ಬೆಳಗಾವಿ ರಾಜಕಾರಣ ಮತ್ತು ಭಾಜಪ

ನಿನ್ನೆ ಬೆಳಗಾವಿಯಲ್ಲಿ ಪಾಲಿಕೆ ಕಟ್ಟಡದ ಮೇಲೆ ಬಾವುಟ ಹಾರಿಸೋ ವಿಷಯವಾಗಿ ಗದ್ದಲ ನಡೀತು ಆಂತಾ ಇವತ್ತಿನ ಕನ್ನಡಪ್ರಭದ ಮುಖಪುಟದಲ್ಲಿ ವರದಿಯಾಗಿದೆ. ನಿನ್ನೆ ಬೆಳಗಾವಿಯಲ್ಲಿ ನಡೆದ ಘಟನೆಯಿಂದ ನಾಡಿಗೆ ಒಳ್ಳೇದೇನಪ್ಪಾ ಆಗಿದೆ ಅಂದ್ರೆ ಇದರಿಂದ ಬೆಳಗಾವಿಯ ಹಾಲಿ ಸಂಸದ ಮತ್ತು ಶಾಸಕರೊಬ್ಬರ ಬಣ್ಣ ಬಯಲಾಗಿದೆ. ಇಷ್ಟಕ್ಕೇ ಇದು ನಿಲ್ಲದೆ ನಾಡಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ ಯಾವ ನಿಲುವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದೆ ಅನ್ನೋ ಕುತೂಹಲಕ್ಕೂ ಕಾರಣವಾಗಿದೆ.

ಬಾವುಟದ ವಿವಾದ ಬರೀ ನೆಪ!

ಬೆಳಗಾವಿ ಪಾಲಿಕೆ ಮೇಲೆ ಯಾವ ಬಾವುಟ ಹಾರ್ತಿತ್ತು? ಯಾವುದು ಹಾರ್ತಿದೆ? ಯಾವ್ದು ಹಾರಬೇಕು? ಅನ್ನೋದನ್ನೆಲ್ಲಾ ಪಕ್ಕಕ್ಕಿಟ್ಟು ನಮ್ಮ ಸಂಸದರ ನಡವಳಿಕೆ ಬಗ್ಗೆ ಮಾತ್ರಾ ನೋಡೋಣ ಗುರು! ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರೋ ಸುರೇಶ್ ಅಂಗಡಿ ಎಂಬ ಹುಟ್ಟಿನಿಂದ ಕನ್ನಡಿಗರಾದ ಸಂಸದರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ನೋಡೋಣ. ಕುಮಾರಗಂಧರ್ವ ರಂಗಮಂದಿರದ ಸಮೀಪದಲ್ಲಿ ಹೊಸದಾಗಿ ಕಟ್ಟಿರೋ ಪಾಲಿಕೆ ಕಛೇರಿ ಮೇಲೆ ಎಂ.ಇ.ಎಸ್ಸಿನ ಕೇಸರಿ ಬಾವುಟವನ್ನು ಹಾರಿಸಬೇಕೆಂದು ಒತ್ತಾಯಿಸಿ ಕೆಲ ಎಂ.ಇ.ಎಸ್ ಬೆಂಬಲಿಗರು ರಸ್ತೆ ತಡೆ ನಡುಸ್ತಿದ್ದಾಗ ಅಲ್ಲಿಗೆ ಬಂದ ಸಂಸದ ಅಂಗಡಿಯವರು ಆ ಜನಗಳ ಬೆಂಬಲವಾಗಿ ನಿಂತಿದ್ದಷ್ಟೇ ಅಲ್ಲದೆ ಮರಾಠಿಯಲ್ಲಿ ಭಾಷಣವನ್ನೂ ಮಾಡಿದ್ದಾರೆ. ಇದೇ ಸಭೆಯಲ್ಲಿ ಕನ್ನಡ ವಿರೋಧಿ ಘೋಷಣೆಗಳು ಮೊಳಗಿದವು ಅನ್ನೋದು ಕೂಡಾ ಪತ್ರಿಕೆಗಳಲ್ಲಿ ವರದಿಯಾಗಿದೆ. ಎಂ.ಇ.ಎಸ್ಸಿನೋರು ಬಾವುಟ ಹಾರುಸ್ತೀವಿ ಅಂತ ಬಂದಾಗ ಈ ಮಹಾಶಯ ಹೀಗೆಲ್ಲಾ ನಡ್ಕೊಂಡಿದ್ದು ಸರೀನಾ? ಹೇಳಿ ಗುರು...

ಮತಕ್ಕಾಗಿ ಈ ದೊಂಬರಾಟವೇ!

ಈಗ ಲೋಕಸಭಾ ಚುನಾವಣೆ ಹತ್ತಿರ ಬಂತು. ಎಂ.ಇ.ಎಸ್ ಜೊತೆ ಭಾಜಪಾ ಇಲ್ಲಿ ಸದಾ ಸಹಯೋಗೀನೆ. ಸದಾಕಾಲ ವಿಧಾನ ಸಭೆ, ನಗರಪಾಲಿಕೆ, ಎ.ಪಿ.ಎಂ.ಸಿ ಯಾರ್ಡು ಇಂಥಹವುಗಳಲ್ಲೆಲ್ಲಾ ಎಂ.ಇ.ಎಸ್ ಗೆಲುವಿಗೆ ಇವರ ಬೆಂಬಲ... ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅವರ ಬೆಂಬಲ ಅನ್ನೋ ಗುಮಾನಿ ಇದೆ. ಕನ್ನಡ-ಕರ್ನಾಟಕ-ಕನ್ನಡಿಗರ ವಿಷಯದಲ್ಲಿ ಎಂ.ಇ.ಎಸ್ ಎಂಥದೇ ಧೋರಣೆ ಹೊಂದಿದ್ದರೂ ಇವರಿಬ್ಬರ ಈ ಮೈತ್ರಿಗೆ ಧಕ್ಕೆ ಬಂದಿಲ್ಲ ಅನ್ಸುತ್ತೆ. ಎಂ.ಇ.ಎಸ್ ನೋರು ಬೆಳಗಾವಿನ ಮಹಾರಾಷ್ಟ್ರಕ್ಕೆ ಸೇರುಸ್ಬೇಕು ಅಂದಿದ್ಕೆ ಇಡೀ ಕರ್ನಾಟಕವೇ ಅವರ ವಿರುದ್ಧ ಒಗ್ಗೂಡಿದಾಗಲೂ ಈ ಸಂಬಂಧಾನ ಉಳುಸ್ಕೊಂಡೇ ಬಂದಿರೋ ಮಹಾನುಭಾವರು ಇವರು ಅಂತಿದಾರೆ ಜನ. ಕನ್ನಡ ರಾಜ್ಯೋತ್ಸವಾನ ಕಪ್ಪುದಿನ ಅಂತ ಇವರು ಆಚರಿಸಿದ್ರೂ, ಮರಾಠಿ ಮಹಾಮೇಳಾವ ಅಂತ ಮಾಡಿ ಬೆಳಗಾವೀನ ಕಿತ್ಕೋತೀವಿ ಅಂದಾಗ್ಲೂ... ಎಂದಿಗೂ ಜಗ್ಗದ ಬಗ್ಗದ ಕುಗ್ಗದ ಸಂಬಂಧ ಇವರದ್ದು ಅನ್ನೋ ಹಾಗಿದೆ. ಇದನ್ನು ನೋಡ್ತಿದ್ರೆ ಬಹುಷಃ ಬೆಳಗಾವಿ ಪಾಲಿಕೆ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಎಂ.ಇ.ಎಸ್ ಮಣ್ಣು ಮುಕ್ಕಿದ್ದಕ್ಕೆ ದುಃಖಿಸಿದ ಏಕೈಕ ಕನ್ನಡಿಗ ಈ ನಮ್ಮ ಸಂಸದರು ಅನ್ಸುತ್ತೆ. ಈ ಕಣ್ಣೀರಿನ ಹಿಂದಿರೋದು ತಾವು ಎಂ.ಇ.ಎಸ್ ಬೆಂಬಲವಿಲ್ಲದೆ ಸೋತೇನೇ ಎನ್ನೋ ಆತಂಕ ಅಂತಾ ಅನ್ಸಲ್ವಾ ಗುರು! ಇವರ ಈ ಬುದ್ಧಿ ಬೆಳಗಾವಿ ಜನಕ್ಕೆ ಗೊತ್ತೇ ಇರುತ್ತೆ, ಅದಕ್ ತಕ್ಕ ಉತ್ತರಾನೂ ಚುನಾವಣೇಲಿ ಮತದಾರ ಕೊಡೋದು ಖಂಡಿತ.

ಏನಂತೀರಾ ಸದಾನಂದಗೌಡ್ರೇ?

ನೇರವಾಗಿ ನಾಡವಿರೋಧಿಗಳ ಜೊತೆಯಲ್ಲಿ ಕೈ ಜೋಡಿಸಿರೋ ತನ್ನ ಪಕ್ಷದ ಹಾಲಿ ಸಂಸದರಾದ ಶ್ರೀ ಸುರೇಶ್ ಅಂಗಡಿ ಮತ್ತು ಹಾಲಿ ಶಾಸಕ ಶ್ರೀ ಸಂಜಯ್ ಪಾಟೀಲ ಅವರ ವಿರುದ್ಧವಾಗಿ ಯಾವ ಕ್ರಮಾ ತೊಗೋತೀರಾ ಈಗ? ಎಂ.ಇ.ಎಸ್ ಬಗ್ಗೆ ತಮ್ಮ ಪಕ್ಷದ ನಿಲುವೇನು? ಈ ಪ್ರತಿಭಟನಾ ಸಭೇಲಿ ಕರ್ನಾಟಕದ ಮತ್ತು ಕನ್ನಡಿಗರ ವಿರುದ್ಧವಾಗಿ ಘೋಷಣೆ ಕೂಗ್ತಿದ್ರೂ ತಮ್ಮ ಸಂಸದರು ಚಕಾರ ಎತ್ತದ ಬಗ್ಗೆ ಏನಂತೀರಾ? ಕರ್ನಾಟಕದಿಂದ ಬೆಳಗಾವಿಯನ್ನು ಬೇರೆ ಮಾಡ್ತೀವಿ ಅನ್ನೋರ ಜೊತೆ ಸರಸವಾಡ್ತಿರೋ ನಿಮ್ಮ ಪಕ್ಷದ ಸಂಸದರ ಬಗ್ಗೆ ಏನು ಶಿಸ್ತುಕ್ರಮಕ್ಕೆ ಮುಂದಾಗ್ತೀರಾ? ನಿಮ್ಮ ಪಕ್ಷದ ಮುಂದಿನ ನಡೆಯ ಬಗ್ಗೆ ನಾಡಿನ ಕನ್ನಡಿಗರು ಕುತೂಹಲದಿಂದ ಕಾಯ್ತಿದಾರೆ ಗೌಡ್ರೇ... ನೀವೇನು ಅಂಗಡಿಯವರಿಗೆ ಟಿಕೆಟ್ ನಿರಾಕರುಸ್ತೀರೋ? ಅಥ್ವಾ ಸುಮ್ಮನಿದ್ದು ಎಂ.ಇ.ಎಸ್ಸು - ಬಿಜೆಪಿಗಳ ಸಂಬಂಧಾನ್ನ ಸಮರ್ಥಿಸಿಕೊಳ್ತೀರೋ?

2 ಅನಿಸಿಕೆಗಳು:

Anonymous ಅಂತಾರೆ...

ಗುರು,
ನಿಜವಾಗಿಯೂ ಎಂ.ಇ.ಎಸ್. ಬೆಂಬಲಿಸಿ ತಮ್ಮ ನಿಜ ಬಣ್ಣ ಪರಿಚಯಿಸಿದ್ದಾರೆ ಸಂಸದ,ಶಾಸಕರು. ಇದು ರಾಜಕೀಯದಾಟ..ದೊಂಬರಾಟ. ಇವರಿಗೆ ಸಿದ್ದಾಂತ ಎಂಬುವುದು ಏನೂ ಇಲ್ಲ.. ಗಾಳಿ ಬಂದ ಕಡೆ ತೂರಿಕೊಳ್ಳುವ ಜನ..
ಹರಿಜೋಗಿ

Akshaya ಅಂತಾರೆ...

adey worst case scenario, idanella nodtidre yake beku karnataka, yake beku kannada ansatte

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails