ಕನ್ನಡ ಮತ್ತು ಕನ್ನಡಿಗರ ಏಳಿಗೆ - ೬: ಕನ್ನಡದ ನಿಜವಾದ ಸೊಲ್ಲರಿಮೆಯು ಹುಟ್ಟಿ ಜನಪ್ರಿಯವಾಗಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಸೊಲ್ಲರಿಮೆ (ವ್ಯಾಕರಣ) ಎಂದರೇನು?

ಸೊಲ್ಲರಿಮೆಯೆಂದರೆ ಮಾತಿನ ಕಟ್ಟಳೆ. (ಅಂದಹಾಗೆ ಸೊಲ್ಲು ಎಂದರೆ ಮಾತು. ಅರಿಮೆ ಎಂದರೆ ಅರಿವಿನ ಒಂದು ಬಗೆ -- ಎಷ್ಟು ಸುಲಭ!).

ಒಂದೇ ನುಡಿಯನ್ನಾಡುವ ಪ್ರತಿಯೊಬ್ಬರೂ ಮಾತನಾಡುವಾಗ ತಮಗೆ ಗೊತ್ತಿಲ್ಲದೆಯೇ ಕೆಲವು ಕಟ್ಟಳೆಗಳನ್ನು ಒಪ್ಪಿನಡೆದಿರುತ್ತಾರೆ. ಬೇರೆಬೇರೆ ನುಡಿಗಳಲ್ಲಿ ಈ ಕಟ್ಟಳೆಗಳು ಬೇರೆಬೇರೆಯಾಗಿರಲು ಸಾಧ್ಯವಿದೆ. ಉದಾಹರಣೆಗೆ ಕನ್ನಡದಲ್ಲಿ "ಮೂರು ಕರಿ ಕುರಿ ಮೇಯ್ತಿತ್ತು" ಎನ್ನುವಾಗ ಯಾವ ಸೊಲ್ಲರಿಮೆಯ ಕಟ್ಟಳೆಯನ್ನೂ ಮುರಿದಂತಲ್ಲ. ಆದರೆ ಇಂಗ್ಲೀಷಿನಲ್ಲಿ "three black sheep was grazing" ಎಂದರೆ ತಪ್ಪಾಗುತ್ತದೆ. ಸಂಸ್ಕೃತ ಹಾಗೂ ಹಿಂದಿಗಳಲ್ಲೂ ಹೀಗೆ ಹೇಳಿದರೆ ತಪ್ಪಾಗುತ್ತದೆ.

ಸಾಮಾನ್ಯವಾಗಿ ಒಂದೇ ನುಡಿಯನ್ನು ತುಸು ಬೇರೆಬೇರೆ ಬಗೆಗಳಲ್ಲಿ ಆಡಲ್ಪಡುವ ಒಳನುಡಿಗಳು (dialects) ಇರುತ್ತವೆ. ಒಂದು ಒಳನುಡಿಯವರ ಮಾತು ಇನ್ನೊಂದು ಒಳನುಡಿಯವರಿಗೆ ಅರ್ಥವಾಗುತ್ತದೆ, ಆದರೆ ಒಂದರೊಳಗೆ ಇನ್ನೊಂದರವರು ಆಡುವಂತೆ ಸಾಮಾನ್ಯವಾಗಿ ಮಾತನಾಡುವುದಿಲ್ಲ. ಹೀಗಿರುವಾಗ ಬೇರೆಬೇರೆ ಒಳನುಡಿಯವರ ನಡುವೆ ಸಂಪರ್ಕ ಇದ್ದೇ ಇರುವುದರಿಂದ (ಮತ್ತು ಇರುವುದು ಒಗ್ಗಟ್ಟು ಮತ್ತು ಅದರ ಮೂಲಕ ಏಳಿಗೆಗೆ ಬೇಕಾಗಿಯೂ ಇರುವುದರಿಂದ) ಎಲ್ಲರಿಗೂ ಒಪ್ಪುವ "ಮಾತಿನ ಕಟ್ಟಳೆಗಳು" ಹುಟ್ಟಿಕೊಂಡಿರುತ್ತವೆ. ಇವುಗಳನ್ನೇ ಆ "ಎಲ್ಲರ ನುಡಿ"ಯ ಸೊಲ್ಲರಿಮೆಯೆನ್ನುವುದು.

ಗಮನಿಸಿ: ಈ ಬರಹದ ಮಟ್ಟಿಗೆ "ಸೊಲ್ಲರಿಮೆ" ಎಂದರೆ "ಸೊಲ್ಲರಿಮೆಯ ಹೊತ್ತಗೆ" ಎಂಬ ಅರ್ಥದಲ್ಲೂ ಬಳಸಿದ್ದೇವೆ. ಎಲ್ಲಿ ಯಾವ ಅರ್ಥವು ಹೊಂದುತ್ತದೆಯೋ ಅದನ್ನೇ ಓದುಗರು ತೆಗೆದುಕೊಳ್ಳಬೇಕು.

ಸೊಲ್ಲರಿಮೆಯನ್ನು ಕಲಿಯುವುದರಿಂದ ಏನು ಪ್ರಯೋಜನ?

ಯಾವುದೇ ನುಡಿಯ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಟ್ಟಿರಲಿ ಇಟ್ಟಿಲ್ಲದಿರಲಿ ಆ ಕಟ್ಟಳೆಗಳಂತೂ ಇದ್ದೇ ಇರುತ್ತವೆ. ಜನರಿಗೆ ತಾವಾಡುವ ಮಾತಿನ ಕಟ್ಟಳೆಗಳು ಇಂಥವು ಎಂದು (ಒಬ್ಬ ಸೊಲ್ಲರಿಗನಿಗೆ ತಿಳಿದಂತೆ) ತಿಳಿದಿರಲಿ ತಿಳಿದಿಲ್ಲದಿರಲಿ, ಅವರು ಮಾತನಾಡುವಾಗ ಆ ಕಟ್ಟಳೆಗಳನ್ನು ಒಪ್ಪಿಯೇ ನಡೆಯುತ್ತಾರೆ. "ಕನ್ನಡದಲ್ಲಿ ಎಷ್ಟು ರೀತಿಯ ಜೋಡಿಪದಗಳಿವೆ?" ಎನ್ನುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ ಆವೆಲ್ಲ ಬಗೆಯ ಜೋಡಿಪದಗಳನ್ನೂ ಜನರು ಆಡುತ್ತಲೇ ಇರುತ್ತಾರೆ.

ಆದರೂ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಡುವುದರಿಂದ ಮತ್ತು "ನಮ್ಮ ನುಡಿಯಲ್ಲಿ ಇಂತಹ ಕಟ್ಟಳೆಗಳಿವೆ" ಎಂದು ಹೇಳಿಕೊಡುವುದರಿಂದ/ಕಲಿಯುವುದರಿಂದ ಬಹಳ ಉಪಯೋಗವಿದೆ. ನುಡಿಯನ್ನು ಕಲಿಯುವವರಿಗೆ ಇದರಿಂದ ಬಹಳ ನೆರವಾಗುತ್ತದೆ. ಬರಹವು ಎಂತಹ ಕಟ್ಟಳೆಗಳನ್ನು ಪಾಲಿಸಬೇಕು ಎಂದು ತಿಳಿಸಿಕೊಡುವಲ್ಲಿ ನೆರವಾಗುತ್ತದೆ. ಬರಹವನ್ನು ಬರೆಯುವಾಗ ಮಾತನಾಡುವಾಗಿದ್ದಂತೆ ಮುಂದೆ ಯಾರೋ ಒಬ್ಬರಿದ್ದು ಅವರೊಡನೆ ಕೊಟ್ಟು-ತೊಗೊಳ್ಳುವಿಕೆ ನಡೆಯಬೇಕು ಎಂಬುದೇನೂ ಇಲ್ಲದಿರುವುದರಿಂದ ಬರಹಕ್ಕಂತೂ ಈ ಕಟ್ಟಳೆಗಳ ಅರಿವಿರುವುದು ಬಹಳ ಮುಖ್ಯ. ಅವುಗಳ ಅರಿವಿಲ್ಲದಿದ್ದರೆ ಬರೆದ ಒಂದೇ ಸೊಲ್ಲನ್ನು ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ. ಮಕ್ಕಳಿಗೆ ನುಡಿಯನ್ನು ಕಲಿಸಲು ಕೂಡ ಬಹಳ ನೆರವಾಗುತ್ತದೆ. ಹೊಸ ಪದಗಳನ್ನು ಹುಟ್ಟಿಸುವ ಕೆಲಸಕ್ಕೂ ಬಹಳ ನೆರವಾಗುತ್ತದೆ. ಈಗಾಗಲೇ ಇರುವ ಪದಗಳನ್ನು ಅರ್ಥಮಾಡಿಕೊಂಡಾಗ ತಾನೇ ಹೊಸ ಪದಗಳನ್ನು ಹುಟ್ಟಿಸಲಾಗುವುದು? ಆದ್ದರಿಂದ.

ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳು

ಕನ್ನಡದ ಸೊಲ್ಲರಿಮೆ ಎಂಥದ್ದು ಎಂದು ತಿಳಿದುಕೊಳ್ಳುವಲ್ಲಿ ಹಿಂದಿನ ಸೊಲ್ಲರಿಗರು (grammarians) ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಆದ್ದರಿಂದ ಕನ್ನಡದ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ದಾಖಲಿಸುವಾಗ ಅದೇ ತಪ್ಪುಗಳು ಉಳಿದುಕೊಂಡುಬಿಟ್ಟಿವೆ. ಈ ಕೊರತೆಗಳಿಗೆಲ್ಲ ಕಾರಣವೇನೆಂದರೆ ಹಿಂದಿನವರು ಕನ್ನಡದ ಸೊಲ್ಲರಿಮೆಯನ್ನು ಸಂಸ್ಕೃತದ ವ್ಯಾಕರಣದ ಆಧಾರದ ಮೇಲೆ ಕಟ್ಟಿದ್ದು. ಹೀಗೇಕೆ ಆಧಾರವಾಗಿಟ್ಟುಕೊಂಡಿದ್ದರು ಎಂದು ಹಿಂದೆಯೇ ನಾವು ತಿಳಿಸಿಕೊಟ್ಟಿರುವುದರಿಂದ ಮತ್ತೊಮ್ಮೆ ಅದನ್ನೇ ಹೇಳುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಆಧಾರವಾಗಿ ಇಟ್ಟುಕೊಂಡಿದ್ದರಿಂದ ಕನ್ನಡದ ಸೇರಿಕೆಯ ನಿಯಮಗಳು, ಪದವರ್ಗಗಳು, ಪದಗಳ ಒಳರಚನೆ, ಸಮಾಸಗಳು, ಲಿಂಗಗಳು, ವಚನಗಳು, ವಿಭಕ್ತಿಗಳು, ಸರ್ವನಾಮಗಳು ಮತ್ತು ಎಣಿಕೆಯ ಪದಗಳು, ಕ್ರಿಯಾರೂಪಗಳು -- ಮುಂತಾದ ಹೆಚ್ಚುಕಡಿಮೆ ಪ್ರತಿಯೊಂದು ಸೊಲ್ಲರಿಮೆಯಂಶವನ್ನು ತಿಳಿಸಿಕೊಡುವುದರಲ್ಲೂ ಬಹಳ ತಪ್ಪುಗಳು ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಸೇರಿಕೊಂಡುಬಿಟ್ಟಿವೆ. ಈ ತಪ್ಪುಗಳು ಯಾವುಯಾವವು ಎಂದು ತಿಳಿದುಕೊಳ್ಳಲು ಡಾ|| ಡಿ. ಎನ್. ಶಂಕರಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಎಂಬ ಹೊತ್ತಗೆಯನ್ನು ಓದಿರಿ. ಈ ತಪ್ಪುಗಳೆಲ್ಲ ಎಷ್ಟಿವೆಯೆಂದರೆ ಈಗಿರುವ ಸೊಲ್ಲರಿಮೆಯ ಹೊತ್ತಗೆಗಳನ್ನು ನಿಜವಾದ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳೆಂದು ಕರೆಯುವುದೇ ತಪ್ಪೆನಿಸುತ್ತದೆ.

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಿಲ್ಲದಿರುವುದರಿಂದ ತೊಂದರೆಗಳು

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳಿಂದ/ತಪ್ಪುಗಳಿಂದ ಆಗುತ್ತಿರುವ ತೊಂದರೆಗಳಲ್ಲಿ ಕೆಲವು ಹೀಗಿವೆ:
  1. ಕನ್ನಡಕ್ಕೆ ಸಂಸ್ಕೃತವೇ ಮೂಲವೆಂಬ ಸುಳ್ಳು ಇನ್ನಷ್ಟು ಹರಡುತ್ತಿದೆ ("ನೋಡಿ, ಕನ್ನಡದ ಸೊಲ್ಲರಿಮೆಯ ಪುಸ್ತಕದಲ್ಲೇ ಇದೆ!"). ಈ ಸುಳ್ಳು ಹರಡುವುದರಿಂದ ಕನ್ನಡಿಗರ ನಡುವೆ ಒಗ್ಗಟ್ಟು ಹೇಗೆ ಕುಸಿಯುತ್ತಿದೆಯೆಂದು ಕೂಡ ನಾವು ಈಗಾಗಲೇ ವಾದಿಸಿದ್ದೇವೆ.
  2. ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಅವೈಜ್ಞಾನಿಕತೆಯು ತಾಂಡವಾಡುತ್ತಿರುವುದರಿಂದ ಕೆಲವು ಕನ್ನಡಿಗರಿಗೆ ಕನ್ನಡವೇ ಅವೈಜ್ಞಾನಿಕ ಭಾಷೆ ಎಂಬ ಕೀಳರಿಮೆ ಬಂದುಬಿಟ್ಟಿದೆ. ಇದರಿಂದ ಕನ್ನಡದಿಂದಲೇ ಅವರು ದೂರ ಹೊರಟುಹೋಗುತ್ತಿದ್ದಾರೆ. ಆದರೆ ನಿಜಕ್ಕೂ ನೋಡಿದರೆ ಭಾಷೆಗಳು ವೈಜ್ಞಾನಿಕ ಇಲ್ಲವೇ ಅವೈಜ್ಞಾನಿಕವಾಗಿರುವುದಿಲ್ಲ (ಸೊಲ್ಲರಿಮೆಗಳು ಇರಬಹುದಷ್ಟೆ). ಆದ್ದರಿಂದ ಸರಿಯಾದ, ವೈಜ್ಞಾನಿಕವಾದ ಕನ್ನಡದ ಸೊಲ್ಲರಿಮೆಯು ಬೆಳಕಿಗೆ ಬರಬೇಕಿದೆ.
  3. ಕನ್ನಡದ ಸೊಲ್ಲರಿಮೆಯನ್ನು ಬಳಸಿಕೊಂಡು ಕನ್ನಡವನ್ನು ಸರಿಯಾಗಿ ಕಲಿಸುವುದಕ್ಕೇ ಆಗದೆ ಹೋಗಿರುವುದರಿಂದ ಕನ್ನಡಿಗರಿಗೇ ಕನ್ನಡವು "ಕಷ್ಟವಾದ ಭಾಷೆ" ಎನಿಸಿಬಿಟ್ಟಿದೆ. ಆದರೆ ಹೀಗಿಲ್ಲ. ಕನ್ನಡವು ಕನ್ನಡಿಗರ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿದೆ ಎಂದು ಈಗಾಗಲೇ ನಾವು ವಾದಿಸಿದ್ದೇವೆ. ಮುಂದೆಯೂ ಈ ವಿಷಯವಾಗಿ ಹೇಳುವುದಿದೆ. ಕನ್ನಡವನ್ನು ಕಲಿಸುವ ಏರ್ಪಾಟಿನಲ್ಲೇ ತಪ್ಪುಗಳು ತುಂಬಿಕೊಂಡಿರುವುದು ಈ ಏಳಿಗೆಗೆ ಪೂರಕವಾದ್ದಲ್ಲ.
  4. ಕನ್ನಡಿಗರ ನಾಲಿಗೆಯು ಉಲಿಯುವ ಮತ್ತು ಉಲಿಯದ ಅಕ್ಷರಗಳು ಯಾವುವು ಎನ್ನುವುದನ್ನೇ ನಾವು ಸರಿಯಾಗಿ ಕಲಿಯದೆ ಹೋಗಿದ್ದೇವೆ. ಇದರಿಂದಲೇ ಕನ್ನಡದ ಅಕ್ಷರಮಾಲೆಯಲ್ಲಿ ನಾವು ಎಂದಿಗೂ ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿಕೊಂಡಿರುವುದು!
  5. ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಬಹಳ ಕಷ್ಟವಾಗುತ್ತಿದೆ. ಇದರಿಂದ ಕನ್ನಡದಲ್ಲಿ ಜ್ಞಾನ-ವಿಜ್ಞಾನಗಳ ಕಲಿಕೆ-ಕಲಿಸುವಿಕೆಗಳು ನಡೆಯಬೇಕಾದಷ್ಟು ಚೆನ್ನಾಗಿ ನಡೆಯುತ್ತಿಲ್ಲ, ಜನಪ್ರಿಯವೂ ಆಗುತ್ತಿಲ್ಲ.
  6. ಕನ್ನಡದ ಬರಹವು ಈಗಿರುವ ಕನ್ನಡದ್ದಲ್ಲವೇ ಅಲ್ಲ ಎನ್ನಬಹುದಾದ ಸೊಲ್ಲರಿಮೆಯನ್ನು ಆಧರಿಸಿರುವುದೆ ಆಗಿರುವುದರಿಂದ ಕನ್ನಡದ ಬರಹವು ಕನ್ನಡಿಗರಿಂದ ಬಹಳ ದೂರ ಹೊರಟುಹೋಗಿದೆ. ಆದ್ದರಿಂದ ಕನ್ನಡದಲ್ಲಿರುವ ಬೇರೆಬೇರೆ ದಾಖಲೆಗಳು ಮತ್ತು ಸರ್ಕಾರದ ಪತ್ರವ್ಯವಹಾರವೆಲ್ಲ ಕನ್ನಡಿಗರಿಗೇ ಅರ್ಥ ಮಾಡಿಕೊಳ್ಳದಷ್ಟು ಕಷ್ಟವಾಗಿಹೋಗಿದೆ.
  7. ಕನ್ನಡದ ಸೊಲ್ಲರಿಮೆಯ ಕಲಿಕೆ ಬಹಳ ಅವೈಜ್ಞಾನಿಕವಾಗಿ ಹೋಗುತ್ತಿದ್ದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ಸೊಲ್ಲರಿಮೆಯಿಂದಲೇ ದೂರ ಹೊರಟುಹೋಗುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡವನ್ನು ಆಳವಾಗಿ ಅರ್ಥಮಾಡಿಕೊಂಡಿರುವವರು ಯಾರೂ ಇಲ್ಲವೇ ಇಲ್ಲವೆಂಬ ಪರಿಸ್ಥಿತಿ ಬಂದುಬಿಡುತ್ತದೆ. ಹೀಗಾದರೆ ಕನ್ನಡವು ಎಂದಿಗೂ ಕನ್ನಡಿಗರ ಜೀವನದಲ್ಲಿ ಪಡೆದುಕೊಳ್ಳಬೇಕಾದ ಮೇಲಿನ ಸ್ಥಾನವನ್ನು ಪಡೆದುಕೊಳ್ಳುವುದೇ ಇಲ್ಲ; ಆ ಮೂಲಕ ಕನ್ನಡಿಗರ ಏಳಿಗೆಯು ಎಂದಿಗೂ ಆಗುವುದಿಲ್ಲ.
  8. ಬೇರೆಬೇರೆ ಜಾಗಗಳ ಮತ್ತು ಜಾತಿಗಳ ಕನ್ನಡಿಗರನ್ನೆಲ್ಲ ಒಗ್ಗೂಡಿಸುವುದೇ ಕನ್ನಡ. ಆ ಕನ್ನಡವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದದ್ದು ಈ ನಾಡನ್ನು ನಡೆಸುವ ಜವಾಬ್ದಾರಿಯಿರುವವರ ಮೊದಲ ಅರ್ತವ್ಯ. ತಪ್ಪು ಸೊಲ್ಲರಿಮೆಗಳಿಂದ ಆ ಕನ್ನಡದ ಸ್ವರೂಪವೇನೆಂದು ತಿಳಿಯದೆ ಹೋಗಿರುವುದರಿಂದ ಕನ್ನಡಿಗರಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದೆ.
ವೈಜ್ಞಾನಿಕವಾಗಿ ಚಿಂತಿಸುವ ಯುವಕರಿಂದಲೇ ಕನ್ನಡದ ಸೊಲ್ಲರಿಮೆಯ ರಿಪೇರಿ ಸಾಧ್ಯ

ಕನ್ನಡದ ಸೊಲ್ಲರಿಮೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ಚೆನ್ನಾಗಿ ಅಧ್ಯಯನ ಮಾಡಿರುವವರಲ್ಲಿ ಸುಮಾರು ವರ್ಷ ಮೈಸೂರಿನಲ್ಲಿದ್ದು ಈಗ ಹೆಗ್ಗೋಡಿನಲ್ಲಿ ವಾಸವಾಗಿರುವ ಡಾ|| ಡಿ. ಎನ್. ಶಂಕರಭಟ್ಟರ ಹೆಸರು ಮೊದಲು ಬರುತ್ತದೆ. ಇವರು ಈಗಾಗಲೇ ತಮ್ಮ ಅನೇಕ ಹೊತ್ತಗೆಗಳಲ್ಲಿ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ತೊಂದರೆಗಳನ್ನು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಕನ್ನಡದ ನಿಜವಾದ ಸೊಲ್ಲರಿಮೆಯೆಂಥದ್ದೆಂದು ತಿಳಿಸಿಕೊಡಲೂ ಪ್ರಯತ್ನಿಸಿದ್ದಾರೆ. ಬಹಳ ವೈಜ್ಞಾನಿಕವಾಗಿ ಕನ್ನಡವನ್ನು ಅರಿತುಕೊಂಡಿರುವ ಸೊಲ್ಲರಿಗರ ಪಟ್ಟಿಯಲ್ಲಿ ಭಟ್ಟರ ಹೆಸರು ಮೊದಲು ಬರುತ್ತದೆ ಎಂದರೆ ತಪ್ಪಾಗಲಾರದು. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಅಧ್ಯಯನ ನಡೆಯುವಾಗ ಡಾ|| ಡಿ. ಎನ್. ಶಂಕರಭಟ್ಟರ ತತ್ವಗಳ ಅಧ್ಯಯನ ನಡೆಯಬೇಕಿದೆ. ಅವುಗಳ ಆಧಾರದ ಮೇಲೆ ಕನ್ನಡದ ನಿಜವಾದ ಸೊಲ್ಲರಿಮೆಗಳು ಹುಟ್ಟಿಬರಬೇಕಿವೆ, ಜನಪ್ರಿಯವಾಗಬೇಕಿವೆ.

ಹಿಂದಿನಿಂದ ಹೇಳಿಕೊಂಡು ಬಂದಿರುವ ತಪ್ಪೇ ಇವತ್ತಿಗೂ ಸರಿಯೆಂದು ತಿಳಿಯುವವರು ಎಲ್ಲಿಯವರೆಗೆ ಕನ್ನಡಿಗರ ಕಲಿಕೆಯನ್ನು ಹತೋಟಿಯಲ್ಲಿಟ್ಟುಕೊಂಡಿರುವರೋ ಅಲ್ಲಿಯವರೆಗೆ ಕನ್ನಡದ ನಿಜವಾದ ಸೊಲ್ಲರಿಮೆಯು ಜನಪ್ರಿಯವಾಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ವೈಜ್ಞಾನಿಕವಾಗಿ ಚಿಂತಿಸುವ ಯುವ ಕನ್ನಡಿಗರು ಡಾ|| ಡಿ. ಎನ್. ಶಂಕರಭಟ್ಟರ ಹೊತ್ತಗೆಗಳನ್ನು ಓದಬೇಕಿದೆ. ಕನ್ನಡಿಗರ ಏಳಿಗೆಯು ಹಿಂದಿನವರ ತಪ್ಪುಗಳನ್ನು ಮುಂದುವರೆಸುವುದರಿಂದ ಆಗುವುದಿಲ್ಲ. ಇಂದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ತೆಗೆದುಕೊಳ್ಳುವ ಸರಿಯಾದ ತೀರ್ಮಾನಗಳಿಂದಲೇ ಸಾಧ್ಯ. ತಪ್ಪುಗಳನ್ನು ಎಲ್ಲ ಜನಾಂಗಗಳೂ ಮಾಡುತ್ತವೆ. ಆದರೆ ಆ ತಪ್ಪುಗಳನ್ನು ತಿದ್ದುಕೊಂಡು ಮುಂದುವರೆಯುವ ಜನಾಂಗಗಳು ಮಾತ್ರ ಏಳಿಗೆಯಾಗುವುದು. ಕನ್ನಡಜನಾಂಗವು ಅಂತಹ ಒಂದು ಜನಾಂಗವಾಗಬೇಕಿದೆ.

4 ಅನಿಸಿಕೆಗಳು:

Anonymous ಅಂತಾರೆ...

ಗುರುಗಳೇ,
ಸೊಲ್ಲರಿಮೆಯನ್ನು ಮಾತರಿಮೆ ಅಥವಾ ಉಲಿಯರಿಮೆ ಎನ್ನಬಹುದಲ್ಲವೇ. ಸೊಲ್ಲು ಎ೦ಬ ತಮಿಳು ಪದದ ಅವಶ್ಯಕತೆ ಇಲ್ಲ ಎ೦ದು ನನ್ನ ನ೦ಬಿಕೆ.
ನನ್ನಿಯೊ೦ದಿಗೆ
ಚ೦ದ್ರು.

Anonymous ಅಂತಾರೆ...

ಚಂದ್ರು ಅವ್ರೇ,

ಸೊಲ್ಲು ಅನ್ನೋದು ತಮಿಳು ಪದ ಮಾತ್ರಾ ಅಂದುಕೋ ಬೇಡಿ. ಪಲ್ಲವರ ಸೊಲ್ಲಡಗಿಸಿ ಅನ್ನೋ ಅಣ್ಣಾವರ ಮಯೂರ ಡೈಲಾಗ್ ನೆನಪು ಮಾಡಿಕೊಳ್ಳಿ.
ಅದು ಎರಡೂ ಭಾಷೆಯಲ್ಲಿರೋ ಸಾಮಾನ್ಯ ಪದ ಅಷ್ಟೆ.

ನನ್ನಿ
ಸೊಲ್ಲೇಶ

Anonymous ಅಂತಾರೆ...

ಶಂಕರಬಟ್ಟರ ಹೊತ್ತಗೆಗಳಲ್ಲಿರುವ ಕನ್ನಡದ ಸೊಲ್ಲರಿಮೆಯ ಬಗ್ಗೆಯ ಅರಿವು ತುಂಬಾ ಚನ್ನಾಗಿದೆ.

ಅವರ ಹೊತ್ತಗೆಗಳ ಬಗ್ಗೆ ಒಂದು ಬರಹ ಬರೆಯಿರಿ. ಅದರಲ್ಲಿ ಹೊತ್ತಗೆಯ ಹೆಸರು ಮತ್ತು ಅದರಲ್ಲಿರುವ ಸಂಗತಿಯ ಹುರುಳು ಕಿರಿದಾಗಿ ತಿಳಿಸಿದರೆ ಹಲವರಿಗೆ ಒಳಿತಾಗುವುದು.

ಒದವಿಗೆ ನನ್ನಿ

Anonymous ಅಂತಾರೆ...

ಸೊಲ್ಲು: ಹೌದು, ಸೊಲ್ಲೇಶ ಹೇಳಿದ್ದು ಸರಿ. ಇನ್ನೊಂದೆರಡು ಉದಾ: ಸದನದಲ್ಲಿ ಇದರ ಸೊಲ್ಲೆತ್ತಲಿಲ್ಲ.(ಈ "ವಿಶಯ" ಪ್ರಸ್ತಾಪ ಮಾಡಲಿಲ್ಲ). ಸೊಲ್ಜಾಣ(ಮಾತು ಬಲ್ಲವ).
ಸೊಲ್ಲಿಗ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails