ಹಂಪಿ: ಕನ್ನಡ ವಿಶ್ವವಿದ್ಯಾಲಯದ ನೆಲವೇ ಬೇಕೆಂಬ ಹಟ ಬೇಡ!


ಕರ್ನಾಟಕದ ಬಿಜೆಪಿ ಸರ್ಕಾರ ಇತ್ತೀಚಿಗೆ ಯಾಕೋ ಹಂಪಿಯಲ್ಲಿರೋ ಕನ್ನಡ ವಿಶ್ವವಿದ್ಯಾಲಯದ ನೆಲದ ಮೇಲೆ ಕಣ್ಣು ಹಾಕಿಬಿಟ್ಟಿದೆಯಲ್ಲಾ! ಈಗ ಇದು ವಿಜಯನಗರ ಪುನಶ್ಚೇತನಾ ಪ್ರತಿಷ್ಠಾನ ಎನ್ನೋ ಹೆಸರಿನ ಒಂದು ಟ್ರಸ್ಟಿಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರೋ ಎಂಬತ್ತು ಎಕರೆ ಜಮೀನನ್ನು ಕೊಡಕ್ಕೆ ಮುಂದಾಗಿದೆ. ಈ ಪರಭಾರೆ ಬಗ್ಗೆ ಸಾಕಷ್ಟು ವಿರೋಧಗಳು ಹುಟ್ಟಿದೆ. ಇತ್ತೀಚಿಗೆ ರಾಜ್ಯಪಾಲರು ಕೂಡಾ ಸರ್ಕಾರಕ್ಕೆ ಬೇಡಾ ಅನ್ನೋ ಸಲಹೆ ಸೂಚನೆ ನೀಡಿದ್ದಾರೆ.

ಯಾಕೆ ಈ ಪರಭಾರೆಗೆ ವಿರೋಧ?
1990ನೇ ಇಸವಿಯಲ್ಲಿ ಹಂಪಿಯಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ, ಗುಡ್ಡಗಾಡುಗಳ ನಡುವೆ ಆರಂಭವಾದ ಕನ್ನಡ ವಿಶ್ವವಿದ್ಯಾಲಯ ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಇಲ್ಲಿ ಕಲಿಕೆಗಿಂತ ಹೆಚ್ಚಿನ ಮಹತ್ವವನ್ನು ಅಧ್ಯಯನ, ಸಂಶೋಧನೆಗಳಿಗೆ ಕೊಡಲಾಗಿದ್ದು ನಾಳೆಯ ದಿನಕ್ಕೆ ಉನ್ನತ ಶಿಕ್ಷಣವನ್ನು ಕನ್ನಡದಲ್ಲೇ ತರಬೇಕು ಅನ್ನುವ ಹೊಣೆಯನ್ನೂ ಹೊರಿಸಲಾಗಿದೆ. ಈಗ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರೋ ಜಾಗಾನೆ ಈ ಟ್ರಸ್ಟಿಗೆ ವಹಿಸಬೇಕು ಅಂತಾ ಸರ್ಕಾರ ಯಾಕೆ ಹಟ ಹಿಡಿದಿದೆ? ಅನ್ನೋದು ಯಕ್ಷ ಪ್ರಶ್ನೇನೆ ಆಗಿದೆ. ಮಾನ್ಯ ಮಂತ್ರಿಗಳು ವಿಶ್ವವಿದ್ಯಾಲಯ ಯೋಗ್ಯವಾಗಿ ಕೆಲಸ ಮಾಡ್ತಿಲ್ಲಾ, ಅದ್ಕೇ ಟ್ರಸ್ಟ್ ಮಾಡಿದೀವಿ ಅನ್ನೋ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದು ನಿಜವೇ ಆಗಿದ್ದ ಪಕ್ಷದಲ್ಲಿ ಸರ್ಕಾರ ವಿವಿಯನ್ನು ಹೇಗೆ ಬಲಗೊಳಿಸಬೇಕು ಅಂತಾ ಯೋಚ್ಸಿ ಅದುಕ್ ಬೇಕಾದ ಅನುದಾನ ಮತ್ತು ಜಮೀನುಗಳನ್ನು ಕೊಡಬೇಕೇ ಹೊರತು ಇರೋದನ್ನು ಕಿತ್ತುಕೋಬಾರದು!

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳು!
ಇಷ್ಟುಕ್ಕೂ 800 ಎಕರೆ ಪ್ರದೇಶ ಈ ವಿಶ್ವವಿದ್ಯಾಲಯಕ್ಕೆ ಯಾಕೆ ಬೇಕು ಅನ್ನೋದಾದ್ರೆ ಇದು ನಮ್ಮ ನಾಡಿನ ನಾಳೆಗಳನ್ನು ರೂಪಿಸಬಲ್ಲ ಸಾಮರ್ಥ್ಯ ಇರೋ ಶಕ್ತಿಕೇಂದ್ರ. ಇಲ್ಲಿಂದಲೇ ಕರ್ನಾಟಕದ ಏಳಿಗೆಯ ಬೆಳಕಿರಣಗಳು ಹೊಮ್ಮಬೇಕು. ಆ ಕೆಲಸಗಳು ನಮ್ಮ ನುಡಿಯ ಅಧ್ಯಯನ, ನುಡಿಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್) ನಂತಹ ಮಹತ್ವದ ಕೆಲಸಗಳ ಮೂಲಕ ಆಗಬೇಕು. ಸುಮ್ನೆ ಈ ಕೆಳಗಿನ ಪಟ್ಟಿ ನೋಡಿ:

೧. ಹಳೆಗನ್ನಡ ಮತ್ತು ಹೊಸಗನ್ನಡದ ಕೊಂಡಿಯ ಬಗ್ಗೆ ಅಧ್ಯಯನ.
೨. ನುಡಿಯರಿಮೆ (ಭಾಷಾ ವಿಜ್ಞಾನ).
೩. ಪದ ಟಂಕಸಾಲೆ - ಹೊಸ ಪದಗಳನ್ನು ಕಟ್ಟುವ ವಿಭಾಗ.
೪. ಕನ್ನಡ ಭಾಷಾ ಸ್ವರೂಪ/ ವ್ಯಾಕರಣ ಶಾಸ್ತ್ರದ ಅಧ್ಯಯನ.
೫. ದ್ರಾವಿಡ ಭಾಷೆಗಳ ಜೊತೆ ಕನ್ನಡದ ಸಂಬಂಧದ ಅಧ್ಯಯನ.
೬. ತಂತ್ರಜ್ಞಾನ/ ಉನ್ನತ ಕಲಿಕೆ ತರ್ಜುಮೆ.
೭. ಪಠ್ಯ ಪುಸ್ತಕ ರಚನೆ.
೮. ಕಲಿಕೆ, ಮಾರುಕಟ್ಟೆ, ಗ್ರಾಹಕಸೇವೆ, ಆಡಳಿತಗಳಲ್ಲಿ ಬಳಸಬೇಕಾದ ಭಾಷಾ ಸ್ವರೂಪ.
೯. ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಘಂಟು.
೧೦. ಕನ್ನಡದ ಒಳನುಡಿಗಳ ಅಧ್ಯಯನ.
೧೧. ನುಡಿ ಮತ್ತು ಪ್ರದೇಶಗಳ ಅನುಬಂಧದ ಅಧ್ಯಯನ.
೧೨. ನಾಡಿಗೆ ನುಡಿ ಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್).
೧೩. ವ್ಯವಸಾಯ, ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆಯಂತಹ ಕುಶಲ ಕೆಲಸಗಳ ಅರಿಮೆಯ ದಾಖಲಿಸುವಿಕೆ.
೧೪. ಶಾಸ್ತ್ರೀಯ ಭಾಷೆಯ ಅನುದಾನದ ಸದ್ಬಳಕೆಗೆ ಯೋಜನೆಗಳು.

ಅಬ್ಬಬ್ಬಾ... ಎಷ್ಟೆಲ್ಲಾ ಕೆಲಸಗಳನ್ನು ಮಾಡಬಲ್ಲ ಸಾಧ್ಯತೆ ಅವಕಾಶಗಳು ಇವೆಯಲ್ಲವೇ? ಈ ದಿಕ್ಕಿನಲ್ಲಿ ಸರ್ಕಾರ ಯೋಚಿಸಿದರೆ ಗತವೈಭವದ ನಕಲು ಸೃಷ್ಟಿ ಮಾಡೋಕೆ ಸುರಿದ/ ಸುರಿಯಲು ಮುಂದಾಗಿರುವ ನೂರಾರು ಕೋಟಿ ರೂಪಾಯಿ ಉಳಿಯುತ್ತೆ. ಜನರ ತೆರಿಗೆ ಹಣ ಸದ್ಬಳಕೆ ಆಗುತ್ತೆ. ರಾಜ್ಯ ಸರ್ಕಾರ ನಾಡಿಗೆ ಏನಾದ್ರೂ ಒಳ್ಳೇದು ಮಾಡಬೇಕು ಅಂತಾ ಪ್ರಾಮಾಣಿಕವಾಗಿ ಯೋಚಿಸಿದ್ದಲ್ಲಿ ಇನ್ನೊಂದು ನೂರಿನ್ನೂರು ಎಕರೆ ಭೂಮೀನಾ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಲಿ, ಕನ್ನಡದ ಜನರ ಬದುಕು ಕಟ್ಟಿಕೊಡಬಲ್ಲ ಮೇಲಿನ ಕೆಲಸಗಳಿಗಾಗಿ ಸರಿಯಾಗಿ ಅನುದಾನ ಕೊಡಲಿ, ಕನ್ನಡದ ಕೆಲಸಗಳಿಗಾಗಿ ಯೋಗ್ಯರಾದ ಸಮರ್ಥರಾದ ಸಿಬ್ಬಂದಿಯನ್ನು ನೇಮಿಸಲಿ, ಮಹಾಪಂಡಿತರನ್ನು ಹುಟ್ಟುಹಾಕಲು ಕಾರಣವಾಗಲಿ...

ಹಾಗಾದ್ರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಲ್ಲ ಈ ಪುನಶ್ಚೇತನ, ನಕಲು ನಿರ್ಮಾಣಗಳು, ಥೀಮ್ ಪಾರ್ಕುಗಳು ಬೇಡ್ವಾ ಅಂತೀರಾ? ಆ ಚರ್ಚೆ ಬೇರೆಯಾಗಿ ನಡೆಯಲಿ. ಆದರೆ ಆ ಯೋಜನೆಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಟ್ಟಿರೋ ಭೂಮೀನೇ ಬೇಕು ಅನ್ನೋ ಹಟಾ ಯಾಕೆ? ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡೋದಕ್ಕಾಗಿ ಕನ್ನಡದ ನುಡಿಗುಡಿಯ ಹೊನ್ನಗಂಟೆ ಕೀಳುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಕೈಬಿಡಲಿ.

4 ಅನಿಸಿಕೆಗಳು:

ನಂದನ್ ಅಂತಾರೆ...

ಸರಿಯಾಗಿ ಹೇಳುದ್ರಿ ಗುರುಗಳೇ. ನಮ್ಮ ಸರ್ಕಾರ ಇನ್ನು ೧೦೦-೨೦೦ ಎಕರೆ ಜಾಗ ಕೊಡಬೇಕೆ ಹೊರತು ಇರೋ ಜಾಗಾನ ಕಿತ್ಕೊಬಾರ್ದು. ನೀವು ತೋರಿಸಿ ಕೊಟ್ಟಿರೋ ೧೪ ಅಂಶಗಳನ್ನು ಸರ್ಕಾರ ತುಂಬಾ ಎಚ್ಚರಿಕೆ ಇಂದ ಹಾಗು ತುಂಬಾ ಮುತುವರ್ಜಿ ಇಂದ ಒತ್ತು ಕೊಡಲೇಬೇಕಾದ ಸಮಯ ಇದು.

ರಘು ಹಾರೋಹಳ್ಳಿ ಅಂತಾರೆ...

ಅಂತೂ, ಇಂತೂ ಬಿ.ಜೆ.ಪಿಗೆ ಕನ್ನಡಿಗರ ಶಕ್ತಿಯ ಅರಿವಾದಂಗಿದೆ. ಅದಕ್ಕೆ ತಾನೇ ಯಡಿಯೂರಪ್ಪನವರು ಪರಭಾರೆ ತೀರ್ಮಾನವನ್ನು ವಾಪಸ್ ತೆಗೆದುಕೊಂಡಿದ್ದು.
ಈ ಬಿ.ಜೆ.ಪಿಯವರಿಗೆ ಆದಷ್ಟು ಬೇಗ ಹಂಪಿನ ಕನ್ನಡ ಸಾಮ್ರಾಜ್ಯದಿಂದ ಭಾರತೀಯ ಸಾಮ್ರಾಜ್ಯ ಮಾಡೋ ತುರ್ತಿತ್ತು. ಎಲ್ಲ ಪಕ್ಷಗಳು, ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ಹಂಪಿ ವಿ.ವಿಯ ಅಧ್ಯಾಪಕರು, ಹೀಗೆ ಎಲ್ಲರ ಒತ್ತಡ ಬಂದ ಮೇಲೇನೆ ಇದು ನಿಂತಿದ್ದು.
ಕನ್ನಡ-ಕರ್ನಾಟಕಕ್ಕೆ ಇನ್ನೂ ಏನೇನು ಕಾದಿದೆಯೋ ಈ ನನ್ ಮಕ್ಕಳ ಕೈಯಲ್ಲಿ !

ತಿಳಿಗಣ್ಣ ಅಂತಾರೆ...

ನಮಗೆ ಜಿಲ್ಲೆಗೊಂದು ಉನಿವರಿಟಿ ಬೇಕಾ?

ಅಲ್ಲೇ ಹಂಪೆ ಪಕ್ಕ, ಕ್ರಿಶ್ಣದೇವರಾಯ ಉನಿವರಿಸಿಟಿ ತೆರೀತವರೆ. ಇರೋ ಉನಿವರಿಟಿಗೊಳಿಗೆ ದುಡ್ ಸಾಲ್ತಿಲ್ಲವಲ್ಲ.

ಪುಟ್ಟ PUTTA ಅಂತಾರೆ...

Everyone knows it is Reddy brothers' kutantra. They have no care for Kannada and its culture. You might remember, these Reddy brothers had organized World Telugu Meet in Bellary sometime ago.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails