ಸಹಜ ನ್ಯಾಯವೆನ್ನುವುದೇ ಇಲ್ಲಿ ಸಂವಿಧಾನ ಬಾಹಿರ!

(ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ)
ರಾಜ್ಯಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕವನ್ನು ಹಾಕುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು "ಸರಿಯಿಲ್ಲಾ" ಎಂದು ರಾಜ್ಯ ಉಚ್ಚನ್ಯಾಯಾಲಯ ಹೇಳಿದೆ ಎನ್ನುವ ಸುದ್ದಿ ಇಂದಿನ (೩೧.೦೩.೨೦೧೪ರ) ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸಂವಿಧಾನಬಾಹಿರ ಎಂದರೂ ಇದು ನ್ಯಾಯಬದ್ಧ!

ಕನ್ನಡನಾಡಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವುದು ಸಹಜ ನ್ಯಾಯ. ಯಾಕೆಂದರೆ ಸರ್ಕಾರ ತನ್ನ ನಾಡಿನ ವ್ಯವಸ್ಥೆಗಳನ್ನು ತನ್ನ ಜನರಿಗೆ ಆದಷ್ಟೂ ಹತ್ತಿರಗೊಳಿಸುವಲ್ಲಿ ಜನರ ನುಡಿ ಪ್ರಮುಖವಾದದ್ದು. ಪ್ರಜಾಪ್ರಭುತ್ವದ ಯಶಸ್ಸಿಗೆ ಇದೊಂದು ಅತ್ಯುತ್ತಮ ಸಾಧನ ಎನ್ನುವುದನ್ನು ಪ್ರಪಂಚವೇ ಎತ್ತಿಹೇಳುತ್ತದೆ. ವಿಶ್ವಸಂಸ್ಥೆಯೂ ನುಡಿಜನಾಂಗಕ್ಕಿರುವ ಹಕ್ಕುಗಳನ್ನು ಗುರುತಿಸಿ ಘೋಷಿಸಿದೆ. ಆದರೆ ಭಾರತದ ಸಂವಿಧಾನದಲ್ಲಿರುವ ಭಾಷಾನೀತಿಯ ಹುಳುಕಿನ ಸಾಲುಗಳು ಈ ನಾಡ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನ ಮಾಡಿದೆ. ರಾಜ್ಯಸರ್ಕಾರಗಳು ಕೇಂದ್ರದ ಗುಲಾಮರು ಎನ್ನುವಂತೆ ರೂಪಿಸಿರುವ ಈ ದೇಶದ ನೀತಿ ನಿಯಮಗಳಲ್ಲಿ...
- ಕರ್ನಾಟಕದ ವಾಹನಗಳ ಮೇಲೆ ಕನ್ನಡದಲ್ಲಿ ನೋಂದಣಿ ಸಂಖ್ಯೆ ಬರೆಯುವುದು ಕಾನೂನು ಬಾಹಿರ
- ಕರ್ನಾಟಕದಲ್ಲಿರುವ ಪಾಸ್‌ಪೋರ್ಟ್ ಕಚೇರಿ, ವಿಮಾನ ನಿಲ್ದಾಣ ಮೊದಲಾದೆಡೆ ಕನ್ನಡ ಬಳಸದಿರುವುದು ಅಪರಾಧವಲ್ಲಾ.
- ಈ ನಾಡಿನ ಅಂಚೆಕಚೇರಿ, ಬ್ಯಾಂಕು, ರೈಲುಗಳಲ್ಲಿ ಕನ್ನಡವೇ ಇರದೆ ಬರೀ ಹಿಂದೀ ಇಂಗ್ಲೀಷ್ ಇರುವುದು ಸಂವಿಧಾನ ಬದ್ಧ!
- ಈ ನಾಡಿನಲ್ಲಿ ಮಾರಾಟವಾಗುವ ಔಷಧಗಳ ಮೇಲೆ ಕನ್ನಡದಲ್ಲಿ ಯಾವ ಮಾಹಿತಿಯನ್ನು ಕೊಡದಿದ್ದರೂ ಪರ್ವಾಗಿಲ್ಲಾ, ಇಂಗ್ಲೀಷು ಹಿಂದೀಲಿ ಇರಬೇಕು.

ಭಾರತದ ಸಂವಿಧಾನವೇ ಇಂಥಾ ಹುಳುಕನ್ನು ಪೊರೆಯುತ್ತಿರುವಾಗ ನಮ್ಮ ಹಣೆಬರಹ ಹೀಗಿರದೆ ಇನ್ನು ಹೇಗಿರಲು ತಾನೇ ಸಾಧ್ಯ? ಇದಕ್ಕೆಲ್ಲಾ ಮದ್ದು ರಾಜ್ಯಸರ್ಕಾರದ ನಾಡಪರಬದ್ಧತೆಯಲ್ಲಿದೆ, ಭಾರತದ ಹುಳುಕಿನ ಭಾಷಾನೀತಿ ಬದಲಾಗುವುದರಲ್ಲಿದೆ, ಕರ್ನಾಟಕದ ರಾಜಕಾರಣ ಕರ್ನಾಟಕ ಕೇಂದ್ರಿತವಾಗುವುದರಲ್ಲಿದೆ... ಬನವಾಸಿ ಬಳಗವು ನಮ್ಮ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಲು ಮಿಂಬಲೆಯಲ್ಲಿ ಒಂದು ಸಹಿ ಅಭಿಯಾನ ಆರಂಭಿಸಿದೆ. ನೀವು ಅದಕ್ಕೆ ಸಹಿ ಹಾಕಿರಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ. ಈ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ನಾವು ತಲುಪಿಸುತ್ತೇವೆ.

ಪಿಟಿಷನ್ನಿನ ಕೊಂಡಿ: http://chn.ge/1dJ4zsv

ಲೋಕಸಭಾ ಚುನಾವಣೆಗಳು ಕರ್ನಾಟಕ ಕೇಂದ್ರಿತವಾಗಲಿ!

(ಫೋಟೋ ಕೃಪೆ: ಪ್ರಜಾವಾಣಿ)
ಬರುವ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿದ್ದು ಭಾರತದ ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಗಳಾಗಿ ದನಿಯೆತ್ತುವವರನ್ನು ಆರಿಸುವ ಸಂದರ್ಭ ನಮ್ಮೆದುರು ಮೂಡಿಬಂದಿದೆ. ಹೌದೇ? ನಿಜಕ್ಕೂ ಲೋಕಸಭಾ ಚುನಾವಣೆಗಳು ಈ ಉದ್ದೇಶಕ್ಕಾಗಿಯೇ ನಡೆಯುತ್ತಿದೆಯೇ? ಈ ಹಿಂದೆ ಇಷ್ಟೂ ವರ್ಷಗಳ ಕಾಲ ನಡೆದ ಅಷ್ಟೂ ಚುನಾವಣೆಗಳಲ್ಲಿ ನಮ್ಮಿಂದ ಆರಿಸಿಹೋದ ಸಂಸದರು ನಮ್ಮ ದನಿಯಾಗಿ ದೆಹಲಿಗೆ ತೆರಳಿದ್ದರೇ? ನಾಡಿನ ಪರವಾಗಿ ಬೇಡ, ಸಂಸದರಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಎಂದು ನೋಡಿದರೆ ಪಕ್ಷಾತೀತರಾಗಿ ಎಲ್ಲರೂ ಕಳಪೆಯೇ ಎಂಬ ಭಾವ ಮೂಡುತ್ತದೆ.

ವಾಸ್ತವವಾಗಿ ಭಾರತದ ಬಹುತೇಕ ಕಡೆಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿನ್ನೂ ಅಸ್ತಿತ್ವಕ್ಕೆ ಬಾರದಿರುವ ಈವತ್ತಿನ ಸನ್ನಿವೇಶದಲ್ಲಿ ಕರ್ನಾಟಕದ ಮತದಾರರ ಮುಂದೆ ಆಯ್ಕೆಗಳು ವಿರಳವಾಗಿದ್ದು, ಕನ್ನಡ ಕನ್ನಡಿಗ ಕರ್ನಾಟಕದ ಪರವಾಗಿ ದನಿ ಎನ್ನುವುದೇ ಚುನಾವಣೆಯ ವಿಷಯವೇ ಆಗದೆ ಇರುವುದು ನಾಡಿನ ದುರಂತವಲ್ಲದೆ ಮತ್ತೇನು? ಇಡೀ ಚುನಾವಣೆಯಲ್ಲಿ ನಮ್ಮ ನಾಡಿನ ಕುರಿತಾಗಿ ಸ್ಪಷ್ಟವಾದ ಯಾವ ಭರವಸೆಯನ್ನು ನಮ್ಮ ಅಭ್ಯರ್ಥಿಗಳು/ ಪಕ್ಷಗಳು ನೀಡುತ್ತಿವೆ, ಯಾವ ಪಕ್ಷ/ ಅಭ್ಯರ್ಥಿ ಯಾವ ಯೋಜನೆಗಳನ್ನು ನಮ್ಮ ನಾಡಿಗಾಗಿ ಯೋಜಿಸುತ್ತಿವೆ ಎಂಬುದಾಗಿ ಮತದಾರರು ಯೋಚನೆಯನ್ನೂ ಮಾಡಲು ಬಿಡದ ಹಾಗೆ ಇಡೀ ಲೋಕಸಭಾ ಚುನಾವಣೆಯ ವಿಷಯವನ್ನು ಸಾಮಾನ್ಯರಿಂದ ದೂರಕ್ಕೊಯ್ದು ನಿಲ್ಲಿಸಿರುವುದು ಕಣ್ಣಿಗೆ ರಾಚುತ್ತದೆ,

ಕೇಂದ್ರದಲ್ಲಿ ರಾಜ್ಯದ ಕಡೆಗಣನೆ

ಸ್ವತಂತ್ರ ಬಂದಾಗಿನಿಂದ ಇಂದಿನವರೆವಿಗೂ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಸರಮಾಲೆಯನ್ನು ಕಂಡಾಗ ಇದಕ್ಕೆ ಮೂಲ ಕಾರಣ ನಮ್ಮ ಸಂಸದರು ಎಂಬುದು ಕಾಣುತ್ತದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ನೆರೆಯ ತಮಿಳುನಾಡಿನಲ್ಲಿರುವ ರೈಲು ಮಾರ್ಗದ ಉದ್ದ ೫೯೫೨ ಕಿಮೀ ಇದ್ದರೆ ಕರ್ನಾಟಕದ್ದು ೩೦೮೯ ಕಿಮೀ. ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದ ಅಲ್ಲಿ ೫೦೩೬ ಕಿಮೀ ೩೯೭೩ ಇದೆ. ತಮಿಳುನಾಡಿನ ೩೦% ರೈಲು ಮಾರ್ಗ ವಿದ್ಯುತ್ ಮಾರ್ಗವಾಗಿದ್ದರೆ ಇಲ್ಲಿಯದು ಬರೀ ೫%. ಇದು ಇಡೀ ದೇಶದಲ್ಲೇ ಅತಿ ಕಡಿಮೆ. ಕೇಂದ್ರವಿದ್ಯುತ್ ಜಾಲದಿಂದ ತಮಿಳುನಾಡಿಗೆ ೬೧% ವಿದ್ಯುತ್ ಸಿಗುತ್ತಿದ್ದರೆ ನಮ್ಮ ರಾಜ್ಯಕ್ಕೆ ಸಿಗುತ್ತಿರುವುದು ೨೧% ಮಾತ್ರಾ, ಪ್ರತಿಷ್ಟಿತ ನರ್ಮ್ ಯೋಜನೆಯಲ್ಲಿ ಬಿಡುಗಡೆಯಾದ ಹಣ ತಮಿಳುನಾಡಿಗೆ ೨೨೫೦ ಕೋಟಿಯಾದರೆ ಕರ್ನಾಟಕಕ್ಕೆ ೧೫೨೪ ಕೋಟಿ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ತಮಿಳುನಾಡಿನಿಂದ ಆಯ್ದದ್ದು ೭೨% ಆದರೆ ಕರ್ನಾಟಕದ್ದು ೩೬%. ಚೆನ್ನೈ ಮೆಟ್ರೋದಲ್ಲಿ ಬರೀ ತಮಿಳು ಇಂಗ್ಲೀಷಿಗೆ ಸ್ಥಾನವಾದರೆ ಬೆಂಗಳೂರಿನಲ್ಲಿ ಕನ್ನಡ ಹಿಂದೀ ಇಂಗ್ಲೀಷಿಗೆ ಸ್ಥಾನ! ಈ ಬರಹದಲ್ಲಿ ಓದುಗರಿಗೆ ಸುಲಭವಾಗಿ ಅರ್ಥವಾಗಲೆಂದು ಬರಿಯ ನೆರೆಯ ತಮಿಳುನಾಡಿನೊಂದಿಗೆ ಹೋಲಿಕೆ ನೀಡಲಾಗಿದೆ. ವಾಸ್ತವವಾಗಿ ದೇಶದ ಸರಾಸರಿಗೆ ಹೋಲಿಸಿದರೂ, ಇನ್ನಾವುದೇ ರಾಜ್ಯಕ್ಕೆ ಹೋಲಿಸಿದರೂ ನಮ್ಮ ನಾಡಿನ ಪರಿಸ್ಥಿತಿ ಇಷ್ಟೇ! ಒಟ್ಟಾರೆ ಸದಾಕಾಲ ಕರ್ನಾಟಕದ ಕಡೆಗಣನೆಯೇ ಆಗುತ್ತಿರುವುದನ್ನು ಸರ್ಕಾರಿ ಅಂಕಿಅಂಶಗಳೇ ತೋರಿಸುತ್ತಿರುವಾಗ ಇದಕ್ಕೆಲ್ಲಾ ಕಾರಣ ಏನು ಎಂದು ಹುಡುಕಬೇಕಾಗಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವಿದೆ ಇಲ್ಲಿ ರಾಷ್ಟ್ರೀಯ ಪಕ್ಷಗಳು ಆಳುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ಕಾಣುವುದು ನಮ್ಮ ಸಂಸದರು ಪ್ರತಿನಿಧಿಸುತ್ತಿರುವುದು ಕರ್ನಾಟಕವನ್ನಾಗಲೀ, ಕನ್ನಡಿಗರನ್ನಾಗಲೀ ಅಲ್ಲಾ.. ಬದಲಿಗೆ ತಮ್ಮ ಪಕ್ಷದ ಹೈಕಮಾಂಡ್/ ಸರ್ಕಾರವನ್ನು ಮಾತ್ರಾ ಎನ್ನುವುದು ಎದ್ದು ಕಾಣುತ್ತದೆ.

ನಮ್ಮ ಸಂಸದರು ಮತ್ತು ಸಂಸತ್ತು

ಸಂಸದರಾಗಿದ್ದವರು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸದಿರುವುದು, ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು, ಪ್ರಶ್ನೆಗಳನ್ನು ಕೇಳದಿರುವುದು ಇವೆಲ್ಲಾ ಒಂದೆಡೆಯಾದರೆ ನಮ್ಮ ನಾಡಿಗೆ ಸಂಬಂಧವೇ ಇರದ ಬುಂದೇಲಖಂಡದ ಯಾವುದೋ ನೀರಾವರಿ ಯೋಜನೆಯ ಸ್ಥಿತಿಗತಿ ತಿಳಿಯಲು ಮೇಲೆ ಬಿದ್ದು ಮೂರ್ಮೂರು ಮಂದಿ ಸಂಸದರು ಪ್ರಶ್ನೆಯನ್ನು ಕೇಳಿರುವುದೂ ಇದೆ. ಮತ್ತೊಂದೆಡೆ ನಾಡಿನ ಸಮಸ್ಯೆಗಳ ವಿಷಯಕ್ಕೆ ಬಂದಾಗ ನಮ್ಮ ಸಂಸದರೆಲ್ಲಾ ಒಂದಾಗಿ ನಿಲ್ಲುವುದೇ ಅಪರೂಪ ಎನ್ನುವ ಪರಿಸ್ಥಿತಿಯಿದೆ. ಹಾಗೆ ನಿಂತರೂ ಕೂಡಾ ಗಾಂಧಿ ಪ್ರತಿಮೆಯೆದುರು ಪ್ರತಿಭಟನೆ ಮಾಡಿಯೋ, ಸಂಸತ್ತಿನ ಹೊರಗೋ, ಜಂತರ್ ಮಂತರ್ ಬಳಿ ಸೇರಿ ಕೂಗುವುದೋ ಮೊದಲಾದ ತೋರಿಕೆಯ ಪ್ರತಿಭಟನೆಗಳಿಗಷ್ಟೇ ಇವರ ದನಿ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಸಂಸದರಿಂದ ನಿರೀಕ್ಷೆಗಳು

ಭಾರತವೆನ್ನುವ ರಾಜ್ಯಗಳ ಒಕ್ಕೂಟದಲ್ಲಿ ಕೇಂದ್ರಸರ್ಕಾರವು ಹೇಗೆ ಕೆಲಸ ಮಾಡಬೇಕಾಗಿದೆ, ಸಂಸತ್ತಿನಲ್ಲಿ ರೂಪುಗೊಳ್ಳುವ ಕಾಯ್ದೆ ಕಾನೂನು ನಿಯಮಾವಳಿಗಳು ಹೇಗಿರಬೇಕಾಗಿದೆ ಎಂಬ ಚಿಂತನೆಯೇ ನಮ್ಮ ಸಂಸದರಲ್ಲಿ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳೇ ಈ ಚುನಾವಣೆಯ ಪ್ರಮುಖ ಪಾಲುದಾರರಾಗಿದ್ದು ತಮ್ಮ ಮೂಗಿನ ನೇರದ ವಿಷಯಗಳನ್ನಷ್ಟೇ ಚುನಾವಣೆಗಳ ಕೇಂದ್ರವಾಗಿಸುತ್ತಿರುವುದು ಕಾಣುತ್ತಿದೆ. ಈ ಹಂತದಲ್ಲಿ ನಮ್ಮ ನಾಡಿನ ಸಂಸದರಿಂದ ಜನರಿಗಿರಬೇಕಾದ ನಿರೀಕ್ಷೆಗಳ ಬಗ್ಗೆ ಮತದಾರರು ಯೋಚಿಸಬೇಕಾಗಿದೆ.

ಸಮಾನತೆಯ ಭಾರತ ಒಕ್ಕೂಟ: ಸಂಸತ್ತು ಕಾಯ್ದೆ ಕಾನೂನುಗಳನ್ನು ರೂಪಿಸುವ ಪ್ರಾಥಮಿಕ ಹೊಣೆ ಹೊಂದಿದ್ದು ಭಾರತದ ಸ್ವರೂಪವನ್ನು ಒಕ್ಕೂಟವಾಗಿಸುವತ್ತ ಗಮನಹರಿಸಬೇಕಾಗಿದೆ. ಸಂಸದರು ರಾಜ್ಯಗಳಿಗೆ ಹೆಚ್ಚೆಚ್ಚು ಸ್ವಾಯತ್ತತೆ ಕೊಡಿಸುವ ಬಗ್ಗೆ, ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ದುಡಿಯಬೇಕಾಗಿದೆ, ಕೇಂದ್ರಸರ್ಕಾರದ ಕಪಿಮುಷ್ಟಿಯಲ್ಲಿರುವ ಅಧಿಕಾರಗಳಲ್ಲಿ ಬಹುತೇಕವನ್ನು ರಾಜ್ಯಗಳಿಗೆ ಬಿಟ್ಟುಕೊಡುವಂತೆ ಮಾಡಬೇಕಾಗಿದೆ, ರಾಜ್ಯಗಳ ಅನನ್ಯತೆಯನ್ನು ಎತ್ತಿಹಿಡಿಯುವ ವೈವಿಧ್ಯತೆಯನ್ನು ಪೊರೆಯುವ ಆಡಳಿತ ಭಾಷಾನೀತಿ, ಅನಿಯಂತ್ರಿತ ವಲಸೆ ನಿಯಂತ್ರಣ ನೀತಿ, ರಾಜ್ಯ ರಾಜ್ಯಗಳ ಸಂಬಂಧ ಸುಧಾರಣೆಗೆ ಅಂತರರಾಜ್ಯ ಮಾತುಕತೆಗೆ ಒತ್ತುಕೊಡುತ್ತಲೇ ನದಿ ನೀರು ಹಂಚಿಕೆ ಮಾರ್ಗದರ್ಶಿ ಸೂತ್ರ, ಗಡಿ ನಿರ್ಣಯಿಸುವ ಮಾರ್ಗದರ್ಶಿ ಸೂತ್ರ ಮೊದಲಾದ ನೀತಿಗಳನ್ನು ರೂಪಿಸಲು ಶ್ರಮಿಸಬೇಕಾಗಿದೆ.

ಕಾಪಾಡಬೇಕಾದ ನಾಡಿನ ಹಿತ: ಕರ್ನಾಟಕದ ಸಂಸದರು ಕನ್ನಡನಾಡಿಗೆ ರೈಲ್ವೇ, ರಾಷ್ಟ್ರೀಯ ಹೆದ್ದಾರಿ, ನೀರಾವರಿ, ವಿದ್ಯುತ್ ಸೇರಿದಂತೆ ನಾಡಿನ ಏಳಿಗೆಗೆ ಬೇಕಾದ ಯೋಜನೆಗಳನ್ನು ದಕ್ಕಿಸಿಕೊಳ್ಳುವತ್ತ ದುಡಿಯಬೇಕಾಗಿದೆ. ಕಾವೇರಿ, ಕೃಷ್ಣಾ, ಕಳಸಾ ಭಂಡೂರ ಯೋಜನೆಯಂತಹ ನದಿನೀರು ಹಂಚಿಕೆಯ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನೆರೆ ಬರ ಮೊದಲಾದ ಸಂಕಷ್ಟಗಳ ಸಮಯದಲ್ಲಿ ಮಾಡಲಾಗುವ ಕೇಂದ್ರದ ನೆರವು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ರಾಜ್ಯದ ಹಿತ ಕಾಪಾಡಬೇಕಾಗಿದೆ, ನಮ್ಮ ಸಂಸದರ ನಿಧಿಯನ್ನು ಸೂಕ್ತವಾಗಿ ಬಳಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೂಲಭೂತ ಹೊಣೆಯೂ ಇವರಿಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಒಗ್ಗಟ್ಟು ಮತ್ತು ಏಳಿಗೆಗೆ ಕಂಟಕಪ್ರಾಯವಾಗುವಂಥಾ ಎರಡನೇ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಂತಹ ಕ್ರಮಗಳನ್ನು ಆರಂಭದಿಂದಲೇ ವಿರೋಧಿಸುವ, ನಾಡಿನ ಒಗ್ಗಟ್ಟು ಏಳಿಗೆಗಳಿಗಾಗಿ ತಮ್ಮದೇ ಪಕ್ಷದ ಸರ್ಕಾರ/ ಹೈಕಮಾಂಡುಗಳನ್ನು ಎದುರುಹಾಕಿಕೊಳ್ಳಬಲ್ಲಂಥಾ ಗಟ್ಟಿತನವನ್ನು ನಮ್ಮೆಲ್ಲಾ ಸಂಸದರಿಂದ ನಿರೀಕ್ಷಿಸಬೇಕಾಗಿದೆ. ಈ ಚುನಾವಣೆಯಲ್ಲಿ ನಮ್ಮ ಮುಂದೆ ಇಂತಹ ನಿಲುವಿನ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಕಾಣದಿದ್ದರೆ ನಾಳೆಗಳಿಗಾಗಿ ಕನ್ನಡಿಗರು ಇಂತಹ ಬದಲಾವಣೆಯನ್ನು ನಾಡಿನ ರಾಜಕಾರಣದಲ್ಲಿ ತರಲೇಬೇಕಾಗಿದೆ.

(ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಗ್ರಾಹಕ ಹಕ್ಕಿಗಾಗಿ ನೀವೂ ದನಿಗೂಡಿಸಿ!



ಪ್ರತಿವರ್ಷ ಮಾರ್ಚ್ ತಿಂಗಳ ೧೫ನೇ ದಿನವನ್ನು ವಿಶ್ವ ಗ್ರಾಹಕಹಕ್ಕು ದಿನವಾಗಿ ಆಚರಿಸಲಾಗುತ್ತದೆ. ೧೯೬೨ರ ಇದೇ ದಿನ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಜಾನ್ ಎಫ಼್ ಕೆನಡಿಯವರು ಮಾಡಿದ ಭಾಷಣದ ನೆನಪಿಗಾಗಿ ಈ ದಿನವನ್ನು ಹೀಗೆ ಆಚರಿಸಲಾಗುತ್ತದೆ. ಭಾರತದಲ್ಲೂ ಕೂಡಾ ಹೀಗೆ ಎಲ್ಲೆಡೆ ಗ್ರಾಹಕರ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಮಾಶೆಯೆಂದರೆ ಗ್ರಾಹಕಹಕ್ಕು ರಕ್ಷಣೆಯ ಬಗ್ಗೆ ಮೂಡಿಸುವ ಜಾಗೃತಿಯ ಈ ಕಾರ್ಯದಲ್ಲಿ ಗ್ರಾಹಕರ ನುಡಿಯನ್ನು ಬಳಸಬೇಕೆನ್ನುವ ಆಯಾಮವನ್ನೇ ಕೈಬಿಟ್ಟು ಬರೀ ಉತ್ಪನ್ನಗಳ ತೂಕ, ಗುಣಮಟ್ಟ, ಅಳತೆಗಳ ಬಗ್ಗೆ ಇರುವ ಹಕ್ಕುಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ನಿಜವಾಗಿ ಗ್ರಾಹಕರ ಹಕ್ಕುಗಳನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಇರುವ ಸಾಧನಗಳಲ್ಲಿ ಗ್ರಾಹಕನ ನುಡಿಯ ಬಳಕೆ ಮುಖ್ಯವಾದದ್ದು. ಈ ಬಗ್ಗೆ ಕನ್ನಡಿಗರಲ್ಲಿ ಎಚ್ಚರ ಮೂಡಿಸುವ ಕನ್ನಡ ಗ್ರಾಹಕರ ಕೂಟದ ಒಂದು ಪ್ರಯತ್ನ ಇಲ್ಲಿದೆ.


ಸಾಮಾನ್ಯವಾಗಿ ಗ್ರಾಹಕನ ಹಕ್ಕು ಎಂದಾಗ ತೂಕ, ಅಳತೆ, ಗುಣಮಟ್ಟಗಳ ಸುತ್ತ ವಿಷಯಗಳು ಚರ್ಚಿಸಲ್ಪಡುತ್ತವೆ. ಈ ವಿಷಯಗಳು ನಿಜಕ್ಕೂ ಮುಖ್ಯವಾದವಾಗಿದ್ದರೂ ಸಹ, ಈ ವಿಷಯಗಳು ಜನರಿಗೆ ಯಾವ ಭಾಷೆಯಲ್ಲಿ ತಿಳಿಸಲ್ಪಡುತ್ತವೆ ಅನ್ನುವುದು ಹೆಚ್ಚಾಗಿ ಪ್ರಸ್ತಾಪವಾಗುವುದಿಲ್ಲ. ಈ ಮಾಹಿತಿಗಳು ಇಂಗ್ಲೀಶ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವಿದ್ದು, ಜನರ ಭಾಷೆಯಲ್ಲಿ ಇರದೇ ಹೋದರೆ ಈ ಮಾಹಿತಿಯನ್ನು ಕೊಡುವುದರಿಂದ ತಾನೇ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಕೊಡಬೇಕಾದುದು ಸ್ವಾಭಾವಿಕವೂ, ಜನಪರವೂ ಹಾಗೂ ನ್ಯಾಯಸಮ್ಮತವೂ ಆಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆಯನ್ನು ಪಡೆಯುವುದು ನಮ್ಮೆಲ್ಲರ ಹಕ್ಕಾಗಿದೆ. ಈ ಹಕ್ಕು ಸಹಜವಾಗಿ ನಮಗೆ ದಕ್ಕುತ್ತಿಲ್ಲದಿದ್ದಲ್ಲಿ ಅದಕ್ಕಾಗಿ ದನಿಯೆತ್ತುವ, ಹೋರಾಟಗಳ ಮೂಲಕವಾದರೂ ಸರಿಯೇ, ಅವುಗಳನ್ನು ದಕ್ಕಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.


ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ಹಲವಾರು ಪ್ರಯತ್ನಗಳು ಈವರೆಗೂ ನಡೆದಿವೆ ಹಾಗೂ ನಡೆಯುತ್ತಿವೆ. ಗ್ರಾಹಕ ಸೇವೆಯಲ್ಲಿ ಹಾಗೂ ನಾಗರೀಕ ಸೇವೆಯಲ್ಲಿ ಕನ್ನಡದ ಬಳಕೆ ಆಗುವಂತೆ ಮಾಡಲು ನಾವು ನೀವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕನ್ನಡದಲ್ಲಿ ಸೇವೆ ಪಡೆಯಲು ಆಗುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಇಂಬು ಕೊಡುವ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ ಒಂದು ಫೋರಮ್ ಅನ್ನು ತೆರೆಯಲಾಗಿದೆ. ಈ ಫೋರಮ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದೆ ನಿಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಬಹುದು. ಹಾಗೆ ಅದನ್ನು ಸರಿ ಮಾಡಲು ಮಾಡಿದ ಪ್ರಯತ್ನಗಳನ್ನು ಕೂಡ ಹಂಚಿಕೊಳ್ಳಬಹುದು. ಇದರೊಟ್ಟಿಗೆ ಮಾರುಕಟ್ಟೆಯ ಮಾಹಿತಿ ಮತ್ತು ಗ್ರಾಹಕ ಸೇವೆ ಕಾನೂನಿನ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವೆಡೆ ನೀವು ಪ್ರಯತ್ನಿಸಿ ಯಶಸ್ವಿಯಾದ ಸುದ್ದಿಗಳನ್ನೂ ಕೂಡ ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡ ಗ್ರಾಹಕರ ಒಗ್ಗಟಿನ ಸೂರಾದ ಈ ಫೋರಮ್ ಗೆ ಸೇರಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.

ನಮಗೆ ಬೇಕಿರೋದು "ನಮ್ಮ ಮೆಟ್ರೋ"! "ಹಮಾರಾ ಮೆಟ್ರೋ" ಅಲ್ಲಾ!!



ಉಪೇಂದ್ರ ಅವರ ಸಿನಿಮಾ ಶೈಲಿಯಲ್ಲಿ ಹೇಳಬೇಕೆಂದರೆ... ಇಂದು ಬೆಂಗಳೂರಿನಲ್ಲಿ ಎರಡನೇ ಹಂತದ "ಹಮಾರ ಮೆಟ್ರೋ" ಉದ್ಘಾಟನೆಯಾಗಿದೆ. ಐ ಲೈಕ್ ಇಟ್! ಎಲ್ಲಾ ಕನ್ನಡಿಗರಿಗೂ ಅಭಿನಂದನೆ. "ಹಮಾರಾ ಮೆಟ್ರೋ" ಅಧಿಕಾರಿ ವರ್ಗಕ್ಕೂ, ಅರ್ಧಕ್ಕಿಂತಾ ಹೆಚ್ಚು ಬಂಡವಾಳ ಹಾಕಿ ಇಡೀ ಕರ್ನಾಟಕವನ್ನು ಹಿಂದೀಮಂದಿಗೆ ಬರೆದುಕೊಡುತ್ತಿರುವ ರಾಜ್ಯಸರ್ಕಾರಕ್ಕೂ... ಇಷ್ಟೆಲ್ಲಾ ನಡೆಯುತ್ತಿದ್ದರೂ ‘ತಮಗೆ ಏನೂ ಆಗೇ ಇಲ್ಲಾ, ಆಗೋದೇ ಇಲ್ಲಾ, ಹಿಂದೀ ಭಾರತದ ರಾಷ್ಟ್ರಭಾಷೆ, ಇದು ಭಾರತದ ಒಗ್ಗಟ್ಟಿನ ಭಾಷೆ’ ಎಂಬ ಭ್ರಮೆಯಲ್ಲಿ ನಾಳಿನ ಕನ್ನಡಿಗರ ಬದುಕನ್ನು ಕರಾಳವಾಗಿಸುತ್ತಿರುವ ಕನ್ನಡನಾಡಿನ ಎಲ್ಲಾ "ಸತ್-ಪ್ರಜೆ"ಗಳಿಗೂ ಅಭಿನಂದನೆಗಳು!

ಇಂದು ಮೆಟ್ರೋ ಮೂಲಕ ನುಸುಳುವ ಹಿಂದೀ ನಾಳೆ ಬಿಎಂಟಿಸಿಯನ್ನು ಬಿಡೋದಿಲ್ಲಾ! ಮುಂದೊಮ್ಮೆ ಮುಂಬೈಯಲ್ಲಿ ಮರಾಟಿಗೆ ಆಗಿರುವ ಗತಿ ಕನ್ನಡಕ್ಕೂ ಆಗುವ ಮೊದಲು ನಾಡಿನ ಜನರು, ಸರ್ಕಾರ ಎಚ್ಚೆತ್ತುಕೊಂಡರೆ ಒಳಿತು. ಯಾವುದೇ ಕಾನೂನಿನ ಬೆಂಬಲವಿಲ್ಲದ, ಕೇವಲ ಮೆಟ್ರೋದ ಆಡಳಿತ ಮಂಡಳಿ ತೆಗೆದುಕೊಂಡಿರುವ ಈ ಹಿಂದೀ ಪರವಾದ ನಿಲುವು ಎಷ್ಟು ಬೇಗ ಬದಲಾದರೆ ಅಷ್ಟು ನಾಡಿಗೆ ಒಳಿತು! ಏಕೆಂದರೆ...

ನಮ್ಮ ಮೆಟ್ರೋ ಎಂಬ ಹಿಂದೀ ಪ್ರಚಾರಕ!

"ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು" ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ... ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ "ಆಡಳಿತ ಭಾಷಾ ನೀತಿ"ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ.  ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ... ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು "ನಮ್ಮ ಮೆಟ್ರೋ" ರೈಲು ಸಂಪರ್ಕ ವ್ಯವಸ್ಥೆ!

ಮೆಟ್ರೋದಲ್ಲಿ ಹಿಂದೀ ನರ್ತನ!

ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರದ ಹಣ ಸ್ವಲ್ಪಮಟ್ಟಿಗೆ ತೊಡಗಿಸಲಾಗಿದೆ ಎನ್ನುವ ಕಾರಣ ನೀಡಿಯೋ, ಕರ್ನಾಟಕವು ತ್ರಿಭಾಷಾಸೂತ್ರವನ್ನು ಒಪ್ಪಿದೆಯೆನ್ನುವ ಕಾರಣ ನೀಡಿಯೋ ಮೂರುಭಾಷೆಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಇದುವರೆವಿಗೆ ಬೆಂಗಳೂರಿನ ಸಾರ್ವಜನಿಕ ಬಳಕೆಯ ಸ್ಥಳೀಯ ಸಾರಿಗೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಿಟ್ಟು ಹಿಂದೀಯನ್ನು ಬಳಸಿರಲಿಲ್ಲಾ! ಇದೀಗ ನಮ್ಮ ಮೆಟ್ರೋದಲ್ಲಿ ಬರಿಯ ಫಲಕಗಳಷ್ಟೇ ಅಲ್ಲದೆ ಹಿಂದೀಯಲ್ಲಿ ಸೂಚನೆಗಳನ್ನು ಕೂಡಾ ನೀಡಲು ಶುರುಮಾಡಿದ್ದಾರೆ. ಅಲ್ಲಾರೀ! ಕನ್ನಡದಲ್ಲಿದೆಯಲ್ಲಾ... ಹಿಂದೀಲಿ ಇದ್ದರೇನು? ಎಂದು ಭಾವಿಸುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಆದರೆ ಯೋಚಿಸಿ ನೋಡಿದರೆ.. ಇದರ ಹಿಂದೆ ಹಿಂದೀ ಭಾಷಿಕರ ವಲಸೆಯನ್ನು ಉತ್ತೇಜಿಸುವ, ಆ ಮೂಲಕ ಕರ್ನಾಟಕದಂತಹ ರಾಜ್ಯಗಳ ಜನಲಕ್ಷಣವನ್ನೇ ಬುಡಮೇಲುಗೊಳಿಸುವ ಹುನ್ನಾರ ಕಾಣುತ್ತದೆ. ಈ ನೀತಿಯ ಹಿಂದೆ ಭಾರತದ ಭಾಷಾನೀತಿಯು ಕೆಲಸ ಮಾಡಿರುವುದು ಕಾಣುತ್ತದೆ ಮತ್ತು ಅದರ ಹುಳುಕು ಕಣ್ಣಿಗೆ ರಾಚುತ್ತದೆ!

ಹುಳುಕು ಯಾಕೆಂದರೆ...!

ಇಲ್ಲಿ ಹಿಂದೀಯ ಅಗತ್ಯವೇ ಇಲ್ಲದಿರುವಾಗಲೂ ಹಾಗೆ ಹಿಂದೀಯನ್ನು ಬಳಸಿರುವುದರ ಏಕೈಕ ಉದ್ದೇಶ "ಹಿಂದೀ ಭಾಷಿಕ ಜನರಿಗೆ ಅನುಕೂಲವಾಗಲೀ" ಎನ್ನುವುದೇ ಆಗಿದೆ. ‘ಬೆಂಗಳೂರಿಗೆ ಭಾರತದ ಎಲ್ಲೆಡೆಯಿಂದ ಜನರು ಬರುತ್ತಾರೆ ಹಾಗಾಗಿ ಇಲ್ಲಿ ಹಿಂದೀ ಬೇಕು’ ಎನ್ನುವವರು ಅರಿಯಬೇಕಾದದ್ದು, ಬೆಂಗಳೂರಿನ ಎರಡನೇ ದೊಡ್ಡ ಭಾಷಿಕ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿರುವ ತೆಲುಗರದ್ದು! ಹಾಗೇ ಉರ್ದು ಭಾಷಿಕರು, ತಮಿಳರು ಎಲ್ಲಾ ಆದಮೇಲೆ ಹಿಂದಿಯವರ ಸರತಿ ಬರುತ್ತದೆ. ಭಾರತೀಯರೆಲ್ಲಾ ಸಮಾನರೆನ್ನುವುದೇ ದಿಟವಾದರೆ ನಮ್ಮ ಮೆಟ್ರೋದಲ್ಲಿ ಕನ್ನಡದ ಜೊತೆಗೆ ತೆಲುಗು, ಉರ್ದು, ತಮಿಳು ಭಾಷೆಗಳೂ ಇರಬೇಕಿತ್ತು! ಬೇಡಪ್ಪಾ... ದೆಹಲಿಯ ಮೆಟ್ರೋದಲ್ಲಿ ಭಾರತದ ಇನ್ಯಾವ ಭಾಷೆಗೆ ಸ್ಥಾನ ನೀಡಿದ್ದಾರೆ? ಅಂದರೆ ಭಾರತದ ಮೂಲೆಮೂಲೆಯಲ್ಲೂ ಆಯಾಜನರ ಭಾಷೆಯ ಜೊತೆಗೆ ಹಿಂದೀಯನ್ನು ಸೇರಿಸುವುದು! ಅದಕ್ಕೆ ಹೆಚ್ಚು ಜನರಿಗೆ ಅದು ಬರುವ ಭಾಷೆ ಎಂದುಬಿಡುವುದು. ಆ ಮೂಲಕ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ರಾಜ್ಯಗಳ ಜನರಿಗೆ ಕರ್ನಾಟಕದಂತಹ ಸಮೃದ್ಧ ಜನವಿರಳ ಪ್ರದೇಶಗಳಿಗೆ ವಲಸೆ ಹೋಗಲು ಅನುಕೂಲ ಮಾಡಿಕೊಡುವುದು! ಇದು ಯಾವರೀತಿಯಲ್ಲಿ ಸಮಾನತೆಯೇ ಜೀವಾಳ ಎನ್ನುವ ಮಾತಿಗೆ ಹತ್ತಿರವಾಗಿದೆ? ಇನ್ನು ಹೀಗೆ ಮೆಟ್ರೋದಂತಹ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಹಿಂದೀ ತೂರಿಸಿರುವುದನ್ನು ಸಮಾನತೆಯ ಸಂಕೇತವಾಗಿ ಕಾಣಬೇಕೋ... ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕವಾಗಿ ಕಾಣಬೇಕೋ? ಬೆಂಗಳೂರಿಗೆ ವಲಸೆ ಬರುವ ಹಿಂದೀ ಭಾಷಿಕರಿಗೆ ತೊಂದರೆಯಾಗಬಾರದೆನ್ನುವ ಘನ ಉದ್ದೇಶ ಭಾರತ ಸರ್ಕಾರಕ್ಕಿರುವಂತೆಯೇ... ದೆಹಲಿಗೆ ಹೋಗುವ, ದೆಹಲಿಯಲ್ಲಿರುವ ಕನ್ನಡದವರ ಬಗ್ಗೆಯೂ ಇದೆಯೇ? ಅಸಲಿಗೆ ಹೀಗೆ ಎಲ್ಲರಿಗೂ ಅನುಕೂಲ ಮಾಡಿಕೊಡುವಂತಹ ಭಾಷಾನೀತಿ ಭಾರತದಲ್ಲಿದೆಯೇ ಎಂದರೆ ಕಾಣುವುದು ದೊಡ್ಡ ನಿರಾಸೆ! 

ಸಮಾನತೆಯ ಕೂಗು!

"ಈ ಹುಳುಕು ಸರಿ ಹೋಗಲಿ... ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ" ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ - ಇದು ಹಿಗ್ಗಿನ,  ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ "ಇಂತಹ ನಿಲುವಿಗೆ ಕಾರಣ ವಿವರಿಸಿ" ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿಕಾಯುವಿಕೆಮೇಲ್ಮನವಿದೂರು,  ವಿಚಾರಣೆ... ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರಿಗೆ ಬಂದಿರುವ ಉತ್ತರಗಳನ್ನು ನೀವು ಇಲ್ಲಿ ನೋಡಿರಿ.

ಆರ್ ಟಿ ಐಗೆ ಉತ್ತರ!



ಹೀಗೆ ರಾಜ್ಯಸರ್ಕಾರದ ಗೆಜೆಟ್ ಸೂಚನೆಯಂತೆ ಹಿಂದೀ ಬಳಸಿದ್ದೇವೆ ಎಂದು ಮೊದಲು ಹೇಳಿದವರು ಅದಕ್ಕೆ ಬೇಕಾದ ಆಧಾರ ಕೊಡದೆ ಯಾವುದೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪತ್ರ ಲಗತ್ತಿಸಿದ್ದರು. ಮುಂದೆ ಮೇಲ್ಮನವಿ/ ವಿಚಾರಣೆ ಅಂದಾಗ ಇದು ತಮ್ಮ ಆಡಳಿತ ಮಂಡಳಿಯ ತೀರ್ಮಾನ ಮತ್ತು ಯಾವುದೇ ಸರ್ಕಾರದ ಆದೇಶವಲ್ಲಾ ಎಂದರು. ಇದು ಇವರ ಸದ್ಯದ ಕೊನೆಯ ಉತ್ತರ. ಕನ್ನಡ ನಾಡಿನ ಮೆಟ್ರೋಲಿ ಹಿಂದೀ ಇರಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲು ಇದೇನು ಇವರ ಖಾಸಗಿ ಸ್ವತ್ತೇ ಎಂಬ ಪ್ರಶ್ನೆ ಜನರದ್ದು! ನಾಳೆ ನಾಲ್ಕು ಮಂದಿ ಮಲಯಾಳಿಗಳೋ, ತಮಿಳರೋ ಬಂದು ಆಡಳಿತ ಮಂಡಳಿಯಲ್ಲಿ ಕೂತು ಮಲಯಾಳವನ್ನೋ, ತಮಿಳನ್ನೋ ಬೆಂಗಳೂರಿನ ಮೆಟ್ರೋದಲ್ಲಿ ತರುವುದಿಲ್ಲಾ ಎನ್ನಲು ಸಾಧ್ಯವೇ! ಕನ್ನಡದ ಜನತೆ ಎಚ್ಚೆತ್ತುಕೊಳ್ಳದೆ ಹೋದರೆ ನಾಳೆ ಪಶ್ಚಾತ್ತಾಪ ಪಡಬೇಕಾದೀತು!! ಅಲ್ವಾ ಗುರೂ?







ನಾಳೆ ಉದ್ಘಾಟನೆಯಾಗಲಿರುವ "ಬಹುಭಾಷಿಕ ಭಾರತಕ್ಕಾಗಿ ಚಳವಳಿ"!


ನಾಳೆ ಅಂತರ್ರಾಷ್ಟ್ರೀಯ ತಾಯ್ನುಡಿ ದಿನಾಚರಣೆ. ಈ ದಿನವನ್ನು ವಿಭಿನ್ನವಾಗಿ ಆಚರಿಸಲಾಗುವ ಕಾರ್ಯಕ್ರಮವೊಂದು ನವದೆಹಲಿಯಲ್ಲಿ ನಾಳೆ ನಡೆಯಲಿದೆ. ಸಮಾನ ಗೌರವದ, ಸಮಾನ ಅವಕಾಶದ ಭಾರತಕ್ಕಾಗಿ ಹಂಬಲಿಸುತ್ತಿರುವ ಹಲವು ಮಂದಿ ನಾಳೆ ಮಧ್ಯಾಹ್ನ ನವದೆಹಲಿಯ ಪ್ರಗತಿ ಮೈದಾನದಲ್ಲಿ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಆಚರಿಸುವುದರ ಒಟ್ಟೊಟ್ಟಿಗೆ ಭಾರತೀಯರ ಭಾಷಾಹಕ್ಕುಗಳನ್ನು ಎತ್ತಿಹಿಡಿಯುವ ಚಳವಳಿಯ ಘೋಷಣೆಯನ್ನೂ ಮಾಡಲಿದ್ದಾರೆ. ಈ ಚಳವಳಿಯ ಹೆಸರು "ಬಹುಭಾಷಿಕ ಭಾರತಕ್ಕಾಗಿ ಚಳವಳಿ" (Movement for Multi-lingual India).

ಈ  ಕಾರ್ಯಕ್ರಮದಲ್ಲಿ ಭಾರತದ ಬೇರೆ ಬೇರೆ ತಾಯ್ನುಡಿಯ ಜನರು ಒಟ್ಟಾಗಿ ಸೇರಲಿದ್ದು ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬನವಾಸಿ ಬಳಗವೂ ಕೂಡಾ ಈ ಚಳವಳಿಯ ಜೊತೆ ಗುರುತಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಭರವಸೆ ಹೊಂದಿದೆ. ಬನವಾಸಿ ಬಳಗದ ಶ್ರೀ ರಾಘವೇಂದ್ರರವರು ಕನ್ನಡಿಗರ ಪ್ರತಿನಿಧಿಯಾಗಿ ಖುದ್ದಾಗಿ ಇದರಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಎಂಟು ಹತ್ತು ವರ್ಷಗಳಿಂದ ನಮ್ಮ ಭಾಷಾಹಕ್ಕುಗಳಿಗಾಗಿ ದನಿಎತ್ತಿರುವ ಬನವಾಸಿ ಬಳಗವು, ಸಂಬಂಧಿಸಿದ ಸರ್ಕಾರಗಳ ಮೇಲೆ ಸಾರ್ವಜನಿಕ ಸಹಿಸಂಗ್ರಹದ ಹಕ್ಕೊತ್ತಾಯ ಪತ್ರಗಳ ಮೂಲಕ ಒತ್ತಡ ಹಾಕುತ್ತಲೇ ಬಂದಿದೆ. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನವಾಸಿ ಬಳಗ ಹೊರತಂದಿರುವ "ಹಿಂದೀ ಹೇರಿಕೆ: ಮೂರು ಮಂತ್ರ - ನೂರು ತಂತ್ರ" ಹೊತ್ತಗೆಯು ಪರಿಣಾಮಕಾರಿಯಾಗಿದ್ದು ಅನೇಕ ಮಾಹಿತಿಪೂರ್ಣ ವಿಚಾರಗಳನ್ನು ಹೊಂದಿದೆ. ಇದೀಗ ಭಾರತದ ಹುಳುಕಿನ ಭಾಷಾನೀತಿಯ ಬದಲಾವಣೆಗಾಗಿ ಹೊರರಾಜ್ಯದ ಜನರೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ಬಳಗ ಮುಂದಾಗಿದೆ.

ಸಭೆಯಲ್ಲಾದ ತೀರ್ಮಾನಗಳ ಬಗ್ಗೆ, ಮುಂದಿನ ಹೋರಾಟದ ಸ್ವರೂಪಗಳ ಬಗ್ಗೆ ನಿಮ್ಮೊಂದಿಗೆ ಸೂಕ್ತಸಮಯದಲ್ಲಿ ಸೂಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ನೀವು ದೆಹಲಿಯಲ್ಲಿದ್ದರೆ ನಾಳಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಭಾರತದ ಸಂಸತ್ತಿಗೂ.. ಇವರಿಗೂ ಏನು ವ್ಯತ್ಯಾಸ?

(ಚಿತ್ರಕೃಪೆ: ೧೯೮೪ರ ಸಿಖ್ ವಿರೋಧಿ ದಂಗೆಯ ಪತ್ರಿಕಾ ವರದಿಯೊಂದರಿಂದ)
ಭಾರತದ ಸಂಸತ್ತಿನಲ್ಲಿ ಮಂಗಳವಾರದಿಂದೀಚಿಗೆ ದಕ್ಷಿಣ ಭಾರತೀಯರನ್ನು ಒಳಗೆ ಬಿಡುವುದಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವ ಸುದ್ದಿ ನೋಡಿ ಅಚ್ಚರಿಯಾಗಿದೆ. ದಕ್ಷಿಣ ಭಾರತೀಯರು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವ ಭೀತಿಗೆ ಕಾರಣವಾಗಿದೆ. 

ಹಿಂದೆ ಮಹಾತ್ಮಾಗಾಂಧಿಯವರ ಹತ್ಯೆಯಾದಾಗ ಕೈಗೆ ಸಿಕ್ಕಿದ ಚಿತ್ಪಾವನರೆಂದು ಕರೆಯಲಾಗುವ ಮರಾಟಿ ಬ್ರಾಹ್ಮಣರ ಮೇಲೆ ಅವರು ಚಿತ್ಪಾವನರೆಂಬ ಕಾರಣಕ್ಕೇ ಹಲ್ಲೆ ಮಾಡಲಾಗಿತ್ತು. ಇದೇ ರೀತಿ ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದುಹಾಕಿದ್ದಾಗ, ಹಂತಕರು ಸಿಖ್ ಸಮುದಾಯಕ್ಕೆ ಸೇರಿದ್ದರಿಂದಾಗಿ ಕಂಡಕಂಡಲ್ಲಿ ಕೈಗೆ ಸಿಕ್ಕ ಸಿಖ್ಖರನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಗೋಧ್ರಾದಲ್ಲಿ ನಡೆದ ಹತ್ಯೆಯ ಪ್ರತಿಧ್ವನಿಯಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಕೊಲ್ಲಲಾಯಿತು. ಅಮಾಯಕರನ್ನು ಕೊಲ್ಲಲಾಗಿದ್ದ ಈ ಘಟನೆಗಳನ್ನೂ ಎಂದಿಗೂ ಒಪ್ಪಲಾಗದ ಅಮಾನುಷ ಕೃತ್ಯವೆಂದೂ, ಜನಾಂಗೀಯ ದ್ವೇಶದಿಂದ ಮಾಡಿದ ಕಗ್ಗೊಲೆಯೆಂದೂ ಬಣ್ಣಿಸಲಾಗುತ್ತದೆ.  

ಇಲ್ಲೆಲ್ಲಾ ಹಾಗೆ ದ್ವೇಶದಿಂದ ನರಮೇಧಕ್ಕಿಳಿದವರನ್ನು "ಸಂವಿಧಾನ ವಿರೋಧಿಗಳು" "ಸಹಿಷ್ಣುತೆಯ ವಿರೋಧಿಗಳು" " ಭಾರತ ರಾಷ್ಟ್ರೀಯತೆಯ - ಒಗ್ಗಟ್ಟಿನ ವಿರೋಧಿಗಳು" "ದೇಶ ವಿರೋಧಿಗಳು" ಎಂದು ಇಡೀ ದೇಶ ಬಣ್ಣಿಸಿ ಖಂಡಿಸಿತು. ಇವೆಲ್ಲಾ ಕೃತ್ಯಗಳು ನಡೆದದ್ದು ಖಾಸಗಿ ವ್ಯಕ್ತಿಗಳಿಂದ... ಇದಕ್ಕೆ ಕುಮ್ಮಕ್ಕು ಕೊಟ್ಟವರು ಅಧಿಕಾರದಲ್ಲಿದ್ದವರು ಎಂಬ ದೂರಿದ್ದರೂ ಇದುವರೆವಿಗೆ ಯಾವುದೇ ಸರ್ಕಾರವೂ ಜನಾಂಗೀಯ ತಾರತಮ್ಯವನ್ನು ಸಮರ್ಥಿಸಿದ ಉದಾಹರಣೆಯಿಲ್ಲ! ಆದರೆ ದಕ್ಷಿಣ ಭಾರತದ ಹೆಸರನ್ನು ಹೊಂದಿರುವ ಸಾರ್ವಜನಿಕರನ್ನು ಸಂಸತ್ತಿನ ಕಲಾಪದಿಂದ ಹೊರಗಿಡುತ್ತಿರುವುದು ಮಾತ್ರಾ ಭಾರತ ಸರ್ಕಾರವೇ ಇಂಥಾ ತಾರತಮ್ಯಕ್ಕೆ ಮುಂದಾಗಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಹಿಂದೆ ಅಮೇರಿಕಾದಲ್ಲಿ ಉಗ್ರಗಾಮಿಗಳು ವಿಮಾನ ಕದ್ದು ಎತ್ತರದ ಕಟ್ಟಡಗಳೂ ಸೇರಿದಂತೆ ನಾಲ್ಕೈದು ಪ್ರಮುಖ ಜಾಗಗಳಿಗೆ ನುಗ್ಗಿಸಿ ಸಾವಿರಾರು ಜನರ ಸಾವಿಗೆ ಕಾರಣರಾದ ದಿನದಿಂದ ಆ ದೇಶಕ್ಕೆ ಹೋಗುವ ಮುಸ್ಲಿಮ್ ಹೆಸರಿನವರನ್ನೆಲ್ಲಾ ಸಿಕ್ಕಾಪಟ್ಟೆ ತಪಾಸಣೆ ಮಾಡೇ ಒಳಗೆ ಬಿಟ್ಟುಕೊಳ್ಳುವ ಏರ್ಪಾಟು ಶುರುವಾಯಿತು. ಅದೂ ಕೂಡಾ ಹೊರದೇಶಗಳಿಂದ ಬರುವವರಿಗೆ ಅನ್ವಯವಾಗುತ್ತಿತ್ತು. ಹಾಗೆ ತಪಾಸಣೆ ಮಾಡಿದರೇ ಹೊರತು ಒಳಗೆ ಬಿಟ್ಟುಕೊಳ್ಳಲ್ಲಾ ಎನ್ನಲಿಲ್ಲಾ! ಆದರೆ ಭವ್ಯ ಭಾರತದಲ್ಲಿ ಮಾತ್ರಾ, ಸಂಸತ್ತಿಗೆ ಪಾಸು ಪಡೆದು ಹೋಗುವ ಜನಸಾಮಾನ್ಯರ ಹಕ್ಕನ್ನು ದಕ್ಷಿಣ ಭಾರತೀಯರು ಎನ್ನುವ ಕಾರಣದಿಂದಲೇ ನಿರಾಕರಿಸಿರುವುದು ಸರಿಯಲ್ಲಾ! ಇಂತಹ ಕ್ರಮಗಳಿಂದ ಭಾರತದ ಸಂಸತ್ತು, ದಕ್ಷಿಣದವರಿಗೆ ನೀವು ಭಾರತೀಯರಲ್ಲಾ ಎನ್ನುತ್ತಿದೆಯೇನೋ ಎನ್ನುವ ಭಾವನೆಗೆ ಕಾರಣವಾಗುತ್ತಿದೆ. ಇಂಥಾ ನಡೆ ಅದ್ಯಾವುದೇ ಕಾರಣಕ್ಕಾಗಲಿ ಸಂಸತ್ ತೆಗೆದುಕೊಳ್ಳುವುದನ್ನು ಒಪ್ಪಲಾಗದು. ನಮ್ಮ ಜನರನ್ನು ಹೊರಗಿಡುವ ಸಂಸತ್ತಿಗೆ ನಾವೂ ಬರುವುದಿಲ್ಲಾ ಎನ್ನುವ ಗಟ್ಟಿ ನಿಲುವನ್ನು ತೆಗೆದುಕೊಂಡಾದರೂ ನಮ್ಮ ಸಂಸದರು ಈ ತಾರತಮ್ಯವನ್ನು ಇಲ್ಲವಾಗಿಸಬೇಕು.

ಸಮಸ್ಯೆಯ ಮೂಲವಿರುವುದು ಸಂವಿಧಾನದ ಮೂರನೇ ಕಾಲಂನಲ್ಲಿ ಬರೆಯಲಾಗಿರುವ "ರಾಜ್ಯಗಳ ಗಡಿ ನಿರ್ಣಯಿಸುವ ಹಕ್ಕು ಸಂಸತ್ತಿನದು" ಎನ್ನುವ ಮಾತಿನಲ್ಲಿ. ಈ ಅಂಶವನ್ನು ತಾಂತ್ರಿಕವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಶಾಸನಸಭೆಯ ನಿಲುವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಆಂಧ್ರಪ್ರದೇಶವನ್ನು ಒಡೆಯಲು ಭಾರತದ ಸಂಸತ್ತು ಮುಂದಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ/ ಒಕ್ಕೂಟದ ಸ್ಪೂರ್ತಿಗೆ ವಿಡಂಬನೆ. ಸಂಸತ್ತಿನಲ್ಲಿ ಉಳಿದೆಲ್ಲಾ ಸಂಸದರು ಒಂದಾಗಿ ಸೇರಿದರೆ ಯಾವೊಂದು ರಾಜ್ಯದ ಸಂಸದರ ಒಟ್ಟು ಸಂಖ್ಯೆಯೂ ಅದನ್ನು ಸಂಖ್ಯಾಬಲದಲ್ಲಿ ಮೀರಿಸಲಾಗದ್ದು ಗೊತ್ತಿರುವ ವಿಷಯವೇ! ಹೀಗಿದ್ದಾಗ ರಾಜ್ಯವೊಂದರ ಸಂಸದರ ಅಭಿಪ್ರಾಯಕ್ಕಾಗಲೀ, ಸದರಿ ರಾಜ್ಯದ ಶಾಸನಸಭೆಯ ನಿರ್ಣಯಕ್ಕಾಗಲೀ ಬೆಲೆಕೊಡದೆ ರಾಜ್ಯವೊಂದನ್ನು ಒಡೆದು ಹಾಕಿಬಿಡಬಹುದಾದಂಥಾ ಸ್ವಾತಂತ್ರ್ಯ ನಮ್ಮ ಸಂಸತ್ತಿಗೆ ಇರುವುದೇ ಸರಿಯಲ್ಲಾ!! ಅಲ್ವಾ ಗುರೂ? 

ವಿರೋಧವೇನೋ ಸಂವಿಧಾನ ಬದ್ಧ! ಆದರೆ "ನಿಶೇಧ" ಅಲ್ವಲ್ಲಾ ಗುರುಗಳೇ!

(ಚಿತ್ರಕೃಪೆ: ಪ್ರಜಾವಾಣಿ ದಿನಪತ್ರಿಕೆ)
ಕಳೆದ ವಾರದಲ್ಲೊಂದು ದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಾಡಿನ ಹಿರಿಯ ಸಾಹಿತಿ ಚಿಂತಕರೆಂದು ಹೆಸರಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಬರೆದ ಬರಹವೊಂದು ಪ್ರಕಟವಾಯಿತು. “ಡಬ್ಬಿಂಗ್ ವಿರೋಧ, ಸಂವಿಧಾನ ಬದ್ಧ” ಎಂಬ ತಲೆಬರಹದ ಬರಹದಲ್ಲಿ ಶ್ರೀಯುತರು ಡಬ್ಬಿಂಗ್ ವಿರೋಧವಾಗಿ ಮಾತನಾಡುತ್ತಾ ಡಬ್ಬಿಂಗ್ ಮೇಲಿನ ನಿಶೇಧವನ್ನು ಸಮರ್ಥಿಸುತ್ತಿರುವುದು ಕಂಡಿತು. ಇವರ ಮಾತುಗಳನ್ನು ಒಂದೊಂದಾಗಿ ಬಿಡಿಸಿ ನೋಡಿದರೆ ಇದರ ಪೊಳ್ಳುತನ ತಿಳಿಯುವುದಷ್ಟೇ ಅಲ್ಲದೆ ಡಬ್ಬಿಂಗ್ ವಿರೋಧದ ತಮ್ಮ ನಿಲುವಿನ ಬೆಂಬಲಕ್ಕಾಗಿ ಹೇಗೆ ಸಂವಿಧಾನವನ್ನು ಗುರಾಣಿಯಂತೆ ಬಳಸಲು ತಪ್ಪು ತಪ್ಪಾಗಿ ಬಳಸಿದ್ದಾರೆ ಎಂಬುದು  ತಿಳಿಯುತ್ತದೆ.

ವಿರೋಧದ ಕಾರಣಗಳು
೧. ಡಬ್ಬಿಂಗ್ ಚಿತ್ರಗಳು ಸೃಜನಶೀಲತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಇದಕ್ಕೆ ನನ್ನ ವಿರೋಧವಿದೆ ಎಂದಿರುವ ಶ್ರೀಯುತರ ಅಭಿಪ್ರಾಯವನ್ನು ಗೌರವಿಸುತ್ತಾ ಅವರಿಗೇ ಆಗಲೀ ಮತ್ತೊಬ್ಬರಿಗೇ ಆಗಲಿ ಡಬ್ಬಿಂಗ್ ಚಿತ್ರ ವಿರೋಧಿಸುವ ಸ್ವತಂತ್ರ ಇದ್ದೇ ಇದೆ ಎನ್ನಬೇಕಾಗಿದೆ. ಏಕೆಂದರೆ ಡಬ್ಬಿಂಗ್ ಬೇಕು ಎನ್ನುವ ಸ್ವಾತಂತ್ರ್ಯವನ್ನು ಈ ನಾಡಿನಲ್ಲಿ ಹತ್ತಿಕ್ಕಲಾಗುತ್ತಿದೆಯೇ ಹೊರತು ಬೇಡ ಎನ್ನುವ ಸ್ವಾತಂತ್ರ್ಯವನ್ನಲ್ಲಾ! ಶ್ರೀಯುತರು ಮುಂದುವರೆಯುತ್ತಾ ತಾವೇ ತಾವಾಗಿ ಎದುರಾಳಿಗಳ ಪ್ರಶ್ನೆಗಳನ್ನೆತ್ತಿ ಉತ್ತರಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಾಸ್ತವವಾಗಿ ಕನ್ನಡ ಚಿತ್ರಗಳು ಸೃಜನಶೀಲವಾಗಿಲ್ಲದಿರುವುದಕ್ಕೆ ಡಬ್ಬಿಂಗ್ ಚಿತ್ರಗಳು ಬರಬೇಕೆನ್ನುವ ವಾದವೇ ಇಲ್ಲದಿರುವಾಗ ಹಾಗೊಂದು ಪ್ರಶ್ನೆ ಹುಡುಕಿ ಅದಕ್ಕೊಂದು ಉತ್ತರ ನೀಡಿರುವುದು ಇವರು ವಿಷಯ ವಿಶ್ಲೇಷಣೆಗಿಳಿಯದೆ ಸುಮ್ಮನೇ ಅನಿಸಿಕೆಯೊಂದನ್ನು ರೂಪಿಸಿಕೊಂಡು ಅದಕ್ಕೆ ಸಮರ್ಥನೆ ಹುಡುಕುತ್ತಿರುವಂತೆ ಅನ್ನಿಸುತ್ತದೆ. ಕನ್ನಡ ಚಿತ್ರಗಳು ಅದ್ಭುತವಾಗಿದ್ದರೂ, ಸೃಜನಶೀಲತೆ ಅಲ್ಲಿ ಸಾಕಾರವಾಗುತ್ತಿದ್ದರೂ, ಜಗತ್ತಿನಲ್ಲೇ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮ ನಮ್ಮ ಮುಂದೆ ತಂದಿಡುತ್ತಿದ್ದರೂ “ಡಬ್ಬಿಂಗ್ ಚಿತ್ರಗಳನ್ನು ನೋಡಬೇಕು” ಎಂದು ಕನ್ನಡದ ಪ್ರೇಕ್ಷಕ ಬಯಸುವುದು ಅಪರಾಧವೇನೂ ಅಲ್ಲಾ! ಆಗಲೂ ತನ್ನ ತಾಯ್ನುಡಿಗೆ ಡಬ್ ಆದ ಕಾರ್ಯಕ್ರಮಗಳನ್ನು ನೋಡುವ ಆಯ್ಕೆ ಕನ್ನಡಿಗನಿಗೆ ಸಿಗಲೇಬೇಕಲ್ಲವೇ? ಇದೇ ರೀತಿ ‘ಜಾಗತೀಕರಣದ ಯುಗದಲ್ಲಿ ಕನ್ನಡ ಚಿತ್ರಗಳಿಗೆ ಎದುರಾಗಿ ಡಬ್ಬಿಂಗ್ ಚಿತ್ರಗಳನ್ನು ಇಡುವ ಬದಲಿಗೆ ಕೆಟ್ಟ ಕನ್ನಡ ಚಿತ್ರಗಳಿಗೆ, ಒಳ್ಳೆಯ ಕನ್ನಡ ಚಿತ್ರಗಳನ್ನು ಎದುರಾಗಿಸುವುದು ಒಳಿತೆಂ’ದು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಕೇಂದ್ರಿತ ಮನೋಭಾವ ಸೃಜನಶೀಲತೆಗೆ ಮಾರಕ ಎಂದೂ ಹೇಳಿ ಇಡೀ ವಿಷಯವನ್ನು ಗೊಂದಲಮಯವಾಗಿಸಿದ್ದಾರೆ. ಕಲೆ, ಸೃಜನಶೀಲತೆಗಳೇ ಸರಕಾಗಿರುವ ಚಿತ್ರೋದ್ಯಮ ಇವರ ಮಾತನ್ನು ಒಪ್ಪಿದರೆ, ನಾಳೆಯಿಂದ ಯಾವ ಸಿನಿಮಾಕ್ಕೂ ಟಿಕೆಟ್ ಇಟ್ಟು ತೋರಿಸುವ ಹಾಗಿರುವುದಿಲ್ಲಾ! ಯಾಕೆಂದರೆ ಸೃಜನಶೀಲ ಚಿತ್ರಗಳು ತೆರೆಕಾಣಲೂ ಕೂಡಾ ವ್ಯಾಪಾರ ಮಾಡಬೇಕು. ಇವರಿಗೆ ಅದೇಕೆ ವ್ಯಾಪಾರ, ಮಾರುಕಟ್ಟೆ, ಗ್ರಾಹಕ ಎಂದೊಡನೆ “ಅದು ಕೆಟ್ಟದ್ದು” ಎಂದೆನ್ನಿಸುತ್ತದೆ ಎಂಬುದಕ್ಕೆ ಉತ್ತರವಿಲ್ಲಾ!

೨. ಡಬ್ಬಿಂಗ್ ಚಿತ್ರಗಳು ಬರುವುದರಿಂದ ಸ್ವಂತ ಚಿತ್ರನಿರ್ಮಾಣ ನಿಂತು ಕಾರ್ಮಿಕರ ಬದುಕುವ ಹಕ್ಕು ಕಿತ್ತುಕೊಂಡಂತಾಗುತ್ತದೆ ಎನ್ನುವ ಮಾತುಗಳನ್ನು ಆಡಿರುವ ಶ್ರೀಯುತರು, ವಾಸ್ತವವಾಗಿ ನಿರೀಕ್ಷಿಸುತ್ತಿರುವುದಾದರೋ ಏನನ್ನು? ಚಿತ್ರರಂಗದಲ್ಲಿ ಹಣ ಹೂಡುವವರು ತಮಗೆ ಯಾವುದು ಲಾಭದಾಯಕವೋ  ಅದನ್ನು ತಾನೇ ಮಾಡುತ್ತಾರೆ. ನಿಮಗೆ ಲಾಭದ ದಾರಿ ಮುಚ್ಚುತ್ತೇವೆ, ನಷ್ಟವಾದರೂ ಇದೇ ದಾರಿಯಲ್ಲಿ ಸಾಗಿ ಸಾವಿರಾರು ಕಾರ್ಮಿಕರನ್ನು ಉಳಿಸಿ ಎನ್ನುವ ನಿಲುವು ಸರಿಯಾದುದೇ ಎಂದು ಪ್ರಾಜ್ಞರು ಯೋಚಿಸಬೇಕು. ನಿರ್ಮಾಪಕನಿಗೆ ತನ್ನ ಆಯ್ಕೆಯ ಚಿತ್ರ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗದೇ? ಡಬ್ಬಿಂಗ್ ಚಿತ್ರಗಳು ಮತ್ತು ತುಟಿಚಲನೆ, ಗುಣಮಟ್ಟದ ಕೊರತೆ ಮುಂತಾಗಿ ಹೇಳುವ ಬರಗೂರರು ಅಂತಹ ಚಿತ್ರಗಳನ್ನು ಒಪ್ಪುವ, ತಿರಸ್ಕರಿಸುವ ಅಥವಾ ಮೆಚ್ಚುವ ಅವಕಾಶವನ್ನೇ ನಿರಾಕರಿಸುವುದನ್ನು ಹೇಗೆ ತಾನೇ ಸಮರ್ಥಿಸಿಕೊಳ್ಳಬಲ್ಲರು?

೩. ಇನ್ನು ಕನ್ನಡದ ಬೆಳವಣಿಗೆ ಮತ್ತು ಡಬ್ಬಿಂಗ್ ಎನ್ನುವ ವಿಷಯವಾಗಿ ಮಾತಾಡುತ್ತಾ, ಡಬ್ಬಿಂಗಿನಿಂದ ಕನ್ನಡ ಬೆಳವಣಿಗೆ ಆಗದು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಯಾವ ಆಧಾರವನ್ನೂ ನೀಡಿಲ್ಲಾ. ವಾಸ್ತವವಾಗಿ ಕನ್ನಡದ ಮಕ್ಕಳು/ ಜನರು ತಮ್ಮ ಇಷ್ಟದ ಪರಭಾಷೆಯ ಕಾರ್ಯಕ್ರಮಗಳನ್ನು/ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡುವ ಅವಕಾಶ ದೊರೆಯುವುದಕ್ಕಿಂತಾ ದೊಡ್ಡದು ಬೇರೇನು ಬೇಕು? ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸದೆ ಕನ್ನಡಕ್ಕೆ ಅಂಟಿಕೊಳ್ಳುವುದಕ್ಕಿಂತಾ ದೊಡ್ಡ ಇನ್ನಾವ ಕನ್ನಡದ ಬೆಳವಣಿಗೆ ಬೇಕಾಗಿದೆ? ಡಬ್ಬಿಂಗ್ ಚಿತ್ರಗಳಲ್ಲಿ ನಾನಾ ಬಗೆಯ ಕನ್ನಡಕ್ಕೆ ಅವಕಾಶವಿಲ್ಲ ಎನ್ನುವುದರ ಅರ್ಥವಾದರೂ ಏನು? ಯಾಕೆ ಅದು ಸಾಧ್ಯವಾಗುವುದಿಲ್ಲಾ? ಯಾಕೆ ತುಟಿಚಲನೆಗಾಗೇ ಡೈಲಾಗ್ ಬರೀಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇಲ್ಲಾ! ಪ್ರಪಂಚದಲ್ಲಿ ಡಬ್ ಮಾಡುವ ಎಲ್ಲೆಡೆಯೂ ಇರದ ಇಂತಹ ನಿಯಮವನ್ನು ತಡೆಗಾಗಿಯೇ ಬಳಸುತ್ತಿರುವಂತೆ ತೋರುತ್ತದೆ. ವಾಸ್ತವವಾಗಿ ಹಾಗೆ ತುಟಿಚಲನೆಗೆ ಸಂಪೂರ್ಣವಾಗಿ ಹೊಂದಿಸಿ ಡಬ್ ಮಾಡುವುದು ಎಂದಿಗೂ ಎಲ್ಲಿಯೂ ಯಾರಿಗೂ ಸಾಧ್ಯವೇ ಆಗದ ಕ್ರಿಯೆ! ಯಾರಾದರೂ ಇಂಗ್ಲೀಶ್ ಸಿನಿಮಾಗೆ ಕನ್ನಡದ ಡೈಲಾಗ್ ಕೂಡಿಸಿ ಬರೆಯಲು ಸಾಧ್ಯವೇ? ಫ್ರೆಂಚ್ ಸಿನಿಮಾಗೆ  ಜಪಾನೀಸ್ ಭಾಷೆ ಕೂಡಿಸಲು ಸಾಧ್ಯವೇ? ಡಬ್ ಸಿನಿಮಾ ಎಂದರೇ ತುಟಿಚಲನೆ ಹೊಂದಿಕೆಯಾಗಿರುವುದಿಲ್ಲ ಎನ್ನುವುದನ್ನು ನೋಡುಗ ತಿಳಿದೇ ಇರುತ್ತಾನೆ ಮತ್ತು ಈ ಹೊಂದಾಣಿಕೆಯಿಲ್ಲದೆ ಇರುವುದೇ ಅವನು ಡಬ್ಬಿಂಗ್ ಸಿನಿಮಾವನ್ನು ಮೆಚ್ಚದಿರಲು ಕಾರಣವಾಗಬಹುದು ಎಂಬುದನ್ನು ಅದ್ಯಾಕೋ ಚಿತ್ರರಂಗದ ಮಂದಿ ಯೋಚಿಸುವುದಿಲ್ಲ!

ಸಂವಿಧಾನದ ತಪ್ಪು ವ್ಯಾಖ್ಯಾನ

ಇನ್ನು ಬರಗೂರರು ಸಂವಿಧಾನವನ್ನು ಉದ್ಗರಿಸಿ ಡಬ್ಬಿಂಗ್ ನಿಶೇಧವನ್ನು ಎತ್ತಿಹಿಡಿಯುವ ವ್ಯರ್ಥಸಾಹಸಕ್ಕೆ ಮುಂದಾಗಿದ್ದಾರೆ. ಸಂವಿಧಾನದ ನಾಲ್ಕು ವಿಧಿಗಳ ಬಗ್ಗೆ ಮಾತಾಡಿದ್ದಾರೆ. ೧೯ (ಜಿ), ೧೯ (೬), ೨೧, ೨೩ ಮತ್ತು ೨೪ನ್ನು ಎತ್ತಿ ಆಡಿದ್ದಾರೆ. ಡಬ್ಬಿಂಗ್ ನಿಶೇಧವನ್ನು ಸಮರ್ಥಿಸಲು ಸಂವಿಧಾನವನ್ನೂ ಬಿಡದೆ ಬಳಸಿಕೊಂಡಿರುವ ಶ್ರೀಯುತರು ಈ ಭರದಲ್ಲಿ ತಮಗೆ ಬೇಕಾದಂತೆ ಟಿಪ್ಪಣಿ ನೀಡಿದ್ದಾರೆ ಮತ್ತು ಕನ್ನಡನಾಡಲ್ಲಿರುವ ಅಸಾಂವಿಧಾನಿಕ ಡಬ್ಬಿಂಗ್ ತಡೆಯೆನ್ನುವುದು ಎಲ್ಲಾ ರೀತಿಯಲ್ಲೂ ಸಂವಿಧಾನಕ್ಕೆ ವಿರುದ್ಧವಾದುದು ಎನ್ನುವುದನ್ನೇ ಮರೆತಿರುವಂತೆ ನಡೆದುಕೊಳ್ಳುತ್ತಿರುವುದು ಮಾತ್ರಾ ದುರಂತ! ಭಾರತೀಯ ಸಂವಿಧಾನದ ೧೯(ಜಿ) ತನ್ನ ಪ್ರಜೆಗಳಿಗೆ ಯಾವುದೇ ನ್ಯಾಯಬದ್ಧ ವ್ಯಾಪಾರ ಮಾಡುವ ಹಕ್ಕಿದೆ ಎನ್ನುತ್ತದೆ. ಡಬ್ಬಿಂಗ್ ಕಾನೂನುಬದ್ಧವಾದ ಕ್ರಿಯೆಯಾದ್ದರಿಂದ ಇದನ್ನು ಸಂವಿಧಾನ ಎತ್ತಿ ಹಿಡಿಯುತ್ತದೆನ್ನುವ ಬರಗೂರರ ಮಾತುಗಳು ಒಪ್ಪಬೇಕಾದ್ದೇ! ಆದರೆ ಅವರ ಮುಂದಿನ ಮಾತುಗಳನ್ನು ಸಾಣೆ ಹಿಡಿಯಬೇಕಾಗಿದೆ.

೧೯(೬)ರ ಪ್ರಕಾರ ಸರ್ಕಾರಕ್ಕೆ ಯಾವುದನ್ನೇ ನಿಶೇಧಿಸುವ ಹಕ್ಕಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧವಾಗಬೇಕು ಎನ್ನುವ ಅರ್ಥದಲ್ಲಿ ಶ್ರೀಯುತರು ಬರೆದಿದ್ದಾರೆ. ಇಲ್ಲಿ ಸರ್ಕಾರಕ್ಕೆ “ನ್ಯಾಯೋಚಿತ ನಿಶೇಧ” ಹೇರುವ ಅವಕಾಶವಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧ ಮಾಡಬಹುದು ಎಂದಿದ್ದಾರೆ. ಈ ನ್ಯಾಯೋಚಿತ ನಿಶೇಧ ಅನ್ನುವುದರ ವ್ಯಾಖ್ಯಾನವಾದರೂ ಏನು? ಯಾವುದರಿಂದ ಸಮಾಜದ ಸ್ವಾಸ್ಥ್ಯ/ ಜನರ ಆರೋಗ್ಯ/ ಬದುಕು ಹಾನಿಗೊಳಗಾಗುತ್ತೋ ಅಂಥದ್ದನ್ನು ಇದರಡಿಯಲ್ಲಿ ಸರ್ಕಾರ ನಿಶೇಧ ಮಾಡಿರೋದನ್ನು ಕಾಣಬಹುದು. ಒಂದಂಕಿ ಲಾಟರಿ, ಸರಾಯಿ, ಗುಟ್ಕಾ ಮೊದಲಾದವು... ಈ ಪಟ್ಟಿಯಲ್ಲಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಸರ್ಕಾರ ಸಮರ್ಥನೆ ನೀಡಿರುವುದೂ ಕೂಡಾ ಇವು ನಿಯಂತ್ರಿಸಲಾಗದಂತಹ... ಆರೋಗ್ಯಕ್ಕೆ/ ಬದುಕಿಗೆ ಹಾನಿಕರವಾದವು ಎಂದೇ.  ಇಲ್ಲಿ ಡಬ್ಬಿಂಗ್ ಎನ್ನುವುದು ಹೇಗೆ ಹಾನಿಕರ ಎನ್ನುವುದನ್ನು ಇಡೀ ಜಗತ್ತು ಒಪ್ಪುವಂತೆ ವಿವರಿಸದೆ ಸರ್ಕಾರ ಇಂಥಾ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದಲ್ಲಿ ಚೀಮಾರಿಗೊಳಗಾಗುವುದು ನಿಶ್ಚಿತ.

ಇನ್ನು ಸಂವಿಧಾನದ ೨೩, ೨೪ನೇ ಕಾಲಮ್ಮುಗಳನ್ನು ಸಂಬಂಧವೇ ಇಲ್ಲದಿದ್ದರೂ ಎಳೆದುತಂದಿದ್ದಾರೆ. ೨೩ನೇ ಕಾಲಮ್ಮು ಜೀತಪದ್ದತಿ ಹಾಗೂ ಅಕ್ರಮ ಮಾನವ ಸಾಗಣೆಗಳ ನಿಶೇಧಗಳ ಬಗ್ಗೆ, ಸೇವಾ ಕಾಯ್ದೆಯಾದ ಎಸ್ಮಾ ಬಗ್ಗೆ ಮಾತಾಡಿದೆ.  ೨೪ನೇ ಕಾಲಮ್ಮಿನಲ್ಲಿ ಬಾಲಕಾರ್ಮಿಕ ಪದ್ದತಿ ನಿಶೇಧದ ಬಗ್ಗೆ ಮಾತಾಡಲಾಗಿದೆ. ಇದಕ್ಕೂ ಡಬ್ಬಿಂಗಿಗೂ ಅದೆಲ್ಲಿಂದ ಸಂಬಂಧವಿದೆಯೋ ಬಲ್ಲವರೇ ಹೇಳಬೇಕು.

ಸಿಸಿಐನ ವ್ಯಾಪ್ತಿ ಮತ್ತು ಮನರಂಜನೆ

ಇನ್ನು ಕಡೆಯದಾಗಿ ಭಾರತೀಯ ಸ್ಪರ್ಧಾ ಆಯೋಗದ ಬಗ್ಗೆಯೂ ತಪ್ಪುತಪ್ಪಾದ ಮಾಹಿತಿ ನೀಡಿದ್ದಾರೆ. ಸಿಸಿಐ ಗ್ರಾಹಕ ಹಕ್ಕು ಮತ್ತು ಸರಕುಗಳಿಗೆ ಸಂಬಂಧಿಸಿದ್ದು ಎಂಬುದು ಸರಿಯಲ್ಲಾ. ಮೂಲತಃ ಸಿಸಿಐ ಅಡಿಯಲ್ಲಿ ಮನರಂಜನೆಯೂ ಕೂಡಾ ಬರುತ್ತಿದ್ದು ಜನರಿಂದ ಹಣಪಡೆದು ನೀಡುವ ಯಾವುದೇ ಸೇವೆಯೂ ಕೂಡಾ ಗ್ರಾಹಕ ಸೇವೆಯೇ ಆಗಿದೆ ಎನ್ನುತ್ತಾ ಹಾಗಾಗಿ ಚಲನಚಿತ್ರವೂ ಸೇರಿದಂತೆ ಇಡೀ ಮನೋರಂಜನಾ ವಲಯವೂ ಸಿಸಿಐ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆಂದು ಬರೆಯಲಾಗಿದೆ.

ಸಿಸಿಐ ಕಾಯ್ದೆಯ ೫೪ನೇ ಕಾಲಮ್ಮಿನಲ್ಲಿ ಯಾವುದನ್ನೇ ಆಗಲಿ ಸಿಸಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಕಾರ ಕೇಂದ್ರಸರ್ಕಾರಕ್ಕಿದೆ ಎಂದಿರುವ ಶ್ರೀಯುತರು ಅರೆಸತ್ಯವೊಂದನ್ನು ಮಾತ್ರಾ ಮಾತಾಡಿದ್ದಾರೆ. ಮುಂದುವರೆಯುತ್ತಾ ಇದೇ ಕಾಲಮ್ಮಿನಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಕೇಂದ್ರಸರ್ಕಾರ ಇಂಥಾ ಕ್ರಮಕ್ಕೆ ಮುಂದಾಗಬಹುದು ಎಂದೂ ವಿವರಿಸುತ್ತಾ ಸರ್ಕಾರದ ಭದ್ರತೆಗೆ, ಜನತೆಯ ಹಿತಕ್ಕೆ ಧಕ್ಕೆ ತರುವಂತಿದ್ದರೆ, ಅಂತರದೇಶೀಯ ಒಪ್ಪಂದಗಳಿಗೆ ಧಕ್ಕೆ ತರುವಂತಿದ್ದರೆ, ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕಾಗಿ ದುಡಿಯುವ ಯಾವುದೇ ಸಂಸ್ಥೆಯಾಗಿದ್ದರೆ ವಿನಾಯ್ತಿ ನೀಡಬಹುದು.. ಅದೂ ಕೂಡಾ ಸಾರ್ವಭೌಮತ್ವದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿನಾಯ್ತಿ ನೀಡಬಹುದು ಎನ್ನಲಾಗಿದೆ ಅಷ್ಟೇ!


ಇಷ್ಟಕ್ಕೂ ಕೇಂದ್ರವೋ ರಾಜ್ಯವೋ ಮತ್ತೊಂದು ಸರ್ಕಾರ ಡಬ್ಬಿಂಗನ್ನು ನಿಶೇಧ ಮಾಡಿದ್ದ ಪಕ್ಷದಲ್ಲಿ ಇವರಾಡಿದ ಮಾತುಗಳನ್ನು ಒಪ್ಪಬಹುದಾಗಿತ್ತು. ಅಂತಹ ಯಾವ ನಿಶೇಧವೂ ಇಲ್ಲದಿದ್ದರೂ ಚಿತ್ರರಂಗದ ದೊಣೇನಾಯಕರ ಪರ ವಹಿಸಿರುವುದು ಅಚ್ಚರಿಯೆನ್ನಿಸುತ್ತದೆ. ಒಟ್ಟಾರೆ ಶತಾಯ ಗತಾಯ ಡಬ್ಬಿಂಗ್ ತಡೆಯಲೇ ಬೇಕೆನ್ನುವ ಉಮ್ಮೇದಿನಲ್ಲಿ ಬರಗೂರು ರಾಮಚಂದ್ರಪ್ಪನವರಂಥಾ ಹಿರಿಯರೂ ಕೂಡಾ ಈ ದೇಶದ ಸಂವಿಧಾನ, ಜನಸಾಮಾನ್ಯರ ಆಯ್ಕೆಸ್ವಾತಂತ್ರ್ಯ, ಸ್ಪರ್ಧೆಗಳ ಮೂಲ ಆಶಯಗಳನ್ನೇ ಮರೆತವರಂತೆ ನಡೆದುಕೊಂಡಿರುವುದು ಮಾತ್ರಾ ವಿಷಾದನೀಯ.

ಕಿರಣ್ ಬಾಟ್ನಿಯವರ ಹೊಸ ಇಂಗ್ಲೀಶ್ ಹೊತ್ತಗೆ ಮಾರುಕಟ್ಟೆಗೆ!

( ಚಿತ್ರಕೃಪೆ: http://kiranbatni.com/)

ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಬ್ಲಾಗನ್ನು ಆರಂಭಿಸಿ, ಕನ್ನಡ ಅಂತರ್ಜಾಲ ತಾಣದಲ್ಲೊಂದು ಹೊಸಅಲೆಗೆ ಕಾರಣರಾದ, ಹೊಸಪೀಳಿಗೆಯ ಯುವ ಚಿಂತಕರಾದ ಶ್ರೀ ಕಿರಣ್ ಬಾಟ್ನಿಯವರು ಇಂಗ್ಲೀಷಿನಲ್ಲಿ ಬರೆದಿರುವ ಹೊಸ ಹೊತ್ತಗೆ "ದಿ ಪಿರಮಿಡ್ ಆಫ಼್ ಕರಪ್ಶನ್" ಬಿಡುಗಡೆಗೆ ಸಿದ್ಧವಾಗಿದೆ. ಇದೇ ಫ಼ೆಬ್ರವರಿ ೧೫ರಂದು ಬೆಳಗ್ಗೆ ೯:೦೦ಗಂಟೆಗೆ ಅಂತರ್ಜಾಲದ ಮೂಲಕವೂ ಪುಸ್ತಕ ಬಿಡುಗಡೆಯನ್ನು ಹೊಸಬಗೆಯಲ್ಲಿ ಆಚರಿಸಲಾಗುತ್ತಿದೆ.

ಕಿರಣ್ ಬಾಟ್ನಿ ಮತ್ತು ನಾಡಪರ ಚಿಂತನೆ

ಮೂಲತಃ ಮೈಸೂರಿನವರಾದ ಕಿರಣ್, ದೆಹಲಿಯ ಐಐಟಿಯಲ್ಲಿ ಎಂ.ಟೆಕ್ ಪದವೀಧರರು. ಇಪ್ಪತ್ತೈದಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಟ ನಡೆಸಿರುವ ಇವರು ಸದಾ ತಮ್ಮ ಹೊಸತನದ ಚಿಂತನೆಗಳಿಂದ ಜನಮನ ಸೆಳೆದಿದ್ದು, ಅಧ್ಯಾತ್ಮ ಮತ್ತು ಲೌಕಿಕ ಬದುಕಿನ ದಿಟಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನವನ್ನೂ ನಡೆಸುತ್ತಿರುವ ಕಿರಣ್ ಬಾಟ್ನಿಯವರು ನಾಡು, ನುಡಿ, ಏಳಿಗೆ, ಏರ್ಪಾಟುಗಳ ಬಗ್ಗೆ ಸಾಕಷ್ಟು ಮಹತ್ವದ ಬರಹಗಳನ್ನು ಬರೆದಿದ್ದಾರೆ. ಇಂಗ್ಲೀಷಿನಲ್ಲಿ "ಕರ್ನಾಟಿಕ್" ಎಂಬ ಬ್ಲಾಗನ್ನು ನಡೆಸುತ್ತಿರುವ ಕಿರಣ್, ಹೊನಲು ಹೆಸರಿನ ಕನ್ನಡದ ವಿಶಿಷ್ಟವಾದ ತಾಣವನ್ನು ನಡೆಸುತ್ತಿದ್ದು ಇಲ್ಲಿ ಕನ್ನಡದಲ್ಲಿಯೇ ಅರಿಮೆಯ ಬರಹಗಳನ್ನು ಬರೆಯುವ ಬರಹಗಾರರ ದಂಡೊಂದು ತಯಾರಾಗುತ್ತಿದೆ. ಇದೀಗ ಕಿರಣ್ ಬಾಟ್ನಿ ಬರೆದಿರುವ "ಪಿರಮಿಡ್ ಆಫ಼್ ಕರಪ್ಶನ್" ಹೊತ್ತಗೆ ಮಾರುಕಟ್ಟೆಗೆ ಬರುತ್ತಿದ್ದು ಇದು ಇವರ ಮೊದಲ ಇಂಗ್ಲೀಷ್ ಹೊತ್ತಗೆಯಾಗಿದೆ.

ಕನ್ನಡದಲ್ಲಿ "ಮಂದಿಯಾಳ್ವಿಕೆಯಲ್ಲಿ ಕನ್ನಡಿಗ" ಹೊತ್ತಗೆಯನ್ನು ಬರೆದಿರುವ ಕಿರಣ್, ಡಾ ಡಿ ಎನ್ ಶಂಕರಬಟ್ಟರ "ಕನ್ನಡ ನುಡಿಯರಿಮೆಯ ಇಣುಕುನೋಟ" ಹೊತ್ತಗೆಯ ಸಂಪಾದಕರೂ ಆಗಿದ್ದಾರೆ. ಇಂಗ್ಲೀಷಿನಲ್ಲಿ ಬರೆಯುವ ಮೂಲಕ ತಮ್ಮ ನಿಲುವುಗಳನ್ನು ಇಂಗ್ಲೀಷ್ ಓದಬಲ್ಲ ಕನ್ನಡದ ಒಂದು ವರ್ಗವನ್ನು ಮಾತ್ರವಲ್ಲದೆ, ಕನ್ನಡೇತರರನ್ನೂ ತಲುಪುವ ಉದ್ದೇಶವನ್ನು ಶ್ರೀ ಕಿರಣ್ ಬಾಟ್ನಿ ಹೊಂದಿದ್ದಾರೆ. ಈ ಹೊತ್ತಗೆಯನ್ನು "ಅಂತರ್ಜಾಲ"ದ ಮೂಲಕ ಕೊಳ್ಳಬಹುದಾಗಿದೆ. ಭ್ರಷ್ಟಾಚಾರದ ಬಗ್ಗೆ ಹೊಸನೋಟವನ್ನು ಬೀರುವ ಸದರಿ ಹೊತ್ತಗೆಯು ಭ್ರಷ್ಟಾಚಾರದ ಬಗ್ಗೆ ಓದುಗರಿಗೆ ಈಗಾಗಲೇ ಇರಬಹುದಾದ ನಂಬಿಕೆಗಳ ಬುಡವನ್ನೇ ಅಲುಗಿಸಬಲ್ಲದಾಗಿದೆ.

ಈ ಹೊತ್ತಗೆಯನ್ನು ಮುಂದಾಗಿ ಕೊಳ್ಳಲು ಈ ತಾಣಕ್ಕೆ ಭೇಟಿ ನೀಡಿ.

ಮರೆಯಾದ ಯಶವಂತ ಹಳಿಬಂಡಿ!

(ಚಿತ್ರಕೃಪೆ: ಕಣಜ)

ಹಿರಿಯ ಹಾಡುಗಾರರಾದ ಶ್ರೀ ಯಶವಂತ ಹಳಿಬಂಡಿಯವರು ಇಂದು ತೀರಿಕೊಂಡಿದ್ದಾರೆ. ಅರವತ್ತೆರಡು ವರ್ಷ ವಯಸ್ಸಿನ ಹಳಿಬಂಡಿಯವರು "ಪಾತರಗಿತ್ತಿ ಪಕ್ಕಾ, ನೋಡಿದ್ಯೇನೇ ಅಕ್ಕಾ" "ಹೋಗೂ ಮನಸೇ ಹೋಗು, ನಲ್ಲೇ ಇರುವಲ್ಲಿ ಹೋಗು" "ನಾನು ಚಿಕ್ಕವನಾಗಿದ್ದಾಗ ಅಪ್ಪಾ ಹೇಳುತ್ತಿದ್ದರೂ..." ಮೊದಲಾದ ಹಾಡುಗಳಿಂದ ಕನ್ನಡನಾಡಿನ ಮನೆ ಮನೆಯನ್ನು ತಲುಪಿದ್ದವರು. ಕನ್ನಡ ಭಾವಗೀತೆಯ ಕ್ಷೇತ್ರ ಇವರ ನಿಧನದಿಂದ ಸೊರಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಕೋರುತ್ತದೆ.

"ವ್ಯಾಪಾರಿ" ನಿರ್ಮಾಪಕ ಮತ್ತು "ಗ್ರಾಹಕ" ಕಲಾರಸಿಕ!

(ಚಿತ್ರಕೃಪೆ: ಪ್ರಜಾವಾಣಿ)
ಡಬ್ಬಿಂಗ್ ತಡೆಯುತ್ತೇವೆ ಎನ್ನುವ ಕೂಗು ತಾರಕಕ್ಕೇರಿರುವ ಈ ಹೊತ್ತಿನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಚಿತ್ರನಿರ್ಮಾಪಕರಲ್ಲಿ ಹಲವರು ನಡೆಸಿದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು. ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಈ ವರದಿಯನ್ನು ನೋಡಿದರೆ ನಿರ್ಮಾಪಕರುಗಳು ಡಬ್ಬಿಂಗ್ ಪರವಾಗಿದ್ದಾರೆ ಎಂಬುದು ಅರಿವಾಗುತ್ತದೆ. ಆದರೆ ಇದಕ್ಕೂ ಮಿಗಿಲಾದದ್ದೇನೆಂದರೆ ಸಿನಿಮಾ ಕಲೆಯಷ್ಟೇ ಅಲ್ಲಾ, ಅದು ವ್ಯಾಪಾರ ಎನ್ನುವುದು ಮನದಟ್ಟಾಗುತ್ತದೆ.

ನಿರ್ಮಾಪಕ ಅನ್ನದಾತನೇ? ಪ್ರೇಕ್ಷಕ ಗ್ರಾಹಕನೇ?

ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು "ಅನ್ನದಾತ"ರೆಂದೂ ಪ್ರೇಕ್ಷಕರನ್ನು "ಅಭಿಮಾನಿ ದೇವರು"ಗಳೆಂದೂ ಕರೆಯುತ್ತಿದ್ದುದನ್ನು ಎಲ್ಲರೂ ಬಲ್ಲೆವು. ಆದರೆ ಚಿತ್ರರಂಗದ ಕೆಲಮಂದಿ "ಸಿನಿಮಾ ಒಂದು ಕಲೆ, ಇದು ಉದ್ಯಮವಲ್ಲ" "ಪ್ರೇಕ್ಷಕ ಕಲಾರಸಿಕ, ಗ್ರಾಹಕನಲ್ಲ" ಎಂದು ಆಡುವ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ವಾಸ್ತವವಾಗಿ ಮೇಲಿನ ಸುದ್ದಿ ಅದನ್ನು ಅಲ್ಲಗಳೆಯುತ್ತಿದೆ. ಸಿನಿಮಾ ಕಲೆಯೂ ಹೌದು, ಪ್ರೇಕ್ಷಕ ರಸಿಕನೂ ಹೌದು. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ಉದ್ಯಮವೂ ಆಗಿದೆ. ಪ್ರೇಕ್ಷಕ ಗ್ರಾಹಕನೂ ಆಗಿದ್ದಾನೆ ಎಂಬುದನ್ನು ಅಲ್ಲಗಳೇಯಲಾಗದು.

ಡಬ್ಬಿಂಗ್ ಬಂದೊಡನೆ ಕನ್ನಡ ಚಿತ್ರರಂಗ ಉದ್ಧಾರವಾಗಿಬಿಡುತ್ತದೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಸಿನಿಮಾ ರಂಗ ಅಳಿದು ಹೋಗುತ್ತದೆ ಎನ್ನಲೂ ಆಗದು. ಚಿತ್ರವೊಂದು ಎಷ್ಟೇ ಕಲಾತ್ಮಕವಾಗಿದೆ ಎಂದರೂ ಅಲ್ಲಿ "ಎಕನಾಮಿಕ್ಸ್" (ಲಾಭ ನಷ್ಟದ ಲೆಕ್ಕಾಚಾರ) ಇದ್ದೇ ಇರುತ್ತದೆ. ಯಾಕೆಂದರೆ ಯಾವ ಸಿನಿಮವನ್ನೂ ಪುಗಸಟ್ಟೆ ತೆಗೆಯಲು ಸಾಧ್ಯವಾಗದು. ಅದಕ್ಕೆ ಹಣ ಬೇಕೇ ಬೇಕು ಮತ್ತು ಹಾಗೆ ತೊಡಗಿಸಿದವನು ಹಾಕಿದ್ದನ್ನು ಕಳೆದುಕೊಳ್ಳಲು ಎಂದೂ ಸಿದ್ಧನಾಗನು. ಹೀಗಿದ್ದಾಗ ಸಹಜವಾಗೇ ಬಂಡವಾಳ ಹಾಕುವವನು ಸಿನಿಮಾ ತಯಾರಾದ ನಂತರದ ಲಾಭ-ನಷ್ಟವನ್ನೂ ಎಣಿಕೆ ಹಾಕಲೇಬೇಕಾಗುತ್ತದೆ. ಆದರೆ ನಿರ್ದೇಶಕ, ತಂತ್ರಜ್ಞರು, ನಟರೂ ಸೇರಿದಂತೆ ಎಲ್ಲಾ ಕಲಾವಿದರಿಗೂ ತಮ್ಮ ಸಂಭಾವನೆ ಸಿಕ್ಕರೆ ಮುಗಿಯಿತು. ಇದನ್ನೆಲ್ಲಾ ನೀಡುವ ನಿರ್ಮಾಪಕನೇ ಚಿತ್ರರಂಗದ ಎಲ್ಲಾ ಕಾರ್ಮಿಕರ ಅನ್ನದಾತ! ನಿರ್ಮಾಪಕರನ್ನು ಹೊರತುಪಡಿಸಿ ಉಳಿದವರಿಗೆ ಒಂದು ಸಿನಿಮಾ ತಯಾರಾದ ನಂತರ ಅದು ಬಿಡುಗಡೆಯಾಗುತ್ತಾ, ಬಿಡುಗಡೆಯಾದರೂ ಓಡುತ್ತಾ, ದುಡ್ಡು ಮಾಡುತ್ತಾ ಅನ್ನೋದೆಲ್ಲಾ ಮಹತ್ವದ್ದಲ್ಲವೇನೋ ಎನ್ನಿಸುತ್ತದೆ. "ವರ್ಷವೊಂದಕ್ಕೆ ನೂರಿಪ್ಪತ್ತು ಸಿನಿಮಾ ಬರುತ್ತೆ, ಅದರಲ್ಲಿ ಐದೋ ಆರೋ ಮಾತ್ರಾ ಲಾಭ ತರುತ್ತೆ ಎಂದು ಒಪ್ಪಿಕೊಳ್ಳುತ್ತಲೇ ನಮ್ಮ ಕಾರ್ಮಿಕರಿಗೆ ೧೨೦ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ, ಅದರಿಂದ ಹೊಟ್ಟೆ ಹೊರೆಯಬೇಕು, ಡಬ್ಬಿಂಗ್ ಬಂದರೆ ಅದು ನಿಲ್ಲುತ್ತದೆ" ಎಂದು ಇವರಾಡುವ ಮಾತಿನ ಹಿಂದಿರುವ ಗೂಡಾರ್ಥವೇನು? ನಷ್ಟವೆಲ್ಲಾ ನಿರ್ಮಾಪಕರದ್ದಾಗಲಿ, ನಮ್ಮ ಸಂಭಾವನೆ ನಮಗೆ ಸಿಗುತ್ತಿರಲಿ ಎಂದಲ್ಲವೇ? ಹೀಗಿದ್ದಾಗ ನಿರ್ಮಾಪಕರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸಹಜವೇ ಅಲ್ಲವೇ? ಬಂಡವಾಳವನ್ನು ಹೂಡುವುದಷ್ಟೇ ಅಲ್ಲದೆ ಅತಿ ಹೆಚ್ಚು ಮಾರುಕಟ್ಟೆ ಗಂಡಾಂತರಕ್ಕೆ(ರಿಸ್ಕಿಗೆ) ತನ್ನನ್ನು ತಾನು ಒಡ್ಡಿಕೊಳ್ಳುವ ನಿರ್ಮಾಪಕನಿಗೇ ಸಿನಿಮಾ ಮಾರುಕಟ್ಟೆಯ ಬಗ್ಗೆ ಮಾತಾಡುವ, ತೀರ್ಮಾನಿಸುವ ಹಕ್ಕಿರುವುದಲ್ಲವೇ? ವಾಸ್ತವ ಹೀಗಿರುವಾಗ ಕನ್ನಡ ಚಿತ್ರರಂಗದ ಮಂದಿ ಡಬ್ಬಿಂಗ್ ಬೇಕೆನ್ನುವ ನಿರ್ಮಾಪಕರನ್ನು "ಕನ್ನಡ ದ್ರೋಹಿ"ಗಳ ಪಟ್ಟಿಗೆ ಸೇರಿಸಲಾರರು ಎಂದುಕೊಳ್ಳೋಣ.

ಇನ್ನು ಸಿನಿಮಾ ಎಷ್ಟೇ ಕಲಾತ್ಮಕವಾದರೂ ಅದನ್ನು ತನ್ನ ದುಡ್ಡು ಮತ್ತು ಸಮಯ ಖರ್ಚು ಮಾಡೇ ನೋಡುವ ಪ್ರೇಕ್ಷಕನು ಕಲಾರಸಿಕನೇ ಆಗಿದ್ದರೂ ಜೊತೆಯಲ್ಲೇ ಗ್ರಾಹಕನೂ ಆಗಿರುತ್ತಾನೆ. ಇಲ್ಲಿ ಸಾಮಾನ್ಯ ಗ್ರಾಹಕನಿಗೆ ಇರುವ ಎಲ್ಲಾ "ಹಕ್ಕುಗಳು" ಅವನಿಗೆ ಇರಬೇಕೆನ್ನುವುದಕ್ಕಿಂತಲೂ "ಗೌರವ" ಇರಬೇಕೆನ್ನುವುದು ಮುಖ್ಯವಾದುದಾಗಿದೆ. ಇಡೀ ಡಬ್ಬಿಂಗ್ ಚರ್ಚೆಯಲ್ಲಿ ಡಬ್ಬಿಂಗ್ ತಡೆಯುವ ಮಾತಾಡುತ್ತಿರುವವರು ಒಮ್ಮೆಯಾದರೂ ಗ್ರಾಹಕನ ಈ ಬೇಕು ಬೇಡಗಳಿಗೆ ಸ್ಪಂದಿಸಿದ್ದಾರೆಯೇ? ಇವರು "ನಾವೆಷ್ಟೊಂದು ಅದ್ಭುತ ಸಿನಿಮಾಗಳನ್ನು ತೆಗೆದಿದ್ದೇವೆ, ಕನ್ನಡಿಗರು ಅವನ್ನು ನೋಡಲ್ಲಾ, ಅವರಿಗೆ ಬೇರೆ ಭಾಷೇದೇ ಬೇಕು" ಎಂದು ದೂರಲು ಮಾತ್ರಾ ಪ್ರೇಕ್ಷಕ ಬಳಕೆಯಾಗುತ್ತಾನೆ! ಸತ್ಯಮೇವ ಜಯತೇ ಬೇಕೆಂದರೆ ಬದುಕು ಜಟಕಾ ಬಂಡಿ ನೋಡಿ ಎನ್ನುವ ಉದ್ಧಟತನ ಇವರದ್ದು! ಈ ಮಂದಿ ನಮಗೇನು ಬೇಕು ಬೇಡ ಎಂಬುದನ್ನು ತೀರ್ಮಾನಿಸುವ ದೊಣೆನಾಯಕರಾಗಿಬಿಡುತ್ತಾರೆ! ಇದು ಬಿಟ್ಟು ಇನ್ನುಳಿದಂತೆ ಗ್ರಾಹಕನ ಯಾವುದೇ ಬೇಕು ಬೇಡಗಳಿಗೆ ಇವರಿಂದ ಸ್ಪಂದನೆಯೂ ಇಲ್ಲಾ, ಬೆಲೆಯೂ ಇಲ್ಲಾ. ಹಾಗೆ ಗ್ರಾಹಕ, ಇವರದೇ ಭಾಷೆಯಲ್ಲಿ ಪ್ರೇಕ್ಷಕ, ಕಲಾರಸಿಕನ ಬಗ್ಗೆ ಕಿಂಚಿತ್ತದರೂ ಗೌರವವಿದ್ದಿದ್ದರೆ ಅಷ್ಟೊಂದು ಮಂದಿ ಬೇಕು ಬೇಕು ಎನ್ನುತ್ತಿದ್ದರೂ... ಮೂರೇ ದಿನದಲ್ಲಿ ಮೂವತ್ತು ಸಾವಿರ ಮಂದಿ ಅಂತರ್ಜಾಲ ತಾಣದಲ್ಲಿಯೇ ನೋಡಿ ತಣಿಯುತ್ತಿದ್ದುದನ್ನು ಸಹಿಸದೇ "ಸತ್ಯಮೇವ ಜಯತೇ" ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ತೆಗೆಸಿ ಹಾಕುತ್ತಿರಲಿಲ್ಲಾ!! (ಅಯ್ಯೋ, ಅದು ನಾವು ತೆಗೆಸಿದ್ದಲ್ಲಾ, ಅವರೇ ತೆಗೆದದ್ದು ಎನ್ನುವ ಗೋಸುಂಬೆ ಮಾತುಗಳನ್ನು ಇನ್ನು ನಿರೀಕ್ಷಿಸಬಹುದು!) ಹೀಗಿದ್ದಾಗ ಚಲನಚಿತ್ರವನ್ನು ನೋಡುವವನೊಬ್ಬ ತನ್ನ ಬೇಕು ಬೇಡಗಳ ಹಕ್ಕನ್ನು ಗ್ರಾಹಕನಾಗಿ ಚಲಾಯಿಸದೇ ಇರುತ್ತಾನೆಯೇ? ತೀರಾ ಸಾರಾಸಗಟು ನಿಶೇಧ ಎನ್ನುತ್ತಾ ನೋಡುಗನ ಅವಕಾಶಗಳ ಬಾಗಿಲುಗಳನ್ನು ಮುಚ್ಚಿದರೆ ಅವನಾದರೋ ಏನು ತಾನೇ ಮಾಡಬಲ್ಲ? ಇರುವ ಕಾನೂನಿನ ಎಲ್ಲ ಅವಕಾಶಗಳನ್ನು ಬಳಸಿ ಕೊಳ್ಳುವುದು ಸಹಜ!

ಇರಲಿ, ನಿರ್ಮಾಪಕ ವ್ಯಾಪಾರಿಯೋ ಅಲ್ಲವೋ, ಸಿನಿಮಾ ಸರಕೋ ಅಲ್ಲವೋ ಬೇರೆಯದೇ ಮಾತು. ಆದರೆ ಸಿನಿಮಾವನ್ನು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನೊಬ್ಬನಿಗೆ ತನಗೆ ಬೇಕಾದುದನ್ನು ನೋಡುವ, ಮೆಚ್ಚುವ, ತಿರಸ್ಕರಿಸುವ ಆಯ್ಕೆ ಸ್ವಾತಂತ್ರ್ಯವಿರುವುದನ್ನಾದರೂ ಚಿತ್ರರಂಗ ಗೌರವಿಸಬೇಕಾಗುತ್ತದೆ. ಇದನ್ನು ಕಡೆಗಣಿಸಿದಾಗ ಕಾನೂನು ಈ ಹಕ್ಕನ್ನು ಎತ್ತಿಹಿಡಿಯುವುದು ಮಾತ್ರಾ ದಿಟ! ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲಾ, ದೇಶದ ಪ್ರಧಾನಿಯೇ ಮಧ್ಯಸ್ತಿಕೆಗಿಳಿದರೂ ಆಗಬೇಕಾದ್ದೂ, ಆಗುವುದೂ ಇದೇ!
Related Posts with Thumbnails