ಗ್ರಾಹಕ ಹಕ್ಕಿಗಾಗಿ ನೀವೂ ದನಿಗೂಡಿಸಿ!ಪ್ರತಿವರ್ಷ ಮಾರ್ಚ್ ತಿಂಗಳ ೧೫ನೇ ದಿನವನ್ನು ವಿಶ್ವ ಗ್ರಾಹಕಹಕ್ಕು ದಿನವಾಗಿ ಆಚರಿಸಲಾಗುತ್ತದೆ. ೧೯೬೨ರ ಇದೇ ದಿನ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಜಾನ್ ಎಫ಼್ ಕೆನಡಿಯವರು ಮಾಡಿದ ಭಾಷಣದ ನೆನಪಿಗಾಗಿ ಈ ದಿನವನ್ನು ಹೀಗೆ ಆಚರಿಸಲಾಗುತ್ತದೆ. ಭಾರತದಲ್ಲೂ ಕೂಡಾ ಹೀಗೆ ಎಲ್ಲೆಡೆ ಗ್ರಾಹಕರ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಮಾಶೆಯೆಂದರೆ ಗ್ರಾಹಕಹಕ್ಕು ರಕ್ಷಣೆಯ ಬಗ್ಗೆ ಮೂಡಿಸುವ ಜಾಗೃತಿಯ ಈ ಕಾರ್ಯದಲ್ಲಿ ಗ್ರಾಹಕರ ನುಡಿಯನ್ನು ಬಳಸಬೇಕೆನ್ನುವ ಆಯಾಮವನ್ನೇ ಕೈಬಿಟ್ಟು ಬರೀ ಉತ್ಪನ್ನಗಳ ತೂಕ, ಗುಣಮಟ್ಟ, ಅಳತೆಗಳ ಬಗ್ಗೆ ಇರುವ ಹಕ್ಕುಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ನಿಜವಾಗಿ ಗ್ರಾಹಕರ ಹಕ್ಕುಗಳನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಇರುವ ಸಾಧನಗಳಲ್ಲಿ ಗ್ರಾಹಕನ ನುಡಿಯ ಬಳಕೆ ಮುಖ್ಯವಾದದ್ದು. ಈ ಬಗ್ಗೆ ಕನ್ನಡಿಗರಲ್ಲಿ ಎಚ್ಚರ ಮೂಡಿಸುವ ಕನ್ನಡ ಗ್ರಾಹಕರ ಕೂಟದ ಒಂದು ಪ್ರಯತ್ನ ಇಲ್ಲಿದೆ.


ಸಾಮಾನ್ಯವಾಗಿ ಗ್ರಾಹಕನ ಹಕ್ಕು ಎಂದಾಗ ತೂಕ, ಅಳತೆ, ಗುಣಮಟ್ಟಗಳ ಸುತ್ತ ವಿಷಯಗಳು ಚರ್ಚಿಸಲ್ಪಡುತ್ತವೆ. ಈ ವಿಷಯಗಳು ನಿಜಕ್ಕೂ ಮುಖ್ಯವಾದವಾಗಿದ್ದರೂ ಸಹ, ಈ ವಿಷಯಗಳು ಜನರಿಗೆ ಯಾವ ಭಾಷೆಯಲ್ಲಿ ತಿಳಿಸಲ್ಪಡುತ್ತವೆ ಅನ್ನುವುದು ಹೆಚ್ಚಾಗಿ ಪ್ರಸ್ತಾಪವಾಗುವುದಿಲ್ಲ. ಈ ಮಾಹಿತಿಗಳು ಇಂಗ್ಲೀಶ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವಿದ್ದು, ಜನರ ಭಾಷೆಯಲ್ಲಿ ಇರದೇ ಹೋದರೆ ಈ ಮಾಹಿತಿಯನ್ನು ಕೊಡುವುದರಿಂದ ತಾನೇ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಕೊಡಬೇಕಾದುದು ಸ್ವಾಭಾವಿಕವೂ, ಜನಪರವೂ ಹಾಗೂ ನ್ಯಾಯಸಮ್ಮತವೂ ಆಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆಯನ್ನು ಪಡೆಯುವುದು ನಮ್ಮೆಲ್ಲರ ಹಕ್ಕಾಗಿದೆ. ಈ ಹಕ್ಕು ಸಹಜವಾಗಿ ನಮಗೆ ದಕ್ಕುತ್ತಿಲ್ಲದಿದ್ದಲ್ಲಿ ಅದಕ್ಕಾಗಿ ದನಿಯೆತ್ತುವ, ಹೋರಾಟಗಳ ಮೂಲಕವಾದರೂ ಸರಿಯೇ, ಅವುಗಳನ್ನು ದಕ್ಕಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.


ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ಹಲವಾರು ಪ್ರಯತ್ನಗಳು ಈವರೆಗೂ ನಡೆದಿವೆ ಹಾಗೂ ನಡೆಯುತ್ತಿವೆ. ಗ್ರಾಹಕ ಸೇವೆಯಲ್ಲಿ ಹಾಗೂ ನಾಗರೀಕ ಸೇವೆಯಲ್ಲಿ ಕನ್ನಡದ ಬಳಕೆ ಆಗುವಂತೆ ಮಾಡಲು ನಾವು ನೀವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕನ್ನಡದಲ್ಲಿ ಸೇವೆ ಪಡೆಯಲು ಆಗುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಇಂಬು ಕೊಡುವ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ ಒಂದು ಫೋರಮ್ ಅನ್ನು ತೆರೆಯಲಾಗಿದೆ. ಈ ಫೋರಮ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದೆ ನಿಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಬಹುದು. ಹಾಗೆ ಅದನ್ನು ಸರಿ ಮಾಡಲು ಮಾಡಿದ ಪ್ರಯತ್ನಗಳನ್ನು ಕೂಡ ಹಂಚಿಕೊಳ್ಳಬಹುದು. ಇದರೊಟ್ಟಿಗೆ ಮಾರುಕಟ್ಟೆಯ ಮಾಹಿತಿ ಮತ್ತು ಗ್ರಾಹಕ ಸೇವೆ ಕಾನೂನಿನ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವೆಡೆ ನೀವು ಪ್ರಯತ್ನಿಸಿ ಯಶಸ್ವಿಯಾದ ಸುದ್ದಿಗಳನ್ನೂ ಕೂಡ ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡ ಗ್ರಾಹಕರ ಒಗ್ಗಟಿನ ಸೂರಾದ ಈ ಫೋರಮ್ ಗೆ ಸೇರಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.

2 ಅನಿಸಿಕೆಗಳು:

ದಿಲೀಪ್ ಅಂತಾರೆ...

ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯಲು ಹೆಣಗಾಡಬೇಕಾದ ಸಮಯದಲ್ಲಿ ಇಂಥ ಒಂದು ವೇದಿಕೆ ರೂಪಿಸಿರುವ ನಿಮಗೆ ವಂದನೆಗಳು. ಈ ವೇದಿಕೆ ನಮ್ಮಲ್ಲಿ ಏಕತೆ ದೊರಕಿಸಿ ಹೋರಾಟವನ್ನು ಬಲ ಪಡಿಸಲಿ.
ಇತ್ತಿಚೆಗಷ್ಟೇ, ಬಜಾಜ್ ಅಲಯನಜ್ ನ ಸಹಾಯ ವಾಣಿಯಲ್ಲಿ ಕನ್ನಡದಲ್ಲಿ ಮಾತನಾಡಲು ಬಯಸಿದರೆ, ಅದು ಹಿಂದಿ ಭಾಷಿಕರಿಗೇ ಸಂಪರ್ಕವಾಗುತ್ತಿತ್ತು. ಕೊನೆಗೆ ಇದರ ಬಗ್ಗೆ ಅವರಿಗೆ ಕನ್ನಡದಲ್ಲೇ ಇ-ಮೇಲ್ ಮೂಲಕ ಲಿಖಿತ ದೂರು ದಾಖಲಿಸಬೇಕಾಯಿತು.
ಆದರೆ ಯಾವ ಉತ್ತರವೂ ಬರದ ಕಾರಣ ಮತ್ತೆ ಇಂಗ್ಲಿಷ್ನಲ್ಲೇ ಪ್ರತ್ಯೇಕವಾಗಿ ಮೂವರು ಅಧಿಕಾರಿಗಳಿಗೆ ಇ-ಮೇಲ್ ಕಳಿಸಲಾಗಿದೆ,

Anonymous ಅಂತಾರೆ...

Do you also have plan to run newspaper ? If yes, then it would be good connect.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails