ಬಿ.ಬಿ.ಎಂ.ಪಿ ಚುನಾವಣೇಲಿ ಕನ್ನಡೇತರ ಅಭ್ಯರ್ಥಿಗಳೆಷ್ಟು?


ಮೊನ್ನೆ ತಾನೇ ಬಿ.ಬಿ.ಎಮ್.ಪಿ ಚುನಾವಣೇಲಿ ಬೆಂಗಳೂರೆಂಬ ಕನ್ನಡಿಗರ ಕೋಟೆಯನ್ನು ಗೆಲ್ಲೋಕೆ ಯಾವ್ಯಾವ ದಂಡನಾಯಕರು ಬತ್ತಾ ಔರೆ, ಯಾವ್ಯಾವ ದೊಣೆನಾಯಕರು ಹೊಂಚು ಹಾಕ್ತಾ ಔರೆ ಅನ್ನೋದನ್ನ ಓದುದ್ವಿ. ಈ ದಂಡನಾಯಕ್ರಲ್ಲಿ ಎಷ್ಟೆಷ್ಟು ಜನರನ್ನು ನಮ್ಮ ಯಾವ ಯಾವ ಪಕ್ಷಗಳು ನಿಲ್ಲುಸ್ತಿವೆ ಅಂತನ್ನೋ ಸುದ್ದಿ ಇವತ್ತಿನ (21.03.2010ರ) ಕನ್ನಡ ಪ್ರಭದಾಗೆ ಬಂದಿರೋ ಒಂದು ವರದಿ ಹೇಳ್ತಾ ಇದೆ! ಹೊರರಾಜ್ಯದೋರು ಬಿಟ್ಟು ನಮ್ಮದೇ ನಾಡಲ್ಲಿ ಈಗಾಗಲೇ ಅಧಿಕಾರಾನೂ ಅನುಭವಿಸಿರೋ ಮೂರೂ ರಾಷ್ಟ್ರೀಯ ಪಕ್ಷಗಳು ಹೀಗೆ ದೊಡ್ಡ ಸಂಖ್ಯೆಯಲ್ಲಿ ಕನ್ನಡೇತರರಿಗೆ ಟಿಕೇಟ್ ಕೊಟ್ಟು ಬೆಂಗಳೂರಲ್ಲಿ ಕನ್ನಡ-ಕನ್ನಡಿಗರ ಹಿತಕ್ಕೆ ಎಳ್ಳುನೀರು ಬಿಡಲು ಹೊರಟಿವೆಯಾ ಅನ್ನೋ ಅನುಮಾನ ಜನರನ್ನು ಕಾಡಕ್ಕೆ ಶುರುವಾಗಿದೆ ಗುರೂ!

ಯಾರು ಎಷ್ಟ್ ಎಷ್ಟು?

ಬಿ.ಬಿ.ಎಂ.ಪಿಯಲ್ಲಿ ಈಗ ಇರೋದು 198 ವಾರ್ಡುಗಳು. ಒಟ್ಟು ಅಭ್ಯರ್ಥಿಗಳು 1342 ಜನಾ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳಗಳು ಒಟ್ಟು ನಿಲ್ಲಿಸಿರೋ ಅಭ್ಯರ್ಥಿಗಳ ಸಂಖ್ಯೆ 591. ಇದರಲ್ಲಿ ಶೇಕಡಾ 27ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಕನ್ನಡೇತರರಂತೆ. ಉರ್ದು ಭಾಷಿಕರನ್ನು ಹೊರತುಪಡಿಸಿ, ಬಿಜೆಪಿ, ಕಾಂಗ್ರೆಸ್ ತಲಾ 36 ವಾರ್ಡುಗಳನ್ನು ಕನ್ನಡೇತರರಿಗೆ ಬಿಟ್ಟು ಕೊಟ್ಟಿದ್ದರೆ, ಜೆ.ಡಿ(ಎಸ್) 28 ವಾರ್ಡುಗಳಲ್ಲಿ ಕನ್ನಡೇತರರಿಗೆ ಮಣೆ ಹಾಕಿದೆ. ಅಷ್ಟೇ ಅಲ್ಲ, ಕನಿಷ್ಟ 10 ವಾರ್ಡುಗಳಲ್ಲಿ 3 ರಾಷ್ಟ್ರೀಯ ಪಕ್ಷಗಳಿಂದ ಯಾರೇ ಗೆದ್ದರೂ, ಅದು ಕನ್ನಡದ ಸೋಲು. ಯಾಕೆ ಅಂತೀರಾ ? ಯಾಕೆಂದ್ರೆ ಈ ವಾರ್ಡುಗಳಲ್ಲಿ ಮೂರೂ ಪಕ್ಷಗಳು ಟಿಕೆಟ್ ಕೊಟ್ಟಿರುವುದು ಕನ್ನಡೇತರ ಅಭ್ಯರ್ಥಿಗಳಿಗೇ ಗುರು! ಜನತೆ ಮತ ಹಾಕೋಕೆ ಮೊದಲು ಯಾರಿಗೆ ಹಾಕಬೇಕು? ಅವರೆಷ್ಟು ನಮ್ಮ ನಾಡು ನುಡಿ ನಾಡಿಗರ ಹಿತ ಕಾಪಾಡುತ್ತಾರೆ ಅಂತೆಲ್ಲಾ ಯೋಚಿಸೋಕೆ ಇದು ಸಕಾಲ.

ಎಳ್ಳು ನೀರು: ಒಟ್ಟಾರೆ 50ಕ್ಕೂ ಹೆಚ್ಚು ವಾರ್ಡುಗಳಿಂದ ಕನ್ನಡೇತರರು ಆಯ್ಕೆಯಾಗಿ ಬರುವ ಸಾಧ್ಯತೆಗಳಿವೆ ಎಂದು ವರದಿ ಹೇಳುತ್ತೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕನ್ನಡೇತರರು ಆಯ್ಕೆಯಾಗಿ ಬಂದ್ರೆ, ಆ ಸದಸ್ಯರ ಮುಲಾಜಿನಲ್ಲಿ ಬೆಂಗಳೂರಿನ ಆಡಳಿತ ನಡೆದರೆ, ಬೆಂಗಳೂರಲ್ಲಿ ಕನ್ನಡ ಆಡಳಿತ ಭಾಷೆ ಮಾಡೋದಾಗಲಿ, ಕನ್ನಡ-ಕನ್ನಡಿಗರ ಹಿತ ಕಾಯೋ ಕೆಲಸವಾಗಲಿ ನಡೆಯೋದು ಸಾಧ್ಯಾನಾ ಅಂತಾ ಕನ್ನಡದ ಮನಸ್ಸುಗಳು ಕೇಳ್ತಾ ಇವೆ ಗುರೂ!

8 ಅನಿಸಿಕೆಗಳು:

ಸಂಧ್ಯಾ ಅಂತಾರೆ...

ಈ ರಾಷ್ಟ್ರೀಯ ಪಕ್ಷಗಳ ಕಥೇನೇ ಇಷ್ಟು... ನಮ್ಮ ನಾಡಿನ ರಾಜಕೀಯದ ಸ್ಥಿತಿ ಬದ್ಲಾಗೋ ಕಾಲ ಬೇಗ ಬರ್ಲೀ ..

ರಾಕೇಶ್ ಶೆಟ್ಟಿ ಅಂತಾರೆ...

ನಿಜ ಗುರು.ಆದ್ರೆ ಸದ್ಯಕ್ಕೆ ಕ.ರ.ವೆಯವರು ಇದ್ದಾರಲ್ಲ ಅದೇ ಸ್ವಲ್ಪ ಸಮಾಧಾನ.ನಾವ್ಗಳು ಬರಿ ಹೀಗೆ ಮಾತಾಡೋ ಬದ್ಲು ಕಣಕ್ಕೆ ಯಾಕೆ ಇಳಿಬಾರ್ದು ಅಂತ?

ಮಾಯ್ಸ ಅಂತಾರೆ...

ಇಲ್ಲೊಂದು ತೊಡಕಿದೆ.. ಬೇಜಾರ‍್ ಮಾಡಿಕೋಬೇಡಿ..

ಈ ಅಕನ್ನಡ ಅಬ್ಯರ‍್ತಿಗಳಿಗೆ ಕನ್ನಡ ಮಾತಾಡಲು ಬಂದರೆ ಅವರು ಕನ್ನಡ ಅಬ್ಯರ‍್ತಿಗಳಾಗ್ತಾರಲ್ಲವೇ?

ಈ ಅಂಕಿಅಂಶದಲ್ಲಿ, ಕನ್ನಡವೇ ಬರದ ಅಬ್ಯರ‍್ತಿಗಳೆಶ್ಟು?
ಹಾಗು ಹುಟ್ಟಿನಿಂದ ಕನ್ನಡಿಗರಲ್ಲದಿದ್ದರೂ ( ಕನ್ನಡ ಜನಾಂಗಕ್ಕೆ ಸೇರಸಿದ್ದರೂ), ಚಂನಾಗಿ ಕನ್ನಡ ಮಾತಾಡಬಲ್ಲವರೆಶ್ಟು? ಇವು ಮುಕ್ಯ.

ನಿಂಮೀ ಬರಹ ಮತ್ತೊಂದು ವಿಶಯವಂನು ಕೆದಕುತ್ತದೆ. ಇಲ್ಲಿ ಒಬ್ಬರು ಕಂನಡ ಇಲ್ಲವೇ ಕಂನಡೇತರ ಎಂಬುದಂನು ಹುಟ್ಟಿದ ಮನೆತನ/ಜನಾಂಗದ ಮೇಲೆ ಇಲ್ಲವೇ ನೆಲೆಸಿ, ಕನ್ನಡವಂನು ಮಾತಾಡಬಲ್ಮೆಯ ಮೇಲೆ ತೀರ‍್ಮಾನ ಮಾಡುವುದೇ?

ಹಾಗೂ ಉರ‍್ದು ಬಾಶಿಗರು ಹೇಗೆ ವಿಶೇಶ ಹಾಗು ಅವರು ಅಕಂನಡಿಗರು ಹೇಗೆ? ಹೆಚ್ಚಿನ ಉರ‍್ದು ಬಾಶಿಗರು ಇತ್ತೀಚೆಗೆ ವಲಸೆ ಬಂದಂತಿಲ್ಲವಲ್ಲ.

ತುಸು ಸ್ಪೆಲಿಂಗ್ ತಪ್ಪುಗಳಂನು ನೀಗಿಸಿ. ಕನ್ನಡೇತರ, ದೊಣ್ಣೇನಾಯಕ, ಇತ್ಯಾದಿ.

ಚಿಕ್ಕಾದಾಗಿ: ಬರಹದಲ್ಲಿ ಕನ್ನಡ ಹಾಗು ಅಕನ್ನಡದ ತೀರ‍್ಮಾನಕ್ಕೆ ತೆಗೆದುಕೊಂಡ ಮಾನದಂಡ, ಆದಾರ ತಿಳಿಯಲಿಲ್ಲ.

Priyank ಅಂತಾರೆ...

ಮಾಯ್ಸ,
ಪ್ರತಿಮೆ ಅನಾವರಣ ವಿಚಾರಕ್ಕೆ ತಳುಕು ಹಾಕಿ ನೋಡಿದರೆ ರಾಷ್ಟ್ರೀಯ ಪಕ್ಷಗಳ ಈ ಆಟ ತಿಳಿಯುತ್ತೆ ಅಂದುಕೊಳ್ತೀನಿ. ಹಾಗೇ, ಬೆಂಗಳೂರಿನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಷ್ಟ್ರೀಯ ಪಕ್ಷದ ಧುರೀಣರೊಬ್ಬರು ಇವತ್ತಿಗೂ ಕನ್ನಡ ಕಲಿತಿಲ್ಲ. ಅವರು ಬೆಂಗಳೂರಿನಲ್ಲಿ ನಡೆಯುವ ಸಭೆಗಳಲ್ಲಿ ತಮ್ಮ ನುಡಿಯಲ್ಲೇ ಭಾಷಣ ಮಾಡುವುದನ್ನು ವಿರೋಧಿಸಿದವರಿಗೆ, ಹೊಡೆದು ಹೊರಗೆ ಹಾಕುವಷ್ಟು ಬೆಳೆದೆ ನಿಂತ ಪರಭಾಷಿಕರ ಕನ್ನಡ ನಿಷ್ಟೆ ಪ್ರಶ್ನಿಸಬಹುದಾದದ್ದೇ !

ಮಾಯ್ಸ ಅಂತಾರೆ...

ಪಿಂಕಾ,

ನಂಮ ನೆಲದಲ್ಲಿ ಶಿವಾಜಿ, ಗಾಂದಿ, ರಾಮಮೋಹನರಾಯ, ಅಂಬೇಡ್ಕರರ, ಬುದ್ದರ, ಮದ್ವಾಚಾರ‍್ಯ, ಶಂಕರಾಚಾರ‍್ಯರ ಹೀಗೆ ಹಲ ಅಕನ್ನಡಿಗರ ಬೊಂಬೆಗಳನ್ನು ನಿಲ್ಲಿಸಿದ್ದಾರೆ. ಹಾಗೇ ಇನ್ನೊಂದು...

ಇಲ್ಲಿ ಪ್ರಶ್ನೆ ಅದಲ್ಲ...

Anonymous ಅಂತಾರೆ...

ಮಾಯ್ಸಾ ಸಾರ್,
ದೊಣೇನಾಯಕ ಸರಿಯಾದ ಪ್ರಯೋಗ. ದೊಣ್ಣೆನಾಯಕ ತಪ್ಪು. ಹೊಳೆ ನೀರಿಗೆ ದೊಣೆ ನಾಯಕನ ಅಪ್ಫಾಣೆಯೇ? ಅಂತಾ ಗಾದೆ. ದೊಣೆ ಅಂದ್ರೆ :ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟಲ್ಲಿ ದೊಣೆ (ನಾಮಪದ)(ದೇ. <ಸಂ. ದ್ರೋಣೀ)ಬೆಟ್ಟದ ಮೇಲಿರುವ ಸ್ವಾಭಾವಿಕವಾದ ಹೊಂಡ, ಕೊಳ ೨ ಕಟ್ಟಿರಿಸಿರುವ ಕೊಳ, ಕಲ್ಯಾಣಿ ೩ ಹಳ್ಳ, ತಗ್ಗು ೪ ಬಾಣದ ಕೋಶ, ತೂಣೀರ.
ವಂದನೆ
ಸುಂದರ

Anonymous ಅಂತಾರೆ...

ಮಾಯ್ಸಾ ಅವ್ರೇ,
ಇಲ್ಲಿ ಕನ್ನಡ ಬಲ್ಲ ಅಭ್ಯರ್ಥಿಗಳೆಲ್ಲಾ ಕನ್ನಡ ಪರ ಅಭ್ಯರ್ಥಿಗಳಾಗಲ್ಲ.ಈ ಅಕನ್ನಡ ತಾಯ್ನುಡಿಯ ಜನರಿಗೆ ಬೆಂಗಳೂರಿನ ವ್ಯವಸ್ಥೆಯನ್ನು ಕನ್ನಡಿಗರಿಗಾಗಿ ಕಟ್ಟುವ ದರ್ದು ಇರುತ್ತಾ? ಅನ್ನೋದೆ ದೊಡ್ಡ ಅನುಮಾನ.

ಸುಂದರ್

Anonymous ಅಂತಾರೆ...

ಇದೊಂದು ದುರದೃಷ್ಟಕರ ಸಂಗತಿ. ಇನ್ನೂ ವಿಷಾದಕರ ಸಂಗತಿಯೆಂದರೆ ತೆಲುಗನೊಬ್ಬ ಬೆಂಗಳೂರಿನ mayor ಆಗ ಹೊರಟಿರುವುದು. ಔದು ಕಟ್ಟಾ ನ ಮಗ ಜಗಧೀಶ್ ಮೇಯರ್ ಆಗ್ತಾನಂತೆ :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails