ಸಣ್ಣರಾಜ್ಯವಾಗೋದೆಂದರೆ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತೆ!

(ಫೋಟೋಕೃಪೆ: ಪ್ರಜಾವಾಣಿ)
"ಆಂಧ್ರಪ್ರದೇಶವನ್ನು ಒಡೆದು ತೆಲಂಗಣಾ ರಾಜ್ಯ ರಚನೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣೀ ಒಪ್ಪಿದೆ. ಈ ತೀರ್ಮಾನವನ್ನು ಪಕ್ಷದ ಹೈಕಮಾಂಡಿಗೆ ಬಿಡಲಾಗಿತ್ತು. ಇನ್ನೇನು ರಾಜ್ಯರಚನೆ ಘೋಷಣೆಯಾಗಲಿದೆ" ಎನ್ನುವ ಸುದ್ದಿ ಇಂದಿನ (೨೭.೦೭.೨೦೧೩)ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅರೆರೆ... ಈ ಸುದ್ದಿ ಮುದ್ರಣ ಮಾಡಿದವರು ತಪ್ಪಾಗಿ ಮಾಡಿದ್ದಾರೆ, ಕೇಂದ್ರಸರ್ಕಾರ/ ಸಂಸತ್ತು ಒಪ್ಪಿದೆ ಅಂತಾ ಬರೆಯೋಕೆ ಕಾಂಗ್ರೆಸ್ ಪಕ್ಷ ಒಪ್ಪಿದೆ ಅಂತಾ ಬರ್ದಿದಾರೆ ಎಂದುಕೊಂಡು ಬೇರೆ ಬೇರೆ ಪತ್ರಿಕೆ ಓದಿದರೆ ಎಲ್ಲದರಲ್ಲೂ ಇದು ಹೀಗೇ ಇದೆ! ಇದನ್ನು ಓದಿದವರಿಗೆ ರಾಜ್ಯಗಳನ್ನು ಒಡೆಯೋ ಕೆಲಸ ಪಕ್ಕಾ ರಾಜಕೀಯದ್ದು ಎನ್ನಿಸಿದರೆ ತಪ್ಪೇನಿಲ್ಲಾ ಗುರೂ!

ತೆಲಂಗಣಾ ರಾಜಕೀಯ ಲೆಕ್ಕಾಚಾರ!

ತೆಲಂಗಣಾ ರಾಜ್ಯವೂ ಸೇರಿದಂತೆ ಹೊಸ ರಾಜ್ಯಗಳ ಬೇಡಿಕೆ ಇಂದು ನಿನ್ನೆಯದಲ್ಲಾ! ಇತ್ತೀಚಿನ ವರ್ಷಗಳಲ್ಲಿ ತೆಲಂಗಣಾ ಹೋರಾಟ ಮಾಡಿದಷ್ಟು ಸದ್ದು ಇನ್ಯಾವುದೂ ಮಾಡಿಲ್ಲ. ತೆಲಂಗಣಾ ರಾಷ್ಟ್ರಸಮಿತಿಯ ಚಂದ್ರಶೇಖರ್ ಅವರು ಅಮರಣಾಂತ ಉಪವಾಸ ಕುಳಿತದ್ದೂ, ಕೇಂದ್ರ ಗೃಹಮಂತ್ರಿಗಳಾಗಿದ್ದ ಚಿದಂಬರಂರವರು ರಾಜ್ಯ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡುವ ಭರವಸೆ ನೀಡಿ ಉಪವಾಸ ಕೈಬಿಡುವಂತೆ ಮಾಡಿದ್ದೂ ಹಿಂದಾಗಿದೆ. ಇದೀಗ ೨೦೧೪ರ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹೊಸ ರಾಜ್ಯವನ್ನು ಕಾಂಗ್ರೆಸ್ ಮುಂದಾಳ್ತನದ ಕೇಂದ್ರಸರ್ಕಾರ ಘೋಷಿಸಿಯೇ ಬಿಡುತ್ತದೆ ಎನ್ನುವ ವಾತಾವರಣ ಇದೆ. ೨೦೧೪ರ ಚುನಾವಣೆಗೆ ಮುನ್ನ ತೆಲಂಗಣಾ ರಾಜ್ಯ ಘೋಷಿಸಿದರೆ ಎಷ್ಟು ಲಾಭ/ ನಷ್ಟವಾದೀತು ಎಂಬ ಲೆಕ್ಕವನ್ನು ಕಾಂಗ್ರೆಸ್ ಮಾಡುತ್ತಿದ್ದರೆ ಈಗ ತೆಲಂಗಣಾ ಪರವಾಗಿರುವಂತೆ ತೋರಿಸಿಕೊಳ್ಳುತ್ತಿರುವ ಬಿಜೆಪಿ, ತೆಲಂಗಣಾ ರಚನೆಯಾಗದಿದ್ದರೆ... ನಾವು ಮಾಡ್ತೀವಿ ಎಂಬ ಭರವಸೆ ಕೊಟ್ಟು ಆ ಪ್ರದೇಶದಲ್ಲಿ ಎಷ್ಟು ಲೋಕಸಭೆಯ ಸೀಟುಗಳನ್ನು ಗಳಿಸಿಗೊಳ್ಳಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದೆ. ಇಲ್ಲಿ ಈ ಎರಡೂ ರಾಜಕೀಯ ಪಕ್ಷಗಳು ತೆಲಂಗಣಾ ಜನರ ಹಿತ ಕಾಪಾಡುವ ಮಾತುಗಳನ್ನೇ ಆಡುತ್ತಿದ್ದರೂ ಆಳದಲ್ಲಿ ಇರುವುದು ಮುಂದಿನ ಲೋಕಸಭೆಯಲ್ಲಿ ಅಧಿಕಾರ ಹಿಡಿಯಬೇಕೆನ್ನುವ ತಂತ್ರವೇ ಆಗಿದೆ!

ಇನ್ನಷ್ಟು ಬೇಡಿಕೆಗಳು

ಇದಕ್ಕೆ ಒತ್ತು ನೀಡುವಂತೆ "ಹೊಸರಾಜ್ಯಗಳಿಗಾಗಿ ಒಕ್ಕೂಟ"ದ (Federation for new states) ಹೆಸರಲ್ಲಿ ಈಗಿರುವ ರಾಜ್ಯದಿಂದ ಬೇರೆಯಾಗಿ ತಮ್ಮದೇ ರಾಜ್ಯ ಕಟ್ಟಿಕೊಳ್ಳಲು ಬೇಡಿಕೆ ಇಟ್ಟಿರುವ ಕೆಲಪ್ರದೇಶಗಳ ನಾಯಕರು ದಿಗ್ವಿಜಯಸಿಂಗ್ ಅವರನ್ನು ಭೇಟಿಯಾಗಿ ಕೊಂಚ ಬೆದರಿಕೆ ಕೊಂಚ ಬೇಡಿಕೆ ಇಟ್ಟುಬಂದಿದ್ದಾರೆ ಎನ್ನುವ ಸುದ್ದಿ ಬಂದಿದೆ. ಗೂರ್ಖಾಲ್ಯಾಂಡ್, ಉತ್ತರಪ್ರದೇಶದ ನಾಲ್ಕು, ವಿದರ್ಭ ಮೊದಲಾದ ಹಳೆಯ ಬೇಡಿಕೆಗಳಿಗೆ ಹೊಸದನಿ ಬಂದಂತಾಗಿದೆ. ಒಂದು ಲೆಕ್ಕದಲ್ಲಿ ಈಗ ಎಲ್ಲೆಡೆಯಿಂದ ಎದ್ದಿರುವ "ತೆಲಂಗಣಾ ರಚಿಸಿದರೆ ನಾವೂ ಕ್ರಾಂತಿಯ ಹೋರಾಟಕ್ಕಿಳಿಯುತ್ತೇವೆ" ಎಂಬ ಕೂಗೂ ಕೂಡಾ ಎದ್ದಿದ್ದು ಇದು ಹೊಸದಾದ ರಾಜ್ಯ ಪುನರ್ವಿಂಗಡನಾ ಆಯೋಗವೊಂದರ ರಚನೆಗೆ ಕಾರಣವಾಗಲೂಬಹುದು! ಇದೇನೆ ಇದ್ದರೂ ಸಣ್ಣರಾಜ್ಯಗಳ ರಚನೆಗೆ ಇರುವ ಉದ್ದೇಶವೇ ಬೇರೆಯಾದುದಾಗಿದೆ. ಅಪಾಯದ ವಿಷಯವೆಂದರೆ ದೆಹಲಿಯ ಸಂಸತ್ತು ಒಂದು ರಾಜ್ಯದ ವಿಧಾನಸಭೆಯ ಮುಂದೆ ಈ ವಿಷಯವೇ ಹೋಗದಂತೆ ಮಾಡಿ, ತಾನೇ ತಾನಾಗಿ ಆ ರಾಜ್ಯವನ್ನು ಒಡೆಯಬಹುದು ಎಂಬುದಾಗಿದೆ.

ಸಣ್ಣ ರಾಜ್ಯ ಬೇಕೆನ್ನುವುದರ ಹಿಂದೆ...


ಕೆಲದಿನಗಳ ಹಿಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಉತ್ತರ ಕರ್ನಾಟಕವನ್ನು ಬೇರೆ ರಾಜ್ಯ ಮಾಡಿದರೆ, ತಾವೋ ತಮ್ಮ ಮಗನೋ ಮುಖ್ಯಮಂತ್ರಿಯಾಗುತ್ತೇವೆ ಎಂಬರ್ಥದಲ್ಲಿ ಮಾತಾಡಿದ್ದರು. ಭಾಷಾಧಾರಿತ ರಾಜ್ಯಗಳನ್ನು ರಚಿಸಿದ ನಂತರ ಇಂತಹ ರಾಜ್ಯಗಳ ಭಾಗವಾಗಿದ್ದ ಕೆಲಪ್ರದೇಶಗಳಲ್ಲಿ ತಾವು ಬೇರೆಯೇ ರಾಜ್ಯವಾಗಬೇಕೆಂಬ ಬೇಡಿಕೆಯಾಯಿತು. ಮೊದಲಲ್ಲಿ ಇದಕ್ಕಾಗಿ ‘ತಮ್ಮ ಸಂಸ್ಕೃತಿ, ಉಡುಗೆ ತೊಡುಗೆ, ನಡೆನುಡಿಗಳು ಅನನ್ಯವಾಗಿದ್ದು ಇವು ಈಗಿರುವ ರಾಜ್ಯಕ್ಕಿಂತ ಬೇರೆಯೇ ಆಗಿದೆ’ ಎಂಬ ದನಿಯನ್ನು ಎತ್ತಲಾಯಿತು. ಮುಂದೆ ಈ ಕೂಗು ‘ಅಸಮಾನತೆ, ಆರ್ಥಿಕ ಬೆಳವಣಿಗೆ, ತಾರತಮ್ಯ ಮುಂತಾದ ಕಾರಣಗಳಾಗಿ’ ಬದಲಾಯ್ತು. ಇದಕ್ಕೆ ಪೂರಕವಾಗಿ "ಭಾರತೀಯತೆ ಎಂಬ ಗುರುತನ್ನು ಬಿಟ್ಟು ಇನ್ನೆಲ್ಲಾ ಗುರುತುಗಳೂ ಬಲಹೀನವಾಗುವುದು ಭಾರತದ ಒಗ್ಗಟ್ಟಿಗೆ ಸಾಧನ" ಎಂದು ನಂಬಿರುವಂತೆ ತೋರುವ ಬಿಜೆಪಿಯು ಹಿಂದಿನಿಂದಲೂ ಸಣ್ಣರಾಜ್ಯಗಳ ಪರವಾಗಿರುವುದಷ್ಟೇ ಅಲ್ಲದೆ ಭಾಷಾವಾರು ರಾಜ್ಯರಚನೆಯ ವಿರೋಧಿಯೂ ಆಗಿದ್ದು ಈ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂತು. "ಆಡಳಿತದ ದೃಷ್ಟಿಯಿಂದ ಸಣ್ಣರಾಜ್ಯಗಳು ಪರಿಣಾಮಕಾರಿ" ಎಂಬ ನಶೆಯ ಮದ್ದು ಇಂತಹ ಕೂಗಿಗೆ ಬಲತಂದಿತು. ಆದರೆ ಭಾರತದಲ್ಲಿ ಸಣ್ಣ ರಾಜ್ಯಗಳನ್ನು ರಚಿಸುವುದರ ಹಿಂದಿರುವ ಉದ್ದೇಶ ರಾಜ್ಯಗಳ ಉದ್ಧಾರವಂತೂ ಅಲ್ಲಾ! ಇಲ್ಲದಿದ್ದರೆ ಈಗಾಗಲೇ ಚಿಕ್ಕದಾಗಿರುವ ಗೋವಾ, ಜಾರ್ಖಂಡ್, ಚತ್ತೀಸಗಡಗಳಂತಹ ರಾಜ್ಯಗಳು ಉದ್ಧಾರವಾಗಿಬಿಡಬೇಕಾಗಿತ್ತು. ವಾಸ್ತವವಾಗಿ ದೊಡ್ಡರಾಜ್ಯಗಳು ಕೇಂದ್ರಸರ್ಕಾರದ ಮೇಲೆ ಹೊಂದಿರುವ ಹಿಡಿತವನ್ನು ಕಡಿಮೆ ಮಾಡಬೇಕೆನ್ನುವುದೇ ಸಣ್ಣ ರಾಜ್ಯಗಳನ್ನು ರಚಿಸಬೇಕೆಂಬ ಕೇಂದ್ರದ (ವಾಸ್ತವವಾಗಿ ರಾಷ್ಟ್ರೀಯ ಪಕ್ಷಗಳ) ಆಶಯದ ಹಿಂದಿರುವುದು ಎನ್ನಿಸುತ್ತದೆ.

ಸಣ್ಣರಾಜ್ಯ ಪರಿಣಾಮಕಾರಿ ಆಗಬೇಕೆಂದರೆ...

ಡಾ. ಬಿ ಆರ್ ಅಂಬೇಡ್ಕರ್ ಅವರು ಭಾಷಾವಾರು ರಾಜ್ಯರಚನೆಯ ಬಗ್ಗೆ ಮಾತಾಡುತ್ತಾ ಒಂದು ಭಾಷೆಯ ಹಲವು ರಾಜ್ಯಗಳು ಇದ್ದರೂ ಪರವಾಗಿಲ್ಲ, ಒಂದು ರಾಜ್ಯದಲ್ಲಿ ಹಲವು ಭಾಷೆಗಳಿರುವುದು ಸಮಸ್ಯಾತ್ಮಕ ಎಂದಿದ್ದರಂತೆ. ವಾಸ್ತವವಾಗಿ ಕನ್ನಡವಾಡುವ ಮೂರೋ, ಮರಾಟಿಯಾಡುವ ಎರಡೋ, ತೆಲುಗನ್ನಾಡುವ ಮೂರೋ ರಾಜ್ಯಗಳಾಗುವುದು ಅಂಥಾ ಸಮಸ್ಯೆಯೇನಲ್ಲಾ! ಸಮಸ್ಯೆಯಿರುವುದು ಭಾರತ ಮತ್ತು ಅಂತಹ ಪುಟ್ಟರಾಜ್ಯಗಳ ನಡುವಿನ ಸಂಬಂಧದಲ್ಲಿ. ಪುಟ್ಟ ರಾಜ್ಯವೊಂದು ಜನಸಂಖ್ಯೆಯ ಆಧಾರದ ಮೇರೆಗೆ ತನಗೆ ಹಂಚಿಕೆಯಾದ ಸಂಸದರ ಸಂಖ್ಯೆಯನ್ನು ಬಳಸಿಕೊಂಡೇ ಕೇಂದ್ರದಲ್ಲಿ ಲಾಬಿ ಮಾಡಿ ತನ್ನ ಹಿತ ಕಾಪಾಡಿಕೊಳ್ಳಬೇಕೆಂಬ ಪರಿಸ್ಥಿತಿಯಲ್ಲಿ! ಭಾರತವು ರಾಜ್ಯಗಳ ಸಮಾನ ಪ್ರಾತಿನಿಧಿತ್ವ ಮತ್ತು ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಾಗುವುದಾದಲ್ಲಿ ಸಣ್ಣ ರಾಜ್ಯಗಳು ಉಪಯೋಗಕರವಾದರೂ ಆಗಬಹುದು. ಇಂದಿನ ಸ್ಥಿತಿಯಲ್ಲಿ ರಾಜ್ಯವೊಂದು ಒಡೆದು ಹೋಗುವುದು ಎಂದರೆ ಕೇಂದ್ರದ ಮೇಲೆ ತನಗಿರುವ ಅಷ್ಟೋ ಇಷ್ಟೋ ಹಿಡಿತವನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ಹಾಗಾಗೇ ಆಂಧ್ರವನ್ನು ಒಡೆಯಲು ಉತ್ಸಾಹ ತೋರುವ ದೊಡ್ಡರಾಜ್ಯದ ರಾಜಕಾರಣಿಗಳು ಇದೇ ಮಾತನ್ನು ತಮ್ಮ ರಾಜ್ಯದ ಬಗ್ಗೆ ಆಡಲಾರರು. ತೆಲಂಗಣಾ ಪರವಾದ ಬಿಜೆಪಿಯ ನರೇಂದ್ರಮೋದಿಯವರು ಗುಜರಾತನ್ನು ಮೂರು ರಾಜ್ಯ ಮಾಡಲು ಒಪ್ಪುವರೇ ಎಂಬುದು ಕುತೂಹಲಕಾರಿ. ಉತ್ತರ ಪ್ರದೇಶ, ಬಿಹಾರದ ರಾಜಕಾರಣಿಗಳಲ್ಲಿ ಕೆಲವರು ಸಂಸತ್ತಿನಲ್ಲಿ ತೆಲಂಗಣಾ ಪರವಾಗಿ ಮಾತಾಡಲು ಮುಂದಾಗುವಷ್ಟೇ ಉತ್ಸಾಹವನ್ನು ಮಾಯಾವತಿಯವರ ನಾಲ್ಕು ರಾಜ್ಯ ಮಾಡುವ ಪ್ರಸ್ತಾಪ ಕಂಡು ಬೆಚ್ಚಿ ಬೀಳುತ್ತಾರೆ ಎಂಬುದು ವಾಸ್ತವ. ಚಿಕ್ಕರಾಜ್ಯ ಆಡಳಿತಕ್ಕೆ ಒಳ್ಳೆಯದು ಎನ್ನುತ್ತಾ ಆಂಧ್ರವನ್ನು ಒಡೆಯಲು ಮುಂದಾಗುವ ಬಿಜೆಪಿ, ದೊಡ್ಡ ಉತ್ತರಪ್ರದೇಶವನ್ನು ಒಡೆಯುವುದನ್ನು ವಿರೋಧಿಸುವುದು ಯಾಕೆ ಎಂಬುದನ್ನು ಅರಿತರೆ ಇದರ ಹಿಂದಿನ ಹುನ್ನಾರ ತಿಳಿಯುತ್ತದೆ!

ಕೊನೆಹನಿ ೧:ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿಯದ ತೆಲಂಗಣಾ, ವಿದರ್ಭದಂತಹ ಪ್ರದೇಶಗಳ ಮಂದಿ "ನಾನು ಈಗಿರುವ ರಾಜ್ಯದಲ್ಲಿ ಎದುರಿಸುತ್ತಿರುವ ನನ್ನ ಸಮಸ್ಯೆಗೆ ಪರಿಹಾರ... ಪ್ರತ್ಯೇಕವಾಗುವುದು" ಎಂದುಕೊಂಡಿದ್ದಾರೆ. ಆದರೆ ಇವರನ್ನು ಬೆಂಬಲಿಸುತ್ತಿರುವ ಕೇಂದ್ರದ ಮಂದಿ "ಒಗ್ಗಟ್ಟಿನಲ್ಲಿ ತೊಡಕಿದೆ" ಅಂದರೆ "ಇವರ ಒಗ್ಗಟ್ಟಿನಲ್ಲಿ ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕೆ ತೊಡಕಿದೆ" ಎಂಬುದಾಗಿ ಭಾವಿಸಿ ಇದನ್ನು ಮುರಿಯಲು ಸಂಚು ಮಾಡುತ್ತಲೇ ಇರುತ್ತಾರೆ. ಅದೇ ಇಂದಿನ ಸಣ್ಣರಾಜ್ಯಗಳ ರಚನೆಗೆ ಮೂಲಕಾರಣ ಎನ್ನಬಹುದು.

ಕೊನೆಹನಿ ೨: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವುದನ್ನು ಬದಲಿಸಿ ತೆಲಂಗಣಾ, ರಾಯಲಸೀಮ ಮತ್ತು ಆಂಧ್ರದವರ ಮನೆಯೊಡಕಿನ ಲಾಭ ಕೇಂದ್ರಕ್ಕೆ ಎನ್ನಬಹುದು! ತೆಲಂಗಣಾ ಮತ್ತು ಆಂಧ್ರದವರಿಗೆ ರಾಜ್ಯ ಪಾಲುಮಾಡಿಕೊಟ್ಟ ಕೇಂದ್ರಕ್ಕೆ ಹೈದರಾಬಾದ್ ಲಾಭ ಎನ್ನಬಹುದು. ಯಾಕೆಂದರೆ ಹೈದರಾಬಾದ್ ಇನ್ಮೇಲೆ ಕೇಂದ್ರಾಡಳಿತ ಪ್ರದೇಶವಾಗುತ್ತದೆಯಂತೆ!

2 ಅನಿಸಿಕೆಗಳು:

sureshakantha borkar ಅಂತಾರೆ...

ಖಂಡಿತಾ ನಿಮ್ಮ ಆಲೋಚನೆ ವಾಸ್ತವವನ್ನು ಒಳಗೊಂಡಿದೆ. ಸರಿ ದಾರಿಯನ್ನು ಹುಡುಕುವವರು ಹತ್ತು ಮಂದಿ ಇದ್ದರೆ, ತಪ್ಪು ದಾರಿಯನ್ನು ಹುಡುಕುವವರು ನೂರು ಮಂದಿ ಇರುತ್ತಾರೆ. ಕೊನೆಗೆ ತಪ್ಪು ದಾರಿಯನ್ನೇ ಸರಿ ದಾರಿ ಮಾಡಿಬಿಡುತ್ತಾರೆ. ಅಂದರೆ ನಿಮ್ಮ ನಮ್ಮಂತೆ ಆಲೋಚನೆ ಮಾಡುವವರು ಕಡಿಮೆ ಮಂದಿ, ಆದರೆ ಈಗ ನಡೆಯುತ್ತಿರುವುದು ಸರಿ ಎನ್ನುವವರು ಬಹಳ ಮಂದಿ. ಇದುವರೆಗೂ ಹೀಗೇ ನಡೆದುಕೊಂಡು ಬಂದಿರುವುದು. ಹಾಗಂತ ನಾವು ಸುಮ್ಮನೆ ಕೂರುವುದು ಸರಿಯಲ್ಲ ಎಂಬುದನ್ನು ನೀವು ಮಾಡಿದ್ದೀರಿ, ಇನ್ನೂ ಹಲವರು ಮಾಡುತ್ತಿದ್ದಾರೆ. ಉತ್ತಮ ಕೆಲಸ ಮುಂದುವರೆಯಲಿ... ಸುರೇಶ್ ಕಾಂತ ಬಿ

Anonymous ಅಂತಾರೆ...

ನೀವು ಹಾಗಿರುವ ಎರಡನೇ ಚಿತ್ರಕ್ಕೆ ಏನು ಆಧಾರ?

ಸಣ್ಣ ರಾಜ್ಯಗಳು ಬೇಡ ಎನ್ನುವ ನೀವು, ಆ ಚಿತ್ರದಂತಹ ವಿಚಾರಕ್ಕೆ ಪ್ರಚಾರವನ್ನು ಕೊಡಬೇಡಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails