ಎಚ್ಚರವಾಗ್ತಿರೋ ಮರಾಠಿ ಮಾಣುಸ್!


ಮೊನ್ ಮೊನ್ನೆ ಸಿ.ಎನ್.ಎನ್-ಐ.ಬಿ.ಎನ್‍ನೋರು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದಿಬ್ರು ರಾಜಕೀಯ ನಾಯಕರನ್ನು ಸಂದರ್ಶನ ಮಾಡುದ್ರು ಗುರು! ಒಬ್ರು ಶಿವಸೇನೆಯ ಬಾಳಾಠಾಕ್ರೆಯ ಉತ್ತರಾಧಿಕಾರಿಯಾದ ಉದ್ಧವ್ ಠಾಕ್ರೆಯವರು. ಇನ್ನೊಬ್ರು ಮಹಾರಾಷ್ಟ್ರಾ ನವನಿರ್ಮಾಣ ಸೇನೆಯ ದಂಡನಾಯಕರಾದ ರಾಜ್ ಠಾಕ್ರೆಯವರು. ನೀವು ಆ ಸಂದರ್ಶನಗಳ್ನ ನೋಡುದ್ರಾ ಗುರು? ಇಲ್ದಿದ್ರೆ ಇಕಾ ಇಲ್ಲಿ ನೋಡಿ.

ಕಳಚುತ್ತಿರುವ ಸುಳ್ಳಿನ ಪೊರೆ ಒಂದೆಡೆ! ತನ್ನತನವ ತೊರೆದವರೊಂದೆಡೆ!!

ಶಿವಸೇನೆ ಅನ್ನೋದು ಹೇಗೆ ದಿಕ್ಕೆಟ್ಟು, ಸಿದ್ಧಾಂತದ ಗೊಂದಲದಲ್ಲಿ ತೊಳಲಾಡ್ತಾ ಇದೆ ಅನ್ನೋದನ್ನು ತಿಳ್ಯಕ್ಕೆ ಉದ್ಧವ್ ಆಡಿರೋ ಮಾತುಗಳ್ನ ನೋಡುದ್ರೆ ಸಾಕು. ಹಿಂದಿಯಲ್ಲಿ ಮಾತಾಡ್ತಾ, ಮಹಾರಾಷ್ಟ್ರ-ಮರಾಠಿ-ಮರಾಠಿಗರ ಬಗ್ಗೆ ಯಾವ್ದೇ ವಿಶೇಷ ಯೋಜನೆಗಳಿಟ್ಕೊಳ್ದೇ ರಾಷ್ಟ್ರೀಯ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧವಾಗಿರೋ ಶಿವಸೇನೆ ತಾನು ಹುಟ್ಟಿದ್ದು ಯಾಕೆ ಅನ್ನೋದನ್ನೇ ಮರೆತು ಹೋದಂಗಿದೆ ಗುರು! ಇವರಿಗಿಂತಾ ಹೆಚ್ಚು ದಿಟದ ಮನವರಿಕೆ ಎಂ.ಎನ್.ಎಸ್‍ನವರಿಗೆ ಆಗಿರೋ ಹಾಗೆ, ರಾಜ್ ಠಾಕ್ರೆಯ ಮಾತುಗಳನ್ನು ಕೇಳ್ದಾಗ ಅನ್ಸುತ್ತೆ. ತಮಾಷೆ ಅಂದ್ರೆ ರಾಜ್‍ಠಾಕ್ರೆಯವರು ಮರಾಠಿಯಲ್ಲಿ ಮಾತಾಡೋದನ್ನೇ ಈ ಚಾನೆಲ್‍ನವರು ದೇಶ ಒಡೆಯೋ ಪ್ರಯತ್ನ ಅನ್ನೋಹಾಗೆ ಪ್ರಶ್ನೆಮಾಡಿರೋದನ್ನು ನೀವು ನೋಡಬಹುದು. ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್ ಆಗಿರೋದು ಅನ್ನೋದನ್ನು ಅರ್ಥ ಮಾಡ್ಕೊಂಡಂಗಿರೋ ರಾಜ್‍ಠಾಕ್ರೆ, ಇದರಿಂದ ಚೂರು ಗಲಿಬಿಲಿಗೆ ಈಡಾಗಿದ್ದಂಗೆ ಕಾಣ್ಸಿದ್ರೆ ಅದುಕ್ಕೆ ಕಾರಣ, ಪಾಪಾ ಅವರೂ ಹಿಂದೀನಾ ರಾಷ್ಟ್ರಭಾಷೆ ಅಂತ ತಪ್ಪಾಗಿ ಭಾವಿಸಿರೋದೆ ಆಗಿದೆ ಗುರು! ಈ ಸಂದರ್ಶನ ಮಾಡಿದ ಮಹನೀಯ ರಾಜ್‍ದೀಪ್ ಕೂಡಾ ಪೆದ್ದುಪೆದ್ದಾಗಿ (ಅತಿ ಜಾಣತನ ಅಂತನ್ನೋ ಗುಮಾನೀನೂ ಇದೆ) ಹಿಂದೀನಾ ರಾಷ್ಟ್ರಭಾಷೇ ಅಂತನ್ನೋದುನ್ನ ನೋಡುದ್ರೆ, ಅವರ ಅಜ್ಞಾನಕ್ಕೆ ಮರುಗಬೇಕೋ ಅಥವಾ ಭಾರತೀಯರ ತಲೇಲಿ ಕೇಂದ್ರಸರ್ಕಾರ ಎಷ್ಟು ಯೋಜಿತವಾಗಿ ಒಂದು ಸುಳ್ಳುನ್ನ ತುಂಬ್ಕೊಂಡು ಬಂದಿದೆ ಅಂತಾ ಅಚ್ಚರಿ ಪಡಬೇಕೋ ಅರಿಯದಾಗಿದೆ ಗುರು! ಏನೇ ಆದರೂ ಹಿಂದಿಯಿಂದಾಗಿರೋ ಅಪಾಯದ ಅರಿವು ಮರಾಠಿಗರಿಗೆ ಅರ್ಥವಾಗ್ತಾ ಇರೋದೂ, ಜೊತೆಯಲ್ಲಿ ಈ ಅರಿವಿನ ರಾಜಕೀಯ ಪಕ್ಷ ಬೆಳೀತಾ ಇರೋದೂ ಒಳ್ಳೇ ಬೆಳವಣಿಗೆ ಆಗಿದೆ.

ರಾಜ್‍ಠಾಕ್ರೆ ಮಾತಿನ ಎರಡು ಸತ್ಯಗಳು!

ಮೊದಲನೇದಾಗಿ ಹಿಂದೀಲಿ ಮಾತಾಡದೆ ಮರಾಠಿ ಭಾಷೆಯನ್ನು ಬಳಸೋ ಮೂಲಕ ‘ಭಾರತದಲ್ಲಿ ಹಿಂದಿಯಷ್ಟೇ ಮರಾಠಿಯೂ ಭಾರತೀಯ’ ಅನ್ನೋ ಸಂದೇಶ ಕೊಡ್ತಾ, ‘ಇಷ್ಟು ದಿವಸ ಹಿಂದೀನ ಒಪ್ಕೊಂಡು ತಲೆಮೇಲೆ ಹೊತ್ತು ಮೆರೆಸಿದ್ದಕ್ಕೆ ಮರಾಠಿಗರ ಬದುಕು, ಉದ್ಯೋಗ ಎಲ್ಲಾ ಮಠ ಹತ್ತೋಗಿದೆ ಅನ್ನೋದು ನಮಗೆ ಗೊತ್ತಾಗಿದೆ. ಇನ್ಮೇಲೆ ಮರಾಠಿ ಸ್ವಾಭಿಮಾನ ಜಾಗೃತವಾಗಿದೆ ಅನ್ನೋದರ ಕುರುಹಾಗಿ ಹೀಗೆ ಮರಾಠಿಯಲ್ಲಿ ಮಾತಾಡ್ತಾ ಇದೀನಿ’ ಅನ್ನೋ ಸಂದೇಶಾನೂ ರಾಜ್ ಕೊಟ್ಟಿದಾರೆ. ಇದರ ಜೊತೆಗೆ ಯಾವ ಪಕ್ಷ ಮಹಾರಾಷ್ಟ್ರ, ಮರಾಠಿ ಮತ್ತು ಮರಾಠಿಗರ ಏಳಿಗೆಗೆ ದುಡಿಯಲು ಸಿದ್ಧವೋ, ಯಾವ ಪಕ್ಷ ಕಾಲಮಿತಿ ಹಾಕಿಕೊಂಡು ಏಳಿಗೆಯ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವೋ ಅಂತಹ ಪಕ್ಷಗಳನ್ನು ಬೆಂಬಲಿಸುವುದಾಗಿಯೂ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ಈ ಸಂದರ್ಶನ ನೋಡಿದಾಗ ರಾಜ್‍ಠಾಕ್ರೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೆಚ್ಚು ಹೆಚ್ಚು ಸ್ಪಷ್ಟವಾದ ಚಿಂತನೆಯನ್ನೂ, ನಿಲುವನ್ನೂ ಮೈಗೂಡಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ಅಂತೂ ಮರಾಠಿ ಮಾಣುಸ್ ಎಚ್ಚೆತ್ತುಕೊಳ್ತಿರೋದು ಭಾರತದ ಏಳಿಗೆಯ, ಒಕ್ಕೂಟದ ಸ್ವರೂಪದ ದೃಷ್ಟಿಯಿಂದ ಭಾಳಾ ಒಳ್ಳೇದು ಗುರು!!

9 ಅನಿಸಿಕೆಗಳು:

Kishore ಅಂತಾರೆ...

ಹಿ೦ದಿಯನ್ನು ರಾಷ್ಟ್ರೀಯತೆಗೆ ನ೦ಟು ಮಾಡಿ ದೇಶದ ನಕ್ಷೆಯನ್ನು ಬದಲಿಸುವುದಕ್ಕೆ ನಮ್ಮ ನಾಯಕರೇ ಕಾರಣ. ಎಲ್ಲ ಭಾಷೆಗೂ ಹಾಗೂ ಭಾಷಿಕರಿಗೂ ಸಮಾನ ಗೌರವ ಕಲ್ಪಿಸಬೇಕಾಗಿತ್ತು. ಭರತ ಖ೦ಡವನ್ನು/ದೇಶವನ್ನು ಹಿ೦ದಿಯಿ೦ದ ಬ೦ಧಿಸಿ ಏಕತೆಯನ್ನು ಸಾಧಿಸಲು ಸಾಧ್ಯವಿಲ್ಲ ಎ೦ಬುದು ಕ೦ಡುಕೊಳ್ಳಬೇಕಾಗಿತ್ತು.

ಹಿ೦ದಿ ಭಾಷಿಕರಿಗೆ, ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲೆಡೆ ಹೆಚ್ಚಿನ ಸವಲತ್ತುಗಳು ಆಡಳಿತದಲ್ಲಿ ಹೆಚ್ಚಿನ ಹಿಡಿತವಿದೆ. ಹಿ೦ದಿಗೆ ಶರಣಾಗಿದ್ದ ಮರಾಠಿಗರು ಇದ್ದಕ್ಕಿದ್ದಹಾಗೆ ತಮ್ಮತನವನ್ನು ಕ೦ಡುಕೊಳ್ಳುತ್ತಿರುವುದು ಹಿ೦ದಿ ಭಾಷಿಕರಲ್ಲಿ ಭೀತಿಯನ್ನು೦ಟುಮಾಡಿದೆ. ತಾವು ಬೇರೆ ಭಾರತೀಯರಿಗೆ ಸಮಾನರು ಎ೦ಬುದು ಗ೦ಟಲ ಒಳಗೆ ಇಳಿಯದ ವಿಷಯವಾಗಿದೆ.

Anonymous ಅಂತಾರೆ...

ಮಾನುಸ್ ಅಲ್ಲ ಮಾಣುಸ್! ಮಾನುಸ್ ಹಿಂದೀ ಉಲಿಕೆ.

ವಿಡಿಯೋ ಚನ್ನಾಗಿದೆ..

ನನ್ನಿ

ಮಹೇಶ ಗಜಬರ ಅಂತಾರೆ...

ಇದೇ IBN ಸಮೂಹದ IBN-ಲೋಕಮತ್ ಎಂಬ ಮರಾಠಿ ಚಾನಲಿನ ನನ್ನ ಮೆಚ್ಚಿನ ಮತ್ತು ಜನಪ್ರಿಯ ಸಂಪಾದಕ ನಿಖಿಲ್ ವಾಗಳೇ ಜೊತೆ ಸಂದರ್ಶನದಲ್ಲಿ ರಾಜ್ ಠಾಕ್ರೆ ಒಂದು ತಮಾಷೆಯ ಮಾತು ಹೇಳಿದ ...ಮಹಾರಾಷ್ಟ್ರ ಸರ್ಕಾರ ಕೇಳದಿದ್ದರೂ ಕೂಡ ಹಿಂದಿನ ಯು.ಪಿ.ಎ ಸರ್ಕಾರ ಮುಂಬೈ-ಪಾಟ್ನಾ ,ಕೊಲ್ಲಾಪುರ-ಪಾಟ್ನಾ ರೈಲ್ವೆ ಕೊಡುಗೆ ನೀಡಿತಂತೆ..ರಾಜ್ ಆ ಸಂದರ್ಶನದಲ್ಲಿ ಅದರ ತುಂಬಾ ಖಾರವಾಗಿ ಪ್ರತಿಕ್ರಿಯಿಸಿ ಹೀಗೆ ಹೇಳಿದ " ಯಾರಿಗೆ ಬೇಕಾಗಿದ್ದವು ಆ ಟ್ರೈನುಗಳು ? ನಾವೇನಾದ್ರು ಕೊಡು ಅಂತ ಕೇಳಿದ್ಡಿವಾ ? ನಾವು ಕೇಳಿದ್ದು ಕೊಡೋದು ಬಿಟ್ಟು ಬೇಕಾ ಬಿಟ್ಟಿ ಏನೋ ಕೊಡ್ತಾರೆ ..ಕೊಲ್ಲಾಪುರ ಅಥವಾ ಮುಂಬೈನಿಂದ ಪಾಟ್ನಾಗೆ ನಮ್ಮವರು ಯಾರು ಹೋಗ್ತಾರೆ ? ನನಗೆ ಹೇಳಿ ಯಾರಾದ್ರು ಇಂಥವರು ಇದ್ದಾರಾ ನಮ್ಮಲ್ಲಿ ಹೀಗೆ ಹೇಳುವವರು ..ಅಪ್ಪಾ ನನಗೆ ಮುಂಬೈನಲ್ಲಿ ಓದಿದ್ದು ಸಾಕು ನಾನು ಮುಂದಿನ ಅಭ್ಯಾಸ ಪಾಟ್ನಾಗೆ ಹೋಗಿ ಮಾಡ್ತಿನಿ "....
ರಾಜ್ ಕೇವಲ ಹಿಂದಿ ಬಗ್ಗೆ ಮಾತಾಡುತಿದ್ದಾನೆ ಆದರೆ ಅವನಿಗೆ ಗೊತ್ತಿಲ್ಲ ಅನಿಸುತ್ತೆ ಅದಕ್ಕಿಂತಲೂ ಭಯಂಕರ ಕಳ್ಳರು ಹೊಕ್ಕಿದ್ದಾರೆ ಮತ್ತು ಹೊಕ್ಕುತ್ತಿದ್ದಾರೆ ಅವರೇ ಕೇರಳದ ಮಲಯಾಳಿಗಳು . ಈ ಮಲ್ಲುಗಳು ಅದರಲ್ಲೂ ಬ್ಯಾರಿಗಳು ಅಲ್ಲಿನ ಕೊಂಕಣ ಭಾಗದ ಜನರಿಗೆ ಕಂಟಕ ಪ್ರಾಯವಾಗಿದ್ದಾರೆ. ಇದರ ಬಗ್ಗೆ ಅಲ್ಲಿನ ಚಾನೆಲ್ ಗಳು ಸಚಿತ್ರ ವರದಿ ಮಾಡಿದ್ದವು . ಅಕ್ರಮ ಗಾಂಜಾ ಮತ್ತು ಕಳ್ಳ ಸಾಗಾಣಿಕೆಯಲ್ಲಿ ಅವರ ದೊಡ್ಡ ಕೈವಾಡ ಇದೆ. ಇತ್ತೀಚಿಗೆ ಒಂದು ಹಳ್ಳಿಯ ಎಂಬತ್ತು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದನ್ನು ತೆರವುಗೊಳಿಸಲಾಯಿತು . ಸಿಕ್ಕ ಸಿಕ್ಕಲ್ಲಿ ಫೆಡೆರಲ್ ಬ್ಯಾಂಕ್ ,ಮಲಬಾರ್ ಬ್ಯಾಂಕ್ ಶಾಖೆಗಳು ತೆರೆಯುತ್ತಿದಾರೆ. ಕೊಲ್ಲಾಪುರ ,ಸಾಂಗ್ಲಿಯಲ್ಲಿ ,ನಮ್ಮ ನಿಪ್ಪಾಣಿಯಲ್ಲಿ ಕೂಡ ಇವರ ಹಾವಳಿ ಹೆಚ್ಚುತ್ತಿದೆ. ರಾಜ್ ಇದರ ಬಗ್ಗೆ ಗಮನಹರಿಸಬೇಕಾಗಿದೆ.
ರಾಜ್ ಠಾಕ್ರೆ ಗಡಿ ಸಮಸ್ಯೆ ಬಗ್ಗೆ ತನ್ನ ನಿಲುವೇನು ಅನ್ನೋದನ್ನು ಇದುವರೆಗೆ ಸ್ಪಷ್ಟವಾಗಿ ಹೇಳಿಲ್ಲ . ಆ ಸಂದರ್ಶನದಲ್ಲಿ ನಿಖಿಲ್ " ನೀವು ಬರೀ ಮಹಾರಾಷ್ಟ್ರ ,ಮರಾಠಿ ಬಗ್ಗೆ ಮಾತ್ರ ಹೋರಾಡುತ್ತಿರೋ ಅಥವಾ ಅದರ ಆಚೆಗೂ ಏನಾದ್ರು ನೋಡುತ್ತಿರೋ ?" ಎಂದು ಕೇಳಿದಾಗ ರಾಜ್ :"ನಾನು ಮಹಾರಾಷ್ಟ್ರ ಈಗಿನ ನಕ್ಷೆಯ ಬೌಂಡರಿ ಬಿಟ್ಟು ಹೊರಗಡೆಯ ಬಗ್ಗೆ ತಲೆ ಹಾಕುವುದೇ ಇಲ್ಲ " ಅಂತ ಹೇಳಿದ್ದ .
ರಾಜ್ ಹಿಂದಿ ವಲಸಿಗರ ಬಗ್ಗೆ ಮಾತನಾಡಿದ ಹಾಗೆ ಕನ್ನಡದ ವಲಸಿಗರ ಬಗ್ಗೆ ಮಾತನಾಡಲು ಬರುವುದಿಲ್ಲ . ಯಾಕಂದರೆ ಮಹಾರಾಷ್ಟ್ರದಲ್ಲಿ ಮುಂಬೈ,ಪುಣೆ ಮತ್ತು ಗಡಿ ಭಾಗ ಸೇರಿದಂತೆ ಸರಿ ಸುಮಾರು ಮೂವತ್ತು ಲಕ್ಷ ಕನ್ನಡಿಗರಿದ್ದರೆ ,ಕರ್ನಾಟಕದಲ್ಲಿ ಗಡಿ ಭಾಗ ಒಳಗೊಂಡಂತೆ ಸುಮಾರು 22 ಲಕ್ಷ ಮರಾಠಿಗರಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು

Kishore ಅಂತಾರೆ...

ಹಲವಾರು ಚಾನೆಲ್ ಗಳಲ್ಲಿ ಇವರ ಸ೦ದರ್ಶನ ನಡೀತಿದೆ. ರಾಜ್ ಅನ್ನು ಜಿನ್ನಾಗೆ ಹೋಲಿಸಿ ಔಮಾನ ಮಾಡ್ತಿದ್ದಾರೆ. ಅಣ್ಣತಮ್ಮ೦ದಿರ ಜಗಳದಿ೦ದ ಸಮಾಜದಲ್ಲಿ ಗಲಭೆಯು೦ಟಾಗುತ್ತಿದೆ ಎ೦ದು ಆರೋಪ ಹೊರೆಸುತ್ತಿದ್ದಾರೆ.

Kishore ಅಂತಾರೆ...

ರಾಜ್ ಹಿಂದಿ ವಲಸಿಗರ ಬಗ್ಗೆ ಮಾತನಾಡಿದ ಹಾಗೆ ಕನ್ನಡದ ವಲಸಿಗರ ಬಗ್ಗೆ ಮಾತನಾಡಲು ಬರುವುದಿಲ್ಲ?

ಇದು ಯಾಕೆ? ಅಲ್ಲಿ ಕನ್ನಡಿಗರು ೩೦ ಲಕ್ಷ ಇದ್ದರೂ ಅವರು ಮಹಾರಾಷ್ಟ್ರದಲ್ಲಿ ಮರಾಠಿಗನೇ ಸಾರ್ವಭೌಮ ಎ೦ದು ನ೦ಬಿ ಮರಾಠಿಗರಾಗಿ ಹೋಗ್ತಿದ್ದಾರಾ?

ಬನವಾಸಿ ಬಳಗ ಅಂತಾರೆ...

ಮಾಯ್ಸಾ ಅವರೇ,

ಮಾನುಸ್ ಅನ್ನೋದನ್ನು ಮಾಣುಸ್ ಎಂದು ಬದಲಾಯಿಸಿದ್ದೇವೆ - ಸಂಪಾದಕ

Anonymous ಅಂತಾರೆ...

ಮಾರ‍್ಪಡಿಕೆಗೆ ನನ್ನಿ!

Mahesh ಅಂತಾರೆ...

Enguru hosa look super.

ಮಹೇಶ ಗಜಬರ ಅಂತಾರೆ...

ಎಲ್ಲ ಕನ್ನಡಿಗರು ಮರಾಠಿ ಸಾರ್ವಭೌಮ ಎಂದು ಒಪ್ಪಿ ಅಲ್ಲಿ ನೆಲಸದಿದ್ದರು ಬಹುತೇಕರು ಮರಾಠಿ ಬಲ್ಲರು ಮತ್ತು ಅಲ್ಲಿನವರ ಜೊತೆ ಅಲ್ಲಿಯವರಾಗಿ ಬಾಳುತ್ತಿದ್ದಾರೆ..ಮಹಾರಾಷ್ಟ್ರ ರಾಜಕೀಯದಲ್ಲಿ ಕನ್ನಡಿಗರ ಕೊಡುಗೈ ಬಹಳ ಇದೆ . ಈಗ ಸದ್ಯ ಪುಣೆ ಸಂಸದ ಸುರೇಶ ಕಲ್ಮಾಡಿ ಮತ್ತು ರೈತ ಸಮಸ್ಯಗಳಿಗೆ ಹೋರಾಡುತ್ತಿರುವ ಸಂಸದ ರಾಜು ಶೆಟ್ಟಿ ಕನ್ನಡಿಗರು ..ಇನ್ನು ಅನೇಕ ಶಾಸಕರಿದ್ದಾರೆ ...ಹಾಗೇನೇ ಇಲ್ಲಿ ಮರಾಠಿಗರು ಕನ್ನಡದವರ ಜೊತೆ ಕನ್ನಡಿಗರಾಗಿ ಇದ್ದಾರೆ (ಎಂ.ಇ.ಎಸ್ ನಂತಹ ಪುಂಡರನ್ನು ಬಿಟ್ಟು )..ಅದಕ್ಕೆ ನಾನು ಹೇಳಿದ್ದು ರಾಜ್ ಠಾಕ್ರೆ ಕನ್ನಡಿಗ ವಲಸಿಗರ ಬಗ್ಗೆ ಚಕಾರ ಎತ್ತೋ ಹಾಗಿಲ್ಲ ಅಂತ ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails