ಮೊನ್ನೆ ತಾನೇ ಆಂಧ್ರದ ಮುಖ್ಯಮಂತ್ರಿಗಳಾದ ಶ್ರೀ ಚಂದ್ರಬಾಬು ನಾಯ್ಡು ಅವರೊಂದು ಯೋಜನೆ ಘೋಷಣೆ ಮಾಡಿದ್ದಾರೆ. ಮೂರನೇ ಮಗು ಹೆತ್ತರೆ 30,000 ರೂಪಾಯಿ, ನಾಲ್ಕನೇ ಮಗು ಹೆತ್ತರೆ 40,000 ರೂಪಾಯಿ ಪ್ರೋತ್ಸಾಹಧನ ಕೊಡ್ತೀವಿ ಅಂತನ್ನೋದೆ ಅದು!!
ಜನಸಂಖ್ಯೆ ಸ್ಫೋಟದ ಸಮಸ್ಯೆ!
ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ? ತಾಳಿ, ತಾಳಿ.. "ಇದು ದೇಶದ್ರೋಹ" ಅನ್ನೋ ತೀರ್ಮಾನ ಮಾಡೊ ಮೊದಲು "ಜನಸಂಖ್ಯಾ ಸ್ಫೋಟ"ದ ಸಮಸ್ಯೆ ಅಂದ್ರೇನು, ಎಲ್ಲಿದೆ, ಎಷ್ಟಿದೆ, ನಮಗಿದ್ಯಾ ಅನ್ನೋದನ್ನು ತಿಳ್ಕೋಬೇಕು ಗುರೂ!! ಅದನ್ನು ಈ ಚಿತ್ರದಲ್ಲಿ ನೋಡಿ..
ಒಂದು ನಾಡಿನ ಹೆರುವೆಣಿಕೆ 2.1ಕ್ಕಿಂತ ಹೆಚ್ಚಿದ್ದರೆ ಜನಸಂಖ್ಯಾ ಸ್ಫೋಟ ಆಗುತ್ತೆ. ಭಾರತದಲ್ಲಿ ನಿಜವಾಗ್ಲೂ ಸಮಸ್ಯೆ ಇರೋದು ನಿಜಾ. ಆದರೆ ಸಮಸ್ಯೆ ಇರೋದು ಆಂಧ್ರ, ಕರ್ನಾಟಕ, ತಮಿಳುನಾಡಲ್ಲಲ್ಲ!
ಎತ್ತಿಗೆ ಜ್ವರ! ಎಮ್ಮೆಗೆ ಬರೆ!
ನಮ್ಮ ಸ್ಥಿತಿ ಹಿಂಗಿದೆ ಗುರೂ! ಬಿಹಾರ, ಉತ್ತರಪ್ರದೇಶ ಸೇರಿದಂತೆ ಉತ್ತರದಲ್ಲಿ ಜನಸಂಖ್ಯಾ ಸ್ಫೋಟ ಇದೆ. ಅಲ್ಲಿ ಪ್ರತಿ ಕುಟುಂಬದ ಸರಾಸರಿ ಮಕ್ಕಳ ಸಂಖ್ಯೆ ಅಂದ್ರೆ ಹೆರುವೆಣಿಕೆ 2.1ಕ್ಕಿಂತ ಹೆಚ್ಚಿದೆ. ಅದು 3.1ರವರೆಗೂ ಇದೆ. ಆದರೆ ಎಮ್ಮೆಗಳ ಹಾಗೆ ತೆಪ್ಪಗಿರುವ ನಮ್ಮ ಹೆರುವಣಿಕೆ 1.6~1.7ರಲ್ಲಿದ್ದು.. ಕುಸಿಯುತ್ತಾ ಇದೆ. ನಾವುಗಳು ಮನೆಗೊಂದು ಮಗು, ದೇಶಕ್ಕೆ ನಗು ಅಂತಾನೋ ಬೀದಿಗೊಂದು ದೀಪ, ಮನೆಗೊಂದು ಪಾಪ ಅಂತಾನೋ ಕಡಿಮೆ ಮಕ್ಕಳನ್ನು ಹೆತ್ತುಕೊಂಡೇ ಇದ್ದರೆ ಕೆಲವು ದಶಕಗಳಲ್ಲಿ ಕನ್ನಡಿಗರ ಜನಸಂಖ್ಯೆ ಕುಸಿದು ಹೋಗುತ್ತೆ! ಈಗ ನಮಗೆ ಬೇಕಿರುವ ಘೋಷವಾಕ್ಯ "ಮಕ್ಕಳಿರಲವ್ವ ಮನೆ ತುಂಬಾ" ಅನ್ನೋದೇ ಆಗಿದೆ.
ನಮ್ಮಲ್ಲೂ ಎಚ್ಚರಿಕೆ ಮೂಡಲಿ!
ಹಾಗಾಗಿ, ನಾಯ್ಡು ಅವರು ಕೈಗೊಂಡಿರುವ ಕ್ರಮ ಮೆಚ್ಚುಗೆಗೆ ಅರ್ಹವಾಗಿದೆಯಷ್ಟೇ ಅಲ್ಲದೇ ನಾವು ಮುಂದೇನೇನು ಮಾಡಬೇಕು ಎಂಬುದನ್ನು ನೆನಪು ಮಾಡುತ್ತಿದೆ. ಕರ್ನಾಟಕ ಸರ್ಕಾರ ಮಾಡಬಹುದಾದ ಕ್ರಮಗಳನ್ನು ಪಟ್ಟಿ ಮಾಡೋಣ ಬಾ ಗುರೂ!
- ಕುಸಿಯುತ್ತಿರುವ ಜನಸಂಖ್ಯೆಯ ಬಗ್ಗೆ ಅರಿವು ಮೂಡಿಸಿಕೊಂಡು, ಜನರಲ್ಲಿ ಅರಿವು ಮೂಡಿಸಲಿ.
- ಆಂಧ್ರದಂತೆ ಇಲ್ಲಿಯೂ ಮೂರನೇ ಮಗುವನ್ನು ಹೆರುವ ವಲಸಿಗರಲ್ಲದ ನಮ್ಮವರಿಗೆ (ದಂಪತಿಗಳಲ್ಲಿ ಯಾರಾದರೊಬ್ಬರು ಕನ್ನಡನಾಡಲ್ಲಿ ಹುಟ್ಟಿದವರಾಗಿದ್ದರೆ) ಪ್ರೋತ್ಸಾಹ, ನೆರವು ನೀಡಲಿ.
- ತಜ್ಞರನ್ನು ಬಳಸಿಕೊಂಡು, 1.7ರ ಹೆರುವಣಿಕೆಯನ್ನು 2.1ಕ್ಕೆ ಏರಿಸುವ ಬಗ್ಗೆ ಕ್ರಮಗಳನ್ನು ಯೋಜಿಸಲಿ.
- ಕನ್ನಡನಾಡಿನಲ್ಲಿ ಜನಸಂಖ್ಯಾ ಸ್ಫೋಟದ ಸಮಸ್ಯೆ ಇದೆ ಎಂದು ತಪ್ಪಾಗಿ ನಂಬಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿ.
ಕೊನೆಹನಿ: ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಕುಸೀತಾ ಇದೆ ಅನ್ನೋದು ಸುಳ್ಳು.. ಮುಕ್ಕೋಟಿ ಕನ್ನಡಿಗರು ಆರು ಕೋಟಿ ನಲವತ್ತು ಲಕ್ಷ ಆಗಿಲ್ವಾ ಅನ್ನಬೇಡ ಗುರೂ! ಅದು ಆ ಪ್ರಮಾಣದಲ್ಲಿ ನಾಡಿಗೆ ಹೊರಗಿನಿಂದ ವಲಸೆ ಆಗ್ತಿದೆ ಎನ್ನೋದರ ಕುರುಹು. ಜನಲಕ್ಷಣ ಬದಲಾಯಿಸಲು ಇರುವ ಎರಡು ಸಾಧನಗಳೆಂದರೆ ಹೆರುವಣಿಕೆ ಕುಸಿತ ಮತ್ತು ಅನಿಯಂತ್ರಿತ ವಲಸೆ!
ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!