ಮೊನ್-ಮೊನ್ನೆ ಡೆಕನ್ ಹೆರಾಲ್ಡಲ್ಲಿ
ಕನ್ನಡದ ಕಲಿಕೆ ಹೇಗೆ ಕನ್ನಡ ಬರದೇ ಇರೋರ ಮನೆಮನೆಗೆ ತಲುಪ್ತಾ ಇದೆ ಅಂತ ಒಂದು ವರದಿ ಬಂದಿತ್ತು. ನಿಧಾನವಾಗಾದರೂ ವಲಸಿಗರಿಗೆ ಕನ್ನಡ ಕಲಿಸಬೇಕು ಅನ್ನೋ ಬುದ್ಧಿ ಕನ್ನಡ ಜನಾಂಗಕ್ಕೆ ಬರ್ತಿರೋದು ಬಹಳ ಒಳ್ಳೇದು ಗುರು! ಈ ವಿಷ್ಯಕ್ಕೆ ಕೊಡಬೇಕಾದ ಗೌರವ ಇಲ್ಲೀವರೆಗೆ ಕನ್ನಡಿಗರು ಕೊಟ್ಟಿಲ್ದೇ ಇರೋದ್ರಿಂದ ಸಕ್ಕತ್ ಕಷ್ಟಕ್ಕೆ ಸಿಕಾಕೊಂಡಿದೀವಿ! ಆದ್ರಿಂದ ಇದನ್ನ ಒಸಿ ಬೂದ್ಗಾಜ್ ಇಟ್ಟು ನೋಡ್ಮ.
ವಲಸಿಗರು ಸ್ಥಳೀಯ ಭಾಷೆ ಕಲೀದೇ ಇರೋದು ನಾಡಿನ ಏಳ್ಗೆಗೆ ಮಾರಕನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಟಲಿ, ಯಾಕೆ ಇಡೀ ಯೂರೋಪು, ಇನ್ನು ಈಕಡೆ ಇಸ್ರೇಲು - ಇವೆಲ್ಲ ಪ್ರಪಂಚದಲ್ಲಿ ಸಕ್ಕತ್ ಬೆಳ್ವಣಿಗೆ ಹೊಂದಿರೋ ದೇಶಗಳು. ಇವುಗಳ್ಗೆಲ್ಲ ಕಾಮನ್ನಾಗಿರೋ ಇನ್ನೊಂದು ವಿಷ್ಯ ಏನು ಅಂದ್ರೆ - ಇಲ್ಲೆಲ್ಲ ಜೀವನದ ಎಲ್ಲಾ ಹಂತಗಳಲ್ಲೂ, ಕೆಲಸಗಳಲ್ಲೂ ಸ್ಥಳೀಯ ಭಾಷೆಗಳ್ನೇ ಬಳಸ್ತಾರೆ. ಸಮಾಜದಲ್ಲಿ ಎಲ್ಲಾ ವ್ಯವಹಾರಗಳಷ್ಟೇ ಅಲ್ಲ, ಎಲ್ಲಾ ರೀತಿಯ ಉನ್ನತ ಶಿಕ್ಷಣ (ಇಂಜಿನಿಯರಿಂಗು, ಮೆಡಿಕಲ್ಲು ಕೂಡ) ಮತ್ತು ಉದ್ಯೋಗಗಳು - ಇದ್ಯಾವ್ದೂ ಔರೌರ ಭಾಷೇಲಲ್ದೆ ಬೇರೆ ಒಂದು ಭಾಷೇಲಿ ಮಾಡಬೇಕು ಅನ್ನೋ ಕೆಟ್ಟ ಯೋಚನೇನ ಔರು ಮನಸ್ಸಿಗೇ ತಂದ್ಕೊಂಡಿಲ್ಲ! ಒಟ್ನಲ್ಲಿ ಇವುಗಳ ಏಳ್ಗೆಗೆ ಇವುಗಳು ತಂತಮ್ಮ ಭಾಷೆಗಳ್ನ ಚೆನ್ನಾಗಿ "ಇಟ್ಕೊಂಡ್" ಇರೋದು ಬಹಳ ಮುಖ್ಯವಾದ ಕಾರಣ ಅನ್ನೋದು ಸ್ಪಷ್ಟ.
ಈ ದೇಶಗಳಿಗೂ ವಲಸಿಗರು ಬರದೆ ಏನಿಲ್ಲ. ಆದರೆ ಇವುಗಳಲ್ಲಿ ಅಲ್ಲಲ್ಲೀ ಭಾಷೆ ಕಲೀದೆ ವಲಸಿಗರ್ಗೆ ಬದುಕೋದೇ ಕಷ್ಟ ಅಂತ ನಿಮಗೆ ಗೊತ್ತಿದ್ಯಾ? ಅಲ್ಲಿಗೆ ಹೋಗೋ ಜನ ಅಲ್ಲಲ್ಲೀ ಭಾಷೆ ಕಲ್ತೇ ಕಲೀತಾರೆ. ಯಾಕೆ? ಯಕೇಂದ್ರೆ ಅಲ್ಲೀ ಜನ (ಸರ್ಕಾರಾನೂ ಸೇರಿದಂತೆ) ತಂತಮ್ಮ ಭಾಷೆಗಳ್ನ ಅಷ್ಟು ಗೌರವಿಸಿ, ಅದನ್ನ ಕಲೀದೇ ಇರೋರು ಒಳಗೆ ಬಂದ್ರೆ ಔರು ನಿಧಾನವಾಗಿ ಸ್ಥಳೀಯರಲ್ಲಿ "ಒಬ್ಬರಾ"ಗದೆ ಅವರದೇ "ರಾಜ್ಯ" ಮಾಡ್ಕೊಳಕ್ಕೆ ಶುರು ಮಾಡ್ತಾರೆ ಅನ್ನೋದ್ನ ಅರ್ಥ ಮಾಡ್ಕೊಂಡಿರೋದೇ ಮುಖ್ಯವಾದ ಕಾರಣ.
ಇದನ್ನ ನಾವೂ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ನಾವೇ ಸರ್ವನಾಶ ಆಗಿಹೋಗೋಂಥಾ ಪರಿಸ್ಥಿತಿ ಇವತ್ತು ನಮ್ಮ ಮುಂದೆ ಐತೆ ಗುರು!
ಇವತ್ತಿನ ದಿನ ಬೆಂಗ್ಳೂರಲ್ಲಿ (ಮತ್ತು ನಿಧಾನವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮುಂತಾದ ಜಾಗಗಳಲ್ಲಿ) ವಲಸಿಗ್ರು ಬಂದು ಕನ್ನಡವನ್ನೇ ಮೂಲೆಗುಂಪು ಮಾಡಕ್ಕೆ ಹೊರ್ಟಿರೋದಕ್ಕೆ ನಮ್ಮ ಪೆದ್ದತನಾನೇ ಕಾರಣ, ನಮ್ಮ ಅತಿಯಾದ ವಿನಯಶೀಲತೇನೇ ಕಾರಣ ಗುರು! ಇದು ಹೀಗೇ ಮುಂದುವರೆದರೆ ಕನ್ನಡನಾಡು ಕನ್ನಡಿಗರದಾಗಿ ಉಳೀದೆ ಹಿಂದಿಯೋರ್ದೋ ತಮಿಳ್ರುದೋ ತೆಲುಗ್ರುದೋ ಬಂಗಾಳಿಗಳ್ದೋ ಆಗಿ ಚೂರುಚೂರಾಗೋಗತ್ತೆ ಗುರು. ಇದರಿಂದ ಕನ್ನಡಿಗರು ಸರ್ವನಾಶ ಆಗೋಗ್ತಾರೆ ಗುರು!
ಇದ್ನ ತಡೆಗಟ್ಟಕ್ಕೆ ಸರ್ಕಾರ ಮಾಡ್ಬೇಕಾಗಿರೋದುಇದನ್ನ ತಡೆಗಟ್ಟೋ ಕೆಲಸವನ್ನ ಕರ್ನಾಟಕ ಸರ್ಕಾರ
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಮೂಲಕ ಸರಿಯಾಗಿ ಮಾಡ್ಕೊಂಡ್ ಹೋದ್ರೆ ಕನ್ನಡಕ್ಕೆ (ಮತ್ತು ಅದರ ಮೂಲಕ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ) ನಿಜವಾದ ರಕ್ಷಣೆ ಕೊಟ್ಟಂಗಾಗತ್ತೆ ಗುರು.
ನಮ್ಮ ಸರ್ಕಾರ ವಲಸಿಗರಿಗೆ ಕಡ್ಡಾಯವಾಗಿ ಕನ್ನಡ ಕಲೀಲೇಬೇಕು ಅನ್ನೋ ನಿಯಮ ಮಾಡ್ಬೇಕು. ವಲಸಿಗರು ಕನ್ನಡಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಕಡೆಗಣಿಸಕ್ಕೆ ಬಿಡಬಾರದು (CBSE/ICSE ನೌರು ಇದ್ನ ಸಕ್ಕತ್ತಾಗಿ ಕಲ್ತಿದಾರೆ!). ಹಾಗೇ ಕನ್ನಡದಲ್ಲಿ ಮಾತ್ರ ಸರ್ಕಾರದ ಯಾವುದೇ ಇಲಾಖೆ ಜೊತೆ ಸುಲಭವಾಗಿ ವ್ಯವಹಾರ ಮಾಡಕ್ಕಾಗೋದು ಅನ್ನೋ ವ್ಯವಸ್ಥೆ ಜಾರಿಗೆ ತರ್ಬೇಕು. ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡವಿಲ್ದೆ ಬದುಕಕ್ಕೇ ಕಷ್ಟ ಅನ್ನೋ ದಿನ ಬರ್ಬೇಕು ಗುರು. ಇದರಿಂದ ವಲಸಿಗರ್ಗೆ ಕಷ್ಟ ಕೊಡಬೇಕು ಅನ್ನೋದು ಉದ್ದೇಶವಾಗಿರಬಾರದು, ನಮಗೆ - ಅಂದ್ರೆ ಕನ್ನಡಿಗರಿಗೆ ಒಳ್ಳೇದಾಗಬೇಕು ಅನ್ನೋದೇ ಉದ್ದೇಶವಾಗಿರ್ಬೇಕು. ಕನ್ನಡನಾಡಲ್ಲಿ ವಲಸಿಗರಿಗೆ ಹೂವಿನ ಹಾಸಿಗೆ ಹಾಸಿಕೊಟ್ಟು ಕನ್ನಡಿಗರ್ನೇ ಮುಳ್ಳ ಮೇಲೆ ಬಿದ್ದುಗೊಳ್ಳಿ ಅಂತ ಹೇಳ್ತಿರೋ ಇವತ್ತಿನ ವ್ಯವಸ್ಥೇನ ಬದಲಾಯಿಸಬೇಕು ಗುರು!
ನಾವು-ನೀವು ಮಾಡಬೇಕಾಗಿರೋದುನಾಡಿನ ಏಳ್ಗೆಗಾಗಿ ಇನ್ನೇನು ಮಾಡದೇ ಹೋದರೂ ನಾವು ಹೊರಗಿನೋರ್ನ ಕನ್ನಡದಲ್ಲಿ ಮಾತಾಡಿಸೋದಕ್ಕಾದರೂ ಪ್ರಯತ್ನ ಪಡಬೋದಲ್ಲ? ಇದರ ಮೂಲಕಾನೇ ಕನ್ನಡ ಕಲಿಸಬೋದಲ್ಲ? ಎಷ್ಟೇ ಆದರೂ ಔರಿಗೂ ಅಕ್ಕ-ಪಕ್ಕ ಕೇಳಿ ಸೊಲ್ಪ ಕನ್ನಡ ಬಂದೇ ಬರ್ತಿರತ್ತೆ. ಔರ್ನ ಕನ್ನಡದಲ್ಲಿ ಮಾತಾಡ್ಸೋ ಪ್ರಯತ್ನ ಮಾಡದೆ ಔರೌರ್ನ ಔರೌರ್ ಭಾಷೇಲೇ ಮಾತಾಡಿಸ್ತೀವಲ್ಲ, ಅದೇ ನಾವು ಮಾಡೋ ಮೊದಲನೇ ತಪ್ಪು. ಇದ್ನ ತಿದ್ಕೋಬೇಕು ಗುರು. ಮೊದ್ಲಿಂದ್ಲೇ ಕನ್ನಡಾನ ನಾವು ಬಿಟ್ಕೊಟ್ಬುಟ್ರೆ ಔರಿಗೆ ಮೊದಲನೇ ಸೆಕೆಂಡಿಂದಾನೇ "ಓಹೋ ಇವರಿಗೇ ಕನ್ನಡ ಬೇಡ!" ಅನ್ನಿಸಿಬಿಡುತ್ತೆ. ಹೀಗಾಗಬಾರ್ದು.
ಹಾಗೇ ಕನ್ನಡ ಕಲ್ಸೋದನ್ನ ಕನ್ನಡಿಗರು "ಸಮಾಜಸೇವೆ" ಅಂತ ಯೋಚ್ನೆ ಮಾಡ್ದೆ ಅದನ್ನ ಒಂದು ಉದ್ಯಮ ಅಂತ ತೊಗೋಬೇಕು. ಇದೊಂದು ಹಳೇ ರೋಗ. ಕನ್ನಡಕ್ಕೆ ಸಂಬಂಧಪಟ್ಟಿದ್ದೆಲ್ಲ "ಸೇವೆ" ಅಂದ್ಕೊಳೋ ಅವಷ್ಯಕತೇನೇ ಇಲ್ಲ. ಇದೂ ಒಂದು ಉದ್ಯಮ. ಇದರಲ್ಲಿ ಸಕ್ಕತ್ ದುಡ್ಡಿದೆ ಗುರು! ಅಲ್ಲ - ಅದೆಲ್ಲಿಂದ್ಲೋ ಪ್ಯಾರಿಸ್ಸಿಂದ (Alliance Francaise), ಬರ್ಲಿನ್ನಿಂದ (Goethe Institut - Max Mueller Bhavan) ಬಂದು ನಮ್ಗೇ ಬೇರೆ ದೇಶಗಳ ಭಾಷೆ ಕಲಿಸ್ತಾ ಇರುವಾಗ ಕನ್ನಡನಾಡಲ್ಲೇ ಕನ್ನಡ ಕಲಿಸೋದನ್ನ ಒಂದು ಉದ್ಯಮ ಮಾಡ್ಕೊಂಡು ದುಡ್ಡು ಮಾಡ್ಕೊಳೋ ಯೋಗ್ತೇನೂ ನಮ್ಗೆ ಇಲ್ವಾ? ಖಂಡಿತ ಇದೆ ಗುರು!
ಇನ್ನು ನಮ್ಮ ನಮ್ಮ ಕಂಪನಿಗಳಲ್ಲಿ
ಕನ್ನಡ-ಕಲಿ ಕಾರ್ಯಕ್ರಮಗಳ್ನ ನಡಿಸಕ್ಕೆ ಸಹಾಯ ಮಾಡಬೇಕು. ಮ್ಯಾನೇಜ್ಮೆಂಟಿನೋರು ಒಪ್ಪಲ್ಲ ಅಂತ ಮೊದಲಿಂದ್ಲೇ ಕೈಕಟ್ಟಿ ಕೂತ್ಕೋಬಾರ್ದು. [ಬನವಾಸಿ ಬಳಗದಿಂದ
ಕನ್ನಡ-ಕಲಿ ಕಾರ್ಯಕ್ರಮಗಳನ್ನು ನಡೆಸೋದಕ್ಕೆ ನೆರವು ಬೇಕಾಗಿದ್ದರೆ ನಮಗೆ ಕೂಡ್ಲೆ
ಮಿಂಚಿಸಿ.]