ಕನ್ನಡ ಚಿತ್ರರಂಗಕ್ಕೀಗ ಡಬ್ಬಿಂಗ್ ಬೇಕು!

ಕನ್ನಡ ಚಿತ್ರರಂಗ ಮಿನುಗುತಿರಲಿ. ನಮ್ಮ ಬದುಕಿನ ಬೇರೆ ಮಾಡಲಾಗದ ಅಂಗವಾಗಿರೋ, ನಮ್ಮನ್ನು ಗಾಢವಾಗಿ ಆವರಿಸಿಕೊಂಡಿರುವ ಚಿತ್ರರಂಗಕ್ಕೀಗ ಎಪ್ಪತ್ತೈದು. ಇದು ಕನ್ನಡ ನಾಡಿಗೇ ಹಿಗ್ಗು ತಂದಿದೆ. ಕನ್ನಡ ಚಿತ್ರರಂಗಕ್ಕೆ ಕನ್ನಡ ಜನತೆಯ ಶುಭ ಹಾರೈಕೆಗಳು.
ಈ ಸಮಯದಲ್ಲೇ ಚಿತ್ರರಂಗದೋರು ಒಂದು ಸೊಗಸಾದ ಅದ್ದೂರಿ ಕಾರ್ಯಕ್ರಮಾನಾ ನಡ್ಸಕ್ ಮುಂದಾಗಿರೋದೂ ಎಪ್ಪತ್ತೈದರ ಹಬ್ಬಕ್ಕೆ ಒಳ್ಳೆ ಖಳೆ ತರುತ್ತೆ. ಎಪ್ಪತ್ತೈದು ಮುಗ್ದಿರೋದು ಸಂಭ್ರಮದ ಆಚರಣೆಗೆ ಮಾತ್ರಾ ಸೀಮಿತವಾಗದೆ ಕನ್ನಡ ಸಿನಿಮಾ ಉದ್ಯಮ ಎದುರುಸ್ತಿರೋ ಸಮಸ್ಯೆಗಳನ್ನು ಪರಿಹರಿಸೋಕೆ ಇರೋ ದಾರಿಗಳ ಬಗ್ಗೆ ಗಂಭೀರವಾದ ಚಿಂತನೆ ಮಾಡಕ್ಕಿರೋ ಒಂದೊಳ್ಳೆ ಅವಕಾಶಾನೂ ಆಗಿದೆ. ಇವತ್ತಿನ ದಿವಸ ಚಿತ್ರರಂಗ ಒಲ್ಲೆ ಅನ್ತಾ ಇರೋ, ಒಂದು ಕಹಿ ಔಷಧಿಯ ಬಗ್ಗೆ ಚಿತ್ರರಂಗದೋರ ಗಮನ ಸೆಳೆಯೋಣ. ಆ ಮೂಲಕ ಒಳ್ಳೇ ಚರ್ಚೆ, ಸರಿಯಾದ ನಿರ್ಧಾರಗಳು ಹೊರಹೊಮ್ಮಲಿ ಅನ್ನೋದು ಏನ್ ಗುರುವಿನ ಆಶಯವಾಗಿದೆ. ಅಂದಹಾಗೇ ಆ ಔಷಧದ ಹೆಸರು ಡಬ್ಬಿಂಗ್.
ಅಂದು ಡಬ್ಬಿಂಗ್ ಬೇಡ ಅಂದಿದ್ದು ಸರಿ!
ಹಿಂದೆ ಅಂದ್ರೆ ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಅನ್ನೋದು ನೆಲೆಯಾಗಿದ್ದುದ್ದು ಮದ್ರಾಸಿನಲ್ಲಿ. ನಮ್ಮ ಚಿತ್ರಗಳ ನಿರ್ಮಾಪಕರುಗಳಲ್ಲಿ ಹೆಚ್ಚಿನೋರು ಪರಭಾಷೆಯೋರೆ. ಮೊದಲ ಕನ್ನಡ ಚಿತ್ರ ತೆಗ್ಯಕ್ಕೆ ಬಂಡವಾಳ ಕೂಡಿಹಾಕಿದ ಕಥೆ ಓದುದ್ರೇ ಆವತ್ತಿನ ದಿನ ಕನ್ನಡದಲ್ಲಿ ಚಿತ್ರ ತೆಗ್ಯೋದು ಅನ್ನೋದು ಎಷ್ಟು ತ್ರಾಸಿನ ಬಾಬತ್ತಾಗಿತ್ತು ಅಂತ ತಿಳ್ಯುತ್ತೆ. ಮದ್ರಾಸಿನ ಸ್ಟುಡಿಯೋಗಳಲ್ಲಿ ಕನ್ನಡದ ಚಿತ್ರಗಳ ಶೂಟಿಂಗಿಗೆ ರಾತ್ರಿ ಪಾಳಿ ಮಾತ್ರಾ ಮೀಸಲು ಮಾಡಿದ್ರಂತೆ ಅನ್ನೋದು ಕೇಳುದ್ರೆ ನಮ್ಮ ಚಿತ್ರರಂಗದ ಅಂದಿನ ಹೀನಾಯ ಸ್ಥಿತಿ ತಿಳ್ಯುತ್ತೆ. ಕನ್ನಡದ ತಂತ್ರಜ್ಞರಿಲ್ಲ, ಸ್ಟುಡಿಯೋ ಇಲ್ಲ, ರಿಕಾರ್ಡಿಂಗ್ ಇಲ್ಲ, ಸಂಗೀತಗಾರರಿಲ್ಲ...ಇಲ್ಲ ಇಲ್ಲ ಇಲ್ಲ ಅನ್ನೋ ಸ್ಥಿತಿಯಲ್ಲಿ ಕನ್ನಡ ಚಿತ್ರ ತೆಗ್ಯೋದಂದ್ರೆ ದೊಡ್ಡ ಸಾಹಸವೇ ಆಗಿಹೋಗಿತ್ತು... ಆಗ. ನಮ್ಮ ಸ್ವಾವಲಂಬನೆಗೆ ಅಡ್ಡಿಯಾಗಿದ್ದ ಇಂಥ ಸನ್ನಿವೇಶದಲ್ಲಿ ಒಂದು ಚಿತ್ರದ ದನಿ ಬದಲಿಸಿ ಯಾವ ಭಾಷೆಯ ದನಿಯನ್ನಾದ್ರೂ ಕೂಡಿಸಿ ಆಯಾ ಭಾಷಾ ಪ್ರಾಂತ್ಯದಲ್ಲಿ ಬಿಡುಗಡೆ ಮಾಡುದ್ರೆ ಕಡಿಮೆ ಖರ್ಚು ಅನ್ನೋದನ್ನು ಕಂಡುಕೊಂಡ ಭಾರತೀಯ ಚಿತ್ರರಂಗ, ಈ ಪಾಟಿ ಕಷ್ಟ ಪಟ್ಕೊಂಡು ಕನ್ನಡ ಸಿನಿಮಾ ತೆಗೆಯೋ ಬದಲು ತೆಗೆದಿರೋ ತೆಲುಗು, ಹಿಂದಿ, ತಮಿಳು ಚಿತ್ರಗಳಿಗೆ ಕನ್ನಡದ ದನಿ ಜೋಡಿಸಿದ್ರೆ ಸಾಕೆಂದುಕೊಳ್ತು. ಆ ಕಾರಣದಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಸಾಯೋದೊಂದೇ ದಾರಿ ಅನ್ನೋ ಪರಿಸ್ಥಿತಿ ಹುಟ್ಕೊಳ್ತು. ಆಗ ಈ ಡಬ್ಬಿಂಗು ಒಂದು ಪಿಡುಗು, ಇದರಿಂದ ಕನ್ನಡ ಚಿತ್ರೋದ್ಯಮಕ್ಕೆ ಹಾನಿ ಅಂತಾ ಡಬ್ಬಿಂಗ್ ವಿರೋಧಿ ಚಳವಳಿ ಹುಟ್ಕೊಳ್ತು. ಡಾ. ರಾಜ್ ಕುಮಾರ್ ಅವ್ರೂ ಮುಂಚೂಣಿಯಲ್ಲಿದ್ದ ಈ ಚಳವಳಿ ಯಶಸ್ವಿಯಾಗಿದ್ದು ಡಬ್ಬಿಂಗ್ ನಿಷೇಧವಾದಾಗ. ಇದರ ಪರಿಣಾಮವಾಗಿ ಕನ್ನಡ ಚಿತ್ರರಂಗ ಬೆಂಗಳೂರಿಗೆ ಬಂತು, ಹತ್ತಾರು ಸ್ಟುಡಿಯೋಗಳು ಬಂದವು, ಸಾವಿರಾರು ಜನ ಕಲಾವಿದರು ಬೆಳಕಿಗೆ ಬಂದರು, ನಾಡಿನ ಅನೇಕ ಸುಂದರ ತಾಣಗಳು ತೆರೆಗೆ ಬಂದವು, ಇಂದು ಈ ಮಟ್ಟಕ್ಕೆ ಸ್ವಾಭಿಮಾನಿಯಾಗಿ ಕನ್ನಡ ಚಿತ್ರರಂಗ ಬೆಳೆಯಲು ಕಾರಣವಾಯ್ತು.
ಇಂದು ಡಬ್ಬಿಂಗ್ ಬೇಕಾಗಿದೆ!
ಇವತ್ತಿನ ದಿನ ಕನ್ನಡ ಚಿತ್ರರಂಗ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಡಬ್ಬಿಂಗ್ ಬಗೆಗಿನ ನಮ್ಮ ನಿಲುವನ್ನು ಪರಾಮರ್ಶೆ ಮಾಡೋ ಕಾಲ ಬಂದಿದೆ. ಎಲ್ಲಾನೂ ನಾವೇ ಮಾಡ್ತೀವಿ ಅನ್ನಕ್ ಆಗ್ದಿರೋ ಸತ್ಯಾ ಅರಗಿಸಿಕೊಂಡು ಪ್ರಪಂಚದ ಅತ್ಯುತ್ತಮವಾದ ಚಿತ್ರಗಳನ್ನೆಲ್ಲಾ ನಮ್ಮ ನುಡಿಯಲ್ಲೇ ನೋಡೋಂಥಾ ಅವಕಾಶದತ್ತ ನೋಡಬೇಕಾಗಿದೆ. ಈಗ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಕೊಡೋದ್ರೂ ಮೂಲಕ ಕರ್ನಾಟಕದಲ್ಲಿ ಪ್ರದರ್ಶನವಾಗೋ/ ಬಿಡುಗಡೆಯಾಗೋ ಎಲ್ಲಾ ಪರಭಾಷಾ ಚಿತ್ರಗಳನ್ನು ನಿಯಂತ್ರಿಸೋಕ್ಕೆ ಒಳ್ಳೆ ಅವಕಾಶಾನೂ ಇದೆ ಗುರು! ಪರಭಾಷಾ ನಿರ್ಮಾಪಕರಿಗೇನಂತೆ? ಅವರ ಸಿನಿಮಾ ದುಡ್ಡು ತಂದುಕೊಟ್ರೆ ಸಾಕಲ್ವಾ? ಡಬ್ಬಿಂಗ್ ಒಪ್ಪೋ ಮೂಲಕ ಇನ್ನಷ್ಟು ಹೆಚ್ಚು ಗಳಿಸಬಹುದು ಅಂತನ್ನೋದು ಮನವರಿಕೆ ಆದರೆ ಅವರೂ ಕೂಡಾ ನಮ್ಮ ನೆಲದಲ್ಲಿ ಕನ್ನಡದಲ್ಲೇ ಚಿತ್ರ ಬಿಡುಗಡೆ ಮಾಡಲು ಮುಂದಾಗ್ತಾರೆ. ಕನ್ನಡಿಗರ ಮನರಂಜನೆ ಕನ್ನಡದಲ್ಲಿರಬೇಕು ಅನ್ನೋದು ನಮ್ಮ ಹಕ್ಕಾಗಿದೆ. ನಾವು ಸೂಪರ್ ಮ್ಯಾನ್ ಆಗ್ಲೀ, ಸ್ಪೈಡರ್ ಮ್ಯಾನ್ ಆಗ್ಲೀ, ಜುರಾಸಿಕ್ ಪಾರ್ಕ್ ಆಗ್ಲೀ... ನಮ್ಮ ನುಡಿಯಲ್ಲೇ ಸವಿಯೋದ್ರಲ್ಲೇನು ತಪ್ಪಿದೆ? ಡಬ್ಬಿಂಗ್ ಮೂಲಕ ಶಿವಾಜಿ, ಕುಸೇಲನ್, ತಾರೆ ಜಮೀನ್ ಪರ್, ಘಜನಿ... ಮೊದಲಾದವು ನೂರಾರು ಕೇಂದ್ರದಲ್ಲಿ ಆಯಾ ಭಾಷೇಲೇ ಬಿಡುಗಡೆಯಾಗಿ, ಕನ್ನಡದೋರೆಲ್ಲಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೇ ಮನರಂಜನೆ ಪಡ್ಕೊಳ್ಳೋಕೆ ಮುಂದಾಗೋದನ್ನು ತಪ್ಪಿಸಬಹುದಲ್ವಾ ಗುರು?
ಡಬ್ಬಿಂಗ್ ಬೇಡ ಅನ್ನೋದು ಕಾನೂನಲ್ಲ!
ಡಬ್ಬಿಂಗ್ ನಿಷೇಧ ಅನ್ನೋದಕ್ಕೆ ಯಾವ ಕಾನೂನು ಮಾನ್ಯತೇನೂ ಇಲ್ಲ. ಅಷ್ಟೇ ಯಾಕೆ? ಏಳು ವಾರಗಳ ಗಡುವಿಗೂ ಯಾವ ಮಾನ್ಯತೆ ಇಲ್ಲ. ಯಾರಾದ್ರೂ ಸರಿಯಾಗಿ ಕೋರ್ಟಿಗೆ ಹೋದ್ರೆ ತೆಪ್ಪಗೆ ಎರಡಕ್ಕೂ ಅವಕಾಶ ಕೊಡಬೇಕಾಗುತ್ತೆ. ಅಂಥದ್ರಲ್ಲಿ ಕೆಲಸಾವಿರ ಜನಕ್ಕೆ ಉದ್ಯೋಗ ಹೊರಟು ಹೋಗುತ್ತೆ ಅನ್ನೋ ಹುರುಳಿಲ್ಲದ ಕಾರಣಕ್ಕೆ ಈ ಪರಿಸ್ಥಿತಿ ಹೀಗೆ ಮುಂದುವರೀಬೇಕಾ? ಚಿತ್ರರಂಗದೋರು ಭಯ ಪಡೋದಕ್ಕೆ ಅರವತ್ತರ ದಶಕದಲ್ಲಿದ್ದ ಸ್ಥಿತಿ ಈಗೇನೂ ಇಲ್ಲವಲ್ಲಾ? ಈಗಿರೋ ಕೆಲಸದ ಜೊತೆ ಡಬ್ಬಿಂಗ್ ಕಲಾವಿದರಿಗೆ, ಸಾಹಿತಿಗಳಿಗೆ ಹೆಚ್ಚು ಅವಕಾಶ ಸಿಗುತ್ತೆ ಅನ್ನೋದು ಸರಿಯಲ್ವಾ? ಡಬ್ಬಿಂಗ್ ಬೇಡ ಅನ್ನುತ್ತಿರೋ ಜನ್ರಲ್ಲೇ ಎಷ್ಟೋ ಜನ್ರು ಪರಭಾಷಾ ಚಿತ್ರಗಳ ವಿತರಕರೇ ಆಗಿದಾರೆ ಅನ್ನೋ ಗುಮಾನಿ ಇದೆ. ಡಬ್ಬಿಂಗ್ ಬಂದ್ರೆ ತಮ್ಮ ವಿತರಣಾ ಉದ್ದಿಮೆಗೆ ಹೊಡ್ತಾ ಬೀಳುತ್ತೆ, ರಿಮೇಕ್ ಮಾಡಕ್ಕೆ ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ಹೀಗಾಡ್ತಾರೆ ಅನ್ನೋ ಆರೋಪದಿಂದ ಈಗಿನ ಚಿತ್ರೋದ್ಯಮಿಗಳನ್ನು ಪಾರು ಮಾಡೋಕಾದ್ರೂ ಡಬ್ಬಿಂಗ್ ಬಗ್ಗೆ ಒಂದು ಒಳ್ಳೇ ಚರ್ಚೆಗೆ ಚಲಚಿತ್ರ ಮಂಡಲಿ ಮುಂದಾಗ್ಬೇಕು. ನೀವೇನಂತೀರಾ ಗುರು?

17 ಅನಿಸಿಕೆಗಳು:

Anonymous ಅಂತಾರೆ...

ಹು.. ಬೇಕು.

ಹಲವು ಇಂಗ್ಲಿಶ್, ತಮಿಳು, ತೆಲುಗು, ಮಳಯಾಳಂ ಚಿತ್ರಗಳನ್ನು ನೋಡುವಾಗ ಇದಕ್ಕೆ ಕನ್ನಡದ ಡಬ್ಬಿಂಗೋ, ಸಬ್‌ಟೈಟಲ್ಲೋ ಇದ್ರೆ ಎಂದು ಚನ್ನಾಗಿ ಅರ್ಥವಾಗತ್ತೆ ಎಂದು ಹಂಬಲಿಸಿದ್ದಂತೂ ದಿಟ.

Anonymous ಅಂತಾರೆ...

ಎಲ್ಲ ಒಳ್ಳೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗ್ಲೇ ಬೇಕು ಗುರು .... ಇದು ಸರಿಯಾದ ನಿರ್ದಾರ

Vinay Chindu ಅಂತಾರೆ...

ಇಂಗ್ಲೀಷು ಬಲ್ಲವರಾಗಿಯೂ ಅನುವಾದಿತ ರೂಪದಲ್ಲೇ ನೋಡ್ತೇನಿ ಎಂಬುದು ಭಾಷಾಂಧತೆ.ಆದರೆ,"ಸ್ಲಂಡಾಗ್,ಟೈಟಾನಿಕ್,ಎಲೊಟಿಆರ್,ಪಿಒಸಿ,ಬೇಬೀಸ್ ಡೇ ಔಟ್,ಅನಾಕೊಂಡ,ಜುರಾಸಿಕ್ ಪಾರ್ಕ್,ಸ್ಪೈಡರ್-ಬ್ಯಾಟ್-ಸುಪರ್-ಹಿ ಮ್ಯಾನ್ ಮುಂತಾದ" ಕರುನಾಡನ್ನೇ ಕೊಂಡುಕೊಳ್ಳಬಹುದಾದಷ್ಟು ದುಡ್ಡಿನಿಂದ ನಿರ್ಮಿಸಿದ,ತಾಂತ್ರಿಕ ವೈಭವ,ದ್ರುಶ್ಯ ವೈಭವ,ಧ್ವನಿ ವೈಭವ,ಸಾಹಸ ವೈಭವದಲ್ಲಿ ಸಾಟಿಯಿಲ್ಲದ,ಹುಟ್ಟಿದ್ದಕ್ಕೆ ಸಾರ್ಥಕವಾಯಿತೆನುಸುವ ಹಾಗು ತಿಪ್ಪರಲಾಗ ಹಾಕಿದರೂ ನಮ್ಮವರ ಕೈಯಲ್ಲಿ ರೀಮೇಕ್ ಮಾಡಲಾಗದ ಇಂತಹ ಚಿತ್ರರತ್ನಗಳು ಇಂಗ್ಲೀಷು ಗೊತ್ತಿಲ್ಲದ ಕೊಟ್ಯಾಂತರ ಕನ್ನಡಿಗರ ಪಾಲಿಗೆ ಇಲ್ಲದಂತಾಗಬಾರದೆನಿಸಿ ಡಬ್ಬಿಂಗ್ ಪ್ರೊತ್ಸಾಹಿಸಿದರೆ ಅದು ಅಪ್ಪಟ ಭಾಷಾಪ್ರೇಮ,ನಾಡಪ್ರೇಮ.

Anonymous ಅಂತಾರೆ...

Vinay chindu

In india only 7% are profecient in English ante.

Regards

sangam

Vinay Chindu ಅಂತಾರೆ...

ಯಾವ ಓಬೀರಾಯಣ ಕಾಲದ ಅಂಕಿ ಅಂಶವೋ ಈ 7% ?

Anonymous ಅಂತಾರೆ...

ನಿಜ... ಡಬ್ಬಿಂಗ್ ಬೇಕು.. ತಮಾಷೆ ಅಂದ್ರೆ.. ಡಬ್ಬಿಂಗ್ ಬೇಡ ಅನ್ನೋ ಎಷ್ಟೋ ಜನ ತಮಗೆ ತಿಳಿಯದೇನೇ ಚೀನೀ ಭಾಷೆಯ ಸಿನಿಮಾನ್ನ ಇಂಗ್ಲೀಷ್ ಭಾಷೇಲಿ ನೋಡಿರ್ತಾರೆ. ಒಬ್ಬ ಕನ್ನಡಿಗ, ಚೀನೀ ಸಿನಿಮಾನ್ನ ಇಂಗ್ಲೀಷ್ ಭಾಷೆಯಲ್ಲಿ ನೋಡಿ ಖುಷಿ ಪಡಿಬೇಕ??? ಕನ್ನಡದಲ್ಲೇ ನೋಡಿ ಸಂಪೂರ್ಣವಾಗಿ ಸಿನಿಮಾನ್ನ ಅರ್ಥ ಮಾಡ್ಕೊಳ್ಳೋದು ಒಳಿತಲ್ವ !!!

Anonymous ಅಂತಾರೆ...

ಕನ್ನಡ ಡಬ್ಬಿಂಗ್ ಬೇಕು ಅನ್ನೋದಾದ್ರೆ ಕನ್ನಡ ಚಿತ್ರಗಳ ನಿರ್ಮಾಪಕರೆಲ್ಲ ಬೇರೆ ಭಾಷೆಯ ಚಿತ್ರಗಳನ್ನು ಡಬ್ ಮಾಡಲು ಹೊರಡುತ್ತಾರೆ. ಇದು ಒಂದು ಮಾಧ್ಯಮದಿಂದ ಈಗ ಪೂರ್ತಿಯಾಗಿ ಬಿಸಿನೆಸ್ ಆಗಿ ಪರಿವರ್ತನೆಗೊಂಡಿದೆ. ಲಾಭಕ್ಕೆನೆ ಮಾಡಲಿ ಆದರೆ ಇಂತಹ ಬಲವಾದ ಮಾಧ್ಯಮದಲ್ಲಿ ತೊಡಗಿಕೊಡಿರುವರು ಸಾಮಾಜಿಕ ಬದ್ದತೆ ಕೂಡ ಹೊಂದಿರಬೇಕಾದ ಅಗತ್ಯವಿರುತ್ತದೆ. ಆದರೆ ಈಗ ಅದು ಪೂರ್ತಿಯಾಗಿ ಹೋಗಿದೆ.. ಇದಕ್ಕೇನೆ ಆಮೀರ್ ಖಾನ್ ಮತ್ತು ಇತರ ತಾರೆಗಳ ನಡುವೆ ಇರುವ ಅಂತರ.
ಡಬ್ ಮಾಡೋದು ತಪ್ಪಲ್ಲ ಆದರೆ ಇದರ ಪರಿಣಾಮಗಳೇನು ಅನ್ನುವದನ್ನು ಪೂರ್ತಿಯಾಗಿ ಪರಿಗಣಿಸಿ ಕೆಲವೊಂದು ಇತಿ ಮಿತಿಯೊಳಗೆ ಅವಕಾಶ ಮಾಡಿಕೊಟ್ಟರೆ ತುಂಬ ಸಂತೋಷ. ಆದರೂ ಇದು ಒಂದು ರೀತಿ ಅತ್ತ ದಾರಿ ಇತ್ತ ಪುಲಿ ಅನ್ನುವ ಪರಿಸ್ಥಿತಿ.

Anonymous ಅಂತಾರೆ...

Mr. Vinay chindu,

Please see this link of 1991 census data :
http://en.wikipedia.org/wiki/List_of_countries_by_English-speaking_population

Regards
sangam

Anonymous ಅಂತಾರೆ...

ಜಾಗತೀಕರಣ,ಖಾಸಗೀಕರಣ ಹಾಗು ಇಂಗ್ಲೀಷು ಕಲಿಕೆಯ ಹುಚ್ಚು ಶುರುವಾಗಿದ್ದೇ ೧೯೯೧ ರಲ್ಲಿ. ಆದ್ದರಿಂದ ಇದು ಓಬಿರಾಯನ ತಾತನ ಕಾಲದ ಅಂಕಿ ಅಂಶ.

Anonymous ಅಂತಾರೆ...

ippattu varShadalli ee saMkhye eShTaagirabOdu vinay? Double? Still people can understand better in their mother tongue.

Regards

sangam

Anonymous ಅಂತಾರೆ...

ಅಂದು ಡಬ್ಬಿಂಗ್ ವಿರೋಧಿಸಲು ಇದ್ದ ಮೂಲ ಕಾರಣಗಳಲ್ಲಿ ಮುಖ್ಯವಾದ ಒಂದು ಕಾರಣ, ಡಬ್ಬಿಂಗ್ ಮಾಡಲು ಅವಕಾಶ ನೀಡಿದರೆ, ಇದ್ದ ಕೆಲವು ಕನ್ನಡ ಕಲಾವಿದರಿಗೆ ಕೆಲಸದ ಅವಕಾಶ ತಪ್ಪುತ್ತದೆ ಎನ್ನುವುದು. ಅರವತ್ತರಲ್ಲಿ ಮಾಡಿದ ಸಿನಿಮಾಗಳಲ್ಲಿ ಕಲಾವಿದರು ಮಾತ್ರ ಕನ್ನಡದವರಿದ್ದರು, ಮಿಕ್ಕ ತಂತ್ರಜ್ಞರಲ್ಲಿ ಬಹುತೇಕರು ಅನ್ಯಭಾಷೆಯವರು. ಅಂದಿನ ಕಲಾವಿದರ ಇನ್ನೊಂದು ವಾದ ಏನಾಗಿತ್ತೆಂದರೆ ಕೆಂಪೇಗೌಡ ರಸ್ತೆಯ ಮುಖ್ಯ ಚಿತ್ರಮಂದಿರಗಳ ಮುಂದೆ ಅನ್ಯ ಭಾಷೆಯ ನಟರ ಕಟೌಟ್ ಇರುವುದು ಕನ್ನಡದ ಕಲಾವಿದರಿಗೆ ಅವಮಾನಕರ ಎಂದು. ಆದರೆ ಚಿತ್ರರಂಗ ತೆಗೆದುಕೊಂಡ ಅಂದಿನ ನಿರ್ಧಾರದಿಂದಾಗಿ, ಇಂದು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಪ್ರೇಕ್ಷಕರು ಅನ್ಯ ಭಾಷೆಯ ಚಿತ್ರಗಳನ್ನು ಅವುಗಳ ಮೂಲಭಾಷೆಯಲ್ಲಿ ನೋಡಿ, ಆನಂದಿಸುತ್ತ, ಆ ಭಾಷೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ. ಎಪ್ಪತ್ತು-ಎಂಬತ್ತರಲ್ಲಿ ಕನ್ನಡ ಚಿತ್ರರಂಗ ರೀಮೇಕ್ ಸಂಸ್ಕೃತಿಗೆ ಶರಣಾದ ಕಾರಣ, ಇಂದು ಅಪ್ಪಟ ಕನ್ನಡದ ಪ್ರೇಕ್ಷಕರೂ, ನೇರವಾಗಿ ಬೇರೆ ಭಾಷೆಯ ಚಿತ್ರಗಳನ್ನೆ ಆನಂದಿಸುತ್ತಿದ್ದಾರೆ. ಇವೆರಡು ಕಾರಣಗಳಿಂದಲೇ ಕನ್ನಡ ಚಿತ್ರರಂಗ ಈಗ ಅವನತಿಯ ಹಾದಿ ಹಿಡಿದಿದೆ.

ದಕ್ಷಿಣಭಾರತದ ಇನ್ಯಾವುದೇ ಭಾಷೆಯಲ್ಲಿ ಡಬ್ಬಿಂಗ್ ವಿರೋಧವಿಲ್ಲ. ಆದರೆ ಆ ಎಲ್ಲ ಭಾಷೆಯ ಚಿತ್ರಗಳು ಅವರ ಊರುಗಳಲ್ಲಿಯೂ ಚೆನ್ನಾಗಿ ನಡೆಯುತ್ತವೆ ಮತ್ತು ಇಲ್ಲಿಯೂ ಚೆನ್ನಾಗಿ ನಡೆಯುತ್ತವೆ. ಬೇರೆ ಭಾಷೆಯ ಅತ್ಯತ್ತಮ ಚಿತ್ರಗಳನ್ನು ಅವರು ತಮ್ಮ ಭಾಷೆಯಲ್ಲಿ ಡಬ್ಬಿಂಗ್ ಮಾಡಿ ಅಥವಾ ರೀಮೇಕ್ ಮಾಡಿ ನೋಡುತ್ತಾರೆ.

ಒಂದು ಸಂಸಾರ ಕನ್ನಡದ ಚಿತ್ರಕ್ಕೆ ಬರಬೇಕೆಂದರೆ ಪಕ್ಕದ ಮನೆಯವರು, ಸ್ನೇಹಿತರು, ಸಹೋದ್ಯೋಗಿಗಳು ಆ ಸಿನಿಮಾ ಚೆನ್ನಾಗಿದೆ ಎಂದು ಹೇಳಿರಲೇಬೇಕು ಎನ್ನುವ ಸನ್ನಿವೇಷ ಉಂಟಾಗಿದೆ. ಈ ರೀತಿಯ ಸನ್ನಿವೇಷ ಸಾಧ್ಯವಾಗಲು ಒಂದು ಕನ್ನಡ ಚಿತ್ರ ಕನಿಷ್ಟ 4-5 ವಾರಗಳು ಓಡಲೇ ಬೇಕು. ಆದರೆ ಇತ್ತೀಚೆಗೆ ಬರುತ್ತಿರುವ ಕನ್ನಡ ಚಿತ್ರಗಳು 2-3 ವಾರಕ್ಕೆ ಏದುಸಿರು ಬಿಡಲು ಪ್ರಾರಂಭಿಸುತ್ತವೆ. ಹೀಗಾಗಿ ಕೂಡಲೇ ಕನ್ನಡ ಚಿತ್ರರಂಗ ಎಚ್ಚೆತ್ತುಕೊಳ್ಳದಿದ್ದರೆ 100 ವರ್ಷದ ಸಂಭ್ರಮ ಆಚರಿಸುವುದು ಅದಕ್ಕೆ ಕನಸಿನ ಸಾಧ್ಯತೆ.

Anonymous ಅಂತಾರೆ...

nanaginnu oMdu vishaya spashtavaagilla..dubbing ge anumodane neeDidaroo, bEre bhaasheya citragaLu karnatakadalli moola bhaasheyalle biDugaDeyaaguttaveye ?
aadaru eshTu pratigaLige(prints)anumati iruttade..

aadaroo dubbing ge anumati neeDidare bhaari anukoolavide..nidhaanavaagi bEre bhaashegaLa maarukaTTeyannu illi chikkadu maaDi avarge laabha kaDime bahudu..

Anonymous ಅಂತಾರೆ...

ಡಬ್ಬಿಂಗ್ ಪರವಾಗಿಲ್ಲ... ರೀಮೇಕ್ ಅಂತೂ ನಿಲ್ಲಲೇಬೇಕು...

geleya ಅಂತಾರೆ...

ನಮ್ಮವರು ಯಾಕೆ ಇನ್ನೂ ಡಬ್ಬಿಂಗ್ ಸಿನಿಮಾಗಳನ್ನ ಮಡ್ತಾ ಇಲ್ಲ?. ದಶಕಗಳ ಹಿಂದೆ ಕನ್ನಡ ಚಿತ್ರ ರಂಗ ಮುಂದೆ ಬರಬೇಕೆಂದು ರಾಜ್ ಕುಮಾರ್ ನೇತ್ರತ್ವದಲ್ಲಿ ಚಳುವಳಿ ನಡೆದಿತ್ತು.ಆಗಿನ ಕಾಲಮಾನಕ್ಕೆ ಅದು ಸರಿ. ಆದ್ರೆ ಈಗ ಅಂಥ ಸಂಕುಚಿತ ಮನೊಭಾವದ ಅವಶ್ಯಕತೆ ಇಲ್ಲ. ಈಕವಿ, ಬನವಾಸಿ ತಂಡಗಳು ಈ ಹೊಸ ಚಳುವಳಿಯ ನಾಯಕತ್ವ ವಹಿಸಲಿ. ತಮಾಶೆಯ ವಿಶಯವೆಂದರೆ ತಮಿಳಿನಿಂದ ತೆಲುಗಿಗೆ ಡಬ್ ಆದ ನೂರಾರು ಚಿತ್ರಗಳು ಉತ್ತರ ಕರ್ನಾಟಕ ದಲ್ಲೆಲ್ಲ ಬೇಕಾದಶ್ಟು ದುಡ್ಡು ಮಾಡುತ್ತವೆ. ಇದನ್ನು ಯಾರೂ ಕೇಳುವವರಿಲ್ಲ. ಟಿ.ವಿ. ಡಿ.ಟಿ.ಎಚ್, ಇಂಟರ್ನೆಟ್, ಮೊಬ್ಯಲ್ ನಿಂದ ಮನೊರಂಜನೆಯ ವ್ಯಾಖ್ಯೆಯೇ ಬದಲಾಗಿ ಹೊಗಿದೆ. ಇಂದು ಪ್ರಶ್ನೆ ಕೇವಲ ಕನ್ನಡದ ಉಳಿವಿನದು. ತಂತ್ರಗ್ನ್ಯಾನದ ಪ್ರತಿ ಬದಲಾವಣೆಯೊಂದಿಗೆ ಕನ್ನಡ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು--ಇದೇ ಅತಿ ಮುಖ್ಯ. ಇಂದು ಆಂಧ್ರದಲ್ಲಿ ತೆಲುಗು ಉಳಿಯಲು ಕಾರಣ ಅವರು ಜಗತ್ತಿನ ಎಲ್ಲ ಭಾಶೆಯ ಎಲ್ಲಾ ಒಳ್ಳೆಯ, ಎಲ್ಲಾ ಕೆಟ್ಟ, ಎಲ್ಲಾ ಅಸಹ್ಯ ಚಿತ್ರಗಳನ್ನೂ ಬಿಟ್ಟೂ ಬಿಡದೆ ತಮ್ಮ ಭಾಶೆಗೆ ಡಬ್ ಮಾಡ್ತಾರೆ. ಇದರಿಂದ ಎಲ್ಲಾ ರೀತಿಯ, ಎಲ್ಲ ವರ್ಗದ ಜನರಿಗೂ choice ಇದೆ. ಚಿತ್ರ ಚೆನ್ನಾಗಿದ್ರೆ ಜನಾ ಮಜಾ ಮಡ್ತಾರೆ, ಇಲ್ಲ ಅಂದ್ರೆ ೧ ವಾರದಲ್ಲಿ ಕಿತ್ತು ಹಾಗ್ತಾರೆ. ಇದೆಲ್ಲದರ ಮಧ್ಯದಲ್ಲಿ“ಗೆಲುವು ಮಾತ್ರ ತೆಲುಗು ಭಾಶೆಗೆ". ಇಶ್ಟಾಗಿಯೂ ಮೂಲ ತೆಲುಗು ಚಿತ್ರಗಳು ಜಗತ್ತಿನಾದ್ಯಂತ ದುಡ್ಡು ಮಾಡುತ್ತವೆ. ಕನ್ನಡದಲ್ಲೂ ಡಬ್ಬಿಂಗ್ ಶುರು ಮಾಡಿ. ಕೆಲವೇ ವರ್ಶಗಳಲ್ಲಿ ಕರ್ನಾಟಕದಾದ್ಯಂತ ಎಲ್ಲ ಪರಭಾಶೆಯ ಜನರ ಬಾಯಿಯಲ್ಲಿ ಕನ್ನಡ ನಲಿದಾಡುತ್ತದೆ.

"ಕನ್ನಡವೇ ನಮಗೆ ಮುಖ್ಯ. ಸಿನಿಮಾ, ಟಿವಿ, ಪತ್ರಿಕೆ, ಇಂಟರ್ನೆಟ್ ಕೇವಲ ಮಾಧ್ಯಮಗಳು. ಕಾಲಕ್ಕೆ ತಕ್ಕಂತೆ ಎಲ್ಲವೂ, ಎಲ್ಲರೂ ಬದಲಾಗಲೇ ಬೇಕು. ಕನ್ನಡ ಮಾತ್ರ ಸದಾ ಹಸಿರಾಗಿರಬೇಕು"

ಗೆಳೆಯ
www.hyderabadkanndi garu.tk
hyderabadkannadigar u@gmail.com

Surya ಅಂತಾರೆ...

tumba chennagide article...veeru...i agree with the films getting dubbed in kannada...:-)

Pramod ಅಂತಾರೆ...

Dubbing is very essential. I stay in Germany. Sharuk khan is very popular here! sounds weird? but it is true. they watch his movies in German. He is popular for almost last 1 or 2 decades. so that is the way you get cross cultural exchange, awareness of other parts of the world and spread of knowledge. For example, if our villagers watch English science fiction movies in kannada they understand them well. So Kannada bhaashe beLiyabeku haagu kannada janara jnaana beLiyabeku andre uttama chitragaLa dubbing na agatyavide.

ಸವಿ ನೆನಪುಗಳು..!! ಅಂತಾರೆ...

"ವಿಶಾಲ ಕರ್ನಾಟಕ ಮೂದಲು ಸಂಪೂರ್ಣ ಕನ್ನಡಮಯ" ವಾಗಲು. ಹಾಗೂ "ಹೆಸರಾಗಿದೆ ಕರ್ನಾಟಕ ಉಸಿರಾಗಲು ಕನ್ನಡ" ಡಬ್ಬಿಂಗ್ ಆಗಲೇ ಬೇಕು..!!
ತನು ಕನ್ನಡ, ಮನ ಕನ್ನಡ, ನುಡಿಕನ್ನಡ. ಅದೇ ರೀತಿ ನೋಡುವ ಪ್ರತಿ ನೋಟವು ಕನ್ನಡಮಯವಾಗಲಿ..!!
ಕರ್ನಾಟಕಕ್ಕೆ ಜೈ..!! ಕನ್ನಡಕ್ಕೆ ಜೈ..!! ಕನ್ನಡಿಗರಿಗೆ ಜೈ..!! "ನವ ನವೀನ ಕ್ರಿಯಾಶೀಲತೆ"ಗೆ ಜೈ..!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails