ರಾಜಕೀಯ ಪಕ್ಷಗಳೇ! ಕೇಳ್ರಪ್ಪೋ ಕೇಳಿ.. ನಮಗೆ ಬೇಕಾದ್ದು ಇದು!

ಬರುವ ಮೇ ಐದರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಜನತಾದಳ, ಭಾರತೀಯ ಜನತಾಪಕ್ಷ, ಕರ್ನಾಟಕ ಜನತಾಪಕ್ಷ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಕಣದಲ್ಲಿವೆ. ಈ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಮಾಮೂಲಿನಂತೆ ಈ ಪ್ರಣಾಳಿಕೆಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಡುವ ಒಂದು ರೂಪಯಿ ಅಕ್ಕಿ, ಬಿಟ್ಟಿ ಕಂಪ್ಯೂಟರ್ ಮೊದಲಾದ ಕೊಡುಗೆಗಳ ಮಹಾಪೂರವೇ ಇದೆ. ನಿಜಕ್ಕೂ ಕರ್ನಾಟಕದ ಏಳಿಗೆಯ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಿಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಪಕ್ಷಗಳ ಪ್ರಣಾಳಿಕೆಯಲ್ಲಿ ಹೆಚ್ಚಾಗಿ ಅಗ್ಗದ ಜನಪ್ರಿಯತೆಯ ಯೋಜನೆಗಳನ್ನು ಬಿಟ್ಟರೆ ದೀರ್ಘಾವಧಿಯಲ್ಲಿ ಏನಾಗಬೇಕು ಎನ್ನುವ ಚಿಂತನೆಯೇ ಕಾಣದು. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಾಡು ಏನಾಗಬೇಕು? ನಾಡಿನ ಏಳಿಗೆಯ ನಾನಾ ಮೆಟ್ಟಿಲುಗಳಾವುವು? ಅವುಗಳನ್ನು ಹೇಗೆ ಈಡೇರಿಸುತ್ತೇವೆ? ಎಂಬುದರ ಬಗ್ಗೆ ಎಳ್ಳಷ್ಟೂ ಭರವಸೆಗಳಿಲ್ಲದಿರುವುದು ಕಾಣುತ್ತದೆ.

ನಾಡಿಗೆ ಬೇಕಿರುವುದು!

ಕನ್ನಡನಾಡಿನ ಏಳಿಗೆಗೆ ಆಗಬೇಕಾದ ಮಹತ್ವವಾದ ಅನೇಕ  ವಿಷಯಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ ನೋಡಿ.

ಕನ್ನಡಮಾಧ್ಯಮದಲ್ಲಿನ ಕಲಿಕೆಯನ್ನು ಜಗತ್ತಿನ ಅತ್ಯುತ್ತಮ  ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಏನೇನೆಲ್ಲಾ ಆಗಬೇಕೋ ಅದೆಲ್ಲವನ್ನೂ ಮಾಡಬೇಕು. ಯಾವ ಕಡ್ಡಾಯ ಮಾಧ್ಯಮ ಕಲಿಕೆಯೂ ಇಲ್ಲಿರುವುದಿಲ್ಲ. ಆದರೆ ಜನರಿಗೆ ತಾಯ್ನುಡಿ ಕಲಿಕೆಯ ಮಹತ್ವವನ್ನು ತಾವೇ ಕಣ್ಣಾರೆ ಕಾಣುವಂತಹ ದೂರದೃಷ್ಟಿಯನ್ನು ಹೊಂದಿರುವ ವ್ಯವಸ್ಥೆಯನ್ನು ಕಟ್ಟಬೇಕು. ಪ್ರಪಂಚದ ಎಲ್ಲಾ ಬಗೆಯ ಜ್ಞಾನ ವಿಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸವನ್ನು ಶುರುಮಾಡಬೇಕು. ಇದಕ್ಕೆ ಬೇಕಾದ ಗಡುವಿನೊಳಗೆ ಪೂರೈಸುವ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಹೊಂದಿಸುವುದು.

ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇಲ್ಲಿನ ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲೂ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯ. ಈ ನೆಲದಲ್ಲಿ ನೆಲೆಗೊಳ್ಳುವ ಯಾವುದೇ ಸಾರ್ವಜನಿಕ ಬಳಕೆಯ/ ಉಪಯುಕ್ತತೆಯ ಉದ್ದೇಶದ ಸಂಸ್ಥೆಗಳು ಕನ್ನಡದಲ್ಲಿ ವ್ಯವಹರಿಸತಕ್ಕದ್ದು.

ಈ ನಾಡಿಗಾಗಿ ಸಮಗ್ರವಾದ ನೀರಾವರಿ ಯೋಜನೆಗಳನ್ನು ರೂಪಿಸಿ ಗೊತ್ತುಮಾಡಿದ ಕಾಲಮಿತಿಯೊಳಗೆ ಜಾರಿಮಾಡತಕ್ಕದ್ದು. ರಾಜ್ಯದ ಒಳಗಿನ ಎಲ್ಲಾ ನದಿಗಳ ನೀರನ್ನು ಸದುಪಯೋಗ ಮಾಡಿಕೊಳ್ಳಲು, ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರತಿಯೊಂದು ನೀರಹನಿಯನ್ನೂ ವ್ಯರ್ಥವಾಗದಂತೆ ಸಂಗ್ರಹಿಸುವ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡುವುದು. ವ್ಯವಸಾಯ, ಕೈಗಾರಿಕೆ, ಉದ್ದಿಮೆಗಾರಿಕೆಯೇ ಮೊದಲಾದ ದುಡಿಮೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಗತ್ತಿನ ಉತ್ಕೃಷ್ಟ ಕಾರ್ಯವಿಧಾನಕ್ಕೆ ಸಾಟಿಯಾಗಬಲ್ಲ ತರಬೇತಿ, ಸಂಶೋಧನೆಯಂತಹ ಮೂಲಭೂತ ಕೆಲಸಗಳು ನಡೆಯಲು ಏರ್ಪಾಟು ಮಾಡುವುದು.

ನಾಡಿನ ಒಳಗಿನ ಪ್ರತಿನಗರಗಳ ನಡುವಿನ ರಸ್ತೆ ರೈಲು ವಿಮಾನ ಸಂಪರ್ಕಗಳನ್ನು ಅತ್ಯುತ್ತಮಗೊಳಿಸುವುದು. ಎಲ್ಲಾ ರಸ್ತೆಗಳನ್ನೂ ಆರ್ಥಿಕ ಬೆಳವಣಿಗೆಗೆ ಹೆದ್ದಾರಿಗಳಂತೆ ರೂಪಿಸುವುದು. ಇಡೀ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹುಟ್ಟಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜಿಸುವ ನೀತಿಯನ್ನು ರೂಪಿಸತಕ್ಕದ್ದು. ಯಾವುದೇ ಕಲಿಕೆಯನ್ನು ಮಾಡಿದವನಿಗೂ ತನ್ನ ಜಿಲ್ಲೆಯ ವ್ಯಾಪ್ತಿಯೊಳಗೇ ಅದಕ್ಕೆ ತಕ್ಕಂತಹ ಉದ್ಯೋಗಾವಕಾಶ ಇರುವಂತಹ ವ್ಯವಸ್ಥೆಯನ್ನು ಕಟ್ಟುವುದು. ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸುವುದು.

ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಅನುವಾಗುವಂತೆ ನಾನಾ ಯೋಜನೆಗಳನ್ನು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇಡೀ ರಾಜ್ಯಕ್ಕೆ ಸದಾಕಾಲ ಗುಣಮಟ್ಟದ ವಿದ್ಯುತ್ ಪೂರೈಸಲು ಬೇಕಾದ ಯೋಜನೆಗಳನ್ನು ರೂಪಿಸುವತ್ತಾ ದಾಪುಗಾಲಿಡುವುದು.

ಕೇಂದ್ರವು "ಭಾರತದ ದೇಶದ ಇಂದಿನ ಹುಳುಕಿನ ಭಾಷಾನೀತಿಯನ್ನು ಕೈಬಿಡತಕ್ಕದ್ದು. ಭಾರತದ ಆಡಳಿತ ಭಾಷೆಯಾಗಿ ಕನ್ನಡವನ್ನೂ ಪರಿಗಣಿಸತಕ್ಕದ್ದು. ಕನ್ನಡನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯತಕ್ಕದ್ದು. ಅಂತರರಾಜ್ಯ ವಲಸೆ ನಿಯಂತ್ರಣಕ್ಕೆ ಬಿಗಿನೀತಿಯನ್ನು ರೂಪಿಸತಕ್ಕದ್ದು" ಎಂಬ ನಿಟ್ಟಿನಲ್ಲಿ ಒತ್ತಾಯಿಸತಕ್ಕದ್ದು.

ಆರ್ಥಿಕ ಮತ್ತು ರಾಜಕೀಯ ಅಧಿಕಾರಗಳ ವಿಕೇಂದ್ರಿಕರಣಕ್ಕಾಗಿ ಕೇಂದ್ರವನ್ನು ಒತ್ತಾಯಿಸುವುದು. ಆಡಳಿತ ಪಟ್ಟಿಯನ್ನು ಮರು ರೂಪಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರಗಳನ್ನು ದಕ್ಕಿಸಿಕೊಳ್ಳುವುದು.

ಕರ್ನಾಟಕದಲ್ಲಿ ಭಾರತ ಸರ್ಕಾರ ಪ್ರಣೀತ ಕುಟುಂಬ ಯೋಜನೆಗೆ ವಿದಾಯ ಹೇಳತಕ್ಕದ್ದು. ನಮ್ಮ ನಾಡಿನ ಜನಸಂಖ್ಯೆ, ಜನದಟ್ಟಣೆ ಮತ್ತು ಹೆರುವೆಣಿಕೆಗಳನ್ನು (Target TFR) ನಾವೇ ತೀರ್ಮಾನಿಸತಕ್ಕದ್ದು.

ಕೊನೆಹನಿ: ಇವಿಷ್ಟನ್ನು ಮಾತ್ರವೇ ನಾವು ಜನಪರ ಎನ್ನುತ್ತಿಲ್ಲಾ. ಅಗ್ಗದ ಜನಪ್ರಿಯ ಯೋಜನೆಗಳನ್ನು ಒಮ್ಮೆಗೇ ಕೈಬಿಟ್ಟುಬಿಡಬೇಕು ಎನ್ನುತ್ತಿಲ್ಲಾ. ಭ್ರಷ್ಟಾಚಾರ ನಿಯಂತ್ರಣ ಮತ್ತು ಉತ್ತಮ ಆಡಳಿತಗಳ ಅಗತ್ಯವಿಲ್ಲಾ ಎನ್ನುತ್ತಿಲ್ಲಾ. ಅವೆಲ್ಲಾ ಬೇಕು. ಜೊತೆಯಲ್ಲಿ ದೀರ್ಘಾವಧಿ ಮತ್ತು ಶಾಶ್ವತವಾಗುವಂತಹ ಯೋಜನೆಗಳನ್ನು ರೂಪಿಸುವತ್ತ ನಮ್ಮ ರಾಜಕೀಯ ಪಕ್ಷಗಳು ಯೋಚಿಸಲಿ ಎನ್ನುತ್ತಿದ್ದೇವೆ.. ಇಂಥದ್ದೊಂದು ನಮ್ಮ ನಾಡಿಗೆ ಬೇಕು ಎನ್ನುವುದನ್ನು ಮತದಾರರು ಬಯಸುತ್ತಿದ್ದಾರೆ ಎಂದು ಹೇಳುತ್ತಿದ್ದೇವೆ...ಅಷ್ಟೇ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails