ರೈಲ್ವೇ ಯೋಜನೆಗಳು : ಅಂತೂ ಎಚ್ಚೆತ್ತ ಸರ್ಕಾರಗಳು!


ಅಂತೂ ಇಂತೂ ಕರ್ನಾಟಕದ ರಾಜಕಾರಣಿಗಳು ರೈಲ್ವೇ ವಿಷಯದಲ್ಲಿ ನಿದ್ದೆಯಿಂದ ಎದ್ದಂಗ್ ಕಾಣುಸ್ತಾ ಇದೆ ಗುರೂ! ಏನಪ್ಪಾ ವಿಷ್ಯಾ ಅಂದ್ರಾ? ಕರ್ನಾಟಕದ ರಾಜ್ಯ ಸರ್ಕಾರ ಮತ್ತು ಕೇಂದ್ರ ರೈಲ್ವೇ ಸಚಿವರಾದ ಕನ್ನಡಿಗ ಮುನಿಯಪ್ಪನೋರು ಈ ಸಾರಿ, ಇದೇ ಮೊದಲ ಸಾರಿ ರೈಲು ಹೋಗಕ್ ಮೊದಲೇ ಟಿಕೆಟ್ ತೊಗೊಳ್ಳೋಕೆ ಮುಂದಾಗಿದಾರೆ ಅನ್ನೋ ಸುದ್ದಿ ಇವತ್ತಿನ (03.01.2009) ದಿನಪತ್ರಿಕೆಗಳಲ್ಲಿ ರಾರಾಜುಸ್ತಾ ಇದೆ.

ರೈಲು ಬಜೆಟ್‍ಗೆ ಸಿದ್ಧತೆ!

ಪ್ರತೀ ಸಲಾ ರೈಲು ಬಜೆಟ್ ಮಂಡನೆ ಆದಮೇಲೆ ‘ಕರ್ನಾಟಕಕ್ಕೆ ಅನ್ಯಾಯ ಆಯ್ತು’ ಅಂತಾ ಕೇಂದ್ರದ ವಿಪಕ್ಷಗಳ ಕರ್ನಾಟಕದ ವಿಭಾಗದೋರು ಕಿರುಲೋದೂ, ‘ಇಲ್ಲಾ, ಇದು ಅದ್ಭುತವಾದ ಬಜೆಟ್, ಕರ್ನಾಟಕಕ್ಕೆ ಹೊಸದಾಗಿ ನಾಲ್ಕಾರು ರೈಲು ಹಾಕಲಾಗಿದೆ’ ಅಂತ ಕೇಂದ್ರದ ಆಡಳಿತ ಪಕ್ಷದ ಇಲ್ಲಿನ ಬಾಲಂಗೋಚಿಗೋಳು ಸಮರ್ಥಿಸಿಕೊಳ್ಳೋದೂ ಮಾಮೂಲಿ ಆಗೋಗಿತ್ತು. ಆದರೆ ಈ ಸಲ ಬಜೆಟ್‍ಗೆ ಮೊದಲೇ ಒಂದು ಪರಿಶೀಲನಾ ಸಭೆ ಮಾಡಿ ರಾಜ್ಯಕ್ಕೆ ಏನೇನಾಗಬೇಕು ಅನ್ನೋ ದಿಕ್ಕಲ್ಲಿ ಯೋಚನೆ ಮಾಡಿರೋದು ಮೆಚ್ಕೊಬೇಕಾದ್ದ ಸಂಗತೀನೆ ಗುರು! ಇದೊಂದು ಮಾದರಿ ವಿಧಾನವಾಗಿ ಪ್ರತಿವರ್ಷ ಮುಂದುವರೀಲಿ ಅನ್ನೋದು ನಮ್ಮಾಸೆ. ಇರಲಿ, ಈಗ ಇಂಥಾ ಬೆಳವಣಿಗೆ ಆಗಿರೋದಕ್ಕೆ ಯಾರು ಕಾರಣ? ಯಾಕೆ, ಎಂದೂ ಇಲ್ಲದ ಕಾಳಜೀನಾ ನಮ್ಮ ಸರ್ಕಾರಗಳು ತೋರುಸ್ತಿವೆ? ಅಂತ ಒಸಿ ನೋಡ್ಮಾ...

ಇಷ್ಟು ವರ್ಷಾ, ಎಲ್ಲಾ ಬರೀ ರೈಲು!


ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳಲ್ಲಿ ಹೇಗೆಲ್ಲಾ ಕಡೆಗಣನೆ ಮಾಡಲಾಗಿದೆ. ಈಗ ಭಾರತೀಯ ರೈಲ್ವೇಯನ್ನೇ ನೋಡಿ. ಕರ್ನಾಟಕದ 2/3ರಷ್ಟಿರೋ ತಮಿಳುನಾಡಲ್ಲಿ ಸುಮಾರು ೪೮೦೦ ಕಿಮೀ ಉದ್ದದ ರೈಲು ಮಾರ್ಗವಿದ್ದರೆ, ಕರ್ನಾಟಕದಲ್ಲಿ ಬರೀ 3100 ಕಿಮೀಗಳು. ಪುಟಾಣಿ ಜಾರ್ಖಂಡ್‍ನಂತಹ ರಾಜ್ಯದ ಶೇಕಡಾ 80ಕ್ಕಿಂತ ಹೆಚ್ಚು ರೈಲು ಮಾರ್ಗ ವಿದ್ಯುದೀಕರಣವಾಗಿದ್ದರೆ, ಕರ್ನಾಟಕದಲ್ಲಿ ಇದು ಬರೀ 5%. ನಮ್ಮ ನಾಡಲ್ಲಿ ವಿದ್ಯುತ್ ಮಾರ್ಗದ ಉದ್ದ ಬರೀ 150 ಕಿಮೀಗಿಂತಾ ಕಮ್ಮಿ ಇದೆ. ಇಲ್ಲಿನ ರೈಲು ಮಾರ್ಗಗಳು ನಮ್ಮ ನಗರಗಳನ್ನು ಜೋಡಿಸುವ ಉದ್ದೇಶದಿಂದ ಮಾಡೇಯಿಲ್ಲ ಅನ್ನುವಂತಿದೆ. ದಿಲ್ಲಿಗೆ, ಮುಂಬೈಗೆ, ಚೆನ್ನೈಗೆ ಹೋಗೋಕೆ ಬೇಕಾಗಿರೋ ಮಾರ್ಗದಲ್ಲಿರೋ ಜಿಲ್ಲೆಗಳು ಬಿಟ್ಟರೆ ನಮ್ಮ ನಗರಗಳನ್ನು ಜೋಡಿಸುವ ಸಂಪರ್ಕ ಜಾಲಗಳು... ಊಹೂಂ, ಇಲ್ಲವೇ ಇಲ್ಲ ಅನ್ನಬಹುದು. ಪ್ರತಿ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಅಷ್ಟು ಹೊಸರೈಲು, ಇಷ್ಟು ಹೊಸರೈಲು ಅಂತ ಘೋಷಣೆ ಮಾಡ್ತಾರೆ... ಆದ್ರೆ ಈ ರೈಲುಗಳಲ್ಲಿ ಹೆಚ್ಚಿನವು (ಭಾಗಷಃ ಎಲ್ಲಾ ಅನ್ನಿ) ಹೊರ ರಾಜ್ಯಗಳಿಗೆ ಹೋಗೋವೆ. ಹೋಗೋವೂ ಅನ್ನೋ ಹಾಗಿಲ್ಲಾ, ಹೊರ ರಾಜ್ಯಗಳಿಂದ ಇಲ್ಲಿಗೆ ಬರೋವು ಅನ್ನೋದೇ ಸೂಕ್ತ. ಗುವಾಹತಿ, ಕೊಲ್ಕತ್ತಾ, ಕೊಯಮತ್ತೂರು, ಚೆನ್ನೈ, ಮುಂಬೈ, ದಿಲ್ಲಿಗಳು ಸಾಲ್ದು ಅಂತಾ ಕಣ್ಣೂರು, ಲಕ್ನೋ, ಪಾಟ್ನಾ ಅಂತ ರೈಲು ಮೇಲೆ ರೈಲು ಹಾಕಿರೋದ್ರಿಂದ ಅದೆಷ್ಟು ಜನ ಕನ್ನಡದೋರಿಗೆ ಅನುಕೂಲ ಆಗಿದೆಯೋ ದೇವರೇ ಬಲ್ಲ. ಆದ್ರೆ ನಮ್ಮೂರುಗಳಿಗೆ ವಲಸೆ ಹೆಚ್ಚಿರೋದು ಮಾತ್ರಾ ಅಂಗೈ ಹುಣ್ಣಂಗೆ ಕಾಣ್ತಿದೆ. ಹೀಗೆ ಕರ್ನಾಟಕ ಅನ್ನೋ ಹಸುವಿನಿಂದ ಕೊಡಗಟ್ಲೆ ತೆರಿಗೆ ಅನ್ನೋ ಹಾಲು ಕರೆದುಕೊಳ್ಳೋ ಕೇಂದ್ರಸರ್ಕಾರ, ಇಷ್ಟು ದಿವ್ಸಾ ನಮಗಿಟ್ಟ ಮೇವು ಮಾತ್ರಾ ಮುಷ್ಟೀ ಗಾತ್ರವೂ ಇಲ್ಲ. ಹೀಗೆಲ್ಲಾ ಕಡೆಗಣನೆ ಆಗಿರೋದಕ್ಕೆ ಯಾರು ಹೊಣೆ? ಇಷ್ಟೂ ವರ್ಷಗಳ ಕಾಲ ಮೆಲಿಂದ ಮೇಲೆ ನಮ್ಮ ನಾಡನ್ನು ಆಳಿದ ರಾಷ್ಟ್ರೀಯ ಪಕ್ಷಗಳೇ ಅಲ್ವಾ ಗುರು?

ಎಚ್ಚೆತ್ತ ಕನ್ನಡಿಗ!

ಹಿಂದೆ ದಕ್ಷಿಣ ರೈಲ್ವೆಯ ಭಾಗವಾಗಿದ್ದಾಗ ಕರ್ನಾಟಕದ ತುಂಬಾ ತಮಿಳರನ್ನು ತಂದು ತುಂಬಿದ್ದನ್ನು ನೋಡಿ ಬೇಸತ್ತು, ನಮಗೆ ನಮ್ಮದೇ ಆದ ರೈಲ್ವೇ ವಲಯ ಇರಲಿ ಅಂತಾ ಸಾಕಷ್ಟು ಹೋರಾಡಿ ನೈಋತ್ಯ ವಲಯ ಗಿಟ್ಟುಸಿಕೊಂಡ ಮೇಲೂ ನಮ್ಮೂರ ಕೆಲಸಗಳು ಬೇರೆಯವರ ಪಾಲಾಗೋ ಪರಿಸ್ಥಿತಿ ಇತ್ತೀಚಿಗೆ ಉಂಟಾಗಿತ್ತು. ಕರ್ನಾಟಕಕ್ಕೇ ಅಂತಾ ನೈಋತ್ಯ ರೈಲ್ವೇ ವಲಯ ಆದಮೇಲೆ, ಡಿ ದರ್ಜೆ ಹುದ್ದೆಗಳಿಗಾಗಿ ನೇಮಕಾತಿ ಆರಂಭವಾದಾಗ ಎಂದಿನಂತೆಯೇ (?) ಹೊರರಾಜ್ಯದಿಂದ ಜನಗಳನ್ನು ಕರ್ಕೊಂಡುಬಂದು ತುಂಬೋ ಪ್ರಯತ್ನಗಳು ನಡುದ್ವು. ಇದು ನಮ್ಮ ಜನರನ್ನು ಕೆರಳಿಸಿದ್ದು ಸಹಜ. ಈ ಅನ್ಯಾಯದ ವಿರುದ್ಧವಾಗಿ ಕನ್ನಡಿಗರಲ್ಲಿ ಮೂಡಿದ ಜಾಗೃತಿ, ಅದಕ್ಕಾಗಿ ನಡೆಸಿದ ತೀವ್ರವಾದ ಹೋರಾಟ... ಆ ಮೂಲಕ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿನ ಹುಳುಕು ಬಯಲಿಗೆ ಬಂದದ್ದು, ಆ ನಂತರ ಭಾರತ ಸರ್ಕಾರ ಎಲ್ಲಾ ಭಾಷೆಗಳಲ್ಲಿ ಪರೀಕ್ಷೆಗೆ ಆದೇಶ ನೀಡಿದ್ದು ಮೊದಲಾದ ಘಟನೆಗಳು ನಡೆದವು. ಅನೇಕ ಸಂಘಟನೆಗಳು ನಮ್ಮ ನಾಡಿಗಾದ ಅನ್ಯಾಯದ ಬಗ್ಗೆ ಸಾಕಷ್ಟು ಅಂಕಿ ಅಂಶಗಳನ್ನು ಜನರ ಮುಂದಿಟ್ಟಿದ್ದೂ, ಪ್ರಾಣ ಪಣಕ್ಕಿಟ್ಟು ಹೋರಾಡಿದ್ದೂ, ಮಾಧ್ಯಮಗಳ ಪ್ರತಿನಿಧಿಗಳು ಈ ಅಂಕಿಅಂಶಗಳನ್ನು ರಾಜಕಾರಣಿಗಳ, ರಾಜಕೀಯ ಪಕ್ಷಗಳ ಮುಖದ ಮುಂದೆ ಹಿಡಿದದ್ದೂ ನಡೆದವು. ಈ ಎಲ್ಲಾ ಜಾಗೃತಿಯ ಪರಿಣಾಮವೇ ನಿನ್ನೆಯ ಸಭೆಗೆ ಕಾರಣ ಅನ್ನೋದು ಅತಿಶಯೋಕ್ತಿ ಅಲ್ಲಾ ಗುರು! ಹೌದು, ನಮ್ಮ ಹಕ್ಕುಗಳನ್ನು, ನಮ್ಮ ಪಾಲನ್ನು ದಕ್ಕಿಸಿಕೊಳ್ಳಲು ಇಂತಹ ಜಾಗೃತಿಯೇ ಪರಿಹಾರ ಅಂತನ್ನೋದನ್ನು ಇದು ತೋರ್ಸುತ್ತಲ್ವಾ ಗುರು? ಕನ್ನಡಿಗರಲ್ಲಿ ಹತ್ತಿರುವ ಜಾಗೃತಿಯ ಈ ಹಣತೆ ನಾಡನ್ನೇ ಬೆಳಗಲಿ!!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails