ಮೊನ್ನೆ ಮೊನ್ನೆ ತಾನೆ ನಮ್ ಎಂಕ ಪಾರಿನ್ನು ನೋಡಿಕ್ಯಂಡ್ ಬತ್ತೀನಿ ಅಂತಾ ಅದ್ಯಾವ್ದೋ ತೈಲೆಂಡ್ ದೇಸಕ್ಕೆ ಓಗಿದ್ದವ್ನು ತಿರುಗಿ ಬಂದು ಒಂದು ದೊಡ್ ವರದೀನೆ ಒಪ್ಪುಸ್ಬುಡೋದಾ... ಬರ್ರೀ, ಒಸಿ ಅದೇನ್ ಅಂದಾನೋ ನೋಡ್ಮಾ....
ಎಂಕನ್ ರಿಪೋಲ್ಟು!ನಮಸ್ಕಾರ ಕಣಣ್ಣೋ, ನಮ್ ಬೆಂಗಳೂರಲ್ಲಿ ಕನ್ನಡದೋರು ಒಸ ಇಮಾನ ನಿಲ್ದಾಣದಾಗೆ ಕನ್ನಡದ ವಾತಾವರಣ ಇರಬೇಕು, ಕನ್ನಡದೋರ್ಗೇ ಕೆಲ್ಸ ಕೊಡ್ಬೇಕು, ಕನ್ನಡದಾಗೇ ಬೋಲ್ಡುಗಳಿರಬೇಕು ಅಂತ ಓರಾಟ ಮಾಡ್ತಾ ಅವ್ರೆ ಅಂತ ಒಂದು ವರುಸದಿಂದ ನೋಡಿಕ್ಯಂಡು ಬತ್ತಾ ಇವ್ನಿ. ಅಲ್ಲಾ ಇಂಟರ್ ನ್ಯಾಸನಲ್ ಏರ್ ಪೋಲ್ಟ್ ಅಂದ್ ಮ್ಯಾಲೆ ಅದೆಂಗ್ಲಾ ಕನ್ನಡಕ್ ಅಲ್ಲಿ ಜಾಗ ಕೊಡಕ್ ಆಯ್ತದೆ? ಅಲ್ಲೇನಿದ್ರೂ ಇಂಟರ್ ನ್ಯಾಸನಲ್ ಬಾಸೆ ಇಂಗ್ಲಿಸ್ ಅಲ್ವಾ ಇರ ಬೇಕಾದ್ದು... ಅಂತ ನಾನೂನೂವೆ ಅಂದುಕ್ಯಂಡು "ಇರ್ಲಿ, ಬ್ಯಾರೆ ದೇಸದಲ್ಲೆಲ್ಲಾ ಎಂಗದೆ ಇಮಾನ ನಿಲ್ದಾಣ, ನೋಡಿಕ್ಯಂಡ್ ಬಂದ್ ಬುಡಮಾ" ಅಂತಾ ತೈಲೆಂಡಿನ ಕಡೆ ಒಂಟೆ.
ತೈಲ್ಯಾಂಡಿಗೆ ಯಾಕೋದ ಎಂಕ?ಇಡೀ ಪರ್ಪಂಚದಾಗೆ ಪ್ರವಾಸಿಗಳು ಶಾನೆ ಜನ ಬರೋ ದೇಸಗಳಲ್ಲಿ ಇದೂನುವೆ ಒಂದು ಕಣ್ ಗುರು! ಇಲ್ಗೆ ಯೂರೋಪಿಂದ, ಅಮೇರಿಕಾದಿಂದ, ಏಸಿಯಾದಿಂದ ಬೇಜಾನ್ ಜನ ಓಯ್ತಾರೆ. ಅದೂ ಅಲ್ದಿರಾ ಈ ದೇಸ ಮುಕ್ಯವಾಗಿ ನಂಬ್ಕೊಂಡಿರೋದೇ ಪ್ರವಾಸೋದ್ಯಮಾನಾ. ಅಂಗಿದ್ ಮ್ಯಾಲೆ ಇಲ್ಲಿ ಶಾನೆ ಇಂಗ್ಲಿಸ್ ಇರೋದು ಸಾಜ ಅಂತ ಅಲ್ಲಿಗ್ ಓದೆ ಕಣ್ ಗುರು! ಈ ಊರೆಸ್ರು ಬ್ಯಾಂಕಾಕ್ ಅಂತೆ, ಈ ಇಮಾನ ನಿಲ್ದಾಣದ ಎಸ್ರು ಸುವರ್ಣಭೂಮಿ ಅಂತೆ. ಒಳಿಕ್ ಓಗ್ ನೋಡೇ ಬುಡಮಾ ಅಂತ ಓದೆ ಗುರು!
ಮೊಕಕ್ ಹೊಡ್ದಂಗ್ ಕಾಣೊ ನೆಲದ ಸೊಗಡು!
ಇಕಾ ನೋಡು ಒಳಿಕ್ ಓಯ್ತಿದ್ ಅಂಗೇ ಎಂಗ್ ಕಾಣ್ತುದೆ ಅಂತಾ! ಅದೆಂಥದೋ ಗೊಂಬೆ ನಿಲ್ಸವ್ರೆ? ಇಡೀ ಇಮಾನ ನಿಲ್ದಾಣ ಒಳ್ಳೆ ಬ್ಯಾರೆ ಪರಪಂಚ ಇದ್ದಂಗ್ ಐತಲ್ಲಪ್ಪೋ. "ಓ... ಇದೇನೇಯಾ ತೈ ಸಂಸ್ಕೃತಿ" ಅಂತಾ ಕಣ್ಣರಳುಸ್ಕೊಂಡು ಯಾಪಾಟಿ ಪ್ರವಾಸಿಗಳು ಅದ್ರು ಮುಂದೆ ನಿಂತವ್ರಲ್ಲಾ ಗುರು? ನಮ್ ಬೆಂಗಳೂರಾಗು ಇಂಗೆ ಕನ್ನಡ ಸಂಸ್ಕೃತಿ ಬಿಂಬ್ಸೋ ಚಿತ್ರಗಳು, ಗೊಂಬೆಗ್ಳೂ ಇದ್ರೆ ಏನ್ ಪಸಂದಾಗ್ ಇರ್ತೈತೆ ಅಲ್ವಾ ಗುರು? ಕನ್ನಡ ನಾಡಲ್ ನಿಲ್ಸಕ್ ಏನ್ ಗೊಂಬೆಗಳಿಲ್ವಾ? ಪರಪಂಚಕ್ ತೋರುಸ್ಕೊಳೋ ಸಂಸ್ಕೃತಿ ಇಲ್ವಾ ಅಂತಾ ಯೋಚ್ನೆ ಆಯ್ತುದೆ ಗುರು!
ನೆಲದ ಬಾಸೆಗೇ ಮೊದಲ ಸ್ತಾನಾ!
ಅಬ್ಬಬ್ಬಾ... ಎಲ್ಲ ಬೋಲ್ಡಲ್ಲೂ ಒಳ್ಳೆ ಜಾಂಗೀರ್ ಸುತ್ತಿರೋ ಅಂಗೆ ಕಾಣೋ ದೊಡ್ಡದಾಗಿ ಅವರ ಬಾಸೇಲೆ ಬರದವ್ರೆ. ಇಂಗ್ಲಿಸಿಗೆ ಕೆಳಗಿನ ಸ್ತಾನ ಕೊಟ್ಟವ್ರಲ್ಲಪ್ಪೋ? ಇಕಾ ಇಲ್ ಬರೋ ಐದ್ರೆಲ್ಲಾ ಬ್ಯಾರೆ ಬ್ಯಾರೆ ಬಾಸೇನೋರು ಕಣ್ರಣ್ಣಾ, ಅವ್ರಿಗೆಲ್ಲಾ ಎಂಗೆ ತಿಳ್ದೀತು ನಿಮ್ ಬಾಸೆ ಅಂದ್ರೆ, ಅಲ್ ಕೆಳಗಡೆ ಇರೋ ಇಂಗ್ಲಿಸ್ ಕಡೆ ಕೈ ತೋರುಸ್ತಾನಲ್ಲಣ್ಣೋ? ಅಲ್ಲಾ ಗುರು, ಬರೋ ಜನ್ರುಗೆಲ್ಲಾ ಎಂಗಿದ್ರೂ ನಿಮ್ ಬಾಸೆ ತಿಳ್ಯಕಿಲ್ಲಾ, ಮತ್ಯಾಕ್ ಅದ್ರಲ್ ಬರ್ದಿದೀರಾ ಅಂದ್ರೆ ಅಂತಾನೆ " ಈಗ್ ನಾವ್ ಬಂದಿರೋದು ತೈಲ್ಯಾಂಡಿಗೆ, ಇಲ್ಲಿ ಜನ್ರು ಬಾಸೆ ಬ್ಯಾರೆ, ಅದು ನೋಡಕ್ ಇಂಗ್ ಕಾಣ್ತುದೆ ಅಂತಾ ಹೊರಗಿನ್ ಜನುಕ್ ಅನ್ನುಸ್ಬೇಕು.. ಅದ್ರು ಜೊತೆ ನಮ್ ಜನಕ್ ತಮ್ ಬಾಸೆ ಬಗ್ಗೆ ಹೆಮ್ಮೆ ಉಟ್ಕಬೇಕು ಅಂತಾ ಇಂಗ್ ಮಾಡಿದೀವಿ" ಅನ್ನದಾ?

ಎಂಗೂ ಇಸ್ಟು ದೂರ ಬಂದಿವ್ನಿ, ಎಂಡ್ರುಗೇನೂ ತಿಳ್ಯಕಿಲ್ಲಾ, ಒಂದು ಪೆಗ್ ಏರುಸ್ ಬುಡಮಾ ಅಂತ ಬಾರ್ ಒಳಿಕ್ ಓದ್ರೆ, ನೋಡ್ ಗುರು... ಅಲ್ಲೂ ನನ್ ಮಗಂದು ಎಂಗ್ ಅವ್ರು ಬಾಸೇ ಪಳಪಳ ಒಳೀತಿದೆ.
ಅಲ್ಲಿ ಕುಡ್ಯೋ ನೀರಿನ್ ಬಾಟ್ಲಿರಲಿ, ಹೊಡ್ಯೋ ಎಣ್ಣೇ ಬಾಟ್ಲಿರಲಿ... ಎಲ್ಲುದ್ರು ಮ್ಯಾಲೂ ಅವರ್ ಬಾಸೇಲೇ ಬರ್ಕಂಡವ್ರೆ. ಅದೆಂಗ್ಲಾ ಇಂಗ್ ಮಾಡೀರಿ ಅಂದ್ರೆ ಇಂಗ್ಲಿಸಲ್ ಬರುದ್ರೆ ಮಾತ್ರಾ ಕಿಕ್ ಏರದು ಅಂತ ನಮ್ ಜನ ಅನ್ಕಂಡಿಲ್ಲಾ ಅನ್ನಾದಾ ಆ ಬಾರಲ್ಲಿರೋನು!
ಒಟ್ನಲ್ಲಿ ತೈಲ್ಯಾಂಡು ಅನ್ನೋ ದೇಸದಾಗೆ ಅವುರ್ದೆ ಒಂದು ಬಾಸೆ ಐತೆ, ಸಂಸ್ಕೃತಿ ಐತೆ, ಆಚಾರ ಇಚಾರ ಐತೆ, ಅದುಕ್ಕಿಂತ ಮುಕ್ಯವಾಗಿ ಅದುನ್ನೆಲ್ಲಾ ಬಂದೋರಿಗೆ ತೋರುಸ್ಕೋ ಬೇಕು ಅನ್ನೋ ತುಡಿತಾ ಐತೆ, ತೋರುಸ್ಕೊಳಕ್ಕೆ ಹೆಮ್ಮೆ ಐತೆ ಅಂತ ಅರ್ತ ಆಯ್ತು ಗುರು! ಅಲ್ಲಾ, ನಮ್ಮೂರಾಗೂ ನಮ್ ಬಾಸೆ, ಸಂಸ್ಕೃತಿ ತೋರುಸ್ಕೊಳ್ದೆ ಇರಕ್ಕೆ ಕನ್ನಡದವ್ರೇನು ನರ ಸತ್ತವ್ರಾ? ಗುರು