ಹಿಂದೀ ಪ್ರಚಾರ ಸಭೆಗಳು ಬೇಕಾ?

ಇತ್ತೀಚಿಗೆ ಬೆಂಗಳೂರಿನ ಚೌಡಯ್ಯಾ ಮೆಮೋರಿಯಲ್ ಹಾಲ್‍ನಲ್ಲಿ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನೋರು 43ನೇ ಪದವಿ ಪ್ರದಾನ ಸಮಾರಂಭ ಮಾಡುದ್ರು. ಅದರಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹಂಸರಾಜ ಭಾರಧ್ವಾಜರು ಸೊಗಸಾಗಿ ಹಿಂದೀ ಹೇರಿಕೆಗೆ ಒಂದು ಪಾವಿತ್ರ್ಯತೆ ತಂದುಕೊಡೋ ಕೆಲಸಕ್ ಕೈ ಹಾಕಿದಾರೆ. ಇವರ ಜೊತೆಯಲ್ಲಿ ರತ್ನಾಕರ ಪಾಂಡೆ ಎನ್ನೋ ಮಹನೀಯರೂ ಆಣಿಮುತ್ತುಗಳಾಡಿದ್ದಾರೆ.

ಉದುರಿದ ನುಡಿಮುತ್ತುಗಳು!

"ಸ್ವಾತಂತ್ರ ಹೋರಾಟದಲ್ಲಿ ಭಾರತೀಯರೆಲ್ಲಾ ಹಿಂದಿಯ ಮೂಲಕ ಸಂಘಟಿತರಾದರು. ಕನ್ನಡ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರೋದ್ರಿಂದ ಈ ಜನರು ಹಿಂದೀನ ಬಳುಸ್ತಾರೆ" ಅಂತ ಅವರಂದ್ರೆ ಪರಿಷತ್‍ನ ಮಹಾ ಪೋಷಕರಾದ ಡಾ.ರತ್ನಾಕರ ಪಾಂಡೆಯವ್ರು ‘ಈಚಿನ ವರ್ಷಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ತೀವ್ರವಾಗಿದ್ದು, ಪ್ರಾಂತೀಯ ಭಾಷೆಗಳ ಬಳಕೆ ಕ್ಷೀಣಿಸುತ್ತಿದೆ. ಪ್ರತಿಯೊಂದು ರಾಜ್ಯದವರು ತಮ್ಮ ಮಾತೃಭಾಷೆಯನ್ನೇ ಬಳಸಲಿ. ಆದರೆ ಇತರೆ ಭಾಷಿಗರೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್‌ಗೆ ಬದಲಾಗಿ ಹಿಂದಿ ಬಳಸಬೇಕು’ ಎಂದು ಕರೆ ನೀಡಿದರು.

ಅದೇ ಹಳೇ ಟ್ರಿಕ್ಕುಗಳು!

ಹಿಂದೀನಾ ಭಾರತದ ಜನರ ಮೇಲೆ ಹೊರೆಸಲು ಇವ್ರುಗಳು ಬಳುಸ್ತಿರೋ ಮಾಮೂಲಿ ಹಳೇ ಟ್ರಿಕ್ಕುಗಳೇ ಇವಾಗಿವೆ ಗುರು! ನಮ್ಮೂರಲ್ಲಿ ನಾವು ಪರಭಾಷೆಯೋರ ಜೊತೆ ಹಿಂದಿ ಬಳುಸ್ಬೇಕಂತೆ. ಪರಭಾಷಿಕರು ಅಂದ್ರೆ ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರು, ಬೆಂಗಾಲಿಗಳು, ಪಂಜಾಬಿಗಳು, ಗುಜರಾತಿಗಳೂ...ಸೇರಿದ ಹಾಗೆ ಎಲ್ಲಾ ಭಾಷೆ ಮಾತಾಡೋರೂ ಅಂತಾ ಅರ್ಥ. ಆಕಸ್ಮಾತ್ ನಾವು ಬಂದೋರ ಜೊತೇಲೆಲ್ಲಾ ಹಿಂದೀ ಬಳುಸಕ್ ಶುರು ಹಚ್ಕೊಂ
ಡ್ರೆ ನಮ್ಮ ನಾಡಲ್ಲಿ ನಮ್ಮ ನುಡಿ ಉಳಿದೀತಾ ಗುರು? ಅದರ್ ಬದ್ಲು ಇವ್ರುಗಳು ‘ಕನ್ನಡನಾಡಿಗೆ ಬಂದೋರೆಲ್ಲಾ ತಮ್ಮ ತಾಯ್ನುಡೀನಾ ಮನೇಲಿ ಬಿಟ್ಟು ಕನ್ನಡದಲ್ಲೇ ವ್ಯವಹರುಸ್ಬೇಕು‘ ಅನ್ನಬೇಕಿತ್ತಲ್ವಾ? ಈ ಜನಗಳ ಇನ್ನೊಂದು ಟ್ರಿಕ್ಕು ಇಂಗ್ಲಿಷ್ ಭಾಷೇ ನಮ್ಮನ್ನು ಗುಲಾಮರಾಗಿ ಮಾಡಿಕೊಂಡಿದ್ದ ಬ್ರಿಟೀಷರ ಭಾಷೆ. ಅದನ್ನು ಬಳುಸೋದು ಗುಲಾಮಗಿರಿ ಸಂಕೇತ ಅನ್ನೋ ಧ್ವನೀಲಿ ಮಾತಾಡೋದು. ಆ ಮೂಲಕ ಇವರೇನು ಕನ್ನಡ ಬಳಸಿ ಅಂತಿಲ್ಲಾ... ‘ಇಂಗ್ಲಿಷ್ ಬ್ಯಾಡಾ ಹಿಂದೀ ಬಳಸಿ’ ಅಂತಿದಾರೆ. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಅನ್ನೋ ಸಂಸ್ಥೇ ಮೂಲಕ ಈ ಪ್ರಚಾರದ ಕೆಲಸಕ್ಕೆ ಮುಂದಾಗಿದಾರೆ. ಇಂಥಾ ಪ್ರಚಾರಗಳ ಪೊಳ್ಳುತನ, ಅದರಿಂದಾಗೋ ಅಪಾಯಗಳ್ನ ನಾಡಿನ ಜನತೆ ಅರ್ಥ ಮಾಡ್ಕೋಬೇಕಾಗಿದೆ. ಅದು ಅಂಥಾ ಕಷ್ಟದ್ ಕೆಲ್ಸಾನೂ ಅಲ್ಲಾ ಗುರೂ! ಸುಮ್ನೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಲಾಂಛನದಲ್ಲಿ ಬರೆದಿರೋ ಸಾಲುಗಳನ್ನು ಓದಿಕೊಂಡ್ರೆ ಸಾಕು. ಅದರಲ್ಲೇನಿದೆ ಅಂದ್ರಾ... " ಏಕ್ ರಾಷ್ಟ್ರಭಾಷಾ ಹಿಂದೀ ಹೋ! ಏಕ್ ಹೃದಯ್ ಹೋ ಭಾರತ್ ಜನನಿ " ಅಂತಾ ಇದೆ. ಇದರರ್ಥ ಹಿಂದಿ ಅಲ್ಲದ ನುಡಿಗಳಿಗೆಲ್ಲಾ ಭಾರತದಲ್ಲಿ ಜಾಗಾ ಇಲ್ಲಾ ಅಂತ ಇದ್ದಂಗಿಲ್ವಾ? ಗುರೂ!!

ಕೊನೆಹನಿ : ತೆರಿಗೇ ರೂಪದಲ್ಲಿ ನಮ್ಮದೇ ಹಣಾ ತೊಗೊಂಡು, ನಮ್ಮೂರಲ್ಲೇ, ನಮಗೇ, ನಮ್ಮದಲ್ಲದ ಹಿಂದೀನಾ ಕಲಿಸೋ ಇಂಥಾ ಪ್ರಚಾರ ಸಭಾಗಳು ಯಾಕೆ ಬೇಕು? ಇಂಥಾ ಸಭೆಗಳ ಘೋಷಿತ ಉದ್ದೇಶಾನೇ ‘ಭಾರತಾನಾ ಒಂದಾಗಿಟ್ಕೊಳ್ಳೋಕೇ ನಮ್ಮದಲ್ಲದ ನುಡೀನಾ ನಮಗೆ ಕಲಿಸೋದು’ ಅನ್ನೋದಾದ್ರೆ ‘ಭಾರತದ ಏಕತೆ’ ಅಷ್ಟೊಂದು ಅಸಹಜವಾಗಿರೋದಾ ಅನ್ಸಲ್ವಾ ಗುರು?

4 ಅನಿಸಿಕೆಗಳು:

Anonymous ಅಂತಾರೆ...

ಒಂದೇ(ಹಿಂದೀ) ಭಾಷೆಯನ್ನು ಆಡುವುದರ ಮೂಲಕ ಒಗ್ಗಟ್ಟು ಸಾಧಿಸಬಹುದು ಅನ್ನೋದು ಕನಸಿನ ಮಾತು. ಒಂದೇ ಭಾಷೆಯನ್ನಾಡುವ ಆಂಧ್ರ ಈವತ್ತು ಹೋಳಾಗ್ತಾ ಇರೋ ಕಾರಣ ಅಲ್ಲಿರುವ ಅಸಮಾನತೆ. ಆದ್ದರಿಂದ ಅಸಮಾನತೆಯನ್ನ ಹೋಗಲಾಡಿಸೋದೆ ಒಗ್ಗಟ್ಟಿಗೆ ಸರಿಯಾದ ಪರಿಹಾರ. ಉಳಿದೆಲ್ಲಾ ಮಾರ್ಗಗಳೂ ತಲೇ ನೋವು ಬಂದಾಗ ತಲೆಗೆ ಬಟ್ಟೆ ಕಟ್ಟಿದ ಹಾಗೆ.

-ಚಂದ್ರಶೇಖರ್

Priyank ಅಂತಾರೆ...

ಇತರೆ ಭಾಷಿಕರೊಂದಿಗೆ ವ್ಯವಹರಿಸುವಾಗ, ಸ್ಥಳೀಯ ಭಾಷೆ ಬಳಸಬೇಕಾದುದೇ ಸರಿಯಾದ್ದು.
ಕರ್ನಾಟಕದಲ್ಲಿ ಕನ್ನಡ, ತಮಿಳು ನಾಡಿನಲ್ಲಿ ತಮಿಳು ಬಳಕೆಯಾಗಬೇಕು. ಅದು ಬಿಟ್ಟು, ಹಿಂದಿಲಿ ಮಾತನಾಡಿ ಅಂತ ಯಾಕೆ ಹೇಳ್ತಾರೆ ಇವರು? ಎಲ್ರೂ ಹಿಂದಿ ಕಲುತ್ರೆ ಇವ್ರಿಗೇನ್ ಖುಷಿ ಸಿಗುತ್ತೋ !!

Unknown ಅಂತಾರೆ...

ತುಂಬಾ ಚೆನ್ನಾಗಿದೆ.. ಮೊದಲು..ನಾವು ನಮ್ಮ ಕನ್ನಡವನ್ನು ಪ್ರೀತಿಸಿದರೆ, ನಮಗೆ ಕನ್ನಡ ಮಾತಾಡಲು ಹಾಗು ಕಲಿಸಲು ಪ್ರೇರೇಪಣೆ ಸಿಗುತ್ತೆ... ಅದ್ದರಿಂದ ದಯವಿಟ್ಟು.. ನಿಮ್ಮ ಭಾಷೆಯಾದ ಕನ್ನಡವನ್ನು ಪ್ರೀತಿಸಿ..ನಂತರ ಬೇರೆವಯರಿಗೆ ಕನ್ನಡ ಹೇಳಿ ಕೊಡಿ...

-- ರಶ್ಮಿ ಜಿ ಆರ್

Abhivyakti ಅಂತಾರೆ...

ಸತ್ಯ, ಕನ್ನಡಿಗರಾದ ನಾವೇ ಮೊದಲು ಕನ್ನಡವನ್ನು ನಮ್ಮ ದಿನನಿತ್ಯದ ಕೆಲಸದಲ್ಲಿ ಬಳಸುವುದರ ಮೂಲಕ ಕನ್ನಡವನ್ನು ಉಳಿಸಬಹುದು. ಹೊರ ರಾಜ್ಯದಿಂದ ಬಂದವರು ಅನಿವಾರ್ಯವಾಗಿ ಕನ್ನಡವನ್ನು ಕಲಿಯುವ ವಾತವರಣವನ್ನು ನಾವು ನಿರ್ಮಿಸಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails