ಕರ್ನಾಟಕಕ್ಕೆ ಹತ್ತಿರೋ ಪಾರ್ಸಲ್ ನಾಯಕತ್ವದ ಪಿಡುಗು ಅಡಗಬೇಕು!

ಹೋದ ತಿಂಗಳ 27ನೇ ತಾರೀಕಿನ ವಿ.ಕ.ದಲ್ಲಿ ನಮ್ಮ ಊರ ಕ್ರೈಸ್ತರ ಮೇಲೆ ಹಲ್ಲೆಗಳಾಗ್ತಿವೆ ಅಂತ ಕ್ರೈಸ್ತ ಸಮುದಾಯದ ಕೆಲ ನಾಯಕರು ಧ್ವನಿ ಎತ್ತಿರೋ ಸುದ್ದಿ ಬಂದಿತ್ತು. ಅಲ್ಲ, ಕನ್ನಡ ನಾಡಿನ ಕ್ರೈಸ್ತರಿಗೆ ನಾಯಕತ್ವ ಕೊಡಕ್ಕೆ ದೂರದ ಮಿಜೊರಾಮ್ ರಾಜ್ಯದ ಸಾಂಗ್ಲಿಯಾನ, ಕೇರಳ ರಾಜ್ಯದ ಐವಾನ್ ನಿಗ್ಲಿ - ಇವ್ರುಗಳೇ ಆಗಬೇಕಾ? ಇದೊಂಥರಾ ತಮಾಷೆ ಆಯ್ತಲ್ಲ!

ನಮ್ಮ ಊರಿನ "ನಾಯಿ ಉಳ್ಸಿ ಚಳವಳಿ"ಗೆ ಮನೇಕಾ ಗಾಂಧೀನ, ಪರಿಸರ ಚಳವಳಿಗೆ ಮೇಧಾ ಪಾಟ್ಕರ್ನ ಕರ್ಕೊಂಡ್ ಬರೋದು ವಾಡಿಕೇನೇ ಆಗೋಗಿರುವಾಗ ಇದೆಲ್ಲಾ ಯಾವ ಲೆಕ್ಕ ಅಂತೀರಾ?

ಕನ್ನಡದ ಜನಕ್ಕೆ ನಾಯಕತ್ವ ಕೊಡಕ್ಕೆ, ಕನ್ನಡ ನಾಡಿನಲ್ಲಿ ಕನ್ನಡದವರ ಸಮಸ್ಯೆ ಎದುರ್ಸಕ್ಕೆ ಹೊರಗಿಂದ ಪರಭಾಷಿಕರು ಯಾಕ್ ಬರಬೇಕು? ಯಾರೇ ಆಗಲಿ, ಆಯಾ ನಾಡಿನ ಜನ ಜೀವನ, ಭಾಷೆ, ಬದುಕುಗಳನ್ನ ತಿಳ್ಕೊಳ್ದೆ ಸಮಸ್ಯೆಗಳಿಗೆ ಪರಿಹಾರ ಕೊಡಕ್ ಹೇಗಾಗತ್ತೆ? ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳು, ರೈತ ಸಂಘಟನೆಗಳು - ಪ್ರತಿಯೊಂದಕ್ಕೂ ನಾಯಕತ್ವ ಕರ್ನಾಟಕದ ಹೊರಗಿಂದ್ಲೇ ಬಂದ್ರೆ ನಮ್ಮ ಗತಿ ಏನು ಅಂತ ಯೋಚ್ನೆ ಮಾಡಿದೀಯಾ ಗುರು?

ಹೀಗೆ ತಮ್ಮ ಬೇಳೆ ಬೇಯಿಸಿಕೊಳಕ್ಕೆ ಹೊರಗಿನೋರು ಬರ್ತಾನೇ ಇದ್ರೆ, ಇಂಗ್ಲೀಷಲ್ಲೋ ಹಿಂದೀನಲ್ಲೋ ಏನೇನೋ ಒದರಿ ಕನ್ನಡಾನ ಕಡೆಗಣಿಸ್ತಾನೇ ಇದ್ರೆ, ಜೊತೆಗೆ ನಾವುಗಳು ಪೆದ್ದಮುಂಡೇವಂಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಆಗಬೇಕಾದರೆ ನಾವೇ ಮುಂದಾಳುತನ ವಹಿಸಿಕೋಬೇಕು ಅಂತ ಅರ್ಥಾನೇ ಮಾಡ್ಕೊಳ್ದೆ ಪ್ರತಿಯೊಂದಕ್ಕೂ ಹೊರಗಿಂದ ಯಾರೋ ಬೇರೆ ಭಾಷೆಯೋರು ಬಂದು ಪರಿಹಾರ ಕೊಡ್ತಾರೆ, ನಮ್ಮ ಕಷ್ಟಗಳಿಗೆ ಕೊನೆ ಹುಡುಕ್ಕೊಡ್ತಾರೆ ಅಂತಾನೇ ಅನ್ಕೊಂಡಿದ್ರೆ ನಮ್ಮ ಭವಿಷ್ಯದಲ್ಲಿ ಬರೀ ಕತ್ಲೇನೇ ಗುರು!

ಪ್ರತಿಯೊಂದು ಕ್ಷೇತ್ರದಲ್ಲೂ ಕರ್ನಾಟಕಕ್ಕೆ ನಾಯಕತ್ವಾನ ಹೊರಗಿಂದ ಪಾರ್ಸಲ್ ಮಾಡಿಸಿಕೊಳೋ ಪಿಡುಗು ಮುಂದುವರೀಬಾರದು. ಇದರಿಂದ ನಾಡಿನ ಭವಿಷ್ಯದಲ್ಲಿ ಕತ್ತಲೆಯೊಂದೇ ಕೂಡಿಕೊಳ್ಳುವುದು. ಆದ್ದರಿಂದ ಕನ್ನಡಿಗರು ಎಲ್ಲಾ ಕಡೇನೂ ನಾಯಕತ್ವ ತೊಗೊಳಕ್ಕೆ ಮುಂದಾಗಬೇಕು. ಅದು ಧರ್ಮದ ವಿಷಯದಲ್ಲಿರಬಹುದು, ರಾಜಕೀಯದ ವಿಷಯದಲ್ಲಿ ಇರಬಹುದು, ಇಲ್ಲವೇ ಕೆಲಸದಲ್ಲಿ ಮೇಲೇರೋ ವಿಷಯ ಇರಬಹುದು, ಯಾವುದೇ ಇರಬಹುದು. ಕನ್ನಡಿಗ ನಾಯಕತ್ವ ತೊಗೊಳ್ಳೇಬೇಕು. ಇಲ್ಲದಿದ್ದರೆ ಹೊರಗಿಂದ ಪಾರ್ಸಲ್ ಆಗಿ ಬಂದ ನಾಯಕರುಗಳು ನಂ ನಾಡ್ನ ಸಾರ್ಸಿ, ಗುಡ್ಸಿ, ರಂಗೋಲೆ ಹಾಕಿ ಹೊಟೋಗ್ತಾರೆ, ಅಷ್ಟೆ!

2 ಅನಿಸಿಕೆಗಳು:

Anonymous ಅಂತಾರೆ...

ಒಂದೇ ಒಂದು ಸಮಸ್ಯೆ ಅಂದರೆ,
ನಾಯಕರುಗಳಾಗಿರುವ ನಮ್ಮ ಕನ್ನಡಿಗರಾದರೋ ಏನ್ ಮಾಡುದ್ರು ಸ್ವಾಮಿ? ಕಾಂಗ್ರೆಸ್ ಜನ ಗಾಂಧೀನ, ನೆಹ್ರೂನ ತಮ್ ನಾಯಕರೂ ಅಂದ್ರು, ಇರಬೌದೇನೋ ಗಾಂಧಿ ನೆಹ್ರೂಗೆ ಆ ಯೋಗ್ಯತೆ, ಆದ್ರೆ ಇವತ್ತಿನವರು ನೋಡ್ರಿ... ಸಿದ್ರಾಮಣ್ಣಂಗೆ ಆಗ್ಲಿ, ಕೃಷ್ಣಂಗೇ ಆಗ್ಲಿ, ಖರ್ಗೇಗೆ ಆಗ್ಲಿ... ಮೇಡಂ(?)ಗಿಂತ ಜಾಸ್ತಿ ರಾಜಕೀಯ ಅನುಭವ ಇಲ್ವಾ? ಅಷ್ಟೇಕೆ ಇವ್ರುಗಳು ಗಾಂಧಿ ಹೆಸರಿರೋ ಒಂದು ಕುರೀನ್ ಬೇಕಾದ್ರು ತಮ್ ನಾಯಕ್ರಂತ ಒಪ್ಕೊಂಡ್ ನಮ್ ಮೇಲೂ ಹೇರಕ್ ಹೇಸಲ್ಲ. ಅಲ್ಲ ಅಂಥ ರಾಜಕೀಯದ ಕಲಿ ನಮ್ ಬಂಗಾರಪ್ಪ ಹೋಗಿ ಉತ್ತರ ಪ್ರದೇಶದವರನ್ನು (ಸಮಾಜವಾದಿ) ನಾಯಕರಾಗ್ ಒಪ್ಪಿರೋದು, ಈ ಸಿಂಧ್ಯಾ ತರದವರು ಆನೆ ಬಾಲ ಹಿಡೀತಿರೋದು ಕಂಡ್ರೆ... ಕನ್ನಡಿಗರು ಮೈಯ್ಯಲ್ಲಿ ರಕ್ತ ಹರೀತಾ ಇದೆಯೋ, ನಿರಭಿಮಾನದ ನೀರು ಹರೀತಾ ಇದೆಯೋ, ಇಲ್ಲಾ ಚುನಾವಣೆ ಕಾಲ್ದಾಗ್ ಕುಡಿಸಿದ್ದ ಬೀರು ಹರೀತಾ ಇದೆಯೋ ಭುವನೇಶ್ವರೀನೆ ಹೇಳ್ಬೇಕು, ನಾಡನ್ ಕಾಪಾಡ್ಬೇಕು

ಚಂದ್ರು

Anonymous ಅಂತಾರೆ...

ಸರಿಯಾಗಿ ಹೇಳಿದೀರ ಗುರುಗಳೆ....
ಪಾರ್ಸಲ್ ನಾಯಕತ್ವದ ಪಿಡುಗು ಅಳಿಸ್ಬೇಕು ನಿಜ.... ನಾವು ಕನ್ನಡದವ್ರೇ ನಾಯಕ್ರು/ಮಾಲೀಕ್ರು ಆಗ್ಬೇಕು ನಿಜ... ಆದ್ರೆ ಇದು ಸಾಧ್ಯನಾ???
ಇವೆಲ್ಲಾ ಇರೋ ತನ್ಕ ಇದು ಸಾಧ್ಯ ಇಲ್ಲಾ....
೧. ಕನ್ನಡಿಗನಿಗೆ ಕೀಳರಿಮೆ.
೨. ಅತಿಯಾದ ಸಹಿಷ್ಣುತೆ.
೩. ಒಗ್ಗಟ್ಟು ಇಲ್ಲದಿರುವುದು
೪. ಕನ್ನಡಿಗನಿಗಿರುವ ಅಲ್ಪತ್ರುಪ್ತಿ.
೫. ಮುನ್ನುಗ್ಗಲು ಹಿಂಜರಿಕೆ.
೬. ಕನ್ನಡಿಗನಲ್ಲಿರುವ ಸ್ವಾರ್ಥ.
೭. ಮುಂದಾಲೋಚನೆಯ ಕೊರತೆ
೮. ಕನಸು ಕಾಣದಿರುವುದು (ಈ ಬ್ಲಾಗ್ ನಿಂದ ತಿಳ್ದಿದ್ದು http://enguru.blogspot.com/2007/09/blog-post_16.html :-) )
೯. ಸ್ವಾಭಿಮಾನದ ಕೊರತೆ.
೧೦. ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿಚಾರಗಳಲ್ಲಿ ತಾತ್ಸಾರ.
೧೧. ಇನ್ನೂ ಬೇಕಾದಷ್ಟಿದೆ.

ಇವೆಲ್ಲಾ ಹೋಗ್ಲಾಡ್ಸೋದು ಅಷ್ಟು ಕಷ್ಟ ಏನ್ ಅಲ್ಲಾ ನಿಜ.... ಆದ್ರೆ ಮನಸ್ ಮಾಡ್ಬೇಕು. ಕನ್ನಡಿಗ್ರು ಮನ್ಸ್ ಮಾಡ್ಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails