"ಸಕಾಲ" - ಸರ್ಕಾರಿ ಕೆಲಸ, ಆಗಲಿ ಇನ್ನು ಸುಲಭ!


ರಾಜ್ಯದ ಆಡಳಿತದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯ ನಿರೀಕ್ಷೆಯನ್ನು ಹುಟ್ಟು ಹಾಕಿದಂತಹ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ - ೨೦೧೧ ಇದೀಗ "ಸಕಾಲ" ಯೋಜನೆಯಾಗಿ ಏಪ್ರಿಲ್ ೨ರಿಂದ ರಾಜ್ಯಾದ್ಯಂತ ಜಾರಿಯಾಗಿದೆ. ಒಟ್ಟು ಹನ್ನೊಂದು ಇಲಾಖೆಗಳ ಒಂದುನೂರಾ ಐವತ್ತೊಂದು ಸೇವೆಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಡುವ ಬದ್ಧತೆಯ ಘೋಷಣೆಯು ಜನರಲ್ಲಿ ಹೊಸ ಭರವಸೆ ಹುಟ್ಟಲು ಕಾರಣವಾಗಿದೆ. ಈಗಾಗಲೇ ಇಂತಹ ಕಾಯ್ದೆಯನ್ನು ಜಾರಿಮಾಡಿರುವ  ಮಧ್ಯಪ್ರದೇಶ, ಬಿಹಾರಗಳ ಸಾಲಿಗೆ ರಾಜ್ಯವೂ ಸೇರಿದ್ದು, ಕರ್ನಾಟಕದ ಭಾರತೀಯ ಜನತಾಪಕ್ಷದ ಸರ್ಕಾರ ನಿಜಕ್ಕೂ ಒಂದು ಸಾರ್ಥಕವಾದ ಕೆಲಸಾ ಮಾಡಿ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸರ್ಕಾರಿ ಕೆಲಸ ದೇವರ ಕೆಲಸ!

ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ಬೇಕಾದಷ್ಟು ಕೆಲಸಗಳಾಗಬೇಕಿರುತ್ತವೆ. ಸಾಮಾನ್ಯವಾಗಿ ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ದೇವರೇ ಬಂದು ಮಾಡಿಕೊಡಬೇಕಾದ ಕೆಲಸ ಎಂದು ವ್ಯಂಗ್ಯವಾಡುವಷ್ಟು ನಿಧಾ...ನವಾಗಿ ನಡೆಯುತ್ತದೆ ಎನ್ನುವುದು ಜನರ ದೂರಾಗಿತ್ತು. ಒಂದು ಕಡತ ಒಬ್ಬ ಅಧಿಕಾರಿಯಿಂದ ಮುಂದಿನ ಅಧಿಕಾರಿಯ ಟೇಬಲ್ ತಲುಪಬೇಕೆಂದರೆ ಅದೆಷ್ಟು ಸಮಯ ಬೇಕಾಗುತ್ತೋ ಎಂದು ಜನ ನಿರಾಸೆಯಿಂದ ನಿಟ್ಟುಸಿರು ಬಿಡಬೇಕಾದ ಕೆಟ್ಟಕಾಲ ಮುಗಿಯೋ ಒಳ್ಳೆಕಾಲ ಇನ್ಮುಂದೆ ಬರಲಿದೆ ಎನ್ನುವ ಭರವಸೆಯು, ಈ ಕಾಯ್ದೆಯ ಕಾರಣದಿಂದಾಗಿ ಜನರಲ್ಲಿ ಮೂಡಿದೆ.

ಈ ಕಾಯ್ದೆಯಡಿ ಬರುವ ಹನ್ನೊಂದು ಇಲಾಖೆಗಳು ತಾವು ನೀಡುವ ಪ್ರತಿಯೊಂದು ಸೇವೆಗೂ ಇಂತಿಷ್ಟೇ ಸಮಯ ಸಾಕು ಎಂದು ಕಾಲಮಿತಿಯನ್ನು ಹಾಕಿಕೊಂಡಿದ್ದಾವೆ. ಇಡೀ ಕಾಯ್ದೆಯು "ಮಾಹಿತಿ ಹಕ್ಕು ಕಾಯ್ದೆ - ೨೦೦೫"ರ ಮುಂದುವರಿಕೆಯಂತೆ ಕಾಣುತ್ತಿದೆ. ಜನರಿಗೆ ಯಾವುದೇ ಇಲಾಖೆ ತಮ್ಮ ಕೆಲಸಗಳನ್ನು ಮಾಡಿಕೊಡುವುದು  "ಆ ಇಲಾಖೆಯ ನೌಕರರು ನಮಗೆ ಮಾಡುವ ಉಪಕಾರವಲ್ಲಾ" ಎನ್ನುವ ಸಂದೇಶವನ್ನು ನೀಡುತ್ತಿರುವ ಸಕಾಲದಲ್ಲಿ, ಜನರು ತಾವು ಬಯಸಿದ ಸೇವೆ ಇಂತಿಷ್ಟೇ ಸಮಯದಲ್ಲಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದನ್ನು ಎತ್ತಿ ಹಿಡಿಯಲಾಗಿದೆ. ಯಾವುದೇ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಸಹಕಾರಿಯಾಗಿರುವ ಸಕಾಲ ವ್ಯವಸ್ಥೆಯಲ್ಲಿ ಜನರು ಬಯಸಿದ ಸೇವೆಯನ್ನು ಪಡೆಯುವಲ್ಲಿ ತಡವಾದಲ್ಲಿ ದೂರು ನೀಡುವ ವ್ಯವಸ್ಥೆಯೂ ಇದೆ. ನಿಗದಿತ ಸಮಯಕ್ಕಿಂತಾ ಹೆಚ್ಚು ಸಮಯ ತೆಗೆದುಕೊಂಡಲ್ಲಿ ದಿನವೊಂದಕ್ಕೆ ೨೦ ರೂಪಾಯಿ ಪರಿಹಾರವಾಗಿ ನೀಡಬೇಕಾದ ಹೊಣೆಗಾರಿಕೆಯನ್ನೂ ಸಂಬಂಧಿಸಿದ ನೌಕರರಿಗೆ ಹೊರಿಸಲಾಗಿದೆ. ಮೇಲ್ಮನವಿ, ದೂರು ಇತ್ಯಾದಿಗಳನ್ನು ಸಲ್ಲಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಶಿಸ್ತನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಇದನ್ನು ಜಾರಿ ಮಾಡಲು ಕಾರಣವಾದ ಸರ್ಕಾರಕ್ಕೆ ಅಭಿನಂದನೆಗಳು! ಜನರು ಕಟ್ಟುವ ತೆರಿಗೆ ಹಣದಿಂದಲೇ ರೂಪುಗೊಳ್ಳುವ ಇಂತಹ ಯೋಜನೆಗಳು ಯಶಸ್ವಿಯಾದರೆ ಸರ್ಕಾರವು ಜನರಿಂದ ತೆರಿಗೆ ಕಟ್ಟಿಸಿಕೊಂಡ ಋಣವನ್ನು ಸ್ವಲ್ಪಮಟ್ಟಿಗೆ  ತೀರಿಸಿಕೊಂಡಂತಾಗುತ್ತದೆ. ಅದಕ್ಕೇ ಸರ್ಕಾರಿ ಕೆಲಸ ದೇವರ ಕೆಲಸವಾಗದೆ ಜನರ ಕೆಲಸ ಎನ್ನುವಂತಾಗಬೇಕು ಎನ್ನುವುದು ಸರಿಯಾಗಿದೆ!

ಸಕಾಲದ ಸರಿ ಜಾರಿಯಾಗಲಿ!

ಸಕಾಲ ಕುರಿತಾಗಿ ಮಾಹಿತಿ ಪಡೆಯಲು ಮಿಂಬಲೆತಾಣವನ್ನು ರೂಪಿಸಲಾಗಿದೆ. ಈ ತಾಣ ತೆರೆದುಕೊಳ್ಳುವುದೇ ಇಂಗ್ಲೀಶಿನಲ್ಲಿ! ಪಕ್ಕದಲ್ಲಿ ಕೆಟ್ಟ ಕನ್ನಡದಲ್ಲಿ ಒಂದು "ಕನ್ನಡ ಅವತರಣ"ವಿದೆ. ಅಲ್ಲಿ "ಸೆವೆಗಳ ಸ್ಥಾನ-ಮಾನ ಪರಿಶಿಲಿಸಿ" ಎಂದು ಕೂಡಾ ಬರೆಯಲಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಹೊಂದಿರುವ ಸರ್ಕಾರ, ತನ್ನ ತಾಣದಲ್ಲಿ ಇಂತಹ ನಿರ್ಲಕ್ಷ್ಯ ತೋರಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಿಜಕ್ಕೂ ತಾನು ರೂಪಿಸಿರುವ ಜನಪರವಾದ ಕಾಯ್ದೆ/ ಯೋಜನೆ ಜನರನ್ನು ಮುಟ್ಟಬೇಕಾದರೆ ಜನರ ಭಾಷೆಯಲ್ಲಿ "ಸರಿಯಾಗಿ" ಇರಬೇಕಾದ್ದು ಬಹುಮುಖ್ಯ ಎನ್ನುವುದನ್ನು ಸಂಬಂಧಿಸಿದ ಅಧಿಕಾರಿಗಳು ಮನಗಂಡರೆ ಒಳ್ಳೆಯದು. ಅನ್ನ ಅರೆ ಬೆಂದಿರುವುದಕ್ಕೆ ಸಾಕ್ಷಿಯಾದ ಅಗುಳಿನಂತೆ ಈ ತಾಣದ ಮುಂಪಟ ಇರದಿರಲಿ ಎನ್ನುವುದು ನಮ್ಮ ಆಶಯ. ಅತ್ಯುತ್ತಮ ಯೋಜನೆಗಳೂ ಕೂಡಾ ಯಶಸ್ವಿಯಾಗಲು ಅತ್ಯುತ್ತಮ ರೀತಿಯಲ್ಲಿ ಜಾರಿಗೊಳ್ಳಬೇಕಾಗುತ್ತದೆಯಾದ್ದರಿಂದ ಸರ್ಕಾರ ಈಗಿರುವ ಕುಂದುಕೊರತೆಗಳನ್ನು ನಿವಾರಿಸಿ ಸಕಾಲವನ್ನು ಪರಿಣಾಮಕಾರಿಯಾಗಿ ಮಾಡಲಿ. ಹೌದಲ್ವಾ ಗುರೂ?

ತಂತ್ರಜ್ಞಾನ ಕನ್ನಡಕ್ಕೆ ಬದಲಿಯಲ್ಲ!

ನೀವು ಸುಮ್ಮನೆ ಗಮನಿಸಿ ನೋಡಿ... ಬೆಂಗಳೂರು ಟ್ರಾಫಿಕ್ ಪೊಲೀಸಿನವರದ್ದೊಂದು ಮಿಂಬಲೆ ತಾಣವಿದೆ. ಅಲ್ಲೂ ಜನರಿಗೆ ಅನುಕೂಲವಾಗುವಂತಹ ನಾನಾ ಸೇವೆಗಳು ತಂತ್ರಜ್ಞಾನದ ಕಾರಣದಿಂದಾಗಿ ದೊರಕಿಸಿಕೊಡಲಾಗಿದೆ. ದುರಂತವೆಂದರೆ ಅಲ್ಲಿ ಕನ್ನಡಕ್ಕೆ ಮಾತ್ರಾ ಮನ್ನಣೆಯಿಲ್ಲ! ಕನ್ನಡದಲ್ಲಿ ಸೇವೆ ಕೊಡ್ರೀ ಅಂದ್ರೆ ಆ ತಂತ್ರಜ್ಞಾನ ಇಲ್ಲಾ, ಈ ಮೊಬೈಲ್ ಕಂಪನಿಯವರು ಕನ್ನಡ ಕೊಡ್ತಿಲ್ಲಾ.. ಇಂಥಾ ಅದ್ಭುತ ಸೌಕರ್ಯ ಕೊಡ್ತಿದೀವಿ, ಇಲ್ಲೂ ಕನ್ನಡ ಕನ್ನಡಾ ಅಂತೀರಾ... ಹಾಳೂ ಮೂಳೂ ಅನ್ನೋ ನೆಪಗಳನ್ನು ಹೇಳ್ತಾರೆ. ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಿಂಬಲೆಯಲ್ಲೂ ಇದೇ ಗೋಳು! ಯಾಕ್ರೀ ಟಿಕೆಟ್ ಕನ್ನಡದಲ್ಲಿಲ್ಲಾ ಅಂದ್ರೆ ತಂತ್ರಜ್ಞಾನ ಇಲ್ಲಾ ಅಂತಾರೆ! ಕನ್ನಡದೋರು ಆರೂವರೆ ಕೋಟಿ ಇದ್ದೀವಿ ಇದ್ದೀವಿ ಅಂತಾ ಹೇಳ್ಕೊಳ್ಳೋದು ಯಾಕೆ? ಇಷ್ಟು ಜನಸಂಖ್ಯೆ ಒಂದು ತಂತ್ರಜ್ಞಾನ ರೂಪಿಸಿ ಜಾರಿಗೆ ತರೋರಿಗೆ ಸಾಲದಾ? ನಮ್ಮ ಉದ್ದೇಶ ಇಂಥದ್ದು ನಮಗೆ ಕನ್ನಡದಲ್ಲಿ ಸೇವೆ ಬೇಕು ಅಂತಾ ನಮ್ಮ ರಾಜ್ಯದ ಸಂಸ್ಥೆಗಳು, ಇಲಾಖೆಗಳು ತಂತ್ರಜ್ಞಾನಾನಾ ತರಕ್ ಆಗಲ್ವಾ? ಒಂದಂತೂ ನಿಜಾ! ಕನ್ನಡ ಕಡೆಗಣಿಸಿ ಕನ್ನಡವಿಲ್ಲದೆ ಕೊಡುವ ಯಾವ ತಂತ್ರಜ್ಞಾನವೂ ಕನ್ನಡದೋರಿಗೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ! ತಂತ್ರಜ್ಞಾನಾ ಅನ್ನೋದು ಕನ್ನಡಾನ ಬಳಸದೆ ಇರೋಕೆ ಒಂದು ನೆಪವಾಗೋದನ್ನು ಎಂದಿಗೂ ಒಪ್ಪಕ್ಕಾಗಲ್ಲಾ ಗುರೂ! ಸಕಾಲವೂ ಕೂಡಾ ತನ್ನ ಮೊದಲ ಆದ್ಯತೆಯನ್ನು ಕನ್ನಡಕ್ಕೆ ನೀಡಿದಾಗ ಮಾತ್ರಾ ಅದು ಯಶಸ್ವಿಯಾಗುತ್ತದೆ ಮತ್ತು ಸಾರ್ಥಕವಾಗುತ್ತದೆ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails