ನುಡಿಯರಿಮೆ ಮತ್ತು ಕಲಿಕೆ - ವಿಚಾರ ಸಮ್ಮೇಳನ

ಏಳಿಗೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂದೂ, ಆದ್ದರಿಂದ ಕನ್ನಡಿಗರ ತಾಯ್ನುಡಿಯಾದ ಕನ್ನಡದ ಸರಿಯಾದ ಅಧ್ಯಯನವಾಗಬೇಕೆಂಬುದೂ, ಆ ಅಧ್ಯಯನದ ಫಲವು ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.

ಈ ನಿಟ್ಟಿನಲ್ಲಿ ದಿನಾಂಕ 7/2/2010 ರಂದು ಬೆಂಗಳೂರಿನಲ್ಲಿ "ನುಡಿಯರಿಮೆ ಮತ್ತು ಕಲಿಕೆ" ಎಂಬ ವಿಚಾರ ಸಮ್ಮೇಳನವನ್ನು ಬನವಾಸಿ ಬಳಗವು ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ನುಡಿ ಮತ್ತು ಕಲಿಕೆಯ ತೊಂಬತ್ತಕ್ಕೂ ಹೆಚ್ಚು ಮಂದಿ ತಜ್ಞರು ಭಾಗವಹಿಸಲಿದ್ದಾರೆ. ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ.

ಹಿನ್ನೆಲೆ ಮತ್ತು ಉದ್ದೇಶಗಳು

ಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಕ್ಷೇತ್ರದಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಹಳ ಮುಖ್ಯವಾದ ಬೆಳವಣಿಗೆಗಳಾಗಿವೆ. ಕನ್ನಡದ ಸ್ವರೂಪದ ಬಗ್ಗೆ ಸಾವಿರಾರು ವರ್ಷಗಳಿಂದ ಬೇರೂರಿದ್ದ ನಂಬಿಕೆಗಳನ್ನು ಅರಿಮೆಯ (ವಿಜ್ಞಾನದ) ಪರೀಕ್ಷೆಗೆ ಒಳಪಡಿಸಿ ಅವುಗಳಲ್ಲಿ ಕೆಲವು ಮುಖ್ಯವಾದ ನಂಬಿಕೆಗಳನ್ನು ನುಡಿಯರಿಗರು (ಭಾಷಾವಿಜ್ಞಾನಿಗಳು) ಕೈಬಿಟ್ಟಿದ್ದಾರೆ. ಈ ಮೂಲಕ ಕನ್ನಡ ನುಡಿಯರಿಮೆಯು ಅರಿಮೆಯ ಬೆಳಕಿನಿಂದ ಕಂಗೊಳಿಸುತ್ತಿರುವ ಹೊಸದೊಂದು ದಿಕ್ಕಿನಲ್ಲಿ ಹರಿದಿದೆ.

ಮುಖ್ಯವಾಗಿ, ಸಂಸ್ಕೃತದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಕನ್ನಡಕ್ಕೆ ಅಳವಡಿಸುವುದು ಅರಿಮೆಯಲ್ಲವೆಂದು (ಅವೈಜ್ಞಾನಿಕವೆಂದು) ಕಂಡುಕೊಂಡ ಸೊಲ್ಲರಿಗರು (ವೈಯಾಕರಣಿಗಳು) ಕನ್ನಡಕ್ಕೆ ಕನ್ನಡದ್ದೇ ಸೊಲ್ಲರಿಮೆಯನ್ನು ಕಟ್ಟುತ್ತಿದ್ದಾರೆ. ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಲ್ಲಿ ಈ ಹೊಸ ಸೊಲ್ಲರಿಮೆಯು ಹಿಂದಿನ ಸೊಲ್ಲರಿಮೆಗಳಿಗಿಂತ ಹೆಚ್ಚು ಸಮರ್ಪಕವಷ್ಟೇ ಅಲ್ಲ, ಕಲಿಯಲು ಸುಲಭವೂ ಆಗಲಿದೆ.

ಹಾಗೆಯೇ, ಹೊಸ ಪದಗಳನ್ನು ಕಟ್ಟುವಾಗ ಕನ್ನಡಿಗರಿಗೆ ಕಷ್ಟವಾದ ಸಂಸ್ಕೃತದ ಮೊರೆಹೋಗದೆ ಬೇರೆ ದಾರಿಯೇ ಇಲ್ಲವೆಂಬ ನಂಬಿಕೆಯೂ ಅರಿಮೆಯಲ್ಲವೆಂದು ಕಂಡುಕೊಂಡ ನುಡಿಯರಿಗರು ಸಾಮಾನ್ಯ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿರುವ ಎಲ್ಲರಕನ್ನಡವೇ ಹೊಸ ಪದಗಳ ಗಣಿಯೆಂದು ಗುರುತಿಸಿದ್ದಾರೆ. ಈ ಪದಗಳನ್ನು ಉಲಿಯಲು ಮತ್ತು ಕಲಿಯಲಷ್ಟೇ ಅಲ್ಲ, ಕಟ್ಟುವುದು ಕೂಡ ಸುಲಭವಾಗಿದೆ.

ಹಾಗೆಯೇ, ಕನ್ನಡದ ಇಂದಿನ ಲಿಪಿಯಿಂದ ತಲೆದೋರಿರುವ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಈ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸಿದರೆ ಬರಹವನ್ನು ಮಕ್ಕಳಿಗೆ ಕಲಿಸುವುದು ಸುಲಭವಾಗುತ್ತದೆಯೆಂದು ಅನೇಕ ನುಡಿಯರಿಗರು ತೀರ್ಮಾನಿಸಿದ್ದಾರೆ.

ನುಡಿಯರಿಮೆಯ ಕ್ಷೇತ್ರದಲ್ಲಿ ಈ ವೈಜ್ಞಾನಿಕ ಬದಲಾವಣೆಗಳಾಗುತ್ತಿದ್ದರೂ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು (ಶಿಕ್ಷಣವ್ಯವಸ್ಥೆ) ಇವುಗಳಿಂದ ಬಹಳ ದೂರವುಳಿದಿದೆ. ಹೀಗಾಗಿ, ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಾಗ, ವಿಜ್ಞಾನ-ತಂತ್ರಜ್ಞಾನಗಳ ಪದಗಳನ್ನು ಕಟ್ಟುವಾಗ, ಮತ್ತು ಬರಹವನ್ನು ಕಲಿಸುವಾಗ ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ರಚಿಸುವವರು ಇನ್ನೂ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು ತನ್ನ ಹರವು ಮತ್ತು ಗುಣಮಟ್ಟಗಳನ್ನು ಹೆಚ್ಚಿಸಿಕೊಳ್ಳಲು ಬಹಳ ತೊಂದರೆಯಾಗಿದೆಯೆಂಬುದು ಅನೇಕ ಕಲಿಕೆಯರಿಗರ (ಶಿಕ್ಷಣತಜ್ಞರ) ಮತ್ತು ನುಡಿಯರಿಗರ ಅನಿಸಿಕೆಯಾಗಿದೆ.

ನುಡಿಯರಿಮೆ ಮತ್ತು ಕಲಿಕೆಯೆಂಬೀ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಒಗ್ಗೂಡಿ ಈ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರೆ ಪರಿಸ್ಥಿತಿ ಬಹಳ ಸುಧಾರಿಸಬಲ್ಲುದು ಎಂದು ನಾವು ನಂಬಿದ್ದೇವೆ. ಆದ್ದರಿಂದ ಕಲಿಕೆಯರಿಗರು ಮತ್ತು ನುಡಿಯರಿಗರನ್ನು ಒಂದೇ ಸೂರಿನಡಿ ಸೇರಿಸುವುದೇ ಈ ಸಮ್ಮೇಳನದ ಅತಿಮುಖ್ಯವಾದ ಮತ್ತು ಮೊದಲನೆಯ ಉದ್ದೇಶವಾಗಿದೆ. ಹಾಗೆಯೇ ನುಡಿಯರಿಮೆಯ ಸಂಶೋಧನೆಗಳಿಂದ ಯಾವ ಯಾವ ಸತ್ಯಗಳು ಹೊರಬಂದಿವೆ, ಅವುಗಳಲ್ಲಿ ಯಾವ ಸತ್ಯಗಳನ್ನು ಯಾವಾಗ ಕಲಿಕೆಯೇರ್ಪಾಡಿನಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಾಗೆಯೇ, ಕಲಿಕೆಯೇರ್ಪಾಡಿನಲ್ಲಿ ಯಾವ ಬದಲಾವಣೆಗಳು ತುರ್ತಾಗಿ ಆಗಬೇಕು ಮತ್ತವುಗಳಲ್ಲಿ ನುಡಿಯರಿಗರ ಪಾತ್ರವೇನು ಎಂಬುದರ ಬಗ್ಗೆಯೂ ಚರ್ಚೆ ನಡೆಯಬೇಕಿದ್ದು. ಈ ಚರ್ಚೆಗಳ ಮೂಲಕ ನುಡಿಯರಿಗರು ಮತ್ತು ಕಲಿಕೆಯರಿಗರಿಬ್ಬರೂ ಯಾವ ಕೆಲಸಗಳನ್ನು ಆದ್ಯತೆಯಿಂದ ಮಾಡಬೇಕೆಂದು ಕೂಡ ಚರ್ಚೆಯಾಗಬೇಕಿದೆ. ಈ ಚರ್ಚೆಗಳು ನಡೆಯುವಂತೆ ಮಾಡುವುದು ಈ ಸಮ್ಮೇಳನದ ಎರಡನೆಯ ಉದ್ದೇಶವಾಗಿದೆ. ಈ ಚರ್ಚೆಗಳಿಗೆ ಬೀಜವಾಗಿ ನಾಲ್ಕು ಹಿರಿಯ ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದೇವೆ.

ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಉಪನ್ಯಾಸಕರು ಮತ್ತು ಪರಿಶೀಲಕರು:
ಉಪನ್ಯಾಸಕರು
 • ನಾಡೋಜ ಡಾ. ಡಿ. ಎನ್. ಶಂಕರಭಟ್, ನಿವೃತ್ತ ನುಡಿಯರಿಮೆಯ ಪ್ರೊಫೆಸರ್, ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ಕರ್ನಾಟಕ.
 • ಡಾ. ಎನ್. ಎಸ್. ರಘುನಾಥ್, ನಿವೃತ್ತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು, ಕರ್ನಾಟಕ.
 • ಡಾ. ಕೆ. ವಿ. ನಾರಾಯಣ, ನಿವೃತ್ತ ಕನ್ನಡದ ಪ್ರೊಫೆಸರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
 • ಡಾ. ಎಸ್. ಎನ್. ಶ್ರೀಧರ್, ಪ್ರೊಫೆಸರ್, ನುಡಿಯರಿಮೆ ವಿಭಾಗ, ಸ್ಟೋನಿ ಬ್ರುಕ್ ವಿಶ್ವವಿದ್ಯಾಲಯ, ನ್ಯೂಯಾರ್ಕ್, ಯು.ಎಸ್.ಎ.
ಪರಿಶೀಲಕರು
 • ಡಾ. ಬಿ. ಪಿ. ಹೇಮಾನಂದ, ಹಿರಿಯ ರಿಸರ್ಚ್ ಫೆಲೊ, ದ್ರಾವಿಡ ಮತ್ತು ಕಂಪ್ಯುಟೇಶನಲ್ ಭಾಷಾವಿಜ್ಞಾನ ವಿಭಾಗ, ದ್ರಾವಿಡ ವಿವಿ, ಕುಪ್ಪಂ, ಆಂಧ್ರಪ್ರದೇಶ.
 • ಶ್ರೀ ನಿರಂಜನ್ ಉಪ್ಪೂರ್, ನುಡಿಯರಿಮೆ ರಿಸರ್ಚ್ ಫೆಲೋ, ಐ‌ಐಟಿ ಕಾನ್ಪುರ್, ಉತ್ತರ ಪ್ರದೇಶ.
 • ಡಾ. ವಿ. ಬಿ. ತಾರಕೇಶ್ವರ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಅನುವಾದ ವಿಭಾಗ, ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
 • ಡಾ. ಪಾಂಡುರಂಗ ಬಾಬು, ನುಡಿಯರಿಮೆಯ ಪ್ರೊಫೆಸರ್, ಕನ್ನಡ ಭಾಷಾಧ್ಯಯನ ವಿಭಾಗ, ಹಂಪಿ ಕನ್ನಡ ವಿಶ್ವವಿದ್ಯಾಯಯ, ಹಂಪಿ, ಕರ್ನಾಟಕ.
 • ಶ್ರೀಮತಿ ಪಿ. ಭಾರತೀ ದೇವಿ, ಕನ್ನಡ ಲೆಕ್ಚರರ್, ಸರಕಾರಿ ಮಹಿಳೆಯರ ಪದವಿ ಕಾಲೇಜು, ಮಂಡ್ಯ, ಕರ್ನಾಟಕ.
 • ಡಾ. ಶಿವರಾಮ್ ಪಡಿಕ್ಕಲ್, ಪ್ರೊಫೆಸರ್, ಸಿ.ಎ.ಎಲ್.ಟಿ.ಎಸ್, ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
 • ಡಾ. ಸಿ. ಎಸ್. ರಾಮಚಂದ್ರ, ನುಡಿಯರಿಮೆಯ ಪ್ರೊಫೆಸರ್, ನುಡಿಯರಿಮೆ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೇಶಕರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ.
 • ಡಾ. ಪಿ. ಮಹದೇವಯ್ಯ, ನುಡಿಯರಿಮೆಯ ರೀಡರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
 • ಡಾ. ವಿಕ್ರಮ್ ವಿಸಾಜಿ, ಕನ್ನಡ ಲೆಕ್ಚರರ್, ಪದವಿಪೂರ್ವ ಕೇಂದ್ರ, ಗುಲಬರ್ಗ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ.
 • ಶ್ರೀ. ಸಿ. ಪಿ. ನಾಗರಾಜ್, ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥರು, ಕೆ. ಎಂ. ದೊಡ್ಡಿ, ಮಂಡ್ಯ, ಕರ್ನಾಟಕ.
 • ಡಾ. ಮಹಾಬಲೇಶ್ವರ ರಾವ್, ಪ್ರಾಂಶುಪಾಲರು, ಟಿ‌ಎಂಎ ಪೈ ಶಿಕ್ಷಣ ಕಾಲೇಜು, ಕುಂಜೆಬೆಟ್ಟು, ಉಡುಪಿ, ಕರ್ನಾಟಕ.
 • ಡಾ. ಡಿ. ಜಗನ್ನಾಥ ರಾವ್, ನಿವೃತ್ತ ನಿರ್ದೇಶಕರು, ಡಿ‌ಎಸ್‌ಇ‌ಆರ್‌ಟಿ, ಬೆಂಗಳೂರು.
 • ಶ್ರೀ ವಿ. ಪಿ. ನಿರಂಜನ ಆರಾಧ್ಯ, ರೀಡರ್, ನ್ಯಾಶನಲ್ ಲಾ ಕಾಲೇಜ್, ಬೆಂಗಳೂರು.
 • ಶ್ರೀ. ಎಸ್. ಸಂಪಂಗಿ, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
 • ಶ್ರೀ. ಟಿ. ಎಂ. ಕುಮಾರ್, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
ಈ ಸಮ್ಮೇಳನವನ್ನು ನಡೆಸಲು ಬಂಡಾರ ಪ್ರಕಾಶನ, ಮಸ್ಕಿ ಮತ್ತು ಆಂಧ್ರಪ್ರದೇಶದ ಕುಪ್ಪಂ-ನ ದ್ರಾವಿಡ ವಿಶ್ವವಿದ್ಯಾಲಯವು ನೆರವು ನೀಡಿದೆಯೆಂದು ನಿಮ್ಮೊಡನೆ ಹಂಚಿಕೊಳ್ಳಲು ಬನವಾಸಿ ಬಳಗ ಸಂತಸ ಪಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ: http://www.banavasibalaga.org/

ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ

7 ಅನಿಸಿಕೆಗಳು:

Anonymous ಅಂತಾರೆ...

ಬನವಾಸಿ ಬಳಗದವರಿಗೆ ಅಭಿನಂದನೆಗಳು. ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವ ಬಳಗದ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ.

-ಪ್ರಸಾದ್

ಮಹೇಶ್, Stockholm ಅಂತಾರೆ...

ಒಳ್ಳೇ ಕೆಲಸ.

ನಿಮ್ಮ ಕೆಲಸಕ್ಕೆ ಕನ್ನಡಿಗನಾಗಿ ನನ್ನ ಮೆಚ್ಚುಗೆ.

ನಿಮಗೆಲ್ಲ ಒಳ್ಳೇದಾಗಲಿ.

Anonymous ಅಂತಾರೆ...

ದಯವಿಟ್ಟು ಇಂತಹ ವಿಚಾರ ಸಂಕಿರಣಗಳಿಗೆ ನೋಡುಗರಾಗಿಯಾದರೂ ಸೇರಲು ಅವಕಾಶ ನೀಡಿ.
ಅಚ್ಚಕನ್ನಡದ ನುಡಿಗಟ್ಟು, ಬೆಳವಣಿಗೆ, ಸೊಲ್ಲರಿಮೆ ಇವುಗಳಿಗೆ ಶಂಕರಭಟ್ಟರ ವಿಚಾರಗಳನ್ನು
ಮತ್ತು ಅವರು ಇತರ ದಿಮ್ಮಿದಿರರೊಂದಿಗೆ (ನುಡಿಬಲ್ಲರ)ಅವರಾಡುವ ಮಾತುಕತೆಯ ಬಲ್ಮೆಯನ್ನರಿಯು ಮನಸಾಗಿದೆ.
ಬಾಯಾರಿದವನಿಗೆ ನೀರಿನ ಸೆಲೆದೊರೆತಂತೆ, ಇದ ಕೇಳಿ ಆಕಡೆಗೆ ಬಿಜಯಂಗೈಯಲು ಎನ್ನೊಲವೈದಿದೆ.
ನನ್ನ ತವಕ, ಇಂಗಿತವನ್ನರಿಯುವಿರೆಂದು ತಿಳಿಯುವೆ.

"ಸೊಗಯಿಪ ಜಾಣ್ಣುಡಿ ಅಚ್ಚಕನ್ನಡವು ಐಸಿರಿಯಿಂ ಬಿಜಯಿಸಲಿ"

- ವಿನಾಯಕ

ಕ್ಲಾನ್ಗೊರೌಸ್ ಅಂತಾರೆ...

ತುಂಬಾ ಸಂತಸದ ಸುದ್ದಿ ಗುರು, ಈ ಚರ್ಚೆಯನ್ನ ವೀಡಿಯೊ ರೆಕಾರ್ಡಿಂಗ್ ಮಾಡುಸ್ತಾ ಇದ್ದೀರಾ ?

ಪುಂಡ ಅಂತಾರೆ...

ಒಳ್ಳೇ ಕೆಲಸ ಗುರು. ಇಂತಹ ಚರ್ಚೆಗಳು ಜನ ಜಾಗೃತಿ ಮೂಡ್ಸುವಲ್ಲಿ ಮುಂದೆ ಯಶಸ್ವಿ ಆಗಲಿ ಅಂತ ಹಾರೈಸ್ತೇನೆ.

Kiran Batni ಅಂತಾರೆ...

ವಿನಾಯಕ,

ನಿಮ್ಮ ಸಲಹೆಗಾಗಿ ನನ್ನಿ. ಮುಂದಿನ ಬಾರಿ ಪ್ರಯತ್ನಿಸುತ್ತೇವೆ.

ಕ್ಲಾನ್ಗೋರೌಸ್,

ಮಾಡುಸ್ತಿದೀವಿ. ದಯ್ವಿಟ್ ಕಾಯ್ರಿ.

Vijay ಅಂತಾರೆ...

ನುಡಿಯರಿಗರನ್ನು ಮತ್ತು ಕಲಿಕೆಯರಿಗರನ್ನು ಒಗ್ಗೂಡಿಸುವ ನಿಮ್ಮ ಈ ಕೆಲಸ ಮೆಚ್ಚುವಂತಹದು. ನಿಮ್ಮ ಈ ಕಾರ್ಯಕ್ರಮ ಯಶ ಕಾಣಲೆಂದು ಹಾರೈಸುವೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails