ವಿಜ್ಞಾನದ ಕಲಿಕೆ ಕನ್ನಡದಲ್ಲೇ ಎಂದು ಸಾರೋ ಈ ಬೇಸಿಗೆ ಶಿಬಿರ!

ಬೇಸಿಗೆ ರಜಾ ಶಿಬಿರಗಳು ಸಾವಿರಾರು. ಇಂಥದ್ರಲ್ಲಿ ಇವತ್ತಿನ ದಿವ್ಸ ಮಕ್ಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟುಸ್ಬೇಕು, ಹೆಚ್ಚುಸ್ಬೇಕು ಅಂತಲೇ ಬೆಂಗಳೂರಲ್ಲಿ ಒಂದು ಶಿಬಿರ ನಡುಸ್ತಿದಾರೆ. ಇವತ್ತು ಈ ಶಿಬಿರದ ಬಗ್ಗೆ ಮಾತಾಡಕ್ಕೆ ಇರೋದಕ್ಕೆ ಕಾರಣ ಇಷ್ಟೇ ಅಲ್ಲಾ ಗುರು!

ಎಲ್ಲದರಂಥದಲ್ಲ ಈ ಶಿಬಿರ!

ಏಳನೇ ತರಗತಿ ಬರೆದಿರೋ ಮಕ್ಕಳಿಗೆ ಅಂತಾ ಈ ಶಿಬಿರಾನಾ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಶಾಲೆ ಮತ್ತು ದಿ ಬೆಂಗಳೂರು ಸೈನ್ಸ್ ಫೋರಂನೋರು ಜಂಟಿಯಾಗಿ ನಡುಸ್ತಿದಾರೆ. 2009ರ ಸಾಲಿನ ಶಿಬಿರ ಏಪ್ರಿಲ್ 4ರಂದು ಶುರುವಾಗಿದೆ. ಪ್ರತಿದಿನ ಬೆಳಗ್ಗೆ 9.30ರಿಂದ 11.30ರವರೆಗೆ 19.04.2009ರ ತನಕ ನಡ್ಯೋ ಈ ಕಾರ್ಯಕ್ರಮಾನ ಇಂಗ್ಲಿಷು ಮತ್ತು ಕನ್ನಡದಲ್ಲಿ ನಡುಸ್ತೀವಿ ಅಂತ ಹೇಳ್ಕೊಂಡ್ರೂ ಹೆಚ್ಚಾಗಿ ತರಗತಿಗಳು ನಡ್ಯದು ಕನ್ನಡದಲ್ಲೇ ಗುರು! ವಿಜ್ಞಾನದ ನಾನಾ ಕ್ಷೇತ್ರಗಳಿಗೆ ಸೇರಿದ ನಾಡಿನ ಅನೇಕ ಪರಿಣಿತರುಗಳು ಈ ಶಿಬಿರದಲ್ಲಿ ಭಾಗವಹಿಸ್ತಾರೆ. ಒಟ್ಟು ಹದಿನೈದು ದಿನ ನಡ್ಯೋ ಶಿಬಿರದ ಶುಲ್ಕ ಬರೀ 180 ರೂಪಾಯಿ.

ಶಿಬಿರದ ಭಾಷಣಕಾರರು!


ಈ ಶಿಬಿರದಲ್ಲಿ ಒಂದೊಂಡು ದಿನ ಒಬ್ಬೊಬ್ಬ ಪರಿಣಿತರು ಬಂದು ಮಕ್ಕಳಲ್ಲಿ ಆಸಕ್ತಿ ಹುಟ್ಟುಹಾಕೋ ರೀತೀಲಿ ತಮ್ಮ ಕ್ಷೇತ್ರದ ಬಗ್ಗೆ ಪರಿಚಯ ಮಾಡ್ಕೊಡ್ತಾರೆ. ಈ ಪರಿಣಿತರ ಪಟ್ಟೀನಾ ಒಸಿ ನೀವೂ ನೋಡಿ:
ಪ್ರೊ. ಎಚ್.ಆರ್.ರಾಮಕೃಷ್ಣರಾವ್ - ಇವರು ಕ್ರೈಸ್ತ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಅಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ.
ಪ್ರೊ. ವಿ.ಕೆ. ದೊರಸ್ವಾಮಿ - ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿದ್ದಾರೆ.
ಡಾ. ತಿರುಮಲಾಚಾರ್ - ಕರ್ನಾಟಕ ಸರ್ಕಾರದ ವೈದ್ಯಕೀಯ ಕಲಿಕೆ ಇಲಾಖೆಯ ನಿರ್ದೇಶಕರಾಗಿದ್ದವರು.
ಎಂ. ಶಿವಶಂಕರ್ (ಅಪರಂಜಿ) - ಇವ್ರು ಇಂಜಿನಿಯರಿಂಗ್ ವಿಜ್ಞಾನದವ್ರು.
ಡಾ. ಸಿ.ಆರ್. ಚಂದ್ರಶೇಖರ್ - ಇವರು ನಿಮ್ ಹ್ಯಾನ್ಸ್ ಸಂಸ್ಥೆಯ ಮನಶಾಸ್ತ್ರಜ್ಞರು ಮತ್ತು ವೈದ್ಯಕೀಯ ಬರಹಗಾರರು.
ಡಾ. ನಾ.ಸೋಮೇಶ್ವರ - ’ಥಟ್ ಅಂತ ಹೇಳಿ’ ಕಾರ್ಯಕ್ರಮ ಖ್ಯಾತಿಯ ಇವರು ವೈದ್ಯರು ಮತ್ತು ವೈದ್ಯಕೀಯ ಬರಹಗಾರರು.
ಡಾ. ಕೆ.ಎಸ್. ನಾಗೇಶ್ - ಆರ್.ವಿ ದಂತ ವಿದ್ಯಾಲಯದ ಪ್ರಾಂಶುಪಾಲರು.
ಪ್ರೊ. ಎಂ.ಆರ್. ನಾಗರಾಜ್ - ಇವರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರೊಫೆಸರ್ ಆಗಿರೋರು.
ಡಾ. ವೈ. ತುಳಜಪ್ಪ - ಬಸವನಗುಡಿ ನ್ಯಾಷನಲ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು.
ಡಾ. ಬಿ.ಎಸ್.ಶೈಲಜ - ಇವರು ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದಲ್ಲಿ ವಿಜ್ಞಾನಿಯಾಗಿದ್ದಾರೆ.
ಶ್ರೀ. ಬಿ.ಕೆ ವಿಶ್ವನಾಥರಾವ್ - ಇವರು ನಿವೃತ್ತ ಪ್ರಾಧ್ಯಾಪಕರು.
ಶ್ರೀ. ಟಿ.ಕೆ.ಅನಂತರಾಮು - ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯವರು.
ಶ್ರೀ. ಬಿ.ಆರ್ ಗುರುಪ್ರಸಾದ್ - ಇವ್ರು ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿ.
ಇವರಲ್ಲದೆ ಪ್ರಿಸ್ಮ್ ಪ್ರಕಾಶನ ಸಂಸ್ಥೆಯೋರಾದ ಶ್ರೀಮತಿ ವೀಣಾ ರಂಗನಾಥ್, ವಿಜ್ಞಾನ ಕಾರ್ಯಕರ್ತರಾದ ಶ್ರೀ. ಹುಲಿಕಲ್ ನಾಗರಾಜ್, ವಿಜ್ಞಾನ ಬರಹಗಾರರಾದ ಶ್ರೀಮತಿ ಇಂದಿರಾ ಮೂರ್ತಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಡಾ. ಎಂ.ಕೆ ಶ್ರೀಧರ್, ಆಕಾಶವಾಣಿಯ ಡಾ. ಎಚ್.ಆರ್. ಕೃಷ್ಣಮೂರ್ತಿಯವ್ರೂ ಈ ಶಿಬಿರದ ಬೋಧಕವರ್ಗದಲ್ಲಿದಾರೆ.
ಬೋಧನೆಯ ಜೊತೆಗೆ ತಾರಾಲಯ, ಭೂ ವಿಜ್ಞಾನ ವಸ್ತುಪ್ರದರ್ಶನಾಲಯಗಳಿಗೆ ಭೇಟಿ - ವೈಜ್ಞಾನಿಕ ಮಾದರಿಗಳನ್ನು ಮಾಡೋ ತರಬೇತಿಗಳೂ ಇದರಲ್ಲಿವೆ.


ಕಲಿಕೆ ಕನ್ನಡದಲ್ಲೇ ಬೆಸ್ಟು ಅಂದ ಎಚ್ಚೆನ್!


ಬೆಂಗಳೂರು ವಿಜ್ಞಾನ ವೇದಿಕೆ "The Bangalore Science Forum" ಸಂಸ್ಥೆಯನ್ನು ಹುಟ್ಟು ಹಾಕಿದೋರು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಗಾಂಧೀವಾದಿಗಳೂ, ಸ್ವತಂತ್ರ ಹೋರಾಟಗಾರರೂ, ಖ್ಯಾತ ಶಿಕ್ಷಣತಜ್ಞರೂ ಆಗಿದ್ದ ಡಾ. ಎಚ್. ನರಸಿಂಹಯ್ಯನೋರು. ಇವ್ರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳುಸ್ಬೇಕು ಅನ್ನೋದ್ರು ಜೊತೆ ಮಕ್ಕಳ ಕಲಿಕೆ ಕನ್ನಡದಲ್ಲೇ ಇರಬೇಕು ಅಂತಾ ಪ್ರತಿಪಾದುಸ್ತಿದ್ದೋರು. "ಅಯ್ಯಂದಿರಾ, ನಿಮಗೆ ದುಡ್ಡು ಬೇಕೂ ಅಂತಾ ನೀವೂ ಇಂಗ್ಲಿಷ್ ಮಾಧ್ಯಮ ಶಾಲೆ ನಡ್ಸಕ್ ಮುಂದಾಗಿರ್ಬೋದು, ಅದು ಹಾಳಾಗ್ ಹೋಗ್ಲಿ... ಬೋರ್ಡಲ್ ಏನಾದ್ರೂ ಬರ್ಕೊಳ್ಳಿ... ಆದ್ರೆ ಪಾಠ ಮಾಡೋವಾಗ ಮಕ್ಳಿಗೆ ಅರ್ಥ ಮಾಡ್ಸೋದೆ ನಿಮ್ ಉದ್ದೇಶ ಆಗಿದ್ರೆ ಕನ್ನಡದಲ್ಲಿ ಹೇಳ್ಕೊಡ್ರಯ್ಯಾ" ಅಂತಿದ್ರು ಎಚ್ಚೆನ್ ಅವ್ರು ಅಂತ ಬಲ್ಲವರು ನೆನಪು ಮಾಡ್ಕೋತಾರೆ. ಎಚ್ಚೆನ್ ಅವರು ಹೇಳಿದ್ನ ಅರ್ಥ ಮಾಡ್ಕೊಂಡು ಇವತ್ತು ಇಂಥಾ ಅರ್ಥಪೂರ್ಣ ಶಿಬಿರಗಳನ್ನು ನಡುಸ್ತಿರೋ ಬೆಂಗಳೂರು ಸೈನ್ಸ್ ಫೋರಂನೋರಿಗೆ ಒಂದು ಅಭಿನಂದನೆ ಸಲ್ಸೋಣಾ ಗುರು!

3 ಅನಿಸಿಕೆಗಳು:

Anonymous ಅಂತಾರೆ...

ಈ ಶಿಬಿರಗಳು ಇನ್ನೂ ನಡೆಯುತ್ತಿರುವುದು ಸಂತೋಷದ ವಿಚಾರ. ೧೯೮೫ ರಲ್ಲಿ ಈ ಶಿಬಿರದಲ್ಲಿ ನಾನು ನನ್ನ ಸ್ನೇಹಿತರು ಭಾಗವಹಿಸಿದ್ದೆವು. ಎಲ್ಲಾ ಕ್ಲಾಸುಗಳು, ಪ್ರಶ್ನೋತ್ತರಗಳು ಕನ್ನಡದಲ್ಲೇ ನಡೆಯುತ್ತವೆಯಾದ್ದರಿಂದ ಈ ಶಿಬಿರ ಬಹಳ ಜನಪ್ರಿಯವಾಗಿತ್ತು. ಕೆಲವು ಕ್ಲಾಸುಗಳಿಗೆ ಎಚ್ಚೆನ್ ಸಹಾ ಕೂರುತ್ತಿದ್ದರು. ಏನ್ರಪ್ಪಾ ಬನ್ರಪ್ಪಾ ಅಂತ ಆತ್ಮೀಯವಾಗಿ ವಿದ್ಯಾರ್ಥಿಗಳ ಜೊತೆ ಮಾತಾನಾಡುತ್ತಿದ್ದ ಎಚ್ಚೆನ್ ರ ನೆನಪು ನಮ್ಮೆ ಮನದಲ್ಲಿ ಸದಾ ಹಸಿರು.

-ಶೇಷಾದ್ರಿವಾಸು

prasadh ಅಂತಾರೆ...

ಇದಕ್ಕೆ ಪ್ರಚಾರ ಮಾಡ್ತಿರೊ ಕೆಲ್ಸಾ ತುಂಬಾನೆ ಮೆಚ್ಚಬೇಕಂಥಾದ್ದು, ಇದು ನಿಜವಾಗಲು ನಮ್ಮ ನಾಡಿನ ಮಕ್ಕಳನ್ನು ತಲುಪಬೇಕೆಂದರೆ ಶಾಲಾ ಮಟ್ಟದಲ್ಲಿ ಈ ಸುದ್ದಿ ಹರಡಬೇಕು. ಬೆಂಗಳೂರಿನ ಸುತ್ತ ಮುತ್ತ ಹಳ್ಳಿಗಳಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಹಾಯವಾಗುವಂತೆ ಇಚ್ಛೆಪಟ್ಟವರು ಹಣದ ಸಹಾಯ ಮಾಡಿ ಆದಷ್ಟು ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಾಡಬೇಕು(ಬೆಂಗಳೂರಿನಲ್ಲಿ ವಸತಿ ಸೌಲಭ್ಯವಿರುವವರಿಗೆ ಮಾತ್ರ).ಈ ನಿಟ್ಟಿನಲ್ಲಿ ನಿಮ್ಮ ಗುಂಪಿನವರು ಆಸಕ್ತಿ ವಹಿಸಿದರೆ ನಾನು ಸಹ ಕೈಜೋಡಿಸುವೆ, ಇತರರು ಸಹ ತಮ್ಮ ಬೆಂಬಲ ಸೂಚಿಸುವರೆಂದು ಆಶಿಸುವೆ.
ಧನ್ಯವಾದ
ಪ್ರಸಾದ್

Padyana Ramachandra ಅಂತಾರೆ...

ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕನ್ನಡದಲ್ಲಿ ಶಿಬಿರ ಆಯೋಜಿಸಿದ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಶಾಲೆ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಬಳಗಕ್ಕೆ ವಂದನೆಗಳು.

-ಪ. ರಾಮಚಂದ್ರ
ರಾಸ್ ಲಫ್ಫಾನ್, ಕತಾರ್ ದೇಶ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails