ಪಾರಭಾಷಿಕ ಪದಗಳು ಮತ್ತು ಭೈರಪ್ಪನವರ ನಿಲುವು!

ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದು ಸಂದರ್ಶನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. (ಫೋಟೋ ಕೃಪೆ:  http://simhasn.blogspot.com/) ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದರಲ್ಲಿ ಮುಖ್ಯವಾಗಿ ಕನ್ನಡಿಗರ ನುಡಿ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಇವರ ಅನಿಸಿಕೆಗಳು ನಿಜಕ್ಕೂ ನಮ್ಮನ್ನು ಚಿಂತನೆಗೆ ಒಡ್ದುವಂತಿದೆ. ಇಡೀ ಭಾರತವೆಲ್ಲಾ ಒಂದೇ ಪದಗಳನ್ನು ಬಳಸಬೇಕು, ಆ ಕಾರಣಕ್ಕಾಗಿ ಅವು ಸಂಸ್ಕೃತ ಮೂಲದ್ದಾಗಿರಬೇಕು ಎನ್ನುವ ನಿಲುವಿನ ಶ್ರೀ ಭೈರಪ್ಪನವರು ಇಲ್ಲೂ ಅದನ್ನೇ ಪ್ರತಿಪಾದಿಸಿದ್ದಾರೆ.
೪೫ ವರ್ಷಗಳ ಹಿಂದಿನ ಶಾಸ್ತ್ರಗಳ ಪಾರಿಭಾಷಿಕ ಪದಗಳನ್ನು ಕಟ್ಟುವ ಬಗ್ಗೆ ನೇಮಿಸಿದ್ದ ಒಂದು ಸಮಿತಿಯ ಸಭೆಯಲ್ಲಿ ತಮಿಳರು ಇಂಥಹ ನಡೆಯನ್ನು ವಿರೋಧಿಸಿದ್ದನ್ನು ಶ್ರೀಯುತರು ಹೇಳುತ್ತಾ ಇದರ ಪರಿಣಾಮವಾಗಿ ತಮಿಳಿನ ಪಾರಿಭಾಷಿಕ ಪದಗಳು ತಮಿಳರಿಗಷ್ಟೇ ತಿಳಿಯಬೇಕು ಎಂದಿದ್ದಾರೆ. ಹೀಗೆ ತಮಿಳರು ತಮಿಳಲ್ಲೇ ಪದಗಳನ್ನು ಹುಟ್ಟುಹಾಕಿ ಬಳಸೋದು (ಕನ್ನಡಿಗರು ಕನ್ನಡದಲ್ಲೇ) ಬೇರೆ ಭಾಷೆಗಳವರಿಗೆ ಆಯಾ ಭಾಷೆಯ ವೈಜ್ಞಾನಿಕ ಸಂಶೋಧನಾ ಬರಹಗಳನ್ನು ಅರ್ಥ ಮಾಡ್ಕೊಳ್ಳೋಕೆ ತೊಂದರೆಯಾಗುತ್ತೆ ಎಂದಿದ್ದಾರೆ. ಇವರ ಮಾತಿನ ಒಟ್ಟು ಸಾರವೆಂದರೆ ಇಡೀ ದೇಶದ ಎಲ್ಲೆಡೆ ಒಂದೇ ಪಾರಿಭಾಷಿಕ ಪದಗಳು ಇರಬೇಕು ಎನ್ನುವುದು. (ಕನಿಷ್ಠ ಅದು ತಮಿಳರಿಗಾದರೂ ಅರ್ಥವಾಗುತ್ತದೆ, ಭೈರಪ್ಪನವರು ಪ್ರತಿಪಾದಿಸಿದ ಕನ್ನಡ ಪದಗಳು(?) ಕನ್ನಡದ ಮಕ್ಕಳಿಗೂ ಅರ್ಥವಾಗದಲ್ಲಾ ಗುರೂ? ಅವರು ಕೊನೆಯಲ್ಲಿ ಹೇಳಿದಂತೆ ತಮಿಳಿನ ಪದಗಳೂ ಸರಿಯಿಲ್ಲಾ ಅನ್ನುವುದೇ ನಿಜವಾದರೆ ಅದಕ್ಕೆ ಅವರು ಸಂಸ್ಕೃತ ಬೇರಿನ ಪದಗಳನ್ನು ಒಪ್ಪದ್ದು ಕಾರಣವಲ್ಲ, ಸರಿಯಾಗಿ ಪದಗಳನ್ನು ಕಟ್ಟದ್ದೇ ಹೋದದ್ದು ಕಾರಣ ಅನ್ನೋದು ನಂಬಲರ್ಹವಾಗಿದೆ.)

ಭಾಷೆ: ಸರಳ ಕಲಿಕೆಗೋ? ಪರಭಾಷೆಯವರು ತಿಳಿಯಲಿಕ್ಕೋ?

ಸರಳವಾದ ಒಂದು ಪ್ರಶ್ನೆ: ಭಾಷೆ ಇರುವುದು ಕಲಿಕೆಗೋ? ಪರಭಾಷಿಕರು ಅರ್ಥ ಮಾಡಿಕೊಳ್ಳಲಿಕ್ಕೋ?
ಕಲಿಕೆ ಶುರುವಾಗುವುದೇ ಮಗು ತನ್ನ ಸುತ್ತಮುತ್ತಲಿನ ವಸ್ತುಗಳನ್ನು ಗುರುತಿಸುವ ಮೂಲಕ. ಈಗ 'ಮಗು ಏನನ್ನಾದರೂ ಬಳಸುತ್ತಿರಲಿ, ಪಾರಿಭಾಷಿಕ ಪದ ಮಾತ್ರಾ ಆಡುನುಡಿಯಿಂದ ದೂರವಿರುವುದೇ ಸರಿ' ಎಂದರೆ ಹೇಗೆ? ಇದಕ್ಕೆ ಸಣ್ಣ ಉದಾಹರಣೆಯೆಂದರೆ ನೀರನ್ನು 'ನೀರು' ಎಂದು ಗುರುತಿಸಿ ಬೆಳೆಯುವ ಮಗು ಮುಂದೆ ಅದನ್ನೇ 'ಜಲ'ವೆಂದೋ 'ಉದಕ'ವೆಂದೋ ಎಂದು ಬಳಸಿ ಕಲಿಕೆ ಮಾಡಬೇಕೆನ್ನುವುದು. ಇದು ಸಣ್ಣ ಉದಾಹರಣೆಯಾದರೂ ಇಂತಹ ನೂರಾರು ನಮ್ಮ ಪಠ್ಯಗಳಲ್ಲಿವೆ. ಕನ್ನಡಿ = ದರ್ಪಣ, ಉಬ್ಬು = ನಿಮ್ನ, ತಗ್ಗು = ಪೀನ, ಎಲೆ = ಪತ್ರ... ಹೀಗೆ!

ಇವುಗಳಲ್ಲಿ ಯಾವುದರಲ್ಲಿ ಕಲಿಯುವುದು ಸೂಕ್ತವೆಂದು ಇವರನ್ನೇನಾದರೂ ಕೇಳಿದರೆ "ಕರ್ನಾಟಕದಲ್ಲಿ ಬೇರೆ ಬೇರೆ ಒಳನುಡಿಗಳಿವೆ, ಅವುಗಳಲ್ಲೆಲ್ಲಾ ಹೇಗೆ ಕಲಿಕೆ ಮಾಡೋದು" ಎಂಬ ಆಕ್ಷೇಪ ಎತ್ತುತ್ತಾರೆ. ನಿಜವಾಗಿ ಆಯಾ ಒಳನುಡಿಗಳಲ್ಲಿ ಕಲಿಯುವ ವ್ಯವಸ್ಥೆ ಇರಬೇಕಾದ್ದು ಕಲಿಕೆಯ ಪರಿಣಾಮದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಹಾಗೆ ಸಿದ್ಧಪಡಿಸುವಲ್ಲಿನ ತೊಡಕಿನ ಕಾರಣದಿಂದಾಗಿ ನಂತರದ ದೂರದ ನುಡಿಯನ್ನು ಆಶ್ರಯಿಸುತ್ತೇವೆ. ಕನ್ನಡದ ವಿಷಯಕ್ಕೆ ಬಂದರೆ ಇದನ್ನು ನಾವು ಎಲ್ಲರ ಕನ್ನಡ ಎಂದಿದ್ದೇವೆ. ಇರಲಿ, ನಮ್ಮ ನಡುವೆ ನಾನಾ ಒಳನುಡಿಗಳಿವೆ ಎನ್ನುವುದು ನಮ್ಮಿಂದ ದೂರದ ಸಂಸ್ಕೃತವನ್ನು ಆಶ್ರಯಿಸಲು ಕಾರಣವಾಗುವುದು ಹೇಗೆ ಸರಿ? ಹಾಗೆ ನಮ್ಮ ಸಂಶೋಧನೆಗಳನ್ನು ಪರಭಾಷಿಕರು ಓದಿ ಅರಿಯಬೇಕು ಎಂದರೆ ಎಷ್ಟು ಜನ ಪರಭಾಷೆಯವರು ಕನ್ನಡ ಸಂಶೋಧನಾ ಪ್ರಬಂಧ ಓದುತ್ತಾರೆ? ಅಥವಾ ಕನ್ನಡಿಗರು ಎಷ್ಟು ಪರಭಾಷಾ ಸಂಶೋಧನಾ ಪ್ರಬಂಧಗಳನ್ನು ಓದುತ್ತಾರೆ? ಅರೆರೆ, ಇಷ್ಟಕ್ಕೂ ನಮ್ಮ ಸಂಶೋಧನಾ ಪ್ರಬಂಧಗಳನ್ನು ಜಗತ್ತಿನ ಜನರೆಲ್ಲಾ ಓದುವುದು ಬೇಡವೇ? ಬರೀ ಭಾರತೀಯ ಪರಭಾಷಿಕರು ಓದಲು ಸಹಾಯವಾಗುವಂತೆ ಸಂಸ್ಕೃತ ಬೇರಿನ ಪದಗಳನ್ನು ಕಟ್ಟುವುದು, ತಮಿಳರ 'ತಮಿಳಿನಲ್ಲಿ ಮಾತ್ರಾ ಇರಲಿ' ಎನ್ನುವ ಸಂಕುಚಿತತೆ(?)ಗಿಂತಾ ಹೀನಾಯವಲ್ಲವೇ? ಇವರ ವಾದವನ್ನು ವಿಸ್ತರಿಸಿಕೊಂಡು ಹೋಗಿ ನಾವು ಪ್ರಪಂಚಕ್ಕೆಲ್ಲಾ ಒಂದೇ ಪಾರಿಭಾಷಿಕ ಪದಗಳಿರಬೇಕು ಎನ್ನಬೇಕಾಗುತ್ತದೆ. ಆದರೆ ಇಂತಹ ನಿಲುವು ವೈವಿಧ್ಯ ವಿರೋಧಿ, ಜೀವ ವಿರೋಧಿ ನಿಲುವಾಗುತ್ತದೆ. ನೀವೇ ಹೇಳಿ...ಈ ವಿಷಯದಲ್ಲಿ ತಮಿಳರ ನಿಲುವು ಸರಿಯಾಗಿದೆಯೋ? ಭೈರಪ್ಪನವರ ನಿಲುವೋ? ಎಂದು ನೋಡಿದರೆ ಭೈರಪ್ಪನವರ ನಿಲುವಿನಲ್ಲಿನ ತೊಡಕು ಕಾಣುತ್ತದೆಯಲ್ಲವೇ?

ಕಲಿಕೆ ಅತ್ಯುತ್ತಮವಾಗೋದು ಕಲಿಯುವವನು ಈಗಾಗಲೇ ಕಲಿತಿರುವುದನ್ನು ವಿಸ್ತರಿಸಿಕೊಂಡು ಹೋಗುವುದರಿಂದಲೇ. ಪರಿಸರದಲ್ಲಿರುವ ಗ್ರಹಿಕೆಗೆ ಸಿಗುವ ಕಾಣುವ ಎಟುಕುವ ವಸ್ತುಗಳಿಂದಲೇ ಆಳವಾದ ಅರಿವುಗಳನ್ನು ದಕ್ಕಿಸಿಕೊಳ್ಳುವುದು ಸಾಧ್ಯವಲ್ಲವೇ? ಅಂದರೆ ಕಲಿಕೆಯನ್ನು ಜನರ ಹತ್ತಿರ ಹತ್ತಿರಕ್ಕೆ ಒಯ್ಯಲು ಇರುವ ಸಾಧನ ಅವರಾಡುವ ನುಡಿಯಲ್ಲೇ ಅದನ್ನು ಒದಗಿಸಿಕೊಡುವುದೇ ಆಗಿದೆ. ಇವತ್ತು ಕನ್ನಡದಲ್ಲಿ ಇಂಥಾ ಏರ್ಪಾಟಿಲ್ಲಾ ಅನ್ನೋದು ಗೊತ್ತೊರೋದೆ... ಆದರೆ ನಾವು ಸಾಗಬೇಕಾದ ದಿಕ್ಕು ಯಾವ ಕಡೆಗಿರಬೇಕು? ಜನರಿಗೆ ಹತ್ತಿರದ ನುಡಿಯಲ್ಲಿ ಪದಗಳನ್ನು, ಅವು ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ್ದಿರಲಿ, ಕಟ್ಟುವ ಕಡೆಗಿರಬೇಕು. ಹೀಗೆ ಇಲ್ಲದ ಸಮಾನ ಪದಗಳನ್ನು ಕೃತಕವಾಗಿ ಕಟ್ಟುವುದರಲ್ಲಲ್ಲ ಮತ್ತು ಅಂತಹ ಕಟ್ಟುವಿಕೆಯ ಕಾರಣದಿಂದಾಗಿ ನಾಡಿನ ಜನರ ಕಲಿಕೆಯನ್ನು ತೊಡಕಾಗಿಸುವುದರಲ್ಲಲ್ಲ!

ಕೊನೆಹನಿ: ಮೇಲಿನ ನಿಲುವಿಗೆ ಎದುರಾಗಿ 'ಮಕ್ಕಳು ತುಂಬಾ ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ, ಅವರಿಗೆ ಚಿಕ್ಕಂದಿನಿಂದಲೇ ಈ ಪರದೇಶಿ ಪಾರಿಭಾಷಿಕ ಪದಗಳನ್ನು ಪರಿಚಯಿಸಿದರೆ ಅದನ್ನೇ ಕಲಿಯುತ್ತಾರೆ' ಎನ್ನುವ ವಾದವನ್ನು ಮುಂದಿಡಬಹುದು. ಒಪ್ಪೋಣ... ಹಾಗಾದರೆ ಈ ತೊಡಕಿನ ಕೆಲಸಕ್ಕೆ ಮುಂದೆಂದೂ ಉಪಯೋಗಕ್ಕೆ ಬಾರದ ಪದಗಳಿಗಿಂತ ಮೂಲ ಇಂಗ್ಲೀಶ್ ಅಥವಾ ಲ್ಯಾಟೀನ್ ಅಥವಾ ಗ್ರೀಕ್ ನುಡಿಯ ಪದಗಳನ್ನೇ ಕಲಿಸಬಹುದಲ್ವಾ?

1 ಅನಿಸಿಕೆ:

Anonymous ಅಂತಾರೆ...

ವೈವಿಧ್ಯತೆ ಭಾರತದ ಮತ್ತು ಹಿಂದೂ ಧರ್ಮದ ತಿರುಳು.ಹಿಂದೂ ಧರ್ಮದ ಮೂಲ ಇರುವುದು ವಿವಿಧ ವಿಚಾರಗಳನ್ನು ಗೌರವಿಸುವುದರಲ್ಲಿ.ಗುಡಿ ಕಟ್ಟುವುದರಿಂದ ಅಥವಾ ಇತರ ಧರ್ಮಗಳನ್ನು ಕೀಳಾಗಿ ಕಾಣುವುದರಲ್ಲಿ ಅಲ್ಲ.ಭೈರಪ್ಪನವರಡು ಅಸಲಿಗೆ ಹಿಂದೂ ಧರ್ಮಕ್ಕೆ ವಿರುದ್ಧವಾದ ನಿಲುವು.ವೈವಿದ್ಯತೆಯನ್ನು ಕಳೆದುಕೊಂಡ ಮರುಕ್ಷಣವೇ ಭಾರತ ಹಾಗೂ ಹಿಂದೂ ಧರ್ಮದ ಸರ್ವ ನಾಶ ಪ್ರಾರಂಭವಾದಂತೆ.ನಿಜವಾದ ಹಿಂದುತ್ವದ ಕುರಿತು ತಿಳಿಯಬೇಕೆಂದಿದ್ದರೆ ದಯವಿಟ್ಟು ರಾಮಕೃಷ್ಣ ಪರಮಹಂಸ -ಸ್ವಾಮಿ ವಿವೇಕಾನಂದರ ವಿಚಾರವನ್ನು ಅಭ್ಯಾಸ ಮಾಡಿ.ಇಂಥಹ ಜನಗಳಿಂದ ಅಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails