ಸುರಕ್ಷತಾ ಸಪ್ತಾಹದ ಸಂದೇಶ ಯಾರಿಗಾಗಿ?


ಭಾರತದಲ್ಲಿ ಮಾರ್ಚ್ 4ನೇ ತಾರೀಕನ್ನು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇದೇ ದಿವಸ ನಲವತ್ತು ವರ್ಷಗಳ ಹಿಂದೆ ರಾಷ್ಟ್ರೀಯ ಸುರಕ್ಷತಾ ಸಂಸ್ಥೆಯನ್ನು ಆರಂಭಿಸಿದ ನೆನಪಿಗಾಗಿ ಈ ದಿನದ ಆಚರಣೆ. ನಮ್ಮ ರಾಜ್ಯ ಸರ್ಕಾರವೂ ಮಾರ್ಚ್ 4ರಿಂದ ಒಂದುವಾರ ಸುರಕ್ಷತಾ ಸಪ್ತಾಹವೆಂಬುದಾಗಿ ಆಚರಿಸುತ್ತದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲೂ ಸುರಕ್ಷತೆಯ ಬಗ್ಗೆ ಎಚ್ಚರ ಮೂಡಿಸುವಂತಹ ಬ್ಯಾನರ್ರುಗಳನ್ನು ಎದ್ದುಕಾಣುವಂತೆ ಹಾಕಿರುತ್ತಾರೆ.

ಕನ್ನಡ ಲಿಪಿಯಲ್ಲಿದ್ದೂ ಅರ್ಥವಾಗದ ಬ್ಯಾನರ್ರು...


ಕರ್ನಾಟಕ ಸರ್ಕಾರವು ಈ ಸುರಕ್ಷತಾ ವಾರವನ್ನು "ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ"ಯ ವತಿಯಿಂದ ಇಡೀ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲಿ ಆಚರಿಸುತ್ತದೆ. ಪ್ರತಿವರ್ಷ ಒಂದೊಂದು ಘೋಷವಾಕ್ಯವನ್ನು ಇದು ಹೊಂದಿರುತ್ತದೆ. ಈ ಬಾರಿಯ ಘೋಷವಾಕ್ಯವನ್ನು ನೋಡಿ...

"ನಿವಾರಣಾತ್ಮಕ ಸುರಕ್ಷೆ ಮತ್ತು ಆರೋಗ್ಯ ಸಂಸ್ಕೃತಿಯ ಸುಸ್ಥಾಪನೆ ಮತ್ತು ನಿರ್ವಹಣೆ"

ಏನಾದ್ರೂ ಅರ್ಥವಾಯ್ತಾ? ಹೀಗಂದ್ರೇನು ಅನ್ನೋದು ಯಾವುದಾದ್ರೂ ಸಂಸ್ಕೃತ ಪಂಡಿತರಿಗೆ ಅರ್ಥವಾದೀತೋ ಏನೋ, ಕನ್ನಡಿಗರಿಗಂತೂ ಕಬ್ಬಿಣದ ಕಡಲೆಯೇ. ಹೀಗೆ ಬರೆದಿರೋರೂ ಕೂಡಾ ತಾವಾಗೇ ಬುದ್ಧಿ ಉಪಯೋಗಿಸಿ ಇದುನ್ನ ಬರೆದಿಲ್ಲ. ಭಾರತ ಸರ್ಕಾರ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಈ ಬಾರಿಯ ಘೋಷವಾಕ್ಯ ಅಂತಾ ಕೊಟ್ಟಿರೋದನ್ನು ಕನ್ನಡದಲ್ಲಿ ತರ್ಜುಮೆ ಮಾಡಿದೀವಿ ಅಂತಾ ಅಂದ್ಕೊಂಡು ಬರೆದಿದ್ದಾರೆ ಅನ್ಸುತ್ತೆ. ಇದೋ ನೋಡಿ ಮೂಲ ಸಂದೇಶ :
ಹೀಗೆ preventative safety ಅನ್ನೋದನ್ನು ನಿವಾರಣಾತ್ಮಕ ಸುರಕ್ಷೆ ಅಂತಾ ತರ್ಜುಮೆ ಮಾಡಿದ್ದಾರೆ, establish ಅನ್ನೋದನ್ನು ಸುಸ್ಥಾಪನೆ ಅಂತಾ ಮಾಡಿದ್ದಾರೆ. ಅದುನ್ನೆಲ್ಲಾ ಹೇಗಾದ್ರೂ ಸಹಿಸ್ಕೋಬೌದೇನೋ ಗುರೂ... ಕೆಳಗಡೆ ಬರೆದಿರೋ ಸ್ಲೋಗನ್ ನೋಡುದ್ರೆ ನಗಬೇಕೋ ಅಳಬೇಕೋ ಗೊತಾಗ್ತಿಲ್ಲಾ.

"ಅಪಘಾತ ಆಗುವುದಿಲ್ಲ, ಆದರೆ ಸಂಭವಿಸುತ್ತದೆ"

ಹೀಗಂದ್ರೇನು ಅಂತಾ ಬಡಪಾಯಿ ಕನ್ನಡದೋರಿಗೆ ಅರ್ಥವಾಗೋದು ಕಾಣೆ. ಇದು Accident do not happen, Accident is caused ಅನ್ನೋದ್ರ ಕನ್ನಡ ರೂಪ. ಆಗುವುದಕ್ಕೂ ಸಂಭವಿಸೋಕ್ಕೂ ಏನು ವ್ಯತ್ಯಾಸ ಗೊತ್ತಾಗಲ್ಲ. ಇದ್ಯಾಕೆ ಹೀಗೆ ಕರ್ನಾಟಕ ಸರ್ಕಾರದವರು ಬರೆಸಿದ್ದಾರೆ ಅಂತಾ ನಾವು ಯೋಚಿಸಿದರೆ ಈ ಬರಹಗಳನ್ನು ಸಿದ್ಧಪಡಿಸಿದವರಿಗೆ ಸಂಸ್ಕೃತದ ಪದಗಳ ಬಳಕೆ ಬಗ್ಗೆ ಇರೋ ವ್ಯಾಮೋಹ ಎಷ್ಟು ಅಂತಾ ತಿಳಿಯುತ್ತೆ. ಸಾಮಾನ್ಯ ಜನಕ್ಕೆ ಅರ್ಥವಾಗದಿದ್ದರೂ ಸರಿ, ತರ್ಜುಮೆ ಮಾಡಿಬಿಡಬೇಕು ಅನ್ನೋ ತುಡಿತ ಇರೋದು ಕಾಣುತ್ತೆ. ಬೇಕಾ? ಇದು ನಮಗೆ ಬೇಕಾ? ಹಲವಾರು ಸಾಮಾನ್ಯ ಕನ್ನಡಿಗರಲ್ಲಿ ಈಗಾಗಲೇ ಬೇರೂರಿರೋ ಕನ್ನಡದ ಬಳಕೆ ಬಗ್ಗೆ ಇರುವ ಕೀಳರಿಮೆ ರೋಗಕ್ಕೆ ಸರ್ಕಾರವೂ ನೀರೆರೆಯೋದು ಸರೀನಾ? ಗುರೂ...

6 ಅನಿಸಿಕೆಗಳು:

Anonymous ಅಂತಾರೆ...

ನಮಸ್ಕಾರ ಆನಂದ್,

ಕನ್ನಡದಲ್ಲಿ ಚೆನ್ನಾಗಿ ಅರ್ಥವಾಗುವ ಹಾಗೆ ಈ ಬ್ಯಾನರನ್ನು ಹೇಗೆ ರೂಪಿಸಬಹುದಿತ್ತು ಎಂಬುದರ ಬಗ್ಗೆಯೂ ಬರೆಯಿರಿ. ಕನ್ನಡ ನುಡಿಗೆ ಸಂಬಂಧಿಸಿದಂತೆ ಬನವಾಸಿ ಬಳಗದಲ್ಲಿ ಒಂದು ಸಬ್ ಕಮಿಟಿ ಮಾಡಿದರೆ ಒಳ್ಳೆಯದು.

-ವಾಸು

Anonymous ಅಂತಾರೆ...

ವಾಸು ಅವರೇ,

ಹೀಗೆನ್ನಬಹುದೇ?

1. ಗುರಿ : ಮುನ್ನೆಚ್ಚರದ ಸುರಕ್ಷತೆ ಮತ್ತು ಆರೋಗ್ಯ ವ್ಯವಸ್ಥೆಯ ಕಟ್ಟುವಿಕೆ ಮತ್ತು ಪಾಲನೆ
ಅಥವಾ
ಗುರಿ :ಮುನ್ನೆಚ್ಚರದ ನಲ್‍ಕಾಪು ಮತ್ತು ಮಯ್ಯೊಳಿತು ಏರ್ಪಾಟಿನ ನೆಲೆಗೊಳಿಸುವಿಕೆ ಮತ್ತು ಪಾಲನೆ

2.ಅಪಘಾತ ತಾನಾಗೇ ಆಗುವುದಿಲ್ಲ, ಅರಿವಿಲ್ಲದೆ ಆಗಿಸುತ್ತೇವೆ.

Anonymous ಅಂತಾರೆ...

ಗುರುಗಳೇ,
>>
ಇದು Accident do not happen, Accident is caused ಅನ್ನೋದ್ರ ಕನ್ನಡ ರೂಪ. ಆಗುವುದಕ್ಕೂ ಸಂಭವಿಸೋಕ್ಕೂ ಏನು ವ್ಯತ್ಯಾಸ ಗೊತ್ತಾಗಲ್ಲ.
<<
ಇದು ತಪ್ಪು, ಅರ್ಥವಾಗಲ್ಲ ಅನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಸರಿಯಾದದ್ದು ಏನು ಎಂದು ನೀವು ತಿಳಿಸಬೇಡವೆ? ಸರಿಯಾದ ಅನುವಾದವನ್ನು ಮೊದಲು ತಿಳಿಸಿ. ಆಮೇಲೆ ಬೇರೆಯವರ ಬಗ್ಗೆ ಟೀಕೆ ಮಾಡಿ.
-ಕಲ್ಯಾಣ್

Anonymous ಅಂತಾರೆ...

Mr. kalyan,

What you intend to tell as "wrong" is not clear.
Do you mean to say that the difference between "aaguttade" and "sambhavisuttade" can be understood by kannadigas. Your next statement says "difficult to understand". That is what enguru is telling. Is it not? correct translation - kannada version is already available in the comment section.

If that is not correct, contribute to improve it.

sundar

PARAANJAPE K.N. ಅಂತಾರೆ...

ಅಪಘಾತಗಳು ತಾನಾಗಿಯೇ ಉ೦ಟಾಗುವುದಿಲ್ಲ - ನಮ್ಮ ಅಜಾಗರೂಕತೆಯಿ೦ದ ಘಟಿಸುತ್ತವೆ
ಹೀಗೆ೦ದು ಹೇಳಬಹುದು. ಇದು ನನ್ನ ಅನಿಸಿಕೆ. ಅಭಿಪ್ರಾಯಿಸಿ ಸ್ವಾಮಿ

ಮಾಯ್ಸ ಅಂತಾರೆ...

ಆಗೋದು ಅಂದರೂ ಒಂದೇ ಸಂಸ್ಕೃತದಲ್ಲಿ ಸಂಭವಿಸು, ಘಟಿಸು ಎಂದರೂ ಒಂದೇ!
ಅಭಿಪ್ರಾಯಿಸಿ ಅನ್ನೋದು ತಪ್ಪು! ಯಾಕೆ ಅಂತ ಬಿಡಿಸಿ ಹೇಳೋದು ಉದ್ದವಾಗುತ್ತೆ.

ಕನ್ನಡದಲ್ಲಿ ತೀರಾ ಸಲೀಸಾಗಿ ಹೇಳಬಹುದು.

"ಕೆಡುಕು/ಕತ್ತುಗಳು ತಾನೇ ತಾನಾಗಿ ಆಗುವುದಿಲ್ಲ. ಎಚ್ಚರಗೇಡುವುದರಿಂದ ಆಗುವುವು"
"ಎಚ್ಚರಗೆಟ್ಟು ಕುತ್ತಿಗೆ ತುತ್ತಾಗಬೇಡಿ"
"ಎಚ್ಚರಗೆಟ್ಟವರಿಗೆ ಕುತ್ತು"

"ಕುತ್ತು ಕಾದೀತು ಎಚ್ಚರ"!

"ಅಜಾಗರೂಕತೆ" ಸಂಸ್ಕೃತ, ಎಚ್ಚರಗೆಡು ಕನ್ನಡ ಹಾಗು ಸಲೀಸು!

ಆಯ್ತಲ್ಲ. ಇನ್ನೂ ಸಲೀಸು!

ಇನ್ನೂ..

"ಕತ್ತು ತಡೆತ ಹಾಗು ಹದುಳ ಉಳಿತ" = Establish preventive safety and health culture.

ಹಾಗ್ ಹಾಗೇ ಪದ ಪದ ನುಡಿಮಾರ್ಪು ಇಂಡೋ-ಆರ್ಯನ್ ನುಡಿಗಳಿಂದ ಕನ್ನಡಕ್ಕೆ(ದ್ರಾವಿಡ)ನುಡಿಗೆ ಮಾಡಬಾರದು. ಹುರುಳು ಅರಿತು ಮಾಡಬೇಕು

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails