ ಇದ್ರು. ಅಕಸ್ಮಾತ್ ಹಾಗೇ ಮಾಡೋದಾದ್ರೆ ಆಯಾ ಪ್ರದೇಶದಲ್ಲಿ ಆಡಳಿತವನ್ನು ಯಾವ ಭಾಷೆಯಲ್ಲಿ ಮಾಡೋದು ಅನ್ನೋ ಪ್ರಶ್ನೆ ಬಂತು. ಇಡೀ ಭಾರತಕ್ಕೆ ಒಂದು ಭಾಷೆ ಇರಲಿ ಅಂದೋರೂ ಇದ್ರು. ಆಡಳಿತವನ್ನು ಜನರ ಹತ್ರ ತೊಗೊಂಡು ಹೋಗ್ತೀವಿ ಅನ್ನೋ ಮಾತಿಗೆ ಅರ್ಥ ಸಿಗಬೇಕು ಅಂದ್ರೆ ಜನರ ಭಾಷೇಲೆ ವ್ಯವಸ್ಥೆ ನಡುಸ್ಬೇಕು, ಆಗ ವ್ಯವಹರಿಸೋಕೂ, ಅರ್ಥ ಮಾಡ್ಕೊಳ್ಳೋಕೂ ಸುಲಭ ಆಗುತ್ತೆ ಅನ್ನೋ ಚಿಂತನೆ ಮೂಡಿಬಂತು. ಅಂದ್ರೆ ತಮಿಳು ಭಾಷಿಕ ಪ್ರದೇಶದಲ್ಲಿ ತಮಿಳು ಆಡಳಿತ ಭಾಷೆ ಆಗೋದು, ಕನ್ನಡ ನಾಡಿನಲ್ಲಿ ಕನ್ನಡ ಆಡಳಿತ ಭಾಷೆ ಆಗೋದೇ ಸರಿ ಅನ್ನೋ ನಿಲುವು ಮೂಡಿತು. ಇಲ್ಲಾಂದ್ರೆ ಪರಿಣಾಮಕಾರಿ ಆಡಳಿತ ಅನ್ನೋದು ಮರೀಚಿಕೆ ಆಗುತ್ತೆ ಅನ್ನೋ ಕಾರಣದಿಂದಲೇ ಭಾಷಾವಾರು ಪ್ರಾಂತ್ಯ ರಚನೆ ಆಯ್ತು. ಆಯಾ ಪ್ರದೇಶಗಳ ಭಾಷೇನೆ ಆಡಳಿತ ಭಾಷೆಯಾಗಿ ಜಾರಿಗೆ ತರೋ ಉದ್ದೇಶದಿಂದಲೇ ಈ ವ್ಯವಸ್ಥೆ ರೂಪುಗೊಂಡಿತು.

ಬೆಂಗಳೂರಿನ ಆಡಳಿತ ಭಾಷೆ?

ಬೆಂಗಳೂರಿನ ಆಡಳಿತ ಭಾಷೆ ಅನ್ನೋದ್ರ ಮುಂದೆ ಇದೇನಪ್ಪಾ ಗುರುಗಳೂ ’?’ ಗುರುತಿಟ್ರು ಅನ್ಕೋಬೇಡಿ. ಒಕ್ಕೂಟ, ಸಂವಿಧಾನ, ಭಾಷಾವಾರು ಪ್ರಾಂತ್ಯ ಏಕೆ ಏನು ಅಂತ ಓದ್ಕಂಡ್ ಮೇಲೂ ಈ ಪ್ರಶ್ನೆನಾ ಕೇಳ್ತಾರಾ ನಮ್ಮ ಮಿರರ್ ನೋರು ಅಂತಾ ಅಷ್ಟೆ. ಹೂ ಸ್ವಾಮಿ, ಬೆಂಗಳೂರಿನಲ್ಲಿರೋ ಜನರ ಭಾಷೆ ಬರೀ ಕನ್ನಡವಲ್ಲ, ಇಲ್ಲಿ ಎಲ್ಲಾ ಭಾಷೆನೋರೂ ಇದಾರೆ ಅನ್ನೋರು ತಿಳ್ಕೋಬೇಕಾದ್ದು ಏನಂದ್ರೆ ಯಾವ ಊರಿನ ವ್ಯವಸ್ಥೆಯನ್ನೂ ವಲಸಿಗರಿಗಾಗಿ ಮಾಡಬೇಕಾಗಿಲ್ಲ. ಅದಿರುವುದು ಇಲ್ಲಿನ ನಾಗರೀಕರ ಅಗತ್ಯಗಳನ್ನು ಪೂರೈಸಕ್ಕೆ. ಇಲ್ಲಿ ಭಾಳ ದಿನದಿಂದ ಬೇರೆ ಭಾಷೆಯೋರು ಬದುಕ್ತಿದಾರೆ ಅಂದ್ರೆ ಭಾಳ ದಿನದಿಂದ ಬದುಕ್ತಿರೋರು ಇಷ್ಟೊತ್ತಿಗಾಗ್ಲೇ ಕನ್ನಡಿಗರಾಗಿ ಬಿಟ್ಟಿರಬೇಕು ಅಲ್ವಾ ಗುರು? ಇಲ್ಲಾ ಅಂದ್ರೆ ಹಿಂದಿನ ಕಾಲದಲ್ಲಿ ದಂಡು ತೊಗೊಂಡು ಹೋಗಿ ರಾಜ್ಯ ಗೆಲ್ಲಕ್ಕೂ ಈ ಕಾಲದಲ್ಲಿ ವಲಸೆ ಮಾಡ್ಸಿ ತಮ್ಮ ಪ್ರಾಬಲ್ಯ ಬೆಳಿಸಿಕೊಳ್ಳಕ್ಕೂ ಏನೂ ವ್ಯತ್ಯಾಸ ಇರಂಗಿಲ್ಲ. ಇಷ್ಟಕ್ಕೂ ಬೆಂಗಳೂರಿನಲ್ಲಿ ಕನ್ನಡದೋರು ಕಮ್ಮಿ ಅನ್ನೋ ತಪ್ಪು ಮಾಹಿತಿಯನ್ನು ಹರುಡ್ಕೊಂಡು, ನಂಬ್ಕೊಂಡು ಇರಕ್ಕಾಗುತ್ತಾ? ಈ ಊರಲ್ಲಿರೋ ಮುಸ್ಲಿಮರೂ, ತುಳುವರೂ, ಕೊಡವರೂ, ತಲತಲಾಂತರದಿಂದ ನೆಲಸಿರೋ ತಮಿಳ್ರು, ತೆಲುಗ್ರು, ಮಾರವಾಡಿಗಳೂ ಕನ್ನಡದೋರೇ ಅಲ್ವಾ? ಈ ಊರಿಗೆ ಹೊಟ್ಟೆಪಾಡಿಗೆ ವಲಸೆ ಬರೊ ಜನಕ್ಕೋಸ್ಕರ ನಮ್ಮ ವ್ಯವಸ್ಥೆ ಕಟ್ಟಬೇಕು ಅನ್ನೋ ಮೂರ್ಖತನದ ನಿಲುವು ತೋರಿಸ್ತಿರೋ ಕೆಲಮಾಧ್ಯಮದೋರಿಗೆ ಈ ವಿಷ್ಯಾನ ಒಸಿ ನಾವೂ ಪತ್ರ ಬರ್ದು ಮನದಟ್ಟು ಮಾಡುಸ್ಬೇಕು ಗುರುಗಳೇ!

ವಿಮಾನ ನಿಲ್ದಾಣಕ್ಕೆ ಹೋದಾಗ ಏನು ಮಾಡಬೇಕು?

ಬೆಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೇನು ಕಾರ್ಯಾರಂಭ ಆಗ್ತಿದೆ ಅನ್ಬೇಕಾದ್ರೆ ಈ ವಿಮಾನ ನಿಲ್ದಾಣಾನ ಕಟ್ಟಿರೋ ಸಂಸ್ಥೆ BIAL ಔವ್ರು ನಾವೇನು ತಪ್ಪು ಮಾಡಿಲ್ಲ ಅನ್ನೋ ಹಾಗೆ ತಮ್ಮೊಳಗೆ ಎಷ್ಟು ಮಂದಿ ಕನ್ನಡದೋರು ಇದಾರೆ ಅನ್ನೋ ಮಾಹಿತಿ ಹೊರಹಾಕಿದಾರೆ.

ಕನ್ನಡಿಗ ಗ್ರಾಹಕರ ಜಾಗೃತ ಮನಸ್ಥಿತಿ ಹಾಗೂ ವಿಮಾನ ನಿಲ್ದಾಣದೊಳ್ಗೆ ಕನ್ನಡಿಗರ ಹಕ್ಕಿಗೆ ಒತ್ತಾಯ ಮಾಡಿದ್ದಕ್ಕೆ ಇದು ಸಿಕ್ಕ ತಕ್ಕ ಚಿಕ್ಕ ಪ್ರತಿಫಲ ಇದು! ಇತ್ತೀಚೆಗೆ BIAL ಮಾಹಿತಿ-ಹಕ್ಕು-ಕಾಯ್ದೆಯಡಿ ಇರಲು ಹೊರಟ ಆದೇಶ ಬಂದ ಕೂಡಲೆ ಈ ರೀತಿಯ ಮಾಹಿತಿ ತಾನಾಗೇ ಹೊರಬಂದಿರೋ ಘಟನೆ ಒಂದು ರೀತಿ ಅಚ್ಚರಿಯ ಕಾಕತಾಳೀಯ ಸುದ್ದಿ ಗುರು! ಸುಮಾರು ವರ್ಷಗಳಿಂದ ನಡೆದು ಬರ್ತಿರೋ ವಿಮಾನ ನಿಲ್ದಾಣದ ಕಾಮಗಾರೀಲಿ ಪದೇ ಪದೇ ಕನ್ನಡಿಗರಿಗೆ ಕೆಲ್ಸ ಸಿಗ್ದೇ ಹೊರಗಿನೋರ್ಗೆ ಸಿಗ್ತಿದೆ ಅಂತ ಕನ್ನಡಿಗ್ರು ದೂರು ನೀಡ್ತಲೇ ಬಂದಿದಾರೆ. ಅವ್ಯಾವುದಕ್ಕೂ ಉತ್ತರ ನೀಡದೇ, ಮಣಿಯದೇ, ತಮ್ಮ ನಿರ್ಧಾರಕ್ಕೇ ಅಂಟಿಕೊಂಡು ಕೆಲ್ಸ ನಿರ್ವಹಿಸ್ತಿದ್ದ BIAL ಸಂಸ್ಥೆ ಅಧಿಕಾರಿಗಳು ಅಂತೂ ಇಂತೂ ಈಗ ಆ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಾಗೃತ ಗ್ರಾಹಕರಾಗಿ ನಿಗ ಇಡೋಣ

ಆದ್ರೂ ಇವ್ರಲ್ಲಿ ಶೇಕಡ 53ರಷ್ಟು ಕನ್ನಡಿಗರೇ ಇದಾರೆ ಅನ್ನೋದನ್ನು ಹ್ಯಾಗೆ ಖಚಿತ ಪಡುಸ್ಕೊಳ್ಳೋದು? ಇವ್ರಲ್ಲಿ ಕನ್ನಡೇತರರಿಗೆ ಮಣೆ ಹಾಕುವ ಕೆಲ್ಸ ಈ ತನಕ ನಡ್ದಿಲ್ಲ ಅಂತ ಹೇಗೆ ಖಚಿತ ಮಾಡ್ಕೊಳೋದು? ಇವತ್ತೇನೋ ಹೀಗಿದೆ, ನಾಳೆ, ಮತ್ತೆ ಮುಂದೆಯೂ ಹೀಗೇ ಉಳ್ಯತ್ತೆ ಅಂತ ಹೇಗೆ ಹೇಳೋದು? ಹಾಗೆ ಉಳ್ಯೋ ಹಾಗಾಗಕ್ಕೆ ಏನ್ ಮಾಡ್ಬೇಕು? ಅಂತೆಲ್ಲಾ ಊಹಾಪೋಹದ ಪ್ರಶ್ನೆಗಳು ಕಾಡೋದು ಸಹಜ. ಇದಕ್ಕೆಲ್ಲಾ ನಮ್ಮ ಕೈಯ್ಯಲ್ಲಿರೋ ಮಹತ್ವದ ಅಸ್ತ್ರ ಅಂದರೆ ನಿಗಾ ಇಡೋದು, ಗ್ರಾಹಕರಾಗಿ ನಮಗಿರೋ ಹಕ್ಕನ್ನು ಚಲಾಯಿಸೋದು.

ಇನ್ನು ಮುಂದೆ ಇದೇ ನಮ್ಮ ಬಳಕೆಯ ವಿಮಾನ ನಿಲ್ದಾಣ ಆಗೋದ್ರಿಂದ ಅಲ್ಲಿಗೆ ನಮ್ಮೊಂದಿಷ್ಟು ಜನರ ಭೇಟಿ ಸಾಮಾನ್ಯವೇ ಆಗೋಗತ್ತೆ. ಕಾರಣ ಯಾವುದೇ ಇರ್ಲಿ, ಇನ್ನು ಮುಂದೆ ಅಲ್ಲಿಗೆ ಹೋದ ಪ್ರತಿಯೊಬ್ಬ ಕನ್ನಡಿಗನೂ ಅಲ್ಲಿಯ ಪರಿಸ್ಥಿತೀನ ಪರಿಶೀಲಿಸಿ ಪ್ರತಿ ಹಂತದಲ್ಲೂ ಕನ್ನಡದ ಸೇವೆಗೆ ಹಕ್ಕೊತ್ತಾಯ ಮಾಡೋಣ.

ಈ ವಿಮಾನ ನಿಲ್ದಾಣದ ಒಳಗಡೆ, ವಿಮಾನದ ಒಳಗಡೆ ಸಿಗುವ ಸೇವೆಗಳಲ್ಲಿ ಎಲ್ಲದರಲ್ಲೂ ಕನ್ನಡದ ನಿರ್ಲಕ್ಷ್ಯ ಕಂಡರೆ ತಕ್ಷಣ ದೂರು ಸಲ್ಲಿಸೋದನ್ನು ಮರೀಬಾರ್ದು. ನಾವು ಅಲ್ಲಿಗೆ ಹೋದಾಗ್ಲೂ ಎಲ್ಲೆಡೆ ಸೇವೆಯನ್ನು ಕನ್ನಡದಲ್ಲೇ ಅಪೇಕ್ಷಿಸಬೇಕು, ಕನ್ನಡಕ್ಕಾಗಿ ಒತ್ತಾಯ ಮಾಡ್ಬೇಕು. ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಅಂದ ಕೂಡಲೇ ಇಂಗ್ಲಿಷ್ ಅನ್ನೋ ಭಾವನೆ ಬಿಟ್ಟು ಇಲ್ಲಿಯ ಗ್ರಾಹಕನ ಬೇಡಿಕೆ ಕನ್ನಡದಲ್ಲಿ ಸೇವೆ ಅಂತಲೇ ತೋರಿಸ್ಕೊಡಬೇಕು ಗುರು!

ಹೋರಾಟಗಳಿಗೆ ಇರೋ ಶಕ್ತಿ ಗ್ರಾಹಕನ ದೂರು ಪತ್ರಕ್ಕೂ ಇದೇ ಅನ್ನೋದು ನೆನಪಲ್ಲಿಟ್ಟುಕೊಂಡ್ರೆ ನಾವೂ ಬದಲಾವಣೆ ತರಬೋದು! ಏನಂತೀ ಗುರು?

ಕೋಗಿಲೆ ಹಾಡಿದೆ ಕೇಳಿದಿರಾ...

ಕನ್ನಡ ಚಲನ ಚಿತ್ರ ಸಂಗೀತ ಪ್ರೇಮಿಗಳಿಗೆ ಇದೀಗ ಸುಗ್ಗೀ ಸೀಸನ್ ಕಣ್ರೀಪಾ. ಒಂದಕ್ಕಿಂತ ಒಂದು, ಒಂದಕ್ಕಿಂತ ಒಂದು ಮಸ್ತ್ ಮಸ್ತ್ ಹಾಡುಗಳು ಬರ್ತಾ ಐತ್ರೀಪಾ ಈಗ. ಏನಾತು ನಮ್ಮ ಸಿನಿಮಾ ಮಂದೀಗಾ? ಇದ್ಕಿದ್ ಹಾಂಗಾ ಛಲೋ ಹಾಡು ಕೊಡಾಕ್ ಹತ್ಯಾರಲ್ಲಾ?
ಹೊಸತನದ ತಂಗಾಳಿ
ಏನಾರಾ ಹೊಸ ನಮೂನಿ ಮಾಡಬೇಕು, ಎಂಥದಾರ ಸಾಧುಸ್ಬೇಕು ಅಂತ ಭಾಳ ಪ್ರತಿಭೆಗಳು ಸದಾ ಕಾಲ ಪ್ರಯತ್ನ ಮಾಡ್ತಲೇ ಇರ್ತವೇ ಗುರು. ಅಂಥಾ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಅಂದ್ರ ಮೊದಲಿಗ ಗಟ್ಟಿ ಗುಂಡಿಗಿ ಬೇಕಾ ಮತ್ತ. ಮುಂಗಾರು ಮಳಿ ಕೃಷ್ಣಪ್ಪ ಅಂಥಾ ಒಂದು ಛಲೋ ಕೆಲ್ಸ ಮಾಡುದ್ರಲಾ... ಜಯಂತ್ ಕಾಯ್ಕಿಣಿಯೋರ ಹಾಡಂತು ಮನಿ ಮಾತಾಯ್ತು. ಭಾಳ ಮಂದಿ ಹೊಸಬರಾ ಇದ್ರೂನು ಮಳಿ ಛಲೋತ್ನಾಗ್ ಓಡ್ತಲ್ರೀ, ಅದಾ ನೆಪ ಆಗಿ ಹಾಂಗಾ ಇದರ ಜಾಡು ಹಿಡಿದು ಸಾಲು ಸಾಲು ಚಿತ್ರಗಳು ಬರಕ್ ಹತ್ತುದ್ವು. ಇದೂ ಒಂಥರಾ ಜೊಳ್ಳು, ಜೊಳ್ಳೀನ ಕೂಡಾ ಕಾಳು ಸುರಿಯೋ ಮಳಿ ಆತು. ಇಂಥಾ ಮಳಿ ಜಡ್ಯಕ್ ಹತ್ತಿದ್ದೇ ತಡ ಕಾಯ್ಕೊಂಡು ಕುಂತಿದ್ದ ಭಾಳ ಮಂದಿ ಹೊಸಬರಿಗೆ ಅವ್ರ ಪ್ರತಿಭೆ ತೋರ್ಸಕ್ಕ ಅವಕಾಶ ಆಯ್ತು. ಬರ್ರಲಾ, ಎಂಥಾ ಮಂದಿ ಬಂದಾರಾ? ಎಂಥಾ ಹಾಡು ಬಂದಾವ ನೋಡೋಣು.
ಕೋಗಿಲೆಗಳು ಹಾಡಿದವು...

ಒರಟ ಐ ಲವ್ ಯೂ ನಾಗ "ಯಾರೋ ಕಣ್ಣಲ್ಲಿ ಕಣ್ಣನ್ನಿಟ್ಟು, ಮನಸ್ಸಿನಲ್ಲಿ ಮನಸ್ಸನಿಟ್ಟು..." ಅನ್ನೋ ಹಾಡು ಭಾಳ ಜನಪ್ರಿಯ ಆತು. ಇದರ ಸಂಗೀತ ನಿರ್ದೇಶಕರು ಜಿ.ಆರ್.ಶಂಕರ್ ಅವ್ರು. "ಜಿಂಕೆ ಮರೀನಾ, ಜಿಂಕೆ ಮರೀನಾ..." ಅನ್ನೋ ಹಾಡಿನ ಮೂಲಕ
ತೊಟ್ಲಾಗಿನ ಕೂಸು ಹಾಡೂ ಹಾಂಗ ಮೋಡಿ ಮಾಡಿದ ಎಮಿಲ್, "ಆಹಾ ಒಂಥರಾ ಥರಾ..." ಅನ್ನೋ ಒಡಲಾಳದ ಭಾವ್ನಿ ಉಕ್ಕೂ ಹಾಂಗ ಹಾಡಿರೋ ಮುಸ್ಸಂಜೆ ಮಾತು ಚಿತ್ರಕ್ಕ ಸಂಗೀತ ನೀಡಿರೂ ವಿ.ಶ್ರೀಧರ್... "ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ...." ಅನ್ನೂ ಸೈಕೋ ಚಿತ್ರದ ಹಾಡಿನ ಮೂಲಕ ಹುಚ್ಚೆಬ್ಸಿರೋ ರಘು ದೀಕ್ಷಿತ್ ಅವ್ರೂ.... ಎಷ್ಟು ಛಲೋ ಛಲೋ ಪ್ರತಿಭೆಗಳು ಮೂಡಿ ಬರ್ಲಿಕ್ ಹತ್ಯಾವ ಅಂದ್ರಾ... ಕನ್ನಡ ಮಂದಿ ಇನ್ ಮುಂದಾ ಬರೀ ಸಂಗೀತ ಸುಧೆಯೊಳ್ಗ ತೇಲೋಣೇ ತೇಲೋಣು.

ಬೆಳಿ ಅಂದ್ರ ಜೊಳ್ಳು ಕಾಳೂ ಎರಡೂ ಇರ್ರೊದು ಸಹಜ ಐತಿ. ಆದ್ರ ಕಡಲಾಗ ನೂರು ಕಪ್ಪಿಚಿಪ್ಪು ಹುಡುಕಿದ ಮೇಲಾ ಮುತ್ತು ಸಿಕ್ಕದು. ಹಾಂಗಾ, ನಮ್ಮ ಕನ್ನಡ ಸಿನಿಮಾ ಮಂದಿ ಹೊಸಬರಿಗೆ ಅವಕಾಶ ಕೊಟ್ಟಾಗ ಮಾತ್ರಾ ಇಂಥಾ ಪ್ರತಿಭೆಗಳು ಬೆಳಕಿಗೆ ಬರ್ತಾವ. ಹ್ಞಾಂ.. ಇದು ಬರೀ ಸಂಗೀತದ ಮಾತಲ್ರೀಪಾ. ಕಥಿ, ಸಂಭಾಷಣಿ, ಸಾಹಿತ್ಯ, ಛಾಯಾಗ್ರಹಣ, ಸಂಕಲನ, ನಿರ್ದೇಶನ ಹೀಂಗಾ ಎಲ್ಲಾ ಕ್ಷೇತ್ರದಾಗೂ ಹೊಸ ಹೊಸ ಮಂದಿ ಬರ್ತಿರಬೇಕು. ಹಾಂಗ ಆಗಲಿಕ್ಕ, ನಾವೂ ಕೂಡಾ ಇಕಾ ಇವ ಹೊಸಬ ಅದಾನ, ಛಲೋ ಅದಾನ ಅಂತ ಬೆನ್ನು ತಟ್ಟಿ ಹುರಿದುಂಬಿಸಬೇಕ್ರೀ ಗುರುಗಳಾ!

ಮುಖ್ಯಮಂತ್ರಿ ಚಂದ್ರು ಪ್ರಾಧಿಕಾರಕ್ಕೆ ಹುಣ್ಣಿಮೆ ಬೆಳಕು ತರಲಿ!

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ "ಮುಖ್ಯಮಂತ್ರಿ" ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಅಭಿವೃದ್ಧಿ ಪ್ರಾಧಿಕಾರದ ಕೆಲಸ ನಿಭಾಯ್ಸಕ್ಕೆ ಚಂದ್ರು ಅವ್ರು ಸೂಕ್ತ ಆಯ್ಕೆ ಅಂತ್ಲೇ ಹೇಳ್ಬೋದು ಗುರು.
ಚಲನಚಿತ್ರ ನಟರೂ, ರಂಗಭೂಮಿ ಕಲಾವಿದರೂ ಆಗಿರುವ ಇವರು ತಮ್ಮ ನಟನಾ ಕೌಶಲ್ಯದಿಂದ ಜನಮನ ಗೆದ್ದಿರೋದಷ್ಟೆ ಅಲ್ಲದೆ ನಾಡು ನುಡಿಗಾಗಿ ತುಡಿಯುವ ಮನಸ್ಸು ಹೊಂದಿದ್ದು ಸದಾ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನಾಡಪರ ಕಾಳಜಿ ತೋರುತ್ತಲೇ ಬಂದಿದ್ದಾರೆ.
ಇಪ್ಪತ್ತೆಂಟು ದಿನಗಳ ಕಾಲದ ಜಾಥವನ್ನು ನಡೆಸಿದ ಇವರು ನಾಡಿನ ಎಲ್ಲ ಗಡಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕನ್ನಡ ಅಭಿಮಾನ ತುಂಬುವ ಕೆಲಸ ಮಾಡಿ ತಮ್ಮ ಕನ್ನಡ ಕಾಳಜಿಯನ್ನು ಮೆರೆದಿದ್ದಾರೆ. ಇದೀಗ ಇವರ ಹೆಗಲೇರಿರುವ ಹೊಸ ಜವಾಬ್ದಾರಿ ನಾಡಪರ ಕೆಲಸಗಳನ್ನು ನಡೆಸಲು ದೊರೆತ ಸುವರ್ಣಾವಕಾಶವೇ ಆಗಿದ್ದು ಇದರಲ್ಲಿ ಶ್ರೀಯುತರು ಯಶಸ್ವಿಯಾಗಲಿ ಅಂತಾ ಹಾರೈಸೋಣ ಗುರು.
ಪ್ರಾಧಿಕಾರ ತುಸು ಇತ್ತಲೂ ಗಮನ ಹರಿಸಲಿ

ಈಗಾಗಲೇ ನಾಡಪರವಾದ ಎಲ್ಲ ವರದಿಗಳ ಜಾರಿಯ ಬಗ್ಗೆ ಗಮನ ಹರಿಸುವುದಾಗಿ ಚಂದ್ರು ಅವರು ಭರವಸೆ ನೀಡಿದ್ದಾರೆ. ಇದರ ಜೊತೆಯಲ್ಲೇ ಆದ್ಯತೆ ಮೇರೆಗೆ ನಾಮಫಲಕ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ಮುಂದಾಗ ಬೇಕು. ಆಡಳಿತದಲ್ಲಿ ಕನ್ನಡದ ಸಂಪೂರ್ಣ ಜಾರಿಗೆ ಮಹತ್ವ ನೀಡಬೇಕು. ನಾಡಿನಲ್ಲಿ ಸಾರ್ವಜನಿಕರ ಬಳಕೆಗೆ/ ಸೇವೆಗೆ ಇರುವ ಎಲ್ಲ ವ್ಯಾಪಾರ, ವಹಿವಾಟು, ಸೇವಾಕೇಂದ್ರ, ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಮುಂದಾಗಬೇಕು.
ಕನ್ನಡ ನಾಡಿನ ಹಳ್ಳಿಗಾಡಿನ, ಕನ್ನಡವನ್ನಷ್ಟೇ ಬಲ್ಲ, ಅತಿ ಸಾಮಾನ್ಯನಿಗೂ ಯಾವ ಸ್ಥಳದಲ್ಲೂ ಹಿಂಜರಿಕೆ, ಮುಜುಗರ, ಕೀಳರಿಮೆ ಉಂಟಾಗದೆ ಸರಳವಾಗಿ ಕನ್ನಡದಲ್ಲೇ ವ್ಯವಹರಿಸಿಯೂ ಬೇಕಾದ ಸೌಕರ್ಯ ಪಡೆದುಕೊಳ್ಳಲು ಅನುವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಕಾರ್ಯೋನ್ಮುಖರಾಗಬೇಕು.
ಮುಖ್ಯಮಂತ್ರಿ ಚಂದ್ರು ಅವರಿಗೆ ಈ ಎಲ್ಲ ಕೆಲಸ ಮಾಡುವ ಮನಸ್ಸು, ಶಕ್ತಿಯನ್ನು ತಾಯಿ ರಾಜರಾಜೇಶ್ವರಿ ಕೊಡಲಿ ಅಂತ ಆಶಿಸೋಣ. ಅವರ ಕನ್ನಡ ಪರ ಕೆಲಸಗಳನ್ನು ಬೆಂಬಲಿಸೋಣ. ಬಾ ಗುರು.

ನಮ್ಮದಾಗಿದೆ ನಮ್ಮೂರ ಬಸ್ಸು!

ಅಡ್ಬಿದ್ದೆ ಕಣ್ರಣ್ಣೋ, ನಾನು ಎಂಕ. ಮೊನ್ನೆ ನಮ್ ಬಾಮೈದ ಸೀನನ್ ನೋಡಿಕ್ಯಂಡ್ ಬಂದು ಬುಡ್ಮಾ ಅಂತ ಎಂಡ್ರುನ್ನೂ ಮಕ್ಕೂಳ್ನೂ ಕರ್ಕೊಂಡು ಒಸಿ ಊರ ಕಡೆಗೆ ಓಗಿದ್ದೆ. ಅದೇ ನಮ್ ಸೀನ ಇರೋ ಊರು ಮಂಡ್ಯದ್ ತಾವ್ ಇರದು. ಅದ್ಕೆಯಾ ಅಂಗೆ ಮೈಸೂರಿಂದ ಮಂಡ್ಯಕ್ ಬಸ್ ಅತ್ಕೊಂಡ್ವಿ. ಆ ಕಂಡಕ್ಟರಪ್ಪ ಬಂದು ತಿಕೀಟು ತಕ್ಕಳ್ಳೀ ಅಂದಿದ್ಕೆ "ಊ ಕಣಣ್ಣಾ ಮಂಡ್ಯಕ್ ಎಲ್ಡು ಪುಲ್ಲು, ಎಲ್ಡು ಆಪು ತಿಕೀಟು ಅರಿ" ಅಂದೆ.

ಆ ವಯ್ಯನೂ ಅದೆಂಥದೋ ಮೆಸಿನ್ ಕುತ್ತಿಗ್ಗೆ ನೇತ್ ಆಕ್ಕೊಂಡಿದ್ದ. ಕಾಸು ಇಸ್ಕೊಂಡಿದ್ದೇ ಅದ್ನ ಕುಟು ಕುಟು ಒತ್ತುದಾ. ನಾನೂನುವೆ ಬಾಯ್ ಬುಟ್ಕೊಂಡು ನೋಡ್ತಿವ್ನಿ, ಮ್ಯಾಗಿಂದ ಕುರ್ರ್ ರ್‍ ರ್‍ ಅಂತ ಆಳೆ ಒರಗ್ ಬಂದೇ ಬುಡದಾ! ಇದೇನಪ್ಪಾ ನಾಕೋ ಆರೋ ಚೀಟಿ ಕಯ್ಯಾಗೆ ಮಡುಗ್ತಾನೆ ಅಂತ ಕಾಯ್ತಿದ್ರೆ ಆ ವಯ್ಯ ಒಂದೇ ಚೀಟಿ ಕೊಡದಾ? ಬೊಂಬಾಟಾಗ್ ಐತಲ್ಲಪ್ಪೋ ಇದು ಅನ್ಕತಾ ಅಂಗೆ ತಿಕಿಟ್ಟಿನ್ ಕಡಿಕ್ ನೋಡ್ತೀನಿ... ಮೈ ಝುಮ್ ಅಂದ್ ಬುಡದಾ? ಅಲ್ಲಾ ಈ ಕೆಎಸ್ಸಾರ್ಟೀಸಿ ಬಡ್ಡೆತ್ತವು ಈ ಪಾಟಿ ಸುಧಾರುಸ್ ಬುಟ್ಟವ್ರಲ್ಲಪ್ಪೋ ಅಂತ ಬೋ ಕುಸ್ಯಾಗೋತು ಗುರು!

ಆ ತಿಕಿಟ್ಟಲ್ಲಿ ಎಲ್ಲಿಂದ ಎಲ್ಲಿಗ್ ಓಯ್ತಿದೀವಿ, ಎಸ್ಟು ಜನ ದೊಡ್ಡೋರು, ಎಸ್ಟು ಚಿಕ್ಕವು, ಎಸ್ಟು ಕಾಸ್ ಕೊಡ್ಬೇಕು ಅಂತೆಲ್ಲಾ ನಂಗ್ ಅರ್ಥ ಆಗೋಂಗೆ ಕನ್ನಡದಾಗೇ ಪಿರಿಂಟ್ ಮಾಡ್ ಬುಟ್ಟವ್ರೇ. "ಅಲ್ಲಾ ಕಣಣ್ಣಾ, ಈ ಇಂಗ್ಲಿಸ್ ಮೆಸಿನ್ನು ಅದೆಂಗ್ಲಾ ಕನ್ನಡದಾಗ್ ಬರೀತುದೆ" ಅಂದುದ್ಕೆ ಆ ಕಂಡಕ್ಟ್ರಣ್ಣ "ಏ, ಬರೀ ತಿಕೇಟ್ ಏನ್ಲಾ, ಬೇಕಂದ್ರೆ ಇಡೀ ಸರ್ಕಾರಾನೇ ಕನ್ನಡದಲ್ ಮಾಡ್ಬೌದು" ಅಂದ. ಅದೂ ಸರೀನೇಯೆ, ನಮ್ ಕನ್ನಡದ್ ಐಕ್ಳು ಕಂಪ್ಯುಟರ್ರು, ಐಟಿ, ಇಪ್ರೊ, ಇನ್ಪೋಸಿಸ್ಸು ಅಂತ ಸಿಟಿಗ್ ಓಗಿ ಇನ್ನೇನ್ ತಾನೆ ಗೆಯ್ಮೆ ಮಾಡ್ಯಾವು, ಕನ್ನಡದಲ್ಲೇ ಬಸ್ಸಿನ್ ತಿಕೀಟು, ರೈಲಿನ್ ತಿಕೀಟು, ಅಂಗಡಿ ಬಿಲ್ಲು, ಕರೆಂಟು, ನೀರಿನ್ ಬಿಲ್ಲು... ಇಂಗೇ ಎಲ್ಲಾನೂವೆ ಕನ್ನಡದಲ್ಲಿ ಬರೋ ಅಂಗ್ ಮಾಡದ್ ಬುಟ್ಟು!! ಅಲ್ವುರಾ ಗುರುಗಳೇ?

’ಏರ್ ಟೆಲ್’ ಕರೆ ಮಾಡುತ್ತಿದೆ!

ಭಾರತಿ ಟೆಲ್ ಒಡೆತನದ ಏರ್ ಟೆಲ್ ಸಂಸ್ಥೆಯೋರು ಕನ್ನಡದಲ್ಲಿ ಮೊಬೈಲ್ ಫೋನುಗಳನ್ನು ನೋಕಿಯಾ ಸಹಯೋಗದೊಂದಿಗೆ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬಿಡೋ ಯೋಜನೆ ತರ್ತೀವಿ ಅಂತ ಘೋಷಿಸಿದ್ದಾರೆ ಗುರು! ಏರ್ ಟೆಲ್ ಸಂಸ್ಥೆ ಇದೀಗ ನೋಕಿಯ ಹಾಗೂ ಇಫ್ಕೋ ಕಂಪನಿಗಳ ಜೊತೆ ಸೇರಿ ಕರ್ನಾಟಕದ ಹಳ್ಳಿಗಾಡಿನ ಜನರನ್ನು ಸೆಳೆಯಲು ಕನ್ನಡ ಹ್ಯಾಂಡ್ ಸೆಟ್ ಗಳನ್ನೂ ಮಾರುಕಟ್ಟೆಗೆ ತರಲಿದೆ ಅನ್ನುವ ಸಕತ್ ಸುದ್ದಿ ಬಂದಿದೆ.

ಗ್ರಾಮೀಣ ಮೊಬೈಲ್ ಕ್ರಾಂತಿ

ಗ್ರಾಮೀಣ ಮೊಬೈಲ್ ಕ್ರಾಂತಿ ಅನ್ನೋ ಈ ಯೋಜನೆ ಬರೀ ಮೊಬೈಲ್ ಮಾರಾಟದ ಯೋಜನೆ ಅಷ್ಟೆ ಅಲ್ಲ ಗುರು, ಇದರಲ್ಲಿ ಹಳ್ಳಿಗಳಲ್ಲಿನ ಹೆಚ್ಚು ಜನ ಅವಲಂಬಿಸಿರೋ ವ್ಯವಸಾಯಕ್ಕೆ ಅನುಕೂಲ ಮಾಡಿ ಕೊಡುವ ಹಲವಾರು ಅಂಶಗಳನ್ನೂ ಸೇರಿಸಿದ್ದಾರೆ. ಪ್ರಮುಖವಾಗಿ ಪ್ರತಿ ದಿನವೂ ಇಫ್ಕೋ ಮೂಲಕ ಅಂದಿನ ಹವಾಮಾನ, ಬೇರೆ ಬೇರೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಹಾಗೂ ಇನ್ನಿತರ ಕೃಷಿ ಸಂಬಂಧಿ ಮಾಹಿತಿಯನ್ನು ರೈತರಿಗೆ ಕನ್ನಡದಲ್ಲಿ ರವಾನಿಸ್ತೀವಿ ಅಂತ ಹೇಳ್ತಿದಾರೆ.
ಮಾರುಕಟ್ಟೆ ಸಮೀಕ್ಷೆ
ಇವರು ಇಂಥಾ ಯೋಜನೆ ಮಾಡಕ್ಕೆ ಮೊದಲು ಬೇಕಾದಷ್ಟು ಸಮೀಕ್ಷೆ ಮಾಡಿ ಕಂಡುಕೊಂಡಿದ್ದೇನಪ್ಪಾ ಅಂದ್ರೆ ಇಡೀ ಮೊಬೈಲ್ ಬಳಕೆದಾರರು ಅಂದ್ರೆ ಇದುವರೆಗೂ ಅವರಿಗೆ ಇಂಗ್ಲಿಷ್ ಓದಕ್ಕಾದ್ರೂ ಗೊತ್ತಿರಬೇಕಾದ ಅಗತ್ಯ ಇತ್ತು. ಇದು ನಿಜವಾಗ್ಲೂ ನಾಡಿನ ಎಲ್ಲ ಜನ್ರನ್ನು ಮುಟ್ಟಕ್ಕೆ ಇರೋ ದೊಡ್ಡ ಆತಂಕ. ಹಾಗಾಗಿ ಜನರ ಮತ್ತು ಮೊಬೈಲ್ ನಡುವೆ ಇರೋ ಈ "ಇಂಗ್ಲಿಷ್ ಗೊತ್ತಿರಬೇಕು" ಅನ್ನೋ ಕೊರತೆನ ಇಲ್ಲವಾಗಿಸಿಬಿಟ್ರೆ ಇನ್ನೂ ಹೆಚ್ಚು ಹೆಚ್ಚು ಮಾರುಕಟ್ಟೆ ಗಳಿಸ್ಕೋಬಹುದು ಅಂತ ಅರ್ಥ ಮಾಡ್ಕೊಂಡ್ರು. ಅದರ ಪರಿಣಾಮವಾಗಿಯೇ ಇವತ್ತು ಜನ ಸಾಮಾನ್ಯರ ಭಾಷೇಲಿ ತಮ್ಮ ಉತ್ಪನ್ನಾನ ಬಿಡುಗಡೆ ಮೂಲಕ ಹೆಚ್ಚು ಹೆಚ್ಚು ಜನರನ್ನು ಸೆಳೆಯೋ ಯೋಜನೆ ಮಾಡಿದಾರೆ.
ಗ್ರಾಹಕ ಸೇವೆ ಮತ್ತು ಭಾಷಾ ಆಯಾಮ
ಗ್ರಾಹಕ ಸೇವೆಯಲ್ಲಿ, ಇಡೀ ಪ್ರಪಂಚವೇ ತಿಪ್ಪರಲಾಗ ಹಾಕುದ್ರೂ ಬದಲಾಯಿಸಲು ಆಗದ ಒಂದು ಪ್ರಮುಖ ಆಯಾಮ ಭಾಷೆಗಿದೆ. ಯಾಕಂದ್ರೆ ಭಾಷೆ ಬರೀ ಸಂವಹನ ಮಾಧ್ಯಮ ಅಲ್ಲ. ಅದು ಪ್ರತಿ ಸಮಾಜದ ಸಹಕಾರದ ಮಾಧ್ಯಮವಾಗಿದೆ. ಹಾಗಾಗೇ ಯಾವುದೇ ಸಂಸ್ಥೆಗೆ ಆಯಾ ನಾಡಿನ ಭಾಷೆಯಲ್ಲಿ ಸೇವೆ ಕೊಡೋದು ಮಾರುಕಟ್ಟೆ ಗೆಲ್ಲೋ ತಂತ್ರಾನೂ ಹೌದು ಮತ್ತು ಗ್ರಾಹಕರ ಹಕ್ಕೂ ಹೌದು. ಅಲ್ವಾ ಗುರು?
Related Posts with Thumbnails