ಹಂಪಿ, ಪಟ್ಟದಕಲ್ಲುಗಳಿಗೆ ಒಂದು ಬೊಂಬಾಟ್ ರೈಲು!

ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಡೋ ನಿಟ್ನಲ್ಲಿ ಬೆಂಗ್ಳೂರು-ಗೋವಾ-ಬೆಂಗಳೂರು ನಡುವೆ ಓಡಾಡೋ ಒಂದು ಬೊಂಬಾಟ್ ರೈಲು ಹಾಕಿದಾರೆ ಅಂತ ಎಕನಾಮಿಕ್ ಟೈಮ್ಸಲ್ಲಿ ಸುದ್ದಿ. ಈ ರೈಲು ಮೈಸೂರು, ಕಬಿನಿ, ಶ್ರವಣಬೆಳಗೊಳ, ಹಂಪಿ, ಬಾದಾಮಿ ಮತ್ತು ಪಟ್ಟದಕಲ್ಲುಗಳಿಗೆ ಹೋಗತ್ತಂತೆ. ತಲಾ ೧೩ ಸಾವಿರ ರೂಪಾಯಿ ಟಿಕೇಟಂತೆ.

ಪ್ರವಾಸೋದ್ಯಮ ಒಂದು ಬಹಳ ಮುಖ್ಯವಾದ ಉದ್ಯಮ ಗುರು. ಸಾವಿರಗಟ್ಲೆ ಜನ ಕರ್ನಾಟಕಕ್ಕೆ ಪ್ರವಾಸಕ್ಕೇಂತ ಬರ್ತಾರೆ. ಔರಿಗೆ ಸರಿಯಾಗಿ ಸೌಲತ್ತುಗಳ್ನ ಒದಗಿಸಿಕೊಟ್ರೆ ಅದರಿಂದ ಎಷ್ಟು ದುಡ್ಡು ಮಾಡಬೋದು ಗುರು! ಪ್ರವಾಸೋದ್ಯಮಾನೇ ಒಂದು ಮುಖ್ಯವಾದ ಉದ್ಯಮಗಳಾಗಿ ಇಟ್ಕೊಂಡಿರೋ ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಿಂದ ಇದ್ನ ಕಲೀಬೇಕು ಗುರು.

ಸರ್ಕಾರ ನೋಡೋಂಥಾ ಜಾಗಗಳ್ನ ಮತ್ತಷ್ಟು ಕ್ಲೀನಾಗಿ ಇಟ್ಕೋಬೇಕು, ಅವುಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಬಿಟ್ಟಿ ಸಿಗೋಹಾಗೆ ಮಾಡಬೇಕು, ನಿಜವಾಗಲೂ ಆಯಾ ಜಾಗಗಳ ಬಗ್ಗೆ ತಿಳ್ಕೊಂಡಿರೋ ಗೈಡುಗಳ್ನ ನೇಮಿಸಿಕೋಬೇಕು. ಇದನ್ನೆಲ್ಲ ಖಾಸಗಿಯೋರಿಗೆ ಗುತ್ತಿಗೆ ಕೊಟ್ರೆ ಇನ್ನೂ ಬೇಗ ಎಲ್ಲಾ ಆಗತ್ತೆ ಗುರು.

ಪ್ರವಾಸೋದ್ಯಮ ಬೆಳೀಬೇಕಾದ್ರೆ ನಮ್ಮತನ ಬಿಟ್ಟುಕೊಡೋದಲ್ಲ, ಮೆರೆಸಬೇಕು

ಇದು ಬಹಳ ಮುಖ್ಯವಾದ ವಿಷಯ. ಇಲ್ಲಿಗೆ ನೋಡಕ್ಕೆ ಬರೋ ಜನ ನಮ್ಮತನವನ್ನ ನೋಡಕ್ಕೆ ಇಷ್ಟ ಪಡ್ತಾರೇ ಹೊರತು ಅವರತನವನ್ನಲ್ಲ. "ಬೇರೇದನ್ನ" ನೋಡಕ್ಕೇ ಜನ ಎಲ್ಲೀಗೇ ಆಗ್ಲಿ ಪ್ರವಾಸಕ್ಕೆ ಹೋಗೋದು. ಹೋಟೆಲಲ್ಲಿ ಬ್ರೆಡ್ಡು-ಬೆಣ್ಣೆ ತಿನ್ನಕ್ಕೆ ಬರಲ್ಲ ಔರು, ಇಡ್ಲಿ-ದೋಸೆಗಳ್ನ ತಿನ್ನಕ್ಕೆ. ಏನೋ ಹೊಸದನ್ನ ನೋಡಕ್ಕೆ ಬರ್ತಾರೇ ಹೊರತು ಅವರ ದೇಶದಲ್ಲೇ ಸಿಗೋದನ್ನಲ್ಲ. ಹಾಗೇ ಇಲ್ಲಿ ಬಂದ್ರೆ ಔರು ಕನ್ನಡವನ್ನ ಕೇಳಕ್ಕೆ ಬರ್ತಾರೇ ಹೊರತು ಬರೀ ಇಂಗ್ಲೀಷ್ನಲ್ಲ. ನಮ್ಮತನವನ್ನ ಬಿಟ್ಕೊಡ್ತಾ ಹೋದಷ್ಟೂ ಪ್ರವಾಸಿಗರು ಕಡ್ಮೆ ಆಗ್ತಾ ಹೋಗ್ತಾರೆ ಗುರು.

ಈ ಹೊಸಾ ರೈಲಲ್ಲೂ ಅಷ್ಟೆ. ಎಲ್ಲಾ ನಾಟಕೀಯವಾಗಿ ಉತ್ತರಭಾರತೀಯರ ತರಾನೋ ಅಮೇರಿಕದೋರ ತರಾನೋ ಬಟ್ಟೆ ಉಟ್ಕೊಂಡಿರೋ ಮಾಣಿಗಳು, ಬರೀ ಉತ್ತರಭಾರತೀಯರ ಅಥವಾ ಹೊರದೇಶದ ತಿಂಡಿ-ತಿನಿಸುಗಳು ಪ್ರವಾಸಿಗರ ಮುಖಕ್ಕೆ ಒಡ್ಡಿದರೆ ಇದರಿಂದ ಉಪಯೋಗ ಏನು ಗುರು? ಈ ರೈಲಿನ ಹೆಸರೂ ಅಷ್ಟೆ - "ಗೋಲ್ಡನ್ ಚ್ಯಾರಿಯಟ್" ಅಂತ ಇಂಗ್ಲೀಷಲ್ಲೇನೋ ಇರ್ಲಿ, ಆದರೆ ಜೊತೆಗೆ "ಬಂಗಾರ ತೇರು" ಅಥ್ವಾ "ಚಿನ್ನದ ರಥ" ಅಂತ್ಲೂ ಬರೆದಿದ್ದರೆ ನಮ್ಮತನವನ್ನ ಇಡೀ ಪ್ರಪಂಚಕ್ಕೆ ತೋರಿಸಿದಂಗಾಗತ್ತೆ, ಅವರಿಗೂ ಖುಷಿಯಾಗತ್ತೆ ಗುರು.

ಕರ್ನಾಟಕ ಅನ್ನೋದ್ನ ಪ್ರವಾಸಿಗರಿಗೆ ಒಂದು "ಬ್ರಾಂಡ್" ಮಾಡಬೇಕು. ಹಾಗೆ ಮಾಡಕ್ಕೆ ನಮ್ಮತನವನ್ನೆಲ್ಲಾ ಮುಚ್ಚಿಹಾಕಕ್ಕೆ ಹೋಗದೆ ಪ್ರತಿಯೊಂದನ್ನೂ ಮೆರೆಸಬೇಕು. "ಕರ್ನಾಟಕ ಅಂದ್ರೆ ಬೇರೆ" ಅನ್ನೋ ನಿಜವನ್ನ ಹೇಳಿಕೊಳ್ಳದೆ ಹೋದರೆ ಹೊರದೇಶದ ಜನರಿಗೆ "ರಾಜಾಸ್ತಾನಕ್ಕೆ ಬಂದು ಹೋಗಿದೀನಲ್ಲ, ಇನ್ನು ಪಟ್ಟದಕಲ್ಲಲ್ಲಿ ಹೊಸದೇನಿದೆ?" ಅನ್ನಿಸೋದಿಲ್ಲವೆ? ಇದರಿಂದ ಅವರಿಗೆ ಭಾರತದ ವಿವಿಧತೆ ಅರ್ಥವೂ ಆಗಲ್ಲ, ನಮಗೆ ಪ್ರವಾಸೋದ್ಯಮದಿಂದ ಸಿಗಬಹುದಾದ ದುಡ್ಡೂ ಸಿಗಲ್ಲ.

4 ಅನಿಸಿಕೆಗಳು:

Anonymous ಅಂತಾರೆ...

ಲೇಖನ ಬಹಳ ಅರ್ಥಪೂರ್ಣವಾಗಿದೆ. ನಾನು ಅನೇಕ ಸಾರಿ ಇದನ್ನು ಗಮನಿಸುತ್ತಿದ್ದೇನೆ. ನಮ್ಮ ಸಂಸ್ಥೆಗಳಲ್ಲಿ ಇತರ ರಾಜ್ಯಗಳಿಂದ ಬಂದಿರುವ ಜನರಿಗೆ ಕರ್ನಾಟಕದಲ್ಲಿ ಏನಿದೆ ಏನಿಲ್ಲ ಅಂತನೇ ಗೊತ್ತಿಲ್ಲ. ಹೀಗಾಗಿ ಪ್ರತಿ ಸರಿ ಎಲ್ಲಾದರು ಪ್ರವಾಸ ಹೋಗಬೇಕೆಂದರೆ ಅವರು ಕೇರಳಕ್ಕೋ ತಮಿಳುನಾಡಿನ ಊಟಿಗೋ ಹೋಗುವುದುಂಟು. ನಮ್ಮ ರಾಜ್ಯದಲ್ಲೇ ಊಟಿಗಿಂತ ಸೊಗಸಾಗಿರುವ ಎಷ್ಟು ಗಿರಿಧಾಮಗಳಿಲ್ಲ? ಬಾಬಾ ಬುಡನ್ ಗಿರಿ, ಕೆಮ್ಮಣ್ಣುಗುಂಡಿ, ಕರ್ನಾಟಕದ ಸ್ಕಾಟ್ ಲ್ಯಾಂಡ್ ಎಂದೇ ಖ್ಯಾತವಾಗಿರುವ ಕೊಡಗು, ಒಂದೇ ಎರಡೆ?

ಜಲಪಾತೋತ್ಸವ ಇರುವಾಗ ನಮ್ಮ ಶಿವನಸಮುದ್ರಕ್ಕೆ ಹೋಗಿದ್ದೆ. ಅಲ್ಲಿ ಒಂದು ಕ್ಶಣವೂ ನಿಸರ್ಗವನ್ನು ಸವಿಯಲು ಆಗಲಿಲ್ಲ. ಜಲಪಾತದ ಸುತ್ತ ಮುತ್ತಲು ಕಸದ ತೊಟ್ಟಿಯಂತೆ ಕಾಣಿಸುತ್ತಿತ್ತು. ಅಂಗಡಿಗಳಿಂದ ಎಳನೀರಿನ ಬುರುಡೆಗಳು, ಪ್ಲಾಸ್ಟಿಕ್ ಕವರುಗಳ ರಾಶಿಯೇ ಬಿದ್ದಿತ್ತು. ಅಸಹ್ಯವಾಗುತ್ತಿತ್ತು. ಜಲಪಾತೋತ್ಸವ ನಡೆಯುವ ಕಡೆ ಬಹಳ ಜನಜಂಗುಳಿ ಇರುತ್ತದೆ ಎಂದು ಮೊದಲೇ ಅರಿತಿರಬೇಕಿತ್ತು. ಅಲ್ಲಿಗೆ ಹೋಗಿ ಬರುವ ಮಾರ್ಗವಂತು ಬಹಳ ಚಿಕ್ಕದು. Traffic jam ನಲ್ಲಿ ಸುಮಾರು ೨ ಘಂಟೆಗಳ ಕಾಲ ಕೊಳೆತದ್ದಾಯಿತು. ಎಲ್ಲವು ಅವ್ಯವಸ್ಥೆ. ಪ್ರವಾಸೋದ್ಯಮ ಅನ್ನುವುದು ಅತ್ಯಂತ ಕಡೆಗಾಣಿಸಿದ ವಿಭಾಗ ನಮ್ಮ ರಾಜ್ಯದಲ್ಲಿ. ಇನ್ನು ಮುಂದಾದರು ಅರಿತುಕೊಳ್ಳುತ್ತಾರ ಕಾದು ನೋಡಬೇಕು.

Vijendra ( ವಿಜೇಂದ್ರ ರಾವ್ ) ಅಂತಾರೆ...

ಸರಿಯಾಗಿ ಹೇಳಿದಿರಿ ಗುರು.. ನಾವೇ ಪಕ್ಕದ ಗೋವಾಕ್ಕೆ ಸಮುದ್ರ ನೋಡೊಕೆ ಹೊಗ್ತೀವಿ..ನಿಜವಾಗಿ ನಮ್ಮದೇ ಗೋಕರ್ಣ, ಕಾರವಾರಗಳಲ್ಲಿ ಬೀಚ್ಗಳನ್ನ ಎಷ್ಟು ಚೆನ್ನಾಗಿ ವ್ಯವಸ್ತೆ ಮಾಡ್ಬಹ್ದು ಗೊತ್ತಾ? ಗೋವಾಕ್ಕಿಂತ ಚೆನ್ನಾಗಿರೋ ಬೀಚ್ ಗಳಿವೆ ಇಲ್ಲೆಲಾ.. ಎಷ್ಟೋ ದುಡ್ದು ಮಾದ್ಬಹ್ದು... ಆದ್ರ್ರೆ ಏನೂ ಆಗ್ತಾ ಇಲ್ಲ.

Anonymous ಅಂತಾರೆ...

houdu guru, neevu heLod sari.
Railway ilaakheyallantoo 'lalu vamshathare' jaasti iddare. idakku yenadru maadbeku.

geetha bhat ಅಂತಾರೆ...

ನಮ್ಮಲ್ಲಿ ಪ್ರವಾಸೋದ್ಯಮ ಇಲಾಖೆ ರಾತ್ರಿ ಇಡೀ ಪ್ರವಾಸ ಮಾಡಿ ಬ೦ದಿರೋ ಥರ ನಿದ್ದೆ ಮಾಡ್ತಾನೆ ಇದೆ.

ಅಪ್ಪಟ ಕನ್ನಡತಿ ದೇಶ ಬಿಟ್ಟು ಬಂದ ದಿನದಿ೦ದ ಯೋಚನೆ ಮಾಡಿದ್ದೆ ಈ ವಿಷಯ.ಲ೦ಡನ್ ಗೆ ಬ೦ದ ೧೦ ತಿ೦ಗಳಲ್ಲಿ ಇಲ್ಲಿ ಯಾವ ಯಾವ ಪ್ರವಾಸಿ ತಾಣಗಳಿವೆ ಎ೦ದು ಗೊತ್ತಿದೆ, ಅದೇ ಕರ್ನಾಟಕ ದಲ್ಲಿ ಬೆ೦ಗಳೂರು ಬಿಟ್ರೆ ಬೇರೆ ಊರೇ ಗೊತ್ತಿಲ್ಲ.

ನಮ್ಮಲ್ಲಿ ಮಾಹಿತಿಯ ಕೊರತೆ, ಭದ್ರತೆಯ ಕೊರತೆ, ಸ್ವಚ್ಹತೆಯ ಕೊರತೆ, ಸೌಕರ್ಯದ ಕೊರತೆ, ಎಲ್ಲವೂ ಸೇರಿ ಕ೦ಡು ಕೇಳರಿಯದ ಜಾಗಕ್ಕೆ ಪ್ರವಾಸ ಹೋಗುವುದೆ೦ದರೆ ಪ್ರಯಾಸ ಎನಿಸಿಬಿಟ್ಟಿದೆ. ಹಾಗಾಗಿ ಎಲ್ಲವೂ ಸ್ವಲ್ಪ ಮಟ್ಟಿಗಾದರೂ ಸರಿಯಿರುವ ಜಾಗಕ್ಕೆ ಹೋಗುವುದು ಅಭ್ಯಾಸವಾಗಿದೆ. ಆ ಜಾಗ ಕರ್ನಾಟಕ ದಲ್ಲಿದೆಯೊ ಬೇರೆ ರಾಜ್ಯದಲ್ಲಿದೆಯೋ ಅದರ ಬಗೆಗಿನ ಗಮನ ಕಡಿಮೆಯಾಗಿದೆ.

ide ondu varshada hinde nadeda talakaadu jatrege hogi allinda hegappa vapas barodu anno stiti li oddado hagagittu. sanje 4 ganteya nantara yava bus kooda illade, idda badda tempo van nalli danagala thara hattikondu adoo aa dina lekkakinta hechhu janaru, abbabba nenesikondre nemmadiyaagi manele irona ansibidutte.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails