ನಮ್ಮ ಮೆಟ್ರೋ: ಮಾಹಿತಿ ಕೋರಿ ಆರ್.ಟಿ.ಐ. ಅರ್ಜಿ.


"ನಮ್ಮ ಮೆಟ್ರೋ"ಲಿ ಹಿಂದೀ ಭಾಷೆಯನ್ನು ಎಲ್ಲೆಡೆ ಬಳಸಿರುವುದರ ಬಗ್ಗೆ ನಮ್ಮ ಜನರಲ್ಲಿ ದಿನೇ ದಿನೇ ಎಚ್ಚರ ಮೂಡುತ್ತಿದ್ದು, ಇದೀಗ ಓದುಗರೊಬ್ಬರು ನಮ್ಮ ಮೆಟ್ರೋ ಅನುಸರಿಸುತ್ತಿರುವ ಭಾಷಾನೀತಿಯ ಬಗ್ಗೆ ಮಾಹಿತಿ ಕೋರಿ, ಆರ್.ಟಿ.ಐ ಒಂದನ್ನು ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಇವರು ಕೋರಿರುವ ಮಾಹಿತಿಯ ವಿವರ ಇಂತಿದೆ.

ಅಗತ್ಯವಾಗಿರುವ ಮಾಹಿತಿ
“ನಮ್ಮ ಮೆಟ್ರೋ “ನಲ್ಲಿ ಬಳಕೆಯಾಗಿರುವ ಭಾಷಾನೀತಿಯ ಬಗೆಗಿನ ಕೆಳಗಿನ ಅಂಶಗಳ ಬಗ್ಗೆ ವಿವರಣೆಗಳು ಬೇಕಾಗಿದೆ:
೧. ಬೆಂಗಳೂರಿನ ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಯಾವ ಯಾವ ಭಾಷೆಯಲ್ಲಿ ನೀಡಬೇಕೆನ್ನುವ ಬಗ್ಗೆ ಯಾವುದಾದರೂ ನಿಯಮ "BMRCL"ನಲ್ಲಿದೆಯೇ? ಇದ್ದಲ್ಲಿ ಅದರ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ. 
೨. ಪ್ರಶ್ನೆ ೧ ಕ್ಕೆ ಸಂಬಂದಪಟ್ಟಂತೆ ಗ್ರಾಹಕಸೇವಾ ನಿಯಮವನ್ನು ಜಾರಿಗೊಳಿಸಲು, ತೀರ್ಮಾನವನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ? 
೩. ಭಾರತದ ಕೇಂದ್ರಸರ್ಕಾರವು ಬೆಂಗಳೂರಿನ “ನಮ್ಮ ಮೆಟ್ರೋ“ ದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇ? ಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ. 
೪. ಕರ್ನಾಟಕ ರಾಜ್ಯಸರ್ಕಾರ “ನಮ್ಮ ಮೆಟ್ರೋ” ದಲ್ಲಿ ಪ್ರಶ್ನೆ ೧ ರಲ್ಲಿ ಇರುವಂತೆ, ಇಂಥದ್ದೇ ಭಾಷೆಗಳಲ್ಲಿ ಗ್ರಾಹಕ ಸೇವೆ ನೀಡಬೇಕೆಂದು/ ಕೆಲಸ ಮಾಡಬೇಕೆಂದು ಯಾವುದಾದರೂ ಆದೇಶ/ ಸೂಚನೆ ಹೊರಡಿಸಿದೆಯೇ? ಹಾಗಿದ್ದಲ್ಲಿ ಸದರಿ ಆದೇಶದ/ ಸೂಚನೆಯ ಅಧಿಕೃತ ಪತ್ರದ ಧೃಢೀಕೃತ ನಕಲು ಪ್ರತಿಯನ್ನು ಕೊಡಿ.
೫. ಪ್ರಶ್ನೆ ೩ ಮತ್ತು ೪ ಕ್ಕೆ ನಿಮ್ಮ ಉತ್ತರ ಇಲ್ಲ ಎಂದಿದ್ದಲ್ಲಿ, ಇನ್ಯಾವ ಆದೇಶ/ಸೂಚನೆಯ ಮೇರೆಗೆ ಹಿಂದಿ ಬಾಷೆಯಲ್ಲಿ, ನಮ್ಮ ಮೆಟ್ರೋಗೆ ಸಂಬಂಧಿಸಿದಂತೆ ನಿಲ್ದಾಣ ಮತ್ತು ರೈಲಿನ ಒಳಗಿನ ಮತ್ತು ರೈಲಿನ ಹೊರಗಿನ ಸೂಚನಾ ಫಲಕಗಳು, ಘೋಷಣೆಗಳು, ಸುರಕ್ಷತಾ ಸೂಚನೆಗಳೇ ಮೊದಲಾದ ಸಾರ್ವಜನಿಕರಿಗೆ ನೀಡಬೇಕಾದ ಗ್ರಾಹಕಸೇವೆಯ ಮಾಹಿತಿಗಳನ್ನು ಹಾಕಲಾಗಿದೆ? ಇದಕ್ಕೆ ಸಂಬಂಧಿಸಿದ ಆದೇಶ/ ಸೂಚನೆಯ ದಾಖಲೆಯ  ಧೃಢೀಕೃತ ಪ್ರತಿಯನ್ನು ನೀಡಿರಿ.
೬. ನಮ್ಮ ಮೆಟ್ರೋ ಸಿಬ್ಬಂದಿಗಳು ಮತ್ತು ಮೇಟ್ರೋ ನೇಮಕ ಮಾಡಿರುವ ಖಾಸಗೀ ಗುತ್ತಿಗೆ ಸಿಬ್ಬಂದಿಗಳು, ಸಾರ್ವಜನಿಕರ ಜೊತೆ ವ್ಯವಹರಿಸಬೇಕಾದಾಗ - ಸ್ಥಳೀಯ ಭಾಷೆ ಕನ್ನಡದ ಅರಿವು ಹೊಂದಿರಬೇಕೆನ್ನುವ ನಿಬಂಧನೆಯನ್ನು/ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆಯೇ? ಮಾಡಿಕೊಂಡಿದ್ದರೆ ಒಂದು ಅಧಿಕೃತ ಒಪ್ಪಂದದ ಪ್ರತಿಯ ಧೃಢೀಕೃತ ನಕಲು ಪ್ರತಿಯನ್ನು ಕೊಡಿ. 
೭. ಪ್ರಶ್ನೆ ೬ ಕ್ಕೆ ಸಂಬಂದಿಸಿದಂತೆ, ನಿಬಂಧನೆ/ಒಪ್ಪಂದ ಮಾಡಿದ್ದರೆ, ಕನ್ನಡದಲ್ಲಿ ಸೇವೆಯನ್ನು ನಿರಾಕರಣೆ ಮಾಡುವ ಸಿಬ್ಬಂದಿ/ ಗುತ್ತಿಗೆದಾರರ ಮೇಲೆ ದೂರನ್ನು ಯಾರಿಗೆ ಸಲ್ಲಿಸಬೇಕು?
೮. ಕನ್ನಡದಲ್ಲಿ ಗ್ರಾಹಕ ಸೇವೆ ನೀಡದ ಬಗ್ಗೆ ದೂರು ಬಂದಲ್ಲಿ ಅಂಥವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವುದಾದರೋ ನಿಯಮವಿದೆಯೇ? ಇದ್ದಲ್ಲಿ ಸದರಿ ನಿಯಮದ ಧೃಢೀಕೃತ ನಕಲು ಪ್ರತಿಯನ್ನು ನೀಡಿರಿ.
ತಿಂಗಳೊಂದರಲ್ಲಿ ಸಂಬಂಧಪಟ್ಟಿರುವ "ನಮ್ಮ ಮೆಟ್ರೋ" ಅಧಿಕಾರಿಗಳು ಇದಕ್ಕೆ ಯಾವ ಉತ್ತರ ನೀಡುತ್ತಾರೋ? ಎನ್ನುವ ಕುತೂಹಲ ನಿಮ್ಮಂತೆ ನಮಗೂ ಇದೆ. ಕಾದು ನೋಡೋಣ...ಗುರೂ!!!

ನಮ್ಮ ಮೆಟ್ರೋ: ಕೇಂದ್ರದ ಒಪ್ಪಿಗೆಪತ್ರದಲ್ಲೇನಿದೆ ಗೊತ್ತಾ?

(ಫೋಟೋ ಕೃಪೆ: http://sandeepvarma.com)

ಬೆಂಗಳೂರಿನ ನಮ್ಮ ಮೆಟ್ರೋ ಬಗ್ಗೆ ಬಿಎಂಆರ್‌‍ಸಿಎಲ್ ಸಂಸ್ಥೆಯ ಮಿಂಬಲೆಯಲ್ಲಿ ಕೊಂಚ ಹುಡುಕಾಟ ನಡೆಸಿದರೆ ಒಳ್ಳೊಳ್ಳೆ ಮಾಹಿತಿಗಳು ಸಿಗುತ್ವೆ! ಮೊನ್ನೆ ಅದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿವಸೈಲಂ ಅವರು "ಇದು ಕೇಂದ್ರಸರ್ಕಾರದ ಅಧೀನ ಸಂಸ್ಥೆ... ಅದುಕ್ಕೇ ಹಿಂದೀ ಹಾಕ್ತೀವಿ" ಎನ್ನುವ ಧ್ವನಿಯಲ್ಲಿ ಮಾತಾಡಿದ್ದನ್ನು ಓದಿಯೇ ಇದ್ದೇವೆ. ಆ ಹಿನ್ನೆಲೆಯಲ್ಲಿ ರಾಜ್ಯ ಕೇಂದ್ರಗಳ ನಡುವಿನ ಈ ಜಂಟಿ ಯೋಜನೆಯ ಇತಿಹಾಸ ನೋಡಿದರೆ, ಭಾರತ ಸರ್ಕಾರ ತನ್ನ ರಾಜ್ಯಗಳನ್ನು ಹೇಗೆ ನಡೆಸಿಕೊಳ್ಳುತ್ತದೆ? ಒಕ್ಕೂಟದಲ್ಲಿ ರಾಜ್ಯಗಳನ್ನು ಏನೆಂದು ಪರಿಗಣಿಸುತ್ತದೆ? ಎಂಬುದರ ಬಗ್ಗೆ ಸುಳುಹು ನೀಡೋ ಒಂದು ದಾಖಲೆಯನ್ನು ಇಲ್ಲಿ ನೋಡಿ!

ಕೇಂದ್ರದ ಕರಾರುಗಳು ರಾಜ್ಯದ ಕೊಡುಗೆ

ನಮ್ಮ ಮೆಟ್ರೋ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿದ್ದು ೧೯೯೪ರಲ್ಲಿ. ಇಡೀ ಯೋಜನೆಯನ್ನು ರೂಪಿಸಿ ರಾಜ್ಯಸರ್ಕಾರ ಚಾಲನೆ ನೀಡಿದ್ದು ೨೦೦೫ರಲ್ಲಿ. ಇದಕ್ಕೆ ಕೇಂದ್ರಸರ್ಕಾರವು ಒಪ್ಪಿಗೆ ನೀಡಿದ್ದು ೨೦೦೬ರಲ್ಲಿ. ಈ ಒಪ್ಪಿಗೆ ಪತ್ರದ ಸಾರಾಂಶ ನೋಡಿದಾಗ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳೆಲ್ಲಾ ಭಾಗೀದಾರರಲ್ಲದೆ ಸಾಮಂತರಾಗಿದ್ದಾವೆನ್ನುವ ಅನುಮಾನ ಓದುಗರಲ್ಲಿ ಮೂಡಿದಲ್ಲಿ ಅಚ್ಚರಿಯಿಲ್ಲ. ಈ ಒಪ್ಪಿಗೆ ಪತ್ರದಲ್ಲೇನಿದೆ ನೋಡೋಣ ಬನ್ನಿ:
೭. ಕೆಳಗಿನ ಸಮಿತಿಗಳನ್ನು ರಚಿಸತಕ್ಕದ್ದು:
ಉನ್ನತಾಧಿಕಾರವುಳ್ಳ ಜಾರಿ ಸಮಿತಿ: ಮೆಟ್ರೋ ಯೋಜನೆಯನ್ನು ಜಾರಿ ಮಾಡುವಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವ ಹೊಣೆ ಈ ಸಮಿತಿಯದ್ದು. ನೆಲ ವಶಪಡಿಸಿಕೊಳ್ಳುವಲ್ಲಿ, ಸೌಕರ್ಯ ಸರಬರಾಜು ಮಾರ್ಗ ಬದಲಾವಣೆ, ಮೆಟ್ರೋ ಯೋಜಿತ ಮಾರ್ಗಕ್ಕೆ ಅಡ್ಡಿಯಾಗುವ ಕಟ್ಟಡ/ ನಿರ್ಮಾಣಗಳ ಸ್ಥಳಾಂತರ, ಯೋಜನೆಯಿಂದಾಗಿ ಸಂತ್ರಸ್ತರಾಗುವ ಜನರ ಪುನರ್ವಸತಿಯೇ ಮೊದಲಾದವುಗಳನ್ನು ನಿಭಾಯಿಸುವುದು ಈ ಸಮಿತಿಯ ಹೊಣೆಯಾಗಿರುತ್ತದೆ. ಈ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮುಖ್ಯಸ್ಥರನ್ನಾಗಿ ಹೊಂದಿರುತ್ತದೆ. ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಜನಪ್ರತಿನಿಧಿ ಸಂಸ್ಥೆಗಳ ಮುಖ್ಯಸ್ಥರುಗಳು ಈ ಸಮಿತಿಯ ಇತರೆ ಸದಸ್ಯರಾಗಿರುತ್ತಾರೆ. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುತ್ತದೆ.
ಸರ್ವೋನ್ನತ ಸಮಿತಿ: ಕರ್ನಾಟಕದ ಒಬ್ಬ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳುವ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋವನ್ನೂ ಕೂಡಾ ನವದೆಹಲಿಯಲ್ಲಿನ ಮೆಟ್ರೋ ಸಂಸ್ಥೆಯನ್ನು ನಿಯಂತ್ರಿಸುತ್ತಿರುವ ಉನ್ನತ ಸಮಿತಿಯ ವ್ಯಾಪ್ತಿಗೆ ಸೇರಿಸಲಾಗಿದೆ. 
ಮಂತ್ರಿಗಳ ಸಮಿತಿ: ಕರ್ನಾಟಕದ ಮುಖ್ಯಮಂತ್ರಿಯನ್ನು ಇದರ ಶಾಶ್ವತ ಆಹ್ವಾನಿತರನ್ನಾಗಿಸುವ ಮೂಲಕ “ನಿಯಮಗಳನ್ನು ರೂಪಿಸುವ ಹಾಗೂ  ದೆಹಲಿ ಮೆಟ್ರೋದ ಪ್ರಗತಿಯನ್ನು ಪರಿಶೀಲಿಸುವ" ಹೊಣೆಗಾರಿಕೆಯುಳ್ಳ ಸಮಿತಿಯ ವ್ಯಾಪ್ತಿಗೆ ಬೆಂಗಳೂರು ಮೆಟ್ರೋವನ್ನೂ ಸೇರಿಸಲಾಗಿದೆ.
೮. ನಿಬಂಧನೆಗಳು:
ಇಡೀ ಯೋಜನೆಗೆ ಬೇಕಾದ ಭೂಮಿಯ ಬೆಲೆಯನ್ನು ಕರ್ನಾಟಕ ಸರ್ಕಾರವು ಬಡ್ಡಿ ರಹಿತ ಅಧೀನ ಸಾಲದ ಮೂಲಕ ಭರಿಸತಕ್ಕದ್ದು.
ಕರ್ನಾಟಕ ಸರ್ಕಾರವು ಇಡೀ ಯೋಜನೆಗೆ ಅಗತ್ಯವಿರುವ ವಿದ್ಯುತ್ತನ್ನು ಯಾವುದೇ ಲಾಭ ನಷ್ಟವಿಲ್ಲದ ದರದಲ್ಲಿ ಪೂರೈಸತಕ್ಕದ್ದು.
ಮೂಲಯೋಜನೆಯ ಲೆಕ್ಕಾಚಾರದಂತೆ ಪ್ರಯಾಣಿಕರನ್ನು ಸೆಳೆಯಲು ಪ್ರಯಾಣ ಬೆಲೆ ನಿರ್ಧಾರವೇ ಮೊದಲಾದ ಕ್ರಮಗಳ ಮೂಲಕ ರಾಜ್ಯಸರ್ಕಾರವು ಕ್ರಮತೆಗೆದುಕೊಳ್ಳತಕ್ಕದ್ದು.
ಕರ್ನಾಟಕ ಸರ್ಕಾರವು ಮೆಟ್ರೋ ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರುವ ಪೂರಕ ಸಾರಿಗೆ ವ್ಯವಸ್ಥೆಯ ಯೋಜನೆಗಳಿಗೆ ಆದ್ಯತೆ ನೀಡತಕ್ಕದ್ದು.
ಭಾರತ ಸರ್ಕಾರವು ಯೋಜನೆಯ ಎರಡನೇ ವರ್ಷದಲ್ಲಿ ಕೊಳ್ಳಲಾಗುವ ಹೆಚ್ಚುವರಿ ರೈಲುಗಳನ್ನು ಕೊಳ್ಳಲು ಹಣನೀಡುವುದಿಲ್ಲ. ಏಕೆಂದರೆ ಇದು ಯೋಜನೆಯ ಅಂಗವಾಗಿರುವುದಿಲ್ಲ.
ಭಾರತ ಸರ್ಕಾರವು ಯೋಜನೆಯು ಜಾರಿಯಾಗುವ ಸಂದರ್ಭದಲ್ಲಾಗುವ ಹಣಕಾಸು ನಷ್ಟವನ್ನಾಗಲೀ, ಯೋಜನೆಯ ಚಾಲ್ತಿ ವೆಚ್ಚವನ್ನಾಗಲೀ ಭರಿಸುವುದಿಲ್ಲ.
ಇವೆಲ್ಲವನ್ನೂ ಕರ್ನಾಟಕ ಸರ್ಕಾರ/ ವಿಶೇಷ ಉದ್ದೇಶದ ವಾಹಕವೇ ಭರಿಸತಕ್ಕದ್ದು.ಯೋಜನೆಯನ್ನು ಜಾರಿಗೊಳಿಸಿದ ನಂತರ ಬಿಎಂಆರ್‍‍ಸಿಎಲ್ ಸಂಸ್ಥೆಯು ದೀರ್ಘಾವಧಿ ಸಾಲವನ್ನು ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಹುಟ್ಟಿಸಿಕೊಳ್ಳಬಹುದಾಗಿದೆ ಮತ್ತು ಇದರ ಬಗ್ಗೆ ಸರ್ಕಾರವು ಯಾವುದೇ ರೀತಿಯಲ್ಲಿ ಹೊಣೆಗಾರಿಕೆ ಹೊಂದಿರುವುದಿಲ್ಲ ಮತ್ತು ಗ್ಯಾರಂಟಿಯನ್ನು ನೀಡುವುದಿಲ್ಲ. ಆದಾಗ್ಯೂ ವಿದೇಶಿ ಸಾಲವನ್ನು ಪಡೆಯಲು ಉದ್ದೇಶಿಸಿದಲ್ಲಿ ಕೇಂದ್ರಸರ್ಕಾರವು ಅದಕ್ಕೆಂದೇ ರೂಪಿಸಿರುವ ನಿಯಮಗಳು ಇದಕ್ಕೂ ಅನ್ವಯವಾಗುತ್ತದೆ.
ಇದೆಲ್ಲಕ್ಕೂ ಕಲಶವಿಟ್ಟಂತೆ ನಮ್ಮ ಮೆಟ್ರೋದ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ಸಿವಸೈಲಂ ಅವರು "ನಮ್ಮ ಮೆಟ್ರೋ"ಲಿ ಹಿಂದೀ ಭಾಷೆಯನ್ನು ಹಾಕೋದು, ಹಿಂದೀ ಭಾಷಿಕರಿಗೆ ಎಲ್ಲಾ ಸೇವೆ ಹಿಂದಿಯಲ್ಲೇ ಸಿಗುವಂತೆ ಮಾಡೋದು, ಭಾರತದ ಏಕತೆಯನ್ನು ಹೆಚ್ಚಿಸುವ ಸಾಧನವೆಂದು ನಂಬಿದವರಂತೆ "ಇದು ಕೇಂದ್ರಸರ್ಕಾರದ ಯೋಜನೆ, ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ರಾಷ್ಟ್ರೀಯ ನಿಯಮದ ರೀತ್ಯಾ ಹಿಂದೀಯನ್ನು ಬಳಸಿದ್ದೇವೆ. ನೀವು ಸ್ವಲ್ಪ ಸಹಿಷ್ಣುಗಳಾಗಬೇಕು" ಎನ್ನೋ ಉಪದೇಶವನ್ನು ನೀಡುತ್ತಿರುವ ಈ ಸಂದರ್ಭದ ಹಿನ್ನೆಲೆಯಲ್ಲಿ ಮೆಟ್ರೋಗೆ ಕೇಂದ್ರಸರ್ಕಾರ ನೀಡಿರುವ ಈ ಒಪ್ಪಿಗೆ ಪತ್ರವನ್ನು ನೋಡಿದಾಗ... ನಿಮಗೆ “ಕೇಂದ್ರಸರ್ಕಾರವು ನಮ್ಮಮೆಟ್ರೋದ ಮೇಲೆ ಅಧಿಕಾರ ಹೊಂದಲು ಬಯಸುತ್ತದೆ ಮತ್ತು ಹೊಣೆಗಾರಿಕೆ ಹೊಂದಲು ಬಯಸುವುದಿಲ್ಲ. ನೀತಿ ನಿಯಮಗಳ ನಿಯಂತ್ರಣ ಬೇಕು, ಲಾಭದಲ್ಲಿ ಪಾಲು ಬೇಕು, ನಷ್ಟವೆಲ್ಲಾ ರಾಜ್ಯಸರ್ಕಾರ ಹೊರಬೇಕು, ಭೂಮಿಯ ಬೆಲೆಯನ್ನೆಲ್ಲಾ ರಾಜ್ಯ ಭರಿಸಬೇಕು, ರಾಜ್ಯಸರ್ಕಾರ ತೆರಿಗೆ ಹಾಕಬಾರದು, ಕೇಂದ್ರ ಮಾತ್ರಾ ತೆರಿಗೆ ವಿನಾಯ್ತಿ ನೀಡುವುದಿಲ್ಲ, ಸಂಸ್ಥೆ ಲಾಭದಾಯಕವಾಗಿ ನಡೆಯಲು ಫೀಡರ್ ವ್ಯವಸ್ಥೆಯನ್ನು ನಷ್ಟವಾದರೂ ರಾಜ್ಯಸರ್ಕಾರ ನಡೆಸಬೇಕು, ಮೆಟ್ರೋಲಿ ಅಗತ್ಯವಿರುವಷ್ಟು ಪ್ರಯಾಣಿಕರನ್ನು ಕರೆತರುವ ಹೊಣೆ ರಾಜ್ಯಸರ್ಕಾರದ್ದು… ಕೇಂದ್ರದ್ದು ಮೆಟ್ರೋನ ನಿಯಂತ್ರಣ ಮಾಡೋದಷ್ಟೇ ಕೆಲಸ, ಹಾಕಿರೋ ಮೂರು ಮತ್ತೊಂದು ಕಾಸಿಗೆ ಹಿಂದೀನ ನಮ್ಮ ಮೇಲೆ ಹೇರೋಕೆ ಮುಂದಾಗಿದ್ದಾರೆ” ಎಂದು ಅನ್ನಿಸಿದರೆ ಅದು ನಮ್ಮ ತಪ್ಪಲ್ಲಾ ಗುರೂ! ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇರೋದೇ ಹೀಗೇ!

ರಾಜ್ಯೋತ್ಸವ ಸಂಭ್ರಮದ ಮೈಮರೆವು ಮತ್ತು ನಿಜ ಎಚ್ಚರ.


ಕನ್ನಡನಾಡಿನ ಜನರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ಈ ಬಾರಿಯ ಕನ್ನಡ ರಾಜ್ಯೋತ್ಸವ ಐವತ್ತೈದನೆಯದು. ೧೯೫೬ರ ನವೆಂಬರ್ ೧ರಂದು, ಹರಿದು ಹಂಚಿ ಹೋಗಿದ್ದ ನಮ್ಮ ಕನ್ನಡ ನಾಡು ಒಂದಾದ ದಿನ. ಕನ್ನಡ ಕುಲಪುರೋಹಿತರೆನ್ನಿಸಿಕೊಂಡ ಶ್ರೀ ಆಲೂರು ವೆಂಕಟರಾಯರು ಕನ್ನಡ ನುಡಿಯಾಡುವ ಪ್ರದೇಶವೆಲ್ಲಾ ಒಂದಾಗಲೆಂಬ ಕನಸು ಕಂಡವರಲ್ಲಿ ಪ್ರಮುಖರು. ಸಾವಿರಾರು ಹೋರಾಟಗಾರರು ಏಕೀಕರಣಕ್ಕಾಗಿ ದುಡಿದು ಇಂದಿನ ಕರ್ನಾಟಕ ರಾಜ್ಯವು ರೂಪುಗೊಳ್ಳಲು ಕಾರಣರಾದರು. ಕನ್ನಡ ರಾಜ್ಯೋತ್ಸವವೆಂಬುದು, ಕನ್ನಡನಾಡಿನ ಮೂಲೆಮೂಲೆಯಲ್ಲೂ ಜನರಿಂದ ಆಚರಿಸಲ್ಪಡುವ ನಿಜವಾದ ನಾಡಹಬ್ಬವಾಗಿದೆ. ಇಂದು ನಾಡ ತುಂಬ ಸಂಭ್ರಮವೇನೋ ಕಾಣುತ್ತಿದೆ. ಬರೀ ಬಾವುಟ ಹಾರಿಸುವಂತಹ ಆಡಂಬರದ ರಾಜ್ಯೋತ್ಸವ ಆಚರಣೆಯ ಆಚೆಗೆ, ಕನ್ನಡಿಗರ ಬದುಕು ಕಟ್ಟಿಕೊಳ್ಳುವ ಕನಸನ್ನು ಕಾಣುವ, ಕನಸನ್ನು ನನಸಾಗಿಸುವತ್ತ ಹೆಜ್ಜೆ ಇಡುವತ್ತ ನಾವಿಂದು ಯೋಚಿಸಬೇಕಾದ ಸಮಯ ಬಂದಿದೆ. ಕನ್ನಡವನ್ನಲ್ಲದೆ ಇನ್ನೊಂದನ್ನು ಅರಿಯದ ಸಾಮಾನ್ಯ ಕನ್ನಡಿಗನೊಬ್ಬ, ಬೇರೊಂದು ನುಡಿಯನ್ನು ತಿಳಿದಿರಬೇಕಾದ ಅನಿವಾರ್ಯತೆಯಿಲ್ಲದೆ ಸುಗಮವಾಗಿ, ಕೀಳರಿಮೆಯಿಲ್ಲದೆ ಬದುಕನ್ನು ನಡೆಸಬಲ್ಲಂತಹ ವ್ಯವಸ್ಥೆಯೊಂದು ಕರ್ನಾಟಕದಲ್ಲಿ ರೂಪುಗೊಂಡಿದೆಯೇ? ಯಾವ ವ್ಯವಸ್ಥೆಯ ಭಾಗವಾಗಿ ನಾವಿಂದು ಬದುಕುತ್ತಿದ್ದೇವೆಯೋ ಆ ವ್ಯವಸ್ಥೆಯು ನಮ್ಮ ಏಳಿಗೆಗೆ ಪೂರಕವಾಗಿದೆಯೇ? ಇಲ್ಲವೇ? ಎಂದು ನೋಡಿದರೆ ನಿರಾಸೆಯಾಗುತ್ತದೆ. ನಮ್ಮೂರಿನ ವಿಮಾನ ನಿಲ್ದಾಣ, ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತೊಡಕಿಲ್ಲದೆ ಕನ್ನಡಿಗ ಸೇವೆ ಪಡೆದುಕೊಳ್ಳಬಲ್ಲನೇ? ಕನ್ನಡನಾಡಿನಲ್ಲಿನ ಉದ್ಯೋಗದ ಎಲ್ಲಾ ಅವಕಾಶಗಳು ಕನ್ನಡಿಗರಿಗೆ ಸಿಗುತ್ತಿದೆಯೇ? ನಮ್ಮ ಜನರ ಕಲಿಕೆ, ಮನರಂಜನೆ, ಉದ್ಯೋಗ ಎಲ್ಲವೂ ನಮ್ಮ ತಾಯ್ನುಡಿಯಲ್ಲಿ ಸಿಗುತ್ತಿದೆಯೇ? ಎಂದು ನೋಡಿದರೆ ಬೇಸರವಾಗುತ್ತದೆ.  ಇಲ್ಲೆಲ್ಲಾ ಕನ್ನಡಿಗರನ್ನು ಶೂಲವಾಗಿ ತಿವಿದು ತಿವಿದು ಕಾಡುತ್ತಿರುವುದು ಹಿಂದೀ ಕಲಿಯಬೇಕೆಂಬ ಒತ್ತಡ. ಇದಕ್ಕೆ ಕಾರಣವಾಗಿರುವುದು ಭಾರತದ ಭಾಷಾನೀತಿ. ಕನ್ನಡಿಗರ ಏಳಿಗೆಗೆ ಇಂದಿರುವ ಅತಿದೊಡ್ಡ ತೊಡಕೆಂದರೆ ಭಾರತದ ಇಂದಿನ ಭಾಷಾನೀತಿಯೇ ಆಗಿದೆ. ಅಸಲಿಗೆ ಭಾರತದಂತಹ ಬಹುಭಾಷಾ ಜನಾಂಗಗಳ ನಾಡಿಗೆ ಚೂರೂ ಹೊಂದಿಕೆಯಾಗದ ತಾರತಮ್ಯದ ಭಾಷಾನೀತಿಯನ್ನು ಭಾರತವು ಆಚರಿಸುತ್ತಿದ್ದು, ಇದು ನಿಧಾನವಾಗಿ ಕನ್ನಡ ಕನ್ನಡಿಗರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಏನಿದು ಭಾರತದ ಭಾಷಾನೀತಿ? ಏನಿದರ ಹುಳುಕು? ಬನ್ನಿ ನೋಡೋಣ.

ಭಾರತದ ತಾರತಮ್ಯದ ಭಾಷಾನೀತಿ:


ಭಾರತವು, ಸಂವಿಧಾನದ ಮೂಲಕ ಹಿಂದೀಯನ್ನು ಭಾರತದೇಶದ ಏಕೈಕ ಆಡಳಿತ ಭಾಷೆಯನ್ನೆಂದು ಘೋಷಿಸಿತು. ಹಿಂದೀಯೇತರರ ವಿರೋಧದ ಕಾರಣದಿಂದಾಗಿ ಜೊತೆಯಲ್ಲಿ ಇಂಗ್ಲೀಷಿಗೂ ಅದೇ ಸ್ಥಾನಮಾನ ನೀಡಿತು. ಉಳಿದ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿ ಕಣ್ಣೊರೆಸಿತು. ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಹಿಂದೀಯನ್ನು ಆಡಳಿತ ಭಾಷೆಯಾಗಿಸಿದ ಬೆನ್ನಲ್ಲೇ ಆಡಳಿತ ಭಾಷಾ ಇಲಾಖೆ, ಆಡಳಿತ ಭಾಷಾ ನಿಯಮ, ಆಡಳಿತ ಭಾಷಾ ಕಾಯ್ದೆಗಳು ಜನ್ಮತಳೆದವು. ಇದರ ಅಂಗವಾಗಿ ಹಿಂದೀಯನ್ನು ಭಾರತದ ಎಲ್ಲೆಡೆ ಹರಡಲು ಒತ್ತಾಯ, ಆಮಿಷ ಮತ್ತು ವಿಶ್ವಾಸಗಳನ್ನು ಬಳಸುವುದು ಭಾರತ ಸರ್ಕಾರದ ನೀತಿಯೆಂದು ಘೋಷಿಸಲಾಯಿತು. ದೇಶದ ಉದ್ದಗಲಕ್ಕೆ ಹಿಂದೀ ಪ್ರಚಾರಕ್ಕೆ ಕೇಂದ್ರಸರ್ಕಾರ ಮುಂದಾಯಿತು. ಹಿಂದೀಯನ್ನು ಒಪ್ಪಿಸಲು ಹಿಂದೀ ಭಾರತದ ಸಂಪರ್ಕ ಭಾಷೆ ಎನ್ನಲಾಯಿತು. ಬಹುಮುಖ್ಯವಾಗಿ ಹಿಂದೀಯನ್ನು ಆಡಳಿತ ಭಾಷೆಯಾಗಿಸಲು ಕೊಡಲಾದ ಕಾರಣ ಅದು ಭಾರತೀಯ ಭಾಷೆಯೆನ್ನುವುದು ಮತ್ತು ಭಾರತದಲ್ಲಿ ಹೆಚ್ಚು ಜನರಿಗೆ ಅರ್ಥವಾಗುತ್ತದೆ ಎನ್ನುವುದು. ಹಿಂದೀಯನ್ನು ಒಪ್ಪಿಸಲು ಬಳಸಿದ ಕಾರಣಗಳು ಮುಂದಾಲೋಚನೆ, ಪರಿಣಾಮಗಳ ಬಗ್ಗೆ ಆಲೋಚನೆ ಮತ್ತು ವಾಸ್ತವಗಳ ಅರಿವಿಗಿಂತಾ ಹೆಚ್ಚಾಗಿ ಭಾವುಕತೆಯನ್ನು ಆಧರಿಸಿತ್ತು ಎಂದರೆ ತಪ್ಪಾಗಲಾರದು. “ಭಾರತ ಪರಾಧೀನವಾಗಲು ಒಗ್ಗಟ್ಟಿಲ್ಲದ್ದು ಕಾರಣ. ಒಗ್ಗಟ್ಟಿಗೆ ಒಂದೇ ಭಾಷೆ ಇರುವುದು ಅತ್ಯಗತ್ಯ, ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕೆ, ಕೇಂದ್ರ-ರಾಜ್ಯಗಳ ಸಂಪರ್ಕಕ್ಕೆ ಒಂದು ಭಾರತೀಯ ಭಾಷೆಯೇ ಇರಬೇಕು, ಇದಕ್ಕೆ ಸೂಕ್ತವಾದ ಭಾಷೆ ಹಿಂದೀ, ಸ್ವಾತಂತ್ರ ಹೋರಾಟದಲ್ಲಿ ಜನರ ಭಾಷೆ ಹಿಂದೀಯಾಗಿತ್ತು, ಹಾಗಾಗಿ ಹಿಂದೀಯೆಂದರೆ ದೇಶಪ್ರೇಮದ ಸಂಕೇತ, ಹಿಂದೀಯೆಂದರೆ ಭಾರತದ ಒಗ್ಗಟ್ಟಿನ ಸಾಧನ, ಪ್ರಪಂಚಕ್ಕೆ ತೋರಿಸಿಕೊಳ್ಳಲು ದೇಶಕ್ಕೆ ಒಂದು ಭಾಷೆ ಇರಬೇಕು” ಎಂಬ ಅನಿಸಿಕೆಗಳು ಇಂತಹ ನಿಲುವಿಗೆ ಕಾರಣವಾಯಿತು. ಈ ಅನಿಸಿಕೆಗಳು ಕಾಂಗ್ರೆಸ್ಸಿನ ಮಹಾತ್ಮಾಗಾಂಧಿಯವರಂತಹ ರಾಷ್ಟ್ರೀಯ ನಾಯಕರುಗಳಿಗೇ ಇದ್ದುದ್ದರಿಂದ ಅವರ ಅನುಯಾಯಿಗಳೆಲ್ಲಾ ಕಣ್ಣುಮುಚ್ಚಿ ತಮ್ಮ ತಮ್ಮ ರಾಜ್ಯಗಳಲ್ಲಿ ಹಿಂದೀ ಜಾರಿಗೆ ಪಣತೊಟ್ಟರು. ಇಂದಿಗೂ ಭಾರತದ ರಾಷ್ಟ್ರೀಯ ಪಕ್ಷಗಳ ಆಶಯವು ‘ಒಂದು ದೇಶ, ಒಂದು ಭಾಷೆ’ ಎನ್ನುವಂತೆಯೇ ಇದೆಯೆಂದರೆ ಅಚ್ಚರಿಯಾಗುತ್ತದೆ. ಇದರ ಒಂದು ಇತ್ತೀಚಿನ ಪರಿಣಾಮವನ್ನು ನಾವು ಬೆಂಗಳೂರಿನ ಮೆಟ್ರೋ ರೈಲು ಸೇವೆಯಲ್ಲಿ ಕಾಣಬಹುದಾಗಿದೆ.

ನಮ್ಮ ಮೆಟ್ರೋ ಮತ್ತು ಅಲ್ಲಿನ ಭಾಷಾ ನೀತಿ:

ಇತ್ತೀಚೆಗೆ ಆರಂಭವಾದ, ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಾಗಿದ್ದ “ನಮ್ಮ ಮೆಟ್ರೋ” ರೈಲು ವ್ಯವಸ್ಥೆಯಲ್ಲಿ ಅನುಸರಿಸಿರುವ ಭಾಷಾನೀತಿ ತಪ್ಪಾದುದಾಗಿದೆ. ಇಲ್ಲಿ ಕನ್ನಡದ ಜೊತೆಯಲ್ಲಿ ಇಂಗ್ಲೀಷ್ ಮತ್ತು ಹಿಂದೀ ಭಾಷೆಗಳನ್ನು ಬಳಸಲಾಗಿದೆ.  ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಮೂರು ಭಾಷೆಗಳಲ್ಲಿವೆ. ಈ ಮೂಲಕ ತ್ರಿಭಾಷಾಸೂತ್ರವನ್ನು ಕನ್ನಡನಾಡಿನೊಳಗೆ ತುರುಕಲಾಗುತ್ತಿದೆ. ಒಮ್ಮೆ ಇದು ಒಪ್ಪಿತವಾಗಿಬಿಟ್ಟರೆ ನಾಳೆ ಕೇಂದ್ರಸರ್ಕಾರಿ ಕಛೇರಿಯಿಂದ ಗ್ರಾಮ ಪಂಚಾಯ್ತಿಯವರೆಗಿನ ಆಡಳಿತದವರೆಗೂ ಇದು ವಿಸ್ತರಿಸಿಬಿಡುವ ಅಪಾಯವಿದೆ. ಹೀಗೆ ಮಾಡುವುದು ಸಾಧ್ಯವಾಗಿಬಿಟ್ಟರೆ ಕನ್ನಡನಾಡು ಹಿಂದೀ ಭಾಷಿಕರ ವಸಾಹತಾಗಿಬಿಡುತ್ತದೆ. ಮೆಟ್ರೋ ಸೇವೆಯಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಮಾಡಲಾಗಿದೆ ಎನ್ನುತ್ತಾರೆ ಸಂಬಂಧಪಟ್ಟವರು. ಆದರೆ ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ ಪ್ರತಿಯೊಂದು ಭಾಷಾಜನಾಂಗಕ್ಕೂ ಸಹಜವಾಗಿ ಇರಬೇಕಾದ ಹಕ್ಕುಗಳನ್ನು ಬೋಧಿಸುವ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ನಾಡಿನ ಆಡಳಿತದಲ್ಲಿ ಹಿಂದೀ ಇರುವುದರ ಪರಿಣಾಮವೇನಾಗುತ್ತದೆ ಎಂಬುದನ್ನು ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು ಬಳಗದ ಸಮೇತ ದೆಹಲಿಗೆ ವಲಸೆ ಹೋಗುವುದಿಲ್ಲವೇ? ಬೆಂಗಳೂರಿನಲ್ಲಿಯೂ ಹಿಂದೀಯಲ್ಲಿ ವ್ಯವಸ್ಥೆಗಳು ಬಂದರೆ ಅದೇ ಆಗದೇ? ಮೊದಲೇ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀಭಾಷಿಕ ಪ್ರದೇಶಗಳ ಜನರನ್ನು (ಬಿಹಾರ್ – ೧೧೦೨, ಉತ್ತರಪ್ರದೇಶ – ೮೨೮ ಜನ/ ಚ.ಕಿ) ಜನರು, ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ (೩೧೯ ಜನ/ಚ.ಕೀ)  ಚಿನ್ನದನಾಡಿಗೆ ಸುನಾಮಿಯಂತೆ ನುಗ್ಗುವುದು ಖಂಡಿತಾ! ಇದರಿಂದಾಗಿ ನಮ್ಮೂರಿನಲ್ಲಿಯೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ನಮ್ಮ ಜನರ ಉದ್ಯೋಗಾವಕಾಶಗಳು ಪರಭಾಷಿಕರ ಪಾಲಾಗದೆ? ಹೀಗಾಗುತ್ತಾ ಹೋದಲ್ಲಿ ನಾಳೆ ಕನ್ನಡ ಉಳಿದೀತೇ? ಸಹಜವಾಗಿ ಹಿಂದೀ ತಾಯ್ನುಡಿ ಹೊಂದಿರುವವರ ಜೊತೆ ಶಾಲೆಯಲ್ಲಿ ಹಿಂದೀ ಕಲಿತ ಕನ್ನಡಿಗ ಸ್ಪರ್ಧಿಸಿ ಕೆಲಸ ಗಿಟ್ಟಿಸಿಕೊಳ್ಳಬಲ್ಲನೇ? ಊಹೂಂ... ಸಾಧ್ಯವೇ ಇಲ್ಲ. ಇದು ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಂದೀಭಾಷಿಕರನ್ನು ಎಂಬತ್ತು ಮೀಟರ್ ಮುಂದೆ ನಿಲ್ಲಿಸಿ ಸೀಟಿ ಹೊಡೆದಂತಾಗುತ್ತದೆ. ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆ “ನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿ” ಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ.

ಇದು ಬರೀ ವಲಸೆ ಪ್ರಶ್ನೆಯಲ್ಲ!

ಇಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆ ಮಾತ್ರವಲ್ಲ. ‘ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ’ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಭಾರತಸರ್ಕಾರವು, ಹಿಂದೀಯನ್ನು ಮಾತ್ರಾ ತಿಳಿದಿರುವ ಹಿಂದೀ ಭಾಷೆಯವನಿಗೆ ಇಡೀ ಭಾರತದ ಯಾವ ಮೂಲೆಯಲ್ಲೂ ಯಾವುದೇ ತೊಡಕಾಗದಂತೆ ಬದುಕಬಲ್ಲ ವ್ಯವಸ್ಥೆಯನ್ನು ಕಟ್ಟಿಕೊಡುತ್ತಿದೆ. ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲವೇ? ಕೊನೆಪಕ್ಷ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿಯಾದರೂ ಕಲಿಯಬಾರದೇ?

ಭಾರತವೆನ್ನುವ ಒಕ್ಕೂಟ ವ್ಯವಸ್ಥೆ:

ಭಾರತ ದೇಶವು ನಾನಾ ಭಾಷೆಯ ಜನರ ತವರು. ಇಲ್ಲಿ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಅನೇಕಾನೇಕ ಭಾಷಿಕ ಜನಾಂಗಗಳಿವೆ. ಈ ಪ್ರತಿಯೊಂದೂ ಒಂದು ಸಮೃದ್ಧವಾದ ಪರಂಪರೆಯನ್ನು ಬಿಂಬಿಸುತ್ತಿವೆ. ಪ್ರಪಂಚದ ಎಲ್ಲಾ ಭಾಷಿಕ ಜನಾಂಗಗಳಿಗಿರುವಂತೆಯೇ ಇಲ್ಲೂ ಭಾಷೆಯೆನ್ನುವುದು ಆಯಾ ಜನಾಂಗದ ಆಚರಣೆ, ನಂಬಿಕೆ, ಬದುಕು, ದುಡಿಮೆ, ಇತಿಹಾಸ, ಸಂವಹನ, ಸಹಕಾರಗಳ ವಾಹಿನಿಯಾಗಿದೆ. ಈ ಭಾಷೆಗಳು ತಮ್ಮವೇ ಆದ ಪ್ರಾದೇಶಿಕ ಚೌಕಟ್ಟನ್ನು ಬಹುತೇಕ ಹೊಂದಿವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳು ಪರಿಣಾಮಕಾರಿಯಾಗಬೇಕಾದಲ್ಲಿ, ಜನರಿಂದ- ಜನರಿಗಾಗಿ ಆಡಳಿತ ನಡೆಯಬೇಕಾದಲ್ಲಿ, ಜನರ ಹತ್ತಿರಕ್ಕೆ ಸರ್ಕಾರ ಹೋಗಬೇಕೆಂದಲ್ಲಿ... ಜನರ ಭಾಷೆಯಲ್ಲಿಯೇ ಆಡಳಿತ ನಡೆಯಬೇಕಾದ್ದು ಸರಿಯಾದದ್ದಾಗಿದೆ. ಜನರ ಭಾಷೆಯಲ್ಲೇ ವ್ಯವಸ್ಥೆಗಳು ರೂಪುಗೊಳ್ಳಬೇಕಾದ್ದು ಸರಿಯಾದದ್ದಾಗಿದೆ. ಹೀಗೆ ಮಾಡಿದಾಗಲೇ ಜನರು ಕಲಿಕೆಯಲ್ಲಿ ಸಾಧಿಸಿ, ದುಡಿಮೆಯಲ್ಲಿ  ಉನ್ನತಿ ಕಾಣಲು ಸಾಧ್ಯ. ಈ ಕಾರಣದಿಂದಲೇ ಭಾಷಾವಾರು ರಾಜ್ಯಗಳ ರಚನೆಯಾಗಿದ್ದು. ಜಗತ್ತಿನ ಮುಂದುವರೆದ ನಾಡುಗಳೆಲ್ಲಾ ತಮ್ಮ ನಾಡಿನೆಲ್ಲ ವ್ಯವಸ್ಥೆಗಳನ್ನು... ವಿಶೇಷವಾಗಿ ಕಲಿಕೆ ಮತ್ತು ದುಡಿಮೆಗಳನ್ನು ತಮ್ಮ ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಗಮನಿಸಿದಾಗ ಇದು ಮತ್ತಷ್ಟು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಂದರೆ ಭಾರತವೆನ್ನುವುದು ನಾನಾ ಭಾಷಾ ಜನಾಂಗಗಳ ನಾಡು. ಇಂತಹ ವೈವಿಧ್ಯಪೂರ್ಣ ನಾಡೊಂದರ ವ್ಯವಸ್ಥೆಯಲ್ಲಿ ಅದರ ಭಾಷಾನೀತಿಯು ಸಮಾನ ಗೌರವದ ಸಮಾನ ಅವಕಾಶವನ್ನು ಎಲ್ಲರಿಗೂ ಕಲ್ಪಿಸುವಂಥದ್ದಾಗಿರಬೇಕಾಗುತ್ತದೆ. ಆದರೆ ಭಾರತದ ಇಂದಿನ ತಾರತಮ್ಯದ ಭಾಷಾನೀತಿಯು ಇದಕ್ಕೆ ವಿರುದ್ಧವಾಗಿದ್ದು ಕನ್ನಡನಾಡನ್ನು ಅವನತಿಯತ್ತ ತಳ್ಳುತ್ತಿದೆ.

ಈ ಭಾಷಾನೀತಿಯು ಬದಲಾಗದೆ ಕನ್ನಡಿಗನ ರಾಜ್ಯೋತ್ಸವ ಸಂಭ್ರಮಕ್ಕೆ ಅರ್ಥವಿಲ್ಲ. ಜನತೆ ತಡಮಾಡದೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಸರ್ವನಾಶ ಹತ್ತಿರದಲ್ಲೇ ಇದೆ. ಯಾವ ಉದ್ದೇಶದಿಂದ ಏಕೀಕರಣವಾಗಬೇಕೆಂದು ನಮ್ಮ ಹಿರಿಯರು ಶ್ರಮಿಸಿದ್ದರೋ ಇಂದು ಆ ಉದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ? ನಾಡಿನ ಏಳಿಗೆಯತ್ತ ಒಂದೆರೆಡೆದಾದರೂ ಹೆಜ್ಜೆ ಇಡಲಾಗಿದೆಯೇ? ನಿಜವಾದ ರಾಜ್ಯೋತ್ಸವವು ಬಾವುಟ ಹಾರಿಸಿ, ವಾದ್ಯಗೋಷ್ಟಿ ಇಡಿಸಿ, ಜಾಥಾ ನಡೆಸಿ, ಸಿಹಿ ಹಂಚಿ, ಪ್ರಶಸ್ತಿ ನೀಡಿ ಸಂಭ್ರಮಿಸುವಷ್ಟರಲ್ಲಿ ಮಾತ್ರವಿದೆಯೇ? ಭಾರತದ ಹುಳುಕಿನ ಭಾಷಾನೀತಿಯ ಕಾರಣದಿಂದಾಗಿ ಇಂದು ಕನ್ನಡನಾಡಿನಲ್ಲಿ ಕನ್ನಡವನ್ನು ಮಾತ್ರಾ ಬಲ್ಲವನಿಗೆ ಯಾವುದೇ ತೊಡಕಿಲ್ಲದೆ ಬದುಕಲು ಸಾಧ್ಯವಿಲ್ಲದಂತಹ ವ್ಯವಸ್ಥೆ ರೂಪುಗೊಂಡಿದೆ. ಇದು ಬದಲಾಗದಿದ್ದರೆ ಕನ್ನಡಿಗ ವರ್ಷಕ್ಕೊಮ್ಮೆ ನವೆಂಬರ್ ಒಂದರಂದು ಕನ್ನಡ ಬಾವುಟ ಹಾರಿಸಿ ಹಾರಿಸಿ ಸುಸ್ತಾಗೇ ಭೂಪಟದಿಂದ ಮರೆಯಾಗಿ ನಶಿಸಿಹೋಗಿಬಿಡುತ್ತಾನೆ. ಕನ್ನಡಿಗನಿಗೆ ಇಂದು ತನ್ನ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವುದು ಭಾರತದ ಹುಳುಕಿನ ಭಾಷಾನೀತಿ ಎನ್ನುವುದು ಅರಿವಾಗಲಿ. ಈ ಭಾಷಾನೀತಿ ಬದಲಾಗದಿದ್ದರೆ, ಇದಕ್ಕಾಗಿ ದನಿಯೆತ್ತದಿದ್ದರೆ ನಾಳಿನ ಪೀಳಿಗೆ ನಮ್ಮನ್ನು ಮನ್ನಿಸೀತೇ? “ಸತ್ತಂತಿಹರನು ಬಡಿದೆಚ್ಚರಿಸುವ ಕನ್ನಡ ಡಿಂಡಿಮವನ್ನು ನುಡಿಸುವ ಹೃದಯ ಶಿವನಾರು? ಅದನ್ನು ಕೇಳಿ ಮೈಕೊಡವಿ ಮೇಲೆದ್ದು ತ್ರಿವಿಕ್ರಮನಾಗುವ ಕನ್ನಡಿಗನಾರು?” ಎಂದು.. ಅಂದು ಹಂಪೆಯಳಿದಾಗ ತತ್ತರಿಸಿದ್ದ ಕನ್ನಡಮ್ಮ, ಇಂದು ತನ್ನ ಮಕ್ಕಳ ಮೈಮರೆಯುವಿಕೆ ಕಂಡು ಹೀಗೆ ಮರುಗುತಿರಬಹುದೇ?

ಮೆಟ್ರೋಲಿ ಹಿಂದೀ: ಜನರ ದೂರು ಮತ್ತು ಅಧಿಕಾರಿಗಳ ಜೋರು!!

( ಫೋಟೋ ಕೃಪೆ: http://www.skyscrapercity.com/showthread.php?p=83403565)

ನಮ್ಮ ಮೆಟ್ರೋದಲ್ಲಿ ಹಿಂದೀಗೆ ಸ್ಥಾನ ಕೊಟ್ಟಿರೋದ್ರು ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಬಂಧಿಸಿದ "ನಮ್ಮ ಮೆಟ್ರೋ" ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದ ಕೆಲ ಓದುಗರು ಮೆಟ್ರೋದಿಂದ ಬಂದಿರೋ ಉತ್ತರಗಳನ್ನು ನೋಡಿ ದಂಗಾಗಿದ್ದಾರೆ ಗುರೂ! ಬಳಗದ ಜೊತೆ ನಮ್ಮ ಮೆಟ್ರೋ ಮೇಲಧಿಕಾರಿಗಳ ಮಿಂಚೆಯನ್ನು ಹಂಚಿಕೊಂಡಿರುವ ಈ ಗೆಳೆಯರ ಅನುಭವ ನಿಜಕ್ಕೂ ಸಾರ್ವಜನಿಕ ಸೇವೆಯಲ್ಲಿರುವವರ ಮನಸ್ಥಿತಿ ಹೀಗೂ ಇರಬಹುದಾ? ಎನ್ನುವ ಅನುಮಾನ ಹುಟ್ಟಿಸುವಂತಿದೆ.

ಉದ್ಧಟತನದ ಉತ್ತರಗಳು!

"ಕನ್ನಡದಲ್ಲಿ ನಿಮಗೆ ಸೇವೆ ಸಿಗುತ್ತಿರುವ ತನಕ ನಿಮಗೆ ಅತೃಪ್ತಿ ಇರಬಾರದು!
ಇನ್ಮುಂದೆ ನನಗೆ ನೀವು ಪತ್ರ ಬರೆಯೋ ಅಗತ್ಯವಿಲ್ಲ!
ಬೇಕಾದ್ರೆ ನ್ಯಾಯಾಲಯಕ್ಕೆ ಹೋಗಿ!
ಸಂವಿಧಾನದಲ್ಲಿ ಬರೆದಿರೋದ್ರು ಬಗ್ಗೆ ನಿಮ್ಮ ಕಾನೂನು ಸಲಹೆಗಾರರಿಂದ ಸಲಹೆ ಪಡ್ಕೊಂಡು ಸರಿಯಾಗಿ ತಿಳ್ಕೊಳ್ಳಿ !
ನಿಮ್ಮ ಹಿಂದೀ ದ್ವೇಷವನ್ನು ಬಿಡಿ!
ಹಿಂದೀ ದ್ವೇಷದ ಚಳವಳಿಯನ್ನು ಬಿಡಿ! 
ಸ್ವಲ್ಪ ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಿ!
ನಾವು ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ಸಾಧನಗಳಲ್ಲಿ ಒಂದಾದ ತ್ರಿಭಾಷಾಸೂತ್ರದ ನೀತಿಯನ್ನು ಅಳವಡಿಸಿಕೊಂಡಿದ್ದೇವೆ.
ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಕನ್ನಡದಲ್ಲಿ ತರಬೇತಿ ಪಡೆದಿಲ್ಲ. ಅವನನ್ನು ಮಾತಾಡಿಸಿ ಅವನ ಕರ್ತವ್ಯಕ್ಕೆ ತೊಂದರೆ ಮಾಡಿದ್ದೀರಿ, ನಿಮ್ಮ ದೂರೇನಿದ್ದರೂ ಸಂಬಂಧಿಸಿದ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಹತ್ತಿರ ಮಾತಾಡಿಕೊಳ್ಳಿ"
ದೇಶದ ಏಕತೆಗಾಗಿ ಹಿಂದೀನಾ ಹಾಕಿದೀವಿ... ತೆಪ್ಪಗಿರಿ ಎನ್ನುವ ಧ್ವನಿಯಲ್ಲಿ ಹೀಗೆಲ್ಲಾ ಉತ್ತರ ಬರೆದಿರೋದು ಮೆಟ್ರೋ ಸಂಸ್ಥೆಯ ಯಾವುದೋ ಸಣ್ಣ ಸ್ತರದ ಅಧಿಕಾರಿಯಲ್ಲ... ಅದು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀ ಸಿವಸೈಲಂ ಅವರದ್ದು! ಅಬ್ಬಾ ಎಂತಹ ಸೌಜನ್ಯಾ ಅಲ್ವಾ? ಸಾಹೇಬರ ಉತ್ತರದ ಧಾಟಿಯನ್ನು ಬದಿಗಿಟ್ಟು ಅವರು ನೀಡಿರುವ ಕಾರಣಗಳತ್ತ ಕಣ್ಣು ಹಾಯಿಸಿದರೆ ಮುಖ್ಯವಾಗಿ ಹಿಂದೀ ಬಳಸಲು ಅವರು ನೀಡಿರುವ ಸಮರ್ಥನೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬಗ್ಗೆ, ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರ ಹಣ ಹೂಡಿರುವ ಕಾರಣದಿಂದಾಗಿಯೂ, ದೇಶದ ಒಗ್ಗಟ್ಟಿಗಾಗಿಯೂ ಹಿಂದೀಯನ್ನು ಬಳಸಿದ್ದೇವೆ ಎಂದಿದ್ದಾರೆ. ನಮ್ಮ ನಾಡಿನಲ್ಲಿ ನಮ್ಮದಲ್ಲದ ಭಾಷೆ ಯಾಕೆ ಬಳಸಿದ್ದೀರಿ ಎಂದರೆ ಅದಕ್ಕೆ ಹಿಂದೀ ದ್ವೇಷ ಚಳವಳಿ ಎನ್ನುವ ಹೆಸರಿಡುವ ಅಧಿಕಾರವನ್ನು ಇವರಿಗ್ಯಾರು ಕೊಟ್ಟರೋ ಕಾಣೆವು! ಸುರಕ್ಷತಾ ಸಿಬ್ಬಂದಿಗೆ ಕನ್ನಡ ಬಾರದಿರುವುದನ್ನು ಸಮರ್ಥಿಸುತ್ತಾ ಅವರನ್ನು ಮಾತಾಡಿಸಿ ಕರ್ತವ್ಯಕ್ಕೆ ತೊಂದರೆ ಕೊಟ್ಟಿದ್ದೀರಿ ಎಂದು ಪ್ರತಿ ದೂರುವುದರ ಹಿಂದೆ ಹೇಗಾದರೂ ಸರಿ, ಬಾಯಿ ಮುಚ್ಚಿಸುವ ಮನಸ್ಥಿತಿಯಲ್ಲದೆ ಬೇರೇನೂ ಇದ್ದಂತಿಲ್ಲ... ನಾಳೆ ಯಾವುದಾದರೂ ಅಪಾಯಕಾರಿ ಸನ್ನಿವೇಶವುಂಟಾದರೆ ನಾವು ಸೆಕ್ಯುರಿಟಿಗೆ ತಿಳಿಸಬೇಕೋ ಬೇಡವೋ? ಕನ್ನಡ ಬಾರದವರಿಗೆ ಹೇಗೆ ತಿಳಿಸಬೇಕು? ಎನ್ನುವ ಬಗ್ಗೆ ಕಾಳಜಿಯಾಗಲೀ ಆಲೋಚನೆಯಾಗಲೀ ಇವರುಗಳಿಗೆ ಇದ್ದಂತಿಲ್ಲ!

ತ್ರಿಭಾಷಾ ಸೂತ್ರ ರಾಷ್ಟ್ರೀಯ ನೀತಿಯೇ? ಮೆಟ್ರೋಗೆ ಅನ್ವಯಿಸುವುದೇ?

ಭಾರತದ ಸಂವಿಧಾನದ ಭಾಗ XVIIರಲ್ಲಿ ಭಾಷಾನೀತಿಯ ಬಗ್ಗೆ ಹೇಳಲಾಗಿದೆ. ಇದರಂತೆ ಹಿಂದೀ ಮತ್ತು ಇಂಗ್ಲೀಷುಗಳನ್ನು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಲಾಗಿದೆ. (ಇಂಗ್ಲೀಷು ಸೇರಿಕೊಂಡ/ ಇಂದಿಗೂ ಉಳಿದುಕೊಂಡ ಕಥನ ಬೇರೆಯದೇ ಇದೆ). ಇದರ ಅಂಗವಾಗೇ ೧೯೬೭ರಲ್ಲಿ ರೂಪುಗೊಂಡು ೧೯೬೮ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರವಾದದ್ದೇ "ಆಡಳಿತ ಭಾಷಾ ನಿರ್ಣಯ, ೧೯೬೮". ಇದರ ಅಂಗವಾಗಿಯೇ "ತ್ರಿಭಾಷಾ ಸೂತ್ರ" ರೂಪುಗೊಂಡಿತು. ಮೂಲತಃ ಕೇಂದ್ರಸರ್ಕಾರಿ ನೌಕರಿಯ ಪ್ರವೇಶ ಪರೀಕ್ಷೆಗಳನ್ನು ಹಿಂದೀ/ ಇಂಗ್ಲೀಷುಗಳಲ್ಲಿ ಮಾತ್ರಾ ನಡೆಸುವುದಕ್ಕೆ ಅನೇಕ ಹಿಂದೀಯೇತರ ರಾಜ್ಯಗಳು ವಿರೋಧ ಸೂಚಿಸಿ, ಹೋರಾಟ ನಡೆಸಿದ್ದರಿಂದ ಹುಟ್ಟಿಕೊಂಡ ರಾಜೀಸೂತ್ರ "ತ್ರಿಭಾಷಾ ಸೂತ್ರ" ಎಂದರೆ ತಪ್ಪಾಗಲಾರದು. ಕೇಂದ್ರಸರ್ಕಾರಿ ನೌಕರಿಗಳ ಪರೀಕ್ಷೆಗಳನ್ನು ಎಂಟನೇ ಪರಿಚ್ಛೇಧದಲ್ಲಿ ಪಟ್ಟಿ ಮಾಡಿರುವ ಭಾಷೆಗಳಲ್ಲೂ ನಡೆಸಲು ಅವಕಾಶ ನೀಡುವ ಈ ನಿರ್ಣಯವು "ರಾಜ್ಯಸರ್ಕಾರಗಳ ಜೊತೆ ಸಮಾಲೋಚಿಸಿ" ರಾಷ್ಟ್ರೀಯ ಏಕತೆಯನ್ನು ಮೂಡಿಸಲು ತ್ರಿಭಾಷಾ ಸೂತ್ರವನ್ನು ಜಾರಿಮಾಡಬೇಕು ಎಂದು ಹೇಳಿದೆ. ತ್ರಿಭಾಷಾ ಸೂತ್ರದ ಅನ್ವಯವಾಗಿ ಹಿಂದೀ ಭಾಷಿಕ ಪ್ರದೇಶಗಳ ಮಕ್ಕಳು ಹಿಂದೀ - ಇಂಗ್ಲೀಷ್ ಜೊತೆಯಲ್ಲಿ ಇನ್ನೊಂದು ಭಾರತೀಯ ಭಾಷೆಯನ್ನು (ವಿಶೇಷವಾಗಿ ದಕ್ಷಿಣ ಭಾರತೀಯ ಭಾಷೆಯನ್ನು) ಕಲಿಯತಕ್ಕದ್ದು ಮತ್ತು ಅಂತೆಯೇ ಹಿಂದೀಯೇತರ ರಾಜ್ಯಗಳ ಮಕ್ಕಳು ರಾಜ್ಯಭಾಷೆ - ಇಂಗ್ಲೀಷ್ - ಹಿಂದೀಯನ್ನು ಕಲಿಯತಕ್ಕದ್ದು ಎನ್ನಲಾಗಿದೆ. ಈ ನಿರ್ಣಯದಲ್ಲಿ ಕೇಂದ್ರಸರ್ಕಾರ ಹಣ ಹೂಡುವ ಸಾರ್ವಜನಿಕ ಯೋಜನೆಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು ಎಂದು ಎಲ್ಲಿದೆಯೋ ಹುಡುಕಿದರೂ ಸಿಗುತ್ತಿಲ್ಲಾ ಗುರೂ!

ಕೇಂದ್ರದ ಒಂದು ೨,೦೦೦ ಕೋಟಿಗೆ ಹಿಂದೀ, ರಾಜ್ಯದ ವಾರ್ಷಿಕ ೮೦,೦೦೦ ಕೋಟಿಗೆ?

ಕೇಂದ್ರಸರ್ಕಾರ ಇಂಥದ್ದೊಂದು ಸೂಚನೆಯನ್ನು ಮೆಟ್ರೋಗೆ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಟ್ರೋದ ಶ್ರೀ ಸಿವಸೈಲಂ ಅವರು ಮಾತ್ರಾ, ತಾವು ಭಾರತದ ಏಕತೆಯ ಹರಿಕಾರರೆನ್ನುವಂತೆ ಮಾತಾಡುತ್ತಾ ಕನ್ನಡಿಗರಿಗೆ ಸಹಿಷ್ಣುತೆಯನ್ನು ಬೋಧಿಸುತ್ತಿರುವುದನ್ನು ಕಂಡಾಗ ವಿಪರ್ಯಾಸವೆನ್ನಿಸುತ್ತದೆ. ಆದರೂ ಮೆಟ್ರೋ ಯೋಜನೆಯಲ್ಲಿ ಸುಮಾರು ೩೦% ಹೂಡಿಕೆ ಹೊಂದಿರುವ ಕಾರಣದಿಂದಲೇ ಇಲ್ಲಿ ಹಿಂದೀ ಇರಬೇಕು ಎನ್ನುವುದಾದರೆ ಪ್ರತಿವರ್ಷ ಸುಮಾರು ೮೦,೦೦೦ ಕೋಟಿ ತೆರಿಗೆಯನ್ನು ಕರ್ನಾಟಕದಿಂದ ಸಂಗ್ರಹಿಸುವ ಕೇಂದ್ರಕ್ಕೆ ಕೇಂದ್ರದ ಆಡಳಿತದಲ್ಲಿ ಕನ್ನಡ ಇರಬೇಕೆಂಬುದು ಅರಿವಾಗದೇ? ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ? ಇಷ್ಟಕ್ಕೂ ಕೇಂದ್ರಸರ್ಕಾರಿ ಕಛೇರಿಗಳಾದ ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತ್ರಿಭಾಷಾ ಸೂತ್ರ ಎಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ? ಪಾಸ್‍ಪೋರ್ಟ್ ಅರ್ಜಿ, ಜೀವವಿಮೆ, ಬ್ಯಾಂಕ್ ಚೆಕ್ಕುಗಳಲ್ಲಿ ತ್ರಿಭಾಷೆ ಯಾಕಿಲ್ಲಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರಾದರೂ ಯಾರು ಗುರೂ?!

ಕೊನೆಹನಿ: ಇರುವ ಗ್ರಾಹಕ ಒಬ್ಬನಾದರೂ ಕೂಡಾ, ಆ ದೂರಿನ ದನಿ ಒಂಟಿಯಾಗಿದ್ದರೂ ಕೂಡಾ ಸೌಜನ್ಯದಿಂದ ಉತ್ತರಿಸುವುದನ್ನು, ದೂರು ಕೊಟ್ಟವರನ್ನೇ ದೂರುವುದನ್ನು ಬಿಡುವುದನ್ನೂ ಮೆಟ್ರೋ ಅಧಿಕಾರಿಗಳಿಗೆ ಸರ್ಕಾರ ಕಲಿಸಿಕೊಟ್ಟೀತೆ? ಕರ್ನಾಟಕ ರಾಜ್ಯಸರ್ಕಾರದ ಕಚ್ಚದ, ಭುಸುಗುಟ್ಟದ "ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾವಲು ಸರ್ಪ ಈಗಾದರೂ ಭುಸುಗುಟ್ಟೀತೇ?

"ಮೆಟ್ರೋಲಿ ಕನ್ನಡ ಇಲ್ವಾ? ಹಿಂದೀ ಯಾಕೆ ಬೇಡಾ?" ಅಂದ್ರೇ...


(ಮೆಟ್ರೋ ರೈಲು ನಿಲ್ದಾಣ - ಮಹಾತ್ಮಾಗಾಂಧಿ ರಸ್ತೆ)


(ರೈಲು ಹಳಿಯ ಮೇಲಿನ ಹಿಂದೀ ಸುರಕ್ಷತಾ ಸೂಚನೆ)

ಬೆಂಗಳೂರಿನ ಮಾಯಾಲೋಕಕ್ಕೆ ಮೊನ್ನೆ ಹೊಸದಾಗಿ ಸೇರ್ಪಡೆಯಾದ ಮೆಟ್ರೋ ರೈಲು "ನಮ್ಮ ಮೆಟ್ರೋ", ಕನ್ನಡಿಗರೆಲ್ಲಾ ಹೆಮ್ಮೆ ಪಟ್ಟುಕೊಳ್ಳಲು ಕಾರಣವಾಗಿದೆ. ಮೊನ್ನೆ ಈ ರೈಲಿನಲ್ಲಿ ಪಯಣಿಸಿದವರ ಅನುಭವ ಕಂಡು ಕೇಳಿದಾಗ, ಮೆಟ್ರೋ ಆರಂಭ ಒಂದೆಡೆ ಸಂತಸಕ್ಕೆ ಕಾರಣವಾದರೂ ಮತ್ತೊಂದೆಡೆ ಅತಿ ಆತಂಕಕ್ಕೆ ಕಾರಣವಾಗಿದೆ ಎನ್ನಿಸಿತು. ಏನೀ ಆತಂಕ? ಯಾಕೀ ಆತಂಕ? ಬನ್ನಿ... ನೋಡ್ಮಾ...


ನಮ್ಮ ಆತಂಕಕ್ಕೆ  ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!


ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ?

ಹೌದಲ್ವಾ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಈ ಆತಂಕಕ್ಕೆ ಒಳಗಾದವರನ್ನು ಎದುರಾಗ್ತಾನೆ ಇರುತ್ತೆ. ಇಲ್ಲಿ ಆತಂಕ ಇರೋದು  ಕನ್ನಡದವರಿಗೆ ಅನುಕೂಲ ಆಗ್ತಾ ಇದೆಯೋ ಇಲ್ಲವೋ ಅನ್ನೋಕಿಂತ, ಕನ್ನಡನಾಡಿನ ಒಂದೂರಿನ ಬಡಾವಣೆಗಳನ್ನು ಬೆಸೆಯಲು ಇರುವ ಸ್ಥಳೀಯ ಸಾರಿಗೆಯಲ್ಲಿ ಕನ್ನಡವಲ್ಲದ ಇನ್ನೊಂದು ಭಾಷೆ ಇದೆ ಅನ್ನೋದು. ಅರೆರೆ, ಇಲ್ಲಿ ಕನ್ನಡಿಗರು ಮಾತ್ರಾ ಬರ್ತಾರಾ? ನಾವು ಸಂಕುಚಿತ ಮನಸ್ಸಿನವರಾಗಬಾರದು. ಹೊರಗಿಂದ ಬಂದವರಿಗೆ ಕೂಡಾ ಅನುಕೂಲವಾಗಬೇಕು ಅನ್ನೋ ಮಾತು ಕೇಳಿ ಬರುತ್ತೆ. ಸಹಜವೇ ಬಿಡಿ. ಹಾಗಾದಾಗ ನಾವು ಇಡೀ ಪ್ರಪಂಚದಲ್ಲಿ ಹೆಚ್ಚಿನ ಜನರು ಇವತ್ತು ಓದಲು ಕಲಿತಿರುವ ರೋಮನ್ ಲಿಪಿಯನ್ನು ಬಳಸಿದರಾಯ್ತು. ಇಂಗ್ಲಿಷ್ ಭಾಷೆ ಕನ್ನಡದ ಜೊತೆಯಲ್ಲಿ ಇರೋದನ್ನು ಹೇಗೋ ಒಪ್ಪಬಹುದು. ಆದರೆ ಹಿಂದೀಯನ್ನು? ಊಹೂಂ... ಒಪ್ಪಕ್ಕಾಗಲ್ಲಾ ಗುರೂ! ಒಪ್ಪಿದರೆ ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದೆಂಗೆ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ಮೆಟ್ರೋಲಿ ಹಿಂದೀಲಿ ಹಾಕಬೇಕು ಅಂತನ್ನೋದು ಮೆಟ್ರೋ ಆಡಳಿತದವರ ನಿರ್ಧಾರವೇ ಆಗಿರಬಹುದು.. ಆದರೆ ಇದರ ಪರಿಣಾಮವೇನಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಇಲ್ಲದಿದ್ದರೂ ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು, ಬಳಗ, ನೆಂಟರು ಪಂಟರು, ಬೆಕ್ಕು, ನಾಯಿ, ಅಂಗಿ, ಚಡ್ಡಿ  ಎಲ್ಲಾನು ಹೊತ್ಕೊಂಡು ದೆಹಲಿಗೆ ವಲಸೆ ಹೋಗಲ್ವಾ? ಇದೇ ಗುರೂ,  ಇಲ್ಲಿ ಹಿಂದೀಲಿ ವ್ಯವಸ್ಥೆಗಳು ಬಂದರೂ ಆಗೋದು... ಅಲ್ವಾ ಗುರೂ! ಮೊದಲೇ ಜನಸಂಖ್ಯಾ ಸ್ಫೋಟದಿಂದ ನರುಳ್ತಾ ಇರೋ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಚಿನ್ನದ ನಾಡಿಗೆ ಸುನಾಮಿ ಹಾಗೆ ನುಗ್ಗೋದು ಖಂಡಿತಾ! ಇದರಿಂದಾಗಿ ನಮ್ಮೂರಲ್ಲೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ಈ ಕಾರಣಕ್ಕಾಗಿ ಬೆಂಗಳೂರಿನ ಮೆಟ್ರೋಲಿ ಹಿಂದೀ ಬೇಡ. 

ಇದು ಬರೀ ವಲಸೆ ಪ್ರಶ್ನೆಯಲ್ಲ!

ಅಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆಯೂ ಅಲ್ಲ. ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲದಿದ್ದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿ ಕಲಿಯಲಿ... ಅಲ್ವಾ ಗುರೂ!

ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲೀಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲೀಶ್ ಒಪ್ಪಿದರೆ, ಇಂಗ್ಲೀಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ... ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ  ಭೂಪಟದಿಂದಲೇ ಹೊಸಕಿ ಹಾಕುತ್ತದೆ.

ಹಣಕಾಸು ಒಳಗೊಳ್ಳುವಿಕೆ: ಇನ್ಮುಂದೆ ಕಂಪನಿ ಮಾಹಿತಿ ಕನ್ನಡದಲ್ಲೂ!

ಭಾರತ ಸರ್ಕಾರದ ಭಾಷಾನೀತಿಯ ಹುಳುಕು ಏನೇ ಇರಲಿ. ಕೇಂದ್ರಸರ್ಕಾರದ ಸಚಿವಾಲಯಗಳು ಮಾತ್ರಾ ತಮ್ಮ ಇಲಾಖೆಗಳು ರೂಪಿಸಿರುವ ಯೋಜನೆಗಳು ಜನರನ್ನು ತಲುಪಬೇಕಿದ್ದರೆ ಸರಿಯಾಗಿರೋ ನೀತಿಯನ್ನು ಅನುಸರಿಸಲೇ ಬೇಕು ಅನ್ನೋದನ್ನು ಮನವರಿಕೆ ಮಾಡಿಕೊಂಡಿರುವ ಹಾಗಿದೆ ಗುರೂ! ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯವನ್ನು ಕುರಿತು ಇತ್ತೀಚಿಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿಯನ್ನು ನೋಡಿ.

ಹಣಕಾಸು ಒಳಗೊಳ್ಳುವಿಕೆಯ ಪರಿಣಾಮಕಾರಿ ದಾರಿ!

"ಹಣಕಾಸು ಒಳಗೊಳ್ಳುವಿಕೆ" ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಲು ಪಣ ತೊಟ್ಟಿರುವ ಕಂಪನಿ ವ್ಯವಹಾರಗಳ ಸಚಿವಾಲಯವು ಇನ್ನು ಮುಂದೆ ಕಂಪನಿಗಳ ಆಯವ್ಯಯ ಮಾಹಿತಿಯನ್ನು ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ನಮ್ಮ ನಮ್ಮ ಭಾಷೆಗಳಲ್ಲೇ ಸಿಗುವಂತೆ ಕ್ರಮತೆಗೆದುಕೊಳ್ಳುತ್ತದೆಯಂತೆ. ಇದಕ್ಕೆ ಸಚಿವಾಲಯದ ಒಪ್ಪಿಗೆಯೂ ಇದೆಯಂತೆ. ಆಹಾ! ಎಂಥಾ ಸೊಗಸಾದ ಸುದ್ದಿ ಇದು. ಕನ್ನಡ ಭಾಷೆಯ ಹೂಡಿಕೆದಾರರು ಕನ್ನಡದಲ್ಲೇ ತಮಗೆ ಬೇಕಾದ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುವಂತಾಗುತ್ತದೆ ಎನ್ನುವ ಸುದ್ದಿಯೇ ಸೂಪರ್ರು ಗುರೂ! ಇಂಥಾ ಕ್ರಮಗಳಿಂದ ಮಾತ್ರವೇ "ಹಣಕಾಸು ಒಳಗೊಳ್ಳುವಿಕೆ"ಯಂತಹ ಜನರಿಗೆ ಉಪಯೋಗವಾಗೋ ಯೋಜನೆಗಳು ಎಲ್ಲರನ್ನೂ ಮುಟ್ಟಲು ಸಾಧ್ಯ! ಅಂದ ಹಾಗೆ ಈ ಸಚಿವಾಲಯದ ಮಂತ್ರಿಗಳು ನಮ್ಮ ಕರ್ನಾಟಕದ ಶ್ರೀ ವೀರಪ್ಪ ಮೊಯ್ಲಿಯವರು ಅನ್ನೋದು ಕೂಡಾ ಸಂತಸದ ವಿಷಯವೇ ಆಗಿದೆ. ಇರಲಿ, ಇದು ಯಾವುದೋ ಒಂದು ಯೋಜನೆಗೆ, ಒಂದು ಇಲಾಖೆಗೆ ಸೀಮಿತವಾಗಿಬಿಡಬಾರದು. ಕೇಂದ್ರಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಭಾರತದ ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿರುವ ಎಲ್ಲಾ ೨೨ ಭಾಷೆಗಳಲ್ಲಿ ಸೇವೆ ಕೊಡುವಂತಾಗಲಿ...! ಹೌದಲ್ವಾ ಗುರೂ?

ಕನ್ನಡಿಗ: ಸಾಧುಂಗೆ ಸಾಧು....


ಇದು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಬರಹ. ಇದರ ಪ್ರಮುಖ ಸಾಲುಗಳು ಮೂಲತಃ ಕಪ್ಪೆ ಅರಭಟ್ಟನ್ನ ವರ್ಣಿಸುದ್ರೂ ಇದನ್ನು ಸಾಮಾನ್ಯವಾಗಿ ನಾವೆಲ್ಲಾ ಬಳಸೋದು ಕನ್ನಡಿಗನನ್ನು ವರ್ಣಿಸೋಕೇ ಎಂದೇ... ಏಳನೇ ಶತಮಾನದ ಈ ಶಾಸನದಲ್ಲಿ ಹೀಗಿದೆ:
ಸಾಧುಂಗೆ ಸಾಧು
ಮಾಧುರ್ಯಂಗೆ ಮಾಧುರ್ಯನ್
ಬಾಧಿಪ್ಪ ಕಲಿಕೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ... 
ಅಂದರೆ ಈತನು ಸಾಧುಗಳಿಗೆ ಸಾಧುವೂ, ಮಧುರವಾಗಿ ವ್ಯವಹರಿಸುವವರೊಡನೆ ಮಧುರವಾಗಿ ವ್ಯವಹರಿಸುವವನೂ, ತೊಂದರೆಕೊಡುವವರಿಗೆ ಕಲಿಯುಗ ಯಮನೂ ಆಗಿರುವನು ಮತ್ತು ಈತ ಮಾಧವನಲ್ಲದೆ ಬೇರಾರೂ ಅಲ್ಲಾ... ಎಂದು. ಇಂತಹ ಹೊಗಳಿಕೆಗೆ ಅಂದಿನ ಕನ್ನಡಿಗ ಪಾತ್ರನಾಗಿದ್ದ ಎನ್ನುವುದನ್ನು ನೆನೆದಾಗ ಮನ ಹಿಗ್ಗುತ್ತದೆ. 

ಈಗ್ಯಾಕಪ್ಪಾ ಈ ಮಾತು ಅಂದರೆ...

ಹೌದು, ಈಗ್ಯಾಕಪ್ಪಾ ಈ ಮಾತೂ ಅಂದ್ರೆ, ಇತ್ತೀಚಿಗೆ ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿತ್ತು. ಅದು ವಿಕೀಲೀಕ್ಸ್ ಲೀಕ್ ಮಾಡಿದ ಸುದ್ದಿ. ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ಼್ ಅಮೇರಿಕಾಗೆ ಹೋಗಲು ಬಯಸುವವರು ವೀಸಾಗಾಗಿ ಅರ್ಜಿ ಸಲ್ಲಿಸಿದಾಗ ಯಾವ ಭಾಷಿಕರಿಗೆ ಸರಳವಾಗಿ ವೀಸಾ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಇದೆ. "ಇಂಗ್ಲೀಷೇತರ ಅರ್ಜಿದಾರ ದಕ್ಷಿಣ ಭಾರತೀಯರಲ್ಲಿ, ಕನ್ನಡಿಗರಿಗೆ ವೀಸಾ ಸಿಗೋದು ಸುಲಭ.. ಯಾಕೆಂದರೆ ಇವರಲ್ಲಿ ಮಾಹಿತಿ ನೀಡುವಲ್ಲಿ ಪ್ರಮಾದವೆಸಗುವರ ಪ್ರಮಾಣ ಉಳಿದವರಿಗಿಂತಾ ಕಡಿಮೆ, ಇವರು ಆರ್ಥಿಕವಾಗಿ ಸಬಲರು" ಎಂದು ಈ ವರದಿಯಲ್ಲಿ ಪ್ರಕಟವಾಗಿದೆ. 


ಕನ್ನಡಿಗರು ಪ್ರಾಮಾಣಿಕರು ಅನ್ನೋದು ಕನ್ನಡಿಗರು ಸಹೃದಯರು, ಶಾಂತಿಪ್ರಿಯರು, ಸಹನಶೀಲರು ಎಂಬೆಲ್ಲಾ ಬಿರುದುಗಳಂತೆಯೇ ಒಂದು ವಿಶೇಷಣವಾಗಿದ್ದು ನಾವೆಲ್ಲಾ ಹೆಮ್ಮೆ ಪಡಲು ಕಾರಣವಾಗಿದೆ. ಜೊತೆಯಲ್ಲೇ ನಮ್ಮ ಮೇಲಾಗುವ ದಬ್ಬಾಳಿಕೆಯ ವಿರುದ್ಧ ದನಿ ಎತ್ತಿದಾಗೆಲ್ಲಾ ಕನ್ನಡಿಗರನ್ನು ಸುಮ್ಮನಾಗಿಸಲೆಂದೇ ಇಂತಹ ವಿಶೇಷಣಗಳು ಬಳಕೆಯಾಗುತ್ತಿರುವುದನ್ನು ಕಂಡಾಗ ಈ ಮತ್ತೊಂದು ಬಿರುದಿನ ಬಗ್ಗೆ ಆತಂಕವೂ ಆಗುತ್ತಿದೆ ಗುರೂ!

ಇಂದಿನ ಮೈಸೂರು ದಸರಾ ನಿಜಕ್ಕೂ ನಮ್ಮ ನಾಡಹಬ್ಬಾನಾ?




ನಾಲ್ಕುನೂರನೇ ಮೈಸೂರು ದಸರಾ ಶುರುವಾಗಿದೆ. ಈ ಸಂದರ್ಭದಲ್ಲಿ ನೆನಪಾದದ್ದು ಈ ಹಾಡು. ಕರುಳಿನ ಕರೆ ಚಿತ್ರದ ಡಾ. ರಾಜ್ ಅಭಿನಯದ ಈ ಹಾಡನ್ನು ಕೇಳ್ತಾ ಇದ್ದಾಗ ಇದರ ಕೆಲಸಾಲುಗಳು ಗಮನ ಸೆಳೆದವು. ಮೈಸೂರಿನಲ್ಲಿ ನಡೆಯೋ ದಸರಾ ಉತ್ಸವವು ಯಾವ ಕಾರಣಕ್ಕೆ ನಡೀತಾಯಿದೆ ಅನ್ನೋದನ್ನು ಇಡೀ ಕನ್ನಡ ಕುಲಕ್ಕೆ ಈ ಸಾಲುಗಳು ಸಾರಿ ಹೇಳ್ತಿವೆ.
ಮೈಸೂರು ದಸರಾ, ಎಷ್ಟೊಂದು ಸುಂದರಾ!
ಚೆಲ್ಲಿದೆ ನಗೆಯಾ ಪನ್ನೀರಾ, ಎಲ್ಲೆಲ್ಲೂ ನಗೆಯಾ ಪನ್ನೀರಾ!!
ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆ ಮನೆ ನಲಿಸುವ ಶುಭ ನವರಾತ್ರಿ!!
ಮಾರ್ ನವಮಿ ಆಯುಧ ಪೂಜೆಯ ಮಾಡಿ
ಮಾತಾಯ ಚರಣದೆ ವರವನು ಬೇಡಿ
ಮಕ್ಕಳು ನಾವೆಲ್ಲಾ ಒಂದಾಗಿ ಕೂಡಿ
ಕೊಂಡಾಡುವಾ ಬನ್ನಿ, ಶುಭ ನವರಾತ್ರಿ!!
ಶತ್ರುವ ಅಳಿಸಲು ಶಸ್ತ್ರವ ಹೂಡಿ
ಬಡತನ ಅಳಿಸಲು ಪಂಥವಾ ಮಾಡಿ
ಹೆಗಲಿಗೆ ಹೆಗಲನು ನಾವ್ ಜೊತೆ ನೀಡಿ
ದುಡಿಯೋಣ ತಾಯಿಯ ಹೆಸರನು ಹಾಡಿ!!
ಈ ಹಾಡು ಕೇಳಿದಾಗ ಮೈಸೂರು ದಸರಾ ನಮ್ಮದು ಅನ್ನಿಸೋದು ಸಹಜವಾಗಿದೆ.

ಅಂದಿನ ನಮ್ಮ ದಸರಾ!

ಇಂಥಾ ಕನ್ನಡಿಗರ ನಾಡಹಬ್ಬ ನಾನ್ನೂರು ವರ್ಷಗಳ ಹಿಂದೆ ಮೈಸೂರು ಆಳರಸರಾದ ಯದುವಂಶದ ಒಡೆಯರ್ ರಾಜಮನೆತನದವರು ಆರಂಭಿಸಿದ್ದಂತೆ. ಕರ್ನಾಟಕ ರತ್ನ ಸಿಂಹಾಸನಾಧೀಶರಾದ ವಿಜಯನಗರದವರ ವಾರಸುದಾರಿಕೆಯ ಪ್ರತೀಕದಂತೆ ಆರಂಭವಾದ ಈ ವೈಭವದ ಹಬ್ಬ ಮೂಲತಃ ಒಂದು ಧಾರ್ಮಿಕ ಆಚರಣೆಯೇ ಆಗಿತ್ತು. ಸ್ವಾತಂತ್ರಕ್ಕೂ ಮೊದಲು ಇದ್ದ ಉತ್ಸವದ ಆಚರಣೆಯು ಭಾರತದೊಂದಿಗೆ ಮೈಸೂರು ವಿಲೀನವಾಗಿ, ಜನಾಡಳಿತ ಆರಂಭವಾಗಿ ರಾಜ ಮನೆತನ ಆಡಳಿತದಿಂದ ಹಿಂದೆ ಸರಿಯುವುದರೊಂದಿಗೆ ಜನರ ಹಬ್ಬವಾಯಿತು. ಯಾವ ಅಂಬಾರಿಯಲ್ಲಿ ರಾಜಕುಟುಂಬದವರು ಕುಳಿತು ಬನ್ನಿ ಪೂಜೆಗೆಂದು ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿದ್ದರೋ ಆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡುವುದು ಆರಂಭವಾಯಿತು. ಇಡೀ ಮೈಸೂರು ನಗರವು, ದಸರಾ ಬಂದೊಡನೆಯೇ ಸಿಂಗರಿಸಿಕೊಂಡು ಕಂಗೊಳಿಸುತ್ತಾ ದಿನಗಳೆದಂತೆ ಸ್ಪರ್ಧೆ, ಮನರಂಜನೆ ಮತ್ತು ಸಂಭ್ರಮಗಳಿಗೆ ಸಾಕ್ಷಿಯಾಯಿತು. ಗಮನಿಸಿ, ಎಂದಿಗೂ ದಸರಾ ಕನ್ನಡಿಗರ ನಾಡಹಬ್ಬವಾಗೇ ಆಚರಣೆಯಾಗುತ್ತಿತ್ತು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿರಿಯ ಕಲಾವಿದರುಗಳಾದ ಗೌರವಾನ್ವಿತರುಗಳಾದ ಭೀಮಸೇನ್ ಜೋಶಿ, ಏಸುದಾಸ್, ಬಾಲಮುರಳಿಕೃಷ್ನ, ಹರಿಪ್ರಸಾದ್ ಚುರಾಸಿಯಾ ಮೊದಲಾದವರ ಕಾರ್ಯಕ್ರಮಗಳು ಆಗಲೂ ನಡೆಯುತ್ತಿದ್ದವು.

ಇಂದಿನ ದಸರಾ...

ಮೈಸೂರಿನ ಕುಸ್ತಿ ಕಾಳಗ, ವಸ್ತು ಪ್ರದರ್ಶನ, ತಿಂಗಳುಗಟ್ಟಲೆ ಅಲ್ಲಿ ನಡೆಯುತ್ತಿದ್ದ ನಾಟಕ ಸಂಗೀತ ಕಾರ್ಯಕ್ರಮಗಳು, ನಗರದ ಬೀದಿಗಳ ದೀಪಾಲಂಕಾರ, ಜಗನ್ಮೋಹನ ಅರಮನೆಯ ಸಂಗೀತ ಕಾರ್ಯಕ್ರಮಗಳು ಇಂದು ಮತ್ತಷ್ಟು ಹರವನ್ನು ಪಡೆದುಕೊಂಡು ಯುವದಸರಾ, ಸಾಹಸ ಕ್ರೀಡಾ ದಸರಾ, ಆಹಾರ ದಸರಾ ಮೊದಲಾಗಿ ಬೆಳೆದುಕೊಂಡಿದ್ದರೂ... ಕನ್ನಡತನ ದಿನೇದಿನೇ ದೂರಾಗುತ್ತಿರುವುದು ಕಾಣುತ್ತಿದೆ. ದಸರಾ ಕಾರ್ಯಕ್ರಮಗಳಲ್ಲಿ ಕನ್ನಡದ ಕಾರ್ಯಕ್ರಮಗಳಿಗಿಂತಾ ಪರಭಾಷಿಕರ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತಿದೆ. ದಸರಾ ಅಂತರ್ಜಾಲ ತಾಣವೂ ತೆರೆದುಕೊಳ್ಳುವುದೇ ಇಂಗ್ಲೀಷಿನಲ್ಲಿ ಎನ್ನುವ ಸ್ಥಿತಿ ಮುಟ್ಟಿದೆ. ಇವತ್ತು ಖಾಸಗಿ ದೂರದರ್ಶನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಯುವದಸರಾ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಿದಾಗ ಅಚ್ಚರಿಯಾಯಿತು. ಕನ್ನಡನಾಡಿನ ಕಾಲೇಜುಗಳ ನಮ್ಮ ಯುವಕರುಗಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮಗಳಲ್ಲಿ ಕನ್ನಡದ ಗಾಳಿಗಂಧವೂ ಇರಲಿಲ್ಲ ಎನ್ನುವುದನ್ನು ಕಂಡ ಯಾರಿಗಾದರೂ, ಮೈಸೂರು ದಸರಾ ಆಯೋಜಕರು "ದಸರಾ ಹಬ್ಬವನ್ನು ರಾಷ್ಟೀಯ ಅಂತರರಾಷ್ಟ್ರೀಯಗೊಳಿಸುವುದು ಎಂದರೆ ಕನ್ನಡವನ್ನು ಮರೆಮಾಡುವುದೇ" ಎಂದು ಭ್ರಮಿಸಿರುವಂತೆ ಅನ್ನಿಸೀತು.

ವೈಭವ ಕಳೆದುಕೊಳ್ಳೋ ದಸರಾ!

ಹೌದೂ ಗುರೂ! ದಸರಾನಾ ರಾಷ್ಟ್ರಮಟ್ಟಕ್ಕೇರಿಸೋದು ಅಂದರೆ ಆಫ್ರಿಕಾದಿಂದಾ ಆನೆ ತರಿಸೋದಾಗಲೀ, ಬಾಲಿವುಡ್ ಹಾಲಿವುಡ್ ಕಲಾವಿದರನ್ನು ಕರೆಸೋದಾಗಲೀ ಅಲ್ಲಾ. ನಮ್ಮ ದಸರಾಗೆ ದೇಶವಿದೇಶದಿಂದ ಜನಾ ಬರೋದು ಇವೆಲ್ಲಾ ನೋಡಕ್ಕೂ ಅಲ್ಲಾ.. ನಮ್ಮ ನಾಡಿನ ಸಂಸ್ಕೃತಿಯನ್ನು, ನಮ್ಮತನವನ್ನು, ನಮ್ಮ ಸೊಗಡನ್ನು ನೋಡಕ್ಕೆ. ಇಲ್ಲಿ ನಮ್ಮದು ಅಂದರೆ ಕನ್ನಡನಾಡಿನದ್ದು ಮಾತ್ರವೇ ಆಗಿದೆ. ಅದು ಬಿಟ್ಟು "ಪ್ರವಾಸಿಗರು ಭಾಂಗ್ಡಾ ಕುಣಿತ ನೋಡಕ್ಕೆ ಪಂಜಾಬಿಗೆ ಹೋಗದೆ ಮೈಸೂರಿಗೆ ಬರ್ತಾರೆ, ಒಡಿಸ್ಸಿ ಕುಣಿತ ನೋಡಲು ಭುವನೇಶ್ವರಕ್ಕೆ ಹೋಗದೆ ಮೈಸೂರಿಗೆ ಬರ್ತಾರೆ, ರುವಾಂಡ-ನೇಪಾಳಿ- ಶ್ರೀಲಂಕಾ ಕಲಾವಿದರನ್ನು ನೋಡಲಿಕ್ಕೆ ಮೈಸೂರಿಗೆ ಬರ್ತಾರೆ" ಅನ್ನೋ ಭ್ರಮೆ ಬಿಡದಿದ್ದರೆ ಮುಂದಿನ ದಿನಗಳಲ್ಲಿ ತನ್ನ ವೈಭವವನ್ನು ಮೈಸೂರು ದಸರಾ ಕಳೆದುಕೊಳ್ಳೋದು ಖಂಡಿತಾ! ಇರುವ ನಮ್ಮ ಹಿರಿಮೆಯನ್ನು ಕಡೆಗಣಿಸುವಂತೆ ಪರಭಾಷಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಕನ್ನಡತನವನ್ನು ತೊರೆದ ದಸರೆ ನಮ್ಮದು ಹೇಗಾದೀತು ಗುರೂ? ಈಗ ಮತ್ತೊಮ್ಮೆ ಕರುಳಿನಕರೆಯ ಹಾಡು ಕೇಳಿ... ಮೈಸೂರು ದಸರಾ ಕನ್ನಡಿಗರ ನಾಡಹಬ್ಬವಾಗಿ ಉಳಿದಿದೆಯೇ? ಅಥವಾ... ಕನ್ನಡವೆಂಬ ಶಿವನಿಲ್ಲದ ಸೌಂದರ್ಯವಾಗಿದೆಯೇ?
Related Posts with Thumbnails