ವಿಶ್ವ ಕನ್ನಡ ಸಮ್ಮೇಳನ ಮತ್ತು ಕನ್ನಡಿಗರ ಏಳಿಗೆ

ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಇನ್ನೇನು ಶುರುವಾಗಲಿದೆ. ಇದುನ್ನ ಯಾರು ಉದ್ಘಾಟನೆ ಮಾಡಬೇಕು ಅನ್ನೋ ವಿಷಯದಲ್ಲೇ ಕರ್ನಾಟಕದ ಜನರು ಕಳೆದು ಹೋಗಿದ್ದಾರೇನೋ ಅನ್ನಿಸುವಂತೆ ಚರ್ಚೆಗಳು ನಡೀತಾ ಇವೆ. ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಒಂದು ಜಾಹೀರಾತನ್ನು ಹೊರಡಿಸಿದೆ.

ಈ ಜಾಹೀರಾತಲ್ಲಿ ವಿಶ್ವ ಕನ್ನಡ ಸಮ್ಮೇಳನ ಯಾಕೆ? ಏನು? ಅಂತನ್ನೋದ್ರು ಬಗ್ಗೆ ನಮ್ಮ ಸರ್ಕಾರ ಏನಂದುಕೊಂಡಿದೆ ಅನ್ನೋದು ಕಾಣುತ್ತೆ. ಏಕೀಕರಣವಾಗಿ ಕರ್ನಾಟಕ ಐವತ್ತು ವರ್ಷ ಆಯ್ತು. ಈ 50 ವರ್ಷಗಳಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತಷ್ಟು ಪ್ರಜ್ವಲಿಸಿದೆಯಂತೆ. ಇದೀಗ ಕನ್ನಡ ಶಾಸ್ತ್ರೀಯ ಭಾಷೆಯಾಗಿದೆ (!). ಇದಕ್ಕೆಲ್ಲಾ ಕಾರಣ ಕನ್ನಡದ ಹಿರಿಯ ಪರಂಪರೆ ಮತ್ತು ಸಾಂಸ್ಕೃತಿಕ ಗರಿಮೆ. ಇಂತಹ ಗರಿಮೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಸಲುವಾಗಿಯೂ, ಕನ್ನಡತನದ ಮೇರುಸ್ಥಿತಿಗೆ ಕಾರನವಾದವರನ್ನು ಗೌರವಿಸುವ ಸಲುವಾಗಿಯೂ, ನಮ್ಮ ನಿನ್ನೆಯ ಹಾದಿಯನ್ನು ನೆನೆದು ಮುಂದಿನ ಹಾದಿಯನ್ನು ನಿಚ್ಚಳಗೊಳಿಸುವ ಸಲುವಾಗಿಯೂ ಈ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲಾಗುತ್ತಿದೆಯೆಂದು ರಾಜ್ಯಸರ್ಕಾರ ಹೇಳಿಕೊಳ್ಳುತ್ತಿದೆ.

ವಿಶ್ವ ಕನ್ನಡ ಸಮ್ಮೇಳನವೆಂದರೆ…

ಒಂದು ನಾಡಿನ ಜನರ ಕಲಿಕೆ, ದುಡಿಮೆಗಳು ಆ ನಾಡಿನ ಏಳಿಗೆಗೆ ಸಾಧನಗಳಾಗುತ್ತವೆ ಎಂಬುದು ಜಗತ್ತು ಕಂಡುಕೊಂಡಿರುವ ಸತ್ಯ. ನಾಡಿನ ಜನರ ನಡುವೆ ಇರುವ ಸಹಕಾರದ ಒಗ್ಗಟ್ಟು, ಸಾಧಿಸಬೇಕೆಂಬ ಛಲಗಳೂ ಕೂಡಾ ನಾಡಿನ ಏಳಿಗೆಯ ದಿಕ್ಕಿನೆಡೆ ಒಯ್ಯುವ ಪ್ರಮುಖವಾದ ಸಾಧನಗಳಾಗಿವೆ. ಅಂದರೆ ಈ ನಾಲ್ಕು ವಿಷಯಗಳೇ ಯಾವುದೇ ನಾಡಿನ ಏಳಿಗೆಗೆ ಆಧಾರಸ್ತಂಭಗಳಾಗಿವೆ ಎಂದರೆ ತಪ್ಪಾಗಲಾರದು. ಈ ನಾಲ್ಕೂ ಆಧಾರ ಸ್ತಂಭಗಳಲ್ಲಿ ಹಾಸುಹೊಕ್ಕಾಗಿರುವುದು ಆ ನಾಡಜನರ ತಾಯ್ನುಡಿ. ಅಂದರೆ ಪ್ರತ್ಹಿಯ್ಗೊಂದ್ಗು ಸಮಾಜದ ಏಳಿಗೆಯಲ್ಲೂ ಆ ಸಮಾಜದ ತಾಯ್ನುಡಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಕನ್ನಡ ಎನ್ನುವುದು ನಮಗೆ ಮಹತ್ವದ್ದಾಗಿದೆ. ಈ ಕಾರಣದಿಂದಲೇ ವಿಶ್ವ ಕನ್ನಡ ಸಮ್ಮೇಳನವೆನ್ನುವುದು ಈ ನಾಲ್ಕೂ ಕಂಬಗಳನ್ನು ಬಲಪಡಿಸುವ ಸಾಧನವಾಗಬೇಕಾಗಿದೆ.

ಕನ್ನಡಿಗರಲ್ಲಿ ಒಗ್ಗಟ್ಟು…

ವಿಶ್ವ ಕನ್ನಡ ಸಮ್ಮೇಳನ ಅಂದಾಕ್ಷಣ ಅದು ಕನ್ನಡ ನುಡಿಹಬ್ಬವೆಂದಾಗಲೀ, ಸಾಹಿತ್ಯ ಸಮ್ಮೇಳನದಂತೆ ಎಂದಾಗಲೀ, ಕನ್ನಡಿಗರ ಇತಿಹಾಸ, ಸಂಸ್ಕೃತಿ, ಹಿರಿಮೆಗಳ ವಸ್ತುಪ್ರದರ್ಶನವಾಗಲೀ ಮಾತ್ರವಲ್ಲ. ವಿಶ್ವ ಕನ್ನಡ ಸಮ್ಮೇಳನವೆಂಬುದು ಸರಿಯಾಗಿ ಬಳಸಿಕೊಂಡರೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಒಂದು ಅತ್ಯುತ್ತಮ ಸಾಧನ ಆಗಲಿದೆ. ಇಂತಹ ಸಮ್ಮೇಳನವನ್ನು ಕರ್ನಾಟಕದ ಜನರ ಪ್ರತಿನಿಧಿಯಾದ ನಮ್ಮ ರಾಜ್ಯ ಸರ್ಕಾರವೇ ನಡೆಸುತ್ತಿರುವುದು ಅತ್ಯಂತ ಸರಿಯಾದುದಾಗಿದೆ. ಇದು ನಾಲ್ಕು ಕಂಬಗಳಲ್ಲಿ ಒಗ್ಗಟ್ಟೆಂಬ ಕಂಬವನ್ನು ಬಲಪಡಿಸುವ ಕಡೆಗೊಂದು ಹೆಜ್ಜೆಯನ್ನು ಇಟ್ಟಂತಾಗಿದೆ ಎನ್ನಬಹುದು. ಇನ್ನು ಉಳಿದ ಮೂರು ಕಂಬಗಳನ್ನು ಬಲಪಡಿಸುವುದು… ಈ ಸಮ್ಮೇಳನವನ್ನು ಹೇಗೆ ನಡೆಸುತ್ತಾರೆ? ಏನೇನು ಕಾರ್ಯಕ್ರಮ ಮಾಡುತ್ತಾರೆ? ಯಾವ ಸಂದೇಶ ಕೊಡುತ್ತಾರೆ? ಯಾವ ತೆರನಾದ ಚಿಂತನೆ ಅಲ್ಲಿ ನಡೆಸುತ್ತಾರೆ? ಅಸಲಿಗೆ ಅಲ್ಲಿ ಚಿಂತನೆಯನ್ನು ನಡೆಸುತ್ತಾರಾ? ಎಂಬುದರ ಮೇಲೆ ಅವಲಂಬಿಸಿದೆ.

ಕನ್ನಡಿಗರ ಕಲಿಕೆ…

ಪ್ರಪಂಚದಲ್ಲಿ ಮುಂದುವರೆದಿರೋ ದೇಶಗಳಲ್ಲೆಲ್ಲಾ ಕಲಿಕೆ ತಾಯ್ನುಡಿಯಲ್ಲೇ ಆಗುತ್ತಿರುವುದನ್ನು ನಾವು ಇಂಗ್ಲೇಂಡ್, ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳನ್ನು ನೋಡುವ ಮೂಲಕವೂ, ವಿಜ್ಞಾನಿಗಳ ಅಧ್ಯಯನ ಹಾಗೂ ಮಾತುಗಳನ್ನು ನಂಬುವ ಮೂಲಕವೂ ಅರಿಯಬಹುದಾಗಿದೆ. ಹಾಗಾಗಿ ಕನ್ನಡಿಗರು ಏಳಿಗೆ ಹೊಂದಲು, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ಕನ್ನಡದಲ್ಲಿಯೇ ಕಲಿಕೆ ಮಾಡಬೇಕಾಗಿದೆ. ಹಾಗೆಂದಾಕ್ಷಣ, ನಾಳೆಯಿಂದ ಕರ್ನಾಟಕದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುತ್ತೇವೆ ಎನ್ನುವುದು ದುಡುಕಿನ ಮಾತಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳ ಅರಿವು, ಕಲಿಕೆಯ ಮಟ್ಟ ಹೆಚ್ಚಿ ಜಗತ್ತಿನ ಅತ್ಯುತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬಂತಹ ವಾತಾವರಣವನ್ನು ಹುಟ್ಟುಹಾಕಬೇಕಾಗಿದೆ. ಹಾಗಾಗ ಬೇಕೆಂದರೆ ಮೊದಲನೆಯದಾಗಿ ಇಂದು ನಾವು ಕಲಿಕೆಯಲ್ಲಿ ಬಳಸುತ್ತಿರುವುದು ಸರಿಯಾದ ಕನ್ನಡವೇ? ಈಗಿನ ನಮ್ಮ ನುಡಿಯು ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಯಾಗಬಲ್ಲ ಸಾಮರ್ಥ್ಯ ಹೊಂದಿದೆಯೇ? ಅಂತಹ ಕ್ಷೆತ್ರಗಲಾವುವು? ಅಂತಹ ಸಾನರ್ಥ್ಯ ಗಳಿಸಿಕೊಡುವುದು ಹೇಗೆ? ಕನ್ನಡದ ವ್ಯಾಕರಣ ಎಂಥದು? ಕನ್ನಡದಲ್ಲಿ ಪದಗಳನ್ನು ಹುಟ್ಟುಹಾಕುವುದು ಹೇಗೆ? ಹಾಗೆ ಹುಟ್ಟು ಹಾಕಲಾಗುವ ಪದಗಳನ್ನು ಕಲಿಕೆಯಲ್ಲಿ ತರುವುದು ಹೇಗೆ? ಇತ್ಯಾದಿಗಳ ಚಿಂತನೆಗೆ ಹಚ್ಚಬಲ್ಲಂತಹ ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವಾಗಬೇಕಾಗಿದೆ. ನಾಡಿನ ಈಗಿನ ಕಲಿಕಾ ಪದ್ದತಿಯಲ್ಲಿ ಸುಧಾರಣೆ ತರುವ ಜೊತೆಜೊತೆಯಲ್ಲೇ, ಎಲ್ಲಾ ಹಂತದ ಕಲಿಕೆಯನ್ನೂ ಕನ್ನಡಕ್ಕೆ ತರುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಕನ್ನಡ ಶಾಲೆಗಳ ಗುಣಮಟ್ಟದ ಜೊತೆಯಲ್ಲೇ ಕಲಿಕಾ ಪದ್ಧತಿಯ, ಕಲಿಯುವ ವಿಷಯಗಳ ಗುಣಮಟ್ಟವನ್ನೂ ಹೆಚ್ಚಿಸುವುದು ಹೇಗೆ? ಎಂಬುದಕ್ಕೆ ಪ್ರಪಂಚದ ಬೇರೆ ಬೇರೆ ಯಶಸ್ವಿ ಸಮಾಜಗಳ ಪದ್ಧತಿಯನ್ನು ಅಧ್ಯಯನ ಮಾಡಬೇಕಾಗಿದೆ, ಅಲ್ಲಿನ ಒಳಿತನ್ನು ಅಳವಡಿಸಿ ನಮ್ಮ ನಾಡಿಗೆ ಹೊಂದಿಕೆಯಾಗುವ ಕಲಿಕಾ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ಇದಾಗದ ಹೊರತು ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲ ಕನ್ನಡಿಗರ ಸಂಖ್ಯೆ ಹೆಚ್ಚುವುದು ಬಲು ಕಷ್ಟದ್ದಾಗಿದೆ.

ಕನ್ನಡಿಗರ ದುಡಿಮೆ…

ಕಲಿಕೆಯ ತಳಪಾಯವನ್ನು ಸರಿಪಡಿಸುವುದು ದುಡಿಮೆಯನ್ನು ಹೆಚ್ಚಿಸುವ ಒಂದು ಸಾಧನವಾಗಿದೆ. ಇದರ ಜೊತೆಗೆ ಸರ್ಕಾರ ತಾನು ಹೊಂದಿರುವ ಹಲವಾರು ನೀತಿಗಳನ್ನು ಮರು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನರಲ್ಲಿ ದುಡಿಯಬೇಕೆನ್ನುವ ಸಂಸ್ಕೃತಿಯನ್ನೇ ಕೊಂದುಹಾಕುವ ಯೋಜನೆಗಳನ್ನು ಕೈಬಿಡಬೇಕಾಗಿದೆ. ಸಬ್ಸಿಡಿಯೆನ್ನುವುದು ದುಡಿಮೆಗೆ ಉತ್ತೇಜಿಸುತ್ತಿದೆಯೋ ಅಥವಾ ಜನರನ್ನು ಸೋಮಾರಿಗಳಾಗಿ ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಸರ್ಕಾರದ ಯೋಜನೆಗಳಿಂದಾಗಿ ಪ್ರತಿಯೊಂದನ್ನು ಸರ್ಕಾರವೇ ಪುಗಸಟ್ಟೆ ಕೊಡಲಿ ಎಂಬ ಮನಸ್ಥಿತಿಯನ್ನು ನಮ್ಮ ಜನರಲ್ಲಿ ಹುಟ್ಟು ಹಾಕದಂತೆ ಎಚ್ಚರ ವಹಿಸಬೇಕಾಗಿದೆ.
ಚೆನ್ನಾಗಿ ದುಡಿದರೆ ಚೆನ್ನಾಗಿ ಸಂಪಾದಿಸಬಹುದು ಎನ್ನುವುದನ್ನು ಜನಕ್ಕೆ ಮನವರಿಕೆ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸುವಂತಹ ನ್ತೀತಿ ನಮ್ಮ ಸರ್ಕಾರದ್ದಾಗಬೇಕಾಗಿದೆ. ವೃತ್ತಿ ಕೌಶಲ್ಯ ಹೆಚ್ಚಿಸುವ, ದುಡಿಮೆಯನ್ನು ಉತ್ತೇಜಿಸುವ, ಉದ್ಯಮಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ, ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವಂತಹ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಯಾವ ಕ್ಷೇತ್ರದಲ್ಲಿ ಇಂದು ಕನ್ನಡಿಗರು ಹಿಂದುಳಿದಿದ್ದಾರೋ ಅಂಥಾ ಕ್ಷೇತ್ರಗಳನ್ನು ಗುರುತಿಸಿ, ಹೊರನಾಡಿನ ಪರಿಣಿತರ ಸಹಾಯ/ ಸೇವೆ ಪಡೆದು ಅಂತಹ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯವಿರುವ ವಾತಾವರಣ/ ವ್ಯವಸ್ಥೆಯನ್ನು ಕಟ್ಟಬೇಕಾಗುತ್ತದೆ. ಕನ್ನಡಿಗರು ಪ್ರಪಂಚದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ, ಇಡೀ ವಿಶ್ವಕ್ಕೇ ಅವನ್ನು ಮಾರಬಲ್ಲಂತಹ ಕ್ಷಮತೆ, ಯೋಗ್ಯತೆಗಳನ್ನು ಗಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಯೋಚಿಸಿ, ತಕ್ಕಂಥಾ ಯೋಜನೆಗಳನ್ನು ರೂಪಿಸಬೇಕಾಗಿದೆ.

ಕನ್ನಡಿಗರಲ್ಲಿ ಸಾಧಿಸುವ ಛಲ…

ಸಾಧಕರನ್ನು ಕಂಡು ಇಂತಹ ಸಾಧನೆಗಳನ್ನು ನಾವೂ ಮಾಡಬೇಕು ಎನ್ನುವ ಛಲವನ್ನು ಪ್ರತಿಯೊಂದು ಕನ್ನಡದ ಮನಸ್ಸಿನಲ್ಲಿ ಹುಟ್ಟುಹಾಕಲು ಏನು ಮಾಡಬೇಕು? ಈ ವಿಷಯವಾಗಿ ನಮ್ಮ ಇತಿಹಾಸದಿಂದ ಹೇಗೆ ಪ್ರೇರಣೆ ಪಡೆಯಬೇಕು? ನಮ್ಮ ಹಿಂದಿನವರ ಸೋಲುಗಳಿಂದ ಏನು ಕಲಿಯಬೇಕು? ಇಂದಿನ ನಮ್ಮ ಸಾಧಕರ ಅನುಭವದ ಲಾಭ ಮುಂದಿನ ಜನಾಂಗಕ್ಕೆ ತಲುಪಿಸುವ ಬಗೆ ಎಂತು? ನಮಗೂ ಗೆಲ್ಲುವ ಯೋಗ್ಯತೆಯಿದೆ, ಜಗತ್ತಿನ ಯಾವ ಮುಂದುವರೆದ ನಾಡಿಗೂ ನಾವು ಕಡಿಮೆಯಿರಬಾರದು ಎನ್ನುವ ಛಲ ಹುಟ್ಟು ಹಾಕುವುದು ಹೇಗೆ? ಎಂಬುದರ ಬಗ್ಗೆ ಚಿಂತನೆ ಯೋಜನೆಯಾಗಬೇಕಾಗಿದೆ.
ವ್ಯರ್ಥವಾಗದಿರಲಿ ವಿಶ್ವ ಕನ್ನಡ ಸಮ್ಮೇಳನ

ಹೌದೂ, ವಿಶ್ವಕನ್ನಡ ಸಮ್ಮೇಳನವೆನ್ನುವುದು ಕನ್ನಡಿಗರ ನಿನ್ನೆಗಳ ಬಗ್ಗೆ ಗಮನ ಹರಿಸುವುದಕ್ಕಿಂತಲೂ ಹೆಚ್ಚಾಗಿ ನಾಳೆಗಳನ್ನು ಹಸನುಗೊಳಿಸುವ ಬಗ್ಗೆ ಚಿಂತನೆಗೆ ಹಚ್ಚುವಂತಾಗಲಿ. ಕನ್ನಡಿಗರು ವಿಶ್ವದ ಮುಂದುವರೆದ ನಾಡುಗಳ ಸಮಸಮನಾಗಿ ನಿಲ್ಲುವಂತಾಗಲು ಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತಾಗಲೀ. ಸಮ್ಮೇಳನದಲ್ಲಿ ತೋರಿಸುವ ಇತಿಹಾಸ, ಸಂಸ್ಕೃತಿಗಳು ನಮ್ಮ ಮೈಮನಗಳಲ್ಲಿ ಹೆಮ್ಮೆ, ಸ್ಪೂರ್ತಿಗಳನ್ನು ಹುಟ್ಟುಹಾಕಲಿ. ಸಾಧಕರ ಮಾತುಗಳು ಮತ್ತಷ್ಟು ಸಾಧಕರನ್ನು ಹುಟ್ಟುಹಾಕುವಂತಿರಲಿ. ಕರ್ನಾಟಕ ರಾಜ್ಯ ಸರ್ಕಾರ ಬೊಕ್ಕಸದಿಂದ ವೆಚ್ಚ ಮಾಡುತ್ತಿರುವ ಪ್ರತಿಯೊಂದು ಪೈಸೆಯೂ ನಾಡಿನ ನಾಳಿನ ಏಳಿಗೆಗೆ ಹೂಡಿದ ಬಂಡವಾಳವಾಗಲಿ. ಕನ್ನಡಿಗರ ಸಂಸ್ಕೃತಿಯೆಂಬುದು ‘ಇತಿಹಾಸದ ಸವಿಯ ಮೆಲುಕು ಹಾಕುವಿಕೆ’ ಮಾತ್ರವಾಗದಿರಲಿ. ಇಡೀ ಸಮ್ಮೇಳನದ ಕಾರ್ಯಕ್ರಮಗಳು ವ್ಯರ್ಥವಾದ ವೈಭವೀಕರಣವಾಗಿರದೆ ಅರ್ಥಪೂರ್ಣವಾಗಿರಲಿ. ವಾಸ್ತವವಾಗಿ ನಾವಿರುವ ಹಂತ, ಸಾಗಬೇಕಾದ ದಾರಿ, ಎದುರಿಸಬೇಕಾದ ಎಡರು ತೊಡರುಗಳು, ಅವನ್ನು ದಾಟಿದ ನಂತರ ದಕ್ಕಿಸಿಕೊಳ್ಳುವ ಭವ್ಯವಾದ ನಾಳೆಗಳತ್ತ ಕನ್ನಡಿಗರನ್ನು ಕೊಂಡೊಯ್ಯುವಂತಿರಲಿ. ಹೌದಲ್ವಾ ಗುರೂ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails