ಹೊಸಗನ್ನಡದ ಬೆಳವಣಿಗೆಗೆ ಹಳೆಗನ್ನಡದ ಕಲಿಕೆ ಬೇಕು

ಇತ್ತೀಚೆಗೆ ಬೆಂಗ್ಳೂರಿನ ಗೋಖಲೆ ಸಂಸ್ಥೇಲಿ ನಡೆದ ಹಳೆಗನ್ನಡ ಕಾವ್ಯ ಶಿಬಿರದಲ್ಲಿ ಹಳೆಗನ್ನಡ ಮತ್ತೆ ಕಲೀಬೇಕು ಅನ್ನೋ ಕರೆ ನೀಡಲಾಯ್ತು ಅಂತ 15ನೇ ಅಕ್ಟೋಬರಿನ ವಿ.ಕ ಪತ್ರಿಕೆ ವರದಿ ಮಾಡಿದೆ. ಕನ್ನಡದ ಪದಸಿರಿ ಬೆಳೀಬೇಕಾದ್ರೆ, ಕನ್ನಡಕ್ಕೆ ಸರಿಯಾದ ವ್ಯಾಕರಣ ಬರೀಬೇಕಾದ್ರೆ, ಕನ್ನಡದ ಹುಟ್ಟಿನ ನಿಜ ಏನು ತಿಳ್ಕೋಬೇಕದ್ರೆ ಹಳೆಗನ್ನಡಾನ ಆಳವಾಗಿ ಅಧ್ಯಯನ ಮಾಡದೆ ಸಾಧ್ಯವೇ ಇಲ್ಲ ಗುರು!

ಹಳೆಗನ್ನಡ ಹೊಸಗನ್ನಡಕ್ಕೆ "ಹೊಸ" ಪದಗಳ ಮೂಲ

ಇವತ್ತಿನ ದಿನ ಕನ್ನಡಕ್ಕೆ ಹೊಸ ಪದಗಳ್ನ ಸೇರ್ಸೋವಾಗ ಕನ್ನಡಿಗನ ಬಾಯಲ್ಲಿ ಹೊರಡಲಿ ಬಿಡಲಿ ಸಂಸ್ಕೃತದಿಂದ ಪದಗಳ್ನ ತಂದು ತುರುಕೋ ಗುಂಗಿಗೆ ನಾವು ಬಿದ್ದಿದೀವಿ. ಇದು ಬಿಟ್ಟು ಹಳೆಗನ್ನಡದಿಂದ ಎಷ್ಟೋ ಪದಗಳ್ನ ಮತ್ತೆ ಚಾಲ್ತಿಗೆ ತರಬೋದು ಗುರು! ಹೊಸ ಪದಗಳ್ನ ಹುಟ್ಟಿಸುವಾಗ ಬೇರೆ ಭಾಷೆಗಳಲ್ಲಿರೋ ಒಂದು ಪದಕ್ಕೆ ಕನ್ನಡದಲ್ಲೂ ಒಂದೇ ಪದ ಹುಡುಕೋರಿಗೆ ಹಳೆಗನ್ನಡದ ಅಧ್ಯಯನ ಸಕ್ಕತ್ ನೆರವಾಗತ್ತೆ.

ಕನ್ನಡದ ವ್ಯಾಕರಣದ ರಿಪೇರಿಗೆ ಹಳೆಗನ್ನಡ

ನಮ್ಮ ಇಂದಿನ ಕನ್ನಡದ ವ್ಯಾಕರಣದಲ್ಲಿ ನಮ್ಮದಲ್ಲದ ವ್ಯಾಕರಣದ ಅಂಶಗಳು ತುಂಬಿಹೋಗಿ ವ್ಯಾಕರಣ ಅನ್ನೋದು ಒಂದು ಕಬ್ಬಿಣದ ಕಡಲೆ ಆಗೋಗಿದೆ. ಕನ್ನಡಕ್ಕೆ ಒಂದು ತನ್ನದೇ ಆದ ವ್ಯಾಕರಣ ಅನ್ನೋದು ಇವತ್ತಿಗೂ ಸರಿಯಾಗಿ ಇಲ್ಲ. ಇದಕ್ಕೆ ಮೂಲ ಕಾರಣ ಕನ್ನಡದ ವ್ಯಾಕರಣವನ್ನ ಸಂಸ್ಕೃತದ ಒಂದು ಉಪವ್ಯಾಕರಣ ಅಂತ ಪರಿಗಣಿಸಿರೋದು. ಇದು ಬಿಟ್ಟು ಕನ್ನಡದ ವ್ಯಾಕರಣ ಬರಿಯೋರು ಹಳೆಗನ್ನಡದ ಅಧ್ಯಯನ ಮಾಡಬೇಕು ಗುರು! ಉದಾಹರಣೆಗೆ ಕನ್ನಡದಲ್ಲಿ ಐದನೇ ವಿಭಕ್ತಿ ಪ್ರತ್ಯಯ ಇದೆ ಅಂತ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಹೇಳ್ಕೊಡ್ತಿರೋದು ಕನ್ನಡದ ಕೊಲೆ ಗುರು! ಕನ್ನಡಿಗನ ನಾಲಿಗೆಯಲ್ಲಿ ಇವತ್ತಿಗೂ ಮಹಾಪ್ರಾಣಗಳು ಮತ್ತು ಒಂದು ಅಕ್ಷರಕ್ಕೆ ಬೇರೆ ಒಂದು ಅಕ್ಷರ ಒತ್ತಕ್ಷರವಾಗಿ ಬರೋದು ಬಹಳ ಕಡಿಮೆ. ಹಳೆಗನ್ನಡ ಸ್ವಲ್ಪ ಕಲ್ತ್ರೆ ಇನ್ನು ಮುಂದೆ "ಔನು ಹಳ್ಳಿ ಗುಗ್ಗು, ಅವನ ಬಾಯಲ್ಲಿ ಮಹಾಪ್ರಾಣ ಹೊರಳಲ್ಲ" ಅನ್ನೋ ಮಾತು ನಮ್ಮ ಬಾಯಲ್ಲಿ ಬರಲ್ಲ ಗುರು! ನಿಜಕ್ಕೂ ತಲೆತಲಾಂತರದಿಂದ ನಮ್ಮ ಬಾಯಲ್ಲಿ ಮಹಾಪ್ರಾಣ ಹೊರಳಿಲ್ಲ! ಹಳೆಗನ್ನಡದಲ್ಲಿ ಪದಗಳ ಸ್ವರೂಪ ಅರ್ಥವಾಗೋದು ಇವತ್ತಿನ ದಿನ ಹೊಸ ಪದಗಳ್ನ ಹುಟ್ಟಿಸೋದಕ್ಕೆ ಬಹಳ ಮುಖ್ಯಾಮ್ಮಾ!

ಹಳೆಗನ್ನಡ ಕನ್ನಡ ಜನಾಂಗದ ಇತಿಹಾಸಕ್ಕೆ ಕನ್ನಡಿ

ಹಳೆಗನ್ನಡದಲ್ಲಿರೋ ಬರಹಗಳ್ನ ಸರಿಯಾಗಿ ಅಧ್ಯಯನ ಮಾಡಿದಾಗಲೇ ನಮ್ಮ ಭಾಷೆಯ ನಿಜವಾದ ಮೂಲದ ಬಗ್ಗೆ ಸರಿಯಾದ ಮಾಹಿತಿ ದೊರಕೋದು. ಸಂಸ್ಕೃತದಿಂದ ಎಲ್ಲಾ ಭಾಷೆಗಳು ಹುಟ್ಟಿವೆ, ಅದ್ರಲ್ಲಿ ಕನ್ನಡವೂ ಒಂದು ಅಂತೆಲ್ಲ ತಪ್ಪು ತಿಳುವಳಿಕೆ ಇವತ್ತು ಮಾರುಕಟ್ಟೆಯಲ್ಲಿರೋದಕ್ಕೆ ಕಾರಣವೇ ಹಳೆಗನ್ನಡದಿಂದ ಕನ್ನಡಿಗರು ದೂರ ಇರೋದು.

ಇದೇ ಕನ್ನಡ ಜನಾಂಗದ ಜನಜೀವನ ಕೆಲ ಶತಮಾನಗಳ ಹಿಂದೆ ಹೇಗಿತ್ತು ಅಂತ ತಿಳ್ಕೊಳೋಕ್ಕೆ ಬೇಕಾದ ವಸ್ತು ಹಳೆಗನ್ನಡದ ಹೊತ್ತಿಗೆಗಳಲ್ಲೇ ಇರೋದು. ಜನರ ಆರ್ಥಿಕ ಪರಿಸ್ಥಿತಿ, ಇತಿಹಾಸ ಇವೆಲ್ಲಾ ತಿಳ್ಕೊಳಕ್ಕೆ ಇಷ್ಟ ಪಡೋರಿಗೂ ಹಳೆಗನ್ನಡ ಬೇಕೇ ಬೇಕು. ನಮ್ಮ ಇತಿಹಾಸ ಸರಿಯಾಗಿ ತಿಳ್ಕೊಳೋದು ನಮಗೆ ತುಂಬ ಮುಖ್ಯ ಗುರು! ಅದನ್ನ ನಾವು ಸರಿಯಾಗಿ ತಿಳ್ಕೊಳ್ದೇ ಹೋದ್ರೆ ಇನ್ನ್ಯಾರೋ ಬಂದು ತಮ್ಗೆ ಬೇಕಾಗೋ ಹಾಗೆ ಇತಿಹಾಸನ ನಮ್ಗೇ ಹೇಳ್ಕೊಡಕ್ಕ್ ಶುರು ಹಚ್ಕೋಳ್ತಾರೆ ಗುರು! ನಮ್ಮ ನಿಜವಾದ ಇತಿಹಾಸ ತಿಳ್ಕೊಂಡ್ರೆನೇ ನಾವು ಯಾರು ಅನ್ನೋದು ಅರ್ಥ ಆಗೋದು ಗುರು!

ಇವೆಲ್ಲಾ ಯಾಕೆ? ನಮ್ಮ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ, ನಮ್ಮ ಲಿಪಿಯ ಬಗ್ಗೆ, ನಮ್ಮ ಪದಗಳ ಬಗ್ಗೆ, ನಮ್ಮ ವಿಶೇಷತೆಯ ಬಗ್ಗೆ ಒಂಚೂರು ಕುತೂಹಲ ನಿಮಗೆ ಇದ್ಯಾ? ಇದ್ದ್ರೆ ಹಳೆಗನ್ನಡದ ಅಧ್ಯಯನಕ್ಕೆ ಕೈ ಹಾಕು ಗುರು!

ಬಂಗಾರಪ್ಪನೋರು ಬಂಗಾರದಂಥಾ ಕೆಲಸ ಮಾಡಬೋದಿತ್ತು!

ಮೊನ್ನೆ ತಾನೆ ನಾಡಿನ ಮಾಜಿ ಮುಖ್ಯಮಂತ್ರಿಗಳಾದ ಸಾರೆಕೊಪ್ಪದ ಶ್ರೀ ಬಂಗಾರಪ್ಪನೋರು ಎಪ್ಪತ್ತೈದು ವರ್ಷ ಪೂರೈಸಿದ್ರು ಅಂತ ದೊಡ್ದ ಸಮಾರಂಭ ನಡೀತು. ಮಾನ್ಯ ಬಂಗಾರಪ್ಪನವರಿಗೆ ನಮ್ಮ ಅಭಿನಂದನೆಗಳು. ಎಲ್ಲಾ ಸರಿ, ಆದ್ರೆ ಔರು ತಮ್ಮದೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ನಮ್ಮ ನಾಡಿಗೆ ನಿಜವಾದ ನಾಯಕತ್ವ ಕೊಡೋ ಬದ್ಲು ಕೆಲಸಕ್ಕೆ ಬಾರದ, ನಾಡಿಗೆ ಒಂಚೂರೂ ಸಂಬಂಧವಿಲ್ಲದ ಸಮಾಜವಾದಿ ಪಕ್ಷಾನ ಸೇರಿರೋದು ಸರೀನಾ ಗುರು?

ಒಂದು ಕನ್ನಡಪರ ಪಕ್ಷ ಕಟ್ಟೋ ಶಕ್ತಿ ಬಂಗಾರಪ್ನೋರಿಗೆ ಇಲ್ವಾ?

ಬಂಗಾರಪ್ಪನೋರ ಹೋರಾಟದ ಬದುಕು, ಅವರ ಅಧಿಕಾರದ ದಿನಗಳ ಸಾಧನೆಗಳು, ಕಾವೇರಿ ನದಿ ನೀರು ಹಂಚಿಕೆಗೆ ವಿಷಯದಲ್ಲಿ ಅವರ ಸರ್ಕಾರ ತೊಗೊಂಡ ದಿಟ್ಟತನದ ನಿಲುವುಗಳು, ಹೊರಡಿಸಿದ ಸುಗ್ರೀವಾಜ್ಞೆ; ಔರು ಇದ್ದು, ಕಟ್ಟಿ, ಬೆಳೆಸಿದ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಾರ್ಟಿ ಅನ್ನೋ ರಾಜಕೀಯ ಪಕ್ಷಗಳು; 1967ರಿಂದ 1996ರ ತನಕ ಸತತವಾಗಿ ಶಾಸಕರಾಗಿದ್ದು; ಲೋಕಸಭಾ ಸದಸ್ಯರಾಗಿರುವ ಅನುಭವಗಳು; ಇವೆಲ್ಲದರ ಜೊತೆಗೆ ಬಂಗಾರಪ್ನೋರಿಗೆ ಮೈತುಂಬಿ ಬಂದಿರೋ ಕೆಚ್ಚು, ಸಾಮರ್ಥ್ಯಗಳಿಗೆ ತಾವೇ ಒಂದು ರಾಜಕೀಯ ಪಕ್ಷ ಕಟ್ಟೋದು ಕಷ್ಟವೇನು ಆಗ್ತಿರಲಿಲ್ಲ ಗುರು!

ಕನ್ನಡಿಗರಿಗೆ ಸಂಬಂಧವಿಲ್ಲದ ಸಮಾಜವಾದಿ ಪಕ್ಷ


ಸಮಾಜವಾದಿ ಪಕ್ಷ ಯಾವುದೋ ದೂರದಲ್ಲಿನ ಮತ್ತು ಕನ್ನಡಿಗರಿಗೆ ಸಂಬಂಧ ಇಲ್ಲದ ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷ ಗುರು! ಉತ್ತರ ಪ್ರದೇಶದ ಈ ಪಕ್ಷಕ್ಕೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇರಕ್ಕೆ ಸಾಧ್ಯ? ಕನ್ನಡನಾಡಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳಿಗೆ ಉತ್ತರಪ್ರದೇಶದ ಇಲ್ಲವೇ ಅಲ್ಲೀ ಜನರ ಒಪ್ಪಿಗೆ ತೊಗೊಳೋ ಮೂರ್ಖತನವಾದರೂ ಯಾಕೆ? ಉತ್ತರಪ್ರದೇಶದ ಹೈಕಮ್ಯಾಂಡಿಗೆ ತಲೆಬಾಗಿಸಿ ನಡುದ್ರೆ ಅದು ನಮ್ಮನ್ನು ನಾವು ಆಳ್ಕೊಂಡಂಗಾ? ಖಂಡಿತ ಇಲ್ಲ ಗುರು! ಹಿಂದೆ ಕನ್ನಡಪರ ಪಕ್ಷಗಳ್ನ ಕಟ್ಟಿ ಕನ್ನಡಿಗರಿಗಾಗಿ ದುಡಿದಿದ್ದ ಬಂಗಾರಪ್ನೋರಿಗೆ ಇವೆಲ್ಲಾ ಮರೆತುಹೋಗಿತ್ತಾ ಅನ್ನೋ ಪ್ರಶ್ನೆ ಬರತ್ತೆ ಗುರು!

ಆ ಪಕ್ಷದ ಹೆಸರಿಟ್ಟುಕೊಳ್ಳೋದರ ಜೊತೆಗೆ ಹಾಗೆ ಸೇರಿಕೊಂಡ ಕಾರಣಕ್ಕಾಗೆ ಹೊಸದಾಗಿ ಅಲ್ಲಿನೋರ ಹಾಗೇ ಟೋಪಿ ಹಾಕ್ಕೊಳೋದು, ಕರ್ನಾಟಕದಲ್ಲಿ ತಾವು ಮಾಡೋ ಕಾರ್ಯಕ್ರಮದಲ್ಲಿ ಹಿಂದುಗಡೆ ನೇತಾಕಿರೋ ಬ್ಯಾನರ್ ಗಳಲ್ಲಿ ಹಿಂದಿ ಭಾಷೇನ ಬಳಸೋದು...ಇವೆಲ್ಲಾ ಕನ್ನಡತನಾನ ಹೆಜ್ಜೆ ಹೆಜ್ಜೆಯಾಗಿ ಗುಲಾಮಗಿರಿಗೆ ತಳ್ಳೋ ಪ್ರತೀಕಗಳಲ್ವಾ ಗುರು? ಈ ಸೈಕಲ್ ಗುಂಗಿಗೆ ಯಾಕಾದ್ರೂ ಬಿದ್ರು ಬಂಗಾರಪ್ನೋರು?

ನಮ್ಮದೇ ಪಕ್ಷಕ್ಕೆ ಮತವೂ ಬರುತ್ತೆ, ಮಾನವೂ ಬರುತ್ತೆ


ತಮ್ಮದೂ ರಾಷ್ಟ್ರೀಯ ಪಕ್ಷ, ಹಾಗನ್ನೋದ್ರಿಂದ ಕರ್ನಾಟಕದಲ್ಲಿ ಅಧಿಕಾರ ಗಿಟ್ಟುಸ್ಬೋದು ಅಂತ ನಮ್ಮ ನಾಯಕರುಗಳು ಅಂದ್ಕೊಂಡಿದ್ರೆ ಅದು ತಪ್ಪು ಲೆಕ್ಕಾಚಾರ ಆಗಿಬಿಡುತ್ತೆ ಗುರು! ತಮಾಷೆ ಅಂದ್ರೆ ಬಂಗಾರಪ್ಪನೋರು ಕರ್ನಾಟಕ ಕಾಂಗ್ರೆಸ್ ಪಾರ್ಟಿ ಕಟ್ಕೊಂಡು 1994ರ ಚುನಾವಣೇಲಿ ಹತ್ತು ವಿಧಾನಸಭಾ ಸ್ಥಾನ ಗಳಿಸಿದ್ರು. ಅದೇ 2005ರ ಚುನಾವಣೇಲಿ ಸಮಾಜವಾದಿ ಪಕ್ಷದ ಹೆಸರಲ್ಲಿ ಗಳಿಸಿದ್ದು ದೊಡ್ಡ ಸೊನ್ನೆ! ಸಮಾಜವಾದಿ ಪಕ್ಷಕ್ಕೆ ಸಿಕ್ಕಿರೋ ಮತಗಳು ಕೂಡಾ ಬರೀ 0.04% ಮಾತ್ರ. ಸಿದ್ದರಾಮಯ್ಯನೋರೂ ಜನತಾದಳದಿಂದ ಹೊರಗ್ ಬಂದಾಗ ಕಾಂಗ್ರೆಸ್ ಅನ್ನೋ ರಾಷ್ಟ್ರೀಯ ಪಕ್ಷದ ಮಡಿಲು ಸೇರೋ ಬದಲು ತನ್ನದೇ ಪಕ್ಷ ಹುಟ್ ಹಾಕಿದ್ರೂ, ಆ ಮೂಲಕ ಎರಡೇ ಸ್ಥಾನ ಗಳಿಸಿದ್ರೂ ಜನ ಅವರನ್ನು ಇನ್ನಷ್ಟು ಗೌರವದಿಂದ ನೋಡ್ತಾ ಇದ್ರೇನೋ ಗುರು!

ಇದೇ ಮಣ್ಣಿನ ಪಕ್ಷಗಳು ಬೇಕು
ಈ ಸತ್ಯಾನ ಬಂಗರಪ್ಪನೋರು, ಸಿದ್ಧರಾಮಯ್ಯನೋರು ಮಾತ್ರ ಅಲ್ಲ, ಆನೆ ಬೆನ್ನೇರಕ್ ಹೊರಟಿರೋ ಸಿಂಧ್ಯಾ ಅವರೂ ಸೇರಿದಂತೆ ನಾಡಿನ ಎಲ್ಲಾ ರಾಜಕಾರಣಿಗಳು ತಿಳ್ಕೋಬೇಕು. ಇವರುಗಳು ಕನ್ನಡಿಗರದ್ದೇ ಆದಂಥಾ (ಹೈಕಮಾಂಡ್ ಅಂತ ದಿಲ್ಲಿ ಕಡೆ, ಉತ್ತರಪ್ರದೇಶದ ಕಡೆ ಕಣ್ಣು ಕಿವಿ ಕೈ ಚಾಚೋ ಪರಿಸ್ಥಿತಿ ಇಲ್ಲದಂಥಾ) ಪಕ್ಷ ಕಟ್ಬೋದಾಗಿತ್ತಲ್ವಾ ಗುರು? ಅವತ್ತು ಇದ್ದ ಕಾವೇರಿ ಇವತ್ತಿಗೂ ಹಾಗೇ ಸಮಸ್ಯೆಯಾಗೇ ಇದೆ. ಅದನ್ನು ಪರಿಹರಿಸಕ್ಕೆ, ಕನ್ನಡ ಜನತೆಗೆ ನಿಜವಾದ ನಾಯಕತ್ವ ಕೊಡಕ್ಕೆ, ನಮ್ಮನ್ನು ನಾವು ಆಳಿಕೊಳ್ಳಕ್ಕೆ, ನಮ್ಮ ನಾಡಿಗೆ ಸಂಬಂಧ ಪಟ್ಟ ನಿಲುವುಗಳನ್ನು ನಮ್ಮೂರಲ್ಲೇ, ನಮ್ಮವರೇ ತೊಗೊಳ್ಳಕ್ಕೆ...ನಮ್ಮದೇ ಮಣ್ಣಿನ ಪಕ್ಷಗಳೇ ಕಟ್ಟಬೇಕು ಗುರು! ಇದನ್ನೆಲ್ಲಾ ಅರ್ಥ ಮಾಡ್ಕೊಂಡು ಬಂಗಾರಪ್ನೋರು ಕನ್ನಡಿಗರು ಎಂದೆಂದಿಗೂ ಮರೀದಿರೋ ಹಾಗೆ ಬಂಗಾರದಂಥಾ ಕೆಲಸ ಮಾಡಬೋದಿತ್ತು ಗುರು!

ಮಲೆಯಾಳಿ ಹಾವಳಿ: ಮಂಗಳೂರಾಯಿತು "ಮಂಗಳಾಪುರಂ"!

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ತುಂಬ್ಕೊಂಡಿರೋ ಮಲೆಯಾಳಿಗಳು ಮಾಡ್ತಿರೋ ರಂಪ 22ನೇ ಅಕ್ಟೋಬರ್ ವಿ.ಕ.ದಲ್ಲಿ ಹೀಗೆ ವರದಿ ಆಗಿದೆ:
ಮಂಗಳೂರು ರೈಲು ನಿಲ್ದಾಣ ಕರ್ನಾಟಕದಲ್ಲಿದೆಯೇ? ಕೇರಳದಲ್ಲಿದೆಯೇ? ಮಂಗಳೂರು ರೈಲು ನಿಲ್ದಾಣಕ್ಕೆ ಹೋದರೆ ಅಥವಾ ಫೋನ್ ಮಾಡಿದರೆ ಇಂತಹ ಸಂಶಯ ಹುಟ್ಟುವುದು ಸಾಮಾನ್ಯ. ಮಂಗಳೂರಿನ ರೈಲು ನಿಲ್ದಾಣದಲ್ಲೂ ಮಲಯಾಳಿ ಶೈಲಿ. ಇಲ್ಲಿ ಮಂಗಳೂರು - ಮಂಗಳಾಪುರಂ! ಕುಕ್ಕೆ ಸುಬ್ರಹ್ಮಣ್ಯ ರಸ್ತೆಯನ್ನು ಸುಬ್ರಹ್ಮಣ್ಯಂ ರಸ್ತೆ ಮಾಡಲಾಗಿದೆ.. ಥಟ್ಟನೆ ಬೋರ್ಡ್ ಓದಿದವರು ಇದ್ಯಾವ ಸುಬ್ರಹ್ಮಣ್ಯಂ? ಅಂದುಕೊಳ್ಳುವ ಸಾಧ್ಯತೆ ಇದೆ. ಕೂಲಿಯಿಂದ ಹಿಡಿದು ಅಧಿಕಾರಿಗಳವರೆಗೆ ಇಲ್ಲಿ ಮಾತಾಡುವ ಭಾಷೆ ಮಲೆಯಾಳಂ. ಕನ್ನಡ ಮಾತಾಡಿದರೂ ಮಲಯಾಳಿ ಶೈಲಿ. ತಪ್ಪು ತಪ್ಪು ಕನ್ನಡ. ಅಂಗಡಿಯ, ರೈಲಿನ ಬೋರ್ಡುಗಳಲ್ಲೂ ಮಲಯಾಳದ್ದೇ ಪ್ರಾಬಲ್ಯ. ಮಲಯಾಳ ಗೊತ್ತಿಲ್ಲದೇ ಮಂಗಳೂರು ರೈಲು ನಿಲ್ದಾಣದಲ್ಲಿ ವ್ಯವಹರಿಸಲು ಸಾಧ್ಯವಿಲ್ಲವೇನೋ ಎಂಬಂಥ ಸ್ಥಿತಿ.

ಕರ್ನಾಟಕದಲ್ಲಿ ನಮಗೆ ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು, ಚಿಕ್ಕಮಗಳೂರು, ಕಡೂರು, ತಿಪಟೂರು, ಬಾನಂದೂರು, ಹಿರೇಕೆರೂರು, ಹಲಸೂರು ಹೀಗೆ ಹಲವಾರು ಊರುಗಳು ಕಂಡು ಬರುತ್ತದೆ. ಒಂದು ಪ್ರದೇಶದಲ್ಲಿ ಹಲಸಿನ ಮರ ಹೆಚ್ಚಾಗಿ ಕಂಡು ಬಂದದ್ದಕ್ಕೆ ಅಲ್ಲಿ ಬಂದು ನೆಲೆಸಿದ ಮೂಲ ನಿವಾಸಿಗಳು ಅದಕ್ಕಿಟ್ಟ ಹೆಸರು "ಹಲಸೂರು". ಒಂದು ಜಾಗದಲ್ಲಿ ಹುಟ್ಟಿ, ಬದುಕಿ, ಬಾಳಿದ ಇತಿಹಾಸಗಳ, ಅಲ್ಲಿ ಕಂಡು ಬರುವ ವಿಶಿಷ್ಟತೆ ಮತ್ತು ಲಕ್ಷಣಗಳಿಂದಲೇ ಬಹುತೇಕ ಎಲ್ಲಾ ಪ್ರದೇಶಗಳು ತಮ್ಮ ತಮ್ಮ ಹೆಸರುಗಳನ್ನು ಪಡೆದಿವೆ. ಈ ರೀತಿ ಕನ್ನಡಿಗರು ತಾವು ನೆಲೆಸುವ ಜಾಗಗಳಿಗೆ ಅಲ್ಲಿನ ವಿಶೇಷಣಗಳನ್ನೊಳಗೊಂಡಂತೆ ಊರು, ಪಟ್ಟಣ, ಕೆರೆ, ಪಾಳ್ಯ, ನಗರ, ದುರ್ಗ, ಕೋಟೆ, ಹಳ್ಳಿ, ಏರಿ ಅಂತ ಸೇರಿಸಿ ಕರೆದುಕೊಂಡಿರುವುದು ಅತ್ಯಂತ ಸಹಜವಾದದ್ದೇ.

ವಲಸೆಯಿಂದ ನಮ್ಮ ಹೆಸರುಗಳಿಗೆ ಆಗ್ತಿರೋ ಕಿರುಕುಳ

ಕರ್ನಾಟಕಕ್ಕಾಗ್ತಿರೋ ನಿಯಂತ್ರಣವಿಲ್ಲದ ವಲಸೆ ಹುಟ್ಟುಹಾಕುತ್ತಿರೋ ಒಂದು ಗೊಂದಲ ಅಂದ್ರೆ ಊರುಗಳ ಹೆಸರುಗಳು ಹಾಳಾಗ್ತಿರೋದು. ನಾಣ್ಯ ಏಣಿಸಕ್ಕೆ ಪೀಣ್ಯಕ್ಕೆ ಬಂದಿರೋರು ಅದನ್ನ ಬೀಣ್ಯ ಮಾಡಕ್ಕೆ ಹೊರ್ಟಿರೋದು, ನಮ್ಮ ಹಲಸೂರನ್ನ ಅಲಸೂರು ಮಾಡಿರೋದು, ನೆಲಮಂಗಲ ನೀಲಮಂಗಲ ಆಗಿರೋದು, ದೊಡ್ಡಮಾಕಳಿ ದೊಡ್ಡಮ್ಮಕಾಳಿಯಾಗಿ ಅವತರಿಸಿರುವುದು [ಸಧ್ಯ, ಇನ್ನೂ ದೊಡ್ಡಮುಕಳಿ ಆಗದಿರುವುದು ನಮ್ಮ ಪುಣ್ಯ!] ಇವೇ ಈ ದುರಂತದ ಕೆಲವು ಉದಾಹರಣೆಗಳಾಗಿವೆ. ಇತ್ತೀಚೆಗೆ ನಮ್ಮ ಸಮೂಹ ಮಾಧ್ಯಮಗಳು ಕರ್ನಾಟಕವನ್ನು ಕರ್ನಾಟಕ್ ಮತ್ತು ಗರುಡವನ್ನು ಗರುಡ್ ಅನ್ನೋ ಮಟ್ಟಿಗೆ ಬೆಳದಿವೆ.

ಅಲ್ಲ - ವಲಸಿಗ್ರಿಂದ ಇಷ್ಟೆಲ್ಲಾ ಹೇಗೆ ಆಗತ್ತೆ ಅಂತೀರಾ? ಇಲ್ಲಿ ಕರ್ನಾಟಕದಲ್ಲಿ ವಲಸೆ ಬಂದಿರೋರು ಇಲ್ಲೀ ಆಡಳಿತ-ಗೀಡಳಿತ ಸೇರಿದ ಹಾಗೆ ಸಮಾಜದ ಎಲ್ಲಾ ಮುಖ್ಯ ಹುದ್ದೆಗಳಲ್ಲಿ ಒಕ್ಕರಿಸಿಕೊಂಡಿರೋದ್ರಿಂದ್ಲೇ ಇವೆಲ್ಲಾ ಆಗ್ತಿರೋದು ಗುರು. ವಲಸಿಗ್ರು ಬಂದ್ರೆ ತಾವೊಬ್ಬರೇ ಬರಲ್ಲ. ತಮ್ಮ ಇಡೀ ಕಾಗೆ ಬಳಗವನ್ನೆಲ್ಲಾ ಕರ್ಕೊಂಡ್ ಬರ್ತಾರಮ್ಮಾ! ನಗರ ಪಾಲಿಕೆಗಳಲ್ಲಿ ಲೆಕ್ಕ ಬರೆಯೋರಿಂದ ಹಿಡಿದು ಕಸ ಗುಡಿಸೋ ಕೆಲಸಕ್ಕೂ ತಂತಮ್ಮ ಭಾಷೆಯೋರ್ನೇ ಕರ್ಕೊಂಡ್ ಬಂದು ತುಂಬ್ತಾರೆ ಗುರು!

ನಾವು ಬೆಪ್ಪಮುಂಡೇವಂಗೆ ಎಲ್ಲಾ ನೋಡ್ಕೊಂಡು ನಮ್ಮ ಜಾಗಗಳ ಹೆಸ್ರುಗಳ್ನ ನಾವೇ ತಪ್ಪುತಪ್ಪಾಗಿ ಹೇಳ್ತಾ ನಮ್ಮತನವನ್ನ ಕಳ್ಕೋತಾ ಔರೇ ಇಲ್ಲೀ ಯಜಮಾನ್ರು ಅನ್ಕೊಂಡು ತಗ್ಗಿ ಬಗ್ಗಿ ಇಡೀ ಜೀವನ ಕಳೀತೀವಲ್ಲ, ಅದೇ ನಾವು ಮಾಡೋ ದೊಡ್ಡ ತಪ್ಪು ಗುರು! ವಲಸಿಗರಿಗೆ ನಾವು ಇಲ್ಲೀತನ ಕಲಿಸೋ ಬದ್ಲು ಔರಿಂದ ನಾವೇ ಔರಿಂದ ಕಲೀತೀವಲ್ಲ, ಅದಕ್ಕೆ ಬಡ್ಕೋಬೇಕು! ಔರು ಹೀಗೆ ಮಾಡ್ಕೊಂಡು ನಮ್ಮ ಇತಿಹಾಸವನ್ನೆಲ್ಲಾ ಅಳಿಸಿಹಾಕ್ತಾ ಇದ್ದರೂ ಸುಮ್ನೆ ಕೂತಿದೀವಲ್ಲ, ಅದು ಈಗ ಅಷ್ಟು ಗಂಭೀರವಾಗಿ ಕಾಣಿಸದೇ ಹೋದ್ರೂ ಒಂದು ದಿನ ನಮ್ಮ ಅಳಿವಿಗೆ ಅದೇ ಕಾರಣ ಆಗತ್ತೆ ಗುರು!

ಈಗೇನು ಮಾಡೋಣು?

ಇಷ್ಟೆಲ್ಲಾ ನೋಡ್ಕೊಂಡು ಸುಮ್ನೆ ಕೂತಿರಕ್ಕಾಗತ್ತಾ ಗುರು? ನಾವೇನು ಮಾಡ್ಬೇಕು? ಸರ್ಕಾರ ಏನ್ ಮಾಡ್ಬೇಕು?
  • ಇಂಥಾ ಆಭಾಸಗಳ್ನ ನೋಡಿದಾಗ ಸಂಭಂದ ಪಟ್ಟ ಅಧಿಕಾರಿಗಳಿಗೆ ಹೋಗಿ ಕ್ಯಾಕರಿಸಿ ಉಗೀಬೇಕು ಇಲ್ಲಾ ಬರೀಬೇಕು ಇಲ್ಲಾ ಮಿಂಚೆ-ಮಳೆ (ಈಮೇಲ್ ಸ್ಪ್ಯಾಮ್) ಸುರಿಸಬೇಕು
  • ಕರ್ನಾಟಕದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಉದ್ಯೋಗಗಳಿಗೆ ಕನ್ನಡಿಗರಿಗೆ ಆದ್ಯತೆ ಸಿಗೋಹಾಗೆ ಸರ್ಕಾರಾನ ಒತ್ತಾಯಿಸಬೇಕು
  • ರೈಲ್ವೆ, ದೂರ ಸಂಪರ್ಕ, ಅಂಚೆ ಇಲಾಖೆ ಹೀಗೆ ಕೇಂದ್ರ ಸರ್ಕಾರದ ಅಧೀನಕ್ಕೆ ಬರೋ ಎಲ್ಲಾ ಇಲಾಖೆಗಳಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಆಗ್ತಿರೋ ಔಮಾನ, ಅಪಚಾರಗಳ್ನ ನಿಲ್ಲಿಸೋ ನಿಟ್ನಲ್ಲಿ ಒಂದು ಕಾವಲು ಸಮಿತೀನ ಕಟ್ಟಿ ಕರ್ನಾಟಕ ಸರ್ಕಾರ ತಾನು ಇದೀನಿ ಅಂತ ತೋರಿಸಿಕೊಳ್ಳಬೇಕು!

ಬೆಳಗಾವಿ ವಿಷಯದಲ್ಲಿ ಮತ್ತೆ ಕ್ಯಾಕರಿಸಿ ಉಗಿಸಿಕೊಂಡ ಮಹಾರಾಷ್ಟ್ರ

ಕಾಲು ಕೆರ್ಕೊಂಡು ಜಗಳಕ್ಕೆ ಬರೋ ಜಾಯಮಾನದ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಬೆಳಾಗಾವಿಯ 865 ಹಳ್ಳಿಗಳ್ನ ಕೇಂದ್ರಾಡಳಿತಕ್ಕೆ ಒಳಪಡಿಸ್ಬೇಕು ಅಂತ ಭಾರತದ ದೊಡ್ಡ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಆಗಿರೋದ್ನ ಅಕ್ಟೋಬರ್ 26ನೇ ತಾರೀಕಿನ ದಿ ಹಿಂದು ವರದಿ ಮಾಡಿದೆ.

ನಗೆಪಾಟಲಾಗ್ತಿರೋ ಮಹಾರಾಷ್ಟ್ರ ಸರ್ಕಾರ

ಬೆಳಗಾವಿ ಮರಾಠಿಗರ ಪಾಲಿಗೆ ಈಗಾಗಲೇ ಮುಗಿದು ಹೋದ ಅಧ್ಯಾಯ ಅಂತ ತಿಳ್ಕೊಂಡಿರೋ ಮರಾಠಿಗ್ರು ಹೇಗಾದ್ರೂ ಮಾಡಿ ಬೆಳಗಾವಿನ ಕರ್ನಾಟಕದಿಂದ ಬೇರ್ಪಡ್ಸಿ ನಂತ್ರ ಹೊಂಚು ಹಾಕಿ ತಾನು ಕಬಳಿಸಿಬಿಡಬೇಕು ಅನ್ನೋ ದುರ್ಬುದ್ಧಿಯ ಜತೆಗೆ, ದುರ್ಬಲವಾದ ತಮ್ಮ ಆಡಳಿತವನ್ನು ಜನರ ಮನಸ್ಸಿನಿಂದ ಮರೆಮಾಚಕ್ಕೆ ಆಗಿಂದಾಗ್ಗೆ ಬೆಳಗಾವಿ ಸಮಸ್ಯೆಯ ತಗಾದೆ ತೆಗೆದು ಅನುಕಂಪದ ಅಲೆಯನ್ನು ಹುಟ್ಟುಹಾಕೋದು, ಕಾಲಾನುಕಾಲಕ್ಕೆ ಆಳ್ವಿಕೆ ಮಾಡ್ಕೊಂಡು ಬಂದಿರೋ ಮಹಾರಾಷ್ಟ್ರ ಸರ್ಕಾರಗಳ ಕುತಂತ್ರದ ರಾಜಕೀಯ ದಾಳಗಳಲ್ಲೊಂದು ಸಹ ಆಗಿದೆ.

ಇದೇ ರೀತಿ ಕಳೆದ ವರ್ಷ ಸಹ, ಈವರ್ಗೆ ತಾವೇ ಕನ್ನಡಿಗರಿಗೆ ಎಸ್ಗಿರೋ ಮೋಸಗಳ್ನೆಲ್ಲಾ ಪಟ್ಟಿ ಮಾಡಿ, ಸಹೃದಯ ಕನ್ನಡಿಗರ ಮೇಲೆ ಭಾರತದ ಪ್ರಧಾನಿಗೆ ಸತ್ಯಕ್ಕೆ ಅಪಚಾರವೆಸಗುವಂತೆ ದೋಷಾರೋಪ ಮಾಡಿ ಎಲ್ರಿಂದ್ಲೂ ಉಗಿಸ್ಕೊಂಡಿದ್ರು. ಈಗ ಭಾರತದ ದೊಡ್ಡ ನ್ಯಾಯಲಯ ಅವರ ಅರ್ಜೀನ ಕಸದಬುಟ್ಟೀಗೆ ಎಸ್ದಿರೋದ್ರಿಂದ ಮತ್ತೆ ಎಲ್ಲರ ಮುಂದೆ ನಗೆಪಾಟಿಲಿಗಿಡಾಗಿದ್ದಾರೆ ಗುರು.

ಬೆಳಾಗಾವೀಲಿ ಮರಾಠಿಗರ ಕಿರೀಕು ಇವತ್ತಿಂದಲ್ಲ

ಮರಾಠಿಗರ ಈ ಕ್ಯಾತೆ ನೆನ್ನೆ ಮೊನ್ನೆದಲ್ಲ ಗುರು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳು ವಿಂಗಡನೆಗೊಂಡು ರಾಜ್ಯಗಳು ಎಕೀಕರಣ ಆದಾಗಿಂದ ಬೆಳಗಾವೀಲಿ ನೆಲೆಗೊಂಡ ಮರಾಠಿ ನಾಯಕರು ರಾಜಕೀಯ ದುರುದ್ದೇಷದಿಂದ ಪಕ್ಕದ ಮಹಾರಾಷ್ಟ್ರ ಸರ್ಕಾರದ ಏಜೆಂಟ್ರತೆ ವರ್ತಿಸ್ತಾ ಸಾಂಸ್ಕೃತಿಕವಾಗಿ ಕನ್ನಡಿಗರ ಜೊತೆ ಬೆರೀದೆ ಆಗಿಂದಾಗ್ಗೆ ಕನ್ನಡಿಗರ್ನ ಕೆಣಕ್ತಾ ಕನ್ನಡಿಗರ ಭಾವನೆಗಳ್ನ ಕೆರ್ಳುಸ್ತಾ ಬೆಳಗಾವೀನ ಮಹಾರಾಷ್ಟ್ರಕ್ಕೆ ಸೇರಿಸ್ಬಿಡೋ ಅಲ್ಲಿನ ಸರ್ಕಾರಗಳ ಪ್ರಯತ್ನಕ್ಕೆ ಇಂಬು ನೀಡ್ತಾ ಬಂದಿದ್ದಾರೆ.

ಮೈಸೂರು-ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರಿಯೆ ಸರಿಯಾಗಿ ನಡೀದೆ ಗಡಿ ವಿವಾದ ಭುಗಿಲೆದ್ದಾಗ 1966ರ ಕೊನೇಲಿ ಕೇಂದ್ರ ಸರ್ಕಾರದಿಂದ ಮೆಹರ್ಚಂದ್ ಮಹಾಜನ್ ಆಯೋಗ ನೇಮಿಸಲ್ಪಡ್ತು. ಆ ಆಯೋಗ ಮಾಡ್ಬೇಕು ಅಂತ ಒತ್ತಾಯ ಮಾಡಿದ್ದೂ ಮರಾಠಿಗರೇನೆ! ಅದು ನೀಡೋ ತೀರ್ಪಿಗೆ ನಾವು ತಲೆಬಾಗ್ತೀವಿ ಅಂತ ಹೇಳ್ಕೆ ನೀಡಿದ್ದ ಮಹಾರಾಷ್ಟ್ರದ ನಾಯಕರು ವರದಿ ಪ್ರಕಟ ಆದ್ಮೇಲೆ ಬೆಳಗಾವಿ ಕೈ ತಪ್ತಿದೆ ಅಂತ ಕೊಟ್ಟ ಮಾತಿಗೇ ತಿಲಾಂಜಲಿಯಿಟ್ಟು ಇವತ್ತಿನ ವರೆಗೂ ಗಡಿ ಸಮಸ್ಯೆ ಬಗೆಹರಿಯಕ್ಕೆ ಬಿಡದೆ ತನ್ನ ಹುಂಬತನ ಮುಂದುವರೆಸಿಕೊಂಡೇ ಬಂದಿದಾರೆ.

ಕನ್ನಡಿಗರ ಸೌಜನ್ಯಕ್ಕೆ ಮರಾಠಿಗರು ಕೊಟ್ಟಿರೋ ಬಹುಮಾನ

ಮಹಾಜನ್ ವರದಿ ಸರೀಗೆ ಜಾರಿಗೆ ಬಂದ್ರೆ ಬೆಳಗಾವಿ ನಮ್ಮಲ್ಲೆ ಉಳ್ಯತ್ತೆ, ಜತೆಗೆ ಮಹಾರಾಷ್ಟ್ರಕ್ಕೆ ಸೇರಿರೋ ಕೆಲವು ಅಚ್ಚ ಕನ್ನಡದ ಭಾಗಗಳು ನಮ್ಮದಾಗತ್ವೆ ಅನ್ನೋದೇನೋ ನಿಜ. ಆದರೆ ಫಲವತ್ತಾದ ನಿಪ್ಪಾಣಿ ಮತ್ತು ಖಾನಾಪುರದ ಕಾಡುಗಳ ಜತೆಗೆ ಈಗ ಕರ್ನಾಟಕದ ಭಾಗಾವಾಗಿರೋ ಕೆಲವು ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡ್ಬೇಕಾಗತ್ತೆ. ವರದಿ ಜಾರಿಗೆ ಒತ್ತಾಯಿಸ್ತಿರೋ ನಾವು ಮತ್ತು ನಮ್ಮ ನಾಯಕ್ರು ಇದ್ನ ಮರೆತಿಲ್ಲ, ಆ ಭಾಗಗಳು ಕೈ ಬಿಟ್ಟೂ ಹೋಗೋ ನೋವು ಎಲ್ಲರಲ್ಲೂ ಇದೆ. ಆದ್ರೆ ಅದೇ ಆಗಿರೋ ಒಪ್ಪಂದ ಅಂತ ಅದನ್ನ ಗೌರವಿಸಿ ನಾವು ಮುಚ್ಕೊಂಡಿಲ್ವಾ?

ಏಕೀಕರಣದ ಸಮಯದಲ್ಲಿ ಕೈ ಬಿಟ್ಟು ಹೋದ ಅಚ್ಚ ಕನ್ನಡದ ಪ್ರದೇಶಗಳಾದ ಸತಾರ, ಸೊಲ್ಲಾಪುರ, ಜತ್ತ, ಸಾಂಗ್ಲಿ, ನಾಂದೇಡ್, ಕೊಲ್ಲಾಪುರ, ಅಕ್ಕಲಕೋಟದಲ್ಲಿ ನೆಲಸಿರೋ ಕನ್ನಡಿಗರ ಸ್ಥಿತಿ ಈ ಮರಾಠಿ ನಾಯಕರ ಉಪಟಳದಿಂದ ಶೋಚನೀಯವಾಗಿದ್ದರೂ ಸಭ್ಯ ಕನ್ನಡಿಗರು ಯಾವುದೇ ದುಸ್ಸಾಹಸಗಳಿಗೆ ಎಡೆ ಕೊಡದೆ ಮರಾಠಿ ಬಾಂಧವರೊಡನೆ ಸಂಯಮದಿಂದ ಬಾಳ್ವೆ ನಡೆಸಿರುವುದು ನಮ್ಮ ಕನ್ನಡಿಗರ ಸುಸಂಸ್ಕೃತಿಗೆ ಹಿಡಿದ ಕೈಗನ್ನಡಿ ಗುರು!

ಮೇಲಿನದಕ್ಕೆ ವ್ಯತಿರಿಕ್ತವಾಗಿ ಬೆಳಗಾವಿಲಿ ನೆಲ್ಸಿರೋ ಮರಾಠಿ ಪುಂಡ್ರು ಸಂಪೂರ್ಣ ಕನ್ನಡ ವಿರೋದಿ ನೀತಿ ಅನುಸರಿಸ್ತಾ, ಎಲ್ಲಾ ಕನ್ನಡಪರ ಚಿಂತನೆಗಳನ್ನ, ಮಟ್ಟ ಹಾಕ್ತ, ಬೆಳಗಾವಿ, ನಿಪ್ಪಾಣಿ ಮತ್ತು ಖಾನಪುರ ಇನ್ನಿತರೆಡೆಗಳಲ್ಲಿ ಕನ್ನಡ ಶಾಲೆಗಳೂ ಸಹ ನಡೀದಂತೆ, ಕನ್ನಡದ ಮಕ್ಕಳನ್ನ ಬಲವಂತವಾಗಿ ಮರಾಠಿ ಶಾಲೆ ಸೇರ್ಸೋಕೆ ಪ್ರೇರೇಪಿಸ್ತ, ಬೆಳಗಾವಿಲಿ ಕನ್ನಡ ರಾಜ್ಯೋತ್ಸವಾನ ಕಪ್ಪು ದಿನ್ವಾಗಿ ಆಚರ್ಸಿ, ಕನ್ನಡದ ದ್ವಜವನ್ನು ಸುಟ್ಟು, ಕನ್ನಡದ ನಾಮ ಫ಼ಲಕಗಳಿಗೆ ಮಸಿ ಬಳ್ದು ಕನ್ನಡಿಗರ ಸ್ವಾಭಿಮಾನಕ್ಕೆ ಆಗಿಂದಾಗ್ಗೆ ಲಗ್ಗೆಯಿಡ್ತಿದಾರೆ. ಹೇಗಿದೆ ಸೌಜನ್ಯಕ್ಕೆ ಸಿಕ್ಕ ಬಹುಮಾನ?

ಈ ಬೇಡದ ತೊಂದರೆಗಳಿಗೆ ಹೇಗೆ ಕೊನೆ ಹಾಡೋದು?
ಮುಂದಿನ ನ್ಯಾಯಾಲಯದ ವಿಚಾರಣೆಗಳಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸ್ತಿರೋ ವಕೀಲ್ರು ಮಹಾರಾಷ್ಟ್ರ ಅನುಸರಿಸ್ತಿರೋ ಒತ್ತಡ ತಂತ್ರಕ್ಕೆ ಮಣೀದೆ ಕರ್ನಾಟಕದ ಸಮರ್ಥನೆಯನ್ನು ಪರಿಣಾಮಕಾರಿಯಾಗಿ ಮಂಡಿಸಿ ಸತ್ಯಕ್ಕೆ ದೂರ್ವಾದ ಮರಾಠಿಗರ ಆರೋಪಕ್ಕೆ ತಕ್ಕ ಉತ್ತರ ನೀಡ್ಬೇಕಿದೆ.

ವಾಸ್ತವವನ್ನು ತಿರುಚ್ತ, ತಮ್ಮ ಕುಚೋದ್ಯ, ಕಿಡಿಗೇಡಿತನಾನ ಸಮರ್ಥಿಸ್ಕೊಳ್ತಾ ಬೆಳಗಾವಿ ಕಬಳ್ಸೋಕೆ ಹುನ್ನಾರ ನಡೆಸ್ತಿರೋ ಮರಾಠಿಗರ ದೊಂಬಿ ಸಂಘಟನೆಗಳ್ನ ಅನುರ್ಜಿತಗೊಳ್ಸಿ ಅವಿವೇಕಿ ಕಪಟಿಗಳನ್ನ ಬೆಳಗಾವಿಯಿಂದ ಗಡೀಪಾರು ಮಾಡ್ಸೋಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಸಕ್ಕೆ ನಮ್ಮ ಸರ್ಕಾರ ಮುಂದಾಗ್ಬೇಕು.

ಮಹಾಜನ್ ವರದಿ ಅನುಷ್ಠಾನದ ಸಾಧ್ಕ ಬಾಧ್ಕಗಳ್ನ ಚರ್ಚಿಸಿ, ಕನ್ನಡಿಗರ ಮತ್ತು ನಮ್ಮನ್ನು ನಂಬಿರೋ ಮರಾಠಿಗರ ಒಳಿತಿಗೂ ಗಮ್ನ ಹರ್ಸೋಕೆ ನಮ್ಮ ಕರ್ನಾಟಕದ ಆಡಳಿತ, ಸೂಕ್ತ ಯೋಜ್ನೆಗಳನ್ನ ಸಿದ್ಧಪಡಿಸಿ ಶಾಶ್ವತವಾಗಿ ಈ ಸಮಸ್ಯೆನ ಮಟ್ಟಹಾಕಕ್ಕೆ ನೇರ ಮತ್ತು ದಿಟ್ಟ ಹೆಜ್ಜೆ ಇರಿಸ್ಬೇಕು ಗುರು. ಏನಂತ್ಯಮ್ಮಾ?

ವಿ.ವಿ.ಗಳೇ ಕಾಪಿ ಹೊಡುದ್ರೆ ಹೇಗೆ?

ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಆಡಳಿತ ಕನ್ನಡದಲ್ಲೇ ಆಗಬೇಕು ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಕ್ಟೋಬರ್ 21ಕ್ಕೆ ಮೈಸೂರಲ್ಲಿ ಗದರು ಹಾಕಿದೆ. ಅಲ್ಲಾ - ಈ ವಿ.ವಿ.ಗಳಿಗೆ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಕನಿಷ್ಠ ತಿಳುವಳಿಕೇನೂ ಇಲ್ಲದಿದ್ದರೆ, ಅದಕ್ಕೆ ಬೇಕಾಗಿರೋದ್ನೆಲ್ಲಾ ಮಾಡ್ತೀವಿ ಅನ್ನೋ ಜವಾಬ್ದಾರಿ ಇಲ್ಲದಿದ್ದರೆ ಇವರೇನು ಕರ್ನಾಟಕವನ್ನ ಉದ್ಧಾರ ಮಾಡೋದು? ಇವರೇನು ಕನ್ನಡಿಗರನ್ನ ಉತ್ತಮ ಪ್ರಜೆಗಳಾಗಿಸೋದು? ಇವರು ಯಾವ ಸೀಮೆ ಪಾಠ ಕಲಿಸಾರು?

ಆಡಳಿತಕ್ಕಂತೂ ಬೇರೆ ಭಾಷೆ ಬೇಕಾಗೇ ಇಲ್ಲ

ಕರ್ನಾಟಕದ ವಿ.ವಿ.ಗಳು ಕನ್ನಡ ಕೈಬಿಟ್ಟರೆ ಕನ್ನಡಿಗರಿಗೆ ದಾರಿ ತೋರ್ಸೋರು ಯಾರು? ಹೀಗೆ ಬೇಜವಾಬ್ದಾರಿಯಿಂದ ನಡ್ಕೊಳೋ ಬದ್ಲು ಇವುಗಳು ಆಡಳಿತವನ್ನಂತೂ ಪೂರ್ತಿ ಕನ್ನಡದಲ್ಲಿ ಮಾಡ್ಬೇಕು. ಆಡಳಿತ ಕನ್ನಡದಲ್ಲಿ ಸಾಧ್ಯವಿಲ್ಲ ಅನ್ನೋದು ಬರೀ ಸುಳ್ಳು. ಆಡಳಿತಕ್ಕೆ ಬೇಕಗಿರೋ ಎಲ್ಲಾ ಪದಗಳು ಕನ್ನಡದಲ್ಲಿ ಈಗಾಗಲೇ ಇವೆ. ಹೊಸದಾಗಿ ಹುಟ್ಟಾಕ್ಬೇಕು ಅನ್ನೋ ಗೋಜೂ ಇಲ್ಲ.

ಇಂಗ್ಲೀಷ್ ಬಳಕೆಯ ಒಳಗುಟ್ಟು

ಇಲ್ಲಿ ಒಳಗುಟ್ಟೇನಪ್ಪಾ ಅಂದ್ರೆ ಎಲ್ಲಾ ಕಡೆ ಆಡಳಿತ ಅನ್ನೋದು ಇವತ್ತು ಪೂರ್ತಿ ಗಣಕಯಂತ್ರದ ನೆರವಿಂದ ಆಗ್ತಿದೆ. ಆದ್ರೆ ಆ ಗಣಕಕ್ಕೆ ಕನ್ನಡ ಬರೋದಿಲ್ಲ ಅನ್ನೋ ಪೆದ್ದತನ ನಮಗೆ ಇದೆಯಲ್ಲಾ? ಗಣಕಯಂತ್ರಕ್ಕೆ ಇಂಗ್ಲೀಷೇ ಬರೋದು, ಅದು ಥೇಮ್ಸಲ್ಲೇ ತೊಳ್ಕೊಳೋದು ಅನ್ನೋ ಮೂರ್ಖತನ ಇದೇ ವಿ.ವಿ.ಗಳಲ್ಲಿ ಪಾಠ ಮಾಡ್ತಿರೋ ಗಣಕ ವಿಭಾಗದ ಪ್ರೊಫೆಸರ್ಗಳಿಗೂ ಲೆಕ್ಚರರ್ ಗಳಿಗೂ ಇದೆ ಗುರು! ಇಂಥೋರಿಗೆ ಹೋಗಿ ಗಣಕಕ್ಕೆ ಯಾವ ಕೀಳರಿಮೇನೂ ಇಲ್ಲ, ಇರೋದು ನಮಗೇ ಅಂತ ಬುದ್ವಾದ ಯೋಳ್ಬೇಕು ಗುರು! ವಿ.ವಿ.ಗಳೇ ಹೀಗೆ ಸ್ವಂತ ಬುದ್ಧಿಯಿಂದ ಕನ್ನಡಾನ ಆಡಳಿತದಲ್ಲಿ ಬಳಸೋದಕ್ಕೆ ಬೇಕಾಗಿರೋದ್ನೆಲ್ಲಾ ಮಾಡದೆ ಇಂಗ್ಲೀಷಿನೋರಿಂದ ಕಾಪಿ ಹೊಡುದ್ರೆ ಇವು ವಿದ್ಯಾರ್ಥಿಗಳಿಗೆ ಏನು ಹೇಳ್ಕೊಟ್ಟಾವು?

ನಾವು ಯೋಚ್ನೆ ಮಾಡೋ ರೀತೀನೇ ಬದಲಾಗಬೇಕು

ಈಗ ನಮ್ಮ ಜನ "ಗಣಕದಲ್ಲಿ ಕನ್ನಡ ಬರ್ಸಕ್ಕಾಗಲ್ಲ, ಆದ್ದರಿಂದ ಆಡಳಿತ ಇಂಗ್ಲೀಷಲ್ಲಿ ಮಾಡೋಣ" ಅಂತ ಕಾರಣ ಕೊಡೋದು ಏನ್ ತೋರ್ಸತ್ತೆ ಅಂದ್ರೆ - ಗಣಕದಲ್ಲಿ ಕನ್ನಡ ಅನ್ನೋದು ಯಾರೋ ನಮಗೆ ಕೊಡಬೇಕಾಗಿರೋ ಕೊಡುಗೆ, ದೇವ್ರು ಸುರಿಸೋ ಮಳೆ ಇದ್ದಂಗೆ, ಇದ್ರೆ ಉಪಯೋಗುಸ್ಕೋತೀವಿ, ಇಲ್ದಿದ್ರೆ ನಾವೇನೂ ಮಾಡಕ್ಕಾಗಲ್ಲ ಅನ್ನೋ ಷಂಡತನ. ಇದು ಹೇಡಿಗಳ ಮಾತು. ಈ ಗುಂಗಿಗೆ ಬಿದ್ರೆ ನಾವು ಯಾವುದೇ ಸ್ವಂತ ಚಿಂತನೆ, ವಿಜ್ಞಾನ-ತಂತ್ರಜ್ಞಾನಗಳ್ನ ಹುಟ್ಟಿಸಕ್ಕಾಗೋದೇ ಇಲ್ಲ. ಹೊರರಾಜ್ಯದೋರು ಮತ್ತೆ ಹೊರದೇಶದೋರು ಒದ್ದ ಕಡೆ ಹೋಗೋ ಕಾಲ್ಚೆಂಡಾಗೋಗ್ತೀವಿ!

ನಾವು ಯೋಚ್ನೆ ಮಾಡೋ ರೀತೀನೇ ಬದಲಾಗಿ ಮೊದ್ಲು "ಆಡಳಿತ ಕನ್ನಡದಲ್ಲೇ ಆಗಬೇಕು" ಅನ್ನೋ ಭದ್ರವಾದ ನಿಲುವು ಇಟ್ಟುಕೋಬೇಕು. ಆಗ ಅದಕ್ಕೆ ಬೇಕಾಗಿರೋ ವಿಜ್ಞಾನ-ತಂತ್ರಜ್ಞಾನ, ಮಣ್ಣು-ಮಸಿ, ಗಣಕ-ಗಿಣಕ, ತಂತ್ರಾಂಶ-ಗಿಂತ್ರಾಂಶ ಎಲ್ಲಾನೂ ನಾವೇ ಹುಟ್ಟಿಸಬೇಕು. ಇಂಥದ್ದೊಂದು ಆಗಬೇಕು ಅನ್ನೋ ಬಯಕೆ ಇದ್ರೆ ತಾನೆ ಅದನ್ನ ಪೂರೈಸಕ್ಕೆ ಮನುಷ್ಯ ಕೆಲಸ ಮಾಡೋದು? ಆ ಬಯಕೇನೇ ಇಲ್ದೇ ಹೋದ್ರೆ ಕಡಲಲ್ಲಿ ನಿಯಂತ್ರಣ ತಪ್ಪಿದ ಹಡಗು ಹೇಗೆ ಗಾಳಿ ಬಂದ ಕಡೆ ತೂರತ್ತೋ ಹಾಗಾಗತ್ತೆ ಕರ್ನಾಟಕದ ಸ್ಥಿತಿ!

ಕನ್ನಡ-ಕನ್ನಡಿಗ-ಕರ್ನಾಟಕಗಳ್ನ ಕಡೆಗಣಿಸೋದು, ಇಲ್ಲಾ ಕನ್ನಡ ಅಂದ್ರೆ ಜುಟ್ಟಿಗೆ ಮಲ್ಲಿಗೆ ಹೂ ಮಾತ್ರ ಅನ್ಕೊಳೋದು ನಮ್ಮ ಏಳ್ಗೆಗೇ ಕೊಡ್ಲಿಯೇಟು ಅನ್ನೋದು ಬರೀ ಬಾಯ್ಮಾತಲ್ಲಾಮ್ಮಾ!

ವಿಮಾನ ನಿಲ್ದಾಣದ ಜಾಹೀರಾತುಗಳಲ್ಲಿ ಕನ್ನಡ ಮೆರೀಬೇಕು

ಫ್ರಾನ್ಸ್ ಮೂಲದ ಜೆ.ಸಿ.ಡುಕೋ (JCDecaux; ಇದು ಫ್ರೆಂಚ್ ಹೆಸರು, ಇದನ್ನು "ಜೆ.ಸಿ.ಡೆಕಾಕ್ಸ್" ಅನ್ನಬಾರದು.) ಅನ್ನೋ ಬಹುರಾಷ್ಟೀಯ ಕಂಪೆನಿಗೆ ನಮ್ಮ ಬೆಂಗಳೂರಿನ ಹೊಸ ವಿಮಾನ ನಿಲ್ದಾಣದ ಒಳಗೆ, ಹೊರಗೆ, ಹೋಗೋ-ಬರೋ ರಸ್ತೆ - ಎಲ್ಲಾ ಕಡೆ ಜಾಹೀರಾತಿನ ಗುತ್ತಿಗೆ ಸಿಕ್ಕಿದೆ. ಜೆ.ಸಿ.ಡುಕೋ ಪ್ರಪಂಚದಲ್ಲಿ 50ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಜಾಹೀರಾತು ನಿರ್ವಹಣೆ ಮಾಡ್ತಾ ಇರೋ ವಿಶ್ವದ ಎರಡನೇ ಅತಿ ದೊಡ್ಡ ಜಾಹೀರಾತು ಸಂಸ್ಥೆ.

ಇಂಥಾ ಸಂಸ್ಥೆ ಇದಕ್ಕೆ ಕೈಹಾಕಿದೆ ಅನ್ನೋದೇನೋ ಸರೀನೇ. ಆದರೆ ಇವರು ಜಾಹೀರಾತುಗಳಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ಕೊಡ್ತಾರೋ ಅಥವಾ ಕನ್ನಡಾನ ಕಸದ್ ಬುಟ್ಟೀಗ್ ಎಸ್ದು ಬೆಂಗ್ಳೂರಲ್ಲಿ ಇನ್ನಷ್ಟು ಇಂಗ್ಲೀಷು-ಹಿಂದಿ ತುಂಬೋ ಹಲ್ಕಾ ಕೆಲಸಕ್ಕೆ ಕೈಹಾಕ್ತಾರೋ? ಜಾಹೀರಾತನ್ನ ನಿರ್ಮಿಸೊ ಕೆಲ್ಸದಲ್ಲಿ ಕನ್ನಡಿಗರಿಗೆ ಸರಿಯಾಗಿ ಉದ್ಯೋಗವಕಾಶ ಕೊಡ್ತಾರೋ ಇಲ್ಲಾ ಇನ್ನಷ್ಟು ಕನ್ನಡೇತರರನ್ನ ತಂದು ಇಲ್ಲೀಗೆ ತುಂಬೋ ಪಕ್ಷಪಾತದ ಕೆಲಸ ಮಾಡ್ತಾರೋ? ನಮ್ಗೆ ಇಷ್ಟ ಇಲ್ಲದೇ ಇರೋದನ್ನ ಇವರು ಮಾಡೋ ಕಡೆಗೆ ವಾಲೋ ಮುಂಚೇನೇ ನಾವು ಎಚ್ಚೆತ್ತುಕೊಂಡು ಬೇಕಾದ ಕ್ರಮ ಕೈಗೊಳ್ಳೋದೇ ಲೇಸು ಗುರು!

ಪ್ಯಾರಿಸ್ಸಲ್ಲಿ ಫ್ರೆಂಚ್ ಹೇಗೋ ಹಾಗೇ ಬೆಂಗ್ಳೂರಲ್ಲಿ ಕನ್ನಡ

ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಇಲ್ಲಿನ ಪ್ರತಿ ರಾಜ್ಯಕ್ಕೂ ಅದರದೇ ಭಾಷೆ-ಸಂಸ್ಕೃತಿಗಳೂ ಇತಿಹಾಸ-ವರ್ತಮಾನ-ಭವಿಷ್ಯಗಳೂ ಇವೆ. ಬೆಂಗಳೂರು ಅನ್ನೋದು ಕನ್ನಡಿಗರು ಕಟ್ಟಿ ಬೆಳೆಸಿರೋ ಊರು. ಫ್ರಾನ್ಸಿಗೆ ಪ್ಯಾರಿಸ್ ಹೇಗೆ ರಾಜಧಾನಿಯೋ ಕರ್ನಾಟಕಕ್ಕೆ ಬೆಂಗಳೂರು ರಾಜಧಾನಿ. ಪ್ಯಾರಿಸ್ಸಲ್ಲಿ ಫ್ರೆಂಚಿಗೆ ಹೇಗೋ ಹಾಗೇ ಇಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ನೀಡಬೇಕು ಅನ್ನೊದನ್ನ ಜೆ.ಸಿ.ಡುಕೋ ಅರ್ಥ ಮಾಡ್ಕೊಬೇಕು. ಹಾಗಂತ ಇಲ್ಲಿ ಇಂಗ್ಲೀಷಲ್ಲಿ ಜಾಹೀರಾತುಗಳು ಇರಬಾರದು ಅಂತೇನಿಲ್ಲ. ಇರಲಿ, ಆದ್ರೆ ಜಾಹೀರಾತಿನ ತುಂಬ ಇಂಗ್ಲೀಷ್ನೇ ಮೆರಸಿ ಕನ್ನಡದಲ್ಲಿ ಆಟಕ್ಕುಂಟು-ಲೆಕ್ಕಕ್ಕಿಲ್ಲ ಅನ್ನೊ ರೀತಿಲಿ ಇವತ್ತಿನ ದಿನ ವೋಡಾಫೋನ್ ಮಾಡ್ತಿರೋ ನಾಡದ್ರೋಹದ ಕೆಲಸ ಇವರು ಮಾಡಬಾರದು.
ಪ್ಯಾರಿಸ್, ಲಂಡನ್, ಟೆಲವೀವ್, ಫ್ರಾಂಕ್ಫರ್ಟ್, ಆಮ್ಸ್‍ಟರ್‍ಡಾಮ್, ಬ್ಯಾಂಕಾಕ್, ಬೀಜಿಂಗ್, ಟೋಕಿಯೊ, ಹೀಗೆ ವಿಶ್ವದ ಯಾವುದೇ ಪ್ರಸಿದ್ಧ ವಿಮಾನ ನಿಲ್ದಾಣ ನೋಡಿ, ಇಳಿದ ಕೂಡಲೆ ಕಣ್ಣಿಗೆ ಬೀಳೋದು ಅಲ್ಲೀ ಭಾಷೆಯ ಜಾಹೀರಾತುಗಳೇ. ಎಲ್ಲಾ ಜಾಹೀರಾತಲ್ಲೂ ತಮ್ಮ ಭಾಷೆಗೆ ಅಗ್ರಸ್ಥಾನ, ನಂತರದ ಸ್ಥಾನ ಬೇರೆ ಭಾಷೆಗೆ. ನಮ್ಮ ಬೆಂಗಳೂರಲ್ಲೂ ಹಾಗೇ ಆಗಬೇಕು.

ಇವ್ರು ಕನ್ನಡಿಗರಿಗೆ ಕೆಲಸ ಕೊಡದೇ ಹೋದ್ರೆ ಇಲ್ಲಿಗೆ ಬರೋದೇ ಬೇಡ

ಜಾಹೀರಾತು ಅಳವಡಿಸೋದ್ರಿಂದ ಹಿಡಿದು ನಿರ್ವಹಣೆ ವರೆಗೆ ಇರೋ ಎಲ್ಲಾ ಕೆಲಸದಲ್ಲೂ ಕನ್ನಡಿಗರಿಗೆ ಆದ್ಯತೆ ಕೊಡಬೇಕು ಗುರು. ಬೆಂಗ್ಳೂರಿನ ವಿಮಾನ ನಿಲ್ದಾಣದಲ್ಲೂ ಇಲ್ಲೀ ಐ.ಟಿ. ಕಂಪನಿಗಳ ಥರಾ ಮಲೆಯಾಳಿಗಳು, ತಮಿಳ್ರು, ತೆಲುಗ್ರು, ಹಿಂದಿಯೋರು, ಬಂಗಾಳಿಗಳು ಬಂದು ತುಂಬ್ಕೋಬೇಕಾ? ಔರು ತಾವಷ್ಟೇ ಬರದೆ ತಮ್ಮ ಮನೆಯೋರ್ನೆಲ್ಲಾ, ತಮ್ಮ ಕಾಗೆ-ಬಳಗವನ್ನೆಲ್ಲಾ ಕರ್ದು ಇಲ್ಲೇ ವಲಸೆ ಮಾಡಿಸೋದ್ನ ಕೆಲಸ ಇಲ್ಲದ ಕನ್ನಡಿಗ ಹೊಟ್ಟೆಮೇಲೆ ತಣ್ಣೀರುಬಟ್ಟೆ ಇಟ್ಟುಕೊಂಡು ನೋಡಬೇಕಾ? ಖಂಡಿತ ಇಲ್ಲ ಗುರು! ಕನ್ನಡಿಗರಿಗೆ ಕಲ್ಸದಲ್ಲಿ ಆದ್ಯತೆ ಕೊಡದೆ ಹೋದ್ರೆ ಇವ್ರು ಎಂಥಾ ದೊಡ್ಡ ಕಂಪನೀನೇ ಆಗಿರಲಿ, ಒಂದು ದೊಡ್ಡ ನಮಸ್ಕಾರ!

ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಆದ್ಯತೆ ಕೊಟ್ರೆ ಸರಿ, ಇಲ್ಲದೇ ಹೋದರೆ...
ತನ್ನ ಜಾಹೀರಾತಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಿ, ಕನ್ನಡದೋರಿಗೆ ಕೆಲ್ಸ ಕೊಡೋಹಾಗಿದ್ರೆ ಬಹುರಾಷ್ಟ್ರೀಯ ಕಂಪನಿಯಾದರೂ ಸ್ವಾಗತ, ಹೊರರಾಜ್ಯದ ಕಂಪನಿಯಾದರೂ ಸ್ವಾಗತ. ಕನ್ನಡ-ಕನ್ನಡಿಗ-ಕರ್ನಾಟಕಗಳ್ನ ಮರ್ತು ಬರೀ ಇಂಗ್ಲೀಷೋ ಹಿಂದೀನೋ ಮೆರೆಸೋಹಾಗಿದ್ರೆ ಕನ್ನಡಿಗ ಕಟ್ಟಿದ ಜಾಹೀರಾತು ಕಂಪನೀಗೂ ಕ್ಯಾಕರ್ಸಿ ಉಗೀಬೇಕು. ಏನ್ ಗುರು?

ಸರ್ಕಾರ (ಅನ್ನೋದು ಮತ್ತೆ ಹುಟ್ಕೊಂಡಾಗ) ಕಣ್ಮುಚ್ಚಿಕೊಂಡು ಕೂತ್ಕೋಬಾರ್ದು

ಈ ಕಂಪನಿ ಬಂದು ಬೆಂಗ್ಳೂರ್ನ ಇನ್ನಷ್ಟು ಹಾಳುಗೆಡವೋ ಮುಂಚೇನೇ ಕರ್ನಾಟಕ ಸರ್ಕಾರ ಸರಿಯಾಗಿ ಕ್ರಮ ತೊಗೊಂಡು ಈ ಕಂಪನಿಗೆ ಇಲ್ಲಿ ಆಟ ಆಡಬೇಕಾದ್ರೆ ನಿಯಮಗಳೇನು ಅಂತ ತಿಳಿಸಿಕೊಡಬೇಕು. ಹಾಡು-ಹಗಲಲ್ಲೇ ಕನ್ನಡಾನ ಜಾಹೀರಾತಿನ ಒಂದು ಮೂಲೇಲಿ ಕಾಟಾಚಾರಕ್ಕೆ ಹಾಕೋದು, ಇಲ್ಲಾ ಮರೆತೇ ಬಿಡೋದು, ಇಲ್ಲಾ ಇಂಗ್ಲೀಷಲ್ಲಿ ದೊಡ್ಡ ಅಕ್ಷರದಲ್ಲಿ ಬರೆದು ಕನ್ನಡದಲ್ಲಿ ಬೂದುಗಾಜು ಇಟ್ಟುಕೊಂಡು ನೋಡೋಹಾಗೆ ಹಾಕೋದು - ಇವೆಲ್ಲ ಮಾಡುದ್ರೆ ನೇರವಾಗಿ ಪ್ಯಾರಿಸ್ಸಿಗೆ ಒದ್ದು ಕಳುಸ್ತೀವಿ ಅಂತ ವಿವರ್ಸಿ ಹೇಳ್ಬೇಕು ಗುರು!

ಬೆಳಗಾವಿ ಕುಂದಾ ಒಳಗಿರೋ ಪಾಠ

"ಬೆಳಾಗಾವಿ ಕುಂದಾ" ಬೆಳಗಾವಿ ಹೊರಗೆ ಬಂದು ಕರ್ನಾಟಕದ ಬೇರೆಬೇರೆ ಕಡೆಗಳಲ್ಲಷ್ಟೇ ಅಲ್ಲ, ಹೊರದೇಶಗಳಿಗೂ ಮಾರಾಟ ಆಗೋ ದಿನ ಕೊನೆಗೂ ಬಂದಿದೆ ಅಂತ ಪ್ರಜಾವಾಣಿ ವರದಿ ನೋಡಿ ಬಾಯಲ್ಲಿ ನೀರು ಗುರು! ಇದನ್ನ ನಮ್ಮ ಬೆಳಾಗಾವಿ ಮಂದಿ ಒಂದು ದೊಡ್ಡ ಉದ್ದಿಮೆಯಾಗಿ ಶುರು ಮಾಡ್ಕೊಂಡಿರೋದು ಸಕ್ಕತ್ ಗುರು! ನಮ್ಮ ನಮ್ಮ ಜಾಗಗಳ ವಿಶೇಷತೆಗಳ್ನ ಹಿತ್ತಲ ಗಿಡಗಳು ಅಂತ ಬಿಟ್ಟಾಕೋ ಬದ್ಲು ಅದ್ರಿಂದ ಹೇಗೆ ದುಡ್ಡು ಮಾಡ್ಕೋಬೋದು, ಹೇಗೆ ಇಡೀ ಪ್ರಪಂಚಕ್ಕೆ ಅದರ ಚಟ ಹಿಡಿಸೋದು ಅಂತ ಯೋಚ್ನೆ ಮಾಡೋದು ಸಕ್ಕತ್ ಮುಖ್ಯಾಮ್ಮಾ!

ಹಿತ್ತಲ ಗಿಡವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸಬೇಕು

ಇವತ್ತಿನ ದಿನ ಯಾವುದೇ ಒಳ್ಳೇ ಬಹುರಾಷ್ಟ್ರೀಯ ಕಂಪನಿ ತೊಗೊಂಡ್ರೂ ಅದು ತನ್ನ ಸುತ್ತಮುತ್ತಲ ಸಂಪನ್ಮೂಲ-ಸಾಮರ್ಥ್ಯ-ಬೇಡಿಕೆಗಳ್ನ ಬಳಸಿಕೊಂಡೇ ಮುಂದೆ ಬಂದಿರೋದು. ಉದ್ದಿಮೆಯಲ್ಲಿ ಗೆಲುವು ಸಾಧಿಸಿರೋರು ಯಾರೂ ಸುತ್ತಮುತ್ತಲಲ್ಲಿರೋ ಸಂಪನ್ಮೂಲಗಳ್ನ, ಸುತ್ತಮುತ್ತಲ ಜನರ ಸಾಮರ್ಥ್ಯಗಳ್ನ, ಸುತ್ತಮುತ್ತಲ ಜನರ ಬೇಡಿಕೆಗಳ್ನ ಕಡೆಗಣಿಸಿಲ್ಲ ಗುರು! ಅವರೆಲ್ಲಾ ಸುತ್ತಮುತ್ತಲಲ್ಲಿರೋದನ್ನ ಸರಿಯಾಗಿ ನಿಭಾಯಿಸೋ ಕಲೆ ಕಲ್ತು ಇಡೀ ಪ್ರಪಂಚವನ್ನೇ ಮಾರುಕಟ್ಟೆಯಾಗಿ ಬದಲಾಯಿಸಿಕೊಂಡೌರೆ ಗುರು.

ಇದಕ್ಕೆ ಇತ್ತೀಚೆಗೆ ಕರ್ನಾಟಕಕ್ಕೂ ಲಗ್ಗೆ ಇಟ್ಟಿರೋ ಪೀಜಾ ಕಂಪನಿಗಳೇ ಉದಾಹರಣೆ. ಇವತ್ತಿನ ದಿನ ಮೂರು ಹೊತ್ತೂ ಊಟ ಮಾಡೋ ಮಾಲೀಕರಿರೋ ಪೀಜಾ ಕಂಪನಿಗಳ್ಯಾವೂ ಈ ನೆಲದಲ್ಲಿ ಹುಟ್ಟಿರೋವಲ್ಲ. ಇಡೀ ಪ್ರಪಂಚಕ್ಕೇ Pizza Hut, Dominos ಮುಂತಾದೋರು ಪೀಜಾ ಮಾರ್ತಾರೆ? ಯಾಕೆ? ಯಾಕೇಂದ್ರೆ ಮೊದ್ಲು ಔರು ತಮ್ಮ ತಮ್ಮ ನಾಡಿನಲ್ಲಿ ಹೇಗೆ (ಅತೀ ಕಡಿಮೆ ದುಡ್ಡಲ್ಲಿ, ಅತೀ ಹೆಚ್ಚು ರುಚಿಯಿರೋಹಾಗೆ) ಪೀಜಾ ತಯಾರಿಸೋದು, ಹೇಗೆ ಜನ ನಾಮುಂದು-ತಾಮುಂದು ಅಂತ ಕೊಂಡ್ಕೊಳೋಹಂಗೆ ಮಾರೋದು ಅನ್ನೋ ವಿದ್ಯೇನ ಸಕ್ಕತ್ತಾಗಿ ಕಲ್ತುಕೊಂಡ್ರು, ಅದಕ್ಕೆ. ಅದು ಬಿಟ್ಟು ಇಟಲಿ ಜನ "ಛೆ! ಛೆ! ಪೀಜಾ ಎಷ್ಟೇ ಆದರೂ ಹಿತ್ತಲ ಗಿಡ!" ಅಂದ್ಕೊಂಡಿದ್ದರೆ ಇವತ್ತು ಇಡೀ ಪ್ರಪಂಚಕ್ಕೆ ಹರಡುಕೊಳ್ಳಕ್ಕೆ ಆಗ್ತಿತ್ತಾ? ಖಂಡಿತ ಇಲ್ಲಾಮ್ಮಾ!

ಸುತ್ತಮುತ್ತಲಲ್ಲಿರೋದ್ನ ಮರೆತರೆ ಕೈಗೆ ಚಿಪ್ಪೇ

ಆದ್ದರಿಂದ ಇವತ್ತೂ ಕನ್ನಡಿಗರು ವ್ಯಾಪಾರದಲ್ಲಿ ಗೆಲುವು ಸಾಧಿಸಕ್ಕೆ ಮೊದಲನೇ ಹೆಜ್ಜೇನೇ ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು:
  • ನನ್ನ ಸುತ್ತಮುತ್ತ ಸಿಗೋ ಸಂಪನ್ಮೂಲಗಳು ಯಾವುವು?
  • ನನ್ನ ಸುತ್ತಮುತ್ತ ಇರೋರ ಸಾಮರ್ಥ್ಯಗಳು ಯಾವುವು?
  • ನನ್ನ ಸುತ್ತಮುತ್ತ ಇರೋರ ಬೇಡಿಕೆಗಳು ಯಾವುವು?
  • ಇವುಗಳ್ನ ಬಳಸಿಕೊಂಡು ನಾನು ಹೇಗೆ ಇಡೀ ಪ್ರಪಂಚದಿಂದ ದುಡ್ಡು ಮಾಡಬಹುದು?
  • ನಾನೂ ದುಡ್ಡು ಮಾಡ್ಕೊಂಡು ನನ್ನ ಸುತ್ತಮುತ್ತ ಇರೋರ ಜೀವನಾನೂ ಹೇಗೆ ಹಸನಾಗಿಸೋದು?
ಮನುಷ್ಯನ ಬುದ್ಧಿಗೆ ಸುಲಭವಾಗಿ ಅರ್ಥವಾಗೋದು ಸುತ್ತಮುತ್ತಲ ವಿಷಯಗಳೇ. ಕಣ್ಣಿಗೆ ಕಾಣದಿರೋ ಸಂಪನ್ಮೂಲಗಳು, ಕಣ್ಣಿಗೆ ಕಾಣದ ಜನರ ಸಾಮರ್ಥ್ಯಗಳ್ನ, ಕಣ್ಣಿಗೆ ಕಾಣದ ಜನರ ಬೇಡಿಕೆಗಳ್ನೇ ಆಧಾರವಾಗಿಟ್ಟುಕೊಂಡು ಉದ್ಧಾರ ಆಗಕ್ಕೆ ಸಾಧ್ಯವಿಲ್ಲ ಗುರು! ನಮ್ಮ ನಾಡ್ನ, ನಮ್ಮ ನುಡೀನ, ನಮ್ಮ ಜನರನ್ನ, ಔರ ಸಾಮರ್ಥ್ಯಗಳ್ನ, ಔರ ಬೇಡಿಕೆಗಳ್ನ ಅರ್ಥ ಮಾಡ್ಕೊಳ್ದೇ, ಅದರಿಂದ ಪಡೀಬೇಕಾದ ಲಾಭವನ್ನ ಪಡ್ಕೊಳ್ದೆ ನಾವು ಈ ಜಾಗತೀಕರಣದ ಯುಗದಲ್ಲಿ ಏನೂ ಕಿಸ್ಯಕ್ಕಾಗಲ್ಲ ಗುರು!

ಕಾವೇರೀನ ಸಮುದ್ರದ ಪಾಲು ಮಾಡಾಕ ನಮ್ಮ ಕಡಿಯಿಂದ ಕಸಗೊಂಡ್ರನಾ?

ಎರಡು ವರ್ಷದಾಗ ಪುಗಸಟ್ಟಿ ಸಮುದ್ರಕ್ಕ ತಮಿಳುನಾಡಿಂದ ಹೊಂಟಿರೋ ಕಾವೇರಿ ನೀರು 500 ಟಿ.ಎಂ.ಸಿ ಅಂತ 15ನೇ ಅಕ್ಟೋಬರ ತಾರೀಕಿನ ಕನ್ನಡಪ್ರಭದ ವರದಿ ಹೇಳಾಕ್ ಹತ್ತೈತ್ರೀಯಪ್ಪಾ. ವರ್ಷಕ್ಕ ಬರೋಬ್ಬರಿ 250 ಟಿ.ಎಂ.ಸಿ ನೀರು ಉಣಾಕ ಉಡಾಕ ಇಲ್ಲದಾಂಗ ಸಮುದ್ರ ಸೇರಕ್ ಹತ್ತೈತಿ ಅಂದ್ರ ಯಾರಿಗ್ ತಾನ ಹೊಟ್ಟಿ ಉರಿಯಂಗಿಲ್ರೀ?
ಮೊನ್ನಿ ಕಾವೇರಿ ನ್ಯಾಯಮಂಡಲಿ ಮಂದಿ ಕೊಟ್ಟಿರೋ ಕಡೀ ತೀರ್ಪಿನಾಗ ತಮಿಳುನಾಡಿನ ಪಾಲು 419 ಟಿಎಂಸಿ ನೀರಾದರ ನಮ್ ಕರ್ನಾಟಕಕ್ ಸಿಗೋದು 270 ಟಿ.ಎಂ.ಸಿ. ಅಂದರ, ಈ ತಮಿಳುನಾಡು ಮಂದಿ ಸುಖಾಸುಮ್ನೆ ಸಮುದ್ರಕ್ಕ ಸೋರಿಕಿ ಮಾಡ್ತಿರೋದು ಕರ್ನಾಟಕದ ಒಂದು ವರ್ಷದ್ ಬಾಬ್ತು ಆಗಿರೋ 250 ಟಿ.ಎಂ.ಸಿ ಯಷ್ಟು ನೀರನ್ನ ಗುರು!

ಈ ಪರಿ ಚೆಲ್ಲೋ ನೀರು ಉಳೀತಂದ್ರ ನಮ್ಮ ನೀರಿನ ಸಮಸ್ಯೆ ಬಗೆಹರಿದಂಗೇ ಆತಲ್ಲೋ ಗುರು?

ತಮಿಳು ಮಂದಿ ಭಾಳ ನೀರು ಕೇಳಾಕ್ ಹತ್ತಾರ ಗುರು!


ಕಾವೇರಿ ನದಿಯಾಗ ಒಂದು ವರ್ಷದಾಗ ಹರಿಯೋ ನೀರು ಅಜಮಾಸು 740 ಟಿಎಂಸಿ ಐತಿ. ತಮಿಳುನಾಡು ವರ್ಷಕ್ 566 ಟಿಎಂಸಿ ನೀರು ಬೇಕಂತೈತಿ. ತಮಿಳುನಾಡಾಗ್ ಹುಟ್ಟಿ ಕಾವೇರಿಯಾಗ ಕೂಡೋ ನೀರಿನ ಪ್ರಮಾಣ 252 ಟಿಎಂಸಿ ಅಷ್ಟ್ ಐತಿ. ಅಂದ್ರ ತಮಿಳುನಾಡಾಗ್ ಹುಟ್ಟೋ ಅಷ್ಟೂ ನೀರು ಸಮುದ್ರದ ಪಾಲೇ ಆದಂಗ್ ಆತಲ್ರೀಪಾ! ಏನ್ ಅನ್ಯಾಯಾ ಗುರು!

ನೀರು ರಗಡ್ ಬಂದು ನದಿ ತುಂಬಿ ಉಳಕಿ ನೀರು ಸಮುದ್ರಕ್ ಹೋದ್ರ ಏನ್ ತ್ರಾಸು ಅಂತೀರೇನ್ರೀಪಾ? ಹೀಂಗಾ ಪೋಲಾಗೋ ನೀರಿನ ಒಂದೊಂದು ಹನಿನೂ ಸರೀಗ್ ಬಳಸ್ಕೊಂಡ್ರ, ಅಂಥ ಒಂದ್ ಛಲೋ ತೀರ್ಮಾನಕ್ಕ ನಾವ್ ಎರಡೂ ರಾಜ್ಯಗಳ್ ಬಂದ್ವೂ ಅಂದ್ರ ಈ ನೀರು ಹಂಚಿಕಿ ಕಿತ್ತಾಟ ಇರಂಗೇ ಇಲ್ಲಾ ಅನ್ನಿಸ್ತೈತಿ. ಖರೀ ಅಂದ್ರಾ... ಸಮುದ್ರಾ ಸೇರಾಕ್ ಹತ್ತಿರೋ ಈ 250 ಟಿಎಂಸಿ ನೀರೇನು ಸಮುದ್ರದ ದಡದಾಗ್ ಹುಟ್ಟೋದಲ್ಲ. ಕಾವೇರಿ ನದಿ ಕೂಡಾ ನಡನಡಕ್ಕ ಸೇರ್ಕೊಂತಾ, ಹರಕೊಂತಾ ಬರೂದು. ಈ ನೀರನ್ನ ಹಿಡಿದಿಟ್ಟುಕೊಂಡು ನೀರಿಲ್ಲದ ಕಾಲದಾಗ ಬಳಸಿಕೊಂಡ್ರಾ, ನಾವಿಬ್ರೂ ಬಡ್ದಾಡೋದು ತಪ್ಪತೈತಿ ಗುರು!

ಆಷ್ಟು ಕೇಳೋ ಮಂದಿ 340 ಟಿಎಂಸಿ ನೀರು ಚೆಲ್ಲಾಕ ಹತ್ತಾರ!


ತಮಿಳುನಾಡಾಗ ಭೂಮಿ ಒಳಗಿರೋ ನೀರಿನ ಪ್ರಮಾಣ 150 ಟಿಎಂಸಿ, ಕೊಲೆರೂನ್ ಅಣಿಕಟ್ಟಿ ಸೋರಿಕಿ 102 ಟಿಎಂಸಿ, ಟೈಲ್ ಮತ್ತ ರೆಗ್ಯುಲೇಟರ್ ಸೋರಿಕಿ 88 ಟಿಎಂಸಿ, ಅಂದಾಜು ಮಳೀನೀರು 50 ಟಿಎಂಸಿ... ಹೀಂಗ ಖಾಲಿ ಕಳ್ಕೊಳೋ ನೀರಿನ ಪ್ರಮಾಣ 340 ಟಿಎಂಸಿ. ಈ ಪರೀ ನೀರ್ ಸೋರಿಕಿ ಆಗೂದನ್ನ ಖರೇನಾ ತಪ್ಪುಸಿದ್ರ ತಮಿಳುನಾಡು, ಕರ್ನಾಟಕದ ಪ್ರಾಣ ಹಿಂಡಿ ನೀರು ಬಸಿಯೋದು ತಪ್ತೈತಿ. ಹಾಲು ಕೊಡೋ ದನದ್ ಮೊಲಿಯಾಗ ರಕ್ತ ಹಿಂಡೋದ್ ತಪ್ತೈತಿ!

ಎರಡೂ ಕಡೀ ಮಂದಿ ನೀರು ಚೆಲ್ಲೋ ಬದಲು ಕೂಡಿಡೋದ ಪರಿಹಾರ


ನಮ್ ಕರ್ನಾಟಕದಾಗ ಮ್ಯಾಕೀದಾಟು ಅನ್ನೂ ಕಡೀ ಕಟ್ಟೋಣು ಅಂತ ಇರೋ ಅಣಿಕಟ್ಟಿ ಕಟಗೊಂಡ್ರ, ತಮಿಳು ನಾಡು, ಕರ್ನಾಟಕ ಎರಡೂ ಕಡೀ ಕಾವೇರಿ ನದೀ ಹರಿಯೋ ದಾರೀಮಟ ಈಟೀಟೇ ಸಣ್ಸಣ್ಣ ಅಣಿಕಟ್ಟುಗಳನ್ನು ಕಟಗೊಂಡ್ರಾ, ಹಾಂಗ್ ಆ ನೀರನ್ನ ಹಿಡಿದಿಟ್ಟುಕೊಂಡರಾ ಈ ತಲೀನೋವು ಹೋಗಂಗಿಲ್ಲೇನು?

ಈ ನೀರು ಹಂಚಿಕಿ ರಾಜ್ಯ ರಾಜ್ಯಗಳಿಗೆ ಅಂತ್ ಅನ್ನೂ ಬದಲು ತಾಲೂಕವಾರು ಹಂಚಿಕೆ ಮಾಡುದ್ರಾ ಛಲೋ ಅಲ್ಲೇನು? ಆಯಾ ಪ್ರದೇಶದಾಗ ಹುಟ್ಟೋ ನೀರನ್ನ ಅಲ್ಲಲ್ಲೇ ಕೂಡಿಟ್ಟುಕೊಂಡು ಬಳ್ಸೋ ಪದ್ದತಿ ಛಲೋ ಅನ್ನುಸ್ತೈತಿ... ಏನಂತೀ ಗುರೂ?
ತಮಿಳುನಾಡಾಗ ಕಾವೇರಿ ನದಿಗೆ ಇರೋದು ೯೩ ಟಿಎಂಸಿ ನೀರು ಹಿಡ್ದಿಡೋ ಮೆಟ್ಟೂರು ಅಣಿಕಟ್ಟಿ ಒಂದಾ. ಮತ್ ನಮ್ಮ ಕರ್ನಾಟಕದಾಗ್ ಇರೋ ಕೆ.ಆರ್.ಎಸ್ ನಾಗ ಹಿಡುಸೋದು ಅದಕ್ಕಿಂತಲೂ ಕಡಿಮೇನೆ. ಅವೆರಡೂ ತುಂಬಿ ತುಳಕಾಕ್ ಹತ್ತದ್ರಾ ಮ್ಯಾಗಿಂದೆಲ್ಲಾ ಖರೇ ಸಮುದ್ರದ ಪಾಲಾಕ್ಕೈತಿ.

ಕರ್ನಾಟಕ ಸರ್ಕಾರ ಮತ್ತ ತಮಿಳುನಾಡು ಸರ್ಕಾರಗಳು ಮಾತುಕತಿ ಬಾಗ್ಲಾ ಮತ್ ತಗೀಬೇಕು. ಎರಡೂ ಕಡೀ ನೀರಾವರಿ ತಜ್ಞರನ್ನು ಎದ್ರಾಬದ್ರಾ ಕುಂಡ್ರುಸಿ ಮಾತುಕತಿ ಆಡಬೇಕು. ಪರಿಹಾರ ಕಂಡ್ಕೋಬೇಕು. ಇದ್ ಆಗೂಣಿಲ್ಲಾ ಅನ್ನೂದಾದ್ರ, ದಿಲ್ಲಿಯಾಗಿನ ನಮ್ ಕೇಂದ್ರ ಸರ್ಕಾರ, ಎರಡೂ ರಾಜ್ಯಗಳಿಗ ನೀರು ಹಂಚಿಕೀನಾ ವೈಜ್ಞಾನಿಕವಾಗಿ ರೂಪಿತವಾದ ಸೂತ್ರದ ಮೂಲಕ ಮಾಡಬೇಕು. ಅದಕ್ಕೂ ಮೊದಲ, ನಮ್ಮ ಕೇಂದ್ರ ಸರ್ಕಾರ ರಾಜ್ಯ ರಾಜ್ಯಗಳ ನಡೂಕಿನ ನದಿ ನೀರಿನ ತಗಾದಿ ಪರಿಹಾರ ಮಾಡಕ್ಕ ಒಂದ್ "ರಾಷ್ಟ್ರೀಯ ಜಲನೀತಿ"ನ ಹುಟ್ ಹಾಕ್ಬೇಕು. ಏನಂತೀ ಗುರು?

ಕೊನೀ ಹನಿ
ದೇಶ ದೇಶಗಳ ಮಧ್ಯದಾಗೇ, ನದಿ ನೀರು ಹಂಚಿಕಿ ಒಪ್ಪಂದ ಸಾಧ್ಯ ಆಗೋಣಿರೂವಾಗ, ಒಂದೇ ದೇಶದ ಎರಡು ರಾಜ್ಯಗಳ ತಗಾದೀಗೂ ಒಂದ್ ಪರಿಹಾರ ಕಂಡುಕೊಳ್ಳೋದು ತ್ರಾಸ್ ಆಗಂಗಿಲ್ಲಾ ಅನ್ಸತೈತಿ ಗುರು! ನಮ್ಮ ಸರ್ಕಾರಗಳು ತುಸಾ ಮನಸ್ ಮಾಡಬೇಕ್ ಅಷ್ಟೆ.

"ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ"

ನಮ್ಮ ನಾಡಿನ ಹಿರಿಯ ಸಾಹಿತಿಗಳು, ಸಂಶೋದಕರು ಮತ್ತು ಚಿಂತಕರು ಆದ ಡಾ.ಚಿದಾನಂದ ಮೂರ್ತಿಯವರು ನಮ್ಮ ಕನ್ನಡ ನಾಡಿನ ವಿಸ್ತಾರ, ಅದರ ಸಂಸ್ಕೃತಿಯ ವ್ಯಾಪ್ತಿ, ಎರಡು ಸಾವಿರ ವರ್ಷಗಳ ಇತಿಹಾಸ, ಅದರ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನು, "ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ " ಎಂಬ ಕಿರು ಗ್ರಂಥದ ಮೂಲಕ ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ನಿಜವಾದ ಅರಿವು, ಸ್ವಾಭಿಮಾನವನ್ನು ಮೂಡಿಸಿ ಅವರನ್ನು ಜಾಗೃತಗೊಳಿಸುವ ಸಲುವಾಗಿ ೧೯೮೭ ರ ರಲ್ಲಿ ಮೊದಲು ಪ್ರಕಾಶಗೊಂಡ ಈ ಪುಸ್ತಕ, ಇತ್ತೀಚಿನ ಪರಿಶ್ಕೃತ ಮುದ್ರಣದೊಂದಿಗೆ ಸುಮಾರು ಐವತ್ತೈದು ಸಾವಿರ ಪುಸ್ತಕಗಳಿಗೂ ಮೀರಿದ ಮಾರಟದ ದಾಖಲೆ ಹೊಂದಿರುವುದು ಈ ಪುಸ್ತಕದ ವೈಶಿಷ್ಟ್ಯ ಗುರು. ಅಷ್ಟೇ ಅಲ್ಲದೆ ಇದು ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು ಬಾಷೆಗಳಿಗೂ ಅನುವಾದಗೊಂಡಿರುವ ಜನಪ್ರಿಯ ಕೃತಿಯಾಗಿದೆ.

ಸ್ವಾಭಿಮಾನ ಮತ್ತು ಸಮನ್ವಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಮೂಲಕ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಕದಂಬರಿಂದ ಉಗಮವಾದ ಕರ್ನಾಟಕ ಸಂಸ್ಕೃತಿ, ಬಾದಾಮಿ ಚಾಲುಕ್ಯರ ಆಳ್ವಿಕೆ, ಹ್ಯುಯೆನ್ ತ್ಸಾಂಗ್ ರಂತ ವಿದೇಶಿ ಪ್ರವಾಸಿಗರು ಅಂದು ಕನ್ನಡ ನಾಡಿನ ವೈಭವವನ್ನು ತಮ್ಮ ದಾಖಲೆಗಳಲ್ಲಿ ಹಿಡಿದಿಟ್ಟಿರುವ ಮಾತುಗಳು, ಇದಕ್ಕೆ ಸಾಕ್ಶ್ಯ ನುಡಿಯುವ ಸಮಕಾಲೀನ ಶಾಸನಾಧಾರಗಳು, ಕವಿಯೂ-ಕ್ಷಾತ್ರ ಪರಂಪರೆಯುಳ್ಳವನಾಗಿದ್ದ ಪಂಪ, ಸ್ವಾಭಿಮಾನದ ವಚನಕಾರರು, ನಮ್ಮ ರಾಜ ಮನೆತನದವರು ಹೇಗೆ ಸರ್ವ ಧರ್ಮೀಯರಾಗಿದ್ರು - ಅವರಿಂದ ಸಂತರು-ಕವಿ-ಕಲಾವಿದರ ಪೋಷಣೆ, ಅವರಲ್ಲಿ ಪ್ರೇರೇಪಣೆಗೊಂಡ ನಾಡು-ನುಡಿಗಳ ಬಗೆಗಿನ ಪ್ರೇಮ, ಅದರಿಂದುಂಟಾದ ಭಾಷೆ-ಸಾಹಿತ್ಯದ ಬೆಳವಣಿಗೆ, ಕರ್ನಾಟಕ ಸಂಗೀತದ ಸೊಗಡು, ನಮ್ಮ ನೃತ್ಯ, ಚಿತ್ರಕಲೆ ಮತ್ತು ವಾಸ್ತು ಶಿಲ್ಪಗಳು ಸಾರುವ ಸೊಗಸು, ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರ ಏಕೀಕರಣ ಚಳವಳಿ ಹೀಗೆ ಇನ್ನೂ ಹಲವಾರು ಕುತೂಹಲಕರ-ಆಸಕ್ತಿಯುತ ವಿಷಯಗಳನ್ನು ನಮ್ಮ ಕಣ್ಣು ಮುಂದೆ ತೆರೆದಿಟ್ಟು ಹೃದಯವನ್ನು ತುಂಬಿಸುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರೀತಿಸಿದರೆ ಅದು ಭಾರತ ಸಂಸ್ಕೃತಿಯನ್ನು ಕಾಪಾಡಿದಂತೆ

ಪುಸ್ತಕದಲ್ಲಿ ಮೂರ್ತಿಯವರು ಕನ್ನಡಿಗರ ಜಾಗೃತಿಯನ್ನು ಬಡಿದೆಬ್ಬಿಸುತ್ತ ಈ ಕೆಳಗಿನ ಮಾತುಗಳನ್ನು ಉಲ್ಲೇಖಿಸುತ್ತ ಭಾರತ ಸಂಸ್ಕೃತಿಯೆಂದರೇನೆಂದು ಅಮೂಲ್ಯವಾದ ಮತ್ತು ಮಹತ್ವಪೂರ್ಣವಾದ ಮಾತುಗಳನ್ನು ದಾಖಲಿಸಿದ್ದಾರೆ.
" ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. "

ಜಾಗೃತನಾಗಬೇಕಿರುವ ಕನ್ನಡಿಗ


ಅಧುನಿಕ ಕರ್ನಾಟಕದ ಸ್ಥಿತಿಗತಿಗಳನ್ನು ವಿಷ್ಲೇಶಿಸುತ್ತ, ಅದರ ಸಮಸ್ಯೆಗಳನ್ನು ಮೆಲಕು ಹಾಕುತ್ತ, ನಮ್ಮ ನೆಲ-ಜಲ-ಗಡಿ-ಬದುಕುನ್ನು ಹಸನು ಮಾಡಿಕೊಳ್ಳದೆ, ನಮ್ಮ ಭಾಷೆ-ಸಂಸ್ಕೃತಿಯ ಗಟ್ಟಿತನವನ್ನು ಉಳಿಸಿ ಕಾಪಾಡಿಕೊಳ್ಳದೆ ಸ್ವಾಭಿಮಾನವನ್ನು ಕಳೆದುಕೊಂಡು ನಿರಭಿಮಾನಿಯಾಗಿರುವ ಕನ್ನಡಿಗನು ಇಂದು ಜಾಗೃತನಾಗಬೇಕಾಗಿರುವ ವಿಷಯವನ್ನು ಮೂರ್ತಿಯವರು ಈ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ.

ಚಿಕ್ಕ ಹುಲಿಮರಿಯೊಂದು ಕುರುಬನ ಕೈಗೆ ಸಿಕ್ಕು ಅದು ಕುರಿಗಳ ಜತೆ ಹುಲ್ಲು ತಿಂದು ಮ್ಯಾ ಮ್ಯಾ ಎಂದು ಅರಚುತ್ತ ಬೆಳೆಯುತ್ತದೆ. ಒಮ್ಮೆ ದೊಡ್ಡ ಹುಲಿಯೊಂದು ಅಟ್ಟಿಸಿಕೊಂಡು ಬಂದಾಗ ಉಳಿದ ಕುರಿಗಳಂತೆ ಅದೂ ಹೆದರಿ ಓಡುತ್ತದೆ. ಅಚ್ಚರಿಗೊಂಡ ದೊಡ್ಡ ಹುಲಿ, ಮರಿ ಹುಲಿಯನ್ನು ಹಿಡಿದು ಒಂದು ಕೊಳದಲ್ಲಿ ಅದರ ಮುಖವನ್ನು ತೋರಿಸಿ ಅದು ಸಹ ಹುಲಿ ಮರಿಯೇ ಎಂದು ಹೇಳಿ ಅದಕ್ಕೆ ಗರ್ಜಿಸುವುದನ್ನು ಪರಿಚಯಿಸುತ್ತದೆ. ಸ್ವಸ್ವರೂಪ ಜ್ಞಾನವನ್ನು ಪಡೆವ ಹುಲಿ ಮರಿ ಮುಂದೊಂದು ದಿನ ವನರಾಜನಾಗಿ ಮೆರೆಯುತ್ತದೆ ಎಂಬ ಉದಾಹರಣೆಯ ಮೂಲಕ ಹುಲಿತನವನ್ನು ಮರೆತ ಕನ್ನಡಿಗರಿಗೆ, ಈ ನಾಡು ನಿಮಗೆ ಸುಲಭವಾಗಿ ದಕ್ಕಿದ್ದಲ್ಲ, ನಿಮ್ಮ ಹಿರಿಯರ ತ್ಯಾಗ-ಬಲಿದಾನಗಳಿಂದ ಬೆಳೆದ ಈ ನಾಡಿನಲ್ಲಿ ಇಂದು ನೀವು ಇಲಿಗಳಾಗಿದ್ದೀರಿ. ನೀವು ಸಹ ವೀರರು, ನಿಜವಾದ ಹುಲಿಗಳು, ನಿಮ್ಮ ಸ್ವಸ್ವರೂಪವನ್ನು ಅರಿಯಿರಿ ನೈಜ ಹುಲಿ ಕನ್ನಡಿಗರಾಗಿ ಎಂಬ ವಿಚಾರಪೂರ್ವಕವಾದ ಕರೆ ನೀಡಿದ್ದಾರೆ.

ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತ ಓದುಗರೊಬ್ಬರು ಹೇಳುತ್ತಾರೆ: ಆಂಗ್ಲ ಮೋಹದಲ್ಲಿ , ಆತ್ಮ ವಿಸ್ಮೃತಿಯಲ್ಲಿರುವ ನಮ್ಮ ಯುವ ಜನಾಂಗಕ್ಕೆ ಇಂತಹ ಪುಸ್ತಕವೊಂದರ ಅಗತ್ಯ ತುಂಬ ಇತ್ತು. ಅಧ್ಯಾಪಕ ಮಿತ್ರರು ತಮ್ಮ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಓದಲು ಸೂಚಿಸಬೇಕು.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು -೫೬೦೦೦೨ ವತಿಯಿಂದ ಪ್ರಕಟವಾದ ಮತ್ತು ಇಲ್ಲಿ ದೊರಕುವ ಈ ಪುಸ್ತಕವನ್ನು ಕೊಂಡು ಓದಿ, ಸಮಸ್ತ ಕನ್ನಡಿಗರಿಗೂ ಪರಿಚಯಿಸಿ. ಹೊಸ ಕನ್ನಡ ನಾಡಿನ ಅಭ್ಯುದಯಕ್ಕಾಗಿ ಕಂಕಣಬದ್ಧರಾಗಿ!

ಮನೆ-ತಂಗುದಾಣಗಳಲ್ಲಿ ಕನ್ನಡ ಮೆರೀಬೇಕು

ಮೈಸೂರಲ್ಲಿ ಮನೆ-ತಂಗುದಾಣಗಳು [ಹೋಮ್ ಸ್ಟೇಗಳು] ದೊಡ್ಡ ಯಶಸ್ಸು ಕಂಡಿವೆ ಅಂತ ಅಕ್ಟೋಬರ್ 9ರ ಡೆಕನ್ ಹೆರಾಲ್ಡ್ ವರದಿ ಮಾಡಿದೆ. ಈ ಹೊಸ ಉದ್ದಿಮೆ ಮನೆ ಮತ್ತು ಖಾಲಿ ಜಾಗಗಳನ್ನು ಹೊಂದಿರೋ ಹೆಚ್ಚು ಹೆಚ್ಚು ಮೈಸೂರಿಗರರಿಗೆ ಪ್ರವಾಸೋದ್ಯಮದಿಂದ ಲಾಭ ಪಡ್ಕೊಳಕ್ಕೆ ನಾಂದಿ ಹಾಡಿದೆ ಅನ್ನೋದು ಸಕ್ಕತ್ ಒಳ್ಳೇದು ಗುರು! ಆದರೆ ಈ ತಂಗುದಾಣಗಳ್ನ ನಡೆಸೋರು ಕನ್ನಡತನವನ್ನ ಬಿಡದೇ ಈ ಕೆಲಸ ಮಾಡಬೇಕಾಗಿರೋದು ಬಹಳ ಮುಖ್ಯ. ಈ ತಂಗುದಾಣಗಳಲ್ಲಿ ಕನ್ನಡದ ವಾತಾವರಣ ಇರೋಹಾಗೆ ಮಾಡೋ ಹೊಣೆ ಸರ್ಕಾರದ್ದೂ ಹೌದು. ಇಲ್ಲದೇ ಹೋದ್ರೆ ಬೇರೆ ಭಾಷೆಯೋರು ಮೈಸೂರಲ್ಲಿ ಮನೇಮೇಲೆ ಮನೆ ಮಾಡ್ಕೊಂಡು ದುಡ್ಡು ಮಾಡ್ಕೋತಾರೆ, ನಾವು ಪೆದ್ದಮುಂಡೇವಂಗೆ ಔರ ಮನೇಲೇ ಕೆಲಸಕ್ಕೆ ಕೈ ಚಾಚಬೇಕಾಗತ್ತೆ, ಅಷ್ಟೆ!

ಎಣ್ಣೆ ಬಂದಾಗ ಕನ್ನಡಿಗರು ಕಣ್ಮುಚ್ಚಿಕೊಂಡಿರಬಾರದು

ಹೊರ ರಾಜ್ಯದೋರು ಮೈಸೂರಿಗೆ ಎದ್ನೋ ಬಿದ್ನೋ ಅಂತ ಬಂದು 60x40 ಸೈಟುಗಳ್ನ ತೊಗೊಂಡು ಈ ಉದ್ದಿಮೆಗೆ ಇಳಿಯಕ್ಕೆ ಮುಂಚೆ ಕನ್ನಡಿಗರು ಈ ಅವಕಾಶಾನ ತಮ್ಮ ತೆಕ್ಕೆಗೆ ತೊಗೋಬೇಕು ಗುರು! ಈಗ ಎಚ್ಚರವಾಗದೆ ಹೋದರೆ ಹೊರಗಿಂದ ಬಂದು ಉದ್ಯಮ ಸ್ಥಾಪಿಸಿಕೊಳ್ಳೋರ ಮುಂದೆ ನಾವು ಕೆಲಸಕ್ಕೆ ಅವರ ಕೈ ಹಿಡೀಬೇಕಾದ ದಿನ ಬರತ್ತೆ, ಅಷ್ಟೆ!

ಈಗ ಇರೋ ಸ್ವಂತ ಜಾಗ ಮತ್ತು ಸಣ್ಣ ಬಂಡವಾಳದಿಂದ ಈ ಉದ್ಯಮದ ಅನುಭವ ತೊಗೊಂಡು ಆಮೇಲೆ ದೊಡ್ಡ ಹೋಟಲ್-ಗೀಟಲ್ ಸ್ಥಾಪನೆಗೆ ಧೈರ್ಯ ಮತ್ತು ಮನಸ್ಥಿತಿಗಳ್ನ ಈ ಮನೆ-ತಂಗುದಾಣಗಳು ಕೊಡಬಲ್ಲವು ಗುರು! ಇದಕ್ಕೆ ದುಡ್ಡಿಲ್ಲ ಅಂತ ಕೈಕಟ್ಟಿ ಕೂರೋದೂ ಬೇಕಾಗಿಲ್ಲ. ಸಾಲ ಕೊಡಕ್ಕೆ ತಯಾರಿಗಿರೋ ಬ್ಯಾಂಕುಗಳು ಸಾಲುಗಟ್ಟಿ ನಿಂತಿವೆ ಗುರು!

ಕನ್ನಡ ವಾತಾವರಣಕ್ಕಾಗೇ ಹೊರಗಿನೋರು ಬರೋದು

ಪ್ರವಾಸಿಗನ ಕಣ್ಣು-ಕಿವಿ-ಮೂಗು-ನಾಲಿಗೆ ಮತ್ತು ಮನ ಏನಾದ್ರೂ ಹೊಸದನ್ನ ಸವಿಯಕ್ಕೆ ಹವಣಿಸುತ್ತಿರುತ್ತವೆ. ಪ್ರವಾಸದ ಉದ್ದೇಶವೇ ಹೊಸ ಅನುಭವ. ಹಾಗಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳನ್ನ ನೋಡಕ್ಕೆ ಬರೋ ಪ್ರವಾಸಿಗನಿಗೆ ಅದರ ಅನುಭವ ಈ ವಾಸದ ತಂಗುದಾಣಕ್ಕೆ ಬಂದ ತಕ್ಷಣವೇ ಕಾಣಿಸಬೇಕು. ವಾತಾವರಣದಿಂಡ ಇಲ್ಲಿನ ಸ್ಥಳೀಯತೆ, ಇಲ್ಲಿನ ಸಂಸ್ಕೃತಿ, ಇಲ್ಲಿನ ಬದುಕು ಪರಿಚಯಿಸಿ ಕೊಡೋಹಾಗಿರಬೇಕು.

ಉದಾಹರಣೆಗೆ, ಹೊರದೇಶದಿಂದ ಬರುವ ಪ್ರವಾಸಿಗನಿಗೆ WELCOME ಫಲಕ ತೂಗಿಹಾಕೋ ಬದಲು, ಮನೆಯ ಅಂಗಳದಲ್ಲಿ ಬಣ್ಣ ಬಣ್ಣ್ದದ ರಂಗೋಲಿ ಔನ್ನ ಸ್ವಾಗತಿಸಬೇಕು. ತಿಂಡಿಗೆ ಕಾರ್ನ್ ಫ್ಲೇಕ್ ಇಡೋ ಬದ್ಲು ಬಿಸಿಬಿಸಿ ಇಡ್ಲಿ ತಟ್ಟೆ ಅವನ ಮುಂದೆ ಬರಬೇಕು. ಇದ್ರಿಂದ ಅವನ ಮನಸ್ಸು ಇಲ್ಲಿನ ಇತರ ವಿಚಾರಗಳ್ನ ತಿಳ್ಕೊಳಕ್ಕೆ ಚಡಪಡಿಸೋ ಹಾಗೆ ಆಗತ್ತೆ ಗುರು. ತಂಗುದಾಣದ ಪರಿಚಾರಕರು ಎಲ್ಲವನ್ನೂ ಸಮರ್ಥವಾಗಿ ತಿಳಿಹೇಳೋದ್ನೂ ಸಹ ಕಲೀಬೇಕು.

ಹಂಗಂತ ಏಸಿ ರೂಮು ಮತ್ತು ಈಜುಕೊಳ ಸೇವೆ ಇರಬಾರದು ಅಂತೇನಿಲ್ಲ. ಕೊಡಬೇಕು, ಆದರೆ ಕನ್ನಡತನವನ್ನು ಕಡೆಗಣಿಸಬಾರದು. ಏಸಿ ಹಾಕಿದ್ರೆ ಕನ್ನಡ ಮಾತಾಡಬಾರದು ಅಂತೇನಿಲ್ಲವಲ್ಲ? ಏಸಿ ಏನು ಕೆಟ್ಟೋಗಲ್ಲ ತಾನೆ? ಅಥವಾ ಈಜುಕೊಳದ ಸುತ್ತ ಜನ ಕನ್ನಡ ಮಾತಾಡ್ತಿರಬಾರದು ಅಂತೇನಿಲ್ಲವಲ್ಲ? ಪ್ರವಾಸಿಗನಿಗೆ ಬೇಕಾಗಿರೋದೇ ಕನ್ನಡದ ವಾತಾವರಣ ಗುರು!

ಇಷ್ಟು ಒಳ್ಳೇ ಅನುಭವ ಕೊಟ್ಟು ಕನ್ನಡದ ವಾತಾವರಣಾನ ಪ್ರವಾಸಿಗನಿಗೆ ಕೊಟ್ರೆ ಔನು ತನ್ನ ಜಾಗಕ್ಕೆ ಹೋಗಿ ಕನ್ನಡದ ಕಂಪ್ನ ಬೀರ್‍ತಾನೆ ಗುರು! ಹಾಗೇ ಕನ್ನಡದ ನಾಲ್ಕು ಮಾತೂ ಆಡ್ತಾನೆ. ಹೇಗೆ ಜರ್ಮನಿಗೆ ಹೋದ್ರೆ ನಾವುಗಳು ಬಂದು ಖುಷಿಯಿಂದ ನಾಲ್ಕು ಪದ ಜರ್ಮನ್ ಮಾತಾಡ್ತೀವೋ ಹಾಗೆ!

ಕನ್ನಡೇತರರಿಗೆ ಈ ತಂಗುದಾಣಗಳ್ನ ತೆಗಿಯಕ್ಕೆ ಒಪ್ಪಿಗೆ ಸಿಗಬಾರದು

ಪಂಜಾಬದಿಂದ ಬಂದು ಪಂಜಾಭೀ ಡಾಬಾ ಇಡ್ತೀನಿ ಅನ್ನೋನಿಗಾಗಲಿ, ಚಿಟ್ಟಿನಾಡು ಅಥವ ಆಂದ್ರ ಊಟ ಹಾಕ್ತೀನಿ ಅನ್ನೋನಿಗಾಗಲಿ ಮೈಸೂರಿನ ನಗರಾಡಳಿತದೋರು ಮನೆ ತಂಗುದಾಣ ತೆಗಿಯಕ್ಕೆ ಒಪ್ಪಿಗೇನೇ ಕೊಡಬಾರದು. ಅರ್ಜಿ ಹಾಕ್ತಾ ಇರೋರು ಕನ್ನಡಿಗರು ಅಂತ ಖಚಿತಪಡಿಸಿಕೊಂಡೇ ಮುಂದುವರೀಬೇಕು ಗುರು! ಈ ರೀತಿಯ ತಂಗುದಾಣಗಳು ಕನ್ನಡತನ ಬಿಂಬಿಸೋ ಹಾಗೆ, ಕನ್ನಡ ಭಾಷೆ ಸಂಸ್ಕೃತಿ ಮತ್ತು ಬದುಕನ್ನು ಪರಿಚಯಿಸಿಕೊಡೋ ಹಾಗೆ ಮಾಡೋದು ಸರ್ಕಾರದ ಹೊಣೆ. ಸರ್ಕಾರದ ಕೈಲಿ ಹಾಗೆ ಮಾಡಿಸೋದು ನಮ್ಮ ಹೊಣೆ. ಇಂಥಾ ಮನೆ-ತಂಗುದಾಣಗಳಲ್ಲಿ ಕನ್ನಡದ ವಾತಾವರಣ ಇಲ್ಲದೆ ಇರೋದು ನಮ್ಮ ಕಣ್ಣಿಗೆ ಬಿದ್ದರೆ ಅವರಿಗೆ ಬುದ್ಧಿ ಹೇಳಿ, ಸರ್ಕಾರಕ್ಕೂ ದೂರು ಸಲ್ಲಿಸೋದು ನಮ್ಮ-ನಿಮ್ಮ ಕರ್ತವ್ಯ ಗುರು!
Related Posts with Thumbnails