ಪ್ರಾದೇಶಿಕ ಪಕ್ಷವೇ ಪರಿಹಾರ!

ಚುನಾವಣೆ ಕಾಲದಲ್ಲಿ ನಾನಾ ತರದ ಸಮೀಕ್ಷೆ ನಡೆಯೋದು ಸಹಜ. ಇತ್ತೀಚಿನ ದಿನಗಳಲ್ಲೇ ಸ್ವಲ್ಪ ಮಹತ್ವ ಪಡ್ಕೊಳೋ ಅಂಥಾ ಒಂದು ವಿಷಯ ಕನ್ನಡಪ್ರಭದೋರು ಪ್ರಕಟಿಸಿದ ಸಮೀಕ್ಷೇಲಿ ಹೊರಬಂದಿದೆ. ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಅಗತ್ಯವಿದೆಯೇ ಇಲ್ಲವೇ ಅನ್ನೋದಕ್ಕೆ ಜನ ತಮ್ಮ ಅಭಿಪ್ರಾಯ ತೋರ್ಸಿರೋದನ್ನು ನೋಡುದ್ರೆ ನಮ್ಮ ನಾಡಲ್ಲೊಂದು ಯೋಗ್ಯವಾದ ಪ್ರಾದೇಶಿಕ ಪಕ್ಷ ಹುಟ್ಟೋಕೆ ಕಾಲ ಪಕ್ವವಾಗಿದೆ ಅನ್ನುಸ್ತಿದೆ ಗುರು. ಅಂಥಾ ಒಂದು ಪಕ್ಷಾ ಹುಟ್ಕೊಂಡ್ರೆ ಅದು ಜನಮನ ಗೆಲ್ಲೋದು ಖಚಿತಾ ಗುರು!

ಕನ್ನಡಪ್ರಭದೋರು ಪ್ರಕಟಿಸಿದ ಸಮೀಕ್ಷೆಯ ಸಾರ...

ಮೊದಲ ಹಂತದ ಚುನಾವಣೆ ನಡೆದ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೇಲಿ ಬೆಂಗಳೂರು ಬಿಟ್ಟು ಉಳಿದ ಜಿಲ್ಲೆಗಳ ಜನರಲ್ಲಿ ಅರ್ಧಕ್ಕರ್ಧ ಭಾಗ ಅಂದ್ರೆ ಶೇಕಡಾ. ೫೦ ರಷ್ಟು ಜನ ಅಂಥಾ ಪಕ್ಷದ ಅಗತ್ಯ ಇದೆ ಅಂದ್ರಂತೆ. ಒಟ್ಟಾರೆ ಶೇಕಡಾ ೩೬ ಜನತೆ ಇಂಥಾ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಅಂತ ಪ್ರತಿಪಾದನೆ ಮಾಡಿದಾರೆ. ಎರಡನೇ ಹಂತದ ಚುನಾವಣೆ ನಡೆಯೋ ಪ್ರದೇಶಗಳಲ್ಲಿರೋ ಜನರಲ್ಲಿ ಶೇಕಡಾ ೩೧ರಷ್ಟು ಮಂದಿ ಪ್ರಾದೇಶಿಕ ಪಕ್ಷಾ ಬೇಕು ಅಂದಿದಾರಂತೆ.

ಬರೀ ಮೂವತ್ತೈದು ಮಂದಿ ಅನ್ನೋ ಹಾಗಿಲ್ಲ!

ಇವತ್ತಿನ ಪರಿಸ್ಥಿತಿ ನೋಡಿ. ಭಾರೀ ಇತಿಹಾಸ ಇರೋ ರಾಷ್ಟ್ರೀಯ ಪಕ್ಷಗಳು ತಮ್ಮವು ಅನ್ನೋ ಕಾಂಗ್ರೆಸ್ಸು, ಬಿಜೆಪಿ ಒಂದು ಕಡೆ... ಅನುಕೂಲಕ್ ತಕ್ಕ ಹಾಗೆ ಒಂದ್ಸರ್ತಿ ರಾಷ್ಟ್ರೀಯ ಅಂತ್ಲೂ ಮತ್ತೊಮ್ಮೆ ಪ್ರಾದೇಶಿಕ ಅಂತ್ಲೂ ಅಂತಿರೋ ಜಾತ್ಯಾತೀತ ಜನತಾ ದಳದೋರು ಇನ್ನೊಂದು ಕಡೆ, ರಾಷ್ಟ್ರೀಯ ಪಕ್ಷಗಳು ಅನ್ನೋ ಭ್ರಮೇಲಿ ಉತ್ತರಪ್ರದೇಶದ್ದೋ ಮತ್ತೊಂದು ಪ್ರದೇಶದ್ದೋ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿಗಳಾಗಿರೋ ಇನ್ನೊಂದೆರಡು ಪಕ್ಷಗಳು ಮೂರನೇ ಕಡೆ... ಇದೆಲ್ಲಾ ಒಂದು ತೂಕವಾದ್ರೆ ಒಂದೆರಡು ಸೀಟುಗಳ ವಾಟಾಳ್ ಪಕ್ಷವೋ, ಬೇರು ಮಟ್ಟದ ಸಂಘಟನೆಯ ಕೊರತೆ ಇರೋ ಚಂಪಾ ಅವರ ಪಕ್ಷವೋ... ಹಿಂದೆಲ್ಲಾ ಸಿದ್ಧತೆ ಸರಿಯಿಲ್ಲದೆ, ತಳಹದಿ ಭದ್ರವಿಲ್ಲದೆ ನೆಲಕಚ್ಚಿದ ಇನ್ನಿತರ ಕನ್ನಡದ ಹೆಸರಿನ ಪಕ್ಷಗಳೋ... ಒಟ್ನಲ್ಲಿ ಕರ್ನಾಟಕದ ಜನತೆ ಮುಂದೆ, ಪ್ರಾದೇಶಿಕ ಪಕ್ಷ ಅನ್ನೋದು ಬಲಹೀನವಾದ ಬಡಬಡಿಕೆ ಥರ ಕಂಡಿದ್ದು, ಪರಿಣಾಮಕಾರಿ ರಾಜಕೀಯ ಶಕ್ತಿಯೊಂದು ಇರಕ್ಕೆ ಸಾಧ್ಯಾ ಅನ್ನೋ ಭರವಸೆಯ ಸಣ್ಣ ಬೆಳಕಿನ ಗೆರೆಯೂ ಕಾಣದೆ ಇರೋ ಕಗ್ಗತ್ತಲ ಸ್ಥಿತಿ ಇದೆ. ಇಂಥಾ ಸನ್ನಿವೇಶದಲ್ಲಿ ಈ ಮೂವತ್ತೈದರ ಆಸುಪಾಸಿನ ಅಂಕಿ ಅಂಶ ಕನ್ನಡಿಗರದ್ದೇ ಪ್ರಾದೇಶಿಕ ಪಕ್ಷ ಬೇಕು ಅನ್ನೋರ್ಗೆ ಭಾರಿ ಉತ್ಸಾಹದಾಯಕವಾಗಿದೆ ಗುರು!

ಕಾಲ ಕೂಡಿ ಬಂದಿದೆ!

ನಾಡು ನುಡಿಯ ಬಗ್ಗೆ ಸ್ಪಷ್ಟವಾದ ನೀತಿ ನಿಲುವು ಹೊಂದಿದ್ದು ಗಟ್ಟಿ ಸಿದ್ಧಾಂತದ ಬೆನ್ನೆಲುಬು ಇರೋಂಥಾ, ಕನ್ನಡ ನಾಡಿನ ಹಳ್ಳಿ ಹಳ್ಳಿಗಳಿಗೂ ಹಬ್ಬಿಕೊಂಡಿದ್ದು ನಾಡು ನುಡಿಯ ರಕ್ಷಣೆಗೆ ರಾಜಿರಹಿತವಾಗಿ ದುಡಿಯೋಂಥಾ ಒಂದು ಕನ್ನಡಿಗರ ಪಕ್ಷ ಹುಟ್ಟಕ್ಕೆ ಇದು ಸಕಾಲ! ಇಂಥಾ ಪಕ್ಷ ಒಂದು ಇದೆ, ಇವರಿಗೆ ಸ್ಪಷ್ಟವಾದ ನೀತಿ ನಿಲುವು ಇದೆ, ನಾಡು ಕಟ್ಟೋ ಕ್ಷಮತೆ ಇದೆ ಅನ್ನೋದು ಕನ್ನಡಿಗರಿಗೆ ಮನವರಿಕೆ ಆಗಿಬಿಟ್ರೆ ಈ ಮೂವತ್ತೈದು ಎಂಬತ್ತೈದು ಆಗೋದ್ರಲ್ಲಿ ಯಾವ ಅನುಮಾನವೂ ಇಲ್ಲಾ! ಕನ್ನಡಿಗರಲ್ಲಿ ಕನ್ನಡತನ ಜಾಗೃತಗೊಂಡರೆ ಇಂಥಾ ಒಂದು ರಾಜಕೀಯ ಪಕ್ಷ ಇಂದಲ್ಲಾ ನಾಳೆ ಹುಟ್ಟಿಕೊಳ್ಳೋದು ಖಂಡಿತಾ ಗುರು! ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳಿಗೇ ಹುಟ್ಟು ಕೊಟ್ಟಿರೋ ಕನ್ನಡಮ್ಮ ಇಂಥಾ ಒಂದು ಸ್ವಾಭಿಮಾನದ ಸಾಮ್ರಾಜ್ಯದ ಮರುಹುಟ್ಟಿಗೆ ಕಾರಣಳಾಗದೆ ಇರೋ ಅಷ್ಟು ಬಂಜೆ ಅಲ್ಲ ಗುರು!

8 ಅನಿಸಿಕೆಗಳು:

Anonymous ಅಂತಾರೆ...

ಲೇಖನ ಚೆನ್ನಾಗಿದೆ. ಏನ್ಗುರುವಿನಲ್ಲಿ ಸುಮಾರು ಸಲ ಪ್ರಾದೇಶಿಕ ಪಕ್ಷದ ಬಗ್ಗೆ ಲೇಖನಗಳು ಬಂದಿವೆ. ಆದರೆ ನನ್ನ ಕೆಲವು ಗೊಂದಲಗಳು ಪ್ರಶ್ನೆಗಳು ಹೀಗಿವೆ. ತಿಳಿದವರು ಉತ್ತರಿಸಿ:

ಕನ್ನಡ ಸ್ವದೇಶಿಕ ಪಕ್ಷ ಬೇಕು .... ಆದರೆ ನಮ್ಮ ನಾರಾಯಣ ಗೌಡರು ಯಾಕೆ ಸುಮ್ಮನೆ ಕೂತಿದ್ದಾರೆ?

ನಮ್ಮ ಬಂಗಾರಪ್ಪನವರು ಈ ಹಿಂದೆ ಮಾಡಿದ್ದ ಸ್ವದೇಶ ಪಕ್ಷ ಕರ್ನಾಟಕ ಕಾಂಗ್ರೆಸ್ ಯಾಕೆ ಹೆಸರಿಲ್ಲದಂತೆ ಆಯಿತು?

ನಮ್ಮ ಬ್ಲಾಗಿನಲ್ಲಿರುವ ಚಿಂತನೆಗಳನ್ನು ರಾಜಕೀಯದವರಿಗೆ ಹೇಗೆ ತಿಳಿಸುವುದು?

ಮಹಿಮ ಪಟೇಲ್ ಅವರ ಸುವರ್ಣ ಯುಗ ಪಕ್ಷದ ಬಗ್ಗೆ ಯಾರು ಯಾಕೆ ಮಾತನಾಡುತ್ತಿಲ್ಲ? ಜಾತಿ ರಾಜಕಾರಣದಲ್ಲಿ ಇದು ಸಾಧ್ಯವೇ?

- ಗಿರಿ

ಉಉನಾಶೆ ಅಂತಾರೆ...

ರಾಜಕೀಯ ಪಕ್ಷವಾಗಿ ಕಡಿಮೆಯೆಂದರೂ ೨೫-೩೦ ಶಾಸಕರಿರದೆ ಇದ್ದರೆ ಕರವೇ ಕನ್ನಡಪರ ಆಡಳಿತ ಕೊಡುವುದು ಕಷ್ಟ.
ನಾವು - ಅಮ್ದರೆ ಬಬ ದವರು - ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಇತ್ಯಾದಿ ಕಡೆ ಗಮನ ಹರಿಸಿದರೆ - ಮುಂದಿ ಚುನಾವಣೆಯ ಸಮಯ ನಮ್ಮ ಬಳಿ ಒಂದೆರಡು ವಿಧಾನಪರಿಷತ್ ಸದಸ್ಯರಾದ್ರೂ ಇರುತ್ತಾರೆ. ಏನಂತೀರ?
ಇತೀ,
ಉಉನಾಶೆ

Anonymous ಅಂತಾರೆ...

Karnatakadalli Pradeshika pakshagalu beleyubudu bahala kashta. Vatal Nagaraj rinda aarambhavagi, mahima patela pakshavagali, narayana gowdara rakshana vedikeyagali ondu prabuddha rajakeya pakshavagi beleyalu sadhyavagilla. Idu illi bahla kashta anisutte

ಉಉನಾಶೆ ಅಂತಾರೆ...

ವಾಟಾಳರ ಪಕ್ಷ (ಅವರು ೧ ಶಾಸಕರಿಂದ ಹೆಚ್ಚಿನ ಗುರಿ ಇಟ್ಟಂಗಿಲ್ಲ) ಬಿಟ್ಟು ಬೇರಾವ ಪಕ್ಷದ ಉದ್ದೇಶವೂ "ಪ್ರಾದೇಶಿಕ"ವಾಗಿರಲಿಲ್ಲ. ಅವು ಕರ್ನಾಟಕದಲ್ಲೇ ಸುರುವಾದವು ಮತ್ತು ಸಣ್ಣವು ಎಂಬುದನ್ನು ಬಿಟ್ಟರೆ, ಅವರು ಇತರರಂತೆಯೇ.
ಬಂಗಾರಪ್ಪನವರ "ಕೆ ಸಿ ಪಿ" ಯೇನಾದರೂ ಕಳೆದ ಚುನಾವಣೆಯವರೆಗೆ ಬದುಕಿದ್ದು ೭-೮ ಶಾಸಕರಿದ್ದರೆ, ಅವರಿಗೆ ಒಳ್ಳೆಯ ಅವಕಾಷಗಳಿದ್ದವು (ಸಮ್ಮಿಶ್ರದಲ್ಲಿ).

ಉತ್ತಮವಾದ ತಳಹದಿಯ ಮೇಲೆ ಪ್ರಾದೇಶಿಕ ಪಕ್ಷ ಆರಂಭವಾದರೆ ಖಂಡಿತಾ ಬೆಳೆಯಲು ಸಾಧ್ಯ. ಜನ ಅಕ್ಕ-ಪಕ್ಕ ರಾಜ್ಯಗಳಿಗೆ ಏನು ಲಾಭ ಆಗ್ತಾ ಇದೆ ಅಂತ ನೋಡ್ತಾರೆ, ನಮಗೆ ಯಾಕೆ ಆಗಿಲ್ಲ ಅಂತ ಅವರಿಗೆ ಅರ್ಥ ಆಗುತ್ತೆ.

ಇತೀ,
ಉಉನಾಶೆ

ಆನಂದ್ ಅಂತಾರೆ...

ಹೋರಾಟಗಾರರಾ ವಾಟಾಳ್ ನಾಗರಾಜ್ ಅವ್ರು ತಮ್ಮ ಪಕ್ಷದ ಹೆಸರು ಆರಿಸುವಲ್ಲೇ ಎಡವಿದ್ದಾರೆ. ಅದು ಏಕ ವ್ಯಕ್ತಿ ಪಕ್ ಆಗಿದೆ. ಇವರು ಯಾವ್ಯಾವ ಊರಲ್ಲಿ ಸಂಘಟನೆ ಮಾಡಿದ್ದಾರೆ? ಇವ್ರ ಸಂಘಟನೆ ಹೆಸರೇನು? ಎಷ್ಟು ಜನ ಸದಸ್ಯರಿದಾರೆ ಇದ್ರಲ್ಲಿ ? ಅಂತಾ ನೋಡುದ್ರೆ ಸಾಕು ಆ ಮನುಷ್ಯನ ಉದ್ದೇಶ, ತಾಕತ್ತು ಎಂಥದು ಅಂತ ಗೊತ್ತಾಗುತ್ತದೆ. ಇನ್ನು ಕನ್ನಡ ಕೇಂದ್ರಿತ ರಾಜಕೀಯ ಪಕ್ಷಗಳು (ವಿಜಯ ಸಂಕೇಶ್ವರರ ಕನ್ನಡ ನಾಡು ಥರದೋವು)ಸಂಘಟನೆಯ ಬೆಂಬಲವಿಲ್ಲದ, ಸ್ಪಷ್ಟವಾಗಿ ಸಿದ್ಧಾಂತಗಳೇನು ಎಂದು ಹೇಳಿಕೊಂಡಿಲ್ಲದ ಕಾರಣದಿಂದ ಮಣ್ಣುಗೂಡಿದವು. ಆ ದೃಷ್ಟೀಲಿ ನೋಡುದ್ರೆ ಇವತ್ತಿನ ತನಕ ನಿಜವಾದ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಹುಟ್ಟೇ ಇಲ್ಲ ಅನ್ನುಸ್ತಿದೆ.

Shashi Sharma Puttur ಅಂತಾರೆ...

nimma ella comment galannu odida mele nandondu anisike. Yaroo yake devanoorara SARVODAYA da mathadthilla?.......Vijaya sankeshwarara KANNADA NADU pakshakkinthalu modalu BJP rajyadhyaksharagidda Sri A.K.Subbayya "KANNADA NADU" emba paksha kattidru. adoo kooda yashaswi agalilla. Pradeshika Pakshagalu prathi bariyoo Yashaswi aadirodakke karana halavaru. Adare adellakkintha hechchagi karnatakadalli ondu dodda samskrithika balaheenathe ide. ondu rajyavagi bere rajya galige holisinodidare, ondu uniform ada Social, Cultural set up nammallilla. Bere rajyagalalli pranthyadinda pranthyakke Bhashe,Samskruthi,Ahara paddathi,aradhana paddathigallalli vyathyasaviddaroo kooda, nammalliddastu hodedu kanisuva reethiya vyathyasagalilla. sookshmavagi gamanisi nodidare rajyavyapiyagi ondu reethiya samana manaskathe nammallilla. ada karana pradeshika pakshada avashyakathe idru kooda adu yashaswiyagodu kastane.......

ಉಉನಾಶೆ ಅಂತಾರೆ...

೧. ಸರ್ವೋದಯ ಪಕ್ಷದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಅವರ ಉದ್ದೇಶಗಳು "ಪ್ರಾದೇಶಿಕ"ವಲ್ಲ ಎಂದು ಕೇಳಿದಂತೆ ನೆನಪು.
೨. ಎ ಕೆ ಸುಬ್ಬಯ್ಯನವರು ಕನ್ನಡನಾಡು ಮಾಡಿ / ಮುಚ್ಚಿ ೨೫ ವರ್ಷ ದಾಟಿರಬೇಕು, ಅಲ್ಲವೇ? ಅದಲ್ಲದೆ ಒಂದು ಪಕ್ಷ ಕಟ್ಟುವಾಗ ಅವರು ಯಾರು, ಎಷ್ಟು ಜನ ಅವರ ಬಳಿ ಇದ್ದರು ಮತ್ತು ಅವರು ಎಷ್ಟು ದಿನ ಅದನ್ನು ನಡೆಸಿಕೊಂಡು ಹೋಗುವ ತಾಕತ್ತು ಮತ್ತು ಮನಸ್ಸು ಇತ್ತು ಎನ್ನುವುದೂ ಕೂಡ ಮುಖ್ಯವಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಬಂಗಾರಪ್ಪ ಮತ್ತು ಕುಮಾರಸ್ವಾಮಿ ಮಾತ್ರ ಅಂತಹ ತಾಕತ್ತು ಇರೋ ರಾಜಕಾರಣಿಗಳು ಅಂತ ನನ್ನ ಅಭಿಪ್ರಾಯ.
೩. ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಹೋಲಿಕೆಯನ್ನು ನಾನು ಒಪ್ಪುತ್ತೇನೆ. ಆದರೆ ಒಂದೆ ಬಗೆಯ ವಾತಾವರಣ ಇರುವಲ್ಲಿ ಸ್ಥಳೀಯವಾಗಿ ಕೂಡ ಯಾವ ಯಶಸ್ಸು ಆಗಿಲ್ಲ. ೪. ತಮಿಳು ನಾಡಿನಲ್ಲಿ ಪ್ರಾದೇಶಿಕತೆಯ ಚರಿತ್ರೆ ದೊಡ್ಡದಿದೆ. ಅಂಧ್ರಪ್ರದೇಶದಲ್ಲಿ ಅವಮಾನಕ್ಕೆ ಸಿಡಿದುನಿಂತ ಅಭಿಮಾನವಿದೆ. ನಮ್ಮಲ್ಲೂ ಅಂತ ಅವಕಾಶವಿದೆ.
ಇತೀ,
ಉಉನಾಶೆ

Anonymous ಅಂತಾರೆ...

ತಾಯ್ನಾಡಲ್ಲೇ ಮೂಲೆಗುಂಪಾಗಿರುವ ಕನ್ನಡ ಸಂಸ್ಕೃತಿ, ಭಾಷೆಯ ಉಳಿವಿನ ದೃಷ್ಟಿಯಿಂದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಂತಹ ಗಂಭೀರ ಪ್ರಯತ್ನ ಆಗಬೇಕಾಗಿದೆ. ಆದರೆ, ಹೀನಾರ್ಥ ಪಡೆದಿರುವ ರಾಜಕೀಯಕ್ಕೆ ಎಂತಹ ಪ್ರಯತ್ನವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ತಾಕತ್ತಿದೆ. ಒಮ್ಮೆ ಅಧಿಕಾರದ ರುಚಿ ಕಂಡ ಯಾವ ಪಕ್ಷಗಳೂ ಪ್ರಾಮಾಣಿಕವಾಗಿ ಉಳಿದಿಲ್ಲ. ಹಾಗಾಗಿಯೇ ಪ್ರಾದೇಶಿಕ ಪಕ್ಷಗಳು ನಾಡಿನ, ಸಂಸ್ಕೃತಿಯ ಹಿತಕ್ಕಿಂತ ಅಧಿಕಾರಕ್ಕೇ ಹೆಚ್ಚು ಅಂಟಿಕೊಂಡಿರುವುದು. ಹೀಗಿರುವಾಗ ಹೊಸ ಪ್ರಾದೇಶಿಕ ಪಕ್ಷದಿಂದ ಅಂತಹ ಪ್ರಯೋಜನವಾಗುತ್ತದೆಂದು ನನಗನಿಸುವುದಿಲ್ಲ. ಇರುವ ಪಕ್ಷಗಳೇ ಪಕ್ಷಬೇಧ ಮರೆತು ರಾಜಕೀಯ ಇಚ್ಚಾಶಕ್ತಿ ತೋರಿಸಿದರೆ ನಾಡು ಕಟ್ಟುವ ಕೆಲಸ ದೊಡ್ಡದೇನಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails