ಕನ್ನಡ ಮತ್ತು ಕನ್ನಡಿಗರ ಏಳಿಗೆ - ೧: ಒಳ್ಳೆಯ ಕನ್ನಡವೆಂದರೆ ಸಂಸ್ಕೃತಮಯವಾದದ್ದು ಎಂಬ ಬರೆಯದ ಕಟ್ಟಳೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಕನ್ನಡಿಗರಲ್ಲಿ ಸಂಸ್ಕೃತಮಯವಾಗಿರುವ ಮಾತು "ಒಳ್ಳೆಯ-ಕನ್ನಡ"ವೆಂದು ಬರೆಯದ ಕಟ್ಟಳೆಯೊಂದು ಚಾಲ್ತಿಯಲ್ಲಿದೆ. ಒಳ್ಳೆಯ ಕನ್ನಡದ ಬರಹವೆಂದರೆ ಅದು ಬಹಳ ಸಂಸ್ಕೃತದ ಪದಗಳಿರುವ ಬರಹವೇ ಎಂದು ಕೂಡ ಏರ್ಪಟ್ಟಿದೆ. ಹೆಚ್ಚು ಸಂಸ್ಕೃತದ ಪದಗಳಿರದ ಹಾಗೂ ಸಂಸ್ಕೃತದಲ್ಲಿ ಉಲಿಯುವಂತೆ ಉಲಿಯದವರಿಗೆ ಕನ್ನಡವೇ ಸರಿಯಾಗಿ ಬರುವುದಿಲ್ಲವೆಂದು ಬೈಯಲಾಗುತ್ತದೆ, ಅವರ "ಭಾಷೆ ಅಭಿವೃದ್ಧಿಹೊಂದಬೇಕು" ಎಂದೂ ಹೇಳಲಾಗುತ್ತದೆ. ಆದರೆ ನಿಜಕ್ಕೂ ನೋಡಿದರೆ ಸಂಸ್ಕೃತದಿಂದ ಬಹಳ ಕಡಿಮೆ ಪ್ರಭಾವಿತವಾಗಿರುವ ಒಂದು ನುಡಿಯನ್ನೇ ಹೆಚ್ಚಾಗಿ ಕನ್ನಡಿಗರು ಆಡುವುದು. ಅದೇ ನಿಜವಾದ ಕನ್ನಡ. ಅದರಲ್ಲಿ ಒಳ್ಳೆತನದ ಎಳ್ಳಷ್ಟೂ ಕೊರತೆಯಿಲ್ಲ. ಅದು ಯಾವುದೇ ರೀತಿಯ ಅಭಿವೃದ್ಧಿಯನ್ನು ಕೂಡ ಹೊಂದಬೇಕಿಲ್ಲ.

ಮೊಟ್ಟಮೊದಲು ಕನ್ನಡಿಗರಿಗೆ ಜ್ಞಾನ-ವಿಜ್ಞಾನಗಳನ್ನು ಕೊಟ್ಟ ಸಂಸ್ಕೃತವು

ಮೊದಮೊದಲು ಕನ್ನಡಿಗರು ಏನಾದರೂ ಕಲಿಯಬೇಕು ಎಂದು ಆಸೆಪಟ್ಟಿದ್ದರೆ ಆ ಆಸೆಯು ಅವರಿಗೆ ಸಂಸ್ಕೃತದಿಂದಲೇ ಈಡೇರುತ್ತಿತ್ತು ಎಂದು ಊಹೆಯ ಮೇಲೆ ಹೇಳಬಹುದು. ಏನನ್ನಾದರೂ ಕಲಿಯಬೇಕಿದ್ದರೆ ಅದು ಸಂಸ್ಕೃತವನ್ನು ಬಲ್ಲವರಿಂದಲೇ ಕಲಿಯಬೇಕಿತ್ತು, ಏನನ್ನಾದರೂ ಓದಬೇಕೆಂದು ಕೈಹಾಕಿದರೆ ಅದು ಸಂಸ್ಕೃತದ ಗ್ರಂಥಗಳೇ ಆಗಿರುತ್ತಿದ್ದವು. ಕನ್ನಡದಲ್ಲಿ ಓದುವುದಕ್ಕೆ, ಕಲಿಯುವುದಕ್ಕೆ ಆಗ ಏನೂ ಇದ್ದಿಲ್ಲವೆಂದು ಕಾಣಿಸುತ್ತದೆ. ಆದ್ದರಿಂದ ಈ ಕನ್ನಡಿಗರು ಸಂಸ್ಕೃತವನ್ನು ಕಲಿತು, ಸಂಸ್ಕೃತದ ಒಳ್ಳೊಳ್ಳೆಯ ಆಧ್ಯಾತ್ಮಿಕ ಗ್ರಂಥಗಳನ್ನು ಮತ್ತು ಇತರ ಕೃತಿಗಳನ್ನು ಕಷ್ಟ ಪಟ್ಟು ಓದಿ ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಅರಿವಿನ ಬಾಯಾರಿಕೆಯೇ ಅಂಥದ್ದು. ಇವರ ಜ್ಞಾನದ ದಣಿವಾರಿಸಿದ್ದ ಸಂಸ್ಕೃತದಿಂದ ಬಹಳ ಪ್ರೇರಣೆಯನ್ನು ಪಡೆದು ತಮ್ಮ ಬರಹ ಮತ್ತು ನುಡಿಗಳಲ್ಲಿ ಸಹಜವಾಗಿ ಹೆಚ್ಚು ಹೆಚ್ಚು ಸಂಸ್ಕೃತದ ಪದಗಳನ್ನು ಬಳಸತೊಡಗಿದರು. ಕನ್ನಡಿಗರಿಗೆ ಅಧ್ಯಾತ್ಮವೇ ಮೊದಲಾದ ವಿಷಯಗಳ ಮತ್ತು ಬೇರೆಬೇರೆ ಶಾಸ್ತ್ರಗಳ ಅರಿವನ್ನು ಮೊಟ್ಟಮೊದಲಿಗೆ ಸಂಸ್ಕೃತವೇ ನೀಡಿದೆಯೆಂದು ಹೇಳಬಹುದು. ಸಂಸ್ಕೃತದಿಂದ ನಮಗೆ ಸಿಕ್ಕಿರುವ ಈ ಕೊಡುಗೆಗೆ ಕನ್ನಡಿಗರು ಸಂಸ್ಕೃತವನ್ನು ಗೌರವಿಸತಕ್ಕದ್ದೇ. ಆದರೆ ಆ ಗೌರವದಿಂದ ನಮ್ಮ ನುಡಿಯ ಬಗ್ಗೆಗೇ ಅಗೌರವವು ಹುಟ್ಟಿಕೊಂಡಿರುವುದು ಸರಿಯಿಲ್ಲ. ಆ ಗೌರವದಿಂದ ಕನ್ನಡವೇ ಕೀಳೆಂದು ಏರ್ಪಟ್ಟಿರುವುದು ಸರಿಯಲ್ಲ. ಕನ್ನಡಿಗರನ್ನೂ ಸೇರಿದಂತೆ ಪ್ರಪಂಚದಲ್ಲೆಲ್ಲ ಈಗಿನ ನುಡಿಯರಿಗರಿಗೆ (ಭಾಷಾವಿಜ್ಞಾನಿಗಳಿಗೆ) ಕನ್ನಡ-ಸಂಸ್ಕೃತಗಳು ಬೇರೆಬೇರೆ ನುಡಿಕುಟುಂಬಗಳಿಗೆ ಸೇರಿವೆಯೆಂದೂ ಕನ್ನಡವು ಸಂಸ್ಕೃತದಿಂದಲ್ಲ, ದ್ರಾವಿಡನುಡಿಯಿಂದ ಹುಟ್ಟಿಬಂದಿದೆಯೆಂದೂ ಗೊತ್ತಿದೆ. ಸಂಸ್ಕೃತ ಕನ್ನಡದ ತಾಯಿಯಲ್ಲವೆಂದು ನುಡಿಯರಿಗರಿಗೆ ಮನದಟ್ಟಾಗಿದೆ. ಆದರೆ ನುಡಿಯರಿಗರ ಈ ಅರಿವು ನಮ್ಮ ತಿಳುವಳಿಕಸ್ತರ ತಲೆಗೆ ಇಳಿದಿಲ್ಲ, ಇಳಿಸಿಕೊಂಡಿಲ್ಲ.

ಸಂಸ್ಕೃತದ ಸೋಂಕಿಲ್ಲದ ಕನ್ನಡವು ಬೆಳವಣಿಗೆಹೊಂದದ್ದೆಂದು ಏರ್ಪಟ್ಟದ್ದು

ಒಟ್ಟಿನಲ್ಲಿ ಹಿಂದೆ ನುಡಿಯೊಂದನ್ನು ಈಗಿನಷ್ಟು ವೈಜ್ಞಾನಿಕವಾಗಿ ವಿಶ್ಲೇಷಿಸುವ ನುಡಿಯರಿಮೆಯೇ (ಭಾಷಾವಿಜ್ಞಾನವೇ) ಹುಟ್ಟಿರಲಿಲ್ಲವಾದ್ದರಿಂದ ಹಿಂದಿನ ತಿಳುವಳಿಕಸ್ತರು ಸಂಸ್ಕೃತಕ್ಕೂ ಕನ್ನಡಕ್ಕೂ ಇರುವ ವ್ಯತ್ಯಾಸವನ್ನು ಕಾಣದೆ ಹೋದರು. ಕನ್ನಡವು ಸಂಸ್ಕೃತದಿಂದ ಹುಟ್ಟಿದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನೇನು ಅವರು ಕೇಳಲು ಹೋಗಲಿಲ್ಲ. ಅದು ಅವರಿಗೆ ಬೇಕಾಗಿಯೂ ಇರಲಿಲ್ಲ. ಸಂಸ್ಕೃತದಿಂದ ಅವರಿಗೆ ಜ್ಞಾನವು ಸಿಕ್ಕುತ್ತಿದ್ದರಿಂದ ಈ ಪ್ರಶ್ನೆಯು ಅವರಿಗೆ ಮುಖ್ಯವೆನಿಸಿರಲಾರದು. ಆದ್ದರಿಂದ ಯಾರುಯಾರಿಗೆ ಯಾವಯಾವ ಸಂಸ್ಕೃತದ ಪದ ಮತ್ತು ಸೊಲ್ಲರಿಮೆಯ ಅಂಶಗಳು ಇಷ್ಟವಾಯಿತೋ ಅದನ್ನು ಅವರು ತಂತಮ್ಮ ಬರಹ ಮತ್ತು ನುಡಿಗಳಿಗೆ ಸೇರಿಸಿಕೊಳ್ಳುತ್ತ ಹೋದರು. ಆಗಲೂ ಅವರ ಬರಹಕ್ಕೆ ಎಷ್ಟು ಸಂಸ್ಕೃತದ ಪದಗಳು ಮತ್ತು ಸೊಲ್ಲರಿಮೆಯಂಶಗಳು ಸೇರಿದವೋ ಅಷ್ಟು ಅವರ ನುಡಿಗೆ ಸೇರಲಿಲ್ಲ. ಆಗ ಬರಹವೆಂಬುದು ಬೆರಳೆಣಿಕೆಯ ಜನರನ್ನು ಮಾತ್ರ ತಲುಪುತ್ತಿದ್ದರಿಂದ ಬರಹದಲ್ಲಿ ಬೇಕಾದ್ದನ್ನು ಮಾಡಿಕೊಳ್ಳುವುದು ಸುಲಭವಾಗಿತ್ತು, ಆದರೆ ಮಾತೆಂಬುದನ್ನು ಎಲ್ಲರೂ ಆಡುತ್ತಿದ್ದರಿಂದ ಯಾವುದನ್ನು ಆಡಬೇಕು, ಯಾವುದನ್ನು ಆಡಬಾರದು ಎಂದು ಜನರೇ ಸೇರಿ ತೀರ್ಮಾನಿಸಿದರು. ಮತ್ತೂ ಏನೆಂದರೆ ಆಗ ಬರಹಗಳನ್ನು ಇಡೀ ಕನ್ನಡಜನಾಂಗಕ್ಕೆಲ್ಲ ಉದ್ದೇಶಿಸಿ ಬರೆಯುತ್ತಿರಲಿಲ್ಲ. ಕನ್ನಡಿಗರಲ್ಲಿ ಆಗ ಅಕ್ಷರಸ್ತರ ಸಂಖ್ಯೆ ಬಹಳ ಕಡಿಮೆಯಿದ್ದುದರಿಂದ ಬರಹಗಳನ್ನು ಆಗ ಬರೆಯುತ್ತಿದ್ದುದು ಕೇವಲ ಬೆರಳೆಣಿಕೆಯಷ್ಟು ಜನರಿಗೋಸ್ಕರ ಮಾತ್ರ. ಹೀಗೆ ಕಾಲಕಳೆದಂತೆ ಬರಹದ ಕನ್ನಡವು ಸಂಸ್ಕೃತಮಯವಾಗುತ್ತ ಹೋಗಿ ಆಡುಗನ್ನಡದಿಂದ ಬಹಳ ಬೇರೆಯೇ ಆಗಿಹೋಯಿತು. ಅಲ್ಲದೆ, ಕನ್ನಡದ ತಿಳುವಳಿಕಸ್ತರ ಸಂಸ್ಕೃತದ ಮೇಲಿನ ಅಭಿಮಾನದಿಂದ ಆಡುನುಡಿಯು ಬರಹದಿಂದ ಬದಲಾಗಬೇಕೆಂಬ ತಲೆಕೆಳುಗು ನಿಯಮವೊಂದು ಜಾರಿಗೆ ಬಂತು. ’ಕನ್ನಡ’ವೆಂಬ ಪದವು ಕಾಲಕಳೆದಂತೆ ಕೋಟಿಗಟ್ಟಲೆ ಕನ್ನಡಿಗರ ನುಡಿಯನ್ನು ಸೂಚಿಸದೆ ಬೆರಳೆಣಿಕೆಯ ಬರಹಗಾರರ ನುಡಿಯನ್ನು ಸೂಚಿಸಲು ಶುರುವಾಯಿತು. ಆ ನುಡಿಯಲ್ಲಿ ಬರಹಗಾರರ ಸಂಸ್ಕೃತದ ಒಲವಿನಿಂದ ಸಂಸ್ಕೃತದ ಪದಗಳು ಹೆಚ್ಚುಹೆಚ್ಚು ತುಂಬಿಕೊಂಡುಬಿಟ್ಟವು. ಇವರುಗಳೇ ಸಮಾಜದಲ್ಲಿ ಮೇಲಿನ ಸ್ಥಾನಗಳಲ್ಲಿದ್ದುದರಿಂದ ಇವರು ಹೇಳಿದ್ದೇ "ಒಳ್ಳೆಯ-ಕನ್ನಡ"ವೆಂದೂ, ಇವರಂತೆ ತಿಳಿವಳಿಕಸ್ತರಾಗಿರದವರ ಸಂಸ್ಕೃತದ ಸೋಂಕಿಲ್ಲದ ಕನ್ನಡವು ಬೆಳವಣಿಗೆಹೊಂದದ್ದೆಂದು ಏರ್ಪಟ್ಟಿತು. ಹಾಗೆಯೇ ಸಂಸ್ಕೃತವೇ ಕನ್ನಡದ ತಾಯಿಯೆಂದೂ ಒಂದು ಆಧಾರವಿಲ್ಲದ ಸುಳ್ಳು ಜನರಲ್ಲಿ ಹರಡಿತು.

ನಿಧಾನವಾಗಿ ಹೆಚ್ಚು ಹೆಚ್ಚು ಸಂಸ್ಕೃತವನ್ನು ಬಳಸಿ ಮಾತನಾಡದಿದ್ದರೆ ಇಲ್ಲವೇ ಬರೆಯದಿದ್ದರೆ ಅದು "ಸ್ಪಷ್ಟ"ವಲ್ಲವೆಂದೂ "ಸರಿ"ಯಲ್ಲವೆಂದೂ "ಶಿಷ್ಟ"ವಲ್ಲವೆಂದು ಕೂಡ ಏರ್ಪಟ್ಟಿತು. "ಒಳ್ಳೆಯ ಕನ್ನಡ" ಎಂದರೆ ಅದು ಸಂಸ್ಕೃತವೇ ಎಂಬಂತೆ ಬರಹ ಮತ್ತು ನುಡಿಗಳನ್ನು ಮತ್ತಷ್ಟು ಮಗದಷ್ಟು ಸಂಸ್ಕೃತಕ್ಕೆ ಹೋಲುವಂತೆ ಮಾಡಿಕೊಳ್ಳುವುದೇ ಕನ್ನಡದ "ಅಭಿವೃದ್ಧಿ" ಎಂದೂ ಏರ್ಪಟ್ಟಿತು. (ಇವತ್ತಿನ ದಿನವೂ ಕನ್ನಡಕ್ಕೆ ಅಭಿವೃದ್ಧಿಯಾಗಬೇಕಿದೆ ಎಂದು ಮಾತನಾಡುವವರಿದ್ದಾರೆ. ಹಾಗೆಂದರೆ ಅವರ ಪ್ರಕಾರ ಅದು ಸಂಸ್ಕೃತದಂತಾಗುವುದು ಎಂದೇ.) ಹಾಗೆಯೇ ಕನ್ನಡದ ಸೊಲ್ಲರಿಮೆಯು ಸಂಸ್ಕೃತಮಯವಾದ ಕನ್ನಡದ್ದಾದ ದಿನದಿಂದ ಜನರಿಗೆ ಕನ್ನಡವು ಸಂಸ್ಕೃತದಿಂದಲೇ ಹುಟ್ಟಿರಬೇಕೆಂಬ ತಪ್ಪು ತಿಳುವಳಿಕೆ ತಲೆಯಲ್ಲಿ ಬೇರೂರಿಬಿಟ್ಟಿತು. ಆ ತಪ್ಪು ತಿಳುವಳಿಕೆಯನ್ನು ಎಲ್ಲೆಲ್ಲೂ ಒಂದೇ ಸಮನೆ ಹರಡುವುದಕ್ಕೆ ಈ ಸೊಲ್ಲರಿಮೆಯೇ ಒಂದು ಸಾಧನವಾಗಿಹೋಯಿತು. ಕನ್ನಡವು ಸಂಸ್ಕೃತವನ್ನು ಹೋಲುವಂತೆ ಮಾಡುವುದು ಕನ್ನಡಕ್ಕೆ ಸೇವೆಯೆಂದೇ ಕನ್ನಡದ ತಿಳುವಳಿಕಸ್ತರು ತಿಳಿದುಕೊಂಡರು, ಆದರೆ ಅದು ಸೇವೆಯಾಗಲಿಲ್ಲ, ನಿಜಕ್ಕೂ ಕನ್ನಡದ ಮಟ್ಟಿಗೆ ಅದು ನಂಜಾಯಿತು. ಕನ್ನಡಕ್ಕೆ ಈ ನಂಜುಣಿಸುವ ಕೆಲಸವು ಇಂದಿಗೂ ಕನ್ನಡದ ತಿಳುವಳಿಕಸ್ತರಿಂದ ನಡೆಯುತ್ತಿದೆ, ಮತ್ತು ಇಂದಿಗೂ ಇವರು ಕನ್ನಡಕ್ಕೆ ಅದು ತಮ್ಮ ಸೇವೆಯೆಂದೇ ಮನಸಾರೆ ತಿಳಿದಿದ್ದಾರೆ. ಒಮ್ಮೆ ಕನ್ನಡದ ಹುಟ್ಟಿನ ಬಗೆಗಿನ ನಿಜಾಂಶವು ಇವರಿಗೆ ಮನದಟ್ಟಾದರೆ, ಮತ್ತು ಕನ್ನಡಿಗರ ಏಳಿಗೆ "ಎಲ್ಲರ ಕನ್ನಡ"ದಿಂದಲೇ ಸಾಧ್ಯವೆಂದು ಅರಿವಾದರೆ ತಾವು ಮಾಡುತ್ತಿರುವುದು ಸೇವೆಯಲ್ಲವೆಂದು ಅರಿವಾಗುತ್ತದೆ ಎಂಬ ಭರವಸೆ ನಮಗಿದೆ, ಏಕೆಂದರೆ ಇವರ ಮನಸ್ಸಿನಲ್ಲಿ ಕನ್ನಡಕ್ಕೆ ನಂಜುಣಿಸಬೇಕೆಂಬ ಅನಿಸಿಕೆಯೇನಿಲ್ಲ. ಇವರಿಗೂ ಕನ್ನಡಿಗರ ಏಳಿಗೆಯೇ ಬೇಕಾಗಿದೆ.

ಕನ್ನಡವು ಸಂಸ್ಕೃತದಿಂದ ಹುಟ್ಟಿದ ನುಡಿಯೆಂಬ ತಪ್ಪು ಪ್ರಚಾರವು
ಕನ್ನಡವು ಸಂಸ್ಕೃತದಿಂದ ಹುಟ್ಟಿಬಂದಿದೆಯೆಂಬ ತಪ್ಪು ತಿಳುವಳಿಕೆಯು ಇನ್ನೂ ಚಾಲ್ತಿಯಲ್ಲಿರುವುದಕ್ಕೆ ಮತ್ತೊಂದು ಕಾರಣವಿದೆ. ಅದೇನೆಂದರೆ ಕೆಲವರು ಕನ್ನಡದ ಹುಟ್ಟಿನ ಬಗೆಗಿನ ಸತ್ಯವು ತಿಳುವಳಿಕಸ್ತರಿಗೆ ತಲುಪದಿರುವಂತೆ ಮಾಡಲು ಬಹಳ ಪ್ರಯತ್ನ ಮಾಡುತ್ತಿರುವುದು. ಇವರಿಗೆ ಭಾರತದಲ್ಲಿರುವ ನುಡಿಗಳ ವಿವಿಧತೆಯು ಒಂದು ತಲೆನೋವಾಗಿಬಿಟ್ಟಿದೆ! ನುಡಿಗಳು ಭಾರತೀಯರನ್ನು ಅಲ್ಲಲ್ಲಿ ಒಗ್ಗೂಡಿಸುವ ಸಾಧನಗಳೆಂದು ಅರಿಯದೆ ಭಾರತವನ್ನು ಒಡೆಯುವಂಥವು ಎಂದು ತಪ್ಪಾಗಿಯೂ ಇವರು ತಿಳಿದಿರುತ್ತಾರೆ. ಆದ್ದರಿಂದ ಇವರು ಭಾರತದ ನುಡಿಗಳೆಲ್ಲ ಸಂಸ್ಕೃತವೆಂಬ ಒಂದೇ ತಾಯಿಯ ಮಕ್ಕಳೆಂದು ತಮಗೆ ತಾವೇ ಯಾವ ನುಡಿಯರಿಮೆಯ ಆಧಾರವೂ ಇಲ್ಲದೆ ಬರಿಯ ಕುರುಡು ಅಭಿಮಾನದಿಂದ ಬೋಧಿಸಿಕೊಂಡಿರುತ್ತಾರೆ (ಕೆಲವರು ಸಂಸ್ಕೃತದ ಈ "ತಾಯ್ತನ"ವನ್ನು ಪ್ರಪಂಚದ ನುಡಿಗಳಿಗೆಲ್ಲ ಎರವಲಾಗಿ ಕೊಟ್ಟಿರುವುದೂ ಉಂಟು, ಸಂಸ್ಕೃತಕ್ಕೆ ಅಂತಹ "ಜಗನ್ಮಾತೆ"ತನವು ಇಲ್ಲವೆಂದು ನುಡಿಯರಿಗರು ತೋರಿಸಿಕೊಟ್ಟಿರುವುದೂ ಉಂಟು!). ಕನ್ನಡದ ಹುಟ್ಟಿನ ಬಗೆಗಿನ ದಿಟವೇನಾದರೂ ಬಯಲಾದರೆ ಅದು ಭಾರತೀಯರಲ್ಲಿ ಆರ್ಯ-ದ್ರಾವಿಡರೆಂಬ ಒಡಕುಂಟುಮಾಡುತ್ತದೆಯೆಂಬ ಅಂಜಿಕೆಯು ಕೂಡ ಇವರಿಗಿದೆ. ನಿಜಕ್ಕೂ ನೋಡಿದರೆ ಈ ಅಂಜಿಕೆಗೆ ಅರ್ಥವೇ ಇಲ್ಲ. ಅನೇಕ ನುಡಿಯರಿಗರೇ ಹೇಳುವಂತೆ ಕನ್ನಡ-ಸಂಸ್ಕೃತಗಳು ಬೇರೆಬೇರೆ ನುಡಿಕುಟುಂಬಗಳಿಗೆ ಸೇರಿರುವುದರ ಆಧಾರದ ಮೇಲೆ ಭಾರತದ ಜನಾಂಗಗಳ ಬಗ್ಗೆ ಯಾವ ತೀರ್ಮಾನಕ್ಕೂ ಬರಲಾಗುವುದಿಲ್ಲ. ಎಂದರೆ ಕೇವಲ ನುಡಿಗಳ ಆಧಾರದ ಮೇಲೆ ಜನಾಂಗಗಳಿಗೆ ಸಂಬಂಧಪಟ್ಟ ತೀರ್ಮಾನಗಳನ್ನು ಮಾಡಲು ಬರುವುದಿಲ್ಲ. ಆದರೆ ಈ ಸೂಕ್ಷ್ಮವು ಇವರಿಗೆ ತಿಳಿಯದೆ ಹೋಗಿರುವುದರಿಂದ ಕನ್ನಡವು ಸಂಸ್ಕೃತದಿಂದಲೇ ಹುಟ್ಟಿರುವ ನುಡಿಯೆಂದೂ ಸಂಸ್ಕೃತವು ದೈವಭಾಷೆಯೆಂದೂ ಸುಳ್ಳು ಪ್ರಚಾರವನ್ನು ಜೋರಾಗಿ ಮಾಡುತ್ತಾರೆ, ಅದನ್ನೇ ಸರಿಯೆಂದು ಸಂಸ್ಕೃತಕ್ಕೆ ಕೈಮುಗಿದು ಕನ್ನಡಿಗರು ತಲೆತೂಗಿಸುತ್ತಾರೆ.

ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೨: ಈ ಬರೆಯದ ಕಟ್ಟಳೆಯಿಂದ ತೊಂದರೆಗಳು

7 ಅನಿಸಿಕೆಗಳು:

Kishore ಅಂತಾರೆ...

ಶಿಕ್ಷಣದಲ್ಲಿ ಕನ್ನಡವನ್ನು (ನಿಜವಾದ ಕನ್ನಡ, ಸ೦ಸ್ಕೃತವಲ್ಲದ ಕನ್ನಡ) ತರಬೇಕಾಗಿದೆ. ಇ೦ಜಿನೀಯರ್ ಗಳು, ಬುದ್ಧಿವ೦ತರು ಅನ್ನಿಸಿಕೊ೦ಡವರಿಗೆ ಸುಲಬವಾದ ಕನ್ನಡದಲ್ಲಿ ತಮ್ಮ ಜ್ಞಾನವನ್ನು ಕನ್ನಡಿಗರಿಗೆ ತಿಳಿಸಬೇಕಾಗಿದೆ. ನನ್ನ ಅನಿಸಿಕೆಯಲ್ಲಿ ಇ೦ದಿನ ಯವಕರೆಲ್ಲರೂ ಶ೦ಕರಬಟ್ಟರ ಹೊತ್ತಿಗೆಯನ್ನು ಓದಿ ಎಲ್ಲಾ ಜ್ಞಾನ ವಿಜ್ಞಾನಗಳನ್ನು ಕನ್ನಡದಲ್ಲಿ ತರ್ಜುಮೆ ಮಾಡಲು ಮು೦ದೆ ಬರಬೇಕು. ಸರ್ಕಾರಕ್ಕೆ ಇದು ಒ೦ದು ಒಳ್ಳೆಯ ಅವಕಾಶ. ಇ೦ತಹ ಪ್ರಯತ್ನಗಳಿಗೆ ಪ್ರೋತ್ಸಾಹ ಸಿಗಬೇಕೇ ಹೊರತು ಅದ್ಯಾವ್ದೋ ಬೆ೦ಗಳೂರ ಹಬ್ಬವ೦ತೆ ಅದಕ್ಕೆ ೨.೫ ಕೋಟಿ ಹಣ ಚೆಲ್ಲುತ್ತಾರ೦ತೆ.

Kishore ಅಂತಾರೆ...

"Your comment will be visible after approval." ಇದು ಕನ್ನಡದಲ್ಲಿ ಬರಲು ಸಾಧ್ಯ ಇದೆಯಾ?

Anonymous ಅಂತಾರೆ...

sakat guru !!

keep writing and enlighting us..

Anonymous ಅಂತಾರೆ...

Kannadiga ಅವರೆ,

ಬ್ಲಾಗರ್ ನಲ್ಲಿ ಇಂಗ್ಲೀಷಿನ ಬದಲು ಕನ್ನಡವನ್ನು ಇಂಟರ್ಫೇಸ್ ಭಾಷೆಯಾಗಿ ಆರಿಸಿಕೊಳ್ಳಬಹುದು. ಹಾಗೆ ಆರಿಸಿಕೊಂಡರೆ "Your comment will be visible after approval." ಬದಲು ಕನ್ನಡದ ಬರಹದಲ್ಲಿ ಏನೋ ಒಂದು ಬರುತ್ತದೆ. ಬ್ಲಾಗರ್ ನಲ್ಲಿ ಈ ರೀತಿಯ ಸಂದೇಶಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆದರೆ ಆ ಸಂದೇಶಗಳು ಬಹಳ ಕಡಿಮೆ ಗುಣಮಟ್ಟದ್ದಾಗಿವೆ. ಆದ್ದರಿಂದ ನಾವು ಇಂಗ್ಲೀಷಿನ ಇಂಟರ್ಫೇಸನ್ನೇ ಸದ್ಯಕ್ಕೆ ಉಪಯೋಗಿಸುವುದು ವಾಸಿಯೆಂದು ತೀರ್ಮಾನಿಸಿದ್ದೇವೆ.

ತಿಳಿಗಣ್ಣ ಅಂತಾರೆ...

"ಮೊಟ್ಟಮೊದಲು ಕನ್ನಡಿಗರಿಗೆ ಜ್ಞಾನ-ವಿಜ್ಞಾನಗಳನ್ನು ಕೊಟ್ಟ ಸಂಸ್ಕೃತವು"

ಇದು ಕೊಂಚ ಸರಿಗಾಣದು. ಪಳ್ಳಿ ಎಂದರೆ ಶಾಲೆ ಎಂಬ ಅರಿವೂ ಇದೆ.

ಕನ್ನಡದ ಬಲು ಹಳೆಯ ಅರಸರು ಜಯ್ನರು ಕವಿರಾಜಮಾರ್ಗದಲ್ಲಿ ಸಕ್ಕದದ ಜತೆ ಪಾಗದವೂ ಹೇರಳವಾಗಿದೆ. ಕನ್ನಡ ನಾಡಲ್ಲಿ ಹಳೆಯ ಬರಹಗಾರರು ದೊರೆತಿರುವ ಪುರಾವೆಯಂತೆ ಜಯ್ನರು. ಜಯ್ನರು ಸಕ್ಕದಕ್ಕಿಂತ ಪಾಗದಕ್ಕೆ ಹೆಚ್ಚು ಒತ್ತು ಇತ್ತವರು. ಹಾಗೇ ಬವ್‌ದ್ದರು ಕೂಡ ಸಕ್ಕದಕ್ಕೆ ಒತ್ತು ಈಯ್ಯಲಿಲ್ಲ.

ಇನ್ನು ಸಿರಿಭೂವಲಯ ಎಂಬ ಹೊತ್ತಗೆಯಲ್ಲಿ ಹೇಗೆ ಕನ್ನಡದ ಲಿಪಿಯ ಅಕ್ಕರಗಳು ಅಂಕಿಗಳು ಜಯ್ನ ತೀರ್ತಂಕರ ರುಶಬ ದೇವನಿಂದ ಅವನ ಮಗಳಾದ ಬ್ರಾಹ್ಮಿ ಮತ್ತು ಇನ್ನೊಬ್ಬರಿಗೆ ಬಂತು ಎಂದು ಇದೆಯಂತೆ.

ಈಗೆಲ್ಲ ಇರುವಾಗ ಕನ್ನಡ ನೆಲಕ್ಕೆ ಜ್ನಾನ-ವಿಜ್ನಾನ ಸಕ್ಕದದಿಂದ ಬಂತು ಎಂಬುದು ತುಸು ಉಬ್ಬಿಸಿದ ಮಾತಾಯಿತೇನೋ ಎಂದು ಅನ್ನಿಸಿತು.

ಒಂದು ಅನಿಸಿಕೆಯಶ್ಟೇ ಇದು.

ಒದವಿ ನೆನೆಯುತ್ತಾ
ಮಹೇಶ

Anonymous ಅಂತಾರೆ...

ಹೌದು ಗುರು, ನಾನು ಕೂಡ ಸಕ್ಕದ ಕನ್ನಡದ ತಾಯಿನುಡಿ ಎಂದೇ ಎಣಿಸಿದ್ದೆ..ಯಾವಾಗ ಸಂಪದಕ್ಕೆ ಕಾಲಿಟ್ನೋ ಅವತ್ತೇ ನನ್ನ ಶಂಕೆ ಬಗೆಹರಿಯಿತು...ಅಲ್ಲಿ ಮಹೇಶ ಬಹಳ ಚಂದ ಬರೀತಾರ.. ಮತ್ತ ನಿಮ್ಮ ಬರಹದ ಕೊಂಡಿಯೂ ಕೂಡ ನನಗೆ ಅಲ್ಲಿಂದ ಸಿಕ್ಕಿದ್ದು..

ಗಿರೀಶ ರಾಜನಾಳ.

Anonymous ಅಂತಾರೆ...

ಈ 'ಬರೆಯದ ಕಟ್ಟಳೆ' ಓದಿದಾಗಲೆಲ್ಲ ಇಂಗಳೀಸಿನ unwritten rule ನ ಕನ್ನಡಯ್ಸುವಿಕೆ ಅನ್ಸುತ್ತೆ. 'ಬರೆಯದ ಕಟ್ಟಳೆ' ಬದಲು 'ಕಟ್ಟಲ್ಲದ ಕಟ್ಟಳೆ' ಎಂದು ಬಳಸಬಹುದಲ್ಲವೆ?

-ಬರತ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails